
ಕಲಿಯುಗ - ಕಲ್ಪತರು
ಎರಡನೆಯ ಉಲ್ಲಾಸ ಶ್ರೀಹರಿಭಕ್ತಾಗ್ರಣಿ ಶ್ರೀಪ್ರಹ್ಲಾದರಾಜರು
ರಚಿಸಿದವರು ರಾಜಾ, ಎಸ್. ಗುರುರಾಜಾಚಾರ್ಯರು
೫. ಹಿರಣ್ಯಕಶ್ಯಪನ ತಪಸ್ಸು - ವರಪ್ರಾಪ್ತಿ
ದೈತ್ಯರಾಜ ಹಿರಣ್ಯಕಶ್ಯಪುವು ತನ್ನ ಯೋಗ್ಯತೆಗೆ ಮೀರಿದ ದುರಭಿಸಂಧಿಯಿಂದ ಯುಕ್ತವಾದ ಅಜೇಯತ್ತ-ಅವಧತ್ವ ಅಜರಾಮರತ್ನ, ತ್ರೈಲೋಕ್ಯಾಧಿಪತಿತ್ವ ಮತ್ತು ಸಕಲಲೋಕಾಧಿಪತಿತ್ತಾದಿ ಮಹಾವರಗಳನ್ನು ಪಡೆಯಲು ಬ್ರಹ್ಮದೇವರನ್ನು ಕುರಿತು ಮಂದರಪರ್ವತದಲ್ಲಿ ಉಗ್ರತಪಸ್ಸಿನಲ್ಲಿ ಮಗ್ನನಾದನು.
ಅವನು ತನ್ನ ಪಾದಾಂಗುಷ್ಟಗಳ ಮೇಲೆ ನಿಂತು ತನ್ನೆರಡು ಕರಗಳನ್ನೂ ಮೇಲೆ ಎತ್ತಿ, ಆಕಾಶದತ್ತ ದೃಷ್ಟಿಯನ್ನಿಟ್ಟು ಧ್ಯಾನಮಗ್ನನಾಗಿ ನಿಂತು, ತಪಸ್ಸು ಮಾಡುತ್ತಿದ್ದಾನೆ. ರಕ್ತಾಂಬರ-ಗಂಧಾನುಲೇಪನದಿಂದ ಅಲಂಕೃತನಾದ ಅವನು ತಪಸ್ಸಿನಲ್ಲಿ ಮಗ್ನನಾಗಿ ಸಹಸ್ರಾಧಿಕ ವರ್ಷಗಳಾಗಿರುವುದರಿಂದ ಕಠೋರಕಿರಣಗಳಂತೆ ರಕ್ತವರ್ಣದ ಅವನ ಜಟೆಗಳು ಬೆಳಗುತ್ತವೆ. ಆ ಜಟೆಗಳಿಂದ ಹೊರಹೊಮ್ಮುವ ಕಿರಣಗಳು ಪ್ರಳಯಕಾಲದ ಸೂರ್ಯಕಿರಣದಂತೆ ಭಯಂಕರ ರೂಪ ತಾಳಿವೆ. ಅವನು ಉಗ್ರವಾದ ತಪಸ್ಸನ್ನಾಚರಿಸುತ್ತಿರುವಾಗ ದೈತ್ಯೇಂದ್ರನ ತಲೆಯ ಅಗ್ರಭಾಗದಿಂದ ತಪೋಮಯವಾದ ಅಗ್ನಿಯು ಹೊಗೆಯನ್ನು ಬಿಡುತ್ತಾ ಪ್ರಜ್ವಲಿಸಲಾರಂಭಿಸಿತು.
ಆ ಅಗ್ನಿಯು ಪ್ರಚಂಡ ಜ್ವಲಾಮಂಡಲದ ತಾಪದಿಂದ ದೇವತೆಗಳು ಸ್ವರ್ಗವನ್ನು ಬಿಟ್ಟು ಹೊರಬರಲು ಅಸಮರ್ಥರಾದರು. ಹಿರಣ್ಯಕಶ್ಯಪುವಿನ ತೇಜೋಜ್ವಾಲೆಯಿಂದ ಮೇಲಿನ - ಕೆಳಗಿನ ಮತ್ತು ಸುತ್ತಲಿನ ಲೋಕಗಳೆಲ್ಲವೂ ಬೆಂದು ಬೆಂಡಾಗಹತ್ತಿದವು. ಬಾವಿ, ಕೆರೆ, ತಟಾಕ, ನದಿಗಳೆಲ್ಲವೂ ಕ್ಲೋಭಿಸಿದವು, ಸಪ್ತದ್ವೀಪ ಮತ್ತು ಪರ್ವತಗಳಿಂದ ಯುಕ್ತವಾದ ಭೂಮಂಡಲವು ನಡುಗಹತ್ತಿತು. ನಕ್ಷತ್ರ-ಗ್ರಹಗಳು ಚಲಿಸಿ ಬೀಳಲಾರಂಭಿಸಿದವು, ದಶದಿಕ್ಕುಗಳೂ ಉರಿಯಹತ್ತಿದವು, ದೈತ್ಯರಾಜನ ಈ ಕಠೋರವಾ ಉಗ್ರವೂ ಆದ ತಪೋಜ್ವಾಲೆಯ ಕಷ್ಟವನ್ನು ತಡೆಯಲಾಗದ ಅಮರರು ಸ್ವರ್ಗವನ್ನು ತ್ಯಜಿಸಿ ಸತ್ಯಲೋಕಕ್ಕೆ ಧಾವಿಸಿದರು.
ಸತ್ಯಲೋಕಕ್ಕೆ ಬಂದ ದೇವತೆಗಳು ಬ್ರಹ್ಮದೇವರಲ್ಲಿ “ದೇವ ದೇವ ಜಗತ್ಪತೇ, ಬ್ರಹ್ಮದೇವ, ದೈತ್ಯರಾಜನಾದ ಹಿರಣ್ಯಕಶ್ಯಪುವಿನ ತಪಸ್ಸಿನಿಂದ ನಾವು ಸ್ವರ್ಗದಲ್ಲಿ ವಾಸಮಾಡಲು ಅಸಮರ್ಥರಾಗಿದ್ದೇವೆ. ನೀವು ಸೃಷ್ಟಿಸಿದ ಸಮಸ್ತ ಪ್ರಪಂಚವೂ ಹಿರಣ್ಯಕಶ್ಯಪನ ಉಗ್ರತಪಸ್ಸಿಗೆ ಆಹಾರರೂಪವಾಗಿ ನಾಶವಾಗುವ ಮೊದಲೇ ಏನಾದರೊಂದು ಉಪಾಯದಿಂದ, ಅವನು ತಪಸ್ಸನ್ನು ಉಪರಮಿಸುವಂತೆ ಒಂದು ಪರಿಹಾರವನ್ನು ಮಾಡಿರಿ” ಎಂದು ಪ್ರಾರ್ಥಿಸಿದರು.
ದೇವತೆಗಳ ಪ್ರಾರ್ಥನೆಯಂತೆ ಮನಕರಗಿದ ಬ್ರಹ್ಮದೇವರು ಮುಂದೆ ಮಾಡಬೇಕಾದ ಕರ್ತವ್ಯವನ್ನು ಚಿಂತಿಸಿ ಒಂದು ನಿರ್ಧಾರಕ್ಕೆ ಬಂದರು. ದೈತ್ಯರಾಜ ಹಿರಣ್ಯಕಶ್ಯಪನು ಘೋರವಾದ ತಪಸ್ಸನ್ನು ಮಾಡುತ್ತಿದ್ದಾನೆ. ಅದರಿಂದ ಜಗತ್ತಿಗೆ ಬಹುಕಷ್ಟವಾಗುತ್ತಿದೆ. ಲೋಕಕ್ಕೆ ಬಂದಿರುವ ಕಷ್ಟ ಪರಿಹಾರವಾಗಬೇಕಾದರೆ ದೈತ್ಯನಿಗೆ ವರದಾನ ಮಾಡಬೇಕು. ಅದರಿಂದ ತಪಸ್ಸಿಗೆ ಫಲ ಉಂಟೆಂದು ದೈತ್ಯರಿಗೆ ನಂಬಿಕೆ ದೃಢವಾಗುತ್ತದೆ. ಆದರೆ ತಾವು ನೀಡುವ ವರರಿಂದಲೇ ಕ್ರೂರಿಯೂ ಲೋಕಕಂಟಕನೂ ಆದ ಹಿರಣ್ಯಕಶ್ಯಪುವಿನ ವಿನಾಶವೂ ಆಗಬೇಕೆಂಬುದೇ ಪರಾತ್ಪರನಾದ ಶ್ರೀಹರಿಯ ಸಂಕಲ್ಪವಾದ್ದರಿಂದ ಆ ದೇವದೇವನ ಇಚ್ಛೆಯನ್ನು ಬಲ್ಲ ಪಿತಾಮಹ ಬ್ರಹ್ಮದೇವರು ದಕ್ಷ-ಭ್ರಗು, ಮುಂತಾದವರಿಂದೊಡಗೂಡಿ ಹಂಸಾರೂಢರಾಗಿ ಸದ್ಯದ ವಿಪತ್ತಿನಿಂದ ದೇವತೆಗಳನ್ನೂ ಮತ್ತು ಸಮಸ್ತ ಜಗತ್ತನ್ನೂ ಕಾಪಾಡಲು ಹಿರಣ್ಯಕಶ್ಯಪನಿಗೆ ವರಪ್ರದಾನ ಮಾಡಲು ಮಂದರ ಪರ್ವತಕ್ಕೆ ದಯಮಾಡಿಸಿದರು.
ಇತ್ತ ನಾರದರ ಆಶ್ರಮದಲ್ಲಿ ಒಂದು ಏಕಾದಶಿ ಬೆಳಗಿನಿಂದಲೂ ಭಗವಾನ, ಪೂಜಾದಿಗಳಲ್ಲಿ ನಿರತಳಾದ ಕಯಾಧುದೇವಿಯು ಬಹುಶ್ರಾಂತಳಾಗಿದ್ದಾಳೆ. ರಾತ್ರಿಯಾಯಿತು. ಏಕಾದಶಿ ಪ್ರಯುಕ್ತ ಜಾಗರಣೆಸೇವೆ ಪ್ರಾರಂಭವಾಗಿದೆ, ನಾರದರು ಕೃಷ್ಣಾಜಿನದ ಮೇಲೆ ಕುಳಿತಿದ್ದಾರೆ.
ಆಗ ಕಯಾಧುವು (ಶುಚಿಷ್ಕತಿಯು) - “ಸ್ವಾಮಿ, ನೀವು ದಯಮಾಡಿ ನನಗೆ ಶ್ರೀಹರಿಯ ಮಹಿಮಾದಿಗಳನ್ನು ತಿಳಿಸಿ ಅನುಗ್ರಹಿಸಿರಿ” ಎಂದು ಪ್ರಾರ್ಥಿಸಿದಳು. ಆಗ ನಾರದರು “ಮಂಗಳಾಂಗಿ, ಹಿಂದೆ ಸಾಕ್ಷಾತ್ ಶ್ರೀಹರಿಯು ಲೋಕಮಾತೆಯಾದ ಶ್ರೀಲಕ್ಷ್ಮಿದೇವಿಗೆ ಹೇಳಿದ ಮಹಿಮೆಯನ್ನು ಹೇಳುತ್ತೇನೆ ಕೇಳು. ದೇವಿ, ಸಚ್ಚಿದಾನಂದವಿಗ್ರಹನಾದ ಶ್ರೀಹರಿಯನ್ನು ಭಕ್ತಿಯಿಂದ ಆರಾಧಿಸು. ಅದರಿಂದ ತುಷ್ಟನಾದ ನಾರಾಯಣನು ಮೋಕ್ಷವನ್ನೇ ದಯಪಾಲಿಸುವನು, ಶ್ರೀಹರಿಭಕ್ತರನ್ನು ಯಾವ ಶತ್ರುಗಳೂ, ದುಷ್ಟಗ್ರಹಗಳೂ, ರಾಕ್ಷಸರೂ ಹಿಂಸಿಸುವುದಿಲ್ಲ. ಶ್ರೀಹರಿಭಕ್ತಿಯು ದೃಢವಾದಂತೆಲ್ಲಾ ಅವನು ಭಕ್ತಜನರಿಗೆ ಸಮಸ್ತ ಶ್ರೇಯಸ್ಸುಗಳನ್ನು ಕರುಣಿಸುವನು, ಮಗಳೇ! ಕರಚರಣ ಮುಂತಾದ ಅವಯವಗಳು, ಕಣ್ಣು, ಕಿವಿ, ನಾಲಿಗೆ, ಮನಸ್ಸು. ಶರೀರ ರಾಜ್ಯ ಮುಂತಾದ ಸಂಪತ್ತುಗಳೆಲ್ಲವನ್ನೂ ಶ್ರೀಮನ್ನಾರಾಯಣನ ಪೂಜೆಗೆ ಅರ್ಪಿಸಿ ನವವಿಧ ಭಕ್ತಿಯಿಂದ ಭಗವಂತನನ್ನು ಸೇವಿಸಬೇಕು. ಶರೀರವು ನಶ್ವರವಾದುದು. ಅದು ಯಾವಾಗ ನಾಶವಾಗುವುದೆಂದು ಹೇಳಲು ಸಾಧ್ಯವಿಲ್ಲ, ತಾಯಿಯ ಉದರದಿಂದ ಹೊರಬರುವಾಗಲೇ ಮೃತ್ಯುವು ಜೀವನ ಬೆನ್ನು ಹತ್ತಿ ಬರುವುದು. ಆದ್ದರಿಂದ ಅಹಂಕಾರ - ಮಮಕಾರಗಳನ್ನು ಬಿಟ್ಟು, ವ್ಯರ್ಥವಾಗಿ ಕಾಲ ಕಳೆಯದೆ ಶ್ರೀಹರಿಯನ್ನು ಭಕ್ತಿಯಿಂದ ಪೂಜಿಸಬೇಕು. ದೇವತೆಗಳು ಅಸುರರು ಎಂದು ಸೃಷ್ಟಿಯು ಎರಡು ಪ್ರಕಾರವಾಗಿದೆ. ಅದರಲ್ಲಿ ಹರಿಭಕ್ತರು ದೇವಸ್ವಭಾವರು, ಪುತ್ರಿ, ನೀನೂ ಹರಿಭಕ್ತಳಾಗಿದ್ದೀಯೇ, “ಹರಿಭಕ್ತಿಯುತಾ ದೇವಾಸದೀನಾ ಆಸುರಾ ಮತಾಃ | ತಸ್ಮಾದ್ದೇವಿ ಶ್ರುಣತ್ವಂ ತ್ವಂ ಹರಿಭಕ್ತಿಪರಾಯಣಾ ” ಶ್ರೀಹರಿಭಕ್ತಳಾದ ನೀನು ಸರ್ವೆಶ್ವರನಾದ ಶ್ರೀಹರಿಯನ್ನು ಡಂಭಾಚಾರಗಳಿಲ್ಲದೆ ಭಕ್ತಿ-ಶ್ರದ್ಧೆಗಳಿಂದ ಪೂಜಿಸು” ಎಂದು ಹೇಳಿ ಕಯಾಧುರಾಣಿಗೆ ಶ್ರೀಹರಿಯ ಅಚಿಂತ್ಯಾದ್ಭುತಶಕ್ತಿ, ಮಹಾಮಹಿಮೆ, ಭಕ್ತವಾತ್ಸಲ್ಯಾದಿಗಳನ್ನು ಪುಣ್ಯಪ್ರದವಾದ ಪರಮಾತ್ಮನ ಅವತಾರ ಲೀಲೆಗಳು, ಸತ್ವ ರಹಸ್ಯಗಳನ್ನೂ ಶ್ರವಣ ಮಾಡಿಸುತ್ತಿದ್ದಾರೆ. ಪಾಪ, ಶ್ರಾಂತಳಾದ ಕಯಾಧುವಿಗೆ ಅವಳಿಗೆ ಅರಿವಾಗದಂತೆಯೇ ನಿದ್ರೆ ಬಂದುಬಿಟ್ಟಿದೆ. ಯಾವುದರ ಪರಿವೆಯೂ ಇಲ್ಲದೆ ಕಯಾಧುರಾಣಿ ನಿದ್ರಾಪರವಶಳಾಗಿದ್ದಾಳೆ.
ನಾರದ ಮಹರ್ಷಿಗಳಿಗೆ ಇಂದೇಕೋ ಬಹಳ ಉತ್ಸಾಹ! ಮೈಮರೆತು ಶ್ರೀಹರಿಯ ಚರಿತ್ರೆಯನ್ನು ಹೇಳುತ್ತಿದ್ದರು. ಮುನಿಪುಂಗವರು ಸಕಲ ವೇದಾದಿಶಾಸ್ತ್ರಗಳಿಂದ ಪರಮಮುಖ್ಯವೃತ್ತಿಯಿಂದ ಪ್ರತಿಪಾದ್ಯನಾದ ಶ್ರೀರಮಾರಮಣನ ಸತ್ತತ್ತ ರಹಸ್ಯಗಳನ್ನೂ, ಭಗವದುಪಾಸನಾ ಕ್ರಮಗಳನ್ನೂ, ಭಕ್ತಿಯ ವೈವಿಧ್ಯ, ವೈಶಿಷ್ಟಾದಿಗಳನ್ನೂ ಉಪದೇಶಿಸಲಾರಂಭಿಸಿದರು.
ಆಗ ಪ್ರಶಾಂತವಾಗಿದ್ದ ಆ ಪರಿಸರದಲ್ಲಿ “ಹೂಂ, ಹೂಂ” ಎಂಬ ಧ್ವನಿ ಕೇಳಿಬರುತ್ತಿದೆ! ವಿಸ್ಮಯದಿಂದ ನಾರದರು ಕಯಾದುವನ್ನು ನೋಡಿದರು. ಪಾಪ, ಅವಳು ನಿದ್ರಾಸಕ್ತಳಾಗಿದ್ದಾಳೆ. ಸುತ್ತಲೂ ನೋಡಿದರು. ಯಾರೂ ಇಲ್ಲ! ಇದೇನಾಶ್ಚರ್ಯ ಇದಾರ ಧ್ವನಿ ? ಎಂದು ಧ್ವನಿಯು ಎತ್ತಕಡೆಯಿಂದ ಬರುತ್ತಿದೆಯೆಂದು ಪರೀಕ್ಷಿಸಿದರು. ಪರಮಾಶ್ಚರ್ಯ ! ಕಯಾಧುರಾಣಿಯ ಉದರದಿಂದ ಧ್ವನಿ ಕೇಳಿಬರುತ್ತಿದೆ. ಆಗ ನಾರದರಿಗಾದ ಆನಂದ-ಆಶ್ಚರ್ಯಗಳು ಅವರ್ಣನೀಯ. ಪರಮಾನಂದದಿಂದ ನಾರದರ ಮೈ ಪುಳಕಿಸಿತು, ಕಂಠ ತುಂಬಿ ಬಂದಿತು.
“ಆಹಾ, ಶ್ರೀಹರಿ, ದೇವ ದೇವ ನಿನ್ನ ಲೀಲೆಯನ್ನು ಬಲ್ಲವರಾರು ಪ್ರಭು ? ಈಗಿನಿಂದಲೇ ನಿನ್ನ ಭಕ್ತಾಗ್ರಣಿಯನ್ನು ಜಾಗೃತಗೊಳಿಸುತ್ತಿರುವೆಯಾ ? ಈ ಬಡ ಜೋಗಿಯೇ ನಿನ್ನ ಅಂತರಂಗ ಭಕುತನ ಗುರುವಾಗಬೇಕೆಂದು ಸಂಕಲ್ಪಿಸಿರುವೆಯಾ? ಮಾಧವ, ನಾನೇ ಧನ್ಯ, ಜಗನ್ನಾಟಕ ಸೂತ್ರಧಾರಿ, ನೀನು ಆಡಿಸಿದಂತೆ ಆಡಲೇಬೇಕಲ್ಲವೆ? ಸ್ವಾಮಿ, ಅಂದು ನಿನ್ನ ಪ್ರೇರಣೆಯಂತೆ ದೈತ್ಯರಾಜನನ್ನು ಅವಧ್ಯತ್ವ ವರವನ್ನು ತಪಸ್ಸಿನಿಂದ ಪಡೆಯುವಂತೆ ಪ್ರಚೋದಿಸಿದೆ. ಮುಂದೆ ಮತ್ತೆ ನಿನ್ನ ಪ್ರೇರಣೆಯಂತೆ, ಸಂಕಲ್ಪದಂತೆಯೇ ದೇವೇಂದ್ರನಿಂದ ಕಯಾಧುದೇವಿಯನ್ನೂ, ಅವಳ ಗರ್ಭಸ್ಥ ಶಿಶುವನ್ನೂ ರಕ್ಷಿಸಿದೆ. ಈಗ ಪ್ರಬಲನಾದ ದೈತ್ಯರಾಜನನ್ನೇ ಎದುರಿಸಿ ನಿನ್ನ ಅದ್ಭುತ ಮಹಿಮೆ, ಸರ್ವೋತ್ತಮತ್ವ, ಸರ್ವತ್ರವ್ಯಾಪ್ತಿತ್ವಾದಿ ಅಚಿಂತ್ಯಾದ್ಭುತ ಶಕ್ತಿಗಳನ್ನು ಜಗತ್ತಿಗೆ ತೋರಿಕೊಡಲಿರುವ ಈ ಉದರಸ್ಥ ಭಕ್ತರಾಜನನ್ನು ತಯಾರಿಸುವ ಗುರುತರ ಹೊಣೆಯನ್ನೂ ನನ್ನ ಮೇಲೆಯೇ ಹಾಕಿರುವೆಯಾ? ಆಗಲಿ, ದೇವ ನಿನ್ನ ಇಚ್ಛೆಯಂತೆಯೇ ಬ್ರಹ್ಮದೇವನ ವರದಿಂದ ಮತ್ತನಾಗಿ ಹಿರಣ್ಯಕಶ್ಯಪನು ಹಿಂದಿರುಗುವಷ್ಟರಲ್ಲಿಯೇ ಅವನ ಗರ್ವವನ್ನು ಮುರಿದು, ನಿನ್ನ ಭಕ್ತನಾಗಿ ಲೋಕಕಲ್ಯಾಣ ಮಾಡಲು ಶಕ್ತನಾಗುವಂತೆ ಗರ್ಭಸ್ಥನಾಗಿರುವ ಈ ಮಹಾನುಭಾವನನ್ನು ಪೂರ್ಣವಾಗಿ ತಯಾರುಮಾಡಿ ಸಿದ್ಧಪಡಿಸುವೆನು. ಶ್ರೀಹರಿ, ನಿನ್ನನ್ನು ದ್ವೇಷಿಸುವ ಖಳ ದೈತ್ಯನ ಪುತ್ರನಾಗಿಯೇ ಈ ಭಕ್ತರಾಜನ ಜನನ! ಮಗನೇ ತಂದೆಗೆ ವಿರೋಧಿ! ಪ್ರತಿಸ್ಪರ್ಧಿ ಅಘಟಿತಘಟನಾಪಟುವಾದ ನೀನು ಸತ್ಯಸಂಕಲ್ಪ. ದೇವ ನಿನಗೆ ಅನಂತ ವಂದನೆಗಳು” ಎಂದು ನಾರದರು ಧ್ಯಾನಸಕ್ತರಾದರು.
ಅಂದಿನಿಂದ ನಾರದ ಮಹರ್ಷಿಗಳು ಪ್ರತಿನಿತ್ಯವೂ ಕಯಾಧುವಿಗೆ ಉಪದೇಶ ಮಾಡುವ ನೆಪದಿಂದ ಸಕಲ ವೇದಶಾಸ್ತ್ರಾರ್ಥಸಾರ, ಭಾಗವತಧರ್ಮ, ಭಗವದ್ಭಕ್ತಿ, ಶ್ರೀಹರಿಯ ಮಹಿಮಾತಿಶಯಗಳನ್ನು ದೈತ್ಯರಾಣಿಗೂ, ಅವಳ ಗರ್ಭಸ್ಥ ಶಿಶುವಿಗೂ ಉಪದೇಶಿಸಿದರು.11
ಒಂದು ದಿನ ನಾರದರು ಸಂತೋಷದಿಂದ ಕಯಾಧುದೇವಿಗೆ ಪರಮಾತ್ಮನ ಮಹಿಮೆಗಳನ್ನು ಉಪದೇಶಿಸುತ್ತಿರುವಾಗ ಕಯಾಧುವು ನಾರದರಿಗೆ ಕರಮುಗಿದು “ಸ್ವಾಮಿ, ತಾವು ನನಗೊಂದು ವರವನ್ನು ಕರುಣಿಸಬೇಕು” ಎಂದು ವಿಜ್ಞಾಪಿಸಿದಳು.
ನಾರದರು ಸುಪ್ರಸನ್ನರಾಗಿ “ಮಂಗಳಾಂಗಿ, ಕುಮಾರಿ! ನಿನಗೇನು ವರ ಬೇಕು, ಕೇಳಮ್ಮ” ಎಂದರು. ಆಗ ಕಯಾದುವು ವಿನೀತಳಾಗಿ ಮುನಿವರ್ಯ ! ನನ್ನ ಪತಿದೇವನು ಬಂದು ನನ್ನನ್ನು ರಾಜಧಾನಿಗೆ ಕರೆದುಕೊಂಡು ಹೋಗುವವರೆಗೂ, ನನಗೆ ಪ್ರಸವವಾಗಬಾರದು ! ನಾನು ತಮ್ಮಲ್ಲಿ ಇಚ್ಛಾಪ್ರಸವ ವರವನ್ನೂ, ನನ್ನ ಉದರಸ್ಥ ಶಿಶುವಿಗೆ ಕ್ಷೇಮವನ್ನೂ ಬೇಡುವೆನು ಎಂದು ಪ್ರಾರ್ಥಿಸಿದಳು.
ನಾರದಮಹರ್ಷಿಗಳು ಹರುಷದಿಂದ “ಸಾಧು, ಸಾಧಿ! ಪತಿವ್ರತೆಯಾದ ಸ್ತ್ರೀಗೆ ಭೂಷಣವಾದ ವರವನ್ನೇ ಯಾಚಿಸಿದ್ದೀಯೇ! ಹಾಗೇ ಆಗಲಿ, ನೀನು ಅಪೇಕ್ಷಿಸಿದಾಗಲೇ ನೀನು ಪ್ರಸವಿಸುವೆ. ನಿನ್ನ ಗರ್ಭದಲ್ಲಿರುವ ಕುಮಾರನಿಗೆ ಸರ್ವದಾ ಸನ್ಮಂಗಳ, ಕ್ಷೇಮಗಳುಂಟಾಗುವುದು. ಇದು ನನ್ನ ಪ್ರಭುವಾದ ಶ್ರೀಹರಿ ಪರಮಾತ್ಮನ ಕಾರುಣ್ಯದಿಂದ ಸತ್ಯವಾಗಿ ನೆರವೇರುವುದು! ಚಿಂತಿಸಬೇಡಮ್ಮ” ಎಂದು ಕಯಾಧುರಾಣಿಗೆ ವರಪ್ರದಾನ ಮಾಡಿದರು.12
ಇತ್ತ ಮಂದರ ಪರ್ವತದಲ್ಲಿ ತಪೋನಿರತನಾದ ಹಿರಣ್ಯಕಶ್ಯಪನಿಗೆ ವರದಾನ ಮಾಡಲು ಬಂದ ಬ್ರಹ್ಮದೇವರು ಬಿದಿರು-ಹುಲ್ಲುಗಳಿಂದ ಮುಚ್ಚಿಹೋಗಿ ದೇಹದ ಸುತ್ತಲೂ ಹುತ್ತ ಬೆಳೆದು ಇರುವೆ-ಹುಳಗಳಿಂದ ಮುತ್ತಲ್ಪಟ್ಟು ಅಸ್ತಿ, ಚರ್ಮ ಮಾತ್ರ ಉಳಿದಿರುವ ಹಿರಣ್ಯಕಶ್ಯಪನ ಜೀರ್ಣದೇಹವನ್ನು ಕಂಡು “ವತ್ಸ! ಏಳು, ನಿನ್ನ ಘೋರವಾದ ತಪಸ್ಸು ಸಾಕುಮಾಡು. ಇಕೋ ನೋಡು, ನಿನಗೆ ಒಲಿದು ಬಂದಿದ್ದೇನೆ, ನಿನಗಿಷ್ಟವಾದ ವರವನ್ನು ಪ್ರಾರ್ಥಿಸು. ದೈತ್ಯರಾಜ! ನಿನ್ನ ಶ್ರೇಷ್ಠ ತಪಸ್ಸಿನಿಂದ ನಿನಗೆ ವಶನಾಗಿದ್ದೇನೆ. ವರವನ್ನು ಬೇಡು” ಎಂದು ಹೇಳಿ ತಮ್ಮ ಕಮಂಡಲೋದಕದಿಂದ ಹಿರಣ್ಯಕಶ್ಯಪನ ಜೀರ್ಣಶರೀರದ ಮೇಲೆ ಪ್ರೋಕ್ಷಿಸಿದರು.
ಏನಾಶ್ಚರ್ಯ! ಆ ಕೂಡಲೇ ಕಟ್ಟಿಗೆಯಿಂದ ಹೊರಹೊಮ್ಮುವ ಅಗ್ನಿಯಂತೆ ತೇಜಃಪುಂಜವಾದ, ವಜ್ರದಂತೆ ಸುದೃಢವಾದ, ಸರ್ವಾಂಗಸುಂದರವಾದ ತಾರುಣ್ಯಪೂರ್ಣ ದೇಹದಿಂದ ಕಂಗೊಳಿಸುತ್ತಾ ಹಿರಣ್ಯಕಶ್ಯಪನು ಹುತ್ತದಿಂದ ಹೊರಬಂದನು.
ಸರ್ವಲೋಕ ಪಿತಾಮಹನೂ, ತನ್ನಿಷ್ಟದೇವನೂ ಆದ ಬ್ರಹ್ಮದೇವನು ಅಂಬರದಲ್ಲಿ ಅಂದದ ಅಂಚೆಯನ್ನೇರಿ (ಹಂಸವನ್ನೇರಿ) ನಗುಮೊಗದಿಂದ ಸುಪ್ರಸನ್ನನಾಗಿ ತನಗೆ ದರ್ಶನವನ್ನು ಕರುಣಿಸಿದ್ದನ್ನು ಕಂಡು ಹರ್ಷ ಪುಲಕಿತಗಾತ್ರನಾಗಿ ದೇವರಿಗೆ ಸಾಷ್ಟಾಂಗ ನಮನಗೈದು ಕರಜೋಡಿಸಿ ನಿಂತು ಆನಂದಬಾಷ್ಪಸಿಕ್ತನಯನನಾಗಿ ವಿನಯಪೂರ್ವಕವಾಗಿ ಸ್ತೋತ್ರಮಾಡಲಾರಂಭಿಸಿದನು.
ಕಲ್ಪಾಂತೇ ಕಾಲಸೃಷ್ಟೇನ ಯೋಂಧೇನ ತಮಸಾವೃತಮ್ |
ಅಭಿವ್ಯನಕ್ ಜಗದಿದಂ ಸ್ವಯಂಜ್ಯೋತಿಃ ಸ್ವರೋಚಿಷಾ || 28 ||
ಆತ್ಮನಾ ತ್ರಿವೃತಾಚೇದಂ ಸೃಜತ್ಯವತಿ ಲುಂಪತಿ |
ರಜಸ್ಸತ್ವತಮೋಧಾಷ್ಟೋ ಪರಾಯ ಮಹತೇ ನಮಃ || 29 ||
- ಭಾಗವತ. ತೃ.ಸ್ಕಂ.
ದೇವದೇವ! ಮಹಾಕಲ್ಪಾಂತ್ಯದಲ್ಲಿ ಪ್ರಳಯಕಾಲ ಪ್ರವರ್ತಕನಾದ ನಿನ್ನಿಂದ (ಶ್ರೀಹರಿಯಿಂದ) ಅಭಿವ್ಯಕ್ತವಾದ ದುರ್ಗಾದೇವಿಯಿಂದ ಅಭಿಮನ್ಯಮಾನವಾದ ತಮಸ್ಸಿನಿಂದ ಈ ಜಗತ್ತು (ಜಗತ್ಸರ್ಜಕವಾದ ಪ್ರದ್ಯುಮ್ನಾದಿ ರೂಪಗಳು ಮತ್ತು ಪ್ರಕೃತ್ಯಾದಿ) ಆವೃತವಾಗಿತ್ತು. ಆಗ ನೀನು ನಿನ್ನ ತೇಜಸ್ಸನ್ನು ವ್ಯಕ್ತಪಡಿಸಿ ಅದರಿಂದ ತಮಸ್ಸನ್ನು ದೂರಮಾಡಿ ಪ್ರದ್ಯುಮ್ನಾದಿ ಜಗತ್ತನ್ನು ಪ್ರಕಟಗೊಳಿಸಿದೆ. ನಂತರ ನೀನು ಪ್ರಕೃತಿಯನ್ನು ಕಾರ್ಯೋನ್ಮುಖವಾಗಿ ಮಾಡಿ ಅದರಿಂದ ಮಹತ್ತತ್ವಾದಿ ಪ್ರಪಂಚವನ್ನು ಸೃಷ್ಟಿಸಿ, ರಕ್ಷಣೆ ಮಾಡಿ, ಸಂಹರಿಸುತ್ತೀಯೇ. ಇಂಥ ನಿನಗೆ ನಮಸ್ಕಾರ.
ಹೀಗೆ ಹಿರಣ್ಯಕಶ್ಯಪನು ಬಹುವಿಧವಾಗಿ ಸ್ತುತಿಸಿ ಆನಂತರ ವರವನ್ನು ಬೇಡಿದನು –
ಯದಿ ದಾಸ್ಯಸಭಿಮತಾನ್ ವರಾನೇ ವರದೋತ್ತಮ |
ಭೂತೇಭ್ಯಸ್ತದ್ಧಿಸಷ್ಟೇಭೋ ಮೃತ್ಯುರ್ಮಾಭನ್ನ ಪ್ರಭ || 37 ||
ನಾಂತರ್ಬಹಿರ್ದಿವಾನಕ್ತಮನಾದ ಚಾಯುದ್ಧ |
ನ ಭೂಮ ನಾಂಬರೇ ಮೃತ್ಯುರ್ನ ನರೈರ್ನಮಗೈರಪಿ || 38 ||
ವ್ಯಾ ಸುಭರ್ವಾಸುಮದ್ದಿರ್ವಾ ಸುರಾಸುರಮಹೋರಗೈ |
ಅಪ್ರತಿದ್ವಂದತಾಯುದ್ಧ ಐಕಪತ್ಯಂ ಚ ದೇಹಿನಾಮ್ || 39 ||
ಸರ್ವಷಾಂ ಲೋಕಪಾಲನಾಂ ಮಹಿಮಾನಂ ತಥಾತ್ಮನಃ |
ತಪೋಯೋಗಪ್ರಭಾವೇನ ಯೋ ನ ರಿಷ್ಯತಿ ಕರ್ಹಿ ಚಿತ್ || 40 ||
ದೇವ! ನೀನು ನನ್ನ ತಪಸ್ಸಿಗೆ ಮೆಚ್ಚಿ ವರವನ್ನು ಕೊಡುವಂತಿದ್ದರೆ ಸ್ವಾಮಿ, ನನಗಿಂಥ ವರವನ್ನು ದಯಪಾಲಿಸು - ನೀನು ಸೃಷ್ಟಿಸಿದ ಯಾವ ಪ್ರಾಣಿಯಿಂದಲೂ ನನಗೆ ಮರಣ ಬರಬಾರದು ! ಒಳಗೆ - ಹೊರಗೆ - ಹಗಲು - ರಾತ್ರಿ, ದೇಹಾವಯವ, ಭಿನ್ನವಾದ ಖಡ್ಗಾದಿ ಆಯುಧಗಳಿಂದ, ಭೂಮಿಯಲ್ಲಿ, ಅಂತರಿಕ್ಷದಲ್ಲಿ, ಮನುಷ್ಯರಿಂದ, ಮೃಗಗಳಿಂದ, ಜೀವಂತ ಇಲ್ಲವೇ ಮೃತಪ್ರಾಣಿಗಳಿಂದ, ಸುರ-ಅಸುರ-ಮಹೋರಗ (ನಾಗ) - ಇವು ಯಾವುದರಿಂದಲೂ ನನಗೆ ಮರಣವಾಗಬಾರದು. ಯುದ್ಧದಲ್ಲಿ ಯಾರೂ ನನ್ನನ್ನು ಪ್ರತಿಸ್ಪರ್ಧಿಸಬಾರದು. ದೇಹವುಳ್ಳವರಲ್ಲಿ ಏಕಾಧಿಪತ್ಯವು ನನಗಿರಬೇಕು ! ಸರ್ವಲೋಕಪಾಲಕರ ಮಹಿಮೆಯು ನನಗೆ ದೊರಕಬೇಕು!! (ಸ್ವಾಮಿ, ನಿನ್ನ ಮಹಿಮೆಯು ಹೇಗೆ ನಶಿಸುವುದಿಲ್ಲವೋ ಹಾಗೆಯೇ ಯಾವ ಕಾರಣದಿಂದಲೂ ನನ್ನ ಮಹಿಮೆಯೂ ನಶಿಸಬಾರದಂತೆ ವರವನ್ನು ಕೊಡು - ಹೀಗೆ ಪ್ರಾರ್ಥಿಸಿದ್ದು ಅವನು ಬ್ರಹ್ಮಪದವೂ ತನಗೆ ದೊರಬೇಕೆಂಬುದನ್ನು ಸೂಚಿಸುವುದು) ಎಂದು ವರವನ್ನು ಬೇಡಿದನು.
ಪುರುಷರಿಗೆ ಅತ್ಯಂತ ದುರ್ಲಭವಾದ ಈ ರೀತಿ ವರವನ್ನು ಬೇಡಿದರೂ ಶ್ರೀಹರಿ ಸಂಕಲ್ಪದಂತೆ ಬ್ರಹ್ಮದೇವರು ಶ್ರೀಹರಿಯ ಪ್ರೇರಣೆಯಂತೆ ಈ ಮಹತ್ತರವಾದ ವರವನ್ನು ಅನುಗ್ರಹಿಸಿ ಸತ್ಯಲೋಕಕ್ಕೆ ದಯಮಾಡಿಸಿದರು.
ದೈತ್ಯಸಾಮ್ರಾಟನಾದ ಹಿರಣ್ಯಕಶ್ಯಪನು ಬ್ರಹ್ಮದೇವರನ್ನು ತಪಸ್ಸಿನಿಂದ ಮೆಚ್ಚಿಸಿ ಅವರಿಂದ ಅಸಾಧಾರಣ ವರವನ್ನು ಪಡೆದು ಪರಮಾನಂದಭರಿತನಾಗಿ ರಾಜಧಾನಿಗೆ ಹಿಂದಿರುಗಿದನು.
ಆ ವಿಚಾರವನ್ನು ಅರಿತ ದೇವತೆಗಳು ದೈತ್ಯರಾಜ್ಯವನ್ನು ಬಿಟ್ಟು ಹೊರಟು ಹೋದರು.
ರಾಜಧಾನಿಯಲ್ಲಿ ಹಿರಣ್ಯಕಶ್ಯಪನಿಗೆ ತಾನು ತಪಸ್ಸಿಗೆ ಹೊರಟಾಗಲಾಗಾಯಿತು ನಡೆದ ಎಲ್ಲ ವಿಚಾರಗಳೂ ತಿಳಿದವು. ದೈತ್ಯರಾಜನು ದೇವರ್ಷಿ ನಾರದರ ಆಶ್ರಮಕ್ಕೆ ಬಂದನು.
ದೈತ್ಯರಾಜನ ಆಗಮನದಿಂದ ಸಂತೋಷಗೊಂಡ ನಾರದ ಮಹರ್ಷಿಗಳು ಅವನನ್ನು ಸ್ವಾಗತಿಸಿದರು. ಪತಿಯ ಆಗಮನದಿಂದ ಕಯಾಧುವಿಗೆ ಅತ್ಯಂತ ಆನಂದ ಉಂಟಾಯಿತು,
ಹಿರಣ್ಯಕಶ್ಯಪನು ನಾರದರಿಗೆ ನಮಸ್ಕರಿಸಿ ಮುನಿವರ್ಯ ! ನಿಮ್ಮ ಉಪಕಾರ ನನ್ನ ಮೇಲೆ ಬಹಳವಾಯಿತು. ನನ್ನ ಹಿತಕ್ಕಾಗಿ ನೀವು ತಪಸ್ಸಿನಿಂದ ಪಿತಾಮಹನನ್ನು ಸಂತೋಷಪಡಿಸಿ ಅವಧ್ಯತ್ತವರವನ್ನು ಪಡೆಯುವಂತೆ ಸಲಹೆ ನೀಡಿದಿರಿ. ನಿಮ್ಮ ಉಪದೇಶದಂತೆ ನಾನು ಬ್ರಹ್ಮದೇವರನ್ನು ತಪಸ್ಸಿನಿಂದ ಮೆಚ್ಚಿಸಿ ಅಸಾಧಾರಣವಾದ ವರವನ್ನು ಪಡೆದಿರುತ್ತೇನೆ!
ಇನ್ನು ನಾನು ತಪಸ್ಸಿಗೆ ತೆರಳಿದಾಗ ನನ್ನ ಪತ್ನಿಯನ್ನು ಇಂದ್ರನಿಂದ ರಕ್ಷಿಸಿದಿರಿ. ಮುಖ್ಯವಾಗಿ ಭಾವಿ ದೈತ್ಯಸಾಮ್ರಾಜ್ಯಾಧಿಪತಿ- ಯಾಗಲಿರುವ ಗರ್ಭಸ್ಥಶಿಶುವನ್ನು ಸಂರಕ್ಷಿಸಿ ನಮ್ಮ ದೈತ್ಯಮಂಶಕ್ಕೇ ಮಹೋಪಕಾರ ಮಾಡಿರುತ್ತೀರಿ! ಮಾತ್ರವಲ್ಲ; ದೈತ್ಯಸಾಮ್ರಾಜ್ಞೆಗೆ ಯಾವ ಆಪತ್ತೂ ಬರದಂತೆ ನಿಮ್ಮ ಆಶ್ರಮದಲ್ಲಿ ಆಶ್ರಯ ನೀಡಿ ಸಂರಕ್ಷಿಸಿರುವಿರಿ. ಸ್ವಾಮಿ, ನಿಮ್ಮ ಉಪಕಾರವನ್ನು ನಾನೆಂದಿಗೂ ಮರೆಯಲಾರೆ. ತಾವು ಅಪ್ಪಣೆ ಕೊಟ್ಟರೆ ಸಾಮಾಜಿಯನ್ನು ರಾಜಧಾನಿಗೆ ಕರೆದೊಯ್ಯುವೆನು” ಎಂದು ವಿಜ್ಞಾಪಿಸಿದನು.
ನಾರದ ಮಹರ್ಷಿಗಳು ಸಂತೋಷದಿಂದ ಕಯಾಧುದೇವಿಯನ್ನು ದೈತ್ಯೇಂದ್ರನೊಡನೆ ಕಳುಹಿಸಿಕೊಟ್ಟರು. ಹಿರಣ್ಯಕಶ್ಯಪು-ಕಯಾಧುದೇವಿಯರು ದೇವರ್ಷಿಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದು ರಾಜಧಾನಿಗೆ ಹಿಂದಿರುಗಿದರು.