Kaliyugada Kalpataru The first delight Shankukarnaru

|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ - ಕಲ್ಪತರು

ಮೊದಲನೆಯ ಉಲ್ಲಾಸ ಶಂಕುಕರ್ಣರು

ರಚಿಸಿದವರು ರಾಜಾ, ಎಸ್. ಗುರುರಾಜಾಚಾರ್ಯರು

ಮೊದಲನೆಯ ಉಲ್ಲಾಸ ಶಂಕುಕರ್ಣರು

ನಿಕಲ ಜಗಜ್ಜನ್ಮಾದಿಕಾರಣನೂ, ಸರ್ವಸ್ವತಂತ್ರನೂ, ಸರ್ವೋತ್ತಮನೂ, ಸಿಖಿಲ ಮುಮುಳ್ಳೂಪಾಸನೂ, ಪರಬ್ರಹ್ಮಸ್ವರೂಪನೂ ಆದ ಶ್ರೀರಮಾನಾಯಕ ಶ್ರೀಪದ್ಮನಾಭರೂಪದ ಶ್ರೀಹರಿಯ ನಾಭಿಕಮಲದಲ್ಲಿ ಜನಿಸಿದ ಭಾಗ್ಯಶಾಲಿಗಳೂ, ದೇವದೇವನಾದ ಶ್ರೀಮನ್ನಾರಾಯಣನ ಆಜ್ಞಾನುಸಾರವಾಗಿ ಸಮಸ್ತ ಜಗತ್ತನ್ನು ಸೃಷ್ಟಿಸಿ ಪಿತಾಮಹರೆಂದು ಹದಿನಾಲ್ಕು ಲೋಕಗಳಲ್ಲಿಯೂ ಸರ್ವರಿಂದ ಗೇಗೀಯಮಾನರೂ ಆದ ಚತುರ್ಮುಖ ಬ್ರಹ್ಮದೇವರು ಈಶಕೋಟಿ ಪ್ರವಿಷ್ಟಳಾದ ಸಕಲಲೋಕಜನನಿ ಶ್ರೀಲಕ್ಷ್ಮೀದೇವಿಯ ತರುವಾಯ ದೇವತೆಗಳಲ್ಲಿ ತಾರತಮ್ಯ ಕಕ್ಷೆಯಲ್ಲಿ ಅಗ್ರಗಣ್ಯರಾದ ಮಹಾನುಭಾವರು.

ಸರ್ವಲೋಕ ಪಿತಾಮಹರಾದ ಶ್ರೀಬ್ರಹ್ಮ ದೇವರ ಸತ್ಯಲೋಕದಲ್ಲಿ ಕಮಲಾಸನರ ಕಮನೀಯ ಮಂದಿರದಲ್ಲಿ ವಿಶೇಷ ಸಂಭ್ರಮ. ಚತುರವದನರ ಪೂಜಾಮಂದಿರವು ಸುರರು, ಅಪ್ಪರರು, ಗಂಧರ್ವರು ಮತ್ತು ಮುನಿನಿಕರರಿಂದ ತುಂಬಿಹೋಗಿದೆ. ಆಹಾ, ಆ ಮಂದಿರವೆಷ್ಟು ಸೊಗಸು! ಸುವರ್ಣಮಯ ಗೋಡೆಗಳಿಂದಲೂ, ವಜ್ರ ವೈಡೂರ್ಯಮಯವಾದ ಸ್ತಂಭಗಳಿಂದಲೂ, ಮುತ್ತು, ಮಾಣಿಕ್ಯ, ರತ್ನ, ಗೋಮೇಧಿಕಗಳಿಂದ ರಚಿತವಾದ ಮಾಲೆ ತೋರಣಗಳಿಂದಲೂ, ಝಗಝಗಿಸುತ್ತಿರುವ ನಿರುಪಮ ಸುಂದರವೂ ಚಿತ್ತಾಕರ್ಷವೂ ಆದ ಆ ಪೂಜಾಮಂದಿರದ ಮಧ್ಯಭಾಗದಲ್ಲಿ ನವರತ್ನಖಚಿತವಾದ ಭವ್ಯಮಂಟಪವು ಶೋಭಿಸುತ್ತಿದೆ. ಆ ಸುಂದರ ಮಂಟಪದ ಮುಂಭಾಗದಲ್ಲಿ ಸುವರ್ಣಮಯ ದೀಪಸ್ತಂಭಗಳಲ್ಲಿ ನಂದಾದೀಪಗಳು ಪ್ರಕಾಶಿಸುತ್ತಿವೆ. ಸುತ್ತಲೂ ಸುವರ್ಣ ತಾಂಬಾಣಗಳಲ್ಲಿ ಭಗವಂತನ ಪೂಜೆಗೆ ಬೇಕಾದ ಸಾಮಗ್ರಿಗಳು ಸಿದ್ಧವಾಗಿವೆ. ಮಂದಿರದಲ್ಲಿ ದೇವತೆಗಳು ತಾರತಮ್ಯಾನುಸಾರವಾಗಿ ಸಾಲುಗಟ್ಟಿ ಕುಳಿತು ವೇದಪಾರಾಯಣ ಮಾಡುತ್ತಿದ್ದಾರೆ. ಮತ್ತೊಂದು ಪಾರ್ಶ್ವದಲ್ಲಿ ಗಂಧರ್ವರು ಗಾನ ಮಾಡುತ್ತಿದ್ದಾರೆ. ಇನ್ನೊಂದು ಭಾಗದಲ್ಲಿ ಅಪ್ಪರ ಸ್ತ್ರೀಯರು ಭಗವಂತನ ದಶಾವತಾರ ಲೀಲಾವಿಲಾಸವನ್ನು ವಿವಿಧ ಭಾವ-ಭಂಗಿ-ಮುದ್ರೆಗಳಿಂದ ನಿರೂಪಿಸುತ್ತಾ ನರ್ತನ ಮಾಡುತ್ತಿದ್ದಾರೆ.

ಸುವರ್ಣಪೀಠದಲ್ಲಿ ಕುಳಿತು ಶ್ರೀಬ್ರಹ್ಮದೇವರು ಪರಮಾತ್ಮನ ಪೂಜೆಯಲ್ಲಿ ಆಸಕ್ತರಾಗಿದ್ದಾರೆ. ಬ್ರಹ್ಮದೇವರ ಮಂದಹಾಸ ಮುಕುಳಿತವಾದ ನಾಗಗಳಿಂದಲೂ ಸುಸ್ವರವಾಗಿ ಮಂದ್ರಮಧ್ಯಮೋಚ್ಚ ಸ್ಥಾಯಿಗಳಲ್ಲಿ ವೇದಘೋಷವು ಹೊರಹೊಮ್ಮುತ್ತಿದೆ. ಆವೊಂದು ಪರಮಮಂಗಳಕರ ಪವಿತ್ರ ನೋಟ ಎಲ್ಲರ ಹೃದಯಭೂಮಿಯಲ್ಲಿಯೂ ಭಕ್ತಿಯ ಹೊನಲನ್ನು ಪುಟಿದೇಳಿಸುತ್ತಿದೆ.

ಸರ್ವಾಭರಣಭೂಷಿತಳಾದ, ಸರಸಿಜೋದ್ಭವನರಸಿಯಾದ, ಸರಸಿಜಮುಖಿ ಸರಸ್ವತಿಯು ಮುಗುಳುನಗೆಯ ಬೆಳದಿಂಗಳ ಕಾಂತಿಯಿಂದ ದೇವಮಂದಿರವನ್ನೆಲ್ಲಾ ಬೆಳಗಿಸುತ್ತಾ ಬೆಡಗಿನಿಂದ ವಿರಾಜಿಸಿದ್ದಾಳೆ. ಬ್ರಹ್ಮಾಣಿಯ ಮೃದುವಾದ ತೊಡೆಯ ಮೇಲೆ ಮನಮೋಹಕ ವೀಣೆಯು ಕಂಗೊಳಿಸಿದೆ. ವಾಗ್ಗೇವಿಯ ಕೋಮಲ ಕರಾಂಗುಲಿಗಳು ವೀಣೆಯ ತಂತಿಗಳ ಮೇಲೆ ಮೆಲ್ಲಮೆಲ್ಲನೆ ಚಿತ್ರ-ವಿಚಿತ್ರ ರೀತಿಯಾಗಿ ಆಡುತ್ತಿವೆ. ಹೊರಹೊಮ್ಮಿ ಹರಿಯುತ್ತಿದೆ, ಮಂಜುಳ ನಿನಾದೋಪೇತವಾದ ಕಲ್ಯಾಣಿಯ ಸುಮಧುರ ರಾಗಾಲಾಪನೆಯ ಗಾನವಾಹಿನಿ! ಹೃದಯಂಗಮವಾಗಿದೆ ರಾಗಲಹರಿ! ಆ ಸುರಚರ ನಿನಾದ ಸತ್ಯಲೋಕದಲ್ಲೆಲ್ಲಾ ವ್ಯಾಪಿಸಿ ಅದ್ಯಾವುದೋ ಭಾವೀ ಜಗತ್ಕಲ್ಯಾಣವನ್ನು ಸೂಚಿಸುತ್ತಿದೆ! ಅನಿತರ ಸಾಧಾರಣವಾಗಿ ಗೀರ್ವಾಣಿಯ ವೀಣೆಯಿಂದ ಹೊರಹೊಮ್ಮಿದ ಕಲ್ಯಾಣಿ ರಾಗದ ನಾದ ತರಂಗ ತರಂಗವಾಗಿ ತೇಲಿಬಂದು ಆಲಿಸುವವರ ಹೃದಯಕಮಲದಲ್ಲಿ ಭಾವುಕತನದ ಭಕ್ತಿಝರಿಯನ್ನು ಪುಟಿದೇಳಿಸುತ್ತಿದೆ. ಇಂದೇಕೋ ಇಂದಿರೇಶನ ಅಂದದ ಸೊಸೆಗೆ ಬಂಧುರವಾದ ಸುಂದರ ಕಲ್ಯಾಣಿಯು ತುಂಬಾ ಪ್ರಿಯವಾದಂತಿದೆ! ವಿಶ್ವವನ್ನೇ ವಿಸ್ಮಯಗೊಳಿಸುವ ವಲ್ಲಕಿಯ ವಾದನದಲ್ಲಿ ತನಗಿರುವ ವಿದಗ್ಧತೆಯನ್ನು ತೋರುತ್ತಿದ್ದಾಳೆ ವೀಣಾಪಾಣಿಯಾಗಿ! ಗೀರ್ವಾಣಿ! ಎಷ್ಟು ಹೊತ್ತಾದರೂ ಆ ಮಂಜುಳದಿಂಚರ- ದಾಲಾನ ಮುಗಿಯವಲ್ಲದು. ಭಗವಂತನ ಲೀಲಾವಿಲಾಸವನ್ನು ನವನವ ಸ್ಫೂರ್ತಿಯಿಂದ ಹಾಡುತ್ತಿರುವ ಗೀರ್ವಾಣಿಯು ಬಹು ಜಗತ್ತಿನ ಮುಂದಿನ ಕಲ್ಯಾಣ ಸೂಚನೆಯ ನಾಂದೀ ಪದ್ಯವನ್ನೇ ಕಲ್ಯಾಣಿರಾಗರೂಪವಾಗಿ ನುಡಿಸುತ್ತಿರಬಹುದೆ?

ಶ್ರೀ ಅಜನ ಪಟ್ಟದ ರಾಣಿಯಾದ ಶ್ರೀಸರಸ್ವತೀದೇವಿಯ ಮುಂಭಾಗದಲ್ಲಿ ಅತ್ಯಂತ ತೇಜಸ್ವಿಯಾದ ದೇವನೊಬ್ಬನು ನಿಂತು ವೀಣಾವಾದನದ ಸುಮಧುರ ಗಾನರಸಾಸ್ವಾದನ ತತ್ಪರನಾಗಿದ್ದಾನೆ. ಅಹಹ! ಎಂತಹ ಸೌಂದರ್ಯ ! ತಪ್ತಕಾಂಚನ ಸಂಕಾಶವಾದ ದೇಹಛಾಯೆ, ಅದಕ್ಕೊಪ್ಪವ ಮೈಮಾಟ, ವಿಶಾಲವಾದ ವಕ್ಷಸ್ಥಳ, ವಿಸ್ತಾರವೂ, ಚಂಚಲವಾ, ಕಾರುಣ್ಯಪೂರ್ಣವು ಆದ ಆ ಕಣ್ಣುಗಳಲ್ಲಿ ಮಿಂಚಿನ ಕಾಂತಿ ಮಿನುಗುತ್ತಿದೆ! ಪೀತಾಂಬರಧಾರಿಯಾಗಿ ರತ್ನಖಚಿತವಾದ ಕಿರೀಟ, ಕರ್ಣಕುಂಡಲ, ಮೌಕ್ತಿಕ ರತ್ನಮಾಲಾಧಾರಿಯಾದ ಅವನ ಮುಖವೆಷ್ಟು ಮನೋಹರ. ಮಂದಹಾಸದ ಚಂದ್ರಿಕೆಯ ಪ್ರಕಾಶದಿಂದ ಎಲ್ಲರ ಚಿತ್ತವನ್ನೂ ತನ್ನತ್ತ ಆಕರ್ಷಿಸುತ್ತಿರುವ ದೇವ ಎಷ್ಟು ತೇಜಸ್ವಿಯಾಗಿದ್ದಾನೆ. ಅದೇನು ಗಾಂಭೀರ್ಯ! ಸಾತ್ವಿಕತೆಯೇ ಮೂರ್ತಿವೆತ್ತಂತಿರುವ ಆ ದೇವನು ಯಾರಾಗಿರಬಹುದು ? ಬ್ರಹ್ಮ ಬ್ರಹ್ಮಾಣಿಯರಿಗೆ ಅತಿ ಸಲುಗೆಯವನಂತೆ ಕಾಣುತ್ತಿರುವನಲ್ಲ! ಬಹುಶಃ ಚತುರಾನನ ಬ್ರಹ್ಮದೇವರು ತಮಗಾಗಿಯೇ ವಿಶ್ವದ ಸಮಸ್ತ ರೂಪ-ಲಾವಣ್ಯಸಾರವನ್ನೆಲ್ಲಾ ಸಂಗ್ರಹಿಸಿ ಈತನನ್ನು ನಿರ್ಮಿಸಿರಬಹುದೇ? ನಿಮೀಲಿತಾರ್ಧನಯನನಾಗಿ ಕರದಲ್ಲಿ ಸ್ವರ್ಣಪುಷ್ಪಕರಂಡವನ್ನು ಹಿಡಿದು ನಿಂತಿರುವ ಆ ದೇವನೇ ಬ್ರಹ್ಮ -ಗೀರ್ವಾಣಿಯರಿಗೆ ಪ್ರೀತಿಪಾತ್ರನಾದ, ಪತ್ರಸದೃಶನಾದ ನಮ್ಮ ಕಥಾನಾಯಕ! ಕಲಿಯುಗ ಕಲ್ಪತರುವಿನ ಮೂಲರೂಪದ ಕರ್ಮಜದೇವತೆ ಶಂಕುಕರ್ಣ! ಶಂಕುಕರ್ಣನು ಶ್ರೀಬ್ರಹ್ಮದೇವನು ನೆರವೇರಿಸುವ ಭಗವತ್ತೂಜೆಗೆ ತುಳಸೀ ಪುಷ್ಪಗಳನ್ನು ತಂದಿತ್ತು ಪೂಜಾಕಾರ್ಯದಲ್ಲಿ ಕೈಂಕರ್ಯ ಮಾಡುವುದು ಪದ್ಧತಿ. ಅದೇ ಅವನಿಗೆ ಪಿತಾಮಹರು ವಿಧಿಸಿರುವ ಸೇವಾಕಾರ್ಯ.

ಶ್ರೀಬ್ರಹ್ಮದೇವರು ಪ್ರತಿದಿನವೂ ಭಗವಂತನ ನಾನಾ ರೂಪಗಳನ್ನು ಪೂಜಿಸುವುದು ವಾಡಿಕೆ. ಅಂತೆಯೇ ಎಂದಿನಂತೆ ಅವರು ಪರಮಾತ್ಮನ ದಶಾವತಾರ ಪೂಜೆಯಲ್ಲಿ ಮಗ್ನರಾಗಿದ್ದಾರೆ. ಮತ್ಯ-ಕೂರ್ಮಾದಿ ಆರು ಅವತಾರಗಳ ಪೂಜೆ ಮುಗಿದಿದೆ. ಬ್ರಹ್ಮದೇವರು ಒಂದೊಂದು ಭಗವದ್ರೂಪಗಳನ್ನು ಧ್ಯಾನಿಸಿದಂತೆಲ್ಲಾ ಶ್ರೀಹರಿಯು ಸಾಕ್ಷಾತ್ತಾಗಿ ಆಯಾ ರೂಪಗಳಿಂದ ಪ್ರತ್ಯಕ್ಷನಾಗಿ ಪ್ರಿಯಕುವರನಿಂದ ಪೂಜೆಯನ್ನು ಸ್ವೀಕರಿಸುತ್ತಿದ್ದಾನೆ. ಎಂತಹ ಅಪೂರ್ವ ದೃಶ್ಯವದು! ಸತ್ಯಲೋಕ ನಿವಾಸಿಗಳೆಷ್ಟು ಸುಕೃತಶಾಲಿಗಳು! ಪರಮಾತ್ಮನ ಅಪೂರ್ವ ನಾನಾವತಾರ ರೂಪಗಳನ್ನು ಪ್ರತಿನಿತ್ಯ ಕಂಡು ಆನಂದಿಸುವ ಅವರ ಸೌಭಾಗ್ಯ – ಸುಕೃತಗಳಿಗೆ ಎಣೆಯುಂಟೆ ?

ಶ್ರೀಭಾರ್ಗವರಾಮನ ಪೂಜೆ ಮುಗಿಯಿತು. ಬ್ರಹ್ಮದೇವರು ಶ್ರೀರಾಮಚಂದ್ರ ರೂಪವನ್ನು ಪೂಜಿಸಲು ಉತ್ಸುಕರಾಗಿದ್ದಾರೆ. ಅವರ ವದನಾರವಿಂದದಿಂದ ಶ್ರೀರಾಮನ ಸ್ತುತಿ ಹೊರಹೊಮ್ಮಿತು -

ಶ್ರೀರಾಮಂ ದಶದಿಗ್ವಾಪ್ತಂ ದಶೇಂದ್ರಿಯ ನಿಯಾಮಕಮ್ |

ದಶಾಸ್ಯಮ್ಮ ದಾಶರಥಿಂ ಶ್ರೀನಿವಾಸಂ ಭಜೇ ನಿಶಮ್ ||

ರತ್ನಮಂಟಪದಲ್ಲಿ ಕಾಮನಬಿಲ್ಲಿನಂತೆ ವಿವಿಧ ವರ್ಣಗಳ ಕಾಂತಿ ಮಿನುಗಿತು! ಕೋಟಿಸೂರ್ಯರು ಏಕಕಾಲದಲ್ಲಿ ಉದಯಿಸುವಂತೆ ಅದ್ಭುತ ಪ್ರಕಾಶ ಬೆಳಗಿತು! ನೀಲನೀರದಕಾಂತಿವಿರಾಜಿತನೂ, ಜಗನ್ಮೂಹನಾಕಾರನೂ, ಮನ್ಮಥ-ಮನ್ಮಥನೂ, ಪೀತಾಂಬರ-ಹಾರ-ಕೇಯೂರ-ಕಂಕಣ-ಮಕರಕುಂಡಲ-ವನಮಾಲಾ-ಕೌಸ್ತುಭವಾರ ವಿಭೂಷಿತನೂ, ಕೋದಂಡಧಾರಿಯೂ ದೇವದೇವನೂ ಆದ ಪರಮಮಂಗಳಮೂರ್ತಿ ಶ್ರೀರಾಮಚಂದ್ರಪ್ರಭುವು ಲೋಕಮಾತೆ ಸೀತಾದೇವಿಯಿಂದೊಡಗೂಡಿ ಮಂದಹಾಸಚಂದ್ರಿಕಾಸಂದೀಪಿತ ವದನಾರವಿಂದನಾಗಿ ಮೈದೋರಿ ನಿಂತನು!

ಅಖಿಲಾಂಡಕೋಟಿ ಬ್ರಹ್ಮಾಂಡನಾಯಕನಾದ ಪರಮಪುರುಷ ಶ್ರೀರಾಮಚಂದ್ರದೇವರ ದರ್ಶನದಿಂದ ಹರ್ಷನಿರ್ಭರರಾದ ಕಮಲಾಸನರ ಮೈಪುಳಕಿಸಿತು. ತದೇಕಚಿತ್ತರಾಗಿ ಜಾನಕೀಕಾಂತನ ಮುಖಾರವಿಂದವನ್ನು ಈಕ್ಷಿಸುತ್ತಿದ್ದಾರೆ. ಭಕ್ತು ದ್ರೇಕದಿಂದ ಬ್ರಹ್ಮದೇವರ ಹೃದಯ ಅರಳಿದೆ, ಕಂಠ ತುಂಬಿಬಂದಿದೆ. ಕಣ್ಣುಗಳಿಂದ ಆನಂದಾಶ್ರು ಹರಿಯುತ್ತಿವೆ. ಧ್ಯಾನ - ಆವಾಹನ ಅರ್ಥ್ಯ - ಪಾದ್ಯಾದಿಗಳಿಂದ ಭಗವಂತನನ್ನು ಪೂಜಿಸಿ, ಗಂಧಾಕ್ಷತೆಗಳನ್ನರ್ಪಿಸಿ ಭಯ-ಭಕ್ತಿಗಳಿಂದ ಜಗನ್ಮಾತಾಪಿತೃಗಳನ್ನು ಅರ್ಚಿಸಲು ಸುವರ್ಣಮಯ ಪುಷ್ಪಕರಂಡಕ್ಕೆ ಕೈಹಾಕಿದರು. ಅವರ ಕರಾಂಗುಲಿಗಳು ಅಲ್ಲಿಯೇ ನಿಂತವು! ಏನಾಶ್ಚರ್ಯ! ಪುಷ್ಪಕರುಂಡದಲ್ಲಿ ದೇವನ ಪೂಜೆಗೆ ಸಿದ್ಧವಾಗಿರಬೇಕಾದ ತುಳಸೀಪುಷ್ಪಗಳೇ ಇಲ್ಲ!! ಎಂತಹ ಅಪಚಾರ, ಪರಮಾತ್ಮನ ಪೂಜೆಗೆ ಪುಷ್ಪಗಳಿಲ್ಲ. ಅದೂ ಸತ್ಯಲೋಕದಲ್ಲಿ! ಬ್ರಹ್ಮದೇವರಿಗೆ ಮನಸ್ಸಿನಲ್ಲಿ ಬಹುಪರಿತಾಪವಾಯಿತು. ಹೃದಯ ತಳಮಳಿಸಿತು. ಪಾಜೆ ಕೈಗೊಳ್ಳಲು ಮಹಾಪ್ರಭು ಬಂದು ನಿಂತಿದ್ದಾನೆ. ಆದರೆ ಪೂಜಿಸಲು ತುಳಸೀಪುಷ್ಪಗಳಿಲ್ಲದೆ ಸೇವೆಗೆ ಅಡಚಣೆಯುಂಟಾಯಿತಲ್ಲ, ಇದೆಂತಹ ತಾಮಸ ವ್ಯಾಪಾರ ? ಎಂದು ಸ್ವಲ್ಪ ಕುಪಿತರಾಗಿ ತಿರುಗಿ ನೋಡಿದರು. ಪ್ರೀತಿಯ ಶಿಷ್ಯ ಸೇವಕ ಶಂಕುಕರ್ಣ ಚಿತ್ರಸ್ಥ ಪ್ರತಿಮೆಯಂತೆ ಮೈಮರೆತು ನಿಂತಿದ್ದಾನೆ. ಗರ್ಜಿಸಿದರು - “ಶಂಕುಕರ್ಣ” ಎಂದು.

ಉತ್ತರವಿಲ್ಲ! ಮತ್ತೆ ನೋಡಿದರು. ಇನ್ನೂ ಮೈಮರೆತೇ ನಿಂತಿದ್ದಾನೆ ಶಂಕುಕರ್ಣ! ನಾನು ಕೂಗಿದರೂ ಕೇಳಿಸಲಿಲ್ಲವೇ ಇವನಿಗೆ ? ಮತ್ತೊಮ್ಮೆ ಕೋಪದಿಂದ ಗರ್ಜಿಸಿದರು "ಶಂಕುಕರ್ಣ!”

ಶಂಕುಕರ್ಣ ಬೆಚ್ಚಿಬಿದ್ದ. ವಾಣಿಯ ವೀಣಾವಾದನವೂ ನಿಂತುಹೋಯಿತು. ಯಾವುದೋ ಲೋಕದಿಂದ ಇಳಿದು ಬಂದವನಂತೆ ಕಣ್ಣು ಕಣ್ಣು ಬಿಡುತ್ತಾ ಸ್ತಬ್ದವಾಗಿ ನಿಂತಿರುವ ಶಂಕುಕರ್ಣನನ್ನು ನೋಡಿ “ದೇವನ ಪೂಜೆಗೆ ತುಳಸೀಪುಷ್ಪಗಳೆಲ್ಲಿ? ಕೂಗಿದರೂ ಕೇಳಿಸದವನಂತೆ ನಿಂತಿರುವೆಯಲ್ಲ ಶಂಕುಕರ್ಣ! ಸಾತ್ವಿಕವಾದ ಸತ್ಯಲೋಕದಲ್ಲಿಯೂ ಈ ಅಪಚಾರವೇ?” ಎಂದು ಚತುರಾನನರು ಗದ್ದರಿಸಿದರು.

ಆಗ ಶಂಕುಕರ್ಣ ಎಚ್ಚರಗೊಂಡ. ಒಮ್ಮೆ ಎಲ್ಲೆಡೆ ದೃಷ್ಟಿ ಹಾಯಿಸಿದ. ರತ್ನಮಂಟಪದಲ್ಲಿ ಮಂದಹಾಸ ಬೀರುತ್ತಾ ವೈದೇಹೀಸಹಿತನಾಗಿ ನಿಂತಿರುವ ಶ್ರೀರಾಮಚಂದ್ರಪ್ರಭುವನ್ನೂ, ಭಗವತ್ತೂಜೆಗೆ ತೊಂದರೆಯಾಯಿತೆಂದು ಕುಪಿತರಾಗಿರುವ ಶ್ರೀಪದ್ಮಾಸನರನ್ನೂ, ವೀಣಾವಾದನವನ್ನು ನಿಲ್ಲಿಸಿ ಕುಳಿತಿರುವ ವಾಗ್ಗೇವಿಯನ್ನೂ, ತನ್ನ ಕರದಲ್ಲಿರುವ ಪುಷ್ಪರಹಿತವಾದ ಸ್ವರ್ಣಪಾತ್ರೆಯನ್ನೂ ನೋಡಿ ಗಹಗಹಿಸಿ ನಕ್ಕುಬಿಟ್ಟ!!

ಶಂಕುಕರ್ಣನು ಗಹಗಹಿಸಿ ನಗುತ್ತಿರುವುದನ್ನು ಕಂಡು ಬ್ರಹ್ಮದೇವರಿಗೆ ಕೋಪ ಮಿತಿಮೀರಿತು. ಕ್ಷುದ್ರರಾಗಿ “ಶಂಕುಕರ್ಣ! ಜಗದೊಡೆಯನ ಆರಾಧನೆಗೆ ತುಳಸೀ ಪುಷ್ಪಗಳನ್ನು ತಂದೀಯದೆ ಕರ್ತವ್ಯಭ್ರಷ್ಟನಾಗಿ, ಪರಮಾತ್ಮನ ಪೂಜೆಗೆ ತಡೆಯುಂಟು ಮಾಡಿ ಮಹಾಪರಾಧ ಮಾಡಿರುವುದೂ ಅಲ್ಲದೆ, ಕೇಳಿದ ಪ್ರಶ್ನೆಗೆ ಸದುತ್ತರವನ್ನು ಕೊಡದೆ ನಗುತ್ತಿರುವೆಯಾ? ಸತ್ಯಲೋಕದಲ್ಲಿ ಅದರಲ್ಲಿಯೂ ನನ್ನ ಸಮೀಪದಲ್ಲಿದ್ದೂ ಪ್ರತಿದಿನ ಮಾಧವನ ಮಂಗಳಕರ ಸ್ವರೂಪದರ್ಶನ ಮಾಡುತ್ತಿದ್ದರೂ ನಿನಗೆ ಈ ದೈತ್ಯರ ಸ್ವಭಾವ (ಅಸುರೀಭಾವ) ಎಲ್ಲಿಂದ ಬಂತು? ಹೂಂ, ಅದರ ಫಲವನ್ನು ಅನುಭವಿಸು!! ಕರ್ತವ್ಯ ಪರಾಹ್ಮುಖನಾಗಿ ದೈತ್ಯನಂತೆ ವರ್ತಿಸಿದ ನೀನು ದೈತ್ಯನಾಗಿಯೇ ಜನಿಸು!!” ಎಂದು ಕಮಂಡಲೋದಕವನ್ನು ತೆಗೆದುಕೊಂಡು ಅವನ ಮೇಲೆ ಪ್ರೋಕ್ಷಿಸಿಬಿಟ್ಟರು!

ಶಂಕುಕರ್ಣನಿಗೆ ಸಿಡಿಲೆರಗಿದಂತಾಗಿ ತತ್ತರಿಸಿದ, ಅಜನರಸಿ ಅಳುಕಿದಳು. ಸುಜನವೃಂದ, ಸುರಸ್ತೋಮ ಕಳಕಳಿಸಿತು. ಶ್ರೀರಾಮಚಂದ್ರನ ಮಂಗಳಕರ ಮುಖದಲ್ಲಿ ಮಂದಹಾಸ ಮಿನುಗಿತು.

ಭಯದಿಂದ ನಡುಗುತ್ತಾ ಶಂಕುಕರ್ಣ ಪಿತಾಮಹನ ಪಾದಕಮಲದಡಿಗುರುಳಿ ದುಃಖದಿಂದ ಕಣ್ಣೀರಿಡುತ್ತಾ "ಕ್ಷಮೆ, ಕ್ಷಮೆ” ಎಂದು ಬೇಡಿದ.

ಗೀರ್ವಾಣಿಯು ತಮ್ಮ ಪ್ರೀತಿಯ ಕುವರ ಶಂಕುಕರ್ಣನಿಗೊದಗಿದ ವಿಪತ್ತಿನಿಂದ ಮನಕರಗಿ, ಕಾರುಣ್ಯಪೂರ್ಣಳಾಗಿ “ಪ್ರಾಣವಲ್ಲಭ! ಶಂಕುಕರ್ಣ ನಾವು ಸಲಹಿದ ಮಗುವಲ್ಲವೇ? ಅವನಿಗೆ ಶಾಪವೆಂದರೇನು ಸ್ವಾಮಿ? ಕ್ಷಮಿಸಿ ಕಾಪಾಡಿ

ಎಂದು ಬಿನ್ನವಿಸಿದಳು.

ಚತುರ್ಮುಖ ಬ್ರಹ್ಮದೇವರು ವಾಣಿಯ ನುಡಿಯನ್ನಾಲಿಸಿ ಮುನಿಸಿನಿಂದಲೇ “ಗೀರ್ವಾಣಿ! ಅಹುದಹುದು, ಪಾಪ, ಶಂಕುಕರ್ಣ ನಿನ್ನ ಪ್ರೀತಿಯ ಮಗುವಲ್ಲವೇ? ಅಂತೆಯೇ ಅವನೆಸಗಿದ ಅಪರಾಧವನ್ನು ಕಂಡೂ ಕಾಣದವಳಂತೆ ಅವನ ಪಕ್ಷ ವಹಿಸಿ ಮಾತನಾಡುತ್ತಿರುವೆ! ಆದರೆ ದೇವಿ! ಅವನಿಂದು ಗೈದ ಮಹಾಪರಾಧಕ್ಕೆ ನಾನು ವಿಧಿಸಿದ ಈ ಶಿಕ್ಷೆಯು ಸರಿಯಾಗಿದೆ.

ಶಂಕುಕರ್ಣ ಧರೆಗಿಳಿದುಹೋದ, ಅವನ ಮೈಬೆವರಿತು, ಕಣ್ಣೀರು ಸುರಿಸುತ್ತಾ ಗದ್ಗದ ಕಂಠದಿಂದ “ತಂದೆಯೇ! ಅರಿಯದೇ ಆದ ಈ ಸಣ್ಣ ಅಪರಾಧಕ್ಕೆ ಇಂತಹ ಕಠಿಣ ದಂಡನೆಯೇ ? ತಾತ! ನಿಮ್ಮ ಚರಣಸೇವಕನಿಗೆ ಶಾಪವೇ ? ದೇವ, ಹಿಂದೆ ಎಂದಾದರೂ ನನ್ನಿಂದ ಇಂತಹ ಅನುಚಿತ ಕಾರ್ಯ ಘಟಿಸಿದೆಯೇ ? ನಿಮ್ಮ ಸೇವೆಗಾಗಿಯೇ ನನ್ನೀ ದೇಹವನ್ನು ಮುಡುಪಾಗಿಟ್ಟಿರುವ, ನಿಮ್ಮ ಕೈಗೂಸಾದ ನನ್ನಲ್ಲಿ ಏಕಿಷ್ಟು ಕುಪಿತರಾಗಿರುವಿರಿ? ಸ್ವಾಮಿ, ಈ ದಾಸನ ಅಪರಾಧವನ್ನು ಕ್ಷಮಿಸಿ ಕಾಪಾಡಬೇಕು” ಎಂದು ಅತಿ ದೀನನಾಗಿ ಪ್ರಾರ್ಥಿಸಿದನು.

ಶಂಕುಕರ್ಣನ ದೀನವಚನವನ್ನಾಲಿಸಿ ಬ್ರಹ್ಮದೇವರ ಕೋಪ ಸ್ವಲ್ಪ ಕಡಿಮೆಯಾಯಿತು. ಶಾಂತರಾಗಿ ನುಡಿದರು - “ಶಂಕುಕರ್ಣ! ನನ್ನ ಮತ್ತು ಗೀರ್ವಾಣಿಯ ಪ್ರೀತಿಯ ಶಿಷ್ಯನಾಗಿ, ಉತ್ತಮ ಗುಣಸಂಪನ್ನನಾಗಿರುವ ನಿನ್ನಿಂದ ಇಂಥ ಅನುಚಿತ ಅಪರಾಧ ಘಟಿಸಿತೆಂದೇ ನನಗಿಷ್ಟು ದುಃಖ, ಕೋಪವುಂಟಾಯಿತು! ವತ್ಸ! ನೀನು ಬೇರಾವ ತಪ್ಪು ಮಾಡಿದ್ದರೂ ನನಗಿಂತು ತಾಪವಾಗುತ್ತಿರಲಿಲ್ಲ. ಮತ್ತಾವ ಅಪರಾಧ ಮಾಡಿದ್ದರೂ ನಾನು ಕ್ಷಮಿಸುತ್ತಿದ್ದೆ. ಆದರೆ ನೀನಿಂದು ಮಾಡಿರುವುದು ಅಕ್ಷಮ್ಯ ಅಪರಾಧ! ಅಖಿಲಾಂಡಕೋಟಿ ಬ್ರಹ್ಮಾಂಡನಾಯಕ, ನನ್ನ ತಂದೆ, ದೇವಾದಿದೇವನಾದ ಶ್ರೀಮದ್ರಾಮಚಂದ್ರಪ್ರಭುವು ನನ್ನ ಪೂಜೆಯನ್ನು ಸ್ವೀಕರಿಸಲು ಪ್ರತ್ಯಕ್ಷನಾಗಿ ಬಂದು ನಿಂತಿರುವಾಗ, ನಾನು ಅವನನ್ನು ಸೇವಿಸಲು ಸಾಧ್ಯವಾಗದಂತೆ ಮಾಡಿಬಿಟ್ಟೆಯಲ್ಲ. ಆ ಪರಾತ್ಪರನ ಪೂಜಾವಿಷಯದಲ್ಲಿ ವಿಚಲಿತನಾದುದು ಕ್ಷಮಿಸಲಾಗದಂತಹುದು. ಮೇಲಾಗಿ ನಾನು ನಿನಗೆ ಕೊಟ್ಟ ಶಾಪವು ಎಂದಿಗೂ ವ್ಯರ್ಥವಾಗಲಾರದು.”

ದುಃಖಾವೇಗದಿಂದ ಪಿತಾಮಹನ ವಾಕ್ಯವನ್ನಾಲಿಸಿ ಶಂಕುಕರ್ಣ ಅರಿಕೆ ಮಾಡಿದ - “ದೇವ, ಬಾಲಕನ ಬಿನ್ನಹವಷ್ಟು ಲಾಲಿಸಬೇಕು. ಮಾತೆಯ ಕಲ್ಯಾಣಿ ರಾಗಲಹರಿಗೆ ಮನಸೋತು ನನ್ನನ್ನು ನಾನೇ ಮರೆತುಬಿಟ್ಟೆನು. ಅಂತೆಯೇ ಈ ಘಟನೆಯು ನಡೆದುಹೋಯಿತು ತಮ್ಮ ಕರುಣೆಗೆ ಪಾತ್ರನಾದ ನಾನು ದೈತ್ಯನಾಗಬೇಕೆ? ಹೂಂ, ದೈತ್ಯಜನ್ಮ ! ಅಬ್ಬಾ, ಅದನ್ನು ನೆನೆದರೂ ಮೈ ಕುಪಿಸುವುದು. ಪಿತಾಮಹ, ಬಾಲಕನಲ್ಲಿ ದಯೆ ತೋರಲಾರಿರಾ ? ಪರಾತ್ಪರನಾದ ಪರಮಮಂಗಳಮೂರ್ತಿ ಪರಮಾತ್ಮನಲ್ಲಿ ನಾನು ದ್ವೇಷ ಮಾಡಬೇಕೆ! ಸ್ವಾಮಿ, ಬೇಡ, ಬೇಡ. ಶ್ರೀಹರಿಯನ್ನು ದ್ವೇಷ ಮಾಡಬೇಕಾಗುವ ಆ ನಿಕೃಷ್ಟವಾದ ದೈತ್ಯಯೋನಿಗೆ ನನ್ನನ್ನು ನೂಕಬೇಡಿ! ಹರಿಭಕ್ತಿ ವಿಧುರನಾಗಿ ಬಾಳುವುದಕ್ಕಿಂತ ಘೋರವಾದ ನರಕವಾಸವೇ ಲೇಸು ಪ್ರಭು ! ದೈತ್ಯಜನ್ಮ ಒಂದಲ್ಲದೆ ಮತ್ತಾವ ನೀಚಯೋನಿಗಾದರೂ ತಳ್ಳಿ, ಸಂತೋಷದಿಂದ ಅಲ್ಲಿ ಜನಿಸೇನು. ಆದರೆ ಚತುರಾನನ ದೈತ್ಯಜನ್ಮ ಒಂದು ಮಾತ್ರ

ಬೇಡ! ಕರುಣಿಸು ತಂದೆ.”

ಸತ್ಯಲೋಕದಲ್ಲಿ ನೆರೆದಿದ್ದ ಸಮಸ್ತ ಸುರಮುನಿ ಜನರು ಈ ಗುರುಶಿಷ್ಯರ, ಸ್ವಾಮಿ ನೃತ್ಯರ, ತಂದೆ ಮಕ್ಕಳ ಸಂವಾದವನ್ನಾಲಿಸುತ್ತಾ ಮೂಕವಿಸ್ಮಿತರಾಗಿ ಕುಳಿತಿದ್ದಾರೆ. ಎಲ್ಲರ ಹೃದಯವೂ ಕರುಣಾದ್ರ್ರವಾಗಿದೆ. ಪಾಪ, ಶಂಕುಕರ್ಣನಿಗೆ ಬಂದೊದಗಿದ ಗತಿಯನ್ನು ಕಂಡು ಅವನಿಗಾಗಿ ಎಲ್ಲರೂ ಪೇಚಾಡುತ್ತಿದ್ದಾರೆ.

ಬ್ರಹ್ಮದೇವರು : (ಕನಿಕರದಿಂದ) ಮಗು, ಶಂಕುಕರ್ಣ ! ನೀನು ದೈತ್ಯನಾಗಿ ಜನಿಸಿದರೂ ನಿನಗೆ ದೈತ್ಯ ಸ್ವಭಾವ ಬರಲಾರದು. ನಿನ್ನ ಹರಿಭಕ್ತಿಗೆಂದಿಗೂ ಕುಂದುಂಟಾಗಲಾರದು, ಇದು ಸತ್ಯ!” ಎಂದು ಅಪ್ಪಣೆ ಮಾಡಿದರು.

ಅನಂತರ ಕಮಲಾಸನರಿಗೆ ಶಂಕುಕರ್ಣನಲ್ಲಿ ಮರುಕವುಂಟಾಯಿತು. ಮನದಲ್ಲಿಯೇ ಯೋಚಿಸತೊಡಗಿದರು - “ಪಾಪ, ಶಂಕುಕರ್ಣ ಹಿಂದೆಂದೂ ಹೀಗೆ ಮಾಡಿದವನಲ್ಲ. ಶ್ರೀಹರಿಪರಮಾತ್ಮನ ಪೂಜೆಯಲ್ಲಿ ಅವನಿಗೆ ಎಷ್ಟು ಶ್ರದ್ದೆ. ತಮ್ಮ ಮತ್ತು ವೀಣಾಪಾಣಿಯ ಕೈಂಕರ್ಯ ಮಾಡುವುದರಲ್ಲಿ ಅವನಿಗೆಷ್ಟು ಆದರ. ಭಯಭಕ್ತಿಗಳಿಂದ ನಮ್ಮ ಭಗವತ್ತೂಜಾಕಾರ್ಯದಲ್ಲಿ ಎಷ್ಟು ಉತ್ಸಾಹದಿಂದ ಸೇವೆ ಸಲ್ಲಿಸುತ್ತಿದ್ದಾನೆ. ಇಂದೇಕೆ ಹೀಗಾಯಿತು?” ಎಂದು ಚಿಂತಿಸುತ್ತಿರಲು ರತ್ನಮಂಟಪದಲ್ಲಿ ಪ್ರಸನ್ನವದನನಾಗಿ ಸೀತಾಮಾತೆಯೊಡನೆ ನಿಂತಿದ್ದಶ್ರೀರಾಮಚಂದ್ರಪ್ರಭುವು ಕಿಲಕಿಲನೆ ನಕ್ಕು ಇದ್ದಕ್ಕಿದ್ದಂತೆ ಅಂತರ್ಧಾನ ಹೊಂದಿದನು!

ಜಗತ್ಪಭುವು ನಕ್ಕು ಮಾಯವಾದುದನ್ನು ಕಂಡು ಬ್ರಹ್ಮದೇವರು ಅಚ್ಚರಿಗೊಂಡರು. ಇದಕ್ಕೆ ಕಾರಣವೇನೆಂದು ಯೋಚಿಸತೊಡಗಿದರು. ಕಣ್ಣುಮುಚ್ಚಿ ಜ್ಞಾನದೃಷ್ಟಿಯಿಂದ ವಿಷಯವರಿತರು. ಅವರ ಮುಖಕಮಲವರಳಿತು. ಮನದಲ್ಲಿ ಎದ್ದಿದ್ದ ಕಳವಳ ಚಿಂತೆ ದೂರವಾಯಿತು. ಬ್ರಹ್ಮ ದೇವರ ಶರೀರ ರೋಮಾಂಚನಗೊಂಡಿತು. ಪ್ರಸನ್ನಚಿತ್ತರಾಗಿ “ಆಹಾ ದೇವಾಧಿದೇವ! ಭಕ್ತಬಾಂಧವ, ಇದು ನಿನ್ನ ಲೀಲೆಯೇ ? ಪ್ರಭು, ನೀನೆಂತಹ ಭಕ್ತವತ್ಸಲನು. ಇದು ನಿನ್ನ ಮಾಯೆಯಲ್ಲವೆ, ಸಾಕ್ಷಾತ್ ಲಕ್ಷ್ಮಿದೇವಿಯೇ ನಿನ್ನ ಮಾಯೆಗೆ ಮರುಳಾಗುವಳೆಂದ ಮೇಲೆ ನಮ್ಮ ಪಾಡೇನು ? ಪ್ರಭು, ನೀನೆಂತಹ ಕಪಟನಾಟಕಸೂತ್ರಧಾರಿ! ಸೂತ್ರದ ಗೊಂಬೆಯಂತೆ ನಮ್ಮನ್ನು ಕುಣಿಸುತ್ತಿರುವೆಯಲ್ಲ, ಕುಣಿಸು, ದೇವ, ಕುಣಿಸು! ನಿನ್ನಿಚ್ಛೆಗೆ ವಿರುದ್ಧವಾಗಿ ವರ್ತಿಸಲು ನಿನ್ನ ಕಿಂಕರರಾದ ನಾವು ಶಕ್ತರೇ ? ನೀನು 'ವೇದೈಕವೇದ್ಯ'ನೆಂದು ಶ್ರುತಿಗಳು ಸಾರಿದರೂ ಅನಾದಿಯೂ ಅಪೌರುಷೇಯಗಳೂ ಆದ ಆ ವೇದಗಳೇ “ಯತೋ ವಾಚೋ ನಿವರ್ತಂತೇ” ಎಂಬಂತೆ ನಿನ್ನನ್ನು ಅರಿಯಲು ಅಸಮರ್ಥವಾಗಿರುವಾಗ ಯಾರು ತಾನೇ ನಿನ್ನನ್ನು, ನಿನ್ನ ಮಹಿಮೆಯನ್ನು, ನಿನ್ನಲೀಲಾವಿಲಾಸಗಳನ್ನು ಮತ್ತು ನಿನ್ನ ಸಂಕಲ್ಪವನ್ನು ಅರಿತಾರು ? ದೇವ! ಸುರಪಕ್ಷಪಾತಿಯಾದ ನೀನು ಅಮರರ ಹಿತಕ್ಕಾಗಿ, ಲೋಕಕಲ್ಯಾಣಕ್ಕಾಗಿ ಈ ರೀತಿ ಮಾಡಿಸಿದೆಯಾ ? ನಿನ್ನ ಸ್ವಜನಪ್ರೇಮಕ್ಕೆ ಇಕೋ ಅನಂತ ವಂದನೆಗಳು ಎಂದು ಶ್ರೀಹರಿಯನ್ನು ಕೊಂಡಾಡಿ ಕಣ್ಣೆರೆದು ಶಂಕುಕರ್ಣನನ್ನು ಪ್ರೇಮದಿಂದ ಹಿಡಿದೆತ್ತಿ ಅವನ ಶಿರದ ಮೇಲೆ ತಮ್ಮ ಅಮೃತಹಸ್ತವನ್ನಿಟ್ಟು ಮಧುರಧ್ವನಿಯಿಂದ ಇಂತೆಂದರು .

ಬ್ರಹ್ಮದೇವರು : “ವತ್ಸ, ಶಂಕುಕರ್ಣ! ಇದು ಶ್ರೀಪರಮಾತ್ಮನ ಲೀಲೆಯಪ್ಪಾ, ಕುಮಾರ, ಶ್ರೀಮನ್ನಾರಾಯಣನು ನಿನ್ನಲ್ಲಿ ಎಂತಹ ಕರುಣೆ ಮಾಡಿರುವನು ಬಲ್ಲೆಯಾ ? ದೇವತೆಗಳ ಹಿತಸಾಧನೆ, ಸಮಸ್ತಲೋಕಕಲ್ಯಾಣಕ್ಕಾಗಿ ವಾಣಿಗೆ ವೀಣೆಯಲ್ಲಿ ಕಲ್ಯಾಣಿಯನ್ನು ನುಡಿಸಲು ಪ್ರೇರಣೆ ಮಾಡಿ, ಕರ್ತವ್ಯದಕ್ಷನಾದ ನೀನು ಆ ರಾಗಸುಧಾಸ್ವಾದನದಲಿ ಮೈಮರೆಯುವಂತೆ ಮಾಡಿ, ಅನಂತರ ಸೀತಾ ಸಹಿತನಾಗಿ ಮೈದೋರಿದಾಗ ಅವನ ಪೂಜೆಗೆ ತುಳಸೀಪುಷ್ಪಗಳಿಲ್ಲದಂತೆ ಮಾಡಿ, ನನಗೆ ಕ್ರೋಧ ಬರುವಂತೆ ಮಾಡಿ, ಹಿಂದುಮುಂದಾಲೋಚಿಸದೆ ಕುಪಿತನಾದ ನನ್ನಿಂದ ನಿನಗೆ ಶಾಪಪ್ರದಾನ ಮಾಡಿಸಿ, ಅವನ ಅಗಾಧ ಮಾಯೆಗೆ ಸಿಲುಕಿ ನಾವೆಲ್ಲರೂ ಅವನ ಸಂಕಲ್ಪದಂತೆಯೇ ವರ್ತಿಸಿದ್ದನ್ನು ಕಂಡು ತೃಪ್ತನಾಗಿ ತನ್ನ ಲೀಲಾವಿಲಾಸವನ್ನು ತೋರಿ ಕಿಲಕಿಲನೆ ನಕ್ಕು ಏನೂ ಅರಿಯದವನಂತೆ ಕಣ್ಮರೆಯಾಗಿರುವನು! ಆಹಾ, ದೇವಾ, ನಿನ್ನ ಲೀಲೆ ವಿಚಿತ್ರವಾದುದು” ಎಂದು ಶ್ರೀಹರಿಯ ಮಹಿಮಾತಿಶಯವನ್ನು ಸ್ತುತಿಸಿದರು.

ಬ್ರಹ್ಮದೇವರ ವಚನವನ್ನಾಲಿಸಿ ದುಃಖದಿಂದ ಶಂಕುಕರ್ಣನು “ಪಿತಾಮಹ, ದೇವದೇವನೇ ನನ್ನ ಶಾಪಕ್ಕೆ ಪ್ರೇರಕನೆ ? ಹಾಯ್, ಹಾಯ್, ನಾನೆಂಥ ನಿರ್ಭಾಗ್ಯ! ಶ್ರೀಹರಿಪರಮಾತ್ಮನ ನಿಗ್ರಹಕ್ಕೆ ಪಾತ್ರನಾಗುವಂತಹ ಅದೇನು ಪಾಪಾಚರಣೆಯು ನನ್ನಿಂದ ಘಟಿಸಿದೆಯೋ ಕಾಣೆನಲ್ಲ” ಎಂದು ವಿಜ್ಞಾಪಿಸಿದನು.

ಬ್ರಹ್ಮದೇವರು : (ಸಂತೈಸುವ ಸ್ವರದಲ್ಲಿ ಛೇ ಛೇ, ವತ್ಸ! ಆನಂದಿಸುವ ಸಮಯದಲ್ಲಿ ಹೀಗೇಕೆ ದುಃಖಿಸುವೆ.

ಶಂಕುಕರ್ಣ : (ನಿಟ್ಟುಸಿರು ಬಿಡುತ್ತಾ) ದೇವ, ತಮ್ಮ ಮಾತು ಒಗಟಿನಂತಿದೆ. ನಿಮ್ಮ ಅಭಿಪ್ರಾಯ ನನಗಾಗಲಿಲ್ಲ.

ಶಾಪವನ್ನು ಪಡೆದಿರುವ ನನಗೆ ಇದು ಸಂತೋಷದ ಸಮಯವೇ?

ಬ್ರಹ್ಮದೇವರು : (ನಸುನಕ್ಕು) ನಿಜ, ಶಂಕುಕರ್ಣ, ಇದು ಸಂತೋಷದ ಸಮಯವೇ! ಶ್ರೀಹರಿಯ ಪೂರ್ಣಾನುಗ್ರಹಕ್ಕೆ

ಪಾತ್ರನಾಗುವ ಸುಸಮಯ ಬಂದೊದಗಿರುವುದು ಸಂತೋಷಕರವಲ್ಲವೆ?

ಶಂಕುಕರ್ಣ : (ಕರಮುಗಿದು) ಹಾಗೆಂದರೇನು ಪಿತಾಮಹ! ನನಗೊಂದೂ ಅರ್ಥವಾಗುತ್ತಿಲ್ಲ, ಕೃಪೆಮಾಡಿ ವಿಷಯವನ್ನು ಸ್ಪಷ್ಟವಾಗಿ ಹೇಳಬಾರದೆ ?

ಬ್ರಹ್ಮದೇವರು : ಶಂಕುಕರ್ಣ! ನೀನೆಂತಹ ಸುಕೃತಶಾಲಿ! ನಿನ್ನ ಭಾಗ್ಯವೆಷ್ಟು ದೊಡ್ಡದು! ಕೇಳು. ವತ್ಸ, ಹಿಂದೆ ಯಾವಾಗಲೂ, ಯಾರಲ್ಲೂ ಮಾಡದ ಪರಮಾನುಗ್ರಹವನ್ನು ಲಕ್ಷ್ಮೀಕಾಂತನು ನಿನ್ನಲ್ಲಿ ಮಾಡಲಿರುವನು! ಜಗತ್ತಿಗೆ ನಿನ್ನ ಮೂಲಕವಾಗಿ, ಕೇವಲ ನಿನ್ನ ದೆಸೆಯಿಂದಲೇ ಶ್ರೀಹರಿಯು ಅಭೂತಪೂರ್ವವಾದ, ವಿಚಿತ್ರವಾದ ನೂತನ ರೂಪದಿಂದ ಅವತರಿಸಲಿರುವನು, ಜಗತ್ತಿನಲ್ಲಿ ಭಾಗವತಧರ್ಮ ಪ್ರಸಾರವು ನಿನ್ನಿಂದ ವಿಶೇಷಾಕಾರವಾಗಿ ಆಗಲಿದೆ. ಶ್ರೀಮನ್ನಾರಾಯಣನ ಭಕ್ತಶ್ರೇಣಿಯಲ್ಲಿ ನಿನಗೆ ಅಗ್ರಸ್ಥಾನ ದೊರಕಲಿದೆ! ಇಷ್ಟೇ ಅಲ್ಲ: ಶ್ರೀಹರಿಯು ನಿನ್ನಲ್ಲಿ ಸರ್ವದಾ ಸನ್ನಿಹಿತನಾಗಿದ್ದು ನಿನ್ನಿಂದ ವಿವಿಧ ರೀತಿಯಲ್ಲಿ ಲೋಕಕಲ್ಯಾಣ ಮಾಡಿಸಿ ದಿಗಂತವಿಶ್ರಾಂತ ಕೀರ್ತಿಯನ್ನು ತಂದಿತ್ತು ಅನುಗ್ರಹಿಸಲಿರುವನು. ಈ ಮಹಾಭಾಗ್ಯ ಯಾರಿಗೆ ತಾನೆ ದೊರಕೀತು? ಶಂಕುಕರ್ಣ! ನೀನು ನಿಜವಾಗಿ ಪರಮಧನ್ಯ!

ಶಂಕುಕರ್ಣ : (ಆನಂದದಿಂದ) ತಂದೆಯೇ, ಈಗ ತಾನೆ ನೀವು ದೈತ್ಯನಾಗೆಂದು ನನಗೆ ಶಾಪ ನೀಡಿದಿರಿ, ಈಗ ನೋಡಿದರೆ - ಮಹಾಭಾಗವತೋತ್ತಮನಾಗಿ, ಶ್ರೀಹರಿಯ ವಿಶೇಷಾನುಗ್ರಹಕ್ಕೆ ಪಾತ್ರನಾಗಿ ಅಸಾಧಾರಣ ಕೀರ್ತಿ ಗಳಿಸುವಿ ಎನ್ನುವಿರಿ! ಇದರ ಅರ್ಥವೇನು ಸ್ವಾಮಿ?

ಬ್ರಹ್ಮದೇವರು : ಕುಮಾರ! ದುಷ್ಟಶಿಕ್ಷಣ ಶಿಷ್ಟಪರಿಪಾಲನೆಗಾಗಿ ಶ್ರೀಹರಿಯು ಅವತರಿಸುವುದೀಗ ಅನಿವಾರ್ಯವಾಗಿದೆ. ಅವನ ಅವತಾರಕ್ಕೆ ಕಾರಣನು ನೀನಾಗಬೇಕೆಂಬುದು ಅವನ ಸಂಕಲ್ಪ! ಅಂತೆಯೇ ನನ್ನಿಂದ ನಿನಗೆ ಶಾಪಕೊಡಿಸಿರುವನು. ವತ್ಸ, ಸಾಮಾನ್ಯವಾಗಿ ಸುರ-ನರರಿಗೆ ಶಾಪ ಬಂದರೆ ಶಾಪಗ್ರಸ್ಥನಾಗಿ ಕೆಡಕೇ ಆಗುವುದು. ಶ್ರೀಹರಿಯ ಸಂಕಲ್ಪದಿಂದ ಶಾಪ ಬಂದರೆ ಅದು ವರವಾಗಿಯೇ ಪರಿಣಮಿಸುವುದು. ಅದರಿಂದ ಸಮಸ್ತ ಜಗತ್ತಿನ ಉದ್ದಾರ, ಧರ್ಮಸಂಸ್ಥಾಪನೆ ಲೋಕಕಲ್ಯಾಣಗಳಿಗೆ ಕಾರಣವಾಗುವುದು, ಶಂಕುಕರ್ಣ! ಶ್ರೀಹರಿಯು ನಿನ್ನನ್ನೇ ಈ ಮಹತ್ಕಾರ್ಯಕ್ಕೆ ಆರಿಸಿಕೊಂಡಿರುವನು! ಅಂದಮೇಲೆ ನಿನ್ನ ಪುಣ್ಯ ಭಾಗ್ಯಗಳಿಗೆ ಎಣೆಯುಂಟೆ ? ವತ್ಸ, ಕೇಳು, ನೀನು ದೈತ್ಯನಾಗಿ ಜನಿಸಿದರೂ ಅಸುರ ಸಂಬಂಧಿಯಾದ ಯಾವ ತಾಮಸಗುಣವೂ ನಿನ್ನ ಬಳಿ ಬಾರಲಾರವು. ದೇವಸ್ವಭಾವವೇ ನಿನ್ನಲ್ಲಿ ಸ್ಥಿರವಾಗಿ ನೆಲೆಗೊಳ್ಳುವುದು. ವಿಷ್ಣುಭಕ್ತಿಯು ಮೇರೆ ಮೀರಿ ಅಭಿವೃದ್ಧಿಸುವುದು, ನೀನು ಉದ್ಧತನಾಗುವುದರ ಜೊತೆಗೆ ಜಗತ್ತನ್ನೂ ಉದ್ಧಾರಮಾಡುವೆ. ಚಿಂತಿಸಬೇಡ, ನಿನ್ನ ಹೆಸರು ಅಜರಾಮರವಾಗುವುದು. ಶಂಕುಕರ್ಣ : ಸ್ವಾಮಿ, ಹಾಗಾದರೆ ನಾನು ದೈತ್ಯನಾಗಿ ಹುಟ್ಟಲೇಬೇಕೆ ?

ಬ್ರಹ್ಮದೇವರು : ತಪ್ಪಿದ್ದಲ್ಲ, ವತ್ಸ! ಅದು ಶ್ರೀಲಕ್ಷ್ಮೀಕಾಂತನ ಸಂಕಲ್ಪ!

ಶಂಕುಕರ್ಣ : ಹಾಗಾದರೆ, ಪಿತಾಮಹ! ನನಗೆ ಶಾಪವಿಮೋಚನೆಯಾಗುವುದು ಯಾವಾಗ?

ಬ್ರಹ್ಮದೇವರು : (ಮಂದಸ್ಮಿತರಾಗಿ) ಶಾಪವಲ್ಲ, ಶಂಕುಕರ್ಣ! ಇದು ಮಹತ್ತರವಾದ ಮಂಗಳಕರವಾದ ವರವೆಂದು ತಿಳಿ (ಸ್ವಲ್ಪಕಾಲ ಧ್ಯಾನಸ್ಥರಾಗಿದ್ದು, ನಂತರ) ಹೂಂ, ಶಾಪವಿಮೋಚನೆ! ಅದಕ್ಕೆ ಅನೇಕ ಯುಗಗಳಾಗಬೇಕಪ್ಪಾ, ನೀನು ನಾಲ್ಕು ಅವತಾರಗಳನ್ನೆತ್ತಿ ಶ್ರೀಹರಿಯನ್ನು ಸೇವಿಸಿ ಭಾಗವತಾಗ್ರಣಿಯೆಂದು ವಿಖ್ಯಾತನಾಗಿ, ನಾಲ್ಕನೆಯ ಅಂತಿಮಾವತಾರದಲ್ಲಿ ಅಸದೃಶ ಲೋಕಕಲ್ಯಾಣವನ್ನೆಸಗಿ, ಶ್ರೀಹರಿ ಭಕ್ತಶಿಖಾಮಣಿಯೆನಿಸುವೆ. ನೀನೀಗ ಅದಾವ ವೀಣಾಪಾಣಿಯ ಕಲ್ಯಾಣಿಯ ನಾದಮಾಧುರ್ಯದಲ್ಲಿ ಮೈಮರೆತು ಯಾವ ಶ್ರೀರಾಮಚಂದ್ರದೇವರ ಪೂಜಾಕಾರ್ಯದಲ್ಲಿ ಪರಾಣ್ಮುಖನಾಗಿ ಶಾಪಗ್ರಸ್ಥನಾದೆಯೋ ಅದೇ ಶ್ರೀರಾಮಚಂದ್ರನನ್ನು ವಿಶೇಷಾಕಾರವಾಗಿ ಪೂಜಿಸಿ ಲೋಕಕಲ್ಯಾಣಾಸಕ್ತನಾಗಿ ವೀಣಾವಾದನಕೋವಿದನೆಂದು ಖ್ಯಾತಿಗಳಿಸಿ ಕೊನೆಗೆ ನನ್ನೀ ಧಾಮಕ್ಕೆ ಬರುತ್ತೀಯೆ. ಅನಂತರ ಶ್ರೀಹರಿಯ ಚರಣಾರವಿಂದಗಳನ್ನು ಸೇರಿ ಜನನ-ಮರಣರಹಿತವಾದ, ಸ್ವರೂಪಾನಂದಾವಿರ್ಭಾವರೂಪವಾದ ಮೋಕ್ಷಸುಖವನ್ನು ಅಂದರೆ ಶಾಶ್ವತಸುಖವನ್ನು ಅನುಭವಿಸುತ್ತೀಯೆ!

ಶಂಕುಕರ್ಣ : (ಆನಂದ, ಉತ್ಸಾಹಗಳಿಂದ) ತಂದೆಯೇ, ನಿನ್ನ ಅಣತಿಯನ್ನು ಶಿರಸಾ ಧರಿಸಿದ್ದೇನೆ. ಆದರೆ ದೇವ, ಯುಗಗಳವರೆಗೆ ತಮ್ಮನ್ನೂ ಮಾತೆ ಸರಸ್ವತೀದೇವಿಯನ್ನೂ ಅಗಲಿರಬೇಕೆ ?

ಬ್ರಹ್ಮದೇವರು : (ನಗುಮುಖದಿಂದ), ಕುಮಾರ! ನೀನು ನನ್ನ ಲೋಕವನ್ನು ಬಿಟ್ಟುಹೋದರೂ, ನಾನು ನಿನ್ನನ್ನು ಬಿಡುವಂತಿಲ್ಲವಲ್ಲಪ್ಪಾ, ಒಂದು ರೂಪದಿಂದ ನಾನೂ, ವಾಯುದೇವನೂ ನಿನ್ನಲ್ಲಿ ಸನ್ನಿಹಿತರಾಗಿದ್ದು ನಿನ್ನಿಂದ ಲೋಕಕಲ್ಯಾಣ ಮಾಡಿಸಲೇಬೇಕಾಗಿದೆ.

ಶಂಕುಕರ್ಣ : (ಆನಂದದಿಂದ) ಅನುಗೃಹೀತೋSಸ್ಮಿ! ನಾನು ಭೂಲೋಕದಲ್ಲಿ ಅವತರಿಸಿದಾಗ ಮಾನವ ಸ್ವಭಾವಾನುಸಾರವಾಗಿ ಕರ್ತವ್ಯವನ್ನು ಮರೆತು ಕುಳಿತಾಗ ನನ್ನನ್ನು ಎಚ್ಚರಿಸುವವರಾರು ಸ್ವಾಮಿ?

ಸರಸ್ವತೀದೇವಿ : (ಮುಗುಳುನಗೆಯಿಂದ ಮುಂದೆ ಬಂದು ಶಂಕುಕರ್ಣನ ಶಿರದ ಮೇಲೆ ಅಭಯಹಸ್ತವನ್ನಿರಿಸಿ) ವತ್ಸ! ಚಿಂತಿಸಬೇಡ, ನಾನು ಸರ್ವದಾ ನಿನ್ನಲ್ಲಿ ಸನ್ನಿಹಿತಳಾಗಿರುವೆನು. ಮಾತ್ರವಲ್ಲ; ನೀನು ಕಿಂಕರ್ತವ್ಯಮೂಢನಾಗಿ ಕುಳಿತಾಗ ನಿನ್ನನ್ನು ಎಚ್ಚರಿಸಲು ಪ್ರತ್ಯಕ್ಷಳಾಗಿ ನಿನಗೆ ಕರ್ತವ್ಯವನ್ನು ಬೋಧಿಸುವೆನು! ಕಂದ ಯೋಚಿಸಬೇಡ.

ಆಗ ಆನಂದಬಾಷ್ಪಸಿಕ್ತನೇತ್ರನಾಗಿ ಬ್ರಹ್ಮದೇವ, ಸರಸ್ವತಿಯರಿಗೆ, ಸಾಷ್ಟಾಂಗ ನಮಸ್ಕಾರ ಮಾಡಿ “ತಂದೆಯೇ ಅಮ್ಮಾ, ನಿಮ್ಮ ಈ ಕಿಂಕರನಲ್ಲಿ ಕೃಪೆಯಿರಲಿ. ಯಾವಾಗಲೂ ನಿಮ್ಮಲ್ಲಿಯೂ, ಸರ್ವೋತ್ತಮನಾದ ಶ್ರೀಲಕ್ಷ್ಮೀನಾರಾಯಣನಲ್ಲೂ ಭಕ್ತಿಯು ಅಭಿವೃದ್ಧಿಸುವಂತೆ ಆಶೀರ್ವದಿಸಿ ಅನುಗ್ರಹಿಸಿರಿ” ಎಂದು ಪ್ರಾರ್ಥಿಸಿದನು.

ಬ್ರಹ್ಮದೇವರು-ವಾಣಿ : ತಥಾಸ್ತು. ಕುಮಾರ! ನಿನಗೆ ಮಂಗಳವಾಗಲಿ.

ಆಗ ಸಕಲ ಸುರಸ್ತೋಮ - ಮುನಿವೃಂದವು ಭಗವಂತನ ಲೀಲಾವಿಲಾಸವನ್ನು ಕಂಡು ಪರಮಾನಂದ ತುಂದಿಲವಾಗಿ ಶಂಕುಕರ್ಣನಿಗೆ ಶುಭಾಶಂಸನಮಾಡಿ, ನೋಡುತ್ತಿರುವಂತೆಯೇ ಮಹಾಭಾಗ್ಯಶಾಲಿಯಾದ ಶಂಕುಕರ್ಣನು ಬ್ರಹ್ಮದೇವರ ಶಾಪರೂಪ ವರವನ್ನು ಶಿರಸಾ ಧರಿಸಿ, ಶ್ರೀಹರಿಯ ಸಂಕಲ್ಪದಂತೆ ಸೇವೆ ಸಲ್ಲಿಸಲು, ತೇಜೋರೂಪದಿಂದ ಸತ್ಯಲೋಕದಿಂದ ಅದೃಶ್ಯನಾದನು!