|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ನಾಲ್ಕನೆಯ ಉಲ್ಲಾಸ

ಶ್ರೀವ್ಯಾಸರಾಜಯತಿಸಾರ್ವಭೌಮರು

೧೮. ಶ್ರೀಪಂಢರಾಪುರ ಯಾತ್ರೆ

ಶ್ರೀಶಾಲಿವಾಹನ ಶಕೆ ೧೩೪೭ನೇ ಧಾತು ಸಂ| ವೈಶಾಖ ಶುಕ್ಲ ಪಾಡ್ಯ (ಕ್ರಿ.ಶ. ೧೪೫೫), ಮುಳಬಾಗಿಲಿನ ಶ್ರೀಪದ್ಮನಾಭತೀರ್ಥರ ಸತ್ಪರಂಪರೆಯ ವಿದ್ಯಾಮಠದಲ್ಲಿ ಶ್ರೀಲಕ್ಷ್ಮೀನಾರಾಯಣಮುನಿಗಳು ಮೀಮಾಂಸಾಶಾಸ್ತ್ರ ಪಾಠ ಹೇಳುತ್ತಿದ್ದಾರೆ. ಅನೇಕ ಪಂಡಿತರು, ನೂರಾರು ಜನ ವಿದ್ಯಾರ್ಥಿಗಳು ಶ್ರೀಯವರ ವಿದ್ದತ್ತೂರ್ಣ ಪಾಠವನ್ನು ಆಲಿಸುತ್ತಾ ಆನಂದಿಸುತ್ತಿದ್ದಾರೆ. 

ಅದೇ ಸಮಯದಲ್ಲಿ ಶ್ರೀಬ್ರಹ್ಮಣ್ಯತೀರ್ಥರ ಶಿಷ್ಯರೂ, ಮಠದ ಪಂಡಿತರೂ ಆದ ವೆಂಕಟರಮಣಾಚಾರ್ಯರು ಬಂದು ಶ್ರೀಪಾದಂಗಳವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಅವರನ್ನು ಕಂಡು ಶ್ರೀಗಳವರು “ವೆಂಕಟರಮಣಾಚಾರ್ಯ, ಇದೇನು, ಬಹಳ ಅಪರೂಪವಾಗಿ ಬಂದಿರುವಿರಿ? ಎಲ್ಲವೂ ಕುಶಲವಷ್ಟೇ ?” ಎಂದು ಕೇಳಿದರು. ವೆಂಕಟರಮಣಾಚಾರ್ಯರು ವಿನಯದಿಂದ “ಗುರುದೇವರ ಅನುಗ್ರಹಬಲದಿಂದ ಎಲ್ಲವೂ ಕುಶಲ. ಹಿರಿಯ ಶ್ರೀಪಾದಂಗಳವರು ವರಕುಮಾರನೊಡನೆ ತಮ್ಮ ದರ್ಶನಕ್ಕಾಗಿ ದಯಮಾಡಿಸುತ್ತಿದ್ದಾರೆ. ಶ್ರೀಯವರು ಪೂರ್ವಭಾವಿಯಾಗಿ ತಮಗೆ ಈ ವಿಚಾರವನ್ನು ವಿಜ್ಞಾಪಿಸುವಂತೆ ಆಜ್ಞಾಪಿಸಿದ್ದರಿಂದ ಬಂದಿದ್ದೇನೆ” ಎಂದು ತಿಳಿಸಿದರು. 

ಅದನ್ನು ಕೇಳಿ ಶ್ರೀಗಳವರಿಗೆ ಬಹಳ ಆನಂದವಾಯಿತು. “ಏನು ? ಹಿರಿಯ ಗುರುಗಳು, ಪ್ರಿಯಶಿಷ್ಯರೊಡನೆ ಆಗಮಿಸುತ್ತಿರುವರೆ ? ಇದೆಂತಹ ಸೌಭಾಗ್ಯ! ಶ್ರೀಯವರು ಯಾವಾಗ ದಯಮಾಡಿಸುವರು?” ಎಂದು ಪ್ರಶ್ನಿಸಲು ವೆಂಕಟರಮಣಾಚಾರ್ಯರು “ಗುರುವರ್ಯ! ಇನ್ನೇನು ಹಿರಿಯ ಗುರುಗಳು ಬರುವ ಸಮಯವಾಯಿತು” ಎಂದರುಹಿದರು. 

ಶ್ರೀಗಳವರು ಗಡಿಬಿಡಿಯಿಂದ ಮೇಲೆದ್ದು ಶ್ರೀಮಠದ ಬಿರುದಾವಳಿ, ವಾದ್ಯವೈಭವ, ಪಂಡಿತರ ವೇದಘೋಷ, ಪೂರ್ಣಕುಂಭಗಳೊಡನೆ ಶ್ರೀಬ್ರಹ್ಮಣ್ಯತೀರ್ಥರನ್ನು ಸ್ವಾಗತಿಸಲು ಸಿದ್ಧವಾಗುತ್ತಿದ್ದಂತೆಯೇ ಶ್ರೀಪಾದಂಗಳವರು ಮಂಡಿಸಿದ್ದ ಮೇನೆಯು ಶ್ರೀಮಠದ ಮುಂದೆ ಬಂದು ನಿಂತಿತು. ಶ್ರೀಬ್ರಹ್ಮಣ್ಯತೀರ್ಥರು ಶ್ರೀವ್ಯಾಸತೀರ್ಥರೊಡನೆ ಮೇನೆಯಿಂದಿಳಿದರು. ಶ್ರೀಲಕ್ಷ್ಮೀನಾರಾಯಣಮುನಿಗಳು ಶ್ರೀಗಳವರತ್ತ ಧಾವಿಸಿದರು. ಬ್ರಹ್ಮಣ್ಯತೀರ್ಥರೂ ಸ್ನೇಹಾತಿಶಯದಿಂದ ಮುಂದೆ ಬಂದರು. ಈರ್ವರೂ ಪರಸ್ಪರ ಆಲಂಗಿಸಿದರು. ಇಬ್ಬರ ಕಣ್ಣಿನಲ್ಲಿಯೂ ಆನಂದಭಾಷ್ಪ ಹರಿಯುತ್ತಿದೆ. ಶ್ರೀವ್ಯಾಸತೀರ್ಥರು ಮುಂದೆ ಬಂದು ಶ್ರೀಲಕ್ಷ್ಮೀನಾರಾಯಣಮುನಿಗಳಿಗೆ ನಮಸ್ಕರಿಸಿದರು. ಅವರನ್ನು ಕಂಡು ಹರ್ಷಭರಿತರಾದ ಗುರುಗಳು ಅವರನ್ನು ಆಲಿಂಗಿಸಿ ಶಿರದ ಮೇಲೆ ಕರವಿರಿಸಿ, ಆಶೀರ್ವದಿಸಿ, ಉಭಯಗುರುಗಳನ್ನೂ ಪೂರ್ಣಕುಂಭ, ಮಂಗಳವಾದ್ಯ - ವೇದಘೋಷಗಳೊಡನೆ ಸ್ವಾಗತಿಸಿ ಶ್ರೀಮಠಕ್ಕೆ ಕರೆತಂದು ಸಿದ್ಧಪಡಿಸಲಾದ ಆಸನಗಳಲ್ಲಿ ಕೂಡಿಸಿ ತಾವೂ ಆಸೀನರಾದರು. 

ಕುಶಲಪ್ರಶ್ನೆಗಳಾದ ಮೇಲೆ ಲಕ್ಷ್ಮೀನಾರಾಯಣಯತಿಗಳು “ಇದೆಂಥ ಅಲಭ್ಯ ಲಾಭ! ಪೂಜ್ಯರ ದರ್ಶನವಾಗಿ ಅದೆಷ್ಟು ವರ್ಷಗಳಾದವು! ಹಿರಿಯರ ದರ್ಶನದಿಂದ ಪರಮಾನಂದವಾಯಿತು. ಇವರೇ ತಮ್ಮ ವರಕುಮಾರರಲ್ಲವೇ ? ದೈತಸಿದ್ಧಾಂತದ ಭಾಗ್ಯರವಿಯಂತೆ ಕಂಗೊಳಿಸುತ್ತಿರುವರು, ಶ್ರೀವೇದವ್ಯಾಸದೇವರೇ ನಿಮಗೆ ಒಲಿದು ಅನುಗ್ರಹಿಸಿದ ವರಕುಮಾರಕರೆಂದಮೇಲೆ ಹೇಳುವುದೇನು ? ಇವರು ಶ್ರೀಮದಾಚಾರ್ಯರ ಸಿದ್ಧಾಂತ ಸ್ಥಾಪನೆಗಾಗಿಯೇ ಅವತರಿಸಿರುವರೆಂದು ನಮಗೆ ಭಾಸವಾಗುತ್ತಿದೆ. ಇವರನ್ನು ನೋಡಿ ಪರಮಾನಂದವಾಯಿತು” ಎಂದು ಹೇಳಲು ಶ್ರೀಬ್ರಹ್ಮಣ್ಯತೀರ್ಥರು ನಸುನಗುತ್ತಾ ನೀವು ಹೇಳಿದ ಭವಿಷ್ಯವನ್ನು ಕಾರ್ಯರೂಪಕ್ಕೆ ತರುವ ಭಾರ ನಿಮಗೇ ಸೇರಿದೆ” ಎಂದರು. 

ಶ್ರೀಲಕ್ಷ್ಮೀನಾರಾಯಣಮುನಿಗಳು ಅನಂತರ “ಇದೇನು ಅಪರೂಪವಾಗಿ ಚಿತ್ತೈಸೋಣವಾಗಿದೆಯಲ್ಲ' ಎನಲು ಶ್ರೀಬ್ರಹ್ಮಣ್ಯಮುನಿಗಳು ನಗುತ್ತಾ “ಮಹಾಸಂಸ್ಥಾನದ ಒಂದು ಮಹತ್ವಪೂರ್ಣ ಕಾರ್ಯಸಾಧನೆಗಾಗಿ ನಿಮ್ಮಲ್ಲಿಗೆ ಬಂದಿದ್ದೇವೆ. ಶ್ರೀಹರಿವಾಯುಗಳ ಪ್ರೇರಣೆಯಾಯಿತು. ಕೂಡಲೇ ಹೊರಟುಬಿಟ್ಟೆವು. ಆದರಿಂದಲೇ ನಿಮಗೆ ಪೂರ್ವಭಾವಿಯಾಗಿ ತಿಳಿಸಲು ಸಾಧ್ಯವಾಗಲಿಲ್ಲ” ಎಂದು ಹೇಳಿದರು. 

ಅಪಾರ್ವ ಸಹೋದರರೂ, ಜ್ಞಾನಿಗಳೂ, ಮಹಾಪೀಠಾಧೀಶ್ವರರೂ ಆದ ಆ ಮಹನೀಯರ ಸಮಾಗಮದಿಂದ ಸಕಲರೂ ಆನಂದತುಂದಿಲರಾದರು. ಅನಂತರ ಉಭಯ ಶ್ರೀಪಾದಂಗಳವರು ದೇವರ ಪೂಜೆಯನ್ನು ನೆರವೇರಿಸಿ, ಸರ್ವರಿಗೂ ತೀಥ-ಪ್ರಸಾದ ವಿನಿಯೋಗ ಮಾಡಿದ ಮೇಲೆ ಭಿಕ್ಷಾ ಸ್ವೀಕಾರ ಮಾಡಿದರು. 

ಮಧ್ಯಾಹ್ನ ವಿಶ್ರಾಂತಿಯಲ್ಲಿರುವಾಗ ಶ್ರೀಬ್ರಹ್ಮಣ್ಯತೀರ್ಥರು ಶ್ರೀವ್ಯಾಸರಾಜರಿಂದ ಶ್ರೀಲಕ್ಷ್ಮೀನಾರಾಯಣಮುನಿಗಳಿಗೆ ನಮಸ್ಕಾರ ಮಾಡಿಸಿ ಅವರ ಕರವನ್ನು ಮುನಿಗಳ ಕರದಲ್ಲಿಟ್ಟು “ನಮ್ಮ ಈ ಶಿಷ್ಯರನ್ನು ನಿಮಗೆ ಒಪ್ಪಿಸುತ್ತಿದ್ದೇವೆ. ಇವರಿಗೆ ಸಕಲ ಶಾಸ್ತ್ರಗಳು ಮುಖ್ಯವಾಗಿ ದೈತಸಿದ್ಧಾಂತ ಗ್ರಂಥಗಳನ್ನು ಶ್ರೀಮದಾಚಾರ್ಯ ಪರಂಪರಾಗತ ಸಂಪ್ರದಾಯದಂತೆ ಪಾಠ ಹೇಳಿ ಇವರನ್ನು ಶ್ರೇಷ್ಠ ಪಂಡಿತರನ್ನಾಗಿ ಮಾಡುವ ಭಾರವನ್ನು ನಿಮಗೆ ವಹಿಸುತ್ತಿದ್ದೇವೆ. ನಮ್ಮ ಮನೋಭಿಲಾಷೆಯನ್ನು ನೀವು ಪೂರ್ಣಗೊಳಿಸಿ ಇವರು ಶ್ರೀಮದಾಚಾರ್ಯ ಸಿದ್ಧಾಂತ ಸ್ಥಾಪಕರಾಗಿ ಮಹಾಸಂಸ್ಥಾನವನ್ನು ಮುಂದುವರೆಸಿಕೊಂಡು ಹೋಗಲು ಸಮರ್ಥರಾಗುವಂತೆ ಮಾಡಿ ನಮ್ಮಲ್ಲಿಗೆ ಕಳುಹಿಸಿಕೊಡಬೇಕು” ಎಂದು ತಿಳಿಸಿದರು. 

ಆನಂದಭಾಷಸಿಕ್ತನಯನಾದ ಶ್ರೀಲಕ್ಷ್ಮೀನಾರಾಯಣಮುನಿಗಳು “ದೊಡ್ಡಮಾತನಾಡೋಣವಾಯಿತು, ನಿಮ್ಮ ಆಶೆಯನ್ನು ಸಫಲಗೊಳಿಸಲು ಶ್ರೀಹರಿವಾಯುಗಳು ಸಮರ್ಥರಿದ್ದಾರೆ. ಈ ವಿಚಾರದಲ್ಲಿ ಸಂಶಯವಿಲ್ಲ. ತಾವು ನಮಗೆ ಒಪ್ಪಿಸಿದ ಭಾರವನ್ನು ಯಶಸ್ವಿಯಾಗಿ ಸಫಲಗೊಳಿಸುತ್ತೇವೆಂದು ನಾವು ನಿಮಗೆ ವಚನ ಕೊಡುತ್ತೇವೆ. ಆದರೆ.......” ಎಂದು ಅರ್ಧಕ್ತಿಯಿಂದ ಸುಮ್ಮನಾಗಲು, ಬ್ರಹ್ಮಣ್ಯತೀರ್ಥರು ಕಾತರದಿಂದ ಆದರೇನು ?” ಎಂದು ಪ್ರಶ್ನಿಸಿದರು. 

ಆಗ ಲಕ್ಷ್ಮೀನಾರಾಯಣಯತಿಗಳು ನಸುನಕ್ಕು “ಪ್ರಾಜ್ಯರೇ, ಮತ್ತೇನಿಲ್ಲ, ನಾವೀಗ ಶ್ರೀಹರಿಯ ಪ್ರೇರಣೆಯಂತೆ ಪಂಢರಾಪುರ ಯಾತ್ರೆಗೆ ಹೊರಡಲಿದ್ದೇವೆ. ಪಂಚಮೀ ದಿವಸ ಹೊರಡಲು ಮುಹೂರ್ತವಿಡಿಸಿದ್ದೇವೆ. ನಮಗೊಂದು ವಿಚಾರ ಸ್ಪುರಿಸುತ್ತಿದೆ. ಇದು ಭಗವಂತನ ಪ್ರೇರಣೆಯೆಂದೇ ಹೇಳಬಹುದು. ವ್ಯಾಸತೀರ್ಥರಿಗೆ ಪಾಠಪ್ರವಚನ ಮಾಡಿಸಲು ನೀವು ಅವರನ್ನು ಕರೆತಂದಿರುವಾಗಲೇ ನಾವು ಯಾತ್ರೆ ಹೊರಡುತ್ತಿರುವುದೂ ಒಂದು ಯೋಗ ಮತ್ತು ಇವರ ಅಭ್ಯುದಯದ ಮುನ್ಸೂಚನೆಯೆಂದು ನಾವು ಭಾವಿಸುತ್ತೇವೆ. ಶ್ರೀಮದಾಚಾರ್ಯರ ಶಾಸ್ತ್ರಾಧ್ಯಯನ ಮಾಡುವ ಮುಂಚೆ ಶ್ರೀಪಾಂಡುರಂಗನ ದರ್ಶನ ಮಾಡಿ ಅನುಗ್ರಹ ಸಂಪಾದಿಸುವುದು ಮಂಗಳಕರವಾದುದು. ಹೇಗಿದ್ದರೂ ತಾವು ಮಿತಪರಿವಾರದೊಡನೆ ಬಂದಿರುವಿರಿ. ತಾವೂ, ಶ್ರೀವ್ಯಾಸತೀರ್ಥರೂ ನಮ್ಮ ಜತೆಗೆ ಪಂಢರಾಪುರ ಯಾತ್ರೆಗೆ ದಯಮಾಡಿಸಿದರೆ ಅನಾಯಾಸವಾಗಿ ನಮ್ಮೆಲ್ಲರಿಗೂ ಶ್ರೀವಿಠಲನ ದರ್ಶನವೂ ಅನುಗ್ರಹವೂ ಲಭಿಸಿ ನಮಗೆ ನೀವೊಪ್ಪಿಸಿದ ಜ್ಞಾನಕಾರ್ಯವು ನಿರ್ವಿಘ್ನವಾಗಿ ಜರುಗುವುದೆಂದು ನಾವು ನಂಬಿದ್ದೇವೆ. ನಾಳೆ ದ್ವಿತೀಯಾ ಶುಭದಿನವಾಗಿದೆ. ನಾಳೆಯಿಂದಲೇ ವ್ಯಾಸತೀರ್ಥರಿಗೆ ಪಾಠವನ್ನು ಪ್ರಾರಂಭಿಸಿಬಿಡುತ್ತೇವೆ. ಯಾತ್ರಾಕಾಲದಲ್ಲಿಯೂ ಪಾಠಪ್ರವಚನವನ್ನು ನೆರವೇರಿಸೋಣ. ಇದು ನಮ್ಮ ಅಭಿಪ್ರಾಯ. ಇದಕ್ಕೆ ತಾವು ಸಮ್ಮತಿಸಬೇಕು. ನಮ್ಮ ಸಾಳುವ ನರಸಿಂಹರಾಯ ಈ ಯಾತ್ರೆ ಯಶಸ್ವಿಯಾಗಲು ಎಲ್ಲ ಅನುಕೂಲಗಳನ್ನೂ ಏರ್ಪಡಿಸಿದ್ದಾನಾದ್ದರಿಂದ ಯಾತ್ರೆಯು ಸುಗಮವಾಗಿ ನೆರವೇರುವುದು” ಎಂದು ತಿಳಿಸಿದರು.

ಶ್ರೀಬ್ರಹ್ಮಣ್ಯತೀರ್ಥರು ಸ್ವಲ್ಪಕಾಲ ಯೋಚಿಸಿ ಅನಂತರ ಸಂತೋಷದಿಂದ ಶ್ರೀಹರಿಚಿತ್ತ. ಅನಾಯಾಸವಾಗಿ ಶ್ರೀಹರಿದರ್ಶನ ಲಭಿಸುವುದೂ ಒಂದು ಯೋಗ, ನಿಮ್ಮ ಇಚ್ಛೆಯಂತೆಯೇ ಆಗಲಿ” ಎಂದು ತಮ್ಮ ಸಮ್ಮತಿಯನ್ನು ಸೂಚಿಸಿದರು. ಇದರಿಂದ ಲಕ್ಷ್ಮೀನಾರಾಯಣಮುನಿಗಳಿಗೆ ಸಂತೋಷವಾಯಿತು. 

ಮೊದಲೇ ನಿಶ್ಚಯಿಸಿದ್ದಂತೆ ಮಿತಪರಿವಾರರಾಗಿ ಶ್ರೀಲಕ್ಷ್ಮೀನಾರಾಯಣಮುನಿಗಳು, ಶ್ರೀಬ್ರಹ್ಮಣ್ಯತೀರ್ಥರು ಮತ್ತು ಶ್ರೀವ್ಯಾಸತೀರ್ಥರೊಡನೆ ಪಂಚಮಿ ದಿವಸ ಪಂಢರಾಪುರ ಯಾತ್ರೆಯನ್ನು ಕೈಗೊಂಡು ಮುಳಬಾಗಿಲಿನಿಂದ ಪ್ರಯಾಣ 

ಬೆಳೆಸಿದರು.