
ಕಲಿಯುಗ - ಕಲ್ಪತರು
ಎರಡನೆಯ ಉಲ್ಲಾಸ ಶ್ರೀಹರಿಭಕ್ತಾಗ್ರಣಿ ಶ್ರೀಪ್ರಹ್ಲಾದರಾಜರು
ರಚಿಸಿದವರು ರಾಜಾ, ಎಸ್. ಗುರುರಾಜಾಚಾರ್ಯರು
೧೬. ಪ್ರಹ್ಲಾದನ ಅಚಲ ನಿರ್ಧಾರ!
ದೈತ್ಯಸಾಮ್ರಾಟನು ತನ್ನ ಗುರುಗಳಾದ ಶುಕ್ರಾಚಾರ್ಯರು ಉಪದೇಶಿಸಿದಂತೆ ಮಾಡಲು ನಿರ್ಧರಿಸಿ ಸಿಂಹಾಸನದಲ್ಲಿ ಅಲಂಕೃತನಾಗಿದ್ದಾನೆ. ಸಭೆಯಲ್ಲಿ ದೈತ್ಯವೀರರು ತಮತಮಗೆ ವಿಹಿತವಾದ ಆಸನಗಳಲ್ಲಿ ಕುಳಿತಿದ್ದಾರೆ.
ದೈತ್ಯರಾಜನ ಅಪ್ಪಣೆಯಂತೆ ಕರಾಳ-ದುರ್ಮುಖರು ಪ್ರಹ್ಲಾದಕುಮಾರನನ್ನು ಸಭೆಗೆ ಕರೆದುತಂದರು, ಪ್ರಹ್ಲಾದನು ೦ ಚಿಂತೆಯೂ ಇಲ್ಲದೆ, ನಿರ್ಭಯನಾಗಿ ಮಂದಹಾಸ ಬೀರುತ್ತಾ ಬಂದು ತಂದೆಯ ಮುಂದೆ ನಿಂತು “ಜನಕ! ನಮಸ್ಕರಿಸುವೆನು' ಎಂದು ಅಭಿವಂದಿಸಿದನು.
ಹಿರಣ್ಯಕಶ್ಯಪನು ಅಸಮಾಧಾನವನ್ನು ನುಂಗಿಕೊಂಡು ಹುಸಿನಗೆ ಬೀರುತ್ತಾ “ಕುಮಾರ! ನಾನು ಹೇಳಿದ ವಿಚಾರವನ್ನು
ಯೋಚಿಸಿದೆಯಾ ? ನಿನ್ನ ಹಟವನ್ನು ತ್ಯಜಿಸಿ ನಿನ್ನ ಪಿತನನ್ನು ಸಂತೋಷಪಡಿಸಲಾರೆಯಾ?” ಎಂದನು.
ಪ್ರಹ್ಲಾದ : ಜನಕ! ನಾನೊಬ್ಬ ಬಾಲಕ, ತಮ್ಮ ವಿಚಾರ ಪರಂಪರೆಯನ್ನು ಅರಿಯುವಷ್ಟು ಯೋಗ್ಯತೆ ನನಗೆಲ್ಲಿ?
ಆದರೂ ತಂದೆಯೇ ನಾನೆಂದಿಗೂ ನಿಮಗೆ ಅಹಿತವನ್ನೆಸಗಿಲ್ಲವೆಂದು ನನ್ನ ಅಂತರಾತ್ಮ ಹೇಳುತ್ತಿದೆ.
ಹಿರಣ್ಯಕಶ್ಯಪು : ಹಾಗಾದರೆ.....ನಿನ್ನ ನಿರ್ಧಾರವೇನು ? ನಿನ್ನ ಮುಂದಿನ ಗುರಿಯೇನು!
ಪ್ರಹ್ಲಾದ : ಅಪ್ಪಾ, ಜಗತ್ತಿನಲ್ಲಿ ಪರಮಾತ್ಮನಿಗಿಂತ ಪ್ರಿಯವಾದ ವಸ್ತು ಬೇರೊಂದಿಲ್ಲ! ಆ ಸರ್ವೇಶನ ಪೂಜನ ಭಜನ, ಸ್ಮರಣೆ ಇವೇ ನನ್ನ ಗುರಿ! ಆ ಪರಾತ್ಪರನನ್ನು ಒಲಿಸಿಕೊಳ್ಳಬೇಕೆಂಬುದೇ ನನ್ನ ನಿರ್ಧಾರ!!
ಹಿರಣ್ಯಕಶ್ಯಪು : (ಕುಪಿತನಾಗಿ) ಆ ಮಾಯಾವಿಯ ಜಪವನ್ನೇ ಮಾಡುತ್ತಿರುವೆನೆನ್ನುವೆಯಾ?
ಪ್ರಹ್ಲಾದ : (ನಮ್ರನಾಗಿ) ನಿಜ, ತಂದೆಯೇ, ಆ ಮಾಯಾಪತಿಯೇ ಎಲ್ಲರಗಿಂತಧಿಕನು! “ಅಣೋರಣೀಯಾ ಮಹತೋ ಮಹೀಯಾನ್”, “ಏಕೋ ನಾರಾಯಣ ಅಸೀನ್ನ ಬ್ರಹ್ಮಾನ ಚ ಶಂಕರಃ”, “ನಾರಾಯಣಾದೇವ ಸಮುತ್ಪದಂತೆ, ನಾರಾಯಣಾತ್ಪವರ್ಧಂತೇ ನಾರಾಯಣೇ ಪ್ರಲೀಯಂತೇ”, ಇತ್ಯಾದಿ ಶ್ರುತಿಗಳು ಶ್ರೀಹರಿಯ ಪರಮಾದ್ಭುತ ಶಕ್ತಿಯನ್ನು ಹೊಗಳುವುವು! ಅವನನ್ನು ಆರಾಧಿಸಿ ಒಲಿಸಿಕೊಂಡು ಶ್ರೇಯೋವಂತರಾಗಬೇಕೆಂಬುದೇ ವೇದಾದಿಶಾಸ್ತ್ರಗಳ ಉಪದೇಶ. ತಂದೆಯೇ, ನೀನು ಆ ಪರಮಾತ್ಮನನ್ನು ಭಜಿಸಿ ಉದ್ಘತನಾಗು!
ಹಿರಣ್ಯಕಶ್ಯಪು : (ಕ್ಷುದ್ರನಾಗಿ) ಹಾಗಾದರೆ ನಿನ್ನ ಕೊನೆಯ ನಿರ್ಧಾರವೇನು ?
ಪ್ರಹ್ಲಾದ : ತಂದೆಯೇ! ಶ್ರೀಹರಿಯೇ ಸರ್ವೋತ್ತಮ ದೇವತೆ! ಅವನಿಂದಲೇ ಸೃಷ್ಟಿ - ಸ್ಥಿತಿ - ಸಂಹಾರಾದಿ ಕಾರ್ಯಗಳು ಜರುಗುವುವು. ಅವನೇ ಸರ್ವಜೀವರಕ್ಷಕ! ಅವನಿಗೆ ಶರಣಾಗತನಾಗಿದ್ದೇನೆ. ಸರ್ವದಾ ಅವನನ್ನು ಆರಾಧಿಸಿ, ಭಕ್ತಿಯಿಂದ ಧ್ಯಾನಿಸಿ ಅವನ ಅನುಗ್ರಹಕ್ಕೆ ಪಾತ್ರನಾಗುವುದೇ ನನ್ನ ಗುರಿ, ನನ್ನೀ ನಿರ್ಧಾರ ಅಚಲ!!