
ವಿಶ್ವದ ಇತಿಹಾಸದಲ್ಲಿ ಭಾರತದೇಶವು ವೈಶಿಷ್ಟ್ಯ ಪೂರ್ಣ ಸ್ಥಾನ ಪಡೆದ ಅಗ್ರಮಾನ್ಯ ದೇಶವಾಗಿದೆ. ಭಾರತದ ಇತಿಹಾಸದ ಪುಟ-ಪುಟಗಳಲ್ಲೂ ಸಾಧು-ಸಂತರ, ತತ್ವಜ್ಞಾನಿಗಳ, ಮಹಾತ್ಮರ, ಕವಿ-ಸಾಹಿತಿಗಳ, ವೀರಪುರುಷರ ಚರಿತ್ರೆಗಳು ಸುವರ್ಣಾಕ್ಷರ- ಗಳಿಂದ ಬರೆಯಲ್ಪಟ್ಟಿದ್ದು, ತನ್ನದೇ ಆದ ವೈಶಿಷ್ಟ್ಯದಿಂದ ಕಂಗೊಳಿಸುತ್ತಿವೆ. ಇತರ ದೇಶಗಳ ಸಾಧು-ಸಂತರು, ತತ್ವಜ್ಞಾನಿಗಳು, ಅನುಭಾವಿಗಳಿಗೂ ಭಾರತ ದೇಶೀಯರಿಗೂ ಮಹದಂತರವಿದೆ. ನಮ್ಮಲ್ಲಿ ಸಂತರು, ತತ್ವಜ್ಞಾನಿಗಳು, ದೈವಭಕ್ತರು, ಧಾರ್ಮಿಕ ಶ್ರದ್ಧೆಯುಳ್ಳವರು - ಇವರುಗಳಲ್ಲಿ ಬಹಳ ಅಂತರವಿಲ್ಲ. ಅವು ಪರಸ್ಪರ ಅವಲಂಬಿಸಿರುವುದರ ಜೊತೆಗೆ ಒಂದಕ್ಕೊಂದು ಪೂರಕವಾಗಿದೆ.ಒಂದಿಲ್ಲದೆ ಮತ್ತೊಂದು ಅರ್ಥಹೀನವಾಗುವುದು. “ವೇದೋಖಿಲೋ ಧರ್ಮಮೂಲಂ” “ಧರ್ಮೋ ವಿಶ್ವ ಜಗತಃಪ್ರತಿಷ್ಠಾ”, “ಯತೋಭ್ಯುದಯ ನಿಶ್ರೇಯಸಸ್ಸಿದ್ಧಿ ಸ ಧರ್ಮಃ” “ಧಾರಣಾಧರ್ಮ ಇತ್ಯಾಹುಃ” ಮುಂತಾದ ಪ್ರಮಾಣ- ಗಳಂತೆ ವೇದಮೂಲಕವಾದ ಜಗತ್ತಿನ ಸರ್ವವಿಧ ಉನ್ನತಿಗೆ ಕಾರಣವಾದ, ಧರ್ಮವೇ ಎಲ್ಲವನ್ನೂ ಧರಿಸಿರುವುದರಿಂದ. ಎಲ್ಲಕ್ಕೂ ಆಧಾರವಾದುದರಿಂದ ಧರ್ಮವೇ ಸಮಾಜದ ಜೀವಾಳವಾಗಿದೆ. ಆದುದರಿಂದ, ನಮ್ಮಲ್ಲಿ ಜೀವನ, ವಾಲ್ಮೀಯ- ಗಳೆಲ್ಲವೂ ಧರ್ಮಮಯವಾಗಿ ಬೆಳೆದುಬಂದಿದೆ. ಧರ್ಮವಿಲ್ಲದ ಜೀವನ, ವಾಹ್ಮಯಗಳು ನಮ್ಮಲ್ಲಿಲ್ಲ. ಧರ್ಮ ಮತ್ತು ಧಾರ್ಮಿಕರ ಇತಿಹಾಸಗಳನ್ನು ಅರ್ಥಮಾಡಿಕೊಳ್ಳದಿದ್ದರೆ, ಭಾರತೀಯ ಸಂಸ್ಕೃತಿಯ ತಿರುಳೇ ಅರಿವಾಗುವುದಿಲ್ಲ. ಅಂತೆಯೇ ನಮ್ಮಲ್ಲಿ ಇತರ ಇತಿಹಾಸಗಳಿಗಿಂತ ಧಾರ್ಮಿಕ ಇತಿಹಾಸವೇ ಅಗಾಧವಾಗಿ ಬೆಳೆದು ಪರಿಪುಷ್ಠವಾಯಿತು. ಈ ಧಾರ್ಮಿಕ ಇತಿಹಾಸದಲ್ಲಿ ಮುಖ್ಯವಾಗಿ ಒಂದೆರಡು ಗಮನೀಯವಾಗಿದೆ. ನಮ್ಮಲ್ಲಿ ಧರ್ಮ ಜೀವಂತವಾಗಿ ಬೆಳೆದುಬಂದ ಸಂಸ್ಥೆ. ಇದನ್ನು ಆಗಾಗ್ಗೆ ಪುನರುಜೀವಿಸಿ ಸಂಸ್ಕೃತಿಯನ್ನು ಬೆಳಗಿದವರು ಧರ್ಮಪುರುಷರು. ಪಕ್ಷ ಪ್ರಾಬಲ್ಯದ - ಭೌತಿಕ ವಿಜ್ಞಾನಯುಗದಲ್ಲಿರುವ ಆಧುನಿಕರಿಗೆ ಧರ್ಮಪುರುಷರ ವೈಯಕ್ತಿಕ ತೇಜಿನ ಅರಿವು ಸರಿಯಾಗಿ ಆಗಲಾರದು. ನಮ್ಮಲ್ಲಿ ಹಿಂದೆ ಆಗಿಹೋದ ಪ್ರತಿಯೊಬ್ಬ ಮಹನೀಯರೂ ನಾಡಿಗೆ, ನುಡಿಗೆ ಜನತೆಗೆ ಉತ್ಸಾಹ, ಓಜಸ್ಸುಗಳನ್ನು ತುಂಬಿ ಉನ್ನತಿಯ ತುಟ್ಟತುದಿಗೆ ಮುಟ್ಟಿಸುತ್ತಿದ್ದರು. ಅವರ ಜೀವನ ಆದರ್ಶವಾಗಿರುತ್ತಿತ್ತು. ವಾಣಿ ಅಮೃತತುಲ್ಯವಾಗಿರುತ್ತಿತ್ತು. ಉಪದೇಶಗಳು ತಾರಕವಾಗಿರುತ್ತಿದ್ದವು. ಅಂಥವರ ಸ್ಮರಣೆಯೇ ನಮ್ಮಲ್ಲಿ ನವಚೈತನ್ಯವನ್ನು ತುಂಬುವುದು, ಅವರು ಸಾಮ್ರಾಜ್ಯಗಳನ್ನು ಕಟ್ಟಿ, ಆಳಿ, ಅಜೇಯ ಎದುರಾಳಿಗಳನ್ನು ಪರಾಭವಗೊಳಿಸಿ, ತಮ್ಮ ತಪಃಪ್ರಭಾವದಿಂದ ಜಗತ್ತನ್ನೇ ತಲ್ಲಣಿಸುತ್ತಿದ್ದರು. ಜಗತ್ತಿನ ರಕ್ಷಕರಾಗಿ, ಪೋಷಕರಾಗಿ ಪೊರೆಯು- ತಿದ್ದರು. ಗುರುಗಳಾಗಿ ಸದುಪದೇಶಗಳಿಂದ ಜನತೆಯನ್ನು ಪಾವನಗೊಳಿಸುತ್ತಿದ್ದರು. ಮಾರ್ಗದರ್ಶಕರಾಗಿ ಸನ್ಮಾರ್ಗದತ್ತ ಕರೆದೊಯ್ಯುತ್ತಿದ್ದರು. ತಮ್ಮ ಜೀವನವನ್ನೇ ಭಗವಂತನಿಗೆ ಸಮರ್ಪಿಸಿ, ನಿರ್ವಿಕಾರಚಿತ್ತರಾಗಿ, ರಾಗ-ದ್ವೇಷಗಳಿಂದ ದೂರಾಗಿ, ಯಾವ ಪರಿಸ್ಥಿತಿಗೂ ಅಂಜದೆ, ಅಳುಕದೆ, ಸತ್ಯವನ್ನು ಎತ್ತಿಹಿಡಿದು, ಸದಾಚಾರ, ಧರ್ಮಗಳನ್ನು ಜನತೆಗೆ ಬೋಧಿಸುತ್ತಾ, ತಮ್ಮೆಲ್ಲ ತಪಸ್ಸನ್ನೂ ಧಾರೆಯೆರೆದು ಜಗತ್ತಿಗೆ ಮಂಗಳದ ಮಳೆಗರೆಯುತ್ತಿದ್ದರು. ಯೋಗಶಕ್ತಿಯಿಂದ ಜಗತ್ತಿನಲ್ಲಿ ನಾಕವನ್ನು ನಿರ್ಮಿಸುತ್ತಿದ್ದರು. ನಾಡಿನ ಭವಿಷ್ಯವನ್ನು ನಿರ್ಧರಿಸಿ, ನುಡಿಗೆ ಸಿರಿ ತಂದೊಡ್ಡಿ, ಭಕ್ತಿಯ ಒಲಿಮೆಯಿಂದ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡು ಆನಂದೋದ್ರೇಕದಿಂದ ಹಾಡಿ, ಪಾಡಿ, ಅತ್ತು, ಅಳಿಸಿ, ನಕ್ಕು, ನಗಿಸಿ, ಕುಣಿದು, ಕುಣಿಸುತ್ತಿದ್ದರು! ಅವರು ವಿಶಿಷ್ಟ ಶಾಸ್ತ್ರಸಂಪತ್ತನ್ನು ಜಗತ್ತಿಗೆ ಕರುಣಿಸಿದರು. ಉಪದೇಶಾಮೃತವನ್ನು ಉಣಿಸಿ ತಣಿಸುತ್ತಿದ್ದರು.
ಹೀಗೆ ನಮ್ಮ ಪ್ರಾಚೀನ ಸಾಧು-ಸಂತರ, ಅನುಭಾವಿಗಳ, ತತ್ವಜ್ಞಾನಿಗಳ, ದೈವಭಕ್ತರ ನಡೆ-ನುಡಿ, ಜೀವನದ ಉಸಿರು - ಎಲ್ಲವೂ ಪರಮಪವಿತ್ರವಾಯಿತು. ಪರೋಪಕಾರವಾಯಿತು. ಸಂಜೀವಿನೀಸದೃಶವಾಯಿತು. ಅವರಲ್ಲಿ ಅಧಿಕಾರಲಾಲಸೆ, ವರ್ಷ-ಕೀರ್ತಿಕಾಮನೆಗಳಿರಲಿಲ್ಲ. ಅಹಂಕಾರ-ಮಮಕಾರಗಳು ಅವರತ್ತಲೂ ಸುಳಿಯುತ್ತಿರಲಿಲ್ಲ, ಸ್ವಾರ್ಥದ ಸುಳಿವೇ ಇರಲಿಲ್ಲ ಮಾನವ ಸರಿಯಾದ ಸಂಸ್ಕೃತಿಯಲ್ಲಿ ನುರಿತರೆ, ಧರ್ಮಶೀಲನಾದರೆ ಯಾವ ಒಂದು ಉಚ್ಚಮಟ್ಟವನ್ನು ಮುಟ್ಟಬಹು ದೆಂಬುದನ್ನವರು ತಮ್ಮ ಜೀವನದಿಂದ ತೋರಿಕೊಟ್ಟರು. ಅವರ ಬಾಳು ಪ್ರೀತಿಯ ತವರಾಗಿತ್ತು. ಕಾರುಣ್ಯ ಮನೆಮಾಡಿತ್ತು, ಭಕ್ತಿ ಅವರ ಚೈತನ್ಯದುತಿತ್ತು. ಆದ್ದರಿಂದಲೇ ಅವರು ಭಗವಂತನನ್ನು ಅಂಗೈಯಲ್ಲಿ ಆಡಿಸಿದರು. ಎಂತಹ ಆಪತ್ಸಮಯದಲ್ಲೂ ಅವರು ಮೋಹಜಾಲದಲ್ಲಿಸಿಲುಕುತ್ತಿರಲಿಲ್ಲ. ಅಂತೆಯೇ ಅವರು ಧಾರ್ಮಿಕ ಇತಿಹಾಸದಲ್ಲಿ ಮಹತ್ವ ಸ್ಥಾನ ಗಳಿಸಿ ಅಮರರಾದರು. ಇಂಥ ವಿಭೂತಿ ಪುರುಷರು ಜಗತ್ತಿಗೆ ಮಹದೈಶ್ವರ್ಯವನ್ನು ಕೊಡಲು ಶಕ್ತರಾಗಿದ್ದರೂ ತಾವು ಮಾತ್ರ ಕಡುಬಡವರಾಗಿರುತ್ತಿದ್ದರು. ಅಸ್ಟಲಿತ ಪಾಂಡಿತ್ಯವಿಲ್ಲದರೂ ಅತಿವಾಚಾಳಿಗಳಾಗಿರಲಿಲ್ಲ. ಸ್ವತಃ ಒಂದೊಂದು ಮತವನ್ನು ರಚಿಸಲು ಶಕ್ತರಾಗಿದ್ದರು. ವೈದಿಕಮತದ ಎಲ್ಲೆಯನ್ನು ದಾಟದೆ, ಸನಾತನ ವೈದಿಕತತ್ವಗಳು, ಧರ್ಮಗಳಿಗೆ ತಲೆಬಾಗಿ ನಡೆಯುತ್ತಿದ್ದರು. ರಾಜಾಧಿರಾಜರು ಅಡಿಯಾಳುಗಳಾಗಿದ್ದರೂ ಅವರಿಗೆ ನಾಯಕತ್ವ ಬೇಕಿರಲಿಲ್ಲ, ಜಗತ್ತೇ ಎದುರಿಸಿದರೂ ಧರ್ಮಮಾರ್ಗ, ಸಂಪ್ರದಾಯ, ಪದ್ಧತಿ, ಭಗವನ್ನಿಷ್ಠೆಗಳಿಂದ ವಿಚಲಿತರಾಗುತ್ತಿರಲಿಲ್ಲ. ಜಗತ್ತಿನ ಒಡೆತನವೇ ಒಲಿದು, ತಮ್ಮ ಕಾಲಡಿಯಲ್ಲಿ ಬಿದ್ದಿದ್ದರೂ ಆ ಮಹನೀಯರು ಅದರತ್ತ ಕಣ್ಣ ಹಾಯಿಸುತ್ತಿರಲಿಲ್ಲ. ಇದಕ್ಕೆ ಕಾರಣವಿಷ್ಟೇ; ಅವರ ದೃಷ್ಟಿ ಸದಾ ಪರದ ಕಡೆಗಿರುತ್ತಿತ್ತು, ಶಾಶ್ವತ ಮೋಕ್ಷ ಸಾಮ್ರಾಜ್ಯವನ್ನು ಸಾಧಿಸಬೇಕೆಂದೇ ಸಾಧನಮಾರ್ಗವಾದ ವ್ರತವನ್ನು ಹಿಡಿದ ಮಹಾತ್ಮರಿಗೆ ಅಶಾಶ್ವತವಾದ ಐಹಿಕ ಸಿರಿ-ಸಂಪತ್ತು-ಪ್ರತಿಷ್ಠೆಗಳಲ್ಲಿ ಹಂಬಲವಿದ್ದೀತೆ ? ಇಂತು ಉದಾತ್ತಚರಿತರಾದ್ದರಿಂದಲೇ ಇಂದಿಗೂ ಅವರು ಪ್ರಾತಃಸ್ಮರಣೀಯ ಪುಣ್ಯಶ್ಲೋಕರಾಗಿ, ಸರ್ವಮಾನ್ಯರಾಗಿ ಭಾರತೀಯ ಜನತೆಯ ಹೃದಯಸಿಂಹಾಸನದಲ್ಲಿ ಶಾಶ್ವತವಾಗಿ ನೆಲೆ ನಿಂತು ಕಂಗೊಳಿಸುತ್ತಿದ್ದಾರೆ! ಇಂಥವರು ನಮ್ಮ ಸಂಸ್ಕೃತಿಗೆ ಹಿರಿಮೆಯನ್ನು ತಂದುಕೊಟ್ಟ ಪುಣ್ಯಪುರುಷರು, ಭಾರತವು ಪ್ರಪಂಚಕ್ಕೆ ಆದರ್ಶವಾಗಿ, ಅದರ ಭಾರ ಹೊರುವಂತಾದುದು ಇಂಥ ವಿಭೂತಿಪುರುಷರಿಂದ, ಇಂಥ ಮಹನೀಯರನ್ನು ಪಡೆದ ಭಾರತೀಯರೇ ಭಾಗ್ಯಶಾಲಿಗಳು.
ಆದರೆ ಇಂದು ಅಂತಹ ಪುಣ್ಯಜೀವಿಗಳ ನಾಯಕತ್ವ ನಮ್ಮ ನಾಡಿಗೆ, ಜನತೆಗೆ ಇಲ್ಲದಿರುವುದೇ ಇಂದಿನ ವಿಪ್ಲವಗಳಿಗೆ ಕಾರಣವಾಗಿದೆ. ಈ ಎಲ್ಲ ಕಷ್ಟಪರಿಸ್ಥಿತಿ-ಗೊಂದಲಗಳಿಂದ ಪಾರಾಗಿ ಭಾರತದೇಶ ಹಿಂದಿನಂತೆ ಸರ್ವಾಂಗೀಣ ಉನ್ನತಿ ಗಳಿಸಿ ಮತ್ತೆ ಕಂಗೊಳಿಸಬೇಕಾದರೆ ನಮ್ಮ ಪ್ರಾಚೀನ ಪುಣ್ಯಪುರುಷರು ತೋರಿಕೊಟ್ಟ ಸನಾತನ ಧರ್ಮಮಾರ್ಗದಲ್ಲಿ ನಡೆಯು- ವುದೊಂದೇ ಉಪಾಯವಾಗಿದೆ. ಸನಾತನ ಧರ್ಮವೆಂದ ಕೂಡಲೇ ಒಂದು ವೇಷಧರಿಸಿದ ಚಿತ್ರ ಇಂದು ಎಲ್ಲರ ಮುಂದೆ ಬಂದು ನಿಲ್ಲುವುದು, ಆಧುನಿಕರ ಅಪಹಾಸ್ಯಕ್ಕೆ ಪಾತ್ರವಾದ ಚಿತ್ರವದು, ಧರ್ಮಭೂಮಿಯಾಗಿದ್ದ ನಮ್ಮ ಭಾರತದೇಶದಲ್ಲಿ ಧರ್ಮವೆಂದರೆ ಇಂದು ಸಮಾಜಕ್ಕೆ ಜಿಹಾಸೆಯಾಗಿದೆ. ಇದಕ್ಕೆ ಧರ್ಮದ ಹೆಸರಿನಲ್ಲಿ ನಡೆದಿರುವ ಸ್ಥಿತಿ ಬಹುಮಟ್ಟಿಗೆ ಕಾರಣವಾಗಿದೆ. ಸ್ವಾರ್ಥಸಾಧನೆಗೆ ಇದೊಂದು ಮುಖವಾಡವೆಂಬ ಭಾವನೆ ಆಧುನಿಕರಲ್ಲಿ ಬೇರೂರಿದೆ. ಮೇಲುನೋಟಕ್ಕೆ ಇದು ನಿಜವೆನಿಸಿದರೂ, ನಿಜತತ್ವ ಹಾಗಿಲ್ಲ. ಧರ್ಮದ ನಿಜವಾದ ಸ್ವರೂಪ ಪುಸ್ತಕಗಳ ಅಧ್ಯಯನಮಾತ್ರದಿಂದ ಅರಿಯಲು ಸಾಧ್ಯವಿಲ್ಲ. ಇತಿಹಾಸ ಸಂಶೋಧಕನಾದ ಮಾತ್ರಕ್ಕೆ ಅದರ ಅರಿವಾಗದು, ಅದು ಅನುಭವದಿಂದ ಮಾತ್ರ ಸಾಧ್ಯ. ಆಗ ವ್ಯಕ್ತವಾಗುವುದು, ಅದರ ಅಗಾಧ ಮಹಿಮೆ, ಧರ್ಮವೆಂದರೆ ಡಂಭಾಚಾರವಲ್ಲ, ನಾಮಧಾರಣಮಾಡಿ, ಸ್ವಾರ್ಥಕ್ಕಾ ಶಾಸ್ತ್ರವಚನಗಳನ್ನು ಬಳಸಿಕೊಳ್ಳುವ ಪಾಂಡಿತ್ಯವಲ್ಲ - ಮುಸುಕಿನಲ್ಲಿ ಮಾಡುವ ಅನ್ಯಾಯವಲ್ಲ. ಇದು ಬಿಚ್ಚು ಹೃದಯದ ಹಚ್ಚಹಸನಾದ ಬಾಳು, ಕಲಿತಿದ್ದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ವೈಖರಿ, ಅಸ್ಥಿರವನ್ನು ಅಮರವನ್ನಾಗಿಸುವ ಯೋಗ ಅನಂತಸುಖವನ್ನು ಅನುಭವಕ್ಕೆ ತಂದುಕೊಡುವ ತಪಸ್ಸು, ಅದಕ್ಕೆ ಜನರ ಸ್ಥಾನ-ಮಾನಗಳ, ಐಹಿಕ ಪ್ರಲೋಭನಗಳದಾಕ್ಷಿಣ್ಯವಿಲ್ಲ ಧರ್ಮದ ದೃಷ್ಟಿಯಲ್ಲಿ ಮನುಷ್ಯನ ನಿತ್ಯಪ್ರಶ್ನೆಗಳು ಕ್ಷುಲ್ಲಕ, ಅನಂತಕಾಲದ, ಅನಂತವಿಶ್ವದ, ಅನಂತವಿಧ ಸಮಸ್ಯೆಗಳಿಗೆ ಪರಿಹಾರರೂಪವಾದುದು ಸನಾತನ ಧರ್ಮ! ಇದನ್ನು ಅಲ್ಪದೃಷ್ಟಿಯಿಂದ, ಸಂಕುಚಿತ ಕೋನದಿಂದ ವಿಶಿಷ್ಟ ಕಾಲ-ದೇಶಗಳ ನಿಲುವಿನಿಂದ ನೋಡಿ ಅಳೆಯುವುದು ತಪ್ಪಾದೀತು ! ಅದರಿಂದ ನಮ್ಮ ಸಮಸ್ಯೆಗಳು ಬಗೆಹರಿಯಲಾರವು. ತ್ರಿಕಾಲಜ್ಞಾನಿಗಳಿಗೆ ಮಾತ್ರ ಧರ್ಮದ ನಿಜವಾದ ಅರಿವಾಗುವುದು. ಇತರರು ಅದನ್ನು ಚರ್ಚಿಸುವುದಕ್ಕಿಂತ ಅನುಸರಿಸುವುದೇ ಶ್ರೇಯಸ್ಕರ, ನಮ್ಮ ನಿತ್ಯದ ತೊಡರುಗಳಿಗೆ ಹುಡುಕುವ ಪರಿಹಾರವು, ಆ ಮಹಾಪರಿಹಾರರೂಪವಾದ ಧರ್ಮಕ್ಕೆ ಅವಿರುದ್ಧವಾಗಿದ್ದರೆ ಮಾತ್ರ ಕ್ಷೇಮವಾದೀತು.
ಜಗತ್ತಿನಲ್ಲಿ ನಾನಾವಿಧ ಸಮಸ್ಯೆಗಳು ಹಿಂದಿನಿಂದಲೂ ಎದ್ದು ನಿಲ್ಲುತ್ತಲೇ ಇವೆ. ಅದಕ್ಕೂ ಪರಿಹಾರವನ್ನು ಸನಾತನಧರ್ಮ ನೀಡುತ್ತಲೇ ಇದೆ. ಹೀಗೆ ಸರ್ವಾಲಿಂಗಿತವಾದ ಸಮಸ್ಯೆಗಳಿಗೆ ಸನಾತನಧರ್ಮರೂಪ ಪರಿಹಾರವನ್ನು ಕಂಡುಕೊಂಡವರು ನಮ್ಮ ಭಾರತೀಯರು. ಅವರು ಅದರ ತಳಹದಿಯ ಮೇಲೆ ನಮ್ಮ ಸಂಸ್ಕೃತಿಯೆಂಬ ಸುಂದರ ಮಂದಿರವನ್ನು ಕಟ್ಟಿ ಬೆಳಗಿಸಿದರು. ಆದ್ದರಿಂದ ಅದು ಅನಾದಿಯಾಗಿ ಅನಂತವಾಯಿತು. ಸಾಮೂಹಿಕ ಚಳುವಳಿಯಲ್ಲಿ ವೈಯಕ್ತಿಕ ಭಿನ್ನಾಭಿಪ್ರಾಯಕ್ಕೆ ಹೇಗೆ ಮನ್ನಣೆಯಿಲ್ಲವೋ, ಹಾಗೆ ಧರ್ಮದ ಮುಂದೆ ನಮ್ಮ ತಾತ್ಕಾಲಿಕ ಚಿತ್ರ. ದೊಡ್ಡವರ ಕ್ಷೇಮಕ್ಕಾಗಿ ಚಿಕ್ಕ ಸುಖ ತ್ಯಾಜ್ಯ ಮತ್ತು ಹೇಯ. ಈ ವಿಶಾಲದೃಷ್ಟಿಯಿಂದ ಸಭ್ಯತೆಯನ್ನು ನಮ್ಮವರು ಬೆಳೆಸಿದರು. ಅದರಲ್ಲಿ ಅಭಿಪ್ರಾಯ ಭೇದಕ್ಕೆ ಅವಕಾಶವಿದ್ದರೂ ಅದರಿಂದ ದೊಡ್ಡ ಹಾದಿಗೆ ಅಡ್ಡಿಯಿಲ್ಲ, ಆ ಭೇದಗಳೆಲ್ಲ ದೊಡ್ಡ ಮಾರ್ಗದಲ್ಲಿ ಲೀನವಾಗಿಬಿಡುತ್ತವೆ, ಇದೇ ಸಮನ್ವಯದೃಷ್ಟಿ, ಇಂಥ ಉದಾತ್ತ ಸಂಪತ್ತಿಗೆ ಉತ್ತರಾಧಿಕಾರಿಗಳಾಗುವುದೊಂದು ಭಾಗ್ಯವಿಶೇಷ. ಆದರೆ ಅದನ್ನು ಉಳಿಸಿಕೊಳ್ಳುವುದರಲ್ಲಿದೆ ನಮ್ಮ ಜಾಣತನ.
ವೈಯಕ್ತಿಕ ಸಾಧನೆಗೆ ಪೂರ್ಣ ಸಹಕಾರಿಯಾಗಿ, ಸಮಸ್ತರ ಸೌಭಾಗ್ಯವನ್ನು ಒಟ್ಟುಗೂಡಿಸುವುದು ಧರ್ಮ, ಧಾರಣ ಧರ್ಮದ ಮೊದಲನೆಯ ಗುಣ. ಅದೇ ಅದರ ಜೀವನಾಡಿ. ಧರ್ಮ ಹಾರದಲ್ಲಿರುವ ದಾರವಿದ್ದಂತೆ. ಇದು ಧರ್ಮದ ಮುಖ್ಯ ತಿರುಳು. ಇದು ಜನಾಂಗದ ಅಭ್ಯುದಯಕ್ಕೆ ಜೀವಸ್ವರವಿದ್ದಂತೆ. ಇಂದು ದೇಶದಲ್ಲಿ ಉಂಟಾಗಿರುವ ಕೋಭೆ ಧರ್ಮಗ್ಲಾನಿಯ ಫಲ. ಮಾನವರ ಐಕ್ಯತೆಗೆ ಮುಖ್ಯವಾಗಿ ಬೇಕಾಗುವ ಅಂಟಿಲ್ಲದೆ ಇಂದು ಒಬ್ಬರ ಮೇಲೊಬ್ಬರು ಕತ್ತಿ ಮಸೆಯುವ ಕಾಲ ಪ್ರಾಪ್ತವಾಗಿದೆ. ಸಹಾನುಭೂತಿ, ಸಹಕಾರ, ಸಹಾಯ ಸಮೂಲ ನಾಶವಾಗಿದೆ. ಧರ್ಮದ ಮೂಲಮಂತ್ರವೇ ಮರೆತುಹೋಗಿದೆ. ಇದು ಬಲಿತರೆ ವಿನಾಶವೇ ಫಲ. ಧರ್ಮದ ಪುನರುಜ್ಜಿವನವೇ ಇದಕ್ಕೆ ಮದ್ದು. ಪ್ರಪಂಚ ಸಂಸ್ಥೆಗಳು, ಬುದ್ಧಿವಂತಿಕೆಯ ಕಾಯಿದೆ, ಕಾನೂನು, ಕರಾರುಗಳು ಮಾನವರಲ್ಲಿನ ದಾನವತೆಯನ್ನು ಅಳಿಸಲಾರವು. ಅವು ಅದನ್ನು ಕೆರಳಿಸುತ್ತವೆ. ಪ್ರಪಂಚದಲ್ಲಿ ಧರ್ಮ ಸೌಹಾರ್ದ ನೀಡುತ್ತದೆ. ಈ ಪ್ರಥಮ ಪಾಠವನ್ನಿಂದು ಎಲ್ಲರೂ ಕಲಿಯಬೇಕಾಗಿದೆ. ಮತ, ಕಾನೂನು, ದಾಕ್ಷಿಣ್ಯ ಇದರ ಅರ್ಥವು ಒಟ್ಟುಗೂಡಿಸುವುದೇ ಆಗಿದೆ. ಧರ್ಮದ ಅರ್ಥವೂ ಅದೇ. ಒಟ್ಟುಗೂಡಿಸುವುದೆಂದರೆ ಸಾಮಾಜಿಕ ಕಟ್ಟುಪಾಡು, ವರ್ಣವ್ಯವಸ್ಥೆಯನ್ನು ಕಿತ್ತು ಬಿಸುಟುಹಾಕುವುದೆಂದಲ್ಲ! ಐಕ್ಯತೆಯೆಂದರೆ ಜಾತ್ರೆಕತೆಯಲ್ಲ ; ಮಕ್ಯತೆ! ಅದನ್ನು ನೀಡುವುದು ಸನಾತನಧರ್ಮ, ಸೌಹಾರ್ದವಿಲ್ಲದೆ ಶಾಂತಿಯಿಲ್ಲ, ಅದಿಲ್ಲದೆ ಪರಸ್ಪರ ದ್ವೇಷ ತಪ್ಪದು. ಆದ್ದರಿಂದ ಧರ್ಮವೇ ಸೌಹಾರ್ದ ಮೂರ್ತಿ, ದೇವರು. ಈ ಧರ್ಮಕ್ಕೆ ವೇದಾದಿಸಚ್ಛಾಸ್ತ್ರಗಳೇ ಮೂಲ. ಈ ತಳಹದಿಯ ಮೇಲಿನ ಧರ್ಮ ಮಂದಿರಕ್ಕೆ ಅನೇಕ ಭಾಗಗಳುಂಟು. ಅವೊಂದೊಂದೂ ಬಣ್ಣ ಬಣ್ಣವಾಗಿ ಕಂಗೊಳಿಸುವುದು. ಮನುಷ್ಯನ ಜೀವನ ಕರ್ತವ್ಯದಲ್ಲಿ ಇದು ಆಶ್ರಮಧರ್ಮ- ವೆನಿಸುವುದು, ಬದುಕಿಗೆ ಬೇಕಾದ ಸಾಧನೆಗೆ ವರ್ಣಧರ್ಮವೆನ್ನಬಹುದು. ಕರ್ತವ್ಯಕುಶಲತೆಯೇ ಕರ್ಮಯೋಗ, ಬದುಕಿನ ಗುರಿಯೇ ಮೋಕ್ಷ. ಮೋಕ್ಷದ ಸಾಧನೆ ಜ್ಞಾನ ಮತ್ತು ಭಕ್ತಿ (ಪ್ರೇಮ - ವಿಶ್ವಾಸ) ಎಂಬ ತಾಯಿಬೇರಿನಿಂದ ಇದು ಶಾಖೋಪ- ಶಾಖೆಗಳಾಗಿ ಒಡೆದು ನಮ್ಮ ಸನಾತನಧರ್ಮ ಇಂಥ ವ್ಯಾಪಕಸ್ವರೂಪವನ್ನು ಪಡೆದಿದೆ. ಇದರ ಮೂಲವರಿಯದೆ ಯಾವುದೋ ಒಂದು ಶಾಖೆಯನ್ನು ಎಲ್ಲಿಯೋ ದೃಷ್ಟಿಯಿಟ್ಟು ನೋಡುತ್ತಾ ಮರವನ್ನು ನಿಂದಿಸುವುದು ನಮ್ಮ ಅಲ್ಪತೆಯನ್ನು ತೋರುವುದೇ ವಿನಃ ಮರದ ಸೊಬಗು ಅದರಿಂದ ಕಡಿಮೆಯಾಗದು.
ನಮಗೆ ಈ ವಿಷಯದಲ್ಲಿ ಮಾರ್ಗದರ್ಶಕರೆಂದರೆ ಪ್ರಾಚೀನರಾದಪುಣ್ಯಶ್ಲೋಕರು. ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ಮುನ್ನಡೆಯಲ್ಲಿ ನಮ್ಮ ಅಭ್ಯುದಯ ನಿಶ್ಚಿತ. ಆದ್ದರಿಂದ ಉದ್ದಾರಕ ಗುರುಗಳಾದ ಅವರಿಗೆ ನಾವು ಶರಣುಹೋಗಬೇಕು.
ಎಲ್ಲ ದೇಶ-ಕಾಲಗಳಲಿಯೂ, ಎಲ್ಲಾ ಜನಾಂಗಗಳಲ್ಲೂ ಎದ್ದುಕಾಣುವ ಒಂದು ಮೂಲಭೂತ ಗುಣವಿದೆ. ಅದ ಗುರುಭಾವನೆ, ಭಕ್ತಿ! ಮಾನವನನ್ನು ರಾಕ್ಷಸೀ ಮಹತ್ವಾಕಾಂಕ್ಷೆಯಿಂದ, ಅಸುರೀಶಕ್ತಿಯ ಕಪಿಮುಷ್ಟಿಯಿಂದ ಬಿಡಿಸಿ ಅವನು ಮಾನವೀಯತೆಯ ಪರಾಕಾಷ್ಠತೆಯನ್ನು ಮೈದುಂಬಿಸಿ, ಸಾತ್ವಿಕತೆಯ ಪೀಯೂಷದೊರತೆಯನ್ನು ಮಾನವನ ಹೃದಯ ಸರೋವರದಲ್ಲಿ ಪುಟಿದೇಳುವಂತೆ ಮಾಡಿ, ಕಾರುಣ್ಯಾಮೃತಸೇಚನದಿಂದ ಸದ್ಭಾವನೆ, ಆಸ್ತಿಕತೆ, ಶಾಂತಿ, ಲೋಕಕಲ್ಯಾಣದೀಕ್ಷೆ ಧರ್ಮಮಾರ್ಗ ಪ್ರವೃತ್ತಿ, ತಾತ್ವಿಕ ಪ್ರಜ್ಞೆಗಳನ್ನು ಅವನಲ್ಲಿ ಉಜ್ವಲಗೊಳಿಸುವ ಒಂದು ಮಹಾಶಕ್ತಿಯೇ ಗುರುಭಕ್ತಿ! ಆದ ಸುಜೀವಿಗಳಿಗೆ ದಾರಿತೋರುವ ದಿವ್ಯದೀಪ, ಸಂಸಾರದ ಕಷ್ಟಕೋಟಲೆಗಳಿಂದ ಬಳಲಿ, ಬೆಂಡಾಗಿ, ಬೇಸತ್ತಾಗ ಬಳಲಿದ ಜೀವ ಒಂದು ಆಧಾರವನ್ನು ಅರಸುತ್ತಿರುತ್ತದೆ. ಅದೃಶ್ಯರೂಪಿಯಾದ ಪರಮಾತ್ಮನ ಚಿಂತನಕ್ಕೆ ಬೇಕಾದ ಸಹನೆ, ಸಂಸ್ಕಾರಗಳ ತಿಳಿವ ಮೂಡದ ಆ ಜೀವಕ್ಕೆ ಪ್ರತ್ಯಕ್ಷವಾಗಿ ಮಾರ್ಗದರ್ಶನಮಾಡುವ ಒಂದು ಸಮರ್ಥವಾದ ದಿವ್ಯಶಕ್ತಿ ಬೇಕಾಗುತ್ತದೆ. ಅಂತಹ ಜೀವ, ತನ್ನ ಸ್ವರೂಪೋದ್ಧಾರಕನನ್ನು ಅರಸುವುದು ಸ್ವಾಭಾವಿಕ.
ಇಂಥ ಉಪದೇಶ - ಮಾರ್ಗದರ್ಶನಗಳಿಂದ ಉದ್ದೀಪಿತವಾದ, ಪ್ರೇರಿತವಾದ ಸಮಾಜವು ತನ್ನ ನೈತಿಕ ಮಟ್ಟವನ್ನು ಉಳಿಸಿಕೊಂಡು, ಶಾಂತಿ-ಸಮಾಧಾನಗಳ ಭೂಮಿಕೆಯ ಮೇಲೆ ಪಾರಮಾರ್ಥಿಕ - ಧಾರ್ಮಿಕ ಮಹಲನ್ನೇ ನಿರ್ಮಿಸಿತ್ತು! ಮಾತ್ರವಲ್ಲ; ಸಮಸ್ತವಿಶ್ವಕ್ಕೇ ಇಂತಹ ನಮ್ಮ ಸಮಾಜವು ಶಾಂತಿ, ಧರ್ಮ, ನೀತಿ, ತತ್ವ, ಮಾನವೀಯತೆಗಳ ಮಹಾಮಂತ್ರವನ್ನು ಉಪದೇಶಿಸುವ ಮಹತ್ವಪೂರ್ಣ ಆದರ್ಶ ಸ್ಥಾನವನ್ನು ಪಡೆದಿತ್ತು! ಇಂಥಾ ಧಾರ್ಮಿಕ ಸಮಾಜವನ್ನು ಪಾರಮಾರ್ಥಿಕ ಪಥದಲ್ಲಿ ಮುನ್ನಡೆಯಿಸಿದವರು ನಮ್ಮ ಪ್ರಾಚೀನ ಋಷಿ-ಮುನಿಗಳು. ವೇದ, ಉಪನಿಷತ್ತು, ಪುರಾಣ, ಇತಿಹಾಸಗಳ, ಕೊನೆಗೆ ಇತ್ತೀಚಿನ ಚಾರಿತ್ರಿಕ ಹಿನ್ನೆಲೆಯಲ್ಲಿ ಕೂಡ ವಿವೇಚಿಸಿದಾಗ ಎದ್ದುಕಾಣುವ ಪೂಜ್ಯ ಹಿರಿಯ ವ್ಯಕ್ತಿ ಗುರುಗಳು! ಗುರು ಕೇವಲ ಒಂದು ವ್ಯಕ್ತಿಯಲ್ಲ, ದಿವ್ಯಶಕ್ತಿ! ಆ ಶಕ್ತಿಯು ಸಜೀವವಾಗಿ ಮಾನವರ ಮನಶಕ್ತಿಯನ್ನೇ ನಿಯಂತ್ರಿಸುತ್ತಿತ್ತು! ಪ್ರತಿವ್ಯಕ್ತಿಯ ಗುಣ- ಧರ್ಮಗಳನ್ನು ವಿಶ್ಲೇಷಿಸಿ, ಅವರವರ ಸ್ಥಾನಗಳನ್ನು ನಿರ್ಧರಿಸಿ, ಸಮಾಜದಲ್ಲಿ ಅದಕ್ಕೆ ತಕ್ಕಂತೆ ಸ್ಥಾನ-ಮಾನಗಳು ದೊರಕುವಂತೆ ಮಾಡಿ, ಧರ್ಮದ ಅಚ್ಚುಕಟ್ಟಿಗೆ ಅಳವಡಿಸಿ ಪೋಷಿಸುತ್ತಿತ್ತು. ಅಲ್ಲಿ ಕನಿಷ್ಠ-ಗರಿಷ್ಠಗಳ ಕಲ್ಪನೆ - ತಪ್ಪು ಭಾವನೆಗಳಿಗೆ ಸ್ವಲ್ಪವಾ ಅವಕಾಶವಿರಲಿಲ್ಲ. ಅಂತೆಯೇ ದೈವೀಭಾವನೆಯ ಜೊತೆಗೆ; ಗುರುಭಾವನೆಯೂ ಬೆರೆತು ನಡೆದುಬಂದಿತು, ನಮ್ಮಸನಾತನಧರ್ಮದ ಮಹಾಪಥದಲ್ಲಿ!
“ಶ್ರೀಗುರುಭೋ ನಮಃ” ಎಂಬ ಮಂತ್ರ ಆಬ್ರಹ್ಮ ಸ್ತಂಭಪರ್ಯಂತವಾಗಿ ಓತಪ್ರೋತವಾಗಿ ಮಾನವರ ಮನೋಭೂಮಿ- ಯಲ್ಲಿ ಹರಿದುಬಂದಿತು. ಭಾರತೀಯತೆಯ ಅಚ್ಚುಕಟ್ಟಿನಲ್ಲಿ ಈ ಮಂತ್ರವಿಲ್ಲದೆ ಯಾವ ಕಾರ್ಯವೂ ನಡೆಯಲಾರದು. ಅಂದು ಈ ಭಾವನೆ ಹೃತ್ತೂರ್ವಕವಾಗಿ ಆಚರಣೆಯಲ್ಲಿ ಕಂಡುಬರುತ್ತಿತ್ತು. ಇಂದಿನಂತೆ ಅದು ಕೇವಲ ಪ್ರದರ್ಶನಕ್ಕಾಗಿ, ಢಾಂಬಿಕ- ತನದಿಂದ, ಮತ್ತೊಬ್ಬರನ್ನು ವಂಚಿಸುವ ಸಂಚಾಗಿರಲಿಲ್ಲ! ಮಾಧ್ವರ ಮಟ್ಟಿಗೆ ಹೇಳುವುದಾದರೆ; ಇದನ್ನು ಎತ್ತಿಹಿಡಿದವರೆಂದರೆ ಶ್ರೀಮಧ್ವಾಚಾರ್ಯ ಪೀಠಾಧಿಪತಿಗಳು. “ತದಲಂ ಬಹುಲೋಕವಿಚಿಂತನಯಾ ಪ್ರವಣಂ ಕುರು ಮಾನಸಮೀಶಪದೇ” ಎಂಬ ಆಚಾರ್ಯ ಮಧ್ವರ ಆದೇಶವನ್ನು ಶಿರಸಾವಹಿಸಿ, ಲೌಕಿಕವಾದ ಆರ್ಥಿಕಾದಿ ದೃಷ್ಟಿಯನ್ನು ದೂರಮಾಡಿ, ಕೇವಲ ಪಾರಮಾರ್ಥಿಕ ಚಿಂತನೆ - ಸಾಧನಗಳಲ್ಲಿಯೇ ತಲ್ಲೀನರಾಗಿ ಗುರುಭಕ್ತಿಪರಾಯಣರಾದ್ದರಿಂದಲೇ ನಮ್ಮ ಶ್ರೀಮಧ್ವಪೀಠಾಧಿಪತಿಗಳು ಇಂದಿಗೂ ಜಗನ್ಮಾನ್ಯರಾಗಿ ಲೋಕಕಲ್ಯಾಣಶಕ್ತರೆಂದು ಕೀರ್ತಿ ಗಳಿಸಿ ಸರ್ವಸಜ್ಜನರ ಹೃಠದಲ್ಲಿ ಶಾಶ್ವತವಾದ ಸ್ಥಾನವನ್ನು ಗಳಿಸಿದ್ದಾರೆ.
ಭಾರತದಲ್ಲಿ ಪ್ರವೃತ್ತವಾದ, ಬೆಳೆದು ಬಂದ ಎಲ್ಲ ಮತ, ಧರ್ಮ, ಪಂಥಗಳು ಗುರುಶಬೋಚ್ಚಾರಣೆಯಿಲ್ಲದೆ ಮುಂದೆ ಹೆಜ್ಜೆಯಿಟ್ಟಿಲ್ಲ, ವೇದ-ಉಪನಿಷತ್ತು-ಪುರಾಣಗಳಲ್ಲಿ ಗುರು-ಶಿಷ್ಯರ ಬಗೆಗಿನ ಅನೇಕ ಕಥೆ, ಉಪಾಖ್ಯಾನಗಳನ್ನು ನಾವು ಕಾಣಬಹುದು. ಅಲ್ಲಿ ತೋರುವ ಗುರು-ಶಿಷ್ಯ ಬಾಂಧವ್ಯ ಅನುಪಮವಾದುದು.ಆ ಕಥಾನಕಗಳಲ್ಲಿ ಗುರುಭಕ್ತಿ-ಶಿಷ್ಯವಾತ್ಸಲ್ಯಗಳೇ ತುಂಬಿತುಳುಕುತ್ತಿವೆ. ಅಜ್ಞನಾಗಲಿ, ಪ್ರಾಜ್ಞನಾಗಲಿ, ಗುರ್ವನುಗ್ರಹ - ನಿರ್ದೇಶನ - ಉಪದೇಶಗಳಿಲ್ಲದೆ ಮುಂದುವರೆಯಲು ಸಾಧ್ಯವೇ ಇಲ್ಲ. ತಮ್ಮ ಬುದ್ಧಿಚಾತುರ್ಯದಿಂದ ಐಹಿಕವಾಗಿ, ಆರ್ಥಿಕವಾಗಿ ಕೆಲವರು ಮುಂದೆ ಬಂದಿರಬಹುದು ಮತ್ತು ಸರ್ವಸ್ವವನ್ನೂ ಕಳೆದುಕೊಂಡೂ ಇರಬಹುದು. ಆದರೆ ಜೀವರ ಉದ್ಧಾರಕ್ಕೆ ಕಾರಣವಾದ, ಅಲೌಕಿಕವಾದ, ಆತ್ರೋದ್ಧಾರಕವಾದ ಪಾರಮಾರ್ಥಿಕ ಸಾಧನಮಾರ್ಗದಲ್ಲಂತೂ ಗುರುವಿಲ್ಲದೇ, ಗುರ್ವನುಗ್ರಹವಿಲ್ಲದೆ, ನಮ್ಮಲ್ಲಿ ಮಾತ್ರವಲ್ಲ ಜಗತ್ತಿನ ಎಲ್ಲ ಧರ್ಮ- ಮತ-ಪಂಥಗಳಲ್ಲಿಯೂ ಮುನ್ನಡೆಯಲು ಸಾಧ್ಯವೇ ಇಲ್ಲ. ಅಂತೆಯೇ ಹರಿದಾಸಶಿರೋಮಣಿಗಳಾದ ಶ್ರೀಪುರಂದರದಾಸರು “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ!” ಎಂದು ಸಾರಿದ್ದಾರೆ!
ಇತರ ಎಲ್ಲ ಮತಗಳಿಗಿಂತ ಶ್ರೀಮಧ್ವಮತದಲ್ಲಿ ಗುರುವಿನ ಸ್ಥಾನ ಅತ್ಯಂತ ಹಿರಿದಾದುದು. ವೈಶಿಷ್ಟ್ಯಪೂರ್ಣವಾದುದು. ಇತರ ಮತಗಳಲ್ಲಿ ಅದೈತಮತದಲ್ಲಂತೂ ಈ ಭಾವನೆಗೆ ಅವಕಾಶವೇ ಇಲ್ಲ. ಏಕೆಂದರೆ ಆ ಮತವು ಜೀವೇಶ್ವರರಿಗೆ ಐಕ್ಯವನ್ನು ಪ್ರತಿಪಾದಿಸುತ್ತದೆ. ಅಲ್ಲಿ ಜೀವರೆಲ್ಲರೂ ಬ್ರಹ್ಮರೇ ಆಗುತ್ತಾರೆ! ಅಲ್ಲಿ ಸರ್ವಜ್ಞನೂ, ಸರ್ವೋತ್ತಮನೂ, ಸ್ವತಂತ್ರನೂ, ಪೂರ್ಣನೂ ಆದ ಪರಮಾತ್ಮ, ಅಲ್ಪಜ್ಞನೂ, ಅಲ್ಪಶಕ್ತನೂ, ಅಸ್ವತಂತ್ರನೂ, ಅಪೂರ್ಣನೂ, ದೋಷವಿಶಿಷ್ಟನೂ ಆದ ಜೀವ, ಇಂಥ ಜೀವಕೋಟಿ ಪ್ರವಿಷ್ಟನಾದ ಗುರುವು, ಹೀಗೆ ಎಲ್ಲರೂ ಒಂದೇ ಆಗಿ “ಸೋSಹಂ” ಎಂಬ ಉಪಾಸನೆಯೇ ಆ ಮತದಲ್ಲಿ ಉಪದಿಷ್ಟವಾಗಿರುವುದರಿಂದ, ನಿಜವಾಗಿ ವಿಚಾರಮಾಡಿದರೆ ಅಲ್ಲಿ ಗುರು-ಶಿಷ್ಯಭಾವನೆಗೆ ಅವಕಾಶವೆಲ್ಲಿಂದ ಬಂದೀತು!
ಭಗವಂತನನ್ನು ಒಲಿಸಿಕೊಳ್ಳಲು ಭಕ್ತಿ (ಪ್ರೇಮ) ಅತಿ ಮುಖ್ಯ. ಅದು ಭಗವನ್ಮಾಹಾತ್ಮಜ್ಞಾನಪೂರ್ವಕವಾಗಿರಬೇಕು. ಅಂಥ ಪರಮಾತ್ಮನ ಮಹಾತ್ಮಜ್ಞಾನವು ಅವನ ಅನಂತಗುಣಗಳಿಂದ ಪೂರ್ಣವಾದ, ಅವನ ಸತ್ವ-ಲೀಲಾ-ವಿಲಾಸಗಳ ಶ್ರವಣ, ಅಧ್ಯಯನಾದಿಗಳಿಂದ ಉಂಟಾಗುವುದು. ಅದನ್ನು ವೇದಾದಿಶಾಸ್ತ್ರಗಳು ನಿರೂಪಿಸುವುವು. ಅಂಥ ವೇದಾದಿಶಾಸ್ತ್ರ ಗಳಲ್ಲಡಗಿರುವ ಪರಮಾತ್ಮತತ್ವ, ಪ್ರಮೇಯ, ಮಾಹಾತ್ಮಾದಿಗಳನ್ನು ಬೋಧಿಸುವವರು ಗುರುಗಳಾದ್ದರಿಂದ, ಅಂಥ ಭಗವಂತ- ನಲ್ಲಿ ಭಕ್ತಿಯನ್ನುಂಟುಮಾಡುವುದು ಗುರುಭಕ್ತಿಯಾದುದರಿಂದ ಶ್ರೀಹರಿಭಕ್ತಿಗೆ ಗುರುಭಕ್ತಿಯು ಮುಖ್ಯವಾದ್ದರಿಂದ, ಮಹಾ- ಪ್ರಭುವಾದ ಶ್ರೀಹರಿಯಲ್ಲಿ ಶ್ರೇಷ್ಠವಾದ ಭಕ್ತಿಯು ಎಂತು ಆವಶ್ಯಕವೋ, ಅದರಂತೆಯೇ ಗುರುಗಳಲ್ಲಿಯೂ ಉತ್ತಮ ಭಕ್ತಿ ಮಾಡಬೇಕು. ಹಾಗೆ ಮಾಡುವುದರಿಂದ ಗುರುಗಳು ಬೋಧಿಸದೇ ಇರುವ ಅನೇಕ ವಿಚಾರಗಳು, ಅರ್ಥಗಳೂ ಶಿಷ್ಯರಿಗೆ ತಿಳಿಯುತ್ತವಾದ್ದರಿಂದ ಗುರುಭಕ್ತಿ ಅವಶ್ಯವೆಂದು ವೇದಗಳೇ ಸಾರುತ್ತಿವೆ. ಒಂದು ವೇಳೆ ಹರಿಯು ಕುಪಿತನಾದರೆ ಗುರುಗಳು ಕಾಪಾಡಬಲ್ಲರು. ಗುರುಗಳು ಕುಪಿತರಾದರೆ, ಯಾರೂ ಅಂಥವರನ್ನು ರಕ್ಷಿಸಲಾರರು. ಗುರುಗಳು ಸುಪ್ರೀತರಾದರೆ ಸಾಧಿಸಲಾಗದ್ದಾವುದೂ ಇಲ್ಲ!
ಇಂತಹ ಗುರು-ಶಿಷ್ಯಪರಂಪರೆಯು ಅವ್ಯಾಹತವಾಗಿ ನಡೆದುಬಂದಿತ್ತು ನಮ್ಮ ಭಾರತದಲ್ಲಿ ; ಮುಖ್ಯವಾಗಿ ಮಾದ್ದ ಸಮಾಜದಲ್ಲಿ ವೇದಾದಿಗಳಲ್ಲಿ ಉಕ್ತವಾಗಿರುವ ಈ ಗುರು-ಶಿಷ್ಯರ ಮಧುರ-ಅಮರ ಬಾಂಧವ್ಯದ ಅಮೃತಬೀಜವನ್ನು ಸಜ್ಜನರ ಹೃದಯಭೂಮಿಯಲ್ಲಿ ಬಿತ್ತಿದ ಮಹಾನುಭಾವರು ದೈತಸಿದ್ಧಾಂತದ ಪ್ರತಿಷ್ಠಾಪಕರೂ ಜೀವೋತ್ತಮರೂ, ಶ್ರೀವಾಯುದೇವರ ಮೂರನೆಯ ಅವತಾರರೂ, ವೇದಪ್ರತಿಪಾದ್ಯಮಹಿಮರೂ ಆದ ಶ್ರೀಮಧ್ವಾಚಾರ್ಯರು, ಸರ್ವರ ಉದ್ಧಾರ-ಕಲ್ಯಾಣಗಳಿಗಾಗಿ ಅವರು ಬಿತ್ತಿದ ಭಕ್ತಿಬೀಜವು ಅಂಕುರಿಸಿ, ಠಸಿಲೊಡೆದು, ಶಾಖೋಪಶಾಖೆಗಳಾಗಿ ಕುಸುಮಿತವಾಗಿ ಫಲಭರಿತವಾಯಿತು, ಶ್ರೀಪದ್ಮನಾಭ-ನರಹರಿ-ಮಾಧವ-ಅಕ್ಟೋಭ್ಯತೀರ್ಥ-ರಾಜೇಂದ್ರ-ಕವೀಂದ್ರ-ವಿಬುಧೇಂದ್ರ-ಲಕ್ಷ್ಮೀನಾರಾಯಣಮುನಿ (ಶ್ರೀಪಾದರಾಜರು)-ವ್ಯಾಸರಾಜ-ವಿಜಯೀಂದ್ರ-ವಾದಿರಾಜ ಸುಧೀಂದ್ರ-ಶ್ರೀರಾಘವೇಂದ್ರಸ್ವಾಮಿಗಳವರಿಂದ!
ಶಾಸ್ತ್ರಗಳಲ್ಲಿ ಗುರುಗಳೆಂದರೆ ಯಾರು ? ಅವರ ಲಕ್ಷಣಗಳೇನು? ಎಂಬುದನ್ನು ಅತಿಸುಂದರವಾಗಿ ನಿರೂಪಿಸಿದ್ದಾರೆ. ಗು-ಅಂಧಕಾರ, ರು-ಅದನ್ನು ಪರಿಹರಿಸುವವರು ಅಂದರೆ, ಶಿಷ್ಯರ ಮನದಲ್ಲಿ ಮನೆಮಾಡಿರುವ ಅಜ್ಞಾನವೆಂಬ ಕತ್ತಲೆಯನ್ನು ಹೊಡೆದೋಡಿಸಿ, ಜ್ಞಾನಜ್ಯೋತಿಯ ಪ್ರಕಾಶವನ್ನು ಕರುಣಿಸುವವರೇ ನಿಜವಾದ ಗುರುಗಳು! ಗುರುಗಳಾದವರಿಗೆ ತತ್ವವಿಷಯದಲ್ಲಿ ಅಜ್ಞಾನ, ವಿಪರೀತಜ್ಞಾನ, ಸಂಶಯಾದಿಗಳಿರಬಾರದು ಮತ್ತು ಶಿಷ್ಯರ ಎಲ್ಲ ಸಂಶಯಗಳನ್ನು ಪರಿಹರಿಸುವವರೇ ಗುರುಗಳೆಂದು ಜ್ಞಾನಿಗಳು ಹೇಳುವರು. ಗುರುಗಳು ಶಿಷ್ಯರ ಚಿತ್ತಾಪಹಾರಕರಾಗಿರಬೇಕೇ ಹೊರತು, ಶಿಷ್ಯರ ವಿತ್ತಾಪಹಾರಕ- ರಾಗಿರಬಾರದು! ಹೀಗೆ ಶಾಸ್ತ್ರಾದಿಗಳಲ್ಲಿ ಉಕ್ತವಾದ ಸದ್ಗುರುಲಕ್ಷಣಯುಕ್ತರಾಗಿದ್ದರು, ಶ್ರೀಮಧ್ವಾಚಾರ್ಯರ ಶಿಷ್ಯಪರಂಪರೆ- ಯಲ್ಲಿ ಬಂದ ಮೇಲ್ಕಂಡ ಮಹನೀಯರುಗಳು. ಇಂಥ ಜ್ಞಾನ-ಭಕ್ತಿ-ವೈರಾಗ್ಯ-ತಪಸ್ಸು-ಕಾರುಣ್ಯಾದಿ ಸಕಲಸದ್ಗುಣಭರಿತರೂ “ಸದ್ಗುರುಲಕ್ಷಣಗಳಿಂದ ದೇದೀಪ್ಯಮಾನರಾಗಿದ್ದವರು ನಮ್ಮ ಜಗದ್ಗುರುಗಳಾದ ಶ್ರೀರಾಘವೇಂದ್ರಗುರುಸಾರ್ವಭೌಮರು!
ಮೇಲೆ ನಿರೂಪಿಸಿದ ಈ ಲಕ್ಷಣಯುಕ್ತರಾದ ಶ್ರೀಮದಾಚಾರ್ಯ ಪರಂಪರೆಯ ಜ್ಞಾನಿವರ್ಯರು ಇತರ ಮತೀಯ ಸಾಧು-ಸಂತ-ಗುರುಗಳು ಮುಖ್ಯವಾಗಿ ವಿಶ್ವಗುರುಗಳಾದ ಶ್ರೀರಾಘವೇಂದ್ರಸ್ವಾಮಿಯವರ ಉಪದೇಶದಂತೆ ಮುನ್ನಡೆದು ಎಲ್ಲ ವಿಧ ಅಭ್ಯುದಯಗಳನ್ನು ಸಾಧಿಸಿಕೊಂಡು ಕೀರ್ತಿ ಗಳಿಸಿದ ಭಾರತದೇಶದಲ್ಲಿಂದು ಕಲಿಪ್ರಾಬಲ್ಯದಿಂದ, ಪರಕೀಯ ವಿದ್ಯೆ, ಭಾಷೆ, ಸಂಸ್ಕೃತಿ, ಸಭ್ಯತೆಯ ಮೋಹಗಳಿಂದ ಪವಿತ್ರ ದೈವೀಭಾವನೆ, ಗುರುಭಾವನೆ, ತಾತ್ವಿಕ-ಧಾರ್ಮಿಕ-ಸಾಂಸ್ಕೃತಿಕ-ಆಚಾರ- ವ್ಯವಹಾರ-ಭಕ್ತಿ ಮುಂತಾದವು ನಶಿಸುತ್ತಾ ಬಂದಿರುವುದು ದೇಶದ ದೌರ್ಭಾಗ್ಯವೆಂದರೆ ತಪ್ಪಾಗದು. ಇಂಥ ಕಠಿಣ ಪರಿಸ್ಥಿತಿಯಲ್ಲಿಯೂ ಜನ-ಮನದಲ್ಲಿ ಭಕ್ತಿ-ಶ್ರದ್ಧೆಗಳನ್ನು ಹುಟ್ಟಿಸಿ, ಅತೀಂದ್ರಿಯ ವಸ್ತುಗಳಲ್ಲಿ ನಂಬಿಕೆ, ದೈವೀಭಾವನೆಗಳನ್ನು ಪ್ರಚೋದಿಸಿ ಮಾನಸಿಕ ಶಾಂತಿ-ಸೌಖ್ಯಗಳನ್ನು ಕರುಣಿಸುತ್ತಾ, ಇನ್ನೂ ಆ ಸತ್ಪರಂಪರೆಯನ್ನು ರಕ್ಷಿಸಿಕೊಂಡು ಬರುತ್ತಿದೆ, ಶ್ರೀರಾಘವೇಂದ್ರಗುರುವರರ ದೇದೀಪ್ಯಮಾನವಾದ ದಿವ್ಯತೇಜಸ್ಸು ಮತ್ತು ಆ ಪರಮಮಂಗಳಕರ ನಾಮ!
ಶ್ರೀಗುರುರಾಜರು ನಮಗಿಂದು ದೊರಕಿರದಿದ್ದರೆ, ಅವತರಿಸದಿದ್ದರೆ.....? ಈ ಹೊತ್ತಿಗೆ ವೈದಿಕತತ್ವ, ಧರ್ಮ, ಸಂಸ್ಕೃತಿ, ಸದಾಚಾರ, ಭಾಗವತಧರ್ಮ, ಹರಿವಾಯುಗುರುಭಕ್ತಿಯುಕ್ತವಾದ ಸತ್ಪರಂಪರೆಗಳು ಹೇಳಹೆಸರಿಲ್ಲದಂತಾಗುತ್ತಿತ್ತೋ ಏನೋ! ಆ ಮಹಾಮಹಿಮರು ನಮಗೆ ದೊರಕಿರುವುದು ಭಾರತದ ಸೌಭಾಗ್ಯ ದೇವರನ್ನೂ, ಪರಲೋಕಾದಿ ಅತೀಂದ್ರಿಯ ವಸ್ತುಗಳನ್ನೂ ನಂಬದ ನಾಸ್ತಿಕರಲ್ಲೂ ದೈವೀಭಾವನೆ, ಗುರುಭಾವನೆಗಳನ್ನು ಜಾಗೃತಗೊಳಿಸಿ, ಭೌತಿಕವಿಜ್ಞಾನಶಕ್ತಿಯಿಂದಲೂ ಪೂರ್ಣ- ಗೊಳಿಸಲು, ಅಸಾಧ್ಯವಾದುದನ್ನು ತಮ್ಮ ಜ್ಞಾನ-ಭಕ್ತಿ-ತಪಸ್ಸು, ಯೋಗಶಕ್ತಿಗಳಿಂದ ಪ್ರತ್ಯಕ್ಷವಾಗಿ ಸಾಧಿಸಿ ತೋರುತ್ತಾ ಪರಮಾತ್ಮನ, ತತ್ವ-ಧರ್ಮಗಳ ಅಸ್ತಿತ್ವವನ್ನು ಎತ್ತಿಹಿಡಿದು ಲೋಕಕಲ್ಯಾಣಮಾಡುತ್ತಿದ್ದಾರೆ! ಅಂತೆಯೇ ನಾಸ್ತಿಕಮಯವಾದ ಭೌತಿಕವಿಜ್ಞಾನಯುಗವೆನಿಸಿದ ಇಂದು ಶ್ರೀಗುರುರಾಯರು ಕೇವಲ ಭಾರತದಲ್ಲಿ ಮಾತ್ರವಲ್ಲದೆ, ಅಖಂಡ ವಿಶ್ವದಲ್ಲೆಲ್ಲಾ “ಮಹಾವಿಭೂತಿಪುರುಷರು, ಮಾನವ ಜನಾಂಗದ ಹಿತೈಷಿಗಳಾದ ಉದ್ಧಾರಕ ಗುರುಗಳು” ಎಂದು ವಿಖ್ಯಾತರಾಗಿ ಜಗನ್ಮಾನ್ಯರಾಗಿದ್ದಾರೆ. ಇಂಥ ಮಹನೀಯರು ಯಾವ ಸತ್ತತ್ವಗಳ ಧರ್ಮಗಳ ಉಪದೇಶಗಳನ್ನು ಜೀವನದಲ್ಲಿ ಅಳವಡಿಸಿ- ಕೊಂಡು, ಉಪಾಸನೆಮಾಡಿ, ಜಗತ್ತಿಗೆ ಉಪದೇಶಿಸಿದರು ? ಅವರ ಸತ್ಪರಂಪರೆ ಯಾವುದು ? ಎಂಬದನ್ನೀಗ ಸ್ವಲ್ಪ ವಿವೇಚಿಸುವುದು ಅವಶ್ಯವಾಗಿದೆ.
ಶ್ರೀಹರಿಯ ಅನೇಕ ಅವತಾರಗಳಲ್ಲಿ ಶ್ರೀಹಂಸರೂಪವು ಪ್ರಧಾನವಾದುದು.ಶ್ರೀಹರಿಯು ಜ್ಞಾನಪ್ರಸಾರಕ್ಕಾಗಿ ಕೈಗೊಂಡ ಅವತಾರವಿದು. ಜ್ಞಾನಸಾಧನೆ-ಪ್ರಸಾರಗಳಿಗೆ ಯತ್ಯಾಶ್ರಮವೇ ಶ್ರೇಷ್ಠವೆಂದು ಶಾಸ್ತ್ರಗಳು ಸಾರುವುವು. ಅಂತೆಯೇ ವೇದಾದಿಸಚ್ಛಾಸ್ತ್ರಗಳ ಪ್ರಸಾರಕ್ಕಾಗಿ ಶ್ರೀಹರಿಯು ಹಂಸರೂಪದಿಂದವತರಿಸಿ ಬ್ರಹ್ಮದೇವರಿಗೆ ಉಪದೇಶ ಮಾಡಿದನು. ಶ್ರೀಬ್ರಹ್ಮದೇವರಿಂದ ಸನಕಾದಿಗಳು ಉಪದೇಶ ಪಡೆದರು. ಅಂದಿನಿಂದಲೇ ಈ ಹಂಸವಂಶದ ಜ್ಞಾನಿಗಳು ಜಗತ್ತಿನ ಜನತೆಗೆ ಜ್ಞಾನಬೋಧನೆ ಮಾಡಿ ಸುಜನರ ಸರ್ವಾಂಗೀಣಾಭ್ಯುದಯ, ಸನ್ಮಂಗಳಗಳನ್ನು ನೆರವೇರಿಸುತ್ತಾ ಬಂದರು. ಈ ಹಂಸವಂಶದಲ್ಲಿ ಬಂದ ಮಹನೀಯರೇ ಶ್ರೀಮಧ್ವಾಚಾರ್ಯರು.
ಜ್ಞಾನಪ್ರಾಧಾನ್ಯವಾದಹುಸವಂಶದಲ್ಲಿ ಶ್ರೀಹಂಸನಾಮಕಹರಿಯಿಂದಮೊಟ್ಟಮೊದಲು ಉಪದೇಶ ಪಡೆದ ಭಾಗ್ಯಶಾಲಿಗಳು ಶ್ರೀಚತುರ್ಮುಖ ಬ್ರಹ್ಮ ದೇವರು, ಬ್ರಹ್ಮದೇವರಿಂದ ಅನಂತರ ಅವರ ಪುತ್ರರಾದ ಸನಕಾದಿ ನಾಲ್ವರು ಜ್ಞಾನಿಗಳು ಉಪದೇಶವನ್ನು ಪಡೆದು ಹಂಸವಂಶವನ್ನು ಮುಂದುವರೆಸಿಕೊಂಡು ಬಂದರು. ಅವರಲ್ಲಿ ಉಪದೇಶ ಪಡೆದವರು ದೂರ್ವಾಸರು. ಆದರೆ ದ್ವಾಪರದಲ್ಲಿ ಗೌತಮರ ಶಾಪದಿಂದ ಜ್ಞಾನವು ನಷ್ಟವಾಗಿ ಉದ್ಧಾರದ ದಾರಿಕಾಣದೆ ಸುಜೀವಿಗಳು ಬಳಲುತ್ತಿರಲು ಮುಮುಕ್ಷುಗಳಲ್ಲಿ ಅನುಗ್ರಹಬುದ್ಧಿಯಿಂದಕೃಪಾಳುಗಳಾದಬ್ರಹ್ಮರುದ್ರೇಂದ್ರಾದಿದೇವತೆಗಳು ಶ್ರೀಮನ್ನಾರಾಯಣನಲ್ಲಿ ಮೊರೆಯಿಟ್ಟರು. ಆಗ ಹಂಸಾವತಾರಿಯಾಗಿದ್ದ ಶ್ರೀಮನ್ನಾರಾಯಣನು ಮತ್ತೆ ಶ್ರೀವೇದವ್ಯಾಸರೂಪದಿಂದ ಅವತರಿಸಿ, ವೇದವಿಭಾಗ- ಪೂರ್ವಕವಾಗಿ, ವೇದಾರ್ಥನಿರ್ಣಾಯಕ ಬ್ರಹ್ಮಮೀಮಾಂಸಾಶಾಸ್ತ್ರ (ಬ್ರಹ್ಮ ಸೂತ್ರವನ್ನು ರಚಿಸಿ ಜ್ಞಾನಪ್ರತಿಷ್ಠಾಪನಮಾಡಿ, ಬ್ರಹ್ಮರುದ್ರೇಂದ್ರಾದಿ ಸಮಸ್ತಮುಕ್ತಿಯೋಗ್ಯರಿಗೆ ಜ್ಞಾನೋಪದೇಶಮಾಡಿ ಸಕಲರನ್ನೂ ಅನುಗ್ರಹಿಸಿದನು. ಇದಾದಮೇಲೆ ಶ್ರೀದೂರ್ವಾಸರ ಶಿಷ್ಯತ್ವ ವಹಿಸಿದವರು ಜ್ಞಾನನಿಧಿಗಳು, ಗರುಡವಾಹನತೀರ್ಥರು ಅವರ ಶಿಷ್ಯರಾದರು. ಅವರಿಂದ ಉಪದೇಶ ಹೊಂದಿ ಶಿಷ್ಯರಾಗಿ ಹಂಸವಂಶವನ್ನು ಭೂಷಿಸಿದವರು ಕೈವಲ್ಯತೀರ್ಥರು ಅವರ ತರುವಾಯ ಈ ಜ್ಞಾನಪರಂಪರೆಯಲ್ಲಿ ಕ್ರಮವಾಗಿ ಶ್ರೀಜ್ಞಾನೇಶತೀರ್ಥರು, ಶ್ರೀಪರತೀರ್ಥರು, ಶ್ರೀಸತ್ಯಪ್ರಜ್ಞತೀರ್ಥರು ಮತ್ತು ಶ್ರೀಪ್ರಾಜ್ಞತೀರ್ಥರು ವಿರಾಜಿಸಿ ಜ್ಞಾನಪ್ರಸಾರ ಮಾಡಿದರು.
ಆನಂತರ ಕಲಿಯುಗದಲ್ಲಿ ಕ್ರಿ.ಶ. ಹನ್ನೆರಡನೆಯ ಶತಮಾನದಲ್ಲಿ ಶ್ರೀಅಚ್ಯುತಪ್ರೇಕ್ಷಾಚಾರ್ಯರೆಂಬ ಜ್ಞಾನಿಗಳು ಹಂಸಪರಂಪರೆಯ ಜ್ಞಾನಪೀಠದಲ್ಲಿ ಕಂಗೊಳಿಸುತ್ತಿದ್ದರು. ಆ ವೇಳೆಗಾಗಲೇ ಶ್ರೀವೇದವ್ಯಾಸರ ಬ್ರಹ್ಮ ಸೂತ್ರಗಳ ಮೇಲೆ ಇಪ್ಪತ್ತೊಂದು ಜನ ಭಾಷ್ಯಕಾರರು ತಮತಮಗೆ ತೋರಿದಂತೆ ವ್ಯಾಖ್ಯಾನಮಾಡಿ ತಂತಮ್ಮ ಮತಗಳನ್ನು ಪ್ರಚಾರಮಾಡುತ್ತಿದ್ದರು. ಅದರ ಪರಿಣಾಮವಾಗಿ ಮತ್ತೆ ಸುಜನರಲ್ಲಿ ಸಂಶಯ, ಅನ್ಯಥಾಜ್ಞಾನ, ಭ್ರಾಂತಿಗಳುಂಟಾಗಿ ಯಾವ ತತೋಪಾಸನೆಯಿಂದ ತಮ್ಮ ಕಲ್ಯಾಣವಾಗುವುದೆಂದರಿಯಲಾಗದೆ ಸುಜೀವಿಗಳು ಬಳಲಹತ್ತಿದರು. ಆ ಹೊತ್ತಿಗಾಗಲೇ ಚಾರ್ವಾಕ, ಬೌದ್ಧ, ಜೈನಾದಿ ಅವೈದಿಕ ಮತಗಳು ಪ್ರಬಲಿಸಿ ವೈದಿಕಮತದ ಮೇಲೆ ಧಾಳಿಮಾಡಿ ಗಂಡಾಂತರ ತಂದೊಡ್ಡಿದುದೂ ಸಜ್ಜನರಿಗೆ ಬಹಳ ತೊಂದರೆ- ಯುಂಟಾಗಿತ್ತು.ಆ ಸಂಕ್ರಾಂತಿಕಾಲದಲ್ಲಿ ಶ್ರೀಶಂಕರಾಚಾರ್ಯ-ಶ್ರೀರಾಮಾನುಜಾಚಾರ್ಯರುಗಳು ಅವತರಿಸಿ ವೇದಪ್ರಾಮಾಣ್ಯ- ವನ್ನು ಎತ್ತಿಹಿಡಿದು ತಮ್ಮ ವಾದಚಾತುರ್ಯದಿಂದ ನಾಸ್ತಿಕವಾದಿಗಳನ್ನು ಖಂಡಿಸಿ, ಅವೈತ, ವಿಶಿಷ್ಟಾದೈತ ಮತಗಳನ್ನು ರಚಿಸಿ ಭರದಿಂದ ಪ್ರಚಾರಮಾಡಿ ವೈದಿಕಮತವನ್ನು ರಕ್ಷಿಸಿ ಉಪಕರಿಸಿದರು.ಆದರೆ ಜೀವ-ಬ್ರಹ್ಮ ಪ್ರತಿಪಾದಕವಾದ ಅದೈತಮತವು ವೇದೋಪನಿಷತ್ತು ಬ್ರಹ್ಮಸೂತ್ರಗಳಿಗೆ ವಿರುದ್ಧವಾಗಿದ್ದುದರಿಂದಲೂ, ಮೋಕ್ಷದಲ್ಲಿ ಶ್ರೀಹರಿಗೂ ಜೀವರಿಗೂ ಆನಂದತಾರತಮ್ಯ- ವಿಲ್ಲವೆಂದು ಹೇಳುವ ವಿಶಿಷ್ಟಾತಮತವೂ ಸಹ ಸುಜನರ ಮನಸ್ಸಿಗೆ ಹಿಡಿಸುತ್ತಿರಲಿಲ್ಲ. ಆದ್ದರಿಂದ ನಿಶ್ಚಿತ ತತ್ವಜ್ಞಾನವಾಗದೆ ಜನರು ಬಳಲಹತ್ತಿದ್ದರು.
ಆಗ ಬ್ರಹ್ಮರುದ್ರೇಂದ್ರಾದಿದೇವತೆಗಳ ಪ್ರಾರ್ಥನೆಯಂತೆ, ತ್ರಿಯುಗಹೂತಿಯಾದ ಶ್ರೀಮನ್ನಾರಾಯಣನು ತನಗೆ ಅತ್ಯಂತ ಪ್ರಿಯರೂ, ಜೀವೋತ್ತಮರೂ, ಜಗತ್ಪಾಣರೂ ಆದ ಶ್ರೀವಾಯುದೇವರಿಗೆ ಅತಾವೇದಕಗಳಾದ ಮತಗಳ ನಿರಸನಪೂರ್ವಕ- ವಾಗಿ ಅನಾದ್ಯವಚ್ಛಿನ್ನ ಪರಂಪರಾಪ್ರಾಪ್ತ ವೈದಿಕಸದೈಷ್ಣವಮತವನ್ನು ಪ್ರತಿಷ್ಠಾಪಿಸಿ ಮುಕ್ತಿಯೋಗ್ಯರನ್ನು ಉದ್ಧರಿಸಬೇಕೆಂದು ಆಜ್ಞಾಪಿಸಿದನು. ಇಂಥ ಸಂಕ್ರಾಂತಿಕಾಲದಲ್ಲೇ ಹಂಸನಾಮಕ ಪರಮಾತ್ಮನ ಜ್ಞಾನಪರಂಪರೆಯಲ್ಲಿ ರಾಜಿಸಿದ್ದಶ್ರೀಅಚ್ಯುತಪ್ರೇಕ್ಷಾಚಾರ್ಯರು ಉಡುಪಿಯಲ್ಲಿ ಶ್ರೀಅನಂತೇಶ್ವರನ ಸನ್ನಿಧಿಯಲ್ಲಿ ಅನಾದಿಸಿದ್ಧವೈಷ್ಣವಸಿದ್ಧಾಂತ ಪ್ರತಿಷ್ಠಾಪನೆಮಾಡಿ ಲೋಕಕಲ್ಯಾಣ- ಆಜ್ಞಾಪಿಸಿದನು. ಇಂಥ ಸಂಕ್ರಾಂತಿಕಾಲದಲ್ಲೇ ಹಂಸನಾಮಕ ಪರಮಾತ್ಮನ ಜ್ಞಾನಪರಂಪರೆಯಲ್ಲಿರಾಜಿಸಿದ್ದಶ್ರೀಅಚ್ಯುತಪ್ರೇಕ್ಷಾ- ಮಾಡಬಲ್ಲ ಶ್ರೇಷ್ಠ ಶಿಷ್ಯನಿಗಾಗಿ ಪ್ರಾರ್ಥಿಸುತ್ತಿದ್ದರು. ಅವರ ತಪಸ್ಸು ಫಲಿಸಿತು. ಶ್ರೀಅನಂತೇಶ್ವರನು ಅವರಿಗೆ ಕನಸಿನಲ್ಲಿ ದರ್ಶನವಿತ್ತು “ವೈಷ್ಣವಸಿದ್ಧಾಂತ” ಪ್ರತಿಷ್ಠಾಪನೆಮಾಡಿ ಸಮಸ್ತ ಸಜ್ಜನರನ್ನು ಉದ್ಧರಿಸಲು ಶಕ್ತನಾದ ಶ್ರೀಮುಖ್ಯಪ್ರಾಣದೇವನೇ ನಿನಗೆ ಶಿಷ್ಯನಾಗಿ ದೊರೆತು ನಿನ್ನಿಚ್ಛೆಯನ್ನು ಪೂರ್ಣಮಾಡುವನು ಎಂದಾಜ್ಞಾಪಿಸಿದನು. ಅಚ್ಯುತಪ್ರೇಕ್ಷರು ಹರ್ಷನಿರ್ಭರರಾಗಿ ಆಶಿಷ್ಯನವತಾರವನ್ನು ನಿರೀಕ್ಷಿಸಹತ್ತಿದರು.
ಶ್ರೀಹರಿಯ ಆಜ್ಞೆಯಂತೆ ಶ್ರೀವಾಯುದೇವರು ರಜತಪೀಠಪುರದಲ್ಲಿ ಜ್ಞಾನಿಗಳಾದ ಮಧ್ಯಗೇಹಭಟ್ಟ ದಂಪತಿಗಳಿಗೆ ವಾಸುದೇವಾಭಿಧಾನದಿಂದ ಶಾಲಿವಾಹನ ಶಕೆ ೧೧೬೦ ನೆಯ ವಿಳಂಬಿನಾಮ ಸಂವತ್ಸರದಲ್ಲಿ (ಕ್ರಿ.ಶ.೧೨೩೮) ಅವತರಿಸಿದರು. ಜಗದುದ್ಧಾರಕ ಜಗದ್ಗುರು, ಜ್ಞಾನಸೂರ್ಯನುದಯಿಸಿದ! ಬಾಲಕ ವಾಸುದೇವ ತನ್ನ ಅಸದೃಶಜ್ಞಾನ-ಅನಿತರಸಾಧಾರಣಶಕ್ತಿ, ಪ್ರತಿಭಾದಿಗಳಿಂದ ಸರ್ವಜನರನ್ನೂ ವಿಸ್ಮಯಗೊಳಿಸಲಾರಂಭಿಸಿದ. ಶ್ರೀಅಚ್ಯುತಪ್ರೇಕ್ಷಾಚಾರ್ಯರು ಶ್ರೀಅನಂತೇಶ್ವರನು ಅಪ್ಪಣೆ ಮಾಡಿದ ಶಿಷ್ಯತ್ತಮನೇ ವಾಸುದೇವನೆಂದು ಗುರುತಿಸಿ, ವಾಸುದೇವನಿಗೆ ಪರಮಹಂಸಾಶ್ರಮವಿತ್ತು ಶ್ರೀಪೂರ್ಣಪ್ರಜ್ಞಾಚಾರ್ಯ” ಎಂಬ ಹೆಸರಿನಿಂದ ಹಂಸವಂಶದ ಜ್ಞಾನಪೀಠದಲ್ಲಿ ಮಂಡಿಸಿ ಸಾಮ್ರಾಜ್ಯಾಭಿಷೇಕಮಾಡಿದರು.
ಶ್ರೀಪೂರ್ಣಪ್ರಜ್ಞರು ತಮ್ಮ ವಾದವೈಖರಿ, ಜ್ಞಾನ, ಸಿದ್ಧಾಂತ ಪ್ರತಿಪಾದನಾದಿ ಚಾತುರ್ಯಗಳಿಂದ ಪರವಾದಿಗಳಿಂದಲೇ “ಅನುಮಾನತೀರ್ಥರೆಂದೂ ವೇದಪ್ರತಿಪಾದ್ಯಮಹಿಮರಾದ್ದರಿಂದ “ಶ್ರೀಮಧ್ವಾಚಾರ್ಯ'ರೆಂದೂ ಆನಂದಪ್ರದಶಾಸ್ತ್ರ- ಪ್ರವರ್ತಕರಾದ್ದರಿಂದ ಶ್ರೀಆನಂದತೀರ್ಥ'ರೆಂದೂ ವಿವಿಧ ನಾಮಗಳಿಂದ ಪ್ರಖ್ಯಾತರಾದರು. ಶ್ರೀಮಧ್ವಾಚಾರ್ಯರು ಗುರುಗಳ ಆದೇಶದಂತೆ ಭಗವದ್ಗೀತೆಗೆ ಭಾಷ್ಯವನ್ನು ರಚಿಸಿ ಗುರುಗಳನ್ನು ಸಂತೋಷಗೊಳಿಸಿದರು. ಆನಂತರ ಕ್ರಿ.ಶ. ೧೨೫೬ ರಲ್ಲಿ ಆಚಾರ್ಯರು ಭಾರತಾದ್ಯಂತ ತೀರ್ಥಯಾತ್ರೆ ಕೈಕೊಂಡು ಹೊರಟು ಎಲ್ಲ ಕಡೆ ಪರವಾದಿಗಳನ್ನು ಜಯಿಸಿದರು. ಮೊದಲು ಅವರು ಜಯಿಸಿದ ಪರವಾದಿಗಳಲ್ಲಿ ಶ್ರೀವಿದ್ಯಾಶಂಕರರು ಅವರ ಶಿಷ್ಯರಾದ ಶ್ರೀಪದ್ಮತೀರ್ಥರು, ಪುಂಡರೀಕಪುರಿಗಳು ಮತ್ತು ವಾದಿಸಿಂಹ, ಬುದ್ಧಿಸಾಗರರೆಂಬ ಬೌದ್ಧವಾದಿಗಳು ಮುಖ್ಯರು. ಮತ್ತೆ ಶ್ರೀಮದಾಚಾರ್ಯರು ಕ್ರಿ.ಶ. ೧೨೬೨ ರಲ್ಲಿ ಸಂಚಾರ ಹೊರಟು ಬದರಿಗೆ ತೆರಳಿ ಶ್ರೀವೇದವ್ಯಾಸದೇವರ ದರ್ಶನಮಾಡಿ ತಾವು ಬರೆದ 'ಗೀತಾಭಾಷ್ಯ'ವನ್ನು ಸಮರ್ಪಿಸಿದರು ಮತ್ತು ಬಹುಕಾಲ ವೇದವ್ಯಾಸರ ಸೇವೆಮಾಡಿಕೊಂಡಿದ್ದು ಅವರಲ್ಲಿಯೇ ಬ್ರಹ್ಮ ಮೀಮಾಂಸಾ ಶಾಸ್ತ್ರವನ್ನು ಅಧ್ಯಯನಮಾಡಿ ಸೂತ್ರಕಾರರ ಹೃದಯವನ್ನು ಚೆನ್ನಾಗಿ ಅರಿತರು. ಶ್ರೀವೇದವ್ಯಾಸದೇವರು ಸೂತ್ರಭಾಷ್ಯಾದಿ ಸದೃಂಥಗಳನ್ನು ರಚಿಸಿ ವೈದಿಕ ಸವೈಷ್ಣವ ಸಿದ್ಧಾಂತವನ್ನು ಪ್ರತಿಷ್ಟಾಪಿಸಿ ಸುಜನರಲ್ಲಿ ಅನುಗ್ರಹಮಾಡಬೇಕೆಂದು ಆಜ್ಞಾಪಿಸಿ ಆಶೀರ್ವದಿಸಿದರು. ದೇವರ ಅಪ್ಪಣೆಯಂತ ಆಚಾರ್ಯರು ಬ್ರಹ್ಮಸೂತ್ರಗಳ ಮೇಲೆ ಆವರೆಗೆ ರಚಿತವಾಗಿದ್ದ ಇಪ್ಪತ್ತೊಂದು ಕುಭಾಷ್ಯಗಳನ್ನು ಸಪ್ರಮಾಣವಾಗಿ ಖಂಡಿಸಿ ಭಾಷ್ಯವನ್ನು ರಚಿಸಿದೈತಸಿದ್ಧಾಂತವನ್ನು ಪ್ರತಿಷ್ಠಾಪಿಸಿದರು.
ಆಚಾರ್ಯರು ತಮ್ಮ ಸಿದ್ಧಾಂತ ಪ್ರತಿಪಾದನೆಗಾಗಿ ಋಕ್, ಉಪನಿಷತ್, ಗೀತಾ ಮತ್ತು ಸೂತ್ರಪ್ರಸ್ಥಾನಗಳ ಮೇಲೆ ಮತ್ತು ಸ್ವತಂತ್ರವಾಗಿಯೂ ಮೂವತ್ತೇಳು ಗ್ರಂಥಗಳನ್ನು ರಚಿಸಿ ಶಿಷ್ಯರಿಗೆ ಪಾಠ ಹೇಳಿ ಜ್ಞಾನಪ್ರಸಾರ ಮಾಡಿದರು.
ಅಪೌರುಷೇಯವಾದ, ವೇದಗಳನ್ನೇ ಮೂಲವಾಗುಳ್ಳ ಭಾರತದೇಶದ ತತ್ವಶಾಸ್ತ್ರದ ಸಾರವೇ ಶ್ರೀಮದಾಚಾರ್ಯರ ಗ್ರಂಥಗಳೆಂದರೆ ಅತಿಶಯವಲ್ಲ, ಅವರು ಹೇಳುವ ತತ್ವಗಳನ್ನು ಸಾರಭೂತವಾಗಿ ಹೀಗೆ ಹೇಳಬಹುದು :- ನಾರಾಯಣ ಸರ್ವೋತ್ತಮ, ಜಗದೊಡೆಯ, ಅವನು ಸದ್ಗುಣಗಳ ನಿಧಿ. ಅವನಲ್ಲಿ ಯಾವ ದೋಷವೂ ಇಲ್ಲ. ಅವನು ಸೃಷ್ಟಿಸಿದ ಈ ಜಗತ್ತು ಸತ್ಯವಾದುದು. ಜೀವ-ಪರಮಾತ್ಮರಲ್ಲಿ ಭೇದವಿರುವಂತೆ, ಜೀವ-ಜೀವರೂ ಭಿನ್ನರು ಎಲ್ಲಜೀವರೂ ಅವನ ದಾಸರು. ಅವನು ಎಲ್ಲ ಜೀವರಲ್ಲಿಯೂ ನಿಂತು ಅವರ ಕರ್ಮಾನುಸಾರ ವ್ಯಾಪಾರ ಮಾಡಿಸಿ ಅದಕ್ಕೆ ತಕ್ಕ ಫಲವನ್ನು ಕೊಡುವನು. ಆದ್ದರಿಂದ ಪ್ರತಿಜೀವಿಯೂ ಪ್ರಾಪಂಚಿಕ ಹವ್ಯಾಸಕ್ಕೆ ಹೆಚ್ಚಿನ ಗಮನಕೊಡದೆ ಸರ್ವಸ್ವಾಮಿಯಾದ ಆ ಭಗವಂತನನ್ನು ಭಜಿಸಿ ಅವನ ಅನುಗ್ರಹ ಪಡೆಯಬೇಕು. ಇತ್ಯಾದಿಗಳೇ ಮಧ್ವಾಚಾರ್ಯರ ಉಪದೇಶದ ಮುಖ್ಯಾಂಶ. ಇದನ್ನು ಅಲ್ಲಗಳೆದ ಸಮಸ್ತ ಪಂಡಿತರನ್ನೂ ಸಯುಕ್ತಿಕವಾಗಿ, ಶಾಸ್ತ್ರಾಧಾರಗಳಿಂದ ಅವರು ಖಂಡಿಸಿದರು. ಹೀಗೆ ಆಚಾರ್ಯರ ಜೊತೆಗೆ ವಾದಮಾಡಿ ಸೋತ ಪಂಡಿತರಲ್ಲಿ ಷಾಷಿಕ ಕುಲಭೂಷಣರಾದಶ್ರೀಶೋಭನಭಟ್ಟ, ಶ್ಯಾಮಾಶಾಸ್ತ್ರಿ, ತ್ರಿವಿಕ್ರಮಪಂಡಿತಾಚಾರ್ಯರು, ಗೋವಿಂದಶಾಸ್ತ್ರಿ, ಗೋವಿಂದ- ಭಟ್ಟರುಗಳು ಆಚಾರ್ಯರ ಶಿಷ್ಯತ್ವ ವಹಿಸಿದರು. ಶ್ರೀಪಂಡಿತಾಚಾರ್ಯರನ್ನು ಬಿಟ್ಟು ಉಳಿದ ನಾಲ್ವರಿಗೆ ಶ್ರೀಮದಾಚಾರ್ಯರು ಪರಮಹಂಸಾಶ್ರಮವಿತ್ತು ಶ್ರೀಪದ್ಮನಾಭತೀರ್ಥರು, ಶ್ರೀನರಹರಿತೀರ್ಥರು, ಶ್ರೀಮಾಧವತೀರ್ಥರು, ಶ್ರೀಅಕ್ಟೋಭ್ಯತೀರ್ಥರು - ಎಂಬ ಹೆಸರಿನಿಂದ ತಮ್ಮ ವೇದಾಂತ ಸಾಮ್ರಾಜ್ಯದಲ್ಲಿ ಅಭಿಷೇಕಮಾಡಿ ಅನುಗ್ರಹಿಸಿದರು.
ಆಚಾರ್ಯರು ಗೋಪೀಚಂದನ ಗಡ್ಡೆಯಲ್ಲಿ ಒಲಿದು ಬಂದ ಶ್ರೀಕೃಷ್ಣನನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಿ ದೈತಸಿದ್ಧಾಂತ ಪ್ರತಿಪಾದ್ಯನಾದ ಶ್ರೀಕೃಷ್ಣಪರಮಾತ್ಮನು ತಮ್ಮ ಮತದ ಆರಾಧ್ಯದೇವನೆಂದು ಸಾರಿದರು ಮತ್ತು ತಮ್ಮ ಪೂರ್ವಾಶ್ರಮ ತಮ್ಮನೂ ಸೇರಿದಂತೆ ಎಂಟು ಜನ ವಟುಗಳಿಗೆ ಸನ್ಯಾಸವಿತ್ತು ಶ್ರೀಕೃಷ್ಣನ ಪೂಜಾರಾಧನೆ, ತತ್ವಧರ್ಮ ಪ್ರಸಾರ ಮಾಡಿಕೊಂಡು ಬರಲು ಆಜ್ಞಾಪಿಸಿದರು. ನಮ್ಮಲ್ಲಿ ಮೊಟ್ಟಮೊದಲಿಗೆ ಮಠಗಳನ್ನು ಏರ್ಪಡಿಸಿ ಅವುಗಳಿಗೆ ಒಂದು ಸ್ವರೂಪ ಕರ್ತವ್ಯಗಳನ್ನು ನಿಯಮಿಸಿದವರು ಶ್ರೀಮಧ್ವಾಚಾರ್ಯರು. ಅವರಿಂದ ಆಶ್ರಮಪಡೆದು ಶ್ರೀಕೃಷ್ಣಾರಾಧಕ ಮಠಾಧಿಪತಿಗಳಾದ ಎಂಟು ಜನ ಯತಿಗಳ, ಅವರ ಮಠಗಳ ವಿವರ ಹೀಗಿದೆ - ೧) ಶ್ರೀವಿಷ್ಣುತೀರ್ಥರು, ಶ್ರೀಸೋದೇಮಠ, ೨) ಶ್ರೀರಾಮತೀರ್ಥರು, ಶ್ರೀಶಿರೂರು ಮಠ, ೩) ಶ್ರೀಹೃಷೀಕೇಶತೀರ್ಥರು, ಶ್ರೀಫಲಿಮಾರು ಮಠ, ೪) ಶ್ರೀವಾಮನತೀರ್ಥರು, ಶ್ರೀಕಾಣೂರು ಮಠ, ೫) ಶ್ರೀಅಧೋಕ್ಷಜತೀರ್ಥರು, ಶ್ರೀಪೇಜಾವರ ಮಠ, ೬) ಶ್ರೀನರಸಿಂಹತೀರ್ಥರು, ಶ್ರೀಅಧಮಾರು ಮಠ, ೭) ಶ್ರೀಜನಾರ್ದನತೀರ್ಥರು, ಶ್ರೀಕೃಷ್ಣಾಪುರ ಮಠ, ೮) ಶ್ರೀಉಪೇಂದ್ರತೀರ್ಥರು, ಶ್ರೀಪುತ್ತಿಗೆ ಮಠ. ಈ ಮಠಗಳಲ್ಲದೆ ಶ್ರೀಆಚಾರ್ಯರು ತಮ್ಮ ಗುರುಗಳ ಒಂದು ಪರಂಪರೆಯ ಮಠವನ್ನು ಸ್ಥಾಪಿಸಿ ಅದಕ್ಕೆ ತಮ್ಮ ಶಿಷ್ಯರಾದ ಶ್ರೀಸತ್ಯತೀರ್ಥರನ್ನು ನೇಮಿಸಿದರು. ಈ ಮಠವು ಮುಂದೆ ಎರಡಾಗಿ ಶ್ರೀಭಂಡಾರಕೇರಿ ಮಠ ಮತ್ತು ಶ್ರೀಭೀಮನಕಟ್ಟೆ ಮಠಗಳೆಂದು ಹೆಸರು ಪಡೆದವು. ಇದರಂತೆ ಮುಂದೆ ಶ್ರೀಸೋದೇಮಠದ ಶ್ರೀವಿಷ್ಣುತೀರ್ಥರು ಶ್ರೀಅನಿರುದ್ಧತೀರ್ಥರಿಗೆ ಆಶ್ರಮವಿತ್ತು ತಮ್ಮದೇ ಆದ ಒಂದು ಮಠವನ್ನು ಸ್ಥಾಪಿಸಿದರು. ಅದು ಶ್ರೀಸುಬ್ರಹ್ಮಣ್ಯ ಮಠವೆಂದು ಹೆಸರು ಪಡೆಯಿತು. ಇದರಂತೆ ಶ್ರೀಪೇಜಾವರ ಮಠದ ಪರಂಪರೆಯಲ್ಲಿ ಮುಂದೆ ಶ್ರೀಮಹೇಂದ್ರತೀರ್ಥರ ಶಿಷ್ಯರಾದ ಶ್ರೀವಿಜಯಧ್ವಜತೀರ್ಥರಿಂದ ಸ್ಥಾಪಿತವಾದ ಒಂದು ಮಠವು ಶ್ರೀಚಿತ್ರಾಪುರ ಮಠವೆಂದು ಹೆಸರು ಪಡೆದು ನಡೆದುಬಂದಿತು.
ಗೋಪಿಚಂದನಗಡ್ಡೆಯಲ್ಲಿ ಶ್ರೀಕೃಷ್ಣನೊಡನೆ ದೊರಕಿದ್ದ ರಜತಮಯ ದಶಾವತಾರಪೀಠದ ಮೇಲೆ ಆಚಾರ್ಯರು ಸ್ವಹಸ್ತದಿಂದ ಸುಂದರವಾದ ರಜತಮಯ ಶ್ರೀರಾಮಚಂದ್ರನನ್ನು ನಿರ್ಮಿಸಿ “ಶ್ರೀದಿಗ್ವಿಜಯರಾಮ” ಎಂಬ ಹೆಸರಿನಿಂದ ಪೂಜಿಸಿದರು. ಇದರಂತೆ ಬದರಿಯಲ್ಲಿ ಶ್ರೀವೇದವ್ಯಾಸದೇವರು ದಯಪಾಲಿಸಿದ ವ್ಯಾಸಮುಷ್ಟಿಗಳು, ಶ್ರೀಮೂಲಗೋಪಾಲಕೃಷ್ಣ- ಪಟ್ಟಾಭಿರಾಮದೇವರು, ಮತ್ತಿತರ ಭಗವತ್ಪತಿಮೆಗಳನ್ನೂ ಪ್ರತಿದಿನ ಪೂಜಿಸುತ್ತಿದ್ದರು. ಹಿಂದೆ ಶ್ರೀಹನುಮ-ಭೀಮಾವತಾರ- ಗಳಲ್ಲಿ ಶ್ರೀಬ್ರಹ್ಮ ಕರಾರ್ಚಿತ, ಚತುರ್ಯುಗಮೂರ್ತಿ ಶ್ರೀಮೂಲರಾಮ-ಸೀತಾಪ್ರತಿಮೆಗಳನ್ನು ತಾವು ಪೂಜಿಸುತ್ತಿದ್ದಂತೆ, ಈ ಮಧ್ವಾವತಾರದಲ್ಲೂ ಪೂಜಿಸಿ ತಮ್ಮ ಮಹಾಸಂಸ್ಥಾನದ ಆರಾಧ್ಯ ಪ್ರತಿಮೆಯನ್ನಾಗಿ ಮಾಡಲಾಶಿಸಿ, ಆ ಪ್ರತಿಮೆಗಳು ವಡ್ಡ ಜಗನ್ನಾಥನಲ್ಲಿ ಗಜಪತಿಭಂಡಾರದಲ್ಲಿರುವುದನ್ನು ಜ್ಞಾನದೃಷ್ಟಿಯಿಂದರಿತು ಅವುಗಳನ್ನು ಪ್ರಿಯಶಿಷ್ಯರಾದ ಶ್ರೀನರಹರಿತೀರ್ಥ ರಿಂದ ತರಿಸಿಕೊಂಡರು. ಶ್ರೀನರಹರಿತೀರ್ಥರು ಪಿಂಗಳ ಸಂ|| ಆಶ್ವಿನಮಾಸದಲ್ಲಿ (ಸುಮಾರು ತಾ|| ೨೯-೧೦-೧೩೧೭) ಶ್ರೀಮದಾಚಾರ್ಯರಿಗೆ ಶ್ರೀಮೂಲರಾಮ-ಸೀತಾವಿಗ್ರಹಗಳನ್ನು ತಂದು ಅರ್ಪಿಸಿದರು. ಆಚಾರ್ಯರು ಆ ಪ್ರತಿಮೆಗಳನ್ನು ಅಂದಿನಿಂದ ಎಂಭತ್ತು ದಿನಗಳ ಕಾಲ ಭಕ್ತಿಯಿಂದ ಪೂಜಿಸಿ, ಆನಂತರ ಶ್ರೀಮೂಲರಾಮ-ದಿಗ್ವಿಜಯರಾಮ್- ಮೂಲಗೋಪಾಲಕೃಷ್ಣ-ಪಟ್ಟಾಭಿರಾಮ-ವ್ಯಾಸಮುಷ್ಟಿಗಳು-ಬಲಮುರಿಶಂಖಗಳು-ರತ್ನಗರ್ಭಶಾಲಿಗ್ರಾಮ-ರಾಮಟಂಕಿ ವರಹಗಳು ಇನ್ನಿತರ ಶಾಲಿಗ್ರಾಮಗಳು-ಭಗವತ್ಪತಿಮೆಗಳಿಂದ ಯುಕ್ತವಾದ ತಮ್ಮ ವೇದಾಂತಸಾಮ್ರಾಜ್ಯ ಮಹಾಸಂಸ್ಥಾನವನ್ನು ತಮ್ಮ ಪಟ್ಟದ ಪ್ರಿಯಶಿಷ್ಯರಾದ ಶ್ರೀಪದ್ಮನಾಭತೀರ್ಥರಿಗೆ ಅನುಗ್ರಹಿಸಿ, ಮುಂದೆ ಶ್ರೀನರಹರಿತೀರ್ಥರು, ಶ್ರೀಮಾಧವತೀರ್ಥರು, ಶ್ರೀಅಕ್ಟೋಭ್ಯತೀರ್ಥರುಗಳು ಒಬ್ಬರಾದಮೇಲೊಬ್ಬರಂತೆ ಮಹಾಸಂಸ್ಥಾನವನ್ನಾಳುತ್ತಾ, ತತ್ತ್ವಧರ್ಮಪ್ರಸಾರ, ಪರವಾದಿದಿಗ್ವಿಜಯ, ಸಿದ್ಧಾಂತಸ್ಥಾಪನ, ತಮ್ಮ ಗ್ರಂಥಗಳ ಪಾಠಪ್ರವಚನ, ಗ್ರಂಥರಚನೆ, ಮಹಾಸಂಸ್ಥಾನದ ಆರಾಧ್ಯಮೂರ್ತಿಗಳ ಪೂಜಾ, ಮಂತ ಮುದ್ರಾಧಾರಣ, ಗುರೂಪದೇಶದ್ವಾರಾ ಶಿಷ್ಯಭಕ್ತಜನೋದ್ದಾರ-ಲೋಕಕಲ್ಯಾಣಾದಿ ಸತ್ಕಾರ್ಯಗಳನ್ನೆಸಗುತ್ತಾ ಭಾರತದ ಸಜ್ಜನರನ್ನು ಉಪದೇಶಾದಿಗಳ ಮೂಲಕ ಸನ್ಮಾರ್ಗಗಾಮಿಗಳನ್ನಾಗಿಸುತ್ತಾಶ್ರೀಹಂಸವಂಶವನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಆಜ್ಞಾಪಿಸಿ ಶ್ರೀಪದ್ಮನಾಭತೀರ್ಥರಿಗೆ ತಮ್ಮ ವೇದಾಂತಸಾಮ್ರಾಜ್ಯವನ್ನು ಒಪ್ಪಿಸಿಕೊಟ್ಟು ಆಶೀರ್ವದಿಸಿದರು.
ಆನಂತರ ಆಚಾರ್ಯರು ತಮ್ಮ ಅವತಾರಕಾರ್ಯವು ಯಶಸ್ವಿಯಾಯಿತೆಂದು ಭಾವಿಸಿ ಪಿಂಗಳ ಸಂವತ್ಸರದ ಮಾಘಶುಕ್ಲ ನವಮೀ ದಿವಸದಂದು ಶ್ರೀಅನಂತೇಶ್ವರನ ಸನ್ನಿಧಿಯಲ್ಲಿ ಶಿಷ್ಯ-ಭಕ್ತಜನರಿಗೆ ಐತರೇಯಭಾಷ್ಯಾನುವಾದಪೂರ್ವಕ ಉಪದೇಶ ಮಾಡುತ್ತಿರುವಾಗ ಜಗಜೀವನರಾದಶ್ರೀವಾಯುದೇವರ ಉಪದೇಶಾಮೃತದಿಂದಹರ್ಷಿತರಾದದೇವತೆಗಳು ಶ್ರೀಮದಾಚಾರ್ಯರ ಮೇಲೆ ಪುಷ್ಪವೃಷ್ಟಿ ಮಾಡಿದಾಗ ಆಚಾರ್ಯರು ಜನರ ಕಣ್ಣಿಗೆ ಅದೃಶ್ಯರಾಗಿ ಬದರಿಗೆ ದಿಗ್ವಿಜಯ ಮಾಡಿದರು. ಆಚಾರ್ಯರ ಅಪ್ಪಣೆಯಂತೆ ಶ್ರೀಪದ್ಮನಾಭತೀರ್ಥರು ಅಂದೇ ಗುರುಗಳ ಮಹಾಸಮಾರಾಧನೆಯನ್ನಾಚರಿಸಿ -
“ಅಭ್ರಮಂ ಭಂಗರಹಿತಂ ಅಜಡಂ ವಿಮಲಂ ಸದಾ |
ಆನಂದತೀರ್ಥಮತುಲಂ ಭಜೇ ತಾಪತ್ರಯಾಪಹಮ್ ||”
ಎಂಬ ಚರಮಶ್ಲೋಕವನ್ನು ರಚಿಸಿ ಭಕ್ತಿಯಿಂದ ಪಠಿಸಿ ಸಮರ್ಪಿಸಿದರು.ಅಂದಿನಿಂದಲೂ ಶ್ರೀಮದಾಚಾರ್ಯರು ಅದೃಶ್ಯರಾದ ಮಾಘ ಶುಕ್ಲ ನವಮೀಯಂದು ಆಚಾರ್ಯರ ಮಹಾಸಮಾರಾಧನೆಯು “ಶ್ರೀಮಧ್ವನವಮಿ” ಎಂಬ ಹೆಸರಿನಿಂದ ಭಕ್ತಿಶ್ರದ್ಧೆಗಳಿಂದ ಆಚರಿಸಲ್ಪಡುತ್ತಿದೆ.
ಹೀಗೆ ಹಂಸನಾಮಕ ಪರಮಾತ್ಮನಿಂದ ಪ್ರವೃತ್ತವಾದ ಜ್ಞಾನಪರಂಪರೆಯು ಶ್ರೀಮನ್ಮಧ್ವಾಚಾರ್ಯರಿಂದ ವಿಶಿಷ್ಟರೂಪ ತಾಳಿ,ಶ್ರೀಮಧ್ವಾಚಾರ್ಯರವೇದಾಂತಸಾಮ್ರಾಜ್ಯ ಅಥವಾ ಮುಖ್ಯ ಸಂಸ್ಥಾನವೆಂದು ಜಗದ್ವಿಖ್ಯಾತವಾಯಿತು. ಈ ಮಹಾಸಂಸ್ಥಾನ- ವನ್ನು ಶ್ರೀಮದಾಚಾರ್ಯರ ತರುವಾಯ ಶ್ರೀಪದ್ಮನಾಭತೀರ್ಥರು (ಕ್ರಿ.ಶ. ೧೩೧೭-೧೩೨೪), ಶ್ರೀನರಹರಿತೀರ್ಥರು (೧೩೨೪-೧೩೩೩),ಶ್ರೀಮಾಧವತೀರ್ಥರು (೧೩೩೩-೧೩೫೦), ಶ್ರೀಅಕ್ಟೋಭ್ಯತೀರ್ಥರು (೧೩೫೦-೧೩೬೫) ಸುಮಾರು ನವಲತ್ತೆಂಟು ವರ್ಷಗಳ ಕಾಲ ಯಶಸ್ವಿಯಾಗಿ ಪರಿಪಾಲಿಸಿದರು.
ಶ್ರೀಪದ್ಮನಾಭತೀರ್ಥರು ಶ್ರೀನರಹರಿತೀರ್ಥರಿಗೆ ಮಹಾಸಂಸ್ಥಾನವನ್ನೊಪ್ಪಿಸಿಕೊಟ್ಟಮೇಲೆ ತಮ್ಮ ವಂಶೀಯರಾದ ಷಾಷ್ಠಿಕ ಪಂಡಿತರೊಬ್ಬರಿಗೆ ಸನ್ಯಾಸವಿತ್ತು ಶ್ರೀಲಕ್ಷ್ಮೀಧರತೀರ್ಥರೆಂದು ನಾಮಕರಣಮಾಡಿ, ಶ್ರೀಮದಾಚಾರ್ಯರು ತಮಗೆ ಅನುಗ್ರಹಿಸಿದ್ದ ಶ್ರೀಗೋಪೀನಾಥದೇವರನ್ನು ಕರುಣಿಸಿ ತಮ್ಮದೇ ಆದ ಒಂದು ಸತ್ಪರಂಪರೆಯನ್ನು ಮುಂದುವರೆಸಿಕೊಂಡು ಬರಲು ಆಜ್ಞಾಪಿಸಿದರು. ಈ ಸತ್ಪರಂಪರೆಯಲ್ಲಿ ಮುಂದೆ ಜ್ಞಾನಿನಾಯಕರಾದ ಶ್ರೀಲಕ್ಷ್ಮೀನಾರಾಯಣಮುನಿಗಳು (ಶ್ರೀಪಾದರಾಜರು) ವಿಖ್ಯಾತರಾಗಿದ್ದರಿಂದ ಈ ಪರಂಪರೆಯು ಶ್ರೀಪಾದರಾಜ ಮಠವೆಂದು ಹೆಸರು ಪಡೆಯಿತು.
ಶ್ರೀಮಾಧವತೀರ್ಥರೂ, ಶ್ರೀಅಕ್ಟೋಭ್ಯತೀರ್ಥರೂ ಸಹ ತಮ್ಮ ತಮ್ಮ ಪರಂಪರೆಯನ್ನು ಮುಂದುವರಿಸಲಾಶಿಸಿ ಷಾಷಿಕ ಕುಲಭೂಷಣರಾದ ಪಂಡಿತರುಗಳಿಗೆ ಆಶ್ರಮವಿತ್ತು ಮಠಗಳನ್ನು ಸ್ಥಾಪಿಸಿದರು. ಶ್ರೀಮಾಧವತೀರ್ಥರ ಪರಂಪರೆಯು ಶ್ರೀಮಾಧವತೀರ್ಥರ ಮಠವೆಂದು ಖ್ಯಾತವಾಯಿತು.ಶ್ರೀಅಕ್ಟೋಭ್ಯತೀರ್ಥರ ಪರಂಪರೆಯಲ್ಲಿ ಮುಂದೆ ಬಂದಶ್ರೀಲೋಕಪೂಜ್ಯ- ತೀರ್ಥರು, ಶ್ರೀಪುಣ್ಯಕೀರ್ತಿಗಳು ಮತ್ತು ಶ್ರೀರಘುಪುಂಗವರೆಂಬ ಶಿಷ್ಯರಿಗೆ ಆಶ್ರಮವಿತ್ತರು. ಶ್ರೀಪುಣ್ಯಕೀರ್ತಿಗಳ ಮಠವು ಶ್ರೀಬಾಳಗಾರು ಅಕ್ಟೋಭ್ಯತೀರ್ಥ ಸಂಸ್ಥಾನವೆಂದೂ ಶ್ರೀರಘುಪುಂಗವರ ಮಠವು ಕೂಡ್ಲಿ ಶ್ರೀಆರ್ಯ ಅಕ್ಟೋಭ್ಯ ಮಠವೆಂದೂ ಹೆಸರು ಪಡೆದವು.
ಶ್ರೀಅಕ್ಟೋಭ್ಯತೀರ್ಥರು ದೈತಸಿದ್ಧಾಂತವನ್ನು ಚೆನ್ನಾಗಿ ಪ್ರಸಾರಮಾಡಿ ಅನೇಕ ವಾದಿಗಳನ್ನು ಜಯಿಸಿ ಕೀರ್ತಿಗಳಿಸಿದರು. ಅವರಲ್ಲಿ ಶ್ರೀವಿದ್ಯಾರಣ್ಯತೀರ್ಥರು ಮುಖ್ಯರಾಗಿದ್ದಾರೆ. ಹೀಗೆ ಶ್ರೀಅಕ್ಟೋಭ್ಯತೀರ್ಥರು ಬಹುಕಾಲ ಶ್ರೀಮದಾಚಾರ್ಯರ ವೇದಾಂತ ಸಾಮ್ರಾಜ್ಯವನ್ನಾಳಿ ಷಾಷಿಕವಂಶಭೂಷಣರೂ “ಸ್ವರ್ಣಭಂಡಾರಿ (ಚಿನ್ನಭಂಡಾರಿ)” ಮನೆತನದ ತಮ್ಮ ಪೂರ್ವಾಶ್ರಮ ಬಂಧುಗಳಾದ ಶ್ರೀರಘುನಾಥನಾಯಕರಿಗೆ ಆಚಾರ್ಯರ ಅಪ್ಪಣೆ-ಪ್ರೇರಣೆಯಂತೆ ಪರಮಹಂಸಾಶ್ರಮವಿತ್ತು “ಶ್ರೀಜಯತೀರ್ಥರು” ಎಂಬ ಅಭಿಧಾನದಿಂದ ಶ್ರೀಮದಾಚಾರ್ಯರ ವೇದಾಂತಸಾಮ್ರಾಜ್ಯದಲ್ಲಿ ಪಟ್ಟಾಭಿಷೇಕಮಾಡಿ, ಅವರಿಗೆ ಸಕಲಶಾಸ್ತ್ರಗಳ ಪಾಠಹೇಳಿ ಮಹಾಪಂಡಿತರನ್ನಾಗಿ ಮಾಡಿ ಶ್ರೀಮದಾಚಾರ್ಯರ ವೇದಾಂತಸಾಮ್ರಾಜ್ಯ ಮಹಾಸಂಸ್ಥಾನವನ್ನು ಒಪ್ಪಿಸಿಕೊಟ್ಟು ಎರಗೋಳದಲ್ಲಿ ಬೃಂದಾವನಸ್ಥರಾದರು.
ಶ್ರೀಇಂದ್ರಾವತಾರರೂ ಶೇಷಾಂಶರೂ ಆದ ಶ್ರೀಜಯತೀರ್ಥಗುರುಸಾರ್ವಭೌಮರು ಆಚಾರ್ಯರ ಸರ್ವಮೂಲ ಗ್ರಂಥಗಳಿಗೆ ಟೀಕೆಗಳನ್ನು ರಚಿಸಿ ಶ್ರೀಮದಾಚಾರ್ಯರ ಸಿದ್ಧಾಂತವೇ ಸೂತ್ರಕರಾರಿಗೆ ಅಭಿಮತವಾದ ವೈದಿಕತತ್ವವಾದ ಮತವೆಂದು ಸಾಧಿಸಿ ಆಚಾರ್ಯರ ಸಿದ್ಧಾಂತಗ್ರಂಥಗಳ ಪಾಠ-ಪ್ರವಚನವು ಅವ್ಯಾಹತವಾಗಿ ನಡೆದುಬಂದು ಸಜ್ಜನರ ಉದ್ಧಾರವಾಗುವಂತೆ ಮಹೋಪಕಾರ ಮಾಡಿದರು. ಭಾಷ್ಯಗಳಿಗೆ ಟೀಕೆಗಳನ್ನು ರಚಿಸಿದ ಅವರು “ಟೀಕಾಚಾರ್ಯ'ರೆಂದೇ ಜಗನ್ಮಾನ್ಯರಾದರು. ಶ್ರೀಜಯತೀರ್ಥರು ಅನೇಕ ದುರ್ವಾದಿಗಳನ್ನು ಜಯಿಸಿ ಸಿದ್ಧಾಂತಕ್ಕೆ ಬಂದಿದ್ದ ಕಂಟಕವನ್ನು ಪರಿಹರಿಸಿ ದೈತಸಿದ್ಧಾಂತದ ವಿಜಯಪತಾಕೆಯನ್ನು ಜಗತ್ತಿನಲ್ಲೆಲ್ಲಾ ಮೆರೆಸಿದರು. ಇವರ ಕೃತಿಗಳನ್ನು ನೋಡಿ ಅಚ್ಚರಿಗೊಂಡು ಗುರುಗಳ ಗ್ರಂಥಶೈಲಿಯಿಂದ ಪ್ರಭಾವಿತರಾದ ಶ್ರೀವಿದ್ಯಾರಣ್ಯಮುನಿಗಳು ಶ್ರೀಟೀಕಾಕಾರರ ಗ್ರಂಥಗಳನ್ನು ಕರ್ನಾಟಕ ರಾಜಧಾನಿಯಲ್ಲಿ ಆನೆಯ ಮೇಲೆ ಮೆರೆಸಿದರು
ಶ್ರೀಜಯತೀರ್ಥಗುರುಚರಣರು ಮಹಾಸಂಸ್ಥಾನವನ್ನು ಕ್ರಿ.ಶ. ೧೩೬೫ ರಿಂದ ೧೩೮೮ ರ ವರೆಗೆ ಪರಿಪಾಲಿಸಿ ಷಾಷಿಕ ವಂಶಾವತಂಸರೂ ಪೂರ್ವಾಶ್ರಮಬಂಧುಗಳೂ ತಮ್ಮಲ್ಲೇ ಅಧ್ಯಯನಮಾಡಿ ಮಹಾಪಂಡಿತರಾಗಿದ್ದ ಶ್ರೀಕೃಷ್ಣಭಟ್ಟರಿಗೆ ಪರಮ- ಹಂಸಾಶ್ರಮವಿತ್ತು ವಿದ್ಯಾಧಿರಾಜರು” ಎಂಬ ಹೆಸರಿನಿಂದ ಸಾಮ್ರಾಜ್ಯಾಭಿಷೇಕಮಾಡಿ ಆಚಾರ್ಯರ ವೇದಾಂತಸಾಮ್ರಾಜ್ಯ- ವನ್ನು ಒಪ್ಪಿಸಿಕೊಟ್ಟು ಕ್ರಿ.ಶ.೧೩೮೯ ನೇ ವಿಭವ ಸಂ||ಆಷಾಢ ಬಹುಳ ಪಂಚಮೀಯಂದು ಬೃಂದಾವನಸ್ಥರಾದರು.
“ಯಸ್ಕ ವಾಕ್ಯಾಮಧೇನುರ್ನಃ ಕಾಮಿತಾರ್ಥಾನ್ ಪ್ರಯಚ್ಛತಿ | ಸೇವೇ ತಂ ಜಯಯೋಗೀಂದ್ರಂ ಕಾಮಬಾಣಟ್ಟಿದಂ ಸದಾ |
ಶ್ರೀವಿದ್ಯಾಧಿರಾಜತೀರ್ಥರು ಕ್ರಿ.ಶ. ೧೩೮೮ ರಿಂದ ೧೩೯೨ ರ ವರೆಗೆ ವೇದಾಂತ ಸಾಮ್ರಾಜ್ಯವನ್ನು ಪರಿಪಾಲಿಸಿ ಶ್ರೀಮಾದಾಚಾರ್ಯರ ಸಿದ್ಧಾಂತವು ವ್ಯಾಪಕ ರೀತಿಯಿಂದ ಬಹುಮುಖವಾಗಿ ಪ್ರಸಾರವಾಗಿ ಸಜ್ಜನರ ಉದ್ಧಾರವಾಗಬೇಕೆಂಬ ಮಹೋದ್ದೇಶದಿಂದ ಶ್ರೀಸರ್ವಜ್ಞರ, ಶ್ರೀಟೀಕಾರಾಯರ ಪ್ರೇರಣೆಯಂತೆ ಷಾಷಿಕ ಕುಲದೀಪಕರಾದ ತಮ್ಮ ಪೂರ್ವಾಶ್ರಮ ಬಂಧುಗಳೂ ಷಡರ್ಶನಾಚಾರ್ಯರೂ ವಾದವಿದ್ಯಾಕೋವಿದರೂ ಆದ ಶ್ರೀರಾಜದೇವ ಮತ್ತು ಶ್ರೀವಾಸುದೇವಶಾಸ್ತ್ರಿಗಳೆಂಬ ಈರ್ವರಿಗೆ ಪರಮಹಂಸಾಶ್ರಮವಿತ್ತು ದೈತಸಿದ್ಧಾಂತ ಸಾಮ್ರಾಜ್ಯ ಸಿಂಹಾಸನದಲ್ಲಿ ಮಂಡಿಸಿ ಶ್ರೀರಾಜೇಂದ್ರತೀರ್ಥರು' ಮತ್ತು 'ಶ್ರೀಕವೀಂದ್ರತೀರ್ಥರು' ಎಂಬ ಅಭಿಧಾನಗಳಿಂದ ಸಾಮ್ರಾಜ್ಯ ಪಟ್ಟಾಭಿಷೇಕ ಮಾಡಿ ಶ್ರೀಮದಾಚಾರ್ಯರ ಮಹಾಸಂಸ್ಥಾನಾಧಿ ಪತಿಗಳೆಂದು ಘೋಷಿಸಿ ಅನುಗ್ರಹಿಸಿದರು ಮತ್ತು ರಾಜೇಂದ್ರತೀರ್ಥರಿಗೆ ಶ್ರೀಮದಾಚಾರ್ಯರ ಮಹಾಸಂಸ್ಥಾನದ ಆರಾಧ ಪ್ರತಿಮೆಗಳಾದ ಶ್ರೀಮೂಲಗೋಪಾಲಕೃಷ್ಣ ಶ್ರೀ ಪಟ್ಟಾಭಿರಾಮ ವ್ಯಾಸಮುಷ್ಟಿಗಳು ಬಲಮುರಿಶಂಖ ರತ್ನಗರ್ಭಶಾಲಿಗ್ರಾಮ, ರಾಮಟಂಕಿವರಹಗಳನ್ನೂ, ಕವೀಂದ್ರತೀರ್ಥರಿಗೆ ಶ್ರೀಮದಾಚಾರ್ಯರ ಮಹಾಸಂಸ್ಥಾನದ ಪ್ರಧಾನ ಪ್ರತಿಮೆಗಳಾದ ಶ್ರೀಬ್ರಹ್ಮ- ಕರಾರ್ಚಿತ ಶ್ರೀಮೂಲರಾಮದೇವರು ಶ್ರೀಸರ್ವಜಜ್ಞಕರಾರ್ಚಿತ ಶ್ರೀದಿಗ್ವಿಜಯರಾಮದೇವರು, ಶ್ರೀಜಯತೀರ್ಥಕರಾರ್ಚಿತ ಶ್ರೀಜಯರಾಮದೇವರು, ಶ್ರೀವಿಠಲಾದಿ ಇತರ ಪ್ರತಿಮೆಗಳು ವ್ಯಾಸಮುಷ್ಟಿಗಳು ರತ್ನಗರ್ಭಶಾಲಿಗ್ರಾಮ ಬಲಮುರಿಶಂಖ ರಾಮಟಂಕಿಮರಹಗಳನ್ನೂ ಅನುಗ್ರಹಿಸಿ ಶ್ರೀಮದಾಚಾರ್ಯರ ವೇದಾಂತಸಾಮ್ರಾಜ್ಯವನ್ನು ವಂಶಪರಂಪರೆಯಾಗಿ ಪರಿಪಾಲಿಸುತ್ತಾ ಸಿದ್ಧಾಂತವನ್ನು ವ್ಯಾಪಕವಾಗಿ ಪ್ರಸಾರಮಾಡುತ್ತಾ ಬರಬೇಕೆಂದು ಆಜ್ಞಾಪಿಸಿ ಶ್ರೀಹರಿಧ್ಯಾನಪರರಾದರು.
ಹೀಗೆ ಶ್ರೀವಿದ್ಯಾಧಿರಾಜತೀರ್ಥರವರೆಗೆ ಅವಿಚ್ಛಿನ್ನವಾಗಿ, ಯಶಸ್ವಿಯಾಗಿ ನಡೆದುಬಂದ ಹಂಸನಾಮಕ ಪರಮಾತ್ಮನ ಜ್ಞಾನಪರಂಪರೆಯ ಮಧ್ವಾಚಾರ್ಯರವೇದಾಂತಸಾಮ್ರಾಜ್ಯವು ಶ್ರೀವಿದ್ಯಾಧಿರಾಜರ ಕಾಲದಲ್ಲಿ ಇಬ್ಬಾಗವಾಗಿ ಶ್ರೀರಾಜೇಂದ್ರತೀರ್ಥರು ವಿರಾಜಿಸಿದ ಮಹಾಸಂಸ್ಥಾನವು 'ಪೂರ್ವಾದಿಮಠ', 'ಶ್ರೀರಾಜೇಂದ್ರ ಮಠ'ವೆಂದೂ; ಶ್ರೀಕವೀಂದ್ರತೀರ್ಥರು ವಿರಾಜಿಸಿದ ಮಹಾಸಂಸ್ಥಾನವು 'ದಕ್ಷಿಣಾದಿಮಠ', 'ಶ್ರೀಕವೀಂದ್ರತೀರ್ಥರ ಮಠ', 'ಶ್ರೀವಿದ್ಯಾಮಠ'ವೆಂದೂ ವಿಖ್ಯಾತವಾಗಿ ಜಗನ್ಮಾನ್ಯ- ವಾದವು. ಮುಂದೆ ಶ್ರೀರಾಜೇಂದ್ರತೀರ್ಥರು ಮಂಡಿಸಿದ ಶ್ರೀಮದಾಚಾರ್ಯರ ಮಹಾಸಂಸ್ಥಾನದಲ್ಲಿ ಶ್ರೀವ್ಯಾಸರಾಜ ಗುರುಸಾರ್ವಭೌಮರು ವಿರಾಜಿಸಿ ಜಗದ್ವಿಖ್ಯಾತರಾಗಿದ್ದರಿಂದ ಆ ಮಹಾಸಂಸ್ಥಾನವು “ಶ್ರೀವ್ಯಾಸರಾಜರ ಮಠವೆಂದು ವಿಖ್ಯಾತವಾಯಿತು. ಇದರಂತೆ ಶ್ರೀಕವೀಂದ್ರತೀರ್ಥರು ಮಂಡಿಸಿದ ಶ್ರೀಮಧ್ವಾಚಾರ್ಯರ ಮಹಾಸಂಸ್ಥಾನದಲ್ಲಿ ಶ್ರೀಕವೀಂದ್ರರ ತರುವಾಯ ಶ್ರೀವಾಗೀಶತೀರ್ಥರು (೧೩೯೮-೧೪೦೬), ಶ್ರೀರಾಮಚಂದ್ರತೀರ್ಥರು (೧೪೦೬-೧೪೩೫), ಶ್ರೀವಿಬುಧೇಂದ್ರ- ತೀರ್ಥರು (೧೪೩೫-೧೪೯೦), ಶ್ರೀಜಿತಾಮಿತ್ರತೀರ್ಥರು (೧೪೯೦-೧೯೯೨), ಶ್ರೀರಘುನಂದನತೀರ್ಥರು (೧೪೯೨-೧೫೦೪), ಶ್ರೀಸುರೇಂದ್ರತೀರ್ಥರು (೧೪೦೪-೧೫೭೫), ಶ್ರೀವಿಜಯೀಂದ್ರತೀರ್ಥರು (೧೫೭೫-೧೬೧೪), ಶ್ರೀಸುಧೀಂದ್ರತೀರ್ಥರು (೧೬೧೪-೧೬೨೩) ವಿರಾಜಿಸಿ ಶ್ರೀಸುಧೀಂದ್ರತೀರ್ಥರ ತರುವಾಯ ಶ್ರೀರಾಘವೇಂದ್ರಸ್ವಾಮಿಗಳವರು ಕ್ರಿ.ಶ.೧೬೨೩ ರಿಂದ ೧೬೭೧ ರವರೆಗೆ ವೇದಾಂತ ಸಾಮ್ರಾಜ್ಯವನ್ನಾಳಿ ಜಗನ್ಮಾನ್ಯರಾದ್ದರಿಂದ ಆ ಮಹಾಸಂಸ್ಥಾನವು “ಶ್ರೀರಾಘವೇಂದ್ರಸ್ವಾಮಿಗಳವರ ಮಠ'ವೆಂದೇ ವಿಖ್ಯಾತವಾಗಿ ಲೋಕವಂದ್ಯವಾಗಿದೆ.
ಇಂತಹ ಜಗನ್ಮಾನ್ಯವಾದ ಶ್ರೀಮದಾಚಾರ್ಯರ ಮಹಾಸಂಸ್ಥಾನಗಳಾದ ರಾಜೇಂದ್ರತೀರ್ಥರ ಪೂರ್ವಾದಿಮಠ, ಶ್ರೀಕವೀಂದ್ರತೀರ್ಥರ ದಕ್ಷಿಣಾದಿಮಠಗಳಲ್ಲಿ ಶ್ರೀಹರಿಯ ವಿಶೇಷ ಸನ್ನಿಧಾನಯುಕ್ತರೂ, ಶ್ರೀವಾಯುದೇವರ ಸತತ ಸನ್ನಿಧಾನ ವಿರಾಜಿತರೂ ಆದ ಶ್ರೀಪ್ರಹ್ಲಾದರಾಜರು ಕ್ರಮವಾಗಿ ಶ್ರೀವ್ಯಾಸರಾಜಗುರುಸಾರ್ವಭೌಮರು ಮತ್ತು ಶ್ರೀರಾಘವೇಂದ್ರ ಗುರುಸಾರ್ವಭೌಮರಾಗಿ ಅವತರಿಸಿ ಶ್ರೀಹಂಸನಾಮಕ ಪರಮಾತ್ಮನ ಜ್ಞಾನಪೀಠದ ಕೀರ್ತಿಯನ್ನು ಉಜ್ವಲಗೊಳಿಸಿ, ಅನಿತರ ಸಾಧಾರಣ ಗ್ರಂಥರಚನೆ ಮಾಡಿ ಆಚಾರ್ಯ ಪರಂಪರಾಗತ ಸಂಪ್ರದಾಯ, ಪಾಠಪ್ರವಚನ ಪರಂಪರೆಯನ್ನು ರಕ್ಷಿಸಿಕೊಂಡು ಬಂದು, ಪರವಾದಿದಿಗ್ವಿಜಯ, ಸಿದ್ಧಾಂತಸ್ಥಾಪನೆ, ಶಿಷ್ಯಭಕ್ತಜನೋದ್ಧಾರ, ರಾಜಾಧಿರಾಜರಿಗೆ ಗುರುಗಳಾಗಿದ್ದು, ಸಲಹೆ, ಉಪದೇಶಗಳಿಂದ ನಾಡು, ನುಡಿ, ಸಂಸ್ಕೃತಿ, ಧರ್ಮ, ವಿವಿಧ ವಿದ್ಯೆಗಳು, ಕಲೆಗಳು ಅಭಿವೃದ್ಧಿಸಿ ರಾಷ್ಟ್ರದ ಸರ್ವಾಂಗೀಣ ಉನ್ನತಿಯಾಗುವಂತೆ ಮಾಡಿ, ಆಪಂಡಿತಪಾಮರರ, ಸಕಲಜನರ ಹಿತಸಾಧನೆ ಮಾಡಿ, ತಮ್ಮ ಅಗಾಧ ತಪಸ್ಸನ್ನು ಜಗತ್ತಿನ ಕಲ್ಯಾಣಕ್ಕಾಗಿ ಧಾರೆಯೆರೆದು, ಅಸದೃಶಮಹಿಮಾಪ್ರದರ್ಶನಗಳಿಂದ ಲೋಕಮಾನ್ಯರಾದರು.
ಇಂದು ಜನತೆಯ ಆಶೋತ್ತರಗಳನ್ನು ಈಡೇರಿಸಿ ಅವರಲ್ಲಿ ಧಾರ್ಮಿಕ ವಿಶ್ವಾಸ ಬೆಳೆಸುವುದರಲ್ಲಿ ಶ್ರೀಪ್ರಹ್ಲಾದ - ಬಾಹೀಕ - ವ್ಯಾಸರಾಜಾವತಾರಿಗಳಾದ ಶ್ರೀರಾಘವೇಂದ್ರಸ್ವಾಮಿಗಳವರು ಅದ್ವಿತೀಯರಾಗಿದ್ದಾರೆ. ಈ ಮಹಾಮಹಿಮರು ಜನರ ಕಣ್ಣಿಗೆ ಕಾಣದಂತಾಗಿ ೩೧೪ ವರ್ಷಗಳು ಸಂದಿದ್ದರೂ ಅವರ ದಿವ್ಯತೇಜಸ್ಸು ಇಂದಿಗೂ ಎಲ್ಲೆಡೆಯಲ್ಲಿಯೂ ಪಸರಿಸಿದೆ. ಮತ, ಕೋಮುಗಳ ಭೇದವೆಣಿಸದೆ ಎಲ್ಲ ಸಜ್ಜನರೂ ಇವರ ಸೇವೆಗೈದು ಪುನೀತರಾಗಿದ್ದಾರೆ, ಪುನೀತರಾಗುತ್ತಿದ್ದಾರೆ. ಹಿಂದೆ ಅಸುರೀಶಕ್ತಿ, ನಾಸ್ತಿಕತನ ಮತ್ತು ಸ್ವಾರ್ಥವೇ ಮೂರ್ತಿವೆತ್ತಂತಿದ್ದ ಹಿರಣ್ಯಕಶಿಪುವಿನ ಪುತ್ರರಾಗಿ, ಕುಪಥಗಾಮಿಯಾಗಿದ್ದ ತಂದೆಗೇ ವಿರುದ್ಧವಾಗಿ, ದೇವರ ಮಹಿಮೆಯನ್ನು ಅವನಿಗೆ ಬೋಧಿಸಿ, ಅದರ ಪರಿಣಾಮವಾಗಿ ತಂದೆಯಿಂದ ಚಿತ್ರಹಿಂಸೆಗೆ ಗುರಿಯಾಗಿ, ನಿರ್ಮಲಭಕ್ತಿಯ ಪ್ರಭಾವದಿಂದ ಶ್ರೀನರಸಿಂಹದೇವರನ್ನು ಕಂಬದಿಂದ ಹೊರತರಿಸಿದ ಶ್ರೀಪ್ರಹ್ಲಾದರಾಜರೇ ಶ್ರೀರಾಘವೇಂದ್ರ ಸ್ವಾಮಿಗಳವರು. ಅಂತೆಯೇ ಅವರು ಇಂಥ ಕಲಿಯುಗದಲ್ಲೂ ಇಷ್ಟು ವಿರೋಧಶಕ್ತಿಗಳು ತಲೆಯೆತ್ತಿ ನಿಂತು ಭಗವದ್ಭಕ್ತರು, ಆಸ್ತಿಕರು, ಸಜ್ಜನರುಗಳ ಹಾದಿಗೆ ಮುಳ್ಳಾಗಿದ್ದರೂ ಶ್ರೀಭಗವನ್ನ ಹಿಮೆಯನ್ನು ತಮ್ಮ ಅಗಾಧಮಹಿಮೆಯ ಮೂಲಕ ಜನತೆಗೆ ತೋರಿಸಿ ಭಾಗವತಧರ್ಮ ಪ್ರಸಾರಮಾಡುತ್ತಾ “ಕಲಿಯುಗ ಕಲ್ಪತರುಗಳೆನಿಸಿ ಪ್ರಖ್ಯಾತರಾಗಿದ್ದಾರೆ.
ಜೀವನದಲ್ಲಿ ದುಃಖಮಯ ಸಂಸಾರದಲ್ಲಿ ರೋಸಿ ಯೋಗಮಾರ್ಗವನ್ನು ಹಿಡಿದು ಹಿಮಾಲಯ ತಪ್ಪಲಿನಂತಹ ಏಕಾಂತ ಪ್ರದೇಶಗಳಿಗೆ ಹೋಗಿ ಶಾಂತಿ ಪಡೆಯಲೆತ್ನಿಸುವ ಸಾಧಕರು ಇಂದಿಗೂ ಇದ್ದಾರೆ. ಅಂಥವರು ತಮ್ಮನ್ನಾಶ್ರಯಿಸಿ ಬಂದ ಇತರ ಸಾಧಕರಿಗೂ ಪ್ರಪಂಚದಿಂದ ದೂರವಾಗಿರಬೇಕೆಂದೇ ಬೋಧನೆ ಮಾಡುವುದು ಅನಿವಾರ್ಯ. ಇದಕ್ಕೆ ವಿರುದ್ಧವಾಗಿ ಕ್ಷುದ್ರದೇವತೋಪಾಸನೆಯಿಂದ ಅಲ್ಪಸಿದ್ಧಿಗಳನ್ನು ಪಡೆದು, ಅದರಿಂದ ಮತ್ತು ಇಂದ್ರಜಾಲಾದಿಗಳಿಂದ ಜಗತ್ತನ್ನು ಮರುಳು ಮಾಡಿ ತಮ್ಮಲ್ಲಿ ಬರುವ 'ಸಂಸಾರಿ'ಗಳಿಗೆ ಧನ-ಕನಕ-ಗೃಹ-ಉದ್ಯೋಗಗಳನ್ನು ಕೊಡಿಸುತ್ತೇವೆಂದು ಹೇಳಿಕೊಳ್ಳುವಸಿದ್ಧರಿಗೂ ಈ ಕಾಲದಲ್ಲಿ ಕೊರತೆಯೇನಿಲ್ಲ! ಆದರೆ ಈ ಎರಡು ಅತ್ಯಂತ ವಿರುದ್ಧಮಾರ್ಗಗಳೂ ಈ ಕಾಲದಲ್ಲಿ ಕ್ಷೇಮಕರವಲ್ಲವೆಂದು ಹೇಳಬಹುದು.
ಈ ಜಗತ್ತಿನ ನಿಯಮಗಳಿಗೆ ಕಟ್ಟುಬಿದ್ದು ಇರುವಷ್ಟು ಕಾಲ ಇದನ್ನು ಬಿಟ್ಟು ಹೋಗಲಾರದೆ, ಇಲ್ಲಿ ತನ್ನ ಅಲ್ಪತೆಯನ್ನು ತಿಳಿದು, ದೈವಕ್ಕೆ ಶರಣುಹೋಗಿ ಸಾಧನ ಮಾಡಿಕೊಳ್ಳಬಯಸುವ ಸಜ್ಜನರಿಗೆ ಶ್ರೀರಾಘವೇಂದ್ರಸ್ವಾಮಿಗಳಿಗಿಂತ ಬೇರೆ ಮಾರ್ಗದರ್ಶಿ ಗುರುಗಳಿಲ್ಲ! ಆ ಮಹನೀಯರು ತಮ್ಮಲ್ಲಿ ಅನನ್ಯಗತಿಕನಾಗಿ ಶರಣು ಬರುವ ಭಕ್ತನ ಪ್ರಾಪಂಚಿಕ ದುಃಖಗಳನ್ನು ನಿವಾರಿಸಿ, ಅವನ ಇಷ್ಟಾರ್ಥಗಳನ್ನು ಕಲ್ಪತರುವಿನಂತೆ ಪೂರ್ಣಮಾಡಿ, ಕ್ರಮೇಣ ಈ ಜಗತ್ತಿನ ಅಲ್ಪತೆ-ಅಪೂರ್ಣತೆ ಹಾಗೂ ಅಸ್ಥಿರತೆಗಳನ್ನು ಮನದಟ್ಟು ಮಾಡಿಕೊಟ್ಟು, ದೈವದ ಕಡೆಗೆ ಅವನ ಮನಸ್ಸಿನ ಪ್ರಾವಣ್ಯವನ್ನು ಸ್ಥಿರಗೊಳಿಸಿ, ಅವನಿಂದ ತಕ್ಕ ಸಾಧನಮಾಡಿಸಿ ಅವನ ಗುರಿಮುಟ್ಟಿಸುವರು. ಇಂಥ ಲೋಕಗುರುಗಳು ಮತ್ತೊಬ್ಬರಿಲ್ಲ. ಈ ಮಹಾಮಹಿಮರಿಂದ ಕಲಿಯುಗದಲ್ಲಿ ನಮ್ಮ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆಯಾಗಬೇಕೆಂಬುದು ಭಗವಂತನ ಇಚ್ಛೆ! ಆದ್ದರಿಂದಲೇ ಅನೇಕ ಸ್ಥಳಗಳಲ್ಲಿ ಈ ಗುರುಗಳ ಬೃಂದಾವನಗಳು ಸ್ಥಾಪಿತವಾಗಿ ಭಕ್ತರು ಸೇವೆ ಸಲ್ಲಿಸಿ ಕೃತಾರ್ಥರಾಗಿ ಜೀವನಸಾಫಲ್ಯವನ್ನು ಪಡೆಯುತ್ತಿರುವರು. ಇದು ಭಾರತದಾದ್ಯಂತ, ಅಷ್ಟೇ ಏಕೆ, ಪರದೇಶಗಳಲ್ಲೆಲ್ಲಾ ವ್ಯಾಪಿಸುತ್ತಿದೆ! ವ್ಯಾಪಿಸುವುದು ಅನಿವಾರ್ಯವೂ ಕೂಡ! ಇಂಥ ಸಮಯದಲ್ಲಿ ಪ್ರತಿಯೊಬ್ಬ ಸಜ್ಜನನೂ ಎಲ್ಲಾ ತೊಡಕುಗಳನ್ನು ಹರಿದೊಗೆದು ಆಜೀವಪರ್ಯಂತ ಇವರ ಪಾದಾಶ್ರಯ ಮಾಡಿ ಉದ್ಘತನಾಗಬೇಕು.
ಭಗವತ್ಪಸಾದದಿಂದಲೇ ಸಕಲಜೀವರ ಉದ್ಧಾರವಾಗುವುದೆಂದು ಶಾಸ್ತ್ರಗಳು ಸಾಗುವುವು. ಭಗವತಸಾದವಾಗಬೇಕಾದರೆ ಹಿಂದೆ ನಿರೂಪಿಸಿದಂತೆ ಅವನಲ್ಲಿ ಮಹಾತ್ಮ ಜ್ಞಾನಪೂರ್ವಕ ಭಕ್ತಿಮಾಡಬೇಕು. ಇಂಥ ಹರಿಭಕ್ತಿಗೆ ಗುರುಭಕ್ತಿಯು ಸಾಧಕ- ವಾದ್ದರಿಂದ ಗುರುಗಳಲ್ಲಿಯೂ ತಾರತಮ್ಯಾನುಸಾರವಾಗಿ ಭಕ್ತಿಮಾಡಬೇಕು. ಹಿಂದೆಯೇ ವಿವರಿಸಿದಂತೆ ಸಮಗ್ರ ಗುರು- ಲಕ್ಷಣೋಪೇತರಾಗಿ “ನಿರುಪಪದ' ಗುರುಶಬ್ದವಾಚ್ಯರಾಗಿ, ಶ್ರೀಹರಿಯ ಪಂಚರೂಪಗಳು ಮತ್ತು ಶ್ರೀವಾಯುದೇವರ ಸತತ ಮಹಾಸನ್ನಿಧಾನದಿಂದ ಶೋಭಿತರಾಗಿ ಜಗತ್ತನ್ನು ಪೊರೆಯುತ್ತಿರುವ ಶ್ರೀಪ್ರಹ್ಲಾದ-ಬಾಹ್ಲಿಕ-ವ್ಯಾಸರಾಜಾವತಾರಿಗಳಾದ ಶ್ರೀರಾಘವೇಂದ್ರಸ್ವಾಮಿಗಳವರೇ ಭಾರತದೇಶದ ಜನತೆಯ ಸ್ವರೂಪೋದ್ಧಾರಕ ಗುರುಗಳಾದ್ದರಿಂದ ಇವರಲ್ಲಿ ಭಕ್ತಿಮಾಡಬೇಕೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇಂತಹ ಮಹಿಮೋಪೇತರಾದ ಶ್ರೀರಾಘವೇಂದ್ರಸ್ವಾಮಿಗಳವರಲ್ಲಿ ಭಕ್ತಿಯುಂಟಾಗಬೇಕಾದರೆ ಅವರ ಮತ್ತು ಅವರ ಹಿಂದಿನ ಅವತಾರಗಳ, ಮೂಲರೂಪದ ಚರಿತ್ರೆ, ಅವರ ಜ್ಞಾನ, ಭಕ್ತಿ, ವೈರಾಗ್ಯ, ತಪಸ್ಸು, ಅವರಲ್ಲಿ ಶ್ರೀಹರಿಯು ಮಾಡಿದ ವಿಶೇಷಾನುಗ್ರಹ, ಅವರೆಸಗಿದ ಲೋಕಕಲ್ಯಾಣಮಾಡಿದ ಉಪದೇಶಗಳು, ತೋರಿದ ಮಹಿಮೆಗಳನ್ನು ಅವರ ಭಕ್ತರು, ಭಕ್ತರಾಗಬಯಸುವವರು ಚೆನ್ನಾಗಿ ತಿಳಿಯುವುದು ಅತ್ಯಾವಶ್ಯವಾಗಿದೆ. ಅಂತೆಯೇ ನಾವು ಅನೇಕ ಪ್ರಮಾಣ ಗಳನ್ನು ಪರಿಶೀಲಿಸಿ, ವಿವೇಚಿಸಿ ಆ ಮಹನೀಯರ ಚರಿತಾಮೃತವನ್ನು 'ಕಲಿಯುಗ ಕಲ್ಪತರು' ಎಂಬ ಹೆಸರಿನಿಂದ ಶ್ರೀಗುರುರಾಜರ ಪ್ರೇರಣೆಯಂತೆ ರಚಿಸಿ ಶ್ರೀಗುರುರಾಜರ ಭಕ್ತರಿಗೆ ನೀಡುತ್ತಿದ್ದೇವೆ. ಇಹಲೋಕದಲ್ಲಿ ದುಃಖಪರಿಹಾರ, ಸುಖ-ಶಾಂತಿ- ಸಂತೋಷಗಳನ್ನೂ, ಆನ್ನೋದ್ಧಾರವನ್ನೂ, ಆಮುಷ್ಠಿಕದಲ್ಲಿ ಶಾಶ್ವತ ಸುಖವನ್ನೂ ಬಯಸುವ ಪ್ರತಿಯೊಬ್ಬ ಭಕ್ತನೂ ಈ ಕೃತಿಯನ್ನು ಓದಿ ಅವರಲ್ಲಿ ಭಕ್ತಿಮಾಡಿ ಆ ಗುರುಸಾರ್ವಭೌಮರ ಪರಮಾನುಗ್ರಹಕ್ಕೆ ಪಾತ್ರರಾದಲ್ಲಿ ನಮ್ಮ ಶ್ರಮವು ಸಾರ್ಥಕವಾಗುವುದು, ಶ್ರೀಗುರುರಾಜರು ಸಕಲರಿಗೂ ಸನ್ಮಂಗಳಗಳನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.
ಈಗ ಓದಿ 'ಕಲಿಯುಗ ಕಲ್ಪತರು'ವಿನ ಅಮರಚರಿತಾಮೃತವನ್ನು.