
ಕಲಿಯುಗ - ಕಲ್ಪತರು
ಎರಡನೆಯ ಉಲ್ಲಾಸ ಶ್ರೀಹರಿಭಕ್ತಾಗ್ರಣಿ ಶ್ರೀಪ್ರಹ್ಲಾದರಾಜರು
ರಚಿಸಿದವರು ರಾಜಾ, ಎಸ್. ಗುರುರಾಜಾಚಾರ್ಯರು
೯. ಹಿರಣ್ಯಕಶ್ಯಪನ ರಾಜ್ಯಭಾರ
ಆಗ ಸುರಗುರು ಬೃಹಸ್ಪತ್ಯಾಚಾರ್ಯರು “ಇದು ದೈತ್ಯರ ಉನ್ನಾಹಕಾಲ, ದೇವೇಂದ್ರ! ಈಗ ಸಹನೆಯಿಂದಿದ್ದು ಮುಂದೆ ಈ ಬ್ರಹ್ಮ ದೇವರ ವರವನ್ನು ಪಡೆದ ದೈತ್ಯೇಂದ್ರ ಹಿರಣ್ಯಕಶ್ಯಪನು ಸ್ವರ್ಗದ ಮೇಲೆ ದಾಳಿಮಾಡಿ ದೇವತೆಗಳನ್ನು ಜಯಿಸಿಬಿಟ್ಟನು. ದೈತ್ಯನ ನಾಶಮಾಡಲು ಯತ್ನಿಸಬೇಕು” ಎಂದು ಸಲಹೆ ನೀಡಿದರು. ಅದರಂತೆ ದೇವತೆಗಳಿಂದೊಡಗೂಡಿದ ಮಹೇಂದ್ರನು ಸ್ವರ್ಗದಿಂದ ಕಣ್ಮರೆಯಾದನು.
ಹಿರಣ್ಯಕಶ್ಯಪನು ಶ್ರೀಹರಿಪರಮಾತ್ಮನನ್ನು ದ್ವೇಷಿಸಹತ್ತಿದನು. ಸಮಗ್ರೆಶ್ವರ್ಯಾದಿಗುಣರತ್ನಾಕರನಾದ, ಪರಾತ್ಪರನಾದ ಶ್ರೀಹರಿಯಲ್ಲಿ ಜಯಾಂಶೋಪೇತನಾದ್ದರಿಂದ ಸ್ವಯಂಭಕ್ತನಾಗಿದ್ದರೂ ಹಿರಣ್ಯಕಶ್ಯಪನು ದ್ವೇಷಮಾಡಿದನು.?
ಹಿರಣ್ಯಕಶ್ಯಪನು ದಶದಿಕ್ಕುಗಳಲ್ಲಿ ದೇವತೆಗಳು, ಮನುಷ್ಯರು, ಗಂರ್ಧವರು, ಗರುಡರು, ನಾಗರು, ಸಿದ್ಧರು, ಚಾರಣರು, ವಿದ್ಯಾಧರರು, ಯಕ್ಷ-ರಾಕ್ಷಸ-ಪಿಶಾಚ-ಭೂತಪತಿಗಳೇ ಆದ ಎಲ್ಲರನ್ನೂ ಜಯಿಸಿ, ಲೋಕಪಾಲಕರ ಸ್ಥಾನಗಳನ್ನು ಸ್ವಾಧೀನಪಡಿಸಿಕೊಂಡು ಸ್ವರ್ಗಲೋಕವನ್ನು ಜಯಿಸಿ, ಅವನು ವಿಶ್ವವಿಜಯಿಯೆನಿಸಿ ಮಹೇಂದ್ರನ ಅಮರಾವತಿಯನ್ನು ಆಕ್ರಮಿಸಿ ಅಲ್ಲಿ ಸ್ವರ್ಗಲೋಕದ ಉತ್ತಮ ವಿಷಯಾದಿ ಸುಖಗಳನ್ನು ಅನುಭವಿಸುತ್ತಾ ಯಜ್ಞಭಾಗಿಗಳಲ್ಲದ ದೇವತೆಗಳಿಂದ ಅಂದರೆ ಆದಿತ್ಯರು, ವಸುಗಳು, ರುದ್ರರು ಎಂಬೀ ದೇವತಾತ್ರಯದಿಂದ ಸೇವೆಗೊಳ್ಳುತ್ತಾ ಮದೋನ್ಮತ್ತನಾಗಿ ಅವರೆಲ್ಲರಿಂದ ಕಪ್ಪಕಾಣಿಕೆಗಳನ್ನು ಪಡೆಯುತ್ತಾ ಎಲ್ಲ ರಾಜರಿಗೂ ಶಾಸಕನಾಗಿ ರಾಜ್ಯಭಾರ ಮಾಡಲಾರಂಭಿಸಿದನು.
ಸನಕಾದಿಗಳ ಶಾಪವನ್ನು ಹೊಂದಿದ್ದ ಜಯನಾಮಕ ದ್ವಾರಪಾಲಕನು ಹಿರಣ್ಯಕಶ್ಯಪುವಾಗಿ ಜನಿಸಿ, ವರದಿಂದ ಮತ್ತನಾಗಿ ಲೋಕಕಂಟಕನಾಗಿ ರಾಜ್ಯಭಾರ ಮಾಡಲಾರಂಭಿಸಿದನು. ಅವನ ಉಗ್ರಶಾಸನವನ್ನು ತಾಳಲಾರದೆ ಲೋಕಪಾಲಕರೆಲ್ಲರೂ ಸೇರಿ ಶ್ರೀಹರಿಪರಮಾತ್ಮನಿಗೆ ಶರಣುಹೋದರು.
ದೇವತೆಗಳು ಜಿತೇಂದ್ರಿಯರಾಗಿ ಚಿತ್ತಶುದ್ಧಿಯಿಂದ ನಿದ್ರೆಯನ್ನು ತ್ಯಜಿಸಿ ವಾಯುಭಕ್ಷಣ ಮಾಡುತ್ತಾ ಶ್ರೀಮನ್ನಾರಾಯಣನನ್ನು ಉಪಾಸನೆ ಮಾಡುತ್ತಾ
“ಓಂ ನಮೋ ಭಗವತೇ ಮಹಾಪುರುಷಾಯ ಮಹಾತ್ಮನೇ |
ವಿಶುದ್ಧಾನುಭವಾನಂದಸಂದೋಹಾಯ ಯತೋSಭಯಮ್ ||” ಎಂದು ಅತ್ಯಂತ ಭಕ್ತಿಶ್ರದ್ಧೆಗಳಿಂದ ಪ್ರಾರ್ಥಿಸಹತ್ತಿದರು. ಇವರ ಭಕ್ತಿಗೆ ಮೆಚ್ಚಿದ ಶ್ರೀಮನ್ನಾರಾಯಣನು ಆಕಾಶವಾಣಿಯ (ಶ್ರೀವಾಯುದೇವರ) ದ್ವಾರಾ ಅವರಿಗೆ ಹೀಗೆ ಅಭಯವಚನವನ್ನು ಅನುಗ್ರಹಿಸಿದನು,
ಮಾಷ್ಟ ವಿಬುಧಶ್ರೇಷ್ಠಾಃ ಸರ್ವೆಷಾಂ ಭದ್ರಮಸ್ತು ವಃ |
ಮದ್ದರ್ಶನಂ ಹಿ ಭೂತಾನಾಂ ಸರ್ವಶ್ರೇಯೋಪಪತ್ತಯೇ ||
ಜ್ಞಾತಮೇತಸ್ಯ ದೌರಾಷ್ಟ್ರಂ ದೈತ್ಯಯಾಪಸದಸ್ಯ ಯತ್ |
ತಸ್ಯ ಶಾಂತಿಂ ಕರಿಷ್ಯಾಮಿ ಕಾಲಸ್ತಾವತ್ಪತೀಕ್ಷತಾಮ್ ||
ಯದಾ ದೇವೇಷು ವೇದೇಷು ಗೋಷು ವಿಪ್ರೇಷು ಸಾಧುಪು |
ಧರ್ಮ ಮಯಿ ಚ ವಿದ್ವೇಷಃ ಸ ವಾ ಆಶು ವಿನಶ್ಯತಿ ||
ನಿರ್ವೈರಾಯ ಪ್ರಶಾಂತಾಯ ಸ್ವಸುತಾಯ ಮಹಾತ್ಮನೇ |
ಪ್ರಹ್ಲಾದಾಯ ಯದಾ ದ್ರುಹೇದರಿ5ಪಿ ವರೋರ್ಜಿತಮ್ ||
“ದೇವತಾಶ್ರೇಷ್ಠರೇ! ಹೆದರಬೇಡಿ, ನಿಮ್ಮೆಲ್ಲರಿಗೂ ಮಂಗಳವಾಗಲಿ. ನನ್ನ ದರ್ಶನ (ಮದ್ವಿಷಯಜ್ಞಾನ)ವು ಸಮಸ್ತ ಭೂತಗಳ ಸಕಲಶ್ರೇಯಸ್ಸಿಗೆ ಕಾರಣವಾಗಿದೆ. ದೈತ್ಯಾಪಸದನನಾದ ದುರಾತ್ಮನಾದ ಹಿರಣ್ಯಕಶ್ಯಪನ ದಾಂಧಲೆ, ಕಿಡಿಗೇಡಿತನಗಳನ್ನು ನಾನು ತಿಳಿದಿದ್ದೇನೆ. ಅದಕ್ಕೆ ತಕ್ಕ ಪರಿಹಾರವನ್ನು ಮಾಡುತ್ತೇನೆ. ಸಮಯಪ್ರತೀಕ್ಷೆ ಮಾಡಿರಿ. ಆ ದೈತ್ಯನು ಯಾವಾಗ ವೇದಗಳು, ದೇವತೆಗಳು, ಗೋವುಗಳು, ಬ್ರಾಹ್ಮಣರು, ಸಾಧುಜನರು, ಧರ್ಮವನ್ನೂ ಮತ್ತು ನನ್ನನ್ನೂ ಹೆಚ್ಚಾಗಿ ದ್ವೇಷಿಸುವನೋ ಆಗ ಅವನ ವಿನಾಶವು ತಾನಾಗಿಯೇ ಆಗುವುದು! ಮುಖ್ಯವಾಗಿ ನಿರ್ವೈರನೂ ಪ್ರಶಾಂತನೂ, ಸರ್ವಗುಣಪೂರ್ಣನಾದ ನನ್ನಲ್ಲಿ ಭಕ್ತಿಯುಳ್ಳವನೂ ಆದ ಪ್ರಹ್ಲಾದನನ್ನು ಯಾವಾಗ ಹೆಚ್ಚಾಗಿ ದ್ವೇಷಿಸಿ ಪೀಡಿಸುವನೋ, ಆವಾಗ ನಾನು ವರಬಲದಿಂದ ಉನ್ಮತ್ತನಾಗಿರುವ ಹಿರಣ್ಯಕಶ್ಯಪನನ್ನು ಸಂಹರಿಸುವೆನು.
ಧೀರಗಂಭೀರದ್ದನಿಯಿಂದ ಬಂದ ಈ ಭಗವಂತನ ಅಭಯವಚನವನ್ನು (ಅಮೃತವಾಣಿ) ಆಲಿಸಿ ಪರಮಾನಂದತುಂದಿಲರಾಗಿ ಶ್ರೀಹರಿಯ ಮಹಿಮೆಯನ್ನು ಕೊಂಡಾಡುತ್ತಾ ತಮ್ಮ ಕಾರ್ಯವು ಯಶಸ್ವಿಯಾಗುವುದು, ದೈತ್ಯನ ಸಂಹಾರವಾಗುವುದೆಂದು ನಂಬಿ ದೇವತೆಗಳು ಭಗವಂತನಿಗೆ ನಮಸ್ಕರಿಸಿ ತೆರಳಿದರು.
ದೇವತೆಗಳು ಪ್ರಾರ್ಥಿಸಿದಾಗ ಶ್ರೀಹರಿಯು ವೇದ, ದೇವತೆಗಳು, ಗೋಬ್ರಾಹ್ಮಣರು, ಸಜ್ಜನರು, ಧರ್ಮ ಮತ್ತು ನನ್ನ ಮೇಲೆ ಹಿರಣ್ಯಕಶ್ಯಪನು ಹೆಚ್ಚು ದ್ವೇಷಮಾಡಿದಾಗ ಮತ್ತು ಪ್ರಹ್ಲಾದನನ್ನು ದ್ವೇಷಿಸಿ ಹಿಂಸಿಸಿದಾಗ ಅವನನ್ನು ಸಂಹರಿಸುತ್ತೇನೆ ಎಂದು ಅಪ್ಪಣೆ ಕೊಡಿಸಿ “ಪ್ರಹ್ಲಾದನನ್ನು ಹಿಂಸಿಸಿದಾಗ” ಎಂದು ಒತ್ತುಕೊಟ್ಟು ಹೇಳಿರುವುದು ಅತ್ಯಂತ ಗಮನಾರ್ಹವಾಗಿದೆ.
'ಪ್ರಹ್ಲಾದನಿಗಾಗಿಯೇ ನಾನು ಅವತರಿಸುತ್ತೇನೆ' ಎಂದು ಹೇಳಿದ್ದರಿಂದ ಜಗತ್ತಿನಲ್ಲಿ ಪ್ರಹ್ಲಾದನು ಶ್ರೀಹರಿಯ ಭಕ್ತಾಗ್ರೇಸರ, ಅವನಲ್ಲಿ ಭಗವಂತನಿಗೆ ಅಪಾರ ವಾತ್ಸಲ್ಯ ಅನುಗ್ರಹವಿದೆ ಎಂದು ಖ್ಯಾತಿಯುಂಟಾಗುತ್ತದೆ. ಅವನ ಕೀರ್ತಿ ಬೆಳಗಿ, ಅದರಿಂದ ಶ್ರೀಹರಿಯ ಭಕ್ತಾಭಿಮಾನವೂ ವಿಖ್ಯಾತವಾಗುವುದೆಂಬ ಅಭಿಪ್ರಾಯದಿಂದ ಶ್ರೀಮನ್ನಾರಾಯಣನು ದೇವತೆಗಳೆದುರು ಪ್ರಹ್ಲಾದರಾಜನನ್ನು ವಿಶೇಷಾಕಾರವಾಗಿ ನಿರ್ದೇಶನ ಮಾಡಿ ತನ್ನ ಭಕ್ತಪರಾಧೀನತೆಯನ್ನು ಸ್ಪಷ್ಟಪಡಿಸಿದ್ದಾನೆ - ಎಂದು ತಿಳಿಯಬೇಕು.