|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

ಗೋಪಾಲದಾಸರು

ಹರಿದಾಸಪಂಥದಲ್ಲಿ ಶ್ರೀವಿಜಯದಾಸರ ತರುವಾಯ ಅಪರೋಕ್ಷಜ್ಞಾನಿಗಳಾದ ಶ್ರೀಗೋಪಾಲದಾಸರು ಅತ್ಯಂತ ಪ್ರಖ್ಯಾತರು. ಶ್ರೀಮದಾಚಾರ್ಯರ ಮಹಾ ಸಂಸ್ಥಾನದ ಪ್ರಮುಖ ಶಿಷ್ಯರಲ್ಲೊಬ್ಬರಾದ ಇವರು ಶ್ರೀರಾಯರ ಪರಮಾನುಗ್ರಹಪಾತ್ರರು, ದಾಸರು ಉತ್ತನೂರಿನಲ್ಲಿ ವಾಸಮಾಡುತ್ತಿದ್ದರು. 

ವಿಜಯದಾಸರಿಂದಾಗಿ ಹರಿದಾಸಪಂಥವು ಉಚ್ಚೇಯಸ್ಸಿಗೆ ಬಂದು ದಾಸ ವಾಹ್ಮಯವು ವಿಸ್ತಾರವಾಗಿ ಬೆಳೆಯುತ್ತಿದ್ದ ಕಾಲವದು. ವಿಜಯದಾಸರಿಗೆ ರಾಯರು ದರ್ಶನವಿತ್ತು ದಾಸಪಂಥವನ್ನು ಒಂದು ಅಚ್ಚುಕಟ್ಟಿನಲ್ಲಿ ಮುಂದುವರೆಸಿಕೊಂಡು ಹೋಗಬೇಕೆಂದು ಅಜ್ಞಾಪಿಸಿದ್ದು ಎಲ್ಲೆಡೆ ವಿಖ್ಯಾತವಾಗಿತ್ತು. ಅಂತೆಯೇ ದಾಸರ ಶಿಷ್ಯತ್ವವಹಿಸಿ ಜೀವನಸಾಫಲ್ಯವನ್ನು ಪಡೆಯಬೇಕೆಂಬುದೇ ರಾಯರ ಆಜ್ಞೆಯೆಂಬುವನ್ನು ಮನಗಂಡ ಶ್ರೀಗೋಪಾಲದಾಸರು ವಿಜಯರಾಜರ ಶಿಷ್ಯತ್ವವಹಿಸಿ ಅವರಿಂದ “ಗೋಪಾಲವಿಠಲ” ಎಂಬ ಅಂಕಿತವನ್ನು ಪಡೆದು ಶ್ರೀಗೋಪಾಲದಾಸರಾದರು. ಗೋಪಾಲದಾಸರು ಅನೇಕ ಪದ್ಯ-ಪದ್ಯ ಸುಳಾದಿಗಳನ್ನು ರಚಿಸಿ ಹರಿದಾಸವಾಹ್ಮಯಕ್ಕೆ ಕಳೆತಂದರು. ದಾಸರ ಒಂದೊಂದು ಕೃತಿಗಳೂ ಅನರ್ಘರತ್ನಗಳಾಗಿವೆ. 

ವಂಶಬಂಧುಗಳೂ ಉತ್ತಮಪಂಡಿತರೂ ಆದ ಶ್ರೀನಿವಾಸಾಚಾರ್ಯರು ವಿಜಯದಾಸರ ಅನುಗ್ರಹಕ್ಕೆ ಪಾತ್ರರಾಗಿ ಹರಿದಾಸವಾಹ್ಮಯಕ್ಕೆ ಅಗಾಧಕಾಣಿಕೆಗಳನ್ನಿತ್ತು ಹರಿಕಥಾಮೃತಸಾರ'ದಂಥ ಸರ್ವೋಚ್ಚ ಪ್ರಮೆಯರಂಜಿತ ಅಧ್ಯಾತ್ಮ ಗ್ರಂಥವನ್ನು ರಚಿಸಿ ಶ್ರೀರಾಯರ ಸೇವೆಮಾಡುವಂತೆ ಮಾಡುವಲ್ಲಿ ಗೋಪಾಲದಾಸರು ವಹಿಸಿದ ಪಾತ್ರ ಬಲುಹಿರಿದಾದುದು. ಅಷ್ಟು ಮಾತ್ರವಲ್ಲ: ಮರಣೋನ್ಮುಖರಾಗಿದ್ದ ಶ್ರೀನಿವಾಸಾಚಾರ್ಯರಿಗೆ ವಿಜಯದಾಸರ ಅಣತಿಯಂತೆ ತಮ್ಮ ಆಯುಷ್ಯದಲ್ಲಿ ೪೦ ವರ್ಷ ಆಯುಷ್ಯವನ್ನು ದಾನಮಾಡಿದ ಉದಾರಚರಿತರು, ತ್ಯಾಗಿಗಳು ಗೋಪಾಲದಾಸರು! ಅವರು ಹಾಗೆ ಮಾಡದಿದ್ದಲ್ಲಿ ಶ್ರೀನಿವಾಸಾಚಾರ್ಯರು ಜೀವಿಸುವುದೂ, ಮುಂದೆ ಅವರು ಶ್ರೀಜಗನ್ನಾಥದಾಸರಾಗಿ ಹರಿದಾಸಪಂಥವನ್ನು ಸರ್ವವಿಧದಿಂದ ಉನ್ನತಿಗೆ ತಂದು ಅನಿತರಸಾಧಾರಣಗಳಾದ ಅಗಾಧ ಸಾಹಿತ್ಯ ರಚನೆಮಾಡಿ ಉಪಕರಿಸಲೂ ಸಾಧ್ಯವಾಗುತ್ತಿರಲಿಲ್ಲ. ಈ ದೃಷ್ಟಿಯಿಂದ ವಿಚಾರಮಾಡಿದಾಗ ಇದಕ್ಕಾಗಿ ಸರ್ವಸಜ್ಜನರೂ ಗೋಪಾಲದಾಸರಿಗೆ ಕೃತಜ್ಞರಾಗಿರಬೇಕು. 

ಶ್ರೀಗುರುರಾಜರಿಗೆ ತಮ್ಮ ಪ್ರಿಯಶಿಷ್ಯರಾದ ಗೋಪಾಲದಾಸರಲ್ಲಿ ಅಪಾರ ಪ್ರೇಮ, ವಾತ್ಸಲ್ಯಗಳಿದ್ದವು. ಅಂತೆಯೇ ಗುರುರಾಜರು ವಿಜಯದಾಸರಲ್ಲಿ ಅನುಗ್ರಹಿಸಿದಂತೆಯೇ ಗೋಪಾಲದಾಸರಿಗೂ ಪ್ರತಕ್ಷದರ್ಶನವಿತ್ತು. ಬೃಂದಾವನದಲ್ಲಿ ಅವರಿಗೆ ತಮ್ಮ ಅಗಾಧಮಹಿಮೆಗಳನ್ನು ತೋರಿಸಿಕೊಟ್ಟು ಅನುಗ್ರಹಿಸಿದರು. ದಾಸರು ಅದನ್ನು ಒಂದು ಸುಳಾದಿಯಲ್ಲಿ ಮೈಮರೆತು ಹೀಗೆ ಹಾಡಿದ್ದಾರೆ. 

ರಾಗ-ಭೈರವಿ 

(ಸುಳಾದಿ) 

ತಾಳ-ಧ್ರುವ 

ಧರಿಯವಳಗೆ ನಮ್ಮಗುರುರಾಘವೇಂದ್ರರಿನ್ನು | ಇರುತಿಪ್ಪವಿವರವ ವರಣಿಸುವೆ | ಸ್ಥಿರವಾಗಿ ಮಂತ್ರಾಲಯಪುರ ತುಂಗತೀರದಿ | ಹರಿಭಕ್ತಪ್ರಹ್ಲಾದ ವರಯಾಗವ ಇಲ್ಲಿ ಮಾಡಿ ಸುರರಿಗಮೃತವುಣಿಸಿ ಪರಿಪರಿಕ್ರಿಯಮಾಡಿ ಪರಿಸಿದ್ದನಾದನೆಂದು ಅರಿದು ಈ ಸ್ಥಳದಲ್ಲಿ | ಗುರುರಾಘವೇಂದ್ರರಾಯ ಶರೀರಪೋಗಾಡಿಸಿಲ್ಲಿ74 ಪರಲೋಕಕ್ಕೆ ಸಾಧನ ಪರಿಪೂರ್ತಿಯ ಮಾಡಿಕೊಂಡು | 

ಸಿರಿಕೃಷ್ಣನ್ನ ಚರಣಕ್ಕೆರಗಿ ಸಂತೋಷದಲ್ಲಿ | ಧರಿಯಮ್ಯಾಲಿದ್ದ ಜನರ ಪೊರೆಯ ಬೇಕೆಂದೆನುತ ! ಹರಿನೋಡಿದನು ಪರಮದಯಾಳು ತಾನು ಗುರುವಂತರ್ಯಾಮಿಯಾಗಿ ವರವೀಯುತಲಿ ಜನಕೆ | ನರಹರಿ ತಾನಿಂದು ನಿತ್ಯಪೂಜೆಯನುಗೊಂಡು | ಸಿರಿವುಳ್ಳ ಕೀರುತಿಯ ಸುರರಪಾಲಕ ಚಕ್ರ | ಧರನಾರಾಯಣ ತಾನಿವರಸನ್ನಿಧಾನನಾಗೀ ವರೆಗೆ ಫಲತಂದೀವ ಇಹಪರದಲ್ಲಿನ್ನು | ಕರುಣಾಕರರಂಗ ಗೋಪಾಲವಿಠಲ ತನ್ನ | ಶರಣರ ಪೊರೆವಂಥ ಚರಿಯ ಪರಿಪರಿ ಉಂಟೋ ||

ಮಟ್ಟತಾಳ 

ನರಹರಿ ಕೃಷ್ಣರಾಮ ಸಿರಿ ವೇದವ್ಯಾಸ | ಎರಡೆರಡು ನಾಲ್ಕು ಹರಿಮೂರ್ತಿಗಳು 1 ಪರಿವಾರ ಸಹಿತವಾಗಿ ಸಿರಿಸಹಿತದಿ ನಿಂದು | ಸುರಗುರುವರರು ಮಧ್ವಾಚಾರರೇ ಮೊದಲಾಗಿ | ತರುವಾಯದಲಿನ್ನು ತರತಮ್ಯನುಸಾರ | ಪರಿಪರಿ ಯತಿಗಳು ಯಿರುತಿಪ್ಪರುಯಿಲ್ಲಿ | ಹರುಷದಿಂದಲಿ ವೇದಗರೆದು ಶಾಸ್ತ್ರಗಳನ್ನು ಪರಿಪರಿ ಪುರಾಣಭಾರತಗಾನದಲ್ಲಿ 1 ಹರಿಯ ಪೂಜಿಸುತ್ತ ಹಗಲಿರಳು ಬಿಡದೆ | ಪರತತ್ವದ ವಿವರ ಪರಿಪರಿ ಹೇಳುವರು | ಗರುಡವಾಹನರಂಗ ಗೋಪಾಲವಿಠಲ (ಶರಣರ ಪಾಲಿಸುತ ಇರುತಿಪ್ಪನು ಇಲ್ಲಿ || 

ತ್ರಿವಿಧತಾಳ 

ನರಹರಿರೂಪನಾಗಿ ವಾಸವಾಗಿಯಲ್ಲಿ ದುರಿತದುಷ ತಬ್ರತಿಗಳೊಡಿಸುವ | ಸಿರಿರಾಮನಾಗಿ ಪರಿಪರಿಯಲಿ ದೇಶಾಂ | ತರ ಅನ್ನಕಳಕೊಂಡು ನರರಿಲ್ಲಿ ಬಂದರೆ ಸ್ಥಿರಪಟ್ಟಕಟ್ಟುವ ಸಿರಿಕೃಷ್ಣನಾಗಿಯಲ್ಲಿ ಪರಿಪರಿಯಲ್ಲಿ ಬಂದ ಪರಮಾತುರರಿಗೆ ವರವೀವ ಪುತ್ರೋತ್ಸವ ಮುಂಜಿ ಮದುವಿ ಹರಕಿಗಳ ಕೈಗೊಂಡು ಹರುಷಪಡಿಸುವವರ | ಸಿರಿವೇದವ್ಯಾಸನಿಲ್ಲಿ ಭರದಿಂದಲಿ ಬಂದ ದೂರವಾದಿಗಳನ್ನೆಲ್ಲ ಭರದಿಂದ ಲೋಡಿಸಿ ಮುರಿದು ಅವರಶಾಸ್ತ್ರ ಹರಿಸರ್ವೋತ್ತಮನೆಂದು ಇರುವಲ್ಲಿ ತೋರಿ ಶರಣಜನಕೆಯನ್ನು | ವರಜ್ಞಾನಸುಧಿಯನು ಕರೆದುಕೊಡುತಲಿಪ್ಪ | ಸಿರಿವಂದಿತಪಾದ ಗೋಪಾಲವಿಠಲ | ಪರಿಪರಿಯಲ್ಲಿ ಓಲಗಕೈಗೊಂಬ 

ಅಟ್ಟತಾಳ || 

ರಾಘವೇಂದ್ರನೆಂಬ ರೂಪ ತಾನೇ ಆಗಿ ರಾಘವೇಂದ್ರನೆಂಬೋ ನಾಮಯಿಡಿಸಿಕೊಂಡು ರಾಘವೇಂದ್ರರಿನ್ನು ಮಾಡಿದಂಥ ಪುಣ್ಯ | ಭೋಗವರಿತು | ತನ್ನ ಭಾಗವತರ ಕೀರ್ತಿ | ಸಾಗಿಸಿ ಸಲಹ ತ್ರಿಜಗದೊಳಗಿನ್ನು 1 ಮೇಘಸುರಿದಂತ ಮೋಘ ಕೀರುತಿಯನು ರಾಘವವರಿಗೆ ರಾಜ್ಯದಿ ತಂದೀವ | ರಾಘವೇಂದ್ರಮೂರ್ತಿ ಗೋಪಾಲವಿಠಲ | ಭಾಗವತರಲ್ಲಿ ಬಹುಪೂಜೆಯನುಗೊಂಬ || 

ಆದಿತಾಳ 

ದಿನದಿನಕಿಲ್ಲಿ ನೂತನ ಪೂಜೆಗಳಾಗುವವು ದಿನದಿನಲ್ಲಿ ನೂತನ ವಾರ್ತೆಗಳಾಗುವವು ದಿನದಿನಕಿಲ್ಲಿ ನೂತನೋತ್ಸವಗಳಾಗುವವು | ಜನರ ಸಂದಣಿ ಪ್ರತಿದಿನ ವಿಪ್ರ ಭೋಜನ | ಜನರಕೈಯಿಂದ ಪ್ರತಿಜನರೀಸುತಿಂಬೋರು | ಜನುಮಸಫಲ ತಮ್ಮ ಜನನವ ನೀಗೋರು | ದಿನಸಪ್ತಶತತೇಜ ಜನನಾಥ ತಾನಿಲ್ಲಿ | ಅನುವಾಗಿ ತಾನಿಂದು | ಘನಮಹಿಮೆಯಿಂದಲಿ | ಜನರ ಪಾಲಿಸುವುದಕ್ಕನುಮಾನ ಸಲ್ಲದೋ | ಗುಣಗಣಪರಿಪೂರ್ಣ ಗೋಪಾಲವಿಠಲ |ಅಣೋರಣ ಎಂಬುವಗೆ ಎಣಿಯಾರೋ 

ಜಗದೊಳಗೆ ||

ಜತೆ 

ಮಂತ್ರಸಿದ್ಧಿಕ್ಷೇತ್ರಯಿದು ನೋಡಿ ಕೋವಿದ | ಮಂತ್ರಪ್ರತಿಪಾದ್ಯ ಗೋಪಾಲವಿಠಲನಿಂದ || 

ಇದರಿಂದ ರಾಯರ ಅಗಾಧಮಹಿಮೆಯು ವ್ಯಕ್ತವಾಗುವುದು. ಶ್ರೀರಾಯರಿಂದ ಏಳುನೂರು ವರ್ಷಗಳ ಕಾಲ ದೀನದಲಿತರು- ಆಪಂಡಿತಪಾಮರರ ಉದ್ದಾರ, ಲೋಕಕಲ್ಯಾಣವನ್ನು ಮಾಡಿಸಿ ಕೀರ್ತಿ ನೀಡಲು ಪಂಚರೂಪದಿಂದ ಅಲ್ಲಿ ನೆಲೆನಿಂತು ಅನುಗ್ರಹಿಸುತ್ತಿರುವ ಶ್ರೀಹರಿಯ ಪರಮಾದ್ಭುತ ಭಕ್ತವಾತ್ಸಲ್ಯವನ್ನೂ, ಮುಂದೆ ಬೃಂದಾವನಸನ್ನಿಧಿಯಲ್ಲಿ ಏಳುನೂರು ವರ್ಷಗಳ ಕಾಲ ಜರುಗಲಿರುವ ಅಸದೃಶಕಾರ್ಯಗಳನ್ನೂ ಕಂಡು ವಿಸ್ಮಯಾನಂದದಿಂದ ದಾಸರಾಯರು ರಾಯರ ಮಹಿಮೆಯನ್ನು ಮೇಲಿನ ಸುಳಾದಿಯಲ್ಲಿ ಬಹರಮ್ಯವಾಗಿ ನಿರೂಪಿಸಿದ್ದಾರೆ. ಶ್ರೀರಾಯರು ಬೃಂದಾವನ ಪ್ರವೇಶಮಾಡಿ ೩೧೩ ವರ್ಷಗಳು ಸಂದಿದ್ದರೂ, ಅಂದಿನಿಂದ ಮಂತ್ರಾಲಯದಲ್ಲಿ ಕಂಡುಬರುತ್ತಿರುವ, ಭಕ್ತರಿಗೆ ಅನುಭವಕ್ಕೆ ವೇದ್ಯವಾಗುತ್ತಿರುವ ಅತಿಶಯಗಳನ್ನು ೨೦೦ ವರ್ಷಗಳ ಹಿಂದೆಯೇ ಕಣ್ಣಾರೆಕಂಡು ತಿಳಿಸಿರುವ ದಾಸರಜ್ಞಾನ, ರಾಯರು ಅವರಲ್ಲಿ ಮಾಡಿರುವ ಅನುಗ್ರಹಗಳನ್ನು ಯಾರಿಂದಲೂ ವರ್ಣಿಸಲಾಗದು. 

ಗೋಪಾಲದಾಸರು “ಗುರುರಾಘವೇಂದ್ರ ಚರಣಕಮಲವನು” ಎಂಬ ಪದದಲ್ಲಿ “ಒಂದಾರುನೂರುವತ್ತರ | ವೃಂದಾವನದಲ್ಲಿನಿಂದು ಮೆರೆವ ಕೃಪಾಸಿಂಧು ದೇವಾಂಶರ'- ರಾಯರು ಏಳುನೂರುವರ್ಷ ಸಶರೀರರಾಗಿ ಬೃಂದಾವನದಲ್ಲಿದ್ದು ಪೊರೆಯುವರು, ಅವರು ದೇವಾಂಶರು ಎಂದು ಸ್ತುತಿಸಿದ್ದಾರೆ, “ವಂದಿಸಿ ನೋಡುವ ಬಾರೆ” ಎಂಬ ಮತ್ತೊಂದು ಕೃತಿಯಲ್ಲಿ “ಶೇಷ ಅಂಶ ಪ್ರಹ್ಲಾದ | ವ್ಯಾಸಮುನಿಯೇ ರಾಘವೇಂದ್ರ, ಈಸುಬಗೆ ಪುಣ್ಯ ಇವರಿಗೆ | ಕೇಶವನೇ ತಾಮಾಡಿಸಿ ಈ | ಸುಖಾ ಇಹಪರದಲಿ ।ಶಾಶ್ವತವಾಗಿತ್ತು ಸಲಹುವ” ಶ್ರೀರಾಯರು ಶೇಷಾಂಶ-ಪ್ರಹ್ಲಾದ ವ್ಯಾಸರಾಜಾವತಾರಿಗಳೆಂದು ಸ್ಪಷ್ಟಪಡಿಸಿದ್ದಾರೆ, “ರಥವನೇರಿದ ರಾಘವೇಂದ್ರ” ಎಂಬ ಪದದಲ್ಲಿಯೂ “ಪ್ರಥಮ ಪ್ರಹ್ಲಾದ ವ್ಯಾಸಮುನಿಯ | ಯತಿರಾಘವೇಂದ್ರಾ ” ಎಂದು ರಾಯರ ಪೂರ್ವಾವತಾರಗಳನ್ನು ಮುಕ್ತ ಕಂಠದಿಂದ ಸ್ತುತಿಸಿದ್ದಾರೆ. ಹೀಗೆ ಶ್ರೀರಾಯರ ಮಹಿಮಾತಿಶಯಗಳನ್ನು ಎತ್ತಿತೋರಿ, ಸಜ್ಜನರಿಗೆ ರಾಯರಲ್ಲಿ ಭಕ್ತಿಯು ಉದ್ಧವಾಗುವಂತೆ ಮಾಡಿರುವ ಗೋಪಾಲದಾಸರಿಗೆ ಭಕ್ತಸಂದೋಹ ಎಂದೆಂದಿಗೂ ಚಿರಋಣಿಯಾಗಿದೆ.