Prahlada's Virtuous Character

|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ - ಕಲ್ಪತರು

ಎರಡನೆಯ ಉಲ್ಲಾಸ ಶ್ರೀಹರಿಭಕ್ತಾಗ್ರಣಿ ಶ್ರೀಪ್ರಹ್ಲಾದರಾಜರು

ರಚಿಸಿದವರು ರಾಜಾ, ಎಸ್. ಗುರುರಾಜಾಚಾರ್ಯರು

೮. ಪ್ರಹ್ಲಾದರಾಜರ ಸದ್ಗುಣಪೂರ್ಣ ವ್ಯಕ್ತಿತ್ವ

ನಾರದ ಮಹರ್ಷಿಗಳ ಆಶ್ರಮದಿಂದ ಬಂದಮೇಲೆ ಬಾಲಪ್ರಹ್ಲಾದರ ನಡವಳಿಕೆಯಲ್ಲಿ ಒಂದು ರೀತಿಯ ಮಾರ್ಪಾಟಾಗಹತ್ತಿತು. ಅವರು ನಾರದರ ಉಪದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡು ಓರ್ವ ಭಾಗವತೋತ್ತಮ-ಮಹಾತ್ಮನಲ್ಲಿರಬೇಕಾದ ಸದ್ಗುಣವಿರಾಜಿತರಾಗಿ ಐದು ವರ್ಷ ವಯಸ್ಕರಾಗಿದ್ದಾಗಲೇ ಆಚರಣೆಗೆ ತಂದು ವಿಶಿಷ್ಟ ರೀತಿಯಿಂದ ತಮ್ಮತನವನ್ನು ರೂಪಿಸಿಕೊಳ್ಳಲಾರಂಭಿಸಿದರು.

ಪ್ರಹ್ಲಾದರಾಜರ ಯೋಗ್ಯತೆ ಬಹುದೊಡ್ಡದು. ಭಗವದ್ಭಕ್ತರಲ್ಲಿ ಅವರು ಅಗ್ರಗಣ್ಯರು. ಅವರ ಹರಿಭಕ್ತಿಗೆ ಯಾವಾಗಲೂ ಕುಂದಿರಲಿಲ್ಲ. ಅವರ ಹರಿಭಕ್ತಿಯು ಶಾಶ್ವತವೂ, ನಿತ್ಯವೂ ಆಗಿತ್ತು. ಅವರು ಮಾತೃಗರ್ಭದಲ್ಲಿದ್ದಾಗಲಿಂದಲೂ ಹರಿಭಕ್ತರು, ಜನ್ಮ ವೈಷ್ಣವರು. ತಂದೆಯಾದ ಹಿರಣ್ಯಕಶ್ಯಪನ ಬಾಯಿಂದ 'ನಾರಾಯಣ' ನಾಮೋಚ್ಚರಣವಾಗುತ್ತಿದ್ದಾಗಲೇ ಪ್ರಹ್ಲಾದರು ಮಾತೃಗರ್ಭವನ್ನು ಸೇರಿದರಾದ್ದರಿಂದಲೇ ಅವರು ಆಜನ್ಮ ವೈಷ್ಣವ'ರಾದರು. ಅವರ ಜೀವನವು ಪ್ರಾರಂಭದಿಂದ ಕೊನೆಯವರೆಗೂ ಶ್ರೀಹರಿಭಕ್ತಿಯಿಂದ ಸುಸಂಸ ತವಾದುದು. ಅವರ ಬದುಕು ಪರಮಪವಿತ್ರ, ಪ್ರಹ್ಲಾದರ ದೇಹದಲ್ಲಿನ ರಕ್ತಧಮನಿಗಳಲ್ಲಿ ಶ್ರೀಹರಿಭಕ್ತಿಯೇ ಓತಪ್ರೋತವಾಗಿ ಹರಿಯುತ್ತಿತ್ತು, ಅದು ಅಸ್ಥಿಗತವಾಗಿತ್ತು. ಅಚ್ಯುತನ ರತಿ, ಭಗವಂತನ ನಾಮಮಂತ್ರವೇ ಅವರ ಉಸಿರಾಗಿತ್ತು, ಅವರ ಪ್ರತಿಯೊಂದು ನಡೆ, ನುಡಿ, ಚಿಂತನ ಎಲ್ಲವೂ ಪರಮಾತ್ಮನ ಸಂಬಂಧಿಯಾಗಿತ್ತು. ಪ್ರಹ್ಲಾದರು ಅಜಾತಶತ್ರುಗಳು, ಶಮದಮಾದಿ ಸಂಪದ್ಭರಿತರು, ಉತ್ತಮ ಜೀವಿಗಳು, ಸುಶೀಲರು, ಸತ್ಯಂಧರು, ಜಿತೇಂದ್ರಿಯರು, ಸದಾ ಪರಮಾತ್ಮನಲ್ಲೇ ಮನಸ್ಸುಳ್ಳವರು.19 ಈ ಒಂದೊಂದು ವಿಶೇಷಣವೂ ಅವರಲ್ಲಿ ಸಾರ್ಥಕವಾಗಿತ್ತು. ಹೀಗೆ ಅವರ ಜೀವನಚರಿತ್ರೆಗಳು ವೈಶಿಷ್ಟ್ಯಪೂರ್ಣವಾದವು.

ಬಾಲಕರಾದ ಪ್ರಹ್ಲಾದರ ಏಕೈಕ ಕಾರ್ಯವೆಂದರೆ ಭಗವಂತನ ಧ್ಯಾನ. ಅವರಿಗೆ ಊಟ, ತಿಂಡಿ, ನಿದ್ರೆ ಯಾವುದೂ ಬೇಡ. ಅಚ್ಯುತನ ಅನುರಾಗವೇ ಅವರ ಜೀವನದ ಇತಿ-ಮಿತಿ. ಸರ್ವದಾ ಪರಮಾತ್ಮ ಸಮಾಹಿತರಾಗಿದ್ದ ಅವರಿಗೆ ಆಟ-ಪಾಠಗಳಲ್ಲಿ ಎಂದೂ ಪ್ರವೃತ್ತಿಯುಂಟಾಗುತ್ತಿರಲಿಲ್ಲ. ಪ್ರಹ್ಲಾದರು ಪರಮಾತ್ಮನ ಗುಣಗಳನ್ನು ಅನುಸಂಧಾನ ಮಾಡಿಕೊಂಡು ತಮ್ಮಷ್ಟಕ್ಕೆ ತಾವೇ ಅಳುವರು, ಒಮ್ಮೆ ನಗುವರು, ಮತ್ತೊಮ್ಮೆ ನಾಟ್ಯವಾಡುವರು. ಅವರು 'ಕೃಷ್ಣಗ್ರಹಗೃಹೀತಾತ್ಮರಾಗಿದ್ದರು. ಅವರಿಗೆ ಸದಾ ದೇವರ ಹುಚ್ಚು ಹಿಡಿದುಹೋಗಿದ್ದಿತು. ದೇವರ ಕೊರಗು ಚೆನ್ನಾಗಿ ಹತ್ತಿದ್ದ ಅವರು ಹುಟ್ಟಿನಿಂದಲೇ ಪರಮಭಾಗವತರಾಗಿದ್ದರು.

ಜಗತ್ತಿನ ಜೀವರಾಶಿಯನ್ನು ಎರಡು ಗುಂಪಾಗಿ ಭಾಗಿಸಬಹುದು - ದೇವ ಮತ್ತು ಅಸುರ ಎಂದು. ಶ್ರೀಹರಿಭಕ್ತಿಪರಾಯಣರು, ದೇವಗಣದವರು, ಅದಿಲ್ಲದವರೇ ಅಸುರರ ಗುಂಪು. ಇದು ಶಾಸ್ತ್ರಸಮ್ಮತವೂ ಆಗಿದೆ. ಜಗತ್ತಿನ ಅತಿಮುಖ್ಯ ಮಂತ್ರವೇ ಶ್ರೀವಿಷ್ಣುಭಕ್ತಿ, ಅದಿಲ್ಲದೇ ಉಳಿದೆಲ್ಲವೂ ವ್ಯರ್ಥ. ಎಲ್ಲ ವ್ಯವಹಾರಗಳಿಗೂ ಅಳತೆಗೋಲು, ವಿಷ್ಣುಭಕ್ತಿರಹಿತವಾದ ಯಾವುದೂ ಧರ್ಮವಾಗಲಾರದು. ಭಕ್ತಿಸಹಕೃತವಾದುದೆಲ್ಲವೂ ಧರ್ಮವೇ ! ಈ ಒಂದು ಮಾನದಂಡದಿಂದ ಅಳೆದು ವಿಚಾರಮಾಡಿದಾಗ ಪ್ರಹ್ಲಾದರಾಜರ ಯೋಗ್ಯತೆಯು ವ್ಯಕ್ತವಾಗುವುದು. ಅವರ ಸ್ಥಾನ ಅದೆಷ್ಟು ಶ್ರೇಷ್ಠವೆಂಬುದು ಸ್ಪಷ್ಟವಾಗುವುದು.

ಹಿರಣ್ಯಕಶ್ಯಪನಿಗೆ ಪ್ರಹ್ಲಾದ, ಸಹ್ಲಾದ, ಅನುಹ್ಲಾದ, ಹ್ಲಾದ ಎಂದು ನಾಲ್ವರು ಪುತ್ರರು. ಅವರಲ್ಲಿ ಬಾಲಕ ಪ್ರಹ್ಲಾದ ಶ್ರೀಮನ್ನಾರಾಯಣೋಪಾಸಕನು. ಅವನು ಸದಾಚಾರ ಸಂಪನ್ನನೂ, ಬ್ರಾಹ್ಮಣಪ್ರಿಯನೂ, ಜಿತೇಂದ್ರಿಯನೂ, ಸತ್ಯಪ್ರಜ್ಞನೂ ಆಗಿದ್ದನು. ಅವನು ಪರಮಾತ್ಮನಂತೆ (ಕಿಂಚಿತ್ಸಾಮ್ಯ) ಭೂತದಯೆಯುಳ್ಳವನೂ ಸಮಸ್ತ ಪ್ರಾಣಿಗಳಲ್ಲಿ ವಾತ್ಸಲ್ಯಪೂರ್ಣನೂ ಆಗಿದ್ದನು. ಹಿರಿಯರಲ್ಲಿ ದಾಸನಂತೆ, ದೀನರಲ್ಲಿ ತಂದೆಯಂತೆ, ಸಮಾನರಲ್ಲಿ ಅಣ್ಣ-ತಮ್ಮಂದಿರಂತೆಯೂ ಗುರುಗಳಲ್ಲಿ ಪಾಜ್ಯಭಾವನೆಯುಳ್ಳವನೂ ಆಗಿ, ತನ್ನ ಲೋಕವೃತ್ತಿಯನ್ನು ಆಚರಿಸುತ್ತಿದ್ದನು. ವಿದ್ಯಾಧನ, ರೂಪ, ಸಂಪತ್ತು, ಸತ್ಕುಲ ಪ್ರಸೂತಿ (ರಾಜವಂಶದಲ್ಲಿ ಜನ್ಮ) ಇವೆಲ್ಲ ತನಗಿದೆಯೆಂದು ಎಂದೂ ಗರ್ವಿಸದೆ ವಿಪತ್ಕಾಲದಲ್ಲಿಯೂ ಹರಿಪಿಸ್ಮರಣೆ ಇಲ್ಲದೆ ಶಾಂತಚಿತ್ತನಾಗಿದ್ದು ಕಂಡು ಕೇಳಿದ ವಿಷಯಗಳಲ್ಲಿ ಅಸಾರಬುದ್ಧಿಯುಳ್ಳವನಾಗಿ ಇಂದ್ರಿಯ, ಪ್ರಾಣ, ಮನಸ್ಸುಗಳನ್ನು ನಿಗ್ರಹಿಸಿ ವಿಷಯವಾಸನಾರಹಿತನಾಗಿ, ಮಹಾವಿರಕ್ತನಾಗಿದ್ದನು. ಅಸುರವಂಶದಲ್ಲಿ ಜನಿಸಿದ್ದರೂ ಅಸುರಕರ್ಮಾಚರಣೆ ಅವನಲ್ಲಿರಲಿಲ್ಲ. ಅವನು ದೇವಸ್ಥಭಾವನಾಗಿದ್ದನು. ಶ್ರೀಹರಿಯ ಗುಣಗಳಂತೆ ಅವನಲ್ಲಿದ್ದ ಉತ್ತಮ ಗುಣಗಳನ್ನು ಸಂಪೂರ್ಣವಾಗಿ ಹೇಳಲು ಸಾಧ್ಯವಿಲ್ಲ.* ದೈತ್ಯರಿಗೆ ಸ್ವಾಭಾವಿಕ ಶತ್ರುಗಳಾದ ದೇವತೆಗಳೂ ಸಹ ಸಜ್ಜನರ ವಿಷಯವನ್ನು ಹೇಳುವಾಗ ಪ್ರಹ್ಲಾದನನ್ನೇ ದೃಷ್ಟಾಂತವಾಗಿ ಹೇಳುವರೆಂದಮೇಲೆ ಇನ್ನು ಪ್ರಹ್ಲಾದನ ಗುಣಗಳ ಬಗ್ಗೆ ಹೆಚ್ಚು ವಿವರಣೆ ಬೇಕಾಗಲ್ಲವಷ್ಟೇ ! ಹೆಚ್ಚು ಹೇಳುವುದೇನಿದೆ? ಪ್ರಹ್ಲಾದರಾಜನ ಒಂದೊಂದು ಗುಣವೂ ಅವನ ಮಹಾತ್ಮ ಸೂಚಕವಾಗಿದೆ!!

ಪ್ರಹ್ಲಾದನು ಸರ್ವವ್ಯಾಪ್ತನಾದ, ಸರ್ವಗುಣಪೂರ್ಣನಾದ ಶ್ರೀಮನ್ನಾರಾಯಣನಲ್ಲಿ ಸ್ವಾಭಾವಿಕವೂ, ನಿರ್ನಿಮಿತ್ತವೂ ಆದ ಭಕ್ತಿಯುಳ್ಳವನು. ಐದು ವರ್ಷದ ಬಾಲಕನಾಗಿದ್ದರೂ ಅವನು ಬಾಲಕರಿಗೆ ಸ್ವಾಭಾವಿಕವಾದ ಆಟ-ಪಾಠಾದಿಗಳಲ್ಲಿ ಮಗ್ನನಾಗದೆ ಅವಧೂತ ಶಿಖಾಮಣಿಯಾದ ಜಡಭರತನಂತೆ, ಸದಾ ಶ್ರೀಹರಿಧ್ಯಾನಪರನಾಗಿದ್ದನು. ಹಿಂದೆ ನಿರೂಪಿಸಿದಂತೆ ಕೃಷ್ಣನೆಂಬ ಗ್ರಹ (ಪಿಶಾಚ)ದಿಂದ ಗ್ರಸ್ತಮನಸ್ಕನಾಗಿದ್ದು ಅವನಿಗೆ ಹೊರಜಗತ್ತಿನ ಪರಿವೇ ಇರಲಿಲ್ಲ. ಕುಳಿತಾಗ, ಓಡಾಡುವಾಗ, ಊಟ ಮಾಡುವಾಗ, ನೀರು ಕುಡಿಯುವಾಗ, ಮಾತನಾಡುವಾಗ ಅವನು ಆ ವ್ಯಾಪಾರಗಳಲ್ಲಿ ಗಮನವೀಯದ ಶ್ರೀನಾರಾಯಣನ ಸಾಕ್ಷಾತ್ಕಾರವನ್ನು ಮಾತ್ರ ಅನುಸಂಧಾನಕ್ಕೆ ತಂದುಕೊಳ್ಳುತ್ತಿದ್ದನು. ಆ ಸಾಕ್ಷಾತ್ಕಾರದಲ್ಲಿ ಒಮ್ಮೊಮ್ಮೆ ಚಂಚಲಚಿತ್ತನಾದಾಗ ಅಳುವನು, ಗಟ್ಟಿಯಾಗಿ ಶ್ರೀಹರಿಯ ಗುಣಗಳನ್ನು ಗಾನ ಮಾಡುವನು, ಗೋವಿಂದನ ಧ್ಯಾನರತನಾದಾಗ ನಗುವನು, ಲಜ್ಜೆಯನ್ನು ತೊರೆದು ನರ್ತಿಸುವನು. ಶ್ರೀಹರಿಧ್ಯಾನಮಗ್ನನಾಗಿ ಹರಿಸರ್ವೋತ್ತಮತ್ವಜ್ಞಾನಯುಕ್ತನಾಗಿ ಶ್ರೀಹರಿಯಂತೆ ಚೇಷ್ಟೆಗಳನ್ನೆಸಗುತ್ತಾ ಅಚ್ಛಿನ್ನಭಕ್ತಿಯುಳ್ಳವನಾಗಿ, ವಿಷಯವಿರಕ್ತನಾಗಿ ಶ್ರೀಹರಿಯ ಗುಣಗಾನ ಮಾಡುತ್ತಾ ಪುಳಕಿತಗಾತ್ರನಾಗಿ ಕಣ್ಣುಗಳಿಂದ ಆನಂದಾಶ್ರು ಹರಿಸುತ್ತ ಶ್ರೀಹರಿಮನಸ್ಕನಾಗಿ ಶ್ರೀನಾರದಾದಿ ಸತ್ತೇವೆಯಿಂದ ದೊರಕಿದ ಜ್ಞಾನದಿಂದ ಶ್ರೀಹರಿಯಲ್ಲಿ ದೃಢಭಕ್ತಿಯುಳ್ಳವನಾಗಿ ಪ್ರಶಾಂತಮನಸ್ಕನಾಗಿದ್ದನು. ಮಹಾನುಭಾವನಾದ ಪ್ರಹ್ಲಾದನ ಗುಣಗಳನ್ನು ಎಷ್ಟು ವರ್ಣಿಸಿದರೂ ಸ್ವಲ್ಪವೇ ಸರಿ.