|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

ಶ್ರೀಅಪ್ಪಣಾಚಾರ್ಯರು

ಶ್ರೀರಾಘವೇಂದ್ರಗುರುಸಾರ್ವಭೌಮರು ಸಶರೀರರಾಗಿ ಬೃಂದಾವನಪ್ರವೇಶ ಮಾಡಿದ ತರುಣದಲ್ಲೇ ಶ್ರೀರಾಯರ ಮಹಿಮೆ- 

ಗಳು ಪ್ರಕಟವಾಗಹತ್ತಿದವು. ಅಂದಿನಿಂದ ಪ್ರಕಟವಾಗಲಾರಂಭಿಸಿದ ಮಹಿಮೆಗಳು ಅದ್ಯಾಪಿ ಅನಂತವಿಧವಾಗಿ ಪ್ರಕಾಶಕ್ಕೆ ಬರುತ್ತಲೇ ಇವೆ! ಗುರುರಾಜರ ಒಂದೊಂದು ಮಹಿಮೆಯೂ ಮಹತ್ವಪೂರ್ಣವಾಗಿದೆ. ನಮಗೆ ತಿಳಿದಿರುವ, ಅದ್ಯಾಪಿ ಭಕ್ತಜನರ ಅನುಭವಕ್ಕೆ ಬರುತ್ತಿರುವ ಮಹಿಮೆಗಳನ್ನು ಬರೆಯುತ್ತಾ ಹೋದರೆ, ಅವೇ ಸಹಸ್ರಾರು ಪುಟಗಳ ಅನೇಕ ಸಂಪುಟಗಳಾಗಬಹುದು! ಆ ಮಹನೀಯರ ಎಲ್ಲಾ ಮಹಿಮೆಗಳನ್ನೂ ಸಾದ್ಯಂತವಾಗಿ ಬರೆಯಲು ಯಾರೂ ಸಮರ್ಥರಾಗಲಾರರು. ಶ್ರೀರಾಯರು ಸಶರೀರಾಗಿ ಬೃಂದಾವನ ಪ್ರವೇಶಮಾಡಿದ ಎರಡು-ಮೂರು ದಿನಗಳಲ್ಲಿಯೇ ಪ್ರಕಟವಾದ ಮತ್ತು ನಂತರ ಅನತಿಕಾಲಗಳಲ್ಲಿ ಹೊರಹೊಮ್ಮಿದ ಕೆಲ ಮುಖ್ಯ ಮಹಾತ್ಮಗಳನ್ನು ಇಲ್ಲಿ ಭಕ್ತಜನರ ಸಂತೋಷಕ್ಕಾಗಿ ನಿರೂಪಿಸಬಯಸಿದ್ದೇವೆ. 

ರಾಯರ ಶಿಷ್ಯರ ಪೈಕಿ ಬಿಚ್ಚಾಲೆಯ ಶ್ರೀಅಪ್ಪಣಾಚಾರ್ಯರೂ ಒಬ್ಬರು. ಅವರು ತಮ್ಮ ತೀರ್ಥರೂಪರ ಆಶಯದಂತೆ ರಾಯರಲ್ಲಿ ಹನ್ನೆರಡು ವರ್ಷಗಳ ಕಾಲ ನ್ಯಾಯವೇದಾಂತಾದಿ ಶಾಸ್ತ್ರಗಳನ್ನು ಅಧ್ಯಯನಮಾಡಿದ ಧನ್ಯಜೀವಿಗಳು. ಗುರುರಾಜರ ವಿಶೇಷ ಪ್ರೀತಿಗೆ ಪಾತ್ರರಾಗಿದ್ದ ಅಪ್ಪಣಾಚಾರ್ಯರು ವಿದ್ವನ್ಮಂಡಲಿಯಲ್ಲಿ ಶ್ರೇಷ್ಠಪಂಡಿತರೆಂದು ಹೆಸರು ಗಳಿಸಿ ಸಕಲರ ಗೌರವಕ್ಕೆ ಪಾತ್ರರಾಗಿದ್ದರು. 

ಅವರು ಗುರುಗಳೊಡನೆ ಸಂಚಾರದಲ್ಲಿದ್ದಾಗ, ಮಹಾಸಂಸ್ಥಾನವು ರಾಯಚೂರಿನಲ್ಲಿರುವಾಗ ಗುರುರಾಜರನ್ನು ಬಿಚ್ಚಾಲೆಗೆ ಕರೆದುಕೊಂಡು ಹೋಗಿ ತಮ್ಮ ಮನೆಯಲ್ಲಿ ಭಕ್ತಿ-ಶ್ರದ್ಧೆಗಳಿಂದ ಸತ್ಕರಿಸಿ ಕೃತಾರ್ಥರಾದರು. ಆಗ ಅವರ ತಂದೆಯ ಪ್ರಾರ್ಥನೆಯಂತೆ ರಾಯರು ಅಪ್ಪಣಾಚಾರ್ಯರಿಗೆ ಗೃಹಸ್ಥಾಶ್ರಮಿಗಳಾಗಿ ತಂದೆ-ತಾಯಿಯರ ಮನಸ್ಸಂತೋಷಪಡಿಸಬೇಕೆಂದು ಆಜ್ಞಾಪಿಸಿದರು. ಗುರುಗಳ ಅಪ್ಪಣೆಯಂತೆ ಆಚಾರ್ಯರು ವಿವಾಹವಾಗಿ ಬಿಚ್ಚಾಲೆಯಲ್ಲಿಯೇ ನೆಲೆಸಿ ಪಾಠಪ್ರವಚನಾಸಕ್ತರಾಗಿ ಗೃಹಸ್ಥಾಶ್ರಮಧರ್ಮವನ್ನು ಪರಿಪಾಲಿಸುತ್ತಾ ಸುಖದಿಂದಿದ್ದರು. 

ಗುರುರಾಜರು ಆದವಾನಿಗೆ ಒಂದು ನವಾಬನಿಂದ ಮಂತ್ರಾಲಯ ಗ್ರಾಮವನ್ನು ಸಂಪಾದಿಸಿ ಅಲ್ಲಿಯೇ ವಾಸಮಾಡುತ್ತಿರುವಾಗ, ಅಪ್ಪಣಾಚಾರ್ಯರು ಗುರುಗಳ ದರ್ಶನಮಾಡಿ ತಾವು ಸಂಸಾರ ಸಹಿತರಾಗಿ ತೀರ್ಥಯಾತ್ರೆ ಮಾಡಬೇಕೆಂದಿರುವುದನ್ನು ತಿಳಿಸಿ, ಕುಟುಂಬ ಸಹಿತರಾಗಿ ತೀರ್ಥಯಾತ್ರೆಗೆ ಹೊರಟರು. ಆಚಾರರು ತೀರ್ಥಯಾತ್ರೆಯಲ್ಲಿದ್ದುದರಿಂದ ಗುರುರಾಜರು ಬೃಂದಾವನ ಪ್ರವೇಶಮಾಡುವ ವಿಚಾರ ತಿಳಿಯದಿದ್ದುದರಿಂದ ಆ ಸಮಯದಲ್ಲಿ ಅಲ್ಲಿದ್ದು ಸೇವಿಸಿ ಕೃತಾರ್ಥರಾಗಲು ಅವಕಾಶವಾಗಲಿಲ್ಲ. 

ಅಪ್ಪಣಾಚಾರ್ಯರು ಯಾತ್ರೆಯಿಂದ ಬಿಚ್ಚಾಲೆಗೆ ಮರಳಿ ಬರುವ ಮೂರು ದಿನ ಹಿಂದೆಯೇ ಶ್ರೀಗುರುರಾಜರು ಬೃಂದಾವನ ಪ್ರವೇಶ ಮಾಡಿದ್ದರು. ಊರಿಗೆ ಬಂದೊಡನೆಯೇ ಅವರಿಗೆ ರಾಯರು ಬೃಂದಾವನ ಪ್ರವೇಶ ಮಾಡಿದ ವಿಷಯ ತಿಳಿದು ವಜ್ರಾಘಾತವಾದಂತಾಯಿತು. ದುಃಖ ಉಮ್ಮಳಿಸಿ ಬಂದಿತು. ಹಾಯ್, ನಾನೆಂಥ ಭಾಗ್ಯಹೀನ! ಗುರುಪಾದರ ಚರಮದರ್ಶನವಾ ನನಗೆ ದೊರಕಲಿಲ್ಲವಲ್ಲಾ! ಆ ಮಹನಿಯರ ಬೃಂದಾವನ ದರ್ಶನಮಾಡದೆ ನಾನು ನೀರುಸಹ ಕುಡಿಯುವುದಿಲ್ಲ!” ಎಂದು ಸಂಕಲ್ಪಿಸಿ ತಕ್ಷಣವೇ ಮನೆಬಿಟ್ಟು ಹೊರಟರು. ಆಗ ವರ್ಷಾಕಾಲವಾದ್ದರಿಂದ ತುಂಗಭದ್ರೆಯು ತುಂಬಿ ಹರಿಯುತ್ತಿತ್ತು. ನದಿಯನ್ನು ದಾಟಲು ಬೇರಾವ ದಾರಿಯೂ ಇರಲಿಲ್ಲ. ಬೃಂದಾವನ ದರ್ಶನ ಮಾಡಲು ತವಕಿಸುತ್ತಿದ್ದ ಅಪ್ಪಾಣಾರ್ಯರು ಒಂದೆರಡು ಘಂಟೆಗಳ ಕಾಲ ನಿರೀಕ್ಷಿಸಿದರೂ ಪ್ರವಾಹವು ಇಳಿಮುಖವಾಗಲಿಲ್ಲ. ಗುರುರಾಜರ ಬೃಂದಾವನದರ್ಶನಾಕಾಂಕ್ಷಿಗಳಾದ ಅವರು ಹಿಂದು-ಮುಂದು ಯೋಚಿಸದೆ ತುಂಗಭದ್ರೆಗೆ ಹಾರಿ, ಈಚೆಯ ದಡಕ್ಕೆ ಬರಲು ಶ್ರಮಿಸಹತ್ತಿದರು. 

ಸರಿಯಾಗಿ ಈಜಲೂಬಾರದ ಆಚಾರರು ತಮಗೆ ತೋರಿದಂತೆ ಕೈಕಾಲುಗಳನ್ನು ಬಡಿದು ಶ್ರಮಿಸುತ್ತಿರುವಂತೆಯೇ, ಹೃದಯದಲ್ಲಿ ಶ್ರೀರಾಯರನ್ನೇ ತುಂಬಿಕೊಂಡಿದ್ದಆ ಮಹನೀಯರ ಮುಖದಿಂದ ಶ್ರೀರಾಯರ ಸ್ತೋತ್ರವು ಹೊರಹೊಮ್ಮಿತು! 

ಭಗವಂತನ ಅನುಗ್ರಹದಿಂದ ಭವಸಾಗರವನ್ನೇ ದಾಟಿಸಲು ಸರ್ಮಥ್ರರಾದ ಗುರುರಾಜರು ತುಂಗಾನದಿಯನ್ನು ದಾಟಿಸುವುದೊಂದು ಅಗಾಧವೇ ? ರಾಯರ ಕೃಪಾದೃಷ್ಟಿ ಆಚಾರ್ಯರ ಮೇಲೆ ಬಿತ್ತೆಂದು ತೋರುತ್ತದೆ. ಗುರ್ವನುಗ್ರಹಫಲವೋ ಎಂಬಂತೆ ಅವುದೋ ಕಾಣದ ಕೈಯೊಂದು ಅವರಿಗೆ ನದಿಯನ್ನು ದಾಟಲು ಸಹಾಯಮಾಡಿತು. 

ಭಕ್ತಿಪುಳಕಿತಗಾತ್ರರಾದ ಅಪ್ಪಣಾಚಾರ್ಯರ ಮುಖಕಮಲದಿಂದ ಕಮನೀಯವಾದ ಗುರುಸ್ತೋತ್ರವು ಓತಪ್ರೋತವಾಗಿ ಹರಿದುಬರುತ್ತಿದೆ!” ಶ್ರೀಪೂರ್ಣಬೋಧ ಗುರುತೀರ್ಥಪಯೋಭಿಪಾರಾ ಕಾಮಾರಿಯಾಕ್ಷವಿಷಾಕ್ಷ ಶಿರಃಸ್ಪೃಶಂತೀ!” ಎಂದು ಆರಂಭವಾದ ಶ್ರೀಗುರುಸ್ತೋತ್ರವು ಆಚಾರೈರು ತುಂಗಭದ್ರೆಯ ಈಚೆಯ ದಡಕ್ಕೆ ಬಂದಾಗ “ರಾಜಚೋರ ಮಹಾವ್ಯಾಘ್ರ, ಸರ್ಪನಕ್ರಾದಿಪೀಡನಮ್ ನ ಜಾಯತೇಸ್ಯ, ಸ್ತೋತ್ರಸ್ಯ ಪ್ರಭಾವಾನಾತ್ರ ಸಂಶಯಃ” ಎನ್ನುವವರೆಗೆ ಬಂದು ನಿಂತಿತು. ನದಿಯ ದಡದಲ್ಲಿ ಸೇರಿದ್ದ ಜನರ ಗುಂಪಿನಲ್ಲಿ ಒಬ್ಬರು ಅಪ್ಪಣಾಚಾರ್ಯರನ್ನು ಗುರುತಿಸಿ ಓಡೋಡಿ ಬಂದು “ಆಚಾರ್ಯರೆ! ಗುರುಪಾದರು ನಮ್ಮನ್ನು ಅನಾಥರನ್ನಾಗಿಮಾಡಿ ಸಶರೀರರಾಗಿ ಬೃಂದಾವನವನ್ನು ಪ್ರವೇಶಿಸಿಬಿಟ್ಟರು!” ಎಂದು ಹೇಳಿದರು. 

ಆ ಮಾತು ಕಿವಿಗೆ ಬಿದ್ದೊಡನೆಯೇ ಆಚಾರ್ಯರಿಗೆ ದುಃಖವೂ ಉಕ್ಕಿ ಬಂದು ಕಣ್ಣೀರಿನ ಕೋಡಿ ಹರಿಯಿತು. ಅತಿದುಃಖದಿಂದ ಬೃಂದಾವನವಿರುವೆಡೆಗೆ ಧಾವಿಸಿದರು. ಆಗ ಮತ್ತೆ ಅವರ ಮುಖದಿಂದ ಗುರುಸ್ತೋತ್ರವು ಮುಂದುವರೆಯಿತು. ಭಕ್ತಿಪ್ರಕರ್ಷದಿಂದ ಅಪ್ಪಣಾಚಾರ್ಯರು “ಯೋ ಭಾಗುರುರಾಘವೇಂದ್ರ ಚರಣ ದ್ವಂದ್ವಂಸ್ಮರನ್ ಯಃ ಪಠೇತ್ ! ಸ್ತೋತ್ರಂ ದಿವ್ಯಮಿದಂ ಸದಾ ನ ಹಿ ಭವೇತ್ ತಾಸುಖಂ ಕಿಂಚನ || ಕಿಂಷ್ಟಾರ್ಥ ಸಮೃದಿರೇವ ಕಮಲಾನಾಥಪ್ರಸಾದೋ ದಯಾತ್ ! ಕೀರ್ತಿ ದಿಗ್ತಿದಿತಾ ವಿಭೂತಿರತುಲಾ... ಅಂದರೆ-ಶ್ರೀರಾಘವೇಂದ್ರಗುರುಗಳ ಪಾದಗಳನ್ನು ಯಾರು ಅನನ್ಯಭಕ್ತಿಯಿಂದ ಸ್ಮರಿಸಿ ಯಾವ ಜ್ಞಾನಿಗಳು ಭಜಿಸುತ್ತಾರೋ, ನಿತ್ಯವೂ ಈ ಸ್ತೋತ್ರವನ್ನು ಪಠಿಸುವರೋ ಅವರಿಗೆ ಎಂದಿಗೂ ದುಃಖ-ತಮಸ್ಸುಗಳು ಉಂಟಾಗುವುದಿಲ್ಲ ಮತ್ತು ಈ ಸ್ತೋತ್ರವನ್ನು ಪಠಿಸುವುದರಿಂದ ಕಮಲಾನಾಯಕನಾದ ಶ್ರೀಹರಿಯ ಪ್ರಸಾದದಿಂದ ಇಷ್ಟಾರ್ಥಸಿದ್ದಿ, ದಿಗಂತ ವ್ಯಾಪ್ತವಾದ ಕೀರ್ತಿ, ಐಶ್ವರ್ಯ ಮತ್ತು ಮುಕ್ತಿಯೂ ಸಿದ್ಧಿಸುವುದು !....” ಎಂದು ಹೇಳುತ್ತಿರುವಂತೆಯೇ ಆಚಾರ್ಯರಿಗೆ ಭವಬೃಂದಾವನವು ಗೋಚರಿಸಿತು! ಅವರು ರಚಿಸಿದ ಸ್ತೋತ್ರವು ಅಪೂರ್ಣವಾಗಿಯೇ ಉಳಿದುಹೋಯಿತು! ಓಡೋಡಿ ಬಂದ ಅಪ್ಪಣಾಚಾರ್ಯರು ಗುರುಗಳ ಬೃಂದಾವನಕ್ಕೆ ಸಾಷ್ಟಾಂಗವರೆಗಿದರು. 

ಏನಾಶ್ಚರ್ಯ! ಇದ್ದಕ್ಕಿದ್ದಂತೆ ಬೃಂದಾವನದಿಂದ “ಸಾಕ್ಷಿಹಯಾಸ್ಕೋತಹಿ!” ಇದಕ್ಕೆ ಶ್ರೀಹಯಗ್ರೀವದೇವರೇ ಸಾಕ್ಷಿ! ಎಂಬ ಗಂಭೀರವಾದ ಶ್ರೀಗುರುರಾಜರ ಮಂಗಳಕರವಾದ ದಿವ್ಯವಾಣಿಯು ಕೇಳಿಸಿತು! ಆಹಾ, ಗುರುರಾಜರಿಗೆ ಶಿಷ್ಯರಲ್ಲಿ ಎಂತಹ ಪ್ರೀತಿ ? ಇದೆಂತಹ ಅನುಗ್ರಹ! ಅಪೂರ್ಣವಾಗಿ ನಿಂತಿದ್ದ ತಮ್ಮ ಸ್ತೋತ್ರಕ್ಕೆ ತಮ್ಮ ಒಪ್ಪಿಗೆಯ ಮುದ್ರೆಯನ್ನೊತ್ತಿದಂತೆ “ಸಾಕ್ಷೀಹಯಾಸ್ಕೋತಹಿ!” ಎಂದು ಅರ್ಧಕ್ಕೆ ನಿಂತಿದ್ದ ಶ್ಲೋಕವನ್ನು ಪೂರ್ಣಗೊಳಿಸಿ, ಅಭಯವಿತ್ತರು, ಆ ಮಹನೀಯರು! ಬೃಂದಾವನ ಪ್ರವೇಶಮಾಡಿದ ಮೂರು ದಿನಗಳಾದಮೇಲೆ ಶ್ರೀರಾಯರ ದಿವ್ಯವಾಣಿಯನ್ನು ಸಾಕ್ಷಾತ್ತಾಗಿ ಕೇಳಿದ, ಅಲ್ಲಿದ್ದ ನೂರಾರು ಜನರು ಆ ಅದ್ಭುತ ಮಹಿಮೆಯನ್ನು ಕಂಡು ಆಶ್ಚರಾನಂದತುಂದಿಲರಾಗಿ ಅಪ್ಪಣಾಚಾರ್ಯರನ್ನು ಹೊಗಳಹತ್ತಿದರು ಆಗ ಆಚಾರರಿಗಾದ ಆನಂದ ಆವರ್ಣನೀಯ ಅಸದೃಶ! ಆಚಾರ್ಯರು ಭಕ್ತಿಭರದಿಂದ ಕುಣಿದಾಡಿದರು. ಅವರ ಕಣ್ಣುಗಳಿಂದ ಅನಂದಾಶ್ರು ಹರಿಯಿತು. “ಆಹಾ ನೂರಾರುಜನ ಶಿಷ್ಯರಲ್ಲೊಬ್ಬನಾದ ಈ ಪಾಮರನಲ್ಲಿ ಕಾರುಣ್ಯ ತೋರಿದ ಗುರುರಾಜರು ನಾನು ರಚಿಸಿದ ಸ್ತೋತ್ರವನ್ನು ಅರ್ಧಕ್ಕೆ ನಿಂತುಹೋದ ಕವಿತೆಯನ್ನು ಪೂರ್ಣಮಾಡಿ ಮನ್ನಣೆ ನೀಡಿದರಲ್ಲ!” ಎಂದು ಹಿಗ್ಗಿದರು. “ರಾಯರ ದರ್ಶನ ನನಗಾಗಲಿಲ್ಲವೆಂದು ನಾನು ದುಃಖಿಸಿದ್ದು ತಪ್ಪು! ಗುರುಗಳು ಮೂರ್ತಿಮತ್ತಾಗಿ ಬೃಂದಾವನದಲ್ಲಿ ರಾಜಿಸುತ್ತಿದ್ದಾರೆ! ಅವರು ಸುಕೃತಶಾಲಿಗಳಾದ ಅಧಿಕಾರಿಗಳಿಗೆ ದರ್ಶನ ನೀಡುತ್ತಾರೆ! ಹೂಂ, ಈ ಪಾಮರನಿಗೆ ಅವರ ದರ್ಶನವಾಗದಿದ್ದರೂ ಅವರ ಅಮೃತಮಯ ವಾಣಿಯನ್ನಾದರೂ ಕೇಳುವ ಭಾಗ್ಯ ದೊರಕಿತಲ್ಲಾ! ಇದಕ್ಕಿಂತ ಹೆಚ್ಚಿನದೇನಿದೆ ? ಗುರುದೇವ, ನಾನು ಧನ್ಯನಾದೆ” ಎಂದು ಗುರುರಾಜರನ್ನು ಭಕ್ತಿಯಿಂದ ಕೊಂಡಾಡಿದರು. 

ಅಪ್ಪಣಾಚಾರ್ಯರು ಬಂದಾಗ ಬೃಂದಾವನಾಂತರ್ಗತರಾಗಿದ್ದ ಶ್ರೀಗುರು ರಾಜರು ಶ್ರೀಹಯಗ್ರೀವಮಂತ್ರಜಪಾಸಕ್ತರಾಗಿ ಕುಳಿತಿದ್ದರು ! ಪ್ರಿಯಶಿಷ್ಯನು ರಚಿಸಿದ ಸ್ತೋತ್ರದಿಂದ ಸುಪ್ರೀತರಾದ ಗುರುಗಳು ಆ ಸ್ತೋತ್ರಕ್ಕೆ ತಮ್ಮ ಸಮ್ಮತಿಯನ್ನೂ, ಗುರುಸ್ತೋತ್ರದಲ್ಲಿ ಹೇಳಿರುವ ವಿಷಯಗಳು ಸತ್ಯವೆಂದೂ ೭೦೦ ವರ್ಷಗಳ ಕಾಲ ಈ ಸ್ತೋತ್ರದ ಪಠಣದಿಂದ ಸರ್ವಸಿದ್ಧಿಯಾಗುವುದೆಂದು ಅಪೂರ್ಣವಾಗಿದ್ದ ಏಳು ಅಕ್ಷರಯುಕ್ತವಾದ ತಮ್ಮ ಅಂಕಿತವನ್ನು ನೀಡಿ ಗುರುಗಳು ಮಹಿಮೆ ಬೀರಿದರು. ಅದಕ್ಕೆ ತಮ್ಮೆದುರು ಕುಳಿತಿರುವ ಶ್ರೀಹಯಗ್ರೀವದೇವರೇ ಸಾಕ್ಷಿಯೆಂದೂ ತಿಳಿಸಿಕೊಡಲು, ಅಪ್ಪಣಾಚಾರರು ರಚಿಸಿದ ಸ್ತೋತ್ರದಲ್ಲಿ ಅಪೂರ್ಣವಾಗಿ ಉಳಿದಿದ್ದ ಏಳು ಅಕ್ಷರಗಳನ್ನು ತಾವೇ ಅನುಗ್ರಹಪೂರ್ವಕವಾಗಿ ತುಂಬಿ ಸ್ತೋತ್ರವನ್ನು ಪೂರ್ಣಮಾಡಿ, ಸಕಲ ಸಜ್ಜನರನ್ನೂ ಆನಂದಗೊಳಿಸಿದರೆಂದು ಸರ್ವರೂ ರಾಯರ ಕಾರುಣ್ಯವನ್ನು ಕೊಂಡಾಡಿದರು. 

ಶ್ರೀಗುರುರಾಜರ ಮೇಲೆ ಅನೇಕ ಮಹನೀಯರು ವಿವಿಧ ಸ್ತೋತ್ರಗಳನ್ನು ರಚಿಸಿದ್ದಾರೆ. ಆದರೆ ಶ್ರೀರಾಯರಿಗೆ ಅತ್ಯಂತ ಪ್ರಿಯವಾದ ಸ್ತೋತ್ರವೆಂದರೆ, ಅಪ್ಪಣಾಚಾರ್ಯರು ರಚಿಸಿದ ಈ ಸ್ತೋತ್ರವೇ ಎಂದು ಧೈರ್ಯವಾಗಿ ಹೇಳಬಹುದು. ಅಂದಿನಿಂದ ಇಂದಿನವರೆಗೆ ಕೋಟ್ಯಂತರ ಜನರು ಈ ಸ್ತೋತ್ರ ಪಾರಾಯಣ, ಪುನಶ್ಚರಣಾದಿಗಳಿಂದ ತಮ್ಮೆಲ್ಲರೋಗ-ರುಜಿನ, ದಾರಿದ್ರ, ಅಜ್ಞಾನ, ಅಶಾಂತಿ, ಅಲಸ್ಯಾದಿ ದೋಷಗಳನ್ನೂ ದುಃಖಗಳನ್ನೂ ಪರಿಹರಿಸಿಕೊಂಡು ಸಮಸ್ತ ಅಭಿಷ್ಟ ಸನ್ಮಂಗಳಗಳನ್ನೂ ಪಡೆದಿದ್ದಾರೆ, ಪಡೆಯುತ್ತಿದ್ದಾರೆ! ಈ ಸ್ತೋತ್ರದ ಪ್ರತಿಯೊಂದು ಅಕ್ಷರವಾ ಬೀಜಾಕ್ಷರ-ಅಮೃತಾಕ್ಷರಗಳಾಗಿದ್ದು, ಮಹತ್ವಪೂರ್ಣವೂ ಅಗಾಧಶಕ್ತಿಸಂಪನ್ನವೂ ಆಗಿವೆ. ಭಕ್ತರು ಇಚ್ಛಿಸುವ ಚತುರ್ವಿಧ ಪುರುಷಾರ್ಥ ಅಭೀಷ್ಟಗಳನ್ನು ಪೂರೈಸಲು ಸಮರ್ಥವಾಗಿದೆ! ಸಾಕ್ಷಾತ್ ಶ್ರೀಗುರುರಾಜರೇ ಸಾಕ್ಷೀಹಯಾಸ್ಕೋ ಗ್ರಹಿ” ಎಂದು ಈ ಸ್ತೋತ್ರಕ್ಕೆ ತಮ್ಮ ಸಮ್ಮತಿಯ ಅಮರ ಮುದ್ರೆಯನ್ನೊತ್ತಿರು 

ವುದರಿಂದಲೇ ಈ ಸ್ತೋತ್ರವು ಇಷ್ಟೊಂದು ಮಹತ್ವಯುಕ್ತವಾಗಿ, ಜನಪ್ರಿಯವಾಗಿ ರಾಜಿಸುತ್ತಿದೆ! ಇಂತಹ ಅಪೂರ್ವ, ಮಂಗಳಕರ ಸ್ತೋತ್ರವನ್ನು ರಚಿಸಿ, ತನ್ಮೂಲಕ ಶ್ರೀರಾಘವೇಂದ್ರರ ಮೇಲಿನ ವಾಯಭಂಡಾರವು ಅಪಾರವಾಗಿ ಬೆಳೆಯಲು, ಇನ್ನೂ ಬೆಳೆಯುತ್ತಲೇ ಇರಲು ಕಾರಣರಾಗಿ ಭಾರತದ ಭಕ್ತವೃಂದಕ್ಕೆ ಆಗಾಧ ಉಪಕಾರವನ್ನು ಮಾಡಿದ ಶ್ರೀಅಪ್ಪಣಾಚಾರ್ಯರನ್ನು ಭಕ್ತಜನತೆಯು ಎಂದೆಂದಿಗೂ ಮರೆಯುವಂತಿಲ್ಲ !