
ಕಲಿಯುಗ ಕಲ್ಪತರು
ನಾಲ್ಕನೆಯ ಉಲ್ಲಾಸ
ಶ್ರೀವ್ಯಾಸರಾಜಯತಿಸಾರ್ವಭೌಮರು
೧೨. ಕ-ಚಲ-ಅಕ್ಷಾರಾಭ್ಯಾಸ
ಯತಿರಾಜನು ಎರಡನೆಯ ವರ್ಷದಲ್ಲಿ ಕಾಲಿಟ್ಟಿದ್ದನ್ನು ಗಮನಿಸಿ ಗುರುಗಳು ಅವನಿಗೆ ಚೌಲ, ಅಕ್ಷಾರಾಭ್ಯಾಸ ಸಮಾರಂಭವನ್ನು ನೆರವೇರಿಸಲು ನಿಶ್ಚಯಿಸಿ ರಾಮಾಚಾರ್ಯ ದಂಪತಿಗಳಿಗೆ ಸಮಾರಂಭಕ್ಕೆ ಬರಲು ನಿರೂಪ ಬರೆಸಿ ಕಳುಹಿಸಿದರು.
ರಾಮಾಚಾರ್ಯ-ಲಕ್ಷ್ಮೀದೇವಿಯರಿಗೆ ಪರಮಾನಂದವಾಯಿತು. ಸಂಭ್ರಮ-ಸಡಗರ-ಸಂತೋಷಗಳಿಂದ ರಾಮಾಚಾರ್ಯ ದಂಪತಿಗಳು ಆತ್ಮೀಯ ಬಂಧು-ಬಾಂಧವರೊಂದಿಗೆ ಬನ್ನೂರಿನಿಂದ ಹೊರಟು ಅಟ್ಟೂರಿಗೆ ಬಂದು ಸೇರಿದರು.
ಬ್ರಹ್ಮಣ್ಯಮುನಿಗಳು ಅವರನ್ನು ಸ್ವಾಗತಿಸಿ ಯತಿರಾಜನಿಂದ ನಮಸ್ಕಾರ ಮಾಡಿಸಿದರು. ಅತ್ಯಂತ ಸುಂದರನಾಗಿ, ಕಾಂತಿಯಿಂದ ಬೆಳಗುತ್ತಿರುವ ಕುಮಾರನನ್ನು ಕಂಡು ಆ ಮಾತಾ-ಪಿತೃಗಳಿಗೆ ಹಿಡಿಸಲಾರದಷ್ಟು ಹರುಷವಾಯಿತು. ಶ್ರೀಗಳವರು ಅವರೊಡನೆ ಕುಳಿತು ಮಾತನಾಡುತ್ತಿರುವಾಗ ಯತಿರಾಜ ಓಡಿಬಂದು ಗುರುಗಳ ತೊಡೆಯೇರಿ ತನ್ನ ಕರಗಳಿಂದ ಅವರನ್ನಪ್ಪಿ ನಗಹತ್ತಿದನು. ಆಗ ಗುರುಗಳು ನಸುನಕ್ಕು “ಯತಿರಾಜ, ನಿನ್ನ ಅಪ್ಪ ಯಾರು ಹೇಳು ?” ಎಂದೆನಲು ತನ್ನ ಪುಟ್ಟ ತೋರಬೆರಳಿನಿಂದ ಗುರುಗಳ ಎದೆಯನ್ನು ಮುಟ್ಟಿ “ನೀನು” ಎಂದು ಹೇಳಿದನು. ಅದನ್ನು ಕೇಳಿ ಎಲ್ಲರೂ ನಗಹತ್ತಿದರು. ಶ್ರೀಗಳವರಿಗೆ ಅಪಾರ ಆನಂದವಾಯಿತು. ಒಂದು ಬಗೆಯ ಹೃದಯ ಮಿಡಿತ, ಅವರ ಭಾವನೆಗಳಿಂದ ಲಕ್ಷ್ಮೀದೇವಿ - ರಾಮಾಚಾರ್ಯರ ಕಣ್ಣಿನಲ್ಲಿ ನೀರು ಮಿಡಿಯಿತು. ಗುರುಗಳು ಅದನ್ನು ಕಂಡು, “ಆಚಾರ್ಯ, ಕುಮಾರನು ನಮ್ಮನ್ನೇ ತಂದೆಯೆಂದು ಭಾವಿಸಿದ್ದಾನೆ. ಸನ್ಯಾಸಿಯ ಪೋಷಣೆಯಲ್ಲಿ ಬೆಳೆಯುತ್ತಿರುವ ಇವನಿಗೆ ನಾವೇ ತಂದೆ, ತಾಯಿ ಎಲ್ಲವೂ ಆಗಿದ್ದೇವೆ. ಪಾಪ, ನಿಮ್ಮ ಮಾನಸಿಕ ತುಮುಲ-ನೋವುಗಳನ್ನು ನಾವು ಅರಿತಿದ್ದೇವೆ. ಇಲ್ಲಿರುವವರೆಗಾದರೂ ಮಗುವು ನಿಮ್ಮ ಜತೆಯಲ್ಲೇ ಇರಲಿ, ಹಡೆದ ಕರುಳಿಗೆ ಸ್ವಲ್ಪವಾದರೂ ಸಮಾಧಾನ-ಸಂತೋಷಗಳು ಲಭಿಸಲಿ” ಎಂತೆಂದು ಮಗವನ್ನು ಅವರ ಕೈಗೆ ಕೊಟ್ಟು, ಆಚಾರ್ಯ ದಂಪತಿಗಳನ್ನು ಯತಿರಾಜನಿಗೆ ತೋರಿಸಿ “ಮಗು, ಇವರೇ ನಿನ್ನ ತಂದೆ-ತಾಯಿಗಳಪ್ಪಾ” ಎಂದು ಹೇಳಿದರು. ಮಗುವು ವಿಶಾಲವಾದ ತನ್ನ ಕಣ್ಣುಗಳನ್ನು ಮತ್ತಷ್ಟು ಅರಳಿಸಿ ಅಚ್ಚರಿಯಿಂದ ಅವರನ್ನು ನೋಡಿ, ತಲೆಯನ್ನು ಅಲ್ಲಾಡಿಸುತ್ತಾ “ಇವರು ಅಲ್ಲ, ನೀನು ಅಪ್ಪ” ಎಂದು ಮುದ್ದಾಗಿ ಹೇಳಿ ಗುರುಗಳತ್ತ ತಿರುಗಿ ಕಿಲಕಿಲನೆ ನಕ್ಕನು. ಈ ಹೃದಯಂಗಮ ದೃಶ್ಯವನ್ನು ಕಂಡು ಎಲ್ಲರೂ ನಸುನಕ್ಕು ಮುದ್ದಿಸಿದರು.
ಶಾಲಿವಾಹನ ಶಕೆ ೧೩೭೦ ಶುಕ್ಲ ಸಂವತ್ಸರದ ವೈಶಾಖ ಶುಕ್ಲ ಸಪ್ತಮಿ (ಕ್ರಿಸ್ತಶಕೆ ೧೪೪೮ನೇ ಮೇ ಮಾಹೆ) ಶುಭದಿನ ಶ್ರೀಬ್ರಹ್ಮಣ್ಯತೀರ್ಥರ ಮಠದಲ್ಲಿ ಬಾಲಕ ಯತಿರಾಜನ ಚೌಲ-ಅಕ್ಷರಾಭ್ಯಾಸ ಸಮಾರಂಭ ಪ್ರಯುಕ್ತ ನೂರಾರು ಜನರು ಸೇರಿದ್ದಾರೆ. ಎಲ್ಲೆಲ್ಲಿಯೂ ಸಂಭ್ರಮದ ವಾತಾವರಣ, ರಾಮಾಚಾರ್ಯ ದಂಪತಿಗಳು, ಬಾಂಧವರು - ಶ್ರೀಮಠೀಯರ ಸಡಗರ ವರ್ಣಿಸಲಸದಳ,
ಪ್ರಾತಃಕಾಲ ರಾಮಾಚಾರ್ಯ-ಲಕ್ಷ್ಮೀದೇವಿ, ಯತಿರಾಜರು ಮಂಗಳ ಅಭ್ಯಂಜನ ಮುಗಿಸಿ ಅಲಂಕೃತರಾಗಿ, ಹಸೆಮಣೆಯ ಮೇಲೆ ಕುಳಿತಿದ್ದಾರೆ. ಮಂಗಳವಾದ್ಯ, ವೇದಘೋಷವಾಗುತ್ತಿರಲು ಮಠದ ಪುರೋಹಿತರು, ಪಂಡಿತರು ಷಾಷಿಕ ಮನೆತನದ ಸಂಪ್ರದಾಯ ಮತ್ತು ವೇದೋಕ್ತಕ್ರಮದಂತೆ ಪುಣ್ಯಾಹ, ನಾಂದಿ, ನವಗ್ರಹ ಪೂಜೆ, ಹವನ-ಹೋಮಾದಿಗಳನ್ನು ರಾಮಾಚಾರ್ಯರ ದ್ವಾರಾ ವಿಜೃಂಭಣೆಯಿಂದ ನೆರವೇರಿಸುತ್ತಿದ್ದಾರೆ. ತತ್ಕಾಲದಲ್ಲಿ ಜರುಗಬೇಕಾದ ಕಾರ್ಯಗಳೆಲ್ಲವೂ ಮುಗಿದ ಮೇಲೆ ಮಠದ ಹೊರಜಗಲಿಯ ಮೇಲೆ ಹಾಕಿರುವ ಹಸೆಮಣೆಯ ಮೇಲೆ ಪುತ್ರನೊಡನೆ ಕುಳಿತು ರಾಮಾಚಾರ್ಯರು ಚೂಡಾಕರ್ಮ (ಚಂಡಿಕೆಯನ್ನು ಬಿಡಿಸುವುದು) ಶಾಸ್ತ್ರವನ್ನು ನೆರವೇರಿಸಿದ ಮೇಲೆ ಯತಿರಾಜನಿಗೆ ಮಂಗಳಸ್ನಾನ ಮಾಡಿಸಿ, ತಾವೂ ಮಾಡಿ, ಪಟ್ಟೆಪೀತಾಂಬರಾದಿಗಳಿಂದಲಂಕೃತರಾಗಿ ದೇವರಿಗೆ, ಗುರುಗಳಿಗೆ ನಮಸ್ಕರಿಸಿ, ಪತ್ನಿಪುತ್ರ ಸಮೇತರಾಗಿ ಹಸಮಣೆಯ ಮೇಲೆ ಕುಳಿತರು. ತತ್ಕಾಲದಲ್ಲಿ ಮಾಡಬೇಕಾದ ವೇದೋಕ್ತ ಕರ್ಮಗಳಾದ ಮೇಲೆ ರಾಮಾಚಾರ್ಯರು ಬ್ರಹ್ಮಣ್ಯತೀರ್ಥರ ತೊಡೆಯ ಮೇಲೆ ಯತಿರಾಜರನ್ನು ಕೂಡಿಸಿ ಶ್ರೀಪಾದಂಗಳವರೇ ಅಕ್ಷರಾಭ್ಯಾಸ ಮಾಡಿಸಬೇಕೆಂದು ಪ್ರಾರ್ಥಿಸಿದರು.
ಬ್ರಹ್ಮಣ್ಯತೀರ್ಥರು ತಮ್ಮ ಎದುರುಭಾಗದಲ್ಲಿ ದೊಡ್ಡ ರಜತ ತಾಂಬಾಣದಲ್ಲಿ ಶುಭ್ರವಾದ ಮರಳನ್ನು ತುಂಬಿಸಿಟ್ಟು, ಅದರ ಮೇಲೆ ಓಂಕಾರವನ್ನೂ, ಶ್ರೀಕಾರವನ್ನೂ ಬರೆದು ಯತಿರಾಜನಿಂದ ಹರಿದ್ರಾಕುಂಕುಮಚೂರ್ಣ, ಮಂತ್ರಾಕ್ಷತೆ, ಪುಷ್ಪಗಳಿಂದ ಪೂಜೆ ಮಾಡಿಸಿ, ಫಲಸಮರ್ಪಣ ಮಾಡಿ, ಮಂಗಳಾರತಿ ಮಾಡಿಸಿದರು. ಆ ತರುವಾಯ ಬ್ರಹ್ಮಣ್ಯ ಮುನಿಗಳು ಯತಿರಾಜನ ಬೆರಳುಗಳಿಂದ ತಾಳಪತ್ರದ ವೇಷ್ಟನವನ್ನು ಹಿಡಿಸಿ ತಾವು ಹಿಡಿದುಕೊಂಡು ಮರಳಿನ ಮೇಲೆ “ಓಂ ನಮೋ ನಾರಾಯಣಾಯ" ಎಂದು ಬರೆದು ತಿದ್ದಿಸಿದರು.
ಅಕ್ಷರಾಭ್ಯಾಸವು ಮುಗಿದ ಮೇಲೆ ಫಲಪೂಜೆಯಾದ ಮೇಲೆ ಸುಮಂಗಲಿಯರು ಆರತಿ ಮಾಡಿದರು. ಭೂಸುರವೃಂದವು ವೇದಮಂತ್ರೋಚ್ಚಾರಪೂರ್ವಕವಾಗಿ ಬಾಲಕ ಯತಿರಾಜಾದಿಗಳಿಗೆ ಮಂತ್ರಾಕ್ಷತೆಯನ್ನು ಹಾಕಿ ಆಶೀರ್ವದಿಸಿದರು. ಗುರುಪೂಜಾನಂತರ ಸಕಲ ಬ್ರಾಹ್ಮಣ-ಸುವಾಸಿನಿಯರಿಗೆ ಗಂಧ, ಪುಷ್ಪ, ಫಲ-ತಾಂಬೂಲ, ದಕ್ಷಿಣಾ ಪ್ರದಾನ ಮಾಡಿ ರಾಮಾಚಾರ್ಯ ದಂಪತಿಗಳು ಎಲ್ಲರನ್ನೂ ಸಂತೋಷಗೊಳಿಸಿದರು. ಮಧ್ಯಾಹ್ನ ಗುರುಗಳು ಮಹಾಸಂಸ್ಥಾನ ಪೂಜೆ ಮಾಡಿ ತೀರ್ಥ-ಪ್ರಸಾದವನ್ನು ಅನುಗ್ರಹಿಸಿದರು. ಆ ತರುವಾಯ ಸರ್ವರಿಗೂ ಭೂರಿ ಭೋಜನವಾಗಿ ಸಮಾರಂಭವು ವೈಭವದಿಂದ ಮುಕ್ತಾಯವಾಯಿತು.
ಸಮಾರಂಭವು ಮುಗಿದ ಮೇಲೆ ರಾಮಾಚಾರ್ಯ ದಂಪತಿಗಳು ಹತ್ತಾರು ದಿವಸ ಅಟ್ಟೂರಿನಲ್ಲಿದ್ದು ನಂತರ ಶ್ರೀಯವರಿಂದ ಅಪ್ಪಣೆ ಪಡೆದು ಬನ್ನೂರಿಗೆ ತೆರಳಿದರು.