ಕಲಿಯುಗ ಕಲ್ಪತರು
ನಾಲ್ಕನೆಯ ಉಲ್ಲಾಸ
ಶ್ರೀವ್ಯಾಸರಾಜಯತಿಸಾರ್ವಭೌಮರು
೨೪. ವಿಷಪ್ರಯೋಗ-ಭಗವದನುಗ್ರಹ
ಕಂಚಿಯ ಪಂಡಿತರು ವ್ಯಾಸರಾಜಗುರುಗಳಿಂದ ಪರಾಜಿತರಾದುದಕ್ಕೆ ತಮ್ಮಿಂದ ತಮ್ಮ ಶಾಸ್ತ್ರಕ್ಕೆ ಬೆಲೆಯಿಲ್ಲದಾಯಿತೆಂದು ಮನದಲ್ಲಿ ಕಳವಳವಾಗಿದ್ದರೂ ವೈಯಕ್ತಿಕವಾಗಿ ವ್ಯಾಸರಾಜರಲ್ಲಿ ಸ್ನೇಹದಿಂದಲೇ ವರ್ತಿಸುತ್ತಿದ್ದರು. ಗುರುಗಳ ದಿಗ್ವಿಜಯದಿಂದ, ತಮ್ಮ ಮತದ ಪರಾಭವದಿಂದ ಮತ್ಸರಗ್ರಸ್ತರಾಗಿ ಅವರ ಬಗ್ಗೆ ಆಂತರ್ಯದಲ್ಲಿ ದ್ವೇಷ ಸಾಧಿಸುತ್ತಿದ್ದವರು ಒಬ್ಬಿಬ್ಬರಿಲ್ಲದಿರಲಿಲ್ಲ. ಹೀಗೆ ಮಾತ್ಸರ್ಯ ಪಿಶಾಚಾವಿಷ್ಟರಾದ ಒಬ್ಬಿಬ್ಬ ಪಾಷಂಡಿಗಳ ಕುತಂತ್ರ, ದುರಾಲೋಚನೆಗಳ ಫಲವಾಗಿ ಶ್ರೀಗಳವರಿಗೆ ವಿಪತ್ತೊಂದು ಬಂದೊದಗುವ ಸಂದರ್ಭವುಂಟಾಯಿತು.
ಕಂಚಿಯಲ್ಲಿ ಪರಾಜಿತರಾದ ಪರಮತಪಂಡಿತರಿಗಿಂತ ಅವರ ಬಂಧುಗಳಾದ ಪಾಖಂಡಿ ಬ್ರಾಹ್ಮಣಾಧಮರಿಬ್ಬರು ತಮ್ಮ ಮತದ ಅಪಜಯಕ್ಕೆ ಕಾರಣರಾದ ವ್ಯಾಸತೀರ್ಥರನ್ನು ಇರಗೊಡಬಾರದೆಂದು ಸಂಕಲ್ಪಿಸಿ ಶ್ರೀಯವರಿಗೆ ವಿಪತ್ತು ತರುವ ಷಡ್ಯಂತ್ರದಲ್ಲಿ ಪ್ರವೃತ್ತರಾದರು. ಅವರು ಶ್ರೀಗಳವರಲ್ಲಿ ಗೌರವವುಳ್ಳ ಆಸ್ತಿಕರಂತೆ ನಟಿಸುತ್ತಾ ಸೂಕ್ಷ್ಮವಾಗಿ ಗಮನಿಸುತ್ತಾ ಬಂದರು.
ಆಸ್ತಿಕರಾದ ಕಂಚೀಪುರನಿವಾಸಿಗಳು ವಿಶೇಷವಾಗಿ ಶ್ರೀಮಠಕ್ಕೆ ಬಂದು ಗುರುಗಳ ದರ್ಶನ, ತೀರ್ಥ-ಪ್ರಸಾದಾದಿಗಳಿಂದ ಅನುಗೃಹೀತರಾಗಲಾರಂಭಿಸಿದ್ದರು. ಅನೇಕರು ಗುರುಗಳ ತೇಜಸ್ಸಿನಿಂದ ಪ್ರಭಾವಿತರಾಗಿ ಅವರಲ್ಲಿ ಪಾಜ್ಯಭಾವನೆಯಿಂದ ಪ್ರತಿದಿನ ಹಾಲು, ಮೊಸರು, ತುಪ್ಪ, ದಿನಸಿ, ತರಕಾರಿಗಳು, ಹೂವು, ಹಣ್ಣುಗಳನ್ನು ಕಾಣಿಕೆಯಾಗಿ ಸಮರ್ಪಿಸಿ ಹೋಗುತ್ತಿದ್ದರು. ಭಕ್ತರು ತಂದಿತ್ತ ವಸ್ತುಗಳನ್ನು ಶ್ರೀಯವರ ಅಪ್ಪಣೆಯಂತೆ ಅಂದಿನ ಅಡುಗೆಗೆ ಉಪಯೋಗಿಸಲಾಗುತ್ತಿತ್ತು. ಇವೆಲ್ಲವನ್ನೂ ಚೆನ್ನಾಗಿ ಗಮನಿಸಿದ್ದ ದುಷ್ಟರಾದ ಆ ಬ್ರಾಹ್ಮಣರು ಶ್ರೀಗಳವರ ಭಕ್ತರಂತೆ ನಟಿಸಿ ಒಂದು ದಿನ ವಿಷಮಿಶ್ರಿತ ಹಾಲನ್ನು ತಂದು “ದೇವರ ಪ್ರೇರಣೆಯಂತೆ ಗುರುಗಳ ಉಪಯೋಗಕ್ಕಾಗಿ ಇದನ್ನು ತಂದಿದ್ದೇವೆ. ದಯಮಾಡಿ ಇದನ್ನು ಪೂಜ್ಯ ಗುರುಗಳಿಗೆ ವಿನಿಯೋಗಿಸಬೇಕು” ಎಂದು ಪ್ರಾರ್ಥಿಸಿ ಹಾಲನ್ನು ಕೊಟ್ಟುಹೋದರು.
ಪದ್ಧತಿಯಂತೆ ಅಂದು ಬಂದ ಸಮಸ್ತ ವಸ್ತುಗಳೊಡನೆ ಹಾಲನ್ನೂ ಅಂದಿನ ಅಡುಗೆಗೆ ಉಪಯೋಗಿಸುವಂತೆ ಪಾರುಪತ್ತೇದಾರರು ಹೇಳಿಹೋದರು. ಶ್ರೀಪಾದಂಗಳವರ ಚಿಕ್ಕ ನೈವೇದ್ಯದ ಅಡುಗೆಯವನು, ದ್ವೇಷಬುದ್ಧಿಯಿಂದ ದುಷ್ಟ ಬ್ರಾಹ್ಮಣರು ತಂದುಕೊಟ್ಟ ವಿಷಮಿಶ್ರಿತವಾದ ಹಾಲನ್ನು ಅದರಲ್ಲಿ ವಿಷ ಬೆರೆತಿದೆ ಎಂದು ತಿಳಿಯದೆ ಪಾಯಸಕ್ಕೆ ಉಪಯೋಗಿಸಿ ಅಡುಗೆ ಮಾಡಿದನು.
ಎಂದಿನಂತೆ ಪೂಜಾಕಾಲದಲ್ಲಿ ಶ್ರೀಗಳವರು ಚಿಕ್ಕ ನೈವೇದ್ಯದ ಅಡುಗೆಯನ್ನು ದೇವರಿಗೆ ನಿವೇದನೆ ಮಾಡಿ, ಪೂಜಾನಂತರ ತೀರ್ಥ-ಪ್ರಸಾದ ವಿನಿಯೋಗವಾದ ಮೇಲೆ ಪಂಡಿತಮಂಡಲಿಯೊಡನೆ ಸಮುಖದಲ್ಲಿ ಭಿಕ್ಷೆಗೆ ಕುಳಿತರು. ಚಿಕ್ಕ ನೈವೇದ್ಯದ ಪಾಚಕನು ಗುರುಗಳಿಗೆ ಪಾಯಸ ಬಡಿಸಿದನು. ಅಂದು ಗುರುಗಳು ಎಂದಿಗಿಂತ ಸ್ವಲ್ಪ ಹೆಚ್ಚಾಗಿಯೇ ಪಾಯಸವನ್ನು ಸ್ವೀಕರಿಸಿದರು.
ಸ್ವಲ್ಪ ಹೊತ್ತಾದ ಮೇಲೆ ಶ್ರೀಗಳವರ ಉದರದಲ್ಲಿ ವಿಚಿತ್ರ ತಳಮಳ, ಉರಿ, ಸಂಕಟಗಳಾಗಹತ್ತಿತು! ಸಂಕಟದಿಂದ ಸ್ವಾಮಿಗಳು ಕಷ್ಟಪಡಲಾರಂಭಿಸಿದರು. ಅದನ್ನು ಕಂಡ ಪಂಡಿತರು-ಪರಿವಾರದವರು ಗಾಬರಿಯಾದರು. ಶ್ರೀಗಳವರು ಊಟ ಬಿಟ್ಟು ಎದ್ದು ಕೈತೊಳೆದು ತೀರ್ಥಪ್ರಾಶನ ಮಾಡಿ ಒಂದೆಡೆ ಕುಳಿತು ದುಸ್ಸಹವಾದ ಯಾತನೆಯಿಂದ ಬಳಲಹತ್ತಿದರು. ಏನು ಮಾಡುವುದೆಂದು ಯಾರಿಗೂ ತೋಚದಂತಾಯಿತು. ಆಗ ಕಂಚಿಯ ಪುರವಾಸಿಗಳೇ ಆದ ಒಬ್ಬ ಪಂಡಿತರು ತಮಗೆ ಪರಿಚಿತರಾದ ವೈದ್ಯರನ್ನು ಕರೆದುತಂದರು.
ವೈದ್ಯರು ಶ್ರೀಗಳವರನ್ನು ಅನೇಕ ಬಗೆಯಾಗಿ ಪರೀಕ್ಷಿಸಿ, ಶ್ರೀಯವರು ಸ್ವೀಕರಿಸಿದ ಅಡುಗೆಯನ್ನು ಪರೀಕ್ಷಿಸಲಾಶಿಸಿದರು. ಅಡುಗೆಯವನು ಅವರಿಗೆ, ಶ್ರೀಯವರಿಗೆ ಬಡಿಸಿದ ಎಲ್ಲ ಅಡುಗೆ ಪದಾರ್ಥಗಳನ್ನೂ ತೋರಿಸಿದನು. ಪಾಯಸದಲ್ಲಿ ವಿಷವಿರುವುದನ್ನು ಕಂಡುಹಿಡಿದ ವೈದ್ಯರು ಕಳವಳದಿಂದ ಅದನ್ನು ಶ್ರೀಯವರಿಗೂ ಪರಿವಾರದವರಿಗೂ ತಿಳಿಸಿದರು. ಪಂಡಿತರು, ಪರಿವಾರದವರು, ಅಡುಗೆಯವನನ್ನು ಹಿಡಿದು ದಂಡಿಸಿ ವಿಚಾರಿಸಿದರು. ಪಾಪ ಏನೂ ತಿಳಿಯದ ಪಾಚಕನು ಪ್ರತಿದಿನ ಭಕ್ತಜನರು ತಂದುಕೊಡುವ ಪದಾರ್ಥಗಳಿಂದ ಅಡುಗೆ ಮಾಡುವಂತೆ ಇಂದೂ ಮಾಡಿರುವುದಾಗಿಯೂ, ಇಂದು ಹಾಲು ತಂದುಕೊಟ್ಟವರು ಇಬ್ಬರು ಬ್ರಾಹ್ಮಣರೆಂದೂ ಅವರ ಚಹರೆಯನ್ನು ತಿಳಿಸಿ ವಿಷಬೆರೆತ ಹಾಲಿನಿಂದ ಪಾಯಸ ಮಾಡಿ ಅದನ್ನು ಶ್ರೀಯವರಿಗೆ ಬಡಿಸಿದ್ದಕ್ಕಾಗಿ ಆತನು ಬಹುವಾಗಿ ದುಃಖಿಸಿ ಕಣ್ಣೀರು ಸುರಿಸಿದನು.
ವೈದ್ಯರು ಶ್ರೀಗಳವರಿಗೆ ಕೂಡಲೇ ಚಿಕಿತ್ಸೆ ಮಾಡಬೇಕೆಂದೂ “ಶ್ರೀಗಳವರಿಗೆ ಪ್ರಯೋಗಿಸಿರುವ ವಿಷವು ಕೂಡಲೇ ಅಪಾಯವಾಗದೆ, ದೀರ್ಘಾವಧಿಯಲ್ಲಿ ದಿನದಿನಕ್ಕೂ ದೇಹವನ್ನು ಕೃಶಗೊಳಿಸಿ ಕ್ರಮೇಣ ಪ್ರಾಣಹರಣ ಮಾಡುವಂತಹದು. ಇಂತಹ ವಿಷವನ್ನು ಹಾಕಿರುವುದು ನಮ್ಮ ಸುದೈವ. ಆದರೂ ಕೂಡಲೇ ಚಿಕಿತ್ಸೆ ಮಾಡುವುದೊಳಿತು. ಇಲ್ಲದಿದ್ದರೆ ಮುಂದೆ ಅನಾಹುತವಾಗುವುದು” ಎಂದು ಹೇಳಿದರು. ಶ್ರೀಪಾದಂಗಳವರು ಚಿಕಿತ್ಸೆಗೆ ಒಪ್ಪಲಿಲ್ಲ! ಅವರು “ಶ್ರೀಹರಿಗೆ ಸಮರ್ಪಿಸಿದ ಆಹಾರವನ್ನೇ ತಾವು ಸ್ವೀಕರಿಸಿರುವುದರಿಂದ ಅದರ ಪರಿಹಾರ ಮಾಡುವುದು ಭಗವಂತನಿಗೆ ಅಪಚಾರ ಮಾಡಿದಂತಾಗುವುದು. ಭಕ್ತಪರಾಧೀನನಾದ ಆ ಪ್ರಭುವು ಅವನ ಭಕ್ತರಾದ ನಮ್ಮನ್ನು ಕಾಪಾಡುವನೆಂದು ನಾವು ನಂಬಿದ್ದೇವೆ, ಚಿಕಿತ್ಸೆ ಬೇಡ. ಅವನ ಸಂಕಲ್ಪವಿದ್ದಂತಾಗಲಿ, ಅವನ ತೀರ್ಥವೇ ನಮಗೆ ಸಕಲ ಔಷಧೋಪಚಾರ” ಎಂದು ಸ್ಪಷ್ಟವಾಗಿ ಹೇಳಿಬಿಟ್ಟರು.
ಶ್ರೀಯವರಿಗೆ ವಿಷಪ್ರಯೋಗವಾಗಿರುವ ವಿಚಾರ ಹಾಹಾ ಎನ್ನುವುದರೊಳಗೆ ಕಂಚಿಯಲ್ಲಿ ವ್ಯಾಪಿಸಿಬಿಟ್ಟಿತು. ಸಜ್ಜನವೃಂದ ಹೌಹಾರಿತು. ಪಂಡಿತರು, ಧಾರ್ಮಿಕರು ದುಃಖಿಸಿ, ಶ್ರೀಯವರ ದರ್ಶನ ಮಾಡಲು ಧಾವಿಸಹತ್ತಿದರು. ಶ್ರೀಗಳವರು ವಿಚಿತ್ರ ಸಂಕಟವಾಗುತ್ತಿದ್ದರೂ ಅದನ್ನು ಸಹಿಸುವ ಶಕ್ತಿಯನ್ನು ಭಗವಂತನು ಅನುಗ್ರಹಿಸಿದ್ದನೆಂದು ತೋರುವುದು. ಅಂತೆಯೇ ಅದನ್ನು ಸಹಿಸಿ, ನಿರಾಲೋಚನೆಯಿಂದ ಬಂದವರನ್ನು ನಗುಮುಖದಿಂದಲೇ ಮಾತನಾಡಿಸಿ, ಸಮಾಧಾನಪಡಿಸಿ ಕಳುಹಿಸಹತ್ತಿದರು. ಇದನ್ನು ಕಂಡ ಜನರು ಅಚ್ಚರಿಗೊಂಡು ಸ್ವಾಮಿಗಳವರು ಮಹಾತ್ಮರೆಂದು ಸ್ತುತಿಸಿ, ಅವರಿಗೆ ದ್ರೋಹ ಬಗೆದ ಪಾಪಿಯನ್ನು ನಿಂದಿಸಹತ್ತಿದರು. ಶ್ರೀಗಳವರು ಇದಾವುದರ ಕಡೆಗೂ ಗಮನಕೊಡದೆ ಶ್ರೀಹರಿಧ್ಯಾನರತರಾಗಿ ಕುಳಿತುಬಿಟ್ಟರು. ಒಂದೆರಡು ದಿನಗಳಲ್ಲಿಯೇ ಶ್ರೀಯವರ ದೇಹ ತುಂಬಾ ಕೃಶವಾಗಹತ್ತಿತು. ಆದರೆ ಮುಖದಲ್ಲಿ ಮಾತ್ರ ಅಲೌಕಿಕ ತೇಜಸ್ಸು ಬೆಳಗುತ್ತಿತ್ತು. ಶ್ರೀಹರಿಯವರ ಆರೋಗ್ಯದ ಬಗ್ಗೆ ಎಲ್ಲರೂ ಕಳವಳಗೊಂಡರು. ವಿಷಜ್ವಾಲೆಯಿಂದ ಬಾಧೆಪಡುತ್ತಿದ್ದರೂ ಗುರುಗಳು ತಮ್ಮ ನಿತ್ಯಕರ್ಮ, ದೇವರ ಪೂಜಾ, ಭಗವದ್ದಾನಾದಿಗಳನ್ನು ಚಾಚೂ ತಪ್ಪದೆ ನೆರವೇರಿಸುತ್ತಾ ಶ್ರೀಹರಿಪಾದಸ್ಮರಣರತರಾಗಿ ಕಾಲಕಳೆಯಹತ್ತಿದರು.
ಗುರುಗಳು ಒಂದು ದಿನ ರಾತ್ರಿ ಕೊಠಡಿಗೆ ಬಂದು ವಿಶ್ರಾಂತಿ ಪಡೆಯಲು ಕೃಷ್ಣಾಜಿನದ ಮೇಲೆ ಕುಳಿತರು. ಅಂದೇಕೋ ವಿಶೇಷ ತಳಮಳವಾಗುತ್ತಿದೆ. ಪದ್ಮಾಸನಸ್ಥರಾದ ಗುರುಗಳಿಗೆ ವಿಷಬಾಧೆಯು ಸ್ವಲ್ಪ ಹೆಚ್ಚಾದಂತೆ ಕಂಡುಬಂದಿತು. ಶ್ರೀಹರಿಯನ್ನು ರಕ್ಷಿಸುವಂತೆ ಅನನ್ಯಭಾವದಿಂದ ಪ್ರಾರ್ಥಿಸಹತ್ತಿದರು. ಅವರ ತನುಮನಗಳೆಲ್ಲವೂ ಶ್ರೀಕೃಷ್ಣನ ಪಾದಾರವಿಂದದಲ್ಲಿ ಕೇಂದ್ರೀಕೃತವಾಗಿದೆ. ಭಕ್ತಿಯ ಪರಾಕಾಷ್ಠದೆಸೆಯಲ್ಲಿದ್ದಾರೆ. ಭಗವನ್ಮಹಿಮಾಂಚಿತನ, ಭಕ್ತವಾತ್ಸಲ್ಯಗಳನ್ನು ನೆನೆದು ಅವರ ನೇತ್ರಗಳಿಂದ ಆನಂದಬಾಷ್ಪ ಹರಿಯುತ್ತಿದೆ. ಧ್ಯಾನಮಗ್ನರಾಗಿ ತಮಗೆ ಒಲಿದು ದರ್ಶನವಿತ್ತು ನರ್ತಿಸಿದ ಶ್ರೀಕೃಷ್ಣನಲ್ಲಿ ಮೊರೆಯಿಡಲಾರಂಭಿಸಿದರು.
ಶ್ರೀಗಳವರು ಭಗವಂತನನ್ನು ಹೃದಯಗುಹೆಯಲ್ಲಿ ಕಂಡ ಅಪರೋಕ್ಷಜ್ಞಾನಿಗಳು. ಭಕ್ತರು ಚೆನ್ನಾಗಿ ರಕ್ಷಿಸುವ ಪ್ರಭು ಶ್ರೀಹರಿಯೆಂದು ಅವರು ಬಲ್ಲರು. ಶ್ರೀಹರಿಯ ಸಂಕಲ್ಪದಂತೆ ಅವತರಿಸಿ ಸಾರ್ಥಕ ಜೀವನ ನಡೆಸುತ್ತಿದ್ದರೂ ತಾವು ವ್ಯರ್ಥವಾಗಿ ಕಾಲ ಕಳೆದೆವೆಂದು ಭಕ್ತಾಗ್ರಣಿಗಳಾದ ಅವರು ಶ್ರೀಕೃಷ್ಣನಲ್ಲಿ ಮೊರೆಯಿಡುತ್ತಿದ್ದಾರೆ - ದೇವ! ಕಾಲವನ್ನು ವ್ಯರ್ಥವಾಗಿ ಕಳೆದೆ! ಶ್ರೀಕೃಷ್ಣ! ನೀನು ಕರುಣಿಸಿದ ಈ ಶರೀರದಿಂದ ಮುಂದಿನ ಗತಿಗೆ ಅವಶ್ಯವಾದ ಸಾಧನವನ್ನು ಮಾಡಿಕೊಳ್ಳುತ್ತಿಲ್ಲ, ಸ್ವಾಮಿ, ವಿಷಬಾಧೆಯಿಂದ ನನ್ನ ಶರೀರದ ಬಲವೆಲ್ಲ ಕುಗ್ಗುತ್ತಿದೆ. ಇಂದ್ರಿಯಪಾಟವ ಮಂದವಾಗುತ್ತಿದೆ. ಹೀಗಿರುವಾಗ ಸಾಧನ ಮಾಡಿಕೊಳ್ಳುವುದೆಂದು ? ಪ್ರಭು, ನಾನಾರೆಂಬುದನ್ನು ನಿನ್ನ ಅನುಗ್ರಹದಿಂದ ಅರಿತಿದ್ದೇನೆ. ಕರ್ತವ್ಯವೇನೆಂಬುದನ್ನೂ ಬಲ್ಲೆ ಆದರೂ ನನ್ನ ಮೂಲನಿವಾಸದಲ್ಲಿ, ಬ್ರಹ್ಮದೇವರೆಸಗುವ ನಿನ್ನ ಪೂಜಾರಾಧನೆಯಲ್ಲಿ ಸೇವೆ ಸಲ್ಲಿಸಬೇಕೆಂಬ ನನ್ನ ಆಸೆ. ಸತ್ಯಲೋಕದತ್ತ ನನ್ನನ್ನು ಸೆಳೆಯುತ್ತಿದೆ. ಶ್ರೀಶ! ನಿನ್ನಾಜ್ಞೆಯಂತೆ ಕಮಲಾಸನರ ಶಾಪರೂಪ ವರದಿಂದ ಭೂಲೋಕದಲ್ಲಿ ಜನಿಸಿ ನಿನ್ನ ಆರಾಧನೆಯಿಂದ ಗಳಿಸಿದ ಪುಣ್ಯ, ಇನ್ನು ಮುಂದೆ ಗಳಿಸಬೇಕಾಗಿರುವ ಪುಣ್ಯರೂಪ ಧನವನ್ನು ಕಳೆದುಕೊಳ್ಳಲು ಕೇಶವಾಗುತ್ತಿದೆ. ಅದು ನಿನ್ನವರಾದ ಸುಜನರಿಗೆ ಹಂಚಿಕೊಡಬೇಕಾದ ಧನವಾಗಿದೆ. ಅದನ್ನೆಂತು ನಾನು ಕಳೆದುಕೊಳ್ಳಲು ಸಾಧ್ಯ? ಈ ವಿಷದ ಬಾಧೆಯಿಂದ ಮೃತ್ಯುವು ಯಾವಾಗ ಬರುವುದೋ ನಾನರಿಯೆ! ಎಷ್ಟೋ ಜನರು ತಮ್ಮ ಕಾರ್ಯ ಪೂರೈಸುವ ಮೊದಲೇ ಮೃತ್ಯುವಶವಾಗಿರುವುದನ್ನು ಕಂಡಿದ್ದೇನೆ. ಅದು ಅನಿವಾರ್ಯ. ಆದರೂ ಈ ದೇಹ ಸ್ಥಿರವೆಂದು ನಂಬಿಯೇ ಕಾರ್ಯ ಮಾಡಬೇಕಾಗಿದೆಯಲ್ಲವೇ ಸ್ವಾಮಿ ?
ದೇವ! ನಿನ್ನ ಸಂಕಲ್ಪದಂತೆ ಮಾಡಬೇಕಾಗಿರುವ ಮಹತ್ಕಾರ್ಯಗಳು ಬಹಳ ಉಳಿದಿವೆ. ಈ ದೇಹ “ಸ್ಥಿರವಲ್ಲವೆಂದು ಅರಿತಿದ್ದೇವೆ. ಆದರೂ ನಾನು ಮಾಡಬೇಕಾಗಿರುವ ದಾನ-ಧರ್ಮ-ಲೋಕಕಲ್ಯಾಣ-ಗ್ರಂಥರಚನಾದಿಗಳ ದ್ವಾರಾ ನಿನ್ನ ಸತ್ತತ್ವಪ್ರಸಾರ ಮೊದಲಾದ ನಿನಗೆ ಪ್ರಿಯವಾದ ಕಾರ್ಯಗಳನ್ನು ಮಾಡದೆ ನಾನು ಕೇವಲ ಕೀರ್ತಿ, ಪ್ರತಿಷ್ಠೆ, ಸನ್ಮಾನಾದಿಗಳಲ್ಲಿ ಪರವಶನಾಗಿ ಕಾಲಕಳೆದುಬಿಟ್ಟೆ. ನಿನ್ನ ಆಜ್ಞೆಯನ್ನು ಪೂರ್ಣಗೊಳಿಸಲು ಈ ದೇಹ ಉಳಿಯಬೇಕಲ್ಲವೇ? ಆದ್ದರಿಂದ ಹೇ ವಾಸುದೇವ, ಶ್ರೀಕೃಷ್ಣ! ನಿನ್ನ ಸಂಕಲ್ಪದಂತೆ ಕರ್ತವ್ಯಪರನಾಗಲು ನನ್ನನ್ನು ಕಾಪಾಡು” ಎಂದು ಕೃಷ್ಣನಲ್ಲಿ ಪ್ರಾರ್ಥಿಸಿದರು. ಶ್ರೀವ್ಯಾಸತೀರ್ಥರ ಮೇಲಿನ ಪ್ರಾರ್ಥನೆಯ ಸಾರಸೂಚಕವಾದ ಒಂದು ನೂತನ ಕೃತಿಯು ಅವರ ಮುಖದಿಂದ ಹೊರಹೊಮ್ಮಿತು!
ರಾಗ : ಸೌರಾಷ್ಟ್ರ
ಆವಾವ ಬಗೆಯಿಂದ ನೀನೇ ರಕ್ಷಿಸುವೆಯೋ |
ದೇವಾಧಿದೇವ ಶ್ರೀಕೃಷ್ಣ! ನೀನೆನ್ನನು
ಹಿಂದಿನ ಕಾಲವ ವ್ಯರ್ಥವಾಗಿ ಕಳೆದೆನೋ |
ಮುಂದಿನ ಗತಿ ಚಿಂತೆ ಲೇಶವಿಲ್ಲವೋ
||
ಸಂದುಹೋಯಿತು ದೇಹದೊಳಗಿನ ಬಲವೆಲ್ಲ |
ಮಂದವಾದವು ಇಂದ್ರಿಯ ಗತಿಗಳೆಲ್ಲ
ಆಸೆಯೆಂಬುದು ಅಜನಲೋಕಕ್ಕೆ ಮುಟ್ಟುತ್ತಿದೆ | ಕಾಸು ಹೋದರೆ ಕೇಶವಾಗುತಿದೆ ||
ಮೋಸಮಾಡಿ ಮೃತ್ಯು ಬರುವುದ ನಾನರಿಯೇ । ವಾಸುದೇವನೆ! ಎನ್ನು ದಯಮಾಡಿ ಸಲಹೋ
ಜನರು ದೇಹವ ಬಿಟ್ಟು ಪೋಪುದ ನಾ ಕಂಡು |
ಎನ್ನ ದೇಹ ಸ್ಥಿರವೆಂದು ತಿಳಿದು ||
ದಾನ ಧರ್ಮ ಮೊದಲಾದ ಹರಿಯ ನೇಮವ ಬಿಟ್ಟು |
ಹೀನ ವಿಷಯಂಗಳಿಗೆರಗುವೆ ಸಿರಿಕೃಷ್ಣ
ಶ್ರೀವ್ಯಾಸರಾಜ ಗುರುಗಳ ಮೊರೆಯು ಶ್ರೀಕೃಷ್ಣನಿಗೆ ಕೇಳಿಸಿತೆಂದು ತೋರುವುದು. ಕರುಣಾಸಾಗರನಾದ ಆ ಪ್ರಭುವು ತನ್ನ ಪರಮಭಕ್ತನಾದ ಗುರುಗಳಲ್ಲಿ ಅನುಗ್ರಹೋನ್ಮುಖನಾದನು.
ಅಂದು ರಾತ್ರಿ ಶ್ರೀಗಳವರು ಧ್ಯಾನಾಸಕ್ತರಾಗಿರುವಾಗಲೇ ಸ್ವಲ್ಪ ನಿದ್ರೆ ಬಂದಂತಾಗಿ ಆ ಅವಸ್ಥೆಯಲ್ಲಿ ಅವರೊಂದು ಕನಸು ಕಂಡರು. ಸ್ವಪ್ನದಲ್ಲಿ ಗರುಡಧ್ವಜನಾದ ಶ್ರೀಲಕ್ಷ್ಮೀಕಾಂತನು ಶ್ರೀಯವರಿಗೆ ದರ್ಶನವಿತ್ತು ಅವರನ್ನು ಶ್ರೀಮಠದ ಹಿಂಭಾಗದ ತೋಟಕ್ಕೆ ಕರೆದೊಯ್ದು ಅಲ್ಲಿ ಬೇಲಿಯೊಂದರ ಬುಡದಲ್ಲಿರುವ ದಿವ್ಯಮೂಲಿಕೆಯನ್ನು ತೋರಿಸಿ, “ಭಕ್ತರಾಜ! ಇದು ಅಮೃತಸದೃಶವಾದ ಸಿದೌಷಧವು, ಎಲ್ಲ ಬಗೆಯ ವಿಷಬಾಧೆಯನ್ನೂ ಇದು ಪರಿಹರಿಸಿ ದೇಹಕ್ಕೆ ಪುಷ್ಟಿಯನ್ನೂ, ಕಾಂತಿಯನ್ನೂ ನೀಡುವುದು. ಕುಮಾರ! ನೀನು ವೈದ್ಯರಿಂದ ಔಷಧವನ್ನು ಸ್ವೀಕರಿಸದೆ ನನ್ನ ಮೇಲೆಯೇ ನಿನ್ನ ರಕ್ಷಣೆಯ ಭಾರವನ್ನು ವಹಿಸಿ ನನ್ನ ಧ್ಯಾನದಲ್ಲಿಯೇ ಮಗ್ನನಾಗಿ ನನ್ನನ್ನು ನಂಬಿ ಕುಳಿತಿರುವೆ! ನೀನು ನನ್ನ ಪರಮಭಕ್ತಾಗ್ರಣಿಯಾಗಿದ್ದೀಯೆ! ನಿನ್ನನ್ನು ರಕ್ಷಿಸುವ ಹೊಣೆ ನನ್ನದಾಗಿದೆ. ಅನನ್ಯಭಾವದಿಂದ ನನ್ನನ್ನು ಚಿಂತಿಸುತ್ತಾ ಉಪಾಸನೆ ಮಾಡುವ ಅಭಿಯುಕ್ತ ಭಕ್ತರ ಯೋಗಕ್ಷೇಮವನ್ನು ನಾನು ವಹಿಸುತ್ತೇನೆ.' ಇದು ನನ್ನ ಸಂಕಲ್ಪ. ವತ್ಸ! ಈ ಮೂಲಿಕೆಯನ್ನು ಸೇವಿಸು, ಇದರಿಂದ ವಿಷದೋಷ ಪರಿಹಾರವಾಗಿ ಮೊದಲಿನಂತೆ ಆರೋಗ್ಯಶಾಲಿಯಾಗಿ ಕಂಗೊಳಿಸುತ್ತೀಯೆ, ನನ್ನೀ ಆಜ್ಞೆಯನ್ನು ಪರಿಪಾಲಿಸು. ನಿನಗೆ ಮಂಗಳವಾಗಲಿ” ಎಂದು ಅನುಗ್ರಹಿಸಿ ಅಂತರ್ಧಾನ ಹೊಂದಿದನು. ಆ ತರುವಾಯ ಮತ್ತೊಂದು ಕನಸಾಯಿತು. ಆ ಕನಸಿನಲ್ಲಿ ಪಾರ್ವತೀ ಸಮೇತನಾದ ವಿಷಕಂಠನೆಂದು ಖ್ಯಾತನಾದ ಶ್ರೀಏಕಾಂಬರೇಶ್ವರನು ದರ್ಶನವಿತ್ತು ನನ್ನ ಪ್ರಭುವಿನ ಭಕ್ತನಾದ ನಿನಗೆ ಈ ವಿಷಯಪ್ರಯೋಗದಿಂದ ಏನೂ ಆಗಲಾರದು. ಶ್ರೀಹರಿಯು ನಿನಗೆ ಆಜ್ಞಾಪಿಸಿದಂತೆ ವರ್ತಿಸು, ನಿನಗೆ ಮಂಗಳವಾಗುವುದು” ಎಂದು ಹೇಳಿ ಅದೃಶ್ಯನಾದನು.
ಶ್ರೀಯವರು ಎಚ್ಚರಗೊಂಡ ಮೇಲೆ ಎರಡು ಕನಸುಗಳನ್ನೂ ನೆನೆದು ಆನಂದಪರವಶರಾದರು. ಸೂರ್ಯೋದಯವಾದ ಕೂಡಲೇ ಶ್ರೀಗಳವರು ಮಠದ ಪಂಡಿತರು, ಪರಿವಾರದೊಡನೆ ಮಠದ ಹಿಂಭಾಗದಲ್ಲಿದ್ದ ತೋಟಕ್ಕೆ ಹೋಗಿ ಭಗವಂತನು ಸ್ವಪ್ನದಲ್ಲಿ ತೋರಿಸಿದ ಬೇಲಿಯ ಬುಡದಲ್ಲಿ ಅಗೆಸಿದಾಗ ಅಲ್ಲಿ ಮೂಲಿಕೆಗಳು ದೊರಕಿದವು! ಶ್ರೀಗಳವರು ತಮಗಾದ ಸ್ವಪ್ನವನ್ನು ತಿಳಿಸಿ ಪರಿವಾರದವರಿಗೆ ಆ ಮೂಲಿಕೆಯನ್ನು ತರಲು ಆಜ್ಞಾಪಿಸಿದರು ಮತ್ತು ಶ್ರೀಹರಿಯ ಅಪ್ಪಣೆಯಂತೆ ಆ ಮೂಲಿಕೆಯನ್ನು ಔಷಧ ರೂಪವಾಗಿ ಸೇವಿಸಿದರು. ಏನಾಶ್ಚರ್ಯ ! ಕೂಡಲೇ ಶ್ರೀಗಳವರಿಗೆ ತಳಮಳವಾಗಿ ವಿಷಮಿಶ್ರಿತವಾದ ಪಾಯಸವು ವಾಂತಿರೂಪವಾಗಿ ಹೊರಬಂದಿತು ! ಶ್ರೀಯವರಿಗೆ ತುಂಬಾ ಸಮಾಧಾನವಾಯಿತು. ಇದೆಲ್ಲವೂ ಒಂದು ಪವಾಡದಂತೆ ನಡೆದುಹೋಯಿತು! ಶ್ರೀಹರಿಯು ಗುರುಗಳಲ್ಲಿ ಮಾಡಿದ ಅನುಗ್ರಹವನ್ನು ಪ್ರತ್ಯಕ್ಷ ಕಂಡ ಪಂಡಿತರು, ಪರಿವಾರದವರು, ಶ್ರೀಹರಿಯ ಭಕ್ತಿ-ವಾತ್ಸಲ್ಯ, ಶ್ರೀಗಳವರ ಹರಿಭಕ್ತಿ, ಮಹಿಮಾದಿಗಳನ್ನು ಕೊಂಡಾಡಿದರು.
ಶ್ರೀಹರಿಯ ಅನುಗ್ರಹದಿಂದ ಮೂಲಿಕಾ ಸೇವನೆಯಿಂದ ವಿಷವು ಹೊರಬಂದು, ಎಲ್ಲ ಬಗೆಯ ಸಂಕಟವೂ ಪರಿಹಾರವಾಗಿ ಹತ್ತಾರು ದಿನಗಳಲ್ಲಿಯೇ ಗುರುಗಳು ಮೊದಲಿನಂತೆ ಸಂಪೂರ್ಣ ಆರೋಗ್ಯಭಾಗ್ಯ, ವಿಶೇಷ ತೇಜಸ್ಸು, ಕಾಂತಿಗಳಿಂದ ಶೋಭಿಸಹತ್ತಿದರು.
ಶ್ರೀವ್ಯಾಸತೀರ್ಥರಲ್ಲಿ ಭಗವಂತನು ಮಾಡಿದ ಅನುಗ್ರಹ, ವಿಷಪ್ರಯೋಗದಿಂದ ಬಳಲುತ್ತಿದ್ದ ಗುರುಗಳು ವಿಷಬಾಧೆಯಿಂದ ಮುಕ್ತರಾಗಿ ಆರೋಗ್ಯವಂತರಾಗಿ ಮೊದಲಿಗಿಂತ ಹೆಚ್ಚು ಕಾಂತಿ, ತೇಜಸ್ತುಗಳಿಂದ ಕಂಗೊಳಿಸುತ್ತಿರುವುದನ್ನು ಕಣ್ಣಾರೆ ಕಂಡು ಕಂಚಿಯ ಜನರು ಹರ್ಷನಿರ್ಭರರಾದರು. ಇದುವರೆಗೂ ಶ್ರೇಷ್ಠ ಜ್ಞಾನಿಗಳೂ, ವಾದವಿದ್ಯಾಕೋವಿದರೆಂದು ಗೌರವಿಸುತ್ತಿದ್ದ ಪಂಡಿತರು, ಆಸ್ತಿಕರು ಶ್ರೀಗಳವರು ವಿಷವನ್ನೂ ಅರಗಿಸಿಕೊಂಡ ಮಹಾತ್ಮರೆಂದು ತಿಳಿದು ಅವರನ್ನು ಕೊಂಡಾಡಹತ್ತಿದರು.
ಮಹಾಕವಿ ಸೋಮನಾಥನು ಈ ವಿಷಪ್ರಯೋಗ ಪ್ರಕರಣವನ್ನು ತನ್ನ ಶ್ರೀವ್ಯಾಸಯೋಗಿಚರಿತೆ"ಯಲ್ಲಿ ಹೀಗೆ ನಿರೂಪಿಸಿದ್ದಾನೆ -
“ಇತ್ಥಮಚಿರಾದೇವ ಅಧಿಗತ ಸಮಸ್ತವಿದ್ಯಾಯ ಸತತಂ ವಿವಾದಯಿಷಯಾ ಸುರತಾದಶನವಾಸಸಾ ತರ್ಜನ ಇವ ಶಾರದಾವಾಚಾರಭಟಮಪಿ ತ ಮಹಾಯೋಗಿನೇ ಜಾತುಚಿತೇಜೋವಿಶೇಷಮಸಹಿಷ್ಣುನಾ ಕೇನಾಪಿ ಬ್ರಹ್ಮಬಂಧುನಾ ಧಾರ್ತರಾಷ್ಟ್ರೀಣೇವ ದುರಾತ್ಮನಾ ಭೀಮಸೇನಾಯ ಗರಲಂ ಕಬಲಗೋಪಿತಂ ಪ್ರಾಮುಂ ಅರಂತುದೇವ ತೇನ ತಸ್ಯ ತನುಶ್ಯರದೀವ ಶೈವಲಿನೀ, ಬಾಹುಲೀವ ಶಶಿಮಂಡಲೀ, ಶೈಶಿರೀವ ಸಹಕಾರಲತಾ, ದಿನೇ ದಿನೇ ಸುಷುಮೈಕಶೇಷಂ ತನಿಮಾನಮಭಜತ, ತಾವತ್ಸ ಭಕ್ತವತ್ಸಲೇನ ಕರುಣಾವಶಂವದೇನ ಭಗವತಾ ಗರುಡಧ್ವಜೇನ ಸ್ವಪ್ನನಿರ್ದಿಷ್ಟಾಯಾ ಸ್ನಾಕ್ಷಾದಿನ ಧನ್ವಂತರೀಕುಲದೇವತಾಯಾಃ ಕಸ್ಯಾನ ಹೌಷಧಿಮೂಲಿಕಾಯಾಃ ಸದ್ಯಸನೇನೇವ ಯೋಗೇನ ಪ್ರತ್ಯಾಸನ್ನರೂಪಯಾಮೂರ್ತ್ಯಾ ಗ್ರಾಹಮುಕ್ತ ಇವ ಗಜಯೂಥನಾಥಃ ಪೂರ್ವಾದಪ್ಯಧಿಕಮ- ಶೋಭತ ” - ಶ್ರೀವ್ಯಾಸಯೋಗಿಚರಿತಮ್ - ಪುಟ. ೩೮-೩೯.
ಭಾವಃ : ಇಂತು ಅನತಿಕಾಲದಲ್ಲಿಯೇ ನಿಖಿಲತಂತ್ರ ಸ್ವತಂತ್ರರಾಗಿ, ವಾದವಿದ್ಯಾವಿಶಾರದರಾಗಿ, ತಮ್ಮ ಅಪ್ರತಿಹತ ವಾದವೈಖರಿಯಿಂದ ಸಕಲವಿದ್ಯೆಗಳಲ್ಲಿ ಕೋವಿದರಾದ ಪರಮತವಿಬುಧಾನೀಕವನ್ನು ನಿರಾಕರಿಸುವ ಮಹಾಮಹಿಮೋಪೇತ- ರಾದ ಆ ಪರಮಹಂಸ ಶಿಖಾಮಣಿಗಳಾದ ಶ್ರೀವ್ಯಾಸತೀರ್ಥರ ಅತಿಶಯ (ಅಸಾಧಾರಣ) ಪ್ರಭಾವವನ್ನು ಕಂಡು ಸಹಿಸಲಾರದ, ಮಾತ್ಸರ್ಯಪೂರ್ಣ ಬುದ್ಧಿಯ ಓರ್ವ ಬ್ರಾಹ್ಮಣಾಧಮನು; ದುಷ್ಟನಾದ ದುರ್ಯೋಧನನು ಭೀಮಸೇನನಿಗೆ ವಿಷಪ್ರಯೋಗ ಮಾಡಿದಂತೆ ವಿಷಮಿಶ್ರಿತ ಭೋಜನವನ್ನು ಉಣಬಡಿಸಿದನು.
ಬಹು ತೀವ್ರವೂ, ತಾಪಕರವೂ ಆದ ಆ ವಿಷದ ಜ್ವಾಲೆ(ಬಾಧೆ)ಯಿಂದ ಯೋಗಿವರ್ಯರಾದ ಶ್ರೀವ್ಯಾಸರಾಯರ ದೇಹವು ಶರತ್ಕಾಲಿನ ಶೈವಲಿಯಂತೆಯೂ ಕೃಷ್ಣಪಕ್ಷದ ಚಂದ್ರಮಂಡಲದಂತೆಯೂ, ಶಿಶಿರ ಋತುವಿನ ಸಿಹಿ ಮಾವಿನಮರದ (ಸಹಕಾರಲತಾ) ಎಲೆಯ ಚಿಗುರಿನಂತೆಯೂ, ದಿನದಿನಕ್ಕೂ ಕಾಂತಿಯುಕ್ತವಾಗಿದ್ದರೂ (ಕಾಂತಿಮಾತ್ರಾವಶಿಷ್ಟವಾಗಿ ಕೃಶವಾಗತೊಡಗಿತು. ಅದೇ ಸಮಯದಲ್ಲಿ ಭಕ್ತವತ್ಸಲನೂ, ಕರುಣಾವಶಂವದನೂ, ಪರಾತ್ಪರನೂ (ಭಗವಂತನೂ) ಆದ ಗರುಡಧ್ವಜನಾದ ಶ್ರೀಲಕ್ಷ್ಮೀಕಾಂತನು ಸ್ವಪ್ನದಲ್ಲಿ ಅನುಗ್ರಹಿಸಿ ಸೂಚಿಸಿದ ಧನ್ವಂತರೀ ಕುಲದೇವ ಸದೃಶವಾದ ಒಂದು ಮಹಾ ಔಷಧ ಮೂಲಿಕೆಯನ್ನು ಉಪಯೋಗಿಸಿದ್ದರಿಂದ ಶ್ರೀವ್ಯಾಸಯತಿಗಳಿಗೆ ವಿಷಬಾಧಾ ಪರಿಹಾರವಾಗಿ ಮತ್ತು ದೇಹಪುಷ್ಟಿಯಾಗಿ ಮೊದಲಿನಂತೆ ಆರೋಗ್ಯಭಾಗ್ಯಯುಕ್ತ ಶರೀರವುಳ್ಳವರಾದರು. ಮೊಸಳೆಯ ಹಿಡಿತದ ಬಾಧೆಯಿಂದ ಮುಕ್ತನಾದ ಗಜೇಂದ್ರನಂತೆ ಶ್ರೀವ್ಯಾಸತೀರ್ಥರು ಹಿಂದಿಗಿಂತಲೂ ಅಧಿಕವಾದ ಕಾಂತಿ, ತೇಜಸ್ಸುಗಳಿಂದ ಕಂಗೊಳಿಸಿದರು ಈ ವಿಷಯಪ್ರಯೋಗ ಪ್ರಕರಣವು ಜರುಗಿ ಭಗವದನುಗ್ರಹದಿಂದ ಆರೋಗ್ಯಭಾಗ್ಯ ಪಡೆದ ಮೇಲೆ ಕೆಲವು ದಿನಗಳ ಕಾಲ ಕಂಚಿಯಲ್ಲಿ ವಾಸಮಾಡಿದ ಶ್ರೀವ್ಯಾಸರಾಜ ಯತೀಶ್ವರರು ಕಂಚಿಯ ಮಹಾರಾಜ ವಿದ್ಯಾಪೀಠದ ಪಂಡಿತರು, ಧಾರ್ಮಿಕರಾದ ಪುರಪ್ರಮುಖರು ಮತ್ತು ಶಿಷ್ಯಜನರು, ಭಕ್ತಜನರುಗಳು ನೀಡಿದ ಅಭೂತಪೂರ್ವ ಬೀಳ್ಕೊಡುಗೆಯೊಡನೆ ಅಸಾಧಾರಣ ಕೀರ್ತಿ-ಪ್ರತಿಷ್ಠೆಗಳಿಂದ ಯುಕ್ತರಾಗಿ ಪ್ರಸನ್ನಚಿತ್ತದಿಂದ ಶ್ರೀಕಾಂಚೀನಗರದ ಅಧಿದೇವತೆಯಾದ ಶ್ರೀವರದರಾಜಸ್ವಾಮಿ, ಶ್ರೀತ್ರಿವಿಕ್ರಮದೇವರು, ಶ್ರೀಏಕಾಂಬರೇಶ್ವರ ಮತ್ತು ಶ್ರೀಕಾಮಾಕ್ಷೀದೇವಿಯರಿಗೆ ಬಹು ಭಕ್ತಿಭಾವದಿಂದ ನಮಸ್ಕರಿಸಿ, ಪ್ರಸಾದ ಸ್ವೀಕರಿಸಿ, ಅಪ್ಪಣೆ ಪಡೆದು ಕಂಚಿಯಿಂದ ಹೊರಟು ಅನೇಕ ದೇಶಗಳನ್ನು ನೋಡಿ ಆನಂದಿಸುತ್ತಾ, ನಿಧಾನವಾಗಿ ಮುಳ್ಳನಗರಿಗೆ (ಮುಳಬಾಗಿಲಿಗೆ) ಬಂದು ಸೇರಿದರು.'
ಶ್ರೀವ್ಯಾಸರಾಜ ಗುರುಗಳು ಕಂಚಿಯಲ್ಲಿ ಅಪೂರ್ವ ದಿಗ್ವಿಜಯವನ್ನು ಸಾಧಿಸಿ ದೈತವಿಜಯಪತಾಕೆಯನ್ನು ಮೆರೆಸಿ ಮುಳಬಾಗಿಲಿಗೆ ಬರುತ್ತಿರುವ ವಿಚಾರವನ್ನು ಪೂರ್ವಭಾವಿಯಾಗಿ ತಿಳಿದ ಶ್ರೀಲಕ್ಷ್ಮೀನಾರಾಯಣಮುನಿಗಳು ಪ್ರಿಯಶಿಷ್ಯರನ್ನು ಸ್ವಾಗತಿಸಿ ಮೆರವಣಿಗೆಯಿಂದ ಶ್ರೀಮಠಕ್ಕೆ ಕರೆದುತಂದರು. ಸಾಷ್ಟಾಂಗ ನಮಸ್ಕಾರ ಮಾಡಿದ ಶಿಷ್ಯರನ್ನು ಭರದಿಂದ ಆಲಿಂಗಿಸಿ ಆನಂದಬಾಷ್ಪ ಸುರಿಸಿದರು. ಸಹಸ್ರಾರು ಜನ ಈ ಪವಿತ್ರ ಗುರುಶಿಷ್ಯರ ಸಮಾಗಮ ಪ್ರೇಮಗಳನ್ನು ಕಂಡು ಕೃತಾರ್ಥರಾಗಿ ಆನಂದದಿಂದ ಗುರುಶಿಷ್ಯರ ಜಯಕಾರ ಮಾಡಿದರು.
ಸ್ವಾಗತ ಸಮಾರಂಭವು ಮುಕ್ತಾಯವಾದ ಮೇಲೆ ಆತ್ಮೀಯರ ಕೋರಿಕೆಯಂತೆ ಶ್ರೀವ್ಯಾಸರಾಜಗುರುವರರು ಕಂಚಿಯಲ್ಲಿ ಜರುಗಿದ ಸಮಸ್ತ ವೃತ್ತಾಂತವನ್ನೂ ಸಾದ್ಯಾಂತವಾಗಿ ಗುರುಗಳಲ್ಲಿ ನಿವೇದಿಸಿದರು. ಅದನ್ನು ಕೇಳಿ ಸಕಲರೂ ಸಂತುಷ್ಟರಾಗಿ ವ್ಯಾಸತೀರ್ಥರನ್ನು ಕೊಂಡಾಡಿದರು.