ಕಲಿಯುಗ - ಕಲ್ಪತರು
ಅನುಬಂಧ
ಬೃಂದಾವನಪ್ರವೇಶಾನಂತರ ಮಹಿಮೆಗಳು
೭. ಸ್ಥಾನ ಬೇಡಿದ ಮುನಿಗೆ ದಿನವಿತ್ತರು
ಶ್ರೀರಾಯರು ಅನೇಕ ವರ್ತುಲಗಳಲ್ಲಿ, ಅನೇಕ ರೂಪವಾಗಿ ತಮ್ಮ ಮಹಿಮೆಯನ್ನು ಪ್ರಕಟಗೊಳಿಸಿದ್ದಾರೆ. ರಾಜ- ಮಹರಾಜ-ಚಕ್ರವರ್ತಿ, ಪಾಳೆಗಾರ, ಸಿರಿವಂತ, ಬಡವ-ಬಲ್ಲಿದರೆಂಬ ಭೇದವಿಲ್ಲದೆ ಎಲ್ಲ ಕಡೆ ಮಹಿಮೆ ತೋರಿದ್ದಾರೆ, ತೋರುತ್ತಿದ್ದಾರೆ. ಬೃಂದಾವನ ಪ್ರವೇಶಮಾಡಿದ ೧೯೦ ವರ್ಷಗಳ ನಂತರ ತಮ್ಮ ಪೂರ್ವಾಶ್ರಮ ವಂಶೀಕರೂ, ಪೀಠಾಧೀಶರೂ ಆದ ಮಹನೀಯರಲ್ಲಿ ಮಾಡಿದ ಅನುಗ್ರಹ, ತೋರಿದ ಮಹಿಮೆಗಳು ಅದ್ಭುತರಮ್ಯವಾಗಿದೆ.
ಈ ಕಥಾನಕವು ನಡೆದ ವೇಳೆಗಾಗಲೇ ಶ್ರೀಮದಾಚಾರರ ಮಹಾಸಂಸ್ಥಾನದಲ್ಲಿ ಸುಬೋಧೇಂದ್ರರು ಮತ್ತು ಶ್ರೀಸುಜನೇಂದ್ರರು (ಕ್ರಿ.ಶ. ೧೮೦೭-೧೮೨೬) ವಿರಾಜಿಸಿ ಅಗಾಧಪಾಂಡಿತ್ಯಾದಿಗಳಿಂದ ಲೋಕಕಲ್ಯಾಣಮಾಡಿದರು. ತರುವಾಯ ಶ್ರೀಸುಜ್ಞಾನೇಂದ್ರ ತೀರ್ಥರೆಂಬ ಮಹಾತ್ಮರು ಪೀಠಾಧೀಶರಾಗಿದ್ದರು. ಇವರು ರಾಯರ ಮರಿಮಕ್ಕಳಾದ ಶ್ರೀವಾದೀಂದ್ರತೀರ್ಥರ ಪೂರ್ವಾಶ್ರಮ ಪುತ್ರರೂ ಪೀಠಾಧೀಶರೂ ಆದ ಶ್ರೀಧೀರೇಂದ್ರತೀರ್ಥರ ಮರಿಮಕ್ಕಳು. ಪೂರ್ವಾಶ್ರಮದ ಹೆಸರು ರಾಘವೇಂದ್ರಾಚಾರ್ಯರೆಂದು. ಇವರು ಶ್ರೀಸುಜ್ಞಾನೇಂದ್ರತೀರ್ಥರೆಂಬ ಹೆಸರಿನಿಂದ ಕ್ರಿ.ಶ. ೧೮೩೬ರಿಂದ ೧೮೬೧ರವರೆಗೆ ಸರ್ವಜ್ಞಸಿಂಹಾಸನವನ್ನಾಳಿದ ಮಹನೀಯರು.
ಶ್ರೀಗಳವರು ನಾಲ್ಕು ಶಾಸ್ತ್ರಗಳಲ್ಲಿ ಪ್ರಕಾಂಡಪಂಡಿತರಾಗಿದ್ದರು. ಇವರಲ್ಲಿ ಅನೇಕ ಶಿಷ್ಯರು ನ್ಯಾಯವೇದಾಂತಾದಿಶಾಸ್ತ್ರಗಳನ್ನು ಅಧ್ಯಯನಮಾಡಿ ಶ್ರೇಷ್ಠಪಂಡಿತರೆನಿಸಿದ್ದರು. ಶ್ರೀಮದಾಚಾರ್ಯರ ಸಚ್ಛಾಸ್ತ್ರವನ್ನು ಮತ್ತು ಪರಿಮಳಸಹಿತ ನ್ಯಾಯಸುಧಾ ಹಾಗೂ ಚಂದ್ರಿಕಾಪ್ರಕಾಶಾದಿ ಉದ್ಧಂಥಗಳನ್ನು ೧೯ ಸಲ ಪಾಠಹೇಳಿ ಮಂಗಳಮಾಡಿದ್ದರು. ಅರ್ವಾಚೀನ ಪಂಡಿತರೊಬ್ಬರು “ಚಂದ್ರಿಕಾ” ಗ್ರಂಥವನ್ನು ದೂಷಿಸಿ ಗ್ರಂಥರಚನೆಮಾಡಿದಾಗ ಶ್ರೀಗಳವರು ಆಗ್ರಂಥವನ್ನು ಶತಶಃ ಖಂಡಿಸಿ “ಚಂದ್ರಿಕಾಭೂಷಣಮ್ ಎಂಬ ಅದ್ವಿತೀಯ ಗ್ರಂಥವನ್ನು ರಚಿಸಿ ಶ್ರೀರಾಯರಿಗೆ ಸಮರ್ಪಿಸಿದ್ದರು ಶ್ರೀಗಳವರು ಮಹಾತಪಸ್ವಿಗಳಾಗಿದ್ದರು. ಅವರಿಗೆ ಅಷ್ಟಮಹಾಮಂತ್ರಗಳು, ಶ್ರೀರಾಘವೇಂದ್ರ ಅಷ್ಟಾಕ್ಷರಮಂತ್ರಗಳು ಸಿದ್ಧಿಸಿದ್ದವು. ಶ್ರೀಯವರ ತಪಶಕ್ತಿ, ಯೋಗಸಿದ್ಧಿಗಳು ಪ್ರಕಟವಾದ ಬಗೆ ಸ್ವಾರಸ್ಯವಾಗಿದೆ.
ಒಂದು ದಿನ ನಂಜನಗೂಡಿನಲ್ಲಿ ಶ್ರೀಗಳವರು ಮಹಾಮಂತ್ರಗಳ, ರಾಯರ ಅಷ್ಟಾಕ್ಷರ ಜಪವನ್ನು ಮುಗಿಸಿ ಕಣ್ಣು ತೆರೆದಾಗ ಅವರ ದೃಷ್ಟಿ ಧರ್ಮ-ಕರ್ಮ ಸಂಯೋಗದಿಂದ ತಮ್ಮ ಮುಂದೆ ಕುಳಿತಿದ್ದ ಒಂದು ಗುಬ್ಬಚ್ಚಿಯ ಮೇಲೆ ಬಿದ್ದಿತು. ಆಶ್ಚರ್ಯ! ಆ ಕೂಡಲೇ ಆ ಗುಬ್ಬಚ್ಚಿಯು ಧಗಧಗನೆ ಉರಿದು ಭಸ್ಮವಾಗಿಹೋಯಿತು! ಅಲ್ಲಿ ಉಪಸ್ಥಿತರಿದ್ದವರು ಅದನ್ನು ಕಂಡು ಶ್ರೀಗಳು ಮಹಾತಪಸ್ವಿಗಳೆಂದು ಕೊಂಡಾಡಿದರು. ಒಂದು ಗುಬ್ಬಿಯು ತಮ್ಮಿಂದಾಗಿ ಮೃತವಾಯಿತೆಂದು ಶ್ರೀಗಳವರು ದುಃಖಿಸಿದರು. ಅಂದು ಅವರು ಭಿಕ್ಷೆಯನ್ನು ಸ್ವೀಕರಿಸದೆ ಹೀಗಾಯಿತಲ್ಲಾ ಎಂದು ದುಃಖಿಸಿದರು. ಅಂದು ಅವರು ಭಿಕ್ಷೆಯನ್ನು ಸ್ವೀಕರಿಸದೆ ಹೀಗಾಯಿತಲ್ಲಾ ಎಂದು ಶ್ರೀಹರಿವಾಯು ಗುರುರಾಜರಲ್ಲಿ ಪ್ರಾರ್ಥಿಸಿ ಉಪವಾಸಮಾಡಿದರು. ಅಂದು ರಾತ್ರಿ ಸ್ವಪ್ನದಲ್ಲಿ ಶ್ರೀರಾಯರು ದರ್ಶನವಿತ್ತು, “ವತ್ಥ, ಚಿಂತಿಸಬೇಡ. ನೀನು ಓರ್ವ ಸುಜೀವಿಗೆ ಸದ್ಧತಿಯಾಗಲು ಕಾರಣನಾಗಿದ್ದೀಯೇ! ಈಗ ಕೆಲವರ್ಷಗಳ ಹಿಂದೆ ಯೋಗಭ್ರಷ್ಟ ಸಾತ್ವಿಕಜೀವಿಯೊಬ್ಬನು ಸರ್ಪಜನ್ಮತಾಳಿ ನಮ್ಮನ್ನು ಸದ್ಗತಿಗಾಗಿ ಸೇವಿಸಿದಾಗ ನಾವು ಮುಂದೆ ಪಕ್ಷಿರೂಪದಲ್ಲಿದ್ದಾಗ ನಿನ್ನಿಂದ ಅವನಿಗೆ ಸದ್ಗತಿಯಾಗುವುದೆಂದು ಹೇಳಿದ್ದೆವು. ಇಂದು ಅದು ಸತ್ಯವಾಗಿ ಘಟಿಸಿತು! ಆತನಿಗೆ ಸದ್ಧತಿಯಾಗುವುದು. ಈ ಕಾರಣದಿಂದಲೇ ನಾವು ನಿನಗೆ ತಪಸ್ಸಿದ್ದಿ ಮಾಡಿಸಿದ್ದೇವೆ. ಇನ್ನು ಮುಂದೆ ನೀನು ತೆರೆಮರೆಯಲ್ಲಿ ಆತ್ಮೀಕವನ್ನು ಜರುಗಿಸು” ಎಂದು ಅಪ್ಪಣೆ ಮಾಡಿದರು. ಮರುದಿನದಿಂದ ಗುರುರಾಜರು ಆಜ್ಞಾಪಿಸಿದಂತೆ ಶ್ರೀಸುಜ್ಞಾನೇಂದ್ರತೀರ್ಥರು ಅಕ-ಜಪ-ತಪಾದನುಷ್ಠಾನವನ್ನು ತೆರೆಯ ಮರೆಯಲ್ಲಿ ಮಾಡಹತ್ತಿದರು. ಶ್ರೀಯವರಿಗೆ ಈ ಯೋಗಸಿದ್ಧಿಯಾದುದು ಶ್ರೀರಾಯರ ಅನುಗ್ರಹದಿಂದ ! ಎಂದ ಮೇಲೆ ಆ ಮಹನೀಯರ ಮಹಿಮೆ ಎಷ್ಟು ವ್ಯಾಪಕವೆಂದು ಪ್ರತ್ಯೇಕ ಹೇಳಬೇಕಾಗಿಲ್ಲ!
ಆಗ ಮಹಿಶೂರು ದೇಶವನ್ನು ಮುಮ್ಮಡಿ ಕೃಷ್ಣರಾಜ ಒಡೆಯರು ಪಾಲಿಸುತ್ತಿದ್ದರು. ಅವರು ಶ್ರೀಯವರ ಅವಿಚ್ಛಿನ್ನ ಭಕ್ತರಾಗಿದ್ದರು. ಶ್ರೀಯವರ ಉಪದೇಶಗಳಿಂದ ರಾಜರು ಶ್ರೀರಾಯರ ಅಂತರಂಗಭಕ್ತರಾದರು. ಶ್ರೀಯವರ ಪೂರ್ವಾಶ್ರಮ ಹಿರಿಯ ಪುತ್ರರಾದ ಶ್ರೀರಾಜಗೋಪಾಲಾಚಾರರು ಸಣ್ಣವಯಸ್ಸಿನಲ್ಲಿಯೇ ನ್ಯಾಯವೇದಾಂತಶಾಸ್ತ್ರಪಾರಂಗತರಾಗಿದ್ದಂತೆ, ಉತ್ತಮ ತ ಕನ್ನಡ ಕವಿಗಳೂ ಆಗಿದ್ದರು. ಸುರದ್ರೂಪಿಗಳಾಗಿದ್ದ, ಆಕರ್ಷಕ ವ್ಯಕ್ತಿತ್ವದ ರಾಜಗೋಪಾಲಾಚಾರರಲ್ಲಿ ಅರಸರು ತುಂಬಾ ಪ್ರೀತಿ-ವಿಶ್ವಾಸ ತಾಳಿದರು. ಅದು ಅವರೀರ್ವರಲ್ಲಿ ಗಾಢಮೈತ್ರಿಯಾಗಿ ಪರಿಣಮಿಸಿತ್ತು. ಆತ್ಮೀಯಮಿತ್ರರೂ, ಗುರುಪುತ್ರರೂ ಆದ ರಾಜಗೋಪಾಲಾಚಾರರನ್ನು ಗೌರವಿಸಲು ಆಶಿಸಿದ ಮುಮ್ಮುಡಿ ಕೃಷ್ಣರಾಜಒಡೆಯರು ಆಚಾರರಿಗೆ ರಾಜಾ” ಎಂಬ ಪ್ರಶಸ್ತಿ ಭೂಸ್ವಾಸ್ತಿಗಳನ್ನಿತ್ತು ಸನ್ಮಾನಿಸಿದರು. ರಾಜಾ ರಾಜಗೋಪಾಲಾಚಾರರ ಪ್ರಭಾವದಿಂದಾಗಿ ಅರಸರು ಸಾಹಿತ್ಯಾಲಂಕಾರಶಾಸ್ತ್ರ ಹಾಗೂ ಸಂಸ ತ, ಕನ್ನಡ ಕಾವ್ಯರಚನೆಯಲ್ಲಿ ಮಿಂಚಲು ಕಾರಣವಾಯಿತು. ರಾಜರು ವಿದ್ವಜ್ಜನಪೋಷಕರಾಗಿದ್ದರಿಂದ ವಿದ್ವಜ್ಜನ ಸಹವಾಸದಿಂದವರು ಉತ್ತಮ ಪಂಡಿತರೂ ಗ್ರಂಥಕಾರರೂ ಆದರು. ಅವರು ಅನೇಕ ಕೃತಿಗಳನ್ನು ರಚಿಸಿ ಆಚಾರರಿಗೆ ತೋರಿಸಿ ಅವರ ಸಲಹೆ ಪಡೆಯುತ್ತಿದ್ದರು. ಆಚಾರರ ಸಹವಾಸ - ಶ್ರೀಯವರ ಪ್ರಭಾವದಿಂದ ರಾಯರ ಭಕ್ತರಾಗಿದ್ದರಾಜರು ಶ್ರೀರಾಯರ ವಿಶೇಷಾನುಗ್ರಹವನ್ನು ಬಯಸಿ ಸಂಸ ತದಲ್ಲಿ “ಶ್ರೀರಾಘವೇಂದ್ರಸ್ವಾಮ್ಯಷ್ಟೋತ್ತರಮ್” ಎಂಬ ಕೃತಿಯನ್ನು ರಚಿಸಿ ರಾಯರ ಮಹಿಮೆಯನ್ನು ಮನಮುಟ್ಟುವಂತೆ ಬಣ್ಣಿಸಿ ಕೃತಿಯನ್ನು ಆಚಾರರ ದ್ವಾರಾ ಶ್ರೀಸುಜ್ಞಾನೇಂದ್ರತೀರ್ಥರಿಗೆ ಅರ್ಪಿಸಿ ಶ್ರೀಯವರ ಮೆಚ್ಚುಗೆ, ಅನುಗ್ರಹಗಳಿಸಿ ಕೃತಾರ್ಥರಾದರು.
ಒಮ್ಮೆ ಮುಮ್ಮುಡಿ ಅರಸರು ಮೈಸೂರಿನ ಡೆಪ್ಯುಟಿಕಮೀಶನರ್ ಆಗಿದ್ದ ಓರ್ವ ಆಂಗ್ಲರನ್ನು ಶ್ರೀಮಠಕ್ಕೆ ಕಳಿಸಿ ಅವರ ದ್ವಾರಾ ಮಠದ ಕಾರ್ಯಗಳನ್ನು ಮಾಡಿಸಿಕೊಳ್ಳಲು ರಾಜಗೋಪಾಲಾಚಾರರ ಮೂಲಕ ಗುರುಗಳಿಗೆ ಹೇಳಿಕಳಿಸಿದರು. ಆದರೆ ಶ್ರೀಗಳವರಿಗೇಕೋ ಆ ಆಂಗ್ಲ ಅಧಿಕಾರಿಗೆ ದರ್ಶನವೀಯಲು ಮನಸ್ಸಾಗಲಿಲ್ಲ. ಶ್ರೀಪಾದಪುತ್ರರು ಮತ್ತು ಮಠದ ಹಿರಿಯ ಅಧಿಕಾರಿಗಳ ಬಲವಂತದಿಂದ ಮಹಾರಾಜರ ಈ ವಿಜ್ಞಾಪನೆಗೆ ಶ್ರೀಯವರು ನಿರ್ವಾಹವಿಲ್ಲದೆ ಒಪ್ಪಿದ್ದರು.
ಆಂಗ್ಲ ಅಧಿಕಾರಿಗಳು ಸಿಬ್ಬಂದಿಯೊಡನೆ ನಂಜನಗೂಡಿಗೆ ಬಂದರು. ಶ್ರೀಪಾದ ಪುತ್ರರು ಅವರನ್ನು ಗುರುಗಳಲ್ಲಿಗೆ ಕರೆದುತಂದರು. ಮಠದಲ್ಲಿ ಶ್ರೀಪ್ರಾಣದೇವರ ಗುಡಿಮಗ್ಗಲು ತುಳಸೀ ಬೃಂದಾವನದ ಮುಂದೆ ಹಾಕಿದ್ದ ಪೀಠದಲ್ಲಿ ಶ್ರೀಯವರ ಮಂಡಿಸಿದ್ದರು. ಆಂಗ್ಲ ಅಧಿಕಾರಿಗಳು “ಗುರುಗಳೆಲ್ಲಿದ್ದಾರೆ ?” ಎಂದು ಪ್ರಶ್ನಿಸಿದರು. ಅದನ್ನು ಕೇಳಿ ಎಲ್ಲರೂ ಅಚ್ಚರಿಗೊಂಡರು. ಶ್ರೀಪಾದಪುತ್ರರು “ಸ್ವಾಮಿ, ಗುರುಗಳು ತಮ್ಮ ಮುಂದೆ ಪೀಠದಲ್ಲಿ ಕುಳಿತಿದ್ದಾರೆ” ಎನಲು ಆಂಗ್ಲ ಮಹಾಶಯರು ವ್ಯಗ್ರರಾಗಿ “ಸುಳ್ಳೇಕೆ ಹೇಳುವಿರಿ? ಇಲ್ಲಿ ಬರಿಯ ಪೀಠ ಮಾತ್ರವಿದೆ. ಗುರುಗಳಿಲ್ಲ!” ಎಂದಾಗ ಸರ್ವರೂ ದಿಗ್ಧಾಂತರಾದರು. ಆಂಗ್ಲ ಅಧಿಕಾರಿಗಳ ಪರಿವಾರದವರು “ನಿಜ ಸ್ವಾಮಿ, ಗುರುಗಳು ಪೀಠದಲ್ಲಿ ಕುಳಿತಿದ್ದಾರೆ!” ಎಂದಾಗ ಆಂಗ್ಲ ಅಧಿಕಾರಿ ವಿಸ್ಮಿತ ಆಂಗ್ಲ ಪದ್ಧತಿಯಂತೆ ಪೀಠಕ್ಕೆ ವಂದಿಸಿ ಹೊರಬಂದು ಮಠದವರನ್ನು ಕುರಿತು “ನಿಮ್ಮ ದೊಡ್ಡಗುರುಗಳಾದ ರಾಘವೇಂದ್ರಸ್ವಾಮಿಗಳು ಹಿಂದೆ ಬೃಂದಾವನಸ್ಥರಾದ ೧೫೦ ವರ್ಷಗಳ ಮೇಲೆ ಸರ್ ಥಾಮಸ್ ಮನ್ನೋ ಸಾಹೇಬರಿಗೆ ದರ್ಶನವಿತ್ತು ಮಾತಾಡಿ, ಮಂತ್ರಾಕ್ಷತೆ ಕೊಟ್ಟ ವಿಚಾರ ಕೇಳಿದ್ದೇನೆ. ಅವರ ಪೀಠದಲ್ಲಿ ಬಂದ ಈ ಗುರುಗಳು ನನಗೆ ದರ್ಶನ ಕೊಡದೆ ಒಂದು ಪವಾಡವನ್ನೇ ತೋರಿದ್ದಾರೆ ! ಬಹುಶಃ ನೀವು ಅವರಿಗಿಷ್ಟವಿಲ್ಲದಿದ್ದರೂ ದರ್ಶನ ಕೊಡಲು ಬಲಾತ್ಕರಿಸಿದ್ದೀರೆಂದು ತೋರುತ್ತದೆ. ಅವರು ಅದಕ್ಕೆ ಒಪ್ಪಿದರೂ ನನಗೆ ದರ್ಶನಕೊಡಲಿಲ್ಲ! ಇಂತಹ ಮಹನೀಯರಿಂದ ಶೋಭಿಸುವ ನಿಮ್ಮ ಪೀಠವು ದೊಡ್ಡದು. ಶ್ರೀಮಠದ ಕಾರ್ಯ ಏನಿದ್ದರೂ ನಾನು ಸಂತೋಷದಿಂದ ಮಾಡಿಕೊಡುತ್ತೇನೆ. ಅವರು ನನಗೆ ದರ್ಶನವೀಯಲಿಲ್ಲವೆಂದು ನನಗೆ ಅಸಮಾಧಾವಿಲ್ಲ. ಪ್ರಸ್ತುತ ಅವರ ಮಹಿಮೆಯನ್ನು ಕಂಡು ಅವರಲ್ಲೂ ನಿಮ್ಮ ಮಠದಲ್ಲೂ ನನಗೀಗ ಹೆಚ್ಚು ಗೌರವ ಶ್ರದ್ಧೆಯುಂಟಾಗಿದೆ” ಎಂದು ಹೇಳಿದರು.
ಆಗ ಶ್ರೀಪಾದಪುತ್ರ ರಾಜಾ, ರಾಜಗೋಪಾಲಾಚಾರರು ಶ್ರೀಪಾದಂಗಳವರು ಆಶೀರ್ವದಿಸಿ, ಅನುಗ್ರಹಿಸಿ ತಮ್ಮ ಮೂಲಕ ಕಳುಹಿಸಿದ ಫಲಮಂತ್ರಾಕ್ಷತೆಯನ್ನು ಆಂಗ್ಲ ಅಧಿಕಾರಿಗಳಿಗೆ ನೀಡಿದರು. ಅವರು ಸಂತುಷ್ಟರಾಗಿ “ದರ್ಶನ ಕೊಡದಿದ್ದರೂ ಆಶೀರ್ವದಿಸಿ ಮಂತ್ರಾಕ್ಷತೆ ಕಳಿಸಿದರಲ್ಲ! ಇಷ್ಟೇ ಸಾಕು” ಎಂದು ಹೇಳಿ ಪರಿವಾರದೊಡನೆ ಮಹೀಶೂರಿಗೆ ತೆರಳಿದರು. ಅಂದು ಅಲ್ಲಿದ್ದ ಸರ್ವರಿಗೂ ರಾಯರ ಮುಖ್ಯಾನುಗ್ರಹಕ್ಕೆ ಪಾತ್ರರಾದ ಶ್ರೀಗಳವರು ಯೋಗಸಿದರು, ತಪಸ್ವಿಗಳು ಎಂದು ಎರಡನೆಯ ಬಾರಿ ಮನದಟ್ಟಾಗಿ ಸರ್ವರೂ ಗುರುಗಳನ್ನು ಮುಕ್ತಕಂಠದಿಂದ ಸ್ತುತಿಸಿದರು.
ಶ್ರೀಸುಜ್ಞಾನೇಂದ್ರತೀರ್ಥರು ಶ್ರೀರಾಯರ ಅನುಗ್ರಹದಿಂದ ತೋರಿದ ಈ ಮಹಿಮೆಯ ಫಲವಾಗಿ ಆ ಆಂಗ್ಲ ಅಧಿಕಾರಿ ಮತ್ತಿತರ ಬ್ರಿಟಿಷ್ ಉನ್ನತ ಅಧಿಕಾರಿಗಳು-ಭಾರತಾದ್ಯಂತ ಇದ್ದ ಶ್ರೀಮಠದ ಗ್ರಾಮ-ಭೂಮಿ-ಆಸ್ತಿ-ಪಾಸ್ತಿಗಳೆಲ್ಲವೂ ಶ್ರೀಮಠಕ್ಕೆ, ಶ್ರೀಸುಜ್ಞಾನೇಂದ್ರತೀರ್ಥರ ಹೆಸರಿಗೆ ಶಾಶ್ವತವಾಗಿ ನಡೆದುಬರುವಂತೆ ಆಜ್ಞೆಯನ್ನು ಹೊರಡಿಸಿ ಅವೆಲ್ಲ ಮಠಕ್ಕೆ ಇಂದಿಗೂ ಉಳಿದು ಬರುವಂತಾಯಿತು ! ಶ್ರೀಸುಜ್ಞಾನೆಂದ್ರರ ಕಾಲದಲ್ಲಿಯೇ ಆ ಬಗ್ಗೆ ಶ್ರೀಯವರ ಹೆಸರಿಗೆ ಖಾಯಂ ಕಾಗದ ಪತ್ರಗಳಾದವು. ಶ್ರೀರಾಯರು ತಮ್ಮ ಪರಮಪ್ರಿಯರಾದ ಶ್ರೀಗಳವರ ಮೂಲಕ ತೋರಿಸಿದ ಈ ಮಹಿಮೆಯು ಅಸಾಧಾರಣೆವೆಂದು ಹೇಳಿದರೆ ತಪ್ಪಾಗಲಾರದು.
ಶ್ರೀಸುಜ್ಞಾನೇಂದ್ರರಿಗೆ ಜನರು ತಮ್ಮನ್ನು ಮಹಾತ್ಮರೆಂದೂ ಶಾಪಾನುಗ್ರಹ ಶಕ್ತರಾದ ಯೋಗಸಿದ್ದರೆಂದೂ ಹೊಗಳುವುದು ಬೇಕಾಗಿರಲಿಲ್ಲ. ಅದರಿಂದ ಅವರ ಮನಸ್ಸಿಗೆ ಬಹಳ ನೋವಾಗುತ್ತಿತ್ತು. ಶ್ರೀಹರಿವಾಯುಗಳು ಹಾಗೂ ಗುರುರಾಜರ ಅನುಗ್ರಹದಿಂದ ಲಭಿಸಿದ ಸಿದ್ಧಿಯನ್ನು ಅರಿಯದೇ ಜನರು ತಮ್ಮನ್ನು ಸ್ತುತಿಸುವುದರಿಂದ ಬೇಸರವಾಗಿತ್ತು. ಶ್ರೀರಾಯರ ದಯದಿಂದ ಲಭಿಸಿದ ಸಿದ್ದಿಯು ಹೀಗೆ ಲೌಕಿಕ ಕಾರ್ಯಕ್ಕೆ ವಿನಿಯೋಗವಾಯಿತಲ್ಲಾ ಎಂಬ ವ್ಯಾಕುಲ-ಹಳಹಳಿಕೆಯಿಂದ ಶ್ರೀಗಳವರು ಶ್ರೀಗುರುರಾಜರ ದರ್ಶನಮಾಡಿ ಅವರ ಕ್ಷಮೆ ಬೇಡಲು ನಿರ್ಧರಿಸಿ ಮಂತ್ರಾಲಯಕ್ಕೆ ಮಿತಪರಿವಾರರಾಗಿ ದಯಮಾಡಿಸಿದರು.
ಶ್ರೀರಾಯರ ದರ್ಶನದಿಂದ ಹೃಷ್ಟಾಂತಃಕರಣದ ಶ್ರೀಗಳವರು ಕೆಲಕಾಲ ಮಂತ್ರಾಲಯದಲ್ಲಿದ್ದು ರಾಯರನ್ನು ಸೇವಿಸಲಿಚ್ಚಿಸಿದರು. ದಿನಗಳುರುಳಿದಂತೆ ಸ್ವಾಮಿಗಳಿಗೆ, ಗುರುಸಾನ್ನಿಧ್ಯ, ಮಂತ್ರಾಲಯ ಬಹುಪ್ರಿಯವಾಯಿತು. ತಮ್ಮ ವಂಶದ ಪೂರ್ವಾಚಾರ್ಯರಾದ ರಾಯರ ಸನ್ನಿಧಿಯಲ್ಲಿಯೇ ತಾವು ಬೃಂದಾವನಸ್ಥರಾಗಲು ಅವರು ಆಶಿಸಿದರು. ಅದಕ್ಕಾಗಿ ರಾಯರನ್ನು ಕುರಿತು ಕಠಿಣ ತಪಸ್ಸನ್ನೇ ಆಚರಿಸಿದರು. ಒಂದು ರಾತ್ರಿ ಸ್ವಪ್ನದಲ್ಲಿ ರಾಯರು ಶ್ರೀಗಳವರಿಗೆ ದರ್ಶನವಿತ್ತು ನಿಮ್ಮ ಸೇವೆಯಿಂದ ನಾವು ಪ್ರೀತರಾಗಿದ್ದೇವೆ. ನಮ್ಮ ಸಾನ್ನಿಧ್ಯವನ್ನು ಬಯಸುವ ನಿಮ್ಮಿಚ್ಛೆ ಫಲಿಸುವುದು, ಅದರದು ಇಲ್ಲಲ್ಲ, ನಂಜನಗೂಡಿನಲ್ಲಿ! ನಿಮಗಾಗಿ ಒಂದು ರೂಪದಿಂದ ನಂಜನಗೂಡಿಗೆ ಬಂದು ನಮ್ಮ ಸಾನ್ನಿಧ್ಯ ನೀಡುತ್ತೇವೆ. ನೀವಿನ್ನು ನಂಜನಗೂಡಿಗೆ ಹೊರಡಿ ಎಂದು ಫಲಮಂತ್ರಾಕ್ಷತೆಯಿತ್ತು ಆಶೀರ್ವದಿಸಿ ಅದೃಶ್ಯರಾದರು.
ಎಚ್ಚರಗೊಂಡ ಸ್ವಾಮಿಗಳು ಸ್ವಾರ್ಥವನ್ನು ಮೆಲುಕುಹಾಕಿ ರೋಮಾಂಚಿತರಾಗಿ ರಾಯರ ಅಭಯ-ವರಗಳನ್ನು ಸ್ಮರಿಸಿ ಸಂತುಷ್ಟರಾಗಿ ಶ್ರೀಗುರುರಾಜರಿಗೆ ಹಸ್ತೋದಕವನ್ನು ಸಮರ್ಪಿಸಿ ನಂಜನಗೂಡಿಗೆ ಪ್ರಯಾಣಬೆಳೆಸಿದರು.
ನಂಜನಗೂಡಿಗೆ ಬಂದ ಕೆಲದಿನಗಳಲ್ಲಿಯೇ ಶ್ರೀಸುಜ್ಞಾನೇಂದ್ರತೀರ್ಥರಿಗೆ ಶ್ರೀರಾಯರು ಕನಸಿನಲ್ಲಿ ದರ್ಶನವಿತ್ತು ನಿನ್ನಾಸೆ ಫಲಿಸುವದು. ಇಂದಿಗೆ ಮೂರನೇ ದಿನ ನಾವು ಬರುತ್ತೇವೆ. ಪ್ರತಿಷ್ಠೆಗೆ ಸಿದ್ಧತೆ ಮಾಡಿಕೊಳ್ಳಿರಿ” ಎಂದು ಅಪ್ಪಣೆ ಮಾಡಿದರು. ಅದರಂತೆ ಮುಮ್ಮಡಿ ಕೃಷ್ಣರಾಜ ಒಡೆಯರಿಗೆ “ನಾವು ನಂಜನಗೂಡಿಗೆ ಬರುತ್ತೇವೆ. ನಾಡಿದ್ದು ಮಧ್ಯಾನ್ಹನಮ್ಮನ್ನು ಎದುರುಗೊಂಡು ನಂಜನಗೂಡಿಗೆ ಕಳಿಸಿಕೊಡಿ' ಎಂದೂ ಶ್ರೀರಂಗಪಟ್ಟಣದಲ್ಲಿದ್ದ ಮಠದ ಶಿಷ್ಯರಾದ ಕರ್ಮಠ ಬ್ರಾಹ್ಮಣರಿಗೆ ನಾವು ಈ ಊರಿನ ಕಾವೇರಿ ನದಿಯ ದಂಡೆಯಲ್ಲಿದ್ದೇವೆ. ನಾಳೆ ನಮ್ಮನ್ನು ತೆಗೆದುಕೊಂಡು ನಂಜನಗೂಡಿನ ಮಠಕ್ಕೆ ತಲುಪಿಸಿ ಎಂದೂ; ಓರ್ವ ಅಗಸನಿಗೆ “ಅಪ್ಪಾ, ಪ್ರತಿದಿನ ನಿನ್ನ ಹೊಡೆತ ತಿಂದು ನಮಗೆ ಸಾಕಾಗಿದೆ ! ನಾಳೆ ಓರ್ವ ಬ್ರಾಹ್ಮಣ ನಿನ್ನಲ್ಲಿಗೆ ಬರುತ್ತಾನೆ. ಅವನಿಗೆ ನಮ್ಮನ್ನು ಒಪ್ಪಿಸು, ನಿನಗೆ ಮಂಗಳವಾಗುವುದು” ಎಂದೂ ಶ್ರೀರಾಯರು ಸ್ವಪ್ನದಲ್ಲಿ ಸೂಚಿಸಿದರು. ಈ ಅದ್ಭುತ ವಿಚಾರಗಳು ಮುಂದಿನ ಮೂರುದಿನಗಳಲ್ಲಿ ಸಕಲರಿಗೂ ತಿಳಿಯುವಂತಾಗಿ ಸರ್ವರೂ ರಾಯರ ಮಹಿಮೆಯನ್ನು ಕೊಂಡಾಡಿದರು.
ಹಿಂದಿನ ರಾತ್ರಿ ಸನ್ಯಾಸಿಗಳೊಬ್ಬರು ಸ್ವಪ್ನದಲ್ಲಿ ಹೇಳಿದ ವಿಷಯ ಸ್ಮರಿಸಿ ಆ ಆಗಸನು ಅದೇನೆಂದು ತಿಳಿಯಲಾಗದೆ ಎಂದಿನಂತೆ ತನ್ನ ಬಟ್ಟೆಗಳೊಡನೆ ಕಾವೇರಿ ನದಿಗೆ ಪ್ರತಿದಿನವೂ ತಾನು ಬಟ್ಟೆ ಒಗೆಯುವ ಕಲ್ಲಿನ ಸಮೀಪಕ್ಕೆ ಬಂದನು. ಆಗ ಅವನಿಗೆ ಅಲ್ಲಿ “ಓಂ, ಓಂ” ಎಂಬ ಶಬ್ದ ಕೇಳಿಬಂದಿತು! ಅಚ್ಚರಿಯಿಂದವನು ತಾನು ಒಗೆಯುತ್ತಿದ್ದ ಕರಿಯ ಶಿಲೆಯನ್ನು ತಿರುವು ಹಾಕಿದಾಗ ಅವನಿಗೆ ಓರ್ವ ಸನ್ಯಾಸಿಗಳು ಪದ್ಮಾಸನರಾಗಿ ಕುಳಿತಿರುವಂತೆ ರೇಖಾಚಿತ್ರವು ಆ ಕಲ್ಲಿನಲ್ಲಿ ಒಡಮೂಡಿರುವುದು ಗೋಚರಿಸಿತು ! ಆತ ಆಶ್ಚರ್ಯಭಯಗಳಿಂದ ಮುಂದೇನು ಮಾಡುವುದೆಂದು ಯೋಚಿಸುತ್ತಿರುವಾಗ ಓರ್ವ ಬ್ರಾಹ್ಮಣನು ಅವನ ಬಳಿಗೆ ಬಂದನು. ಸ್ವಪ್ನದಲ್ಲಿ ರಾಯರು ಹೇಳಿದಂತೆ ಆ ಬ್ರಾಹ್ಮಣ ಕಾವೇರೀ ತೀರದಲ್ಲಿ ಹುಡುಕುತ್ತಾ ಅಲ್ಲಿಗೆ ಬಂದಿದ್ದನು. ತನಗೆ ಕನಸಿನಲ್ಲಿ ಹೇಳಿದಂತೆ ಬ್ರಾಹ್ಮಣನು ಬಂದಿದ್ದನ್ನು ಕಂಡು ಅಗಸನು ತನಗಾದ ಸ್ವಪ್ನ: ಇಂದು ತನ್ನ ಕಣ್ಣಿಗೆ ಬಿದ್ದ ಅದ್ಭುತವನ್ನು ಹೇಳಿ ಆ ಶಿಲೆಯನ್ನು ಬ್ರಾಹ್ಮಣನಿಗೆ ತೊರಿಸಿದನು.
ಆ ಬ್ರಾಹ್ಮಣನು ಶಿಲೆಯಲ್ಲಿ ಉದ್ಭವಿಸಿರುವ ರಾಯರನ್ನು ಕಂಡು ಆನಂದಾತಿಶಯದಿಂದ ನಮಸ್ಕರಿಸಿ ಅಗಸನನ್ನು ಶ್ಲಾಘಿಸಿ ರಾಯರು ಒಡಮೂಡಿದ ಶಿಲಾಫಲಕವನ್ನು ತನ್ನ ಶಿರದ ಮೇಲಿಟ್ಟುಕೊಂಡು ಗುರುಸ್ತೋತ್ರವನ್ನು ಪಠಿಸುತ್ತಾ ಬಂದು ಅಂದು ಶ್ರೀರಾಯರನ್ನು ಪೂಜಿಸಿ ಮರುದಿನ ಶ್ರೀರಾಯರನ್ನು ಹೊತ್ತು ಮನೆಗೆ ನಂಜನಗೂಡಿನ ಕಡೆಗೆ ಹೊರಟನು.
ಸಂಜೆ ವೇಳೆಗೆ ಮೈಸೂರಿಗೆ ಬಂದನು. ಅಲ್ಲಿ ಅವನು ಕಂಡ ದೃಶ್ಯ ಅವನನ್ನು ವಿಸ್ಮಯಗೊಳಿಸಿತು. ಅಲ್ಲಿ ನೂರಾರು ಜನ ಸೇರಿದ್ದಾರೆ. ರಾಜಮರ್ಯಾದೆಗಳೆಲ್ಲ ಬಂದಿವೆ. ರಾಜಪ್ರತಿನಿಧಿಯು ಬ್ರಾಹ್ಮಣನನ್ನು ಕಂಡು ಮಾತನಾಡಿದಾಗ ರಾಯರ ಉದ್ಭವ ಮೂರ್ತಿಯನ್ನು ನಂಜನಗೂಡಿಗೆ ತೆಗೆದುಕೊಂಡು ಹೋಗುತ್ತಿರುವ ವಿಚಾರ ಸ್ಪಷ್ಟವಾಗಿ ಆತ ಸಕಲಮಯ್ಯಾದೆಯೊಡನೆ ಆ ಬ್ರಾಹ್ಮಣನನ್ನು ಪೂರ್ಣಯ್ಯನವರ ಛತ್ರಕ್ಕೆ ಕರೆತಂದನು. ಅಂದು ಸಂಜೆ ಮಹಾರಾಜರೂ ಬಂದು ಶ್ರೀರಾಯರ ದರ್ಶನಮಾಡಿ, ದೀಪಾರಾಧನೆ ಮಾಡಿಸಿ, ರಾಯರಿಗೆ ನಮಸ್ಕರಿಸಿ, ಸಂತೋಷದಿಂದ ಅಮನೆಗೆ ತೆರಳಿದರು.
ಮರುದಿನ ರಾಜರ ಅಪ್ಪಣೆಯಂತೆ ರಾಜಪ್ರತಿನಿಧಿಗಳು ಜೋಡುಕುದುರೆ ಸಾರೋಟಿನಲ್ಲಿ ರಾಜಗೌರವಗಳೊಡನೆ ಆ ಬ್ರಾಹ್ಮಣನನನ್ನೂ ಶ್ರೀರಾಯರ ಶಿಲಾಫಲಕವನ್ನು ನಂಜನಗೂಡಿಗೆ ಕಳುಹಿಸಿಕೊಟ್ಟರು.
ಇತ್ತ ನಂಜನಗೂಡಿನಲ್ಲಿ ಶ್ರೀಸುಜ್ಞಾನೇಂದ್ರತೀರ್ಥರು ಶ್ರೀರಾಯರ ಅಪ್ಪಣೆಯಂತೆ ಪ್ರತಿಷ್ಠೆಗೆ ಸಕಲಸಿದ್ಧತೆಮಾಡಿಕೊಂಡು ಶ್ರೀಮಠದ ಮುಂಭಾಗದಲ್ಲಿ ವಿದ್ವಜ್ಜನರು, ಪರಿವಾರ, ವಾದ್ಯವೈಭವದೊಡನೆ ಕಾದುನಿಂತಿದ್ದಾರೆ. ಸ್ವಲ್ಪವೇಳೆಗೆ ಕಹಳೆದ್ದನಿ ಕೇಳಿಸಿತು! ಎಲ್ಲರೂ ಕುತೂಹಲದಿಂದ ನೋಡುತ್ತಿರುವಂತೆಯೇ ರಾಜಮಯ್ಯಾದೆಯೊಡನೆ ಕುದುರೆ ಸಾರೋಟು ಶ್ರೀಮಠದ ಮುಂದೆ ಬಂದು ನಿಂತಿತು! ಶಿಲಾ ಫಲಕವನ್ನು ಶಿರದಲ್ಲಿ ಧರಿಸಿದ್ದ ಬ್ರಾಹ್ಮಣ ಕೆಳಗಿಳಿದು ಬಂದನು. ಅವನಿಂದ ಸಮಸ್ತ ವಿಚಾರವರಿತು ಜನರು ಶ್ರೀರಾಯರ ಜಯಜಯಕಾರಮಾಡಿದರು.
ಅಭಯವಿತ್ತಂತೆ ಮಹಾಮಹಿಮೆಯನ್ನು ಬೀರುತ್ತಾ ಶ್ರೀಗುರುರಾಜರು ಶಿಲಾ ಫಲಕದಲ್ಲಿ ಸ್ವಯಂವಕ್ತರಾಗಿ ದಯಮಾಡಿಸಿದ್ದನ್ನು ಕಂಡು ಶ್ರೀಗಳವರ ಮೈಪುಳುಕಿಸಿತು. ಅನಂದಾಶ್ರುಮಿಡಿಯಿತು. ಭಕ್ತಿಯಿಂದ ರಾಯರನ್ನು ಭಜಿಸುತ್ತಾ ಮಠಕ್ಕೆ ಕರೆತಂದರು. ಶ್ರೀಯವರಲ್ಲಿ ರಾಯರು ಮಾಡಿದ ಅನುಗ್ರಹವನ್ನು ತಿಳಿದ ಜನಸ್ತೋಮ ಶ್ರೀರಾಯರ ಮಹಿಮೆ, ಶ್ರೀಯವರಲ್ಲಿ ರಾಯರ ಅನುಗ್ರಹಗಳನ್ನು ಪ್ರಶಂಸಿಸಿತು. ಶ್ರೀಗಳವರು ಶ್ರೀರಾಯರ ಪ್ರತೀಕವನ್ನು ಶ್ರೀಪ್ರಾಣದೇವರ ಎಡಪಾರ್ಶ್ವದಲ್ಲಿ ಪೂರ್ವಾಭಿಮುಖವಾಗಿ, ಅಂದೇ ಸಂಪ್ರದಾಯ ಪ್ರಕಾರವಾಗಿ ವಿಜೃಂಭಣೆಯಿಂದ ಸ್ವಹಸ್ತದಿಂದ ಪ್ರತಿಷ್ಠಾಪನೆಮಾಡಿ ಪೂಜಾರಾಧನೆ ಮಾಡಿ, ಹಸ್ತೋದಕವನ್ನು ಸಮರ್ಪಿಸಿ ಬ್ರಾಹ್ಮಣ ಸುವಾಸಿನಿಯರ ಸಂತರ್ಪಣೆಯನ್ನು ನೆರವೇರಿಸಿದರು.
ಶೀಸುಜ್ಞಾನನೇಂದ್ರತೀರ್ಥರಿಗಾಗಿ ಶ್ರೀರಾಯರು ಶಿಲಾಫಲಕದಲ್ಲಿ ಸ್ವಯಂ ವ್ಯಕ್ತರಾಗಿ ಒಲಿದುಬಂದು ನಂಜನಗೂಡಿನ ಮಠದಲ್ಲಿ ತಮ್ಮ ದಿವ್ಯಸಾನ್ನಿಧ್ಯವನ್ನು ಚೆನ್ನಾಗಿ ಅಭಿವ್ಯಕ್ತಗೊಳಿಸಿ ವಿರಾಜಿಸಿದರು.
ಕ್ರಿ.ಶ. ೧೮೫೧ನೇ ದುರ್ಮತಿ ಸಂವತ್ಸರ ಪ್ರಾರಂಭವಾಯಿತು. ಶ್ರೀಸುಜ್ಞಾನೇಂದ್ರತೀರ್ಥರು ನಂಜನಗೂಡಿನಲ್ಲಿ ಚಾತುರ್ಮಾಸ್ಯಸಂಕಲ್ಪಕ್ಕೆ ಕುಳಿತರು. ಶ್ರಾವಣಮಾಸದಲ್ಲಿ ಶ್ರೀಯವರಿಗೆ ದೇಹಾಲಸ್ಯವಾಯಿತು. ಶ್ರೀಮೂಲರಾಮದೇವರ ಪೂಜಾರಾಧನೆಗೆ ವ್ಯತ್ಯಯ ಬರಬಾರದೆಂದು ಸ್ವಾಮಿಗಳವರು ಶ್ರೇಷ್ಠಪಂಡಿತರೂ, ತಮ್ಮ ಪೂರ್ವಾಶ್ರಮದ ಪೂರ್ವಾಚಾರರಾದ ಶ್ರೀಧೀರೇಂದ್ರತೀರ್ಥರ ದೌಹಿತ್ರ ಸಂತತಿಯ ವಂಶಬಂಧುಗಳೂ ಆದ ಪಂಡಿತಶ್ರೇಷ್ಠರಿಗೆ ಪರಮಹಂಸಾಶ್ರಮವಿತ್ತು. “ಶ್ರೀಸುಧರ್ಮೇಂದ್ರತೀರ್ಥರೆಂಬ ಹೆಸರಿಟ್ಟು ಶ್ರೀಸರ್ವಜ್ಞನ ವೇದಾಂತಸಾಮ್ರಾಜ್ಯದಲ್ಲಿ ಪಟ್ಟಾಭಿಷೇಕಮಾಡಿದರು. ಉಭಯಗುರುಗಳ ನೇತೃತ್ವದಲ್ಲಿ ಶ್ರಾವಣಶುಕ್ಲ ಪಾಡ್ಯ, ಬಿದಿಗೆ, ತದಿಗೆ - ಈ ಮೂರುದಿನಗಳಲ್ಲಿ ಶ್ರೀರಾಯರ ಆರಾಧನೋತ್ಸವ ಸಂಪ್ರದಾಯದಂತೆ, ನೆರವೇರಿಸುವ ವ್ಯವಸ್ಥೆಯಾಯಿತು. ಶ್ರೀರಾಯರ ಪೂರ್ವಾರಾಧನೆ, ಆರಾಧನೆಗಳು ವೈಭವದಿಂದ ಜರುಗಿತು. ಅಂದುರಾತ್ರೆ ಶ್ರೀಸುಜ್ಞಾನೇಂದ್ರತೀರ್ಥರ ದೇಹಾರೋಗ್ಯ ಬಿಗಿಡಾಯಿಸಿತು. ಶ್ರೀರಾಯರ ಉತ್ತರಾರಾಧನೆ ಬೆಳಗ್ಗೆ ಶ್ರಾವಣ ಕೃಷ್ಣ ತೃತೀಯಾ ಉಪರೀ ಚತುರ್ಥಿ ದಿವಸ ಶ್ರೀಯವರ ದೇಹಸ್ಥಿತಿ ಪೂರ್ಣವಾಗಿ ಕೆಟ್ಟು ಶ್ರೀಯವರು ಶ್ರೀಹರಿವಾಯುಗಳು ಹಾಗೂ ಶ್ರೀಗುರುರಾಜರ ಪಾದಸ್ಮರಣೆ ಮಾಡುತ್ತಾ ತಮ್ಮ ಪಾಂಚಭೌತಿಕದೇಹವನ್ನು ತ್ಯಜಿಸಿ ಶ್ರೀನಾರಾಯಣಧ್ಯಾನಪರರಾದರು.
ಶ್ರೀಸುಧರ್ಮೇಂದ್ರತೀರ್ಥರು ಮಹಾಸಂಸ್ಥಾನಪದ್ಧತಿಯಂತೆ ಗುರುಗಳ ಬೃಂದಾವನ ಪ್ರತಿಷ್ಠೆ ಮಾಡಿಸಿ, ಶ್ರೀರಾಯರ ಉತ್ತರಾಧನೆ ಹಾಗೂ ಶ್ರೀಸುಜ್ಞಾನೇಂದ್ರತೀರ್ಥರ ಮಹಾಸಮಾರಾಧನೆಗಳನ್ನು ಭಕ್ತಿಶ್ರದ್ಧೆಗಳಿಂದ ನೆರವೇರಿಸಿ ಗುರುಗಳ ಬೃಂದಾವನದ ಮೇಲೆ ಶ್ರೀಮೂಲರಾಮರನ್ನು ಮಂಡಿಸಿ ಕನಕಾಭಿಷೇಕ ಮಾಡಿ, ಹಸ್ತೋದಕ ಸಮರ್ಪಿಸಿ, ಮಹಾಮಂಗಳಾರತಿಮಾಡಿ -
“ಸುಧಾಸಾರಾರ್ಥತತ್ವಜ್ಞ ಸುರದ್ರುಮಸಮಂ ಸತಾಮ್ | ಸುರಾಧಿಪಗುರುಪ್ರಖ್ಯ೦ ಸುಜ್ಞಾನೇಂದ್ರ ಗುರು೦ಭಜೇ ।।”
ಎಂಬ ಚರಮಶ್ಲೋಕವನ್ನು ರಚಿಸಿ ಸಮರ್ಪಿಸಿದರು.
ಶ್ರೀರಾಯರ ಉತ್ತರಾರಾಧನೆ, ಶ್ರೀಸುಜ್ಞಾನೇಂದ್ರರ ಆರಾಧನೆಗಳು ಒಂದೇ ದಿನ ನೆರವೇರಿದವು! ಗುರುರಾಜರು “ಸ್ಥಾನವನ್ನೂ, ತಮ್ಮ ಆರಾಧನೆಯ “ದಿನ”ವನ್ನೂ ಅನುಗ್ರಹಿಸಿ ಮಹಾಮಹಿಮೆಯನ್ನು ಪ್ರಕಟಿಸಿದರು! ಅಂದಿನಿಂದ ಈವರೆಗೂ ಶ್ರೀರಾಯರ ಉತ್ತರಾಧನೆಯು ಶ್ರೀಸುಜ್ಞಾನೇಂದ್ರರ ಪೂರ್ವಾರಾಧನೆ, ಮರುದಿನ ಆರಾಧನಗಳೂ ಜರಗುತ್ತಾ ಬಂದಿದೆ.
ಮಂತ್ರಾಲಯ, ನಂಜನಗೂಡು ಮತ್ತು ಮಹಾಸಂಸ್ಥಾನವಿದ್ದಲ್ಲಿ ಶ್ರೀಸುಜ್ಞಾನೇಂದ್ರರ ಆರಾಧನೆಯು ಶ್ರೀರಾಯರ ಆರಾಧನಾ ಕಾಲದಲ್ಲಿ ವೈಭವದಿಂದ ಆಚರಿಸಲಾಗುತ್ತಿದೆ. ಸುಜ್ಞಾನೇಂದ್ರರಿಗೆ ಅಭಯವಿತ್ತಂತೆ ಮಂತ್ರಾಲಯದಲ್ಲಿ ಸಶರೀರರಾಗಿ ರಾರಾಜಿಸುವ ಶ್ರೀರಾಯರು ನಂಜನಗೂಡಿನಲ್ಲಿ ಶಿಲಾಫಲಕದಲ್ಲಿ ಉದ್ಭವಿಸಿ ಅಭಯಮುದ್ರಾಂಕಿತರಾಗಿ ಕಂಗೊಳಿಸಿ ಭಕ್ತರನ್ನು ಪೊರೆಯುತ್ತಿದ್ದಾರೆ. ಅಂದು ರೇಖಾರೂಪದಲ್ಲಿದ್ದ ರಾಯರು ಈಗ ಪೂರ್ಣ ಅಭಿವ್ಯಕ್ತರಾಗಿ ಪ್ರತಿಮಾರೂಪದಲ್ಲಿ ಭಕ್ತರಿಗೆ ದರ್ಶನವೀಯುತ್ತಿದ್ದಾರೆ, ಅನೇಕ ಕಡೆ ಶ್ರೀರಾಯರು ಮೃತ್ತಿಕಾ ಬೃಂದಾವನಗಳಲ್ಲಿ ಸನ್ನಿಹಿತರಾಗಿದ್ದಾರೆ, ಆದರೆ ಸ್ವಯಂವಕ್ತರಾಗಿ ಪ್ರತಿಮಾರೂಪದಲ್ಲಿ ರಾಜಿಸುತ್ತಿರುವುದು ನಂಜನಗೂಡಿನಲ್ಲಿ ಮಾತ್ರ! ಶ್ರೀರಾಯರು ತಮ್ಮ ಮಹಿಮೆಯನ್ನು ಶ್ರೀಸುಜ್ಞಾನೇಂದ್ರತೀರ್ಥರ ನಿಮಿತ್ತವಾಗಿ ಪ್ರಕಟಪಡಿಸಿ ಪ್ರೀತ್ಯಾಸ್ಪದರಾದ ಸುಜ್ಞಾನೇಂದ್ರರಲ್ಲಿ ತಮಗಿರುವ ಕಾರುಣ್ಯವನ್ನು ತನ್ಮೂಲಕ ಮಹಾಮಹಿಮೆಯನ್ನೂ ಜಗತ್ತಿಗೆ ತೋರುತ್ತಿದ್ದಾರೆ. “ಸ್ನಾನ” ಬೇಡಿದ ಮುನಿಗೆ “ದಿನ”ವಿತ್ತ ಶ್ರೀರಾಯರ ಭಕ್ತವಾತ್ತಲ್ಯ, ಮಹಿಮೆಗಳನ್ನು ಎಷ್ಟು ವರ್ಣಿಸಿದರೂ ಸ್ವಲ್ಪವೇ ಸರಿ!