
ರಾಘವೇಂದ್ರ ಹರಿಪಾದಕಂಜ ನಿಷೇವಣಾಲ್ಲಬ್ಧ ಸಮಸ್ತ ಸಂಪತ್ |
ದೇವಸ್ವಭಾವೋ ದಿವಿಜದ್ರುಮೋಯಮಿಷ್ಟಪ್ರದೋ ಮೇ ಸತತಂ ಸ ಭೂಯಾತ್ ||
ಪರಮಾತ್ಮನ ಪ್ರಸಾದದಿಂದಲೇ ಸಕಲ ಜೀವರ ಉದ್ಧಾರವಾಗುವುದೆಂದು ವೇದಾದಿ ಸಕಲಶಾಸ್ತ್ರಗಳು ಸಾರುವವು. ಭಗವಂತನ ಪ್ರಸಾದವಾಗಬೇಕಾದರೆ ಭಗವಂತನನ್ನು ಒಲಿಸಿಕೊಳ್ಳಬೇಕು. ಅವನೊಲಿಯಬೇಕಾದರೆ ಅವನಲ್ಲಿ ಪ್ರೇಮ ಅಂದರೆ ಭಕ್ತಿಯನ್ನು ಮಾಡಬೇಕು. ಭಕ್ತಿಯೆಂದರೆ “ಮಾಹಾತ್ಮಜ್ಞಾನಪೂರ್ವಸ್ತು ಸುದೃಢಸರ್ವತೋSಧಿಕಃ | ಸ್ನೇಹೋ ಭಕ್ತಿರಿತಿ ಪ್ರೋಕೊ ತಯಾ ಮುಕ್ತಿರ್ನ ಚಾನ್ಯಥಾ ||” ಎಂಬ ಪ್ರಮಾಣಾನುಸಾರವಾಗಿ ಪರಮಾತ್ಮನು ಸರ್ವೋತ್ತಮ, ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರಾದಿ ಅಷ್ಟಕ್ರಿಯೆಗಳಿಗೆ ಅವನೇ ಕಾರಣ. ರಮಾ-ಬ್ರಹ್ಮ-ರುದ್ರೇಂದ್ರಾದಿ ವೃಂದಾರಕವೃಂದ ಮದ್ಯ ಪಾದಾಬ್ಬನವನು. ಸರ್ವಜೀವರ ಮುಖ್ಯ ಗುರಿಯಾದ ಸ್ವರೂಪಾನಂದಾವಿರ್ಭಾವರೂಪ ಶಾಶ್ವತ ಸುಖವನ್ನು ಕರುಣಿಸುವ ಮಹಾಪ್ರಭು ಅವನು. ಶ್ರೀಹರಿಯು ದೋಷದೂರನು, ಅನಂತಕಲ್ಯಾಣಗುಣಮಂದಿರನು, ಅಪ್ರತಿಹತಶಕ್ತನವನು, ಮಹಾಮಹಿಮನು ಮುಂತಾದ ಅವನ ಲೀಲಾವಿಲಾಸ ಚರಿತ್ರೆಗಳನ್ನು ಅರಿತು, ಹೆಂಡತಿ ಮಕ್ಕಳು, ಬಂಧು-ಮಿತ್ರರೇ ಮೊದಲಾದವರಲ್ಲಿ ಮಾಡುವುದಕ್ಕಿಂತಲೂ ಸಹಸ್ರಪಟ್ಟು ಅಧಿಕವಾದ, ಅಚಲವಾದ ಪ್ರೇಮವನ್ನು ಅಂದರೆ ಭಕ್ತಿಯನ್ನು ಆ ದಯಾಮಯನಾದ ಭಗವಂತನಲ್ಲಿ ಮಾಡಿ ಅವನನ್ನು ಒಲಿಸಿಕೊಂಡು ಪರಮಾತ್ಮನ ಅತ್ಯರ್ಥಪ್ರಸಾದಕ್ಕೆ ಪಾತ್ರರಾಗಿ, ದುಃಖಕ್ಕೆ ಕಾರಣವಾದ ಜನನ-ಮರಣರಹಿತವಾದ ಶಾಶ್ವತ ಸುಖವನ್ನು ಪಡೆಯಬೇಕು. ಇದೇ ವೇದ-ಉಪನಿಷತ್ತು ಮೊದಲಾದ ಶಾಸ್ತ್ರಗಳ ಉಪದೇಶದ ಸಾರವಾಗಿವೆ.
ಶ್ರೀಹರಿಯ ಜ್ಞಾನವನ್ನು ಬೋಧಿಸುವ ಗುರುಗಳಲ್ಲಿಯೂ ಶ್ರೀಹರಿಯಲ್ಲಿ ಮಾಡುವಂತೆಯೇ, ಶ್ರೀಭಗವದ್ಭಕ್ತಿಗೆ ಸಾಧಕವಾದ್ದರಿಂದ ಗುರುಭಕ್ತಿಯೂ ಅವಶ್ಯಕರ್ತವ್ಯವೆಂದು ಯಸ್ಯ ದೇವೇ ಪರಾ ಭಕ್ತಿ ಯಥಾ ದೇವ ತಥಾ ಗುರೌ II” ಎಂಬ ಶ್ರುತಿಯು ಉಪದೇಶಿಸುವುದರಿಂದ ಗುರುಗಳಲ್ಲಿ ಪರಮಾತ್ಮನಲ್ಲಿ ಮಾಡುವಂತೆ ಭಕ್ತಿಯನ್ನು ಮಾಡಬೇಕು. ಗುರುಗಳೆಂದರೆ ಯಾರು ? “ಗುಶಬ್ದಸ್ವಂಧಕಾರಸ್ಮಾತ್ ರುಶಬ್ದಸನ್ನಿವರ್ತಕಃ” ಗು-ಎಂದರೆ ಶಿಷ್ಯರ ಅಜ್ಞಾನವೆಂಬ ಅಂಧಕಾರ, ರು-ಎಂದರೆ ಅದನ್ನು ಪರಿಹರಿಸುವವರು. ಅಂದರೆ ಶಿಷ್ಯರ ಅಜ್ಞಾನವನ್ನು ಪರಿಹರಿಸಿ, ಜ್ಞಾನೋಪದೇಶ ಮಾಡುವವರ ಗುರುಗಳು, ತಾರತಮ್ಯಾನುಸಾರವಾಗಿ ಇಂತಹ ಎಲ್ಲಗುರುಗಳಲ್ಲಿಯೂ ಭಕ್ತಿಯನ್ನು ಮಾಡಲೇಬೇಕು.
ಇಂದು ನಿರುಪಪದ 'ಗುರು' ಶಬ್ದವಾಚ್ಯರಾಗಿ ಜಗತ್ತನ್ನು ಉದ್ದರಿಸುತ್ತಿರುವ ಶ್ರೀರಾಘವೇಂದ್ರಸ್ವಾಮಿಗಳವರು ಭಾರತ ದೇಶದ ಜನತೆಯ ಸ್ವರೂಪೋದ್ಧಾರಕ ಗುರುಗಳಾಗಿರುವುದರಿಂದ ಅವರಲ್ಲಿ ಭಕ್ತಿ ಮಾಡಬೇಕೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇಂತಹ ಮಹಿಮೋಪೇತರಾದ ಶ್ರೀರಾಘವೇಂದ್ರಗುರುಸಾರ್ವಭೌಮರಲ್ಲಿ ಭಕ್ತಿಯುಂಟಾಗಬೇಕಾದರೆ ಅವರು ಯಾರು? ಅವರ ಮೂಲರೂಪವಾವುದು? ಅವರು ಮಾಡಿದ ಮಹತ್ಕಾರ್ಯಗಳು, ಅಮರ ಚರಿತ್ರೆ, ಭಗವಂತನನ್ನು ಅವರು ಒಲಿಸಿಕೊಂಡ ಬಗೆ, ಅವರಲ್ಲಿ ಪರಮಾತ್ಮನು ಮಾಡಿದ ಅನಿತರಸಾಧಾರಣವಾದ ಅನುಗ್ರಹ, ಅವರು ತೋರಿದ ಮಹಿಮಗಳು, ಮಾಡಿದ ಅನುಗ್ರಹ ಮುಂತಾದವುಗಳನ್ನು ಅವರ ಭಕ್ತರಾಗಬಯಸುವವರು ಯಥಾರ್ಥವಾಗಿ ತಿಳಿಯಬೇಕು. ಅಂತೆಯೇ ಅನಂತರ ಅಂತರಂಗ ಭಕ್ತರಾದ ಆ ಸಂತ ಸಾರ್ವಭೌಮರ ಮೂಲರೂಪ, ಅವತಾರಗಳು, ಅಮರಚರಿತೆ, ಮಹಿಮಾತಿಶಯಗಳನ್ನು ಅವರ ಅನಂತ ಭಕ್ತಸಂತತಿಯ ಸಂತೋಷಕ್ಕಾಗಿ ನಿರೂಪಿಸಲು ಉದ್ಯುಕ್ತರಾಗಿದ್ದೇವೆ.
“ಕಲಿಯುಗ ಕಲ್ಪತರುಗಳೆಂದು ಜಗನ್ಮಾನ್ಯರಾಗಿರುವ ಆ ಜಗದ್ಗುರುಗಳು ಇತ್ತೀಚೆಗೆ ಅಂದರ '೧೯೪೭ರ ಹಾಗೆ ಪ್ರಕಟಪಡಿಸಿದ ಅದ್ಭುತ ಮಹಿಮಾ ನಿರೂಪಣೆ, ರಜತರಥದಲ್ಲಿ ಮಂಡಿಸಿ ಭಕ್ತಕೋಟಿಯ ಮನೋರಥಗಳನ್ನು ಪೂರ್ಣಮಾಡಲು ತಮ್ಮ ಪವಿತ್ರ ಆರಾಧನೆಯ ದಿನದಂದು ರಜತರಥೋತ್ಸವವನ್ನು ನೆರವೇರಿಸಿಕೊಂಡ ಪರಮಮಂಗಳಕರ ಹಿನ್ನೆಲೆಯಿಂದಲೇ ಅವರ ಲೋಕಕಲ್ಯಾಣ ಚರಿತಾಮೃತದ ಮಂಗಳನಾಂದೀ ಪದ್ಯದಿಂದ ಅವರ ಲೋಕಕಲ್ಯಾಣಚರಿತೆಯ ಅನುವಾದವನ್ನು ಮಾಡಬಯಸಿದ್ದೇವೆ.
ಶ್ರಾವಣ ಕೃಷ್ಣ ದ್ವಿತೀಯಾ ಸಾಯಂಕಾಲ. ಮಂತ್ರಸಿದ್ಧಿ ಕ್ಷೇತ್ರವೆಂದು ಪ್ರಖ್ಯಾತವಾದ ಮಂತ್ರಾಲಯದಲ್ಲಿ ಅಪಾರ ಸಂಭ್ರಮ. ಅಂದು ಶ್ರೀಗುರುಸಾರ್ವಭೌಮರಿಗೆ ರಜತರಥ ಸಮರ್ಪಣೆ ಮತ್ತು ರಥೋತ್ಸವವು ನೆರವೇರುವುದೆಂಬ ವದಂತಿಯು ಹಬ್ಬಿದ್ದರಿಂದ ಯಾವ ವರ್ಷವೂ ಇಲ್ಲದಷ್ಟು ಜನಸಂದಣಿ, ದೇಶ ದೇಶಗಳಿಂದ ಇಪ್ಪತ್ತು - ಮೂವತ್ತು ಸಹಸ್ರಕ್ಕೂ ಮೀರಿ ಭಕ್ತಜನರು ಮಂತ್ರಾಲಯದಲ್ಲಿ ನೆರೆದಿದ್ದಾರೆ. ಕ್ಷಣಕ್ಷಣಕ್ಕೂ ತಂಡೋಪತಂಡವಾಗಿ ಭಕ್ತರು ಆಗಮಿಸುತ್ತಲೇ ಇದ್ದಾರೆ.
ತಳಿರು ತೋರಣ ವಿವಿಧ ವರ್ಣಗಳ ಧ್ವಜಪತಾಕೆಗಳು ವಿದ್ಯುದ್ದೀಪಗಳಿಂದ ರಜಿಸುತ್ತಿರುವ ಶ್ರೀಗುರುರಾಜರ ಭವ್ಯಾಲಯದ ಮಹಾದ್ವಾರದ ಮೇಲ್ಬಾಗದ ಧ್ವಜಸ್ತಂಭದಲ್ಲಿ ಮೆಲ್ಲಮೆಲ್ಲನೆ ಹಾರಾಡುತ್ತಿರುವ “ಪ್ರಣವ ಧ್ವಜವು” ಮಂತ್ರಾಲಯಕ್ಕೆ ಧಾವಿಸುತ್ತಿರುವ ಭಕ್ತವೃಂದವನ್ನು ಕಂಡು “ಸ್ವಾಗತವಿದೋ ನಿಮಗೆ ಭಕ್ತ ಬಂಧುಗಳೇ! ಕಲಿಮಲ ಕಲುಷಿತರಾಗಿ ಮುಂದಿನ ದಾರಿಗಾಣದೆ ನೊಂದು, ಬೆಂದು, ಕಂಗೆಟ್ಟು ಗುರುವರರ ಪರಮಚರಣಕಮಲಗಳಿಗೆ ಶರಣಾಗಿ ಬರುತ್ತಿರುವ ಗುರುಭಕ್ತರೇ, ಬನ್ನಿ ಬನ್ನಿ, ನನ್ನ ಪ್ರಿಯಕರ “ಕಲಿಯುಗ ಕಲ್ಪತರು'ವಿನ ಪಾದಾಶ್ರಯ ಮಾಡಿ ನಿಮ್ಮ ಮನೋರಥಗಳನ್ನು ಹೊಂದಿ ಪುನೀತರಾಗಿರಿ! ಬನ್ನಿ, ನಿಮ್ಮ ಮನದಾಸೆ ಪೂರೈಸಲು ರಥವೇರಿ ಬರುತಿಹನು ಯತಿಸಾರ್ವಭೌಮ” ಎಂದು ಸ್ವಾಗತಿಸುತ್ತಿರುವಂತೆ ಭಾಸವಾಗುತ್ತಿದೆ. ನಿರ್ಭಯವಾಗಿ, ಸ್ವಚ್ಛಂದವಾಗಿ ಪಟಪಟನೆ ಹಾರಾಡುತ್ತಿರುವ ಆ ಹೆಮ್ಮೆಯ 'ಪ್ರಣವ ಧ್ವಜ'ವನ್ನು ನೋಡಿದರೆ ನನ್ನಲ್ಲಿ (ಪತಾಕೆಯಲ್ಲಿ) ಅಂಕಿತವಾಗಿರುವ ಓಂಕಾರವು ಸಮಸ್ತಲೋಕಗಳಲ್ಲಿ ವ್ಯಾಪಿಸಿರುವಂತೆ, ಓಂಕಾರೋಪಾಸನೆಯಿಂದ ಅಜಯ್ಯರೂ, ಮಹಾಮಹಿಮರೂ ಆದ ಶ್ರೀಪರಿಮಳಾಚಾರ್ಯರ ಅದಮ್ಯ ಕೀರ್ತಿಯೊಡನೆ ನಾನು ಇಲ್ಲಿ ಮಾತ್ರವಲ್ಲ ಮೂರು ಲೋಕಗಳಲ್ಲಿಯೂ ವ್ಯಾಪಿಸಿದ್ದೇನೆ. ಆ ಮಹನೀಯರ ವಿಜಯ ವೈಜಯಂತಿಯಾದ ನನ್ನನ್ನು ಸರಿಗಟ್ಟುವವರು ಈ ಧರಾತಲದಲ್ಲಿ ಬೇರಾರಿದ್ದಾರೆ?” ಎಂದು ತನ್ನ ವೈಶಿಷ್ಟ್ಯವನ್ನು ಪ್ರದರ್ಶಿಸುತ್ತಿರುವಂತೆ ಕಂಡುಬರುತ್ತಿದೆ.
ಹಾರುತಿದೆ ಮೂಜಗದಿ ವಿಜಯದ ಪತಾಕೆ |
ಪರಿಮಳಾಚಾರ್ಯರಾ ಕೀರುತಿಯ ಸಾರುತಲಿ ||
ಎಂದು ಭಾಗವತರೊಬ್ಬರು ಹಾಡುತ್ತಿರುವ ಸುಮಧುರ ಗಾನವಾಹಿನಿಯು ಧ್ವನಿವರ್ಧಕ ಯಂತ್ರದಿಂದ ಹೊರಹೊಮ್ಮಿ ಸರ್ವಜನರನ್ನೂ ಪರವಶಗೊಳಿಸುತ್ತಿದೆ. ಗುರುಮಹಿಮಾ ವರ್ಣನಪರ ಸಂಗೀತ, ಅಲ್ಲಿನ ಸುಂದರ ದೃಶ್ಯಗಳನ್ನು ಕಂಡು ಸುಜನರು ಮೈಮರೆತು ಭಕ್ತಿಪಾರವಶ್ಯದಿಂದ ಶ್ರೀಗುರುಸಾರ್ವಭೌಮರ ದರ್ಶನಕ್ಕಾಗಿ ಹಾತೊರೆಯುತ್ತಿದ್ದಾರೆ. ಜನರ ಸಡಗರ, ಸಂಭ್ರಮ ಹೇಳತೀರದು. ಎಲ್ಲಿ ನೋಡಿದರಲ್ಲಿ ಭಕ್ತಿಭಾವದಿಂದ ಜಗದಾರಾಧ್ಯ ಗುರುರಾಜರನ್ನು ಭಾವುಕರು ಹಾಡಿ-ಹೊಗಳಿ ಕುಣಿದಾಡುತ್ತಿರುವ ಮನೋಹರ ದೃಶ್ಯಗಳು ಕಣ್ಮನಗಳಿಗೆ ಅಪಾರ ಆನಂದವನ್ನು ತಂದೀಯುತ್ತಿವೆ.
ಅಕೋ ನೋಡಿ, ಯತಿಕುಲತಿಲಕರಾದ ಗುರುಸಾರ್ವಭೌಮರ ಉತ್ಸವ ಹೊರಟಿದೆ! ಸುಶ್ರಾವ್ಯವಾದ ನಾದಸ್ವರ, ಸುಸ್ವರವೇದಘೋಷ, ಸುಮಧುರ ಗಾನ - ಭಜನೆಗಳ ಮಧ್ಯದಲ್ಲಿ ಗುರವರರಿಗೆ ಚಾಮರ ಬೀಸುತ್ತಾ ಶ್ರೀಗುರುರಾಜರನ್ನು ಜನತೆಗೆ ಪರಿಚಯ ಮಾಡಿಕೊಡುತ್ತಿರುವರೋ ಎಂಬಂತೆ ಪರಮಪೂಜ್ಯ ಪೀಠಾಧೀಶ್ವರರಾದ ಶ್ರೀಸುಯಮೀಂದ್ರತೀರ್ಥ ಗುರುಚರಣರು ತಮ್ಮ ಸ್ವಾಭಾವಿಕ ನಗುಮುಖದಿಂದ ಭಕ್ತಜನರ ಕಣ್ಮನಗಳಿಗೆ ಆನಂದವೀಯುತ್ತಾ ಪಂಡಿತ ಮಂಡಲೀಲಾಲ್ಯಮಾನರಾಗಿ ದಯಮಾಡಿಸುತ್ತಿದ್ದಾರೆ! ಉತ್ಸವ ಮುಂದುವರೆದು ರಜತರಥದೆಡೆಗೆ ಬಿಜಯಮಾಡಿಸುತ್ತಿರುವಂತೆ ಜನರ ಉತ್ಸಾಹ, ಸಂತೋಷ ಮೇರೆ ಮೀರುತ್ತಿದೆ.
ಆ ರಮಣೀಯ ದೃಶ್ಯವನ್ನು ಭಕ್ತಜನರು ರೆಪ್ಪೆ ಹಾಕದೆ ನಿಟ್ಟಿಸಿ ನೋಡುತ್ತಿರುವಂತೆಯೇ ಜಗದ್ವಂದ್ಯ ಜಗದ್ಗುರುಗಳು ರಜತರಥವನ್ನಲಂಕರಿಸಿದರು. ಅಹಹ! ಅದೆಂತಹ ರಮಣೀಯ ನೋಟ, ಅಕೋ, ಸಹಸ್ರಾರು ವಿದ್ಯುದ್ದೀಪಗಳು ಮಿನುಗಿದವು. ವಿವಿಧ ವರ್ಣರಂಜಿತ ವಿದ್ಯುದ್ದೀಪಗಳು ನಕ್ಷತ್ರಗಳಂತೆ ಬೆಳಗುತ್ತಿರಲು ನೂತನ ರಜತರಥವೆಂಬ ಅಂಬರದಲ್ಲಿ ಭಕ್ತತಾರಾಮಂಡಲ- ದಿಂದೊಡಗೂಡಿ ಪ್ರಕಾಶಿಸುವ ಚಂದ್ರನಂತೆ ದೇದೀಪ್ಯಮಾನರಾಗಿ, ವರಾಭಯಹಸ್ತಗಳಿಂದ ಕಲಿಯುಗದ ಜನತೆಯನ್ನುದ್ಧರಿಸಿ, ಅವರ ಮನೋರಥವನ್ನೀಡೇರಿಸಲು ಬದ್ಧಕಂಕಣರಾಗಿ ಶೋಭಿಸುತ್ತಿರುವ ಶ್ರೀಯತಿಚಂದ್ರಮರನ್ನು ಅವಲೋಕಿಸಿ ಭಕ್ತವೃಂದವು ಆನಂದೋದ್ರೇಕದಿಂದ “ಜಯ ಜಯ ಪ್ರಹ್ಲಾದರಾಜ, ಜಯ ಜಯ ವ್ಯಾಸಮುನೀಂದ್ರ, ಜಯ ಜಯ ರಾಘವೇಂದ್ರ ಯತೀಂದ್ರ! ಜಯ ಜಯ ಕಲಿಯುಗ ಕಲ್ಪತರೋ!!” ಎಂದು ಗಗನವೇ ಭೇದಿಸುವಂತೆ ಜಯ ಜಯಧ್ವನಿಗೈಯುತ್ತಿದೆ! ಆ ಅಭೂತಪೂರ್ವ, ಸುಂದರ, ಮನೋಹರ, ಮಂಗಳಕರ ದೃಶ್ಯವನ್ನು ಕಣ್ಣಾರೆ ಕಂಡ ಮಾನವನೇ ಧನ್ಯ! ಅದನ್ನು ನಮ್ಮ ತೊದಲು ನುಡಿಯಿಂದ ವರ್ಣಿಸಲು ನಾವು ಅಸಮರ್ಥರು.
ಸಕಲ ವೈಭವದೊಡನೆ ರಥೋತ್ಸವವು ನಾಲ್ಕು ಪ್ರಾಕಾರಗಳಲ್ಲೂ ಪ್ರದಕ್ಷಿಣಾಕಾರವಾಗಿ ಬಂದು ನೆಲೆನಿಂತಿತು. ಜನರ ಹರ್ಷೋದ್ಗಾರಗಳು ನಿಂತಮೇಲೆ ಧೀರ - ಗಂಭೀರ ಧ್ವನಿಯಿಂದ, ಭಕ್ತಿಪಾರವಶ್ಯದಿಂದ ಗದ್ಗದವಾದ ಕಂಟದಿಂದ ಆನಂದಭಾಷ್ಪಸಿಕ್ತನಯನರಾಗಿ “ಶ್ರೀರಾಘವೇಂದ್ರರ ಕರುಣೆಯ ಕಂದರಾದ ಶ್ರೀಸುಯಮೀಂದ್ರತೀರ್ಥಶ್ರೀಪಾದಂಗಳವರು ಭಕ್ತಜನತೆಯನ್ನುದ್ದೇಶಿಸಿ ಇಂತು ಅಪ್ಪಣೆ ಕೊಡಿಸಿದರು.
“ನಮಗೆ ಅತ್ಯಂತ ಪ್ರೀತ್ಯಾಸ್ಪದರಾದ ಶ್ರೀಗುರುರಾಜರ ಭಕ್ತರೇ ! ಇಂದಿನ ದಿನವೇ ಸುದಿನ! ನಮ್ಮ ಜೀವನದಲ್ಲಿ ಅತ್ಯಂತ ಪುಣ್ಯತಮವಾದ ದಿನವಿದು, ಅಜನ ಅರಮನೆಯಲ್ಲಿ ರಾಜಿಸುತ್ತಿದ್ದ ದೇವೋತ್ತಮರಾದ ಇವರನ್ನು, ನಿಜಭಕ್ತಿಪಾಶದಿಂದ ತ್ರಿಜಗದೊಡೆಯನನ್ನು ಸ್ತಂಭದಲ್ಲಿ ತರಿಸಿದ ಇವರನ್ನು, ವಿಜಯನಗರದ 'ರಾಜಗುರು'ವಾಗಿ ವಿಜಯದುಂದುಭಿಯನ್ನು ಮೊಳಗಿಸಿದ ಇವರನ್ನು, ಅಂತಿಮಾವತಾರವೆತ್ತಿ ದ್ವಿಜಗುರುಗಳಾಗಿ ಭಜಕಜನರ ಮನೋರಥಗಳನ್ನು ಈಡಾಡುತ್ತಿರುವ ಈ ಗುರುಸಾರ್ವಭೌಮರನ್ನು ರಜತರಥದಲ್ಲಿ ಮೆರೆಸಬೇಕೆಂಬ ನಮ್ಮ ಮನದಾಶೆಯು ಇಂದು ಫಲಿಸಿತು! ನೋಡಿ, ಇಲ್ಲಿ ನಿಂತಿರುವ ಶ್ರೀಗುರುರಾಜರ ಭಕ್ತರಾದ ರಾಮನಾಥ ಚೆಟ್ಟಿಯಾರರ ಮೂಲಕವಾಗಿ ಶ್ರೀಗುರುರಾಜರು ನಮ್ಮ ಬಯಕೆಯನ್ನು ಈಡೇರಿಸಿಕೊಟ್ಟರು. ಶ್ರೀಗುರುರಾಜರು ಇವರಲ್ಲಿ ಮಾಡಿದ ಅಸಾಧಾರಣ ಅನುಗ್ರಹ, ತೋರಿದ ಮಹಾಮಹಿಮೆ ವರ್ಣಿಸಲಸದಳ, ಗುರುವರರ ತಮ್ಮಲ್ಲಿ ಮಾಡಿದ ಅನುಗ್ರಹಕ್ಕೆ ಕೃತಜ್ಞತಾಪೂರ್ವಕ ಭಕ್ತಿಯನ್ನು ಸಮರ್ಪಿಸುವ ಬಗೆಯಂತು ? ಎಂದು ನಮ್ಮವರು ಪ್ರಾರ್ಥಿಸಿದಾಗ ಶ್ರೀರಾಯರಿಗೆ ರಜತರಥ ನಿರ್ಮಾಣ ಮಾಡಬೇಕೆಂದು ನಮ್ಮ ಸಂಕಲ್ಪವನ್ನಿವರಿಗೆ ತಿಳಿಸಿದೆವು. ಶ್ರೀಮಂತರೂ, ಉದಾರಿಗಳೂ, ಗುರುಗಳ ಅಂತರಂಗಭಕ್ತರೂ ಆದ ಇವರು ಆ ಮಹಾಸೇವೆಯನ್ನು ತಮ್ಮ ಮೂಲಕ ನೆರವೇರಿಸಿಕೊಂಡು ಆಶೀರ್ವದಿಸಬೇಕೆಂದು ಪ್ರಾರ್ಥಿಸಿದರು. ನಾವು ಸಂತೋಷದಿಂದ ಸಮ್ಮತಿಸಿದೆವು. ಇಂದು ನೀವೆಲ್ಲರೂ ಈ ಮಂಗಳಮಹೋತ್ಸವವನ್ನು ಕಂಡಾನಂದಿಸಲು ಕಾರಣರು ಇವರು. ಆದುದರಿಂದ ನಿಮ್ಮೆಲ್ಲರ ಹರ್ಷಕ್ಕೆ ಕಾರಣರಾದ ರಾಮನಾಥ ಚೆಟ್ಟಿಯಾರರಿಗೆ ಶ್ರೀಗುರುರಾಜರು ಸಕಲವಿಧ ಶ್ರೇಯಸ್ಸು, ಮಂಗಳಗಳನ್ನು ಕರುಣಿಸಿ ಇವರ ಮನೋರಥದ್ರುಮವು ಫಲಿಸುವಂತೆ ಅನುಗ್ರಹಿಸಿ ಕಾಪಾಡಲಿ ಎಂದು ಪ್ರಾರ್ಥಿಸಿ ಆಶೀರ್ವದಿಸುತ್ತೇವೆ”.
ಜನರು ಹರ್ಷಧ್ವನಿಗೈದು ಕರತಾಡನದಿಂದ ತಮ್ಮ ಸಂತಸವನ್ನು ಸೂಚಿಸುತ್ತಿರಲು ಶ್ರೀಸುಯಮೀಂದ್ರಗುರುವರ್ಯರು ರಾಮನಾಥ ಚೆಟ್ಟಿಯಾರರಿಗೆ ಫಲಮಂತ್ರಾಕ್ಷತೆ-ಶೇಷವಸ್ತಗಳನ್ನು ಅನುಗ್ರಹಿಸಿ, ಜನತೆಯನ್ನುದ್ದೇಶಿಸಿ, ಮತ್ತೆ ಇಂತೆಂದರು.
“ಜಗತ್ತಿನ ಅತಿಶ್ರೇಷ್ಠರಥವನ್ನೇರಿ ಮೆರೆಯುವ ವೈಭವವುಳ್ಳ ಮಹಾನುಭಾವರು ಸಾಮಾನ್ಯವಾದ, ಆದರೆ ಭಕ್ತಿಯಿಂದ ಸಮರ್ಪಿಸಿದ ಈ ರಜತರಥವನ್ನೇರಿ ನಮ್ಮೆಲ್ಲರನ್ನೂ ಅನುಗ್ರಹಿಸುತ್ತಿರುವುದು, ಶ್ರೀಗುರುರಾಜರಿಗೆ ಭಕ್ತರಲ್ಲಿರುವ ಕರುಣೆಯ ದ್ಯೋತಕವೇ ವಿನಃ ಇದರಿಂದ ಅವರಿಗಾಗಬೇಕಾದುದೇನೂ ಇಲ್ಲ. ಅಸಾಧ್ಯ ಕಾರ್ಯವನ್ನೂ ಒಲುಮೆಯಿಂದ ಸಾಧಿಸಬಹುದೆನ್ನಲು, ಎಂತಹವರನ್ನೂ ಪ್ರೇಮ(ಭಕ್ತಿ)ಪಾಶದಿಂದ ಸ್ವಾಧೀನಪಡಿಸಿಕೊಳ್ಳಬಹುದೆನ್ನಲು ಇದೊಂದು ನಿದರ್ಶನ, ಏಕೆ ಗೊತ್ತೆ? ಇಂದು ಈ ರಥದಲ್ಲಿ ವಿರಾಜಿಸುವವರಾರು ಬಲ್ಲಿರಾ? ಅಖಿಲಾಂಡಕೋಟಿ ಬ್ರಹ್ಮಾಂಡನಾಯಕನಾದ ಶ್ರೀಹರಿಯೇ ಪ್ರಜಾರಂಜಕನಾಗಿ ಜಗತ್ಕಲ್ಯಾಣಕ್ಕಾಗಿ ಜಗದಭಿರಾಮನಾದ ಶ್ರೀರಾಮರೂಪದಿಂದ ಇಲ್ಲಿ ರಾರಾಜಿಸುತ್ತಿದ್ದಾನೆ. ಜನತೆಯ ಅಪಾರ ಕಷ್ಟ ಮತ್ತು ಭಯ ಪರಿಹಾರ ಮಾಡಿ ಭಕ್ತರನ್ನು ರಕ್ಷಿಸಲು ಶ್ರೀನರಸಿಂಹದೇವನಿಲ್ಲಿ ಕಂಗೊಳಿಸುತ್ತಿದ್ದಾನೆ. ಸಂತಾನ-ಸುಖ-ಸಂತೋಷಗಳಿಗೆರವಾಗಿ ಬಳಲುತ್ತಿರುವವರಿಗೆ ಮಶದೀಪಕರಾದ ಪುತ್ರನನ್ನು ಕರುಣಿಸಿ ಮನೆ-ಮನೆಗಳನ್ನು ಸುಖ-ಸಂತೋಷಗಳ ನೆಲೆವೀಡಾಗಿಸಿ ಪೊರೆಯಲು ಯದುಕುಲಲಲಾಮನಾದ ಭಗವಾನ್ ಶ್ರೀಕೃಷ್ಣನಿಲ್ಲಿ ನಲಿಯುತ್ತಿರುವನು. ಘೋರತರ ಸಂಸಾರಸಾಗರದಲ್ಲಿ ಮುಳುಗಿ, ಅದರಿಂದ ನೊಂದು ಶಾಶ್ವತ ಸುಖಸಾಧನೆಗಾಗಿ, ಅದಕ್ಕೆ ಸಾಧಕವಾದ ತತ್ತ್ವ- ಜ್ಞಾನಾಪೇಕ್ಷಿಗಳಾಗಿ ಮೊರೆ ಹೊಕ್ಕವರನ್ನು ಪೊರೆದು ಅವರಿಗೆ ಜ್ಞಾನವನ್ನು ಕರುಣಿಸಲು ಶ್ರೀವೇದವ್ಯಾಸದೇವರು ಇಲ್ಲಿ ವಿರಾಜಿಸುತ್ತಿದ್ದಾರೆ. ಇನ್ನು ಈ ಜಗತ್ತು ಅಶಾಶ್ವತವೆಂದು ಮನಗಂಡು ಐಹಿಕಸುಖಾದಿಗಳಲ್ಲಿ ಜಹಾಸೆಯುಂಟಾಗಿ, ಸರ್ವಸ್ವವನ್ನೂ ತ್ಯಾಗಮಾಡಿ ಶಾಶ್ವತ ಸುಖಪ್ರದವಾದ ಮೋಕ್ಷವನ್ನು ಬಯಸಿ ಬಂದು ಶರಣಾಗತರಾದವರನ್ನು ಉದ್ದರಿಸಲು ಸಾಕ್ಷಾತ್ ಶ್ರೀಲಕ್ಷ್ಮೀನಾರಾಯಣನೇ ಇಲ್ಲಿ ಶೋಭಿಸುತ್ತಿರುವನು. ಹೀಗೆ ಕಲಿಯುಗದಲ್ಲಿ ಜನತೆಯ ಉದ್ದಾರ, ಲೋಕಕಲ್ಯಾಣಾದಿ ಮಹತ್ಕಾರ್ಯಗಳನ್ನು ಮಹಾನುಭಾವರಾದ ಶ್ರೀಗುರುಸಾರ್ವಭೌಮರ ಮೂಲಕ ನೆರವೇರಿಸಿ ಅವರಿಗೆ ಅಪಾರ ಕೀರ್ತಿ ಪ್ರತಿಷ್ಠೆಗಳನ್ನು ತಂದುಕೊಡಲೆಂದು ಶ್ರೀಹರಿಯ ರಾಮ - ನರಹರಿ - ಕೃಷ್ಣ - ವೇದವ್ಯಾಸ - ನಾರಾಯಣಾದಿ ಪಂಚರೂಪಗಳಿಂದ ಶ್ರೀಗುರುಸಾರ್ವಭೌಮರಲ್ಲಿ ಸನ್ನಿಹಿತನಾಗಿದ್ದು ಸರ್ವದಾ ನಲಿಯುತ್ತಿರುವನೆಂದಮೇಲೆ ಇಷ್ಟೊಂದು ಮಹಾಸನ್ನಿಧಾನಗಳಿಂದ ವಿರಾಜಿಸುವ ಶ್ರೀಮಂತ್ರಾಲಯ ಸ್ವಾಮಿಗಳವರ ಮಹತ್ವವೆಂತಹುದೆಂಬುದನ್ನು ನೀವೇ ಊಹಿಸಿರಿ!
ಇಷ್ಟೇ ಅಲ್ಲ ಗುರುಭಕ್ತರೇ, ಇವರಲ್ಲಿ ಜಗತ್ಪಾಣರೂ, ಸರ್ವಜೀವ ನಿಯಾಮಕರೂ, ಜೀವೋತ್ತಮರೂ ಆದ ಶ್ರೀಭಾರತೀರಮಣ ಶ್ರೀಮುಖ್ಯಪ್ರಾಣದೇವರು (ವಾಯುದೇವರು) ಶ್ರೀಹನುಮ-ಭೀಮ-ಮದ್ದರೂಪಗಳಿಂದ ಸಹಿತರಾಗಿ ಸರ್ವದಾ ಇವರಲ್ಲಿ ವಿಶೇಷ ಸನ್ನಿಧಾನವಿಟ್ಟು ರಾರಾಜಿಸುತ್ತಿದ್ದಾರೆ. ಇನ್ನು ಶ್ರೀಟೀಕಾಕೃತ್ಪಾದರೇ ಮೊದಲಾದ ಜ್ಞಾನಿನಾಯಕರಂತೂ ಈ ಮಹನೀಯರಲ್ಲಿ ಸದಾ ಒಲಿದು ನಲಿದಾಡುತ್ತಿರುವರು. ಅಂದಮೇಲೆ ಇಂತಹ ಶ್ರೀಪ್ರಹ್ಲಾದ-ಬಾಕ-ವ್ಯಾಸರಾಜಾವತಾರರಾದ ಶ್ರೀರಾಘವೇಂದ್ರಸ್ವಾಮಿಗಳನ್ನು ತಮ್ಮ ಭಕ್ತಿಯಿಂದ ಒಲಿಸಿಕೊಂಡು ಅವರಿಗೆ ರಜತರಥ ನಿರ್ಮಾಣ ಮಾಡಿಸಿ ಉತ್ಸವ ಮಾಡಿಸಿದ ರಾಮನಾಥ ಚೆಟ್ಟಿಯಾರರ ಪುಣ್ಯಕ್ಕೆ ಎಣೆಯುಂಟೆ ? ಇಂಥ ಅಪೂರ್ವ ಸನ್ನಿವೇಶದಲ್ಲಿ ಕಲಿಯುಗ ಕಲ್ಪತರುಗಳ ರಥೋತ್ಸವ ಸೇವೆಯಲ್ಲಿ ಭಾಗವಹಿಸಿರುವ ನಿಮ್ಮಗಳ ಸುಕೃತವೆಂತಹುದು ? ನಿಜವಾಗಿಯೂ, ನೀವು ಭಾಗ್ಯಶಾಲಿಗಳು, ಧನ್ಯರು! ಭಾರತ ಸಂಸ ತಿಯ ಸಂಕೇತರಾದ ಶ್ರೀಮಂತ್ರಾಲಯ ಪ್ರಭುಗಳ ಪಾದಾಶ್ರಯ ಮಾಡಿದ ನಿಮ್ಮಗಳ ಭಾಗೋದಯವಾಗುವುದರಲ್ಲಿ ಸಂದೇಹವಿಲ್ಲ! ಅನಿಮಿತ್ತ ಬಂಧುಗಳಾಗಿ ಅಲ್ಪರಾದ ನಮ್ಮನ್ನು ಹೀಗೆ ಅನುಗ್ರಹಿಸುತ್ತಿರುವ ಈ ಜಗದ್ಗುರುಗಳಿಗೆ ನಾವೇನು ತಾನೇ ಪ್ರತ್ಯುಪಕಾರವನ್ನು ಮಾಡಬಲ್ಲೆವು? “ಭೂಯಿಷ್ಠಾಂತೇ ನಮ ಉಕ್ಕಿಂ ವಿಧೇಮ” ಎಂಬ ಶ್ರುತಿವಚನದಂತೆ ನಮ್ಮ ಭಕ್ತಿಪೂರ್ವಕ ವಂದನೆಗಳನ್ನು ಮಾತ್ರ ಸಮರ್ಪಿಸಲು ನಾವು ಸಮರ್ಥರು, ನಮ್ಮ ಭಕ್ತಿನಮನಗಳನ್ನು ಸ್ವೀಕರಿಸಿ ಲೋಕಕಲ್ಯಾಣವನ್ನು ಮಾಡಿ, ಭಕ್ತಜನರನ್ನು ಕಾಪಾಡಲೆಂದು ಗುರುರಾಜರನ್ನು ಪ್ರಾರ್ಥಿಸುವೆವು” ಎಂದು ಶ್ರೀಸುಯಮೀಂದ್ರತೀರ್ಥಶ್ರೀಪಾದಂಗಳವರು ಶ್ರೀಗುರುರಾಜರಿಗೆ ಸಾಷ್ಟಾಂಗ ನಮಸ್ಕಾರಗಳನ್ನು ಸಮರ್ಪಿಸಿದರು, ಭಕ್ತಾನೀಕವು ಆನಂದ, ಸಂಭ್ರಮಗಳಿಂದ ಶ್ರೀಗುರುರಾಜರ ಜಯಜಯಕಾರ ಮಾಡಿತು.
ಶ್ರಾವಣಕೃಷ್ಣಪಂಚಮಿ ತುಂಗಭದ್ರಾನದೀತೀರ, ನೀಲವರ್ಣದ ವಿಶಾಲವಾದ ಬಂಡೆಗಳ ಇಕ್ಕೆಲಗಳನ್ನು ಅಪ್ಪಳಿಸುತ್ತಾ ಕಲಕಲ ಮಂಜುಳ ನಿನಾದಗೈಯುತ್ತಾ ತುಂಗಭದ್ರೆಯು ಭರದಿಂದ ಹರಿಯುತ್ತಿದ್ದಾಳೆ, ಮೆಲ್ಲಮೆಲ್ಲನೆ ಸೌರಭಯುತ ತಂಗಾಳಿಯಿಂದ ವಾಯುದೇವ ಭವರವಿಶ್ರಾಂತರಾದ ಜನತಿಯನ್ನು ಮೋದಗೊಳಿಸುತ್ತಿದ್ದಾನೆ, ಅಜಿ:ಶುಭ್ರವಾದ ಅಂಬರದಲ್ಲಿ ಹಾಲುಬೆಳದಿಂಗಳನ್ನು ಚೆಲ್ಲುತ್ತಾ ಚೆಲ್ವಿಕೆಯ ಪ್ರಶಾಂತ ವಾತಾವರಣದಲ್ಲಿ ಅನೇಕ ಜನರು ಗುಂಪುಗುಂಪಾಗಿ ಕುಳಿತು ಆನಂದಿಸುತ್ತಿದ್ದಾರೆ. ರಜತರಥೋತ್ಸವದ ವೈಭವ, ಶ್ರೀಗುರುರಾಜರ ಮಹಿಮೆ, ಭಕ್ತವಾತ್ಸಲ್ಯಾದಿಗಳು ಮೆಲುಕು ಹಾಕುತ್ತಾ ಜನರು ಮೈಮರೆತಿದ್ದಾರೆ. ಮಂತ್ರಾಲಯ ಪ್ರಭುಗಳು ತಮತಮಗೆ ಮಾಡಿರುವ ಅನುಗ್ರಹವಿಶೇಷಗಳನ್ನು ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಿದ್ದಾರೆ. ಅದೇ ಸಮಯದಲ್ಲಿ ಶ್ರೀಮಠದ ಆಚಾರ್ಯರೊಬ್ಬರು ತುಂಗೆಯಲ್ಲಿ ಮಿಂದು ಸಾಯಂಸಂಧ್ಯೆಯನ್ನು ಮುಗಿಸಿ ಸಮೀಪದ ಬಂಡೆಯೊಂದರ ಮೇಲೆ ಕುಳಿತರು. ವೃದ್ಧರೂ, ತೇಜಸ್ವಿಗಳೂ ಆದ ಆಚಾರ್ಯರನ್ನು ಕಂಡು ಸಮೀಪದಲ್ಲಿ ಕುಳಿತಿದ್ದ ಹತ್ತಾರು ಜನ ಭಕ್ತರು ಅವರೆಡೆಗೆ ತಂದು ಅಭಿವಂದಿಸಿದರು. ಅವರಲ್ಲಿ ಗೋವಿಂದರಾಯರೆಂಬುವರು ಆಚಾರ್ಯರಿಗೆ ಕರಮುಗಿದು ಕೋರಿದರು.
ಗೋವಿಂದ : ಪೂಜ್ಯರೇ, ಶ್ರೀಗುರುರಾಜರಿಗೆ ರಜತರಥೋತ್ಸವವಾಗುವುದೆಂಬ ವಾರ್ತೆಯನ್ನು ಕೇಳಿ ಇಲ್ಲಿಗೆ ಬಂದೆವು. ಆಹಾ, ಸ್ವಾಮಿ, ಅದೆಂತಹ ಸುಂದರ ನೋಟ; ಅಂದಿನ ಅಪೂರ್ವ ದೃಶ್ಯವನ್ನು ನಮ್ಮ ಜನ್ಮದಲ್ಲಿ ಮತ್ತೊಮ್ಮೆ ಕಾಣಲು ಸಾಧ್ಯವೇ? ಪೂಜ್ಯ ಪೀಠಾಧೀಶರು ಅನುಗ್ರಹಿಸಿದ ಭಾಷಣವನ್ನು ಹೃದಯಂಗಮವಾಗಿತ್ತು. ಆ ಮಹನೀಯರ ಮಧುರವಾಣಿ ಕೇಳಿದಷ್ಟೂ ಮತ್ತೆ ಮತ್ತೆ ಆಲಿಸಬೇಕೆಂಬ ಬಯಕೆಯಾಗುತ್ತಿದೆ. ಆ ರಾಮನಾಥನ್ ಚೆಟ್ಟಿಯಾರರಲ್ಲಿ ಶ್ರೀರಾಯರು ಅಪಾರ ಕಾರುಣ್ಯ ತೋರಿರುವರೆಂದು ಶ್ರೀಗಳವರು ಅಪ್ಪಣೆ ಕೊಡಿಸಿದರು. ಆದರೆ ಅದೇನೆಂಬುದು ನಮಗೆ ತಿಳಿಯಲಿಲ್ಲ. ನೀವು ಮಠದವರಾದ್ದರಿಂದ ನಿಮಗೆ ತಿಳಿದಿರಬಹುದು, ದಯಮಾಡಿ ಶ್ರೀರಾಯರು ಪ್ರಕಟಿಸಿದ ಮಹಿಮೆ, ಮಾಡಿದ ಅನುಗ್ರಹವೇನೆಂದು
ನಮಗೆ ತಿಳಿಸುವಿರಾ?
ಆಚಾರ್ಯರು : (ನಸುನಕ್ಕು ಇದಕ್ಕಿಂತ ಉತ್ತಮ ಕಾರ್ಯವು ಬೇರಾವುದಿದೆ? ಅವಶ್ಯ ಆಗಬಹುದು. ಓರ್ವ ಯುವಕ : (ಮಧ್ಯೆ ಬಾಯಿಹಾಕಿ) ಸ್ವಾಮಿ, ಕ್ಷಮಿಸಿ, ನನಗೊಂದು ಅನುಮಾನ.
ಆಚಾರ್ಯರು : (ನಕ್ಕು) ಅದೇನಪ್ಪಾ ನಿನ್ನ ಅನುಮಾನ?
ಯುವಕ : ಇನ್ನೇನಿಲ್ಲ ಆಚಾರ್ಯರೇ, ಮದ್ರಾಸು ಪ್ರಾಂತ್ಯದ ಜನರೆಂದರೆ ಅದರಲ್ಲೂ ಚೆಟ್ಟಿನಾಡಿನವರು ಕಟ್ಟಾ ಶೈವರು, ಶಿವಭಕ್ತರು ಎಂದೂ, ವರ್ಣದ್ವೇಷಿಗಳೆಂದೂ ಕೇಳಿದ್ದೇನೆ. ಅಂದಮೇಲೆ ವರ್ಣಾಶ್ರಮ ದ್ವೇಷಿಗಳೂ, ಶೈವರೂ ಆದ ರಾಮನಾಥನ್ ಚೆಟ್ಟಿಯಾರರು ಬ್ರಾಹ್ಮಣರು, ಅದರಲ್ಲೂ ಮಾದಯತಿಗಳಾದ ಶ್ರೀರಾಯರ ಭಕ್ತರಂತಾದರು?
ಆಚಾರ್ಯರು : ಅಯ್ಯಾ, ನಿನ್ನ ಅಭಿಪ್ರಾಯ ತಪ್ಪ. ಯಾರೋ ಒಬ್ಬಿಬ್ಬರು ವರ್ಣಾಶ್ರಮ ದ್ವೇಷಿಗಳಾಗಿದ್ದರೆ ಆ ಪ್ರಾಂತ್ಯದವರೆಲ್ಲರೂ ವರ್ಣಾಶ್ರಮ ದ್ವೇಷಿಗಳೆಂದು ಹೇಳುವುದು ಯುಕ್ತವಲ್ಲ, ಅಂಥವರು ನಮ್ಮ ಕರ್ನಾಟಕದಲ್ಲಿಲ್ಲವೇ ? ಮೇಲಾಗಿ ನಮ್ಮ ಶ್ರೀರಾಯರು ಮಾದ್ದರು, ಬ್ರಾಹ್ಮಣರು ಅಥವಾ ಹಿಂದೂ ಜನರಿಗೆ ಮಾತ್ರ ಗುರುಗಳು, ಅವರು ಭಾರತದ ಅಷ್ಟೇ ಏಕೆ; ಸಮಸ್ತ ವಿಶ್ವದ ಎಲ್ಲ ಜಾತಿ, ಮತ, ಪಂಥ, ಭಾಷೆಗಳ ಎಲ್ಲೆಯನ್ನೂ ಮೀರಿ ಜಗತ್ತನ್ನೇ ಕಣ್ವಂತೋ ವಿಶ್ವಮಾರ್ಯಂ' ಎಂಬಂತೆ ಆರ್ಯರನ್ನಾಗಿ ಅಂದರೆ ಆಸ್ತಿಕರನ್ನಾಗಿ ಮಾಡಿ ಸರ್ವರನ್ನೂ ಪೊರೆಯಲೆಂದೇ ಅವತರಿಸಿದ ದೇವತೆಗಳು. ಈ ಶೈವ-ವೈಷ್ಣವ ಭಾವನೆಗಳು ಇಂದು ನೆನ್ನೆಯದಲ್ಲ, ಯುಗಯುಗಗಳಿಂದಲೂ ಬಂದಿವೆ. ಅಂತೆಯೇ ಶ್ರೀಮಧ್ವಾಚಾರ್ಯರು “ಅನಾದಿಕಾಲತೋ ವ್ಯತ್ತಾ ಸಮಯಾ ಹಿ ಪ್ರವಾಹವಃ' ಅಂದರೆ ವೈಷ್ಣವ ಶೈವಾದಿ ಸಿದ್ಧಾಂತಗಳು ಅನಾದಿಕಾಲದಿಂದಲೂ ನಡೆದುಬಂದಿವೆಯೆಂದು ಅಪ್ಪಣೆ ಕೊಡಿಸಿದ್ದಾರೆ. ಶೈವ-ವೈಷ್ಣವ ದೇವತೋಪಾಸನ ಭಾವನೆಗಳು ಪರಸ್ಪರ ಸಾಮಾಜಿಕ-ಧಾರ್ಮಿಕ-ಸಾಂಸ ತಿಕ ರಂಗಗಳಲ್ಲಿ ದಿನನಿತ್ಯ ನಡವಳಿಕೆ, ವ್ಯವಹಾರ, ಸ್ನೇಹಸೌಹಾರ್ದಗಳಿಗೆ ಕೆಲ ಅಪವಾದಗಳನ್ನು ಬಿಟ್ಟು, ಎಂದೂ ಕುಂದು ತಂದಿಲ್ಲ, ಜ್ಞಾನ-ಭಕ್ತಿ-ವೈರಾಗ್ಯ, ತಪಸ್ಸು, ಲೋಕಕಲ್ಯಾಣ ದೀಕ್ಷೆಗಳೇ ಒಂದು ವ್ಯಕ್ತಿಯ ಪೂಜ್ಯತೆಗೆ ಮಾನದಂಡವಾಗಿದೆ. ಅಂದಮೇಲೆ ಜ್ಞಾನಿಗಳನ್ನು ಶೈವರು, ವೈಷ್ಣವರು ಪೂಜಿಸಿ, ಸೇವಿಸಿ ಅನುಗೃಹೀತರಾಗಲು ಅವರವರ ಭಾವನೆ, ತಾತ್ವಿಕ ನಂಬಿಕೆಗಳು ಅಡ್ಡಬರಲಾರದಲ್ಲವೇ? ಅಂದಮೇಲೆ ಶ್ರೀರಾಯರನ್ನು ನಂಬಿ, ಸೇವಿಸಿ ಅನುಗೃಹೀತರಾದ ಚೆಟ್ಟಿಯಾರರಲ್ಲಿ ಅವರ ನಿರ್ಮಲ ಭಕ್ತಿಗೆ ಒಲಿದ ರಾಯರು ಅನುಗ್ರಹಿಸಿದ್ದು ಅಚ್ಚರಿಯೇನಲ್ಲ! ನಾಸ್ತಿಕರನ್ನೂ ಆಸ್ತಿಕರನ್ನಾಗಿ ಮಾಡಿ ಅನುಗ್ರಹಿಸುವ ರಾಯರ ಮಹಿಮೆಯೇ ಅಂತಹುದು. ಅದೇ ನಮ್ಮ ಶ್ರೀರಾಯರ ವೈಶಿಷ್ಟ್ಯ! ಸಾಮಾನ್ಯವಾಗಿ ಆಯಾ ಮಠದ ಶಿಷ್ಯರು, ಇಲ್ಲವೇ ಒಂದು ಸಮಾಜದವರು ಆಯಾ ಗುರುಗಳಿಗೆ ನಡೆದುಕೊಳ್ಳುತ್ತಾರೆ. ಆದರೆ ನಮ್ಮ ಶ್ರೀಗುರುರಾಜರ ವಿಚಾರ ಹಾಗಲ್ಲ. ಈ ಮಹಾನುಭಾವರನ್ನು ಮತೀಯ ಶಿಷ್ಯರು ಅಥವಾ ಬ್ರಾಹ್ಮಣ ಸಮಾಜ, ಇಲ್ಲವೇ ಹಿಂದೂ ಜನಾಂಗದವರು ಮಾತ್ರವಲ್ಲ: ಯವನ, ಪಾರಸಿ, ಸಿಖ್, ಕ್ರೈಸ್ತ - ಹೀಗೆ ಎಲ್ಲ ಜಾತಿ, ಧರ್ಮ, ಮತ, ಪಂಗಡ ಅಷ್ಟೇ ಏಕೆ; ಎಲ್ಲ ದೇಶದ ಜನರೂ ಪೂಜಿಸುತ್ತಿದ್ದಾರೆ. ಆದ್ದರಿಂದಲೇ ನಮ್ಮ ಮಂತ್ರಾಲಯ ಪ್ರಭುಗಳು “ಜಗದ್ಗುರು'ಗಳೆಂಬ ಅನ್ವರ್ಥಕನಾಮದಿಂದ ಶೋಭಿಸುತ್ತಿದ್ದಾರೆ, ಯಾರೇ ಆಗಲಿ, ನಿರ್ಮಲ ಭಕ್ತಿಯಿಂದ ತಮತಮಗೆ ವಿಹಿತವಾದ ಕರ್ಮಾಚರಣೆ, ಧರ್ಮರತರಾಗಿದ್ದೂ ಗುರುರಾಜರನ್ನು ಸೇವಿಸಿದರೆ ಇವರು ಇಂಥ ಜಾತಿ-ಮತ-ಪಂಥ ಅಥವಾ ಧರ್ಮದವರೆಂದು ನೋಡದೆ ನಮ್ಮ ಗುರುಗಳು ಆರಾಧಕರ ಇಷ್ಟಾರ್ಥಗಳನ್ನು ಪೂರೈಸಿ ಅನುಗ್ರಹಿಸುವರು. ಇಂದಿನ ವಿಜ್ಞಾನ - ವೈದ್ಯಶಾಸ್ತ್ರಗಳಿಗೂ ನಿಲುಕದ, ಗುಣಪಡಿಸಲು ಸಾಧ್ಯವಾಗದ ಅದೆಷ್ಟೋ ರೋಗಾದ್ಯುಪದ್ರವಗಳನ್ನು ಕಟಾಕ್ಷವೀಕ್ಷಣ ಮಾತ್ರದಿಂದ ಲೀಲಾಜಾಲವಾಗಿ ಪರಿಹರಿಸುತ್ತಿದ್ದಾರೆ, ನಮ್ಮ ಯತಿರಾಜರು! ಅಂತೆಯೇ ಈ ಕಲಿಯುಗದಲ್ಲಿ ಎಷ್ಟೇ ಧರ್ಮಗ್ಲಾನಿಯಾಗಿದ್ದರೂ ಜನರು ಸ್ವರ್ಗ-ನರಕ, ಪಾಪ-ಪುಣ್ಯ, ದೇವರು-ಪರಲೋಕ ಮುಂತಾಗಿ ಅತೀಂದ್ರಿಯವಸ್ತುಗಳನ್ನು ನಂಬದಿದ್ದರೂ, ದೇವರು ಕೇವಲ ಬ್ರಾಹ್ಮಣರ ಕಲ್ಪನಾವಿಲಾಸವೆಂದು ಕೂಗುತ್ತಿದ್ದರೂ, ಪ್ರತ್ಯಕ್ಷ ದೇವರಂತೆ ಗುರುರಾಜರನ್ನು ಸೇವಿಸುತ್ತಿರುವುದು ಇಂದು ಎಲ್ಲರ ಅನುಭವಕ್ಕೂ ಬರುತ್ತಿದೆ. ನಮ್ಮ ಪೂಜ್ಯ ಶ್ರೀಸುಯಮೀಂದ್ರತೀರ್ಥಗುರುಪಾದರು ಅಪ್ಪಣೆ ಕೊಡಿಸಿದಂತೆ ಈ ಕಲಿಯುಗದಲ್ಲಿ ಈ “ಕಲ್ಪತರು'ವಿನ ಮೂಲಕವೇ ಜಗತ್ಕಲ್ಯಾಣವಾಗಬೇಕೆಂದು ಪರಮಾತ್ಮನ ಸಂಕಲ್ಪ! ಸತ್ಯಸಂಕಲ್ಪನಾದ ಭಗವಂತನೇ ಇವರಲ್ಲಿ ಸನ್ನಿಹಿತನಾಗಿ ನಿಂತು ಇವರಿಂದ ಲೋಕಕಲ್ಯಾಣಕಾರ್ಯವನ್ನು ಮಾಡಿಸುತ್ತಿದ್ದಾನೆ. ಅಂದಮೇಲೆ ಶೈವರಾದ ರಾಮನಾಥನ್ ಚೆಟ್ಟಿಯಾರರು ಶ್ರೀಗುರುರಾಜರ ಭಕ್ತರಾದುದು ಅಚ್ಚರಿಯೇನಲ್ಲ.
ಎಲ್ಲ ಭಕ್ತರೂ : ನಿಜ ಸ್ವಾಮಿ, ತಾವು ಹೇಳಿದ್ದು ಅಕ್ಷರಶಃ ಸತ್ಯ. ಸ್ಟಾ, ಗುರುರಾಜರು ಚೆಟ್ಟಿಯಾರರಲ್ಲಿ ಮಾಡಿದ ಅನುಗ್ರಹವನ್ನು ದಯಮಾಡಿ ತಿಳಿಸುವ ಕೃಪೆಮಾಡಿ.
ಆಚಾರ್ಯರು : ಮದರಾಸು ಪ್ರಾಂತ್ಯದ ರಾಮನಾಡು ಜಿಲ್ಲೆಯು ಶ್ರೀಮಂತ ಚೆಟ್ಟಿಯಾರುಗಳಿಗೆ ಪ್ರಖ್ಯಾತವಾದುದು. ಆ ಜಿಲ್ಲೆಯ ಕೊಟ್ಟೆಯೂರು” ಎಂಬ ಗ್ರಾಮವೇ ಎ.ವಿ.ಎ.ಎಲ್.ಎಂ. ರಾಮನಾಥ ಚೆಟ್ಟಿಯಾರರ ಸ್ವಂತ ಗ್ರಾಮ, ಅಲ್ಲಿ ಇವರ ಮನೆತನ ಖ್ಯಾತವಾಗಿದೆ. ಆ ಪ್ರಾಂತ್ಯದಲ್ಲಿ ವಿಖ್ಯಾತರಾದ ಡಾ|| ಅಳಗಪ್ಪ ಚೆಟ್ಟಿಯಾರರ ಸಹೋದರರೇ ಈ ರಾಮನಾಥರು. ಕೋಟ್ಯಾಧೀಶರಾದ ಇವರ ವ್ಯಾಪಾರ ಮಲಯಾ ಮುಂತಾದ ಹೊರದೇಶಗಳಲ್ಲಿ ಹೆಸರುವಾಸಿಯಾಗಿದೆ. ಈಗ್ಗೆ ಹತ್ತಾರು ವರ್ಷಗಳ ಹಿಂದೆ ಪ್ರಾರಬ್ಧಕರ್ಮವಶದಿಂದ ಚೆಟ್ಟಿಯಾರರಿಗೆ ಹೃದಯವ್ಯಾಧಿ ಪ್ರಾರಂಭವಾಯಿತು. ಸ್ವಲ್ಪ ದಿನಗಳಲ್ಲೇ ಅದು ಪ್ರಬಲಿಸಿ ಜೀವ ಉಳಿಯುವುದೇ ಅಸಾಧ್ಯವೆನಿಸುವಂತಾಯಿತು. ಶ್ರೀಮಂತರಾದ್ದರಿಂದ ಪರಿಣಿತರಾದ ದೊಡ್ಡ ವೈದ್ಯರನ್ನು ಕರೆಸಿಕೊಂಡು ಪರೀಕ್ಷೆ ಮಾಡಿಸಲಾಯಿತು. ವೈದ್ಯರು ಪರೀಕ್ಷಿಸಿ ಇದು ಪ್ರಬಲವಾದ ವ್ಯಾಧಿ, ಶಸ್ತ್ರಚಿಕಿತ್ಸೆಯಿಂದ ಮಾತ್ರ ವಾಸಿಯಾಗಬಹುದು. ಆದರೆ ಶಸ್ತ್ರಚಿಕಿತ್ಸಾಕಾಲದಲ್ಲಿ ಪ್ರಾಣಾಪಾಯವಾಗಬಹುದೇ, ಹೇಳಲು ಸಾಧ್ಯವಿಲ್ಲ. ಯಾವುದಕ್ಕೂ ಶಸ್ತ್ರಚಿಕಿತ್ಸೆ ಮಾಡಿಸುವುದು ಒಳಿತು” ಎಂದು ಹೇಳಿದರು, ಚೆಟ್ಟಿಯಾರರು ಕಿಂಕರ್ತವ್ಯ ಮೂಢರಾದರು. ಇವರ ಪತ್ನಿಯವರು ಶಸ್ತ್ರಚಿಕಿತ್ಸೆಗೆ ಒಪ್ಪಲಿಲ್ಲ, ಬರೇ ಔಷಧೋಪಚಾರವಾಗಹತ್ತಿತು. ಅದರಿಂದೇನೂ ಪ್ರಯೋಜನವಾಗಲಿಲ್ಲ. ಹೃದಯಶೂಲೆಯಿಂದ ಇವರು ತುಂಬಾ ಶ್ರಮಪಡಹತ್ತಿದರು.
ಧರ್ಮ-ಕರ್ಮ ಸಂಯೋಗದಿಂದ ಕೊಟ್ಟೆಯೂರಿಗೆ ಹೋಗಿದ್ದ ಕೃಷ್ಣಾಚಾರ್ಯರೆಂಬ ಶ್ರೀಗುರುರಾಜರ ಭಕ್ತರಿಗೆ ಈ ವಿಚಾರ ತಿಳಿದು ಚೆಟ್ಟಿಯಾರರನ್ನು ಕಂಡು ಅವರಿಗೆ ಶ್ರೀರಾಯರ ಮಹಿಮೆಗಳನ್ನು ತಿಳಿಸಿ ಅವರ ಸೇವೆಯಿಂದ ರೋಗಪರಿಹಾರವಾಗಬಹುದೆಂದು ಸೂಚಿಸಿದರು. ದೊಡ್ಡದೊಡ್ಡಪರಿಣತ ವೈದ್ಯರಿಂದಾಗದ ಕಾರ್ಯ ಎಂದೋ ವ್ಯಯ ದಸರಾದ ಓರ್ವ ಮಾಧ್ವಸನ್ಯಾಸಿಗಳಿಂದಾದೀತೆ? ಎಂದು ಚೆಟ್ಟಿಯಾರರಿಗೆ ಅನುಮಾನ. ಅವರು ಸ್ಪಷ್ಟವಾಗಿ ತಮ್ಮ ಅಭಿಪ್ರಾಯವನ್ನು ಹೇಳಿಬಿಟ್ಟರು. ಕೃಷ್ಣಾಚಾರ್ಯರು ಮತ್ತೆ ಶ್ರೀಗುರುರಾಜರ ಅಗಮ್ಯ ಮಹಿಮ, ವೈದ್ಯರಿಂದ ಗುಣಪಡಿಸಲಾಗದ ಎಷ್ಟೋ ವ್ಯಾಧಿಗಳನ್ನು ಶ್ರೀರಾಯರು ಗುಣಪಡಿಸಿದ ದೃಷ್ಟಾಂತಗಳನ್ನು ಹೇಳಿ “ಸೇವೆ ಮಾಡಿ ನೋಡಿರಿ, ಅನುಕೂಲವಾದರೆ ಸಂಬಿ, ಇಲ್ಲದಿದ್ದರೆ ಬಿಡಿ. ಇದಕ್ಕೆ ನೀವೇನೂ ದ್ರವ್ಯವ್ಯಯ ಮಾಡಬೇಕಾಗಿಲ್ಲ! ನಿಷ್ಕಲ್ಮಷ ಭಕ್ತಿಯಿಂದ ಅವರನ್ನು ಭಜಿಸಿರಿ. ಅದರ ಫಲವನ್ನು ನೀವೇ ಮನಗಾಣುವಿರಿ. ಪರೀಕ್ಷಿಸಿ ನೋಡಲು ಅಡ್ಡಿಯೇನು ?” ಎಂದು ಹೇಳಿದರು. ರಾಮನಾಥರಿಗೆ “ಏಕೆ ಪರೀಕ್ಷಿಸಿ ನೋಡಬಾರದು” ಎನಿಸಿತು. ಸರಿ, ಒಪ್ಪಿದರು. ಗುರುರಾಜರ ಕೃಪಾದೃಷ್ಟಿ ಚೆಟ್ಟಿಯಾರರ ಮೇಲೆ ಬಿತ್ತೆಂದು ತೋರುವುದು. ಅಂದು ರಾತ್ರಿಯೇ ಸ್ವಪ್ನದಲ್ಲಿ ದಂಡಕಮಂಡಲುಧಾರಿಗಳಾಗಿ ಶ್ರೀರಾಯರು ಅವರಿಗೆ ದರ್ಶನವಿತ್ತು ಅಯ್ಯಾ ನಮ್ಮನ್ನು ನಂಬಿ ಯಾರೂ ಕೆಟ್ಟಿಲ್ಲವಪ್ಪ, ನೀನು ನಮಗೆ ಹೊರಗಿನವನಲ್ಲ ರಾಮನಾಥ! ನಮ್ಮ ಭಕ್ತಕೋಟಿಯಲ್ಲಿ ನೀನೂ ಸೇರಿರುವ, ಕೃಷ್ಣಾಚಾರ್ಯರು ಹೇಳಿದಂತೆ ವರ್ತಿಸು ನಿನಗೆ ಮಂಗಳವಾಗುವುದು” ಎಂದು ಅಪ್ಪಣೆ ಮಾಡಿ ಅದೃಶ್ಯರಾದರು. ಎಚ್ಚರವಾದ ಮೇಲೆ ಚೆಟ್ಟಿಯಾರರಿಗೆ ಸ್ವಪ್ನದ ನೆನಪಾಯಿತು. ಅವರ ವರ್ತನೆಯೇ ಬದಲಾಯಿಸಿತು. ನಮ್ಮ ಗುರುಗಳ ರೀತಿಯೇ ವಿಚಿತ್ರ. ಅವರ ಅನುಗ್ರಹವೂ ಅಷ್ಟೇ. ನಾವಾಗಿ ಪೂಜಿಸಿ, ಸೇವಿಸಿ, ಬೇಡಿದರೆ ಇತರ ದೇವತೆಗಳು ಪ್ರಸನ್ನರಾಗಿ ಅನುಗ್ರಹಿಸುತ್ತಾರೆ. ನಮ್ಮ ಗುರುಗಳಾದರೋ ತಾವಾಗಿ ಇದ್ದಲ್ಲಿ ಬಂದು ಅನುಗ್ರಹಿಸುತ್ತಾರೆ! ಇದೇ ಅಲ್ಲವೇ ಮಹಾತ್ಮರ ಲಕ್ಷಣ! ಭಕ್ತಾನುಕಂಪ.
ರಾತ್ರಿ ಕನಸಿನಲ್ಲಿ ಕಂಡ ಶ್ರೀಗುರುರಾಜರ ತೇಜಃಪುಂಜ ಭವ್ಯಸ್ವರೂಪ ಚೆಟ್ಟಿಯಾರರ ಹೃದಯದಲ್ಲಿ ಭದ್ರವಾಗಿ ನೆಲೆನಿಂತುಬಿಟ್ಟಿತು. ಅವರ ಕಣ್ಣುಗಳಿಂದ ಆನಂದಾಶ್ರು ಮಿಡಿಯಿತು. ಕಣ್ಣುಮುಚ್ಚಿ ಕರಜೋಡಿಸಿ ಸ್ವಪ್ನದಲ್ಲಿ ಕಂಡ ದಿವ್ಯಸ್ವರೂಪವನ್ನೇ ಧ್ಯಾನಿಸುತ್ತಾ ಕುಳಿತುಬಿಟ್ಟರು. ಪತಿಯನ್ನು ಎಚ್ಚರಿಸಲು ಬಂದ ಪತ್ನಿಯು ಪತಿಯ ತಲ್ಲೀನತೆಯನ್ನು ಕಂಡು ಬೆರಗಾದರು. ಪತಿಯನ್ನು ಮೆಲ್ಲನೆ ಅಲುಗಾಡಿಸಿ ಪ್ರಶ್ನಾರ್ಥಕವಾಗಿ ನೋಡಿದರು. ರಾಮನಾಥರು ನಗುತ್ತಾ ಸ್ವಪ್ನ ವೃತ್ತಾಂತವನ್ನು ಪತ್ನಿಗೆ ತಿಳಿಸುತ್ತಿರುವಂತೆಯೇ ಮನೆವಾರ್ತೆಯು ಬಂದು ಕೃಷ್ಣಾಚಾರ್ಯರು ಪುನಃ ಬಂದಿರುವುದಾಗಿ ತಿಳಿಸಲು ಆನುದರಿಂದ ದಂಪತಿಗಳು ಅವರನ್ನು ಸ್ವಾಗತಿಸಿ ತಮ್ಮ ಅನುಭವವನ್ನು ನಿವೇದಿಸಿದರು. ಕೃಷ್ಣಾಚಾರ್ಯರಿಗೂ ಅಚ್ಚರಿಯಾಯಿತು. ಸಂತಸದಿಂದ “ಶ್ರೀಮಂತರೇ, ನೋಡಿದಿರಾ ನಮ್ಮ ಗುರುಗಳ ಮಹಿಮೆಯನ್ನು! ಇನ್ನು ಚಿಂತೆ ಬಿಡಿರಿ. ನೀವೇ ಧನ್ಯರು. ಗುರನುಗ್ರಹಕ್ಕೆ ಪಾತ್ರರಾಗುವಿರಿ. ಇನ್ನು ಏನೂ ಯೋಚಿಸದೆ ಶ್ರೀರಾಯರನ್ನು ಸೇವಿಸಿರಿ” ಎಂದು ಹೇಳಿ ಸೇವಾಕ್ರಮವನ್ನು ವಿವರಿಸಿ, ಶ್ರೀಗುರುರಾಜರ ಭಾವಚಿತ್ರವನ್ನು ಕೊಟ್ಟು “ಪೂಜ್ಯಾಯ ರಾಘವೇಂದ್ರಾಯ” ಎಂಬ ಶ್ಲೋಕವನ್ನು ಬರೆದುಕೊಟ್ಟು ಜಪಿಸುತ್ತಾ ಸೇವಿಸುವಂತೆ ಹೇಳಿಹೋದರು.
ಮರುದಿನದಿಂದಲೇ ರಾಮನಾಥ ದಂಪತಿಗಳು ಶ್ರೀಗುರುರಾಜರ ಸೇವೆಯಲ್ಲಿ ತತ್ಪರರಾದರು. ಒಂದು ಕೊಠಡಿಯನ್ನು ಶುದ್ಧಪಡಿಸಿ ಅಲ್ಲಿ ಮಂಟಪದಲ್ಲಿರಜತಪೀಠದಲ್ಲಿ ಶ್ರೀರಾಯರ ಭಾವಚಿತ್ರವಿಟ್ಟು ಬೆಳ್ಳಿಯ ಸಮಯಗಳಲ್ಲಿತುಪ್ಪದ ನಂದಾದೀಪಗಳನ್ನು ಹಚ್ಚಿ, ಪುಷ್ಪಗಳಿಂದ ಭಾವಚಿತ್ರವನ್ನು ಅಲಂಕರಿಸಿ ಗುರುಗಳ ಪೂಜೆ ಮಾಡಿ ಸೇವೆಯನ್ನು ಪ್ರಾರಂಭಿಸಿದರು. ಆ ಕೊಠಡಿಗೆ ತಾವು ದಂಪತಿಗಳ ವಿನಃ ಮತ್ತರೂ ಪ್ರವೇಶಿಸಿದಂತೆ ಕಟ್ಟಪ್ಪಣೆ ಮಾಡಿದರು. ಏಕಾಂತದಲ್ಲಿ ಚೆಟ್ಟಿಯಾರರು ಶ್ರೀರಾಯರ ಉಪಾಸನೆ ಮಾಡಹತ್ತಿದರು. ಈ ವಿಚಾರ ಎಲ್ಲ ಕಡೆ ಹಬ್ಬಿತು. ಚೆಟ್ಟಿಯಾರರ ಮಿತ್ರರು, ಬಂಧುಗಳು ರಾಮನಾಥರು ಯಾರೋ ಬ್ರಾಹ್ಮಣ ಸನ್ಯಾಸಿಗಳ ಸೇವೆ ಮಾಡುತ್ತ ಹಾಳಾಗುತ್ತಿದ್ದಾರೆಂದು ಆಡಿಕೊಳ್ಳಹತ್ತಿದರು. ಈ ವಿಚಾರ ಚೆಟ್ಟಿಯಾರರ ಕಿವಿಗೂ ಬಿದ್ದಿತು. ಆದರೆ ಇದರಿಂದ ಅವರ ಭಕ್ತಿ ಮತ್ತಷ್ಟು ದೃಢವಾಯಿತೇ ವಿನಃ ಕಡಿಮೆಯಾಗಲಿಲ್ಲ.
ಒಂದು ದಿನ ರಾತ್ರಿ ಸ್ವಪ್ನದಲ್ಲಿ ಗುರುರಾಜರು ಮಂದಸ್ಮಿತರಾಗಿ ದರ್ಶನವಿತ್ತು “ಏನಪ್ಪಾ! ಬ್ರಾಹ್ಮಣ ಸನ್ಯಾಸಿಯಾದ ನನ್ನನ್ನು ನಂಬಿ ಕೆಡುತ್ತಿರುವೆಯೆಂದು ಎಲ್ಲರೂ ಆಡಿಕೊಳ್ಳುತ್ತಿದ್ದಾರಲ್ಲಪ್ಪ, ನೋಡು, ರಾಮನಾಥ! ಈಗಲೂ ಕಾಲ ಮಿಂಚಿಲ್ಲ. ನಿನಗಿಷ್ಟವಿಲ್ಲದಿದ್ದರೆ ಬಿಟ್ಟುಬಿಡು, ನಮ್ಮ ನಿರ್ಬಂಧವಿಲ್ಲ' ಎಂದು ನಗುತ್ತಾ ಹೇಳಿದರು. ಪಾಪ, ಚೆಟ್ಟಿಯಾರರಿಗೆ ತುಂಬಾ ವ್ಯಥೆಯಾಯಿತು. ಸ್ವಪ್ನದಲ್ಲಿಯೇ ಕಣ್ಣೀರು ಸುರಿಸುತ್ತಾ “ಗುರುದೇವ, ನಾನು ನಿಮ್ಮ ಚರಣಗಳಿಗೆ ಶರಣಾಗತನಾಗಿರುವ ಪಾದಸೇವಕ. ಜಗತ್ತು ಏನು ಬೇಕಾದರೂ ಹೇಳಲಿ, ಅದರಿಂದ ನನಗೆ ವ್ಯಥೆಯಿಲ್ಲ, ಆದರೆ ಸ್ವಾಮಿ, ನೀವು ಮಾತ್ರ ನನ್ನ ಕೈಬಿಡದೆ ಅನುಗ್ರಹಿಸಬೇಕು. ನನ್ನ ದೇಹ, ಮನಸ್ಸು ಎಲ್ಲವನ್ನೂ ತಮಗೆ ಅರ್ಪಿಸಿದ್ದೇನೆ. ಅದನ್ನು ಉಳಿಸುವುದು, ಅಳಿಸುವುದೂ ತಮ್ಮ ಚಿತ್ತ. ಹೆಚ್ಚು ವಿಜ್ಞಾಪಿಸಲಾರೆ' ಎಂದು ಬಿನ್ನವಿಸಿ ನಮಸ್ಕರಿಸಿದರು. ಶ್ರೀಗುರುರಾಜರು ನಸುನಕ್ಕು “ಭಲೇ ನಮ್ಮಲ್ಲಿ ಅಪ್ಪ ನಂಬಿಕೆಯಿದೆಯೇ ರಾಮನಾಥ? ಹಾಗಾದರೆ ಕೇಳು ಕೂಡಲೇ ಶಸ್ತ್ರಚಿಕಿತ್ಸೆಗೆ ಸಿದ್ದನಾಗು, ನಿನ್ನನ್ನು ನಾವು ರಕ್ಷಿಸುವೆವು” ಎಂದು ಹೇಳಿ ಕಣ್ಮರೆಯಾದರು. ಚೆಟ್ಟಿಯಾರರ ಪತ್ನಿಗೂ ಸ್ವಪ್ನದಲ್ಲಿ ಶಸ್ತ್ರಚಿಕಿತ್ಸೆ ಆಗಲಿ, ನೀನು ಭಯಪಡಬೇಡ. ನಿನ್ನ ಪತ್ನಿಯನ್ನು ರಕ್ಷಿಸುವ ಹೊಣೆ ನಮ್ಮದು” ಎಂದು ಅಪ್ಪಣೆ ಮಾಡಿದರು.
ಮರುದಿನ ಬೆಳಿಗ್ಗೆ ರಾಮನಾಥ ಚೆಟ್ಟಿಯಾರ್ ದಂಪತಿಗಳು ಪರಸ್ಪರ ಸ್ವಪ್ನ ವೃತ್ತಾಂತವನ್ನು ಹೇಳಿಕೊಂಡು ಗುರುಗಳ ಅಭಯ ವಚನದಿಂದ ಆನಂದಿಸಿದರು. ಹತ್ತಾರು ದಿನಗಳಲ್ಲಿ ಶಸ್ತ್ರಚಿಕಿತ್ಸೆಗೆ ಬೇಕಾದ ವ್ಯವಸ್ಥೆಗಳಾದವು. ಪರಿಣಿತರಾದ ನಾಲ್ಕಾರು ಜನ ವೈದ್ಯರು ಬಂದರು. ಶಸ್ತ್ರಚಿಕಿತ್ಸೆಯ ಕಾಲದಲ್ಲಿ ಚಿಟ್ಟಿಯಾರರು ಬದುಕುವರೋ ಇಲ್ಲವೋ ಹೇಳಲು ಸಾಧ್ಯವಿಲ್ಲವೆಂದು ಪುನಃ ವೈದ್ಯರು ಅಭಿಪ್ರಾಯಪಟ್ಟರು. ಬೆಟ್ಟಿಯಾರರೇ ವೈದ್ಯರಿಗೆ ಧೈರ್ಯ ಹೇಳಿ “ನಿಮ್ಮ ಕರ್ತವ್ಯವನ್ನು ನೀವು ಮಾಡಿರಿ. ನನ್ನನ್ನು ರಕ್ಷಿಸಲು ಗುರುದೇವರು ಸಮರ್ಥರಾಗಿದ್ದಾರೆ” ಎಂದು ನಗುನಗುತ್ತಲೇ ಶಸ್ತ್ರಚಿಕಿತ್ಸೆಗೆ ಸಿದ್ಧರಾದರು. ಶಸ್ತ್ರಚಿಕಿತ್ಸೆಯಾಯಿತು. ಶ್ರೀಮಂತರು ನಸುನಗುತ್ತಾ ಜ್ಞಾನದಿಂದಲೇ ಇದ್ದಾರೆ ಅದನ್ನು ಕಂಡು ವೈದ್ಯರಿಗೂ ಆಶ್ಚರ್ಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮುಗಿಯಿತೆಂದು ದಂಪತಿಗಳಿಗೆ ಶ್ರೀರಾಯರಲ್ಲಿ ಇನ್ನೂ ಭಕ್ತಿಯು ಅಭಿವೃದ್ಧವಾಯಿತು. ಕೆಲವೇ ದಿನಗಳಲ್ಲಿ ಚೆಟ್ಟಿಯಾರರ ರೋಗ ವಾಸಿಯಾಯಿತು.
ಕೆಲ ದಿನಗಳುರುಳಿದವು, ಮತ್ತೆ ಹೃದಯಶೂಲೆ ಕಂಡುಬಂದಿತು. ಚೆಟ್ಟಿಯಾರರು ಹೀಗೇಕಾಯಿತೆಂದು ನೊಂದು ಶ್ರೀಗುರುರಾಜರನ್ನು ಪ್ರಾರ್ಥಿಸಿದರು. ಅಂದೇ ರಾತ್ರಿ ಸ್ವಪ್ನದಲ್ಲಿ ಗುರುಗಳು “ಭಯಪಡಬೇಡ, ಇನ್ನೂ ಕೆಲಬಾರಿ ಶಸ್ತ್ರಚಿಕಿತ್ಸೆಯಾಗಬೇಕು. ನಂತರ ನಿನ್ನ ರೋಗ ಪೂರ್ಣವಾಗಿ ವಾಸಿಯಾಗುವುದು' ಎಂದು ಅಪ್ಪಣೆ ಮಾಡಿದರು. ಮೂರು - ನಾಲ್ಕು ವರ್ಷಗಳಲ್ಲಿ ಕೆಲಬಾರಿ ಶಸ್ತ್ರಚಿಕಿತ್ಸೆಯಾಯಿತು. ಪ್ರತಿಸಲವೂ 'ಬದುಕುವುದಿಲ್ಲ' ಎಂದು ವೈದ್ಯರು ಹೇಳುತ್ತಲೇ ಇದ್ದರು, ಆದರೂ ಗುರುರಾಜರು ಅವರನ್ನು ಕಾಪಾಡುತ್ತಿದ್ದರು. ಕೊನೆಯಬಾರಿಯಂತೂ ಖಂಡಿತ ಬದುಕುವುದಿಲ್ಲವೆಂದು ಪ್ರಖ್ಯಾತ ಸರ್ಜನ್‌ರವರೇ ಹೇಳಿದ್ದರು. ಆದರೇನು, ಶ್ರೀಗುರುರಾಜರು ರಾಮನಾಥರನ್ನು ರಕ್ಷಿಸಲು ಬದ್ಧಕಂಕಣರಾಗಿರುವಾಗ ಏನಾದೀತು ? ಶಸ್ತ್ರಚಿಕಿತ್ಸೆ ಯಶಸ್ವಿಯಾಯಿತು! ಪರಿಣತ ವೈದ್ಯರೇ ಬೆರಗಾಗಿ “ನೀವು ಹೇಗೆ ಬದುಕಿದಿರಿ? ನಿಜವಾಗಿ ಇದೊಂದು ಪವಾಡವೇ ಸರಿ! ಇದು ನೀವು ನಂಬಿರುವ ಆ ಗುರುಗಳ ಮಹಿಮೆಯೇ ಇರಬೇಕು” ಎಂದು ಉದ್ಗಾರ ತೆಗೆದರು.
ಒಂದೆರಡು ತಿಂಗಳುಗಳಲ್ಲಿಯೇ ಚೆಟ್ಟಿಯಾರರಿಗೆ ಸಂಪೂರ್ಣ ಗುಣವಾಯಿತು, ಅನೇಕ ಬಾರಿ ಜೀವದಾನ ಮಾಡಿ ಸಲಹಿದ ಶ್ರೀಗುರುಸಾರ್ವಭೌಮರಲ್ಲಿ ಅವರಿಗೆಂಥ ಭಕ್ತಿಯುಂಟಾಗಿರಬೇಕು ? ತಾವು ಯಾವುದೇ ಕಾರ್ಯ ಮಾಡಿದರೂ ಶ್ರೀಗುರುರಾಜರ ಸೂಚನೆಯಾಗದೆ ಮಾಡುತ್ತಿರಲಿಲ್ಲ. ಅವರ ಮನಸ್ಸು ಇಷ್ಟು ಪಕ್ವವಾಯಿತು. ಇದೇ ಸಮಯದಲ್ಲಿ ದ್ವಿತೀಯ ಮಹಾಯುದ್ಧ ಪ್ರಾರಂಭವಾಗಿ ಮಲಯಾ ದೇಶವನ್ನು ಜಪಾನರು ಆಕ್ರಮಿಸಿದರು. ಇದರಿಂದ ಚಿಟ್ಟಿಯಾರರ ಕೋಟ್ಯಂತರ ರೂಪಾಯಿಗಳ ಗತಿಯೇನಾಯಿತೆಂದು ತಿಳಿಯಲಿಟ್ಟ ಶ್ರೀರಾಯರ ಭಕ್ತರಾದ್ದರಿಂದ ಚೆಟ್ಟಿಯಾರರನ್ನು ಆಡಿಕೊಳ್ಳುತ್ತಿದ್ದವರಿಗೆ ಕೇಳುವುದೇನು, ಸುವರ್ಣಸಂಧಿಯೇ ದೊರೆತಂತಾಯಿತು. ತನ್ನ ಕುಲಪರಂಪರೆಯ ಕ್ರಮವನ್ನು ಬಿಟ್ಟು ಯಾರೋ ಮಾಧ್ಯ ಸನ್ಯಾಸಿಗಳನ್ನು ಪೂಜಿಸಿದರೆ ಮತ್ತೇನಾಗುವುದು ? ಅದರ ಫಲವಾಗಿ ಚೆಟ್ಟಿಯಾರರ ಸಂಪತ್ತೇ ನಾಶವಾಯಿತು!ಯಾವುದಕ್ಕೂ ಮಿತಿಯಿರಬೇಕು. ಈಗ ಆ ಸನ್ಯಾಸಿಗಳು ಇವರ ಸಂಪತ್ತನ್ನು ಮರಳಿ ಕೊಡಿಸಲಿ ನೋಡೋಣ! ಇತ್ಯಾದಿಯಾಗಿ ಜನ ಆಡಿಕೊಳ್ಳಹತ್ತಿದರು. ಕರ್ಣಪರಂಪರೆಯಾಗಿ ಈ ವಿಚಾರ ಚೆಟ್ಟಿಯಾರ್ ದಂಪತಿಗಳಿಗೂ ತಿಳಿಯಿತು. “ಹೂಂ, ಮೂಢರು, ಗುರುರಾಜರ ಮಹಿಮೆಯರಿಯದೆ, ಅವರ ಯೋಗ್ಯತೆಯನ್ನು ತಿಳಿಯದೆ ನಿಂದಿಸುತ್ತಿದ್ದಾರೆ. ನಮ್ಮ ಪ್ರಾರಬಕರ್ಮಕ್ಕೆ ಶ್ರೀರಾಯರೇನು ಮಾಡಲಾದೀತು. ಮೇಲಾಗಿ ನಮ್ಮ ಸಂಪತ್ತು ಹೋಯಿತೆಂದು ನಮಗೆ ಮಲಯಾದಿಂದ ಇನ್ನೂ ತಿಳಿದಿಲ್ಲವಲ್ಲ. ಯುದ್ಧಕಾಲವಾದ್ದರಿಂದ ಸಮಾಚಾರಗಳು ಸರಿಯಾಗಿ ತಿಳಿಯದಾಗಿದೆ ಅಷ್ಟೇ. ಜೀವದಾನ ಮಾಡಿದ ಗುರುಗಳು ಈ ಅಲ್ಪ ಧನವನ್ನು ನೀಡದಿರುವರೇ ?” ಎಂದು ಆ ದಂಪತಿಗಳು ಸಮಾಧಾನ ತಾಳಿದರು.
ಒಂದು ದಿನ ಕನಸಿನಲ್ಲಿ ರಾಮನಾಥ! ನಮ್ಮ ದರ್ಶನಕ್ಕೆ ಬರುವುದಿಲ್ಲವೇ?” ಎಂದು ಗುರುರಾಜರು ಹೇಳಿದಂತಾಯಿತು. ಪತ್ನಿಗೆ ಈ ವಿಷಯ ತಿಳಿಸಿದರು. ಆ ಸಾಧ್ವಮಣಿ ಹರುಷಗೊಂಡು “ಆ ಮಹಾತ್ಮರ ದರ್ಶನಕ್ಕೆ ಹೋಗಿಬರೋಣ ನಡೆಯಿರಿ ಎಂದು ಎಷ್ಟು ದಿನದಿಂದ ಹೇಳುತ್ತಿದ್ದೇನೆ, ನಿಮಗೇಕೋ ಉದಾಸೀನ; ಈಗ ಗುರುಗಳೇ ಹೇಳಿರುವಾಗ ಇನ್ನು ತಡಮಾಡಬಾರದು. ಜನರು ಅನ್ನುವರೆಂದು ನಿಮಗೆ ಚಿಂತೆಯೇ? ಜನರ ಬಾಯಿ ಮುಚ್ಚಿಸಲು ಸಾಧ್ಯವೇ ? ನಮ್ಮ ಕರ್ತವ್ಯ ನಾವು ಮಾಡಬೇಕು. ಮಂತ್ರಾಲಯಕ್ಕೆ ಹೋಗೋಣ” ಎಂದು ಹೇಳಿದಳು. ಚೆಟ್ಟಿಯಾರರು ನಗುತ್ತಾ “ಆ ಮಹಾತ್ಮರಲ್ಲಿ ನನಗೆ ಉದಾಸೀನವೇ? ಎಂತಹ ಮಾತನ್ನಾಡುವೆ. ಅಲ್ಪ ಜನರ ಮಾತಿಗೆ ನಾನು ಕಿವಿಗೊಡುವೆನೇ ? ನಾಳೆಯೇ ಮಂತ್ರಾಲಯಕ್ಕೆ ಹೊರಡೋಣ”
ಎಂದರು.
ರಾಮನಾಥ ದಂಪತಿಗಳು ಮಿತಪರಿವಾರದೊಡನೆ ಹೊರಟು ಇಲ್ಲಿಗೆ ಬಂದರು. 'ಶ್ರೀಗುರುರಾಜರ ದರ್ಶನದಿಂದ ಪುನೀತರಾದರು. ಅದೇ ಕಾಲದಲ್ಲಿ ಇಲ್ಲಿಯೇ ಇದ್ದ ಪಾಜ್ಯ ಶ್ರೀಸುಯಮೀಂದ್ರತೀರ್ಥ ಶ್ರೀಪಾದಂಗಳವರ ದರ್ಶನ ಮಾಡಿ, ಅವರ ಅಪ್ಪಣೆಯಂತೆ ಮೂರು ದಿನ ಸಂಕಲ್ಪಪೂರ್ವಕವಾಗಿ ದಂಪತಿಗಳು ಸೇವೆ ಮಾಡಿ ಶ್ರೀರಾಯರಿಗೆ ಕಾಣಿಕೆ ಸಲ್ಲಿಸಿ, ಸಹಸ್ರಾರು ಜನ ಬ್ರಾಹ್ಮಣ-ಸುವಾಸಿನಿಯರಿಗೆ ಸಂತರ್ಪಣೆ ನೆರವೇರಿಸಿದರು. ಶ್ರೀಪಾದಂಗಳವರ ಮುಖದಿಂದ ಶ್ರೀರಾಯರ ಅಗಮ್ಯ ಮಹಿಮೆಗಳನ್ನು ತಿಳಿದು ಆನಂದಿಸಿದರು. ಚೆಟ್ಟಿಯಾರರಿಗೆ, ತಮಗೆ ಜೀವದಾನ ಮಾಡಿದ ಮಹಾನುಭಾವರಿಗೆ ಯಾವ ರೀತಿ ಶಾಶ್ವತ ಸೇವೆ ಮಾಡಿ ಉದ್ಧತರಾಗಬೇಕೆಂಬುದೇ ತಿಳಿಯಲಿಲ್ಲ. ಕೊನೆಗೆ ಆ ದಂಪತಿಗಳು ಶ್ರೀಪಾದಂಗಳವರಲ್ಲಿ ತಮ್ಮ ಮನದಳಲನ್ನು ತೋಡಿಕೊಂಡರು. ಆಗ ಶ್ರೀಸುಯಮೀಂದ್ರ ಗುರುವರ್ಯರು ಶ್ರೀಗುರುರಾಜರಿಗೆ ರಜತರಥವನ್ನು ಮಾಡಿಸಬೇಕೆಂದಿರುವ ತಮ್ಮ ಅಭಿಪ್ರಾಯವನ್ನು ತಿಳಿಸಿದರು. ಅದನ್ನು ಕೇಳಿ ಹರ್ಷ ನಿರ್ಭರರಾದ ಚೆಟ್ಟಿಯಾರರು ಶ್ರೀಗಳವರಿಗೆ ನಮಸ್ಕರಿಸಿ “ಮಹಾಸ್ವಾಮಿ, ಶ್ರೀಗುರುರಾಜರ ಅನುಗ್ರಹದಿಂದ ನನಗೆ ಎಲ್ಲ ಸೌಕರ್ಯಗಳಿವೆ. ಅವರು ನನಗೆ ಜೀವದಾನ ಮಾಡಿದ್ದಾರೆ. ಈ ರಜತರಥದ ನಿರ್ಮಾಣ ಸೇವೆಯನ್ನು ತಾವು ಕೃಪೆ ಮಾಡಿ ನನ್ನಿಂದಲೇ ಮಾಡಿಸಬೇಕು. ಆಚಂದ್ರಾರ್ಕವಾಗಿ ನನ್ನ ಸೇವೆ ನಡೆಯುತ್ತಿರಲು ತಾವು ಅವಕಾಶ ಮಾಡಿಕೊಡಬೇಕು” ಎಂದು ಪ್ರಾರ್ಥಿಸಿದರು. ಶ್ರೀಪಾದಂಗಳವರು ಸಂತೋಷದಿಂದ ಒಪ್ಪಿದರು. ಶ್ರೀರಾಯರ ದಯದಿಂದ ಶೀಘ್ರವಾಗಿ ರಜತರಥವನ್ನು ತಯಾರು ಮಾಡಿಸಿ ತಂದು ಅರ್ಪಿಸುವೆವು” ಎಂದು ಚೆಟ್ಟಿಯಾರ್ ದಂಪತಿಗಳು ವಾಗ್ದಾನ ಮಾಡಿ ತಮ್ಮೂರಿಗೆ ಮರಳಿದರು.
ಊರಿಗೆ ಹೋಗಿ ಒಂದೆರಡು ತಿಂಗಳಾದರೂ ಚೆಟ್ಟಿಯಾರರು ರಥದ ರಚನೆಯ ಬಗ್ಗೆ ಮಾತೆತ್ತದಿರಲು, ಅವರ ಪತ್ನಿ ಒಂದು ದಿನ “ಮಂತ್ರಾಲಯದಲ್ಲಿ ಪೀಠಾಧೀಶರಾದ ಸಣ್ಣ ಗುರುಗಳಿಗೆ ರಜತರಥ ಮಾಡಿಸಿ ಅರ್ಪಿಸುವುದಾಗಿ ನೀವಾಗಿ ವಾಗ್ದಾನ ಮಾಡಿ ಬಂದು ಇಲ್ಲಿ ಸುಮ್ಮನೆ ಕುಳಿತಿರುವಿರಲ್ಲ! ಇದು ನ್ಯಾಯವೇ” ಎಂದು ಪ್ರಶ್ನಿಸಿದರು. ನಸುನಗುತ್ತಾ ರಾಮನಾಥ ಚೆಟ್ಟಿಯಾರರು ಪತ್ನಿಯನ್ನು ಪರೀಕ್ಷಿಸಲೆಂದು "ನಿಜ, ವಾಗ್ದಾನ ಮಾಡಿದ್ದೆ, ಆದರೆ ಮಲಯಾದ ನಮ್ಮ ವ್ಯಾಪಾರದ, ಆಸ್ತಿಯ ವಿಚಾರವೇ ತಿಳಿಯಲಿಲ್ಲವಲ್ಲ! ಶ್ರೀರಾಯರು ಅನುಗ್ರಹಿಸಲಿ ಮಾಡಿಸುತ್ತೇನೆ” ಎಂದರು. ಪತಿಯ ಮಾತು ಕೇಳಿ ಆ ಸಾದ್ವಿ ನೊಂದು “ಇದೇನು ಹುಡುಗಾಟ ? ಗುರುಗಳನ್ನು ನಾವು ಪರೀಕ್ಷಿಸಬಾರದು. ಮಾತು ಕೊಟ್ಟು ಮರೆಯಬಾರದು” ಎಂದೆನಲು ರಾಮನಾಥರು ನಕ್ಕು, “ನಾನು ವಿನೋದಕ್ಕೆ ಹೇಳಿದರೆ ನೀನು ನಿಜವೆಂದು ತಿಳಿದೆಯಾ ? ಎಲ್ಲ ವ್ಯವಸ್ಥೆ ಮಾಡುತ್ತೇನೆ.
ಯೋಚಿಸಬೇಡ” ಎಂದು ಸಮಾಧಾನಪಡಿಸಿದರು. ಮರುದಿನವೇ ಉತ್ತಮ ಶಿಲ್ಪಿಗಳಿಂದ ರಥದ ಚಿತ್ರ ಬರೆಯಿಸಿ ಅದಕ್ಕೆ ಬೇಕಾದ ಮರ, ಬೆಳ್ಳಿ ಮುಂತಾಗಿ ಸಮಸ್ತವನ್ನು ವ್ಯವಸ್ಥೆ ಮಾಡಿದರು, ರಜತರಥದ ನಿರ್ಮಾಣ ಕಾರ್ಯ ಪ್ರಾರಂಭವಾಯಿತು,
ಇತ್ತ ಮಹಾಯುದ್ಧವೂ ಮುಕ್ತಾಯವಾಯಿತು. ನಾಲ್ಕಾರು ತಿಂಗಳುಗಳಲ್ಲಿ ರಜತರಥ ತಯಾರಾಯಿತು!
ರಜತರಥವು ನಿರ್ಮಾಣವಾದ ದಿನವೇ ರಾತ್ರಿ ಸ್ವಪ್ನದಲ್ಲಿ ರಾಮನಾಥ ನೀನು ನನ್ನ ನಿಜವಾದ ಭಕ್ತಿ, ನನಗೆ ರಥವನ್ನು ಮಾಡಿಸಿದ ನಿನಗೇನು ಕೊಡಲಿ? ಹೂಂ, ನಿನ್ನ ಮನೋರಥವನ್ನು ಪೂರ್ಣ ಮಾಡಿದ್ದೇನೆ. ನಿನಗೆ ಮಂಗಳವಾಗಲಿ' ಎಂದು ಶ್ರೀಗುರುರಾಜರು ಅಪ್ಪಣೆ ಮಾಡಿದರು. ತಮಗಾದ ಸ್ವಪ್ನ ವಿಚಾರವನ್ನು ರಾಮನಾಥರು ಪತ್ನಿಗೆ ತಿಳಿಸಿದರು, ಆದರೆ ಅದು ಅರ್ಥವೇನೆಂದು ಆಗ ಅವರಿಗೆ ಹೊಳೆಯಲಿಲ್ಲ. ಇದಾದ ಒಂದೆರಡು ದಿನಗಳಲ್ಲಿ ಮಲಯಾದಿಂದ ಸಮಾಚಾರ ಬಂದಿತು, “ಮಲಯಾ ದೇಶವನ್ನು ಜಪಾನರು ಆಕ್ರಮಿಸಿದಾಗ ಬ್ರಿಟಿಷ್ ನಾಣ್ಯಗಳಲ್ಲಿದ್ದ ಚೆಟ್ಟಿಯಾರರ ವ್ಯಾಪಾರಧನ ಜಪಾನ್ ನಾಣ್ಯಗಳಾಗಿ ಪರಿವರ್ತಿತವಾಗಿದ್ದು ಯುದ್ಧಾನಂತರ ಆ ನಾಣ್ಯಗಳಿಗೆ ಬೆಲೆಯಿಲ್ಲವೆಂದು ತಾವು ನಿರಾಶರಾಗಿದ್ದುದಾಗಿಯೂ, ಆದರೆ ಬ್ರಿಟಿಷರು ಪುನಃ ದೇಶವನ್ನು ವಶಪಡಿಸಿಕೊಂಡಮೇಲೆ ಬಹಳ ವ್ಯವಹಾರ ನಡೆದು ಆ ನಾಣ್ಯಗಳಿಗೆ ಬದಲಾಗಿ ಬ್ರಿಟಿಷ್ ನಾಣ್ಯಗಳನ್ನು ಕೊಡುವುದಾಗಿ ಆಂಗ್ಲ ಪ್ರಭುತ್ವವು ಒಪ್ಪಿರುವುದಾಗಿಯೂ ಚೆಟ್ಟಿಯಾರರ ಮಲಯಾ ಅಧಿಕಾರಿ ಏಜೆಂಟರಿಂದ ಪತ್ರ ಬಂದಿತು. ಅಂದು ದಂಪತಿಗಳಿಗಾದ ಆನಂದ ಅವರ್ಣನೀಯ! ಶ್ರೀರಾಯರು ಮತ್ತೆ ಸ್ವಪ್ನದಲ್ಲಿ ದರ್ಶನವಿತ್ತು “ನಿನ್ನ ಮನೋರಥ ಪೂರ್ಣಮಾಡಿದ್ದೇವೆ – ರಾಮನಾಥ! ಈಗ ನಿನಗೆ ಸಂತೋಷವಾಯಿತಷ್ಟೇ?” ಎಂದು ಹೇಳಿದಂತಾಯಿತು. ಚೆಟ್ಟಿಯಾರರಿಗೆ ಈಗ ಸ್ಪಷ್ಟವಾಯಿತು. “ಆಹಾ! ಎಂಥ ದಯಾಳುಗಳು ಗುರುಗಳು!” ಎಂದು ಚೆಟ್ಟಿಯಾರರು ಹಿಗ್ಗಿದರೆ ಪ್ರಾಣ-ವಿತ್ತ ಹೀಗೆ ಎರಡನ್ನೂ ಕರುಣಿಸಿ ಕಾಪಾಡಿದ್ದಾರಲ್ಲ! ಈ ಗುರುಗಳು” ಎಂದು ಚೆಟ್ಟಿನಾಡಿನ ಜನ ಶ್ರೀಗುರುಗಳ ಮಹಿಮೆಯನ್ನು ಕಂಡು ಬೆರಗಾದರು. ಈ ಅನುಭವದಿಂದ ಅನೇಕರು ಗುರುಗಳ ಭಕ್ತರಾದರು.
ಶ್ರೀಗುರುಭಕ್ತರೇ! ನೋಡಿದಿರಾ ನಮ್ಮ ಗುರುಗಳ ಮಹಿಮೆ, ಜನರು ಆಡಿಕೊಂಡರೂ ಲಕ್ಷಿಸದೆ ಚೆಟ್ಟಿಯಾರರು ಶ್ರೀರಾಯರನ್ನು ನಂಬಿ ತ್ರಿಕರಣಗಳಿಂದ ಸೇವಿಸಿದರು. ತಮ್ಮನ್ನು ನಂಬಿದ ಚೆಟ್ಟಿಯಾರರಲ್ಲಿ ಕರುಣಾಳುಗಳಾದ ಶ್ರೀರಾಯರೂ ಹಾಗೆಯೇ ಅನುಗ್ರಹಿಸಿದರು! ಇಂತು ತಮ್ಮಲ್ಲಿ ಅನುಗ್ರಹ ಮಾಡಿದ ಶ್ರೀಗುರುಸಾರ್ವಭೌಮರಿಗೆ ಅವರ ಆಜ್ಞೆಯಂತೆ ರಾಮನಾಥ ಚೆಟ್ಟಿಯಾರ್ ದಂಪತಿಗಳು ರಜತರಥವನ್ನು ತಂದು ಸಮರ್ಪಿಸಿ ಉತ್ಸವ ಮಾಡಿಸಿದರು. ಅದನ್ನು ನೀವೆಲ್ಲರೂ ನೋಡಿ ಆನಂದಿಸಿದ್ದೀರಿ. ಇದೇ ಶ್ರೀಸುಯಮೀಂದ್ರರು ಅಪ್ಪಣೆ ಕೊಡಿಸಿದ ಶ್ರೀರಾಯರ ಮಹಿಮೆ ಎಂದು ಶ್ರೀಮಠದ ಆಚಾರ್ಯರು ಭಕ್ತಜನರಿಗೆ ಅದನ್ನು ವಿಸ್ತಾರವಾಗಿ ನಿರೂಪಿಸಿದರು.
ಶ್ರೀಮಠದ ಆಚಾರ್ಯರು ಹೇಳಿದ, ಶ್ರೀರಾಯರು ತೋರಿದ ಅದ್ಭುತ ಮಹಿಮೆಯನ್ನಾಲಿಸಿ ಸರ್ವರೂ ಆನಂದದ ಕಣ್ಣೀರು ಸುರಿಸಿ, ಶ್ರೀರಾಯರ ಕಾರುಣ್ಯವನ್ನು ಕೊಂಡಾಡಹತ್ತಿದರು. ಆಗ ರಾಮಾಶಾಸ್ತ್ರಿಗಳೆಂಬ ಒಬ್ಬರು “ಸ್ವಾಮಿ, ಆಚಾರ್ಯರೇ, ಅಮೃತಪಾನ ಮಾಡಿಸಿದಿರಿ” ಎಂದರು. ಆಗ ವರದರಾಜ ಐಯ್ಯಂಗಾರ್ ಎಂಬ ಮಧ್ಯಮ ವಯಸ್ಕರು ಮುಂದೆ ಬಂದು “ಆಚಾರ್ಯರೇ, ಶಾಸ್ತ್ರಿಗಳು ಸತ್ಯವನ್ನೇ ನುಡಿದಿದ್ದಾರೆ. ನೀವು ಮೊದಲು ಹೇಳಿದಂತೆ ಮಹಾತ್ಮರಿಗೆ ಮತ-ಪಂಥಗಳ ಗಡಿ ಇಲ್ಲ, ಈಗ ನೋಡಿ, ನಾವು ಮೈಸೂರು ಪ್ರಾಂತ್ಯದವರು, ನಮ್ಮಲ್ಲಿ ತಾತ-ವಿಶಿಷ್ಟಾದ್ರೆತವಾದಿ ಮತೀಯರು ಬಹುಜನರಿದ್ದಾರೆ. ನೀವು ಹೇಳಿದಂತೆ ಭಾವನೆಗಳು ನಮಗೆ ಎಂದೂ ದೊಡ್ಡವರಲ್ಲಿ ಗೌರವ ತೋರುವುದರಲ್ಲಿ ಅಡ್ಡವಾಗಿಲ್ಲ. ಅಷ್ಟೇ ಅಲ್ಲ; ನಾವೆಲ್ಲರೂ ಶ್ರೀರಾಘವೇಂದ್ರಗುರುಸಾರ್ವಭೌಮರನ್ನು ಭಕ್ತಿಯಿಂದ ಸೇವಿಸಿ ನಮ್ಮ ವಾಂಛಿತಗಳನ್ನು ಪಡೆಯುತ್ತಿದ್ದೇವೆ. ನಮ್ಮ ಗುರುಪೀಠಗಳೂ ಶ್ರೀರಾಯರಲ್ಲಿ ಅಪಾರ ಗೌರವವನ್ನು ತೋರುವುದನ್ನು ನಾವು ಬಲ್ಲೆವು. ಇಷ್ಟೇ ಅಲ್ಲ ಶ್ರೀರಾಘವೇಂದ್ರಸ್ವಾಮಿಗಳ ಮಠದ ಮೂಲಸ್ಥಳ. ನಮ್ಮ ಮೈಸೂರು ದೇಶದಲ್ಲಿ ಖ್ಯಾತವಾದ ನಂಜನಗೂದೇ ಆಗಿದೆ. ನಂಜನಗೂಡಿನಲ್ಲಿರುವ ಸ್ಮಾರ್ತ, ಶ್ರೀವೈಷ್ಣವ ಮತ್ತು ಮಾಧರೆಲ್ಲರೂ, ಅಷ್ಟೇ ಏಕೆ, ಚಾತುರ್ವಣ್ಯ್ರದ ಎಲ್ಲ ಹಿಂದೂ ಜನಾಂಗದವರೂ ಶ್ರೀರಾಘವೇಂದ್ರಸ್ವಾಮಿಗಳಲ್ಲಿ ಭಕ್ತಿಯಿಂದ ನಡೆದುಕೊಳ್ಳುವುದಲ್ಲದೆ ಈ ಮಠವನ್ನು 'ನಮ್ಮ ಮಠ' ಎಂದೇ ತಿಳಿದು ವರ್ತಿಸುತ್ತಿರುವುದನ್ನು ನಾನು ಬಲ್ಲೆ. ಶ್ರೀರಾಯರು ನೀವು ಹೇಳಿದಂತೆ ಕೇವಲ ಶ್ರೀರಾಯರ ಮಠ, ಮಾದರು, ಬ್ರಾಹ್ಮಣರು ಅಥವಾ ಹಿಂದೂ ಜನರಿಗೆ ಮಾತ್ರ ಗುರುಗಳಾಗಿರದೆ ಅವರು ವಿಶ್ವಗುರುಗಳೇ ಆಗಿದಾರೆ” ಎಂದರು. ಆಗ ಗೋವಿಂದರಾಯರೇ ಮುಂತಾದವರು 'ನಿಜ, ನಿಜ' ಎಂದು ತಲೆಯಾಡಿಸಿದರು.
ಆಗ ಸದಾಶಿವ ಎಂಬುವರು “ಆಚಾರ್ಯರೇ, ನೋಡಿ, ನಾವು ಬೇರೆ ಬೇರೆ ಊರುಗಳಿಂದ ಬಂದು ಸೇರಿದ್ದೇವೆ. ನಾವು ಶ್ರೀಗುರುರಾಜರು ಮಹಾತ್ಮರು, ದೊಡ್ಡವರು, ಭಕ್ತವತ್ಸಲರು ಎಂದಿಷ್ಟು ಮಾತ್ರ ತಿಳಿದಿದ್ದೇವೆ. ಕೆಲವರಿಗೆ ಅವರ ಚರಿತೆಯೆಲ್ಲ ಗೊತ್ತಿರಬಹುದಾದರೂ ಅನೇಕರಿಗೆ ಆ ಮಹಾನುಭಾವರು ಸಂಪೂರ್ಣ ಚರಿತ್ರೆ, ಮಹಿಮಾತಿಶಯಗಳು ತಿಳಿಯದೆಂದು ಭಾವಿಸುತ್ತೇನೆ. ಅದನ್ನು ನೀವು ನಮಗೆ ತಿಳಿಸಿದರೆ ಬಹಳ ಉಪಕಾರವಾಗುವುದು” ಎಂದು ಹೇಳಿದರು.
ಅದೇ ಹೊತ್ತಿಗೆ ನಗಾರಿ, ಕಹಳೆ, ನಾದಸ್ವರಗಳ ಧ್ವನಿ ಕೇಳಿಸಿತು, ಸಹಸ್ರಾರು ವಿದ್ಯುದ್ದೀಪಗಳು ಶ್ರೀಗುರುರಾಜರ ಆಲಯದ ಸುತ್ತಮುತ್ತ ಬೆಳಗಿದವು. ಅದನ್ನು ಗಮನಿಸಿದ ಶ್ರೀಮಠದ ಆಚಾರ್ಯರು ನಸುನಗುತ್ತಾ ಹೇಳಿದರು.
ಆಚಾರ್ಯರು : “ಓಹೋ! ಶ್ರೀಗುರುರಾಜರ 'ಸರ್ವಸಮರ್ಪಣೋತ್ಸವ'ವು ಹೊರಟಂತೆ ತೋರುವುದು. ಶ್ರೀರಾಯರ ಭಕ್ತರೇ, ನೀವು ಶ್ರೀರಾಯರ ಚರಿತಾಮೃತವನ್ನು ಹೇಳಬೇಕೆಂದು ನನ್ನನ್ನು ಕೇಳಿದಿರಿ, ನಿಮ್ಮ ಸೌಭಾಗ್ಯ. ಇಂದು ಪ್ರತಿವರ್ಷದಂತೆ ಪರಮಪೂಜ್ಯರಾದ ಶ್ರೀಸುಯಮೀಂದ್ರತೀರ್ಥ ಶ್ರೀಪಾದಂಗಳವರು ಶ್ರೀಗುರುರಾಜರ ಅಮರಚರಿತೆ, ಮಹಿಮಾತಿಶಯಗಳನ್ನು ಭಕ್ತಜನರಿಗೆ ಉಪದೇಶಿಸುತ್ತಾರೆ. ಶ್ರೀಗುರುಸಾರ್ವಭೌಮರ ಮಹಿಮಾಪ್ರಸಾರಕರೂ, ಶ್ರೀರಾಯರ ಪೂರ್ವಾಶ್ರಮ ಸದ್ದಂಶ ಸಂಜಾತರೂ, ಗುರುವರರ ಪವಿತ್ರ ಪೀಠದಲ್ಲಿ ವಿರಾಜಿಸಿರುವವರೂ ಆದ ಆ ಜ್ಞಾನಿಗಳ ಉಪದೇಶವನ್ನೇ ಕೇಳಿ ಪುನೀತರಾಗಬಹುದು. ಬನ್ನಿ, ಎಲ್ಲರೂ ಶ್ರೀರಾಯರ ಉತ್ಸವವನ್ನು ನೋಡಿ, ಗುರುಗಳ ಉಪದೇಶ ಶ್ರವಣ ಮಾಡಿ ಪುನೀತರಾಗೋಣ” ಎಂದು ಹೇಳಿ ಸರ್ವರೊಡನೆ ಶ್ರೀರಾಯರ ಗುಡಿಗೆ ಹೊರಟರು.
ರಾಜ್ಯ ಶ್ರೀಸುಯಮೀಂದ್ರತೀರ್ಥರ ನೇತೃತ್ವದಲ್ಲಿ, ಅಲಂಕೃತರಾದ ಶ್ರೀಗುರುರಾಜರು ರಜತರಥದಲ್ಲಿ ಮಂಡಿಸಿ ವಾದ್ಯವೈಭವ, ವೇದಘೋಷ, ಭಕ್ತರ ಜಯಜಯಕಾರ, ಹರಿದಾಸರ ಭಕ್ತಿಪೂರ್ಣ ನರ್ತನ, ಭಜನೆಗಳೊಡನೆ ಮೆರವಣಿಗೆ ಹೊರಟು ಆಲಯದಲ್ಲಿ ಸರ್ವಾಂಗ ಸುಂದರವಾಗಿ ಅಲಂಕೃತವಾದ “ಕಲ್ಯಾಣಮಂಟಪ'ದಲ್ಲಿ ವಿರಾಜಿಸಿದ ಉಂಜಲಿನಲ್ಲಿ ಮಂಡಿಸಿದರು. ಶ್ರೀಯವರ ಅಮೃತಹಸ್ತದಿಂದ ಡೋಲೋತ್ಸವವಾಯಿತು. ನಂತರ ಸ್ವಸ್ತಿವಾಚನವಾದ ಮೇಲೆ ಶ್ರೀಮದಾಚಾರ್ಯರ ದಿಗ್ವಿಜಯ ವಿದ್ಯಾಪೀಠದಲ್ಲಿ ಅಲಂಕೃತರಾದ ಶ್ರೀಸುಯಮೀಂದ್ರತೀರ್ಥಶ್ರೀಪಾದಂಗಳವರು ಭಕ್ತಿಪರವಶರಾಗಿ ಅಲ್ಲಿ ಸೇರಿದ್ದ ಸಹಸ್ರಾರು ಜನ ಭಕ್ತರನ್ನುದ್ದೇಶಿಸಿ ಉಪದೇಶ ಭಾಷಣವನ್ನು ಅಪ್ಪಣೆ ಕೊಡಿಸಲಾರಂಭಿಸಿದರು.
“ಇಂದು ಶ್ರೀಮಂತ್ರಾಲಯ ಶ್ರೀಪಾದಂಗಳವರು ವಿಶ್ವಗುರುಗಳೆಂದು ಜಗನ್ಮಾನ್ಯರಾಗಿದ್ದಾರೆ. ಭಾರತದ ಎಲ್ಲೆಯನ್ನೂ ಮೀರಿ ಅವರ ಮಹಿಮೆಯ ಕೀರ್ತಿಯು ಜಗತ್ತಿನ ದಿಕ್ತಟಗಳಲ್ಲೆಲ್ಲಾ ಬೆಳಗುತ್ತಿದೆ. ಜಾತಿ, ಮತ, ಪಂಥ, ವರ್ಣ, ದೇಶ, ಭಾಷೆ, ಬಡವ, ಬಲ್ಲಿದ, ಶ್ರೀಮಂತ - ಆಸ್ತಿಕ - ನಾಸ್ತಿಕ ಎಂಬ ಭೇದವಿಲ್ಲದೆ ಸರ್ವರೂ ಈ ಮಹನೀಯರನ್ನು ಸೇವಿಸಿ, ಆಶ್ರಯಿಸಿ, ತಮ್ಮ ಎಲ್ಲ ಬಗೆಯ ಕಷ್ಟಗಳನ್ನೂ ಕಳೆದುಕೊಂಡು, ತಮ್ಮ ತಮ್ಮ ಇಷ್ಟಾರ್ಥಗಳನ್ನು ಪಡೆದು ಸುಖಿಸುತ್ತಿದ್ದಾರೆ. ಶ್ರೀಗುರುರಾಜರು ತಮ್ಮನ್ನು ಆರಾಧಿಸಿದವರ ಪರಿಶುದ್ಧಹೃದಯ, ಭಕ್ತಿಗಳನ್ನು ಮಾತ್ರ ನೋಡಿ ಅವರಾರೇ ಆಗಿರಲಿ ಅಂಥವರ ಸಕಲ ಅನಿಷ್ಟಗಳನ್ನು ಪರಿಹರಿಸಿ ಬೇಡಿಬೇಡಿದ ಇಷ್ಟಾರ್ಥಗಳನ್ನು ನೀಡುತ್ತಿದ್ದಾರೆ! ಹೀಗೆ ಕೋಟ್ಯಂತರ ಜನರ ಪಾಪ ಪರಿಹಾರ, ರೋಗಾದ್ಯುಪದ್ರವಗಳನ್ನು ಪರಿಹರಿಸಿ ಅವರೆಲ್ಲರ ಮನೋರಥಗಳನ್ನೂ ನೀಡುತ್ತಿದ್ದಾರೆ. ಇಲ್ಲಿ ಒಂದು ವಿಷಯವನ್ನು ನಾವು ಯೋಚಿಸಬೇಕು. ಶ್ರೀಗುರುರಾಜರಿಗೆ ಹೀಗೆ ಕೋಟ್ಯಂತರ ಭಕ್ತರ ಇಷ್ಟಾರ್ಥಗಳನ್ನು ಕೊಟ್ಟು ಸರ್ವರನ್ನೂ ಉದ್ಧಾರಮಾಡುವ ಶಕ್ತಿ ಹೇಗೆ ಬಂತು ? ಅವರ ಅನುಗ್ರಹ ಭಂಡಾರ ಇಂತು ಅಕ್ಷಯವಾಗಿರುವುದರ ರಹಸ್ಯವೇನು? ಇದನ್ನು ನಾವು ವಿವೇಚಿಸಿದಂತೆಲ್ಲ ಅವರ ಅಗಾಧ ಶಕ್ತಿ, ಸಂಪತ್ತು, ಮಹಿವಾದಿಗಳ ಅರಿವಾಗಿ ನಾವು ಮೂಕವಿಸ್ಮಿತರಾಗುತ್ತೇವೆ: ಶ್ರೀಗುರುರಾಜರ ಭಕ್ತರೇ, ಶ್ರೀಗುರುಸಾರ್ವಭೌಮರ ಅಮರಚರಿತೆಯನ್ನು ಅರಿಯುವ ಮೊದಲು ಈ ಮಹನೀಯರು ಯಾರು? ಇವರ ಮೂಲ ರೂಪವಾವುದು ? ಇವರಿಗೆ ಇಂತಹ ಮಹಾಶಕ್ತಿಯುಂಟಾಗಲು ಕಾರಣವೇನು ? ಜಗದೀಶ್ವರನು ಸರ್ವದಾ ಅವರಲ್ಲಿ ಏಕೆ ಸನ್ನಿಹಿತನಾಗಿ ನಲಿಯುತ್ತಿರುವನು? ಬೇಡಿದ ವರ, ಮನೋರಥ ಪೂರಣ ಮಾಡುವ ಅಗಾಧ ಸಂಪತ್ತು ಅವರಿಗೆ ಹೇಗೆ ಲಭ್ಯವಾಯಿತು ? - ಇತ್ಯಾದಿ ವಿಚಾರಗಳನ್ನು ತಿಳಿಯಬೇಕು. ಅಂದರೆ ಆಗ ಮಾತ್ರ ಇವರ ವೈಶಿಷ್ಟ್ಯಪೂರ್ಣ ವ್ಯಕ್ತಿತ್ವ, ಮಹತ್ವ, ಮಹಿಮಾದಿಗಳು ಚೆನ್ನಾಗಿ ಗೊತ್ತಾಗಿ ಇವರ ಅಮರಚರಿತೆಯನ್ನರಿತು ಭಕ್ತಿ-ಶ್ರದ್ಧೆಗಳಿಂದ ಇವರನ್ನು ಆರಾಧಿಸಿ ಉತ್ಕೃತರಾಗಲು ಹೆಚ್ಚು ಉತ್ಸಾಹವುಂಟಾಗುತ್ತದೆ.
ನಾವು ಪ್ರತಿವರ್ಷವೂ ಶ್ರೀಗುರುರಾಜರ ಅಮರಚರಿತೆ ಮಹಿಮೆಗಳನ್ನು ನಿಮಗೆ ಉಪದೇಶಿಸುತ್ತಿದ್ದೇವೆ. ಶ್ರೀಗುರುಸಾರ್ವಭೌಮರ ಪ್ರೇರಣೆಯಂತೆ ಈ ದಿವಸ ನಿಮಗೆ ಮೇಲೆ ಹೇಳಿದ ಎಲ್ಲ ವಿಚಾರಗಳ ವಿವೇಚನೆಯೊಡನೆ ಶ್ರೀಗುರುರಾಜರ ಮೂಲರೂಪ, ಅವತಾರಗಳ ವೈಶಿಷ್ಟ್ಯ, ಮಹಿಮಾದಿಗಳನ್ನು ತಿಳಿಸಲು ಆಶಿಸಿದ್ದೇವೆ. ಇದು ಒಂದು ವಿಧದಿಂದ ಶ್ರೀಗುರುರಾಜರ ಆಜ್ಞೆ ಎಂದೇ ಭಾವಿಸಿದ್ದೇವೆ. ಅವರೇ ಪ್ರೇರಿಸಿ, ನಮ್ಮಲ್ಲಿ ನಿಂತು ಹೇಳಿಸಿದಷ್ಟು ನಮ್ಮ ಯೋಗ್ಯತಾನುಸಾರವಾಗಿ ನಿಮ್ಮೆಲ್ಲರಿಗೂ ತಿಳಿಸಬೇಕೆಂದು ಅಪೇಕ್ಷಿಸುತ್ತೇವೆ.
ಶ್ರೀಗುರುಸ್ತೋತ್ರದಲ್ಲಿ ಶ್ರೀಅಪ್ಪಣ್ಣಾಚಾರ್ಯರು 'ಶ್ರೀರಾಘವೇಂದ್ರೋಪರಿಪಾದಕಂಜನಿಷೇವ ಣಾಲಬ ಸಮಸ್ತ ಸಂಪತ್'' ಎಂದು ಹೇಳಿದ್ದಾರೆ - ಅಂದರೆ ಜಗಜ್ಜನ್ಮಾದಿಕಾರಣನೂ, ಸರ್ವೋತ್ತಮನೂ ಆದ ಶ್ರೀಮನ್ನಾರಾಯಣನ ಚರಣಕಮಲ ನಿಷೇವಣದಿಂದ ಶ್ರೀಗುರುರಾಜರು ಧರ್ಮಾರ್ಥ-ಕಾಮ-ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥ ಸಂಪತ್ತನ್ನು ಪಡೆದಿದ್ದಾರೆ ಎಂದು ಹೇಳಿರುವರು. ನಮ್ಮೆಲ್ಲ ಪ್ರಶ್ನೆಗಳಿಗೂ ಇದು ಉತ್ತರರೂಪವಾಗಿದೆ. ಸಕಲ ಸಂಪತ್ತುಗಳಿಗೂ ಅಭಿಮಾನಿನಿಯಾದ ಶ್ರೀಲಕ್ಷ್ಮೀದೇವಿಗೆ ಪ್ರಭುವಾದ ಶ್ರೀಹರಿಯು ಇವರಿಗೆ ಒಲಿದಿರುವುದರಿಂದಲೇ ಇವರದು ಇಂತು ಅಗಾಧ ಭಂಡಾರವಾಗಿದೆ. ಅದು ಕೇವಲ ಭಂಡಾರವಾಗಿರದೆ “ಅಕ್ಷಯ ಭಂಡಾರ'ವಾಗಿರುವುದರಿಂದಲೇ ಶ್ರೀಗುರುರಾಜರು ಕೋಟ್ಯಂತರ ಭಕ್ತಜನರು ಕೇಳಿಕೇಳಿದ ಇಷ್ಟಾರ್ಥ ಸಂಪತ್ತನ್ನು ಅನುಗ್ರಹಿಸಲು ಸಮರ್ಥರಾಗಿದ್ದಾರೆ. ಶ್ರೀಗುರುರಾಜರು ಶ್ರೀಹರಿಯನ್ನು ಶ್ರೀರಾಘವೇಂದ್ರ ರೂಪದಲ್ಲಿ ಸೇವಿಸಿ ಈ ಮಹಾಸಂಪತ್ತನ್ನು ಸಂಪಾದಿಸಿದ್ದರೆಂದು ಮಾತ್ರ ತಿಳಿಯಬಾರದು. ಈ ಮಹಾನುಭಾವರು ಶ್ರೀಹರಿಯನ್ನು ಯುಗಯುಗಗಳಿಂದ ಆರಾಧಿಸಿ ಈ ಚತುರ್ವಿಧ ಪುರುಷಾರ್ಥ ಸಂಪತ್ತಿನ ಆಕ್ಷಯ ಭಂಡಾರವನ್ನು ಪಡೆದಿದ್ದಾರೆ. ಹಾಗಾದರೆ ಇವರು ಯಾರು? ಇವರ ಮೂಲರೂಪವಾವುದು ? ಇವರು ಯುಗಯುಗಗಳಲ್ಲಿ ಶ್ರೀಹರಿಯನ್ನು ಸೇವಿಸಿದ ರೂಪ ಅವತಾರಗಳಾವುವು? ಇದನ್ನು ನಾವು ಮೊದಲು ತಿಳಿಯಬೇಕು.
ಇದಕ್ಕೆ ನಮಗೆ ಶ್ರೀನರಸಿಂಹಪುರಾಣ ಉತ್ತರ ನೀಡುತ್ತದೆ, ನರಸಿಂಹಪುರಾಣದಲ್ಲಿ
ಶಂಕುಕರ್ಣಾ ದೇವರು ಬ್ರಹ್ಮಶಾಪಾಚ್ಚ ಭೂತಲೇ |
ಪ್ರಹ್ಲಾದ ಇತಿ ವಿಖ್ಯಾತೋ ಭೂಭಾರಕ್ಷಪಣ್ ರತಃ ||
ಸ ಏವ ರಾಘವೇಂದ್ರಾಖ್ಯಯ ರೂಪೇಣ ಸರ್ವದಾ |
ಕಲೌಯುಗೇ ರಾಮುಸೇವಾಂ ಕುರ್ವನ್ ಮಂತ್ರಾಲಯೇಭವನ್ ||
ಎಂದು ಶ್ರೀಗುರುರಾಜರ ಮೂಲರೂಪ ಅವತಾರಗಳ ವಿಚಾರ ಹೇಳಿದ್ದಾರೆ. ಇದರಿಂದ ಶ್ರೀರಾಘವೇಂದ್ರ ಗುರುಸಾರ್ವಭೌಮರ ಮೂಲರೂಪ ಶಂಕುಕರ್ಣ ಎಂಬ ದೇವತೆ ಎಂದು ಸ್ಪಷ್ಟವಾಗುವುದು, ಅವರು ಬ್ರಹ್ಮದೇವರ ಶಾಪರೂಪ ವರದಿಂದ ಪ್ರಹ್ಲಾದರಾಜರಾಗಿ ಅವತರಿಸಿದರು ಮತ್ತು ಭೂಭಾರ ನಿವಾರಣೆಗಾಗಿ ಅವತರಿಸಿದ ಶ್ರೀನೃಸಿಂಹದೇವರಲ್ಲಿ ರತರಾದರು.
ಅವರು ಮುಂದೆ ಬಾಹ್ಲೀಕರಾಜರ ಮತ್ತು ವ್ಯಾಸರಾಜಗುರುಸಾರ್ವಭೌಮರಾ 1) ಅವತರಿಸಿ ಭೂಭಾರ ಪರಿಹಾರಕ್ಕಾಗಿ ಅವತರಿಸಿದ ಶ್ರೀಕೃಷ್ಣ ಪರಮಾತ್ಮನಲ್ಲಿರತರಾದರು. ಹೀಗೆ ಬಾಷಿಕ- ರಾಜರಾಗಿ ಅವತರಿಸಿದ ಆ ಶ್ರೀಪಾದರ ಪದ ಶಂಕುಕರ್ಣರೇ ಮತ್ತೆ ಕಲಿಯುಗದಲ್ಲಿ ಮಂತ್ರಾಲಯದಲ್ಲಿ ಶ್ರೀಮೂಲರಾಮಚಂದ್ರದೇವರ ಸೇವೆ ಮಾಡುತ್ತಾರಾಘವೇಂದರಾದರು ಎಂದು ನಮಗೆ ಗೊತ್ತಾಗುವುದು. ಅಪರೋಕ್ಷಜ್ಞಾನಿಗಳಾದ ಹರಿದಾಸರ ಅಮರ ವಚನಗಳು ಇದನ್ನು ಸ್ಪಷ್ಟಪಡಿಸುವುವು. ಮಹಾತ್ಮಾಜ್ಞಾನಪೂರ್ವಸ್ತು ಸುದೃಢರ್ವತೋಧಿಕಃ |
ಸ್ನೇಹೋ ಭಕ್ತಿರಿತಿಕೊ ತಯಾ ಮುಕ್ತಿರ್ನಚಾನ್ಯಥಾ ||
ಅಂದರೆ ನಾವು ಯಾರನ್ನು ಆರಾಧಿಸುತ್ತೇವೋ ಅವರ ಮಹಿಮಾತಿಶಯಗಳನ್ನು ಚೆನ್ನಾಗಿ ತಿಳಿದು ತಾನು, ತನ್ನದು, ತನ್ನವರೆಂಬ ಎಲ್ಲ ವಸ್ತುಗಳಲ್ಲಿ ಮಾಡುವ ಪ್ರೇಮ ಅಥವಾ ಭಕ್ತಿಗಿಂತ ಅತ್ಯಂತ ಅಧಿಕವಾಗಿ ಮಾಡುವ, ಎಂತಹ ಪರಿಸ್ಥಿತಿಯಲ್ಲಿಯೇ ಆಗಲಿ ಸ್ವಲ್ಪವೂ ಕುಂದದ, ನಿಶ್ಚಲವಾದ, ಶ್ರೇಷ್ಠವಾದ ಭಕ್ತಿಯಿಂದ ಸೇವಿಸುವುದರಿಂದಲೇ ಶಾಶ್ವತವಾದ ಸುಖವು ಲಭಿಸುತ್ತದೆ. ಅದನ್ನು ಬಿಟ್ಟರೆ ಖಂಡಿತ ಉದ್ಧಾರಕ್ಕೆ ಇಷ್ಟಾರ್ಥ ಸಾಧನೆಗೆ, ಶಾಶ್ವತಸುಖ ಪ್ರಾಪ್ತಿಗೆ ಬೇರೆ ಮಾರ್ಗವಿಲ್ಲ ಎಂದು ವ್ಯಕ್ತವಾಗುತ್ತದೆ. ಇದು ಭಗವಂತನಲ್ಲಿ ಮಾಡಬೇಕಾದ ಭಕ್ತಿಯ ಬಗೆಗೆ ಹೇಳಿರುವ ವಿಚಾರ. “ಯಸ್ಕ ದೇವೇ ಪರಾ ಭಕ್ತಿರ್ಯಥಾದೇವೇ ತಥಾ ಗುರ” ಎಂಬ ವೇದದ ವಚನವು ಶ್ರೀಹರಿಯಲ್ಲಿ ಮಾಡುವಂತೆಯೇ ಅವನ ಅತ್ಯರ್ಥ ಪ್ರಸಾದವನ್ನು ದೊರಕಿಸಿಕೊಡುವ ಶಾಸ್ತ್ರಜ್ಞಾನವನ್ನು ಉಪದೇಶ ಮಾಡುವ ಗುರುಗಳಲ್ಲಿಯೂ ತಾರತಮ್ಯಾನುಸಾರವಾಗಿ ಭಗವಂತನಲ್ಲಿ ಮಾಡುವಂತೆಯೇ ನಿರ್ಮಲಭಕ್ತಿಯನ್ನು ಮಾಡಬೇಕೆಂದು ಉಪದೇಶಿಸುವುದರಿಂದ ಪ್ರಕೃತ ಇಂದು ಸ್ವರೂಪೋದ್ಧಾರಕ ಗುರುಗಳಾಗಿ ಜಗತ್ತಿನ ಎಲ್ಲ ಜನರಿಗೆ ಗುರುಗಳಾಗಿ ಕಂಗೊಳಿಸುತ್ತಿರುವ ಶ್ರೀಗುರುಸಾರ್ವಭೌಮರ ಅನುಗ್ರಹವನ್ನು ಅಪೇಕ್ಷಿಸುವ ಪ್ರತಿಯೊಬ್ಬರೂ ಶ್ರೀರಾಯರಲ್ಲಿ ಅವರ ಮಹಾತ್ಮಜ್ಞಾನಪೂರ್ವಕವಾಗಿ ಹೆಚ್ಚಾದ, ನಿಶ್ಚಲವಾದ ಭಕ್ತಿಯನ್ನು ಮಾಡಿ ಅವರ ಅನುಗ್ರಹದಿಂದ ಧರ್ಮಾರ್ಥ - ಕಾಮಮೋಕ್ಷಗಳೆಂಬ ಪುರುಷಾರ್ಥ ಸಂಪತ್ತುಗಳನ್ನು ಪಡೆದು ಸುಖಿಸಬೇಕೆಂದು ನಾವು ಅಪೇಕ್ಷಿಸಿದ್ದೇವೆ. ಶ್ರೀಗುರುರಾಜರ ಮಹಾತ್ಮಜ್ಞಾನವೆಂದರೆ ಅವರು ಯಾರು ? ಅವರ ಮೂಲರೂಪವಾವುದು, ಅವತಾರಗಳೇನು ? ಅದರ ಮಹತ್ವವೇನು? ಎಂಬುದನ್ನು ಚೆನ್ನಾಗಿ ಅರಿಯುವುದೇ ಆಗಿದೆ. ಆದ್ದರಿಂದ ಈ ಮಹಾಮಹಿಮರ ಉಪಾಸಕರೆಲ್ಲರೂ ಇವರ ಮೂಲರೂಪ-ಅವತಾರ-ಅಮರಚರಿತಾದಿಗಳನ್ನು ಅರಿಯುವುದು ಅತ್ಯವಶ್ಯಕವಾಗಿದೆ. ಅಂತೆಯೇ ನಾವೀಗ ಆ ವಿಚಾರಗಳನ್ನು ಶ್ರೀಗುರುರಾಜರ ದಯದಿಂದ ನಮಗೆ ತಿಳಿದಿರುವಷ್ಟನ್ನು ನಿಮಗೆ ಉಪದೇಶ ಮಾಡಲಾರಂಭಿಸಿದ್ದೇವೆ” ಎಂದು ಆಜ್ಞಾಪಿಸಿದರು. ನೆರೆದ ಸಹಸ್ರಾರು ಜನರು ಪರಮಾನಂದಭರಿತರಾಗಿ ಜಯಜಯಕಾರ, ಕರತಾಡನಗಳಿಂದ ತಮ್ಮ ಸಂತೋಷವನ್ನು ಸೂಚಿಸಿದರು.
ಕರುಣಾಳುಗಳಾದ ಶ್ರೀಸುಯಮೀಂದ್ರ ಗುರುಚರಣರು ಭಕ್ತಿಪರವಶರಾಗಿ, ಧೀರಗಂಭೀರ ಧ್ವನಿಯಿಂದ ವಿದ್ದತ್ತೂರ್ಣವಾಗಿ ಶ್ರೀಗುರುರಾಜರ ಮೂಲರೂಪದ ಶ್ರೀಶಂಕುಕರ್ಣದೇವತೆಯ ಚರಿತ್ರೆ, ಅವರಿಗೆ ಬಂದ ಶಾಪರೂಪವರ, ಶ್ರೀಪ್ರಹ್ಲಾದ-ಬಾಹ್ಲಿಕ-ಶ್ರೀವ್ಯಾಸಗುರುಸಾರ್ವಭೌಮಾವತಾರ ಚರಿತ್ರೆಗಳು, ಶಂಕುಕರ್ಣರ ಕೊನೆಯ ಅವತಾರರಾದ ಶ್ರೀರಾಘವೇಂದ್ರಗುರುಸಾರ್ವಭೌಮರ ಚರಿತ್ರೆ, ಆಯಾ ಅವತಾರಗಳ ವೈಶಿಷ್ಟ, ಜ್ಞಾನ, ಭಗವದ್ಭಕ್ತಿ, ವೈರಾಗ್ಯ, ತಪಸ್ಸು, ಭಗಮತ ಅವರಲ್ಲಿ ಮಾಡಿದ ಅನಿತರಸಾಧಾರಣವಾದ ಅನುಗ್ರಹ, ಮುಂತಾಗಿ ಗುರುವರರ ಚರಿತಾಮೃತವನ್ನು ಸುಮಾರು ನಾಲೈದು ಘಂಟೆಗಳ ಕಾಲ ಉಪದೇಶ ಮಾಡಿದರು.
ಶ್ರೀಪಾದಂಗಳವರ ಮುಖಾರವಿಂದದಿಂದ ಪವಿತ್ರ ಗಂಗೆಯ ಉತ್ತುಂಗ ತರಂಗಗಳಂತೆ ಅವ್ಯಾಹತವಾಗಿ ಹೊರಹೊಮ್ಮಿದ ಶ್ರೀಗುರುಕಥಾಮೃತಪಾನ ಮಾಡಿ ಸಹಸ್ರಾರು ಜನ ಭಕ್ತರು ಪರಮಾನಂದತುಂದಿಲರಾದರು. ಮಂತ್ರಮುಗ್ಧರಾಗಿ ಕುಳಿತು ಭಕ್ತತಿಶಯದಿಂದ ಆನಂದಬಾಷ್ಪ ಹರಿಸುತ್ತಾ ಶ್ರೀಪಾದಂಗಳವರ ಅಮೃತವಾಣಿಯನ್ನಾಲಿಸುತ್ತಾ ಪುಳಕಿತಗಾತ್ರರಾಗಿ ಇಹಲೋಕ ವ್ಯಾಪಾರವನ್ನೇ ಮರೆತು ಕುಳಿತ ಭಕ್ತಜನರ ಆ ಆನಂದದ ದೃಶ್ಯ ಅಭೂತಪೂರ್ವವಾಗಿತ್ತು. ಆ ಪರಮ ಪವಿತ್ರ ದೃಶ್ಯ ಇಂದಿಗೂ ನಮ್ಮ ಚಿತ್ತಭಿತ್ತಿಯಲ್ಲಿ ಅಚ್ಚಳಿಯದೆ ಪ್ರಕಾಶಿಸುತ್ತಿದೆ. ಶ್ರೀಗಳವರ ಅಂದಿನ ಆ ಅಮೋಘ ಉಪನ್ಯಾಸ - ಅವರ ಅಮೃತವಾಣಿ
ಈಗಲೂ ನಮ್ಮ ಕರ್ಣಕುಹರಗಳಲ್ಲಿ ಪ್ರತಿಧ್ವನಿಸುತ್ತಿದೆ!
ಶ್ರೀಪಾದಂಗಳವರು ಅಂದು ಮಾಡಿದ ಉಪನ್ಯಾಸ, ತಿಳಿಸಿದ ಅಶ್ರುತ ಪೂರ್ವ ವಿಷಯಗಳು, ಶ್ರೀಗುರುರಾಯರ ಬಹುಮುಖ ವ್ಯಕ್ತಿತ್ವಪೂರ್ಣ ಭವಚಿತ್ರ, ಮಹಿಮಾತಿಶಯಗಳನ್ನು ನಾವೆಂದಿಗೂ ಮರೆಯಲು ಸಾಧ್ಯವೇ ಇಲ್ಲ!
ಅಂದು ಶ್ರೀಪಾದಂಗಳವರು ಮಾಡಿದ ಉಪನ್ಯಾಸ ನಮ್ಮ ಮನೋಭಿತ್ತಿಯಲ್ಲಿ ಅಚ್ಚಳಿಯದೇ ನಿಂತು ಅಪೂರ್ವ ಪರಿಣಾಮವನ್ನುಂಟುಮಾಡಿತು! ಶ್ರೀಸುಯಮೀಂದ್ರತೀರ್ಥ ಶ್ರೀಪಾದಂಗಳವರ ವದನಾರವಿಂದದಿಂದ ಹೊರಹೊಮ್ಮಿದ ಶ್ರೀಗುರುರಾಜರ ಮೂಲರೂಪ, ಅವತಾರಗಳ ಮಂಗಳಕರ ಚರಿತ್ರೆಯನ್ನು ಗ್ರಂಥರೂಪವಾಗೇಕೆ ಬರೆಯಬಾರದು ? ಅದನ್ನು ಶ್ರೀಗಳವರ ಉಪದೇಶದಂತೆಯೇ ಬರೆದರೆ ಅದೊಂದು ದೊಡ್ಡ ಸೇವೆಯಾಗಿ ಲಕ್ಷಾಂತರ ಭಕ್ತಜನರಿಗೆ ಭಕ್ತು ದ್ರೇಕವನ್ನುಂಟು ಮಾಡಿ ಪರಮಾನಂದವೀಯುವುದಲ್ಲವೇ ? ಎಂಬ ಭಾವನೆ ನಮ್ಮ ಮನಸ್ಸಿನಲ್ಲಿ ಒಡಮೂಡಿತು. ವಿಚಾರ ಮಾಡಿದಂತೆಲ್ಲ ಆ ಮಹತ್ಕಾರ್ಯವನ್ನು ಮಾಡಬೇಕೆಂಬ ಬಯಕೆ ಬಲವಾಯಿತು.
ನಮ್ಮ ಮನದಳಲನ್ನು ಶ್ರೀಪಾದಂಗಳವರಲ್ಲಿ ವಿಜ್ಞಾಪಿಸಿ, ಆಶೀರ್ವಾದ ಬೇಡಿದಾಗ ಶ್ರೀಗಳವರು ಹರ್ಷನಿರ್ಭರರಾಗಿ ಭಕ್ತಿಪರವಶರಾಗಿ “ಆಹಾ ಅತ್ಯಂತ ಉತ್ತಮ ವಿಚಾರ. ಶ್ರೀಗುರುರಾಜರು ನಿನ್ನಿಂದ ಈ ಮಹತೇವೆಯನ್ನು ಸ್ವೀಕರಿಸಿ ಅನುಗ್ರಹಿಸುವರು ಪ್ರಯತ್ನಿಸು. ನಿನ್ನ ಮನೋರಥ ಪೂರ್ಣವಾಗಲಿ” ಎಂದು ತುಂಬಿದ ಹೃದಯದಿಂದ ಆಶೀರ್ವದಿಸಿ ಫಲಮಂತ್ರಾಕ್ಷತೆ ಅನುಗ್ರಹಿಸಿದರು. ಅಂದಿನಿಂದಲೇ ಗ್ರಂಥರಚನೆಗೆ ವಿಷಯ-ಪ್ರಮಾಣಸಂಗ್ರಹಕಾರ್ಯ ಆರಂಭಿಸಿದೆವು. ಅನೇಕ ವರ್ಷಗಳ ಚಿಂತನ-ಮಂಥನ, ಪರಿಶ್ರಮದ ಫಲವೇ ಇಂದು ಶ್ರೀರಾಯರ ಭಕ್ತರಾದ ನೀವು ಓದುತ್ತಿರುವ ಈ “ಕಲಿಯುಗ ಕಲ್ಪತರು”!
ಶ್ರೀಗುರುರಾಜರ ಭಕ್ತರೇ! ಈಗ ಓದಿ ಆನಂದಿಸಿರಿ 'ಕಲಿಯುಗ ಕಲ್ಪತರುಗಳಾದ ಶ್ರೀಗುರುಸಾರ್ವಭೌಮರ ಮೂಲರೂಪ ಅವತಾರಗಳ ಅಮರಚರಿತೆಯನ್ನು!