
ಕಲಿಯುಗ - ಕಲ್ಪತರು
ಎರಡನೆಯ ಉಲ್ಲಾಸ ಶ್ರೀಹರಿಭಕ್ತಾಗ್ರಣಿ ಶ್ರೀಪ್ರಹ್ಲಾದರಾಜರು
ರಚಿಸಿದವರು ರಾಜಾ, ಎಸ್. ಗುರುರಾಜಾಚಾರ್ಯರು
೧೪. ಪ್ರಹ್ಲಾದರ ಕಾರುಣ್ಯಾತಿಶಯ
ಶಂಡಾಮರ್ಕರು ದೈತ್ಯರಾಜ ಹಿರಣ್ಯಕಶ್ಯಪನ ಅರಮನೆಗೆ ಬಂದು ಎಲ್ಲರ ವಿಚಾರಗಳನ್ನೂ ನಿವೇದಿಸಿದರು.
ಇದರಿಂದ ಹಿರಣ್ಯಕಶ್ಯಪನಿಗೆ ಅಸಾಧ್ಯ ಕ್ರೋಧವುಂಟಾಯಿತು. ಈ ಕುಲಕಲಂಕನಿಂದ ದೈತ್ಯಕುಲವೇ ನಾಶವಾಗುವುದೊಬ ಭಯವುಂಟಾಯಿತು. ಆಗವನು ಪುರೋಹಿತರಾದ ಗುರುಪುತ್ರರನ್ನು ಪ್ರಹ್ಲಾದನ ನಾಶಕ್ಕೆ ಏನಾದರೂ ಉಪಾಯವನ್ನು ಹೇಳಿ ಎನ್ನಲು ಶಂಡಾಮರ್ಕರು “ದೈತ್ಯರಾಜ! ಆಭಿಚಾರಿಕ ಕೃತ್ತಿಯನ್ನು ನಿರ್ಮಿಸಿ ಪ್ರಹ್ಲಾದನ ಮೇಲೆ ಬಿಟ್ಟರೆ ಅದು ನಿಶ್ಚಯವಾಗಿ ರಾಜಕುಮಾರರನ್ನು ನಾಶಪಡಿಸುವುದು” ಎಂದು ವಿಜ್ಞಾಪಿಸಿದರು.
ಹಿರಣ್ಯಕಶ್ಯಪು : ದೈತ್ಯಪುರೋಹಿತರೇ, ಬೇಗ ಈ ಪ್ರಹ್ಲಾದನನ್ನು ಸಂಹರಿಸಲು ಆಭಿಚಾರಿಕ ಕೃತ್ತಿಯನ್ನು ಉತ್ಪತ್ತಿಮಾಡಿರಿ! ತಡಮಾಡಬೇಡಿರಿ.
ಹಿರಣ್ಯಕಶ್ಯಪನ ಮಾತನ್ನಾಲಿಸಿ ಶಂಡಾಮರ್ಕರು ಹಾಗೆಯೇ ಮಾಡುವುದಾಗಿ ಹೇಳಿ ತಮ್ಮ ಪಾಠಶಾಲೆಗೆ ಬಂದು ನಯ-ವಿನಯವಾಗಿ ಪ್ರಹ್ಲಾದನಿಗೆ ಉಪದೇಶ ಮಾಡಿದರು. ಆದರೆ ಅದರಿಂದ ಏನೂ ಪ್ರಯೋಜನವಾಗಲಿಲ್ಲ! ಆಗ ಅವರು ಕೋಪದಿಂದ “ಎಲವೋ ದುರ್ಬುದ್ದಿಯುಳ್ಳ ಬಾಲಕನೆ! ನಾವಿಷ್ಟು ಹೇಳಿದರೂ ನೀನು ವಿಷ್ಣುವೆಂಬ ಮೋಹಗ್ರಹವನ್ನು (ಹರಿಭಕ್ತಿಯನ್ನು) ಬಿಡದಿದ್ದರೆ, ನಿನ್ನನ್ನು ಸಂಹರಿಸಲು ಕೃತ್ತಿಯನ್ನು ಸೃಜಿಸಬೇಕಾದೀತು! ಜೋಕೆ” ಎಂದು ಎಚ್ಚರಿಸಿದರು. ಅವರ ಮಾತನ್ನು ಕೇಳಿ ಪ್ರಹ್ಲಾದನು ನಿರ್ಭಯವಾಗಿ “ಆಚಾರ್ಯರೇ, ಜೀವನನ್ನು ಕೊಲ್ಲುವರಾರು ? ರಕ್ಷಿಸುವರಾರು? ಸರ್ವಸ್ವತಂತ್ರನಾದ, ಸ್ವಾಮಿಯಾದ ಶ್ರೀಹರಿಯ ಸಂಕಲ್ಪಕ್ಕೆ ವಿರುದ್ಧವಾಗಿ ಅಸ್ವತಂತ್ರಜೀವರು, ಏನು ತಾನೆ ಮಾಡಬಲ್ಲರು?” ಎಂದು ಹೇಳಿದನು.
ಪ್ರಹ್ಲಾದನ ಮಾತು ಕೇಳಿ ಕೋಪ-ಆಶ್ಚರ್ಯಗಳಿಂದ ಯುಕ್ತರಾದ ರಾಜಪುರೋಹಿತರು ಪ್ರಹ್ಲಾದನ ಸಂಹಾರಕ್ಕಾಗಿ ಅಭಿಚಾರಿಕ ಕೃತ್ತಿಯನ್ನು ಸೃಷ್ಟಿಸಿ ಪ್ರಹ್ಲಾದನ ಮೇಲೆ ಬಿಟ್ಟರು.
ಬೆಂಕಿಯ ಭಯಂಕರ ಜ್ವಾಲೆಯಂತೆ ಪ್ರಜ್ವಲಿಸುವ ಕೃತಿಯು ತನ್ನ ಪಾದಾಘಾತದಿಂದ ಭೂಮಿಯನ್ನೇ ಕಂಪಿಸುತ್ತಾ ಕ್ರೋಧದಿಂದ ಪ್ರಹ್ಲಾದರಾಜನ ಪ್ರಾಣಹರಣಕ್ಕಾಗಿ ಧಾವಿಸಿ ತ್ರಿಶೂಲದಿಂದ ಪ್ರಹ್ಲಾದನ ಎದೆಯನ್ನು ತಿವಿಯಿತು! ಆಶ್ಚರ್ಯ! ಬಾಲಪ್ರಹ್ಲಾದನ ವಕ್ಷಃಸ್ಥಳ ಸ್ಪರ್ಶಮಾತ್ರದಿಂದ ತ್ರಿಶೂಲವೇ ತುಂಡುತುಂಡಾಯಿತು!! ಬಾಲಪ್ರಹ್ಲಾದ ಶ್ರೀಹರಿಧ್ಯಾನಪರವಾಗಿ ನಿಶ್ಚಲವಾಗಿ ನಸುನಗುತ್ತಾ ನಿಂತಿದ್ದಾನೆ. ಅದನ್ನು ಕಂಡು ಶಂಡಾಮರ್ಕರು ಮೂಕವಿಸ್ಮಿತರಾದರು.
ನಿಜ, ಶ್ರೀಹರಿಯು ಯಾವ ಮಹಾನುಭಾವರ ಹೃದಯಕಮಲದಲ್ಲಿ ಸತತವೂ ನಲಿಯುತ್ತಿರುವನೋ, ಯಾರ ಹೃದಯದಲ್ಲಿ ಜೀವೋತ್ತಮರೂ, ಜಗತ್ರಾಣರೂ ಆದ ಶ್ರೀಮುಖ್ಯಪ್ರಾಣದೇವರು ಸಂತತ ಸನ್ನಿಧಾನದಿಂದ ಸಂಶೋಧಿಸುವರೋ ಅಂಥವರಿಗೆ ಯಾರಿಂದ ತಾನೇ ಏನು ಅಪಾಯವಾಗಬಲ್ಲದು?
ಯಾನವಾಯಿ ಭಗವಾನ್ ಹೃದ್ಯಾಸೇ ಹರಿರೀಶ್ವರಃ |
ಭಂಗೋ ಭವತಿ ವಜ್ರಸ್ಯ ತತ್ರ ಶೂಲಸ್ಯ ಕಾ ಕಥಾ? |
ಯಾರ ಹೃದಯದಲ್ಲಿ ಸರ್ವೇಶ್ವರನಾದ ಶ್ರೀಮನ್ನಾರಾಯಣನು ಸರ್ವದಾ ಬಿಡದೆ ವಾಸಿಸುವನೋ, ಅಂಥವರ ಮೇಲೆ ವಜ್ರಾಯುಧವನ್ನು ಪ್ರಯೋಗಿಸಿದರೂ ಅದು ಭಗವದ್ಭಕ್ತರನ್ನೇನು ಮಾಡಬಲ್ಲದು ? ಹಾಗೆ ಪ್ರಯೋಗಿಸಿದ ವಜ್ರಾಯುಧವೇ ಚೂರುಚೂರಾಗುವುದೆಂದ ಮೇಲೆ ಇನ್ನು ಕೇವಲ ಸಾಮಾನ್ಯವಾದ ಕೃತಿಯ ಶೂಲವು ಭಗ್ನವಾಯಿತೆಂದು ಹೇಳುವುದೇನಿದೆ?
ದೈತ್ಯರಾಜನ ಅಪ್ಪಣೆಯಂತೆ ಶಂಡಾರ್ಕರು ನಿರ್ದಯರಾಗಿ ಪಾಪರಹಿತರೂ, ಭಗವದ್ದಕ್ತರೂ ಆದ ಬಾಲಪ್ರಹ್ಲಾದರನ್ನು ಸಂಹರಿಸಲು ಭಯಂಕರವಾದ ಆಭಿಚಾರಿಕ ಕೃತ್ತಿಯನ್ನು ಉತ್ಪಾದಿಸಿ ಪ್ರಹ್ಲಾದರ ಮೇಲೆ ಪ್ರಯೋಗಿಸಿದ್ದರು. ಆದರೆ ಅದು ಪ್ರಹ್ಲಾದರನ್ನು ನಾಶಪಡಿಸಲು ಅಶಕ್ತವಾಯಿತು. ಆಗ ಆ ಕೃತಿಯು ತನ್ನನ್ನು ಸೃಜಿಸಿ ಪ್ರಹ್ಲಾದರ ಮೇಲೆ ಬಿಟ್ಟ ಪುರೋಹಿತ ಶಂಡಾಮರ್ಕರ ಮೇಲೆಯೇ ತಿರುಗೆರಗಿತು. ಭಯಂಕರವಾದ ಆ ಕೃತಿಯ ಜ್ವಾಲೆಯಲ್ಲಿ ದಹಿಸಿಹೋಗುತ್ತಿರುವ ಪುರೋಹಿತರು ಅದರಿಂದ ಪಾರಾಗಲು ಸಾಧ್ಯವಿಲ್ಲದೆ ಹಾಹಾಕಾರ ಮಾಡತೊಡಗಿದರು. ಅದನ್ನು ಕಂಡು ದಯಾಳುಗಳಾದ ಪ್ರಹ್ಲಾದರ ಹೃದಯವು ಕರಗಿ ಕಾರುಣ್ಯಪೂರ್ಣವಾಯಿತು. “ಸರ್ವೇಜನಾಸ್ಸುಖಿನೋ ಭವಂತು” ಎಂಬ ಮಂತ್ರವನ್ನೇ ಸದಾ ಜಪಿಸುವ ಹರಿಭಕ್ತ ಪ್ರಹ್ಲಾದರು ತಮ್ಮ ನಾಶಕ್ಕಾಗಿ ಪ್ರಯತ್ನಿಸಿದ ಗುರುಗಳಾದ ಶಂಡಾಮರ್ಕರ ಕಷ್ಟವನ್ನು ಕಂಡು ಸಹಿಸಲಾಗಲಿಲ್ಲ. ಅವರು ನಾಶವಾಗುತ್ತಿರುವುದನ್ನು ನೋಡದಾದರು. ಆ ಮಹಾತ್ಮರ ಹೃದಯ ಪುರೋಹಿತರನ್ನು ರಕ್ಷಿಸಲು ತವಕಗೊಂಡಿತು. ಪ್ರಹ್ಲಾದರು ಅತ್ಯಂತ ದಯಾಪೂರ್ಣರಾಗಿ “ಹೇ, ಕೃಷ್ಣ, ಅನಂತ, ಶ್ರೀಹರಿ, ಕಾಪಾಡು, ಕಾಪಾಡು. ನನ್ನ ಕಾರಣವಾಗಿ ಇವರು ನಾಶವಾಗುವುದನ್ನು ನಾನು ಸಹಿಸಲಾರೆ, ಪ್ರಭು. ಇವರನ್ನು ರಕ್ಷಿಸು ತಂದೆ” ಎಂದು ಹೃತ್ತೂರ್ವಕವಾಗಿ ಪ್ರಾರ್ಥಿಸಿದರು.
ಇಂತು ಅತಿಭಕ್ತಿಯಿಂದ ಪ್ರಹ್ಲಾದರು ಭಗವಂತನನ್ನು ಪ್ರಾರ್ಥಿಸುತ್ತಾ ಪುರೋಹಿತರನ್ನು ಸ್ಪರ್ಶಿಸಿದರು. ಅಹಹ! ಏನದ್ಭುತ! ಪ್ರಹ್ಲಾದರ ಕರಸ್ಪರ್ಶಮಾತ್ರದಿಂದ ಅಗ್ನಿಜ್ವಾಲೆಯ ಭೀಕರ ಯಾತನೆಯಿಂದ ಮರಣೋನ್ಮುಖರಾಗಿದ್ದ ಶಂಡಾಮರ್ಕರಿಗೆ ಅಮೃತಸ್ಪರ್ಶವಾದಂತಾಗಿ ಎಲ್ಲಾ ಯಾತನೆಗಳೂ ಮಾಯವಾಗಿ ಮೊದಲಿನಂತೆಯೇ ಆರೋಗ್ಯಯುಕ್ತರಾಗಿ ಆನಂದದಿಂದ ನಲಿಯಹತ್ತಿದರು.
ಈ ಅದ್ಭುತ ಪವಾಡವನ್ನು ಕಣ್ಣಾರೆ ಕಂಡು ಅನುಭವಿಸಿದ ಪುರೋಹಿತರು ಆಶ್ಚರ್ಯಚಕಿತರಾದರು. ಆಗ ಅವರ ಮನದಲ್ಲಿ ಪ್ರಹ್ಲಾದರ ಬಗ್ಗೆ ಆದರ ಮತ್ತು ವಿಶೇಷ ಗೌರವಬುದ್ದಿಯುಂಟಾಯಿತು. ವಿನಯಪೂರ್ವಕವಾಗಿ ತಮ್ಮೆದುರು ನಿಂತಿರುವ ಪ್ರಹ್ಲಾದರನ್ನು ಕಂಡು ಕೃತಜ್ಞತೆಯಿಂದ ತುಂಬಿದ ಹೃದಯದಿಂದ -
ದೀರ್ಘಾಯು,ಪ್ರತಿಹತೋ ಬಲವೀರ್ಯಸಮನ್ವಿತಃ |
ಪುತ್ರಪೌತ್ರಧನೈಶ್ಚರ್ಯ್ಕೆಯರ್ು ವತ್ಸ ಭವೋತ್ತಮಃ || - ವಿಷ್ಣುಪುರಾಣ
“ಕುಮಾರ, ಪ್ರಹ್ಲಾದ! ನೀನು ಪರಮಶ್ರೇಷ್ಠನಾಗಿದ್ದೀಯೆ. ನೀನು ದೀರ್ಘಾಯುವಾಗಿ, ಅಪ್ರತಿಹತನಾಗಿ, ಬಲವೀರ್ಯಗಳಿಂದ ಯುಕ್ತನಾಗಿ, ಪುತ್ರಪೌತ್ರರಿಂದಲೂ, ಸಿರಿಸಂಪತ್ತುಗಳಿಂದಲೂ ಕಂಗೊಳಿಸಿ ಉತ್ತಮನೆಂದು ಕೀರ್ತಿ ಗಳಿಸಿ ರಾಜಿಸು” ಎಂದು ಆಶೀರ್ವದಿಸಿದರು.
ಅನಂತರ ಹಿರಣ್ಯಕಶ್ಯಪನಿಗೆ ನಡೆದ ಸಮಸ್ತ ವಿಚಾರಗಳನ್ನೂ ನಿವೇದಿಸಿ “ಪ್ರಹ್ಲಾದನು ಮಹಾನುಭಾವ, ಅವನನ್ನು ಕೊಲ್ಲುವುದು ಯಾರಿಂದಲೂ ಸಾಧ್ಯವಿಲ್ಲ. ನಮ್ಮನ್ನೇ ಅವನುಕಾಪಾಡಿದ ಕರುಣಾಮೂರ್ತಿ” ಎಂದು ಹೇಳಿ ಮನೆಗೆ ತೆರಳಿದರು.