
ಕಲಿಯುಗ - ಕಲ್ಪತರು
ಎರಡನೆಯ ಉಲ್ಲಾಸ ಶ್ರೀಹರಿಭಕ್ತಾಗ್ರಣಿ ಶ್ರೀಪ್ರಹ್ಲಾದರಾಜರು
ರಚಿಸಿದವರು ರಾಜಾ, ಎಸ್. ಗುರುರಾಜಾಚಾರ್ಯರು
೭. ನಾರದರ ಉಪದೇಶ ಸಫಲವಾಯಿತು!
ನಾರದ ಮಹರ್ಷಿಗಳ ಆಶ್ರಮದಲ್ಲಿ ವಿಶೇಷ ಸಂಭ್ರಮ. ತಳಿರುತೋರಣಗಳಿಂದ ಧ್ವಜಪತಾಕೆಗಳಿಂದ ರಂಭಾಸ್ತಂಭಗಳಿಂದ ಆಶ್ರಮವು ಅಲಂಕೃತವಾಗಿದೆ.
ನಾರದರ ಆಶ್ರಮದಲ್ಲಿ ಪ್ರಹ್ಲಾದರಾಜನ ಐದನೇ ವರ್ಷದ ವರ್ಧಂತೀ ಪ್ರಯುಕ್ತ ಅನೇಕ ಋಷಿಮುನಿಗಳು ಸೇರಿದ್ದಾರೆ. ಅದೇ ಸಮಯದಲ್ಲಿ ಕಯಾಧುರಾಣಿಯೂ, ನಾರದರೂ, ನಾರದರ ಕೈಹಿಡಿದುಕೊಂಡು ಸರ್ವಾಭರಣಗಳಿಂದ ಅಲಂಕೃತನಾದ ಸುಂದರಬಾಲಕ ಪ್ರಹ್ಲಾದನೂ ಬಂದರು. ನಾರದರು “ಪುತ್ರಿ! ಕಯಾಧು, ವೇದಿಕೆಯ ಮೇಲೆ ಕುಳಿತು ಪೂಜೆಗೆ ಸಿದ್ಧಳಾಗು. ಕುಮಾರ ಪ್ರಹ್ಲಾದನ ವರ್ಧಂತ್ಯುತ್ಸವವನ್ನು ಪರಮಾತ್ಮನ ಪೂಜೆಯಿಂದಲೇ ಆರಂಭಿಸೋಣ. ಕುಮಾರನ ಶ್ರೇಯಸ್ಸಿಗೋಸ್ಕರ ಭಗವಂತನನ್ನು ಪ್ರಾರ್ಥಿಸು, ಕುಮಾರ, ಪ್ರಹ್ಲಾದ! ಎಲ್ಲಿ ನನ್ನ “ಮಹತಿಯನ್ನಿತ್ತ ಕೊಡು” ಎಂದು, ಪ್ರಹ್ಲಾದನು ತಂದಿತ್ತ ಮಹತೀ ಎಂಬ ವೀಣೆಯನ್ನು ಸ್ವೀಕರಿಸಿ ಪ್ರೀತಿಯಿಂದ ಪ್ರಹ್ಲಾದನ ಶಿರದ ಮೇಲೆ ಕರವಿರಿಸಿ “ಮಗು! ಇಲ್ಲಿ ಬಾ, ಈ ಆಸನದಲ್ಲಿ ಕುಳಿತುಕೋ. ಹೂಂ, ನಾನೀಗ ಭಗವಂತನನ್ನು ಆಹ್ವಾನಿಸುವೆನು” ಎಂದು ಹೇಳಿ ವೀಣೆಯನ್ನು ನುಡಿಸುತ್ತಾ ಹಾಡಲಾರಂಭಿಸಿದರು.
ರಾಗ : ಭೂಪ
ತಾಳ : ಆದಿ
ಕರುಣಾಕರ ರಂಗ ಬಾ ದೇವ |
ಚರಣಸೇವಕನ ಮೊರೆಯನು ಕೇಳಿ ನೀ
ವರವೈಕುಂಠದಿಂ ಭಕುತರ ಸೇವೆಯ | ಪ |
ಹರುಷದಿ ಕೈಗೊಳಲೆಂದೀ ಸಮಯದಿ || ಅ.ಪ. ||
ಎಲ್ಲರೂ ಆನಂದದಿಂದ ನಾರದರ ಗಾನಾಮೃತಪಾನ ಮಗ್ನರಾಗಿರಲು ಇದ್ದಕ್ಕಿದ್ದಂತೆ ವೇದಿಕೆಯ ಮೇಲಿದ್ದ ಮಂಟಪದಲ್ಲಿ ಮಿಂಚೊಂದು ಮಿನುಗಿದಂತಾಗಿ ದಿವ್ಯಪ್ರಕಾಶವುಂಟಾಗಿ ಶ್ರೀನಾರಾಯಣನ ಮೂರ್ತಿಯು ಅಲೌಕಿಕ ತೇಜಸ್ಸಿನಿಂದ ಕಂಗೊಳಿಸಿತು. ಅದನ್ನು ಕಂಡು ಆಶ್ರಮವಾಸಿಗಳೆಲ್ಲರೂ “ಜಯ ನಾರಾಯಣ! ಜಯ ಜಯ ಮಾಧವ” ಎಂದು ಹರ್ಷಧ್ವನಿಗೈಯುತ್ತಾ ಎದ್ದು ನಿಂತರು. ಕಯಾಧು, ನಾರದರು ಸಂಭ್ರಮದಿಂದ ಮೇಲೆದ್ದು ಕರಜೋಡಿಸಿ ನಿಂತರು, ನಾರದರು ಆನಂದದಿಂದ ಮತ್ತೆ ಗಾನಮಾಡಹತ್ತಿದರು.
ಮಂದಸ್ಮಿತವದನಾರವಿಂದ ಅಪ್ರಾಕೃತಗುಣಸಾಂದ್ರ |
ಮಂದರಗಿರಿಧರ ನಂದಕಂದ ಗೋವಿಂದ ಸದಾನಂದ ||
ಇಂದು ನಮ್ಮ ಅಘನಂದನ ಕಳೆದಾನಂದನ ತಂದೀಯೋ |
ತಂದೆ! ಕಂದ ಪ್ರಹ್ಲಾದನ ಪೊರೆ ನಿನಗೊಂದಿಪೆ ಶ್ರೀರಮಣ || cha ||
ನಾರದರು ಭಕ್ತಿಪರವಶರಾಗಿ ಹಾಡುತ್ತಿರಲು ಭಗವಂತನ ಮೂರ್ತಿಯು ಮಂದಹಾಸ ಬೀರಿ ಅಭಯ ನೀಡುತ್ತಿರುವಂತೆ ಭಾಸವಾಗಲು ನಾರದರು ಭರುದ್ರೇಕದಿಂದ ಪ್ರಾರ್ಥಿಸಹತ್ತಿದರು.
“ದೇವ! ದಯಾಮಯ, ಭಕ್ತನ ನುಡಿ ಕೇಳಿ ಮೂರ್ತಿಯಲ್ಲಿ ಮೈದೋರಿದೆಯಾ? ಸ್ವಾಮಿ, ಭಕ್ತರಲ್ಲಿ ನಿನಗೆಷ್ಟು ಮಮತೆ! ನಮಗಾಗಿ ಧಾವಿಸಿ ಬಂದ ನಿನ್ನ ಕಮಲದಂತೆ ಮೃದುವಾದ ಪಾದಗಳೆಷ್ಟು ನೊಂದವೋ ದೇವ! ಕ್ಷಮಿಸು ತಂದೆ” ಎಂದು ಶ್ರೀಹರಿಯ ಮೂರ್ತಿಯನ್ನು ಸ್ಪರ್ಶಿಸಿ ನಮಸ್ಕರಿಸಿದರು.
ಆಗ ಧೀರಗಂಭೀರ ಧ್ವನಿಯೊಂದು ಕೇಳಿಬಂದಿತು. “ನಾರದ! ನಾನು ವೈಕುಂಠದಲ್ಲಿ ಮಾತ್ರ ಇರುವೆನೇ ? ಇಲ್ಲಿಲ್ಲವೇನು ??
ಭಗವಂತನ ವಾಣಿಯನ್ನಾಲಿಸಿ ಸರ್ವರ ಮೈಪುಳಕಿಸಿತು. “ಜಯ ಜಯ ಲಕ್ಷ್ಮೀಶ' ಎಂದು ಎಲ್ಲರೂ ಸಾಷ್ಟಾಂಗವೆರಗಿದರು. ಪ್ರಹ್ಲಾದಕುಮಾರನು ತದೇಕದೃಷ್ಟಿಯಿಂದ ಭಗವನ್ಮೂರ್ತಿಯನ್ನು ನೋಡಿ ಭಾತಿಶಯದಿಂದ ಕಣ್ಣಿನಿಂದ ಆನಂದಾಶ್ರು ಹರಿಯುತ್ತಿರಲು, ಕರದಲ್ಲಿ ತಾಳಹಿಡಿದು ಮೈಮರೆತು ಹಾಡುತ್ತಾ ನರ್ತಿಸಲಾರಂಭಿಸಿದನು.
ರಾಗ : ಶ್ಯಾಮ
ತಾಳ : ಆದಿ
ಅಲ್ಲಿರುವೆ ಇಲ್ಲಿರುವೆ ಎಲ್ಲೆಲ್ಲಿಯೂ ನೀನಿರುವೆ!
ಪುಲ್ಲನಯನ ನಾರಾಯಣ ವಂದಿಪೆ ಸೊಲ್ಲಿದು ಸಟೆಯಲ್ಲ || ಪ ||
ಆಕಾಶದಿ ನೀನಿರುವೆ! ಸಾಕಾರನೆ ವಾಯ್ದಗ್ರಿಗಳಲ್ಲಿರುವೆ
ನಾಕಮರ್ತ್ಯಪಾತಾಳಸಿಂಧುಗಿರಿ ವನದರಿಯಲ್ಲಿರುವೆ ದೇವ || ಅ.ಪ. ||
ಸಕಲಜೀವ ಸಂಪ್ರೇರಕ ಸರ್ವಾಂತರ್ಗತ ಸರ್ವೇಶ |
ಪ್ರಕಟವಾಗಿ ನಿಜಭಕ್ತನ ಪೊರೆಯಲು ಬಂದೆಯಾ ಶ್ರೀರಮಣ || cha ||
ಬಾಲಪ್ರಹ್ಲಾದನ ತತ್ವಾರ್ಥಗರ್ಭಿತವಾದ ಸ್ತುತಿಯನ್ನು ಎಲ್ಲರೂ ಕೇಳಿ ಅವನ ಭಕ್ಷ್ಯತಿಶಯವನ್ನೂ, ತಾದಾತ್ಮಭಾವವನ್ನೂ ಕಂಡು ಬೆರಗಾದರು. ಆಗ ನಾರದ ಮಹರ್ಷಿಗಳಿಗಾದ ಸಂತೋಷ ಅವರ್ಣನೀಯ ಪ್ರಹ್ಲಾದನಲ್ಲಿ ತಾವು ಬಿತ್ತಿದ್ದ ಹರಿಭಕ್ತಿಯ ಬೀಜವು ಐದು ವರ್ಷಗಳಲ್ಲೇ ಹೆಮ್ಮರವಾಗಿ ಫಲಭರಿತವಾದುದನ್ನು ನೋಡಿ ತಮ್ಮ ಶ್ರಮ ಸಾರ್ಥಕವಾಯಿತೆಂದು ಮುದಗೊಂಡರು.
ಆದ ಬಾಲಪ್ರಹ್ಲಾದನು ಭಗವನ್ನೂರ್ತಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, “ಪರಾತರ, ವಾಸುದೇವ ಜಗದೀಶ್ವರ, ನಿನ್ನಿ ಪವಿತ್ರಮೂರ್ತಿಯಲ್ಲಿ ನಿನ್ನನ್ನು ಕಾಣುತ್ತಿರುವೆನು! ನಿನ್ನ ದರ್ಶನದಿಂದ ಧನ್ಯನಾದೆ, ತಂದೆಯೇ, ನನ್ನ ಅಜ್ಜ ನಾರದರು ನಿನ್ನ ಜಗಮ್ಮೋಹಕ ರೂಪಲಾವಣ್ಯಗಳನ್ನು ಬಣ್ಣಿಸಿ, ನಿನ್ನ ಅನಂತಗುಣಗಳು, ಅಚಿಂತ್ಯಾದ್ಭುತಶಕ್ತಿ, ಅಪ್ರತಿಹತ ಮಹಿಮಾತಿಶಯಗಳನ್ನೂ ಹೇಳುತ್ತಿದ್ದರು. ಅಹಹ! ನಿಜ, ನನ್ನಜ್ಜನಾರದರು ವರ್ಣಿಸುತ್ತಿದ್ದ ನಿನ್ನ ದಿವ್ಯಮಂಗಳರೂಪವನ್ನಿಂದು ಕಂಡೆ! ಸತ್ಯಾಶ್ರಯ! ನಿನ್ನ ಭುವನ ಸುಂದರ ರೂಪವು ನನ್ನ ಹೃದಯಕಮಲದಲ್ಲಿನೆಲೆನಿಂತಿದೆ. ಪ್ರಭು, ಭಕ್ತವತ್ಸಲ! ನಿನ್ನ ನಾಮಸ್ಮರಣ ಮಾತ್ರದಿಂದ ನನ್ನ ಮನಸ್ಸು ಉಲ್ಲಾಸಗೊಳ್ಳುತ್ತಿದೆ. ಶರೀರವು ರೋಮಾಂಚನಗೊಳ್ಳುತ್ತಿದೆ. ದೇವ ನಿನ್ನ ರೂಪವನ್ನು ಹೃದಯಗುಹೆಯಲ್ಲಿ ಸೆರೆಹಿಡಿದುಬಿಟ್ಟಿರುವೆನು! ನೀನಿನ್ನು ನನ್ನಿಂದ ತಪ್ಪಿಸಿಕೊಳ್ಳಲಾರೆ! ಸರ್ವದಾ ನನ್ನೊಳಗೆ - ಹೊರಗೆ - ಸುತ್ತಲೂ ಇದ್ದು ಕಾಪಾಡು! ಹೇಳು ದೇವ ನೀನು ಸದಾ ನನ್ನವನಾಗಿದ್ದು ಸಲಹುವೆಯಾ ?” ಎಂದು ಪ್ರಾರ್ಥಿಸಿ ನಮಸ್ಕರಿಸಿದನು.
ಮತ್ತೆ ಅದೇ ಧೀರಗಂಭೀರ ಮಂಜುಳಧ್ವನಿಯು ಕೇಳಿಸಿತು. “ನಾರದ ಎಂತಹ ಸುಂದರ ಬಾಲಕನಿವನು ? ನನ್ನ ಕುಮಾರ ಬ್ರಹ್ಮದೇವ ಇವನನ್ನು ಪ್ರತ್ಯೇಕವಾಗಿ ಮನವಿಟ್ಟು ನಿರ್ಮಿಸಿದಂತಿದೆಯಲ್ಲ! ಬಾಲಕನಾದರೂ ಇವನ ಹೃದಯವೆಷ್ಟು ಮನವಿಟ್ಟು ನಿರ್ಮಿಸಿದಂತಿದೆಯಲ್ಲ! ಬಾಲಕನಾದರೂ ಇವನ ಹೃದಯವೆಷ್ಟು ವಿಶಾಲ, ಇವನ ಮನಸ್ಸು ಎಷ್ಟು ಪರಿಶುದ್ಧ, ಎಷ್ಟು ಪರಿಪಕ್ವವಾಗಿದೆ. ನಿನ್ನ ಶಿಷ್ಯನಲ್ಲವೇ ಇವನು. ಅಂದಮೇಲೆ ಕೇಳುವುದೇನು ? ವತ್ಸ, ಪ್ರಹ್ಲಾದ! ನಿರ್ಮಲ ನಿಷ್ಕಾಮ ಪ್ರೇಮದಿಂದ ನನ್ನನ್ನು ಆರಾಧಿಸಿ, ಭಜಿಸಿದವರನ್ನು ಉದ್ಧರಿಸುವುದೇ ನನ್ನ ಸಂಕಲ್ಪ. ನಿಜ, ಭಕ್ತರಾಜ! ನೀನು ನನ್ನನ್ನು ಸೆರೆಹಿಡಿದುಬಿಟ್ಟಿರುವೆ. ನಿನ್ನ ಭಕ್ತಿಪಾಶದಿಂದ ಬದ್ಧನಾದ ನಾನು ಸರ್ವದಾ ನಿನ್ನೊಡನೆಯೇ ಇರಬೇಕಲ್ಲವೇ ? ಚಿಂತಿಸದಿರು ಕುಮಾರ, ಸದಾ ನಿನ್ನೊಡನಿದ್ದು ನೀನು ಕರೆದಾಗ ಓಡಿಬರುವೆನು! ವತ್ಸ, ನಿನಗೆ ಮಂಗಳವಾಗಲಿ.”
ಅನಂತರ ಮಂಟಪದಲ್ಲಿನ ದಿವ್ಯಪ್ರಕಾಶವೂ, ಪ್ರತಿಮೆಯಲ್ಲಿ ಅಭಿವ್ಯಕ್ತವಾದ ದಿವ್ಯತೇಜಕ್ಕೂ ಮಾಯವಾಗಿ ಮೊದಲಿನಂತೆ ಅಲಂಕೃತ ನಾರಾಯಣಮೂರ್ತಿ ಕಂಗೊಳಿಸಿತು. ಅದನ್ನು ಗಮನಿಸಿದ ಭಕ್ತಜನರು “ಜಯ ಜಯ ಕಮಲಾಕಾಂತ” ಎಂದು ಹರ್ಷಧ್ವನಿಗೈದು ಪ್ರಹ್ಲಾದನನ್ನು ನೋಡಿ “ಬಾಲಭಕ್ತ ಪ್ರಹ್ಲಾದ! ಶ್ರೀಹರಿಯನ್ನು ಒಲಿಸಿಕೊಂಡ ನೀನು ಪುಣ್ಯಶಾಲಿ, ಮಹಾನುಭಾವ” ಎಂದು ಪ್ರಶಂಸಿಸಿದರು.
ನಾರದರು ಆನಂದದಿಂದ ಪ್ರಿಯಶಿಷ್ಯ ಬಾಲಪ್ರಹ್ಲಾದನನ್ನು ಭರದಿಂದ ಬರಸೆಳದಪ್ಪಿ ಧನ್ಯ ಕುಮಾರ! ನನ್ನ ಶ್ರಮವೀಗ ಸಾರ್ಥಕವಾಯಿತು. ಸಾಮ್ರಾಜ್ಞೆ! ನಿನ್ನ ಮತ್ತು ಕುಮಾರ ಪ್ರಹ್ಲಾದನ ಪುಣ್ಯವಿಶೇಷದಿಂದ ಸರ್ವರೂ ಭಗವನ್ಮೂರ್ತಿಯಲ್ಲಿ ದೇವದೇವನ ದಿವ್ಯ ತೇಜಸ್ಸನ್ನು ಕಾಣುವಂತಾಯಿತು. ಸರ್ವೆಶ್ವರನ ಅಪ್ರಾಕೃತ ಮಂಗಳಕರ ವಾಣಿಯನ್ನು ಆಲಿಸುವ ಭಾಗ್ಯ ದೊರಕಿತು. ಪ್ರಹ್ಲಾದನಂತಹ ಶ್ರೇಷ್ಠ ಪುತ್ರನನ್ನು ಪಡೆದ ನಿನ್ನ ಭಾಗ್ಯಕ್ಕೆ ಎಣೆಯಿಲ್ಲ. “ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ ” ಎಂಬ ಅಭಯವಚನದಂತೆ ಪ್ರಹ್ಲಾದನ ಯೋಗಕ್ಷೇಮವನ್ನು ಶ್ರೀಹರಿಯು ವಹಿಸಿರುವನು. ನಮ್ಮ ಪ್ರಿಯಶಿಷ್ಯ ಪ್ರಹ್ಲಾದರಾಜನು ಜಗತ್ತಿನಲ್ಲಿ ಮಹಾಭಾಗವತೋತ್ತಮನೆನಿಸಿ, ಅಜರಾಮರ ಕೀರ್ತಿ ಗಳಿಸುವನು” ಎಂದು ಹೇಳಲು ಕಯಾದುವು ಭಕ್ತಿ-ವಿನಯಗಳಿಂದ “ತಂದೆಯೇ, ಇವೆಲ್ಲವೂ ನಿಮ್ಮ ಅನುಗ್ರಹದ ಫಲ” ಎಂದು ಅಭಿವಂದಿಸಿದಳು.
ಆಗ ನಾರದ ಮಹರ್ಷಿಗಳು ಭಗವನ್ಮೂರ್ತಿಗೆ ಕಯಾದು, ಪ್ರಹ್ಲಾದರಿಂದ ಮಂಗಳಾರತಿ ಮಾಡಿಸಿ, ಅವರಿಗೂ, ಆಶ್ರಮವಾಸಿಗಳಿಗೂ ಪ್ರಸಾದವನ್ನು ಕರುಣಿಸಿ ಪ್ರಹ್ಲಾದರಾಜನಿಗೆ ಋಷಿಕನೈಯರಿಂದ ಆರತಿ ಮಾಡಿಸಿ, ವೇದೋಕ್ತವಚನಗಳಿಂದ ಆಶೀರ್ವಾದ ಮಾಡಿಸಿದರು.
ಅನಂತರ ಸಕಲ ಋಷಿಮುನಿ ಮುಂತಾದ ಆಮಂತ್ರಿತರಿಗೆ ಆತಿಥ್ಯವನ್ನು ನೆರವೇರಿಸಿ, ಭೋಜನಾನಂತರ ಸರ್ವ ಋಷಿಮುನಿಗಳಿಂದ ಪ್ರಹ್ಲಾದನಿಗೆ ಮಂಗಳಾಶೀರ್ವಾದಗಳನ್ನು ಮಾಡಿಸಿದರು.
ಹೀಗೆ ಪ್ರಹ್ಲಾದ ಕುಮಾರನ ವರ್ಧಂತ್ಯುತ್ಸವವು ವೈಭವದಿಂದ ಜರುಗಿದ ಮೇಲೆ ನಾರದರು ಕಯಾಧುದೇವಿ, ಪ್ರಹ್ಲಾದರನ್ನು ರಾಜಪರಿವಾರದೊಡನೆ ರಾಜಧಾನಿಗೆ ಕಳುಹಿಸಿಕೊಟ್ಟರು.