Sri Baahika Rajaru Background of the Incarnation

|| ಶ್ರೀಗುರುರಾಜೋ ವಿಜಯತೇ ||

ಮೂರನೆಯ ಉಲ್ಲಾಸ

ಶ್ರೀಬಾಹ್ಲೀಕರಾಜರರು

೧. ಅವತಾರದ ಹಿನ್ನೆಲೆ

ಅದೊಂದು ಅಪೂರ್ವವಾದ ಪರಮಪವಿತ್ರವಾದ ಆಶ್ರಮ. ಗಗನಚುಂಬಿಗಳಾದ ವ್ಯಕ್ತಗಳು ಆಕಾಶದೀಪನ ರಥದ ತಾಕೆಯೊಡನೆ ಸ್ಪರ್ಧಿಸುತ್ತಿರುವಂತೆ ಕಂಗೊಳಿಸುತ್ತಿವೆ. ವಿವಿಧ ಫಲಭರಿತ ವೃಕ್ಷಗಳಿಂದಲೂ ಅನೇಕ ತೆರನಾದ ದೇವಯೋಗ್ಯ ಪುಸ್ತಗಳಿಂದ ಅಲಂಕೃತವಾದ ತರು-ಲತಾ-ಗುಲ್ಮಾದಿಗಳಿಂದಲೂ ಅತ್ಯಂತ ಸುಂದರವಾಗಿ ಶೋಭಿಸುತ್ತಿದೆ. ನೋಡುವವರ ಕಣ್ಮನಗಳಿಗೆ ತಂಪನ್ನೆರೆಯುವ ಆ ಆಶ್ರಮದ ಸೊಬಗು ಅತಿ ರಮಣೀಯ, ಸುಮನೋಹರ, ಅತಿ ಸುಂದರ! ಬಹುಶಃ ಪೀತಾಂಬರಧಾರಿಯಾದ ಪರಮಾತ್ಮನೊಡನೆ ಸ್ಪರ್ಧಿಸಲು ಹಸಿರು ಬಣ್ಣದ ಸೀರೆಯನ್ನುಟ್ಟು ಸಾಕ್ಷಾನ್ಮಾಧವನ ಮನೋಹಾರಿಣಿಯಾದ ಇಂದಿರಾದೇವಿಯೇ ವನಸಿರಿಯ ರೂಪವನ್ನು ಮೃತಳೆದು ವಿಹರಿಸುತ್ತಿರುವಳೋ ಎಂಬಂತೆ ಕಂಗೊಳಿಸುತ್ತಿದೆ ಆ ದಿವ್ಯ ಪರಿಸರ!

ಅಲ್ಲಿನ ರಮ್ಯ ಉಪವನಗಳಲ್ಲಿ ಪುಷ್ಪಾಪಚಯನ ಮಾಡುತ್ತಿರುವ ಋಷಿಕನ್ನಿಕೆಯರ ನಿಸರ್ಗರಮಣೀಯ ರೂಪಲಾವಣ್ಯಗಳು ಅಮರಲಲನೆಯರ ಸೌಂದರ್ಯದೊಡನೆ ಸ್ಪರ್ಧಿಸುತ್ತಿರುವಂತಿದೆ. ಗಜಕೇಸರಿಗಳು, ವ್ಯಾಘ್ರ-ಗೋವು-ಜಿಂಕೆಗಳು, ಸರ್ಪ-ಮಯೂರಗಳು, ಸ್ವಭಾವಸಿದ್ಧವಾದ ತಮ್ಮ ವೈರಭಾವವನ್ನು ತ್ಯಜಿಸಿ, ಪರಸ್ಪರ ಪ್ರೇಮದಿಂದ ಲಲ್ಲೆಗೈಯುತ್ತಿರುವುದನ್ನು ನೋಡಿದರೆ, ನಿಜವಾಗಿ ಅದೊಂದು ಯಾವನೋ ಒಬ್ಬ ಮಹಾನುಭಾವನ ಪುಣ್ಯಾಶ್ರಮವಾಗಿರಬೇಕಲ್ಲವೇ? ಎಂದು ಊಹಿಸಬಹುದಾಗಿದೆ.

ಅಲ್ಲಿ ಹರಿಯುವ ಮಂಗಳ ತರಂಗಿಣಿಯ ಗಮನವೆಷ್ಟು ಮನಮೋಹಕ, ಸುತ್ತಮುತ್ತಲಿನ ಉನ್ನತ ಗಿರಿಶಿಖರಗಳಿಂದ ಹೊರಹೊಮ್ಮಿ, ಧುಮ್ಮಿಕ್ಕಿ ಭರದಿಂದ ಹರಿದು ಮುಂದೆ ಕರಿವರಗಮನೆಯಾಗಿ ಕಲರವ ಮಾಡುತ್ತಾ ಪ್ರವಹಿಸುತ್ತಿರುವ ಪವಿತ್ರ ನದಿಯ ಪರಿಯನ್ನು ಪರಿಕಿಸಿದರೆ, ಶ್ರೀಹರಿಚರಣಾರವಿಂದದಿಂದ ಉದ್ಭವಿಸಿದ ಪಾವನ ಸುರತರಂಗಿಣಿಯು ತನ್ನ ತಾಯ್ತನೆಯಾದ ರಮಾರಮಣನ ಚರಣಕಮಲವನ್ನು ಯಾವನೋ ಭಗವದ್ಭಕ್ತನು ತನ್ನ ಭಕ್ತಿಪಾಶದಿಂದ ಬಂಧಿಸಿ ತನ್ನ ಹೃದಯ ಗುಹೆಯಲ್ಲಿ ಬಚ್ಚಿಟ್ಟುಕೊಂಡಿರುವುದರಿಂದ, ಕಾತರಭಾವದಿಂದ ತನ್ನ ಉತ್ಪತ್ತಿಸ್ಥಾನವನ್ನರಸುತ್ತಾ ಅಂಬರದಿಂದ ಶ್ವೇತಾಂಬರಧಾರಿಣಿಯಾಗಿ ಧರೆಯತ್ತ ಧಾವಿಸಿ, ತವರುಮನೆಯನ್ನು ಸೇರುವ ಆತುರ-ಕಾತುರಗಳಿಂದ ಭರದಿಂದ ಮುನ್ನುಗ್ಗಿ ವನಾಶ್ರಮ ಪ್ರದೇಶವನ್ನು ಪ್ರವೇಶಿಸಿ, ಹರಿಭಕ್ತರ ಮಹಿಮೆಯಿಂದ ಪ್ರಶಾಂತವಾಗಿ ಬೆಡಗುಗೊಂಡಿರುವ ಆ ಪುಣ್ಯಾಶ್ರಮಧಾಮವೇ ತನ್ನ ತಾಯ್ಕನೆಯೆಂದರಿತು ಅಲ್ಲಿನ ನಿಸರ್ಗ ಸೊಬಗಿನಿಂದ ಮೈಮರೆತು, ತವರು ಸಮೀಪಿಸಿದಂತೆಲ್ಲಾಆನಂದಪರವಶಳಾಗಿ ಉಲ್ಲಾಸದಿಂದ ಮೆಲ್ಲಮೆಲ್ಲನೆ ಹಾಡುತ್ತಾ, ನಾಟ್ಯಭಂಗಿಯಲ್ಲಿ ಬರುವ ತರುಣಿಯಂತೆ, ಹರಿಗುಣಗಾನ ಮಾಡುತ್ತಾ ತನ್ನ ಕಲಕಲರವದ ಮಂಜುಳದಿ೦ಚರದಿಂದ ಆ ಆಶ್ರಮ ಪ್ರದೇಶವನ್ನೆಲ್ಲಾ ರಂಜನೆಗೈಯುತ್ತಿರುವಂತೆ ತೋರುತ್ತದೆ!

ಇಂತಹ ಪಾವನ ಪ್ರದೇಶದಲ್ಲೊಂದು ಉದ್ಯಾನವನ. ಅಲ್ಲೊಂದು ಭವ್ಯವಾದ ಕೋಮಲ ತಳಿರುಗಳಿಂದ ನಿರ್ಮಿತವಾದ ಆಶ್ರಮ, ಆಶ್ರಮದ ವಿಸ್ತಾರವಾದ ಅಂಗಳದಲ್ಲೊಂದು ದಿವ್ಯವೇದಿಕೆ, ಅದರ ಮೇಲೆ ವಿರಾಜಿಸುತ್ತಿರುವ ಕೃಷ್ಣಾಜಿನದ ಮೇಲೆ ಅತ್ಯಂತ ತೇಜಸ್ವಿಯಾದ ಮಹನೀಯನೊಬ್ಬ ಕುಳಿತಿದ್ದಾನೆ. ದೇದೀಪ್ಯಮಾನವಾದ ಮುಖಕಾಂತಿಯಿಂದ ರಾಜಿಸುತ್ತಿರುವ ಆತ ಸುಂದರ ದೇಹ ಸುವರ್ಣಚ್ಛವಿಯನ್ನು ನಾಚಿಸುತ್ತಿದೆ. ಮನೋಹರವಾದ, ಹುರಿಗಟ್ಟಿದ ದೇಹಸೌಷ್ಟವ, ಪೀತಾಂಬರಧಾರಿಯಾಗಿರು ಆತನ ಶಿರಸ್ಸಿನಿಂದ ಉಂಗುರ ಉಂಗುರವಾದ ನೀಲಕೇಶರಾಶಿ ಬೆನ್ನು-ಭುಜಗಳ ಮೇಲೆ ಅಲೆದಾಡುತ್ತಿದೆ. ಮುಖದಲ್ಲಿ ಸಾತ್ವಿಕ ತೇಜಸ್ಸು ಮಿನುಗುತ್ತಿದೆ. ಮಂದಹಾಸ ವದನಾರವಿಂದದಿಂದ ನೋಡಿದವರ ಮನಕಾನಂದವೀಯುತ್ತಿರುವ ಆತನು ಸದೈಷ್ಣವನೆಂದು ಸಾರುವ ಊರ್ಧ್ವದ್ವಾದಶನಾಮಗಳಿಂದಲಂಕೃತನಾಗಿ, ಕರದಲ್ಲಿ ಜಪಮಾಲೆಯನ್ನು ಹಿಡಿದು ನಿಮೀಲಿತಾರ್ಧನಯನವಾಗಿ ಭಗವಾನಪರವಶನಾಗಿದ್ದಾನೆ. ಆ ಮಹಾನುಭಾವನೇ ಭಾಗವತೋತ್ತಮನಾದ ನಮ್ಮ ಶ್ರೀಪ್ರಹ್ಲಾದರಾಜ!! ಅವನಿರುವ ತಾಣವೇ ಹರಿವರ್ಷಖಂಡ! ಅಲ್ಲಿ ಲೋಕಕಲ್ಯಾಣಾರ್ಥವಾಗಿ, ಅಖಂಡವಾಗಿ ಶ್ರೀನೃಕಂಠೀರವನ ಆರಾಧನೆಯಲ್ಲಿ ಮಗ್ನನಾಗಿದ್ದಾನೆ ಆ ಭಕ್ತರಾಜ!

ಅದೇ ಸಮಯದಲ್ಲಿ ದೇವರ್ಷಿ ನಾರದರು ತಮ್ಮ ಮಹತೀ ವೀಣೆಯನ್ನು ನುಡಿಸುತ್ತಾ ಶ್ರೀಹರಿಯ ಮಹಿಮೆಯನ್ನು ಗಾನಮಾಡುತ್ತಾ ಆಶ್ರಮವನ್ನು ಪ್ರವೇಶಿಸಿದರು. ಸಾತ್ವಿಕೋತ್ತಮನೂ, ಭಕ್ತಿಭಾವಪೂರಿತನೂ ಆದ ಶಿಷ್ಯತ್ತಮನನ್ನು ನೋಡಿದ ತಕ್ಷಣ ಭಕ್ತವಾತ್ಸಲ್ಯ ಹೊರಹೊಮ್ಮಿ ಆತನ ವಿಷಯಗಳ ಚಿಂತನವು ಅಲೆಅಲೆಯಾಗಿ ಮೂಡಿಬಂದಿತು ನಾರದ ಹೃತ್ಪಟಲದಲ್ಲಿ “ಪ್ರಿಯಶಿಷ್ಯನನ್ನು ನೋಡಲು ಮನವೆಷ್ಟು ಕಾತರಿಸುತ್ತಿರುವುದು! (ಧ್ಯಾನಾಸಕ್ತನಾದ ಪ್ರಹ್ಲಾದನನ್ನು ನೋಡಿ) ಆಹಾ, ಜ್ಞಾನ-ಭಕ್ತಿ-ವೈರಾಗ್ಯಾದಿ ಮಹಾಪುರುಷರ ಲಕ್ಷಣದಿಂದ ಪರಿಪೂರ್ಣನೂ, ಮಹಾಭಾಗವತೋತ್ತಮನೂ ಆದ ನಮ್ಮ ಪ್ರಿಯಶಿಷ್ಟ ಪ್ರಹ್ಲಾದನ ದರ್ಶನವೆಷ್ಟು ಆಹ್ಲಾದಕರ! ಈ ಮಹನೀಯನ ಸ್ವಭಾವ ಲೋಕವಿಲಕ್ಷಣ. ಅಂತೆಯೇ ಲೋಕವಿಲಕ್ಷಣನಾದ, ಶ್ರೀರಮಾರಮಣನಾದ ಶ್ರೀನೃಕಂಠೀರವನ ಅಪೂರ್ವಾದ್ಭುತರೂಪವನ್ನು ಜಗತ್ತಿಗೆ ತೋರಿಕೊಟ್ಟು ತ್ರಿಲೋಕ ವಿಖ್ಯಾತ ಕೀರ್ತಿ ಪಡೆದಿರುವನು! ಈತನ ಗುಣಗಳೆಷ್ಟು ಉತ್ತಮ, ಉದಾತ್ತವಾದವು ? ಹರಿಭಕ್ತರಲ್ಲಿ ನಮ್ಮ ಪ್ರಹ್ಲಾದರಾಜನಿಗೆ ಸಮನೆಂದರೆ ಅವನೇ! ಆದ್ದರಿಂದಲೇ ಭಗವದ್ಭಕ್ತರ ಗಣನೆಯಲ್ಲಿ ಅಗ್ರಗಣ್ಯನಾಗಿ ತ್ರಿಲೋಕಗಳಲ್ಲಿಯೂ ಖ್ಯಾತಿ ಗಳಿಸಿದ್ದಾನೆ. ಸರ್ವದಾ ಸಜ್ಜನೋದ್ದಾರ, ವಿಶ್ವಶಾಂತಿ, ಲೋಕಕಲ್ಯಾಣಗಳಿಗಾಗಿಯೇ ಶ್ರೀಹರಿಯನ್ನು ಪ್ರಾರ್ಥಿಸುತ್ತಾ, ತತ್ಕಾರ್ಯದೀಕ್ಷಾ ಬದ್ದನಾಗಿ ತನ್ನ ಜೀವನವನ್ನೇ ಮೀಸಲಿಟ್ಟಿರುವ ಇವನ ಗುಣಗಳನ್ನು ಎಷ್ಟು ಬಣ್ಣಿಸಿದರೂ ಸ್ವಲ್ಪವೇ ಸರಿ! ಇಂತಹ ಶಿಷ್ಯತ್ತಮನನ್ನು ಪಡೆದ ನಾನಲ್ಲವೇ ಧನ್ಯ!”

ಇಂತು ಭಕ್ತಶ್ರೇಷ್ಠನ ಸದ್ಗುಣಗಳಿಂದ ಮುಗ್ಧರಾದ ನಾರದ ಮಹರ್ಷಿಗಳು ಪ್ರಹ್ಲಾದನ ಸಮೀಪಕ್ಕೆ ಬಂದರು.

ಓಂ ನಮೋ ನೃಸಿಂಹಾಯ ತೇಜಸೇಜಸೇ ಆವಿರಾವಿರ್ಭವ ವಜ್ರನಖದಂಷ್ಟ್ರ |

ಕರ್ಮಾಶಯಾನ್ ರಂಧಯ ರಂಧಯ ತಮೋಗ್ರಸ ಸ್ವಾಹಾ!

ಅಭಯಮಭಯಂ ಆತ್ಮನೇ ಭೂಯಿಷ್ಠಾತ್ ಓಂ

ಎಂದು ಶ್ರೀನೃಸಿಂಹ ಮಂತ್ರವನ್ನು ಜಪಿಸುತ್ತಿರುವ ಪ್ರಹ್ಲಾದರಾಜರನ್ನು ಕಂಡು ಆನಂದತುಂದಿಲರಾಗಿ

ನಾರದ : ದೀರ್ಘಾಯುಷ್ಮಾನ್ ಭವ, ಭಾಗವತ ಶ್ರೇಷ್ಠ!

ಗುರುಗಳ ಧ್ವನಿ ಕೇಳಿದ ಪ್ರಹ್ಲಾದರಾಜರು ಆಶ್ಚರ್ಯಾನಂದದಿಂದ ಕರೆದ ನಾರದರನ್ನು ಕಂಡು ದಿಗ್ಗನೆ ಮೇಲೆದ್ದು ಸಾಷ್ಟಾಂಗವೆರಗಿ, ಗುರುವರರನ್ನು ಸ್ವಾಗತಿಸಿ, ಆಸನವಿತ್ತು, ಅರ್ಘಪಾದ್ಯಾದಿಗಳಿಂದ ಪೂಜಿಸಿ ಕರಮುಗಿದು ನಿಂತು “ಗುರುದೇವ! ಈ ಶಿಷ್ಯನನ್ನು ಮರೆತುಬಿಟ್ಟಿರಾ? ಅದೆಷ್ಟು ವರ್ಷಗಳಾದವು ತಮ್ಮ ದರ್ಶನವಾಗಿ! ಪೂಜ್ಯರೇ, ತಾವು ಕುಶಲವೇ?” ಎಂದು ವಿನಯದಿಂದ ಕೇಳಿದರು.

ನಾರದ : (ಹರ್ಷದಿಂದ) ವತ್ಸ, ಪ್ರಹ್ಲಾದ! ಮಂಗಳಮೂರ್ತಿಯೂ, ಮಾಯಾಧವನೂ ಆದ ಶ್ರೀನಾರಾಯಣನ ದಾಸರಿಗೆ ಕುಶಲೇತರ ಪ್ರಸಂಗವೆಲ್ಲಿಯದು ? ಸರ್ವದಾ ಭಗವಾನ, ಪೂಜಾ, ಭಗವತ್ತತ್ತಪ್ರಸಾರಾಸಕ್ತನಾಗಿ, ಹರಿವರ್ಷಖಂಡದ ಸುಜನರನ್ನು ತತ್ರೋಪದೇಶಾಮೃತದಿಂದ ಸುಕೃತಿಗಳನ್ನಾಗಿಸುತ್ತಿರುವ ನಿನ್ನನ್ನು ಕಂಡು ಅತೀವ ಹರ್ಷವಾಯಿತು. ನೀನು ಕುಶಲದಿಂದಿರುವೆಯಾ?

ಪ್ರಹ್ಲಾದ : (ವಿನೀತನಾಗಿ) ಗುರುದೇವ! ತಮ್ಮ ಶುಭಾಶೀರ್ವಾದಬಲದಿಂದ ಎಲ್ಲವೂ ಕುಶಲ,

ನಾರದ : (ಮುಗುಳುನಗೆಯಿಂದ) ಭಕ್ತರಾಜ! ನೀನೇನಪ್ಪಾ ಸಾಮಾನ್ಯನೇ ? ಶ್ರೀಹರಿಯನ್ನೇ ನಿನ್ನ ಸ್ವಾಧೀನದಲ್ಲಿಟ್ಟುಕೊಂಡಿದ್ದೀಯೇ! ಸಹಸ್ರಾರು ವರ್ಷಗಳ ಕಾಲ ಹಸಿವು, ತೃಷೆಗಳನ್ನು ಜಯಿಸಿ, ಘೋರ ತಪಸ್ಸನ್ನಾಚರಿಸಿದರೂ ಗೋಚರಿಸಿದ ಸರ್ವಸ್ವತಂತ್ರನೂ, ಯಾವ ಬಂಧನಕ್ಕೂ ಒಳಪಡದ ಆ ದೇವದೇವನನ್ನು ನಿನ್ನ ಭಕ್ತಿಸಂಕೋಲೆಗಳಿಂದ ಬಂಧಿಸಿಟ್ಟಿರುವೆಯಲ್ಲವೆ! “ಶಿಷ್ಯಾದಿಚ್ಛೇತ್ ಪರಾಜಯಂ' ಈ ವಿಚಾರದಲ್ಲಿ ನನ್ನನ್ನೂ ಮೀರಿಸುವ ನೀನು ನಿಜವಾಗಿಯೂ ಧನ್ಯ!

ಪ್ರಹ್ಲಾದ : (ನಾಚಿ ವಿನಮ್ರನಾಗಿ) ಇದೇನು ಗುರುದೇವ! ಮಹಾಮಹಿಮರಾದ ನಿಮ್ಮ ಯೋಗ್ಯತೆಯಲ್ಲಿ, ನಿಮ್ಮ ಸಾಧನವೇನು ? ಅಸುರಕುಲೋದ್ಭವನಾದ ಅಲ್ಪನಾದ ನಾನೆಲ್ಲಿ? ಬ್ರಹ್ಮದೇವರ ಸಾಕ್ಷಾತ್ ಪುತ್ರರಾದ ತಾವೆಲ್ಲಿ? ನಾನು ಕೇವಲ ತಮ್ಮ ಅನುಗ್ರಹೋಪಜೀವಿ.

ನಾರದರು : (ನಸುನಕ್ಕು) ಪ್ರಹ್ಲಾದ! ನಿನ್ನ ಗುರುಭಕ್ತಿ ಅನ್ಯಾದೃಶವಾದುದು. ನೀನು ಏನೇ ಹೇಳಿದರೂ, ಹರಿಭಕ್ತಾಗಣಿಯೆಂದು ಸರ್ವಮಾನ್ಯವಾಗಿರುವೆ, ಇಲ್ಲದಿದ್ದರೆ ನಿನಗಾಗಿ ಶ್ರೀಹರಿಯು ಸ್ತಂಭದಿಂದೊಡೆದು ಬರುತ್ತಿದ್ದರೆ? ಜಗತ್ತಿನಲ್ಲಿ ಮತ್ಯಾರಿಗೂ ಕೊಡದ ಅಸಾಧಾರಣ ವರಗಳನ್ನಿತ್ತು ಪೊರೆಯುತ್ತಿದ್ದನೆ?

ಪ್ರಹ್ಲಾದ : (ವಿನೀತನಾಗಿ) ಇದೇನು ಗುರುದೇವ! ನೀವಿಂದು ಈ ಬಡ ಶಿಷ್ಯನ ಗುಣ ಪ್ರಶಂಸಿಸಲೆಂದೇ ಬಂದಿರುವಂತಿದೆಯಲ್ಲ! ಸ್ವಾಮಿ, ಇದೆಲ್ಲವೂ ತಮ್ಮ ಪ್ರಭಾವವೇ ಅಲ್ಲವೇ? ಬ್ರಹ್ಮದೇವನ ಶಾಪದಿಂದ ದೈತ್ಯಯೋನಿಯಲ್ಲಿ ಜನಿಸಬೇಕಾಗಿ ಬಂದು ದುಃಖದಿಂದ ಕಂಗೆಟ್ಟು ಮಾತೆಯ ಉದರದಲ್ಲಿ ಉದ್ವಿಗ್ನನಾಗಿ ಬಿದ್ದಿದ್ದ ನನ್ನಲ್ಲಿ ಪರಮಕರುಣಾಳುಗಳಾದ ತಮ್ಮಿಂದ ಶ್ರೀಹರಿಭಕ್ತಿಯ ಬೀಜಾಂಕುರವಾಯಿತು! ತಮ್ಮ ಉಪದೇಶರೂಪ ಹರಿಮಹಿಮಾಮೃತ ಪಾನ ಮಾಡಿ ನಾನು ಆನಂದತುಂದಿಲನಾದೆ. ಶ್ರೀಹರಿಯ ಸಾಕ್ಷಾತ್ಕಾರ ಮಾಡಿಸಿಕೊಟ್ಟ ನನ್ನ ಸ್ವರೂಪೋದ್ಧಾರಕ ಗುರುಗಳು ನೀವು! ಮಹಾನುಭಾವ, ನಿಮ್ಮ ಉಪಕಾರವನ್ನು ನಾನೆಂತು ತೀರಿಸಬಲ್ಲೆ? ಲೋಕದಲ್ಲಿ ಶಿಷ್ಯರ ವಿತ್ತಾಪಹರಣ ಮಾಡುವ ಗುರುಗಳೇ ಅನೇಕರು! ಆದರೆ, ಪೂಜ್ಯರೆ, ನಿಮ್ಮಂತೆ ಶಿಷ್ಯರ ಚಿತ್ತಾಪಹರಣ ಮಾಡಿ, ಅವರ ಉದ್ದಾರಕ್ಕಾಗಿ ನಿರ್ಮಲಾಂತಃಕರಣದಿಂದ ತಮ್ಮೋಪದೇಶ ಮಾಡಿ, ಶಿಷ್ಯನಿಗಾಗಿ ಸರ್ವಸ್ವವನ್ನೂ ದಾನ ಮಾಡುವ ಗುರುಗಳು ಬಹು ದುರ್ಲಭರು ಸ್ವಾಮಿ!

ನಾರದರು : (ಮಂದಹಾಸ ಬೀರಿ) ಪ್ರಹ್ಲಾದ! ಕಾರ್ಯ ಕೈಗೂಡುವವರೆಗೆ ಜಗತ್ತಿನಲ್ಲೇ ಆದರ್ಶ ಗುರುಭಕ್ತನಂತೆ ನಟಿಸಿ, ವಿದ್ಯೆ, ಉಪದೇಶಾದಿಗಳನ್ನು ಹೊಂದಿ ಅವರಿಂದಾಗಬೇಕಾದುದೆಲ್ಲ ಮುಗಿದ ಮೇಲೆ, ಸ್ವರೂಪೋದ್ಧಾರಕ ಗುರುಗಳನ್ನೇ ಮರೆತು, ಅಹಂತದಿಂದ ಮೆರೆಯುವ ಶಿಷ್ಯರೇ ಅಧಿಕವಾಗಿರುವುದು ಇಂದು ಕಂಡುಬರುತ್ತಿರುವಾಗ, ಸದಾ ಗುರುಭಕ್ತಿ ಪಾರಾಯಣನಾಗಿ, ಗುರ್ವಾಜ್ಞಾಪರಿಪಾಲಕನಾಗಿ, ಗುರು ಶುಕ್ರೂಶಾದಿಗಳಲ್ಲಿ ಸದಾ ಜಾಗೃತನಾಗಿರುವ ನಿನ್ನಂತ ಸಚಿಷ್ಯರು ಜಗತ್ತಿನಲ್ಲಿ ಬಹು ದುರ್ಲಭವಪ್ಪಾ! ನಿನ್ನಂತಹ ಉತ್ತಮ ಶಿಷ್ಯನನ್ನು ಪಡೆದ ನಾನು ನಿಜವಾಗಿ ಭಾಗ್ಯಶಾಲಿ, ಪ್ರಹ್ಲಾದ, ನೀನು ಸರ್ವವಿಧದಿಂದ ಜಗತ್ತಿಗೆ ಆದರ್ಶನಾಗಿದ್ದೀಯೆ! ನಿನಗೆ ಮಂಗಳವಾಗಲಿ.

ಪ್ರಹ್ಲಾದರಾಜರು ಗುರುಗಳ ಪ್ರಶಂಶೆಯಿಂದ ಲಜ್ಜಿತರಾಗಿ, ತಲೆತಗ್ಗಿಸಿ ನಿಂತು ಕರಜೋಡಿಸಿ “ಪೂಜ್ಯರೇ, ತಾವೀಗ ಎಲ್ಲಿಂದ ದಯಮಾಡಿಸಿರುವಿರಿ?” ಎಂದು ಪ್ರಶ್ನಿಸಿದರು.

ನಾರದ : ವತ್ಸ! ನಿನ್ನನ್ನು ಹರಿಸೇವೆಯಲ್ಲಿ ಜಾಗೃತಗೊಳಿಸಲು ಬಂದಿದ್ದೇನೆ.

ಪ್ರಹ್ಲಾದ : (ಉತ್ಸುಕತೆಯಿಂದ) ಹಾಗೆಂದರೇನು ಗುರುದೇವ! ತಮ್ಮ ಅಭಿಪ್ರಾಯ ಅವಗತವಾಗಲಿಲ್ಲ. ಸ್ಪಷ್ಟವಾಗಿ ಅಪ್ಪಣೆ ಕೊಡಿಸೋಣವಾಗಲಿ.

ನಾರದ : ಪ್ರಹ್ಲಾದ! ಸನಕಾದಿಗಳ ಶಾಪದಿಂದ ನಿನ್ನ ತಂದೆ, ಚಿಕ್ಕಪ್ಪಂದಿರಾಗಿ ಜನಿಸಿ, ಶ್ರೀನರಹರೂಪದ ಶ್ರೀಪರಮಾತ್ಮನಿಂದ ಸಂಸ್ಕೃತರಾದ ಜಯ-ವಿಜಯರು ಮತ್ತೆ ಶ್ರೀಹರಿಯ ಹಿಂದಿನ ಆದೇಶದಂತೆ ತ್ರೇತಾಯುಗದಲ್ಲಿ ರಾವಣ-ಕುಂಭಕರ್ಣರೆಂಬ ರಾಕ್ಷಸರಾಗಿ ಹುಟ್ಟಿ, ಶ್ರೀಮನ್ನಾರಾಯಣನ ಅವತಾರಿಯಾದ ಶ್ರೀರಾಮಚಂದ್ರನಿಂದ ಸಂಹೃತರಾದ ವಿಚಾರವನ್ನು ಹಿಂದೊಮ್ಮೆ ನಿನಗೆ ಹೇಳಿದ್ದು ಜ್ಞಾಪಕವಿದೆಯಷ್ಟೆ?

ಪ್ರಹ್ಲಾದ : ಅಹುದು, ಗುರುದೇವ ನೆನಪಿದೆ!

ನಾರದ : ಅವರೇ ಈಗ ಈ ದ್ವಾಪರಯುಗದಲ್ಲಿ ಮತ್ತೆ ಅವತರಿಸಲಿರುವರು. ಶ್ರೀಹರಿಯ ಪರಮವೈರಿಯಾದ ಕಲಿಯೂ ತನ್ನನ್ನು ಅನುಸರಿಸುವ ತಮೋಯೋಗ್ಯ ದೈತ್ಯರುಗಳೊಡನೆ ಈ ಯುಗದಲ್ಲಿ ಅವತರಿಸಲಿರುವನು. ಈಗಾಗಲೇ ಅಸುರರು ಭಾರತಾವನಿಯ ವಿವಿಧ ರಾಜ-ಮಹಾರಾಜರ ಮಂಶದಲ್ಲಿ ಜನಿಸಿ ಶ್ರೀಹರಿದ್ವೇಷ, ಶ್ರೀಹರಿತತ್ವ, ಧರ್ಮವಿರೋಧಿಗಳಾಗಿ, ಸಜ್ಜನರಿಗೆ ವಿಪರೀತ ಹಿಂಸೆ ಕೊಡುತ್ತಿರುವರು. ಅವರ ಅನ್ಯಾಯ-ಅತ್ಯಾಚಾರಗಳಿಂದ ಸಜ್ಜನರಿಗೆ ಬಹಳ ಕಷ್ಟ ಪ್ರಾಪ್ತವಾಗಿದೆ. ಆ ದುಷ್ಟ ದೈತ್ಯರ ಭಾರವನ್ನು ಹೊರಲಾರದೆ ಭೂಮಾತೆಯು ತಲ್ಲಣಿಸುತ್ತಿರುವಳು. ಈಗ ಶ್ರೀಹರಿಯ ಅವತಾರ ಅನಿವಾರ್ಯವಾಗಿದೆ. ಈಗ ಅವತರಿಸಲಿರುವ ಶ್ರೀಹರಿಯ ಅವತಾರವು ಎಲ್ಲ ಅವತಾರಗಳಿಗಿಂತ ಅತ್ಯಂತ ವೈಶಿಷ್ಟ್ಯ-ಮಹತ್ವಪೂರ್ಣವಾದ ಅವತಾರವೆನಿಸುವುದು. ಭಗವಂತನ ಲೀಲಾವಿಲಾಸಗಳು ಅಸಾಧಾರಣವಾಗಿರುತ್ತವೆ. ಶ್ರೀಹರಿಭಕ್ತರೆಲ್ಲರೂ ಈ ಒಂದು ಸತ್ಪಸಂಗವನ್ನು ಸದುಪಯೋಗಪಡಿಸಿಕೊಂಡು ಶ್ರೀಹರಿಯನ್ನು ಸೇವಿಸಿ ಉತ್ಕೃತರಾಗಲು ಈಗಾಗಲೇ ಶ್ರೀಹರಿಯ ಅವತಾರಕ್ಕೆ ಮೊದಲೇ ಅವತರಿಸಲಾರಂಭಿಸಿದ್ದಾರೆ.

ಪ್ರಹ್ಲಾದ! ನೀನು ಶ್ರೀಹರಿಯ ಭಕ್ತಾಗ್ರಣಿ, ನೀನೀಗ ಮತ್ತೆ ಅವತರಿಸುವುದು ಅನಿವಾರ್ಯ. ಆದ್ದರಿಂದ ನೀನು ಅವತರಿಸಿ ಶ್ರೀಹರಿಯ ಈ ಭೂಭಾರಹರಣರೂಪ ಕಾರ್ಯದಲ್ಲಿ ಸೇವೆ ಸಲ್ಲಿಸಬೇಕೆಂಬುದನ್ನು ನಿನಗೆ ತಿಳಿಸಿ ಕಾರ್ಯೋನ್ಮುಖನನ್ನಾಗಿ ಮಾಡಲೆಂದೇ ನಾನು ಬಂದಿದ್ದೇನೆ.

ಪ್ರಹ್ಲಾದ : (ಪುಲಕಿತಗಾತ್ರರಾಗಿ, ಆನಂದಭಾಷ್ಪಸಿಕ್ತನಯನರಾಗಿ ಆಹಾ! ಗುರುದೇವ! ನಿಮ್ಮ ವಚನವು ಅಮೃತಪ್ರಾಶನದಂತೆ ನನಗೆ ಅಮಂದಾನಂದದಾಯಕವಾಗಿದೆ. ಶ್ರೀಹರಿಯ ದಾಸನೂ, ನಿಮ್ಮ ಶಿಷ್ಯನೂ ಆದ ನಾನು ಶ್ರೀಹರಿಸೇವೆಗಾಗಿ ಅವತರಿಸುವುದು ಅಹೋಭಾಗ್ಯವೆಂದು ಭಾವಿಸಿರುವೆನು! ಆದರೆ...

ನಾರದ : (ನಕ್ಕು) ಆದರೇನು ಪ್ರಹ್ಲಾದ? ಹೂಂ, ಅರ್ಥವಾಯಿತು! ನಿನ್ನ ಸ್ವಾಮಿಯ ಆಜ್ಞೆಯನ್ನು ಪಡೆಯಲಿಚ್ಛಿಸುವೆಯಲ್ಲವೇ? ಆಗಲಿ, ವತ್ಸ! ಪ್ರಾರ್ಥಿಸು ನಿನ್ನ ದೇವನನ್ನು!

ಪ್ರಹ್ಲಾದ : (ಭಕ್ತಿಯಿಂದ) “ವಜ್ರನಖಾಯ ವಿದ್ಮಹೇ ತೀಕ್ಷ್ಯದುಷ್ಟಾಯ ಧೀಮಹಿ ತನ್ನೋ ನಾರಸಿಂಹಃ ಪ್ರಚೋದಯಾತ್” ಎಂದು ಪ್ರಾರ್ಥಿಸಲು ಕೂಡಲೇ ಮಿಂಚೊಂದು ಮಿನುಗಿದಂತಾಗಿ ಕೋಟಿಸೂರ್ಯಪ್ರಕಾಶ ಬೆಳಗುತ್ತಿರಲು ಶ್ರೀನೃಸಿಂಹದೇವರು ಪ್ರತಕ್ಷರಾದರು!

ನಾರದ-ಪ್ರಹ್ಲಾದ : ನಮೋ ನಮೋ ನರಸಿಂಹರೂಪಾಯ ನಾರಾಯಣಾಯ!

ಶ್ರೀನೃಸಿಂಹ : (ಮಂದಹಾಸ ಬೀರುತ್ತಾ) ಅಭೀಷ್ಟ ಸಿದ್ಧಿರಸ್ಸು! ವತ್ಸ ಪ್ರಹ್ಲಾದ! ನಾರದರ ಉಪದೇಶವಾದಂತೆ ತೋರುತ್ತದೆ! ನಿನ್ನ ಮನೋರಥವೇನು ಕುಮಾರ?

ನಾರದ : (ಕರಮುಗಿದು) ಇದೇನು ದೇವ, ನಿನ್ನ ಲೀಲಾವಿಲಾಸ? ಪ್ರಹ್ಲಾದನನ್ನು ಭಾರತಾವನಿಯಲ್ಲಿ ಅವತರಿಸುವಂತೆ ನೀನೇ ಪ್ರೇರಣೆ ಮಾಡಿ, ನಾನು ಇಲ್ಲಿಗೆ ಬರುವಂತೆ ಮಾಡಿ, ಒಳಗೆ ನಿಂತು ಹೇಳಿಸಿ, ಈಗ ಈ ರೀತಿ ನುಡಿಯುವುದೂ ನಿನ್ನ ಒಂದು ಲೀಲೆಯೇ? ಭಗವನ್!

ನಾರದರ ಮಾತನ್ನಾಲಿಸಿ ಶ್ರೀನೃಸಿಂಹರೂಪಿ ಶ್ರೀಹರಿಯು ನಸುನಕ್ಕು “ಪ್ರಹ್ಲಾದ! ನನ್ನನ್ನೇಕೆ ಸ್ಮರಿಸಿದೆ?” ಎಂದು ಪ್ರಶ್ನಿಸಲು ಪ್ರಹ್ಲಾದರಾಜರು ಪರಮಾತ್ಮನಿಗೆ ಸಾಷ್ಟಾಂಗವೆರಗಿ “ಛಕ್ತಬಾಂಧವ! ಪದ್ಮ ಯೋನಿಯ ಶಾಪದಿಂದ ಅಸುರ ಕುಲದಲ್ಲಿ ಜನಿಸಿದರೂ ನಿನ್ನ ಅನುಗ್ರಹ, ಪೂಜ್ಯ ಗುರುಗಳ ಉಪದೇಶದಿಂದ ನಿನ್ನ ಭಕ್ತನಾಗಿ ನಿನ್ನ ಕರುಣೆಗೆ ಪಾತ್ರನಾದ. ಈಗ ಮತ್ತೆ ಅವತರಿಸುವಾಗಲಾದರೂ ಅಸುರ ಕುಲದ ಸಂಬಂಧವಿಲ್ಲದೆ ಸಾತ್ವಿಕರಾದ ನಿನ್ನ ಭಕ್ತರ ಕುಲದಲ್ಲೇ ಜನಿಸುವಂತೆ ಅನುಗ್ರಹಿಸು ದೇವ!” ಎಂದು ಪ್ರಾರ್ಥಿಸಿದರು.

ಶ್ರೀನೃಸಿಂಹ : (ನಸುನಕ್ಕು) ಮಗು, ಪ್ರಹ್ಲಾದ! ನನ್ನ ಪ್ರೇರಣೆಯಂತೆಯೇ ನಾರದನು ನಿನಗರುಹಿರುವನು, ಚಿಂತಿಸಬೇಡ. ಸರ್ವದಾ ನಿನ್ನನ್ನು ಪೊರೆಯಲು ನಾನು ಸಿದ್ಧನಾಗಿರುವಾಗ ನಿನಗೇತರ ಭಯ ? ನೀನು ಚಂದ್ರವಂಶದಲ್ಲಿ ಪ್ರಖ್ಯಾತ ರಾಜಮನೆತನದಲ್ಲಿ ನಾನು ಅವತರಿಸುವ ಮೊದಲೇ ನನ್ನ ಭಕ್ತನಾಗಿ ಜನಿಸುವೆ! ನಾರದ! ನಿನಗೀಗ ಸಂತೋಷವಾಯಿತೇ?

ನಾರದ-ಪ್ರಹ್ಲಾದರು : ನಿನ್ನ ದಾಸರಾದ ನಮಗೆ ಯಾವಾಗಲೂ ಸಂತೋಷವೇ! ನಿನ್ನಾಣತಿಯನ್ನು ಶಿರಸಾಧರಿಸಿದ್ದೇವೆ. ಶ್ರೀನೃಸಿಂಹ : “ನಾರದ! ವತ್ತ, ಪ್ರಹ್ಲಾದ! ನಿಮಗೆ ಮಂಗಳವಾಗಲಿ” ಎಂದು ಆಶೀರ್ವದಿಸಿ ಅದೃಶ್ಯರಾದರು. ಪ್ರಹ್ಲಾದರಾಜರು ನಾರದರಿಗೆ ನಮಸ್ಕರಿಸಿ ಹರಿವರ್ಷ ಖಂಡದಿಂದ ಮತ್ತೆ ಭಾರತಾವನಿಯಲ್ಲಿ ಅವತರಿಸಲು ಜ್ಯೋತಿರೂಪದಿಂದ ಅದೃಶ್ಯರಾದರು.