
ಕಲಿಯುಗ - ಕಲ್ಪತರು
ಎರಡನೆಯ ಉಲ್ಲಾಸ ಶ್ರೀಹರಿಭಕ್ತಾಗ್ರಣಿ ಶ್ರೀಪ್ರಹ್ಲಾದರಾಜರು
ರಚಿಸಿದವರು ರಾಜಾ, ಎಸ್. ಗುರುರಾಜಾಚಾರ್ಯರು
6. ಭಾಗವತಾಗ್ರಣಿಯ ಅವತಾರ
ಅದೊಂದು ಶುಭದಿನ. ವಿಶ್ವಬಂಧುವೂ, ಸರ್ವಭೂತಹಿತೇರತನೂ ಜಗನ್ಮಂಗಲಕಾರನೂ ಆದ ವಿಭೂತಿಪುರುಷ- ನೊಬ್ಬನು ಅವತರಿಸಿದ ಮಹಾದಿನ! ಸಕಲ ಗ್ರಹಗಳೂ ಶುಭಸ್ಥಾನದಲ್ಲಿದ್ದು ಶುಭದೃಷ್ಟಿಯಿಂದೀಕ್ಷಿಸುತ್ತಿದ್ದ ದಿನ. ಸಕಲಗ್ರಹಗಳಿಗೂ ಬಲಪ್ರದನಾದ ಸರಸಿಜಾಕ್ಷನೇ ಸುಪ್ರೀತನಾಗಿ ಸರ್ವದಾ ಸಲಹಲು ಸಿದ್ಧನಾಗಿದ್ದನೆಂದಮೇಲೆ ಸರ್ವಗ್ರಹಗಳೂ ಮಂಗಲದೃಷ್ಟಿವೀಕ್ಷಣದಿಂದ ಭಾಗವತಾಗ್ರಣಿಯು ಅವತಾರವನ್ನು ನಿರೀಕ್ಷಿಸುತ್ತಿದ್ದುದು ಅಚ್ಚರಿಯ ವಿಷಯವೇನಲ್ಲ,
ದೈತ್ಯಸಾಮ್ರಾಜ್ಞೆಯಾದ ಕಯಾಧುದೇವಿ ಪರಮಮಂಗಳಕರನಾದ ಶ್ರೀವಾಯುದೇವರ ಆವೇಶಯುಕ್ತನೂ ಶ್ರೀಹರಿಪಾದಾಬ್ದವನ್ನು ಆಶ್ರಯಿಸಿದವನೂ ಕರ್ಮಜದೇವನೂ ಆದ ಸುಪುತ್ರನನ್ನು ಪ್ರಸವಿಸಿದಳು. ಜಗದುದ್ಧಾರಕ-ಭಾಗ್ಯರವಿಯ ಅವತಾರವಾಯಿತು! ಭಾರತದೇಶದ ತಾತ್ವಿಕ-ಧಾರ್ಮಿಕ-ಇತಿಹಾಸವನ್ನು ಪುನರ್ನಿಮರ್ಾಣ ಮಾಡಲಿರುವ ಕರ್ಮಜದೇವತೆ ಶಂಕುಕರ್ಣ ಬ್ರಹ್ಮದೇವರ ಶಾಪರೂಪ ವರದಿಂದ ಅವತರಿಸಿದನು! ಮಹಾಭಾಗವತೋತ್ತಮ, ಭಾಗವತಧರ್ಮ ಪ್ರಸಾರಕ ಸತ್ಯ-ಧರ್ಮ, ಜ್ಞಾನ-ಭಕ್ತಿ-ವೈರಾಗ್ಯಗಳ ಸಾಕಾರನಾದ ಮಂಗಳಮೂರ್ತಿಯ ಜನನವಾಯಿತು! ಶ್ರೀಹರಿಭಕ್ತರ ಶ್ರೇಣಿಯಲ್ಲಿ ಅಗ್ರಗಣ್ಯನಾಗಲಿರುವ ಮಹನೀಯನು ಉದಯಿಸಿದನು. ಅಮರದುಂದುಭಿಯು ಮೊಳಗಿತು! ಪರಮಾನಂದತುಂದಿಲರಾದ ದೇವತೆಗಳು ಪುಷ್ಪವೃಷ್ಟಿ ಮಾಡಿದರು! ಗಂಧರ್ವರು ಗಾನ ಮಾಡಿದರು! ಅಪ್ಸರ ಸ್ತ್ರೀಯರು ನರ್ತಿಸಿದರು. ಋಷಿಮುನಿಗಳು, ಸಜ್ಜನರು ಆನಂದಾಂಬುಧಿಯಲ್ಲಿ ಮುಳುಗಿದರು!
ಸುರರು ಪುಷ್ಪವೃಷ್ಟಿಗೈದುದನ್ನೂ, ದೇವದುಂದುಭಿಗಳು ಮೊಳಗಿದ್ದನ್ನೂ ಕಂಡು ಕೇಳಿದ ದೈತ್ಯಸಾಮ್ರಾಟನು, ತನ್ನ ಭಯದಿಂದ, ಭಾವಿ ದೈತ್ಯಸಾಮ್ರಾಟನ ಅವತಾರಕ್ಕೆ ದೇವತೆಗಳು ಆನಂದ ಸೂಚಿಸದರೆಂದೂ ಆನಂದಿಸಿ, ತನ್ನ ಪರಾಕ್ರಮಕ್ಕೆ ಮೂರು ಲೋಕವೂ ನಡುಗುವುದೆಂದೂ ಗರ್ವಿಸಿದನು.
ದೈತ್ಯರಾಜಧಾನಿಯಲ್ಲಂದು ಅತಿಸಂಭ್ರಮ! ಜನತೆಯ ಆನಂದ ವರ್ಣಿಸಲಸದಳ, ದೊಡ್ಡವರು, ಸಣ್ಣವರು, ಸ್ತ್ರೀ-ಪುರುಷರೆಂಬ ಭೇದವಿಲ್ಲದೆ ಎಲ್ಲರೂ ಉತ್ಸವದಲ್ಲಿ ಭಾಗವಹಿಸಿದ್ದಾರೆ, ಸರ್ವರ ಮುಖವೂ ಸಂತಸದಿಂದ ಕಂಗೊಳಿಸುತ್ತಿದೆ. ಎಲ್ಲರೂ ಸಾಮ್ರಾಟನನ್ನು ಅಭಿನಂದಿಸುವವರೇ! ಹಿರಣ್ಯಕಶ್ಯಪನು ಆನಂದಸಾಗರದಲ್ಲಿ ಮುಳುಗೇಳುತ್ತಿದ್ದಾನೆ.
ಮಂಗಳಸ್ನಾನವಾದ ಮೇಲೆ ದೈತ್ಯರು ಶುಕ್ರಾಚಾರ್ಯರ ನೇತೃತ್ವದಲ್ಲಿ ಜಾತಕರ್ಮ-ನಾಮಕರಣಾದಿ ಮಹೋತ್ಸವಗಳು ವಿಜೃಂಭಣೆಯಿಂದ ನೆರವೇರಿದವು, ಅತ್ಯಂತ ಸುಂದರನೂ, ಮನಮೋಹಕನೂ ಆದ ರಾಜಕುಮಾರ ದರ್ಶನಮಾತ್ರದಿಂದ ಸಕಲರ ಕಣ್ಮನಗಳಿಗೆ ಆನಂದವನ್ನೀಯುತ್ತಿದ್ದಾನೆ. ಬಹುಶಃ ಈ ಕಾರಣದಿಂದಲೇ ಏನೋ ದೈತ್ಯಗುರುಗಳು ನಾಮಕರಣ ಕಾಲದಲ್ಲಿ ರಾಜಕುಮಾರನಿಗೆ “ಪ್ರಹ್ಲಾದ” ಎಂಬ ಹೆಸರನ್ನೇ ಆರಿಸಿದ್ದಾರೆ. ವಿಧ್ಯುಕ್ತವಾಗಿ ಹಿರಣ್ಯಕಶ್ಯಪನು ಕುಮಾರನಿಗೆ “ಪ್ರಹ್ಲಾದರಾಜ' ಎಂಬ ಅನ್ವರ್ಥಕ ನಾಮಕರಣ ಮಾಡಿ ಮುದ್ದಿಸಿದನು. ಈ ಸಂತೋಷದ ಸಮಯದಲ್ಲಿ ಸಾಮ್ರಾಜ್ಯದಲ್ಲೆಲ್ಲಾ ಅನ್ನದಾನ, ವಸ್ತ್ರದಾನ, ದಕ್ಷಿಣಾಪ್ರದಾನಾದಿಗಳು ಜರುಗಿದವು. ನಮ್ಮ ಕಥಾನಾಯಕನಾದ ಶ್ರೀಪ್ರಹ್ಲಾದರಾಜನು ಹುಟ್ಟಿದ ಸಂತೋಷಕ್ಕಾಗಿ ಸಾಮ್ರಾಜ್ಯದಲ್ಲೆಲ್ಲಾ ಹದಿನೈದು ದಿನ ಪರಿಯಂತ ಉತ್ಸವವನ್ನು ಆಚರಿಸಲಾಯಿತು.
ದಿನಗಳು ಉರುಳಹತ್ತಿದವು, ಅರಮನೆಯಲ್ಲಿ ಪ್ರಹ್ಲಾದನು ಶುಕ್ಲಪಕ್ಷದ ಚಂದ್ರನಂತೆ ದಿನೇ ದಿನೇ ನವನವಕಾಂತಿ ಕಲೆ-ಸೌಂದರ್ಯಗಳಿಂದ, ಸರ್ವರ ಕಣ್ಮನಗಳನ್ನು ತಣಿಸುತ್ತಾ ಅಭಿವೃದ್ಧಿಸಹತ್ತಿದನು. ಪ್ರಹ್ಲಾದನ ಜನನಾನಂತರ ಕಯಾದುವು ಅನುಹ್ಲಾದ, ಸಹ್ಲಾದ, ಹ್ಲಾದ ಎಂಬ ಮೂವರು ಪುತ್ರರನ್ನು ಪಡೆದಳು. ನಾಲ್ವರು ರಾಜಕುಮಾರರೂ ವರ್ಧಿಸಹತ್ತಿದರು. ಕಾಲಕಳೆದಂತೆಲ್ಲಾ ತಂದೆ-ಮಕ್ಕಳಲ್ಲಿ ವಿಪರೀತಗುಣಗಳು ಅಭಿವ್ಯಕ್ತವಾಗಿ ವಿರುದ್ಧ ಕಾರ್ಯಗಳ ದ್ವಂದ್ವ ಪ್ರಕಟವಾಗಹತ್ತಿತು.
ದೈತ್ಯಚಕ್ರವರ್ತಿ ಹಿರಣ್ಯಕಶ್ಯಪನು ಒಂದಾದ ಮೇಲೊಂದರಂತೆ ರಾಜ್ಯಗಳನ್ನು ಗೆಲ್ಲುತ್ತಾ ದೈತ್ಯಸಾಮ್ರಾಜ್ಯವನ್ನು ಭದ್ರಪಡಿಸುತ್ತಿದ್ದರೆ, ಭಕ್ತಚಕ್ರವರ್ತಿ ಪ್ರಹ್ಲಾದನು ದೇವರ್ಷಿ ನಾರದರ ಉಪದೇಶವನ್ನು ಮನನ ಮಾಡುತ್ತಾ ಒಂದೊಂದ ಸತ್ತತ್ವಗಳ ಸಾರವನ್ನೂ ಸ್ವಾಧೀನಪಡಿಸಿಕೊಳ್ಳುತ್ತಾ ತಾನು ಕಟ್ಟಲಿರುವ ಭಕ್ತಿಸಾಮ್ರಾಜ್ಯದ ಬುನಾದಿಯನ್ನು ಭದ್ರಪಡಿಸಹತ್ತಿದ್ದನು!
ದೈತ್ಯೇಂದ್ರನು ಬಾಹುಬಲದಿಂದ ಎಲ್ಲರನ್ನೂ ಜಯಿಸುತ್ತಾ, ಜಗತ್ತಿನಲ್ಲಿ ತನಗೆ ಎದುರಿಲ್ಲವೆಂಬ ಗರ್ವದಿಂದ ತನ್ನ ರಾಕ್ಷಸೀ ಮಹತ್ವಾಕಾಂಕ್ಷೆಗೆ ಎದುರಾದವರನ್ನೆಲ್ಲಾ ಸದೆಬಡಿಯುತ್ತಾ, ದೀನ-ದಲಿತರು, ಸಾತ್ವಿಕರಾದ ಋಷಿಮುನಿಗಳನ್ನು ವಿವಿಧ ರೀತಿಯಿಂದ ಹಿಂಸಿಸುತ್ತಾ, ತಾಮಸಗುಣಗಳಿಗೆ ಮಾತೃಸ್ಥಾನವೆನಿಸಿ, ಅತ್ಯಂತ ಕಠಿಣಾತ್ಮಕನಾಗಿ ದೇವ-ದ್ವಿಜರನ್ನು ಜರಿಯುತ್ತಾ ಅನ್ಯಾಯ-ಅತ್ಯಾಚಾರ-ಹರಿದ್ವೇಷಾದಿಗಳಿಂದ ವಿಜೃಂಭಿಸುತ್ತಿದ್ದರೆ; ನಮ್ಮ ಭಕ್ತರಾಜನಾದ ಪ್ರಹ್ಲಾದನು ಪ್ರೇಮದಿಂದ ಎಲ್ಲರ ಮನಸ್ಸನ್ನೂ ಜಯಿಸುತ್ತಾ, ಜಗತ್ತಿನಲ್ಲಿ ಭಗವದ್ಭಕ್ತಿ ಸಾತ್ವಿಕತನಗಳಿಗೆ ಎದುರಿಲ್ಲವೆಂದು ತೋರಿಕೊಡುತ್ತಾ, ತನ್ನ ದೇವಸ್ವಭಾವ, ಹರಿದಾಸ್ಯದ ಮಹತ್ವಾಕಾಂಕ್ಷೆಗಳನ್ನು ಪ್ರತಿಯೊಬ್ಬ ಸುಜೀವಿಗಳಲ್ಲೂ ಪ್ರಚೋದಿಸುತ್ತಾ, ದೀನ-ದಲಿತರು, ಸಾತ್ವಿಕರಾದ ಋಷಿಮುನಿಗಳನ್ನು ಪ್ರೀತಿ-ವಿಶ್ವಾಸ-ಶ್ರದ್ಧೆಗಳಿಂದ ಪೂಜಿಸುತ್ತಾ ಸಾತ್ವಿಕಗುಣಗಳಿಂದ, ಅಕಳಂಕಚರ್ಯೆ, ವಿನಯ, ಗಾಂಭೀರ್ಯ, ಔದಾರ್ಯ, ಸರ್ವಭೂತ ಹಿತಾಸಕ್ತಿಗಳಿಂದ ಸದ್ಗುಣಗಳ ಮಾತೃಸ್ಥಾನನೆನಿಸಿ ದಯಾದ್ರ್ರಹೃದಯನಾಗಿ ದೇವ-ದ್ವಿಜರ ಆರಾಧಕನಾಗಿ, ಸತ್ಯ-ಧರ್ಮ-ಹರಿಭಕ್ತಿಗಳಿಂದ ವಿರಾಜಿಸುತ್ತಿದ್ದನು! ಹೀಗೆಯೇ ಗತಿಸಿತು ಬಹುಕಾಲ.
ಹಿರಣ್ಯಕಶ್ಯಪನು ವರ ಪಡೆದು ಬಂದ ಮೇಲೆ ದೇವತೆಗಳನ್ನು ಜಯಿಸಿ ಸ್ವರ್ಗ ಸಿಂಹಾಸನವನ್ನು ಪಡೆಯಲು ನಿಶ್ಚಯಿಸಿದನು. ತನ್ನ ಆಶಯವನ್ನು ಪ್ರಿಯಪತ್ನಿ ಕಯಾಧುರಾಣಿಗೆ ತಿಳಿಸಿ, ವಿಜಯಯಾತ್ರೆಗೆ ಅವಳ ಅನುರಾಗದ ಅನುಮತಿ ಪಡೆಯಲು ಕಯಾಧುವಿನ ಅಂತಃಪುರಕ್ಕೆ ತೆರಳಿದನು.
ಪತಿಯ ಆಶಯವನ್ನರಿತ ಕಯಾಧುವು ರಾಜಕುಮಾರ ಪ್ರಹ್ಲಾದರಾಜನ ಐದನೇ ವರ್ಷದ ವರ್ಧಂತ್ಯುತ್ಸವವು ಸಮೀಪಿಸಿರುವುದರಿಂದ ಆ ಮಹೋತ್ಸವಾನಂತರ ಜೈತ್ರಯಾತ್ರೆಯನ್ನು ಕೈಗೊಳ್ಳಬಹುದೆಂದು ತನ್ನ ಅಭಿಪ್ರಾಯವನ್ನು ನಿವೇದಿಸಿದಳು. ಆದರೂ ಹಿರಣ್ಯಕಶ್ಯಪನು ತನ್ನ ತೀರ್ಮಾನವನ್ನು ಬದಲಿಸಲು ಒಪ್ಪಲಿಲ್ಲ.
ದೈತ್ಯರಾಜನು ಪತ್ನಿಗೆ ಸಮಾಧಾನ ಹೇಳಿ ಪ್ರಹ್ಲಾದಕುಮಾರನ ಜನನವಾದ ಮೇಲೆ ನಾರದ ಮಹರ್ಷಿಗಳ ದರ್ಶನಮಾಡಿ ರಾಜಕುಮಾರನಿಗೆ ಅವರ ಆಶೀರ್ವಾದ ಪಡೆಯಲು ಬಯಸಿದ್ದ ವಿಚಾರವನ್ನು ಕಯಾಧುವಿಗೆ ನೆನಪಿಸಿ “ರಾಣಿ! ನಾನು ಸ್ವರ್ಗವನ್ನು ಜಯಿಸುವುದರ ಮೂಲಕ ಸ್ವರ್ಗಸಿಂಹಾಸನದಲ್ಲಿ ಕುಳಿತು ಪ್ರಿಯ ಕುಮಾರ ಪ್ರಹ್ಲಾದನ ವರ್ಧಂತೀಮಹೋತ್ಸವವನ್ನು ಆಚರಿಸುವೆನು! ನೀನು ಕುಮಾರನೊಡನೆ ನಾರದ ಮಹರ್ಷಿಗಳ ಆಶ್ರಮಕ್ಕೆ ತೆರಳಿ ಅಲ್ಲಿ ಮುನೀಂದ್ರರ ನೇತೃತ್ವದಲ್ಲಿ ಪ್ರಹ್ಲಾದ ಕುಮಾರನ ಹುಟ್ಟಿದ ಹಬ್ಬವನ್ನು ಆಚರಿಸು. ಅವರ ಆಶ್ರಮದಲ್ಲಿಯೇ ಕುಮಾರನ ವರ್ಧಂತಿಯನ್ನಾಚರಿಸುವುದು ಅತ್ಯಂತ ಸೂಕ್ತವಾಗಿದೆ” ಎಂದು ಹೇಳಿ ಕಯಾಧುದೇವಿಯಿಂದ ಬೀಳ್ಕೊಂಡು ದೈತ್ಯಸೇನೆಯೊಡನೆ ಸ್ವರ್ಗವಿಜಯಕ್ಕಾಗಿ ಧಾವಿಸಿದನು.
ಕಯಾದುವು ಮರುದಿನವೇ ಮಿತಪರಿವಾರದೊಡನೆ ಪ್ರಹ್ಲಾದಕುಮಾರನನ್ನು ಕರೆದುಕೊಂಡು ನಾರದರ ಆಶ್ರಮಕ್ಕೆ ಆಗಮಿಸಿದಳು. ದೇವರ್ಷಿಗಳಿಗೆ ಇದರಿಂದ ಅಪಾರ ಸಂತೋಷವಾಯಿತು. ನಾರದರು ಮಹಾರಾಣಿ ಮತ್ತು ರಾಜಕುಮಾರರಿಗೆ ಯೋಗ್ಯ ಬಿಡಾರಗಳನ್ನೇರ್ಪಡಿಸಿ ಆದರೋಪಚಾರ ಮಾಡಿದರು.