
ಕಲಿಯುಗ - ಕಲ್ಪತರು ಎರಡನೆಯ ಉಲ್ಲಾಸ ಶ್ರೀಹರಿಭಕ್ತಾಗ್ರಣಿ ಶ್ರೀಪ್ರಹ್ಲಾದರಾಜರು ರಚಿಸಿದವರು ರಾಜಾ, ಎಸ್. ಗುರುರಾಜಾಚಾರ್ಯರು ೧೧. ಗುರುಕುಲದಲ್ಲಿ ಪ್ರಹ್ಲಾದರಾಜ
ಗುಂಪಾಗಿ ಸೇರಿ
ದೈತ್ಯಪುರೋಹಿತರಾದ ಶಂಡಾಮರ್ಕರ ವಿದ್ಯಾಪೀಠದ ಮುಂಭಾಗದ ಉಪವನದಲ್ಲಿ ದೈತ್ಯಬಾಲಕರು ಆಟ-ಪಾಠಗಳಲ್ಲಿ ಮಗ್ನರಾಗಿದ್ದಾರೆ. ತಂದೆಯ ಆಜ್ಞೆಯಂತೆ ಗುರುಕುಲ ಸೇರಿದ ಪ್ರಹ್ಲಾದನು ಕರದಲ್ಲಿ ನಾರಾಯಣನ ವಿಗ್ರಹವನ್ನು ಹಿಡಿದು ಬಂದನು. ದೈತ್ಯಬಾಲಕರು ಅವನನ್ನು ಸ್ವಾಗತಿಸಿದರು.
ಪ್ರಹ್ಲಾದನು ನಸುನಗುತ್ತಾ “ಮಿತ್ರರೇ, ಗುರುಗಳು ಬಂದಿರುವರೇ ?” ಎನಲು ವಿಚಕ್ಷಣನೆಂಬ ವಿದ್ಯಾರ್ಥಿಯು “ಕುಮಾರ! ಗುರುಗಳಿಂದು ಬರುವುದು ಸ್ವಲ್ಪ ತಡವಾಗಬಹುದೆಂದು ಹೇಳಿದ್ದಾರೆ. ರಾಜಪುತ್ರ! ಉಪಾಧ್ಯಾಯರು ಬರುವವರೆಗೆ ಏನು ಮಾಡುವುದು ?” ಎಂದು ಪ್ರಶ್ನಿಸಿದನು.
ಆಗ ಪ್ರಹ್ಲಾದನು “ಗೆಳೆಯರೆ, ಇಂದು ನಾನೊಂದು ಕವಿತೆಯನ್ನು ರಚಿಸಿರುವೆನು. ಅದನ್ನು ಹೇಳುವೆನು ಕೇಳಿರಿ. ನೀವು ನನ್ನೊಡನೆ ಗಾನಮಾಡಿರಿ” ಎಂದು ಕೈಯಲ್ಲಿ ಚಿಟಿಕೆಗಳನ್ನು ಹಿಡಿದು ಹಾಡಹತ್ತಿದನು.
ರಾಗ : ಸರಸ್ವತಿ
ತಾಳ : ಆದಿ
ನಾರಾಯಣ ಎನ್ನಿರೋ ನೀವೆಲ್ಲರು |
ನಾರದನುತನಂಪ್ರಿಯ ಸ್ಮರಣೆ ಮಾಡಿರೋ || ಪ ||
ವರ ಶ್ರೀರಮಣನ ಭಜಿಸುವ ಮನುಜಗೆ |
ನರಕವು ಬಹುದೂರ, ಶುಭಕರ || ಅ.ಪ. ||
ಕರುಣಾಕರ ಕರಿವರದ ದನುಜಹರ |
ಹರವಿರಿಂಚನುತ ಮಹಿಮಾಸಾಗರ ||
ಸರುವ ದೇವರದೇವ! ಜಗದಾಧಾರ |
ಸ್ಮರಿಸುವ ಭಕುತರ ಕಾವ ಗುಣಾಕರ || cha ||
ಎಲ್ಲ ದೈತ್ಯಬಾಲಕರೂ ಪ್ರಹ್ಲಾದರಾಜನ ಸುತ್ತಲೂ ಸುತ್ತುತ್ತಾ “ನಾರಾಯಣ ಎನ್ನಿರೋ” ಎಂದು ಭಜನೆ ಮಾಡಹತ್ತಿದರು. ಪ್ರಹ್ಲಾದಕುಮಾರ ಧ್ಯಾನಾಸಕ್ತನಾಗಿ ಮೈಮರೆತ.
ಅದೇ ವೇಳೆಗೆ ಗುರುಗಳಾದ ಆಚಾರ್ಯ ಶಂಡರು ಬಂದು ಆ ದೃಶ್ಯವನ್ನು ಕಂಡು ದಿಗ್ಗಾಂತರಾಗಿ ನಿಂತರು, ಗುರುಗಳನ್ನು ಕಂಡು ವಿದ್ಯಾರ್ಥಿಗಳು ಭಯದಿಂದ ಸುಮ್ಮನೆ ನಿಂತರು. ಶಂಡರು ಪ್ರಹ್ಲಾದನ ಏಕಾಗ್ರತೆಯನ್ನು ಕಂಡು ವಿಸ್ಮಿತರಾಗಿ ಪ್ರಹ್ಲಾದನ ಭುಜಗಳನ್ನು ಹಿಡಿದು “ಪ್ರಹ್ಲಾದಕುಮಾರ! ಏನೀ ತನ್ಮಯತೇ, ಎಚ್ಚರನಾಗು” ಎಂದರು.
ಎಚ್ಚರಗೊಂಡ ಪ್ರಹ್ಲಾದನು “ಹಾಂ, ಯಾರದು ? ನಾನೆಲ್ಲಿರುವೆನು ? ಆಹಾ ಎಂತಹ ಸುಂದರ ಸ್ವಪ್ನ!” ಎಂದಾಗ, ಶಂಡರು - “ಪ್ರಹ್ಲಾದ ಅದೇನು ಕನಸು! ಮೈಮರೆತೇಕೆ ನಿಂತಿರುವೆ” ಎಂದರು.
ಪ್ರಹ್ಲಾದನು ಗುರುಗಳನ್ನು ಕಂಡು “ಓಹೋ, ಆಚಾರ್ಯರು, ಗುರುಗಳೆ, ನಮಸ್ಕರಿಸುವೆನು” ಎಂದು ಕರಜೋಡಿಸಿದನು.
ಶಂಡ : ಆಯುಷ್ಮಾನ್‌ಭವ, ರಾಜಕುಮಾರ! ಬಾ, ಕುಮಾರ ಪಾಠಶಾಲೆಗೆ ಹೋಗೋಣ.
ಆಚಾರ್ಯರು ಎಲ್ಲರೊಡನೆ ಪಾಠಶಾಲೆಗೆ ಬಂದು ಆಸನಾಸೀನರಾಗಿ ನಂತರ “ಪ್ರಹ್ಲಾದ! ಕನಸೆನ್ನುತ್ತಿದೆಯಲ್ಲ! ಅದೇನು ಕನಸು?” ಎಂದು ಪ್ರಶ್ನಿಸಿದನು.
ಪ್ರಹ್ಲಾದ : ಗುರುಗಳೇ, ನಾನು ಹರಿನಾಮಸಂಕೀರ್ತನೆ ಮಾಡುತ್ತಿರುವಾಗ ನಿದ್ರೆ ಬಂದಂತಾಗಿ ಒಂದು ಕನಸು ಕಂಡೆನು.
ಶಂಡ : (ಅಸಮಾಧಾನದಿಂದ) ಅದೇನಪ್ಪಾ ನಿನ್ನ ಕನಸು ?
ಪ್ರಹ್ಲಾದ : ನಾನು ಹರಿಭಜನೆಯಲ್ಲಿ ಮಗ್ನನಾದಂತೆಯೂ, ಅದನ್ನು ಕಂಡು ತಂದೆಯವರು ಹರಿಯನ್ನು ಮರೆಯಬೇಕೆಂದು ಶಂಡ : ಅಹುದು ಕುಮಾರ! ನಿನ್ನ ವರ್ತನೆಯಿಂದ ಸಾಮ್ರಾಟರಿಗೆ ಕೋಪ ಬರದಿರುವುದೇ? ಹೂಂ, ಆಮೇಲೆ? ಪ್ರಹ್ಲಾದ : ತೀರ್ಥರೂಪರು ಕುಪಿತರಾಗಿ ನನಗೆ ವಿವಿಧ ಶಿಕ್ಷೆಗಳನ್ನು ಕೊಡುತ್ತಿದ್ದಂತೆಯೂ, ಆಗ ಶಂಖ-ಚಕ್ರಧಾರಿಯಾಗಿ ಜಗಮ್ಮೋಹನಾಕಾರನಾದ ಶ್ರೀಹರಿಯು ನನ್ನನ್ನು ರಕ್ಷಿಸಿ ಶಿರದ ಮೇಲೆ ಕರವಿರಿಸಿ ಮಂದಹಾಸ ಬೀರುತ್ತಿದ್ದಂತೆಯೂ ಆಯಿತು.
ಕಣ್ಣು ತೆರೆದು ನೋಡುತ್ತೇನೆ......ನೀವು!
ಶಂಡ : (ರಮಿಸುವವರಂತೆ) ಪ್ರಹ್ಲಾದ ನಿನಗೆಲ್ಲೋ ಹುಚ್ಚು ಹಿಡಿದಿದೆ. ನಿನಗೆ ಯಾವಾಗಲೂ ಅದೇ ಚಿಂತೆ, ಅಂತೆಯೇ ನಿನಗೆ ಯಾವಾಗಲೂ ಅದೇ ಕನಸು ಬೀಳುವುದು! ಇರಲಿ ಬಿಡು, ನೋಡು ಕುಮಾರ! ನೀನು ದೈತ್ಯಕುಲದ ಭಾವಿ ಸಾಮ್ರಾಟನಾಗುವವನು! ಕುಲಕ್ರಮಾಗತ ಸಂಪ್ರದಾಯದಂತೆ ವರ್ತಿಸಬೇಕಪ್ಪಾ. ಈ ದಿನ ಸಾಮ್ರಾಟರು ಗುರುಕುಲಕ್ಕೆ ಬರುವುದಾಗಿ ಹೇಳಿಕಳಿಸಿರುವರು. ಎಲ್ಲರೂ ನಾನು ಹೇಳಿಕೊಟ್ಟ ಪಾಠಗಳನ್ನು ಪ್ರಭುಗಳ ಮುಂದೆ ಚೆನ್ನಾಗಿ ಒಪ್ಪಿಸಬೇಕು, ಕುಮಾರ, ನೀನೂ ಸಹ ನಾನೂ ಹೇಳಿಕೊಡುವುದನ್ನು ಕಲಿತು ನಿನ್ನ ತಂದೆಯ ಮನಸ್ಸಿಗೆ ಸಂತೋಷವನ್ನುಂಟುಮಾಡಬೇಕು!
ಪ್ರಹ್ಲಾದ : (ಗುರುಗಳ ಹತ್ತಿರ ಕುಳಿತು) ಗುರುದೇವ, ಇಂದು ನೀವು ಏನು ಹೇಳಿಕೊಡುವಿರಿ?
ಆಗ ಶಂಡರು ಉತ್ಸಾಹದಿಂದ ಪ್ರಹ್ಲಾದರಾಜ ಮತ್ತು ದೈತ್ಯಬಾಲಕರುಗಳಿಗೆ “ಹರಿಯು ಅಸ್ವತಂತ್ರನು, ನಿರಾಕಾರನು, ಶೂನ್ಯನು, ಪ್ರಪಂಚವೂ, ಶೂನ್ಯ. ಜೀವಬ್ರಹ್ಮಕ್ಕ ಮತ್ತು ಪ್ರಪಂಚಮಿಥ್ಯಾತ್ವವೇ ಸರಿಯಾದ ಸಿದ್ಧಾಂತ” ಎಂದು ಅದೈತ ಸಿದ್ಧಾಂತವನ್ನು ಉಪದೇಶ ಮಾಡಿ, “ಪ್ರಹ್ಲಾದ, ದೈತ್ಯಬಾಲಕರೇ, ಇದನ್ನೇ ನೀವು ದೈತ್ಯಸಾಮ್ರಾಟರ ಮುಂದೆ ಹೇಳಬೇಕು” ಎಂದರು.
ಗುರುಗಳು ಹೇಳಿದ ಪಾಠ ಹರಿಭಕ್ತನಾದ ಪ್ರಹ್ಲಾದನಿಗೆ ಒಪ್ಪಿಗೆಯಾಗಲಿಲ್ಲ. ಅಂತೆಯೇ ಅದನ್ನು ಅವನು ಮನಸ್ಸಿಟ್ಟು ಕೇಳಲಿಲ್ಲ ಮತ್ತು ಅದು ವೈಷ್ಣವ ಸಿದ್ಧಾಂತಕ್ಕೆ ವಿರುದ್ಧವಾದುದೆಂದೂ, ಅಸಾಧುವಾದ ಆ ತತ್ವವು ಶ್ರೇಯಸ್ಕರವಲ್ಲವೆಂದೂ ಅವನು ಭಾವಿಸಿದನು.
ಪ್ರಹ್ಲಾದನು ತಮ್ಮ ಉದ್ದೇಶವನ್ನು ನಿರ್ಲಕ್ಷಿಸುತ್ತಿರುವುದನ್ನು ಗಮನಿಸಿದ ಆಚಾರ್ಯ ಶಂಡರು ಬೇರೆ ರೀತಿಯಿಂದ ಅವನನ್ನು ದಾರಿಗೆ ತಂದು ಸಾಮ್ರಾಟರಿಗೆ ಸಂತೋಷವಾಗುವಂತೆ ಮಾಡಬೇಕೆಂದು ನಿಶ್ಚಯಿಸಿ “ಪ್ರಹ್ಲಾದ! ನಾನು ಹೇಳಿಕೊಟ್ಟಿದ್ದನ್ನು ನೀನು ಕಲಿಯುತ್ತಿಲ್ಲ. ಇದರಿಂದ ನಿನ್ನ ತಂದೆಗೆ ಕೋಪ ಬರುವುದು. ಹೋಗಲಿ, ನಾನು ಈಗ ಹೇಳಿಕೊಡುವುದನ್ನಾದರೂ ಸಾಮ್ರಾಟರ ಮುಂದೆ ಹೇಳಿ ಅವರನ್ನು ಸಂತೋಷಪಡಿಸು” ಎಂದರು.
ಪ್ರಹ್ಲಾದ : ಹಾಗೇ ಆಗಲಿ ಗುರುಗಳೇ.
ಶಂಡ : ಹಾಗಾದರೆ ಹೀಗೆ ಹೇಳು. ಪ್ರಹ್ಲಾದ - “ಜಗದೀಶ್ವರಾಯ ಹಿರಣ್ಯಕಶಿಪುವೇ ನಮಃ!”
ಪ್ರಹ್ಲಾದ : (ಮಂದಹಾಸದಿಂದ) ಜಗದೀಶ್ವರಾಯ ಶ್ರೀಮನ್ನಾರಾಯಣಾಯ ನಮಃ !
ಪ್ರಹ್ಲಾದನು ಹೇಳಿದ್ದನ್ನು ಕೇಳಿ ಕುಪಿತರಾದ ಶಂಡರು, ಪ್ರಹ್ಲಾದ ನಾನು ಹೇಳಿದಂತೆ ಹೇಳು - ತ್ರಿಭುವನ ವಿಜಯಿ, ಸರ್ವವಂದ್ಯ, ಮಹಾಮಹಿಮ ಹಿರಣ್ಯಕಶಿಪು ಬ್ರಹ್ಮಣೇ ನಮಃ” ಎಂದರು.
ಪ್ರಹ್ಲಾದ : ಜಗದುದರ - ಜಗತ್ಕಾರಣ - ಅಜಭವಾದಿವಂದ್ಯ – ಸರ್ವೆಶ್ವರ - ಸಕಲಾಗಮೈಕವೇದ್ಯ - ಕರುಣಾಸಾಗರ - ಪರಬ್ರಸ್ವಹ್ಮರೂಪ, ಶ್ರೀಮನ್ನಾರಾಯಣ! ನಿನಗೆ ನಮಸ್ಕಾರ!!
ಶಂಡ : (ಕೋಪದಿಂದ) ಮುಗಿಯಿತೋ, ಇನ್ನೂ ಏನಾದರೂ ಉಳಿದಿದೆಯೋ ? (ದೀನನಾಗಿ) ಅಪ್ಪಾ, ಪ್ರಹ್ಲಾದ, ನಿನಗೇಕಪ್ಪಾ ಈ ಹಟ ? (ರಮಿಸುತ್ತಾ) ನೋಡು, ನೀನು ಹೀಗೆ ಮಾಡಿದರೆ ಸಾಮ್ರಾಟರ ಕೋಪಕ್ಕೆ ನೀನು ಪಾತ್ರನಾಗುವುದು ಮಾತ್ರವಲ್ಲ, ನಾನೂ ಅವರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ! ಈ ಬಡಬ್ರಾಹ್ಮಣನಿಗೆ ತೊಂದರೆ ಕೊಡುವುದರಿಂದ ನಿನಗೇನು ಲಾಭ? ಪ್ರಹ್ಲಾದ! ನೀನು ಭಜಿಸುವೆಯಲ್ಲ, ಆ ನಾರಾಯಣ! ಅವನಾರು ಗೊತ್ತೆ?
ಪ್ರಹ್ಲಾದ : (ನಕ್ಕು) ಇದೇನು ಹೀಗೆ ಕೇಳುವಿರಿ ಗುರುಗಳೇ ? ಅವನು ಸಾಕ್ಷಾತ್ ಪರಬ್ರಹ್ಮ!
ಶಂಡ : (ವ್ಯಗ್ರರಾಗಿ) ಅದಲ್ಲ - ನಾನು ಹೇಳಿದ್ದು, ಆ ಹರಿ ಯಾರು ಗೊತ್ತೆ? ಅವನು, ನಿನ್ನ ಚಿಕ್ಕಪ್ಪನನ್ನು ಕೊಂದವನು! ಅವನನ್ನು ನೀನು ಭಜಿಸಬಹುದೆ ?
ಪ್ರಹ್ಲಾದ : ಲೋಕಹಿಂಸಕರಾಗಿ ಅಪರಾಧ ಮಾಡಿದವರನ್ನು ಭಗವಂತನು ಶಿಕ್ಷಿಸುವುದು ಸ್ವಾಭಾವಿಕವಲ್ಲವೇ ಗುರುಗಳೇ? ಶಂಡ : ನಿನಗೆ ತಲೆ ಕೆಟ್ಟಿದೆ! ಆ ಹರಿಯು ನಿಮ್ಮ ವಂಶದ ಪರಮವೈರಿ!
ಪ್ರಹ್ಲಾದ : ಶತ್ರುಮಿತ್ರರು ಆ ಮಹನೀಯನಿಗಿಲ್ಲ!
ಶಂಡ : ನಿನ್ನ ಚಿಕ್ಕಪ್ಪನನ್ನು ಸಂಹರಿಸಿದವನು ಶತ್ರುವಲ್ಲವೇ?
ಪ್ರಹ್ಲಾದ : (ಮುಗುಳುನಗೆಯಿಂದ) ನನ್ನನ್ನು ರಕ್ಷಿಸುತ್ತಿರುವವನು ಮಿತ್ರನಲ್ಲವೇ ?
ಶಂಡ : (ಕುಪಿತರಾಗಿ) ಅವನು ವಂಚಕ, ನಿನ್ನ ತಂದೆಯ ಕಡುವೈರಿ.
ಪ್ರಹ್ಲಾದ : (ವಿನಯವಾಗಿ) ಅದು ತಂದೆಯವರ ಭ್ರಮೆ! ಜಗದೀಶ್ವರನಲ್ಲಿ ದ್ವೇಷಮಾಡುವುದು ಶ್ರೇಯಸ್ಕರವಲ್ಲ.
ಶಂಡ : ಕುಮಾರ! ಹಾಗೆಲ್ಲ ಮಾತನಾಡಬಾರದು. ನಿನ್ನ ತಂದೆ ಸಾಮಾನ್ಯನಲ್ಲ, ಅವನೇ ಜಗದೀಶ್ವರನು, ಅವನನ್ನೇ ನೀನು ಭಜಿಸಬೇಕು.
ಪ್ರಹ್ಲಾದ : (ನಗುತ್ತಾ) ಗುರುಗಳೇ, ಎಲ್ಲವನ್ನೂ ತಿಳಿದ ನೀವೂ ಹೀಗೆ ಹೇಳಬಹುದೇ ? ಸತ್ಯಕ್ಕೆ ದೂರವಾದ ವಿಚಾರಗಳನ್ನು ನಿರ್ಮಲ ಮನಸ್ಸಿನ ಬಾಲಕರ ತಲೆಗೆ ತುಂಬಿ, ಅವರನ್ನು ಅಡ್ಡಮಾರ್ಗಕ್ಕೆ ಎಳೆಯಬಹುದೇ? ಕ್ಷಮಿಸಿ, ಸ್ವಾಮಿ, ನೀವು ಅಸತ್ಯವನ್ನು ನುಡಿಯುತ್ತಿರುವುದನ್ನು ಕಂಡು ನನಗೆ ದುಃಖವಾಗುತ್ತಿದೆ.
ಶಂಡ : (ಅಪ್ರತಿಭನಾಗಿ) ಅಸತ್ಯ ನುಡಿಯುತ್ತಿದ್ದೇನೆಯೇ? ನಿಜವಾಗಿಯೂ ನಿನ್ನ ತಂದೆಯೇ ಜಗದೀಶ್ವರನಾಗಿದ್ದಾನೆ! ಪ್ರಹ್ಲಾದ : ಸ್ವಾಮಿ - ನನ್ನ ತಂದೆಯು ಎಂತು ಜಗದೀಶನಾಗುವನು ?
ಶಂಡ : ಏಕಾಗಬಾರದು ಪ್ರಹ್ಲಾದ?
ಪ್ರಹ್ಲಾದ : (ನಸುನಕ್ಕು) ಈ ಚರಾಚರ ಜಗತ್ತನ್ನು ನನ್ನ ತಂದೆ ನಿರ್ಮಿಸಿದನೆ ? ದೊಡ್ಡ ದೊಡ್ಡ ಪರ್ವತಗಳು, ತುಂಬಿ ಹರಿಯುವ ನದಿಗಳು, ವಿಸ್ತಾರವಾದ ಸಮುದ್ರ, ಮನೋಹರ ನೀಲಾಕಾಶ, ಮಿನುಗುವ ನಕ್ಷತ್ರಗಳು, ಗಗನಚುಂಬಿ ವೃಕ್ಷಗಳು, ಸುಂದರ ಪಶುಪಕ್ಷಿಗಳು, ಇವೆಲ್ಲವನ್ನೂ ತಂದೆಯು ಸೃಷ್ಟಿಸಿದನೆ ? ಪ್ರಕೃತಿ ಸೌಂದರ್ಯದಿಂದ ರಾರಾಜಿಸುವ ಈ ಉಪವನಗಳು, ಜಗತ್ತಿಗೇ ಪ್ರಕಾಶ ನೀಡುವ ಸೂರ್ಯ, ಶಾಂತಿ - ಆನಂದಗಳನ್ನೀಯುವ ಚಂದ್ರ ಇವೆಲ್ಲವನ್ನೂ ಸೃಷ್ಟಿಸಿದವರಾರು ತಂದೆಯೇ ?
ಇದನ್ನಾವಾಗ ಅವನು ನಿರ್ಮಿಸಿದ. ನನ್ನ ಪಿತನು ಜನಿಸುವ ಮೊದಲು ಇವೆಲ್ಲ ಇರಲಿಲ್ಲವೆ? ಸಮಸ್ತ ಜೀವರಾಶಿಗೂ ಆಯಾ ಕಾಲದಲ್ಲಿ ಇದ್ದಲ್ಲಿಯೇ ಆಹಾರವನ್ನೊದಗಿಸುವವರಾರು ? ಚಂದ್ರ - ಸೂರ್ಯ - ಗ್ರಹರಾಶಿಗಳಿಗೆ ಕಾರಣರಾರು, ನನ್ನ ಪಿತನೇನು? ಹಾಗಿದ್ದಲ್ಲಿ ಅವನು ಸೂರ್ಯ - ಚಂದ್ರರ ಗತಿಯನ್ನು ನಿರೋಧಿಸಲಿ, ಪ್ರಕೃತಿಧರ್ಮವನ್ನು ಬದಲಿಸಲಿ! ಅನಾದಿಕಾಲದಿಂದ
ಅವ್ಯಾಹತವಾಗಿ ನಡೆದುಬಂದಿರುವ ಜನನ-ಮರಣಗಳನ್ನು ನಿಲ್ಲಿಸಬಲ್ಲನೇ ನನ್ನ ಜನಕ!!
ಪ್ರಹ್ಲಾದನ ವಿಚಾರಸರಣಿಗೆ ಬೆರಗಾದ ಶಂಡರು ಅವನಿಗೆ ಉತ್ತರ ಹೇಳಲು ಅಸಮರ್ಥರಾಗಿ 'ಶೇಷಂ ಕೋಪೇನ ಪೂರಯೇತ್' ಎಂಬಂತೆ ತುಂಬಾ ಕ್ರುದ್ಧರಾಗಿ ನಿನ್ನೀ ಪುರಾಣಕ್ಕೆ ಯಾರಯ್ಯ ಉತ್ತರ ಕೊಡಲು ಸಮರ್ಥರು?” ಎಂದೆನಲು ಪ್ರಹ್ಲಾದನು “ಅಂದಮೇಲೆ ನನ್ನ ಜನಕನೆಂತು ಜಗದೀಶನಾಗಬಲ್ಲ? ಆ ಜಗತ್ಥಾಮಿಯ ಕಾರುಣ್ಯಮಾತ್ರದಿಂದ ಜೀವಿಸುತ್ತಿರುವ
ಪಿತನನ್ನು ಜಗದೀಶ್ವರನೆಂದು ನಾನು ಹೇಗೆ ಒಪ್ಪಲಿ ? ನೀವೇ ಹೇಳಿ, ಗುರುಗಳೇ” ಎಂದನು.
ನಮಃ'.
ಶಂಡ : (ಅನುನಯದಿಂದ) ಮಗು! ಒಮ್ಮೆಯಾದರೂ ನಾನು ಹೇಳದಂತೆ ಹೇಳಪ್ಪಾ! 'ಓಂ ಹಿರಣ್ಯಕಶ್ಯಪುವೇ
ಪ್ರಹ್ಲಾದ : ಓಂ ನಮೋ ನಾರಾಯಣಾಯ!
ನಾರಾಯಣ ಶಬ್ದವನ್ನಾಲಿಸಿ ಒಳಬಂದ ಹಿರಣ್ಯಕಶ್ಯಪನು “ತ್ರಿಲೋಕವಿಜಯಿಯಾದ ನನ್ನ ರಾಜ್ಯದಲ್ಲಿ ನನ್ನ ಕಡುವೈರಿಯನ್ನು
ನೆನೆಯಲೆಷ್ಟು ಧೈರ್ಯ! ಯಾರು, ಯಾರು ನನ್ನ ಶತ್ರುವಿನ ಸ್ತುತಿಪಾಠಕ ?” ಎಂದು ಗರ್ಜಿಸಿದನು.
ಎಲ್ಲರೂ ಭಯದಿಂದ ನಡುಗುತ್ತಾ ನಿಲ್ಲಲು ಪ್ರಹ್ಲಾದನು ಮುಂದೆ ಬಂದು “ಜನಕ! ವಂದಿಸುವೆನು” ಎಂದು ನಮಸ್ಕರಿಸಲು ಪುತ್ರನನ್ನು ಕಂಡ ದೈತ್ಯರಾಜನ ಮುಖವರಳಿತು. ದೈತ್ಯೇಂದ್ರನು ಸಂತಸದಿಂದ “ವತ್ಸ, ಚಿರಂಜೀವ, ವ್ಯಾಸಂಗವು ಚೆನ್ನಾಗಿ ನಡೆದಿರುವುದೇ ಕುಮಾರ?” ಎಂದು ಮಗನನ್ನು ತೊಡೆಯ ಮೇಲೆ ಕೂಡಿಸಿಕೊಂಡು “ಪ್ರಹ್ಲಾದನೆ, ನೀನು ಏನು ಕಲಿತಿರುವೆ ಹೇಳು” ಎಂದನು.
ಪ್ರಹ್ಲಾದ : ತಂದೆಯೇ ಏನು ಹೇಳಲಿ ?
ಹಿರಣ್ಯಕಶ್ಯಪು : ನೀನಾವುದನ್ನು ಉತ್ತಮ ವಿಚಾರವೆಂದು ತಿಳಿದಿರುವೆ. ಅದನ್ನು ಹೇಳು.
ಪ್ರಹ್ಲಾದ ಉವಾಚ
ತತ್ಸಾಧು ಮನೇಸುರವರ್ಯ! ದೇಹಿನಾಂ | ಸದಾ ಸಮುದ್ವಿಗ್ನ ಧಿಯಾಮಸದ್ರ ಹಾತ್ || ಹಿತ್ವಾತ್ಮಪಾತಂ ಗೃಹಮಂಧಕೂಪಂ | ವನಂಗತೋ ಯತ್‌ಹರಿಮಾಶ್ರಯೇತ್ ||
ಪ್ರಹ್ಲಾದ : ಅಸುರವರ್ಯ! ದುರ್ವಿಷಯಗಳ ಅಭ್ಯಾಸದಿಂದ ಅಥವಾ ಅಸಾರವಾದ ವಿಷಯಸುಖವನ್ನು ಸಾರಭೂತವಾದುದೆಂದು ಭ್ರಮಿಸಿ, ದುಃಖಪರಂಪರೆಯಲ್ಲಿಸಿಲುಕಿ ತೊಳಲುವ ಜನರಿಗೆ ನರಕಾದಿ ಅನರ್ಥಗಳಿಗೆ ಕಾರಣವಾಗಿರುವ ಸಂಸಾರಸುಖವನ್ನು ತ್ಯಜಿಸಿ, ಸಜ್ಜನರ ಸಹವಾಸದಿಂದ ಶ್ರೀಹರಿಪರಮಾತ್ಮನ ಆಶ್ರಯವನ್ನು ಪಡೆಯುವುದೇ ಉತ್ತಮವಾದ ಅಭ್ಯಾಸದ ಫಲವೆಂದು ನಾನು ತಿಳಿದಿದ್ದೇನೆ!
ಪ್ರಹ್ಲಾದನ ಮಾತು ಕೇಳಿ ಹಿರಣ್ಯಕಶ್ಯಪನಿಗೆ ಅಸಾಧ್ಯ ಕೋಪ-ತಾಪಗಳುಂಟಾದವು. ಆದರೂ, ಅದನ್ನು ಮೇಲೆ ತೋರಗೊಡದೆ ಪರಿಹಾಸದಿಂದ ನಕ್ಕು, “ಆಚಾರ್ಯರೇ, ಬಾಲಕರ ಬುದ್ಧಿಯು ಶತ್ರುಪಕ್ಷದವರ ಸಹವಾಸದಿಂದ ಕೆಡುವುದು. ಹೂಂ, ಇನ್ನು ಮುಂದೆ ನಮ್ಮ ಕುಮಾರನು ಶತ್ರುವಾದ ಆ ಹರಿಯ ಪಕ್ಷದವರ ಅಂದರೆ ಬ್ರಾಹ್ಮಣರ ಉಪದೇಶಾದಿಗಳ ಪ್ರಭಾವಕ್ಕೆ ಒಳಗಾಗದಂತೆ ಎಚ್ಚರವಹಿಸಿರಿ ಮತ್ತು ನಿಮ್ಮ ಮನೆಯಲ್ಲಿಯೇ ಇವನಿಗೆ ನಮ್ಮ ಕುಲಕ್ರಮಾಗತವಾದ ವಿದ್ಯೆಗಳನ್ನು ಕಲಿಸಿರಿ' ಎಂದು ಹೇಳಿ ಅರಮನೆಗೆ ತೆರಳಿದನು.
ಹಿರಣ್ಯಕಶ್ಯಪನು ತೆರಳಿದ ಮೇಲೆ ಶಂಡರು “ಬಂದಿದ್ದ ವಿಪತ್ತಿನಿಂದ ಸದ್ಯಕ್ಕಂತೂ ಪಾರಾದೆ! ಪ್ರಹ್ಲಾದ! ನಿನ್ನ ತಂದೆಯ ಅಪ್ಪಣೆಯನ್ನು ಕೇಳಿದೆಯಲ್ಲವೇ? ಬಾ, ನಮ್ಮ ಮನೆಗೆ ಹೋಗೋಣ. ಅಲ್ಲಿ ನಿನಗೆ ಪಾಠ ಹೇಳುವೆನು” ಎಂದು ಹೇಳಿ ಪ್ರಹ್ಲಾದನನ್ನು ಕರೆದುಕೊಂಡು ಮನೆಗೆ ತೆರಳಿದನು.
ಶುಂಡಾಮರ್ಕರು ಪ್ರಹ್ಲಾದಕುಮಾರನಿಗೆ ಧರ್ಮಾರ್ಥಕಾಮ ಪ್ರತಿಪಾದಕವಾದ ಅರ್ಥಶಾಸ್ತ್ರವನ್ನು ಉಪದೇಶಿಸಿದರು.
ಕೆಲದಿನಗಳಾದ ಮೇಲೆ ಶಂಡಾಮರ್ಕರು ಸಾಮ, ದಾನ, ಭೇದ, ದಂಡ - ಎಂಬ ನಾಲ್ಕು ಉಪಾಯಗಳನ್ನು ಬೋಧಿಸುವ ನೀತಿಶಾಸ್ತ್ರದಲ್ಲಿ ಪ್ರಹ್ಲಾದನು ಪಾರಂಗತನಾಗಿದ್ದಾನೆ (ಧರ್ಮ-ಅರ್ಥ-ಕಾಮ ಹಾಗೂ ಅಪಾತತಃ ಮೋಕ್ಷಶಾಸ್ತ್ರಗಳಲ್ಲಿ ಪರಿಣಿತನಾಗಿದ್ದಾನೆ) ಎಂದು ತಿಳಿದು, ಈಗ ತಮ್ಮ ಶಿಕ್ಷಣಸಾಮರ್ಥ್ಯ-ಚತುರತೆಗಳನ್ನು ದೈತ್ಯಚಕ್ರವರ್ತಿಗೆ ತೋರಿಸಿ ಅವನ ವಿಶೇಷ ಪ್ರೀತಿ-ವಿಶ್ವಾಸ ಗಳಿಸಬೇಕೆಂದು ಬಯಸಿ, ಪ್ರಹ್ಲಾದನನ್ನು ಹಿರಣ್ಯಕಶ್ಯಪುವಿನ ಬಳಿಗೆ ಕರೆದುಕೊಂಡು ಹೋದರು.