
ಕಲಿಯುಗ - ಕಲ್ಪತರು
ಎರಡನೆಯ ಉಲ್ಲಾಸ ಶ್ರೀಹರಿಭಕ್ತಾಗ್ರಣಿ ಶ್ರೀಪ್ರಹ್ಲಾದರಾಜರು
ರಚಿಸಿದವರು ರಾಜಾ, ಎಸ್. ಗುರುರಾಜಾಚಾರ್ಯರು
೨೪. ಶ್ರೀಪ್ರಹ್ಲಾದರಾಜರ ನ್ಯಾಯನಿಷ್ಠೆ
ಪ್ರಹ್ಲಾದರಾಜರಲ್ಲಿ ಸತ್ಯ-ಧರ್ಮಪ್ರಜ್ಞೆ, ನ್ಯಾಯನಿಷ್ಠೆಗಳು ಅಸದೃಶವಾಗಿದ್ದವು. ಪ್ರಹ್ಲಾದರ ನ್ಯಾಯನಿಷ್ಠುರತೆಯನ್ನು ಎತ್ತಿಸಾರುವ ಅನೇಕ ಸಂದರ್ಭಗಳು ವೇದ-ಪುರಾಣಾದಿಗಳಿಂದ ತಿಳಿಯಬಹುದಾಗಿದೆ.
ಪ್ರಹ್ಲಾದರಾಜರ ಪುತ್ರನಾದ ವಿರೋಚನನು ಗುರುಕುಲದಲ್ಲಿ ವ್ಯಾಸಂಗ ಮಾಡುತ್ತಿರುವಾಗ ಜರುಗಿದ ಒಂದು ಘಟನೆಯು ವಜ್ರಕ್ಕೆ ಕುಂದಣವಿಟ್ಟಂತೆ ಪ್ರಹ್ಲಾದರ ಕೀರ್ತಿಯನ್ನು ಬೆಳಗಿಸಿತು.
ಗುರುಕುಲದಲ್ಲಿ ದೈತ್ಯ-ದಾನವ-ಬ್ರಾಹ್ಮಣಾದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಅಲ್ಲಿ ವಿದ್ಯಾರ್ಥಿಗಳು ಅನೇಕ ವಿಷಯಗಳನ್ನು ಚರ್ಚಿಸುತ್ತಿದ್ದರು. ಒಂದು ದಿನ ಜಗತ್ತಿನಲ್ಲಿ ಯಾರು ಶ್ರೇಷ್ಠರು ಎಂಬ ಪ್ರಶ್ನೆ ಉದ್ಭವಿಸಿದಾಗ ವಿರೋಚನನು ತಾನೇ ಶ್ರೇಷ್ಠನೆಂದು ಹೇಳಿದನು. ಉಳಿದ ವಿದ್ಯಾರ್ಥಿಗಳು ಚಕ್ರವರ್ತಿಯ ಮಗನೆಂಬ ಅಹಂಭಾವದಿಂದ ಹೀಗೆ ಪ್ರಲಾಪಿಸಿದ್ದಾನೆ - ಅದು ತಪ್ಪು ಎಂದು ತಿಳಿದಿದ್ದರೂ ವಿರೋಚನನ ಭಯದಿಂದ ಮೌನ ಹಿಸಿದರು. ಆದರೆ ಅದನ್ನು ನೋಡಿ ಸುಮ್ಮನಿದ್ದರೆ ವಿರೋಚನನನ್ನು ಅಡ್ಡದಾರಿಗೆ ಹೋಗಲು ಬಿಟ್ಟಂತಾಗುವುದು. ಶ್ರೀಹರಿಭಕ್ತಾಗ್ರಣಿಗಳಾದ ಪ್ರಹ್ಲಾದರ ಪುತ್ರನು ಹಾಗೆ ಆಗಬಾರದೆಂಬ ಉದ್ದಿಶ್ಯದಿಂದ ಗುರುಕುಲದ ಉಪಾಧ್ಯಾಯರಲ್ಲೊಬ್ಬರ ಪುತ್ರನಾದ ಸುಮತಿ ಎಂಬ ಬ್ರಾಹ್ಮಣಕುಮಾರನು - “ವಿರೋಚನ, ನೀನು ಹೇಳಿದ್ದು ಸರಿಯಲ್ಲ. ಜಗತ್ತಿನಲ್ಲಿ ಒಬ್ಬ ವ್ಯಕ್ತಿಯು ಶ್ರೇಷ್ಠ ಅಥವಾ ಪೂಜ್ಯನೆನಿಸುವುದು, ಅವನ ಕುಲ, ಸಿರಿಸಂಪತ್ತು, ಅಧಿಕಾರಗಳಿಂದಲ್ಲ, ಯಾವನು ಬ್ರಹ್ಮಜ್ಞಾನಿಯೋ ಅವನೇ ಶ್ರೇಷ್ಠನೆಂದು ಶಾಸ್ತ್ರಗಳು ಸಾರುವುವು. ಆದುದರಿಂದ ನೀನು ಶ್ರೇಷ್ಠನಲ್ಲ!” ಎಂದು ಹೇಳಿದನು ಇದರಿಂದ ವಿರೋಚನನಿಗೆ ಬಹುಕೋಪ ಅಸಮಾಧಾನಗಳುಂಟಾದವು. ಆಗ ಅವನು “ನೀನು ಬ್ರಾಹ್ಮಣನಾದ್ದರಿಂದ ನೀನೇ ಶ್ರೇಷ್ಠನೆಂದು ತಾನೇ ನಿನ್ನ ಅಭಿಪ್ರಾಯ ?” ಎನಲು ಸುಮತಿಯು “ಮಿತ್ರ! ಹಾಗೆ ನಾನು ಹೇಳಲಿಲ್ಲ. ಬ್ರಾಹ್ಮಣ – ಎಂದರೆ ಬ್ರಹ್ಮನನ್ನು ತಿಳಿದವನು. ಅಂದರೆ ಬ್ರಹ್ಮಜ್ಞಾನಿ, ಹಾಗೆ ಬ್ರಹ್ಮಜ್ಞಾನಿಯಾದವನೇ ಶ್ರೇಷ್ಠನೆಂದು ನನ್ನ ಅಭಿಮತ” ಎಂದು ಹೇಳಿದನು. ಅದರ ಮೇಲೆ ಚರ್ಚೆ ನಡೆದು ಕೊನೆಗೆ ವಿರೋಚನನು “ಇದು ಇಂದು ತೀರ್ಮಾನವಾಗಲೇಬೇಕು. ಸೋತವರು ಗೆದ್ದವರಿಗೆ ತಲೆದಂಡ ತರಬೇಕು” ಎಂದು ಹಟ ಹಿಡಿದಿದ್ದರಿಂದ ಈ ವಿಚಾರವನ್ನು ನಿಷ್ಪಕ್ಷಪಾತವಾಗಿ ನಿರ್ಣಯ ಹೇಳಲು ಶ್ರೀಪ್ರಹ್ಲಾದರಾಜರೊಬ್ಬರೇ ಸಮರ್ಥರೆಂದು ಎಲ್ಲರೂ ಒಪ್ಪಿದರು.
ವಿದ್ಯಾರ್ಥಿಗಳು, ಸುಮತಿ ಮತ್ತು ವಿರೋಚನರು ಪ್ರಹ್ಲಾದರಲ್ಲಿಗೆ ಬಂದು ಎಲ್ಲ ವಿಚಾರವನ್ನು ನಿವೇದಿಸಿ 'ನೀವೇ ಇದರ ನಿರ್ಣಯ ಮಾಡಬೇಕು' ಎಂದು ಕೋರಿದರು. ವಿರೋಚನನು ತಾನು ರಾಜಕುಮಾರನಾದುದರಿಂದ ತಂದೆಯು ತನ್ನ ಪರವಾಗಿಯೇ ತೀರ್ಪು ನೀಡುವನೆಂದು ಮನದಲ್ಲೇ ಉಬ್ಬಿದನು. ಬ್ರಾಹ್ಮಣಕುಮಾರನು ಪ್ರಹ್ಲಾದರು ಮಹಾನುಭಾವರು, ಭಗವದ್ಭಕ್ತರು,
ಸತ್ಯನಿಷ್ಠರು ಆದುದರಿಂದ ಸತ್ಯವನ್ನೇ ಎತ್ತಿಹಿಡಿಯುವರೆಂದು ದೃಢವಾಗಿ ನಂಬಿದನು.
ಪ್ರಹ್ಲಾದರಿಗೆ ಇದೊಂದು ಸತ್ವಪರೀಕ್ಷೆಯೆಂದು ತೋರಿತು. ಇಂಥ ಬಿಕ್ಕಟ್ಟಿನ ಪ್ರಸಂಗದಲ್ಲಿ ಬೇರೆಯವರಾಗಿದ್ದರೆ ಸಿ ಮಾಡುತ್ತಿದ್ದರೋ, ಆದರೆ ಮಹಾನುಭಾವರಾದ ಪ್ರಹ್ಲಾದರಾಜರು ನ್ಯಾಯನಿಷ್ಠೆಯಿಂದ ಸತ್ಯವನ್ನೇ ಎತ್ತಿಹಿಡಿದರು. ಅವರು ಅನೇಕ ಉದಾಹರಣೆಗಳನ್ನೂ ಪ್ರಮಾಣಗಳನ್ನೂ ವಿಮರ್ಶಿಸುತ್ತಾ ಕೊನೆಗೆ ಬ್ರಾಹ್ಮಣಕುಮಾರನು ಹೇಳಿದಂತೆ ಬ್ರಹ್ಮಜ್ಞಾನಿಯೇ ಶ್ರೇಷ್ಠ ಮತ್ತು ಪೂಜ್ಯ ಎಂದು ತೀರ್ಮಾನ ಹೇಳಿಬಿಟ್ಟರು! ಅದರ ಪರಿಣಾಮವೇನಾದೀತೆಂಬುದು ಅವರಿಗೆ ತಿಳಿದಿತ್ತು. ಆದರೂ ಅವರು ಸ್ವಾರ್ಥಕ್ಕಾಗಿ ಸತ್ಯ-ನ್ಯಾಯಗಳಿಗೆ ದ್ರೋಹ ಮಾಡದೇ ತಮ್ಮ ತೀರ್ಮಾನದಿಂದ ಪುತ್ರನು 'ತಲೆದಂಡ' ತೆರಬೇಕೆಂಬುದನ್ನೂ
ಲೆಕ್ಕಿಸದೆ, ಯೋಚಿಸದೆ ನಿರ್ಣಯವನ್ನು ಹೇಳಿ 'ಸತ್ಯಸಂಧ'ರೆಂಬ ತಮ್ಮ ಕೀರ್ತಿಯನ್ನು ಉಜ್ವಲಗೊಳಿಸಿದರು.
ಸರ್ವರೂ ಪ್ರಹ್ಲಾದರ ನಿರ್ಣಯವನ್ನಾಲಿಸಿ ದಿಬ್ಲ್ಯೂಢರಾದರು. ಅವರ ನ್ಯಾಯನಿಷ್ಠುರತೆಯನ್ನು ಕಂಡು ಹಾಡಿ, ಹೊಗಳಿ, ಹರಸಿದರು. ವಿರೋಚನ ದಿಗ್ಧಾಂತನಾದ. ಅವನ ಗರ್ವವೆಲ್ಲ ಪ್ರಹ್ಲಾದರ ಒಂದೇ ಮಾತಿನಿಂದ ಇಳಿದು ಹೋಯಿತು ನಿಬಂಧನೆಗೆ ತಕ್ಕಂತೆ ನಡೆಯಲೇಬೇಕಾಯಿತು. ಪ್ರಹ್ಲಾದರು ನಿರ್ವಿಕಾರಚಿತ್ತರಾಗಿ ಒರೆಯಿಂದ ಖಡ್ಗವನ್ನು ಹಿರಿದ ಬ್ರಾಹ್ಮಣಕುಮಾರನಿಗಿತ್ತು ವಿರೋಚನನ ತಲೆ ತೆಗೆಯಬಹುದೆಂದು ಹೇಳಿದರು! ಸಭಾಸದರು ಆಶ್ಚರ್ಯ, ಭಯದಿಂದ ಮುಂದೇನಾಗುವುದೋ ಎಂದು ನೋಡುತ್ತಿರುವಾಗ ಬ್ರಾಹ್ಮಣಕುಮಾರನು “ಮಹಾನುಭಾವ! ನಿನ್ನಂತಹವರು ಜಗತ್ತಿನಲ್ಲಿ ಸಿಗಲಾರರು. ನೀನು ಶ್ರೀಹರಿಯನ್ನೇ ಒಲಿಸಿಕೊಂಡ ಪರಮಭಕ್ತ, ಆದರ್ಶ ಬ್ರಹ್ಮಜ್ಞಾನಿ, ಸತ್ಯಸಂಧ, ನ್ಯಾಯದಾನನಿಪುಣ! ನಮ್ಮೆಲ್ಲರಿಗೂ ನೀನು ಆದರ್ಶ ಚಕ್ರವರ್ತಿ! ನಾನು ರಾಜಪುತ್ರನೊಡನೆ ವಾದಿಸಿದ್ದು ತಪ್ಪು ಎಂದು ಈಗ ಅನಿಸುತ್ತದೆ. ಅಹಿಂಸೆ, ಸರ್ವರ ಕ್ಷೇಮಚಿಂತನೆಯೂ ಬ್ರಾಹ್ಮಣನ ಧರ್ಮ! ಆದ್ದರಿಂದ ಸತ್ಯನಿಷ್ಠರಾದ ನಿಮ್ಮಂಥ ಮಹಾನುಭಾವರಿಗೆ ದುಃಖಪ್ರದವಾದ ಕಾರ್ಯ ಮಾಡಿದರೆ ಶ್ರೀಹರಿ ಎಂದಿಗೂ ಮೆಚ್ಚನು. ಮೇಲಾಗಿ ಬ್ರಾಹ್ಮಣನಿಗೆ ಕ್ಷಮಾಗುಣ ಅತ್ಯವಶ್ಯಕ! ನನ್ನ ಮಿತ್ರನಾದ ವಿರೋಚನನ್ನು ಸಂಹರಿಸುವುದು ಬ್ರಾಹ್ಮಣಧರ್ಮಕ್ಕೆ ವಿರುದ್ಧವಾದುದು. ನಿಮ್ಮ ನ್ಯಾಯನಿರ್ಣಯದಿಂದಲೇ ನನಗೆ 'ತಲೆದಂಡ ಬಂದಂತಾಗಿದೆ! ನೀವೂ ವಿರೋಚನನನ್ನು ಕ್ಷಮಿಸಬೇಕು” ಎಂದು ಪ್ರಾರ್ಥಿಸಿ ಕತ್ತಿಯನ್ನು ಪ್ರಹ್ಲಾದರ ಪಾದದಡಿಯಲ್ಲಿಟ್ಟು ವಿನೀತನಾಗಿ ನಿಂತನು. ಕೂಡಲೇ ಸಭಾಸದರೆಲ್ಲರೂ ಬ್ರಾಹ್ಮಣಕುಮಾರನ ಉದಾರಗುಣಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಸರ್ವರಿಗೂ ಪರಮಾನಂದವಾಯಿತು.
ಆಗ ಪ್ರಹ್ಲಾದರಾಜರು ನಸುನಗುತ್ತಾ ನೋಡಿದೆಯಾ ವಿರೋಚನ! ಯಾರು ಶ್ರೇಷ್ಠರೆಂದು ಈಗ ಅರ್ಥವಾಯಿತೇ? ಸಿರಿಸಂಪತ್ತು, ಸ್ಥಾನಮಾನ, ಅಧಿಕಾರ - ಇದಾವುದೂ ಶ್ರೇಷ್ಠತೆ-ಪೂಜ್ಯತೆಯನ್ನು ತಂದುಕೊಡಲಾರದು. ಎಲ್ಲದರಲ್ಲಿಯೂ ಭಗವಂತನಿದ್ದಾನೆಂಬ ದೃಢನಂಬಿಕೆ, ಬ್ರಹ್ಮಜ್ಞಾನ, ಶಮ-ದಮ, ಶಾಂತ್ಯಾದಿ ಸದ್ಗುಣಗಳೇ ಪೂಜ್ಯತೆಯನ್ನು ತಂದುಕೊಡುತ್ತವೆ. ಕುಮಾರ! ಇನ್ನು ಮುಂದಾದರೂ, ದೊಡ್ಡವರು-ಸಣ್ಣವರಲ್ಲಿ ಹೇಗೆ ವರ್ತಿಸಬೇಕು, ಹೇಗೆ ಮಾತನಾಡಬೇಕು - ಎಂಬುದನ್ನು ಈ ದೃಷ್ಟಾಂತದಿಂದ ಅರಿತು ಯೋಗ್ಯನಾಗಿ ಬಾಳು” ಎಂದು ಬುದ್ಧಿವಾದ ಹೇಳಿದರು.
“ಪ್ರಹ್ಲಾದೋ ವೈ ಕಾಯಾಧವಃ ಸ್ವಪುತ್ರಂ ವಿರೋಚನಂ ಅಪನ್ಯಧ” ಎಂಬ ವೇದವಚನವು ಈ ಕಥಾನಕವನ್ನು ಸೂಚಿಸುವುದು, ಈ ಒಂದು ಉದಾಹರಣೆಯು ಪ್ರಹ್ಲಾದರ ನಿಷ್ಪಕ್ಷಪಾತದೃಷ್ಟಿ, ನ್ಯಾಯ-ನಿಷ್ಟುರತೆಗಳಿಗೆ ಜ್ವಲಂತ
ಉದಾಹರಣೆಯಾಗಿವೆ.
ಹೀಗೆ ಪ್ರಹ್ಲಾದರಾಜರು ಶ್ರೀಹರಿಯ ಆಜ್ಞೆಯಂತೆ ಸತ್ಯ, ಧರ್ಮ, ನ್ಯಾಯಮಾರ್ಗದಿಂದ ರಾಜ್ಯಭಾರ ಮಾಡಿ ಸರ್ವರ ಗೌರವಾದರಗಳಿಗೆ ಪಾತ್ರರಾದರು. ಅವರ ರಾಜ್ಯಾಡಳಿತ ಕಾಲದಲ್ಲಿ ಸಮಸ್ತ ಪ್ರಜಾನಿಕರವೂ ಸವರ್ಣಾಶ್ರಮಗಳಿಗೆ ವಿಹಿತವಾದ ಕರ್ಮಾಚರಣ-ಧರ್ಮಾಚರಣರತರಾಗಿ, ಸತ್ಯ-ಧರ್ಮೋಪಾಸಕರಾಗಿ, ಸತ್ತತ್ಯಾಧ್ಯಯನ, ಯಜನ, ಯಾಜನಪ್ರವಚನಶೀಲರಾಗಿ, ಶೀಲಸಂಪನ್ನರಾಗಿ, ದೇವ-ದ್ವಿಜಗುರುಪೂಜಕರಾಗಿ, ಪರಸ್ಪರ ಸ್ನೇಹಸೌಹಾರ್ದದಿಂದ ಸನ್ಮಾರ್ಗಗಾಮಿಗಳಾಗಿ ಸುಖದಿಂದ ಜೀವನ ನಡೆಸುತ್ತಿದ್ದರು.
ಇಂತು ಶ್ರೀಪ್ರಹ್ಲಾದರಾಜರು ಮೂವತ್ತಾರು ಸಹಸ್ರ ವರ್ಷ ರಾಜ್ಯಭಾರ ಮಾಡಿ ಅನಂತರ ಪುತ್ರನಿಗೆ ರಾಜ್ಯವನ್ನೊಪ್ಪಿಸಿಕೊಟ್ಟು ಶ್ರೀಹರಿವರ್ಷಖಂಡದಲ್ಲಿ ಶ್ರೀನೃಸಿಂಹದೇವರನ್ನು ಉಪಾಸಿಸುತ್ತಾ ಸಾಧನ ಮಾಡಿಕೊಳ್ಳಹತ್ತಿದರು. ಭಾಗವತಾಗ್ರಣಿಗಳಾದ ಅವರು ಲೋಕಕಲ್ಯಾಣಾರ್ಥವಾಗಿ ಶ್ರೀನೃಸಿಂಹದೇವರನ್ನು ಕುರಿತು ತಪೋನಿರತನಾಗಿ ಹರಿವರ್ಷಖಂಡದಲ್ಲಿ ವಿರಾಜಿಸಿದರು.
ಯುಗಗಳುರುಳಿದವು. ಪ್ರಹ್ಲಾದರ ತರುವಾಯ ದೈತ್ಯಸಾಮ್ರಾಜ್ಯವನ್ನು ವಿರೋಚನನೂ ಅನಂತರ ಬಲಿಯೂ ಆಳಿದರು. ಈ ಬಲಿಚಕ್ರವರ್ತಿಯು ಶ್ರೀಹರಿ ಭಕ್ತನೂ ದಾನಶೂರನೂ ಆಗಿದ್ದನು. ದೈತ್ಯಗುರು ಶುಕ್ರಾಚಾರ್ಯರು ಬಲಿರಾಜನಿಂದ ಸರ್ವಜಿತ್ ಯಾಗ'ವನ್ನು ಮಾಡಿಸಿದ್ದಲ್ಲದೆ ಅವನಿಗೆ ಇಂದ್ರಪದವಿಯನ್ನು ಕೊಡಿಸಲು ಅವನ ಕೈಯಿಂದ ಒಂದು ನೂರು ಅಶ್ವಮೇಧ ಯಾಗವನ್ನು ಮಾಡಿಸಲು ಸಂಕಲ್ಪ ಮಾಡಿದರು. ಬಲಿರಾಜ ತೊಂಭತ್ತೊಂಭತ್ತು ಅಶ್ವಮೇಧಗಳನ್ನು ಮಾಡಿ ಮುಗಿಸಿದ. ಇನ್ನೊಂದು ಯಾಗ ಮುಗಿದರೆ ಅವನಿಗೆ ಇಂದ್ರಪದವಿಯು ಲಭ್ಯವಾಗುತ್ತಿತ್ತು. ಇಂದ್ರನು ತನ್ನ ಆಧಿಪತ್ಯಕ್ಕೆಲ್ಲಿ ಭಂಗ ಬರುವುದೋ ಎಂದು ಹೆದರಿ ದೇವತೆಗಳೊಡನೆ ಶ್ರೀಹರಿಗೆ ಶರಣು ಹೋದ. ಹರಿಯು ಇಂದ್ರನಿಗೆ ಅಭಯವಿತ್ತು ತಾನು ಪುತ್ರನಾಗಬೇಕೆಂದು ತಪಸ್ಸು ಮಾಡುತ್ತಿದ್ದ ಅದಿತಿದೇವಿಯ ಬಯಕೆಯನ್ನು ಪೂರ್ಣಮಾಡಲು ಶ್ರೀಹರಿಯು ಅವಳಲ್ಲಿ ವಾಮನರೂಪದಿಂದ ಅವತರಿಸಿದನು.
ಇತ್ತ ಬಲಿಚಕ್ರವರ್ತಿಯೂ ನೂರನೆಯ ಅಶ್ವಮೇಧಯಾಗವನ್ನು ಮಾಡುತ್ತಿರುವಾಗ ಅವನ ಯಾಗಶಾಲೆಗೆ ವಾಮರೂಪೀ ಶ್ರೀಹರಿಯು ಬಂದನು. ಧರೆಗಿಳಿದು ಬಂದ ಸೂರ್ಯನಂತೆ ತೇಜಸ್ವಿಯಾದ ವಟುರೂಪೀ ವಾಮನನನ್ನು ಕಂಡು ಬಲಿರಾಜ “ಸ್ವಾಮಿ ತಮಗೇನು ದಾನಬೇಕು ?” ಎಂದು ಕೋರಿದನು. ವಾಮನಮೂರ್ತಿ “ಮೂರು ಹೆಜ್ಜೆ ಭೂದಾನ ಕೊಡು” ಎಂದ. ಬಲಿರಾಜ ಸಂತೋಷದಿಂದ ದಾನ ಮಾಡಿದ. ಅದೇನಾಶ್ಚರ್ಯ! ಬಾಲಕನಂತಿದ್ದ ವಾಮನಮೂರ್ತಿ ತ್ರಿವಿಕ್ರಮನಾಗಿ ವಿರಾಟರೂಪ ತಾಳಿ ಒಂದು ಹೆಜ್ಜೆಯಿಂದ ಅಖಂಡ ಭೂಮಂಡಲವನ್ನೂ, ಎರಡನೆಯ ಪಾದದಿಂದ ಬ್ರಹ್ಮಲೋಕದವರೆಗಿನ ಸಮಸ್ತಲೋಕಗಳನ್ನೂ ಆಕ್ರಮಿಸಿ “ಮೂರನೆಯ ಪಾದಕ್ಕೆ ಸ್ಥಳವೆಲ್ಲಿ?” ಎಂದು ನಸುನಕ್ಕ ಬಲಿರಾಜ ವಾಮನಮೂರ್ತಿಗೆ ಸಾಷ್ಟಾಂಗವೆರಗಿ “ದೇವ! ನಿನ್ನ ಪವಿತ್ರ ಪಾದವನ್ನು ನನ್ನೀ ಶಿರದ ಮೇಲಿರಿಸು”ಎಂದು ಶಿರವೊಡ್ಡಿದ. ಅವನ ಭಕ್ತಿ, ದಾನಸೌಂಡುಗಳನ್ನು ಕಂಡ ತ್ರಿವಿಕ್ರಮದೇವ “ತಥಾಸ್ತು” ಎಂದು ಬಲಿಯನ್ನು ಪಾಶದಿಂದ ಬಂಧಿಸಿದ. ಅದೇ ವೇಳೆಗೆ ಈ ವಿಷಯವರಿತು ಪ್ರಹ್ಲಾದರಾಜನು ಹರಿವರ್ಷಖಂಡದಿಂದ ಧಾವಿಸಿಬಂದು ಈ ಎಲ್ಲ ಅದ್ಭುತವನ್ನು ಕಂಡು ಶ್ರೀಹರಿಗೆ ನಮಸ್ಕರಿಸಿ ಪ್ರಭು! ಸಿರಿಸಂಪತ್ತು ವಿದ್ವಾಂಸರನ್ನೂ ಮೋಹಗೊಳಿಸುವುದು, ನಮ್ಮ ಬಲಿಯ ಐಶ್ವರ್ಯವನ್ನು ಕಿತ್ತುಕೊಂಡು ನೀನು ಅವನಲ್ಲಿ ಮಹಾ ಅನುಗ್ರಹವನ್ನೇ ಮಾಡಿರುವೆ. ವತ್ಸ! ಬಲಿ, ನೀನು ನಿಜವಾಗಿ ಧನ್ಯ” ಎಂದು ಉದ್ಧರಿಸಿದರು. ಆಗ ಬ್ರಹ್ಮದೇವರು “ಸ್ವಾಮಿ, ನೀವು ಶತ್ರುಪಕ್ಷೀಯರೆಂದರಿತೂ ಬಲಿಯು ಸರ್ವೋತ್ತಮನಾದ ನಿನಗೆ ದಾನಮಾಡಿ ಧನ್ಯನಾಗಿದ್ದಾನೆ! ಅವನಲ್ಲಿ ಅನುಗ್ರಹ ಮಾಡಿ” ಎಂದು ಪ್ರಾರ್ಥಿಸಿದರು. ಮುಗುಳುನಗೆಯನ್ನು ಹೊರಸೂಸುತ್ತಾ ಶ್ರೀವಾಮನದೇವರು “ಚತುರಾನನ! ನನ್ನ ಪ್ರಿಯಭಕ್ತ ಪ್ರಹ್ಲಾದನ ಪೌತ್ರನಾದ ಈ ಬಲಿಯು ನನಗೆ ಅತಿಪ್ರಿಯನಾಗಿದ್ದಾನೆ. ನಾನು ಯಾರಲ್ಲಿ ಅನುಗ್ರಹ ಮಾಡುವೆನೋ ಅವರ ಐಶ್ವರ್ಯವನ್ನು ಹರಿಸುತ್ತೇನೆ. ಸರ್ವಲೋಕಗಳಿಗೂ ಪ್ರಭುವಾದ ನನಗೆ ದಾನಮಾಡಿದ ಈ ಬಲಿರಾಜನಿಗೆ ಮುಂದಿನ ಮನ್ವಂತರದಲ್ಲಿ ಇಂದ್ರಪದವನ್ನು ಅನುಗ್ರಹಿಸುತ್ತೇನೆ. ಅಲ್ಲಿಯವರೆಗೆ ಇವನು ಪಾತಾಳದಲ್ಲಿ ರಾಜ್ಯಭಾರ ಮಾಡುತ್ತಿರಲಿ. ಮುಂದಿನ ಮನ್ವಂತರದವರೆಗೆ ನಾನಿವನಿಗೆ ರಕ್ಷಕನಾಗಿ ಅವನ ಮನೆಯ ಬಾಗಿಲು ಕಾಯುತ್ತಿರುವೆನು. ಪ್ರಹ್ಲಾದ! ನಿನಗೆ ಆನಂದವಾಯಿತೆ ? ಬ್ರಹ್ಮದೇವ! ನಿನಗೂ ತೃಪ್ತಿ ತಾನೇ ?” ಎಂದು ಅಪ್ಪಣೆ ಮಾಡಲು, ಬಲಿ ಚಕ್ರವರ್ತಿಯ ಮಹಾಭಾಗ್ಯವನ್ನು ಕಂಡು ಅವನನ್ನು ಎಲ್ಲರೂ ಹೊಗಳಿದರು. ಬಲಿರಾಜ ಭಕ್ತಿನಮಾಂಗನಾಗಿ ಆನಂದಬಾಷ್ಪ ಸುರಿಸುತ್ತಾ “ಅನುಗೃಹೀತೋ ದೇವ” ಎಂದು ವಂದಿಸಿದ.
ಆಗ ಪ್ರಹ್ಲಾದರಾಜರು “ಪರಮಾತ್ಮ, ಭಕ್ತವತ್ಸಲ! ನೀನು ನನ್ನ ಮೊಮ್ಮಗನಲ್ಲಿ ಮಾಡಿರುವ ವಿಶೇಷಾನುಗ್ರಹವು ಅನ್ಯಾದೃಶವಾದುದು. ಹೀಗೆ ನೀನು ನನ್ನಲ್ಲೂ ಅನುಗ್ರಹ ಮಾಡಲಿಲ್ಲ! ಪ್ರಭು! ನಾನು ಅಷ್ಟು ಪಾಪಿಯೆ? ಇವನಲ್ಲಿ ಮಾಡಿದ “ಭಕ್ತರಾಜ! ನನ್ನ ಪ್ರೀತಿಯ ಪ್ರಹ್ಲಾದ! ಎಂತಹ ಮಾತನಾಡುತ್ತಿರುವೆ ? ನೀನು ಪಾಪಿಯಾಗಲು ಸಾಧ್ಯವೇ ? ನಿನ್ನ ಹೆಸರು ಹೇಳಿ ಅನುಗ್ರಹ ನನ್ನಲ್ಲೇಕೆ ಮಾಡಲಿಲ್ಲ?” ಎಂದು ಖಿನ್ನರಾಗಿ ವಿಜ್ಞಾಪಿಸಿದರು. ಆಗ ಶ್ರೀವಾಮನರೂಪೀ ಹರಿಯು ನಸುನಗುತ್ತಾ ಸ್ಮರಿಸಿದವರೆಲ್ಲರ ಕರ್ಮಬಂಧವೇ ಪರಿಹಾರವಾಗುವುದೆಂದು ಅಂದು ನಾನು ನಿನಗೆ ವರವಿತ್ತಿಲ್ಲವೆ? ವತ್ಸ! ನಿನ್ನಲ್ಲಿ ಮಾಡಿರುವ ಅನುಗ್ರಹ ಮತ್ತಾರಲ್ಲೂ ಮಾಡಿಲ್ಲವಲ್ಲಪ್ಪ! ನೀನು ನನ್ನ ಭಕ್ತರಲ್ಲಿ ಅಗ್ರಗಣ್ಯನಾಗಿರುವೆ. ಈ ಬಲಿರಾಜನು ನಿನ್ನ ಪತ್ರನೆಂದೇ ಇವನಲ್ಲಿ ಈ ತೆರನಾದ ವಿಶೇಷಾನುಗ್ರಹ ಮಾಡಿದ್ದೇನೆ!” ಎಂದು ಅಪ್ಪಣೆ ಮಾಡಿದನು. ಆಗ ಸಕಲರೂ ಪ್ರಹ್ಲಾದರ ಜಯಜಯ ಮಾಡಿ ಶ್ಲಾಘಿಸಿದರು.
ಪರಮಾನಂದಭರಿತರಾದ ಪ್ರಹ್ಲಾದರಾಜರು ಶ್ರೀಹರಿಗೆ ನಮಿಸಿ “ದೇವ! ನಾನು ನಿನ್ನ ಆನಂದಧಾಮದಲ್ಲಿ ಸದಾ ನಿನ್ನನ್ನು ಕಾಣುತ್ತಾ ಸುಖಿಸುವ ಭಾಗ್ಯ ಯಾವಾಗ ನೀಡುವೆ ?” ಎಂದು ಪ್ರಾರ್ಥಿಸಲು ಶ್ರೀಹರಿಯು ಮಂದಹಾಸ |
ಬೀರುತ್ತಾ –
“ಯದದೈಧಸಮಾತ್ಮನೀನಮನಘ! ಯಚ್ಚಾಂತಿಮೇಚಾಂತಿಮೇ !!”
'ಪಾಪಲೇಪವಿಲ್ಲದ ಪ್ರಹ್ಲಾದ! ವತ್ಸ! ಅಂದು ನೀನೇ ಬಯಸಿ ವರ ಪಡೆದಂತೆ ನೀನು ಇನ್ನೂ ಮೂರು ಜನ್ಮಗಳನ್ನೇ ನನ್ನನ್ನು ವಿಶೇಷ ರೀತಿಯಿಂದ ಆರಾಧಿಸಿ ಸಂತೋಷಪಡಿಸಬೇಕಾಗಿದೆ! ಕೇಳು ಕುಮಾರ! ಕೊನೆಯ ಯುಗದಲ್ಲಿ ನಿನ್ನ ಕೊನೆಯ ಅವತಾರದಲ್ಲಿ ಕೊನೆಯ ಆಶ್ರಮದಿಂದ ನನ್ನ ಪೂಜೆಗೆ ವಿಘ್ನವಾಯಿತೆಂದು ಯಾವ ಬ್ರಹ್ಮದೇವನ ಶಾಪದಿಂದ ನೀನು ಅವತರಿಸಬೇಕಾಯಿತೋ ಅಂಥಾ ನನ್ನ ಸಂಬಂಧಿಯಾದ ಬ್ರಹ್ಮದೇವರ ಕರಾರ್ಚಿತ ಶ್ರೀಮೂಲರಾಮಚಂದ್ರ ಪ್ರತಿಮೆಯನ್ನು (ನನ್ನನ್ನು) ಬಹುಕಾಲ ಪೂಜಿಸಿ ವೈದಿಕ ಸದೈಷ್ಣವ ಸಿದ್ಧಾಂತವನ್ನು ಪ್ರತಿಷ್ಠಾಪಿಸಿ, ಜನತೆಗೆ ಸತ್ತತ್ವರಹಸ್ಯಗಳನ್ನುಪದೇಶಿಸಿ, ಆಪಂಡಿತಪಾಮರರು, ದೀನ-ದಲಿತ ಜನರ ಉದ್ದಾರ ಮಾಡಿ, ಅಖಂಡ ವಿಶ್ವದ ಕಲ್ಯಾಣವೆಸಗಿ, ಅನಿತರ ಸಾಧಾರಣ ಕೀರ್ತಿಪ್ರತಿಷ್ಠೆಗಳನ್ನು ಗಳಿಸಿ, ನಿನ್ನ ಮೂಲರೂಪ ಸೇರಿ, ಅನಂತರ ಬ್ರಹ್ಮದೇವನೊಡನೆ ಮುಕ್ತಿಯೋಗ್ಯರಾದ ನಿನ್ನ ಆಶ್ರಿತ ಭಕ್ತ ಸಮುದಾಯದೊಡನೆ ನನ್ನ ಸನ್ನಿಧಿಗೆ ಬಂದು ಸೇರಿ ನನ್ನ ಪರಮಾನುಗ್ರಹಕ್ಕೆ ಪಾತ್ರನಾಗಿ ಸುಖಿಸುವೆ!” ಎಂದು ಆಜ್ಞಾಪಿಸಿ ಅಭಯಪ್ರದಾನ ಮಾಡಿದರು. ಪರಮಾನಂದತುಂದಿಲರಾದ ಪ್ರಹ್ಲಾದರಾಜರು ಶ್ರೀಹರಿಯನ್ನು ಬಗೆಬಗೆಯಿಂದ ಸ್ತುತಿಸಿ, ನಮಸ್ಕರಿಸಿ, ಬಲಿರಾಜನನ್ನು ಆಶೀರ್ವದಿಸಿ ಹರಿವರ್ಷಖಂಡಕ್ಕೆ ತೆರಳಿದರು.