Sri Prahlada Rajaru Shankukarna Enters the womb of Kayadu

|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ - ಕಲ್ಪತರು

ಎರಡನೆಯ ಉಲ್ಲಾಸ ಶ್ರೀಹರಿಭಕ್ತಾಗ್ರಣಿ ಶ್ರೀಪ್ರಹ್ಲಾದರಾಜರು

ರಚಿಸಿದವರು ರಾಜಾ, ಎಸ್. ಗುರುರಾಜಾಚಾರ್ಯರು

3. ಶಂಕುಕರ್ಣ ಮಾತೃಗರ್ಭ ಸೇರಿದ

ದೈತ್ಯಸಾಮ್ರಾಟನಾದ ಹಿರಣ್ಯಕಶ್ಯಪನು ತಪಸ್ಸಿಗಾಗಿ ಮಂದರಾಚಲಕ್ಕೆ ತೆರಳಿದ ವಿಚಾರವನ್ನು ಅರಿತ ದೇವತೆಗಳು ಕಳವಳಗೊಂಡು ಸತ್ಯಲೋಕಕ್ಕೆ ಆಗಮಿಸಿ ಬ್ರಹ್ಮದೇವರಲ್ಲಿ ಎಲ್ಲ ವಿಚಾರಗಳನ್ನು ವಿಜ್ಞಾಪಿಸಿ 'ಪಿತಾಮಹ! ದೈತ್ಯರಾಜ ಹಿರಣ್ಯಕಶ್ಯಪು ತಮ್ಮಿಂದ ಅವಧತ್ವವರ ಪಡೆಯಲು ತಪಸ್ಸಿಗಾಗಿ ಮಂದರಾಚಲಕ್ಕೆ ತೆರಳಿದ್ದಾನೆ. ಏನಿಲ್ಲದೆ ಈಗ ನಮಗೆ ಅವನಿಂದ ಕಷ್ಟವಾಗುತ್ತಿದೆ. ಇನ್ನು ಅವಧ್ಯತ್ವವರವು ದೊರಕಿಬಿಟ್ಟರೆ, ಮುಂದೆ ನಮ್ಮ ಗತಿಯೇನು ಸ್ವಾಮಿ ? ಸರ್ವಜ್ಞರಾದ ನಿಮಗೆ ತಿಳಿಯದ ವಿಷಯವೇನಿದೆ? ಮಹಾನುಭಾವರಾದ ನೀವು ಸುರರನ್ನು ರಕ್ಷಿಸಲು, ಸಜ್ಜನರಿಗೆ ಆ ದೈತ್ಯನಿಂದ ಆಗಬಹುದಾದ, ಇನ್ನೂ ಅಧಿಕವಾದ ಸಂಕಟಗಳನ್ನು

ಪರಿಹರಿಸಿ ಕಾಪಾಡಲು ಏನಾದರೊಂದು ಉಪಾಯವನ್ನು ಚಿಂತಿಸಬೇಕು” ಎಂದು ವಿನಂತಿಸಿದರು.

ಬ್ರಹ್ಮದೇವರು ದೇವತೆಗಳನ್ನು ಸಮಯೋಚಿತ ವಾಕ್ಯಗಳಿಂದ ಸಮಾಧಾನಪಡಿಸಿ ಕಳುಹಿಸಿಕೊಟ್ಟರು.

ಕಮಲಸಂಭವರಾದ ಶ್ರೀಬ್ರಹ್ಮದೇವರು ಚಿಂತಾಕ್ರಾಂತರಾದಂತೆ ಕುಳಿತಿರುವಾಗ ಅಲ್ಲಿಗೆ ಬಂದ ಪರ್ವತ-ನಾರದರು ಬ್ರಹ್ಮದೇವರಿಗೆ ನಮಸ್ಕರಿಸಿ ಇಂತೆಂದರು.

ಪರ್ವತ-ನಾರದ : ಮಹಾಪ್ರಭು, ಬ್ರಹ್ಮದೇವ! ತಾವು ಗಾಢವಾದ ಚಿಂತೆಯಲ್ಲಿ ಮುಳುಗಿರುವಂತೆ ಭಾಸವಾಗುತ್ತಿದೆ. ಸಕಲಲೋಕಪಿತಾಮಹರಾದ ತಮಗೆ ಅದೆಂತಹ ಚಿಂತೆ ಸ್ವಾಮಿ ? ತಮ್ಮ ಚಿಂತೆಗೆ ಕಾರಣವೇನೆಂದು ಈ ಕಿಂಕರರಿಗೆ ಅರುಹಿದಲ್ಲಿ ನಾವು ನಮ್ಮ ಯೋಗ್ಯತಾನುಸಾರ ಅದನ್ನು ಪರಿಹರಿಸಿ ಸೇವಿಸಲು ಆಶಿಸುತ್ತೇವೆ.

ಆಗ ಬ್ರಹ್ಮದೇವರು ಹಿರಣ್ಯಕಶ್ಯಪುವು ತಪಸ್ಸಿಗೆ ಯತ್ನಿಸುತ್ತಿರುವುದು, ಅವನು ಆಂತರ್ಯದಲ್ಲಿ ಸಕಲಲೋಕಾಧಿಪತ್ಯವನ್ನು ಬಯಸಿರುವುದು, ದೇವತೆಗಳ ಪ್ರಾರ್ಥನೆ ಮುಂತಾದ ಸಮಸ್ತ ವಿಚಾರವನ್ನೂ ಪರ್ವತ-ನಾರದರಿಗೆ ತಿಳಿಸಿ, ಹಿರಣ್ಯಕಶ್ಯಪುವಿನ ತಪಸ್ಸಿಗೆ ವಿಘ್ನ ತರಬೇಕೆಂದು ಆಜ್ಞಾಪಿಸಿದರು.

ಪರ್ವತ-ನಾರದರು “ಪಿತಾಮಹ! ಇದಾವ ದೊಡ್ಡ ಕಾರ್ಯ? ಆ ದೈತ್ಯನ ತಪಸ್ಸಿಗೆ ನಾವು ವಿಘ್ನವನ್ನುಂಟು ಮಾಡುತ್ತೇವೆ. ತಾವು ಆಲೋಚಿಸಬಾರದು” ಎಂದು ವಿಜ್ಞಾಪಿಸಿ, ಬ್ರಹ್ಮದೇವರ ಆಶೀರ್ವಾದ ಪಡೆದು ತೆರಳಿದರು. ಶ್ರೀಹರಿಯ ಸಂಕಲ್ಪ ನೆರವೇರುವುದೆಂದು ಬ್ರಹ್ಮದೇವರು ಸಂತೋಷಿಸಿದರು.

ಅತಿ ರಮಣೀಯವಾದ ಮಂದರಪರ್ವತ ಪ್ರದೇಶ, ವಿವಿಧ ಗಿಡ-ಮರ-ಲತೆಗಳಿಂದ ಆ ಪ್ರದೇಶವೆಲ್ಲ ಹಚ್ಚಹಸುರಾಗಿ ಶೋಭಿಸುತ್ತಿದೆ. ಪರ್ವತದ ಮೇಲ್ಬಾಗದಿಂದ ಮಂಗಳಕರ ತರಂಗಿಣಿಯು ಭೋರ್ಗರೆಯುತ್ತಾ ಹರಿಯುತ್ತಿದ್ದಾಳೆ. ಸೂರ್ಯೋದಯವಾಗಿ ಕೆಂಗಿರಣನ ಹೊಂಗಿರಣಗಳು ಆ ಪ್ರದೇಶವನ್ನೆಲ್ಲಾ ಮನೋಹರವಾಗಿ ಕಂಗೊಳಿಸುವಂತೆ ಮಾಡಿದೆ. ಪ್ರಕೃತಿ ಸೌಂದರ್ಯದಿಂದ ಎಲ್ಲರ ಮನಸ್ಸಿಗೂ ಆಹ್ಲಾದವನ್ನುಂಟುಮಾಡುತ್ತಿರುವ ಮಂದರಪರ್ವತಕ್ಕೆ ದೈತ್ಯೇಂದ್ರನಾದ ಹಿರಣ್ಯಕಶ್ಯಪನು ತಪಸ್ಸನ್ನೆಸಗಲು ಬಂದಿದ್ದಾನೆ. ರಾಜೋಚಿತ ಉಡುಪು, ಆಭರಣಗಳು, ಗದೆ, ಧನುರ್ಬಾಣಗಳನ್ನೆಲ್ಲಾ ಒಂದೆಡೆ ಇಟ್ಟು ದೈತ್ಯರಾಜ ನದಿಯಲ್ಲಿ ಮಿಂದು ಮಡಿಯುಟ್ಟು ತಪಸ್ಸಿಗೆ ಪ್ರಾರಂಭಿಸಲು ಸಂಕಲ್ಪಕ್ಕೆ ಸಿದ್ದನಾಗಿ ಕುಳಿತಿದ್ದಾನೆ. ಸಂಕಲ್ಪ ಪ್ರಾರಂಭಿಸಿದ ಏವಂಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೇ ಮಮ ಅವಧ್ಯತ್ವ ಪ್ರಾಪ್ತರ್ಥಂ ಸಕಲಲೋಕಾಧಿಪತ್ಯಸಿದ್ಧರ್ಥಂ ಚ ತತ್ಕಲಸಿದ್ಧಿ: ವರಪ್ರಾಪ್ತಿ ಪರ್ಯಂತಂ ......” ಎಂದು ಹೇಳುತ್ತಿರುವಂತೆಯೇ, ಆ ಹೊತ್ತಿಗಾಗಲೇ ಅಲ್ಲಿಗೆ ಕಲವರಿಕ (ಗುಬ್ಬಿ)ರೂಪದಿಂದ ಬಂದು ಆ ದೈತ್ಯನ ಸನ್ನಾಹವನ್ನು ಗಮನಿಸುತ್ತಿದ್ದ ಪರ್ವತ-ನಾರದರು ಹಾರಿಬಂದು ಆ ದೈತ್ಯನ ಮುಂಭಾಗದಲ್ಲಿದ್ದ ಮರದ ಟೊಂಗೆಯ ಮೇಲೆ ಕುಳಿತು ಗಟ್ಟಿಯಾಗಿ ಓಂ ನಮೋ ನಾರಾಯಣಾಯ” ಎಂದು ಉಚ್ಚರಿಸಿದರು. ೮೮. ನಾರಾಯಣನ ನಾಮಶ್ರವಣವಾದ ಕೂಡಲೇ ದೈತ್ಯನ ಕರಪುಟದಲ್ಲಿದ್ದ ಸಂಕಲ್ಪ ಜಲವು ಚೆಲ್ಲಿಹೋಯಿತು. ಅವನ ಹೃದಯದಲ್ಲಿ ಹರಿನಾಮವೆಂಬ ಶೂಲ ನೆಟ್ಟಂತಾಯಿತು. ದೈತ್ಯರಾಜ ಕೋಪ-ತಾಪಗಳಿಂದ ತತ್ತರಿಸಿದ. ಕೂಡಲೇ ಕರಗಳಿಂದ ಕಿವಿ ಮುಚ್ಚಿಕೊಂಡು ಶಾಂತಂ ಪಾಪಂ' ಎಂದುಚ್ಚರಿಸಿ ಪುನಃ ಆಚಮನ ಮಾಡಿ ಸಂಕಲ್ಪ ಪ್ರಾರಂಭಿಸಿದ. ಕಲವಂಕ ಪಕ್ಷಿಗಳು ಮತ್ತೆ “ಓಂ ನಮೋ ನಾರಾಯಣಾಯ” ಎಂದು ಹರಿನಾಮಸ್ಮರಣೆ ಮಾಡಿದವು. ಶತ್ರುನಾಮ ಶ್ರವಣದಿಂದ ಕ್ರೋಧಾಂಧನಾದ ಹಿರಣ್ಯಕಶ್ಯಪುವು ಕರದಲ್ಲಿ ಹಿಡಿದಿದ್ದ ಸಂಕಲ್ಪ ಜಲವನ್ನು ಚೆಲ್ಲಿ ಶಾಂತಂ ಪಾಪಂ, ಇದೇನೀ ವೈಪರೀತ್ಯ ! ಕುಲವೈರಿಯ ಹೆಸರು ಕೇಳಿ ಅಪವಿತ್ರನಾದೆ. ಛೇ ಛೇ, ಹೀಗಾಗಬಾರದಿತ್ತು. ಹೂಂ, ಹೋಗಲಿ, ಈಗ ಸರಿಯಾಗಿ ಸಂಕಲ್ಪ ಮಾಡಿ ತಪಸ್ಸನ್ನು ಪ್ರಾರಂಭಿಸುತ್ತೇನೆ” ಎಂದು ಬಡಬಡಿಸಿ, ಪುನರಾಚಮನ - ಪ್ರಾಣಾಯಾಮಪೂರ್ವಕ ದೃಢಚಿತ್ತನಾಗಿ ಸಂಕಲ್ಪ ಮಾಡತೊಡಗಿದನು. ಕೂಡಲೇ ಕಲಮಕ ಪಕ್ಷಿರೂಪದ ಪರ್ವತ-ನಾರದರು ಉಚ್ಚ ಸ್ವರದಲ್ಲಿ ಓಂ ನಮೋ ನಾರಾಯಣಾಯ” ಎಂದು ಉಚ್ಚರಿಸಿದರು.

ಆಜನ್ಮವೈರಿಯಾದ ಶ್ರೀಹರಿಯ ನಾಮವನ್ನು ಪುನಃ ಪುನಃ ಕೇಳಿದ ಹಿರಣ್ಯಕಶ್ಯಪುವು ಕುದ್ದನಾಗಿ ಮೇಲೆದ್ದು ನಿಂತನು. ಕೋಪ-ತಾಪಗಳಿಂದ ಅವನ ಶರೀರ ಕಂಪಿಸಹತ್ತಿತು. “ಹಾಯ್ ಹಾಯ್, ಇದೇನು ವಿಧಿಯ ವಿಡಂಬನೆ, ಪಾವನ ತಪಸ್ಸನ್ನೆಸಗಲು ಮಗ್ನನಾದ ನಾನು ಆ ಕಪಟಿ ಹರಿಯ ನಾಮಶ್ರವಣ ಮಾಡಬೇಕಾಯಿತಲ್ಲ! ಯಾರು ಹೀಗೆ ಉಚ್ಚರಿಸುತ್ತಿರುವರು ? ನನ್ನೆದುರು ನನ್ನ ವೈರಿಯ ಹೆಸರನ್ನು ಹೇಳಲು ಅದೆಷ್ಟು ಧೈರ್ಯ” ಎಂದು ಸುತ್ತಲೂ ದೃಷ್ಟಿಹರಿಸಿದನು. ಮುಂದೆ ಟೊಂಗೆಯ ಮೇಲೆ ಕುಳಿತಿರುವ ಆ ಗುಬ್ಬಿಗಳು ಅವನ ದೃಷ್ಟಿಗೆ ಗೋಚರಿಸಿದವು. ಕೂಡಲೇ “ಅಬ್ಬಾ! ಈ ಅಲ್ಪ ಪಕ್ಷಿಗಳಿಗೆ ಇಷ್ಟೊಂದು ಧೈರ್ಯವೇ?” ಎಂದು ಧನುಸ್ಸಿಗೆ ಶರಸಂಧಾನ ಮಾಡಿದನು. ಅದನ್ನು ಕಂಡ ಪರ್ವತ-ನಾರದರು ತಕ್ಷಣ ಅಲ್ಲಿಂದ ಹಾರಿ ಅದೃಶ್ಯರಾದರು.

ಪಕ್ಷಿಗಳು ಹಾರಿಹೋದುದನ್ನು ಕಂಡು ಧನುರ್ಬಾಣಗಳನ್ನು ಕೆಳಗಿರಿಸಿ ಆ ದೈತ್ಯ ಕುಳಿತ. ಆ ಹೊತ್ತಿಗೆ ಅವನ ಕೋಪ ಇಳಿಮುಖವಾಗಿತ್ತು. ಅವನಲ್ಲಿ ಜಯ ಆವಿಷ್ಟನಾದ! “ನಾರಾಯಣ, ಆಹಾ ನಾರಾಯಣ ಎಂದವಲ್ಲವೇ ಆ ಪಕ್ಷಿಗಳು” ಎಂದಚ್ಚರಿಯಿಂದ ಹಿರಣ್ಯಕಶ್ಯಪನು ಮೆಲ್ಲನೆ ತಾನೂ ಸಹ 'ನಾರಾಯಣ' ಎನ್ನುತ್ತಿರುವಾಗ ಅವನ ಮನಸ್ಸು ಅವನಿಗರಿವಾಗದಂತೆಯೇ ಪ್ರಶಾಂತವಾಗಿತ್ತು. ಇದೇ ಸಮಯವನ್ನು ನಿರೀಕ್ಷಿಸುತ್ತಿದ್ದ ಶಂಕುಕರ್ಣನು ಮುಖದ್ವಾರಾ ಹಿರಣ್ಯಕಶ್ಯಪನ ಶರೀರವನ್ನು ಪ್ರವೇಶಿಸಿಬಿಟ್ಟನು! ಮತ್ತೆ ಹಿರಣ್ಯಕಶ್ಯಪುವಿನಲ್ಲಿ ಮೂಲದೈತ್ಯ ವಿಜೃಂಭಿಸಿದ.

ತನ್ನ ಪರಮವೈರಿಯಾದ ನಾರಾಯಣನ ನಾಮವನ್ನುಚ್ಚರಿಸಿ ಆ ಕಲವಂಕ ಪಕ್ಷಿಗಳು ಹಾರಿ ಮಾಯವಾದವಲ್ಲಾ ಎಂದು ಸಿಟ್ಟು, ತಾಪ, ಅಸಮಾಧಾನಗಳಿಂದ ದೈತ್ಯರಾಜ ಚಿಂತಾಕ್ರಾಂತನಾದ, ಮುಂದಿನ ಕರ್ತವ್ಯವೇನು ? ಎಂದು ಯೋಚಿಸಲಾರಂಭಿಸಿದ, ಈಗ ತಾನು ಮಹೋದ್ದೇಶದಿಂದ ಕೈಗೊಳ್ಳಲಿದ್ದ ತಪಸ್ಸನ್ನು ಮಾಡುವುದೇ ಬಿಡುವುದೇ ? ಎಂಬ ಗೊಂದಲದಲ್ಲಿ ಬಿದ್ದನು. ಶತ್ರುವಾದ ಹರಿಯ ನಾಮ ಶ್ರವಣ ಮಾಡಿರುವುದು ಅಪಶಕುನವೆಂದು ಭಾವಿಸಿದ ಅವನು ಕ್ರೋಧ ಸಂತಪ್ತನಾಗಿ ತಪಸ್ಸನ್ನು ಬಿಟ್ಟು “ಶತ್ರುನಾಮ ಶ್ರವಣದಿಂದ ತಪಸ್ಸಿಗೆ ವಿಘ್ನವಾಯಿತು. ಹೂಂ, ಮತ್ತೊಮ್ಮೆ ಸುಮುಹೂರ್ತದಲ್ಲಿ ತಪಸ್ಸನ್ನು ಪ್ರಾರಂಭಿಸುವೆನು. ಈಗ ಅಪಶಕುನವಾಗಿದೆ” ಎಂದು ನಿಶ್ಚಯಿಸಿ ರಾಜಧಾನಿಗೆ ಹಿಂದಿರುಗಿದನು.

ರಾಜಧಾನಿಗೆ ಆಗಮಿಸಿದ ದೈತ್ಯರಾಜನು ಕಯಾಧುವಿನ ಅಂತಃಪುರಕ್ಕೆ ತೆರಳಿದನು. ಮರಳಿ ಬಂದ ಮನೋವಲ್ಲಭನನ್ನು ಕುಡು ರಾಣಿಯ ಮುಖದಲ್ಲಿ ಮಂದಹಾಸ ಮಿನುಗಿತು. ಅಂದವಳು ಋತುಸ್ನಾತಳಾಗಿದ್ದಳು. ಪತಿ ಪಾದಗಳಿಗೆರಗಿ “ಪ್ರಾಣವಲ್ಲಭ! ಪಿತಾಮಹನನ್ನು ಒಲಿಸಿ ವರ ಪಡೆಯಲು ತೆರಳಿದ ನೀವು ಇದೇನು, ಮರಳಿ ಬಂದಿರುವಿರಲ್ಲ! ತಪವನ್ನಾಚರಿಸಲಿಲ್ಲವೇ? ಅಥವಾ ಅದಕ್ಕೇನಾದರೂ ಕುಂದುಂಟಾಯಿತೆ? ಇಲ್ಲವೇ ನಿಮಗೆ ಪ್ರಾಣಾಧಿಕಳಾದ ನನ್ನ ನೆನಪುಂಟಾಗಿ ತಪಸ್ಸನ್ನು ಬಿಟ್ಟು ಹಿಂದಿರುಗಿದಿರಾ” ಎಂದು ಓರೆನೋಟ ಬೀರುತ್ತಾ ನಗುಮುಖದಿಂದ ಪ್ರಶ್ನಿಸಿದಳು. ದೈತ್ಯೇಂದ್ರನೂ ನಸುನಗುತ್ತಾ “ಪ್ರಿಯೇ, ಆ ವಿಚಾರವನ್ನು ಸಾವಕಾಶವಾಗಿ ಹೇಳುತ್ತೇನೆ” ಎಂದಷ್ಟೇ ಹೇಳಿ ಸ್ನಾನಾಹಿಕಾದಿಗಳಿಗಾಗಿ ತೆರಳಿ ಆ ಕಾರ್ಯಗಳಲ್ಲಿ ಮಗ್ನನಾದನು. ಮಧ್ಯಾಹ್ನಕ ಕ್ರಿಯೆಗಳನ್ನು ಪೂರೈಸಿ, ಭೋಜನ ಮಾಡಿ, ಸಚಿವ ಸೇನಾನಿಗಳೊಡನೆ ಮಾತುಕತೆ ನಡೆಸಿ ಸ್ವಲ್ಪ ವಿಶ್ರಾಂತಿ ಪಡೆದ ಹಿರಣ್ಯಕಶ್ಯಪನು ರಾತ್ರಿ ಕಯಾಧುವಿನ ಅಂತಃಪುರಕ್ಕೆ ಆಗಮಿಸಿದನು.

ಸುಂದರವಾದ ರಾತ್ರಿ! ಅಂಬರದಲ್ಲಿ ಚಂದ್ರಮನು ನಸುನಗುತ್ತಿರುವನೋ ಎಂಬಂತೆ ಮನೋಹರವಾಗಿ ಹಾಲು ಆಹ್ಲಾದವನ್ನುಂಟುಮಾಡುತ್ತಿದ್ದಾನೆ! ಏಕಾಂತಸಮಯ, ಹಂಸಶಯ್ಕೆಯಲ್ಲಿ ಸುಂದರಿಯಾದ ಪ್ರಿಯಪತ್ನಿಯ ಬಾಹುಬಂಧನದಲ್ಲಿ ಬೆಳದಿಂಗಳನ್ನು ಚೆಲ್ಲುತ್ತಾ ನಲಿಯುತ್ತಿದ್ದಾನೆ. ವಿವಿಧ ಕುಸುಮ ಸುಗಂಧ ಸೌರಭವನ್ನು ಬೀರುತ್ತಾ ಮಂದಮಾರುತನು ಮನಸ್ಸಿಗೆ ಹರ್ಷ ಉಲ್ಲಾಸಗಳಿಂದ ಮೈಮರೆತು ಪ್ರೇಮಸಾಮ್ರಾಜ್ಯದಲ್ಲಿ ವಿಹರಿಸುತ್ತಿದ್ದಾನೆ ಹಿರಣ್ಯಕಶ್ಯಪು. ಮನಸ್ಸು ಪ್ರಶಾಂತವಾಗಿದೆ.

ಪ್ರೇಯಸಿಯ ಆಲಿಂಗನದ ಅಂಗಸಂಗಸುಖದಲ್ಲಿ ಪ್ರಸನ್ನಚಿತ್ತನಾಗಿದ್ದಾನೆ.

ಪತಿಯ ಅಪ್ಪುಗೆಯಲ್ಲಿ ಮೈಮರೆತ ಕಯಾಧುವು ಮುಗುಳುನಗೆಯನ್ನು ಹೊರಸೂಸುತ್ತಾ - “ಪ್ರಾಣಕಾಂತ! ನಾನು ಅಂದು ಹೇಳಿದಂತೆಯೇ ಆಯಿತಲ್ಲಾ! ನಾನಂದು ತಮ್ಮನ್ನು 'ಸ್ವಾಮಿ, ತಾವು ತಪಸ್ಸಿನಿಂದ ಯಾವಾಗ ಹಿಂದಿರುಗುವಿರಿ? ಎಂದು ಪ್ರಶ್ನಿಸಿದಾಗ ನೀವು 'ತಮರ್ಥ೦ ಮಹಾರಾಜ ಸಾಂಪ್ರತಂ ತ್ಯಕ್ತವಾನ್ ವ್ರತಮ್' ಆದ್ದರಿಂದ ಏತಕ್ಕಾಗಿ ನೀವು ಆ ತಪೋರೂಪ ವ್ರತವನ್ನು ತ್ಯಜಿಸಿ ಬಂದಿರಿ ? ಸ್ವಾಮಿ, ನೀವು ನನ್ನ ಪ್ರಾಣವಲ್ಲಭರು ಆದುದರಿಂದ ಪ್ರೀತಿಯಿಂದ ಕೇಳುತ್ತಿದ್ದೇನೆ.

ಸತ್ಯ ವಿಚಾರವನ್ನು ಹೇಳಿರಿ” ಎಂದು ಕೇಳಿದಳು.

ಪ್ರಿಯಪತ್ನಿಯ ವಚನವನ್ನಾಲಿಸಿ ನಸುನಗುತ್ತಾ ಹಿರಣ್ಯಕಶ್ಯಪನು “ದೇವಿ, ನಾನು ತಪಸ್ಸು ಮಾಡದೆ ಹಿಂದಿರುಗಿದ ಕಾರಣವನ್ನು ಹೇಳುವೆನು, ಕೇಳು. ಮಹಾನಂದಪ್ರದವೂ ಪ್ರಶಾಂತವೂ ಆದ ಆ ತಪೋಭೂಮಿಯಲ್ಲಿ ನಾನು ತಪಸ್ಸಿಗಾಗಿ ಸಂಕಲ್ಪ ಮಾಡುತ್ತಿರುವಾಗ ಎರಡು ಕಲವಕ ಪಕ್ಷಿಗಳು ಬಂದು ನನ್ನೆದುರು ಮರದ ಮೇಲೆ ಕುಳಿತು “ಓಂ ನಮೋ ನಾರಾಯಣಾಯ' ಎಂದು ಮೂರು ಬಾರಿ ಉಚ್ಚರಿಸಿ ಹಾರಿಹೋದವು! ಶತ್ರುವಾದ ನಾರಾಯಣನ ನಾಮವನ್ನು ಕೇಳಿದ್ದರಿಂದ ಅಪಶಕುನವೆಂದು ಭಾವಿಸಿ ನಾನು ರಾಜಧಾನಿಗೆ ಮರಳಿಬಂದೆನು” ಎಂದು ಹೇಳಿದನು.

ಏಕಾಂತದಲ್ಲಿ ಪತ್ನಿಯೊಡನೆ ಸರಸದಲ್ಲಿ ಇರುವಾಗ “ಓಂ ನಮೋ ನಾರಾಯಣಾಯ” ಎಂದು ಹೇಳುತ್ತಿರುವಾಗಲೇ “ವೀರ್ಯದ್ರಾವೋಭವತ್ತದಾ” “ರೇತಸ್ಸಿಚಾ ಪಿತ್ರಾ ಸಂಬಂಧಃ” ಎಂಬಂತೆ ಅದೇ ಕಾಲವನ್ನು ನಿರೀಕ್ಷಿಸುತ್ತಿದ್ದ ಶಂಕುಕರ್ಣನು ದೈತ್ಯರಾಜನ ದೇಹದಿಂದ ಕಯಾಧುವಿನ ಗರ್ಭವನ್ನು ಸೇರಿದನು!* ಹೀಗೆ ಶ್ರೀಹರಿಭಕ್ತನಾದ ಕರ್ಮಜಯದೇವ ಶಂಕುಕರ್ಣನು “ಓಂ ನಮೋ ನಾರಾಯಣಾಯ” ಎಂಬ ನಾಮೋಚ್ಚಾರಣಕಾಲದಲ್ಲಿಯೇ ಶ್ರೀಹರಿಯ ಸಂಕಲ್ಪದಂತೆ ದೈತ್ಯಸಾಮ್ರಾಜ್ಯ ಗರ್ಭವನ್ನು ಪ್ರವೇಶಿಸಿದನು.

ದಿನಗಳುರುಳಿದವು. ಕೊನೆಗೆ ಒಂದು ದಿನ ಹಿರಣ್ಯಕಶ್ಯಪನು ಅವಧ್ಯತ್ವದ ವರವನ್ನು ಪಡೆಯಲು ತುಂಬಿದ ಗರ್ಭಿಣಿಯಾದ ಕಯಾದುವನ್ನು ಬಿಟ್ಟು, ಅವಳಿಂದ ಬೀಳ್ಕೊಂಡು ತಪಸ್ಸಿಗಾಗಿ ಮಂದರಾಚಲಕ್ಕೆ ಹೊರಟನು.