|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ನಾಲ್ಕನೆಯ ಉಲ್ಲಾಸ

ಶ್ರೀವ್ಯಾಸರಾಜಯತಿಸಾರ್ವಭೌಮರು

೧೯. ಶ್ರೀರಂಗವಿಠಲ

ಯತಿತ್ರಯರು ಸಂಚಾರಕ್ರಮದಲ್ಲಿ ಪಂಢರಪುರ ಯಾತ್ರೆಗೆ ಹೊರಟರಷ್ಟೆ! ನರಸಿಂಹರಾಜನು ಮೊದಲೇ ಏರ್ಪಡಿಸಿದ್ದ ವ್ಯವಸ್ಥೆಯಿಂದಾಗಿ ಶ್ರೀಲಕ್ಷ್ಮೀನಾರಾಯಣಮುನಿಗಳು ಹೋದಹೋದಲ್ಲಿ ಒಳ್ಳೆ ಸ್ವಾಗತ ದೊರಕುತ್ತಿತ್ತು. ಶ್ರೀಪಾದತ್ರಯರ ಯಾತ್ರೆ ಸಂತೋಷದಿಂದ ಮುಂದುವರೆಯಿತು. ಪ್ರತಿದಿನ ಶ್ರೀಲಕ್ಷ್ಮೀನಾರಾಯಣಮುನಿಗಳು ಶ್ರೀವ್ಯಾಸತೀರ್ಥರಿಗೆ ನ್ಯಾಯ-ಮೀಮಾಂಸಾದಿಶಾಸ್ತ್ರಗಳು ಶ್ರೀಮದಾಚಾರ್ಯರ ದೈತಶಾಸ್ತ್ರಗಳ ಪಾಠಪ್ರವಚನವನ್ನು ನೆರವೇರಿಸುತ್ತಿದ್ದರು. ಸ್ನಾನ-ಆಫ್ರಿಕ, ಜಪತಪಾದನುಷ್ಠಾನ, ದೇವಪೂಜಾ, ಪಾಠಪ್ರವಚನ, ಭಕ್ತಜನರಿಗೆ ತಮ್ಮೋಪದೇಶಾದಿ ಕಾರ್ಯಾಸಕ್ತರಾಗಿ ಲೋಕಕಲ್ಯಾಣವನ್ನೆಸಗುತ್ತಾ ಶ್ರೀಗಳವರು ಸ್ವಲ್ಪದಿನಗಳಲ್ಲಿ ಪಂಢರಪುರವನ್ನು ತಲುಪಿದರು. ಪಂಢರಪುರದಲ್ಲಿ ಆಷಾಢ ಶುಕ್ಲ ಏಕಾದಶಿಯು ಒಂದು ಮಹಾಪರ್ವಕಾಲವಿದ್ದಂತೆ! ಹತ್ತಾರು ಸಹಸ್ರ ಜನರು ಅಂದು ಪಾಂಡುರಂಗನ ದರ್ಶನ ಮಾಡಿ ಸೇವಿಸಲು ಪಂಢರಪುರಕ್ಕೆ ಪ್ರತಿವರ್ಷವೂ ಬರುವುದು ವಾಡಿಕೆ. ಈ ಮಹೋತ್ಸವ ಸಂದರ್ಭದಲ್ಲೇ ಶ್ರೀಲಕ್ಷ್ಮೀನಾರಾಯಣಮುನಿಗಳು ದಯಮಾಡಿಸಿದ್ದುದು ಒಂದು ವಿಶೇಷವಾಗಿತ್ತು. ಅಲ್ಲಿಯತಿತ್ರಯರಿಗೆ ಅಭೂತಪೂರ್ವ ಸ್ವಾಗತ ದೊರಕಿತು. ಶ್ರೀಪಾದತ್ರಯರು ಪ್ರತಿದಿನ ಭೀಮರಥೀ (ಚಂದ್ರಭಾಗ) ನದೀಸ್ನಾನ, ಶ್ರೀಪಾಂಡುರಂಗನ ದರ್ಶನ, ಸೇವೆಗಳನ್ನು ಮಾಡಿ ಪುನೀತರಾದರು. 

ಪಂಢರಾಪುರದ ಭಕ್ತಜನರು, ಶ್ರೀಮಠದ ಶಿಷ್ಯರುಗಳ ಪ್ರಾರ್ಥನೆಯಂತೆ ಶ್ರೀಗಳವರು ಅಲ್ಲಿ ಕೆಲಕಾಲ ವಾಸಮಾಡಿ ಪ್ರತಿದಿನ ಪಾಠಪ್ರವಚನ, ದೇವರ ದರ್ಶನ, ತೀಥ-ಪ್ರಸಾದ, ತತ್ವ-ಧರ್ಮವಿಷಯಕ ಉಪದೇಶಗಳಿಂದ ಅಲ್ಲಿನ ಸಕಲ ಸಜ್ಜನರನ್ನು ಸಂತೋಷಪಡಿಸುತ್ತಿದ್ದರು. 

ಒಂದು ದಿನ ಶ್ರೀಲಕ್ಷ್ಮೀನಾರಾಯಣಮುನಿಗಳಿಗೆ ಒಂದು ವಿಚಿತ್ರ ಕನಸಾಯಿತು. ಸ್ವಪ್ನದಲ್ಲಿ ಶ್ರೀಪಾಂಡುರಂಗ ಶ್ರೀಯವರಿಗೆ ದರ್ಶನವಿತ್ತು, ನಗೆಮೊಗದಿಂದ ಅಪ್ಪಣೆ ಕೊಡಿಸಿದ - “ಭಕ್ತರಾಜ! ನಿನ್ನ ಸೇವೆಯಿಂದ ಸುಪ್ರಸನ್ನನಾಗಿದ್ದೇನೆ. ಹಿಂದೆ ನೀನು ತಂದೆಯ ತೊಡೆಯ ಮೇಲೆ ಕೂಡಬಯಸಿ ನನ್ನನ್ನು ಕುರಿತು ತಪಸ್ಸು ಮಾಡಿ ಒಲಿಸಿಕೊಂಡಾಗ ನಿನ್ನನ್ನು ನನ್ನ ತೊಡೆಯ ಮೇಲೆ ಕೂಡಿಸಿಕೊಂಡು ಅನುಗ್ರಹಿಸಿದ್ದೆ! ನನ್ನ ದರ್ಶನದಿಂದ ನಿನ್ನ ಆ ಹಿಂದಿನ ಆಶಾ, ಪಾಶಾ, ಮೋಹ-ಮಮತೆಗಳು ಸಂಪೂರ್ಣವಾಗಿ ತೊಲಗಿ ನೀನು ನನ್ನ ಅಂತರಂಗಭಕ್ತನಾಗಿ ನನ್ನನ್ನು ವಿಧವಿಧವಾಗಿ ಸೇವಿಸಿ ನನ್ನ ಭಕ್ತಾಗ್ರಣಿಗಳ ಸಾಲಿಗೆ ಸೇರಿ ಕೀರ್ತಿ ಗಳಿಸಿದೆ.

ವತ್ಸ! ಇಂದು ನೀನು ನನಗೆ ಅತಿಪ್ರಿಯವಾದ ಜ್ಞಾನಕಾರ್ಯವನ್ನು ಅವಿಚ್ಛಿನ್ನವಾಗಿ ನೆರವೇರಿಸುತ್ತಾ ಅನೇಕ ಜ್ಞಾನಿಗಳು ನನ್ನ ತೊಡೆಯ ಮೇಲೆ ಆಡುವಂತೆ ಮಾಡಿರುವೆ. ಇನ್ನು ಅತಿ ಶೀಘ್ರವಾಗಿ ನನ್ನ ಭಕ್ತರಲ್ಲಿ ಅಗ್ರಗಣ್ಯನಾಗಿ ಹಿಂದೆ ನನ್ನ ತೊಡೆಯ ಮೇಲೆ ರಾಜಿಸಿದ ಮಹನೀಯನನ್ನು ಮತ್ತೆ ನನ್ನ ತೊಡೆಯ ಮೇಲಾಡುವಂತೆ ಮಾಡುವ ಭಾಗ್ಯಶಾಲಿಯಾಗಿರುವೆ. ಇವೆಲ್ಲದರಿಂದ ನಾನು ನಿನಗೆ ಒಲಿದು ನಿನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದೇನೆ. ನಿನ್ನಂಥ ಜ್ಞಾನಿಗಳು ವೇದಾದಿಶಾಸ್ತ್ರಗಳಲ್ಲಿ ಉಕ್ತವಾಗಿರುವ ನನ್ನ ಸಂಬಂಧಿಯಾದ ಸತ್ತತ್ವಗಳನ್ನು ಅಧಿಕಾರಿಗೆ ಬೋಧಿಸಿ ಅವರು ನನ್ನ ಅನುಗ್ರಹಪಾತ್ರರಾಗುವಂತೆ ಮಾಡುತ್ತಿದ್ದೀರಿ! ಆದರೆ ಸಂಸ ತಜ್ಞಾನವಿಲ್ಲದೆ, ತತ್ವಜ್ಞಾನವನ್ನರಿಯದೇ, ಸಾಧನಮಾರ್ಗ ಗೊತ್ತಿಲ್ಲದೆ ಬಳಲುತ್ತಾನನ್ನ ಅನುಗ್ರಹ ವಿಮುಖರಾಗಿರುವ ಜನಸಾಮಾನ್ಯರ ಉದ್ಧಾರವಾಗಬೇಕಾಗಿದೆ. ಆ ಮಹತ್ಕಾರ್ಯ ನಿನ್ನಿಂದಲೇ ನೆರವೇರಬೇಕಾಗಿದೆ. ಅದಕ್ಕೆ ನೀನೇ ಸಮರ್ಥ !

ಯತೀಶ! ವೇದಾದಿಶಾಸ್ತ್ರಗಳಲ್ಲಿ ಉಕ್ತವಾಗಿರುವ ಸತ್ತತ್ವಸಾರಗಳನ್ನೂ, ನನ್ನ ಲೀಲಾವಿಲಾಸಗಳನ್ನೂ, ಸಾಧನೆ ಮಾರ್ಗವನ್ನೂ, ನೀನು ಪ್ರಾಕೃತಭಾಷೆಯಲ್ಲಿ ಉಪದೇಶಿಸಿ, ಪದಗಳನ್ನು ರಚಿಸಿ ಜನಸಾಮಾನ್ಯರ ಉದ್ಧಾರಕ್ಕೆ ಸಹಾಯಕವಾದ, ಶ್ರೀವಾಯುದೇವನ ಅವತಾರರಾದ ಶ್ರೀಮಧ್ವಾಚಾರ್ಯರು ಉಪದೇಶಿಸಿದ ಸದೈಷ್ಣವ ಸಿದ್ಧಾಂತದ ರಹಸ್ಯಗಳನ್ನು ಪ್ರಾಕೃತಭಾಷೆಯ ಮೂಲಕ ಪ್ರಸಾರ ಮಾಡಿ ಶ್ರೀಹರಿದಾಸಮತದ ಸಂಸ್ಥಾಪಕನೆಂದು ಖ್ಯಾತಿಗಳಿಸಿ ಲೋಕಕಲ್ಯಾಣವನ್ನು ಮಾಡು. 

ಭಕ್ತವರ! ಈ ಮಹತ್ಕಾರ್ಯವನ್ನು ನಾನು ನಿನಗೆ ವಹಿಸುತ್ತಿದ್ದೇನೆ. ಇದಕ್ಕೆ ಪ್ರೇರಕಶಕ್ತಿಯಾಗಿರಲು ನಿನ್ನಲ್ಲಿ ನಾನು ಇನ್ನೊಂದು ವಿಶೇಷಾನುಗ್ರಹ ಮಾಡುತ್ತಿದ್ದೇನೆ. ಶ್ರೀಭೀಮರಥಿ ಮತ್ತು ಪುಷ್ಪಾವತಿ ನದಿಗಳ ಸಂಗಮಸ್ಥಳದಲ್ಲಿ ನದಿಯ ತೀರದಲ್ಲಿ ಪಾಂಡವ ವಂಶೀಯನಾದ ಕ್ಷೇಮಕಾಂತರಾಜನು ಪೂಜಿಸಿದ ನನ್ನ ಪ್ರತಿಮೆಗಳಿರುವ ಎರಡು ದೇವರ ಪೆಟ್ಟಿಗೆಗಳು ಭೂಸ್ಥಾಪಿತವಾಗಿವೆ. ಆ ಪೆಟ್ಟಿಗೆಗಳಿರುವ ಸ್ಥಳದ ಮೇಲೊಂದು ಸಣ್ಣ ಕಟ್ಟೆಯಿದೆ. ಅದನ್ನು ಒಡೆದು ಭೂಖನನ ಮಾಡಿಸು. ನಿನಗೆ ಎರಡು ದೇವರ ಪೆಟ್ಟಿಗೆಗಳು ದೊರಕುವವು. 

ಆ ಎರಡು ಪೆಟ್ಟಿಗೆಗಳಲ್ಲಿ - ಒಂದರಲ್ಲಿ ಜಾಂಬವತಿ ಮತ್ತು ಅರ್ಜುನರಿಂದ ಪೂಜೆಗೊಂಡ ರುಕ್ಕಿಣಿ - ಸತ್ಯಭಾಮಾ ಸಮೇತನಾದ ಶ್ರೀರಂಗವಿಠಲನ (ನನ್ನ) ಪ್ರತಿಮೆಗಳಿವೆ! ಅದನ್ನು ನೀನು ಪೂಜಿಸು..... ನೀನು ಪ್ರಾಕೃತಭಾಷೆಯಲ್ಲಿ ರಚಿಸುವ ಕೃತಿಗಳಿಗೆ “ಶ್ರೀರಂಗವಿಠಲ'ನೆಂದೇ ಅಂಕಿತ ಮಾಡು. ಭಕ್ತರಾಜ! ಭಾವಿ ಕರ್ನಾಟಕ ಹರಿದಾಸವಾಹ್ಮಯ ಪರಂಪರೆಗೆ ಪ್ರೇರಕಶಕ್ತಿಯಾಗಿ, ಅಧಿದೈವವಾಗಿರುವಂತೆ, “ಶ್ರೀರಂಗವಿಠಲ” ಎಂಬ ಅಂಕಿತದಿಂದ ಸಾಹಿತ್ಯವನ್ನು ನಿರ್ಮಿಸಿ ನೀನು ಕನ್ನಡ ಹರಿದಾಸ ಪಂಥ ಪಿತಾಮಹನೆಂಬ ಕೀರ್ತಿಗೆ ಪಾತ್ರನಾಗು. “ವಿಠಲ” ಎಂಬ ಅಂಕಿತದಿಂದಲೇ ಸತ್ತ್ವ ಸಾರಗರ್ಭಿತವಾದ ಹರಿದಾಸವಾಳ್ಮೆಯವು ಅವಿಚ್ಛಿನ್ನವಾಗಿ, ವ್ಯಾಪಕವಾಗಿ ಹೊರಹೊಮ್ಮುವಂತೆ ಮಾಡಿ ಭಾವಿ ಹರಿದಾಸಪರಂಪರೆಯ ಆಚಾರ್ಯಪುರುಷನಾಗಿ ವಿಖ್ಯಾತನಾಗು! ಇದು ನನ್ನ ಆಜ್ಞೆ!” ಎಂದು ಹೇಳಿ ಮತ್ತೆ ಮುಂದುವರೆದು “ವತ್ಸ, ನಿನಗೆ ದೊರಕುವ ಮತ್ತೊಂದು ಪೆಟ್ಟಿಗೆಯಲ್ಲಿಯೂ ನನ್ನ ಒಂದು ಪವಿತ್ರ ಪ್ರತಿಮೆಯಿದೆ. ಮುಂದೆ ನಾನು ನನ್ನ ಪರಮಭಕ್ತನಿಗೆ ಪ್ರಸನ್ನನಾಗಿ ಅವನಿಗೆ ಒಲಿದು ಬರುವೆನು. ಅದೂ ನಿನಗೆ ಮುಂದೆ ವೇದ್ಯವಾಗುವುದು, ನಿನ್ನ ಮನೋರಥವು ಫಲಿಸಲಿ, ಅಖಂಡವಾಗಿ ಜ್ಞಾನಕಾರ್ಯವನ್ನು ನೆರವೇರಿಸಿ ಕೀರ್ತಿಶಾಲಿಯಾಗು” ಎಂದು ಆಜ್ಞಾಪಿಸಿ ಶ್ರೀಹರಿಯು ಅದೃಶ್ಯನಾದನು. 

ಬೆಳಗಿನ ಝಾವ ಸ್ವಪ್ನದಿಂದೆಚ್ಚರಗೊಂಡ ಶ್ರೀಲಕ್ಷ್ಮೀನಾರಾಯಣಮುನಿಗಲು ಸ್ವಾರ್ಥವನ್ನು ಸ್ಮರಿಸಿ, ಆನಂದಪುಳಕಿತ- ಗಾತ್ರರಾಗಿ ಶ್ರೀಪಾಂಡುರಂಗನನ್ನು ವಿವಿಧ ರೀತಿಯಿಂದ ಸ್ತುತಿಸಿದರು. ಭಗವಂತನ ಅನುಗ್ರಹ-ಕಾರುಣ್ಯ, ಆದೇಶಗಳನ್ನು ಶ್ರೀಗಳವರು ಶ್ರೀಬ್ರಹ್ಮಣ್ಯತೀರ್ಥರು ಮತ್ತು ಶ್ರೀವ್ಯಾಸತೀರ್ಥರಿಗೆ ತಿಳಿಸಿದರು. ಅವರು ಪರಮಾಶ್ಚರ್ಯಾನಂದತುಂದಿಲರಾಗಿ ಶ್ರೀಹರಿಯ ವಿಶೇಷ ಕೃಪೆಗೆ ಪಾತ್ರರಾದ ಲಕ್ಷ್ಮೀನಾರಾಯಣಮುನಿಗಳನ್ನು ಶ್ಲಾಘಿಸಿದರು. 

ಅನಂತರ ಸೂರ್ಯೋದಯವಾಗುತ್ತಿದ್ದಂತೆಯೇ ಗುರುತ್ರಯರು ಶ್ರೀಮಠದ ನಾಲ್ಕಾರು ಜನರೊಡನೆ ಭೀಮರಥಿ- ಪುಷ್ಪಾವತಿ ಸಂಗಮ ಸ್ಥಳಕ್ಕೆ ಹೋಗಿ ಸ್ನಾನಮಾಡಿ, ಸ್ವಪ್ನದಲ್ಲಿ ವಿಠಲನು ಸೂಚಿಸಿದ ಸ್ಥಳಕ್ಕಾಗಿ ಸುತ್ತಲೂ ಪರೀಕ್ಷಿಸುತ್ತಿರುವಾಗ ನದೀತೀರದ ಅನತಿ ದೂರದಲ್ಲೊಂದು ಪುಟ್ಟ ಕಟ್ಟೆಯನ್ನು ಕಂಡು ಎಲ್ಲರೂ ಅಲ್ಲಿಗೆ ಬಂದು ಸೇರಿದರು. ಶ್ರೀಗಳವರ ಅಪ್ಪಣೆಯಂತೆ ಮಠದ ಪರಿವಾರದವರು ಆ ಕಟ್ಟೆಯನ್ನು ಒಡೆದು ಭೂಖನನ ಮಾಡುತ್ತಿರುವಾಗ ಎರಡು ದೊಡ್ಡದೇವರ ಪೆಟ್ಟಿಗೆಗಳು ಲಭಿಸಿದವು! ಆಗ ಶ್ರೀಲಕ್ಷ್ಮೀನಾರಾಯಣಾದಿಯತಿಗಳಿಗಾದ ಆನಂದ, ಸಂಭ್ರಮ ಅವರ್ಣನೀಯ! ಗುರುತ್ರಯರು ದೇವರ ಪೆಟ್ಟಿಗೆಗಳೊಡನೆ ತಾವು ಬಿಡಾರ ಮಾಡಿದ ಸ್ಥಳಕ್ಕೆ ಬಂದರು.

ಮಧ್ಯಾಹ್ನ ಸ್ನಾನ, ಆಕ, ಜಪತಪಾದನುಷ್ಠಾನಗಳಾದ ಮೇಲೆ ಸಂಭ್ರಮ-ಸಂತೋಷಗಳಿಂದ ಶ್ರೀಲಕ್ಷ್ಮೀನಾರಾಯಣ- ಮುನಿಗಳು ಭಕ್ತಿಪೂರ್ವಕವಾಗಿ ಒಂದು ದೇವರ ಪೆಟ್ಟಿಗೆಯನ್ನು ತೆರೆದರು! ಅದೇನಾಶ್ಚರ್ಯ!! ಆ ಪೆಟ್ಟಿಗೆಯಲ್ಲಿ ಶ್ರೀಪಾಂಡುರಂಗನು ಅಪ್ಪಣೆ ಮಾಡಿದಂತೆ ತಳತಳನೆ ಹೊಳೆಯುವ ಸರ್ವಾಭರಣಭೂಷಿತನಾದ, ರುಕ್ಷ್ಮಿಣೀ-ಸತ್ಯಭಾಮಾ ಸಮೇತನಾದ ಶ್ರೀರಂಗವಿಠಲನು ಶ್ರೀಯವರ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತಾ ದರ್ಶನವಿತ್ತನು! ಸರ್ವರೂ ರೋಮಾಂಚಿತರಾಗಿ “ಜಯ ಜಯ ವಿಠಲ” ಎಂದು ಜಯಜಯಕಾರ ಮಾಡಿದರು. ಆನಂದಪರವಶರಾದ ಶ್ರೀಯವರು ಸಂಪ್ರದಾಯ ಪ್ರಕಾರವಾಗಿ ಶ್ರೀವಿಠಲನನ್ನು ಶ್ರೀಗೋಪೀನಾಥ ದೇವರ ಜತೆಗೆ ಮಂಡಿಸಿದರು. ಆನಂತರ ದೇವರಲ್ಲಿ ಆವಾಹನ ಮಾಡಲುದ್ಯುಕ್ತರಾಗಿ ತಮ್ಮ ಹೃದಯಕಮಲದಲ್ಲಿರುವ ಬಿಂಬರೂಪಿ ಹರಿಯನ್ನು ಧ್ಯಾನ ಮಾಡಿದಾಗ ಅಲ್ಲಿ ಅವರಿಗೆ ಶ್ರೀಪಾಂಡುರಂಗನ ಅಪ್ಪಣೆಯಂತೆ ದೊರಕಿದ ಶ್ರೀವಿಠಲನೇ ಗೋಚರನಾದ. ಶ್ರೀಗಳವರ ಮೈ ಪುಳಕಿಸಿತು. ಭಕೃತಿಶಯದಿಂದ ಕಣ್ಣೀರು ಮಿಡಿಯಿತು. ಲಕ್ಷ್ಮೀನಾರಾಯಣಮುನಿಗಳು ಆ ಮಂಗಳಮೂರ್ತಿಯನ್ನೇ ನೂತನ ವಿಠಲನ ಪ್ರತಿಮೆಯಲ್ಲಿ ಆವಾಹನ ಮಾಡಿದರು. ಬಿಂಬಮೂರ್ತಿ ವಿಠಲನ ಪ್ರತಿಮೆಯಲ್ಲಿನಿಂತು ತಮ್ಮನ್ನು ಕಂಡು ನಸುನಕ್ಕು ಅಭಯಪ್ರದಾನ ಮಾಡಿದಂತೆ ಕಂಡಿತು. ಈ ದೃಶ್ಯ ಯತಿತ್ರಯರಿಗೂ ಗೋಚರಿಸಿತು. ಯತಿತ್ರಯರ ನೇತ್ರಗಳಿಂದ ಆನಂದಬಾಷ್ಪ ಹರಿಯತೊಡಗಿತು. ಶ್ರೀಲಕ್ಷ್ಮೀನಾರಾಯಣ- ಮುನಿಗಳು ಭಾವಪರವಶರಾಗಿ ತಮಗೆ ಗೋಚರಿಸಿದ ಶ್ರೀರಂಗವಿಠಲನನ್ನು ವರ್ಣಿಸಿ ಸ್ತುತಿಸಹತ್ತಿದರು. ಅವರ ಮುಖಾರವಿಂದದಿಂದ ಕನ್ನಡ ಹರಿದಾಸವಾಹ್ಮಯದ ಭಕ್ತಿಗೀತೆಯೊಂದು ಹೊರಹೊಮ್ಮಿತು.

ಶ್ರೀಯವರ ಮುಖದಿಂದ ಹೊರಹೊಮ್ಮಿದ ಕನ್ನಡ ಹರಿದಾಸ ಸಾಹಿತ್ಯಕ್ಕೆ ಗುರುಗಳ ಮೊದಲ ಕಾಣಿಕೆಯಾದ ಆ ಭವ್ಯವಾದ ಶ್ರೀಭಗವಂತನ ಸರ್ವಾಂಗ ವರ್ಣನ ಪರವಾದ ಸ್ತುತಿಯನ್ನಾಲಿಸಿ, ಸರ್ವರೂ ಆನಂದದಿಂದ ಮೈಮರೆತರು. ಸ್ವಲ್ಪ ಹೊತ್ತಾದ ಮೇಲೆ ಶ್ರೀಗಳವರು ಪಂಚಾಮೃತ ಸಾಮಗ್ರಿಗಳನ್ನು ತರಿಸಿ ಭಕ್ತಿಯಿಂದ ಶ್ರೀರುಕ್ಕಿಣೀ-ಸತ್ಯಭಾಮಾ ಸಹಿತನಾದ ಶ್ರೀರಂಗವಿಠಲನಿಗೆ ಪಂಚಾಮೃತ ಶುದ್ಧೋದಕಾಭಿಷೇಕಗಳನ್ನು ಮಾಡಿ, ತಮ್ಮ ಸಂಸ್ಥಾನ ಪ್ರತಿಮೆಗಳೊಡನೆ ಮಂಡಿಸಿ, ಮಂತ್ರ ಶಾಸ್ರೋಕ್ತಕ್ರಮದಲ್ಲಿ ಆವಾಹನಾದಿಗಳಿಂದ ಪೂಜಿಸಿ, ನಿವೇದನವನ್ನು ಸಮರ್ಪಿಸಿ ಮಂಗಳಾರತಿ ಮಾಡಿ ಮಂತ್ರಪುಷ್ಪಗಳನ್ನು ಅರ್ಪಿಸಿದರು. ಅಂದಿನಿಂದ ಶ್ರೀಯವರ ಮಠದಲ್ಲಿ ಸಂಸ್ಥಾನದ ಆರಾಧ್ಯದೇವನಾದ ಶ್ರೀಗೋಪೀನಾಥನೊಡನೆ ಶ್ರೀಪಾಂಡುರಂಗನ ಅನುಗ್ರಹದಿಂದ ದೊರೆತ ಶ್ರೀಜಾಂಬವತೀ-ಅರ್ಜುನ ಕರಾರ್ಚಿತನಾದ ಶ್ರೀರುಕ್ಷ್ಮಿಣೀ ಸತ್ಯಭಾಮ ಸಮೇತನಾದ ಶ್ರೀರಂಗವಿಠಲನೂ ಶ್ರೀಯವರ ಅಮೃತಹಸ್ತದಿಂದ ಪೂಜೆಗೊಳ್ಳಲಾರಂಭಿಸಿದನು. ಶ್ರೀಪಾದರಾಜ” ಬಿರುದಾಂಕಿತರಾದ ಶ್ರೀಲಕ್ಷ್ಮೀನಾರಾಯಣಮುನಿಗಳ ಸಂಸ್ಥಾನದಲ್ಲಿ ಇಂದಿಗೂ ಸಂಸ್ಥಾನದ ಆರಾಧ್ಯದೇವನಾದ ಶ್ರೀಗೋಪೀನಾಥನೊಡನೆ ಕನ್ನಡ ಹರಿದಾಸ ಪಂಥದ ಆರಾಧ್ಯದೇವನೂ, ಪ್ರೇರಕಶಕ್ತಿಯೂ ಆದ ಶ್ರೀರುಕ್ಷ್ಮಿಣೀ ಸತ್ಯಭಾಮಾ ಸಹಿತ ಶ್ರೀರಂಗವಿಠನನ್ನು ಪೀಠಾಧಿಪತಿಗಳು ಪೂಜಿಸುವುದನ್ನು ಕಾಣಬಹುದಾಗಿದೆ

ಲಕ್ಷ್ಮೀನಾರಾಯಣಮುನಿಗಳಿಗೆ ಶ್ರೀರಂಗವಿಠಲನು ಒಲಿದ ವಿಚಾರವು ಪಂಢರಪುರದಲ್ಲೆಲ್ಲಾ ಹರಡಿ ಸಹಸ್ರಾರು ಜನ ಭಕ್ತಜನರು ಶ್ರೀಮಠಕ್ಕೆ ಬಂದು ದೇವರ ದರ್ಶನ ಮಾಡಿ, ಪರಮಾನಂದಭರಿತರಾಗಿ ಶ್ರೀಗುರುಗಳ ಭಾಗ್ಯವನ್ನು ಕೊಂಡಾಡಹತ್ತಿದರು. 

ಹೀಗೆ ನಾಲ್ಕಾರು ದಿನಗಳು ಕಳೆದ ಮೇಲೆ ತಮ್ಮ ಯಾತ್ರೆಯು ಸಫಲವಾಗಿ, ಭಗವದನುಗ್ರಹದಿಂದ ಶ್ರೀರಂಗವಿಠಲನು ಒಲಿದು ಬಂದು, ಅವನ ಆದೇಶದಂತೆ ಕನ್ನಡ ಹರಿದಾಸವಾಹ್ಮಯದ ಉಗಮವೂ ಆಗಿ “ರಂಗವಿಠಲ” ಅಂಕಿತದಿಂದ ಕೃತಿರಚನೆಯಾದ್ದರಿಂದ ಆನಂದಭರಿತರಾದ ಮುನಿತ್ರಯರು ಶ್ರೀಪಾಂಡುರಂಗದೇವರಿಗೆ ಸೇವಾದಿಗಳನ್ನು ನೆರವೇರಿಸಿ, ಅಪ್ಪಣೆ ಪಡೆದು ಪಂಢರಾಪುರದಿಂದ ಹೊರಟು ಸಂಚಾರಕ್ರಮದಿಂದ ಕುಲಸ್ವಾಮಿಯಾದ ಶ್ರೀತಿರುಪತಿಯ ಶ್ರೀನಿವಾಸದೇವರ ದರ್ಶನ ಮಾಡಿಕೊಂಡು ಮುಳಬಾಗಿಲಿಗೆ ಬಂದು ಸೇರಿದರು.

ಶ್ರೀಬ್ರಹ್ಮಣ್ಯತೀರ್ಥರು ಮುಳಬಾಗಿಲಿನಲ್ಲಿ ಹತ್ತಾರು ದಿನಗಳಿದ್ದು, ಶ್ರೀವ್ಯಾಸತೀರ್ಥರಿಗೆ ಯುಕ್ತರೀತಿಯಲ್ಲಿ ಹಿತೋಕ್ತಿಗಳನ್ನು ಹಳಿ ಉಭಯ ಶ್ರೀಪಾದಂಗಳವರಿಂದ ಬೀಳ್ಕೊಂಡು ತಮ್ಮ ಪರಿವಾರದೊಡನೆ ಹೊರಟು ಅಟ್ಟೂರಿಗೆ ಬಂದು ಸೇರಿ ಮಹಾಸಂಸ್ಥಾನದ ಕಾರ್ಯಗಳಲ್ಲಿ ಆಸಕ್ತರಾದರು.