Kaliyugada Kalpataru Sri Vyasa Raja Yati Sarvabhouma Childhood Playfulness

|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ನಾಲ್ಕನೆಯ ಉಲ್ಲಾಸ

ಶ್ರೀವ್ಯಾಸರಾಜಯತಿಸಾರ್ವಭೌಮರು

೧೧. ಬಾಲಲೀಲೆ

ಶ್ರೀಬ್ರಹ್ಮಣ್ಯತೀರ್ಥರ ಲಾಲನೆ-ಪಾಲನೆಗಳಲ್ಲಿ ಯತಿರಾಜನು ಅಭಿವೃದ್ಧಿಸಹತ್ತಿದನು. ಶ್ರೀಮಠದ ಪುರುಷೋತ್ತಮಗುವೆಯೇ ಅವನ ಆವಾಸಸ್ಥಾನವಾಯಿತು. ಅಲ್ಲಿ ಬ್ರಹ್ಮಣ್ಯತೀರ್ಥರು ಮಗುವಿಗಾಗಿ ಮತ್ತೆ, ಬಿಳಿಯ ಮಗ್ಗುಲು ಹಾಸಿಗೆ, ಮೇಲ್ವಾಗದಲ್ಲಿ ವಿವಿಧ ವರ್ಣರಂಜಿತ ಮಣಿಮಯ ಗುಂಡು, ಗೊಂಡೆ, ರನ್ನಗನ್ನಡಿಗಳಿಂದಲಂಕೃತವಾದ ಗಿಳಿಚಪ್ಪರ, ಮೇಲುಪರದೆಗಳಿಂದ ಶೋಭಿಸುವ ಸುಂದರವಾದ ತೊಟ್ಟಿಲನ್ನು ಕಟ್ಟಿಸಿದರು. ಬ್ರಹ್ಮಣ್ಯತೀರ್ಥರು ಪ್ರತಿದಿನ ತೊಟ್ಟಿಲು ತೂಗುತ್ತಾ ಭಗವಂತಾ ಸ್ತುತಿರೂಪ ಶ್ಲೋಕ-ಪದಗಳನ್ನು ಹಾಡುತ್ತಾಯತಿರಾಜನನ್ನು ಆನಂದಗೊಳಿಸುವರು.

ಪ್ರತಿದಿನವೂ ಗುರುಗಳು ಸೂರ್ಯೋದಯವಾದ ಕೂಡಲೇ ಶಿಶುವಿಗೆ ಹಿತ-ಮಿತವಾದ ಬಿಸಿನೀರಿನಲ್ಲಿ ಮುಖಮಾರ್ಜನ ಸ್ನಾನಗಳನ್ನು ಸ್ವಹಸ್ತದಿಂದ ಮಾಡಿಸಿ, ಅಲಂಕರಿಸಿ, ಹಣೆಯಲ್ಲಿ ತಿಲಕವಿಟ್ಟು, ತೊಡೆಯಮೇಲೆ ಮಲಗಿಸಿಕೊಂಡು ಅವನ ಸುಂದರವಾದ ಬಾಯಿಯಲ್ಲಿ ತಮ್ಮ ಬೆರಳುಗಳನ್ನಿಡುವರು. ಆಗ ಶಿಶುವು ಸ್ತನ್ಯಪಾನಮಾಡುವಂತೆ ಗುರುಗಳ ಬೆರಳನ್ನು ಚೀಪಲಾರಂಭಿಸಿ ಆನಂದದಿಂದ ಮೈಮರೆಯುವುದು. ತಾಯಿಯ ಸ್ತನ್ಯಪಾನಕಾರ್ಯಗಳನ್ನು ಬ್ರಹ್ಮಣ್ಯತೀರ್ಥರ ಸಾಂಗುಲಿಗಳೇ ಯಶಸ್ವಿಯಾಗಿ ನೆರವೇರಿಸುವುದನ್ನು ಕಂಡು ಪರಿವಾರದವರು ವಿಸ್ಮಯಗೊಂಡು “ಇದೇನಾಶ್ಚರ್ಯ! ಈ ಶಿಶುವು ಸ್ವಾಮಿಗಳವರ ಬೆರಳನ್ನು ಚೀಪುತ್ತಾ ಮಾತೆಯ ಎದೆಹಾಲನ್ನು ಕುಡಿಯುವುದಕ್ಕಿಂತ ಹೆಚ್ಚಿನ ತೃಪ್ತಿ-ಆನಂದಗಳಿಂದ ನಲಿಯುವುದಲ್ಲ!” ಎಂದು ಉದ್ಗಾರ ತೆಗೆಯುತ್ತಿದ್ದರು.

ಜನಸಾಮಾನ್ಯರಿಗೆ ತಾಯಿಯ ಸ್ತನ್ಯಪಾನ, ಲಾಲನೆ-ಪೋಷಣೆಗಳಿಲ್ಲದೆ ಶಿಶುವು ಬೆಳೆಯುವುದೆಂದರೇನು ? ಎಂದೆನಿಸುವುದು ಸ್ವಾಭಾವಿಕ. ನಿಜ, ಅದು ಸಾಮಾನ್ಯ ಲೌಕಿಕ ಶಿಶುಗಳಿಗೆ ಅನ್ವಯಿಸುವ ಮಾತು. ಆದರೆ ಸಾಕ್ಷಾತ್ ನಾರಾಯಣಾವತಾರಿಗಳಾದ ಶ್ರೀವೇದವ್ಯಾಸದೇವರ ವರಪ್ರಸಾದರೂಪವಾದ ಶಿಶು ನಮ್ಮ ಯತಿರಾಜ, ದೇವತಾಕಾರ್ಯಕ್ಕಾಗಿ ಬ್ರಹ್ಮಣ್ಯತೀರ್ಥರ ತಪಸ್ಸಿನ ಫಲವಾಗಿ ಅವತರಿಸಿದ ಮಗುವಲ್ಲವೇ ಅವನು ? ಜನತೆಯ ಐಹಿಕಾಮುತ್ಮಿಕ ಅಭ್ಯುದಯ-ಕಲ್ಯಾಣಗಳಿಗಾಗಿ, ಮುಖ್ಯವಾಗಿ ಅನಾದಿಕಾಲದಿಂದ ಅವಿಚ್ಛಿನ್ನವಾಗಿ ನಡೆದುಬಂದಿರುವ ವೈದಿಕ ವೈಷ್ಣವ ಸತ್ವಗಳನ್ನು ಎತ್ತಿಹಿಡಿದು, ಭಾಗವತಧರ್ಮಪ್ರಸಾರ ಮಾಡಿ, ಭಗವಂತನ, ವಾಯುದೇವ ಜ್ಞಾನಕಾರ್ಯದಲ್ಲಿ ಸೇವೆ ಸಲ್ಲಿಸಿ, ಮತ್ತೊಮ್ಮೆ ಭಗವದಕಿಯು, ಶ್ರೀಹರಿಭಕ್ತರ ಮಹತ್ವಗಳನ್ನು ಸಜ್ಜನರ ಹೃದಯಗನ್ನಡಿಯಲ್ಲಿ ಸ್ಪಷ್ಟವಾಗಿ ಒಡಮೂಡುವಂತೆ ಮಾಡಲೆಂದು ಅವತರಿಸಿದ ಭಾಗವತಾಗ್ರೇಸರನಾದ ಪ್ರಹ್ಲಾದರಾಜನೇ ತಮ್ಮ ಯತಿರಾಜನಾದುದರಿಂದ ದೇವಾಂಶಸಂಜಾತನಾದ ಅವನು ಇತರ ಲೌಕಿಕ ಶಿಶುಗಳಂತೆ ಸ್ತನ್ಯಪಾನಾದಿಗಳಿಂದ ಬೆಳೆಯಲು ಸಾಧ್ಯವೇ ? ಮೇಲಾಗಿ ಯತಿರಾಜನನ್ನು ಪೋಷಿಸುತ್ತಿರುವ ಶ್ರೀಬ್ರಹ್ಮಣ್ಯತೀರ್ಥರೂ ಸಾಮಾನ್ಯ ಯತಿಗಳಲ್ಲ! ಅವರು ಮಹಾಜ್ಞಾನಿಗಳು, ಇದರ ಮೇಲೆ ಬ್ರಹ್ಮಣ್ಯತೀರ್ಥರು. ಜಗತ್ತಿಗೆ ಬೆಳಕನ್ನೂ, ಆರೋಗ್ಯಭಾಗ್ಯವನ್ನೂ, ಜೀವನವನ್ನೂ ನೀಡುವ ಸೂರ್ಯದೇವನ ಅಂಶಸಂಭೂತರು! ಸಕಲ ಔಷಧಗಳಿಗೆ ಪ್ರಭು ಸೂರ್ಯದೇವ. ಅವನಕರ(ಕಿರಣಗಳು ಅಮೃತಮಯವಾದವು. 'ಆರೋಗ್ಯಂ ಭಾಸ್ಕರಾದಿಚ್ಛೇತ್' ಎಂಬಂತೆ ಸೂರ್ಯಾಂಶರಾದ ಯತಿಗಳ ಪಾಲನೆಯಲ್ಲಿ ಮಗುವು ಆರೋಗ್ಯಪೂರ್ಣವಾಗಿ ಬೆಳೆದುದು ಅಚ್ಚರಿಯಲ್ಲ! “ಧೈಯಸ್ಸದಾ ಸವಿತೃಮಂಡಲ ಮಧ್ಯವರ್ತಿ ನಾರಾಯಣಸ್ಸರಸಿಜಾಸನ ಸನ್ನಿವಿಷ್ಟಃ | ಕೇಯೂರವಾನ್ ಮಕರಕುಂಡಲವಾನ್ ಕಿರೀಟೀಹಾರೀ ಹಿರಣ್ಮಯವಪುಃ ಧೃತಶಂಖಚಕ್ರ ” ಎಂದು ಪ್ರತಿದಿನವೂ ಸರ್ವಭೂಸುರವೃಂದವು ಸೂರ್ಯಮಂಡಲ ಮಧ್ಯವರ್ತಿಯಾದ ಯಾವ ಜಗಜ್ಜನ್ಮಾದಿಕಾರಣನೂ, ಸರ್ವೋತ್ತಮನೂ ಆದ ಶ್ರೀಮನ್ನಾರಾಯಣನನ್ನು ಧ್ಯಾನಿಸುವುದೋ ಅಂಥಾ ಮಹಾಪ್ರಭುವನ್ನು ತನ್ನ ಹೃನ್ಮಂಡಲದಲ್ಲಿ ಧರಿಸಿರುವ ಮಹಾಭಾಗ್ಯಶಾಲಿಯಾದ ಭಾಸ್ಕರನ ಅಂಶಸಂಭೂತರಾದ ಶ್ರೀಬ್ರಹ್ಮಣ್ಯತೀರ್ಥರೇ ಯತಿರಾಜನ ಪೋಷಣೆಯ ಹೊಣೆಯನ್ನು ಹೊತ್ತಿರುವಾಗ, ಅಮೃತಮಯವಾದ ಅವರ ಕಹಾಂಗುಲಿಗಳು ಸ್ತನದಂತೆ ಯತಿರಾಜನಿಗೆ ಅಮೃತವನ್ನು ಉಣಿಸುವಂತಾದುದು ಆಶ್ಚರ್ಯವಲ್ಲವಷ್ಟೆ! ಆದ್ದರಿಂದ ತಾಯಿಯ ಸ್ತನ್ಯಪಾನವಿಲ್ಲದೆ ಯತಿರಾಜನು ಬೆಳೆದುದು ಯುಕ್ತವೇ ಆಗಿದೆ.

ಇದರಂತೆ ಪ್ರತಿದಿನವಾ ಕಾಲಕಾಲಕ್ಕೆ ಶ್ರೀಮೂಲಗೋಪಾಲಕೃಷ್ಣ-ಪಟ್ಟಾಭಿರಾಮ-ವೇದವ್ಯಾಸದೇವರಿಗೆ ನಿವೇದಿತವಾದ ಶುದಕ್ಷೀರವನ್ನು ಅಭಿಮಂತ್ರಿಸಿ ಯತಿರಾಜನಿಗೆ ಸ್ವಹಸ್ತದಿಂದ ಕುಡಿಸುವರು. ಇದಕ್ಕಿಂತ ಮಗುವಿನ ಪೋಷಣೆಗೆ ಮತ್ತೇನಾಗಬೇಕು? ಅಂತೆಯೇ ಯತಿರಾಜನು ಗುರುವರರ ಲಾಲನೆ-ಪೋಷಣೆಯಲ್ಲಿ ದೃಷ್ಟ-ಪುಷ್ಟಾಂಗನಾಗಿ ಬೆಳೆದು ತನ್ನ ಲೀಲೆಗಳಿಂದ ಎಲ್ಲರನ್ನೂ ಸಂತೋಷಪಡಿಸಹತ್ತಿದನು.

ಬ್ರಹ್ಮಣ್ಯತೀರ್ಥರು ಸ್ನಾನ-ಆಕ-ಜಪತಪಾನುಷ್ಠಾನ, ದೇವತಾರ್ಚನೆ, ಭಿಕ್ಷಾಸ್ವೀಕಾರಾದಿಕಾಲವನ್ನು ಬಿಟ್ಟು ಉಳಿದ ತಮ್ಮೆಲ್ಲಾ ಕಾಲವನ್ನು ಯತಿರಾಜನೊಡನೆ ಕಳೆಯುವರು. ಬೆಳಗಿನ ಝಾವ, ದೇವತಾರ್ಚನೆಯ ಕಾಲಗಳಲ್ಲಿ ಮಠದ ವೇದವಿದ್ಯಾವಿಶಾರದರು ಮಾಡುವ ಸುಸ್ಕರ ವೇದಪಾರಾಯಣ, ಮಂತ್ರಪಠನೆ, ಪೂಜಾಕಾಲದ ಘಂಟಾನಾದ, ಜಾಗಟೆ, ಚಯ್ಯಾಳಿ, ಶಂಖಧ್ವನಿಗಳ ನಿನಾದವನ್ನಾಲಿಸಿ ಯತಿರಾಜನು ಮುದಿಸುವನು. ಬ್ರಹ್ಮಣ್ಯತೀರ್ಥರು ಪೂಜಾದಿಗಳಲ್ಲಿ ಮಗ್ನರಾಗಿರುವಾಗ ಮಗುವಿನ ಹೊಳೆಯುವ ಕಣ್ಣುಗಳು ಅವರನ್ನು ಕಾಣಲು ಕಾತರಿಸುವುದು. ಗುರುಗಳ ಮಧುರಾಲಿಂಗನಕ್ಕಾಗಿ ಅವನ ದೇಹ, ಮನಸ್ಸು ತವಕಿಸುವುದು. ಅವರ ಧ್ವನಿಯನ್ನಾಲಿಸಲು ಕಿವಿಗಳು ಹಂಬಲಿಸುವುದು. ಪೂಜಾದಿಗಳನ್ನು ಪೂರೈಸಿ ಬಂದ ಗುರುಗಳನ್ನು ಕಂಡೊಡನೆ ಯತಿರಾಜ ಆನಂದದಿಂದ ಜಿಗಿದಾಡಿ, ತನ್ನೆರಡು ಪುಟ್ಟ ಕರಗಳನ್ನು ಚಾಚಿ ಆಹ್ವಾನಿಸುವನು. ಹರ್ಷಪುಳಕಿತಗಾತ್ತರಾಗಿ ಗುರುಗಳು ಮಗುವನ್ನೆತ್ತಿ ತೊಡೆಯ ಮೇಲೆ ಕೂಡಿಸಿಕೊಂಡಾಗ ಯತಿರಾಜ ತನ್ನ ಚಿತ್ರ-ವಿಚಿತ್ರ ಲೀಲೆಗಳಿಂದ ಅವರನ್ನು ಸಂತೋಷಗೊಳಿಸುವನು. ಹೀಗೆ ಅವರೀರ್ವರಲ್ಲಿ ಅಗಾಧ ಪ್ರೇಮವು ವರ್ಧಿಸಿ ಪರಸರ ಅವಕ್ಕೆ ಮಧುರ ಭಾವನೆಗಳು ವಿಜೃಂಭಿಸಿ ಪರಸ್ಪರ ಆಕರ್ಷಿತರಾಗಿ ನಲಿಯುವರು. ಯತಿರಾಜನು ಉದಯಕಾಲೀನ ಹೊಂಗಿರಣಗಳಿಂದ ಬೆಳಗುವ ಭಾಸ್ಕರನಂತೆಯೂ, ಆಹುತಿಯಿಂದ ದೇದೀಪ್ಯಮಾನನಾದ ಅಗ್ನಿದೇವನಂತೆಯೂ, ಶರತ್ಕಾಲೀನ ತಂಗಿರಣನಂತೆಯೂ, ಅಂಕವಿಲಸಿತಲಕ್ಷ್ಮಿಯಿಂದೊಡಗೂಡಿದ ಶ್ರೀಕೇಶವನಂತೆಯೂ ಕೂಡಿದ ಅವಸ್ತ್ರ ಮಧುರ ಮನೋಜ್ಞತೆಯಿಂದ ಶೋಭಿಸುತ್ತಿದ್ದು,

ಯತಿರಾಜನ ಮೈ ಬಣ್ಣವು ಗುಲಾಬಿ ವರ್ಣದಿಂದ ರಮಣೀಯವಾಗಿತ್ತು. ವಿಮಾನಾಕಾರದ ತೊಟ್ಟಿಲಿನ ಮೃದುರಯ್ಕೆಯಲ್ಲಿ ಮಲಗಿದ್ದ ದೃಶ್ಯವು ಅವನ ಕಮಲಾಸನವನ್ನು ಪ್ರಕಟಿಸುತ್ತಿತ್ತು. ಅವನು ಶಮದಮಾದಿಸಂಪನ್ನ ಸಜ್ಜನವಂತೆಯೂ ಉದಯಿಸುತ್ತಿರುವ ಸೂರ್ಯನ ಪ್ರಭೆಯ ಮಂಗಳಾವತಾರದಂತೆಯೂ, ಅಗ್ನಿಯ ಕಾಂತಿಯನ್ನು ಅಣಕಿಸುವಂತೆಯೂ, ಸುವರ್ಣಗಿರಿಯ ಕಾಂತಿಸಾಗರದಂತೆಯೂ ಕಂಗೊಳಿಸುತ್ತಿದ್ದನು. ಅವನ ಕೊರಳಿನಲ್ಲಿ ಸುವರ್ಣಮಯ- ವಾದ ಪೀತವರ್ಣದ ರಕ್ಷಾಮಣಿಗಳಿಂದ ರಚಿತವಾದ ಹಾರವು ರಾಜಿಸುತ್ತಿತ್ತು. ಆಹಾರದ ಮಧ್ಯಭಾಗದಲ್ಲಿ ಕನಕಕವಚಿತ ಹುಲಿಯುಗುರಿನ ಪದಕವು ಅಲಂಕೃತವಾಗಿತ್ತು. ಯತಿರಾಜನು ತನ್ನ ಪಾದಾಂಗುಷವನ್ನು ಚೀಪುತ್ತಿದ್ದನು. ಅದು ವಾಖ್ಯಾರ್ಥದಲ್ಲಿ ಪರಮತೀಯ ಪಂಡಿತರನ್ನು ಜಯಿಸಿ, ಆಗವರು ಸೇವಿಸುವ ತನ್ನ ಚರಣದಾರ್ಥ ಸಹಿಷ್ಣುತೆಯನ್ನು ಅಭ್ಯಾಸ ಮಾಡುವಂತೆ ಕಾಣುತ್ತಿತ್ತು. ಅವನು ತನ್ನ ಕಾಲುಗಳನ್ನು ಮೇಲೆತ್ತಿ ಕ್ರೀಡಿಸುತ್ತಿದ್ದನು. ಅದು ಮುಂದೆ ರತ್ನಖಚಿತ ಕಿರೀಟಧಾರಿಗಳಾದ ರಾಜಾಧಿರಾಜರು ತನ್ನ ಪಾದದ ಮೇಲೆ ಶಿರವಿಟ್ಟು ನಮಿಸುವಾಗ ಪಾದಗಳು ಕಿರೀಟಕ್ಕೆ ತಾಕುವುದಷ್ಟೇ? ಅದನ್ನು ಈಗಿನಿಂದ ಅಭ್ಯಾಸ ಮಾಡುವಂತೆ ತೋರುತ್ತಿತ್ತು. ತನ್ನ ಕವ ಕಮಲದಳದಂತಿರುವ ಹೆಬ್ಬೆಟ್ಟನ್ನು ಅವನು ಆಗಾಗ್ಗೆ ತನ್ನ ಮುಖಕಮಲದಲ್ಲಿಟ್ಟುಕೊಳ್ಳುತ್ತಿದ್ದನು. ಅದು ಮುಂದೆ ತಾನು ಪರಮಹಂಸ ವಾರೂಢನಾಗುವುದನ್ನು ತೋರುವಂತಿತ್ತು. ಯತಿರಾಜನು ಒಮ್ಮೊಮ್ಮೆ ಕಮಲದ ಮೊಗ್ಗಿನಂತಿರುವ ಮುಷ್ಟಿಯನ್ನು ತೋರುವುದನ್ನು ನೋಡಿದರೆ ತಾನು ಸಕಲಶಾಸ್ತ್ರಸಿದ್ಧಾಂತಗಳನ್ನು ಕರಗತ ಮಾಡಿಕೊಂಡಿದ್ದೇನೆ ಎಂದು ತಿಳಿಸುವಂತಿತ್ತು.

ಯತಿರಾಜನು ಒಮ್ಮೊಮ್ಮೆ ಮೇಘಗರ್ಜನಂತೆಯಂತೆ ಗಂಭೀರದ್ದನಿಯಿಂದ ಅಳುತ್ತಿದ್ದನು. ಅದು ಅವನು ಸಕಲ ಪಾಷಂಡಮತಗಳನ್ನು ಬೆದರಿಸುತ್ತಿರುವಂತೆ ಕಂಡುಬರುತ್ತಿತ್ತು. ಅವನು ಪವಡಿಸಿದ ತೊಟ್ಟಿಲಿನ ಮೇಲ್ಬಾಗದಲ್ಲಿ ಬೆಳದಿಂಗಳಿನಂತೆ ಬಿಳುಪಾದ ರೇಷ್ಮೆಯ ಪರದೆಯನ್ನು ಇಳಿಬಿಟ್ಟಿದ್ದರು. ಅದರ ಕೆಳಗೆ ಮನೋಹರವಾದ ಗಿಳಿಚಪ್ಪರವನ್ನು ಕಟ್ಟಿದರು. ಅದರ ಚೌಕಟ್ಟಿನ ಅಂಚಿನಲ್ಲಿ ಪಚ್ಚೆಮಣಿಮಯ ಸರಪಳಿಯನ್ನು ಹೆಣೆದು ಅದಕ್ಕೆ ಪದ್ಮರಾಗಾದಿ ವಿವಿಧ ವರ್ಣಗಳ ಮಣಿಗುಂಡು, ರಸಗುಂಡು, ರನ್ನಗನ್ನಡಿಗಳನ್ನು ತೂಗುಬಿಟ್ಟಿದ್ದನು. ಯತಿರಾಜನು ಅದನ್ನು ನೋಡಿ ಕಿಲಕಿಲನೆ ನಗುತ್ತಿದ್ದನು. ಇಂತು ಶೈಶವಾವ ಯನ್ನು ಅವನು ಮನೋರಂಜನೆ-ಆನಂದಗಳಿಂದ ಕಳೆದನು.

ಈಗ ಯತಿರಾಜನು ಎರಡನೆಯ ವರ್ಷದಲ್ಲಿ ಪದಾರ್ಪಣ ಮಾಡಿದನು. ಶ್ರೀಮಠದ ಜನರೆಲ್ಲರಿಗೂ ಅವನು ಪ್ರಾಣಪದಕವಾಗಿದ್ದು, ಸುವರ್ಣವರ್ಣದ ದೇಹಕಾಂತಿ, ಕೃಷ್ಣ-ಪುಷ್ಟಾಂಗಗಳು ಆಕರ್ಷಕ ಮೈಮಾಟ, ವಿಸ್ತಾರವಾದ ಫಾಲಪ್ರದೇಶ, ನೀಲವರ್ಣದ ಉಂಗುರುಂಗುರಾದ ಕೇಶಸಮುದಾಯ, ಕಾಮನಬಿಲ್ಲಿನಂತಹ ಹುಬ್ಬುಗಳು, ಪುಟ್ಟ ಕಿವಿಗಳು, ಮಿಂಚಿನಂತೆ ಬೆಳಗುವ ಕಣ್ಣುಗಳು, ನೀಟಾದ ನಾಸಿಕ, ಗುಲಾಬಿ ಬಣ್ಣದ ತುಂಬಿದ ತುಟಿಗಳು - ಇವೆಲ್ಲವೂ ಅವನ ಭಾವಿತಾರುಣ್ಯಕಾರಿ ಸೌಂದರ್ಯಸಾರ ಸೂಚಕವಾಗಿ ಶೋಭಿಸುತ್ತಿದ್ದವು. ಇಂತಹ ಸೌಂದರ್ಯಸಾರವೇ ಧರೆಗಿಳಿದು ಬಂದಂತಿರುವ ಬಾಲಿಕೆ ಯತಿರಾಜನನ್ನು ಎಲ್ಲರೂ ಮುದ್ದಿಸುತ್ತಿದ್ದುದು ಅಚ್ಚರಿಯೇನಲ್ಲ!

ಬ್ರಹ್ಮಣ್ಯತೀರ್ಥರು ತಾವು ಪೂಜಾದಿಕಾರ್ಯಾಸಕ್ತವಾಗಿ ಮಡಿಯಲ್ಲಿದ್ದಾಗ ಯತಿರಾಜನನ್ನು ಸರಿಯಾಗಿ ನೋಡಿಕೊಳ್ಳುವಂತೆ ಮಠದ ಆತ್ಮೀಯ ಜನರಿಗೆ ಕಟ್ಟಪ್ಪಣೆ ಮಾಡಿದ್ದರು. ಅದರಂತೆ ಅವರ ಮಗುವನ್ನು ಎತ್ತಿಕೊಂಡು ಆಡಿಸುತ್ತಿದ್ದರು. ಯತಿರಾಜನು ಕಮಲದಿಂದ ಕಮಲಕ್ಕೆ ಸಂಚರಿಸುವ ಹಂಸಪಕ್ಷಿಯಂತೆಯೂ ರಾಶಿಯಿಂದ ರಾಶಿಗೆ ಸಂಚರಿಸುವ ಚಂದ್ರನಂತೆಯೂ ಮುಗ್ದ ಮಂದಹಾಸ ಬೀರುತ್ತಾ ಲೀಲೆಯಿಂದಲೋ ಎಂಬಂತೆ ಒಬ್ಬರ ತೊಡೆಯಿಂದ ಮತ್ತೊಬ್ಬರ ತೊಡೆಗೆ ಸಂಚರಿಸುತ್ತಿದ್ದನು.* ಗಜ-ಸಿಂಹ ಸದೃಶವಾದ ಮಂಡೆಯಿಂದ ಮೆಲ್ಲನೆ ಆ ಬಾಲಕನು ಪುರುಷೋತ್ತಮಗುಹೆಯ ಅಂಗಳದಲ್ಲಿ ಸಂಚರಿಸುತ್ತಿರುವುದನ್ನು (ಅಂಬೆಗಾಲಿಡುವುದನ್ನು) ಗಮನಿಸಿದರೆ ಸನಿಹದಲ್ಲೇ ಹರಡಲಿರುವ ತನ್ನ ಕಾಂತಿಕಾಸಾರದಲ್ಲಿ ತರಣ ಕ್ರೀಡೆ(ಈಜುವುದು)ಯನ್ನು

ಅಭ್ಯಾಸಿಸುವಂತೆ ಪ್ರಕಾಶಿಸುತ್ತಿದ್ದನು, ಯತಿರಾಜನ ಸುಂದರಮುಖಾರವಿಂದದಲ್ಲಿ ಚಂದ್ರಬಿಂಬದಲ್ಲಿನ ಸುಧಾರಸಬಿಂದು ಹಾಗೂ ಲಾವಣ್ಯಪೂಾರ್ಣ ಮುತ್ತುಗಳ ಸಾಲಿನಂತೆ ರಮ್ಯಕಾಂತಿಯುಕ್ತ ದಂತಪಂಕ್ತಿಗಳು ಮೊಳಕೆಯೊಡೆದವು. ಅದು ಅವನ ವದನದಲ್ಲಿ ನಲಿಯುವ ವಾಗೇವಿಯ ಧವಳಕೀರ್ತಿಯ ಪ್ರಥಮಾಂಕುರದಂತೆ ಅಸದೃಶವಾಗಿ ಶೋಭಿಸುತ್ತಿತ್ತು. (ಮಗುವು ತೊದಲು ನುಡಿಯಲು ಪ್ರಾರಂಭಿಸಿತು), ತನ್ನ ಹೆಚ್ಚಾದ “ಗುರುತ್ವವನ್ನು ಈ ಭೂಮಿಯು ಸಹಿಸಲು ಅಸಮರ್ಥವೆಂದು ತೋರಲೋ ಎಂಬಂತೆ ಯತಿರಾಜನು ಗುರುಗಳ ಕರಾಂಗುಲಿಯನ್ನು ಭದ್ರವಾಗಿ ಹಿಡಿದು ಮೆಲ್ಲಮೆಲ್ಲನೆ ಹೆಜ್ಜೆಯನ್ನಿಡಹತ್ತಿದನು. ಯತಿರಾಜನು ನಿಪುಣತರ ವಾಕ್ಯಪ್ರಯೋಗಸಮರ್ಥನಾಗಿದ್ದರೂ, ಬ್ರಹ್ಮಣ್ಯತೀರ್ಥರು ಹೇಳಿಕೊಟ್ಟ ರಾಮ, ಕೃಷ್ಣ, ಹರಿ ಮುಂತಾದ ಪದ(ಮಾತು)- ಗಳನ್ನಾಡುತ್ತಾ ತಾನು ಬಾಲ್ಯದಿಂದಲೂ ಗುರುವಾಕ್ಯ ಪರಿಪಾಲಕನೆಂಬುದನ್ನು ಪ್ರಕಟಿಸುತ್ತಿದ್ದನು. ಶ್ರೀಗಳವರು ರಾತ್ರಿ ಹೊತ್ತು ಅಂಗಳದಲ್ಲಿ ಮಗುವನ್ನೆತ್ತಿಕೊಂಡು ಅತ್ತಿಂದಿತ್ತ ಓಡಾಡುತ್ತಾ, ರಮಿಸುತ್ತಿರುವಾಗ ಯತಿರಾಜನು ಅಂಬರದಲ್ಲಿರಾಜಿಸುವ ಚಂದ್ರನನ್ನು ಹಿಡಿದು ತನ್ನ ಕೀರ್ತಿಚಂದ್ರನೊಡನೆ ಸ್ಪರ್ಧಿಸಲೋ ಎಂಬಂತೆ “ಚಂದ್ರನನ್ನು ನನಗೆ ಕೊಡು” ಎಂದು ಗುರುಗಳನ್ನು ಪೀಡಿಸುತ್ತಿದ್ದನು. ಹೀಗೆ ಯತಿರಾಜನು ತನ್ನ ವಿಚಿತ್ರ ಲೀಲೆಗಳಿಂದ ಎರಡನೆಯ ವರ್ಷದಲ್ಲಿ ಅಭಿವೃದ್ಧಿಸಹತ್ತಿದನು.