ಶ್ರೀಗುರುರಾಜೋ ವಿಜಯತ

ಕಲಿಯುಗ - ಕಲ್ಪತರು

ಅನುಬಂಧ

ಬೃಂದಾವನಪ್ರವೇಶಾನಂತರ ಮಹಿಮೆಗಳು

ಶ್ರೀಗುರುರಾಜೋ ವಿಜಯತ

ಕಲಿಯುಗ - ಕಲ್ಪತರು

ಅನುಬಂಧ

ಬೃಂದಾವನಪ್ರವೇಶಾನಂತರ ಮಹಿಮೆಗಳು

೯. ಮಂತ್ರಾಲಯದ ಮಹಾಶಿಲ್ಪಿಗಳು

ಶ್ರೀಮಂತ್ರಾಲಯ ಕ್ಷೇತ್ರದ ಅಭಿವೃದ್ಧಿ, ರಾಯರ ಮಹಿಮಾ ಪ್ರಸಾರಗಳನ್ನು ನೆರವೇರಿಸಿದ ಕೀರ್ತಿ (೧) ಶ್ರೀಸುಶೀಲೇಂದ್ರ- ತೀರ್ಥರು, (೨) ಶ್ರೀಸುವತೀಂದ್ರತೀರ್ಥರು, (೩) ಶ್ರೀಸುಯಮೀಂದ್ರತೀರ್ಥರು ಮತ್ತು ಅವರ ಮರಕುಮಾರಕಾದ (೪) ಶ್ರೀಸುಜಮೀಂದ್ರ ತೀರ್ಥರು ಈ ನಾಲ್ವರು ಮಹನೀಯರಿಗೆ ಸಲ್ಲುವುದು. 

(೧) ಶ್ರೀಸುಶೀಲೇಂದ್ರತೀರ್ಥರು 

ಕ್ರಿ.ಶ. ೧೯೦೩ರಿಂದ ೧೯೧೨ರವರೆಗೆ ಸರ್ವಜ್ಞ ಸಿಂಹಾಸನಾಧಿಪತಿಗಳಾಗಿದ್ದ ಶ್ರೀಸುಕೃತೀಂದ್ರತೀರ್ಥರಿಂದ (ಪೂರ್ವಾಶ್ರಮದ ವೇಣುಗೋಪಾಲಾಚಾರರು) ಪರಮಹಂಸಾಶ್ರಮವನ್ನು ಪಡೆದು ೧೯೧೨ರಿಂದ ೧೯೨೬ರವರೆಗೆ ಶ್ರೀಮದಾಚಾರರ ಮಹಾಸಂಸ್ಥಾನವನ್ನಾಳಿದ ಶ್ರೀಸುಶೀಲೇಂದ್ರತೀರ್ಥರ ಮಹಿಮೆ ಎಷ್ಟು ವರ್ಣಿಸಿದರೂ ಸ್ವಲ್ಪವೇ ಸರಿ!

ಪರಮಹಂಸಕುಲತಿಲಕರು, ಸೌಶೀಲ್ಯಾದಿಸದ್ಗುಣಸಂಪನ್ನರು, ವೇದವಿದ್ಯಾಕೋವಿದರು. ದೈತಸಿದ್ಧಾಂತಪ್ರತಿಷ್ಠಾಪಕರು. ಪಂಡಿತಮಂಡಲೀಲಾಲ್ಯಮಾನರು, ವಿದ್ವಜ್ಜನಪೋಷಕರು, ಆಶ್ರಿತಜನಾಭಿಷ್ಟದಾಯಕರು. ಔದಾರ್ಯಾಕೃತೇಂದ್ರದ್ರುಮರು. ಶ್ರೀರಾಯರ ಮಹಿಮಾಪ್ರಸಾರಬದ್ಧಾದರರು. ಅನ್ನದಾನಪ್ರಭುಗಳು, ಸಭಾಸ್ವಾಮಿಗಳು ಶ್ರೀಗುರುರಾಜರ ಚಲಪ್ರತಿಮಾಸ್ಥಾನೀಯರು ಮುಂತಾಗಿ ದೇಶದಲ್ಲಿ ಆಪಂಡಿತಪಾಮರಿಂದ ಗೇಗೀಯಮಾನನರಾದ ಶ್ರೀಗಳವರು ಪ್ರಾತಃಸ್ಮರಣೀಯರು. 

ಶ್ರೀಯವರ ಪೀಠಾಧಿಪತ್ಯದ ಹದಿನಾಲ್ಕು ವರ್ಷಗಳು ಮಹತ್ವಪೂರ್ಣ ಮತ್ತು ಅವಿಸ್ಮರಣೀಯವಾದುದು. ವಾದಿದಿಗ್ವಿಜಯ, ಸಿದ್ಧಾಂತಸ್ಥಾಪನೆ, ಪಾಠಪ್ರವಚನ, ವಿದ್ವಜ್ಜನಪೋಷಣ, ಆಶ್ರಿತಜನ, ಶಿಷ್ಯ-ಭಕ್ತ ಸಂರಕ್ಷಣ, ಶ್ರೀರಾಯರ ಮಹಿಮಾಪ್ರಸಾರಗಳಿಂದ ಸಾರಸ್ವತ ಪ್ರಪಂಚದಲ್ಲಿ ವಿಶಿಷ್ಟಸ್ಥಾನಮಾನಗಳನ್ನೂ, ದಿಗಂತವಿಶ್ರಾಂತ ಕೀರ್ತಿಯನ್ನೂ ಗಳಿಸಿ ಮೆರೆದ ಶ್ರೀಸುಶೀಲೇಂದ್ರರ ಹೆಸರು ದೈತಸಿದ್ಧಾಂತ ಚರಿತ್ರೆಯಲ್ಲಿ ಅಜರಾಮರವಾಗಿದೆ. 

ಶ್ರೀಯವರ ಪೂರ್ವಾಶ್ರಮದ ಹೆಸರು ರಾಜಾ ಕೃಷ್ಣಾಚಾರರೆಂದು, ಆಚಾರರು, ಶ್ರೀಸುಪ್ರಜೇಂದ್ರರ ಆದೇಶದಂತೆ ಅಣ್ಣಂದಿರಾದ ವೇಣುಗೋಪಾಲಾಚಾರರೊಡನೆ (ಮುಂದೆ ಸುಪ್ರಜೇಂದ್ರರಿಂದ ಪರಮಹಂಸಾಶ್ರಮ ಪಡೆದು ೧೯೦೩ ರಿಂದ ೧೯೧೨ ವರೆಗೆ ಶ್ರೀಸುಕೃತೀಂದ್ರರೆಂದು ಖ್ಯಾತರಾದ ಮಹನೀಯರು) ಪ್ರಸಿದ್ಧ ನ್ಯಾಯಶಾಸ್ತ್ರ ವಿಶಾರದರಾದ ಅನುವಾದಂ ನಾಮಗೊಂಡ್ಲು ಶ್ಯಾಮಾಚಾರರಲ್ಲಿ, ಆನಂತರ ಶ್ರೀಸುಪ್ರಜೇಂದ್ರರಲ್ಲಿ ನ್ಯಾಯ-ವೇದಾಂತ-ಮೀಮಾಂಸಾದಿಶಾಸ್ತ್ರಗಳನ್ನು ಅಧ್ಯಯನಮಾಡಿ ತಮ್ಮ ಅಸಾಧಾರಣ ಪ್ರತಿಭೆ, ವಾದಶೈಲಿಗಳಿಂದ, ಪಾಠಪ್ರವಚನ ಕೌಶಲದಿಂದ ಮಿಂಚಿ, ಪಂಡಿತಮಂಡಲಿಯಲ್ಲಿ ಖ್ಯಾತರಾದ ಕೃಷ್ಣಾಚಾರರು ಸರಸ್ವತಿಯ ವರಪುತ್ರರೇ ಆಗಿದ್ದರು. 

ಸಾಮಾನ್ಯವಾಗಿ ಮಾನವ ಜೀವನದಲ್ಲಿ ನಡೆಯುವ ನೂರಾರು ಘಟನೆಗಳಲ್ಲಿ ಹಲಕೆಲವು ಮುಖ್ಯಪ್ರಸಂಗಗಳಿರುವವು. ಆ ವಿಶೇಷ ಸಂದರ್ಭಗಳಲ್ಲಿಯೇ ಮಾನವನ ಮಹತ್ವ, ಯೋಗ್ಯತೆಗಳು ಪ್ರಕಟವಾಗುವವು. ಇದರಂತೆಯೇ ಒಂದು ಸಂಸ್ಥೆ. ಪರಂಪರೆಯ ಇತಿಹಾಸದಲ್ಲಿಯೂ ಜರುಗುವುದು ಕಂಡುಬಂದಿದೆ. ಕೆಲಕಾಲ ಒಂದೇ ರೀತಿಯಾಗಿ ನಡೆದುಹೋಗುತ್ತಿರುವ ಸಂಸ್ಥೆ. ಪರಂಪರೆ: ಆವುದೋ ಒಂದು ವಿಶೇಷ ಸಂದರ್ಭಗಳಿಗಾಗಿ, ದಾರಿನೋಡುತ್ತಿರುವಂತೆ ಮಾರ್ಗಕ್ರಮಣಮಾಡುತ್ತಿದ್ದು ವಿಶೇಷ ಸಂದರ್ಭ ಬಂದಾಗ ಅತ್ಯುನ್ನತ ಶಿಖರವನ್ನೇರಿ ತನ್ನ ಪ್ರಭಾವವನ್ನು ಎಲ್ಲೆಡೆ ಬೀರುತ್ತದೆ. ಮತ್ತೆ ಕಾಲಕ್ರಮದಲ್ಲಿ ಅಂತಃಪ್ರಾಣವಾದ ಅದು ಮತ್ತೊಮ್ಮೆ ಹೀಗೆ ಮೇಲೆದ್ದು ಮೆರೆಯುತ್ತದೆ. ಈ ಬಗೆಯ ಉಬ್ಬರಗಳಿಗೆ ಕಾರಣವಾಗುವವರು ಅಸಾಧಾರಣ ವ್ಯಕ್ತಿಗಳು, ವಿಭೂತಿಪುರುಷರು, ಕಾಲಪಂಥದಲ್ಲಿ ಅವರ ಹೆಜ್ಜೆಯ ಗುರುತು ಅಮರವಾಗಿನಿಂತು ಬಿಡುತ್ತದೆ. 

ಪ್ರಕೃತ ಸನಕಾದಿಗಳಿಂದ ಪ್ರಾರಂಭವಾದ ಜ್ಞಾನಪರಂಪರೆ, ಸಂಪ್ರದಾಯವು ಶ್ರೀಮದಾಚಾರರ ಪರಂಪರೆಯಿಂದ ಶ್ರೀಸುಕೃತೀಂದ್ರತೀರ್ಥರವರೆಗಿನ ವಿಭೂತಿ ಪುರುಷರಿಂದ ಸಜೀವವಾಗಿ ರೂಪಗೊಂಡು ಪರಿಪೂರ್ಣತೆಯನ್ನು ಪಡೆಯಿತು. ಈ ಮಹಾಪರಂಪರೆಗೆ ಈಗ ಜೀವಕಳೆ ಕೊಡುವ ಮತ್ತೊಬ್ಬ ತೇಜೋಮೂರ್ತಿಗಳು ಜನತೆಗೆ ಕಾಣಿಸಿಕೊಂಡರು. ಈ ವಿಭೂತಿಪುರಷರೇ ಶ್ರೀಸುಶೀಲೇಂದ್ರತೀರ್ಥರು! (ಪೂರ್ವಾಶ್ರಮ-ಕೃಷ್ಣಾಚಾರರು). 

ಕೃಷ್ಣಾಚಾರರು ಕೆಲಕಾಲ ಗೃಹಾಸಾಶ್ರಮಧರ್ಮ ಪರಿಪಾಲನೆಮಾಡಿ ಸಂಸಾರದಲ್ಲಿನ ಅಸಾರತೆಗಳನ್ನು ಮನಗಂಡು ವಿರಕ್ತರಾಗಿ ಆಧ್ಯಾತ್ಮ ಚಿಂತನದಲ್ಲಿ ಮಗ್ನರಾದರು ಅವರಿಗೆ ತತ್ವಪ್ರಸಾರಮಾಡುವ ಇಚ್ಛೆ ಬಲವಾಯಿತು. ಅವರ ಬಯಕೆಯ ಬಳ್ಳಿಗೆ ಶ್ರೀಸುಕೃತೀಂದ್ರರು ನೀರೆರೆದರು. ಸರಿ ಕೇಳುವುದೇನು. “ಶ್ರೀಸಮೀರ ಸಮಯ ಸಮಯ ಸಂವರ್ಧಿನಿ” ಎಂಬ ವಿದ್ವತ್ಸಭೆಯನ್ನು ಆಚಾರ್ಯರು ಪ್ರಾರಂಭಿಸಿದರು. ರಾಜಮಹಾರಾಜರು. ಪೀಠಾಧೀಶರು ಮಾಡಬಹುದಾದ ಕಾರ್ಯವನ್ನು ಕೈಗೊಂಡ ಆಚಾರ್ಯರ ಎದೆಗಾರಿಕೆಯನ್ನು ಕಂಡು ಜನರು ಅಚ್ಚರಿಗೊಂಡರು. ದೇಶದೇಶಗಳಿಂದ ಸಕಲಶಾಸ್ತ್ರಕೋವಿದರಾದ ತ್ರಿಮತಸ್ಥಮಹಾಪಂಡಿತರನ್ನು ಆಹ್ವಾನಿಸಿ, ಷಡರ್ಶನಗಳಲ್ಲಿ ವಾಕ್ಯಾರ್ಥ, ವಿದ್ಯಾರ್ಥಿಗಳ ಪರೀಕ್ಷೆ, ವಿಚಾರಗೋಷ್ಠಿಗಳೊಡನೆ ಆಚಾರ್ಯರು ಅನೇಕ ವಿದ್ವತ್ಸಭೆಗಳನ್ನು ನೆರವೇರಿಸಿದಲ್ಲದೆ, ಒಂದು ವರ್ಷ ಏಕಕಾಲದಲ್ಲಿ ಎರಡೆರಡು ಸ್ಥಳಗಳಲ್ಲಿಯೂ ವಿದ್ವತ್ಸಭೆಗಳನ್ನು ನೆರವೇರಿಸಿ, ವಿದ್ವಾಂಸರು ವಿದ್ಯಾರ್ಥಿಗಳಿಗೆ ಉದಾರವಾಗಿ ಸಂಭಾವನೆನೀಡಿ ಸರ್ವರ ಶ್ಲಾಘನೆ ಪಾತ್ರರಾಗಿ “ಪಂಡಿತ ಪೋಷಕರು, ಸಭಾ ಕೃಷ್ಣಾಚಾರ್ಯರು” ಎಂದು ಕೀರ್ತಿಗಳಿಸಿದರು. 

ಆಚಾರ್ಯರ ಹೆಸರು ಮನೆಮಾತಾಯಿತು. ಆಚಾರ್ಯರ ಅಸಾಧಾರಣ ಸೇವೆಯಿಂದ ಶ್ರೀಮದಾಚಾರರು-ಗುರುರಾಜರು ಸುಪ್ರೀತರಾದರೆಂದು ತೋರುತ್ತದೆ. ಅವರ ಕೃಪಾದೃಷ್ಟಿ ಆಚಾರ್ಯರ ಮೇಲೆ ಬಿತ್ತು! ಶ್ರೀಮದಾಚಾರ್ಯರು-ಗುರುರಾಜರು ತಮ್ಮನ್ನು ಇಂತು ಸೇವಿಸಿದ ಕೃಷ್ಣಾಚಾರ್ಯರನ್ನು ತಮ್ಮ ವಿದ್ಯಾಪೀಠದಲ್ಲಿ ಮೆರೆಸಲು ಸಂಕಲ್ಪಿಸಿದರು. ಶ್ರೀಸುಕೃತೀಂದ್ರತೀರ್ಥರು ಪೂರ್ವಾಶ್ರಮ ಸೋದರರ ಈ ಜ್ಞಾನಪ್ರಸಾರದಿಂದ ಹರ್ಷಿಸಿ ಅವರೇ ತಮ್ಮ ಉತ್ತರಾಧಿಕಾರಿಗಳಾಗಲು ಅರ್ಹರೆಂದು ತೀರ್ಮಾನಿಸಿ, ಕ್ರಿ.ಶ. ೧೯೧೨ನೇ ಆಶ್ವಿನ ಶುಕ್ಲ ವಿಜಯದಶಮಿ ದಿವಸ ಪರಮಹಂಸಾಶ್ರಮವಿತ್ತು “ಶ್ರೀಸುಶೀಲೇಂದ್ರತೀರ್ಥರು” ಎಂಬ ಹೆಸರಿನಿಂದ ಅವರಿಗೆ ಪಟ್ಟಾಭಿಷೇಕಮಾಡಿ ಶ್ರೀಮದಾಚಾರ್ಯರ ವೇದಾಂತಸಾಮ್ರಾಜ್ಯಾಧಿಪತಿಗಳನ್ನಾಗಿ ಮಾಡಿ ಶ್ರೀನಾರಾಯಣ ಭಾನಪರರಾದರು. 

ವಿಜಯಪ್ರದ ವಿಜಯದಶಮೀ, ಶ್ರೀವೆಂಕಟೇಶ್ವರನ ಕಲ್ಯಾಣ ಮಂಗಳಮಹೋತ್ಸವ, ಶ್ರೀಮಧ್ವಾಚಾರ್ಯರ ಪಾವನಜಯಂತೀ, ಇಂಥ ಶುಭದಿನದಂದು ಶ್ರೀಮದಾಚಾರರ ವಿದ್ಯಾಗದ್ದುಗೆಯನ್ನೇರಿದ ಸೌಭಾಗ್ಯ ಬಹುಶಃ ದೈತಸಿದ್ಧಾಂತದ ಮಹಾಪೀಠ ಪರಂಪರೆಯಲ್ಲಿಸುಶೀಲೇಂದ್ರತೀರ್ಥರಿಗೊಬ್ಬರಿಗೇ ದೊರೆತದ್ದನ್ನು ವಿವೇಚಿಸಿದಾಗ ಅವರ ಮಹಿಮೆ ವ್ಯಕ್ತವಾಗುವುದು. ಶ್ರೀವಾಯುದೇವರ ವಿಶೇಷ ಸನ್ನಿಧಾನ ಶ್ರೀಗುರುರಾಜರಲ್ಲಾದರೆ; ಶ್ರೀರಾಯರ ವಿಶೇಷ ಸನ್ನಿಧಾನ ಶ್ರೀಸುಶೀಲೇಂದ್ರತೀರ್ಥರಲ್ಲಿ! ಅಂತೆಯೇ ಶ್ರೀಗಳವರು ಅನಿತರಸಾಧಾರಣ ಕಾರ್ಯಗಳನ್ನೆಸಗಿ ಆಚಂದ್ರಾರ್ಕ ಕೀರ್ತಿಭಾಜರಾದರು. ಶ್ರೀಯವರ ಮಹಿಮಾವರ್ಣನೆ- ಯೆಂದರೆ ಶ್ರೀರಾಯರ ಕೀರ್ತಿಕಥನವೆಂದೇ ತಿಳಿಯಬೇಕು! ಆದ್ದರಿಂದಲೇ ವಿದ್ವಜ್ಜನರು ಅವರನ್ನು ಗುರುರಾಜರ ಚಲಪ್ರತಿಮಾ- ಸ್ಥಾನೀಯರೆಂದು ಇಂದಿಗೂ ಕೊಂಡಾಡುವರು. 

ಸುಶೀಲೇಂದ್ರರು ಪೀಠಾಧಿಪತಿಗಳಾದ ತರುಣದಲ್ಲಿಯೇ ಮಹಾಸಂಸ್ಥಾನದ ವಿದ್ವತ್ಸಭೆಯನ್ನು ಪೂರ್ವಾಶ್ರಮದಲ್ಲಿ ತಾವು ಜರುಗಿಸುತ್ತಿದ್ದ ವಿದ್ವತ್ಸಭೆಯೊಡನೆ ಶ್ರೀಸಮೀರಸಮಯಸಂವರ್ಧಿನೀಸಭೆಯೆಂಬ ಹೆಸರಿನಿಂದಲೇ ನಂಜನಗೂಡಿನಲ್ಲಿ ನೆರವೇರಿಸಿದರು. ಅದೊಂದು ಅಪೂರ್ವ ಸಭೆಯಾಗಿತ್ತು. ನಂಜನಗೂಡಿನಲ್ಲಿ ಮಹಾರಾಜರ ಅರಮನೆಯಲ್ಲಿ ಮೂರುದಿನಕಾಲ ನಡೆದ ಆ ಷಡರ್ಶನ ವಿದ್ವತ್ಸಭೆಯು ಸಕಲ ವಿಧದಿಂದಲೂ ದಕ್ಷಿಣಭಾರತದಲ್ಲೇ ಅಶ್ರುತಪೂರ್ವವೆನಿಸಿತ್ತು. ಸಕಲಶಾಸ್ತ್ರಕೋವಿದರಾದ ಪ್ರಕಾಂಡಪಂಡಿತರಾದ ತ್ರಿಮತಸ್ಥವಿಬುಧರೆಲ್ಲರೂ ನೂರಾರುಜನ ಅಲ್ಲಿಭಾಗವಹಿಸಿದ್ದರು. ನೂರಾರುಜನ ವಿದ್ಯಾರ್ಥಿಗಳೂ, ಕವಿ, ಗಾಯಕ, ಸಾಹಿತಿ, ಕಲೆಗಾರ, ಹರಿದಾಸರು-ಹೀಗೆ ನೂರಾರುಜನರಲ್ಲಿ ನೆರೆದಿದ್ದರು. ಪ್ರತಿದಿನ ಐದಾರು ಸಹಸ್ರ ಜನರು ಸಭಾಕಾರ್ಯಕಲಾಪಗಳಲ್ಲಿ ಭಾಗವಹಿಸಿ ಕೃತಾರ್ಥರಾಗುತ್ತಿದ್ದರು. ಪ್ರತಿದಿನ ವಿವಿಧಶಾಸ್ತ್ರಗಳಲ್ಲಿ ವಾಕ್ಯಾರ್ಥ, ವಿಚಾರಗೋಷ್ಠಿ, ಉಪನ್ಯಾಸ, ಹರಿಕಥೆ, ಸಂಗೀತ, ಕಲಾಪ್ರದರ್ಶನ, ವಿದ್ಯಾರ್ಥಿಗಳ ಪರೀಕ್ಷೆಗಳು ಸುಶೀಲೇಂದ್ರರ ಅಧ್ಯಕ್ಷತೆಯಲ್ಲಿ ಜರುಗುತ್ತಿದ್ದು, ಅದೊಂದು ಇಂದ್ರ ಸಭೆಯಂತೆ ಕಂಗೊಳಿಸುತ್ತಿತ್ತು. ಆ ಸಮಯದಲ್ಲಿ ಸುಶೀಲೇಂದ್ರರು ನ್ಯಾಯ-ಮೀಮಾಂಸಾ; ವೇದಾಂತಾದಿಶಾಸ್ತ್ರಗಳಲ್ಲಿ ತೋರಿದ ಅಸಾಧಾರಣ ಪಾಂಡಿತ್ಯ, ಪ್ರತಿಭೆಗಳು ವಿಬುಧಮಂಡಲಿಯನ್ನು ಬೆರಗುಗೊಳಿಸಿತು! ಈ ಎಲ್ಲ ವೈಭವಗಳನ್ನು ಸಂಸ ತ-ಕನ್ನಡ ಕವಿಗಳು, ಸಾಹಿತಿಗಳು ವಿವಿಧ ರೀತಿಯಿಂದ ಬಣ್ಣಿಸಿ ಸರ್ವರನ್ನೂ ಆನಂದಗೊಳಿಸಿದರು, ಶ್ರೀಗಳವರು ವಿದ್ವಾಂಸರಿಗೆ ಸುವರ್ಣ-ರಜತಪಾತ್ರೆ-ಪೀತಾಂಬರ-ಶಾಲು-ವಸ್ತ್ರ-ಉದಾರಸಂಭಾವನೆಗಳನ್ನಿತ್ತುದಲ್ಲದೆ, ವಿದ್ಯಾರ್ಥಿಗಳು, ಕವಿ-ಗಾಯಕ-ಹರಿದಾಸ-ಕಲಾವಿದರಿಗೆ ಉದಾರವಾಗಿ ಸಂಭಾವನೆ ನೀಡಿ ಸಂತೋಷಪಡಿಸಿದರು. 

ಅಂದಿನಿಂದ ಆರಂಭವಾದ ವ್ಯಾಪಕರೀತಿಯ ವಿದ್ವಜ್ಜನಪೋಷಣೆ, ದೈತರಾದ್ಧಾಂತತತ್ವ-ಧರ್ಮಪ್ರಸಾರಾದಿಗಳು ವರ್ಷ ವರ್ಷ ಅಭಿವೃದಿಸುತ್ತಾ ಸ್ವಾಮಿಗಳಿಗೆ “ಸಭಾಸ್ವಾಮಿಗಳು” ಎಂಬ ಕೀರ್ತಿ ದಿಗಂತವಿಶ್ರಾಂತವಾಗುವಂತೆ ಮಾಡಿದವು. ಶ್ರೀಯವರ ದ್ವಾರಾ ರಾಯರು ನೂರಾರು ಮಹಿಮೆಗಳನ್ನು ಪ್ರಕಟಗೊಳಿಸಿ ತಮ್ಮ ಅನುಗ್ರಹ ಅವರಲ್ಲಿರುವ ಪರಿಯನ್ನು ತೋರಿಸಿಕೊಟ್ಟರು. ಗ್ರಂಥಾವಿಸ್ತಾರಭಯದಿಂದ ಅವನ್ನಿಲ್ಲಿ ನಿರೂಪಿಸುವುದನ್ನು ಮಾನಸಿಕ ಮಾಡಿದ್ದೇವೆ.

ಸುಶೀಲೇಂದ್ರರಲ್ಲಿ ಹತ್ತಿಪ್ಪತ್ತುಜನ ಪ್ರೌಢವಿದ್ಯಾರ್ಥಿಗಳು ನ್ಯಾಯ-ಮಿಮಾಂಸಾಶಾಸ್ತ್ರಗಳು ಮತ್ತು ಸಮಗ್ರ ದೈತಸಿದ್ಧಾಂತವನ್ನು ಅಧ್ಯಯನಮಾಡಿ ಶ್ರೇಷ್ಠಪಂಡಿತರೆಂದು ಹೆಸರು ಗಳಿಸಿದರು. ತಾವು ಪಾಠ ಹೇಳುವುದಲ್ಲದೆ ಸಚ್ಛಾಸ್ತ್ರವ್ಯಾಸಂಗವು ಯಶಸ್ವಿಯಾಗಿ ನಡೆಯಲು ಶ್ರೀಗಳವರು ನಂಜನಗೂಡು, ಮಂತ್ರಾಲಯಗಳಲ್ಲಿ ಸಂಸ ತಪಾಠಶಾಲೆಗಳನ್ನು ಸ್ಥಾಪಿಸಿ ನೂರಾರು ಜನ ವಿದ್ಯಾರ್ಥಿಗಳು ವಿದ್ಯಾಧ್ಯಯನಮಾಡಲು ಅನುಕೂಲವೇರ್ಪಡಿಸಿದರು. ದಕ್ಷಿಣಭಾರತದಲ್ಲೆಲ್ಲಾ ಸಂಚರಿಸಿ ಪರವಾದಿದಿಗ್ವಿಜಯ, ಸಿದ್ಧಾಂತಸ್ಥಾಪನೆ, ಪಾಠಪ್ರವನ, ಪಂಡಿತ ಸನ್ಮಾನ, ಶಿಷ್ಯಭಕ್ತಜನೋದ್ದಾರ, ರಾಯರ ಮಹಿಾಪ್ರಸಾರಗಳನ್ನು ನೆರವೇರಿಸಿ ಸರ್ವರ ಗೌರವಾದರಗಳನ್ನು ಗಳಿಸಿದರು. 

ಸುಶೀಲೇಂದ್ರರು ಮಾಡಿದ ಮಂತ್ರಾಲಯ ಸ್ವಾಮಿಗಳವರ ಸೇವೆ ಅವಿಸ್ಮರಣೀಯವಾದುದು, ಅವರು ಬಹುಕಾಲ ಮಂತ್ರಾಲಯದಲ್ಲಿದ್ದು ಗುರುರಾಜರ ನಿತ್ಯ ನೈಮಿತ್ತಿಕಸೇವೆ, ಆರಾಧನೆಯ ಕಾಲದಲ್ಲಿ ಪಂಚರಾತ್ರೋತ್ಸವ, ಸಹಸ್ರಾರು ಭಕ್ತಜನರಿಗೆ ವಸತಿ-ಭೋಜನಸೌಕರ್ಯ, ಪ್ರತಿನಿತ್ಯ ಹಸ್ತೋದಕ, ಅಲಂಕಾರ ಬ್ರಾಹ್ಮಣರು, ಅರ್ಚಕರು, ಸೇವಾರ್ಥಿಗಳ ಭೋಜನ ವ್ಯವಸ್ಥೆ ಮಾಡಿದ್ದಲ್ಲದೆ, ಆರಾಧನಾಕಾಲದಲ್ಲಿ ವಿದ್ವತ್ಸಭೆಯನ್ನೂ ನೆರವೇರಿಸುತ್ತಾ ಬಂದರು. ರಾಯರ ದರ್ಶನ, ಸೇವೆಗೆ ಬರುವ ಭಕ್ತರ ಸೌಕಯ್ಯಕ್ಕಾಗಿ ಶಿಲಾಮಂಟಪಾದಿ ನಿರ್ಮಾಣ ಮಾಡಿದರು. ಪ್ರತಿನಿತ್ಯ ಬರುವ ಯಾತ್ರಿಕರಿಗೆ ರಾಯರ ಪ್ರಸಾದದೊರಕುವ ವ್ಯವಸ್ಥೆ ಮಾಡಿ ಹೆಚ್ಚು ಜನಯಾತ್ರಾರ್ಥಿಗಳು ಮಂತ್ರಾಲಯಕ್ಕೆ ಬರುವಂತೆ ಮಾಡಿ ಇಂದಿನ ಮಂತ್ರಾಲಯದ ಅಭಿವೃದ್ಧಿಯ ಬುನಾದಿ ಹಾಕಿ ಮಂತ್ರಾಲಯದ ಶಿಲ್ಪಿಗಳೆನಿಸಿ ಕೀರ್ತಿಗಳಿಸಿದರು. 

ಶ್ರೀಯರವರ ಕಾಲದಲ್ಲಿ ನಡೆದ ಮತ್ತೊಂದು ಮಹತ್ವಪೂರ್ಣ ಘಟನೆಯೆಂದರೆ ಶ್ರೀಗಳವರ ಉಡುಪಿಯಾತ್ರೆ! ಶ್ರೀಪರ್ಯಾಯಪೀಠವನ್ನಲಂಕರಿಸಿದ್ದ ಅದಮಾರು ಶ್ರೀಮಠದ ಜ್ಞಾನಿವರ್ಯರಾದ ಶ್ರೀವಿಬುಧಪ್ರಿಯತೀರ್ಥರ ಆಹ್ವಾನದಂತೆ ಮಹಾಸಂಸ್ಥಾನದೊಡನೆ ಶ್ರೀಯವರು ಉಡುಪಿಗೆ ದಯಮಾಡಿಸಿದರು. ಅಂದು ಅಲ್ಲಿ ನಡೆದ ಅಭೂತಪೂರ್ವ ಮೆರವಣಿಗೆ, ಪರ್ಯಾಯಪೀಠಾಧೀಶರು ಸುಶೀಲೇಂದ್ರರಿಗೆ ನೀಡಿದ ಕಣ್ಮನತಣಿಸುವ ವೈಭವದ ಸ್ವಾಗತಗಳನ್ನು ಇಂದಿಗೂ ವೃದ್ಧರು ಸ್ಮರಿಸಿ, ರೋಮಾಂಚಿತರಾಗಿ ವರ್ಣಿಸುತ್ತಾರೆ. 

ಶ್ರೀಕೃಷ್ಣನ ಸಂದರ್ಶನದಿಂದ ಅಮಂದಾನಂದತುಂದಿಲರಾದ ಶ್ರೀಯವರ ಭಕ್ತಿಪಾರವಶ್ಯತೆಯನ್ನೂ, ಅವರ ಅಪಾರ್ವತೇಜಸ್ತುಗಳನ್ನೂ ಕಂಡು ಅಷ್ಟಮಠದ ಶ್ರೀಯತೀಶ್ವರರು ವಿಸ್ಮಿತರಾದರು. ಶ್ರೀಯವರ ಔದಾರ್ಯವು ಎಲ್ಲರ ಮನಸ್ಸನ್ನೂ ಸೂರೆಗೊಂಡಿತು. ಶ್ರೀಕೃಷ್ಣನಿಗೆ ಬಹುಪ್ರಕಾರವಾಗಿ ಸೇವೆಮಾಡಿ, ಅಷ್ಟಮಠಾಧೀಶರನ್ನು ವಿಶಿಷ್ಟ ರೀತಿಯಿಂದ ಉತ ಷ್ಟವಾಗಿ ಸಂಭಾವಿಸಿ, ಸಂತುಷ್ಟಗೊಳಿಸಿ, ವಿದ್ವಾಂಸರು, ವಿದ್ಯಾರ್ಥಿಗಳು, ಮಠಗಳ ಪರಿವಾರ, ಕ್ಷೇತ್ರದ ಗಣ್ಯರು, ಧರ್ಮಾಭಿಮಾನಿಗಳನ್ನು ಧನಕನಕವಸ್ತ್ರಾಭರಣಗಳಿಂದ ಆನಂದಗೊಳಿಸಿ ಕೀರ್ತಿಗಳಿಸಿದರು. ಅಂದಿನಿಂದ ಒಂದುವಾರದವರೆಗೆ ಶ್ರೀಯವರು ನೆರವೇರಿಸಿದ ಶ್ರೀಕೃಷ್ಣತ್ಸವಗಳು ಅಭೂತಪೂರ್ವವಾಗಿದ್ದವು. 

ಸುಶೀಲೇಂದ್ರರು ತಮ್ಮ ಮಹಾಪೀಠಕ್ಕೂ ಉಡುಪಿಯ ಅಷ್ಟಪೀಠಗಳಿಗೂ ಇರುವ ಆತ್ಮೀಯ ಸೌಹದ್ರ್ರಸಂಬಂಧದ, ಮತ್ತು ತಾವು ಉಡುಪಿಗೆ ಬಂದ ಗುರುತಾಗಿ ತಮ್ಮ ಮಠದಲ್ಲಿ, ಅಷ್ಟಮಠಾಧೀಶರು ಸಹಸ್ರಾರುಧಾರ್ಮಿಕರ ಸಮಕ್ಷ, ಶ್ರೀಗುರು ಸಾರ್ವಭೌಮರಬೃ೦ದಾವನವನ್ನು ವೈಭವದಿಂದ ಪ್ರತಿಷ್ಠಾಪಿಸಿ, ಪ್ರತಿನಿತ್ಯ ಪುರಜನರು ಯಾತ್ರಾರ್ಥಿಗಳಿಗೆ ಶ್ರೀರಾಯರ ದರ್ಶನ ಲಭಿಸಿ, ಅವರು ಸೇವಿಸಿ, ಉದ್ಧತರಾಗಲು ಉಪಕಾರ ಮಾಡಿದರು. ಅದೊಂದು ಮರೆಯಲಾಗದ ದೃಶ್ಯವಾಗಿದ್ದು ಮಹಾಸಂಸ್ಥಾನದ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ನಿಲ್ಲುವ ಅಸಮಾನ್ಯ ಘಟನೆಯಾಗಿತ್ತು. ಶ್ರೀಪರ್ಯಾಯ ಪೀಠಾಧೀಶರನ್ನು ಇದೇನು ಈ ಶ್ರೀಗಳವರಿಗೆ ಮತ್ತಾರಿಗೂ ಈವರೆಗೂ ದೊರಕದ ವಿಶಿಷ್ಟ ಗೌರವ ಮಾಡಿದರಲ್ಲ? ಕಾರಣವೇನು?” ಎಂದು ಪ್ರಶ್ನಿಸಿದಾಗ ವಿಬುಧಪ್ರಿಯತೀರ್ಥರು ನಸುನಕ್ಕು “ಅದು ಗುರುಸಾರಭೌಮರಿಗೆ ನಾವು ಸಲ್ಲಿಸಿದ ಗೌರವ!” ಎಂದಾಗ ಸರ್ವರೂ ಆಶ್ಚರ್ಯಚಕಿತರಾದರಂತೆ! ಇದರಿಂದ ಶ್ರೀಸುಶೀಲೇಂದ್ರರ ಭವ್ಯ ವ್ಯಕ್ತಿತ್ತ, ಅವರಲ್ಲಿ ಶ್ರೀರಾಯರ ಸನ್ನಿಧಾನ, ಅನುಗ್ರಹವೆಷ್ಟೆಂಬುದು ವ್ಯಕ್ತವಾಗದಿರದು.

ಉಡುಪಿಯಿಂದ ಸಂಚಾರ ಹೊರಟ ಶ್ರೀಯವರು ರಿಕ್ಷೇತ್ರಕ್ಕೆ ದಯಮಾಡಿಸಿದರು. ಶ್ರೀಮದಾಚಾರರ ಮಹಾಸಂಸ್ಥಾನಾ- ಧೀಶ್ವರರೂ, ಶ್ರೀರಾಯರ ಮರಿಮಕ್ಕಳಾದ ವಾದೀಂದ್ರರ ಪಾರ್ವಾಶ್ರಮಪುತ್ರರೂ, ಜ್ಞಾನ, ಭಕ್ತಿ, ವೈರಾಗ್ಯ ತಪೋಮೂರ್ತಿಗಳೂ, ಮಹಾಮಹಿಮರೂ, ಆದ ಶ್ರೀಧೀರೇಂದ್ರತೀರ್ಥ ಗುರುಚರಣರ ಬೃಂದಾವನದಿಂದ ವಿಶೋಭಿತವಾದ ರಿಕ್ಷೇತ್ರದಲ್ಲಿ ಶ್ರೀಸುಶೀಲೇಂದ್ರರು ಬಿಡಾರಮಾಡಿದಾಗ ಅವರಿಗೆ ದೇಹಾಲಸ್ಯವಾಗಿ, ದಿನೇದಿನೇ ಅಭಿವೃದ್ಧಿಸಿತು. ಶ್ರೀಯವರು ಶ್ರೀಮಹಾಸಂಸ್ಥಾನದ ಆರಾಧ್ಯಮೂರ್ತಿ ಶ್ರೀಮೂಲರಾಮನ ಪೂಜೆಗೆ ವ್ಯತ್ಯಯ ಬರಬಾರದೆಂದು, ತಮ್ಮ ಪೂರ್ವಾಶ್ರಮ ಸೋದರತ್ತೆಯ ಪುತ್ರರೂ, ಶ್ರೀರಾಯರ ವಂಶದ ದೌಹಿತ್ರರೂ, ಸಕಲಶಾಸ್ತ್ರಪಾರಂಗತರೂ ಆದ ಚಿತ್ರದುರ್ಗದ ಹುಲಿಮನೆತನದ ಶ್ರೀಕೃಷ್ಣಾಚಾರರಿಗೆ ಪರಮಹಂಸಾಶ್ರಮವಿತ್ತು ಶ್ರೀಸುವ್ರತೀಂದ್ರತೀರ್ಥರು” ಎಂಬ ಹೆಸರಿನಿಂದ ಪಟ್ಟಾಭಿಷೇಕಮಾಡಿ ಅವರನ್ನು ಶ್ರೀಸರ್ವಜ್ಞರ ಮಹಾಪೀಠಾಧೀಶ್ವರರನ್ನಾಗಿ ಮಾಡಿ ಆಶೀರ್ವದಿಸಿದರು. 

ಶ್ರೀಸುಶಿಲೇಂದ್ರರಿಗೆ ಶ್ರೀರಾಯರ ದರ್ಶನಮಾಡಬೇಕೆಂಬ ಹಂಬಲ ಬಹಳವಾಗಿತ್ತು. ಅದು ದೊರಕಲಿಲ್ಲವೆಂದು ಅವರು ಬಹಳ ನೊಂದು ಅದಕ್ಕಾಗಿ ಗುರುರಾರಜನ್ನು ಪರಿಪರಿಯಾಗಿ ಪ್ರಾರ್ಥಿಸುತ್ತಿದ್ದರು. ಶ್ರೀಸುಶೀಲೇಂದ್ರರು ಮಾಡಿದ ಆಗಾಧ ಸೇವೆಯಿಂದ ಸುಪ್ರಸನ್ನರಾದ ಗುರುಸಾರ್ವಭೌಮರು ಸುಶೀಲೇಂದ್ರರಿಗೆ ಪ್ರತ್ಯಕ್ಷದರ್ಶನವಿತ್ತು ಆಶೀರ್ವದಿಸಿದರು. ಶ್ರೀಯವರು ಪರಮಾನಂದಭರಿತರಾಗಿ ಕ್ರಿ.ಶ. ೧೯೨೬ನೇ ಆಷಾಢ ಶುದ್ಧ ತೃತೀಯಾ ದಿವಸ ತಮ್ಮ ಇಹಲೋಕ ವ್ಯಾಪಾರವನ್ನು ಮುಗಿಸಿ ಶ್ರೀನಾರಾಯಣಧ್ಯಾನಪರರಾದರು. 

ಮಾಧ್ವಾಕಾಶದಲ್ಲಿ ತನ್ನ ಪ್ರಖರ ತೇಜಸ್ಸಿನಿಂದ ಬೆಳಗಿ ಅಸ್ತಂಗತನಾದ ಸೂರನಂತೆ ಬೆಳಗಿ ಮರೆಯಾದ ಶ್ರೀಸುಶೀಲೇಂದ್ರ- ತೀರ್ಥರ ಮಹಿಮೆ ಅಸಾಧಾರಣ ಮತ್ತು ಆವಿಸ್ಮರಣೀಯ. 

“ಸುಧಾದ್ಯಮಲಸದ್ದೋಧಂ ಸುಕೀರ್ತಿವಿಲಸದ್ಧಿಶಮ್ | ಸುಧೀಸಂಸ್ತುತ್ಯಸುಗುಣಂ ಸುಶೀಲೇಂದ್ರಗುರುಂ ಭಜೇ ।।