
ಕಲಿಯುಗ ಕಲ್ಪತರು
ನಾಲ್ಕನೆಯ ಉಲ್ಲಾಸ
ಶ್ರೀವ್ಯಾಸರಾಜಯತಿಸಾರ್ವಭೌಮರು
೬. ರಾಮಾಚಾರ್ಯ-ಲಕ್ಷ್ಮೀದೇವಿು
ಷಾಕಕುಲಲಲಾಮರೂ, ಕಾಶ್ಯಪಗೋತ್ರಭೂಷಣರೂ ಬನ್ನೂರು ಪ್ರಾಂತ್ಯಾಧಿಕಾರಿಗಳೂ ಆದ ಬಲ್ಬಣಸುಮತಿಗಳಿಗೆ (ರಾಮಾಚಾರ್ಯರಿಗೆ) ಲಕ್ಷ್ಮೀದೇವಿಯಂಬ ರೂಪಲಾವಣ್ಯ-ಸದ್ಗುಣಗಳಿಂದ ಕಂಗೊಳಿಸುವ, ಸಾಕ್ಷಾತ್ ಶ್ರೀಲಕ್ಷ್ಮೀದೇವಿಯ ಅನುಗ್ರಹಪಾತ್ರಳಾದ ಪತ್ನಿಯಿದ್ದಳು. ಅವಳಿಗೆ ಸಂತಾನವಿರಲಿಲ್ಲ. ಆದ್ದರಿಂದ ಅವಳ ಬಲಾತ್ಕಾರದಿಂದ ಬಲ್ದಣಸುಮತಿಗಳು (ರಾಮಾಚಾರ್ಯರು) ಅಕ್ಕಮ್ಮ ಎಂಬ ಕನೈಯನ್ನು ಮತ್ತೆ ಲಗ್ನವಾದರೂ ಅವಳಿಗೂ ಸಂತಾನವಾಗಿರಲಿಲ್ಲ. ಇದರಿಂದ ಆ ದಂಪತಿಗಳಿಗೆ ಬಹಳ ಚಿಂತೆಯಾಗಿದ್ದಿತು.
ಬಲ್ಬಣಸುಮತಿಗಳು ಪತ್ನಿಯಾದ ಲಕ್ಷ್ಮೀದೇವಿಯೊಡನೆ ತಮ್ಮ ಮಂದಿರದಲ್ಲಿ ಏಕಾಂತದಲ್ಲಿದ್ದಾರೆ. ಲಕ್ಷ್ಮೀದೇವಿಯು ಸಂತಾನವಾಗದಿದ್ದುದರಿಂದ ದುಃಖಿತಳಾಗಿ ತನ್ನ ಮನದಳಲನ್ನು ಪತಿಯಲ್ಲಿ ನಿವೇದಿಸುತ್ತಿದ್ದಾಳೆ. ಶ್ರೀಹರಿಯನ್ನು ಧ್ಯಾನಿಸುತ್ತಾ ಬಲ್ಲಣಸುಮತಿಗಳು ಅತಿಬಿಳುಪಾದ ಪರದೆಯಿಂದ ಆಚ್ಛಾದಿತವಾದ ಮಣಿಮಂಚದ ಮೇಲೆ ಪವಡಿಸಿದ್ದಾರೆ. ಬಹುದಿನವಾದರೂ ಮಕ್ಕಳಾಗದಿದ್ದುದರಿಂದ ಅವರೂ ದುಃಖಿತರಾಗಿದ್ದಾರೆ. ಬಳಲಿ ನಿಟ್ಟುಸಿರು ಬಿಡುತ್ತಿದ್ದಾರೆ. ಆಗ ಲಕ್ಷ್ಮೀದೇವಿಯು
ಪತಿಯನ್ನು ಕುರಿತು ಹೇಳಿದಳು -
ಲಕ್ಷ್ಮೀ : ವಸ್ತ್ರನಿಚಯ ಸುಗಂಧ ಧನಕನಕವಿದ್ದೇನು? |
ಮಿತ್ರಬಾಂಧವರಿದ್ದೇನು ಎನ್ನರಸ ? ||
ನಿತ್ಯ ರುಚಿಕರಭೋಜ್ಯ ಕ್ರೀಡಾವಿಲಾಸದಿಂ |
ತೃಪ್ತಿಯೆನಿಪುದೆ ಪುತ್ರಹೀನ ದಂಪತಿಗಳಿಗೆ ||
ಸ್ವಾಮಿ, ಪುತ್ರಹೀನರಾದ ದಂಪತಿಗಳಿಗೆ ವಿಚಿತ್ರವಸ್ತ್ರಗಳಿಂದಾಗಲಿ, ಸುಗಂಧ, ಧನಕನಕಾಭರಣ ಸಂಪದಗಳಿಂದಾಗಲಿ, ಸ್ನೇಹಿತರು, ಬಂಧುಬಾಂಧವರಿಂದಾಗಲಿ, ಪ್ರತಿದಿನವೂ ಬಗೆಬಗೆಯ ರುಚಿಕರವಾದ ಭಕ್ಷ್ಯ-ಭೋಜ್ಯಾದಿ ಆಹಾರ-ವಿಹಾರಗಳಿಂದಾಗಲೀ ಪ್ರಯೋಜನವೇನು ?
ರಾಮಾಚಾರ್ಯ (ಬಲ್ಬಣಸುಮತಿ) : ನಿಜ, ಲಕ್ಷ್ಮೀ, ಜಗತ್ತಿನಲ್ಲಿ ಮಕ್ಕಳಿಲ್ಲದಿರುವುದಕ್ಕಿಂತ ಮಿಗಿಲಾದ ಕಷ್ಟ ಬೇರಾವುದಿದೆ ? ಪ್ರಪಂಚದಲ್ಲಿ ಮಕ್ಕಳಿಲ್ಲದಿರುವ ದುಃಖವು ಐಹಿಕಾಮುತ್ಮಿಕ ಸುಖಸಾಧನದ್ವಾರದ ಬಾಗಿಲಿನಂತೆ ಮುಚ್ಚಿಬಿಡುವುದು. ಪ್ರಿಯಳೇ, ಪುರುಷೋತ್ತಮನು ನಮ್ಮಾಸೆಯನ್ನು ಪೂರೈಸಲು ಅದೇಕೆ ತಡಮಾಡುತ್ತಿರುವನೋ ನಾನರಿಯೆ.
ಇಂತು ಪತ್ನಿಯನ್ನು ಮಧುರವಾಕ್ಯಗಳಿಂದ ಸಾಂತ್ವನಗೊಳಿಸುತ್ತಿರುವಾಗ ರಾಮಾಚಾರ್ಯ (ಬಲ್ಬಣಸುಮತಿ)ರ ಶರೀರದ ದಕ್ಷಿಣಭಾಗವು ಭರದಿಂದ ಹಾರಹತ್ತಿತು. ಆಗ ಅವರು ಆನಂದದಿಂದ “ಮಂಗಳಾಂಗಿ! ಶೋಕಿಸದಿರು, ನನ್ನ ತೊಡೆಯ ಎಡಭಾಗವು ಹಾರುತ್ತಿದೆ. ನಿಜ, ಅರ್ಥವಾಯಿತು. ಆಶ್ರಿತರ ಭಯನಿವಾರಕರನಾದ ಶ್ರೀಹರಿಯು ವ್ಯಾಕುಲಚಿತ್ತರಾದ ನಮಗೆ ಮಂಗಳವಾಗುವುದೆಂದು ಈ ಮೂಲಕ ಸೂಚಿಸುತ್ತಿರುವನು! ಶ್ರೀಹರಿಕೃಪೆಯಿಂದ ನಮಗೆ ನಿಜವಾಗಿ ಮಂಗಳವಾಗುವುದೆಂದು ನಾನು ಭಾವಿಸುತ್ತೇನೆ” ಎಂದು ಪತ್ನಿಯ ಮೈದಡವಿ, ಪ್ರಿಯವಾಕ್ಯಗಳಿಂದ ರಮಿಸಿ, ನಂತರ ಪತ್ನಿಯೊಡನೆ ಸುಷುಪ್ತಿಯಿಲ್ಲದ ನಿದ್ರಾಸುಖವನ್ನು ಅನುಭವಿಸಿದರು.
ಅಂದು ರಾತ್ರಿ ಕಳೆದು ಮರುದಿನ ಬೆಳಗಿನ ಝಾವವಾಗುತ್ತಿರಲು ಲಕ್ಷ್ಮೀದೇವಿಯು ಶುಭೋದಯ ಸೂಚಕ ಸ್ವಪ್ನವನ್ನು ಕಂಡು, ಆನಂದಬಾಷ್ಪ ಹರಿಯುತ್ತಿರಲು ಪತಿಗಿಂತ ಮೊದಲೇ ಜಾಗೃತಳಾಗಿ ಶಯ್ಕೆಯಿಂದ ಮೇಲೆದ್ದಳು. ಅದೇ ಸಮಯದಲ್ಲಿ ಎಚ್ಚರಗೊಂಡ ಬಲ್ದಣಸುಮತಿಗಳು “ಮುಕುಂದ, ಮುರಾರೆ, ಶ್ರೀಹರಿ ರಕ್ಷಿಸು ಸ್ವಾಮಿ” ಎಂದು ಪ್ರಾರ್ಥಿಸುತ್ತಾ ಹಾಸಿಗೆಯಿಂದ ಮೇಲೇಳುತ್ತಿರಲು ಲಕ್ಷ್ಮೀದೇವಿಯು ಪತಿಗೆ ನಮಸ್ಕರಿಸಿ “ಮಂಗಳವು, ಇಂದಿನ ದಿನವೇ ಸುದಿನವು. ಸ್ವಾಮಿ, ಈಗ ತಾನೆ ಸ್ವಪ್ನದಲ್ಲಿ ಭಕ್ತಜನರ ಕಲ್ಪವೃಕ್ಷರೂ ಕರುಣಾಳುಗಳೂ ಆದ ಶ್ರೀವೇದವ್ಯಾಸದೇವರು ನನಗೆ ದರ್ಶನವಿತ್ತು “ಭದ್ರೆ! ನಿಮ್ಮಿರ್ವರ ತಪಸ್ಸಿನಿಂದ ಪ್ರಸನ್ನರಾಗಿದ್ದೇವೆ” ಎಂದು ಮಧುರವಚನದಿಂದ ಆನಂದಗೊಳಿಸಿ ಬಹುಕಲಾಪೂರ್ಣನಾದ ಒಬ್ಬಾನೊಬ್ಬ ಚುದ್ರನಿಂದಲಂಕೃತವಾದ ಒಂದು ಸುವರ್ಣಪಾತ್ರೆಯನ್ನು ನನ್ನ ಕರದಲ್ಲಿಟ್ಟು ಹೀಗೆ ಹೇಳಿದರು - “ಮಗಳೇ, ಮಹಾಮಹಿಮರ ಶ್ರೀಬ್ರಹ್ಮಣ್ಯತೀರ್ಥರೆಂಬ ಯೋಗಿಗಳು ಬಂದು ನಿಮ್ಮ ಮನೋರಥವನ್ನು ಈಡೇರಿಸುತ್ತಾರೆ. ನೀವು ಅವರ ಅಪ್ಪಣೆಯಂತೆ ವರ್ತಿಸಿರಿ” ಎಂದು ಅನುಗ್ರಹಿಸಿ ಅಂತರ್ಧಾನ ಹೊಂದಿದರು. ತರುವಾಯ ನಾನು ಕರದಲ್ಲಿರುವ ಚಂದ್ರವಿಭೂಷಿತ ಬಂಗಾರದ ಪಾತ್ರೆಯನ್ನು ಇದೇನೆಂದು ಕೌತುಕದಿಂದ ನೋಡುತ್ತಿರುವಾಗ ಎಚ್ಚರಗೊಂಡೆನು" ಎಂದು ಲಕ್ಷ್ಮೀದೇವಿಯು ತಾನು ಕ ಕನಸನ್ನು ಪತಿಗೆ ಹೇಳಿದಳು. ಅದರಿಂದ ಪುಳಕಿತಗಾತ್ರರಾದ ಬಲ್ಬಣಸುಮತಿಗಳು ಪ್ರಿಯೆ! ನಿನ್ನೆ ರಾತ್ರಿ ಆನಂದದ ಹನಿಯಂತೆ ಇರುವ ವಾಕ್ಯಗಳಿಂದ ನಿನ್ನನ್ನು ಸಂತೈಸಿದೆ. ನೀನು ಆ ಆನಂದಬಿಂದುವನ್ನು ಸಮುದ್ರವನ್ನಾಗಿಸಿ ಆ ವರ್ಷವಾರಿಧಿಯಲ್ಲಿ ನನ್ನನ್ನು ಓಲಾಡಿಸುತ್ತಿದ್ದೀಯೇ!'' ಆಹಾ, ಮಹನೀಯರ ವಾಕ್ಯವೆಂದಿಗೂ ಸಟೆಯಾಗುವುದಿಲ್ಲ. “ಜೀವನ್ ಭದ್ರಾಣಿ ಪಶ್ಯತಿ” ಎಂಬ ಸೂಕ್ತಿಯ ಫಲವನ್ನು ನಾನೀಗ ಕಂಡೆನು! ನಾರಾಯಣನಲ್ಲಿನ ಶ್ರೇಷ್ಠಭಕ್ತಿಯೆಂಬ ಕಾಮಧೇನುವು ಏನನ್ನು ತಾನೇ ಕೊಡಲಾರದು ? ನಾವೀಗ ಧನ್ಯರಾದೆವು' ಎಂದು ಪ್ರಿಯಪತ್ನಿಯನ್ನು ಮೃದುಮಧುರವಚನಗಳಿಂದ ಆನಂದಗೊಳಿಸಿದರು,
ಅನಂತರ ರಾಮಾಚಾರ್ಯರು (ಬಣಸುಮತಿ) ಸ್ನಾನ-ಸಂಧ್ಯಾದಿಗಳಿಂದ ಸೂರ್ಯದೇವನನ್ನು ಆರಾಧಿಸಿ, ಹೋಮಾದಿಗಳಿಂದ ಯಕ್ಷೇಶ್ವರನನ್ನು ಸಂತೋಷಗೊಳಿಸಿದರು. ತರುವಾಯ ಸಕಲವೇದಪಾರಂಗತರಾದ ದ್ವಿಜಶ್ರೇಷ್ಠರಿಂದ ಸಹಿತರಾಗಿ ತಮ್ಮ ಮಂದಿರದ ದೇವತಾಗೃಹದಲ್ಲಿ ಶ್ರೀಪುರುಷೋತ್ತಮನ ವಿಶೇಷ ಪೂಜಾ ಸಮಾರಂಭವನ್ನು ವೈಭವದಿಂದ ನೆರವೇರಿಸಲು ಪ್ರಾರಂಭಿಸಿದರು.