
ಕಲಿಯುಗ ಕಲ್ಪತರು
ನಾಲ್ಕನೆಯ ಉಲ್ಲಾಸ
ಶ್ರೀವ್ಯಾಸರಾಜಯತಿಸಾರ್ವಭೌಮರು
೧೩. ಉಪನಯನ-ವಿದ್ಯಾಭ್ಯಾಸ
ಯತಿರಾಜನು ಶುಕ್ಲಪಕ್ಷದ ಚಂದ್ರನಂತೆ ಕಾಂತಿಯುಕ್ತನಾಗಿ ಬೆಳೆಯುತ್ತಿದಂತೆಯೇ ಸಕಲ ಕಲೆಗಳಿಂದಲೂ (ವಿದ್ಯ) ಅಭಿವೃದ್ಧಿಸಿದನು. ಪ್ರತಿಭಾಶಾಲಿಯೂ, ಕುಶಾಗ್ರಮತಿಯೂ ಆದನು. ಆ ಕುಮಾರನು ಅಕ್ಷರಾಭ್ಯಾಸವಾದ ಕೆಲವೇ ದಿವಸಗಳಲ್ಲಿ ಸಕಲ ಅಕ್ಷರಗಳು, ಕಾಗುಣಿತಾದಿಗಳನ್ನು ಕಲಿತುಬಿಟ್ಟನು. ಶ್ರೀಬ್ರಹ್ಮಣ್ಯತೀರ್ಥರೇ ಸ್ವತಃ ಪ್ರೀತಿಯಿಂದ ಯತಿರಾಜನಿಗೆ ಪಾಠ ಹೇಳುತ್ತಿದ್ದರು. ಗುರುಗಳು ಒಮ್ಮೆ ಹೇಳಿದರೆ ಸಾಕು, ಅದನ್ನೆಲ್ಲಾ ಸುಲಭವಾಗಿ ಗ್ರಹಿಸಿ ಕಲಿತುಬಿಡುತ್ತಿದ್ದನು. ಆ ಕುಮಾರನು ತನ್ನ ಎರಡನೆಯ ವಯಸ್ಸಿನಿಂದ ಐದನೆಯ ವಯಸ್ಸಿನೊಳಗಾಗಿ ಅಮರ ಮುಂತಾದ ಕೋಶಗಳು, ಶಬ್ದಗಳು, ಧಾತುರೂಪಗಳು, ಸಮಾಸಚಕ್ರ ಮುಂತಾದುವನ್ನೆಲ್ಲಾ ಅಭ್ಯಾಸ ಮಾಡಿದ್ದಲ್ಲದೆ, ಸಂಸತ ಮತ್ತು ಕನ್ನಡ ಭಾಷೆಗಳಲ್ಲಿ ವಯಸ್ಸಿಗೆ ಮೀರಿದ ಪ್ರಭುತ್ವವನ್ನು ಪಡೆದು ಸಕಲರನ್ನೂ ಆಶ್ಚರ್ಯಗೊಳಿಸಿದನು.
ಹೀಗೆ ಯತಿರಾಜನು ಶ್ರೀಬ್ರಹ್ಮಣ್ಯತೀರ್ಥರಿಂದ ಬಾಲಪಾಠಗಳನ್ನು ಕಲಿತು ಅದರಲ್ಲಿ ಪ್ರಗತಿಯನ್ನು ಸಾಧಿಸಿ, ತಳಿರುತೋರಣಾಲಂಕಾರಗಳಿಂದ ನಗರವಾ, ದಾನದಿಂದ ಕೀರ್ತಿಯೂ, ಸತ್ಕರ್ಮದಿಂದ ಪುಣ್ಯವೂ, ಮಹೋತ್ಸವದಿಂದ ಪ್ರಮೋದವಾ, ಸೋಪಾನಪಂಕ್ತಿಯಿಂದ ಉಪ್ಪರಿಗೆ ಮಂದಿರವೂ, ವೀರ್ಯದಿಂದ ವಿಜಯವೂ ಶೋಭಿಸುವಂತೆ ಅತಿಶಯವಾಗಿ ಪ್ರಕಾಶಿಸಿದನು.
ಯತಿರಾಜರಿಗೆ ಐದು ವರ್ಷ ವಯಸ್ಸಾಯಿತು. ಶ್ರೀಬ್ರಹ್ಮಣ್ಯತೀರ್ಥರು ಅವನ ಚುರುಕು ಬುದ್ದಿ, ಗ್ರಹಣ ಸಾಮರ್ಥ್ಯ, ಪ್ರತಿಭಾದಿಗಳನ್ನು ಕಂಡು ಅವನೀಗ ವೇದ-ಶಾಸ್ತ್ರಾಭ್ಯಾಸಯೋಗ್ಯನಾಗಿರುವನೆಂದು ತಿಳಿದು ಅವನಿಗೆ ಉಪನಯನ ಸಂಸ್ಕಾರವನ್ನು ನೆರವೇರಿಸಲು ನಿಶ್ಚಯಿಸಿದನು.
ಜ್ಯೋತಿಷಶಾಸ್ತ್ರವಿಶಾರದರಿಂದ ಬ್ರಹ್ಮಪದೇಶಕ್ಕೆ ಒಂದು ಶ್ರೇಷ್ಠವಾದ ಮುಹೂರ್ತವನ್ನು ನಿಶ್ಚಯ ಮಾಡಿಸಿ, ಉಪನಯನಕ್ಕೆ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡು ಬನ್ನೂರಿನಿಂದ ರಾಮಾಚಾರ್ಯ-ಲಕ್ಷ್ಮೀದೇವಿ, ಬಂಧು-ಬಾಂಧವರನ್ನು ಕರೆಯಿಸಿಕೊಂಡರು. ಕುಮಾರನ ಉಪನಯನ ವಿಚಾರವನ್ನರಿತು, ಅದೊಂದೇ ತಂದೆ-ತಾಯಿಗಳಾದ ತಾವು ಹಸೆಯ ಮೇಲೆ ಕುಳಿತು ಜರುಗಿಸುವ ಕೊನೆಯ ವೈದಿಕ ಸಂಸ್ಕಾರವಾದ್ದರಿಂದ ರಾಮಾಚಾರ್ಯ-ಲಕ್ಷ್ಮೀದೇವಿಯರಿಗೆ ಅಪಾರ ಆನಂದವಾಯಿತು. ಆ ಮಂಗಳಕರ ಸಮಾರಂಭವನ್ನು ನೆರವೇರಿಸಲು ಆ ಮಾತಾಪಿತೃಗಳ ಹೃದಯ ತವಕಿಸಿತು. ಸಂಭ್ರಮ-ಸಡಗರಗಳಿಂದ ಅದನ್ನು ನಿರ್ವಹಿಸಲು ಅವರು ಉತ್ತುಕರಾದರು.
ಶಾಲಿವಾಹನ ಶಕೆ ೧೩೭೩ನೇ ಪ್ರಜೋತ್ಪತ್ತಿ ಸಂವತ್ತರದ ವೈಶಾಖ ಶುಕ್ಲ ಪಂಚಮಿ (ಕ್ರಿಸ್ತಶಕೆ ೧೪೧೧ನೇ ಮೇ ಮಾಹೆ ಶ್ರೀಬ್ರಹ್ಮಣ್ಯತೀರ್ಥರ ಮಠದಲ್ಲಿ ಅಸಾಧ್ಯ ಜನಸಂದಣಿ.
ಶ್ರೀಪಾದಂಗಳವರ ಮೇಲ್ವಿಚಾರಣೆಯಲ್ಲಿ ಯತಿರಾಜನಿಗೆ ಐದನೆಯ ವರ್ಷದಲ್ಲಿ ಉಪನಯನ ಸಮಾರಂಭವು ಶಾಕ್ತವಾಗಿ, ಸಾಂಗವಾಗಿ ನೆರವೇರಿತು.” ರಾಮಾಚಾರ್ಯರು ಕುಮಾರನಿಗೆ ಬ್ರಹ್ಮಪದೇಶ ಮಾಡಿದರು. ಅನಂತರ ರಾಮಾಚಾರ್ಯರ ದಂಪತಿಗಳು ವಟುವಿನಿಂದ ಗುರುಗಳಿಗೆ ಪಾದಪೂಜೆ ಮಾಡಿಸಿದರು. ಶ್ರೀಗಳವರು ರಾಮಾಚಾರ್ಯ ದಂಪತಿಗಳಿಗೆ ಮತ್ತು ಯತಿರಾಜನಿಗೆ ಮಂತ್ರಮುದ್ರಾಧಾರಣ ಮಾಡಿ ಫಲಮಂತ್ರಾಕ್ಷತೆ ಅನುಗ್ರಹಿಸಿದರು. ಅನಂತರ ವಟುವಿಗೆ ಗುರೂಪದೇಶ ಮಾಡಿ ಆಶೀರ್ವದಿಸಿದರು. ಅದಾದ ಮೇಲೆ ಸರ್ವರಿಗೂ ಫಲತಾಂಬೂಲ, ದಕ್ಷಿಣಾಪ್ರದಾನವಾಯಿತು. ತರುವಾಯ ಮಧ್ಯಾಹ್ನ ದೇವಪೂಜೆಯಾದ ಮೇಲೆ ಸರ್ವರೂ ಶ್ರೀಯವರ ಅಮೃತಹಸ್ತದಿಂದ ತೀರ್ಥ-ಪ್ರಸಾದ ಸ್ವೀಕರಿಸಿ, ಮೃಷ್ಟಾನ್ನ ಭೋಜನ ಮಾಡಿ ತೃಪ್ತರಾದರು.
ಹೀಗೆ ಮೂರು ದಿನಗಳ ಕಾಲ ಸಮಾರಂಭವು ಯಶಸ್ವಿಯಾಗಿ ಜರುಗಿದ ಮೇಲೆ ಸಮಾರಂಭಕ್ಕಾಗಿ ಆಗಮಿಸಿದ ಸಕಲರೂ ತೆರಳಿದರು. ರಾಮಾಚಾರ್ಯ-ಲಕ್ಷ್ಮೀದೇವಿ ಬಾಂಧವರು ಹಲವಾರು ದಿನ ಅಟ್ಟೂರಿನಲ್ಲಿದ್ದು, ಫಲಮಂತ್ರಾಕ್ಷತ ಪಡೆದು, ಗುರುಗಳು ಮತ್ತು ಪುತ್ರನಿಂದ ಬೀಳ್ಕೊಂಡು ಬನ್ನೂರಿಗೆ ಪ್ರಯಾಣ ಬೆಳೆಸಿದರು.
ಬ್ರಹ್ಮಣ್ಯತೀರ್ಥರು ಒಂದು ಶುಭಮುಹೂರ್ತದಲ್ಲಿ ಯತಿರಾಜನಿಗೆ ಶ್ರೀಮಠದ ಗುರುಕುಲದಲ್ಲಿ ವೇದಾಧ್ಯಯನವನ್ನು ಪ್ರಾರಂಭ ಮಾಡಿಸಿದರು ಮತ್ತು ತಾವೇ ಸ್ವತಃ ಉಪನಿಷತ್ತುಗಳು, ಕಾವ್ಯ, ನ್ಯಾಯ-ವ್ಯಾಕರಣಶಾಸ್ತ್ರಗಳ ಸಣ್ಣಪುಟ್ಟ ಗ್ರಂಥಗಳ ಪಾಠವನ್ನೂ ಪ್ರಾರಂಭಿಸಿದರು. ಕುಶಾಗ್ರಮತಿಯೂ, ಏಕಸಂಧಿಗ್ರಾಹಿಯೂ, ಆದ ಯತಿರಾಜನು ಹಗಲಿರುಳೂ ಪಾಠಗಳನ್ನು ಶ್ರದ್ಧೆಯಿಂದ ಓದುತ್ತಾ, ಚಿಂತನೆ ಮಾಡುತ್ತಾ, ಅಧ್ಯಯನ ಮಾಡಲಾರಂಭಿಸಿದರು. ಹೀಗೆ ಎರಡು ಮೂರು ವರ್ಷಗಳಲ್ಲಿಯೇ ನ್ಯಾಯ-ವೇದಾಂತ-ಸಾಹಿತ್ಯ, ವ್ಯಾಕರಣಶಾಸ್ತ್ರಗಳಲ್ಲಿ ಹೆಚ್ಚಾದ ಪರಿಣಿತಿ ಪಡೆದು ಅಸಾಧಾರಣ ಶಕ್ತಿಯನ್ನು ಪ್ರದರ್ಶಿಸಲಾರಂಭಿಸಿದನು. ಅವನ ಪ್ರಗತಿಯನ್ನು ಕಂಡು ಗುರುಗಳಿಗೆ ಪರಮಾನಂದವಾಯಿತು.
ಸ್ವಶಾಖಾ ವೇದಾಧ್ಯಯನ ಮಾತ್ರವಲ್ಲದೆ ವೇದತ್ರಯಗಳಲ್ಲಿ ಪ್ರತಿಭೆ ತೋರಿ, ಅವುಗಳನ್ನು ಸ್ವಾಧೀನಪಡಿಸಿಕೊಳ್ಳಹತ್ತಿದನು. ಸುಸ್ತರವಾಗಿ ಅವನು ಮಂದ್ರಮಧ್ಯಮೋಚಸ್ತರದಲ್ಲಿ ವೇದಾಧ್ಯಯನ ಮಾಡುತ್ತಿದ್ದರೆ ಎಂಥ ಘನಪಾಟಿಗಳೂ ಸಹ ಅದನ್ನು ಕೇಳಿ “ಸಾಧು, ಸಾಧು, ಇದು ಈ ಜನ್ಮದ ಕಲಿಕೆಯಲ್ಲ; ಆ ಬಾಲಕನು ಸಕಲ ಶಾಸ್ತ್ರಗಳನ್ನು ಪೂರ್ವಜನ್ಮದಲ್ಲಿ ಅಧ್ಯಯನ ಮಾಡಿ, ಮಹಾಜ್ಞಾನಿಯಾಗಿದ್ದಿರಬೇಕು! ಇಲ್ಲದಿದ್ದರೆ ಇಂತಹ ಪ್ರಗತಿ-ಪ್ರತಿಭೆ ಸಾಧ್ಯವೇ ? ಎಂದು ನಿಬ್ಬೆರಗಾಗುತ್ತಿದ್ದರು. ಯತಿರಾಜನು ಎರಡು-ಮೂರು ವರ್ಷಗಳಲ್ಲಿಯೇ ಹತ್ತಾರು ವರ್ಷ ಅಧ್ಯಯನ ಸಾಧ್ಯವಾದ ಉಪನಿಷತ್ತುಗಳು, ವೇದಗಳು, ಕಾವ್ಯಾದಿಗಳು, ನ್ಯಾಯ, ವ್ಯಾಕರಣಶಾಸ್ತ್ರಗಳಲ್ಲಿ ಪರಿಣಿತನಾಗಿ ತನ್ನ ಅಗಾಧ ಪ್ರಜ್ಞಾತಾಂಡವದಿಂದ ಆಪಂಡಿತ-ಪಾಮರರನ್ನು ಬೆರಗುಗೊಳಿಸಲಾರಂಭಿಸಿದನು.
ಅಖಂಡ ಬ್ರಹ್ಮಚರ್ಯವೆಂಬ ನಿರುಪಮ ತಪಶ್ಚರ್ಯದಿಂದ, ಬ್ರಹ್ಮವರ್ಚಸ್ಸು, ಕಾಂತಿಗಳಿಂದ ಮಿನುಗುತ್ತಾ ದೇವಾಂಶಸಂಭೂತನಾದ ಯತಿರಾಜನು, ಪ್ರಾಚೀನ ಪರಂಪರೆಯಿಂದ ಬಂದ ಪದ್ಧತಿಯನ್ನು ಅನುಸರಿಸಲೆಂದು ಗುರುಕುಲವಾಸ ಮಾಡಿದನೇ ವಿನಃ ಅಭ್ಯಾಸಾಪೇಕ್ಷೆಯಿಂದಲ್ಲ, ಲೋಕಾಚಾರಕ್ಕಾಗಿ ಗುರುವಿಧೇಯಚರಿತನಾದನೇ ಹೊರತು ಪ್ರಮಾದ-ಭಯದಿಂದಲ್ಲ. ಪ್ರಾಚೀನಮಾರ್ಗವೆಂದು ವೇದಾಂಗವಾದ ಶಿಕ್ಷಾಕ್ರಮವನ್ನು ಗೌರವದಿಂದ ಅಧ್ಯಯನ ಮಾಡಿದನೇ ಹೊರತು ಲಕ್ಷಣಾನಭಿಜ್ಞತೆಯಿಂದಲ್ಲ, ಹೀಗೆ ಯತಿರಾಜನು ವಿದ್ಯೆಯ ಪ್ರತಿಯೊಂದು ವಿಭಾಗಗಳನ್ನೂ ವ್ಯಾಸಂಗ ಮಾಡಿ ಅವುಗಳಲ್ಲಿ ಪಾರಂಗತನಾದನು.