ಕಲಿಯುಗ ಕಲ್ಪತರು
ನಾಲ್ಕನೆಯ ಉಲ್ಲಾಸ
ಶ್ರೀವ್ಯಾಸರಾಜಯತಿಸಾರ್ವಭೌಮರು
೨೩. ಕಂಚಿಯಲ್ಲಿ ದಿಗ್ವಿಜಯ
ಶ್ರೀವ್ಯಾಸತೀರ್ಥರು ಗುರುಗಳ ಜತೆಗೆ ಭಗವಂತನನ್ನು ಒಲಿಸಿಕೊಳ್ಳಲು ಸಾಧನವಾದ ಭಕ್ತಿ-ಜ್ಞಾನ ವಿಚಾರವಾಗಿ ವಿಚಾರ ವಿನಿಮಯ ಮಾಡುತ್ತಿದ್ದಾರೆ. ಆಗ ಕೆಲ ಮಾದ್ದರು ಬಂದು ಉಭಯ ಶ್ರೀಪಾದಂಗಳವರಿಗೆ ಅಭಿವಂದಿಸಿದರು. ಅವರಲ್ಲೊಬ್ಬರಾದ ಗೋವಿಂದ ಕೃಷ್ಣಾಚಾರ್ಯರು “ಶ್ರೀಗಳವರಲ್ಲಿ ಒಂದು ಮಹತ್ವ ವಿಚಾರವನ್ನರುಹಿ ಅಭಯವನ್ನು ಪಡೆಯಲು ಬಂದಿದ್ದೇನೆ” ಎಂದು ವಿಜ್ಞಾಪಿಸಿದರು.
ಶ್ರೀಲಕ್ಷ್ಮೀನಾರಾಯಣಮುನಿಗಳು “ಬಹಳ ಸಂತೋಷ ಹೇಳಿ” ಎಂದರು.
ಗೋವಿಂದಕೃಷ್ಣಾಚಾರ್ಯರು “ಮಹಾಸ್ವಾಮಿ ಮಾಧ್ವರು ಕಂಚಿಯಲ್ಲಿ ಬಾಳುವುದೇ ದುಸ್ತರವಾಗುವಂತಿದೆ. ಈಗ ನಾಲ್ಕಾರು ವರ್ಷಗಳಿಂದ ಅಲ್ಲಿನ ನಮ್ಮ ಮಾದ್ದ ಪಂಡಿತರೊಡನೆ ಅನೈತಿಗಳು ವಾದ ಹೂಡಿ ದೈತಸಿದ್ಧಾಂತವನ್ನು ಖಂಡಿಸುತ್ತಾ ಮೆರೆಯುತ್ತಿದ್ದಾರೆ.
ನವೀನ ನ್ಯಾಯ-ಮೀಮಾಂಸಾದಿ ದರ್ಶನಗಳಲ್ಲಿ ಹೆಚ್ಚಿನ ಪರಿಚಯವಿಲ್ಲದ ನಮ್ಮ ಮಾಧ್ವ ಪಂಡಿತರು ಪರವಾದಿಗಳ ವಾದಶೈಲಿಗೆ ಎದುರು ನಿಲ್ಲಲಾಗದೆ ನಿರುತ್ತರರಾಗುತ್ತಿದ್ದಾರೆ. ಈಗ ಪರವಾದಿಗಳು ದೈತಮತವು ಅವೈದಿಕವೆಂದೂ, ಸೂತ್ರಕಾರರಿಗೆ ಸಮ್ಮತವಲ್ಲದ ಮತವೆಂದೂ ಪ್ರಚಾರಮಾಡುತ್ತಾ ಸಿದ್ಧಾಂತ ಮೇಲೆ ದೋಷಗಳನ್ನು ಹೇರಿ ದೈತಮತಕ್ಕೆ ಕಂಟಕರಾಗಿದ್ದಾರೆ. ಇದರಿಂದಾಗಿ ಮಾದ್ದರು ತಲೆಯೆತ್ತಿ ಬಾಳದಂತಾಗಿದೆ. ಶ್ರೀಮದಾಚಾರ್ಯರ ಪರಮಸಿದ್ಧಾಂತಕ್ಕಾಗುತ್ತಿರುವ ಈ ಅಪಚಾರಗಳನ್ನು ಕಂಡು ಕಡುನೊಂದು ಇದಕ್ಕೆ ಪರಿಹಾರ ಹುಡುಕಲೂ, ಕಂಚಿಯಲ್ಲಿ ಮಾಧ್ವರು ಮತ್ತೆ ತಲೆಯೆತ್ತಿ ಗೌರವದಿಂದ ಬಾಳುವಂತೆ ಮಾಡಬೇಕೆಂದು ತಮ್ಮಲ್ಲಿ ವಿಜ್ಞಾಪಿಸಲೂ ನಾವು ಬಂದಿದ್ದೇವೆ. ಪೂಜ್ಯಪಾದರು ಕಂಚಿಯ ಮಾಧ್ವಜನತೆಯಲ್ಲಿ ಕೃಪೆದೋರಿ, ಅಲ್ಲಿಗೆ ದಯಮಾಡಿಸಿ, ಮಧ್ವಮತದ ಗೌರವವನ್ನು ಕಾಪಾಡಬೇಕಾಗಿ ಪ್ರಾರ್ಥಿಸುತ್ತೇನೆ” ಎಂದರು.
ಗೋವಿಂದ ಕೃಷ್ಣಾಚಾರ್ಯರ ಮಾತು ಕೇಳಿ ಶ್ರೀಗಳವರು “ಚಿಂತಿಸಬೇಡಿ ಪಂಡಿತರೇ, ನಿಮ್ಮ ಮನೋಭೀಷ್ಟವು ಬೇಗ ಪೂರ್ಣವಾಗುವುದು” ಎಂದು ಅಭಯವಿತ್ತು, ಶ್ರೀವ್ಯಾಸತೀರ್ಥರ ಮಂದಹಾಸ ಬೀರಿ “ಪ್ರಿಯಶಿಷ್ಯರೇ, ಕಂಚಿಯ ಸಜ್ಜನರ ಪ್ರಾರ್ಥನೆಯನ್ನು ಕೇಳಿದರಷ್ಟೆ? ನೀವು ದಿಗ್ವಿಜಯಯಾತ್ರೆಗೆ ಹೊರಡುವ ಕಾಲವೀಗ ಪ್ರಾಪ್ತವಾಗಿದೆ! ವಿಜಯಯಾತ್ರೆಗೆ ಸಿದ್ಧರಾಗಿರಿ” ಎಂದು ಆಜ್ಞಾಪಿಸಿದರು.
ಗುರುಗಳವರ ಆಜ್ಞೆಗಾಗಿ ಬಹುದಿನದಿಂದ ನಿರೀಕ್ಷಿಸುತ್ತಿದ್ದ ಶ್ರೀವ್ಯಾಸರಾಜರು 'ಪೂಜ್ಯಗುರುಪಾದರ ಆಜ್ಞೆಯನ್ನು ಶಿರಸಾಧರಿಸಿದ್ದೇನೆ” ಎಂದು ಬಿನ್ನವಿಸಿದರು.
ಕುಚೆಯಿಂದ ಬಂದಿದ್ದ ಪಂಡಿತರು-ಧರ್ಮಾಭಿಮಾನಿಗಳಿಗೆ ತಮ್ಮ ನಿಯೋಗವು ಯಶಸ್ವಿಯಾಯಿತೆಂದು ಹರ್ಷವಾಯಿತು. ಶ್ರೀಲಕ್ಷ್ಮೀನಾರಾಯಣಮುನಿಗಳ ಆದೇಶದಂತೆ ಕಂಚಿ ದಿಗ್ವಿಜಯಕ್ಕೆ ಹೊರಡಲು ಸಕಲ ಸಿದ್ಧತೆಗಳಾಗಹತ್ತಿದವು.
ಒಂದು ಶುಭದಿನ ಶ್ರೀವ್ಯಾಸರಾಜರು ಶ್ರೀಮಠದ ಹತ್ತಾರು ಜನ ಪಂಡಿತರು, ವಿದ್ಯಾರ್ಥಿಗಳು, ಮಿತ ಪರಿವಾರದೊಡನೆ ಕಂಚಿಯಿಂದ ಬಂದಿದ್ದ ಮಾಧ್ವಜನರೊಡನೆ ಮುಳಬಾಗಿಲಿನಲ್ಲಿ ಪ್ರಖ್ಯಾತವಾದ ಶ್ರೀನರಸಿಂಹದೇವರ ದರ್ಶನಮಾಡಿ, ಪ್ರಾರ್ಥನೆ ಸಲ್ಲಿಸಿ, ಗುರುಗಳಿಗೆ ನಮಸ್ಕರಿಸಿ, ಆಶೀರ್ವಾದ ಪಡೆದು ಉತ್ಸಾಹದಿಂದ ದಿಗ್ವಿಜಯಯಾತ್ರೆಯನ್ನು ಕೈಕೊಂಡು ಪ್ರಯಾಣ ಬೆಳೆಸಿದರು.
ದಕ್ಷಿಣಭಾರತದ ವಿದ್ಯಾಕೇಂದ್ರಗಳಲ್ಲಿ ಕಂಚಿಯೂ ಒಂದು ಉತ್ತಮ ವಿದ್ಯಾಕೇಂದ್ರ. ಉತ್ತರಭಾರತದಲ್ಲಿ ವಿಖ್ಯಾತವಾದ ಕಾಶಿ, ಮಿಥಿಲಾ, ನವದ್ವೀಪಗಳಂತೆ ಕಾಂಚೀನಗರ ವಿದ್ಯೆಯ ಕೇಂದ್ರವೆನಿಸಿ ಹೆಸರು ಗಳಿಸಿತ್ತು. ಅಲ್ಲಿ ದೊಡ್ಡದೊಂದು ವಿದ್ಯಾಪೀಠವಿದ್ದು ಕಂಚಿಯ ರಾಜನಾದ ಸಂಭವರಾಯನ ಆಶ್ರಯದಲ್ಲಿ ಬಹುವಾಗಿ ಅಭಿವೃದ್ಧಿಸಿದ್ದಿತು. ಯಜನ-ಯಾಜನ ವಿಶಾರದರೂ, ಕರ್ಮಠರೂ ಆದ ಅನೇಕ ಪ್ರೋತ್ರೀಯರಿಂದ ವಿರಾಜಿಸಿದ್ದ ತುಂಡೀರಮಂಡಲವು ದಕ್ಷಿಣಭಾರತದ ಪ್ರಮುಖ ಆಕರ್ಷಣೆಯಾಗಿದ್ದಿತು.
ಕುಚಿಯರಾಜ ಸಂಭವರಾಯನು ಅದೈತಪಕ್ಷಪಾತಿಯಾಗಿದ್ದರೂ ತನ್ನ ರಾಜ್ಯದಲ್ಲಿ ಅದೈತ-ವಿಶಿಷ್ಟಾದೈತ- ದೈತಮತಗಳಿಗೆ ವಿಶೇಷ ಪ್ರೋತ್ಸಾಹ ನೀಡುತ್ತಾ ವಿದ್ಯಾಪಕ್ಷಪಾತಿಯೆಂದು ಹೆಸರು ಗಳಿಸಿದ್ದನು. ಶ್ರೀವ್ಯಾಸತೀರ್ಥರು ದಯಮಾಡಿಸಿದ ವಿಚಾರವರಿತು ರಾಜನು ಗೌರವದಿಂದ ಅವರಿಗೆ ಸ್ವಾಗತ ನೀಡಿದನು.
ಕಂಚಿಯ ಧರ್ಮಾಭಿಮಾನಿಗಳು ಶ್ರೀಪಾದಂಗಳವರನ್ನು ವಾದವೈಭವ, ವೇದಘೋಷ, ಪಾರ್ಣಕುಂಭಗಳೊಡನೆ ಸ್ವಾಗತಿಸಿ, ಪಾಲಕಿಯಲ್ಲಿ ಗುರುಗಳನ್ನು ಕೂಡಿಸಿ, ಮೆರವಣಿಗೆಯಲ್ಲಿ ಕರೆತಂದು, ಭವ್ಯಮಠದಲ್ಲಿ ಬಿಡಾರ ಮಾಡಿಸಿದರು.
ಶ್ರೀಗಳವರು ಮರುದಿನವೇ ಮಿತಪರಿವಾರದೊಡನೆ ಶ್ರೀವರದರಾಜಸ್ವಾಮಿ, ಶ್ರೀಏಕಾಂಬರೇಶ್ವರಸ್ವಾಮಿ, ಕಾಮಾಕ್ಷೀದೇವಿಯರ ದರ್ಶನ ಮಾಡಿ ಪ್ರಾರ್ಥಿಸಿ ಬಂದರು. ನಾಲ್ಕಾರು ದಿನಗಳು ಕಳೆದ ಮೇಲೆ ಕಂಚಿಯ ರಾಜ ಶ್ರೀಗಳವರು ಸಂತೋಷದಿಂದ ವಿದ್ಯಾಪೀಠಕ್ಕೆ ಭೇಟಿ ನೀಡಿದರು. ಆಗ ಅವರಿಗೆ ಅಲ್ಲಿನ ಪಂಡಿತರ ಪರಿಚಯವಾಯಿತು. ಶ್ರೀಯವರನ್ನು ಮಹಾರಾಜರು ಆಹ್ವಾನಿಸಿದ್ದು, ಗೌರವ ಸಲ್ಲಿಸಿದ್ದು ಅಲ್ಲಿನ ಪಂಡಿತ ಮಂಡಲಿಗೆ ಅಷ್ಟಾಗಿ ಹಿಡಿಸಿರಲಿಲ್ಲ. ಅದು ಅವರ ನಡವಳಿಕೆಗಳಿಂದ ಸ್ಪಷ್ಟವಾಯಿತು. ತಮ್ಮ ವಿದ್ಯಾಪೀಠದ ಗೌರವವನ್ನು, ಶ್ರೀಗಳವರು ತಮ್ಮ ವಿದ್ಯೆಯ ಮಹತ್ವವನ್ನು ಪ್ರದರ್ಶಿಸಿ ಪಡೆಯಲಿ ಎಂಬ ಅಭಿಪ್ರಾಯ ಅಲ್ಲಿನ ಪಂಡಿತರಿಗಿರುವುದೆಂಬುದನ್ನು ಚಾಣಾಕ್ಷರಾದ ಶ್ರೀವ್ಯಾಸತೀರ್ಥರು ಮನಗಂಡರು. ಅದು ಒಂದು ಸವಾಲೆನಿಸಿತು. ಗುರುಗಳು ಅವರ ಆಹ್ವಾನವನ್ನು ಸ್ವೀಕರಿಸಿದರೋ ಎಂಬಂತೆ ಎಲ್ಲ ಪಂಡಿತರಿಗೂ ಶ್ರೀಮಠಕ್ಕೆ ಬರಲು ಆಹ್ವಾನ ನೀಡಿದರು. “ಪಂಡಿತ ಶ್ರೇಷ್ಠರೇ, ನಮ್ಮ ಮಠದಲ್ಲಿ ಎಲ್ಲಾಶಾಸ್ತ್ರಗಳಿಗೂ ಗೌರವವಿದೆ. ಯಾರು ಬೇಕಾದರೂ, ಯಾವುದೇ ಶಾಸ್ತ್ರದಲ್ಲಾದರೂ ತಮ್ಮ ಪಾಂಡಿತ್ಯವನ್ನು ಪ್ರದರ್ಶಿಸಿ ಶ್ರೀಮಠದಿಂದ ಗೌರವ, ಬಹುಮಾನಗಳನ್ನು ಪಡೆಯಬಹುದು. ನಾವು ವಿಖ್ಯಾತರಾದ, ಸಕಲಶಾಸ್ತ್ರಕೋವಿದರಾದ ಕಂಚಿಯ ಪಂಡಿತರುಗಳ ಪರಿಚಯ ಮಾಡಿಕೊಳ್ಳಲೆಂದೇ ಇಲ್ಲಿಗೆ ಬಂದಿದ್ದೇವೆ. ಶ್ರೀಮದಾಚಾರ್ಯರ ಮಹಾಸಂಸ್ಥಾನಾಧಿಪತಿಗಳಾದ ನಮಗೆ ದೈತಸಿದ್ಧಾಂತ ಪ್ರತಿಷ್ಠಾಪನೆಯು ಆದ್ಯಕರ್ತವ್ಯವಲ್ಲವೇ? ನೀವೆಲ್ಲರೂ ಬರುತ್ತೀರಿ ಎಂದು ನಾವು ನಂಬಿದ್ದೇವೆ” ಎಂದು ಸೂಚ್ಯವಾಗಿಯೇ ಆಹ್ವಾನಿಸಿ ಶ್ರೀಮಠಕ್ಕೆ ಮರಳಿ ಬಂದರು.
ವಿದ್ಯಾಮದದಿಂದ ಉನ್ಮತ್ತರಾಗಿದ್ದ ವಿದ್ಯಾಪೀಠದ ವಿದ್ವಜ್ಜನರಿಗೆ ಆಂತರ್ಯವನ್ನರಿತೇ ಶ್ರೀಗಳವರು ತಮ್ಮ ವಿದ್ಯಾಪ್ರೌಢಿಮೆಯನ್ನು ಪರೀಕ್ಷಿಸಲು ಶ್ರೀಮಠಕ್ಕೆ ಆಹ್ವಾನಿಸಿದ್ದಾರೆಂಬುದು ವಿದಿತವಾಯಿತು. ಅವರಿಗೆ ಶ್ರೀವ್ಯಾಸರಾಜರು ಆಹ್ವಾನವಿತ್ತಿದ್ದು ತಮ್ಮ ಮನೋಭೀಷ್ಟಸಿದ್ಧಿಗೆ ದಾರಿಯಾಯಿತೆಂದೂ, ಈ ತರುಣ ಸನ್ಯಾಸಿಗಳನ್ನು ಜಯಿಸಿಬಿಟ್ಟರೆ, ಕಂಚಿಯಲ್ಲಿ ಮಧ್ವಸಿದ್ಧಾಂತದ ಇತಿಶ್ರೀಯಾಗುವುದೆಂದೂ ಭಾವಿಸಿದ ಆ ಗರ್ವಿಷ್ಟ ಪಂಡಿತರು ಉಬ್ಬಿದರು. ಸರಿ, ಪ್ರಾರಂಭವಾಯಿತು ವಿವಿಧ ವಿದ್ಯಾವಿಶಾರದ ಪಾಂಡಿತ್ಯ ಪ್ರದರ್ಶನ!
ಶ್ರೀವ್ಯಾಸರಾಜರ ಮಠಕ್ಕೆ ಅನೇಕ ಪಂಡಿತರು ಬರಲಾರಂಭಿಸಿದರು. ಬಂದ ಪಂಡಿತರು ಬಹುವಿನಯವನ್ನು ಪ್ರದರ್ಶಿಸುತ್ತಾ ಮನದಲ್ಲಿ ಶ್ರೀಗಳವರನ್ನು ಸೋಲಿಸಬೇಕೆಂಬ ಮಹತ್ವಾಕಾಂಕ್ಷೆಯುಳ್ಳವರಾಗಿದ್ದರು. ಶ್ರೀವ್ಯಾಸತೀರ್ಥರು ಅವರ ಆಂತರ್ಯವನ್ನು ಬಲ್ಲವರಾದ್ದರಿಂದ ಮಂದಹಾಸದಿಂದ ಅವರನ್ನು ಸ್ವಾಗತಿಸುತ್ತಿದ್ದರು.
ಶ್ರೀಗಳವರು ವಿಷಯ ವಿಚಾರ ಪ್ರಾರಂಭಿಸಿದಾಗ ತಾವೇ ವಾಖ್ಯಾರ್ಥಕ್ಕಿಳಿಯುತ್ತಿರಲಿಲ್ಲ. ಮೊದಲು ಮಠದ ಪಂಡಿತರನ್ನು ಮುಂದುಮಾಡುತ್ತಿದ್ದರು. ವಾಖ್ಯಾರ್ಥವು ಚೆನ್ನಾಗಿಯೇ ಜರುಗುತ್ತಿತ್ತು. ಮಠೀಯ ವಿದ್ವಾಂಸರು ಕೆಲವು ಪಂಡಿತರನ್ನು ಜಯಿಸುತ್ತಿದ್ದರು. ಕೆಲವೊಮ್ಮೆ ಅವರ ಕೈಮೀರುವ ಪ್ರಸಂಗ ಬರುತ್ತಿತ್ತು. ಆಗ ಶ್ರೀವ್ಯಾಸತೀರ್ಥರು ವಿಷಯ ವಿಚಾರವನ್ನು ಕೈಗೆತ್ತಿಕೊಂಡು ಉಭಯವಾದಿಗಳು ಅದುವರೆಗೆ ವಾದಿಸಿದ ವಿಷಯಗಳನ್ನು ಅನುವಾದ ಮಾಡಿ ಅದರಮೇಲೆ ಪರವಾದಿಗಳು ಮಂಡಿಸಿದ ವಿಚಾರವನ್ನು ಖಂಡಿಸಿ, ಕೋಟಿಕ್ರಮವನ್ನು ಹೇಳುತ್ತಿದ್ದರು.
" ಶ್ರೀವ್ಯಾಸರಾಜರು ವಾದಕ್ಕಿಳಿದ ಮೇಲೆ, ವಾಖ್ಯಾರ್ಥಕ್ಕೆ ಕಳೆಯೇರುತ್ತಿತ್ತು. ಒಳ್ಳೆಯ ಹುರುಪಿನಿಂದ ವಾಖ್ಯಾರ್ಥವು ಜರುಗುತ್ತಿತ್ತು. ಕೊನೆಗೆ ಶ್ರೀಗಳವರ ಪ್ರಕಾಂಡ ಪಾಂಡಿತ್ಯ, ಪ್ರತಿಭೆ, ತರ್ಕಶೈಲಿಯ ಶಾಬ್ದಬೋಧಕ್ರಮದ ಅನುವಾದ, ಪ್ರಮಾಣೋದಾಹರಣ ಚಾತುರ್ಯ, ವಾ ಭವಗಳ ಮುಂದೆ ನಿಲ್ಲಲಾಗದೆ ಪರವಾದಿಗಳು ನಿರುತ್ತರರಾಗುತ್ತಿದ್ದರು. ಉದಾರಹೃದಯರಾದ ಸ್ವಾಮಿಗಳು ಪರಾಜಿತರಾದ ಪಂಡಿತರನ್ನು ಸಂಭಾವನಾದಿಗಳಿಂದ ವಿಶೇಷವಾಗಿ ಗೌರವಿಸಿ, ಕಳುಹಿಸುತ್ತಿದ್ದರು. ಇದರಿಂದಾಗಿ ಗುರುಗಳ ಕೀರ್ತಿ ವ್ಯಾಪಿಸಹತ್ತಿತು. ಪರಮತೀಯ ಪಂಡಿತರೂ ಶ್ರೀವ್ಯಾಸರಾಜರ ಅದ್ವಿತೀಯ ಪಾಂಡಿತ್ಯ, ಪ್ರತಿಭೆ, ವಾದಶೈಲಿಗಳನ್ನೂ, ಪಂಡಿತ ಪಕ್ಷಪಾತ, ಔದರ್ಯಾದಿ ಗುಣಗಳನ್ನೂ ಹೊಗಳುತ್ತಿದ್ದರು. ದಿನೇ ದಿನೇ ಶ್ರೀವ್ಯಾಸರಾಜರ ಶ್ರೀಮಠವು ಸರಸ್ವತೀಮಂದಿರವೆನಿಸಿ ಪಂಡಿತರ ಯಾತ್ರಾಸ್ಥಳವಾಗಿ ಪರಿಣಮಿಸಹತ್ತಿತು.
ಕಾಂಚೀಪುರದಲ್ಲಿ ಆಸ್ತಿಕ ದರ್ಶನಗಳಲ್ಲಿ ಪರಿಣತರಾದ ಪಂಡಿತರಿದ್ದಂತೆ ನಾಸ್ತಿಕ ದರ್ಶನಗಳಲ್ಲಿ ಪ್ರಭುತ್ವ ಪಡೆದಿದ್ದ ಪ್ರಬಲ ಪಂಡಿತರಿಗೇನೂ ಕೊರತೆಯಿರಲಿಲ್ಲ. ಶ್ರೀಪಾದಂಗಳವರ ವಿದ್ಯಾವಿಲಾಸಕೀರ್ತಿಯನ್ನು ಕೇಳಿ ಪ್ರಬಲರಾದ ಬೌದ್ಧ, ಜೈನ ಮತಾನುಯಾಯಿಗಳಾದ ಪಂಡಿತರು ಶ್ರೀವ್ಯಾಸರಾಜತೀರ್ಥರಲ್ಲಿಗೆ ಬಂದು ವಾದ ಮಾಡಿ ಪರಾಜಿತರಾದರು.
ಇದರಂತೆ ಪ್ರಾಚೀನ-ನವೀನ ನ್ಯಾಯಶಾಸ್ತ್ರಕೋವಿದರು, ಮೀಮಾಂಸಾಶಾಸ್ತ್ರ ಪರಿಣಿತರು, ವೇದವಿದ್ಯಾವಿಶಾರದರೇ ಮೊದಲಾದ ವಿವಿಧ ಶಾಸ್ತ್ರಪಾರಂಗತರು ಶ್ರೀಗಳವರೊಡನೆ ವಾಖ್ಯಾರ್ಥ ಮಾಡಿ ಸೋಲನ್ನೊಪ್ಪುತ್ತಿದ್ದರು. ಇದರಿಂದ ಶ್ರೀಗಳವರ ಕೀರ್ತಿ ಮತ್ತಷ್ಟು ಪ್ರಖ್ಯಾತವಾಯಿತು.
ಆನಂತರ ವಿಖ್ಯಾತರಾಗಿದ್ದ ಶೈವ ಅದೈತ-ವಿಶಿಷ್ಟಾದ್ರೆತ ಮತಗಳ ಪಂಡಿತ ಶ್ರೇಷ್ಠರು ದೈತಸಿದ್ಧಾಂತದ ಮೇಲೆ ದುರ್ಧರದೋಷಗಳನ್ನು ಹೇರಿ, ದೈತಮತವು ಅವೈದಿಕವೆಂದೂ, ಸೂತ್ರ-ಶ್ರುತಿ-ಸ್ಕೃತಿ-ಪುರಾಣ-ಗೀತಾ ಮತ್ತು ಇತಿಹಾಸಾದಿ ಪ್ರಮಾಣಗಳಿಗೆ ವಿರುದ್ಧವಾದುದರಿಂದ ದೈತಮತವು ಅನುಪಾದೇಯವೆಂದೂ ವಾದಿಸಹತ್ತಿದರು.
ಅದುವರೆಗೆ ಜರುಗಿದ ಅನೇಕ ವಾಖ್ಯಾರ್ಥಗಳಿಗಿಂತ ಈ ದೈತಾದ್ವತ ವಾಖ್ಯಾರ್ಥವು ಎಲ್ಲ ವಿಧದಿಂದ ಅತ್ಯಂತ ಪ್ರಬಲವಾಗಿತ್ತು. ಅಂತೆಯೇ ನಾಲ್ಕಾರು ಜನ ಸಕಲಶಾಸ್ತ್ರಪಾರೀಣರಾದ ಪ್ರಕಾಂಡಪಂಡಿತರನ್ನು ವಾದಮಧ್ಯಸ್ಥರನ್ನಾಗಿ ಏರ್ಪಡಿಸಿ, ವಾದನಿಯಮಗಳನ್ನು ತೀರ್ಮಾನಿಸಲಾಗಿದ್ದು, ಜಯಾಪಜಯಗಳ ತೀರ್ಪು ನೀಡುವ ಅಧಿಕಾರವನ್ನವರಿಗೆ ಕೊಡಲಾಗಿತ್ತು.
ಶ್ರೀವ್ಯಾಸರಾಜರಿಗೀಗ ತಮ್ಮ ನಿಜವಾದ ವೈದುಷ್ಯ, ಪ್ರತಿಭೆ, ಷಡರ್ಶನಗಳಲ್ಲಿದ್ದ ಪ್ರೌಢಿಮೆಗಳನ್ನೂ, ವಾದಚಾತುರ್ಯವನ್ನು ಪ್ರದರ್ಶಿಸಿ ಶ್ರೀಹರಿ-ವಾಯುಗಳ ಸೇವೆ ಮಾಡುವ ಸದವಕಾಶ, ಸಿದ್ಧಾಂತ ಸ್ಥಾಪನೆಯ ಸೌಭಾಗ್ಯಗಳು ತಾನಾಗಿ ದೊರಕಿತ್ತು.
ಶ್ರೀವ್ಯಾಸರಾಜರು-ಅದೈತ ಪಂಡಿತರಲ್ಲಿ, ಹತ್ತಾರು ದಿನಗಳವರೆಗೆ ಬಹು ಭರದಿಂದ ವಾಖ್ಯಾರ್ಥವಾಯಿತು. ಶ್ರೀಪಾದಂಗಳವರು ಪ್ರತಿವಾದಿಗಳ ಎಲ್ಲಾ ಯುಕ್ತಿ-ಪ್ರಮಾಣ-ಗುಂಭಿತವಾದ ಅದೈತಮಂಡನಪರ ವಾದವನ್ನು ಶತಶಃ ಖಂಡಿಸಿ, ದೈತತತ್ತ್ವಗಳನ್ನು ಬಲವಾಗಿ ಪ್ರತಿಪಾದಿಸಿ ಶ್ರುತಿ, ಸ್ಮೃತಿ, ಪುರಾಣ, ಗೀತಾ, ಭಾಗವತ-ರಾಮಾಯಣ-ಭಾರತ ಮತ್ತು ಬ್ರಹ್ಮಸೂತ್ರಗಳನ್ನು ಉದಾಹರಿಸಿ ವೇದಾದಿ ಸಕಲ ಪ್ರಮಾಣಗಳಿಂದ ಸಿದ್ಧವಾಗುವ ಸಿದ್ದಾಂತವೆಂದರೆ, ಶ್ರೀಸೂತ್ರಕಾರರಿಗೆ ಪರಮ ಸಮ್ಮತವಾದ ಶ್ರೀಮತ್ತೂರ್ಣಪ್ರಜ್ಞರ ದೈತಸಿದ್ಧಾಂತವೊಂದೇ ಎಂದು ತಮ್ಮ ಅನಿತರ ಸಾಧಾರಣ ಪ್ರಜ್ಞಾತಾಂಡವ, ವಾದವೈಖರಿ, ನವನವೋನ್ಮಷ್ಠಿತ ಪ್ರತಿಭೆಗಳಿಂದ ಸಾಧಿಸಿದರು. ಪುಂಖಾನುಪುಂಖವಾಗಿ ಶ್ರೀರಾಮನ ಬಿಲ್ಲಿನಿಂದ ಹೊರಹೊಮ್ಮುವ ಶರಾಘಾತಗಳಿಂದ ತತ್ತರಿಸಿದ ಪ್ರತಿಭಟರಂತೆ ಶ್ರೀಯವರ ಮುಖಾರವಿಂದದಿಂದ ಹೊರಹೊಮ್ಮುತ್ತಿದ್ದ ವಾಗೈಖರಿಯ ಮುಂದೆ ನಿಲ್ಲಲಾಗದೆ ಎಲ್ಲ ಪರವಾದಿಗಳೂ ನಿರುತ್ತರರಾಗಿ ತಲೆತಗ್ಗಿಸಿ ಕುಳಿತರು! ಉಭಯ ಪಂಡಿತರ ವಾಖ್ಯಾರ್ಥಗಳನ್ನು ಕೇಳಿ ವಿವೇಚಿಸಿದ ವಾದಮಧ್ಯಸ್ಥರು ಶ್ರೀವ್ಯಾಸರಾಜರು ವಿಜಯಶಾಲಿಗಳಾದರೆಂದು ಘೋಷಿಸಿದರು! ವಾಖ್ಯಾರ್ಥವನ್ನು ಕೇಳುತ್ತಿದ್ದ ಸಭಿಕರು ಪ್ರಚಂಡ ಕರತಾಡನ ಜಯಘೋಷಗಳಿಂದ ತೇಜಸ್ವೀ ತರುಣ ಸನ್ಯಾಸಿಗಳಾದ ಶ್ರೀವ್ಯಾಸತೀರ್ಥರ ವಿಜಯವನ್ನು ಸ್ವಾಗತಿಸಿ ಪರಮಾನಂದತುಂದಿಲರಾದರು.
ಆನಂತರ ಶ್ರೀವ್ಯಾಸತೀರ್ಥರು ಎಲ್ಲ ಪರವಾದಿ ಪಂಡಿತರುಗಳೊಡನೆ ಸೌಹಾರ್ದದಿಂದಲೇ ವರ್ತಿಸಿ, ಅವರ ಪಾಂಡಿತ್ಯ ಪ್ರತಿಭೆಗಳನ್ನು ಶ್ಲಾಘಿಸಿ, ಪರವಾದಿಗಳು ಶ್ರೇಷ್ಠ ಪಂಡಿತರೆಂದೂ, ಅವರ ಪರಾಜಯಕ್ಕೆ ಮತದೌರ್ಬಲ್ಯವು ಕಾರಣವೇ ಹೊರತು ಮತಿದೌರ್ಬಲ್ಯವಲ್ಲ ಎಂದೂ ಹೇಳಿ ಎಲ್ಲ ಪರಮತೀಯ ಪಂಡಿತರನ್ನೂ ವಿಶೇಷ ಸಂಭಾವನಾದಿಗಳಿಂದ ಗೌರವಿಸಿ ಸಕಲರ ಶ್ಲಾಘನೆಗೆ ಪಾತ್ರರಾದರು.
ವಾದದಲ್ಲಿ ಜಯ ಗಳಿಸಿದ್ದರೂ ಪರಮತೀಯ ವಿದ್ವಾಂಸರನ್ನೂ ಸ್ನೇಹ ಸೌಹಾರ್ದದಿಂದ ಗೌರವಿಸಿ ಅವರ ಪಾಂಡಿತ್ಯವನ್ನು ಹೊಗಳಿದ ಶ್ರೀವ್ಯಾಸರಾಜರ ಉದಾರಗುಣ, ವಿದ್ಯಾಪಕ್ಷಪಾತಾದಿಗಳನ್ನು ಕಂಡು ಅಚ್ಚರಿಗೊಂಡ ಪರವಾದಿಗಳು ಶ್ರೀಯರನ್ನು ಮುಕ್ತಕಂಠದಿಂದ ಹೊಗಳಿದರು. ಇದು ಶ್ರೀವ್ಯಾಸತೀರ್ಥರ ದಿಗ್ವಿಜಯ ಪರಂಪರೆಯಲ್ಲಿ ಒಂದು ಮೈಲುಗಲ್ಲೆಂದು ಧಾರಾಳವಾಗಿ ಹೇಳಬಹುದು. ಕಂಚಿಯ ದಿಗ್ವಿಜಯವು ಅವರ ವಾದಿದಿಗ್ವಿಜಯ ಚರಿತೆಯ ನಾಂದೀಪದ್ಯವಾಗಿ ಪರಿಣಮಿಸಿತೆಂದು ಹೇಳಿದರೆ ತಪ್ಪಾಗಲಾರದು.
ಶ್ರೀವ್ಯಾಸರಾಜರ ಅಪೂರ್ವ ದಿಗ್ವಿಜಯ ವಿಚಾರ ತಿಳಿದು ಕಂಚಿಯ ಮಹಾರಾಜನಿಗೆ ಅಪಾರ ಆನಂದವಾಯಿತು. ಪ್ರಥಮ ದರ್ಶನದಲ್ಲಿಯೇ ಪ್ರಭಾವಿತನಾಗಿದ್ದ ಕಂಚಿಯ ದೊರೆ ಶ್ರೀಪಾದಂಗಳ ಮಹಿಮಾತಿಶಯಗಳನ್ನು ಕೇಳಿದ ಮೇಲಂತೂ ಅತ್ಯಂತ ಮುಗ್ಧನಾದನು. ಶ್ರೀಗಳವರಲ್ಲಿ ಅವನಿಗೆ ಬಹು ಭಕ್ತಿ-ಶ್ರದ್ಧೆಗಳುಂಟಾದವು. ಅವನು ಗುರುಗಳನ್ನು ವಿಶೇಷ ರೀತಿಯಿಂದ ಸನ್ಮಾನಿಸಬೇಕೆಂದು ಬಯಸಿದನು. ಅದಕ್ಕೆ ಒಂದು ಅವಕಾಶ ತಾನಾಗಿ ಒದಗಿ ಬಂದಿತು.
ಶ್ರೀಪಾದಂಗಳವರೊಡನೆ ವಾದಮಾಡಿ ಪರಾಜಿತರಾದ ನಿರ್ಮಾತ್ಪರ್ಯಬುದ್ಧಿಯ ಅನೇಕ ಪಂಡಿತರು, ಕಂಚಿಯ ನಾಗರಿಕರು, ಧಾರ್ಮಿಕರು ಸರಸ್ವತಿಯ ಅಪರಾವತಾರರೆನಿಸಿದ ಶ್ರೀಗಳವರನ್ನು ಅಭೂತಪೂರ್ವ ರೀತಿಯಲ್ಲಿ ಕಂಚಿಯ ಮಹಾರಾಜರ ಅಧ್ಯಕ್ಷತೆಯಲ್ಲಿ ಗೌರವಿಸಬೇಕೆಂದು ನಿಶ್ಚಯಿಸಿ ಮಹಾರಾಜರನ್ನು ಆ ವಿಚಾರವಾಗಿ ಭೇಟಿ ಮಾಡಿ ಕೋರಿದರು. ಇದರಿಂದ ಮಹಾರಾಜನಿಗೆ ಹರ್ಷವಾಯಿತು. ಆನಂತರ ವಿಚಾರವಿನಿಮಯ ಮಾಡಿ ಅರಮನೆಯಲ್ಲಿಸನ್ಮಾನ ಸಮಾರಂಭವು ಮಹಾರಾಜರ ಅಧ್ಯಕ್ಷತೆಯಲ್ಲಿ ನೆರವೇರಬೇಕೆಂದೂ, ಶ್ರೀಗಳವರನ್ನು ಸಮಸ್ತ ರಾಜಮರ್ಯಾದೆಯೊಡನೆ ಮೆರವಣಿಗೆಯೊಡನೆ ಕರೆತಂದು ಮಹಾಪ್ರಭುಗಳ ಅಧ್ಯಕ್ಷತೆಯಲ್ಲಿ ಸನ್ಮಾನಿಸುವುದೆಂದೂ ತೀರ್ಮಾನವಾಗಿ ಅದಕ್ಕೆ ತಕ್ಕ ವ್ಯವಸ್ಥೆಗಳು ಭರದಿಂದ ಜರುಗಹತ್ತಿದವು.
ಒಂದು ಪ್ರಾತಃಕಾಲ ಶ್ರೀಗಳವರು ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಾ ಕುಳಿತಿರುವಾಗ ಕಂಚಿಯ ಪ್ರಮುಖ ಪಂಡಿತರು, ದರ್ಬಾರಿನ ಗಣ್ಯರು, ರಾಜಪುರೋಹಿತರು, ಧರ್ಮಾಭಿಮಾನಿ ಪುರಪ್ರಮುಖರುಗಳು ಬಂದು ಶ್ರೀಯವರ ದರ್ಶನ ಪಡೆದು ಅವರನ್ನು ಸನ್ಮಾನಿಸಲು ನಿಶ್ಚಯಿಸಿರುವ ವಿಚಾರವನ್ನು ವಿವರವಾಗಿ ವಿಜ್ಞಾಪಿಸಿ, ತಮ್ಮ ಅಪೇಕ್ಷೆಯನ್ನು ಪೂರೈಸಿಕೊಟ್ಟು ಅನುಗ್ರಹಿಸಬೇಕೆಂದು ಬಿನ್ನವಿಸಿದರು.
ಶ್ರೀವ್ಯಾಸರಾಜಸ್ವಾಮಿಗಳವರು ಅವರ ಮಾತನ್ನಾಲಿಸಿ ನಸುನಕ್ಕು “ವಿದ್ವಜ್ಜನರೇ, ನಮಗೆ ಸನ್ಮಾನವೇ? ಸನ್ಯಾಸಿಗೆಂಥ ಸನ್ಮಾನ? ಸನ್ಮಾನಿತರಾಗುವ ಅದಾವ ಮಹತ್ಕಾರ್ಯ ನಾವೆಸಗಿದ್ದೇವೆ? ಒಂದು ಸಂಸ್ಥಾನಾಧಿಪತಿಗಳಾಗಿ, ಪೀಠಾಧೀಶರು ಮಾಡಬೇಕಾದ ಕರ್ತವ್ಯವನ್ನು ಮಾತ್ರ ನಾವು ಮಾಡುತ್ತಿದ್ದೇವೆ. ಅದು ನೈಜ ಕರ್ತವ್ಯವೇ ಆಗಿರುತ್ತದೆ. ಇದಕ್ಕಾಗಿ ನಮ್ಮನ್ನು ಸನ್ಮಾನಿಸುವುದು ಅಷ್ಟು ವಿಹಿತವೆನಿಸಲಾರದು. ನಮಗೆ ಅದಾವ ಆಶೆ-ಆಕಾಂಕ್ಷೆಗಳೂ ಇಲ್ಲ. ನೀವು ಈ ಸಮಾರಂಭವನ್ನು ಇಟ್ಟುಕೊಂಡಿದ್ದು ನಮಗೆ ಸರಿಯೆನಿಸುವುದಿಲ್ಲ” ಎಂದು ಅಪ್ಪಣೆ ಕೊಡಿಸಿದರು.
ಶ್ರೀವ್ಯಾಸತೀರ್ಥರ ವಚನವನಾಲಿಸಿ ವಿದ್ವಜ್ಜನರು ಅಚ್ಚರಿಗೊಂಡರು. ಶ್ರೀಗಳವರು ನಿಷ್ಕಾಮಕರ್ಮಯೋಗಿಗಳೆಂದು ಅವರು ಮನಗಂಡರು. ವಿನಯದಿಂದ “ಪೂಜ್ಯರೇ, ನಾವು ತಮ್ಮನ್ನು ವೈಯಕ್ತಿಕವಾಗಿ ಗೌರವಿಸುತ್ತಿಲ್ಲ. ವಿದ್ಯಾಕೇಂದ್ರವಾದ ಕಂಚಿಯ ವಿದ್ವದ್ವಂದವು ಶ್ರೇಷ್ಠಜ್ಞಾನಿಗಳೂ, ಪರಮಹಂಸಕುಲತಿಲಕರೂ ಆದ ಓರ್ವ ಮಹನೀಯರಲ್ಲಿ ಅಂತರ್ಗತಳಾಗಿರುವ ವಿದ್ಯಾದೇವಿ ಶ್ರೀಸರಸ್ವತೀದೇವಿಗೆ, ಪರಮಾತ್ಮನಿಗೆ ನಮ್ಮ ಭಕ್ತಿಯನ್ನೂ, ಗೌರವವನ್ನೂ ಸಮರ್ಪಿಸಿ ಕೃತಾರ್ಥರಾಗಬಯಸಿದ್ದೇವೆ, ಅಷ್ಟೇ! ವಿದ್ಯಾಪಕ್ಷಪಾತಿಗಳಾದ ಮಹಾರಾಜರ ಮನೋರಥವನ್ನು ಪೂರ್ಣಮಾಡಬೇಕು” ಎಂದು ಪ್ರಾರ್ಥಿಸಿದರು.
ಶ್ರೀವ್ಯಾಸರಾಜರು ಪಂಡಿತರ, ಶಿಷ್ಯರ, ಭಕ್ತಜನರ ಬಲಾತ್ಕಾರದಿಂದಾಗಿ ನಿರ್ವಾಹವಿಲ್ಲದೆ ಸಮ್ಮತಿಯನ್ನು ದಯಪಾಲಿಸಿದರು. ಇಂದು ಕಂಚಿಯಲ್ಲಿ ಶ್ರೀವ್ಯಾಸರಾಯಸ್ವಾಮಿಗಳವರ ಮಠದ ಮುಂದೆ ಅಸಾಧ್ಯ ಜನಸಂದಣಿ, ನಗರದ ಜನರ ಸಂಭ್ರಮ ಮೇರೆ ಮೀರಿದೆ. ನಗರವನ್ನು ಸುಂದರವಾಗಿ ಶೃಂಗರಿಸಲಾಗಿದೆ. ವೇದಘೋಷ, ಮಂಗಳವಾದ್ಯಗಳಾಗುತ್ತಿವೆ. ಆನೆಯ ಮೇಲೆ ಅಂಬಾರಿಯನ್ನಿಟ್ಟು ಅಲಂಕರಿಸಲಾಗಿದೆ. ಅರಮನೆಯ ಬಿರುದು-ಬಾವಲಿಗಳೆಲ್ಲವೂ ಸಜ್ಜಾಗಿವೆ. ಕಂಚಿಯ ಮಹಾರಾಜರು ಪಂಡಿತಮಂಡಳಿ, ಪುರಜನರು ಶ್ರೀಯವರನ್ನು ಆನೆಯ ಮೇಲೆ ಅಂಬಾರಿಯಲ್ಲಿ ಮಂಡಿಸಿದ್ದಾರೆ. ಮಹಾರಾಜರು ಮೆರವಣಿಗೆಯನ್ನು ಹೊರಡಿಸಿ ಅರಮನೆಗೆ ತೆರಳಿದರು. ಮೆರವಣಿಗೆಯು ರಾಜಬೀದಿಗಳನ್ನು ಹಾದು ಸಾಗುತ್ತಿದೆ. ಬೀದಿಯ ಇಕ್ಕೆಲರುಗಳಲ್ಲಿ ಸಹಸ್ರಾರು ಜನರು ನಿಂತು ಗುರುಗಳ ದರ್ಶನ ಮಾಡಿ ಜಯಘೋಷ ಮಾಡುತ್ತಿದ್ದಾರೆ.
ಶ್ರೀಯವರ ಮೆರವಣಿಗೆಯು ಶ್ರೀಏಕಾಂಬರೇಶ್ವರ, ಶ್ರೀಕಾಮಾಕ್ಷಿ, ಶ್ರೀವರದರಾಜಸ್ವಾಮಿ, ಶ್ರೀತ್ರಿವಿಕ್ರಮಸ್ವಾಮಿ ದೇವಸ್ಥಾನಗಳಿಗೆ ತೆರಳಿ ಅಲ್ಲಿ ಶ್ರೀಪಾದಂಗಲವರ ದೇವರ ದರ್ಶನ - ದೇವಾಲಯಗಳ ಗೌರವವನ್ನು ಸ್ವೀಕರಿಸಿದ ಮೇಲೆ ಮತ್ತೆ ಮೆರವಣಿಗೆಯು ವೈಭವದಿಂದ ಹೊರಟು ಅರಮನೆಯನ್ನು ತಲುಪಿತು.
ಮಂಗಳವಾದ್ಯ, ವೇದಘೋಷಗಳಾಗುತ್ತಿರಲು ಕಂಚಿಯ ಮಹಾರಾಜರು ಸಕಲ ರಾಜಮರ್ಯಾದೆಯೊಡನೆ ಶ್ರೀಗಳವರನ್ನು ಸ್ವಾಗತಿಸಿ ಹಸ್ತಲಾಘವವನ್ನಿತ್ತು ಅರಮನೆಗೆ ಕರೆತಂದು ಅಲ್ಲಿ ಸಿದ್ಧಪಡಿಸಲಾದ ಉನ್ನತ ಭದ್ರಾಸನದಲ್ಲಿ ಶ್ರೀವ್ಯಾಸತೀರ್ಥರನ್ನು ಮಂಡಿಸಿದ ಮೇಲೆ ಮಹಾರಾಜ ದಂಪತಿಗಳು ಶ್ರೀಗಳವರಿಗೆ ಪಾದಪೂಜೆ ಮಾಡಿ ಧನ-ಕನಕ-ವಸ್ತ್ರಾಭರಣಗಳನ್ನು ಸಮರ್ಪಿಸಿ ಅನುಗೃಹೀತರಾದರು. ಆನಂತರ ಮಹಾರಾಜರ ಅಧ್ಯಕ್ಷತೆಯಲ್ಲಿ ಗುರುಗಳ ಸನ್ಮಾನ ಸಮಾರಂಭವು ಪ್ರಾರಂಭವಾಯಿತು.
ಅನೇಕ ಪಂಡಿತರು, ಧರ್ಮಾಭಿಮಾನಿಗಳು ಭಾಷಣ ಮಾಡಿ ಶ್ರೀವ್ಯಾಸತೀರ್ಥರ ಜ್ಞಾನ-ಭಕ್ತಿ-ವೈರಾಗ್ಯ- ವಾದವಿದ್ಯಾಕೌಶಲ-ಶಮದಮಾದಿಗುಣಸಂಪತ್ತು-ವಿದ್ವಜ್ಜನ ಪೋಷಣೆ-ಔದರ್ಯಾದಿಗಳನ್ನು ವರ್ಣಿಸಿ ಮುಕ್ತಕಂಠದಿಂದ ಕೊಂಡಾಡಿದರು. ತರುವಾಯ ಮಹಾಪ್ರಭುಗಳು ಗುರುಪಾದರ ಪಾಂಡಿತ್ಯ, ವಾದದಿಗ್ವಿಜಯ, ಅಸದೃಶ ಪ್ರತಿಭೆ, ತೇಜಸ್ಸು, ವಿದ್ಯಾಪಕ್ಷಪಾತ ಲೋಕಸಂಗ್ರಹಾದಿ ಸದ್ಗುಣಗಳನ್ನು ಸ್ತುತಿಸಿ, ಮಹಾಜ್ಞಾನಿಗಳಾದ, ಧರೆಗಿಳಿದು ಬಂದ ಸರಸ್ವತಿಯಂತಿರುವ ಪೂಜ್ಯಗುರುಗಳನ್ನು ಅವರ ದಿಗ್ವಿಜಯಯಾತ್ರೆಯಲ್ಲಿ ಮೊಟ್ಟಮೊದಲಿಗೆ ಗೌರವಿಸಿ, ಕೃತಾರ್ಥರಾಗುವ ಭಾಗ್ಯ ಕಂಚಿಯ ಜನತೆಗೆ, ಪಂಡಿತರಿಗೆ, ಮತ್ತೆ ತಮಗೆ ದೊರಕಿದ್ದು ಪೂರ್ವಾರ್ಜಿತ ಪುಣ್ಯಫಲವೆಂದು ತಾವು ಭಾವಿಸಿರುವುದಾಗಿ ಹೇಳಿ ಸಮಯೋಚಿತವಾಗಿ ಅಧ್ಯಕ್ಷ ಭಾಷಣ ಮಾಡಿ, ಶಾಲು ಜೋಡಿ, ಮುತ್ತಿನ ಕಂಠಿಸರ, ಪೀತಾಂಬರ, ಸುವರ್ಣಮಯ ವ್ಯಾಸಪೀಠ, ಪುಷ್ಪಹಾರಗಳನ್ನು ಶ್ರೀಪಾದಂಗಳವರಿಗೆ ಸಮರ್ಪಿಸಿ, ನಮಸ್ಕರಿಸಿದರು. ಸಭಾಸದರು ಪ್ರಚಂಡ ಕರತಾಡನ, ಜಯಧ್ವನಿಗಳಿಂದ ತಮ್ಮ ಆನಂದವನ್ನು ವ್ಯಕ್ತಪಡಿಸಿದರು.
ತರುವಾಯ ವಿದ್ಯಾಪೀಠ, ಇತರ ಸಂಸ ತ ವಿದ್ಯಾಸಂಸ್ಥೆಗಳು, ಧಾರ್ಮಿಕರು, ಶಿಷ್ಟಭಕ್ತಜನರು, ಪಂಡಿತರು, ಇವರ ಪರವಾಗಿ ಶ್ರೀಗಳವರಿಗೆ ಯೋಗ್ಯತಾನುಸಾರ ಗೌರವ ಸಮರ್ಪಣೆಯಾಯಿತು.
ಶ್ರೀವ್ಯಾಸತೀರ್ಥ ಗುರುವರೇಣ್ಯರು ಸೂಕ್ತರೀತಿಯಲ್ಲಿ ಚಿಕ್ಕದಾದರೂ ಚೊಕ್ಕವಾದ, ವಿದ್ದತ್ತೂರ್ಣ ಉಪದೇಶ ಭಾಷಣ ಮಾಡಿ ಕಂಚಿಯ ಮಹಾರಾಜರು, ವಿದ್ವಜ್ಜನರು, ಆಸ್ತಿಕರು ತಮಗೆ ಮಾಡಿದ ಗೌರವ-ಸನ್ಮಾನಗಳನ್ನು ತಮ್ಮ ಅಂತರ್ಗತರಾದ ಶ್ರೀಹರಿವಾಯುಗಳಿಗೆ ಸಮರ್ಪಿಸಿರುವುದಾಗಿ ಹೇಳಿ ಎಲ್ಲರನ್ನೂ ಆಶೀರ್ವದಿಸಿದರು. ಆನಂತರ ಸಮಾರಂಭವು ಮುಕ್ತಾಯವಾಯಿತು. ಅಂದಿನ ಆ ಮೆರವಣಿಗೆ, ಜನಸ್ತೋಮ, ಸಂಭ್ರಮ, ವೈಭವಸನ್ಮಾನಾದಿಗಳು ಅವರ್ಣನೀಯ! ಅದನ್ನು ಕಣ್ಣಾರೆ ಕಂಡವರೇ ಪರಮಭಾಗ್ಯಶಾಲಿಗಳು.