Vayudeva in Bird Form Addresses the Demon King

|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ - ಕಲ್ಪತರು

ಎರಡನೆಯ ಉಲ್ಲಾಸ ಶ್ರೀಹರಿಭಕ್ತಾಗ್ರಣಿ ಶ್ರೀಪ್ರಹ್ಲಾದರಾಜರು

ರಚಿಸಿದವರು ರಾಜಾ, ಎಸ್. ಗುರುರಾಜಾಚಾರ್ಯರು

೧೭. ದೈತ್ಯರಾಜನಿಗೆ ವಾಯುದೇವರ ಹಿತೋಕ್ತಿ!

ಪ್ರಹ್ಲಾದನ ಅಚಲ ನಿರ್ಧಾರವನ್ನು ಕೇಳಿ ಸಭಿಕರು ಆಶ್ಚರ್ಯಚಕಿತರಾಗಿ ಕುಳಿತರು! ಹಿರಣ್ಯಕಶ್ಯಪನು ಕ್ರೋಧೋನ್ಮತ್ತನಾಗಿ ಕರದ ಖಡ್ಗವನ್ನು ಜಳಪಳಿಸುತ್ತಾ ಪ್ರಹ್ಲಾದನನ್ನು ಸಂಹರಿಸಲು ಉದ್ಯುಕ್ತನಾದಾಗ ಸಚಿವರು ಅವನನ್ನು ತಡೆದರು.

ಅದೇ ವೇಳೆಗೆ ವಿಚಿತ್ರ ಕಾಂತಿಯೊಂದು ಬೆಳಗುತ್ತಿರಲು ಶ್ರೀವಾಯುದೇವರು ಪಕ್ಷಿರೂಪದಿಂದ ಬಂದು ಹಿರಣ್ಯಕಶ್ಯಪನ ಮುಂಭಾಗದ ಸ್ತಂಭದ ಮೇಲೆ ಕುಳಿತರು! ಅದನ್ನು ಕಂಡು ಸರ್ವರೂ ಅಚ್ಚರಿಯಿಂದ ಇದೇನೆಂದು ನೋಡುತ್ತಿರುವಾಗ ಪಕ್ಷಿರೂಪದ ವಾಯುದೇವರು, ಹಿರಣ್ಯಕಶ್ಯಪನನ್ನು ಕುರಿತು ಹೀಗೆ ಅಪ್ಪಣೆ ಕೊಡಿಸಿದರು.

ಪಕ್ಷಿರೂಪದ ವಾಯುದೇವರು : ಎಲ್ಲವೋ ದೈತ್ಯ! ಹಿರಣ್ಯಕಶ್ಯಪು, ನೀನು ಮೂರ್ಖನಾಗಿದ್ದೀಯೆ! ನಿನ್ನ ಮರಣ ಸಮಯ ಹತ್ತಿರವಾಗುತ್ತಿದೆ! ನಿನ್ನ ಈ ಅಸುರಭಾವವನ್ನು ಬಿಟ್ಟು ಹರಿಭಕ್ತನಾದ ನಿನ್ನ ಕುಮಾರ ಪ್ರಹ್ಲಾದನಿಗೆ ಶರಣುಹೋಗು. ಶ್ರೀಹರಿಯ ಪಾದಾರವಿಂದವನ್ನು ಭಜಿಸು, ಎಲೋ ಅಸುರ! ನಿನ್ನ ಆಯುಷ್ಯ ಮುಗಿಯುತ್ತಾ ಬಂದಿದೆ, ಇನ್ನು ಮೂರು ಪ್ರಹರಗಳ ತರುವಾಯ ನೀನು ಮೃತನಾಗುತ್ತೀಯೇ!

ಪಕ್ಷಿಯೊಂದು ಬಂದು ಸಾಮ್ರಾಟನಾದ ತನ್ನೆದುರು ಕುಳಿತು ತನಗೇ ಉಪದೇಶ ಮಾಡಿದ್ದನ್ನು ಕಂಡು ಹಿರಣ್ಯಕಶ್ಯಪನು ವಿಸ್ಮಿತನಾದನು. ಸಭಾಸದರೆಲ್ಲ ಇದೇನು ವಿಪರೀತ! ದೈತ್ಯರಾಜನಿಗೇನು ವಿಪತ್ತು ಸಂಭವಿಸುವುದೋ' ಎಂದು ಭಯಗೊಂಡರು.

ಪಕ್ಷಿಯ ಮಾತಿನಿಂದ ಕ್ರುದ್ಧನಾದ ದೈತ್ಯರಾಜನು ಬ್ರಹ್ಮದೇವರ ವರಬಲದ ಧೈರ್ಯದಿಂದ ಮದೋನ್ಮತ್ತನಾಗಿ “ಎಲೈ ಪಕ್ಷಿಯೇ! ನೀನೇನು ಬಡಬಡಿಸುತ್ತಿರುವೆ ? ನಾನು ಮರಣ ಹೊಂದುವೆನೇ ? ಹಹಹ! ಮೂರ್ಖ ಪಕ್ಷಿಯೇ, ಕೇಳು - ಇಂದ್ರ, ಸೂರ್ಯ, ಯಮ, ಗಂಧರ್ವ, ರುದ್ರಾದಿ ದೇವತೆಗಳು ಅಷ್ಟೇ ಏಕೆ ? ನೀನು ಹೇಳಿದ ಲಕ್ಷ್ಮೀಪತಿಯಾದ ಆ ಹರಿ, ಇವರಾರಿಂದಲೂ ನನಗೆ ಭಯವಿಲ್ಲ!” ಎಂದು ಗದರಿಸಿದನು.

ಪಕ್ಷಿರೂಪದ ವಾಯುದೇವರು : ಏಕಿಂತು ಪ್ರಲಪಿಸುವೆ? ಮೂರ್ಖ, ಅಸಾಧ್ಯವಾದ ಮಾತುಗಳನ್ನಾಡುತ್ತಿರುವೆ, ಅಶಕ್ಯ ಕಾರ್ಯದಲ್ಲಿ ಕೈಹಾಕಿದ್ದೀಯೇ. ಪ್ರಹ್ಲಾದ ಕುಮಾರನು ಹೇಳಿದಂತೆ ಈಗಲಾದರೂ ಶ್ರೀಹರಿಯನ್ನು ಆರಾಧಿಸು. ಅವನ ಅನುಗ್ರಹಕ್ಕೆ ಪಾತ್ರನಾಗು! ಇಲ್ಲದಿದ್ದರೆ.....

ಹಿರಣ್ಯಕಶ್ಯಪು : (ಗರ್ವದಿಂದ) ಹೂಂ, ಇಲ್ಲದಿದ್ದರೆ ?

ಪಕ್ಷಿರೂಪದ ವಾಯುದೇವರು : ಇಲ್ಲದಿದ್ದರೆ ಶ್ರೀಮನ್ನಾರಾಯಣನು ಕ್ಷಣಾರ್ಧದಲ್ಲಿ ನಿನ್ನನ್ನು ತೊಡೆಯ ಮೇಲೆ ಹಾಕಿಕೊಂಡು ತನ್ನ ತೀಕ್ಷ್ಮವಾದ ನಖಗಳಿಂದ ನಿನ್ನ ಹೃದಯವನ್ನು ಸೀಳಿಹಾಕುವನು. ರುದ್ರಾದಿದೇವತೆಗಳೆಲ್ಲರೂ ಆ ಶ್ರೀಮನ್ನಾರಾಯಣನ ಭಕ್ತರೆಂದ ಮೇಲೆ ಶಿವೋಹಂ” ಎಂದು ವ್ಯರ್ಥವಾಗಿ ಉಪಾಸನೆ ಮಾಡಿ ಕೆಡಬೇಡ! ರುದ್ರದೇವರಿಗಿಂತ ಉತ್ತಮರು ವಾಯುದೇವರು. ಅಂದರೆ ನಾನು! ಅವರಿಗಿಂತ ಅಧಿಕಳು ಲಕ್ಷ್ಮೀದೇವಿ, ಶ್ರೀಲಕ್ಷ್ಮೀಪತಿಯಾದ ಶ್ರೀನಾರಾಯಣನು ಸರ್ವೋತ್ತಮನು! ಆ ಮಹಾಪ್ರಭುವಿನ ಸಂಕಲ್ಪಕ್ಕೆ ವಿರುದ್ಧವಾಗಿ ನಿನ್ನ ಸ್ವಪ್ರಯತ್ನದಿಂದಲೇ ಪ್ರಹ್ಲಾದ ಕುಮಾರನನ್ನು ಸಂಹರಿಸಲು ಶಕ್ತನಾಗಿದ್ದೇನೆ ಎಂದು ನೀನು ತಿಳಿದು ಗರ್ವಿಸುತ್ತಿದ್ದರೆ, ಎಲ್ಲಿ ನೋಡೋಣ, ಅವನನ್ನು ಸಂಹರಿಸುವ ಯೋಗ್ಯತೆ ನಿನಗಿದೆಯೇ ತೋರಿಸು ? ಯಾರು ಸಾಯುವರೆಂದು ಜಗತ್ತೇ ನೋಡುವುದು! ಎಲವೋ ಕೇಳಿಲ್ಲ. ನೀನೇ ಶೀಘ್ರವಾಗಿ ಶ್ರೀನಾರಾಯಣನಿಂದ ಸಂಹೃತನಾಗುತ್ತೀಯೆ. ಇದರಲ್ಲಿ ಸಂದೇಹವಿಲ್ಲ. ಈಗಲಾದರೂ ಎಚ್ಚೆತ್ತುಕೊಂಡು ಉದ್ಧತನಾಗು!

ಹೀಗೆ ಪಕ್ಷಿರೂಪದ ವಾಯುದೇವರು ನಿರ್ದಾಕ್ಷಿಣ್ಯದಿಂದ ಹೇಳಲು ಹಿರಣ್ಯಕಶ್ಯಪನು ಅತ್ಯಂತ ಕುಪಿತನಾಗಿ ತನ್ನ ಧನುಸ್ತಿಗೆ ಬಾಣವನ್ನು ಹೂಡಿ ಪಕ್ಷಿಯನ್ನು ಕೊಲ್ಲಲು ಅದರ ಮೇಲೆ ಬಿಟ್ಟನು. ಆದರೆ ಅದರಿಂದ ಪಕ್ಷಿಗೆ ಸ್ವಲ್ಪವಾದರೂ ಕೃತಿಯಾಗಲಿಲ್ಲ!

ಆಗ ಪಕ್ಷಿರೂಪದ ಪವಮಾನರು “ಅಯ್ಯೋ ಹುಚ್ಚ! ನೋಡಿದೆಯಾ ನಿನ್ನ ಶಕ್ತಿಯ ಬೆಲೆ ಎಷ್ಟೆಂದು ? ನಿನ್ನ ಪ್ರಭುತ್ವವೀಗ ಎಲ್ಲಿ ಹೋಯಿತು?” ಎಂದು ಹಂಗಿಸಿದರು. ಆಗ ಹಿರಣ್ಯಕಶ್ಯಪನು ಒಂದು ಶರವನ್ನು ಅಗ್ನಿಮಂತ್ರದಿಂದ ಅಭಿಮಂತ್ರಿಸಿ ಆ ಆಗೇಯಾಸ್ತ್ರವನ್ನು ಪಕ್ಷಿಯ ಮೇಲೆ ಬಿಟ್ಟನು! ಧಗಧಗಿಸುತ್ತಾ ಬರುತ್ತಿರುವ ಆ ಆಗೇಯಾಸ್ತ್ರವನ್ನು ಮಧ್ಯದಲ್ಲಿಯೇ ತಡೆದು ಪಕ್ಷಿಯು ನುಂಗಿಬಿಟ್ಟಿತು! ಮತ್ತೆ ಅವರು - “ಎಲವೋ ಮರುಳೆ, ಏಕೆ ವೃಥಾ ಪ್ರಯತ್ನಿಸಿ ಶ್ರಮಪಡುವೆ? ನಾನೇ ಜಗದೀಶ್ವರ,

ನನಗೆ ಸಮರಾರಿದ್ದಾರೆ, ಸಮಸ್ತಕ್ಕೂ ನಾನೇ ಪ್ರಭು ಎಂದು ಗರ್ವಿಸುತ್ತಿದ್ದೆಯಲ್ಲ, ಈಗೆಲ್ಲಿ ಓಡಿಹೋಯಿತು ನಿನ್ನ ಈಶತ್ವ? ನಿನ್ನ ದುರಾಭಿಮಾನವನ್ನು ಬಿಟ್ಟು ಬ್ರಹ್ಮರುದ್ರೇಂದ್ರಾದ್ಯಮರವಂದಿತನಾದ ಇಂದಿರಾಹೃದಯಮಂದಿರನಾದ ಶ್ರೀಹರಿಯನ್ನು ಭಜಿಸು,

ಆ ಪ್ರಭುವಿನ ಪಾದವನ್ನು ಆಶ್ರಯಿಸು” ಎಂದು ಉಪದೇಶಿಸಿದರು.

ಇದರಿಂದ ಹೆಚ್ಚು ಕೆರಳಿ ಕ್ರೋಧೋನ್ಮತ್ತನಾದ ಆ ದೈತ್ಯರಾಜ ಹಿರಣ್ಯಕಶ್ಯಪುವು ಪಾಶುಪತಾಸ್ತ್ರವನ್ನು ಅಭಿಮಂತ್ರಿಸಿ ಪಕ್ಷಿಯ ಮೇಲೆಸೆದನು! ಪಕ್ಷಿರೂಪದ ಶ್ರೀವಾಯುದೇವರು ಪಾಶುಪತಾಸ್ತ್ರವನ್ನು ಎಲ್ಲರೂ ನೋಡುತ್ತಿರುವಂತೆಯೇ ನುಂಗಿಬಿಟ್ಟರು! ಮತ್ತು ದೈತ್ಯರಾಜನನ್ನು ನೋಡಿ - “ಮೂರ್ಖ! ಈಗಲಾದರೂ ತಿಳಿಯಿತೇ ನಿನ್ನ ಶಕ್ತಿ ಎಷ್ಟೆಂದು? ಹೂ, ಇನ್ನಾದರೂ ಭಕ್ತ ಪ್ರಹ್ಲಾದರಾಜನ ಮೇಲಿನ ಹಗೆತನವನ್ನು ಬಿಟ್ಟು, ಅವನನ್ನು ಸಮಾಧಾನಗೊಳಿಸು ಮತ್ತು ಸರ್ವೋತ್ತಮನಾದ ಶ್ರೀವಿಷ್ಣುವನ್ನು ಅನನ್ಯಗತಿಕನಾಗಿ ಭಜಿಸು! ಇಲ್ಲದಿದ್ದರೆ ನೀನು ಶೀಘ್ರವಾಗಿ ಸಂಹೃತನಾಗುವುದು ನಿಶ್ಚಿತ! ಎಚ್ಚರ!!” ಎಂದು ಹೇಳಿ ಪಕ್ಷಿರೂಪದ ಶ್ರೀವಾಯುದೇವರು ಅದೃಶ್ಯರಾದರು.

ಪಕ್ಷಿರೂಪದಿಂದ ಬಂದು ತನಗೆ ಹಿತೋಕ್ತಿಯನ್ನು ಹೇಳಿದ ಜೀವೋತ್ತಮರೂ, ಸರ್ವಜೀವರಿಗೆ ಪ್ರೇರಕರೂ ಆ ಶ್ರೀವಾಯುದೇವರನ್ನು ದೈತ್ಯರಾಜನು ಸಾಮಾನ್ಯ ಪಕ್ಷಿಯೆಂದು ಭಾವಿಸಿ ಅದನ್ನು ಕೊಲ್ಲಲೆತ್ನಿಸಿದನು! ಗರುಡ-ಶೇಷ-ರುದ್ರರಿಗಿಂತ ತಾರತಮ್ಯದಲ್ಲಿ ಅತ್ಯಂತ ಶ್ರೇಷ್ಠರೂ ಜಗಜೀವನರೂ ಆದ ಪವಮಾನರನ್ನು ಸಾಮಾನ್ಯನಾದ ಈ ದೈತ್ಯನು ಸಂಹರಿಸಲು ಸಾಧ್ಯವೇ? ಒಂದು ಪಕ್ಷಿಯೆಂದು ಭಾವಿಸಿ ಕೊಲ್ಲಲೆತ್ನಿಸಿ ವಿಫಲನಾದ್ದರಿಂದ ದೈತ್ಯೇಂದ್ರನಿಗೆ ನಾಚಿಕೆಯಾಯಿತು! ಭಯವುಂಟಾಯಿತು. ಅದು ಶ್ರೀಹರಿಯಲ್ಲಿಯೂ, ಅವನ ಭಕ್ತನಾದ ತನ್ನ ಮಗ ಪ್ರಹ್ಲಾದನ ಮೇಲೆ ದ್ವೇಷರೂಪತಾಳಿತು! ಸರ್ವದೈತ್ಯವೀರರೆದುರು ತನಗಾದ ಅಪಮಾನದಿಂದ ಕ್ರುದ್ಧನಾದ ಹಿರಣ್ಯಕಶ್ಯಪನು ಕಿಂಕರ್ತವ್ಯಮೂಢನಾದನು. ಪಕ್ಷಿಯ ಮೇಲಿನ ಕೋಪ-ತಾಪಗಳನ್ನು ಕುಮಾರ ಪ್ರಹ್ಲಾದನ ಮೇಲೆ ತೋರಿ ಕಿಡಿಕಿಡಿಯಾದನು.