ಕಲಿಯುಗ ಕಲ್ಪತರು
ಐದನೆಯ ಉಲ್ಲಾಸ
ಶ್ರೀರಾಘವೇಂದ್ರಗುರುಸಾರ್ವಭೌಮರು
ಶ್ರೀವಿಜಯದಾಸರು
ವಿಜಯದಾಸರಿದ್ದ ಕಾಲದಲ್ಲಿ ಶ್ರೀಮದಾಚಾರ ಮಹಾಸಂಸ್ಥಾನಾಧೀಶರಾದ ಶ್ರೀವಾದೀಂದ್ರರು (ಕ್ರಿ.ಶ. ೧೭೨೮ ರಿಂದ ೧೭೫೦) ಶ್ರೀವಸುಧೇಂದ್ರತೀರ್ಥರು (ಕ್ರಿ.ಶ. ೧೭೫೦-೧೭೬೧) ವಿದ್ಯಾಪೀಠದಲ್ಲಿ ಮಂಡಿಸಿದ್ದು ನಂತರ ಶ್ರೀವರದೇಂದ್ರತೀರ್ಥರು (ಕ್ರಿ.ಶ. ೧೭೬೧ ರಿಂದ ೧೭೮೬ರವರೆಗೆ) ವಿರಾಜಿಸಿದ್ದರು.
ಕರ್ನಾಟಕ ಹರಿದಾಸಪಂಥದಲ್ಲಿ ಶ್ರೀವಿಜಯದಾಸರ ಸ್ಥಾನವೈಶಿಷ್ಟ್ಯಪೂರ್ಣವಾದುದು. ದೈತಸಿದ್ಧಾಂತದಲ್ಲಿ ಶ್ರೀಜಯತೀರ್ಥಗುರುವರ್ಯರಿಗೆ ಅದಾವ ಒಂದು ಮಹತ್ವ ಸ್ಥಾನ-ವಿಶಿಷ್ಟ-ಗೌರವಗಳಿವೆಯೋ, ವಿಜಯದಾಸರಿಗೂ ಹರಿದಾಸ ಪಂಥದಲ್ಲಿ ಅದೇ ಬಗೆಯ ಮಾನ್ಯ ಸ್ಥಾನ-ವೈಶಿಷ್ಟ್ಯಗಳಿವೆ. ಶ್ರೀಪುರಂದರದಾಸರ ತರುವಾಯ ಹರಿದಾಸಪಂಥದವರಿಗೆ ಅತ್ಯಂತ ಮಾನ್ಯರಾದ ಮಹನೀಯರು ಶ್ರೀವಿಜಯದಾಸರು.
ಪಾಷಿಕಕುಲಾವತಂಸರಾದ ದಾಸರಾಯರು ಶ್ರೀವಾದೀಂದ್ರರು ಮತ್ತು ಶ್ರೀವಸುಧೇಂದ್ರತೀರ್ಥರು ದಾಸರಾಯರ ಕುಲಗುರುಗಳು. ವಿಜಯದಾಸರ ಕೃತಿಗಳಿಂದ ಇದು ಸ್ಪಷ್ಟವಾಗುವುದು.
ಶ್ರೀವಿಜಯದಾಸರೇ ಮೊದಲಾದ ದಾಸರಾಯರುಗಳಿಗೆ ಶ್ರೀವಾದೀಂದ್ರಗುರುಗಳು ಪ್ರೋತ್ಸಾಹವಿತ್ತು ಕನ್ನಡ ಹರಿದಾಸಪಂಥದ ಪೋಷಕರಾಗಿದ್ದು ಹರಿದಾಸ ರಾಜ್ಯದ ಅಭಿವೃದ್ಧಿಗೆ ಮುಖ್ಯಕಾರಣರಾದರು. ವಿಜಯದಾಸರು ರಾಮಾಶಾಸ್ತ್ರಿ ಎಂಬ ಪರವಾದಿಯನ್ನು ವಾದದಲ್ಲಿ ಜಯಿಸಿ, ಅವರು ಮಾಧ್ವ ದೀಕ್ಷೆ ಬಯಸಿದ್ದರಿಂದ ರಾಮಾಶಾಸ್ತ್ರಿಗಳನ್ನು ದಾಸರಾಯರು ತಮ್ಮ ಕುಲಗುರುಗಳಾದ ವಾದೀಂದ್ರ ತೀರ್ಥರಲ್ಲಿಗೆ ಮಂತ್ರಾಲಯಕ್ಕೆ ಕರೆದುತಂದು ಗುರುಗಳಲ್ಲಿ ವಿಜ್ಞಾಪಿಸಿ ಶಾಸ್ತ್ರಿಗಳಿಗೆ ಮಂತ್ರಮುದ್ರಾಧಾರಣ ಗುರೂಪದೇಶಪೂರ್ವಕ ಮಾಧ್ವ ದೀಕ್ಷೆ ಕೊಡಿಸಿ ಶ್ರೀಗಳವರೆ ಅನುಗ್ರಹದೊರಕಿಸಿಕೊಟ್ಟರು. ಇದು ಒಂದು ದಾಸರಪದದಿಂದ ವ್ಯಕ್ತವಾಗುವುದು. ಶ್ರೀವಿಜಯದಾಸರ ಜೀವಿತದ ಬಹುಭಾಗ ಘಟನೆಗಳು ಮೇಲ್ಕಂಡ ಶ್ರೀವಾದೀಂದ್ರ-ವಸುಧೇಂದ್ರ-ವರದೇಂದ್ರತೀರ್ಥರ ಕಾಲದಲ್ಲಿ ಜರುಗಿದವೆಂದು ಹೇಳಬಹುದು.
ವಿಜಯದಾಸರು ದಾಸದೀಕ್ಷೆ ಪಡೆಯುವ ಮೊದಲು ಬಡತನದ ಬೇಗೆಯಲ್ಲಿ ಬೆಂದು ಬಳಲುತ್ತಿದ್ದರು. ಒಂದು ಹೊತ್ತಿನ ಊಟಕ್ಕಾಗಿ ಪರರನ್ನಾಶ್ರಯಿಸಬೇಕಾಗಿಬಂದಿತ್ತು. ಹೀಗಿದ್ದರೂ ದಾಸರು ಸಾಮಾನ್ಯರಲ್ಲವೆಂಬುದು ಅವರ ಮುಂದಿನ ಚರಿತ್ರೆಯಿಂದ ಸ್ಪಷ್ಟವಾಗುವುದು. ಭಗವಂತನ ಸಾಕ್ಷಾತ್ಕಾರವನ್ನು ಪಡೆದ ವಿಜಯದಾಸರು ಅಪರೋಕ್ಷಜ್ಞಾನಿಗಳಲ್ಲಿ ಶ್ರೇಷ್ಠರು, ಸಕಲ ವಿದ್ಯಾಪಾರಂಗತರು. ಇವರು ಧೃಗುಋಷಿಗಳ ಅವತಾರರೆಂದು ಜ್ಞಾನಿಗಳು ಕೊಂಡಾಡಿದ್ದಾರೆ. ಇವರು ದಾಸದೀಕ್ಷೆ ಸ್ವೀಕರಿಸಿ ಹರಿದಾಸರಾದ ಮೇಲೆ ಸಾವಿರಾರು ಬ್ರಾಹ್ಮಣ ಕುಟುಂಬಗಳಿಗೆ ಆಶ್ರಯದಾತರಾಗಿ ಸಲಹುತ್ತಿದ್ದರು.
ಶ್ರೀಪುರಂದರದಾಸರ ತರುವಾಯ ನಾಮಾವಶೇಷವಾಗುವ ಸ್ಥಿತಿಗಿಳಿದಿದ್ದ ಕರ್ನಾಟಕ ಹರಿದಾಸಪಂಥವನ್ನು ಪುನರುಜ್ಜಿವನಗೊಳಿಸಿ, ಅದಕ್ಕೆ ಪುಷ್ಟಿ-ಪ್ರಚೋದನೆಗಳನ್ನಿತ್ತು ಬೆಳಗುವಂತೆ ಮಾಡಿದ ಕೀರ್ತಿ-ಶ್ರೇಯಸ್ಸು ವಿಜಯದಾಸರಿಗೆ ಲಭ್ಯವಾಗುವಂತಾಗಲು ಅವರಿಗೆ ಶ್ರೀಗುರುರಾಜರಿಂದ ಸ್ಫೂರ್ತಿ ದೊರಕಿದ್ದೇ ಕಾರಣವೆಂದು ಹೇಳಬಹುದು. ಶ್ರೀರಾಯರೇ ದಾಸರಿಗೆ ಪ್ರೇರಕಶಕ್ತಿ, ಕಾಶಿಯಲ್ಲಿ ಗುರುಗಳಾದ ಪುರಂದರದಾಸರು ಇವರಿಗೆ ಸ್ವಪ್ನದಲ್ಲಿ ಬಂದು ಅಂಕಿತವಿತ್ತು ಅನುಗ್ರಹಿಸಿ ಹರಿದಾಸಪಂಥವನ್ನು ಮುಂದುವರೆಸಿಕೊಂಡು ಹೋಗಲು ಅಪ್ಪಣೆ ಮಾಡಿದ್ದರು. ಗುರ್ವಾಜ್ಞೆಯಂತೆ ದಾಸರು ಹರಿದಾಸಪಂಥದ ಅಭ್ಯುದಯದ ಹೊಣೆ ಹೊತ್ತು ದೇಶಸಂಚಾರಮಾಡುತ್ತಾ ಶ್ರೀವಿಷ್ಣು ಸರ್ವೋತ್ತಮತ್ವಾದಿ ಸತ್ತತ್ತಪ್ರಸಾರಮಾಡುತ್ತಾ ಆದವಾನಿಗೆ ಬಂದರು. ಅಲ್ಲಿಂದ ಅವರು ವ್ಯಾಸ-ದಾಸಪಂಥಗಳ ಪ್ರೇರಕಶಕ್ತಿಯೂ, ಮುಖ್ಯಪೋಷಕರೂ, ಜಗದ್ಗುರುಗಳೂ ಆದ ಶ್ರೀಪ್ರಹ್ಲಾದ-ವ್ಯಾಸರಾಜಾವತಾರಿಗಳಾದ ಶ್ರೀರಾಯರ ದರ್ಶನಮಾಡಲು ಮಂತ್ರಾಲಯ ಕ್ಷೇತ್ರಕ್ಕೆ ಆಗಮಿಸಿದರು.
ಜ್ಞಾನಿಗಳಾದ ವಿಜಯದಾಸರಿಗೆ ಅಲ್ಲಿ ಭವ್ಯಸ್ವಾಗತ ದೊರಕಿತು. ಶ್ರೀಗುರುರಾಜರ ಬೃಂದಾವನದರ್ಶನಮಾಡಲು ಕಾತರರಾಗಿ ಬಂದ ದಾಸರಾಯರು ರಾಯರ ಭವ್ವಚ್ಛಮದಾವನವನ್ನು ಕಂಡು ಪರವಶರಾಗಿ, ಸಾಷ್ಟಾಮಗವೆರಗಿ, ಎದ್ದು ನಿಂತು ಹರ್ಷದಿಂದ ಗುರುಗಳ ಬೃಂದಾವನವನ್ನು ತದೇಕದೃಷ್ಟಿಯಿಂದ ನೋಡುತ್ತಾಕರ ಮುಗಿದು ನಿಂತರು. ಆಗ ಅವರ ದೃಷ್ಟಿಗೆ ಗೋಚರಿಸಿದ್ದು ಕೇವಲ ಶಿಲಾಂನಾವನವಲ್ಲ! ಶ್ರೀರಾಮ-ನರಹರಿ-ವೇದವ್ಯಾಸ-ಶ್ರೀಕೃಷ್ಣ-ನಾರಾಯಣದೇವರ ಸೇವೆ ಮಾಡುತ್ತಿರುವ ಶ್ರೀಮಧ್ವಾಚಾರ್ಯ ಮುಂತಾದ ಪ್ರಾಚೀನಾಚಾರ್ಯರಿಂದೊಡಗೂಡಿ, ಜ್ಞಾನ-ಅಭಯಮುದ್ರಾಂಕಿತರಾಗಿ ನಗೆಮೊಗದಿಂದ ಕಂಗೊಳಿಸುತ್ತಿದ್ದ ಸಾಕ್ಷಾತ್ ಶ್ರೀರಾಘವೇಂದ್ರ ಗುರುಸಾರ್ವಭೌಮರೇ ದಾಸರಾಯರ ದೃಷ್ಟಿಗೆ ಪ್ರತ್ಯಕ್ಷವಾಗಿ ಗೋಚರಿಸಿದರು! ಬೃಂದಾವನದಲ್ಲಿ ತಾವು ಕಣ್ಣಾರೆ ಕಂಡ ಆ ಮಹಾದ್ಭುತ ಮಂಗಳಕರ ದೃಶ್ಯವನ್ನು ಮೈಮರೆತು ನೋಡುತ್ತಿದ್ದಂತೆಯೇ ದಾಸರಮುಖದಿಂದ ಒಂದು ಸುಂದರ ಪದವು ಹೊರಹೊಮ್ಮಿತು! ದಾಸರಾಯರು ಭಕ್ತಿಪುಳಕಿತಗಾತ್ರರಾಗಿ ಗುರುಗಳನ್ನು ಕೊಂಡಾಹತ್ತಿದರು.
ತಾಳ - ತ್ರಿಪುಟ
ರಾಗ - ಭೈರವಿ
ನೋಡಿದೆ ಗುರುಗಳ ನೋಡಿದೆ |
ನೋಡಿದೆನು ಗುರುರಾಘವೇಂದ್ರರ ಮಾಡಿದೆನು ಭಕುತಿಯಲಿ ವಂದನೆ |
ಬೇಡಿದೆನು ಕೊಂಡಾಡಿ ವರಗಳ ಈಡು ಇಲ್ಲದೆ ಕೊಡುವ ಗುರುಗಳ |
ಮೊದಲು ಗಾಂಗೇಯಶಯ್ಯಜನು ಈ 1 ನದಿತೀರದಲ್ಲಿ ಯಾಗವ |
ಮುದದಿರಚಿಸಿ ಪೂರೈಸಿ ಪೋಗಿರ |
ಲದನು ತಿಳಿದು ತಮ್ಮೊಳು ತವಕದಿ ಹೃದಯನಿರ್ಮಲರಾಗಿ ರಾಗದಿ |
ಬುಧಜನರ ಸಮ್ಮೇಳನದಿ ಸಿರಿ |
ಸದನನಂಘ್ರಯತಿಳಿದು ನೆನೆವರ |
ಉದಿತಭಾಸ್ಕರನಂತೆ ಪೊಳೆವರ
ಅಲವಬೋಧಮಿಕ್ಕಾದ ಮುನಿಗಳು |
ಸ ಅಂಶರು ಒಂದುರೂಪದಿ |
ನೆಲೆಯಾಗಿ ನಿತ್ಯದಲ್ಲಿ ಇಪ್ಪರು |
ಒಲಿಸಿಕೊಳುತಲಿ ಹರಿಯಗುಣಗಳ ||
ತಿಳಿದು ತಿಳಿಸುತ ತಮ್ಮ ತಮಕಿಂ |
ತಧಿಕರಿಂದುಪದೇಶಮಾರ್ಗದಿ |
ಕಲಿಯುಗದೊಳು ಕೇವಲ ಕ |
ತಲೆಯ ಹರಿಸುವ ಸೊಬಗ ಸಂತತ ರಾಮನರಹರಿ ಕೃಷ್ಣ ಕೃಷ್ಣರ |
ನೇಮದಿಂದೀ ಮೂರ್ತಿಗಳ ಪಾದ |
ತಾಮರಸ ಭಜನೆಯನುಮಾಳ್ವರು |
ಕೋಮಲಾಂಗದಿ ಕಠಿಣ ಪರವಾದಿ ಸ್ತೋಮಗಳ ಮಹಮಸ್ತಕಾದಿಗೆ |
ಭೂಮಿಯೊಳು ಪವಿ ಎನಿಸಿದ ಯತಿ ।
ಯಾಮಯಾಮಕೆ ಎಲ್ಲರಿಗೆ ಶುಭ |
ಕಾಮಿತಾರ್ಥವ ಕರೆವ ಗುರುಗಳ
ನೂರುಪರ್ವತ ವರುಷ ಬಿಡದಲೆ |
ಚಾರುವೃಂದಾವನದಲಿ ವಿ |
ಸ್ತಾರ ಆರಾಧನೆಯು ತೊಲಗದೆ |
ವಾರವಾರಕೆ ಆಗುತಿಪ್ಪುದು ||
ಸಾರೆ ಕಾರುಣ್ಯದಲ್ಲಿ ಲಕುಮಿ |
ನಾರಾಯಣ ತಾ ಚಕ್ರರೂಪದಿ |
ಸಾರಿದ ಕಳೆದು ಇವರಿಗೆ |
ಕೀರುತಿಯ ತಂದಿಪ್ಪರನುದಿನ
ಮಿತವು ಎನದಿರಿ ಇಲ್ಲಿ ದಿನದಿನ |
ಕತಿಶಯವೆ ಆಗುವುದು ಭೂಸುರ |
ತತಿಗೆ ಭೋಜನ ಕಥಾಶ್ರವಣ ಭಾ |
ರತ ಪುರಾಣಗಳಿಂದಲೊಪುತ ||
ಕ್ಷಿತಿಯೊಳಗೆ ಮಂಚಾಲೆ ಗ್ರಾಮಕೆ |
ಪ್ರತಿಯು ಇಲ್ಲವೆಂದೆನಿಸಿಕೊಂಬುದು |
ಪತಿತವಾವನ ವಿಜಯವಿಠಲನ |
ತುತಿಸಿಕೊಳ್ಳುತ ಮೆರೆವ ಗುರುಗಳ || ||
ಆಹಾ, ದಾಸರಾಯರು ಕಂಡ ದೃಶ್ಯವೆಷ್ಟು ರಮ್ಯ! ಜ್ಞಾನಿಗಳಾದ ದಾಸರು ಬೃಂದಾವನದಲ್ಲಿ ಬಂಗಾರದ ಮೈಬಣ್ಣದಿಂದ ಸಶರೀರರಾಗಿ ಉದಯಿಸುತ್ತಿರುವ ಸೂರ್ಯನ ತೇಜಸ್ಸಿನಿಂದ ಕಂಗೊಳಿಸುತ್ತಿರುವ ಶ್ರೀಗುರುರಾಜರನ್ನು ಪ್ರತ್ಯಕ್ಷವಾಗಿ ಕಂಡ ಮಹನೀಯರು! ಅವರ ಭಾಗ್ಯವೆಷ್ಟು ಹಿರಿದಾದುದು ? ತಾವು ಕಂಡ ಅದ್ಭುತರಮ್ಯದೃಶ್ಯವನ್ನು ಮೈಮರೆತು ಬಣ್ಣಿಸಿರುವ ಈ ಮಹತ್ವ ಪೂರ್ಣಪದವನ್ನು ವಿವೇಚಿಸಿದಾಗ, ಪಾಮರಜನರ ಕಣ್ಣಿಗೆ ಕಾಣದ ಶ್ರೀರಾಯರು ಬೃಂದಾವನದಲ್ಲಿ ಜೀವಂತರಾಗಿದ್ದು ಭಗವ೦ತನಸೇವೆಯಲ್ಲಿ ತಲ್ಲೀನರಾಗಿರುವುದು, ಅಲ್ಲಿನ ಅಸಾಧಾರಣ ಮಹಿಮೆಗಳೂ ಜ್ಞಾನಿಗಳ ದೃಷ್ಟಿಗೆ ಗೋಚರವಾಗುವುದೆಂಬುದನ್ನು ಈ ಪದವು ಸಾರುತ್ತಿರುವುದೆಂಬುದು ಮನವರಿಕೆಯಾಗುವುದು. ಶ್ರೀರಾಯರು ಬೃಂದಾವನ ಪ್ರವೇಶಮಾಡಿದ ತರುವಾಯ ಸುಮಾರು ಎಪ್ಪತ್ತೈದು ಎಂಬತ್ತು ವರ್ಷಗಳಾದ ಮೇಲೆ ದಾಸರಾಯರಿಗೆ ಪ್ರತ್ಯಕ್ಷ ದರ್ಶನವಿತ್ತಿರುವುದನ್ನು ಮನನಮಾಡಿದಾಗ ಶ್ರೀರಾಯರು ದೇವಾಂಶರೆಂಬುದು ಸ್ಪಷ್ಟವಾಗುವುದು.
ಶ್ರೀವಿಜಯದಾಸರಿಗೆ ರಾಯರು ದರ್ಶನವಿತ್ತ ಬಗೆ ನೋಡಿ, ಎಷ್ಟು ಮಹಿಮಾ ಪೂರ್ಣವಾಗಿದೆ -
ಹಿಂದೆ ಈ ತುಂಗಾನದಿಯ ತೀರದಲ್ಲಿ, ಈಗ ಬೃಂದಾವನವಿರುವ ಸ್ಥಳದಲ್ಲಿ ಪ್ರಹ್ಲಾದರಾಜರು ಅನೇಕ ಬಾರಿ ಯಜ್ಞಗಳನ್ನು ನೆರೆವೇರಿಸಿದ್ದಾರೆ. ಅದನ್ನು ಪ್ರಹ್ಲಾದಾವತಾರಿಗಳಾದ ರಾಯರು ಜ್ಞಾನದೃಷ್ಟಿಯಿಂದರಿತು, ಹಿಂದೆ ತಾವು ಯಜ್ಞಮಾಡಿದ ಸ್ಥಳದಲ್ಲಿಯೇ ಸಶರೀರರಾಗಿ ಬೃಂದಾವನ ಪ್ರವೇಶಮಾಡಬೇಕೆಂದು ತವಕದಿಂದ ನಿಶ್ಚಯಿಸಿ: ಬುಧಜನರಸಮಕ್ಷ ಬೃಂದಾವನ ಪ್ರವೇಶಮಾಡಿ, ಶ್ರೀಲಕುಮೀನಾಯಕನ ಪಾದಕಮಲಧ್ಯಾನಾಸಕ್ತರಾಗಿ ಯೋಗಾಸನಾರೂಢರಾಗಿ ಕುಳಿತು ಉದಯಿಸುತ್ತಿರುವ ಸೂರ್ಯನಂತೆ ಶೋಭಿಸುತ್ತಿದ್ದಾರೆ! ಇಲ್ಲಿ ಹನುಮ-ಭೀಮ-ಮಧ್ವ ರೂಪಗಳು ಮತ್ತು ಮೂಲರೂಪದಿಂದಲೂ ಶ್ರೀವಾಯುದೇವರು ವಿರಾಜಿಸಿದ್ದಾರೆ. ಅವರಂತೆ ಅನೇಕ ಮಹಾಮುನಿಗಳು ಮೂಲರೂಪದಿಂದ ರಾಜಿಸುತ್ತಾ ಶಾಶ್ವತವಾಗಿ ನೆಲೆನಿಂತು ಶ್ರೀಹರಿಯ ಗುಣಗಳನ್ನು ಶ್ರೇಷ್ಠರಿಂದ ಉಪದೇಶ ಪಡೆಯುತ್ತಾ ತಮಗಿಂತ ತಾರತಮ್ಯದಲ್ಲಿ ಕಿರಿಯರಾದವರಿಗೆ ಉಪದೇಶಮಾಡುತ್ತಾರಮಾಧವನನ್ನು ಒಲಿಸಿಕೊಳ್ಳುತ್ತಿದ್ದಾರೆ. ಕಲಿಯುಗದಲ್ಲಿ ಅಜ್ಞಾನಾಂಧಕಾರವನ್ನು ಪರಿಹರಿಸಿ ಜ್ಞಾನಜ್ಯೋತಿಯನ್ನು ಬೆಳಗುತ್ತಿರುವ ಆ ಕಮನೀಯ ದೃಶ್ಯವನ್ನು ಕಣ್ಣಾರೆ ಕಾಣುತ್ತಾದಾಸರಾಯರು ವರ್ಣಿಸುತ್ತಿದ್ದಾರೆ.
ಆಹಾ! ಎಂತಹ ಮನೋಹರದೃಶ್ಯ! ಮೂಲರಾಮಚಂದ್ರ, ನರಸಿಂಹಮೂರ್ತಿ, ವೇದವ್ಯಾಸದೇವರು, ಶ್ರೀಕೃಷ್ಣಪರಮ್ಮಾತರು ಬೃಂದಾವನದ ನಾಲ್ಕೂ ಪಾರ್ಶ್ವಗಳಲ್ಲಿ ಮಂಡಿಸಿದ್ದಾರೆ. ಶ್ರೀ ಪ್ರಹ್ಲಾದ-ಬಾಹ್ಲಿಕ-ವ್ಯಾಸರಾಜ-ರಾಘವೇಂದ್ರರು ನಾಲ್ಕು ಭಗವನ್ಮೂರ್ತಿಗಳ ಚರಣಕಮಲಗಳ ಆರಾಧನೆಯಲ್ಲಿ ಆಸಕ್ತರಾಗಿ ಪರವಾದಿಗಳೆಂಬ ಪರ್ವತಶ್ರೇಣಿಗಳ ಮಸ್ತಕಕ್ಕೆ ವಜ್ರಾಯುಧ ಸಮರಾಗಿ ಶೋಭಿಸುತ್ತಿದ್ದಾರೆ! ಯಾಮಯಾಮಗಳಲ್ಲೂ ತಮ್ಮನ್ನು ಸೇವಿಸುವ ಭಕ್ತವೃಂದಕ್ಕೆ ಮಂಗಳಪ್ರದರಾಗಿ, ಅಪೇಕ್ಷಿತ ಇಷ್ಟಾರ್ಥಗಳನ್ನು ಕಾಮಧೇನುವಿನಂತೆ ಕರುಣಿಸುತ್ತಿದ್ದಾರೆ! ಏಳುನೂರು ವರ್ಷಗಳ ಕಾಲ ಗುರುರಾಜರು ಸಶರೀರರಾಗಿ ಮನೋಜ್ಞ ಬೃಂದಾವನದಲ್ಲಿ ಒಂದು ಕ್ಷಣವೂ ಬಿಡದೆ ವಾಸಿಸುತ್ತಿರುವರೆಂಬುದನ್ನು, ಅಂದರೆ ಮುಂದಿನ ಭವಿಷ್ಯವನ್ನೂ ಕಂಡು ವಿಜಯದಾಸರು ಅಲ್ಲಿ ಮುಂದೆ ಜರಗುವ ವೈಭವಗಳನ್ನೂ ಕಣ್ಣಾರೆ ನಿರೀಕ್ಷಿಸಿ ಅಚ್ಚರಿಯಿಂದ ಉದ್ಗಾರ ತೆಗೆಯುತ್ತಿದ್ದಾರೆ!
ಇದು ಸಾಮಾನ್ಯ ಬೃಂದಾವನವೆಂದು ತಿಳಿಯಬೇಡಿರಿ! ಪೊಡವಿಗೊಡೆಯನ ನಿಡುಸೇವೆಯ ನಡಿಗಡಿಗೆ ಮಾಡಿ, ಪಾಲ್ಗಡಲೊಡೆಯನನ್ನು ತಮ್ಮ ಭಕ್ತಿಪಾಶದಿಂದ ಬಂಧಿಸಿ ಹೃದಯಸಿಂಹಾಸನದಿ ನೆಲೆಗೊಳಿಸಿರುವ ಮಹಾಮಹಿಮರಾದ ಪೊಡವಿ ಗುರುಗಳ ಬೆಡಗುಗೊಂಡಿರುವ ಬೃ೦ದಾವನವದು!
ಏಳುನೂರು ವರ್ಷಗಳವರೆಗೆ ಗುರುಗಳ ಬೃಂದಾವನ ಸನ್ನಿಧಿಯಲ್ಲಿ ವಿಶೇಷಾಕಾರವಾಗಿ ಪೂಜಾರಾಧನೆಗಳು ಜರುಗುತ್ತವೆ. ಒಂದು ದಿನವಾ-ಉತ್ಸವಗಳಿಲ್ಲದಿರುವುದಿಲ್ಲ ! ಪ್ರತಿವಾರಗಳಲ್ಲೂ ವಿಶೇಷ ಉತ್ಸವಗಳಾಗುವವು. ಶ್ರೀರಾಯರ ಪಾದಗಳನ್ನಾಶ್ರಯಿಸಿ ಬಂದು ಸೇವಿಸಿದರೆ ಕರುಣೆಯಿಂದ ಕಮಲಾಕಾಂತನಾದ ನಾರಾಯಣನು ಚಕ್ರರೂಪದಿಂದ ಅಲ್ಲಿ ನೆಲೆಸಿದ್ದು ಬಂದ ಭಕುತರ ಪಾಪಗಳನ್ನೆಲ್ಲಾ ಪರಿಹರಿಸಿ, ಅಖಿಲಾರ್ಥಗಳನ್ನಿತ್ತು ರಾಯರಿಗೆ ಕೀರುತಿಯನ್ನು ತಂದು ಕೋಡುತ್ತಾನೆ! ಮಂತ್ರಾಲಯದಲ್ಲಿ ಈ ಮಹನೀಯರ ಮಹಿಮೆಗೆ ಮಿತಿಯೇ ಇಲ್ಲ! ದಿನ ದಿನಕ್ಕೂ ಅತಿಶಯವೇ ಆಗುವುದು. ಸಹಸ್ರಾರುಜನ ಬ್ರಾಹ್ಮಣ- ಸುವಾಸಿನಿಯರಿಗೆ ಸಂತರ್ಪಣೆ, ಶ್ರೀಹರಿಯ ಕಥಾಕಾಲಕ್ಷೇಪ, ಭಾರತ-ಭಾಗವತಾದಿಪುರಾಣಗಳು, ಸಚ್ಛಾಸ್ತ್ರಪಾಠಪ್ರವಚನಗಳು ನಡೆಯುವವು ಜಗತ್ತಿನಲ್ಲಿ ಮಂತ್ರಾಲಯಕ್ಕೆ ಸಮವಾದ ಕ್ಷೇತ್ರ ಬೇರೋಂದಿಲ್ಲವೆಂದು ಖ್ಯಾತಿಯುಂಟಾಗುವುದು - ಹೀಗೆ ಅಲ್ಲಿ ಮುಂದೆ ನಡೆಯುವ ಸಮಸ್ತ ವಿಚಾರಗಳನ್ನೂ ಅಂದೇ ಬೃಂದಾವನದಲ್ಲಿ ಕಣ್ಣಾರೆ ನೋಡಿ ಏಳು ನೂರು ವರ್ಷಗಳ ಭಾವೀ ಮಹಿಮೆಗಳನ್ನು, ಸಜ್ಜನರ ಉದ್ಧಾರಕ್ಕಾಗಿ, ಆ ಅಚ್ಚರಿಯ ಪರಿಯನ್ನು ಬಿಚ್ಚು ನುಡಿಗಳಿಂದ ಸರ್ವರೂ ಮೆಚ್ಚುವಂತೆ ಈ ಪದದ ಮೂಲಕವಾಗಿ ಜನತೆಯ ಮನಃಪಟಲದಲ್ಲಿ ಅಚ್ಚಳಿಯದೆ ನಿಲ್ಲುವಂತೆ ಅಷ್ಟೊತ್ತಿಬಿಟ್ಟಿದ್ದಾರೆ. ಮಹಾನುಭಾವಾದಶ್ರೀವಿಜಯದಾಸಾರ್ಯರು.
ಶ್ರೀರಾಯರು ತಮ್ಮ ಬೃಂದಾವನ ಸನ್ನಿಧಿಯಲ್ಲಿ ತೋರಿರುವ ಮಿಕ್ಕೆಲ್ಲ ಮಹಿಮೆಗಳಗಿಂತ ಶ್ರೀವಿಜಯದಾಸರಲ್ಲಿ ಅನುಗ್ರಹ ಪೂರ್ವಕ ತೋರಿಸಿರುವ ಈ ಮಹಿಮೆಯು ಅತೃಪೂರ್ವವಾಗಿದೆ.
ವಿಜಯದಾಸರಿಗೆ ತಮ್ಮ ದರ್ಶನಮಾತ್ರವಲ್ಲದೆ, ಶ್ರೀಲಕ್ಷ್ಮೀಸಹಿತನಾದ ನಾರಾಯಣನ ಪಂಚರೂಪಗಳು, ವಾಯುದೇವರು ಮತ್ತು ಅವರ ಅವತಾರತ್ರಯರೂಪಗಳು ಆದಿಗುರುಗಳಾದ ಶ್ರೀಪದ್ಮನಾಭ-ಜಯತೀರ್ಥಾದಿ-ಶ್ರೀಪುರಂದರದಾಸರ ಪರ್ಯಂತ ಎಲ್ಲ ಮಹಾನುಭಾವರು ತಮ್ಮ ಹಿಂದಿನ ಪ್ರಹ್ಲಾದ-ಬಾಕ ವ್ಯಾಸರಾಜಾವತಾರಗಳ ದರ್ಶನವನ್ನೂ ಮಾಡಿಸಿ, ಮುಂದಿನ ಏಳುನೂರು ವರ್ಷಕಾಲ ಅಲ್ಲಿ ಜರುಗುವ ಅದ್ಭುತ ವ್ಯಾಪಾರ ಮಹಿಮೆ ವೈಭವಗಳನ್ನೂ ಚಿತ್ರದಂತೆ ತೋರಿಸಿದ ಗುರುಸಾರ್ವಭೌಮರ ಅಗಮ್ಯ ಮಹಿಮೆಗೆ ಎಣೆಯುಂಟೆ ? ಅದನ್ನು ನಿರ್ಮಲಹೃದಯದಿಂದ, ಅನುಭವದಿಂದ ತಿಳಿದು ಆನಂದಿಸಬೇಕೇ ಹೊರತು ವರ್ಣಿಸಲು ಯಾರೂ ಶಕ್ತರಲ್ಲ! ಶ್ರೀರಾಯರು ಬೃಂದಾವನ ಪ್ರವೇಶಮಾಡಿದ ಮೇಲೆ ಮೊದಲ ಶತಮಾನದಲ್ಲಿನ ಈ ಮಹಿಮೆಯು ಅನ್ಯಾದೃಶವೆಂದು ಘಂಟಾಘೋಷವಾಗಿ ಹೇಳಬಹುದು.
ಮಂತ್ರಾಲಯಕ್ಷೇತ್ರವು ಆಧ್ಯಾತಜ್ಞಾನಕೇಂದ್ರವಾಗಿದ್ದಂತೆ ಹರಿದಾಸಸಾಹಿತ್ಯ ಭಕ್ತಿಪಂಥದ ತಾಯ್ತನೆಯೆನಿಸಿ ಕನ್ನಡ ಹರಿದಾಸರ ಯಾತ್ರಾಸ್ಥಳವೆನಿಸಿ ಹದಿನೆಂಟು ಹತ್ತೊಂಭತ್ತನೆಯ ಶತಮಾನದಲ್ಲಿ ಮೆರೆದಿದ್ದು ಮಾತ್ರವಲ್ಲದೆ ಅದ್ಯಾಪಿ ಮೆರೆಯುತ್ತಿದೆ. ಆ ಕಾಲದ ಎಲ್ಲ ಜ್ಞಾನಿಗಳು, ಯೋಗಿಗಳು, ಸಾಧಕರು, ಆರಾಧಕರು, ವಿಬುಧಾನೀಕರು ಮಂತ್ರಾಲಯಕ್ಕೆ ಬಂದು ಜ್ಞಾನರೂಪ ಸಪರ್ಧೆಯಿಂದ ಜ್ಞಾನಿ ನಾಯಕರಾದ ಗುರುರಾಜರನ್ನು ಆರಾಧಿಸಿ, ಮೋದಗೊಳಿಸಿ, ತಾವೆಸಗಿದ ಜ್ಞಾನ ಯಜ್ಞದಫಲವನ್ನು ರಾಯರದ್ವಾರಾಪರಮಾತ್ಮನಿಗೆ ಸಮರ್ಪಿಸಿ, ಗುರುಗಳಕಾರುಣ್ಯದಿಂದ ಜ್ಞಾನ-ಭಕ್ತಿ-ವೈರಾಗ್ಯಸಂಪತ್ತನ್ನು ಅಭಿವೃದ್ಧಿಗೊಳಿಸಿಕೊಂಡು. ನಿಜಗುರಿಯನ್ನು ಮುಟ್ಟಲು ಶ್ರೀಮದಾನಂದತೀರ್ಥರು ತೋರಿದ ಆನಂದಮಾರ್ಗದಲ್ಲಿ ಮುನ್ನಡಿಯಿಟ್ಟು ಕೃತಾರ್ಥರಾಗುತ್ತಿದ್ದರು.
ಇದರಂತೆ ಪ್ರತಿವರ್ಷ ಭಾರತದ ನಾನಾಭಾಗಗಳಿಂದ ಸಾಧುಸಂತರು. ಹರಿದಾಸರು, ಶ್ರೀಮಂತ್ರಸಿದ್ದಿ ಕ್ಷೇತ್ರಕ್ಕೆ ಬಂದು ತಾವು ರಚಿಸಿದ ಕೃತಿಗಳನ್ನು ರಾಯರಿಗೆ ಸಮರ್ಪಿಸಿ, ಅವರ ಸೇವೆಗೈದು ಗುರುಗಳ ಪ್ರತ್ಯಕ್ಷ ಅಥವಾ ಸ್ವಪ್ನಸೂಚಿತ ಆದೇಶದಂತೆ ನಡೆದು ಜನತೆಯ ಆಧ್ಯಾತ್ಮಿಕ-ಧಾರ್ಮಿಕ-ಸಾಂಸ ತಿಕ-ಸಾಮಾಜಿಕ, ನೈತಿಕ ಪ್ರಗತಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟು ಸೇವೆ ಮಾಡಲು ಗುರುಸನ್ನಿಧಿಯಲ್ಲಿ ಪ್ರತಿಜ್ಞಾಬದ್ಧರಾಗುತ್ತಿದ್ದರು.
ಮಂತ್ರಾಲಯದಲ್ಲಿ ವರ್ಷಂಪ್ರತಿ ನೆರವೇರುತ್ತಿದ್ದ ಜ್ಞಾನಿಗಳ, ಹರಿದಾಸರ, ಭಕ್ತರ ಮಹಾಸಮ್ಮೇಳನಗಳಲ್ಲಿ ಪಂಡಿತರು, ಹರಿದಾಸರು, ಕವಿಗಳು, ಗಾಯಕರುಗಳು ಬಂದು ಬಹುಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಶ್ರೀಸುಮತೀಂದ್ರ ತೀರ್ಥರು, ಶ್ರೀವಾದೀಂದ್ರ ತೀರ್ಥರು, ಶ್ರೀವಸುಧೇಂದ್ರ-ವರದೇಂದ್ರ-ಧೀರೇಂದ್ರ-ಭುವನೇಂದ್ರ ವ್ಯಾಸತತ್ವಜ್ಞ-ಸತ್ಯಬೋಧತೀರ್ಥರಂಥಾ ಜ್ಞಾನಿಶಿರೋಮಣಿಗಳು. ಶ್ರೀವಿಜಯದಾಸರು, ಗೋಪಾಲದಾಸರು, ಜಗನ್ನಾಥದಾಸರು, ಪ್ರಾಣೇಶದಾಸರಂಥ ಅಪರೋಕ್ಷ ಜ್ಞಾನಿ ಹರಿದಾಸರುಗಳ ನೇತೃತ್ವದಲ್ಲಿ ಮಹಾಸಮ್ಮೇಳನ, ಜ್ಞಾನಸತ್ರಗಳು ತಿಂಗಳಗಟ್ಟಲೆ ನಡೆಯುತ್ತಿತ್ತು. ಆ ಜ್ಞಾನಿಗಳ ಒಕ್ಕೂಟದಲ್ಲಿ-ಉಪದೇಶ, ಕೀರ್ತನೆ-ಭಜನೆಗಳ ಮೂಲಕವಾಗಿ ಸಹಸ್ರಾರುಜನ ಆಸ್ತಿಕರು ಪಾಲ್ಗೊಂಡು ತಮ್ಮ ಜೀವನ ಸಾಫಲ್ಯವನ್ನು ಪಡೆಯುತ್ತಿದ್ದರು. ಇವೆಲ್ಲಕ್ಕೂ ಶ್ರೀಗುರುರಾಜರೇ ಕೇಂದ್ರಬಿಂದುವಾಗಿದ್ದರು. ಇಂಥ ಮಹನೀಯರ ಮಹಿಮೆ ಎಷ್ಟು ಹೇಳಿದರೂ ಸ್ವಲ್ಪವೇ ಸರಿ.