ಶ್ರೀ ಗಣೇಶಾಯ ನಮಃ
ಶ್ರೀ ಶನಿದೇವಾಯ ನಮಃ
ಉಜ್ಜಯಿನಿ ಎಂಬ ನಗರದಲ್ಲಿ ವಿಕ್ರಮರಾಜನು ರಾಜ್ಯವಾಳುತ್ತಿದ್ದನು. ಅವನು ಅತ್ಯಂತ ವೀರನಾದ ಅರಸನಾಗಿದ್ದನು. ಒಂದು ದಿವಸ ಅವನು ತನ್ನ ಸಭಾ ಮಂಟಪದಲ್ಲಿ ಕುಳಿತುಕೊಂಡಿದ್ದನು. ಪಂಡಿತರೆಲ್ಲರೂ ತಮ್ಮ ತಮ್ಮ ಸ್ಥಾನಗಳಲ್ಲಿ ಕುಳಿತುಕೊಂಡಿದ್ದರು. ಆಗ ನವಗ್ರಹಗಳಲ್ಲಿ ಶ್ರೇಷ್ಠನಾರು ಎಂಬ ಬಗ್ಗೆ ಚರ್ಚೆಯು ಪ್ರಾರಂಭವಾಯಿತು.
ಮೊದಲನೆಯ ಪಂಡಿತನು ರವಿಯ ಸ್ತುತಿ ಮಾಡಿದನು. ಇವನು ಅತ್ಯಂತ ತೇಜಸ್ವಿಯು, ಇವನ ಉಪಾಸನೆಯನ್ನು ಮಾಡಿದವನಿಗೆ ಗ್ರಹಗಳು ಅವನನ್ನು “ಪೀಡಿಸುವುದಿಲ್ಲ, ಇವನು ವಿಘ್ನಗಳನ್ನು ನಾಶ ಮಾಡುವನು. ಇವನನ್ನು ಸ್ಮರಿಸಿದಾಕ್ಷಣ ಎಲ್ಲಾ ರೋಗಗಳು ಇಲ್ಲದಂತಾಗುವವು. ಬಡತನವು ದೂರ ವಾಗುವದು. ರವಿಯು ಎಲ್ಲ ದೇವತೆಗಳಲ್ಲಿ ಮುಖ್ಯನಾಗಿರುವನು. ಎಲ್ಲ ಗ್ರಹಗಳು, ಇವನ ಆಜ್ಞೆಯಂತೆ ನಡೆಯುವವು. ಇವನು ಪ್ರತ್ಯಕ್ಷ ಸೂರ್ಯ ನಾರಾಯಣನು, ಎಲ್ಲರೂ ಇವನನ್ನು ನೋಡಿರುವರು.
ಎರಡನೆಯ ಪಂಡಿತನು ಚಂದ್ರನನ್ನು ವರ್ಣಿಸ ತೊಡಗಿದನು. ಇವನು ವನಸ್ಪತಿಗಳನ್ನು ರಕ್ಷಿಸುವನು, ಇವನ ಆರಾಧ್ಯ ದೈವವೆಂದರೆ ಶಿವನು: ಇವನಿಗೆ ಹದಿನಾರು ಕಲೆಗಳಿರುವವು. ರಾತ್ರಿಗೆ ಇವನೇ ಶೋಭಾಯಮಾನನಾಗಿರುವನು. ಇವನು ಎಲ್ಲರಿಗೂ ಸುಖವನ್ನು ಕೊಡುವನು. ಮನಸ್ಸಿನಿಂದ ಅತೀ ನಿರ್ಮಲನು.
ಮೂರನೇ ಪಂಡಿತನು ನುಡಿದನು, ಮಂಗಳನು ಮಹಾ ಸಾಮರ್ಥ್ಯ ಶಾಲಿಯು. ಇವನು ಮಹಾ ಕ್ರೂರನಾಗಿರುವನು. ಎಲ್ಲ ಗ್ರಹಗಳಲ್ಲಿಯೂ ಇವನು ಶ್ರೇಷ್ಠನು. ಇವನನ್ನು ಪೂಜಿಸುವವರನ್ನು ಮಾತ್ರ ಇವನು ಪ್ರೀತಿಸುವನು, ಯಾರು ಇವನನ್ನು ಪೂಜಿಸುವುದಿಲ್ಲವೋ ಅವರನ್ನು ಇವನು ಸರ್ವನಾಶ
ಮಾಡುವನು.
ನಾಲ್ಕನೆಯ ಪಂಡಿತನು ನುಡಿದನು, ಬುಧನು ಮಹಾ ಬಲಶಾಲಿಯು, ಇವನನ್ನು ಪೂಜಿಸಿದರೆ ಎಲ್ಲಾ ವಿಘ್ನಗಳೂ ನಾಶವಾಗುವವು. ಅವರಿಗೆ ಎಲ್ಲ ರೀತಿಯಿಂದಲೂ ತೃಪ್ತಿ ಕೊಡುವನು. ಇವನ ಕೃಪೆಯಾದರೆ ಸಾಕು. ಅವನು ಧನವಂತನಾಗುವನು. ಇವನ ಬುದ್ದಿಯು ಅಸಾಧ್ಯವಾದದ್ದು, ಸಂಸಾರದ ಚಿಂತೆಯನ್ನು ಇವನು ನಾಶ ಮಾಡುವನು.
ಐದನೇ ಪಂಡಿತನು ಗುರುವನ್ನು ಸ್ತುತಿಸಿದನು. ಎಲ್ಲರಲ್ಲೂ ಗುರುವು ಶ್ರೇಷ್ಠನು. ಭಾವಿಕರನ್ನು ಇವನು ಪ್ರೀತಿಸುವನು. ಇವನನ್ನು ನೆನಸಿದರೆ ದುಃಖ ಮತ್ತು ಬಡತನಗಳು ಓಡಿ ಹೋಗುವವು, ಇವನ ಮಾತನ್ನು ಎಲ್ಲರೂ ಮನ್ನಿಸುವರು. ಇವನು ಮಹಾಜ್ಞಾನಿಯು, ಗುರುವನ್ನು ಬಹಳ ಭಕ್ತಿಯಿಂದ ಭಜಿಸಬೇಕು. ಶಿವನು ಕೂಡಾ ಇವನನ್ನು ಪೂಜಿಸುವನು.
ಆರನೆಯ ಪಂಡಿತನು ಶುಕ್ರನನ್ನು ಸ್ತುತಿಸಿ ಮಾತನಾಡಿದನು. ಇವನು ಮಹಾ ಸಾಮರ್ಥ್ಯಶಾಲಿಯು. ಇವನು ನಮ್ಮ ವಿಘ್ನಗಳನ್ನು ನಾಶ ಮಾಡುವನು. ಯಾರು ಶುಕ್ರನ ಪೂಜೆಯನ್ನು ಮಾಡುವರೋ ಅವರ ಶೌರ್ಯಕ್ಕೆ ಮಿತಿಯಿಲ್ಲ. ಇವನು ದಿವ್ಯವಾದ ದೇಹವುಳ್ಳವನು. ಇವನಿಗೆ ಒಂದೇ ಕಣ್ಣು ಇರುವುದು. ತನ್ನ ಭಕ್ತರ ಎಲ್ಲಾ ಇಚ್ಛೆಗಳನ್ನು ಪೂರ್ತಿಗೊಳಿಸುವನು.
ಪಂಡಿತರ ಮಾತುಗಳನ್ನು ಕೇಳಿ ವಿಕ್ರಮ ರಾಜನು ತಲೆಯಲ್ಲಾಡಿಸುತ್ತಾ ನೀವು ಹೇಳಿದ್ದು ಸರಿಯಾಗಿದೆ ಎಂದನು. ಮತ್ತೆ ಯಾವ ಗ್ರಹಗಳು ಉಳಿದಿರು ವವು ಅವುಗಳ ಬಗ್ಗೆ ಹೇಳಿರಿ ಎಂದನು.
ರಾಹು ಮತ್ತು ಕೇತು ಇವರಿಬ್ಬರೂ ರಾಕ್ಷಸರು. ಇವರಿಬ್ಬರೂ ಚಂದ್ರ ಸೂರ್ಯರನ್ನು ಕಾಡುವರು. ರಾಹುವು ಚಂದ್ರನನ್ನೂ ಕೇತುವು ಸೂರ್ಯನನ್ನು ಪೀಡಿಸುವರು. ಇವರು ಎಲ್ಲರನ್ನೂ ಪೀಡಿಸುವರು. ಇವರ ಜಪವನ್ನು ಮಾಡಿದರೆ ಮಾತ್ರ ಇವರು ಸಂತುಷ್ಟರಾಗುವರು. ಇವರಿಬ್ಬರೂ ಬಹಳ ಕ್ರೂರರಾದವರು.
ಆಮೇಲೆ ಒಂಬತ್ತನೆಯ ಪಂಡಿತನು ನುಡಿದನು. ಶನಿಯು ಎಲ್ಲ ಗ್ರಹಗಳಲ್ಲಿಯೂ ಅತ್ಯಂತ ಶ್ರೇಷ್ಠನು: ಇವನು ಯಾರ ಮೇಲೆ ಕೃಪೆ ಮಾಡು ವನೋ ಅವನ ಕೆಲಸವೆಲ್ಲವೂ ನಿರ್ವಿಘ್ನವಾಗಿ ನೆರವೇರುವವು. ಇವನು ಯಾರ ಮೇಲೆ ಸಿಟ್ಟಿಗೇಳುವನೋ ಅವರನ್ನು ಇವನು ಸಂಪೂರ್ಣ ನಾಶ ಮಾಡುವನು. ಅವರ ಸಂಸಾರವನ್ನೇ ಹಾಳು ಮಾಡುವನು. ಇವನು ಮಹಾ ಕೋಪಿಷ್ಠನು. ಇವನು ಎಲ್ಲ ದೇವತೆಗಳನ್ನೂ, ರಾಕ್ಷಸರನ್ನು ಕಾಡಿರುವನು, ಮಾನವರನ್ನೂ ಸಹ ಪರಿ-ಪರಿಯಾಗಿ ಕಾಡುವನು. ಅಷ್ಟೇ ಏಕೆ? ಸ್ವತಃ ಅವನ ತಂದೆಯನ್ನು ಸಹ ಕಾಡಿರುವನು. ಹುಟ್ಟಿದ ಕೂಡಲೇ ಇವನ ದೃಷ್ಟಿಯು ಇವನ ತಂದೆಯ ಮೇಲೆ ಬಿದ್ದಿತು. ಇದರಿಂದ ಅವನ ದೇಹವೆಲ್ಲವೂ ಕುಷ್ಠ ರೋಗಕ್ಕೆ ಬಲಿಯಾಯಿತು. ಅವನ ಸಾರಥಿಯು ಕುಂಟನಾದನು. ಕುದುರೆಗಳ ಕಣ್ಣುಗಳು ಇಂಗಿ ಹೋದವು. ಅವನು ಎಷ್ಟು ಪ್ರಯತ್ನ ಪಟ್ಟರೂ ಗುಣವಾಗ ಲಿಲ್ಲ. ಯಾವಾಗ ಶನಿ ದೃಷ್ಟಿಯು ಬೇರೆ ಕಡೆಗೆ ತಿರುಗಿತೋ, ಆಗ ಎಲ್ಲ ರಿಗೂ ಗುಣವಾಯಿತು. ಇದನ್ನು ಕೇಳಿ ವಿಕ್ರಮನು ನಗುತ್ತ ನುಡಿದನು 'ಇಂಥ ಅಪವಿತ್ರ ಮಗನು ಹುಟ್ಟುವದರಿಂದ ಏನು ಉಪಯೋಗವು? ಅವನು ಮಗ ನಲ್ಲ ವೈರಿಯು. ಹುಟ್ಟಿದ ಕೂಡಲೇ ಅವನು ಅಪಾಯವನ್ನು ಮಾಡಿದ ಮೇಲೆ ದೊಡ್ಡವನಾದ ಮೇಲೆ ಅವನು ಎಷ್ಟು ಅಪಾಯವನ್ನು ಮಾಡಲಿಕ್ಕಿಲ್ಲಾ?'
ಚಪ್ಪಾಳೆಯನ್ನು ಬಾರಿಸುತ್ತ ವಿನೋದವಾಗಿ ವಿಕ್ರಮನು ರಾಜ್ಯ ಸಭೆಯಲ್ಲಿ ರೀತಿ ಮಾತನಾಡುತ್ತಿದ್ದನು.
ಅದೇ ಕ್ಷಣದಲ್ಲಿ ಶನಿದೇವನು ವಿಮಾನದಲ್ಲಿ ಕುಳಿತುಕೊಂಡು ಆಕಾಶದಲ್ಲಿ ಸಂಚರಿಸುತ್ತಿದ್ದನು. ವಿಕ್ರಮರಾಜನ ಮಾತುಗಳನ್ನು ಕೇಳಿ ಅವನು ತನ್ನ ವಿಮಾನ ದಿಂದ ಕೆಳಗಿಳಿದನು. ವಿಕ್ರಮನು ರಾಜ್ಯ ಸಭೆಯಲ್ಲಿ ವಿಮಾನ ಸಹಿತವಾಗಿ ಬಂದು ಕುಳಿತನು. ಪಂಡಿತರೆಲ್ಲರೂ ಶನಿದೇವನು ಬಂದನೆಂದು ನುಡಿದರು. ಆಗ ವಿಕ್ರಮನು ಸಿಂಹಾಸನದಿಂದ ಇಳಿದು ಬಂದು ಶನಿದೇವನ ಪಾದದ ಮೇಲೆ ಬಿದ್ದನು. ಶನಿದೇವನು ಅರಸನನ್ನು ಕುರಿತು 'ನೀನು ಬಹಳ ಸೊಕ್ಕಿಗೆದ್ದಿರುವಿ, ಆದ್ದರಿಂದಲೇ ನನ್ನನ್ನು ಕುರಿತು ಹಾಸ್ಯ ಮಾಡುತ್ತಿರುವಿ. ಕನ್ಯಾರಾಶಿಯು ಬಂದಾಗ ನಾನು ಬರುವೆನು. ಆಗ ನೀನು ನನ್ನ ಸಾಮರ್ಥ್ಯವನ್ನು ನೋಡು ಎಂದು ನುಡಿದು ಶನಿದೇವನು ತನ್ನ ವಿಮಾನವನ್ನೇರಿದನು. ಆಗ ವಿಕ್ರಮ ರಾಜನು ಅತಿ ದೈನ್ಯದಿಂದ ಶನಿರಾಜನನ್ನು ಈ ರೀತಿಯಾಗಿ ಬೇಡಿಕೊಂಡನು. “ದೀನನಾದ ನನ್ನನ್ನು ರಕ್ಷಿಸು, ನನ್ನ ಮಾತುಗಳನ್ನು ಮರೆತು ನನಗೆ ಕ್ಷಮೆ ಮಾಡು” ಎಂದನು. ಆದರೆ ಶನಿದೇವನು ಅದರಿಂದ ಸಮಾಧಾನ ಹೊಂದ ಲಿಲ್ಲ. “ನನ್ನ ಪರಾಕ್ರಮವನ್ನು ಒಮ್ಮೆ ನೋಡು” ಎಂದು ಶನಿದೇವನು ನುಡಿದು ಹೊರಟು ಹೋದನು.
ಆಗ ವಿಕ್ರಮರಾಜನು ಶನಿದೇವನನ್ನು ವ್ಯರ್ಥವಾಗಿ ನಿಂದಿಸಿದ್ದರಿಂದ ತನಗೆ ಅವನು ಕಷ್ಟ ಕೊಡದೆ ಬಿಡುವದಿಲ್ಲಾ, ಎಂದು ಚಿಂತಾಕ್ರಾಂತನಾದನು. ಆದರೂ ಆದದ್ದಾಗಲಿ ಎಂದು ಸಮಾಧಾನ ಮಾಡಿಕೊಂಡು ಸಭೆಯನ್ನು ವಿಸರ್ಜಿಸಿದನು. ಹೀಗೆಯೇ ಒಂದು ತಿಂಗಳು ಕಳೆದು ಹೋಯಿತು. ವಿಕ್ರಮರಾಜನು ದಿನಾಲೂ ಸ್ನಾನ ಮಾಡಿ ಶನಿದೇವನನ್ನು ಶ್ರದ್ಧೆಯಿಂದ ಪೂಜಿಸುತ್ತಿದ್ದನು. ಶನಿಯ ದೃಷ್ಟಿಯು ವಿಕ್ರಮನ ಮೇಲೆ ಬಿದ್ದಿತು. ಆಗ ಪಂಡಿತರು ವಿಕ್ರಮನಿಗೆ ಈ ರೀತಿಯಾಗಿ ನುಡಿದರು. “ಭಾವಿಕರಲ್ಲದವರನ್ನು ಇವನು ಬಹಳ ಪೀಡಿಸುವನು. ಆದ್ದರಿಂದ ನೀನು ಶನಿಯನ್ನು ಭಕ್ತಿಯಿಂದ ಪೂಜೆ ಮಾಡು, ಅವನ ಪೀಡೆಯನ್ನು ತಪ್ಪಿಸಿ ಕೊಳ್ಳಲು ಸಾಧ್ಯವಿಲ್ಲವಾದರೂ, ಅವನ ಪೀಡೆಯನ್ನು ಎದುರಿಸುವ ಧರ ನಿನ್ನಲ್ಲಿ ಬರುವದು. ಅವನು ಏಳುವರೆ ವರ್ಷ ಪೀಡೆ ಕೊಡುವನು. ಮನಸ್ಸು ಗೊಟ್ಟು ಅವನ ಪೂಜೆ ಹೇಗೆ ಮಾಡಬೇಕು ಎಂಬುದನ್ನು ಕೇಳಿರಿ. ಶನಿಯ ಪ್ರತಿಮೆಯನ್ನು ಮಾಡಿ ಅವನನ್ನು ಪೂಜಿಸಬೇಕು. ಕುದುರೆಯ ನಾಲನ್ನು ತೆಗೆದುಕೊಂಡು ಅದರಿಂದ ಶನಿ ಪ್ರತಿಮೆಯನ್ನು ಮಾಡಬೇಕು. ಆಮೇಲೆ ತೈಲದಿಂದ ಅಭಿಷೇಕ ಮಾಡಬೇಕು. ಮಣ್ಣಿನ ಕೊಡದ ಮೇಲೆ ಅವನ ಪ್ರತಿಮೆಯನ್ನು ಸ್ಥಾಪಿಸಬೇಕು. ಬ್ರಾಹ್ಮಣರಿಂದ ಶನಿಯ ಜಪ ಇಪ್ಪತ್ತಮೂರು ಸಾವಿರ ಮಾಡಿಸಬೇಕು, ಜಪ ಮುಗಿದ ಮೇಲೆ ಹವನ ಮಾಡಬೇಕು.
ಬ್ರಾಹ್ಮಣರನ್ನು ಶನಿಯೆಂದು ತಿಳಿದು ಅವರಿಗೆ ದಕ್ಷಿಣೆ, ದಾನ ಕೊಡಬೇಕು. ಬ್ರಾಹ್ಮಣರಿಗೆ ಭೋಜನ ಮಾಡಿಸಿ ತೃಪ್ತಿ ಪಡಿಸಬೇಕು. ಇದರಿಂದ ಶನಿದೇವನು ಪ್ರಸನ್ನನಾಗುವನು.” ಆಗ ವಿಕ್ರಮರಾಜನು ಪಂಡಿತರು ಹೇಳಿದಂತೆ ಶನಿದೇವರನ್ನು ಶ್ರದ್ಧೆಯಿಂದ ಪೂಜಿಸುತ್ತ ಸ್ವಸ್ಥಚಿತ್ತದಿಂದ ಇದ್ದನು.
ಒಂದು ದಿವಸ ಶನಿದೇವನು ಕುದುರೆಗಳನ್ನು ಮಾರುವದಕ್ಕೆ ಉಜ್ಜಯಿನಿಗೆ ಬಂದನು. ಅವನು ವೇಷವನ್ನು ಬದಲಿಸಿದ್ದರಿಂದ ಶನಿದೇವನೆಂದು ಯಾರಿಗೂ ಗೊತ್ತಾಗಲಿಲ್ಲ. ವಿಕ್ರಮನು ಆ ಕುದುರೆಗಳ ಬೆಲೆಯನ್ನು ವಿಚಾರಿಸಿದನು. ಕುದುರೆಯ ಮೇಲೆ ಹತ್ತಿ ನೋಡಿರಿ. ಆಗ ಇವುಗಳ ಬೆಲೆಯು ನಿಮಗೆ ಗೊತ್ತಾಗುವದು ಎಂದು ಶನಿದೇವನು ನುಡಿದನು.
ಆಗ ವಿಕ್ರಮ ರಾಜನು ಕುದುರೆಯ ಮೇಲೆ ಏರಿದನು. ಕುದುರೆಯು ಅತಿ ಉತ್ತಮವಾಗಿ ಓಡುತ್ತಿತ್ತು. ವಿಕ್ರಮನು ಚಾಬುಕದಿಂದ ಕುದುರೆಗೆ ಒಂದು ಏಟು ಹೊಡೆದನು. ಆಗ ಕುದುರೆಯು ಅತಿ ವೇಗವಾಗಿ ಓಡತೊಡಗಿತು. ವಿಕ್ರಮನನ್ನು ಅದು ಮಹಾರಣ್ಯಕ್ಕೆ ಕರೆದುಕೊಂಡು ಬಂದಿತು. ಆ ಅರಣ್ಯದಲ್ಲಿ ಒಂದು ನದಿಯ ದಂಡೆಯ ಮೇಲೆ ಕುದುರೆಯು ಬಂದು ನಿಂತಿತು. ಆಗ ರಾಜನು ಕುದುರೆಯಿಂದ ಕೆಳಗೆ ಇಳಿದನು. ಆ ಕುದುರೆಯು ಮಾಯವಾಯಿತು. ನದಿಯೂ ಇಲ್ಲದಂತಾಯಿತು. ಇದನ್ನೆಲ್ಲವನ್ನು ಕಂಡು ವಿಕ್ರಮನಿಗೆ ಆಶ್ಚರ್ಯ ವಾಯಿತು. ಸೂರ್ಯನು ಅಸ್ತಂಗತನಾದ್ದರಿಂದ ಎಲ್ಲ ಕಡೆಗೂ ಅಂಧಕಾರವು ಪಸರಿಸಿತು. ವಿಕ್ರಮನಿಗೆ ಏನು ಮಾಡಬೇಕೆಂಬುದು ತಿಳಿಯದಂತಾಯಿತು. ಆ ರಾತ್ರಿಯನ್ನು ಅಲ್ಲಿಯೇ ಕಳೆದು ಬೆಳಗಾದ ಮೇಲೆ ವಿಕ್ರಮನು ಅಲ್ಲಿಂದ ಹೊರಟು ತಾಮಲಿಂದ ಎಂಬ ನಗರಕ್ಕೆ ಬಂದನು.
ಇತ್ತ ಕಡೆಗೆ ಉಜ್ಜಯಿನಿಯಲ್ಲಿಯ ಜನರು ಅರಸರ ಹಾದಿ ನೋಡ ಹತ್ತಿದರು. ಅರಸನು ಬಹಳ ಹೊತ್ತಾದರೂ ಬರದ್ದರಿಂದ ಅವರು ಚಿಂತಾತುರ ರಾದರು. ಆಗ ಶನಿದೇವನು ನನ್ನ ಕುದುರೆಯನ್ನು ಕೊಡಿರಿ, ಇಲ್ಲವೆ ಅದರ ಬೆಲೆಯನ್ನು ಕೊಡಿರಿ ಎಂದು ಕೇಳತೊಡಗಿದನು. ಸರದಾರರು ಊರಿನ ಸುತ್ತು ಮುತ್ತಲೂ ಕುದುರೆಯನ್ನೂ ಅರಸನನ್ನು ಹುಡುಕಿದರು. ಆದರೆ ಅವರಿಗೆ ರಾಜನ ಸುಳಿವು ಹತ್ತಲಿಲ್ಲ. ಕೊನೆಗೆ ಉಪಾಯವಿಲ್ಲದೆ ಆ ಕುದುರೆಯ ಬೆಲೆ ಯನ್ನು ಶನಿದೇವನಿಗೆ ಕೊಟ್ಟು ಕಳುಹಿಸಿದರು.
ರಾಜನು ತಾಮಲಿಂದಪುರಕ್ಕೆ ಬಂದು ಅಲ್ಲಿ ಶ್ರೀಪತಿ ಎಂಬ ವ್ಯಾಪಾರಸ್ಥನ ಕಟ್ಟೆಯ ಮೇಲೆ ಕುಳಿತುಕೊಂಡನು. ಅಂದು ಆ ವ್ಯಾಪಾರಸ್ಥನಿಗೆ ಬಹಳೇ ವ್ಯಾಪಾರ ನಡೆಯ ಹತ್ತಿತು. ಈ ಅಪರಿಚಿತ ವ್ಯಕ್ತಿಯು ತನ್ನ ಕಟ್ಟೆಯ ಮೇಲೆ ಬಂದು ಕುಳಿತಿದ್ದರಿಂದ ತನ್ನ ವ್ಯಾಪಾರದಲ್ಲಿ ಅಭಿವೃದ್ಧಿಯಾಯಿತೆಂದು ಅವನು ತಿಳಿದುಕೊಂಡನು. ಅವನು ವಿಕ್ರಮನನ್ನು ಮನೆಗೆ ಕರೆದುಕೊಂಡು ಹೋಗಿ ಆದರಿಸಿದನು. ವಿಕ್ರಮನ ಕುಲ ಗೋತ್ರಗಳನ್ನೂ ವಿಚಾರಿಸಿದನು, ವಿಕ್ರಮನಿಗೆ ಸವಿಯಾದ ಭೋಜನವನ್ನೂ ಮಾಡಿಸಿದನು. ವಿಕ್ರಮನು ಅವನ ಮನೆ ಯಲ್ಲಿಯೇ ವಿಶ್ರಾಂತಿಯನ್ನು ತೆಗೆದುಕೊಂಡನು.
ಅಪರಿಚಿತ ವ್ಯಕ್ತಿಯು ಸಭ್ಯ ಗೃಹಸ್ಥನಂತೆ ಕಂಡುಬಂದದ್ದರಿಂದ ಆ ವ್ಯಾಪಾರಸ್ಥನು ತನ್ನ ಮಗಳಾದ ಆಲೋಲಿಕೆಯನ್ನು ಅವನಿಗೆ ಕೊಡಬೇಕೆಂದು ನಿಶ್ಚಯಿಸಿದನು. ಅವನ ಮಗಳು ಸೌಂದರದಲ್ಲಿ ಹೆಸರಾಗಿದ್ದಳು. ಅವಳ ಸಲುವಾಗಿ ಎಷ್ಟು ವರಗಳನ್ನು ಹುಡುಕಿದರೂ ಅವಳು ಯಾವ ವರನನ್ನೂ ಒಪ್ಪುತ್ತಿರಲಿಲ್ಲ. ಈಗ ಉತ್ತಮವಾದ ವರನು ನಮ್ಮ ಮನೆಗೆ ಬಂದಿರುವನು. ಅವನನ್ನು ಮದುವೆ ಯಾಗು ಎಂದು ವ್ಯಾಪಾರಸ್ಥನು ತನ್ನ ಮಗಳಿಗೆ ನುಡಿದನು. ನಾನು ಅವನನ್ನು ಪರೀಕ್ಷಿಸಿಲ್ಲಾ, ನಾನು ಪರೀಕ್ಷಿಸದೆ ಯಾರನ್ನೂ ಮದುವೆಯಾಗುವದಿಲ್ಲಾ. ಈ ಹೊತ್ತು ರಾತ್ರಿ ಅವನನ್ನು ಕೇವಲ ಮಾತುಗಳ ಚಾತುರದಿಂದ ಪರೀಕ್ಷಿಸುವನು ಎಂದು ನುಡಿಯಲು ವ್ಯಾಪಾರಸ್ಥನು ಅದಕ್ಕೆ ಸಮ್ಮತಿ ವ್ಯಕ್ತಪಡಿಸಿದನು.
ವ್ಯಾಪಾರಸ್ಥನು ವಿಕ್ರಮನನ್ನು ತನ್ನ ಮಗಳ ಬಳಿಗೆ ಕಳಿಸಿದನು. ಆ ಚಿತ್ರಶಾಲೆಯಲ್ಲಿ ಹಂಸ, ಕೋಗಿಲೆ ಮುಂತಾದ ಪಕ್ಷಿಗಳ ಚಿತ್ರಗಳನ್ನು ತೆಗೆ ದಿದ್ದರು. ವಿಕ್ರಮನ ಸಲುವಾಗಿ ಮಂಚವನ್ನು ಶೃಂಗರಿಸಿದ್ದರು. ಆ ಮಂಚದ ಮೇಲೆ ಹೂವಿನ ರಾಶಿಯನ್ನು ಹಾಕಿದರು. ಆ ಚಿತ್ರಶಾಲೆಯಲ್ಲಿ ಎಲ್ಲ ಕಡೆ ಗಳಲ್ಲೂ ವಜ್ರ ವೈಡೂರ್ಯಗಳು ಶೋಭಿಸುತ್ತಿದ್ದವು. ಶನಿದೇವನೇ ಕಷ್ಟ ಕೊಡುವದಕ್ಕಾಗಿ ಇಲ್ಲಿಗೆ ಕರೆದು ತಂದಿರಬಹುದು ಎಂದು ಮನಸ್ಸಿನಲ್ಲಿಯೇ ವಿಕ್ರಮನು ಅಂದುಕೊಂಡನು. ಈ ರೀತಿ ವಿಚಾರ ಮಾಡುತ್ತ ವಿಕ್ರಮನು ಪಲ್ಲಂಗದ ಮೇಲೆ ಮಲಗಿಕೊಂಡನು. ಅವನಿಗೆ ಬೇಗನೆ ಗಾಢವಾದ ನಿದ್ರೆ ಹತ್ತಿತು.
ಅನಂತರ ವ್ಯಾಪಾರಸ್ಥನ ಮಗಳಾದ ಆಲೋಲಿಕೆಯು ಆರತಿಯನ್ನು ತೆಗೆದುಕೊಂಡು ಪ್ರವೇಶಿಸಿದಳು. ಅವಳ ಕೊರಳಲ್ಲಿ ಮುತ್ತಿನ ಹಾರವು ಶೋಭಿಸುತ್ತಿತ್ತು. ಅವಳ ಕಾಲಲ್ಲಿ ಪೈಜಣವು ಫಿಲ್ ಫಿಲ್ ಎಂದು ಸಪ್ಪಳ ಮಾಡುತ್ತಿತ್ತು. ಅವಳು ಬಂದು ಅರಸನ ಮುಂದೆ ನಿಂತಳು. ಅವನು ಹಾಸಿಗೆ ಯಿಂದ ಏಳಲಿಲ್ಲ. ಅವಳು ಬೆಳ್ಳಿಯ ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅವನಿಗೆ ಸಿಂಪಡಿಸಿದಳು. ಹೀಗೆ ಎಷ್ಟು ಪ್ರಯತ್ನಿಸಿದರೂ ಅರಸನಿಗೆ ಎಚ್ಚರ ವಾಗಲಿಲ್ಲ. ಇದರಿಂದ ಬಹಳ ನಿರಾಶೆ ಹೊಂದಿದಳು. ಉಪಾಯವಿಲ್ಲದೆ ಅವಳು ತನ್ನ ಕೊರಳಲ್ಲಿಯ ಮುತ್ತಿನ ಹಾರವನ್ನು ಒಂದು ಗೂಟಕ್ಕೆ ಹಾಕಿ ಬೇರೆ ಕಡೆ ಮಲಗಿಕೊಂಡಳು. ಅವಳಿಗೆ ಬೇಗನೆ ನಿದ್ರೆ ಹತ್ತಿತು.
ತುಸು ಸಮಯದ ನಂತರ ರಾಜನಿಗೆ ಎಚ್ಚರವಾಯಿತು. ಕಣ್ಣು ತೆಗೆದು ನೋಡಿದಾಗ ವ್ಯಾಪಾರಸ್ಥನ ಮಗಳು ಮಲಗಿರುವದು ಕಾಣಿಸಿತು. ಇವಳ ಸಂಗಡ ಹ್ಯಾಗೆ ಮಾತನಾಡಬೇಕು? ಎಂದು ಮನಸ್ಸಿನಲ್ಲಿಯೇ ವಿಚಾರಿಸುತ್ತಿದ್ದನು.
ಅಷ್ಟರಲ್ಲಿಯೇ ಒಂದು ಚಮತ್ಕಾರವನ್ನು ಅವನು ಕಂಡನು. ಚಿತ್ರದಲ್ಲಿಯ ಹಂಸ ಪಕ್ಷಿಯು ಸಜೀವವಾಗಿ ಅವಳು ಗೂಟಕ್ಕೆ ಹಾಕಿದ್ದ ಮುತ್ತಿನ ಹಾರವನ್ನು ನುಂಗತೊಡಗಿತು. ವಿಕ್ರಮನು ಅದನ್ನು ನೋಡಿ ಬೆರಗಾದನು. ಏನು ಮಾಡ ಬೇಕೆಂಬುದು ತಿಳಿಯದಾಯಿತು. ಅಷ್ಟರಲ್ಲಿಯೇ ಹಂಸವು ಆ ಹಾರವನ್ನು ಸಂಪೂರ್ಣವಾಗಿ ನುಂಗಿತು. ಇದು ಶನಿರಾಯನ ಆಟವೆಂದು ಬಗೆದು ವಿಕ್ರಮನು ಹಾಗೆಯೇ ಮಲಗಿಕೊಂಡನು.
ಬೆಳಗಾದ ಕೂಡಲೇ ಆ ತರುಣಿಯು ಹಾಸಿಗೆಯಿಂದ ಎದ್ದಳು. ಅವಳ ದೃಷ್ಟಿಯು ತಾನು ಹಾರ ಹಾಕಿದ್ದ ಗೂಟದ ಕಡೆ ಹೋಯಿತು. ಅಲ್ಲಿ ಹಾರವಿರ ಲಿಲ್ಲ. ಅವಳು ಗಾಬರಿಯಾದಳು. ನಾನಲ್ಲದೆ ಬೇರೆ ಯಾರೂ ಇಲ್ಲಿ ಪ್ರವೇಶಿಸಿಲ್ಲ. ಅಂದ ಬಳಿಕ ಈ ಆಗಂತುಕನೇ ಆ ಹಾರ ಕದ್ದಿರಬಹುದೆಂದು ಭಾವಿಸಿದಳು. 'ಮಹಾನುಭಾವನೆ, ಗೂಟಕ್ಕೆ ಹಾಕಿದ್ದ ಹಾರವು ಮಾಯವಾಗಿದೆ. ನಾವಿಬ್ಬರಲ್ಲದೇ ಬೇರೆ ಯಾರೂ ಒಳಗೆ ಪ್ರವೇಶಿಸಿಲ್ಲ. ತಾವು ಏನಾದರೂ ತೆಗೆದುಕೊಂಡಿರುವಿರಾ ಎಂದು ಪ್ರಶ್ನಿಸಿದಳು. ಆಗ ವಿಕ್ರಮನು 'ನಡುರಾತ್ರಿಯಲ್ಲಿ ನನಗೆ ಎಚ್ಚರವಾದಾಗ ಈ ಚಿತ್ರದಲ್ಲಿರುವ ಹಂಸವು ಸಜೀವವಾಗಿ ಹಾರವನ್ನು ನುಂಗಿತು. ನಾನು ಹಾರವನ್ನು ತೆಗೆದುಕೊಂಡಿರುವದಿಲ್ಲ' ಎಂದನು. ಆಗ ಅವಳು ಬಹಳ ಕ್ರೋಧ ಸಂತೃಪ್ತಳಾದಳು. ಹಂಸವು ಸಜೀವವಾಗಿ ಹಾರವನ್ನು ನುಂಗಿತು ಎಂಬುದು ಸಂಪೂರ್ಣ ಸುಳ್ಳು. ಇದನ್ನು ನಾನು ನಂಬುವದಿಲ್ಲ. ಇಂತಹ ಪವಾಡದ ಆಟ ನನ್ನ ಮುಂದೆ ನಡೆಯದು, ಎಂದವಳೇ ತನ್ನ ತಂದೆಯ ಬಳಿಗೆ ಹೋಗಿ ಎಲ್ಲ ವೃತ್ತಾಂತವನ್ನು ಅರುಹಿದಳು. ಆಗ ಅವಳ ತಂದೆಯು ಕೋಪಿಷ್ಠನಾಗಿ ವಿಕ್ರಮ ನನ್ನು ಕುರಿತು ನುಡಿದನು “ನಿನಗೆ ಎಲ್ಲ ರೀತಿಯಿಂದಲೂ ಆದರ-ಸತ್ಕಾರವನ್ನು ಮಾಡಿದನು. ನನ್ನ ಮಗಳನ್ನು ನಿನಗೆ ಕೊಟ್ಟು ಲಗ್ನ ಮಾಡಬೇಕೆಂದು ಮಾಡಿ ದೆನು. ಕೃತಘ್ನನಾದ ನೀನು ನನ್ನ ಮಗಳ ಹಾರವನ್ನು ಕದ್ದಿರುವಿ. ಹಂಸವು ಹಾರವನ್ನು ನುಂಗಿತೆಂದು ಸುಳ್ಳು ಹೇಳುತ್ತಿರುವಿ, ಹಾರವನ್ನು ಸುಮ್ಮನೆ ಕೊಡು; ಇಲ್ಲದಿದ್ದರೆ ನೀನು ಹಿಂದುಗಡೆಯಿಂದ ಪಶ್ಚಾತ್ತಾಪ ಪಡಬೇಕಾಗುವದು.”
ವಿಕ್ರಮನು ಅತ್ಯಂತ ನಮ್ರತೆಯಿಂದ ನುಡಿದನು “ಹಂಸವು ಹಾರವನ್ನು ನುಂಗಿದ್ದು ನಿಜವು, ನನ್ನ ಬಳಿಯಲ್ಲಿ ನಿಮ್ಮ ಹಾರವಿಲ್ಲ. ನಾನು ನಿಮ್ಮ ಹಾರವನ್ನು ಕದ್ದಿರುವದಿಲ್ಲ.”
ಇದನ್ನು ಕೇಳಿ ಅವನಿಗೆ ಮತ್ತಷ್ಟು ಕೋಪ ಬಂದಿತು. ಅವನು ಸಿಟ್ಟಿನಿಂದ ತನ್ನ ಸೇವಕರಿಗೆ ಈ ರೀತಿಯಾಗಿ ಆಜ್ಞೆ ಮಾಡಿದನು. “ಈ ಮನುಷ್ಯನನ್ನು ಹಿಡಿದು ಮನಬಂದಂತೆ ಹೊಡೆಯಿರಿ, ಅವನು ಹಾರವನ್ನು ಕದ್ದು ತಾನು ಕದ್ದಿಲ್ಲವೆಂದು ಸುಳ್ಳು ಹೇಳುತ್ತಿರುವನು, ಅವನನ್ನು ಹೊಡೆಯದೆ ಅವನು ತನ್ನ ತಪ್ಪು ಒಪ್ಪಿಕೊಳ್ಳುವುದಿಲ್ಲ.”
ಕೂಡಲೇ ಸೇವಕರು ಅವನನ್ನು ಹಿಡಿದು ಕಟ್ಟಿ ಹೊಡೆಯತೊಡಗಿದರು, ಅವರಿಗೆ ದಯವಲ್ಲಿಂದ ಬರಬೇಕು? ವಿಕ್ರಮನನ್ನು ಮನಬಂದಂತೆ ಹೊಡೆದರು. ವ್ಯಾಪಾರಸ್ಥನು ವಿಕ್ರಮನನ್ನು ಕುರಿತು “ನಮ್ಮ ಹಾರವನ್ನು ಇನ್ನಾದರೂ ಕೊಡು” ಎಂದನು. ಅವನ ಹತ್ತಿರ ಹಾರವಿಲ್ಲೆಂದ ಮೇಲೆ ಅವನು ಹಾರವನ್ನು ಎಲ್ಲಿಂದ ಕೂಡುವನು?
ಆಗ ವ್ಯಾಪಾರಸ್ಥನು ಈ ಸುದ್ದಿಯನ್ನು ಅಲ್ಲಿಯ ಅರಸನಾದ ಚಂದ್ರಸೇನನಿಗೆ ಹೇಳಿದನು. ಅರಸನು ಸೇವಕರನ್ನು ಅಟ್ಟಿ ವಿಕ್ರಮನನ್ನು ತನ್ನ ರಾಜ್ಯಸಭೆಗೆ ತರಲು ಕರೆ ಕಳುಹಿಸಿದನು. ವಿಕ್ರಮನು ಅರಸನ ಮುಂದೆ ಬಂದು ನಿಂತನು. ಅರಸನು ವಿಕ್ರಮನನ್ನು ಕುರಿತು “ನಿನ್ನ ಬಳಿಯಲ್ಲಿರುವ ಹಾರವನ್ನು ಈ ವ್ಯಾಪಾರಸ್ಥನಿಗೆ ಕೊಟ್ಟು ಬಿಡು. ವ್ಯರ್ಥವಾಗಿ ಪ್ರಾಣಾಪಾಯಕ್ಕೆ ಎಡೆಯಾಗಬೇಡ.”
ಆಗ ವಿಕ್ರಮನು-ಮಹಾರಾಜನೇ, ಮುತ್ತಿನ ಹಾರವನ್ನು ನಾನು ಕದ್ದವ ನಲ್ಲ, ಅಸತ್ಯ ಮಾತನ್ನು ನಾನು ಎಂದೂ ಆಡನು. ಮುತ್ತಿನ ಹಾರವು ಮಾಯ ವಾದ ಅಘಟಿತ ಘಟನೆಯನ್ನು ಮಾತ್ರ ಕಂಡಿರುವೆ. ಹಂಸವು ಸಜೀವವಾಗಿ ಹಾರ ವನ್ನು ನುಂಗಿತು. ಅದರ ವಿವರಗಳನ್ನು ನಂಬುವದು ಯಾರಿಂದಲೂ ಸಾಧ್ಯವಿಲ್ಲ. ನನಗೆ ಗ್ರಹವು ಪ್ರತಿಕೂಲವಾಗಿರುವದರಿಂದ ಹೀಗೆ ಆಗುತ್ತಿರುವದು. ನನಗೆ ಹೇಗಾ ದರೂ ಕ್ಷಮೆ ಮಾಡಿರಿ, ನನ್ನ ಮೇಲೆ ದಯ ತೋರಿಸಿರಿ ಎಂದು ಬಿನ್ನವಿಸಿದನು.
ಈ ಮಾತುಗಳನ್ನು ಕೇಳಿ ಅರಸನು ಕ್ರೋಧ ಸಂತೃಪ್ತನಾದನು, ಸೇವಕರನ್ನು ಕುರಿತು ಈ ರೀತಿ ಆಜ್ಞೆ ಮಾಡಿದನು “ಇವನ ಕೈಕಾಲುಗಳನ್ನು ಕಡಿದು ಇವನನ್ನು ಊರ ಹೊರಗೆ ಒಗೆಯಿರಿ. ಯಾರೂ ಇವನಿಗೆ ಅನ್ನ-ನೀರುಗಳನ್ನು ಕೊಡ ಕೂಡದು. ಯಾರಾದರೂ ಕೊಟ್ಟರೆ ಅವರು ಶಿಕ್ಷೆಗೆ ಅರ್ಹರಾಗುವರು.” ಅರಸನ ಮಾತುಗಳನ್ನು ಕೇಳಿದ ಸೇವಕರು ವಿಕ್ರಮನನ್ನು ಕರೆದುಕೊಂಡು ಊರ ಹೊರಗೆ ಬಂದರು. ಅವನ ಕೈಕಾಲುಗಳನ್ನು ಕಡಿದು ಊರ ಹೊರಗೆ ಒಗೆದರು. ರಾಜನ ಮುಂದೆ ಬಂದು ಎಲ್ಲ ಸಮಾಚಾರವನ್ನು ತಿಳಿಸಿದರು.
ವಿಕ್ರಮನಿಗೆ ದಾರುಣವಾದ ದುಃಖ ಒದಗಿತು. ಆಹಾರವಿಲ್ಲದೆ ಬಳಲಿದನು. ಹಾಯ್ದು ಹೋಗುವ ಪ್ರವಾಸಿಗರು ವಿಕ್ರಮನನ್ನು ಕಂಡು ದುಃಖ ಪಡುತ್ತಿದ್ದರು. ಅವನ ಮೇಲೆ ಅವರಿಗೆ ವಿಪರೀತ ಕರುಣೆ ಬರುತ್ತಿತ್ತು. ಆದರೆ ಮಾಡುವದೇನು? ರಾಜಾಜ್ಞೆಯ ಭೀತಿಯಿಂದ ಅವರು ಸುಮ್ಮನೆ ಹೋಗುತ್ತಿದ್ದರು. ಹೀಗೆಯೇ ವಿಕ್ರಮನು ಒಂದು ತಿಂಗಳು ಕಳೆದನು. ಶನಿದೇವರನ್ನು ಕುರಿತು ಪ್ರಾರ್ಥಿಸ ತೊಡಗಿದನು. ಇದರಿಂದ ಚಂದ್ರಸೇನನ ಮನಸ್ಸಿನಲ್ಲಿ ದಯಾಭಾವವು ಉದಯ ವಾಯಿತು. ವಿಕ್ರಮನಿಗೆ ಅನ್ನ-ನೀರುಗಳನ್ನು ಕೊಡಲು ಅಡ್ಡಿಯಿಲ್ಲವೆಂದು 'ಅವನು ಆಜ್ಞೆ ಮಾಡಿದನು. ಆ ನಗರದಲ್ಲಿಯ ಜನರು ಅನ್ನ-ನೀರುಗಳನ್ನು ವಿಕ್ರಮನಿಗೆ ಕೊಡತೊಡಗಿದರು. ಆದರೂ ಕೈಕಾಲುಗಳಿಲ್ಲದಿದ್ದರಿಂದ ವಿಕ್ರಮನಿಗೆ ಅತ್ಯಂತ ವೇದನೆಯಾಗುತ್ತಿತ್ತು. ಈ ರೀತಿ ವಿಕ್ರಮನು ಎರಡು ವರ್ಷಗಳನ್ನು ಕಳೆದನು.
ಒಂದು ದಿವಸ ಒಬ್ಬ ಸ್ತ್ರೀಯು ಅದೇ ಮಾರ್ಗದಿಂದ ತಾಮಲಿಂದಪುರಕ್ಕೆ ಹೋಗುತ್ತಿದ್ದಳು. ಅವಳು ಉಜ್ಜಯಿನಿಯವಳು. ಅವಳ ಗಂಡನ ಮನೆಯು ತಾಮಲಿಂದಪುರ, ಅವಳು ತನ್ನ ಗಂಡನೊಡನೆ ಮಾವನ ಮನೆಗೆ ನಡೆದಿದ್ದಳು. ವಿಕ್ರಮರಾಜನನ್ನು ನೋಡಿ ಅವಳು ತನ್ನ ಬಂಡಿಯಿಂದ ಇಳಿದು ಬಂದು ವಿಕ್ರಮನ ಪಾದದ ಮೇಲೆ ಬಿದ್ದಳು.
“ನಿನಗೆ ಕಲ್ಯಾಣವಾಗಲಿ, ಉಜ್ಜಯಿನಿಯ ವೃತ್ತಾಂತವನ್ನು ಹೇಳು' ಎಂದು ವಿಕ್ರಮನು ಪ್ರಶ್ನಿಸಿದನು.
ಆಗ ಗಾಣಗಿತ್ತಿಯು “ಉಜ್ಜಯಿನಿಯಲ್ಲಿ ಎಲ್ಲರೂ ಕ್ಷೇಮದಿಂದ ಇರುವರು. ಆದರೆ ತಮಗೆ ಏಕೆ ಈ ಅವಸ್ಥೆ ಉಂಟಾಯಿತೆಂದು” ತಿರುಗಿ ಪ್ರಶ್ನೆ ಮಾಡಿದಳು. ಅದಕ್ಕೆ ವಿಕ್ರಮನು “ಇದೆಲ್ಲವೂ ನನ್ನ ಕರ್ಮಫಲದಿಂದ ಹೀಗಾಯಿತು” ಎಂದು ತನ್ನ ವೃತ್ತಾಂತವೆಲ್ಲವನ್ನು ಆಕೆಗೆ ಅರುಹಿದನು.
ಆ ಗಾಣಗಿತ್ತಿಯು ವಿಕ್ರಮನನ್ನು ತನ್ನ ಬಂಡಿಯಲ್ಲಿ ಕೂಡ್ರಿಸಿಕೊಂಡು ತನ್ನ ಮನೆಗೆ ಕರೆದುಕೊಂಡು ಬಂದಳು. ಆದರೆ ಅವಳ ಮಾವನಿಗೆ ಬಹಳ ಗಾಬರಿ ಯಾಯಿತು. ರಾಜನಿಗೆ ಈ ಸುದ್ದಿಯು ಮುಟ್ಟಿದರೆ ನಮ್ಮ ಅವಸ್ಥೆ ನೆಟ್ಟಗಾಗಲಿ ಕ್ಕಿಲ್ಲವೆಂದು ಬಗೆದು ಆ ಗಾಣಿಗನು ಚಂದ್ರಸೇನ ಮಹಾರಾಜನ ಬಳಿಗೆ ಹೋಗಿ ಕೈ ಮುಗಿದು ನೀವು ಊರ ಹೊರಗೆ ಕೈ-ಕಾಲು ಕಡಿದು ಒಗೆದವನನ್ನು ತಮ್ಮ ಅಪ್ಪಣೆಯಾದರೆ ನಮ್ಮ ಮನೆಗೆ ಕರೆದುಕೊಂಡು ಬರುವೆವು ಎಂದು ಹೇಳಿದನು. ಅರಸನು ಅದಕ್ಕೆ ಪರದುಃಖ ದಯಾಶೀಲನೆ! ದೀನನೂ, ಅನಾಥನೂ ಆಗಿರುವ ಆ ಮನುಷ್ಯನನ್ನು ನಿಮ್ಮ ಮನೆಗೆ ಕರೆದೊಯ್ದು ಅನ್ನ-ವಸ್ತ್ರಗಳನ್ನಿತ್ತು ರಕ್ಷಿಸು, ಪುಣ್ಯವಂತನಾಗು ಎಂದು ಅಪ್ಪಣೆಕೊಟ್ಟನು.
ಅಪ್ಪಣೆ ಪಡೆದುಕೊಂಡು ಮನೆಗೆ ಬರಲು ವಿಕ್ರಮನು “ನಮ್ಮ ಮನೆಯಲ್ಲಿ ವಿಕ್ರಮನಿರುವನೆಂದು ನೀವು ಯಾರಿಗೂ ಹೇಳಬೇಡಿರಿ. ಇಷ್ಟೇ ಬೇಡಿಕೆ ನನ್ನ ದಾಗಿದೆ” ಎನ್ನಲು ಅದಕ್ಕೆ ಅವನು ಒಡಂಬಟ್ಟನು.
“ನೀವು ನನ್ನ ಮನೆಯಲ್ಲಿ ಗಾಣ ಹೊಡೆಯಿರಿ. ಅಂದರೆ ನಾನು ನಿಮಗೆ ಅನ್ನ-ವಸ್ತ್ರಗಳನ್ನು ಕೊಡುವನು” ಎನ್ನಲು ವಿಕ್ರಮನು “ನಾನು ಸಂತೋಷದಿಂದ ಈ ಕೆಲಸ ಮಾಡುವೆನು. ನಿಮ್ಮ ಉಪಕಾರವು ಬಹಳವಾಯಿತು” ಎಂದನು.
ಹೀಗೆಯೇ ವಿಕ್ರಮನು ಏಳು ವರುಷಗಳನ್ನು ಕಳೆದನು. “ಒಂದು ದಿವಸ ವಿಕ್ರಮನು ಗಾಣದ ಮೇಲೆ ಕುಳಿತುಕೊಂಡು ಹಾಡುತ್ತಿದ್ದನು. ಅವನು ದೀಪಕ ರಾಗವನ್ನು ಹಾಡುತ್ತಿದ್ದನು. ಅವನು ಹಾಡ ಹತ್ತಿದ ಕೂಡಲೇ ಎಲ್ಲ ಕಡೆಗೂ ದೀಪಗಳು ಹತ್ತಿದವು.
ರಾಜನ ಮಗಳಾದ ಪದ್ಮಸೇನೆಯು ಎಲ್ಲ ಕಡೆಗೂ ಹತ್ತಿರತಕ್ಕ ಪ್ರಕಾಶದ ಕಡೆಗೆ ನೋಡುತ್ತಿದ್ದಳು. ಇಷ್ಟು ದೀಪಗಳು ಒಮ್ಮಿಂದೊಮ್ಮೆಲೆ ಹೇಗೆ ಹತ್ತಿದವು ಎಂದು ಅವಳು ಆಶ್ಚರ್ಯ ಪಡುತ್ತಿದ್ದಳು. ವಿಕ್ರಮನು ಅಷ್ಟರಲ್ಲಿಯೇ ರಾಗವನ್ನು ಮುಗಿಸಿದ್ದರಿಂದ ಆ ದೀಪಗಳು ಇಲ್ಲದಂತಾದವು. ಮುಂದೆ ಅವನು ಮತ್ತೊಂದು ರಾಗವನ್ನು ಹಾಡತೊಡಗಿದನು. ಆಗ ಪದ್ಮಸೇನೆಯು ಈ ಮನುಷ್ಯನು ರಾಗ ಜ್ಞಾನವನ್ನು ಅರಿತವನು. ಅವನು ಎಲ್ಲಿ ಹಾಡುತ್ತಿರುವನು ಎಂಬುದನ್ನು ನೋಡಿ ಕೊಂಡು ಬನ್ನಿರಿ ಎಂದು ಸೇವಕಿಯರಿಗೆ ಆಜ್ಞೆ ಮಾಡಿದಳು. ಅವರು ನಗರದ ನಾಲ್ಕೂ ಕಡೆಗಳಲ್ಲಿ ಶೋಧಿಸಿದರು. ಆ ಗಾಣಿಗನ ಮನೆಯಲ್ಲಿ ಅವನು ಹಾಡು ತಿರುವದನ್ನು ಅವರು ಶೋಧಿಸಿದರು. ಅವರು ತಿರುಗಿ ಬಂದು ಪದ್ಮಸೇನೆಗೆ ಎಲ್ಲ ವೃತ್ತಾಂತವನ್ನು ಅರುಹಿದರು. ಪದ್ಮಸೇನೆಯು “ಅವನು ಹೇಗೆಯೇ ಇರಲಿ, ಅವನನ್ನು ಇಲ್ಲಿಗೆ ಕರೆದುಕೊಂಡು ಬನ್ನಿ, ನೀವು ಯಾವ ರೀತಿಯಿಂದಲೂ ಹೆದರುವ ಕಾರಣವಿಲ್ಲ. ಅರಸನಿಗೆ ತಿಳಿಸಿ ಹೇಳುವ ಜವಾಬ್ದಾರಿಯನ್ನು ನಾನು ವಹಿಸಿಕೊಳ್ಳುವೆನು” ಎನ್ನಲು ಆಗ ದಾಸಿಯರು ವಿಕ್ರಮನನ್ನು ಕರೆದುಕೊಂಡು ಬರಲು ಗಾಣಿಗನ ಮನೆಗೆ ಬಂದರು, ಗಾಣಿಗನಿಗೆ ಹೇಳಿ ವಿಕ್ರಮನನ್ನು ಅರಮನೆಗೆ ಕರೆದುಕೊಂಡು ಹೋದರು.
ವಿಕ್ರಮನನ್ನು ಕಂಡು ರಾಜಕುಮಾರಿಗೆ ಬಹಳೇ ಸಂತೋಷವಾಯಿತು. ನೀವು ಒಳ್ಳೇ ಸಂಗೀತಗಾರರಿದ್ದಂತೆ ತೋರುವದು. ಒಂದು ಹಾಡನ್ನು ಹಾಡಿರಿ ಎಂದು ಬಿನ್ನವಿಸಿದಳು. ಆಗ ವಿಕ್ರಮನು ಹಾಡಲು ಮೊದಲು ಮಾಡಿದನು. ಅವನ ಕಂಠವು ಅತಿ ಮಧುರವಾಗಿತ್ತು. ಅವನು ಅತೀ ಗಂಭೀರವಾಗಿ ಹಾಡ `ತೊಡಗಿದನು. ರಾಜಕನೆಯ ಅಂತಃಪುರದಲ್ಲಿ ಸಂಗೀತ ಕಚೇರಿಯು ನಡೆಯಿತು.
ಈ ಸಂಗೀತವನ್ನು ಚಂದ್ರಸೇನ ರಾಜನು ಕೇಳಿ ಈ ರಾಗವು ನನ್ನ ಮಗಳಾದ ಪದ್ಮಸೇನೆಯ ಅರಮನೆಯಿಂದ ಬರುತ್ತಿರುವದು. ಅಲ್ಲಿ ಏನು ನಡೆದಿರುವದು ಎಂದು ತನ್ನ ಸೇವಕರನ್ನು ವಿಚಾರಿಸಿದನು. ಸೇವಕರು “ಅಲ್ಲಿ ಒಳ್ಳೆಯ ರಸಭರಿತ ಸಂಗೀತ ಕಚೇರಿಯು ಒಬ್ಬನಿಂದ ನಡೆಯುತ್ತಿದೆ” ಎನ್ನಲು ರಾಜನು ನಾಳೆ ಬೆಳಿಗ್ಗೆ ರಾಜಕುಮಾರಿಯ ಮಹಲಿಗೆ ತೆರಳಿ ಆ ಸಂಗೀತಗಾರನನ್ನು ಭೇಟಿ ಯಾಗಲು ಸಂಕಲ್ಪಿಸಿದನು.
ವಿಕ್ರಮರಾಜನು ಆ ರಾಜಕನ್ನಿಕೆಯ ಮಹಡಿಯ ಮೇಲೆ ಕುಳಿತುಕೊಂಡಿ ದ್ದನು. ಶನಿಯ ಕಾಟವು ಪ್ರಾರಂಭವಾಗಿ ಏಳೂವರೆ ವರ್ಷಗಳು ಮುಗಿದಿದ್ದವು. ಇನ್ನು ತನ್ನ ದುರ್ದೈವವು ಎಂದು ಮುಗಿಯುವದು, ನಾನು ಉಜ್ಜಯಿನಿಯನ್ನು ಯಾವಾಗ ನೋಡುವೆನು ಎಂದು ಮನದಲ್ಲಿ ವಿಚಾರಿಸುತ್ತಿದ್ದನು. ಆಗ ಶನಿದೇವನು ಅವನ ಮುಂದೆ ಪ್ರತ್ಯಕ್ಷನಾದನು. ಶನಿದೇವನು ಅವನನ್ನು ಕುರಿತು ನುಡಿದನು “ನೀನು ನನ್ನನ್ನು ಗುರುತು ಹಿಡಿಯಲಿಕ್ಕಿಲ್ಲ. ನಿನಗೆ ಈಗ ಪೂರ್ಣ ಅನುಭವ ಬಂದಿರಬಹುದು” ಎನ್ನುವಷ್ಟರಲ್ಲಿಯೇ ಶನಿದೇವನಿಗೆ ನಮಸ್ಕಾರ ಮಾಡ ಬೇಕೆಂದು ವಿಕ್ರಮನು ಏಳಲು ಪ್ರಯತ್ನಿಸಿದನು. ಆದರೆ ಕೈ-ಕಾಲುಗಳಿಲ್ಲದ್ದರಿಂದ ನೆಲದ ಮೇಲೆ ಬಿದ್ದು ಹೊರಳಾಡಿದನು, ಆಗ ಶನಿದೇವನು ನುಡಿದನು, “ವಿಕ್ರಮನೇ; ನಿನ್ನ ಮಹಿಮೆಯು ಅಪಾರವಾದದ್ದು. ಈಗ ನಾನು ನಿನಗೆ ಪ್ರಸನ್ನನಾಗಿರುವೆನು. ನಿನಗೆ ಮನಸ್ಸಿಗೆ ಬಂದದ್ದನ್ನು ಬೇಡಿಕೋ” ಎಂದನು. ಆಗ ವಿಕ್ರಮನು ಕಣ್ಣೀರು ಸುರಿಸುತ್ತ ನುಡಿದನು “ಮನುಷ್ಯನಿಗೆ ಇಂಥ ಪೀಡೆ ಯನ್ನು ಕೊಡಬೇಡಾ, ಇದೇ ನಾನು ಬೇಡುವ ವರ.”
ಆಗ ಶನಿದೇವನು ವಿಕ್ರಮನ ವಿಶಾಲವಾದ ಅಂತಃಕರಣವನ್ನು ಕಂಡು ಸಂತೋಷಭರಿತನಾದನು, ವಿಕ್ರಮನನ್ನು ಕುರಿತು ಈ ರೀತಿಯಾಗಿ ನುಡಿದನು “ನಿನಗೆ ಕೈಕಾಲುಗಳಿಲ್ಲ. ಆದರೆ ಅವುಗಳನ್ನು ಬೇಡದೆ ಪರರ ಸಲುವಾಗಿ ಮಾತ್ರ ವಿಚಾರ ಮಾಡುತ್ತಿರುವಿ. ನಿನ್ನ ರಾಜ್ಯವನ್ನು ಬೇಡದ ಪರರಿಗೆ ದುಃಖ ಕೊಡ ಬೇಡಾ ಎಂದು ಬೇಡಿದಿ. ಇದರಿಂದ ನಿನ್ನ ಅಂತಃಕರಣವು ಎಷ್ಟು ವಿಶಾಲವಾದದ್ದು ಎಂಬುದು ಗೊತ್ತಾಗುತ್ತದೆ” ಎಂದು ನುಡಿದು ದಿವ್ಯದೃಷ್ಟಿಯಿಂದ ವಿಕ್ರಮನ ಕಡೆಗೆ ನೋಡಿದನು. ವಿಕ್ರಮನ ಕೈಕಾಲುಗಳು ಮೊದಲಿನಂತಾದವು. ಆಗ ವಿಕ್ರಮನು ಶನಿದೇವನ ಪಾದದ ಮೇಲೆ ಬಿದ್ದನು ಹಾಗೂ ದೈನ್ಯದಿಂದ ಬೇಡಿ ಕೊಂಡನು. “ನೀನು ಯಾರಿಗೂ ಪೀಡೆಯನ್ನು ಕೊಡಬೇಡಾ ಇದೇ ನನ್ನ ಬೇಡಿಕೆ”. ಆಗ ಶನಿದೇವನು ಹೀಗೆ ನುಡಿದನು “ವಿಕ್ರಮನೇ ನಾನು ಎಲ್ಲಾ ದೇವತೆಗಳನ್ನೂ, ರಾಕ್ಷಸರನ್ನೂ ಕಾಡಿರುವನು. ಅದೆಲ್ಲವನ್ನು ನೋಡಿದರೆ ನಾನು ನಿನಗೆ ಕೊಟ್ಟ ತೊಂದರೆ ಬಹಳವೇನಲ್ಲ. ನನ್ನ ಗುರುವನ್ನು ಕೂಡಾ ನಾನು ಕಾಡಿರುವೆನು, ಅಂದ ಮೇಲೆ ಉಳಿದವರ ಪಾಡೇನು? ನನ್ನ ಕಾಟಕ್ಕೆ ಹೆದರಿ ಶಿವನು ಕೈಲಾಸ ದಲ್ಲಿ ಕ್ಷಣಹೊತ್ತು ಅಡಗಿಕೊಂಡನು, “ರಾಮಚಂದ್ರನು ಹದಿನಾಲ್ಕು ವರ್ಷ ವನವಾಸ ಭೋಗಿಸಬೇಕಾಯಿತು. ರಾವಣನ ಮೇಲೆ ನನ್ನ ದೃಷ್ಟಿಯು ಬೀಳಲು ಅವನು ನಾಶ ಹೊಂದಿದನು. ಹರಿಶ್ಚಂದ್ರನಿಗೆ ತನ್ನ ರಾಜ್ಯವನ್ನು ಬಿಟ್ಟು ಹೆಂಡರು ಮಕ್ಕಳನ್ನು ಮಾರಿ ಜೀವಿಸ ಬೇಕಾಯಿತು. ವಶಿಷ್ಠನ ನೂರು ಜನ ಮಕ್ಕಳು ಮರಣ ಹೊಂದಿದರು. ಪಾಂಡವರು ಹನ್ನೆರಡು ವರುಷ ವನವಾಸ ಒಂದು ವರ್ಷ ಅಜ್ಞಾತವಾಸದಲ್ಲಿ ಇರಬೇಕಾಯಿತು. ಶ್ರೀಕೃಷ್ಣನಿಗೆ ಸಮಂತಕ ಮಣಿಯನ್ನು ಕದ್ದನೆಂಬ ಅಪವಾದ ಬಂದಿತು. ಈ ರೀತಿಯಾಗಿ ನಾನು ಎಲ್ಲರನ್ನೂ ಕಾಡಿರುವನು.
ನೀನು ಬಹಳ ಪರೋಪಕಾರಿಯು, ನಿನಗೆ ನಾನು ಪ್ರಸನ್ನನಾಗಿದ್ದೇನೆ ನಾನು ನಿನಗೆ ಕೊಟ್ಟ ಪೀಡೆಯ ಕಥೆಯನ್ನು ಯಾರು ಶ್ರವಣ ಪಠಣ ಮಾಡು ವರೋ ಅಂಥವರಿಗೆ ನಾನು ಪೀಡೆಯನ್ನು ಕೊಡುವದಿಲ್ಲ. ಈ ಗ್ರಂಥದ ಪಠಣ ಶ್ರವಣ ಮಾಡದಿರುವವರನ್ನು ನಾನು ಪೀಡಿಸದೆ ಬಿಡನು. ಇದು ನಾನು ನೀಡುವ ವರವು ಇದಾಗಿದೆ. ಮತ್ತೊಂದು ವಿಷಯವೇನೆಂದರೆ ವೈಶ್ಯನ ಮನೆಯಲ್ಲಿ ಹಂಸವು ರತ್ನಹಾರವನ್ನು ನುಂಗಿದ್ದರಿಂದ ನಿನಗೆ ಅಪವಾದ ಬಂದಿತು. ಈಗ ವೈಶ್ಯನನ್ನು ಕರೆಯಿಸು. ಅವನ ಮುಂದೆಯೇ ಹಂಸವು ಸಜೀವಗೊಂಡು ರತ್ನ ಹಾರವನ್ನು ಉಗುಳಿದಾಗ ನಿನಗೆ ಮೊದಲಿನ ರಾಜ-ಭೋಗಗಳು ಲಭಿಸುವವು ಎಂದು ಆಶೀರ್ವಾದ ಮಾಡಿ 'ಶನಿವಾರಕ್ಕೆ ಒಮ್ಮೆಯಾದರೂ ನನ್ನ ಮಹಾತ್ಮ ಯನ್ನು ಯಾರು ಓದುವರೋ ಅಥವಾ ಕೇಳುವರೋ ಅದರಿಂದ ನಾನು ಸಂತುಷ್ಟ ನಾಗುವೆನು' ಎಂದು ನುಡಿದು ಶನಿದೇವನು ತನ್ನ ಸ್ಥಾನಕ್ಕೆ ಹೊರಟು ಹೋದನು.
ಚಂದ್ರಸೇನ ರಾಜನು ಅಲ್ಲಿಗೆ ಬಂದನು. ವಿಕ್ರಮರಾಜನನ್ನು ಕಂಡು ನೀನು ಯಾರು?” ಎಂದು ಕೇಳಿದನು. ವಿಕ್ರಮನು “ನಾನು ತಮ್ಮ ಪರಿಚಯದ ಕಳ್ಳನಲ್ಲವೇ?” ಎಂದನು. ಅದು ಇರಲಿ, ಈಗ ಶ್ರೀಪತಿ ಸಾಹುಕಾರನನ್ನು ತ್ವರೆಮಾಡಿ ಕರೆಸಿಕೊಳ್ಳಿರಿ. ಅನಂತರ ನನ್ನ ಸಮಾಚಾರವೆಲ್ಲವೂ ತಿಳಿದು ಬರುವುದು ಎನಲು ರಾಜನು ಶ್ರೀಪತಿ ಸಾಹುಕಾರನನ್ನೂ ಕರೆಸಿದನು. ವಿಕ್ರಮನು “ವೈಶ್ಯನೇ! ನಿನ್ನ ಮನೆಯ ಚಿತ್ರ ಶಾಲೆಗೆ ಕರೆದುಕೊಂಡು ನಡೆ, ಅಲ್ಲಿ ಈ ಹಿಂದೆ ನಡೆದ ಅಘಟಿತ ಘಟನೆಯನ್ನು ಪ್ರತ್ಯಕ್ಷ ನಿನಗೂ, ರಾಜನಿಗೂ ತೋರಿಸಬೇಕಾಗಿದೆ” ಎಂದು ನುಡಿಯಲು ಶ್ರೀಪತಿ ಸಾಹುಕಾರನು ಎಲ್ಲರನ್ನು ಕರೆದುಕೊಂಡು ಚಿತ್ರಶಾಲೆಗೆ ಬಂದನು. ಆಗ ವಿಕ್ರಮನು ಶನಿದೇವರನ್ನು ಪ್ರಾರ್ಥಿಸಿದನು. ಅವನು ಪ್ರಾರ್ಥಿಸುವದೇ ತಡ ಹಂಸವು ಸಜೀವಗೊಂಡು ತಾನು ನುಂಗಿದ ರತ್ನಹಾರವನ್ನು ಉಗುಳಿತು. ಇದೆಲ್ಲವನ್ನು ಕಂಡು ಶ್ರೀಪತಿ ಸಾಹುಕಾರ, ಚಂದ್ರಸೇನರಾಜನು, ಆಲೋಲಿಕೆಯರು ಬೆರಗುಗೊಂಡರು. ಆಲೋಲಿಕೆಯು ವಿಕ್ರಮನನ್ನು ವರಿಸಲು ನಿಶ್ಚಯಿಸಿದಳು. ಬಹು ಹರುಷಿತನಾದ ವೈಶ್ಯ ಸಾಹುಕಾರನು ತನ್ನ ಕನ್ನಿಕೆಯನ್ನು ವಿಕ್ರಮನಿಗೆ ಕೊಟ್ಟು ಅವನ ಚರಣ ಗಳಿಗೆ ಎರಗಿ ತನ್ನ ತಪ್ಪಿಗಾಗಿ ಕ್ಷಮೆ ಬೇಡಿದನು.
ಚಂದ್ರಸೇನ ರಾಜನು ವಿಕ್ರಮಾರ್ಕನನ್ನುದ್ದೇಶಿಸಿ-ಮಹಾಪುರುಷನೇ ನಿನ್ನಿಂದ ಯಾವ ದೇಶವು ಪುನೀತವಾಗಿದೆ? ನಿನ್ನ ನಿಜ ನಾಮಧೇಯವನ್ನು ತಿಳಿಸಬೇಕು ಎಂದು ಬಿನ್ನವಿಸಿದನು. ಆಗ ವಿಕ್ರಮನು “ನಾನು ಉಜ್ಜಯಿನಿಯ ಅರಸನು, ನನ್ನ ಹೆಸರು ವಿಕ್ರಮನು” ಎಂದೊಡನೆ ಚಂದ್ರಸೇನನು ಎದ್ದು ಹೋಗಿ ಸಾಷ್ಟಾಂಗವೆರಗಿ, ನನ್ನಿಂದ ಮಹತ್ತರ, ಅನ್ಯಾಯವು ಘಟಿಸಿತು. ಕ್ಷಮಿಸ ಬೇಕೆಂದು ಬೇಡಿಕೊಂಡನು.
ವಿಕ್ರಮನು ನನಗೆ ಪ್ರತಿಕೂಲ ಗ್ರಹಸ್ಥಿತಿ ಇದ್ದುದರಿಂದ ಆಗ ನೀನು ಹಾಗೆ ಮಾಡಿದೆ, ಈಗ ಶನಿ ಕೃಪೆಯು ನನಗೆ ಒದಗಿರುವದರಿಂದ ಹೀಗೆ ನುಡಿಯುವೆ. ಇರಲಿ. ಇದು ನಿನ್ನ ದೋಷವಲ್ಲ, ಶನಿರಾಯನ ಅವಕೃಪೆಯೇ ಇದಕ್ಕೆ ಕಾರಣ ವಾಗಿದೆ. ಅದರಿಂದ ಸಾಕಷ್ಟು ಕಷ್ಟ ನಷ್ಟಗಳಿಗೆ ಗುರಿಯಾಗಿದ್ದನು ಎಂದು ನುಡಿದನು. ಅರಸನು ವಿಕ್ರಮನಿಗೆ ವಿಪುಲ ಸಂಪತ್ತನ್ನು ಕೊಟ್ಟನು ಅಲ್ಲದೆ ಪದ್ಮಸೇನೆಯನ್ನು ವಿಕ್ರಮನಿಗೆ ಮದುವೆ ಮಾಡಿ ಕೊಟ್ಟನು. ವಿಕ್ರಮನು ತನ್ನನ್ನು ರಕ್ಷಣೆ ಮಾಡಿದ ಗಾಣಿಗನಿಗೆ ಒಂದು ನಾಡನ್ನು ಉಂಬಳಿಯಾಗಿ ಕೊಡಿಸಿದನು. ಚಂದ್ರಸೇನ ರಾಜನ ಮತ್ತು ಶ್ರೀಪತಿ ಸಾಹುಕಾರನ ಅನುಮತಿ ಪಡೆದು ತನ್ನ ಉಭಯ ಪತ್ನಿಯರೊಂದಿಗೆ ಚತುರಂಗದಳ ಸಮೇತನಾಗಿ ಉಜ್ಜಯಿನಿಗೆ ಹಿಂದಿರುಗಿದನು. ಉಜ್ಜಯಿನಿ ಪುರವಾಸಿಗಳು ವಿಕ್ರಮನ ಪುನರಾಗಮನದಿಂದ ಆನಂದಯುಕ್ತರಾದರು, ಆ ಬಳಿಕ ಒಂದು ಶುಭ ಮುಹೂರ್ತದಲ್ಲಿ ವಿಕ್ರಮನು ತನ್ನ ಸಿಂಹಾಸನವನ್ನೇರಿದನು. ಮುಂದೆ ಅವನು ಶನೇಶ್ವರ ವ್ರತವನ್ನು ತಪ್ಪದೇ ಆಚರಿಸಿದನು. ಈ ಶನಿ ಮಹಾತ್ಮ ಯಾರು ಭಕ್ತಿಯಿಂದ ಓದುವರೋ ಅಥವಾ ಪಠಣ ಮಾಡುವರೋ ಅವರ ಸಂಕಟಗಳೆಲ್ಲವೂ ಪರಿಹಾರವಾಗುವವು. ಶನಿದೇವನು ಪ್ರಸನ್ನನಾಗುವನು.
ಶ್ರೀ ಶನಿದೇವಾಯ ನಮಃ
ಇತಿ ಶ್ರೀ ಶನಿಮಹಾತ್ಮಂ ಸಂಪೂರ್ಣ೦
|| ಅಥ ಶನೈಶ್ವರ ಸ್ತೋತ್ರಮ್ |
ಶ್ರೀ ಗಣೇಶಾಯ ನಮಃ ||
ಅಸ್ಯ ಶ್ರೀ ಶನೈಶ್ವರ ಸ್ತೋತ್ರಸ್ಯ ದಶರಥ ಋಷಿಃ ಶನೈಶ್ವರೋ ದೇವತಾ |
ತ್ರಿಷ್ಟುಪ ಛಂದಃ ಶನೈಶ್ವರ ಪ್ರೀತ್ಯರ್ಥ ಜಪೇ ವಿನಿಯೋಗಃ ||
ದಶರಥ ಉವಾಚ | ಕೋಂತಕೋ ರೌದ್ರ ಯಮೋಥ ಬಭ್ರುಃ |
ಕೃಷ್ಣಃ ಶನಿಃ ಪಿಂಗಳ ಮಂದಸೌರಿಃ |
ನಿತ್ಯಂ ತೋಯೋ ಹರತೇಚ ಪೀಡಾಂ ತಮ್ಮ ನಮಃ ಶ್ರೀ ರವಿನಂದನಾಯ || 1 ||
ಸುರಾಸುರಾಃ ಕಿಂಪುರು ಷೋರಗೇಂದ್ರಾ ಗಂಧರ್ವ ವಿದ್ಯಾಧರ ಪನ್ನಗಾಶ್ಚ ಪೀಡ್ಕಂತಿ ಸರ್ವವಿಷಮ ಸ್ಮಿತನ |
ತಸ್ಯೆ ನಮಃ (ಶ್ರೀ ರವಿನಂದನಾಯ || 2 ||
ನರಾ ನರೇಂದ್ರಾ ಪಶವೋ ಮೃಗೇಂದ್ರಾಃ ||
ವನ್ಯಾಶ್ಚಯೇ ಕೀಟ ಪತಂಗ ಭಂಗಾಃ ||
ಪೀಡ್ಕಂತಿ ಸರ್ವೇ ವಿಷಮ ಸ್ಥಿತೇನ ತಸ್ಯೆ ನಮಃ ಶ್ರೀ ರವಿನಂದನಾಯ || 3 ||
ದೇಶಾಶ್ವ ದುರ್ಗಾಣಿವನಾಯತ್ರ |
ಸೇನಾನಿವೇಶಃ ಪುರಪತ್ತನಾನಿ ಪೀಡ್ಕಂತಿ ಸರ್ವೇ ವಿಷಮ ಸ್ಥಿತನ ತಸ್ಯೆ ನಮಃ ಶ್ರೀ ರವಿನಂದನಾಯ || 4 ||
ತಿಲೈರ್ಯವ್ಯ ರ್ಮಾಷ ಗುಡಾನ್ನದಾನೈರ್ಲೋಹನ ನೀಲಾಂಬರ ದಾನತೋವಾ ||
ಪ್ರೀಣಾತಿ ಮಂತ್ರರ್ನಿಜವಾಸರೇಚ ತಸ್ಯೆ ನಮಃ ಶ್ರೀ ರವಿನಂದನಾಯ || 5 ||
ಪ್ರಯಾಗ ಕೋಟಿ ಯಮುನಾ ತಟೇಚ ಸರಸ್ವತಿ ಪುಣ್ಯಜಲೇ ಗುಹಾಯಾಂ |
ಯೋ ಯೋಗಿನಾಂ ಧ್ಯಾನಗತೋಪಿ ಸೂಕ್ಷ್ಮಸ್ತಸ್ಕೃ ನಮಃ ಶ್ರೀ ರವಿನಂದನಾಯ || 6 |
ಅನ್ಯ ಪ್ರದೇಶಾತ್ಮಗೃಹಂ ಪ್ರವಿಷ್ಟಸ್ತದೀವಾರೇ ಸನರಃ ಸುಖೀಸ್ಮಾತ್ |
ಗೃಹಾಗೃತೋಯೇನ ಪುನಃ ಪ್ರಯಾತಿ ತಮ್ಮ ನಮಃ ಶ್ರೀ ರವಿನಂದನಾಯ || 7 ||
ಸಸ್ಟಾಸ್ವಯಂ ಭೂರ್ಭುವನ ತ್ರಯಸ್ಕ ತ್ರಾತಾಹರಿಃ ಸಹರ ತೇಪಿ ಪಿನಾಕಿ ||
ಏಕ ಧಾಋಗ್ಯಜುಃ ಸಾಮ ಮೂರ್ತಿಸ್ತ || 8 ||
ಶನ್ಯ ಷ್ಟಕಂ ಯಃ ಪ್ರಯತಃ ಪ್ರಭಾತೇ ನಿತ್ಯಂ ಸುಪುತ್ರಃ ಪಶುಬಾಂಧವೈಶ್ಯ |
ಪಠೇತ್ತು. ಸೌಖ್ಯಂ ಭುವಿಭೋಗಯುಕ್ತಃ ಪ್ರಾಪ್ಸ್ ನಿರ್ವಾಣ ಪದಂ ತದಂತ || 9 ||
ಕೋಣಸ್ತೆ ಪಿಂಗಲೋ ಬಬ್ರುಃ ಕೃಷ್ಣ 'ರೌಂತಕೋ ಯಮಃ ಸೌರಿ: ಶನೈಶ್ಚರೋ ಮಂದಃ ಪಿಪ್ಪಲಾದೇನ ಸಂಸ್ತುತಃ || 10 ||
ಏತಾನಿ ದಶ ನಾಮಾನಿ ಪ್ರಾತರುತ್ಥಾಯ ಯಃ ಪಠೇತ್ ಶನೈಶ್ವರ ಕೃಪಾ 'ಪೀಡಾನ ಕದಾಚಿದ್ಭವಿಷ್ಯತಿ ||
ಇತಿ ಶ್ರೀ ದಶರಥ ಪ್ರೋಕ್ತಂ ಶನೈಶ್ಚರ ಸ್ತೋತ್ರಂ ಸಂಪೂರ್ಣ೦ ||
ಇತಿ ಶ್ರೀ ಶನೈಶ್ವರ ಸ್ತೋತ್ರಂ ಸಮಾಪ್ತ
| ಅಥ ನವಗ್ರಹ ಸ್ತೋತ್ರಮ್ ||
ಶ್ರೀ ಗಣೇಶಾಯ ನಮಃ ||
ಜಪಾಕುಸುಮಸಂಕಾಶಮ್ ಕಾಶ್ಯಪೇಯಂ ಮಹಾದ್ಯುತಿಮ್ ||
ತಮೋರಿಂ ಸರ್ವ ಪಾಪಘ್ನಂ ಪ್ರಣತೋಸ್ಮಿ ದಿವಾಕರಂ || 1 ||
ದಧಿಶಂಖ ತುಷಾರಾಭಂ ಕ್ಷಿರೋದಾರ್ಣವ ಸಂಭವಮ್ ||
ನಮಾಮಿ ಶಶಿನಂ ಸೋಮಂ ಶಂಭೋರ್ಮುಕುಟ ಭೂಷಣಂ || 2 ||
ಧರಣಿ ಗರ್ಭ ಸಂಭೂತಂ ವಿದ್ಯುತ್ಕಾಂತಿ ಸಮಪ್ರಭಮ್ |
ಕುಮಾರಂಶಕ್ತಿ ಹಸ್ತಂ ತಂ ಮಂಗಲಂ ಪ್ರಣ ಮಾಮ್ಯಹಮ್ || 3 ||
ಪ್ರಿಯಂಗುಕಲಿಕಾಶ್ಯಾಮಂ ರೂಪೇಣಾ ಪ್ರತಿಮಂ ಬುಧಂ ||
ಸೌಮ್ಯಂ ಸೌಮ್ಯ ಗುಣೋಪೇತಂ ತಂ ಬುಧಮ್ ಪ್ರಣಮಾಮ್ಯಹಂ || 4 |
ದೇವಾನಂಚ ಋಷಿಣಾಂಚ ಗುರುಂ ಕಾಂಚನ ಸನ್ನಿಭಮ್ ಬುದ್ಧಿಭೂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಮ್ || 5 |
ಹಿಮಕುಂದ ಮೃಣಾಲಾಭಂ ದೈತ್ಯಾನಾಂ ಪರಮ ಗುರುಮ್ ||
ಸರ್ವಶಾಸ್ತ್ರ ಪ್ರವಕ್ತಾರಂ ಭಾರ್ಗವಂ ಪ್ರಣ ಮಾಮ್ಯಹಮ್ || 6 ||
ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಮ್ ||
ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ವರಮ್ | | 7 |
ಅರ್ಧಕಾಯಂ ಮಹಾವೀರ್ಯಂ ಚಂದ್ರಾದಿತ್ಯ ವಿಮರ್ಧನಮ್ |
ಸಿಂಹಿಕಾಗರ್ಭ ಸಂಭೂತಂ ತಂ ರಾಹುಂ ಪ್ರಣಮಾಮ್ಯಹಮ್ || 8 ||
ಫಲಾಶ ಪುಷ್ಪ ಸಂಕಾಶ ತಾರಕಾಂ ಗೃಹ ಮಸ್ತಕಮ್ ||
ರೌದ್ರಂ ರೌದ್ರಾತ್ಮಕಂ ಘೋರಃ ತಂ ಕೇತು ಪ್ರಣಮಾಮ್ಯಹಮ್ || 9 ||
ಇತಿ ವ್ಯಾಸ ಮುಖೋದ್ಗೀತಂ ಯಃ ಪಠೇತ್ಸು ಸಮಾಹಿತ |
ದಿವಾವಾಯ ದಿವಾರಾ ವಿಘ್ನ ಶಾಂತಿರ್ಭವಿಷ್ಯತಿ || 10 |
ನರನಾರೀ ನೃಪಣಾಂತ ಭವೇತ್ ದುಃಸ್ವಪ್ನನಾಶನಂ ||
ಐಶ್ವರ್ಯ ಮತುಲಂ ದೇಹಾಮಾರೋಗ್ಯಂ ಪುಷ್ಟಿವರ್ಧನಮ್ || 11 ||
ಗ್ರಹನಕ್ಷತ್ರಜಾ ಪೀಡಾ ಸಸ್ಯೆರಾಗ್ನಿ ಸಮುದ್ಭವಾ ||
ತಾಃ ಸರ್ವಾಃ ಪ್ರಶಮಂ ಯಾಂತಿ ವ್ಯಾಸೋ
ಬೂತೇನ ಸಂಶಯಃ ಇತಿ ಶ್ರೀ ವೇದವ್ಯಾಸ ವಿರಚಿತಂ ನವಗ್ರಹ ಸ್ತೋತ್ರಂ ಸಂಪೂರ್ಣಮ್ || 12 |
|| ಇತಿ ನವಗ್ರಹ ಸ್ತೋತ್ರಮ್ ಸಮಾಪ್ತ ||
| ಲೋಕ ರವಿಃ || 1 ||
ವಿಷಮಸ್ಥಾನ ಮಹಾ ||
ಅಥ ನವಗ್ರಹ ಪೀಡಾಹರ ಸ್ತೋತ್ರಮ್ |
ಶ್ರೀ ಗಣೇಶಾಯ ನಮಃ ||
ಗ್ರಹಣಾಮಾದಿರಾದಿ ರಕ್ಷಕಕಾರಕಃ |
ವಿಷಮ ಸ್ಥಾನ ಸಂಭೂತಾಂ ಪೀಡಾಂ ಹರತು ಮೇ ರೋಹಿಣೀಶಃ ಸುಧಾಮುರ್ತಿ ಸುಧಾಗಾತ್ರಃ ಸುಧಾಶನಃ ||
ಸಂಭೂತಾಂ ಪೀಡಾಂ ಹರತು ಮೇ ವಿಧುಃ || 2 ||
ಭೂಮಿ ಪುತ್ರೋ ತೇಜಃ ಜಗತಾಂ ಭಯಕೃತ್ಸದಾ ||
ದೃಷ್ಟಿಹರ್ತಾಚ ಪೀಡಾಂ ಹರತು ಮೇ ಕುಜಃ || 3 |
ಉತ್ಪಾತ ರೂಪೋಜಗತಾಂ ಚಂದ್ರಪುತ್ರೋ ಮಹಾದ್ಯುತಿಃ ||
ಸೂರ್ಯ ಪ್ರಿಯಕರೋ ವಿದ್ವಾನ್ ಪೀಡಾಂ ಹರತು ಮೇ ಬುಧಃ || 4 ||
ದೇವ ಮಂತ್ರಿ ವಿಶಾಲಾಕ್ಷ ಸದಾ ಲೋಕಹಿತೇರತಃ ||
ಅನೇಕ ಶಿಷ್ಯ ಸಂಪೂರ್ಣ ಪೀಡಾಂ ಹರತು ಮೇ ಗುರುಃ || 5 ||
ದೈತ್ಯ ಮಂತ್ರಿ ಗುರುಸ್ತೇಷಾಂ ಪ್ರಾಣದಶ್ಚ ಮಹಾಮತಿಃ ||
ಪ್ರಭುಸ್ತಾರಾಗ್ರಹಾಣಂ ಚ ಪೀಡಾಂ ಹರತು ಮೇ ಬೃಗುಃ || 6 ||
ಸೂರ್ಯ ಪುತ್ರೋ ದೀರ್ಘದೇಹೋ ವಿಶಾಲಾಕ್ಷ ಶಿವಪ್ರಿಯಃ ||
ಮಂದಾಚಾರಃ ಪ್ರಸನ್ನಾತ್ಮ ಪೀಡಾಂ ಹರತು ಮೇ ಶನಿಃ || 7 ||
ಮಹಾಶಿರಾ ಮಹಾವಕ್ಕೂ ದೀರ್ಘದಂಷ್ಟೋ ಮಹಾಬಲಂ ||
ಆತನುಶೋರ್ಧ್ವ ಕೇಶಶ್ಚ ಪೀಡಾಂ ಹರತು ಮೇ ಶಿಖಿಃ || 8 ||
ಅನೇಕ ರೂಪ ವರ್ಣಶ್ಚ ಶತಶೋಥ ಸಹಸ್ರಶಃ ||
ಉತ್ಪಾತ ರೂಪೋ ಜಗತಾಂ ಪೀಡಾ ಹರತು ಮೇ ತಮಃ || 9 ||
|| ಇತಿ ನವಗ್ರಹ ಪೀಡಾಹರ ಸ್ತೋತ್ರಮ್ ||
|| ಅಥ ಶನೈಶ್ವರ ಕವಚ ಪ್ರಾರಂಭ |
ಓಂ ಅಸ್ಯ ಶ್ರೀ ಶನೈಶ್ಚರ ಕವಚ ಸ್ತೋತ್ರ ಮಹಾಮಂತ್ರಸ್ಯ ಕಾಶ್ಯಪ ಋಷಿಃ ಅನುಷ್ಟುವ ಛಂದಃ ಶನೈಶ್ಚರೋ ದೇವತಾ ಶಂಬೀಜಂ ವಂ ಶಕ್ತಿಃ ಯಂ ಕೀಲಕಮ್ ಮಮ ಶನೈಶ್ಚರ ಪ್ರಸಾದ ಸಿದ್ಧರ್ಥ ಜಪೇ ವಿನಿಯೋಗಃ ||
ಶಾಂ ಅಂಗುಷ್ಠಾಭ್ಯಾಂ ನಮಃ ||
ಶೀಂ ತರ್ಜನೀಭ್ಯಾಂ ನಮಃ |
ಶೂಂ ಮಧ್ಯ ಮಾಭ್ಯಾಂ ನಮಃ ಶೃಂ ಅನಾಮಿಕಾಭ್ಯಾಂ ನಮಃ |
ಶೌಂ ಕನಿಷ್ಟಿಕಾಭ್ಯಾಂ ನಮಃ |
ಶಃ ಕರತಲ ಕರ ಪೃಷ್ಟಾಭ್ಯಾಂ ನಮಃ ಏವಂ ಹೃದಯಾದಿ ನ್ಯಾಸಃ |
ಭೂರ್ಭು ವಸ್ಸು ರೋಮಿತಿ ದಿಬ್ಬಂದಃ ||
ಧ್ಯಾನಮ್ ||
ಚತುರ್ಭುಜ ಶನಿ ದೇವಂ ಚಾಪ ತೂಣೀರ ಕೃಪಾಣಕಂ ||
ವರದಂ ಭೀಮ ದುಷ್ಟಂಚ ನೀಲಾಂಗಂ ವರಭೂಷಣಂ ||
ನೀಲಮಾಲ್ಯಾನುಲೇಪಂ ಚ ನೀಲರತ್ನರಲಂಕೃತಮ್ ||
ಜಾಲೋರ್ಧ್ವ ಮುಕುಟಾಭಾಸಂ ನೀಲಗೃಧ್ರರಥಾವಹಂ |
ಮೇರು ಪ್ರದಕ್ಷಣಂ ಕೃತ್ವಾ ಸರ್ವ ಲೋಕ ಭಯಾವಹಂ |
ಕೃಷ್ಣಾಂಬರಧರಂ ದೇವಂ ದ್ವಿಭುಜಂ ಗೃದ್ರಸಂಸ್ಥಿತಃ ಸರ್ವಪೀಡಾ ಹರಂ ನೃಣಾಂ ಧ್ಯಾಯೇದ್‌ಗ್ರಹ ಗಣೋತ್ತಮಮ್ ||
ಶನೈಶ್ವರಃ ಶಿರೋರಕ್ಷೇತ್‌ ಮುಖಂ ಭಕ್ತಾರ್ತಿನಾಶನಃ |
ಕರ್ಣಾ ಕೃಷ್ಣಾಂಬರಂ ಪಾತು ನೇತ್ರ ಸರ್ವಂ ಭಯಂಕರಃ ||
ಕೃಷ್ಣಾಂಗೋನಾಶಿಕಾಂ ರಕ್ಷೇತ್ ಕರ್ಣಂಮೇಚ ಶಿಖಂಡಿಜಃ ||
ಭುಜಾಮೇನಭುಜಃ ಪಾತು ಹಸ್ತನೀಲೋತ್ಪಲ ಪ್ರಭುಃ ||
ಪಾತು ಹೃದಯಂ ಕೃಷ್ಣಃ ಕುಂಶುಷ್ಪದರಸ್ತಥಾ ||
ಕಹಂ ಮೇ ವಿಕಟಃ ಪಾತು ಉರಮೇ ಘೋರ ರೂಪವಾನ್ |
ಜಾನುನೀಪಾತು ದೀರ್ಘಮೇ ಜಂಘಮ್ ಮಂಗಳ ಪ್ರದಃ ||
ಗುಲ್ಲಾ ಗುಣಾಕರಃ ಪಾತು ಪಾದೌಮೇ ಪಂಗುಪಾದಕಃ ||
ಸರ್ವಾಣಿಚ ಮಮಾಂಗನಿ ಪಾತು ಭಾಸ್ಕರ ನಂದನಃ |
ಯ ಇದಂ ಕವಚಂ ದಿವ್ಯಂ ಸರ್ವೇ ಪೀಡಾಹರಂ ನೃಣಾಮ್ ||
ಪಠತಿ ಶ್ರದ್ಧಾಯಾ ಯುಕ್ತಃ ಸರ್ವಾನ್ ಕಾಮಾನುವಾಪ್ನುಯಾತ್ ||
|| ಇತಿ ಶ್ರೀ ಪದ್ಮಪುರಾಣೇ ಶನೈಶ್ವರ ಕವಚಂ ಸಂಪೂರ್ಣಂ ||
ಶನಿದೇವರ ನಾಮಾವಳಿ
ಓಂ ಶನೈಶ್ವರಾಯ ನಮಃ |
ಶಾಂತಾಯ ನಮಃ |
ಸರ್ವಾಭೀಷ್ಟ ಪ್ರದಾಯ ನಮಃ |
ಶರಣ್ಯಾಯ ನಮಃ |
ವರೇಣ್ಯಾಯ ನಮಃ |
ಸರ್ವೇಶಾಯ ನಮಃ |
ಸೌಮ್ಯಾಯ ನಮಃ |
ಸುರವೃಂದಾಯ ನಮಃ |
ಸುಂದರಾಯ ನಮಃ |
ಘನಾಯ ನಮಃ |
ಘನರೂಪಾಯ ನಮಃ |
ಘನಾಭರಣ ಧಾರಿಣೇ ನಮಃ |
ಘನಸಾರ ವಿಲೇಪಾಯ ನಮಃ |
ಖದ್ಯೋತಾಯ ನಮಃ |
ಮಂದಾಯ ನಮಃ |
ಮಂದಚೇಷ್ಟಾಯ ನಮಃ |
ಮಹನೀಯ ಗುಣಾತ್ಮನೇ ನಮಃ |
ಮರ್ತ್ಯಪಾವನ ಪಾದಾಯ ನಮಃ |
ಮಹೇಶಾಯ ನಮಃ |
ಛಾಯಾ ಪುತ್ರಾಯ ನಮಃ |
ಶರ್ಣಾಯ ನಮಃ |
ಶರತೂಣೀರ ಧಾರಣೆ ನಮಃ |
ಚರಸ್ಥಿರ ಸ್ವಭಾಯ ನಮಃ |
ಚಂಚಲಾಯ ನಮಃ |
ನೀಲವರ್ಣಾಯ ನಮಃ |
ನಿತ್ಯಾಯ ನಮಃ |
ನೀಲಾಂಜನ ನಿಭಾಯ ನಮಃ |
ನೀಲಾಂಬರ ಭೂಷಣಾಯ ನಮಃ |
ನಿಶ್ಚಲಾಯ ನಮಃ |
|| ಇತಿ ಶ್ರೀ ಶನಿದೇವರ ನಾಮಾವಳಿ ಸಮಾಪ್ತ ||
ಶನಿದೇವರ ಆರತಿ
ಮಂಗಲಂ ಜಯ ಮಂಗಲಂ ||
ಮಂಗಲಂ ||
ಭಾಸ್ಕರಾತ್ಮ ಭವ ಮಹಿಮಗೇ ದೈತ್ಯರಾವಣಾದರಂ ಬಲುವಿ |
ಪತಿಯಿಂದ ಸಂಹರಿಸಿದ ಶನಿದೇವರೇ || ಪ ||
ವಕ್ರದೃಷ್ಟಿಪಾತದಿಂದ |
ಶುಕ್ರನಂ ಭಗಾಂಕಿತಗೈದವಂಗೆ ಚಕ್ರಿಯನ್ನೂ ಬಾಧೆಗೊಳಿಪ |
ವಿಕ್ರಮಂಗೆ ತ್ರಾಹಿ ಎನಿಸುತಲೊಲಿದವನೇ || 1 ||
ಶ್ರೇಷ್ಠ ರಾಮಚಂದ್ರನನ್ನು ಭ್ರಷ್ಟ ರಾಜ್ಯನಾಗಿ ಗೈದವನ |
ಕಷ್ಟ ವಿತ್ತಾರಣ್ಯ ಕಟ್ಟುತಲಿ |
ನಿಷ್ಠೆಗೊಲಿದು ಸತ್ಕರಿಸಿದ ಶನಿವಿಭುವಿಗೇ || 2 ||
ಶಾಂತ ಹರಿಶ್ಚಂದ್ರ ಭೂ |
ಕಾಂತನನ್ನು ಮೇಣುವಥ ಪಡಿಸಿದಾ |
ಕಂತು ಹರಗೆ ಭಯದನೆಂದೆನಿಸಿದ |
ಇಂತು ದೇವಾಸುರರಿಗೆ ಭೀಕರ ದೇವಗೆ || 3 ||
ಶನಿಗ್ರಹ ಶುಭಾಶುಭ ಫಲಾದಿ ವಿಚಾರ
ಶುಭಫಲಂ: ಜನ್ಮರಾಶಿಯಿಂದ 3, 6, 11 ಈ ಸ್ಥಾನಗಳಲ್ಲಿ ಇರುವಾಗ ಶುಭದಾಯಕನು, ಅದರಿಂದಾಗಿ ಎಲ್ಲ ದುಃಖಗಳು ನಿವಾರಣೆಯಾಗಿ ಸುಖವೂ, ಲಾಭವೂ, ದ್ರವ್ಯ ಪ್ರಾಪ್ತಿಯೂ, ಸಂತತಿಯೂ ಕಾರ್ಯಸಿದ್ಧಿಯೂ ಆಗುವುದು. ಅಶುಭ ಫಲಂ: ಜನ್ಮರಾಶಿಯಿಂದ 4, 8, 12ನೇ ಸ್ಥಾನಗಳಿಗೆ ವಿಶೇಷ ಪೀಡೆ, 1, 2, 5, 7, 9, 10 ಈ ಸ್ಥಾನಗಳಿಗೆ ಪೀಡಾಕಾರಕನು. ಇದರಿಂದಾಗಿ ರೋಗ, ಚಿಂತೆ, ಕಾವ್ಯಹಾನಿ, ಸ್ತ್ರೀ ವಿರೋಧ, ಕೇಶಗಳು ಉಂಟಾಗುವವು.  
ಪರಿಹಾರ
ವೇದೋಕ್ತ: ಓಂ ಶಮಗ್ನಿರಗ್ನಿಭಿ ಕಠಚ್ಛನ್ನ ಸ್ವಪತು ಸೂರಾ |
ಶಂವಾತೋ ವಾ ತರಪಾ ಅವ ಶ್ರೀಧಾಃ |
ಪುರಾಣೋಕ್ತ: ನೀಲಾಂಜನ, ಸಮಾಭಾಸಂ ರವಿಪುತ್ರ ಯಮಾಗ್ರಜಂ |
ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ವರಂ ||
ಮೇಲಿನ ಮಂತ್ರಗಳನ್ನು 23000 ಜಪ ಮಾಡಬೇಕು. ಸಾಡೇಸಾತಿ (7 ವರುಷ) ಶನಿಯ ಪೀಡಾ ಪರಿಹಾರಕ್ಕೆ ಇದು ಅವಶ್ಯವಾಗಿವೆ. ಮೇಲೆ ಬರೆದ ಜಪಾದಿಗಳನ್ನು ಮಾಡಲು ಸಾಧ್ಯವಿಲ್ಲದ ಬಡವರು ಪ್ರತಿ ದಿನವೂ ಸೂರೋದಯ ಕಾಲದಲ್ಲಿ ತಪ್ಪದೆ ಮಾರುತಿ ಗುಡಿಗೆ ಹೋಗಿ ಬರಬೇಕು. ಸೂಚನೆ: ಶ್ರೀ ಶನಿದೇವನು 12 ರಾಶಿಗಳಲ್ಲಿ ಸಂಚರಿಸಲು 30 ವರುಷ ಬೇಕಾಗುವದು. ಅಂದರೆ ಒಂದು ರಾಶಿಯಲ್ಲಿ 211 ವರುಷ ಇರುತ್ತಾನೆ.
ಸಮಾಪ್ತ -