
ಕಲಿಯುಗ ಕಲ್ಪತರು
ನಾಲ್ಕನೆಯ ಉಲ್ಲಾಸ
ಶ್ರೀವ್ಯಾಸರಾಜಯತಿಸಾರ್ವಭೌಮರು
೧೦. ಪುತ್ರದಾನ
ಯತಿರಾಜನ ನಾಮಕರಣವಾಗಿ ಹತ್ತಾರು ದಿನಗಳು ಕಳೆದಿವೆ. ಒಂದು ದಿನ ರಾಮಾಚಾರ್ಯ ದಂಪತಿಗಳು, ಬಂಧು-ಬಾಂಧವರಿಂದೊಡಗೂಡಿ ಬನ್ನೂರಿಗೆ ಪ್ರಯಾಣ ಬೆಳೆಸಲು ಸಿದ್ದರಾಗಿ ಶ್ರೀಗಳವರಿಗೆ ನಮಸ್ಕರಿಸಿ, “ರಾಜರೇ, ಯತಿರಾಜನ ನಾಮಕರಣ ಸಮಾರಂಭವನ್ನು ಬಹಳ ವೈಭವದಿಂದ ನೆರವೇರಿಸಿಕೊಟ್ಟು ಶಿಷ್ಯನಲ್ಲಿ ಪರಮಾನುಗ್ರಹ ಮಾಡೋಣವಾಯಿತು. ಇನ್ನು ಬನ್ನೂರಿಗೆ ತೆರಳಲು ಅಪ್ಪಣೆ ದಯಪಾಲಿಸಬೇಕು” ಎಂದು ಪ್ರಾರ್ಥಿಸಿದರು.
ಬ್ರಹ್ಮಣ್ಯಮುನಿಗಳು “ವತ್ತ! ನೀನು ವಚನವಿತ್ತಂತೆ ಚಿರಂಜೀವ ಯತಿರಾಜನನ್ನು ನಮಗೆ ಸಮರ್ಪಿಸುವುದೇ ನಿನು
ಮಾಡಬಹುದಾದ ಮಹೋಪಕಾರವೆಂದು ತಿಳಿ” ಎಂದರು.
ಗುರುಗಳ ವಚನವನ್ನಾಲಿಸಿ ರಾಮಾಚಾರ್ಯ ದಂಪತಿಗಳಿಗೆ ಭಯವಾಯಿತು. ರಾಮಾಚಾರ್ಯರು ಸ್ವಲ್ಪಕಾಲ ಮೌನವಾಗಿದ್ದು, ನಂತರ ಹೇಗೋ ಉಕ್ಕಿಬರುತ್ತಿರುವ ದುಃಖ, ಕಣ್ಣೀರುಗಳನ್ನು ತಡೆದುಕೊಂಡು "ಸ್ವಾಮೀ! ಕುಮಾರನನ್ನೂ ತಮಗೆ ಸಮರ್ಪಿಸುವುದಾಗಿ ನಾವು ನೀಡಿದ ವಚನವನ್ನು ಮರೆತಿಲ್ಲ! ಆದರೆ..... ಗುರುದೇವ ಶಿಶುವಾಗಿರುವ ಇವನನ್ನು ತಾವು ಸ್ವೀಕರಿಸಲು ಅರ್ಹನಾಗುವಂತೆ, ಪೋಷಿಸಿ, ದೊಡ್ಡವನಾದ ಮೇಲೆ ತಮಗೆ ಸಮರ್ಪಿಸಲು ನಾವು ಆಲೋಚಿಸಿದ್ದೆವು. ಮೇಲಾಗಿ ಸರ್ವಸಂಗಪರಿತ್ಯಾಗಿಗಳೂ, ಜ್ಞಾನಿನಾಯಕರೂ ಆದ ತಾವು ಈ ಶಿಶುವನ್ನು ಹೇಗೆ ಪೋಷಿಸಲು ಸಾಧ್ಯ? ಪರಿಚಾರಕರ ಪೋಷಣೆಯು ತಂದೆ-ತಾಯಿಗಳ ಪೋಷಣೆಗೆ ಸಮವಾದೀತೆ? ಆದ್ದರಿಂದ ಯತಿರಾಜನು ಪ್ರಾಪ್ತವಯಸ್ಥನಾದ ಮೇಲೆ ಸನ್ನಿಧಿಗೆ ತಂದೊಪ್ಪಿಸಲು ಅನುಮತಿ ನೀಡಬೇಕೆಂದು ವಿನಯಪೂರ್ವಕವಾಗಿ ಪ್ರಾರ್ಥಿಸುತ್ತೇನೆ” ಎಂದರು.
ಬ್ರಹ್ಮಣ್ಯತೀರ್ಥರು ನಸುನಕ್ಕು “ಆಚಾರ್ಯ! ನೀನು ಹೇಳಿದ ಮಾತೆಲ್ಲವೂ ಸತ್ಯ. ಅದು ಜಗತ್ತಿನ ಸಂಸಾರಿಗಳಾದ ಸಾಮಾನ್ಯಜನರಿಗೆ ಅನ್ವಯಿಸುವ ಮಾತು. ಆದರೆ ಈ ಶಿಶುವು ಜಗದ್ದಿಲಕ್ಷಣವಾದುದು. ದೇವಾಂಶಸಂಶೋಭಿತವಾದುದು. ಇದರ ಲಾಲನೆ-ಪಾಲನೆ ಎಲ್ಲವೂ ಸರ್ವಸಂಗಪರಿತ್ಯಾಗಿಗಳಾದ ನಮ್ಮಂಥವರಿಂದಲೇ ಜರುಗಬೇಕೆಂಬುದು ಶ್ರೀಹರಿ ಸಂಕಲ್ಪ. ಜಗತ್ತಿನ ಕಲ್ಯಾಣಕ್ಕಾಗಿಯೇ ವಿರಕ್ತರಾಗಿ ಶ್ರಮಿಸುತ್ತಿರುವ ನಾವು ಆ ಮಹೋದ್ದೇಶಕ್ಕಾಗಿ ಸಂಸಾರಿಗಳಂತೆ ವರ್ತಿಸುವುದೂ ಒಂದು ಮಹಾಸೌಭಾಗ್ಯ, ಈ ಶಿಶುವು ನಮ್ಮಂತಹ ವಿರಕ್ತರ ಸಹವಾಸದಲ್ಲಿ ಸಾತ್ತಿಕ ವಾತಾವರಣ-ಪರಿಸರಗಳಲ್ಲಿಯೇ ಬೆಳೆಯಬೇಕಲ್ಲವೇ? ಈಗಿನಿಂದಲೇ ಅದಕ್ಕೆ ಭೂಮಿಕೆಯನ್ನು ರಚಿಸಿಕೊಡಬೇಕಾಗಿದೆ. ವತ್ತ! ನೀವು ಯತಿರಾಜನನ್ನು ನಮಗೆ ಈಗಲೇ ಒಪ್ಪಿಸಿಕೊಟ್ಟು ನಿರಾಲೋಚನೆಯಿಂದ ಪ್ರಯಾಣ ಬೆಳೆಸಿರಿ. ಶ್ರೀಹರಿವಾಯುಗಳು ನಿಮಗೆ ಸೌಶೀಲ್ಯಾದಿಗುಣಸಂಪನ್ನಳಾದ ಪತ್ರಿ ಭೀಮಕ್ಕನನ್ನೂ, ವಂಶೋದಾರಕನಾದ ಸತ್ಪುತ್ರ ಮದ್ದಪತಿಯನ್ನೂ ಅನುಗ್ರಹಿಸಿರುವರು. ಅವರ ಪಾಲನೆ-ಪೋಷಣೆಗಳಲ್ಲಿ ಆಸಕ್ತರಾಗಿ ಯತಿರಾಜನ ವಿರಹವನ್ನು ಮರೆಯಿರಿ” ಎಂದಾಜ್ಞಾಪಿಸಿದರು.
ಶ್ರೀಗಳವರ ಮಾತು ಕೇಳಿ ಅಲ್ಲಿದ್ದ ಬಂಧು-ಬಾಂಧವಾದಿ ಸರ್ವರಿಗೂ ಯತಿರಾಜನ ಭವ್ಯ ಭವಿಷ್ಯದ ಬಗ್ಗೆ ಒಂದು ರೀತಿಯ ಕೌತುಕ ಸಮಾಧಾನಗಳುಂಟಾದರೂ ಪಾಪ, ರಾಮಾಚಾರ್ಯ ದಂಪತಿಗಳಿಗೆ ಮನಸ್ಸಿನಲ್ಲಿ ಒಂದು ಬಗೆಯ ಆಂದೋಳನ, ವ್ಯಾಕುಲಗಳುಂಟಾದವು. ದಂಪತಿಗಳಿಬ್ಬರ ಕಣ್ಣಿನಿಂದಲೂ ದುಃಖಾಶ್ರು ಹರಿಯಹತ್ತಿತು, ವಚನದ್ಧರಾಗಿದ್ದಾರೆ, ಅದಕ್ಕೆ ವ್ಯತಿರಿಕ್ತವಾಗಿ ನಡೆಯುವಂತಿಲ್ಲ. ಆದರೆ ಒಂದು ಮಾಸವೂ ಪೂರ್ಣವಾಗದ ಶಿಶುವನ್ನು ಬಿಟ್ಟು ಅಗಲಿರಲು ಮನಸ್ಸು ಒಪ್ಪುತ್ತಿಲ್ಲ. ಹಾಗೇ ಸ್ಪಷ್ಟವಾಗಿ ಹೇಳಲೂ ಬಾಯಿ ಬರದಂತಾಗಿದೆ. ಪಾಪ, ಲಕ್ಷ್ಮೀದೇವಿಗೆ ಹೆತ್ತಕಗಳನ್ನು ಬಿಟ್ಟುಹೋಗಲು ಸಾಧ್ಯವಾಗದಂತಾಗಿದೆ. ಕೊನೆಗೊಮ್ಮೆ ತಮ್ಮ ಎಲ್ಲ ದುಃಖ-ದುಮ್ಮಾನಗಳನ್ನು ಹತ್ತಿಕ್ಕಿಕೊಂಡು ಗುರುಗಳ ಆಜ್ಞೆಯಂತೆ ವರ್ತಿಸಲು ಆ ದಂಪತಿಗಳು ನಿಶ್ಚಯಿಸಿದರು.
ಕಣ್ಣೀರು ಹರಿಯುತ್ತಿರಲು, ಹೃದಯ ತುಂಬಿ ಬಂದು, ಯಾತನಾಪೂರ್ಣಸ್ವರದಲ್ಲಿ ರಾಮಾಚಾರ್ಯ ದಂಪತಿಗಳು ಯತಿರಾಜನನ್ನು ಎತ್ತಿ ಶ್ರೀಬ್ರಹ್ಮಣ್ಯತೀರ್ಥರ ಕರದಲ್ಲಿರಿಸಿ “ಗುರುದೇವ! ಇಕೋ ನಮ್ಮ ಸುಕುಮಾರನನ್ನು, ಹತ್ತಕರುಳನ್ನು ತಮಗೆ ಒಪ್ಪಿಸುತ್ತಿದ್ದೇವೆ, ಇಂದಿನಿಂದ ಈ ಯತಿರಾಜನು ನಿಮ್ಮ ಪುತ್ರನು. ಇವನನ್ನು ಸಂರಕ್ಷಿಸುವ ಹೊಣೆ ತಮಗೆ ಸೇರಿದೆ. ನಾವಿಂದು ನಮ್ಮ ವಚನದಂತೆ ನಡೆದು ಧನ್ಯರಾದೆವು. ಸ್ವಾಮಿ, ನಮ್ಮನ್ನು ಆಶೀರ್ವದಿಸಿರಿ ಎಂದು ಪ್ರಾರ್ಥಿಸಿ ನಮಸ್ಕರಿಸಿದರು.
ಮನಕರಗುವ ಆ ದೃಶ್ಯವನ್ನು ಕಂಡು ಎಲ್ಲರ ಕಣ್ಣಿನಿಂದಲೂ ನೀರು ಹರಿಯಿತು. ಸರ್ವಸಂಗಪರಿತ್ಯಾಗಿಗಳಾದ ಶ್ರೀಬ್ರಹ್ಮಣ್ಯತೀರ್ಥರ ಕಣ್ಣಿನಿಂದಲೂ ನೀರು ಹರಿಯಹತ್ತಿತು. ಆದರದು ಇತರರ ಕಣ್ಣೀರಿನಿಂದ ದುಖಾಶ್ರುವಾಗಿರದೆ, ಆನಂದಾಶ್ರುವಾಗಿತ್ತು!
ಮಂಗಳಕರನೆ! ಹಿಂದೆ ಸತ್ಯಸಂಧನಾದ ಹರಿಶ್ಚಂದ್ರನೇ ಮೊದಲಾದವರು ಅನೇಕರು ಆಗಿಹೋದರು. ಆ ಮಹಾನುಭಾವ ಸತ್ಯಸಂಧರೆಂದು ತಮ್ಮ ಕೀರ್ತಿಯಿಂದ ಸಕಲದಿಕ್ಕುಗಳನ್ನೂ ಬೆಳಗಿಸಿದರು. ಅಂಥ ಸ್ವಯಂಪ್ರಜ್ಞಾಪಾರಂಗತ- ರಾದ ಆ ಮಹನೀಯರಲ್ಲಿಯೂ ನಿನ್ನಂಥವರನ್ನು ನಾವು ಕಾಣಲಿಲ್ಲ!”
ಮುಂದುವರೆದು ಬ್ರಹ್ಮಣ್ಯತೀರ್ಥರು - “ವತ್ಸ, ನೀನು ಇಂದು ನೀಡಿರುವ ಈ ಪುತ್ರದಾನವು ಅತ್ಯಂತ ಶ್ರೇಷ್ಠವಾದುದು. ಇದು ಅಖಂಡಭಾರತದ ತತ್ವ, ಧರ್ಮ, ಸಂಸ ತಿಗಳಿಗೆ ನೀಡಿದ ದಾನವಾಗಿದೆ! ಸಾಕ್ಷಾತ್ ಹಂಸನಾಮಕಪರಮಾತ್ಮನ ಜ್ಞಾನಪರಂಪರೆಗೆ, ಶ್ರೀಮದಾಚಾರ್ಯರ ಮಹಾಸಂಸ್ಥಾನಕ್ಕೆ, ನೀಡಿರುವ ಅನಿತರ ಸಾಧಾರಣ ಕೊಡುಗೆಯಾಗಿದೆ! ಇದು ಜಗತ್ತಿನ ಜನತೆಯ, ತತ್ತ-ಧರ್ಮ-ಸಂಸ ತಿಗಳ ಅಭ್ಯುದಯವಾಗಿ ಲೋಕಕಲ್ಯಾಣವಾಗುವುದು. ಈ ಅಖಂಡಕೀರ್ತಿಮಂಡಲ- ದೊಡನೆ ಯತಿರಾಜನ, ನಮ್ಮ ಮತ್ತು ನಿನ್ನ ಹೆಸರುಗಳೂ ಅಜರಾಮರವಾಗುವುದು” ಎಂದು ರಾಮಾಚಾರ್ಯರನ್ನು ಶ್ಲಾಘಿಸಿ, ಗುರುವರರು ಅವರಿಗೆ ಫಲಮಂತ್ರಾಕ್ಷತೆಗಳನ್ನಿತ್ತು ಹರಸಿ ಕಳುಹಿಸಿಕೊಟ್ಟರು.