
ಕಲಿಯುಗ - ಕಲ್ಪತರು
ಎರಡನೆಯ ಉಲ್ಲಾಸ ಶ್ರೀಹರಿಭಕ್ತಾಗ್ರಣಿ ಶ್ರೀಪ್ರಹ್ಲಾದರಾಜರು
ರಚಿಸಿದವರು ರಾಜಾ, ಎಸ್. ಗುರುರಾಜಾಚಾರ್ಯರು
೨೩. ಶ್ರೀಪ್ರಹ್ಲಾದರಾಜರ ರಾಜ್ಯಭಾರ
ಶ್ರೀಪ್ರಹ್ಲಾದರಾಜರು ಶ್ರೀನೃಸಿಂಹದೇವರು ಆಜ್ಞಾಪಿಸಿದಂತೆ ದೈತ್ಯಸಾಮ್ರಾಜ್ಯದಲ್ಲಿ ಪಟ್ಟಾಭಿಷಿಕ್ತರಾದ ಮೇಲೆ ಮಂಗಳಕರವಾದ, ಭಕ್ತಿಪ್ರಚೋದಕವಾದ ಶ್ರೀಹರಿಯ ವಿವಿಧಾವತಾರ ಕಥೆಗಳನ್ನು ಜ್ಞಾನಿಗಳಿಂದ ಶ್ರವಣಮಾಡಿ ಆನಂದಿಸುತ್ತಾ, ಬ್ರಹ್ಮಜ್ಞಾನಿಗಳ ಉಪದೇಶ-ಮಾರ್ಗದರ್ಶನಗಳಂತೆ ತಮ್ಮ ಪ್ರಜರನ್ನು ಮಕ್ಕಳಂತೆ ಕಾಣುತ್ತಾ, ಸರ್ವಜನರ ಅಭ್ಯುದಯ-ಹಿತಕಾರಕ ಕಾರ್ಯಗಳನ್ನೆಸಗುತ್ತಾ ಜನತೆಯಲ್ಲಿ ಶ್ರೀಹರಿತತ್ವಜ್ಞಾನ, ಧರ್ಮ, ಸದಾಚಾರ, ಪರೋಪಕಾರ, ಅಹಿಂಸಾ, ಶೀಲ-ವಿನಯಾದಿ ಸದ್ಗುಣಗಳು ವೃದ್ಧಿಸುವಂತೆ ಸರ್ವಜನರ ಕಲ್ಯಾಣಕ್ಕಾಗಿಯೇ ಶ್ರಮಿಸುತ್ತಾ ಧರ್ಮದಿಂದ ರಾಜ್ಯಭಾರ ಮಾಡುತ್ತಿದ್ದರು.
ಪ್ರಹ್ಲಾದರಾಜರು ಸಮಸ್ತ ಜಗತ್ತಿಗೂ ಶ್ರೀಹರಿಯೇ ಸತ್ತಾಪ್ರದನೆಂಬ ನಿಶ್ಚಯ ಜ್ಞಾನದಿಂದ ನಿಷ್ಕಾಮನೆಯಿಂದ ಸರ್ವವನ್ನೂ ಶ್ರೀಹರಿಗೆ ಸಮರ್ಪಿಸಿ, ಶ್ರೀರಮಾರಮಣನನ್ನು ಭಕ್ತಿಯಿಂದ ಆರಾಧಿಸುತ್ತಾ, ಧ್ಯಾನಿಸುತ್ತಾ, ಸರ್ವದಾ ಹರಿಭಕ್ತಿ, ಭಾಗವತಧರ್ಮಪ್ರಸಾರಕರಾಗಿ ಧ್ಯಾನಯೋಗದಿಂದ ಪ್ರತಿಬಂಧಕ ಕರ್ಮಗಳನ್ನು ಉಪಮರ್ದನ ಮಾಡಿ, ಸರ್ವಭೂತಗಳಲ್ಲಿ ನಿಂತು, ಮುಖ್ಯವಾಗಿ ಯಜ್ಞಭೋಗ್ಯವಾದ ಶ್ರೀಹರಿಯು ಸರ್ವೋತ್ತಮ, ಸರ್ವಸ್ವತಂತ್ರನೆಂದು ತಿಳಿದು ಪೂಜಿಸುತ್ತಿದ್ದರು. ಮೋಕ್ಷಕ್ಕೆ ಉಪಯುಕ್ತವಲ್ಲದ ಹೆಚ್ಚಿನ ಪುಣ್ಯವನ್ನು ಭೋಗದಿಂದ ನಿವೃತ್ತಿ ಮಾಡಿಕೊಂಡು (ಭೋಗೇನ ಪುಣ್ಯಂ-ಭಾಗವತ) ಪ್ರಾಯಶ್ಚಿತ್ತಾದಿ ಕುಶಲಕರ್ಮಗಳಿಂದ ಪಾಪಪರಿಹಾರ ಮಾಡಿಕೊಂಡು (ಕುಶಲೇನ ಪಾಪಂ-ಭಾಗವತ) ಜಗತ್ತಿಗೆ ಆದರ್ಶರಾದ ಚಕ್ರವರ್ತಿ, ಶ್ರೀಹರಿಭಕ್ತಾಗ್ರೇಸರರೆಂದು ಕೀರ್ತಿ ಗಳಿಸಿದರು. ಅವರ ಕೀರ್ತಿಯನ್ನು ಮೂರುಲೋಕಗಳಲ್ಲಿಯೂ ಸುಜನರು ಹಾಡಹತ್ತಿದರು. (ಕೀರ್ತಿ೦ ವಿಶುದ್ಧಾಂ ಸುರಲೋಕಗೀತಾಂ-ಭಾಗವತ).
ಶ್ರೀಹರಿಭಕ್ತರಾದ ಪ್ರಹ್ಲಾದರು ಆತ್ಮೀಯರ ಸಲಹೆಯಂತೆ ಗೃಹಸ್ಥಧರ್ಮವನ್ನು ಸ್ವೀಕರಿಸಿ ಅದೂ ಶ್ರೀಭಗವತ್ತೂಜೆಗೆ ಸಾಧನವಾಗುವಂತೆ ವರ್ತಿಸುತ್ತಾದಾಂಪತ್ಯಜೀವನವನ್ನು ನಡೆಸುತ್ತಿದ್ದರು. ಭಗವಂತನ ಅನುಗ್ರಹದಿಂದ ಅವರಿಗೆ ಆಯುಷ್ಕಾಮ, ಶಿಬಿ, ಬಾಷ್ಕಲ ಮತ್ತು ವಿರೋಚನರೆಂಬ ನಾಲ್ವರು ಪುತ್ರರು ಜನಿಸಿದರು.