|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ಐದನೆಯ ಉಲ್ಲಾಸ

ಶ್ರೀರಾಘವೇಂದ್ರಗುರುಸಾರ್ವಭೌಮರು

ಮ೦ಗಳಮ್

ಇಂತು ಯುಗಯುಗಗಳ ಹಿಂದೆ ಸತ್ಯಲೋಕದಲ್ಲಿ ಜಗತ್ತಿತಾಮಹರಾದ ಶ್ರೀಬ್ರಹ್ಮ-ಗೀರ್ವಾಣಿಯರ ಪ್ರೀತಿಯ ಸೇವಕರಾಗಿ, ಅವರ ಕರುಣೆಯ ಕಂದರೆಂದೆನಿಸಿ ವಿರಾಜಿಸುತ್ತಿದ್ದ ಕರ್ಮಜದೇವತೆಯಾದ ಶ್ರೀಶಂಕುಕರ್ಣರು ಶ್ರೀಹರಿಯ ಸಂಕಲ್ಪದಂತೆ, ಲೋಕಕಲ್ಯಾಣಾರ್ಥವಾಗಿ ಪರಮಾತ್ಮನ ಪ್ರೇರಣೆಗೊಳಗಾದ ಶ್ರೀಚತುರಾನನ ಬ್ರಹ್ಮ ದೇವರ ಶಾಪರೂಪವರದಿಂದ ಶ್ರೀವಾಯುದೇವರ ಸತತ ಪರಮಾವೇಶಯುಕ್ತರಾಗಿ ಪ್ರಹ್ಲಾದರಾಗಿ ಅವತರಿಸಿ, ಶ್ರೀನಾರದರ ಉಪದೇಶದಿಂದ ಆಜನ್ಮವೈಷ್ಣವರೆನಿಸಿ, ಜ್ಞಾನ-ಭಕ್ತಿ- ವೈರಾಗ್ಯಗಳ ಸಾಕಾರಮೂರ್ತಿಗಳೆನಿಸಿ ಪರಮಾತ್ಮನ ಅತ್ಯದ್ಭುತ ಶ್ರೀನರಸಿಂಹರೂಪವನ್ನು ಜಗತ್ತಿಗೆ ತೋರಿಸಿಕೊಟ್ಟು ತಮ್ಮ ಶ್ರೀಹರಿಭಕ್ತಿಯ ಪ್ರಭಾವದಿಂದ ಎಲ್ಲ ವಿಧ ಹಿಂಸೆ-ಅಪಾಯಗಳಿಂದ ಪಾರಾಗಿ ಶ್ರೀಹರಿಭಕ್ತಿಯ ಭಕ್ತರ ಹಿರಿಮೆ-ಗರಿಮೆಗಳನ್ನು ಸಕಲ ಲೋಕದ ಜನರಿಗೂ ತೋರಿಸಿಕೊಟ್ಟು ಶ್ರೀನರಹರಿಯಿಂದ ಅನಿತರಸಾಧಾರಣ ವರಗಳನ್ನು ಪಡೆದು ಭಾಗವತಾಗ್ರಣಿಗಳು, ಶ್ರೀಹರಿಭಕ್ತಶಿರೋಮಣಿಗಳೆಂದೂ ತ್ರಿಲೋಕಗಳಲ್ಲಿಯೂ ಗೇಗೀಯಮಾನರಾಗಿ ಸಕಲಲೋಕಲ್ಯಾಣಕ್ಕೆ ಕಾರಣರಾಗಿ, ಆನಂತರ ದ್ವಾಪರದಲ್ಲಿ ಬಾಹೀಕರಾಜರಾಗಿ ಶ್ರೀಕೃಷ್ಣಪರಮಾತ್ಮನ ಸೇವೆಮಾಡಿ ಮತ್ತೆ ಕಲಿಯುಗದಲ್ಲಿ ಶ್ರೀವಾಯುದೇವರ ತೃತೀಯಾವತಾರರಾದ ಶ್ರೀಮಧ್ವಾಚಾರರ ಸನ್ಮತದಲ್ಲಿ ವ್ಯಾಸರಾಜಯೋಗೀಂದ್ರರಾಗಿ ಅವತರಿಸಿ ಶ್ರೀಮೂಲಗೋಪಾಲಕೃಷ್ಣನ ಆರಾಧಕರಾಗಿ ತಮ್ಮ ಅನಿತರ ಸಾಧಾರಣ ಭಗವದ್ಭಕ್ತಿ, ಜ್ಞಾನ-ವೈರಾಗ್ಯ-ತಪಸ್ಸುಗಳಿಂದ ಲೋಕಮಾನ್ಯರಾಗಿ ದೈತಸಿದ್ಧಾಂತ ಪ್ರತಿಷ್ಠಾಪಕಗಳಾದ ಚಂದ್ರಿಕಾ- ನ್ಯಾಯಾಮೃತ-ತರ್ಕತಾಂಡವಾದಿ ಶ್ರೇಷ್ಠಗ್ರಂಥರಚನೆಯಿಂದ ದೈತಸಿದ್ಧಾಂತವನ್ನು ಸುಭದ್ರಗೊಳಿಸಿ ಕರ್ನಾಟಕ ಸಾಮ್ರಾಜ್ಯದ ಆರು ಜನ ಚಕ್ರವರ್ತಿಗಳಿಗೆ ಗುರುಗಳಾಗಿದ್ದು ಭಾರತೀಯ ತತ್ವ-ಸಂಸಧರ್ಮ-ಸದಾಚಾರ-ಸತ್ಪರಂಪರೆಗಳನ್ನು ದೇಶಾದ್ಯಂತ ಪ್ರಸಾರಮಾಡಿ, ಭಾಗವತ ಧರ್ಮಪ್ರಸಾರಕರೆಂದು ಖ್ಯಾತರಾಗಿ, ನಾಡು, ನುಡಿ, ಕನ್ನಡಭಾಷೆಗಳಿಗೆ ಕಳೆ ತಂದು ಶ್ರೀಕೃಷ್ಣದೇವರನ್ನು ಸೇವಿಸಿ, ಆ ತರುವಾಯ ಶ್ರೀಹರಿಯ ಸಂಕಲ್ಪದಂತೆ ತತ್ತ್ವಶಾಸ್ತ್ರ, ಧರ್ಮ, ಸಂಸ್ಕೃತಿ, ದೀನದಲಿತ ಜನರು, ಆಪಂಡಿತಪಾಮರರ ಉದ್ದಾರ, ಅಭ್ಯುದಯ, ಕಲ್ಯಾಣಗಳಿಗಾಗಿ ತಮ್ಮ ಕೊನೆಯ ಅವತಾರವನ್ನು ಕೈಗೊಂಡು ಶ್ರೀರಾಘವೇಂದ್ರಸ್ವಾಮಿಗಳವರಾಗಿ ಧರೆಗಿಳಿದು ಬಂದು ಕ್ರಿ.ಶ. ೧೬೨೧ ರಿಂದ ೧೬೭೧ ರವರೆಗೆ ಸುಮಾರು ಐವತ್ತು ವರ್ಷಗಳ ಕಾಲ ಹಂಸನಾಮಕಪರಮಾತ್ಮ ಪ್ರವರ್ತಿತ ಜ್ಞಾನಪರಂಪರೆಯ ಶ್ರೀಮನ್ಮಧ್ವಾಚಾರ್ಯರ ದೈತವೇದಾಂತಸಾಮ್ರಾಜ್ಯ ದಿಗ್ವಿಜಯ ವಿದ್ಯಾಸಿಂಹಾಸನದಲ್ಲಿ ಮಂಡಿಸಿ, ತೀರ್ಥಕ್ಷೇತ್ರಯಾತ್ರೆ, ಪರವಾದಿದಿಗ್ವಿಜಯ, ದೈತಸಿದ್ಧಾಂತಸ್ಥಾಪನೆ, ವೇದ-ಉಪನಿಷತ್ತು-ಗೀತಾ-ಬ್ರಹ್ಮಸೂತ್ರಾದಿ ಸಚ್ಛಾಸ್ತ್ರಗಳಿಗೆ ಅಸಾಧಾರಣಭಾಷ್ಯ-ಟೀಕೆ-ಟಿಪ್ಪಣಿಗಳನ್ನು ರಚಿಸಿ, ಅನಾದವಚ್ಛಿನ್ನ ಪರಂಪರಾಪ್ರಾಪ್ತ ಶ್ರೀಮಷ್ಣವಸಿದ್ಧಾಂತವನ್ನು ಆಚಂದ್ರಾರ್ಕವಾಗಿ ನಿಷ್ಕಂಟಕಗೊಳಿಸಿ, ಅ ಸತ್ಪರಂಪರೆಯು ನಿರ್ಬಾಧವಾಗಿ ಮುಂದುವರೆದುಕೊಂಡು ಬರುವಂತೆ ಮಾಡಿ, ರಾಜಾಧಿರಾಜರು, ಜಗತ್ತಿನ ಸಕಲಜನರುಗಳಿಂದ ಸಂಸೇವ್ವರಾಗಿ, ವಿವಿಧ ರೋಗ-ರುಜಿನ, ದೈಹಿಕ-ಮಾನಸಿಕ ದುಃಖಗಳಿಂದ ಬಳಲಿ ಬೆಂಡಾದ ಸುಜನರ ಕಷ್ಟಪರಿಹಾರಮಾಡುತ್ತಾ ಜನತೆಯ ದಾರಿದ್ರ, ನಿರಕ್ಷರತೆ, ಅಶಾಂತಿಗಳನ್ನು ಬಡಿದೊಡಿಸಿ ಸಂತಾನ, ಸಂಪತ್ತು, ವಿದ್ಯೆ ವಿಜ್ಞಾನ, ಪುತ್ರ-ಪೌತ್ರಾದಿಭಾಗ್ಯ ಮತ್ತು ಜನತೆಯು ಬೇಡುವ ಸಕಲ ವಾಂಛಿತಾರ್ಥಗಳನ್ನು ಕರುಣಿಸಿ ಕಾಪಾಡುತ್ತಾ ಬಂದುದಲ್ಲದೆ ಕೊನೆಗೆ ಹರಿಸಂಕಲ್ಪದಂತೆ ತಮ್ಮ ಅವತಾರವನ್ನು ಪರಿಸಮಾಪ್ತಿಗೊಳಿಸಿ ಶ್ರೀಶಾಲಿವಾಹನ ಶಕೆ ೦೫೯೩ ನೇ ವಿರೋಧಿಕೃತಂವತ್ಸರದ ಶ್ರಾವಣ ಬಹುಳ ಬಿದಿಗೆ ಶುಕ್ರವಾರದಂದು ಸಹಸ್ರಾರು ಜನರ ಸಮಕ್ಷ ಸಶರೀರವಾಗಿ ಬೃಂದಾವನಪ್ರವೇಶ ಮಾಡಿ, ಅನಂತರವೂ ಏಳುನೂರು ವರ್ಷಗಳ ಕಾಲ ತಾವು ಬೃಂದಾವನದಲ್ಲಿ ಸಶರೀರರಾಗಿದ್ದು ಲೋಕದ ಜನರ ಉದ್ಧಾರ-ಕಲ್ಯಾಣಗಳಿಗಾಗಿ ಭಗವಂತನನ್ನು ತಪಸ್ಸಿನಿಂದ ಆರಾಧಿಸುತ್ತಾ ತಮ್ಮ ಬಳಿಗೆ ಬಂದು ಸೇವಿಸುವ ಸರ್ವಜನರ ದುಃಖಪರಿಹಾರದ್ವಾರ ಸಮಸ್ಯೆ ಇಷ್ಟಾರ್ಥಗಳನ್ನು ಕರುಣಿಸಿ ಸನ್ಮಂಗಳಗಳನ್ನೀಯುವುದಾಗಿ ಭರವಸೆ ನೀಡಿ ಬೃಂದಾವನ ಪ್ರವೇಶ ಮಾಡಿ ಶ್ರೀಹರಿಯ ತಪೋನಿರತರಾದರು. ಆ ಮಂಗಳಕರ ಸಂದರ್ಭದಲ್ಲಿ ಶ್ರೀಗುರುಸಾರ್ವಭೌಮರು ಜನತೆಗೆ “ಸಮಾಯತ ಸಮಾಯತ ಪುರುಷಾರ್ಥಾರ್ಥಿನೋಜನಾಃ ಸಮಾಶ್ರಯದ್ಧಮಸ್ಕಹೃತ್ವದ ಸಂ ರಮಾಪತಿಮ್ |” - ಧರ್ಮಾರ್ಥಕಾಮಮೋಕ್ಷರೂಪ ಪುರುಷಾರ್ಥಗಳನ್ನು ಬಯಸುವ ಸುಜನರೇ, ಬನ್ನಿರಿ, ಬನ್ನಿರಿ! ನಮ್ಮ ಹೃದಯಕಮಲನಿವಾಸಿಯಾದ ಶ್ರೀಲಕ್ಷ್ಮೀಪತಿಯಾದ ಶ್ರೀಮನ್ನಾರಾಯಣನನ್ನು ಆಶ್ರಯಿಸಿ ಸೇವಿಸಿರಿ - ನಿಮ್ಮೆಲ್ಲ ಇಷ್ಟಾರ್ಥಗಳನ್ನೂ ಶ್ರೀಹರಿವಾಯುಗಳು ನಮ್ಮಿಂದ ನಿಮಗೆ ಕೊಡಿಸಿ ಕಾಪಾಡುವರು - ಎಂದು ಆಹ್ವಾನಿಸಿದರು. ಆದಾದ ಒಂದು ಶುಭ ಘಳಿಗೆಯಲ್ಲಿ ಆ ತಪೋಮೂರ್ತಿಗಳು ಆಹ್ವಾನಿಸಿದರೋ, ಉಪದೇಶಿಸಿದರೋ ಅಂದಿನಿಂದ ಇಂದಿನವರೆಗೂ ಆ ಮಹನೀಯರನ್ನೂ ಅವರ ಹೃತ್ಪದ್ಮಸ್ಥ ಶ್ರೀರಮಾಪತಿಯನ್ನು ಲಕ್ಷಾಂತರ ಜನರು ಆಶ್ರಯಿಸಿ ಭಕ್ತಿಯಿಂದ ಸೇವಿಸಿ ತಮ್ಮ ಎಲ್ಲ ಬಗೆಯ ಕಷ್ಟಗಳನ್ನೂ ಕಳೆದುಕೊಂಡು, ಸಕಲವಿಧ ಮನೋಭೀಷ್ಟಗಳನ್ನೂ ಪಡೆಯುತ್ತಾ ಐಹಿಕ-ಪಾರತ್ರಿಕ ಅಭ್ಯುದಯ ಮಂಗಳಗಳನ್ನು ಪಡೆದು ಸುಖಿಸುತ್ತಿದ್ದಾರೆ. ಈ ವಿಚಾರವು ಸಮಸ್ತ ಭಕ್ತರಿಗೂ, ಅನುಭವ ವೇದ್ಯವಾಗಿರುವ ವಿಚಾರವಾಗಿದೆ. ಇಂತು ಅಂದಿನಿಂದ ಇಂದಿನವರೆಗೂ, ಮುಂದೂ ಜಗತ್ತಿನ ಜನತೆಯ ಕಲ್ಯಾಣವೆಸಗುತ್ತಾ ಮಂತ್ರಾಲಯದಲ್ಲಿ ಮಾತ್ರವಲ್ಲ ಭಾರತ ಮತ್ತು ಇತರ ದೇಶ-ವಿದೇಶಗಳಲ್ಲಿಯೂ ಅನಂತ ಬೃಂದಾವನ ನಿಲಯರಾಗಿ, ಅನಂತನ ಭಕ್ತರಾದ ಆ ಮಹಾನುಭಾವರು ಲಕ್ಷಾಂತರ ಸುಜನರಿಗೆ ಮಂಗಳದ ಮಳೆಗೆರೆಯುತ್ತಾ ಅನುಗ್ರಹಿಸುತ್ತಿದ್ದಾರೆ ಮುಂದೂ ಅನುಗ್ರಹಿಸುತ್ತಲೇ ಇರುತ್ತಾರೆ! ಇಂಥ ಲೋಕಗುರುಗಳೂ, ಕಲಿಯುಗ ಕಲ್ಪತರುಗಳೂ ಕಾರುಣ್ಯಮೂರ್ತಿಗಳೂ ಆದ ಶ್ರೀಮದ್ರಾಘವೇಂದ್ರತೀರ್ಥಗುರುಸಾರ್ವಭೌಮರನ್ನು ಗುರುಗಳಾಗಿ ಪಡೆದ ನಾವೇ ಧನ್ಯರು, ಭಾಗ್ಯಶಾಲಿಗಳು ! ಇಂತು ನಮ್ಮನ್ನು ಸದಾಕರುಣೆಯಿಂದ ಪೊರೆಯುತ್ತಿರುವ ಆ ತಪೋಮೂರ್ತಿಗಳಿಗೆ ನಾವೇನು ತಾನೇ ಪ್ರತ್ಯುಪಕಾರ ಮಾಡಬಲ್ಲೆವು? “ಭೂಯಿಷ್ಠಾಂತೇ ನಮ ಉಕ್ತಿಂ ವಿಧೇಮ” ಎಂಬ ಪ್ರಮಾಣದಂತೆ ಆ ಮಂಗಳಮೂರ್ತಿಗಳಿಗೆ ನಮ್ಮ ಭಕ್ತಿಪೂರ್ವಕ ನಮನಗಳನ್ನರ್ಪಿಸುತ್ತಾ ಹೀಗೆ ಪ್ರಾರ್ಥಿಸೋಣ !

ರಾಗ ರೋಗವ ಕಳೆದು ಮಂಗಳ 

ಭೋಗ ಯೋಗಕ್ಷೇಮ ಕರುಣಿಸಿ 

ಭಾಗವಜನರಘವ ಕಳೆದನುರಾಗದಿಂ ಪೊರೆವಾ | 

ರಾಘವೇಂದ್ರಯತೀಂದ್ರ! ನೀ ಗುರು 

ವಾಗಿರೆಮ್ಮೆಯ ಜನುಮ ಜನುಮದಿ 

ಯೋಗಿನುತ ಜಗದೇಕಗುರುವರ ನಮಿಪೆ ನಿಮ್ಮಡಿಯ || 

ಮಂಗಳವು ಸಿರಿಮೂಲರಾಮನ 

ಮಂಗಳಪ್ರದಪದವ ಭಜಿಸುವ 

ಮಂಗಳದ ಗುರುರಾಘವೇಂದ್ರಮುನೀಂದ್ರಗನುದಿನವು || 

ಮಂಗಳವು ಪ್ರಹ್ಲಾದರಾಜಗೆ 

ಮಂಗಳವು ಸಿರಿವ್ಯಾಸರಾಜಗೆ 

ಮಂಗಳವು ಕಮಲೇಶನಂಪ್ರಿಯ ಭಜಿಪ ಭಕುತರಿಗೆ || 

|| ಶ್ರೀಮತ್ತದ್ಗುರುರಾಘವೇಂದ್ರಗುರುರಾಟ್ ಕುರ್ಯಾದುಮಂ ಮಂಗಳಮ್ || 

ತಥಾಸ್ತು 

|| ಇಶಮ್ || 

|| ಇಂತು ಶ್ರೀರಾಘವೇಂದ್ರಗುರುವಂಶಭೂಷಣ ಗುರುಪಾದಕಿಂಕರ ರಾಜಾ. ಶ್ರೀಗುರುರಾಜಾಚಾರ್ಯ ವಿರಚಿತ 'ಕಲಿಯುಗ ಕಲ್ಪತರು' ಎಂಬ ಮಹಾಭಕ್ತಿಪ್ರಬಂಧದೊಳು ಶ್ರೀರಾಘವೇಂದ್ರಗುರುಸಾರ್ವಭೌಮಚರಿತಾಮೃತ ನಿರೂಪಣಪರವಾದ ಐದನೆಯ ಉಲ್ಲಾಸವು ಮುಗಿದುದು || 

|| ಶ್ರೀರಸ್ತು ||