ಶ್ರೀಗುರುರಾಜೋ ವಿಜಯತ

ಕಲಿಯುಗ - ಕಲ್ಪತರು

ಅನುಬಂಧ

ಬೃಂದಾವನಪ್ರವೇಶಾನಂತರ ಮಹಿಮೆಗಳು

೮. ಶ್ರೀಗುರುಮಹಿಮಾ ಪ್ರಸರಕರ ಅವತಾರ

ಶ್ರೀರಾಘವೇಂದ್ರಸ್ವಾಮಿಗಳವರ ಮಹಿಮೆ ಇಂದು ಜಗತ್ತಿನಲ್ಲೆಲ್ಲಾ ವ್ಯಾಪಿಸಿ ದೇಶದಲ್ಲಿ ಮನೆಮಾತಾಗಿದೆ. ಕೋಟ್ಯಂತರ ಜನರು ಜಾತಿ, ಮತ, ಪಂಥ, ದೇಶ ಭಾಷೆಗಳ ಭೇದವಿಲ್ಲದೆ ಆ ಯತಿವರ್ಯರ ಭಜಕರಾಗಿ, ಸೇವಿಸಿ ಅವರ ಅನುಗ್ರಹದಿಂದ ತಮ್ಮೆಲ್ಲ ಅಧಿವ್ಯಾಧಿಗಳನ್ನು ಕಳೆದುಕೊಂಡು ಮನೋಭೀಷ್ಟಗಳನ್ನು ಪಡೆದು ಸುಖಿಸುತ್ತಿದ್ದಾರೆ. ಹಳ್ಳಿಯಂತಿದ್ದ ಮಂತ್ರಾಲಯವಿಂದು ಸುರಪನಾಲಯದಂತೆ ಕಂಗೊಳಿಸಿ ವಿಶ್ವದ ಮಾನವರನ್ನು, ತನ್ನತ್ತ ಆಕರ್ಷಿಸಿ ಭಾರತದ ಪ್ರಸಿದ್ಧ ಯಾತ್ರಾಸ್ಥಳಗಳಲ್ಲೊಂದಾಗಿ ಮಹಿಮೆ ಬೀರುತ್ತಿದೆ. 

ರಾಯರು ಬೃಂದಾವನ ಪ್ರವೇಶಮಾಡಿದ ಎರಡನೆಯ ಶತಮಾನದ ಅಂತ್ಯಭಾಗದಲ್ಲಿ ರಾಯರ ಪೂರ್ವಾಶ್ರಮ ಪಾವನ ವಂಶದಲ್ಲಿ ಗುರುರಾಜರ ವರಬಲದಿಂದ ನಂಜನಗೂಡಿನಲ್ಲಿ ಇಂತು ಅದ್ಭುತಪ್ರಗತಿಯನ್ನು ತಮ್ಮ ಮಹಿಮೆಯಿಂದ ವ್ಯಕ್ತಪಡಿಸಿದ ಶ್ರೀರಾಯರ ಮಹಿಮಾ ಪ್ರಸಾರಕ ರವಿಯ ಉದಯವಾಯಿತು. ಶ್ರೀಗುರು ರಾಜರ ಮಹಿಮಾಪ್ರಸಾರಕರಾಗಿ ಇಂದು ಆ ಗುರುಗಳ ಅನುಗ್ರಹಕ್ಕೆ ಲಕ್ಷಾಂತರ ಜನರು ಪಾತ್ರರಾಗುವಂತೆ ಮಾಡಿದ ಮಹನೀಯರ ಚರಿತೆಯೂ ರಾಯರಮಹಿಮೆಯೇ ಆಗಿರುವುದರಿಂದ ಅದನ್ನಿಲ್ಲಿ ನಿರೂಪಿಸುವುದು ಸೂಕ್ತವಾಗಿದೆ. 

ಶ್ರೀಸುಜ್ಞಾನೇಂದ್ರರ ತರುವಾಯ ಶ್ರೀಮದಾಚಾರ್ಯರ ಮಹಾಸಂಸ್ಥಾನದಲ್ಲಿ ಶ್ರೀದೂರ್ವಾಸಾಂಶರೂ, ಮಹಾಮಹಿಮರೂ ಆದ ಶ್ರೀಸುಧರ್ಮೇಂದ್ರತೀರ್ಥರೂ (೧೮೬೧-೧೮೭೨) ಅವರ ಬಳಿಕ, ಶ್ರೀಸುಜ್ಞಾನೇಂದ್ರರ ಪೂರ್ವಾಶ್ರಮದ್ವಿತೀಯ ಪುತ್ರರೂ, ಮಹೀಶ್ವರದೇಶದಲ್ಲಿ ಬಂದೊದಗಿದ್ದ ಕಾಮಕಾಲದಲ್ಲಿ ಶ್ರೀಮಠದ ಸಿರಿಸಂಪತ್ತುಗಳನ್ನು ವ್ಯಯಮಾಡಿ ಎರಡು ವರ್ಷ ಕಾಲ ಸಹಸ್ರಾರು ಜನರನ್ನು ಸಂರಕ್ಷಿಸಿ ಶ್ರೀರಾಯರ ಹಿಂದಿನ ಮಹಿಮೆಯನ್ನು ಸ್ಮರಣೆಗೆ ತಂದುಕೊಟ್ಟು ಜಗನ್ಮಾನ್ಯರಾದ ಶ್ರೀಸುಗುಣೇಂದ್ರತೀರ್ಥರು (೧೮೭೨-೧೮೮೪) ವಿರಾಜಿಸಿ ಸರ್ವಜ್ಞಸಿಂಹಾಸನವನ್ನಾಳಿದರು. ಅವರ ತರುವಾಯ ಶ್ರೀಸುಜ್ಞಾನೇಂದ್ರರ ಪೂರ್ವಾಶ್ರಮ ಜೇಷ್ಠಪುತ್ರರಾದ ರಾಜಾ. ರಾಜಗೋಪಾಲಾಚಾರರ ದ್ವಿತೀಯ ಪುತ್ರರಾದ ಶ್ರೀಗುರುರಾಜಾಚಾರರೆಂಬ ವಿದ್ವನ್ಮಣಿಗಳು “ಶ್ರೀಸುಪ್ರಜೇಂದ್ರತೀರ್ಥರೆಂಬ ಅಭಿದಾನದಿಂದ (೧೮೮೪-೧೯೦೩) ಶ್ರೀಮದಾಚಾರ ಮಹಾಸಂಸ್ಥಾನಾಧಿಪತಿಗಳಾಗಿ ಕಂಗೊಳಿಸಿದರು. ಆ ಕಾಲದಲ್ಲಿಯೇ ಶ್ರೀರಾಯರ ಮಹಿಮಾ ಪ್ರಸಾರಕರವಿಯ ಅವತಾರವಾಯಿತು. 

ಶ್ರೀಸುಪ್ರಜೇಂದ್ರತೀರ್ಥರು ಸಕಲಶಾಸ್ತ್ರಪಾರಂಗತರಾಗಿದ್ದರು. ಹತ್ತಿಪ್ಪತ್ತು ಜನಶಿಷ್ಯರು ಅವರಲ್ಲಿ ನ್ಯಾಯ-ವೇದಾಂತಾದಿ ಶಾಸ್ತ್ರಗಳನ್ನು ಅಧ್ಯಯನ ಮಾಡಿ ಪಂಡಿತರಾದರು. ಶ್ರೀಯವರಿಗೆ ಕುಲದೇವ ಶ್ರೀನಿವಾಸ, ವಾಯುದೇವರು, ಶ್ರೀಗುರುರಾಜ ಶ್ರೀಗಳವರು ಸರ್ವಜನಹಿತೈಷಿಗಳಾಗಿ, ದೀನ-ದಲಿತರಲ್ಲಿ ಬಹುಕಾರುಣ್ಯ ತೋರುತ್ತಿದ್ದರು. ಆಶ್ರಿತರಲ್ಲಿ ಅವರ ಅನುಗ್ರಹ ಅಸಾಧಾರಣವಾಗಿತ್ತು. ವಿದ್ವಜ್ಜನಪಕ್ಷಪಾತಿಗಳಾಗಿದ್ದ ಶ್ರೀಗಳವರು ನೂರಾರು ಕುಟುಂಬಗಳು ಶಾಶ್ವತವಾಗಿ ಜೀವಿಸಲು ಉದಾರವಾಗಿ ಸಹಾಯಮಾಡಿದ ಮಹಾನುಭಾವರು. ಭಗವದನುಗ್ರಹದಿಂದ ಶ್ರೀಗಳವರಿಗೆ ವಾಕ್ಸಿದ್ಧಿ ಲಭಿಸಿತ್ತು. ಅವರು ಆಶೀರ್ವದಿಸಿದರೆ ಅದು ಫಲಿಸುವುದೆಂದು ಜನರು ನಂಬಿದ್ದರು. 

ಶ್ರೀಸುಪ್ರಜೇಂದ್ರರ ಅಣ್ಣಂದಿರಾದ ರಾಜಾ. ವೆಂಕಟರಾಘವೇಂದ್ರಾಚಾರರಿಗೆ ರಾಜಾ, ವೇಣುಗೋಪಾಲಾಚಾರ (ಮುಂದೆ ಶ್ರೀಸುಕೃತೀಂದ್ರತೀರ್ಥರು). ರಾಜಾ. ಕೃಷ್ಣಾಚಾರ್ಯ (ಮುಂದೆ ಶ್ರೀಸುಶೀಲೇಂದ್ರತೀರ್ಥರು) ರಾಜಾ. ಸುಜ್ಞಾನೇಂದ್ರಾ- ಚಾರ್ಯ(ಅಧುನಾ ಪೀಠವಿರಾಜಿತರಾದ ಶ್ರೀಸುಜಯಿಂದ್ರತೀರ್ಥರ ತಂದೆಗಳು)ರೆಂಬ ಮೂವರು ಪುತ್ರರಿದ್ದರು. ಇವರಲ್ಲಿ ಹಿರಿಯರಾದ ವೇಣಗೋಪಾಲಾಚಾರ್ಯರು ಮಠದ ಮುಖ್ಯ ಪಂಡಿತರೂ, ಅಧಿಕಾರಿಗಳೂ ಆಗಿದ್ದರು. ಅವರ ಧರ್ಮಪತ್ನಿ ಗಂಗಾಬಾಯಿ, ಈ ಆಚಾರ ದಂಪತಿಗಳಿಗೆ ಸೀತಾಬಾಯಿ ಎಂಬೋರ್ವ ಪ್ರತ್ರಿ ಜನಿಸಿದ್ದಳು. ಆದರೆ ಮುಂದೆ ಬಹುವರ್ಷವಾದರೂ ಸಂತಾನವಾಗಲಿಲ್ಲ, ಶ್ರೀಸುಪ್ರಜೇಂದ್ರರ ಅಪ್ಪಣೆಯಂತೆ ಆಚಾರ ದಂಪತಿಗಳು ಹಿಂದೆ ಶ್ರೀಗುರುರಾಜರ ತಂದೆ-ತಾಯಿಗಳಾದ ತಿಮ್ಮಣ್ಣಾಚಾರ್ಯ-ಗೋಪಿಕಾಂಬಾದೇವಿಯರು ಕುಲದೇವನಾದ ಶ್ರೀನಿವಾಸನನ್ನು ಸೇವಿಸಿ ಶ್ರೀರಾಯರನ್ನು ಪಡೆದಂತೆ ಇವರೂ ತಮ್ಮ ವಂಶದ ಪೂರ್ವಾಚಾರ್ಯರೂ, ಲೋಕಗುರುಗಳೂ ಆದ ರಾಯರಿಗೆ ಶರಣಾಗತರಾಗಿ ಸತ್ಪುತ್ರನನ್ನು ಪಡೆಯಲು ಸೇವೆಮಾಡಲು ಮಂತ್ರಾಲಯಕ್ಕೆ ಹೋಗಿ ವ್ರತನಿಯಮ, ಉಪವಾಸ, ಸಚ್ಛಾಸ್ತ್ರಪಾರಾಯಣಾದಿಗಳಿಂದ ಅನನ್ಯಭಾವದಿಂದ ರಾಯರನ್ನು ಸೇವಿಸಹತ್ತಿದರು. 

ಆಚಾರರಿಗೆ ಕೇವಲ ಕುಲದೀಪಕನಾದ ಪುತ್ರಜನಿಸುವುದಷ್ಟೇ ಇಚ್ಛೆಯಾಗಿರಲಿಲ್ಲ. ಜನಿಸುವ ಪುತ್ರನು ರಾಯರ ಅವಿಚ್ಛಿನ್ನ ಭಕ್ತನೂ, ಮತ್ತಾರೂ ಮಾಡದ ರೀತಿಯಲ್ಲಿ ರಾಯರ ಸೇವೆಮಾಡುವವನೂ, ಮಂತ್ರಾಲಯವನ್ನು ದಾಸರು ಹೇಳಿದಂತೆ ಸುರಪನಾಲಯವನ್ನಾಗಿಮಾಡಿ, ಗುರುರಾಜರ ಮಹಿಮಾ ಪ್ರಸಾರಮಾಡಿ, ಲೋಕದಜನರು ರಾಯರ ಭಕ್ತರಾಗಿ, ಅವರನ್ನು ಸೇವಿಸಿ ಶ್ರೇಯೋವಂತರಾಗುವಂತೆ ಮಾಡಬಲ್ಲ ವಿಶ್ವಹಿತಚಿಂತಕನಾದ ಸತ್ಪುತ್ರನನ್ನು ಬಯಸಿ ಅವರು ಇಂಥ ಅಸದೃಶ ಗುಣವಿಶಿಷ್ಟ ಪುತ್ರನಿಗಾಗಿ ಶ್ರೀರಾಯರನ್ನು ಸೇವಿಸುತ್ತಾ ಪ್ರಾರ್ಥಿಸುತ್ತಿದ್ದರು. 

ನಲವತ್ತೆಂಟು ದಿನ ಆಚಾರ ದಂಪತಿಗಳ ಸೇವೆ ಸುಸೂತ್ರವಾಗಿ ಜರುಗಿತು. ಅಂದು ರಾತ್ರಿ ರಾಯರು ಆಚಾರ ದಂಪತಿಗಳಿಗೆ ಸ್ವಪ್ನದಲ್ಲಿ ಅಭಯಮುದ್ರಾಂಕಿತರಾಗಿ ನಗುಮುಖದಿಂದ ದರ್ಶನವಿತ್ತು "ವತ್ಥ, ಕುಮಾರಿ, ನಿಮ್ಮ ಸೇವೆಯಿಂದ ಸುಪ್ರೀತರಾಗಿದ್ದೇವೆ. ನಿಮ್ಮ ಮನೋರಥವು ಫಲಿಸುವುದು. ಇಕೋ, ವರವೀಯುತ್ತಿದ್ದೇವೆ. ನಮ್ಮ ಪರಮಾನುಗ್ರಹ ಪಾತ್ರನೂ, ಅಂತರಂಗಭಕ್ತನೂ, ಸಾತ್ವಿಕ ದೈವೀಸಂಪದ್ದಿರಾಜಿತನೂ, ನಮ್ಮ ವಂಶ ಹಾಗೂ ಮಹಾಸಂಸ್ಥಾನದ ಕೀರ್ತಿಯನ್ನು ಬೆಳಗಿಸುವವನೂ ಆದ ಸತ್ಪುತ್ತನು ನಿಮಗೆ ಜನಿಸುವನು. ನಿಮಗೆ ಮಂಗಳವಾಗಲಿ” ಎಂದು ಆಶೀರ್ವದಿಸಿ ದಂಪತಿಗಳಿಗೆ ಶ್ರೀರಾಮಪ್ರತಿಮಾ, ಹೂವಿನಸರ, ಗಂಧ-ಫಲಮಂತ್ರಾಕ್ಷತೆಗಳನ್ನಿತ್ತು ಅದೃಶ್ಯರಾದರು! ಬೆಳಗಿನ ಝಾವ ಎಚ್ಚರಗೊಂಡು ಆಚಾರದಂಪತಿಗಳು ಸ್ವಪ್ನಾರ್ಥವನ್ನು ಪರಸ್ಪರ ಹೇಳಿಕೊಂಡು ರಾಯರ ದಯವಾಯಿತೆಂದು ಆನಂದನಿರ್ಭರರಾಗಿ ಅಂದು ಗುರುರಾಜರಿಗೆ ಹಸ್ತೋದಕಸಮರ್ಪಿಸಿ, ಅಪ್ಪಣೆಪಡೆದು ನಂಜನಗೂಡಿಗೆ ಮರಳಿದರು. 

ವೇಣುಗೋಪಾಲಾಚಾರರು ಶ್ರೀಸುಪ್ರಜೇಂದ್ರತೀರ್ಥರಲ್ಲಿ ರಾಯರ ಅನುಗ್ರಹ, ಸ್ವಪ್ನ ವಿಚಾರಗಳನ್ನು ಅರಿಕೆಮಾಡಿದರು. ಸಂತುಷ್ಟರಾದ ಶ್ರೀಗಳವರು ನಸುನಕ್ಕು “ವೇಣು, ನೀನು ಭಾಗ್ಯಶಾಲಿಯಪ್ಪ, ಲೋಕಕಲ್ಯಾಣಕಾರಕರಾದ ಶ್ರೀರಾಯರ ಮಹಿಮಾ ಪ್ರಸಾರದಲ್ಲಿ ನಿನಗೆಷ್ಟು ದೀಕ್ಷೆ! ಗುರುರಾಜರು ಶ್ರೀರಾಮ ಪ್ರತಿಮೆ. ಹೂವಿನ ಸರಗಳನ್ನು ಕರುಣಿಸಿದರಲ್ಲವೇ? ಅದರ ಅರ್ಥವೇನು ಬಲ್ಲೆಯಾ? ಜಗನ್ಮಂಗಳ ಮೂರ್ತಿಯಾದ ಶ್ರೀಮೂಲರಾಮನನ್ನು ಪೂಜಿಸುವ, ಅಂದರೆ ಮುಂದೆ ನಮ್ಮ ಮಹಾಪೀಠದ ಅಧಿಪತಿಯಾಗುವ ಭಾಗ್ಯಶಾಲಿ ಪುತ್ರನನ್ನೇ ಕರುಣಿಸಿದ್ದೇವೆ - ಎಂದು ರಾಯರು ಸೂಚಿಸಿದ್ದಾರೆ! ನಿನ್ನ ಅಪೇಕ್ಷೆಯಂತೆ ನಿನ್ನ ಪುತ್ರನು ರಾಯರ ಮಹಿಮಾ ಪ್ರಸಾರವನ್ನು ಹೂವಿನಸರವೆತ್ತಿದಷ್ಟು ಸುಲಭವಾಗಿ ಯಶಸ್ವಿಯಾಗಿ ನೆರವೇರಿಸುವನೆಂದು ಸ್ವಪ್ನದ ಭಾವ! ಇಂತಹ ಸತ್ಪುತ್ರನನ್ನು ಪಡೆಯಲಿರುವ ನೀನು ಭಾಗ್ಯಶಾಲಿ!” ಎಂದು ಉದ್ಗಾರ ತೆಗೆದರು. 

ಶ್ರೀಗುರುಸಾರ್ವಭೌಮರ ಕಾರುಣ್ಯವಾದ ಮೇಲೆ ಕೇಳುವುದೇನು ? ಸ್ವಲ್ಪ ದಿನಗಳಲ್ಲಿ ಶ್ರೀಮತಿ ಗಂಗಾಬಾಯಿಯವರು ಗರ್ಭಧರಿಸಿದರು. ಒಂದು ಶುಭ ಮುಹೂರ್ತದಲ್ಲಿ ಕ್ರಿ.ಶ. ೧೮೯೬ನೇ ಶಾಲಿವಾಹನ ಶಕೆ ೧೮೧೮ನೆಯ ದುರ್ಮುಖ ಸಂವತ್ಸರದ ಮಾರ್ಗಶಿರ ಶುಕ್ಲ ಪೂರ್ಣಿಮಾ ದಿವಸ ಶ್ರೀರಾಯರ ವರಬಲದಿಂದ ಗಂಗಾಬಾಯಿ ಸತ್ಪುತ್ರನನ್ನು ಪ್ರಸವಿಸಿದರು. ಶ್ರೀಗುರುರಾಜರ ಮಹಿಮಾ ಪ್ರಸಾರಕ ರವಿ ಉದಯಿಸಿದ ! ಸುಪ್ರಜೇಂದ್ರತೀರ್ಥರ ಅಪ್ಪಣೆಯಂತೆ ಶ್ರೀವೇಣುಗೋಪಾಲಾಚಾರರು ವೈದಿಕವಿಧಿಪೂರ್ವಕವಾಗಿ ಪುತ್ರರಿಗೆ ಜಾತಕರ್ಮ - ನಾಮಕರಣಮಹೋತ್ಸವಗಳನ್ನು ವೈಭವದಿಂದ ಜರುಗಿಸಿ, ಕುಲದೇವ ಶ್ರೀವೆಂಕಟೇಶ್ವರ, ಇಷ್ಟದೈವ ನಂಜನಗೂಡಿನ ಶ್ರೀಕಂಠೇಶ್ವರ, ವಂಶದ ಪೂರ್ವಾಚಾರರಾದ ಶ್ರೀರಾಘವೇಂದ್ರಸ್ವಾಮಿಗಳ ಹೆಸರೂ ಬರುವಂತೆ “ಶ್ರೀನಿವಾಸ ನಂಜುಂಡ ರಾಘವೇಂದ್ರ” ಎಂದು ಹೆಸರಿಟ್ಟರು. 

ಶ್ರೀಗುರುರಾಜರು ವರಸಂಜಾತನಾದ ಈ ಶಿಶುವೇ ಮುಂದೆ ರಾಜಾ ಶ್ರೀನಿವಾಸಮೂರ್ತ್ಯಾಚಾರ ಎಂಬ ಹೆಸರಿನಿಂದ ಅಭಿವೃದ್ಧಿಸಿ, ಕ್ರಿ.ಶ. ೧೯೩೩ರಲ್ಲಿ ಶ್ರೀಸುವ್ರತೀಂದ್ರತೀರ್ಥರ ವರಕುಮಾರಕನಾಗಿ “ಶ್ರೀಸುಯಮೀಂದ್ರತೀರ್ಥಶ್ರೀಪಾದಂಗಳವರು ಎಂಬ ಅಭಿಧಾನದಿಂದ ಶ್ರೀಮಹಾಸಂಸ್ಥಾನಾಧಿಪತಿಗಳಾಗಿ ೩೩ ವರ್ಷ ಕಾಲ ವಿರಾಜಿಸಿ, ಅವಿಚ್ಛಿನ್ನವಾಗಿ ಸ್ವಹಸ್ತದಿಂದ ರಾಯರನ್ನು ೨೫ ವರ್ಷಕಾಲ ಸೇವಿಸಿ, ಹಸ್ತೋದಕ ಸಮರ್ಪಿಸುತ್ತಾಮಂತ್ರಾಲಯವನ್ನು ಸರ್ವತೋಮುಖವಾಗಿ ಅಭಿವೃದ್ಧಿಪಡಿಸಿ, ಶ್ರೀರಾಯರ ಮಹಿಮೆ ದೇಶ-ವಿದೇಶಗಳಲ್ಲೂ ಹರಡುವಂತೆ ಮಾಡಿ “ಶ್ರೀರಾಯರ ಕರುಣೆಯ ಕಂದ”, “ಮಂತ್ರಾಲಯದ ಮಹಾಶಿಲ್ಪಿ” ಎಂದು ಸರ್ವಮಾನ್ಯರಾದರು!