|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ನಾಲ್ಕನೆಯ ಉಲ್ಲಾಸ

ಶ್ರೀವ್ಯಾಸರಾಜಯತಿಸಾರ್ವಭೌಮರ

೫೭. ಅವತಾರದ ಪರಿಸಮಾಪ್ತಿ

ದಿಗ್ವಿಜಯಯಾತ್ರೆಯಲ್ಲಿದ್ದ ಶ್ರೀವಿಜಯೀಂದ್ರತೀರ್ಥ ಶ್ರೀಪಾದಂಗಳವರಿಗೆ ಶ್ರೀವ್ಯಾಸರಾಜರು ದೇಹಾಲಸ್ಯದಿಂದ ಬಳಲುತ್ತಿರುವ ವಿಚಾರವು ವಿಜಯನಗರದ ಒಬ್ಬಿಬ್ಬ ಪಂಡಿತರಿಂದ ತಿಳಿದು ಮನಸ್ಸಿಗೆ ಬಹಳ ಚಿಂತೆಯಾಯಿತು. ಪೂಜ್ಯ ಶ್ರೀಸುರೇಂದ್ರತೀರ್ಥ ಯತಿಪುಂಗವರಿಗೂ ಆ ವಿಚಾರ ತಿಳಿದು ಅವರಿಗೆ ಬಹಳ ಕಳವಳವಾಯಿತು. ಅವರು ಪ್ರಿಯಶಿಷ್ಯರಾದ ಶ್ರೀವಿಜಯೀಂದ್ರರನ್ನು ಹತ್ತಿರ ಕರೆದು “ಪ್ರೀತ್ಯಾಸ್ಪದ ಶಿಷ್ಯರೇ, ಹಿರಿಯ ಶ್ರೀಪಾದಂಗಳವರು ದೇಹಾಲಸ್ಯದಿಂದಿರುವ ಈ ಸಮಯದಲ್ಲಿ, ನಿಮ್ಮ ಎಲ್ಲ ವಿಧ ಅಭ್ಯುದಯಗಳಿಗೆ ಕಾರಣರೂ, ನಿಮ್ಮ ಕೀರ್ತಿ-ಪ್ರತಿಷ್ಠೆಗಳನ್ನು ಕೇಳಿ ಸದಾ ಆನಂದದಿಂದ ಹಿಗ್ಗುವ ಪೂಜ್ಯರೂ ಆದ್ದರಿಂದ ಈಗ ನೀವು ಕೆಲಕಾಲ ಅವರ ಸಮೀಪದಲ್ಲಿದ್ದು ಸೇವಿಸಿ ಅನುಗೃಹೀತರಾಗುವುದು ಅವಶ್ಯ ಮತ್ತು ನಿಮ್ಮ ಕರ್ತವ್ಯ. ನೀವು ನಾಳೆಯೇ ವಿಜಯನಗರಕ್ಕೆ ಹೊರಡಬೇಕು. ನಾವು ಹಿರಿಯ ಶ್ರೀಪಾದಂಗಳವರ ಆರೋಗ್ಯಭಾಗ್ಯಕ್ಕಾಗಿ ಶ್ರೀಮೂಲರಘುಪತಿ ವೇದವ್ಯಾಸದೇವರಲ್ಲಿ ಪ್ರಾರ್ಥಿಸುತ್ತಿರುವುದಾಗಿ ನಮ್ಮ ಪ್ರೇಮಾಸ್ಪದ ಬಂಧುಗಳೂ ಪರಲೋಕ ಬಂಧುಗಳೂ ಆದ ಶ್ರೀವ್ಯಾಸಯೋಗೀಂದ್ರರಲ್ಲಿ ವಿಜ್ಞಾಪಿಸಿರಿ” ಎಂದಾಜ್ಞಾಪಿಸಿದರು. ಗುರುಪಾದರ ಮಾತು ಕೇಳಿ ಗುರುದರ್ಶನಕ್ಕೆ ಅಪ್ಪಣೆ ದೊರಕಿತೆಂಬ ಆನಂದದಿಂದ ವಿಜಯೀಂದ್ರರು “ಗುರುಗಳ ಆಜ್ಞೆಯಂತೆ ನಡೆಯುತ್ತೇನೆ” ಎಂದು ವಿಜ್ಞಾಪಿಸಿದರು. 

ಮರುದಿನ ವಿಜಯೀಂದ್ರರು ಚಿಕ್ಕಸಂಸ್ಥಾನದೊಡನೆ ಮಿತಪರಿವಾರ ಸಹಿತರಾಗಿ ಹೊರಟು ವಿಳಂಬ ಸಂವತ್ಸರದ ಫಾಲ್ಗುಣ ಕೃಷ್ಣ ಪಾಡ್ಯದಂದು ವಿಜಯನಗರವನ್ನು ತಲುಪಿ ಶ್ರೀವಿಶ್ವಪಾವನ ಮಠಕ್ಕೆ ದಯಮಾಡಿಸಿದರು. ಶ್ರೀವಿಜಯೀಂದ್ರರು ಬರುತ್ತಿರುವ ವಿಚಾರವರಿತ ಶ್ರೀವ್ಯಾಸಮುನೀಂದ್ರರಿಗೆ ಅಪಾರ ಸಂತೋಷವಾಯಿತು. ಪ್ರೀತ್ಯಾಸ್ಪದ ವಿಜಯೀಂದ್ರರು ಬರುವರೆಂದು ಅವರಿಗೆ ಬಹಳ ಉತ್ಸಾಹ, ಸಂಭ್ರಮ, ಎಲ್ಲಿಲ್ಲದ ಸಡಗರ, ಮಹಾದ್ವಾರದಲ್ಲಿ ಮಠದ ಸಮಸ್ತ ಬಿರುದಾವಳಿ ಪೂರ್ಣಕುಂಭದೊಡನೆ ಶ್ರೀನಿವಾಸತೀರ್ಥರೇ ಮೊದಲಾದ ಪರಮಹಂಸಮಂಡಲಿ ಮತ್ತು ಮಠದ ಅಧಿಕಾರಿಗಳು ಪಂಡಿತಮಂಡಲಿಯು ಶ್ರೀವಿಜಯೀಂದ್ರರನ್ನು ಸ್ವಾಗತಿಸುತ್ತಿರುವಾಗಲೇ ಶ್ರೀವ್ಯಾಸತೀರ್ಥರು ಮಹಾದ್ವಾರ ದಾಟಿ ಪ್ರಿಯಶಿಷ್ಯರತ್ತ ಧಾವಿಸಿ ಭರದಿಂದಾಲಂಗಿಸಿದರು. ಶ್ರೀವಿಜಯೀಂದ್ರರು ಗುರುಪಾದರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಹರುಷ ಭರದಿಂದ ಆನಂದಭಾಷ್ಪವು ಈರ್ವರ ಕಣ್ಣಿನಿಂದಲೂ ಹರಿಯುತ್ತಿರಲು ವ್ಯಾಸಮುನಿಗಳು ವಿಜಯೀಂದ್ರರನ್ನು ಮೇಲೆಬ್ಬಿಸಿ ಕರಪಿಡಿದು ಸಭಾಭವನಕ್ಕೆ ಕರತಂದರು. ನೆರೆತ ಜನಸ್ತೋಮ 'ಶಿಷ್ಯವಾತ್ಸಲ್ಯ, ಗುರುಭಕ್ತಿಗಳಿಗೆ ಶ್ರೀವ್ಯಾಸರಾಜ-ವಿಜಯೀಂದ್ರರಿಗೆ ಸರಿಸಾಟಿ ಬೇರಾರೂ ಇಲ್ಲ' ಎಂದು ಉಭಯಗುರುಗಳನ್ನು ಸ್ತುತಿಸಿ ಜಯಕಾರ ಮಾಡಿದರು. 

ಅಂದು ಸಂಜೆ ದೀಪಾರಾಧನೆಯಾಗಿ ವಿಶ್ರಾಂತಿಯಲ್ಲಿರುವಾಗ ಶ್ರೀವ್ಯಾಸರಾಜರು ಶ್ರೀವಿಜಯೀಂದ್ರರನ್ನು ಏಕಾಂತವಾಗಿ ಹತ್ತಿರ ಕೂಡಿಸಿಕೊಂಡು ಅವರ ಅಭ್ಯುದಯ ವಿಚಾರಾದಿಗಳನ್ನು ಕೇಳಿ ತಿಳಿದು ಸಂತೋಷಿಸಿದರು ಮತ್ತು ತಮ್ಮ ಆರೋಗ್ಯಾದಿ ವಿಚಾರಗಳನ್ನು ತಿಳಿಸಿ “ಪ್ರಿಯಶಿಷ್ಯರೇ, ಬಹುದಿನಗಳಿಂದ ನಿಮ್ಮನ್ನು ಕರೆಸಿಕೊಂಡು ಕೆಲಮುಖ್ಯವಿಚಾರಗಳನ್ನು ತಿಳಿಸಲು ಮನಸ್ಸು ಹಾತೊರೆಯುತ್ತಿತ್ತು. ನೀವೀಗ ಬಂದುದು ನಮಗೆ ಪರಮಾನಂದವಾಗಿದೆ. ಶ್ರೀಹರಿವಾಯುಗಳೇ ನಮ್ಮ ಮನದಾಸೆ ಪೂರೈಸಲು ನಿಮ್ಮನ್ನು ಇಲ್ಲಿಗೆ ಕರೆಸಿಕೊಂಡಿದ್ದಾರೆ ಎಂದು ನಾವು ಭಾವಿಸುತ್ತೇವೆ” ಎಂದರು. ಶ್ರೀವಿಜಯೀಂದ್ರರು “ಗುರುದೇವ! ತಮ್ಮನ್ನು ಸೇವಿಸುವ ಭಾಗ್ಯ ದೊರೆತುದು ನನ್ನ ಸುದೈವ. ಬಹುವರ್ಷಗಳಿಂದ ತಮ್ಮ ದರ್ಶನಮಾಡಿ ಕೆಲಕಾಲ ಸೇವಿಸುವ ಬಯಕೆಯಿತ್ತು. ಅದೀಗ ಪೂರ್ಣವಾಯಿತು, ಧನ್ಯನಾದೆ” ಎಂದರು. 

ವ್ಯಾಸಮುನಿಗಳು ನಗುತ್ತಾ "ಪ್ರೀತ್ಯಾಸ್ಪದರಾದ ವಿಜಯೇಂದ್ರರೇ, ನೀವು ನಮ್ಮನ್ನು ದೈಹಿಕವಾಗಿ ಹೆಚ್ಚುದಿನ ಸೇವಿಸಲಾರಿರಿ! ನಿಮಗಾಗಿಯೇ ಕಾದಿದ್ದೆವು. ನೀವು ಬಂದಿದ್ದರಿಂದ ನಮ್ಮಾಸೆ ಪೂರೈಸಿತು. ನಾವು ಕೆಲ ಆದೇಶಗಳನ್ನು ನೀಡಬಯಸಿದ್ದೇವೆ. ಅದನ್ನು ನೀವು ಪೂರ್ಣಮಾಡಿದಲ್ಲಿ ಅದೇ ನೀವು ನಮಗೆ ಮಾಡುವ ಅಸಾಧಾರಣ ಸೇವೆಯಾಗುವುದು” ಎಂದಾಜ್ಞಾಪಿಸಿದರು. ಶ್ರೀವಿಜಯೀಂದ್ರರು ಗುರುಗಳ ವಚನವನ್ನಾಲಿಸಿ ಕಳವಳದಿಂದ “ಗುರುದೇವ, ಹೀಗೇಕೆ ಹೇಳುತ್ತಿರುವಿರಿ? ತಮ್ಮ ಮಾತು ಕೇಳಿ ನಮಗೆ ಭಯಕಾತುರಗಳುಂಟಾಗುತ್ತಿದೆ” ಎಂದರು. 

ಶ್ರೀವ್ಯಾಸರಾಜರು ನಸುನಕ್ಕು ಭಯಕಾತುರಗಳಿಗೆ ಕಾರಣವಿಲ್ಲ, ಭಗವತ್ಸಂಕಲ್ಪಕ್ಕೆ ಯಾರೂ ಹೊರತಲ್ಲವಷ್ಟೇ ? ನಮ್ಮ ಕಾಲ ಮುಗಿಯುತ್ತಾ ಬಂದಿದೆ. ಶ್ರೀಹರಿವಾಯುಗಳು ನಮ್ಮ ಅವತಾರಕಾರ್ಯವನ್ನು ಪೂರ್ಣಗೊಳಿಸಿದ್ದಾರೆ. ಶ್ರೀಹರಿಯಿಂದ ನಮಗೆ ಕರೆಬಂದಿದೆ. ನೀವು ಜ್ಞಾನಿಗಳು, ಧೀರರು. ನಾವು ಕಣ್ಮರೆಯಾಗುತ್ತೇವೆಂದು ದುಃಖಿಸಬಾರದು. ಈ ವಿಚಾರ ರಹಸ್ಯವಾಗಿರಲಿ. ನಾವು ತದಿಗೆ ದಿವಸ ನಮ್ಮ ಪ್ರಿಯಶಿಷ್ಯರಾದ ಶ್ರೀನಿವಾಸತೀರ್ಥರಿಗೆ ಮಹಾಸಂಸ್ಥಾನವನ್ನೊಪ್ಪಿಸಿಕೊಟ್ಟು ಚತುರ್ಥಿಯಂದು ಶ್ರೀನಾರಾಯಣಧ್ಯಾನರತರಾಗುತ್ತೇವೆ. ನೀವೀಗ ನಮಗೊಂದು ವಚನ ನೀಡಬೇಕು” ಎಂದರು. 

ಗುರುಗಳ ವಚನವಾಲಿಸಿ ವಿಜಯೀಂದ್ರರಿಗೆ ಅಪಾರ ದುಃಖವಾಯಿತು. ಇನ್ನು ಹೆಚ್ಚು ಕಾಲ ಗುರುಗಳನ್ನು ಸೇವಿಸುವ ಭಾಗ್ಯವಿಲ್ಲವಾಯಿತಲ್ಲಾ ಎಂದು ತಳಮಳವಾಯಿತು. ಕಣ್ಣುಗಳಿಂದ ದುಃಖಾಶ್ರು ಹರಿಯತೊಡಗಿತು. ಗದ್ಗದ ಕಂಠದಿಂದ ಗುರುಗಳ ಪಾದ ಹಿಡಿದು “ಗುರುವರ್ಯ, ನಮ್ಮನ್ನು ಅನಾಥರನ್ನಾಗಿ ಮಾಡಿಬಿಡುವಿರಾ? ಮುಂದೆ ನಮಗಾರು ಮಾರ್ಗದರ್ಶಕರು ?.....ಎ೦ದು ಕೇಳಿದರು. 

ಶ್ರೀವ್ಯಾಸರಾಜರು (ಮಂದಹಾಸದಿಂದ) “ಪ್ರಿಯ ವಿಜಯೀಂದ್ರರೇ, ಜಗನ್ನಾಥನಾದ ಶ್ರೀಮೂಲರಾಮನೇ ನಿಮಗೆ ನಾಥನಾಗಿರುವಾಗ ನೀವೆಂತು ಅನಾತರಾಗುವಿರಿ? ಶ್ರೀಮದಾಚಾರ್ಯ-ಟೀಕಾಕೃತ್ಪಾದರ ಪೂರ್ಣಾನುಗ್ರಹ ನಿಮ್ಮಲ್ಲಿದೆ. ನಮ್ಮ ಮತ್ತು ಶ್ರೀಸುರೇಂದ್ರತೀರ್ಥರ ಆಶೀರ್ವಾದಗಳು ಸರ್ವದಾ ನಿಮಗಿದೆ. ಜ್ಞಾನಿಗಳಾದ ನಿಮ್ಮ ಗುರುಪಾದರೆ ನಿಮಗೆ ಮಾರ್ಗದರ್ಶಕರು. ನಮ್ಮ ಮೂರು ಮಾತುಗಳನ್ನು ನೆರವೇರಿಸುವುದಾಗಿ ನೀವೀಗ ವಚನಕೊಡಬೇಕು. ನಮ್ಮ ತರುವಾಯ ದೈತಸಿದ್ಧಾಂತವನ್ನು ಪರವಾದಿದಿಗ್ವಿಜಯ, ಗ್ರಂಥರಚನೆ, ಪಾಠ-ಪ್ರವಚನಗಳಿಂದ ಪರಿಪುಷ್ಟಗೊಳಿಸಿ ದೈತವಿಜಯದುಂದುಭಿಯನ್ನು ಮೊಳಗಿಸಿ, ಶ್ರೀಸದೈಷ್ಣವಸಿದ್ದಾಂತವನ್ನು ಕಾಪಾಡಿಕೊಂಡು ಬರಬೇಕು. ಅದಕ್ಕೆ ನೀವೊಬ್ಬರೇ ಸಮರ್ಥರು! ಭಾರತೀಯ ಜನತೆಗೆ ಮಾರ್ಗದರ್ಶನಮಾಡಿ ಭಾರತದ ಸತ್ಪರಂಪರೆಯಂತೆ ಜನರು ಧರ್ಮಿಷ್ಠರಾಗಿ ಬಾಳುವಂತೆ ಮಾಡಿ ಕೀರ್ತಿ ಗಳಿಸಬೇಕು. ಕುಂಭಕೋಣದಲ್ಲಿ ಒಂದು ಶ್ರೇಷ್ಠ ವಿದ್ಯಾಪೀಠವನ್ನು ಸ್ಥಾಪಿಸಿ ಅದು ಜಗತ್ತಿಗೆ ಆದರ್ಶ ವಿದ್ಯಾಪೀಠವಾಗಿ ಅವ್ಯಾಹತವಾಗಿ ಜ್ಞಾನಕಾರ್ಯ ನೆರವೇರುವಂತೆ ಮಾಡಬೇಕು. ಮೂರನೆಯದಾಗಿ ನಮ್ಮ ಮಹಾಸಂಸ್ಥಾನವು ನಿರ್ಭಾಧವಾಗಿ ಮುಂದುವರೆದು ಬರಲು ನೀವು ನಮ್ಮ ಶ್ರೀನಿವಾಸತೀರ್ಥರಿಗೆ ಹಿರಿಯಣ್ಣನಂತೆ ಬೆಂಬಲಿಗರಾಗಿದ್ದು ಎಲ್ಲ ವಿಚಾರಗಳಲ್ಲೂ ಅವರಿಗೆ ಸಲಹೆ ನೀಡುತ್ತಾ ಬಂದು ಶ್ರೀಮದಾಚಾರ್ಯರ ಈ ಎರಡು ಮಹಾಸಂಸ್ಥಾನಗಳಲ್ಲಿ ಪರಸ್ಪರ ಸೌಹಾರ್ದ, ಪ್ರೀತಿ-ವಿಶ್ವಾಸಗಳು ಅಭಿವೃದ್ಧಿಸಿ ದೈತಸಿದ್ಧಾಂತದ ಸರ್ವಾಂಗೀಣ ಅಭ್ಯುದಯವಾಗುವಂತೆ, ಶ್ರೀಹರಿವಾಯುಗಳಿಗೆ ಪ್ರೀತಿಕರವಾದ ಕಾರ್ಯಾಸಕ್ತರಾಗಿ ಜಗತ್ತಿಗೆ ಸನ್ಮಾರ್ಗ ಪ್ರದರ್ಶನ ಮಾಡುತ್ತಾ ಸ್ನೇಹದಿಂದಿರುವಂತೆ ಮಾಡಬೇಕು” ಎಂದು ಆಜ್ಞಾಪಿಸಿದರು.

ಶ್ರೀವಿಜಯೀಂದ್ರರಿಗೆ ಗುರುಗಳು ತಮ್ಮ ಮೇಲೆ ಹೊರಿಸುತ್ತಿರುವ ದೊಡ್ಡ ಹೊಣೆಯನ್ನು ನೆನೆದು ರೋಮಾಂಚನವಾಯಿತು. ಆಗ ಅವರೇ “ಗುರುದೇವ! ನಮಗೆ ಆ ಸಾಮರ್ಥ್ಯವಿದೆಯೇ, ನಾವಷ್ಟು ಭಾಗ್ಯಶಾಲಿಗಳೇ? ತಾವು ಸದಾ ನಮಗೆ ಪ್ರೇರಕಶಕ್ತಿಯಾಗಿದ್ದು, ಅನುಗ್ರಹಾಶೀರ್ವಾದಗಳಿಂದ ಈ ಮಹತ್ಕಾರ್ಯವನ್ನು ನೆರವೇರಿಸಲು ಶಕ್ತಿಯನ್ನು ದಯಪಾಲಿಸಬೇಕು. ತಮ್ಮ ಆಶೀರ್ವಾದದಿಂದ ತಾವು ಅಪ್ಪಣೆ ಕೊಡಿಸಿದ ಕಾರ್ಯಗಳನ್ನು ತಮ್ಮ ಪಾದಸಾಕ್ಷಿಯಾಗಿಯೂ ನೆರವೇರಿಸುತ್ತೇವೆ” ಎಂದು ಗುರುಗಳ ಪಾದ ಹಿಡಿದು ನಮಸ್ಕರಿಸಿ ವಿಜ್ಞಾಪಿಸಿದರು. 

ಶ್ರೀವ್ಯಾಸರಾಜರು ಪ್ರೇಮಭರದಿಂದ ವಿಜಯೀಂದ್ರರನ್ನಾಲಂಗಿಸಿ, ಅವರ ಶಿರದ ಮೇಲೆ ತಮ್ಮ ಅಮೃತಕರವನ್ನಿರಿಸಿ “ನಮ್ಮ ತರುವಾಯ ರೈತಸಿದ್ಧಾಂತದ ಸರ್ವಾಭಿವೃದ್ಧಿಗಳನ್ನು ನಿಮ್ಮಿಂದ ನೆರವೇರಿಸಿ ಶ್ರೀಹರಿವಾಯುಗಳು ಅನುಗ್ರಹಿಸುವರು. ಇದಕ್ಕೆ ನಮ್ಮ ಹೃತ್ತೂರ್ವಕ ಆಶೀರ್ವಾದವಿದೆ” ಎಂದು ಹರಸಿದರು. ಆಗ ಶ್ರೀವಿಜಯೀಂದ್ರರ ದೇಹದಲ್ಲಿ, ನರನಾಡಿಗಳಲ್ಲಿ ಆವುದೋ ಒಂದು ಅದ್ಭುತಶಕ್ತಿ ಪ್ರವಹಿಸಿದಂತಾಗಿ ವಿಜಯೀಂದ್ರರು ಹರ್ಷಾತಿರೇಕದಿಂದ ಗುರುಗಳಿಗೆ ನಮಸ್ಕರಿಸಿ “ಧನ್ಯನಾದೆ, ಗುರುದೇವ, ಕೃತಾರ್ಥನಾದೆ. ತಮ್ಮಾಣತಿಯನ್ನು ಖಂಡಿತವಾಗಿ ನೆರವೇರಿಸಲು ಶ್ರಮಿಸುತ್ತೇನೆ” ಎಂದು ವಿಜ್ಞಾಪಿಸಿದರು. 

ಆ ನಂತರ ಪೂರ್ವಾಶ್ರಮದ ಪ್ರೀತಿಯ ಸೋದರಳಿಯಂದಿರೂ, ಶ್ರೀಮಹಾಸಂಸ್ಥಾನದ ಉತ್ತರಾಧಿಕಾರಿಗಳೂ ಆದ ಶ್ರೀನಿವಾಸತೀರ್ಥರನ್ನು ಕರೆಯಿಸಿಕೊಂಡು ಅವರಿಗೆ ಬಹುವಿಧವಾಗಿ ಉಪದೇಶಮಾಡಿ ಶ್ರೀವಿಜಯೀಂದ್ರರ ಸಲಹೆಯಂತೆ ವರ್ತಿಸುತ್ತಾ ಅಣ್ಣ-ತಮ್ಮಂದಿರಂತೆ ಬಾಳಿ ಶ್ರೀಮದಾಚಾರ್ಯರ ಉಭಯ ಮಹಾಸಂಸ್ಥಾನಗಳ ಕೀರ್ತಿ-ಪ್ರತಿಷ್ಠೆಗಳನ್ನು ಬೆಳಗಿಸಬೇಕೆಂದೂ, ಉಳಿದ ವಿಚಾರಗಳನ್ನು ವಿಜಯೀಂದ್ರರು ತಿಳಿಸುವರೆಂದೂ ಆಜ್ಞಾಪಿಸಿ ಆಶೀರ್ವದಿಸಿದರು. ಶ್ರೀನಿವಾಸತೀರ್ಥರು “ಮಹದಾಜ್ಞೆ” ಎಂದು ವಿಜ್ಞಾಪಿಸಿದರು. 

ಯಾತ್ರೆಗೆ ಹೋಗಿದ್ದ ಪುರಂದರದಾಸರು ಮರುದಿನ ಬಂದರು. ಇದರಿಂದ ಶ್ರೀವ್ಯಾಸರಾಜರಿಗೆ ಪರಮಾನಂದವಾಯಿತು. ನಗುತ್ತಾ “ದಾಸರೇ ನೀವು ಸಕಾಲಕ್ಕೆ ಬರುವಿರೋ ಇಲ್ಲವೋ ಎಂದು ನಮಗೆ ಕಳವಳವಾಗಿತ್ತು. ನೀವು ಬಂದುದು ನಮಗೆ ಬಹಳ ಸಂತೋಷಕ್ಕೆ ಕಾರಣವಾಗಿದೆ” ಎಂದರು. ದಾಸರಾಯರು ಬಹುಚಿಂತಾಕ್ರಾಂತರಾದವರಂತೆ ಕಂಡುಬಂದರು. ಶ್ರೀವ್ಯಾಸರಾಜರು “ಏಕೆ ದಾಸರೇ, ಬಹು ಕಳವಳಗೊಂಡಂತಿರುವಿರಿ” ಎಂದಾಗ ದಾಸರಾಯರು ನಿಟ್ಟುಸಿರುಬಿಟ್ಟು “ಹರಿಚಿತ್ತಕ್ಕೆ ಹೊರತಾರು ? ಇನ್ನು ಹೆಚ್ಚು ಕಾಲ ಗುರುಪಾದ ದರ್ಶನ, ಮಾತುಕತೆ, ಉಪದೇಶಗಳನ್ನು ಪಡೆಯುವ ಭಾಗ್ಯ ನನಗಿಲ್ಲವಾಗುವುದಲ್ಲ ಎಂದು ನನಗೆ ಅತೀವ ದುಃಖವಾಗುತ್ತಿದೆ ಗುರುವರ್ಯ! ಅಂತೆಯೇ ಉಳಿದ ಯಾತ್ರೆಯನ್ನು ಮಾನಸಿಕ ಮಾಡಿ ತಮ್ಮ ದರ್ಶನಕ್ಕಾಗಿ ಧಾವಿಸಿಬಂದೆ” ಎಂದರುಹಿದರು. 

ಶ್ರೀವ್ಯಾಸಭಗವಾನರು ನಸುನಕ್ಕು ಜ್ಞಾನಿಗಳೂ ಸಕಲವನ್ನು ತಿಳಿದವರೂ ಆದ ನೀವೇ ಹೀಗೆ ಮಾಡಿದರೆ ಹೇಗೆ ದಾಸರೇ ? ಭಗವಚ್ಚತಕ್ಕೆ ಉಪಾಯವಿಲ್ಲವಷ್ಟೆ?” ಎಂದು ಹೇಳಿ ತಮಗಾದ ಅನುಭವ, ಶ್ರೀಕೃಷ್ಣನ ಆದೇಶಗಳನ್ನು ಅವರಿಗೆ ಸಾದ್ಯಂತವಾಗಿ ತಿಳಿಸಿ, ವಿಜಯೀಂದ್ರರ ಆಗಮನ, ಅವರಿಗೆ ತಾವು ಹೊರಿಸಿರುವ ಹೊಣೆ, ತೃತೀಯ ದಿನ ಶ್ರೀನಿವಾಸತೀರ್ಥರಿಗೆ ಮಹಾಸಂಸ್ಥಾನವನ್ನು ವಹಿಸಿಕೊಡುವ ವಿಚಾರಗಳನ್ನು ತಿಳಿಸಿ, ಅವರಿಗೆ ಬೆಂಬಲವಾಗಿದ್ದಶ್ರೀಹರಿವಾಯುಗಳ ಸೇವೆ ಮಾಡಬೇಕೆಂದು ಆಜ್ಞಾಪಿಸಿದರು. ಪುರಂದರದಾಸರು ಗುರುಗಳ ಪಾದ ಹಿಡಿದು, ಕಣ್ಣೀರು ಸುರಿಸಿ “ಈ ಜನ್ಮದಲ್ಲಿ ಇನ್ನು ಇದಿಷ್ಟೇ ಲಾಭ. ತಮ್ಮ ಅಪ್ಪಣೆಯಂತೆ ವರ್ತಿಸುತ್ತೇನೆ” ಎಂದು ವಿಜ್ಞಾಪಿಸಿದರು. ಅನಂತರ ಶ್ರೀಗಳವರು ತಮ್ಮ ಮನೀಷೆಯನ್ನು ಮಠದ ಪಂಡಿತಮಂಡಲಿ, ಶಿಷ್ಯರು, ಆತ್ಮೀಯರು, ಅಧಿಕಾರಿಗಳು ಹಾಗೂ ಸಾಮ್ರಾಟ್ ಅಚ್ಯುತದೇವರಾಯನಿಗೆ ವಿವರಿಸಿ, ಮಹಾಸಂಸ್ಥಾನವನ್ನು ಶ್ರೀನಿವಾಸತೀರ್ಥರಿಗೆ ಒಪ್ಪಿಸಿಕೊಡಲು ಸಮಸ್ತ ವ್ಯವಸ್ಥೆಯನ್ನು ನೆರವೇರಿಸಲು ಆಜ್ಞಾಪಿಸಿದರು.

ವಿಳಂಬಿನಾಮ ಸಂವತ್ಸರದ ಫಾಲ್ಗುಣ ಬಹುಳ ತದಿಗೆ ಶ್ರೀಲೋಕಪಾವನ ಮಠದಲ್ಲಿ ಮಹಾಸಂಭ್ರಮ. ಸಹಸ್ರಾರು ಜನ, ರಾಜಧಾನಿಯ ಪುರಜನರು, ಧರ್ಮಾಭಿಮಾನಿಗಳು, ಪಂಡಿತರು, ರಾಜಕೀಯ ಮುಖಂಡರು, ಸಾಮ್ರಾಟ್ ಅಚ್ಯುತದೇವರಾಯ, ಅಳಿಯ ರಾಮರಾಜ, ಮುಂತಾದವರು ಬಂದಿದ್ದಾರೆ. ಮಂಗಳವಾದ್ಯಗಳಾಗುತ್ತಿವೆ. ವಿದ್ವಾಂಸರು ವೇದಘೋಷ ಮಾಡುತ್ತಿದ್ದಾರೆ. ವಿಶಾಲವಾದ ವೇದಿಕೆಯ ಮೇಲೆ ಹಾಕಿರುವ ಸುವರ್ಣಸಿಂಹಾಸನದಲ್ಲಿ ಶ್ರೀಶ್ರೀನಿವಾಸತೀರ್ಥರನ್ನು ಮಂಡಿಸಿ ಶ್ರೀವ್ಯಾಸತೀರ್ಥರು, ಶ್ರೀವಿಜಯೀಂದ್ರರು ಮತ್ತಿತರ ಆತ್ಮೀಯ ಶಿಷ್ಯರು ಸಹಾಯಮಾಡುತ್ತಿರಲು ಸಾಮ್ರಾಜ್ಯಾಭಿಷೇಕಮಾಡಿ ಶ್ರೀನಿವಾಸತೀರ್ಥರಿಗೆ ಶ್ರೀಮದಾಚಾರ್ಯರ ಮಹಾಸಂಸ್ಥಾನಾಧಿಪತ್ಯವನ್ನೂ, ರಾಜಗುರುತ್ವವನ್ನೂ ವಿಜಯನಗರದ ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿತ್ವವನ್ನೂ ಒಪ್ಪಿಸಿಕೊಟ್ಟು ಆಶೀರ್ವದಿಸಿದರು. 

ಆನಂತರ ಸಾಮ್ರಾಟರಿಗೂ, ರಾಮರಾಯರಿಗೂ ತಮ್ಮಲ್ಲಿ ಮಾಡುತ್ತಿರುವಂತೆಯೇ ನೂತನ ಜಗದ್ಗುರುಗಳಲ್ಲಿಯೂ ಶ್ರದ್ಧಾಭಕ್ತಿಗಳನ್ನು ಮಾಡಿ ಮಹಾಸಂಸ್ಥಾನವು ಯಶಸ್ವಿಯಾಗಿ ಮುಂದುವರೆಯಲು ಸಹಾಯಕರಾಗಿರಬೇಕೆಂದು ಆಜ್ಞಾಪಿಸಿದರು. ಶ್ರೀನಿವಾಸತೀರ್ಥರಿಗೆ ನಮಸ್ಕರಿಸಿದ ಅಚ್ಯುತರಾಜ-ರಾಮರಾಜರು ನೂತನ ರಾಜಗುರುಗಳ ಅಪ್ಪಣೆಯಂತೆ ವರ್ತಿಸುವುದಾಗಿ ವಿಜ್ಞಾಪಿಸಿ ರಾಜಗೌರವ ಕಾಣಿಕೆಗಳನ್ನು ಸಮರ್ಪಿಸಿದರು. ಆನಂತರ ಪಂಡಿತರು, ಶಿಷ್ಯರು, ಧರ್ಮಾಭಿಮಾನಿಗಳು ಶ್ರೀನಿವಾಸತೀರ್ಥರಿಗೆ ಕಾಣಿಕೆಗಳನ್ನರ್ಪಿಸಿ ನಮಸ್ಕರಿಸಿದರು. ನೂತನ ಮಹಾಸಂಸ್ಥಾನಾಧಿಪತಿಗಳು ಸರ್ವರಿಗೂ ಫಲಮಂತ್ರಾಕ್ಷತೆ ಅನುಗ್ರಹಿಸಿ ಆಶೀರ್ವದಿಸಿದರು. ಹೀಗೆ ಸಮಾರಂಭವು ಅತ್ಯಂತ ವೈಭವದಿಂದ ಮುಕ್ತಾಯವಾಯಿತು. 

ಅಂದು ರಾತ್ರಿ ದೀಪಾರಾಧನೆ, ಶ್ರೀವ್ಯಾಸರಾಜ, ವಿಜಯೀಂದ್ರ, ಶ್ರೀನಿವಾಸತೀರ್ಥರ ಉಪದೇಶ ಭಾಷಣಗಳಾಗಿ ಸರ್ವರಿಗೂ ಫಲಮಂತ್ರಾಕ್ಷತಾ ಪ್ರದಾನವಾಗಿ ಸರ್ವರೂ ತೆರಳಿದ ಮೇಲೆ ಶ್ರೀವ್ಯಾಸರಾಜರು ಶ್ರೀವಿಜಯೀಂದ್ರ-ಶ್ರೀನಿವಾಸತೀರ್ಥರನ್ನು ವಿಶ್ರಾಂತಿಗೆ ಕಳಿಸಿ ನೂರಾರು ಜನ ಆತ್ಮೀಯ ಶಿಷ್ಯ-ಭಕ್ತ-ಧರ್ಮಾಭಿಮಾನಿಗಳೊಡನೆ ಕುಳಿತು ಭಗವದ್ದಿಷಯಗಳನ್ನು ಚರ್ಚಿಸುತ್ತಾ ಇದ್ದರು. ನಂತರ ಶ್ರೀಪುರಂದರದಾಸರನ್ನು ಕರೆದು, ಇಂದು ರಾತ್ರಿ ಪೂರ್ತಿ ನಿಮ್ಮ ಭಜನೆಯಾಗಲಿ, ಜಾಗರಣೆಯಿಂದ ಕಾಲ ಕಳೆಯೋಣ ಎಂದು ಹೇಳಿದರು. ಗುರುಗಳ ಅಪ್ಪಣೆಯಂತೆ ದಾಸರು ಭಜನೆ ಪ್ರಾರಂಭಿಸಿದರು. ಶ್ರೀವ್ಯಾಸರಾಜರೂ ಮಧ್ಯೆ-ಮಧ್ಯೆ ಶ್ರೀಹರಿಗುಣಸ್ತವನ ಮಾಡುತ್ತಾಆ ರಾತ್ರಿಯನ್ನು ಕಳೆದರು. 

ಶ್ರೀಶಾಲಿವಾಹನ ಶಕೆ ೧೪೬೧ ನೇ ಶ್ರೀವಿಳಂಬಿ ಸಂವತ್ಸರದ ಫಾಲ್ಗುಣ ಕೃಷ್ಣ ಚತುರ್ಥಿ ಸ್ಥಿರವಾರದಂದು (ಕ್ರಿ.ಶ. ೧೫೩೯ ನೇ ಮಾರ್ಚಿ ಮಾಹೆ) ಬೆಳಗಿನ ಝಾವ ನಾಲ್ಕು ಘಂಟೆಗೆ ಶ್ರೀವ್ಯಾಸರಾಜರು ಸ್ನಾನಾಕಜಪತಪಾನುಷ್ಠಾನಗಳನ್ನು ಮುಗಿಸಿ ಆಸನಾಸೀನರಾದರು. ಶ್ರೀಪುರಂದರದಾಸರು, ಪ್ರಮುಖ ಪಂಡಿತ ಶಿಷ್ಯರು, ನೂರಾರು ಜನ ಧರ್ಮಾಭಿಮಾನಿಗಳು ಶ್ರೀಗಳವರಿಗೆ ನಮಸ್ಕರಿಸಿ ಕುಳಿತರು. ಶ್ರೀಪುರಂದರದಾಸರು ಖಿನ್ನರಾಗಿ ಕರಜೋಡಿಸಿ ಕುಳಿತಿದ್ದಾರೆ. ಅವರ ಕಣ್ಣುಗಳಿಂದ ಧಾರಾಕಾರವಾಗಿ ನೀರು ಹರಿಯುತ್ತಿದೆ. 

ಆದರೆ ಶ್ರೀವ್ಯಾಸರಾಜರು ಅತ್ಯಂತ ಹರ್ಷಚಿತ್ತರಾಗಿದ್ದಾರೆ. ಮುಖದಲ್ಲಿ ಅಲೌಕಿಕ ತೇಜಸ್ಸು ಬೆಳಗುತ್ತಿದೆ. ಮಂದಹಾಸ ವದನಾರವಿಂದರಾದ ಶ್ರೀವ್ಯಾಸರಾಜಯತಿಸಾರ್ವಭೌಮರು ಶ್ರೀಹರಿಯ ಅಚಿಂತ್ಯಾದ್ಭುತಮಹಿಮಾತಿಶಯಗಳನ್ನು ಭಕ್ತ-ಶಿಷ್ಯಜನರಿಗೆ ಭಕ್ತಿಪರವಶರಾಗಿ ಉಪದೇಶಿಸುತ್ತಿದ್ದಾರೆ. ಗುರುವರ್ಯರ ಮುಖದಿಂದ ಗಂಗಾಪ್ರವಾಹದಂತೆ ಶ್ರೀಹರಿತತ್ವಭಾಗೀರಥಿಯು ಹೊರಹೊಮ್ಮಿ ಸರ್ವರನ್ನೂ ಪರವಶಗೊಳಿಸುತ್ತಿದೆ. ಸಕಲರೂ ಭಕ್ತಿಭಾವದಿಂದ ಗುರುಗಳ ಉಪದೇಶವನ್ನು ಶ್ರವಣ ಮಾಡುತ್ತಿದ್ದಾರೆ. ಶ್ರೀಯವರ ಉಪದೇಶ ಮುಗಿಯಿತು. ಗುರುಗಳು ಸಕಲರಿಗೂ ಭಗವಂತನು ಸನ್ಮಂಗಳವನ್ನು ಕರುಣಿಸಲೆಂದು ಹೇಳಿ ಆಶೀರ್ವದಿಸಿದರು. ಆನಂತರ ಪುರಂದರದಾಸರನ್ನು ಹತ್ತಿರ ಕರೆದು ಸ್ವಲ್ಪಹೊತ್ತು ಅವರೊಡನೆ ಮಾತನಾಡುತ್ತಿದ್ದು ಆ ತರುವಾಯ ಕರದಲ್ಲಿ ತುಳಸೀಮಣಿಯ ಸರವನ್ನು ಹಿಡಿದು ಜಪಿಸುತ್ತಾ ಧ್ಯಾನಸ್ಥರಾದರು. ದಾಸರಾಯರು ತದೇಕಚಿತ್ತರಾಗಿ ಗುರುಸಾರ್ವಭೌಮರ ಮುಖವನ್ನು ನೋಡುತ್ತಾ ಕುಳಿತರು....... 

ಸ್ವಲ್ಪಕಾಲವಾದ ಮೇಲೆ ಶ್ರೀಗಳವರು ಕರೆದು ಒಮ್ಮೆ ಸುತ್ತಲೂ ನೋಡಿ ನಗುಮುಖದಿಂದ ಶ್ರೀಹರಿಯನ್ನು ಮನಸಾ ಪ್ರಾರ್ಥಿಸಹತ್ತಿದರು. 

“ಜಗಜ್ಜನ್ಮಾದಿಕಾರಣ, ರಮಾರಮಣ, ಭಕ್ತಜನಸಂರಕ್ಷಣ, ಸಕಲಾನಿಷ್ಟಹರಣ, ಪುರುಷೋತ್ತಮ, ಶ್ರೀಕೃಷ್ಣ! ಮುಂದೆ ಮಾಡಬೇಕಾದ ನಿನ್ನ ವಿಶೇಷ ಸೇವೆಗಾಗಿ ನಿನ್ನ ಅಣತಿಯಂತೆ ಇಂದಿನ ನನ್ನ ಅವತಾರವನ್ನು ಪರಿಸಮಾಪ್ತಿಗೊಳಿಸುತ್ತಿದ್ದೇನೆ. ಪ್ರಭು! ಮುರಳೀಮೋಹನ, ಶ್ರೀಮೂಲಗೋಪಾಲಕೃಷ್ಣ! ಅವತಾರವನ್ನು ಮುಗಿಸಲಿರುವ ಈ ಶುಭಪ್ರಸಂಗದಲ್ಲಿ ಮೊದಲು ನಿನ್ನ ಅಪ್ರಾಕೃತ ಸುಂದರ ಪಾದಪದ್ಮಗಳ ದರ್ಶನಮಾಡಲು ಮನಸ್ಸು ಕಾತರಿಸುತ್ತಿದೆ. ಚತುರ್ದಶ ಭುವನಸ್ಥ ಸಮಸ್ತರಿಂದ ಸಂಸೇವ್ಯಮಾನವಾದ ಆರಾಧಕ ಭಕ್ತಜನರ ಸಂಸಾರಬಂಧವನ್ನು ಪರಿಹರಿಸಿ ಶಾಶ್ವತಾನಂದಪ್ರದವಾದ ಮೋಕ್ಷವೀಯಲು ಸಮರ್ಥವಾದ ನಿನ್ನ ಅಪ್ರಾಕೃತ ಪಾದಾರವಿಂದಗಳ ದರ್ಶನವಿತ್ತು ಕಾಪಾಡು ಪ್ರಭು” - ಎಂದು ಆರ್ಥಿಸಿದರು. ಆಗ ಅವರ 

ಮುಖದಿಂದ - 

“ಸಂಚಿತಯೇದ್ಭಗವತಶ್ಚರಣಾರವಿಂದ 

ವಜ್ರಾಂಕುಶ ಧ್ವಜ ಸರೋರುಹಲಾಂಛನಾಡ್ಯಮ್ | ಉತ್ತುಂಗರಕ್ತ ವಿಲಸನ್ನಖ ಚಕ್ರವಾಲ- 

ಜ್ಯೋತ್ಸಾಭಿರಾಹೃತಮಹದ್ ಹೃದಯಾಂಧಕಾರಮ್ ” 

ಎಂಬ ಭಾಗವತ ಶ್ಲೋಕವು ತಾನಾಗಿ ಹೊರಹೊಮ್ಮಿತು! 

ಆಗ ಅಲ್ಲಿ ಒಂದು ದಿವ್ಯಪ್ರಕಾಶವು ಗೋಚರಿಸಿತು! ಅದ್ಭುತ ಪ್ರಕಾಶವನ್ನು ಕಂಡು ಸರ್ವರೂ ಅದೇನೆಂದು ಅಚ್ಚರಿಯಿಂದ ಪರಿಕಿಸಹತ್ತಿದರು. ಆದರೆ ಅವರಿಗೆ ಕೇವಲ ಪ್ರಕಾಶಪುಂಜವು ಮಾತ್ರ ಕಾಣುತ್ತಿತ್ತೇ ವಿನ ಮತ್ತೇನೂ ಗೋಚರಿಸಲಿಲ್ಲ. 

ಶ್ರೀವ್ಯಾಸರಾಜರ ಮುಂದೆ ಬೆಳಗುತ್ತಿದ್ದ ದಿವ್ಯ-ಭವ್ಯಪ್ರಕಾಶದಲ್ಲಿ ಅಖಿಲಾಂಡಕೋಟಿ ಬ್ರಹ್ಮಾಂಡನಾಯಕನಾದ ಶ್ರೀಬಾಲಕೃಷ್ಣನ ಸುಂದರವಾದ ಅಪ್ರಾಕೃತ ಪಾದಗಳು ಮಾತ್ರ ಶ್ರೀವ್ಯಾಸರಾಜಗುರುವರರ ದೃಷ್ಟಿಗೆ ಗೋಚರಿಸಿದವು! ಕಮಲದಳಗಳಂತೆ ಕೆಂಪಾದ, ಜಗಮ್ಮೋಹಕವಾದ ಆ ಪಾದಗಳ ಸೌಂದರ್ಯ ಅವರ್ಣನೀಯ, ರತ್ನಖಚಿತವಾದ ಪಾಲ್ಗಡಗಗಳು, ಸುವರ್ಣ ಗೆಜ್ಜೆಯಿಂದ ಶೋಭಿಸುವ ನವರತ್ನಮಯ ಮಂಜೀರ, ಗೊಲಸುಗಳು, ಸುರಚಿರ ಕನಕಮಯ ಕಾಲಂದಿಗೆಗಳು, ಕಾಸ್ಟೆರಳುಗಳಲ್ಲಿ ತಳತಳಿಸುವ ನವರತ್ನದುಂಗುರಗಳಿಂದ ಜಗತ್ತನ್ನೇ ಮೋಹಗೊಳಿಸುವ, ಬ್ರಹ್ಮರುದ್ರೇಂದ್ಯಾದ್ಯಮರವೃಂದ, ಸಮಸ್ತ ಮುಮುಕ್ಷುಗಳಿಂದ ಸಂಸೇವ್ಯವಾದ, ಉಪಾಸ್ಯವಾದ ಪರಮಾತ್ಮನ ಎರಡು ಪಾದಗಳನ್ನು ಕಂಡು ಶ್ರೀವ್ಯಾಸರಾಜರಿಗೆ ರೋಮಾಂಚನವಾಯಿತು. ಭಕ್ತಿಪರವಶ್ಯದಿಂದ ಕಂಠ ಗದ್ಗದವಾಯಿತು. ಕಣ್ಣುಗಳಿಂದ ಆನಂದಾಶ್ರು ಮಿಡಿಯಿತು. ಭಾವನಾಪರವಶರಾದ ಗುರುಗಳು “ದೇವ, ಮತ್ತುಲಸ್ವಾಮಿನ್‌, ಮಹಾಪ್ರಭು! ಧನ್ಯನಾದೆ. ಈ ದಾಸನ ಮನವಿಗೆ ಒಲಿದು ತೋರಿದ ನಿನ್ನ ಪಾವನ ಪದಪದ್ಮಗಳಿಗೆ ಅನಂತ ನಮಸ್ಕಾರಗಳು! ಇಕೋ, ಪ್ರಭು ನಿನ್ನ ಆದೇಶದಂತೆ ನಿನ್ನ ಪಾವನಪದಗಳ ಸ್ಪರ್ಶಮಾಡಿ ಕೃತಾರ್ಥನಾಗಿ ಅವತಾರವನ್ನು ಮುಗಿಸುತ್ತಿದ್ದೇನೆ. ದಾಸನಲ್ಲಿ ಕರುಣೆದೋರು ಕರುಣಾಕರ! ಜಯ ಜಯ ಶ್ರೀಮೂಲಗೋಪಾಲಕೃಷ್ಣ” ಎನ್ನುತ್ತಾ ಶ್ರೀವ್ಯಾಸರಾಜರು ಮುಂದೆ ಬಾಗಿ ಶ್ರೀಕೃಷ್ಣನ ಪಾದಗಳನ್ನು ತಮ್ಮ ಕರಗಳಲ್ಲಿ ಪಿಡಿದು ಪಾದಗಳ ಮೇಲೆ ಶಿರವಿರಿಸಿ ತಮ್ಮ ಅವತಾರಕಾರ್ಯವನ್ನು ಪರಿಸಮಾಪ್ತಿಗೊಳಿಸಿ ಶ್ರೀನಾರಾಯಣಧ್ಯಾನರತರಾದರು!

ಶ್ರೀವ್ಯಾಸರಾಜರು ಶ್ರೀಕೃಷ್ಣನ ಪಾದಸ್ಪರ್ಶದೊಡನೆ ಇಹಲೋಕ ವ್ಯಾಪಾರ ಮುಗಿಸಿ ಶ್ರೀಹರಿಪದ ಸೇರಿದ್ದನ್ನು ಮಹಾನುಭಾವರಾದ ಶ್ರೀಪುರಂದರದಾಸರು ಕಂಡು ಮೈಮರೆತರು. ಅಲ್ಲಿ ಸೇರಿದ್ದ ನೂರಾರು ಜನ ಆಸ್ತಿಕರು, ಪಂಡಿತರು, ಧರ್ಮಾಭಿಮಾನಿಗಳು ಶ್ರೀಗಳವರು ಮುಂದೆ ಬಾಗಿ ತಮ್ಮ ಎರಡು ಕರಗಳನ್ನೂ ಮುಂದೆ ಚಾಚಿ ತಮ್ಮ ಕರಗಳ ಮೇಲೆ ಶಿರವಿರಿಸಿ ನಿಶ್ಚಲರಾದುದನ್ನು ಕಂಡು ಇದೇಕೆ ಗುರುಗಳಿಂತಾಚರಿಸುತ್ತಿರುವರೆಂದು ಕೌತುಕದಿಂದ ನೋಡಹತ್ತಿದರು. ಅವರಿಗೆ ಗುರುಗಳು ಶ್ರೀಕೃಷ್ಣನ ಪಾದಸ್ಪರ್ಶ ಮಾಡುತ್ತಿದ್ದಂತೆಯೇ ಯೋಗಶಕ್ತಿಯಿಂದ ಅವತಾರಪರಿಸಮಾಪ್ತಿ ಮಾಡಿದ್ದು ತಿಳಿಯಲೇ ಇಲ್ಲ! 

ಇದ್ದಕ್ಕಿದ್ದಂತೆ ಮೇಲೆದ್ದು ಶ್ರೀಪುರಂದರದಾಸರು ಆಕಾಶದತ್ತ ನೋಡುತ್ತಾ “ಗುರುಸಾರ್ವಭೌಮ! ತಂದೇ, ನಮ್ಮನ್ನು ಅನಾಥರನ್ನಾಗಿ ಮಾಡಿ ಶ್ರೀಹರಿಯ ಸಭೆಗೆ ಚಿತ್ತೈಸಿದಿರಾ! ಗುರುದೇವ, ನಮಗಿನ್ಯಾರುಗತಿ” ಎಂದು ಗುರುಗಳ ಸದ್ಗುಣಗಳನ್ನು ನೆನೆದು ಕಣ್ಣೀರು ಸುರಿಸುತ್ತಾ ಪ್ರಲಾಪಿಸಹತ್ತಿದರು. ದಾಸರಾಯರ ಉದ್ಧಾರ ಕೇಳಿದ ನೆರದ ಜನರಿಗೆ ವಜ್ರಾಘಾತವಾದಂತಾಯಿತು ! “ಸ್ಲಾಂ, ಗುರುಸಾರ್ವಭೌಮರು ದೇವರಯಾತ್ರೆ ಮಾಡಿದರೇ ? ಆಹಾ, ಎಂಥಾ ಜ್ಞಾನಿಗಳು, ಯೋಗಶಕ್ತಿಯಿಂದ ದೇಹತ್ಯಾಗ ಮಾಡಿ ಮಹಾನುಭಾವರು ಮುಕುಂದನ ಪಾದಾರವಿಂದ ಸೇರಿದ್ದು ನಮಗೆ ತಿಳಿಯಲೇ ಇಲ್ಲವಲ್ಲಾ, ಹಾಯ್ ಹಾಯ್, ಇಂಥ ಗುರುಗಳನ್ನು ನಾವು ಮತ್ತೆ ಕಾಣುವೆವೇ? ನಾವೆಂಥ ನಿರ್ಭಾಗ್ಯರು” ಮುಂತಾಗಿ ದುಃಖಿಸಿದರು. 

ಶ್ರೀಪುರಂದರದಾಸರು ಆಕಾಶದತ್ತಲೇ ನೋಡುತ್ತಿರುವಾಗ ಅವರು ಅಲ್ಲೊಂದು ಅದ್ಭುತವನ್ನೇ ಕಂಡರು! ಅವರು ಕಂಡ ದೃಶ್ಯ ಅಸದೃಶವಾಗಿತ್ತು. ಆ ಪರಮಮಂಗಳಕರ ದೃಶ್ಯವನ್ನು ದಾಸರಾಯರು ಭಕ್ತಿಪರವಶರಾಗಿ ವರ್ಣಿಸಲಾರಂಭಿಸಿದರು.

ಚಿತ್ತೈಸಿದ ವ್ಯಾಸರಾಯ ಚಿತ್ತಜನಯ್ಯನ ಸಭೆಗೆ 

ಮುಕ್ತಮುತ್ತೈದೆಯರೆಲ್ಲ ಎತ್ತೆ ರತ್ನಾದಾರತಿಯ 

ಏರಿರತ್ನದತೇರ ಸೂರ್ಯಮಂಡಲಕೇರಿ 

ಸಾರೆ ಸತ್ಯಲೋಕಕೆ ಸಂಭ್ರಮದಿ | 

ಭೋರೆಂದು ವಾದ್ಯಕಹಳೆ ಸುರಿಸುವ ಹೂವಿನ ಮಳೆಯಿಂ 

ದಾರತಿಯೆತ್ತಿದರ್ಮುಕ್ತಿ ಕನೈಯರು 

ಪಾಡೆ ಗಂಧರ್ವರ್ ಕೊಂಡಾಡೆ ಮಾಗಧವೃಂದ 

ಕೂಡಲು ಅಮರಕನ್ನೇರು ಮೇಳದಿ | 

ನೋಡಲು ಸುರರು ಕೈಗೂಡಲು ಹರಿದಾಸರು 

ಮಾಡುತ ವಿಷ್ಣುಮಂಗಳ ಗುಣಕಥನವ 

ವಿಳಂಬಿ ಸಂವತ್ಸರ ವಿಜಯನಗರದಲ್ಲಿ 

ಫಾಲ್ಗುಣ ಚತುರ್ಥಿ ಸಿರವಾರದಿ | ಬೆಳೆಗೊಪ್ಪ ಝಾವದಿ ಕುಳಿತು ಪದ್ಮಾಸನದಿ ನಳಿನಾಕ್ಷನಾರಾಯಣನೆಂದು ಕೈಮುಗಿದು

ಧರೆಯೊಳು ಪರಿಪರಿ ಇಂತಿಷ್ಟು ಸಾಧನ 

ಸಂಪೂರ್ಣವಾಯಿತು ಇವರಿಗೆಂದು | 

ಇರಬಾರದಿವರೆಂದು ಯೋಗಮಾರ್ಗದಲಿಂದ ಕರೆಯಲು ಬಂದರು ಕಮಲಾಕ್ಷನ ದೂತರು 

ಅರವಿಂದಾಸನಯ್ಯ ಪುರಂದರವಿಠಲನು | ಸಿರಿಸಹಿತ ಬಂದು ಕರಪಿಡಿದೆತ್ತಿದ್ದು ಕಂಡೆ

ಶ್ರೀವ್ಯಾಸರಾಜಗುರುಸಾರ್ವಭೌಮರು ನಾರಾಯಣಧ್ಯಾನಪರರಾದ ವಿಚಾರ ಶ್ರೀವಿಜಯೀಂದ್ರರು ಮತ್ತು ಶ್ರೀನಿವಾಸ ತೀರ್ಥರಿಗೆ ತಿಳಿದು ಅವರು ಅಂಥಾ ಮಹಾತ್ಮರಾದ ಗುರುಪಾದರನ್ನು ಕಳೆದುಕೊಂಡಿದ್ದಕ್ಕಾಗಿ ಅತ್ಯಂತ ದುಃಖಿತರಾಗಿ ವಿಧವಿಧದಿಂದ ಗುರುಗಳ ಗುಣಗಳನ್ನು ವರ್ಣಿಸಿ, ಅವರ ಶಿಷ್ಯಪ್ರೇಮವನ್ನು ನೆನೆದು ಕಣ್ಣೀರಿಟ್ಟರು. ಗುರುಪಾದರು ದೇವರ ಯಾತ್ರೆ ಮಾಡಿದ ವಿಚಾರ ರಾಜಧಾನಿಯಲ್ಲೆಲ್ಲಾ ಹರಡಿ ಸಹಸ್ರಾರು ಜನ ಗುರುಗಳ ಚರಮದರ್ಶನಕ್ಕಾಗಿ ಧಾವಿಸಿಬರಹತ್ತಿದರು. ಅಚ್ಯುತದೇವರಾಯ, ಅಳಿಯ ರಾಮರಾಜರು ಅತ್ಯಂತ ದುಃಖಿತರಾಗಿ ಗುರುಗಳ ಕೊನೆಯ ದರ್ಶನ ಮಾಡಿ ಶ್ರದ್ದಾಂಜಲಿಯನ್ನರ್ಪಿಸಿದರು. ಅಳಿಯ ರಾಮರಾಜರು ಶ್ರೀವ್ಯಾಸತೀರ್ಥರ ಮತ್ತು ಶ್ರೀವಿಜಯೀಂದ್ರರ ಸನ್ನಿಧಿಗೆ ಬಂದು ಶ್ರೀವ್ಯಾಸರಾಜರ ಬೃಂದಾವನ ಪ್ರತಿಷ್ಠೆಯು ಕನ್ನಡಸಾಮ್ರಾಜ್ಯದ ಸಮಸ್ತ ಬಿರುದು ಬಾವಲಿಗಳೊಡನೆ ಮೆರವಣಿಗೆಯಿಂದ ವೈಭವಯುತವಾಗಿ ನೆರವೇರಬೇಕೆಂದು ಸಾಮ್ರಾಟರ ಆಶಯವನ್ನು ವಿಜ್ಞಾಪಿಸಿ ಅವರ ಮತ್ತು ಶ್ರೀನಿವಾಸತೀರ್ಥರ ಅಪ್ಪಣೆ ಪಡೆದು ಅದಕ್ಕೆ ವ್ಯವಸ್ಥೆ ಮಾಡಿದರು. 

ಮೊದಲೇ ಶ್ರೀವ್ಯಾಸರಾಜಗುರುಗಳು ಪುರಂದರದಾಸರಲ್ಲಿ ತಿಳಿಸಿದ್ದಂತೆ ಶ್ರೀವ್ಯಾಸರಾಜರ ಬೃಂದಾವನವನ್ನು ಉಭಯ ಮಹಾಸಂಸ್ಥಾನದ ಪೂರ್ವಾಚಾರ್ಯರುಗಳಾದ ಶ್ರೀಪದ್ಮನಾಭ, ಶ್ರೀಜಯತೀರ್ಥ, ಶ್ರೀಕವೀಂದ್ರ, ಶ್ರೀವಾಗೀಶತೀರ್ಥರ ಬೃಂದಾವನ ಸನ್ನಿಧಿಯಿಂದ ಕಂಗೊಳಿಸುವ ತುಂಗಭದ್ರೆಯ ಪವಿತ್ರ ನಡುಗಡ್ಡೆಯಲ್ಲಿ ನೆರವೇರಿಸಲು ನಿಶ್ಚಯಿಸಲಾಯಿತು. ಕನ್ನಡ ಸಾಮ್ರಾಜ್ಯದ ಸಮಸ್ತ ಬಿರುದಾವಳಿಗಳು ವಾದ್ಯವೈಭವ ವೇದಘೋಷಗಳೊಡನೆ ಶ್ರೀವ್ಯಾಸರಾಜರ ಪ್ರಾಕೃತ ದೇಹವನ್ನು ಸುವರ್ಣ ಪಾಲಕಿಯಲ್ಲಿಟ್ಟು ಅಲಂಕರಿಸಿ ಬ್ರಾಹ್ಮಣರು ಪಲ್ಲಕ್ಕಿಯನ್ನು ಹೊತ್ತು ಮೆರವಣಿಗೆಯಿಂದ ತುಂಗೆಯ ನಡುಗಡ್ಡೆಗೆ ತೆಗೆದುಕೊಂಡು ಬಂದು ಶ್ರೀಪದ್ಮನಾಭತೀರ್ಥರ ಸನ್ನಿಧಿಯಲ್ಲಿ ಮಹಾಸಂಸ್ಥಾನ ಸಂಪ್ರದಾಯದಂತೆ ವೈದಿಕವಿಧಿಪೂರ್ವಕವಾಗಿ ನಿಕ್ಷೇಪಮಾಡಿ ಬೃಂದಾವನ ಪ್ರತಿಷ್ಠೆ ಮಾಡಲಾಯಿತು. 

ಅಂದು ಶ್ರೀಶ್ರೀನಿವಾಸತೀರ್ಥರು ಮತ್ತು ಶ್ರೀವಿಜಯೀಂದ್ರತೀರ್ಥರು ಶ್ರೀವ್ಯಾಸರಾಜಗುರುಸಾರ್ವಭೌಮರ ಬೃಂದಾವನ ಸನ್ನಿಧಿಯ ಸಮೀಪದಲ್ಲೇ ದೇವರ ಪೂಜಾರಾಧನೆಗಳನ್ನು ನೆರವೇರಿಸಿ ಗುರುಪಾದರ ಮಹಾಸಮಾರಾಧನೆಯನ್ನು ವಿಜೃಂಭಣೆಯಿಂದ ನೆರವೇರಿಸಿದರು. ಶ್ರೀವ್ಯಾಸರಾಜರ ಬೃಂದಾವನವನ್ನು ಪೀತಾಂಬರಾದಿಗಳು, ಪುಷ್ಪಮಾಲಿಕೆಗಳು, ಗಂಧಾಕ್ಷತೆಗಳಿಂದ ಅಲಂಕರಿಸಿ ಶ್ರೀವಿಜಯೀಂದ್ರರ ಮಾರ್ಗದರ್ಶನದಲ್ಲಿ ಶ್ರೀನಿವಾಸತೀರ್ಥರು ಶ್ರೀಮೂಲಗೋಪಾಲಕೃಷ್ಣ ಪಟ್ಟಾಭಿರಾಮವ್ಯಾಸದೇವರನ್ನು ಸುವರ್ಣ ತಟ್ಟೆಯಲ್ಲಿ ಬೃಂದಾವನದ ಮೇಲಿಟ್ಟು ಕನಕಾಭಿಷೇಕಮಾಡಿ, ಹಸ್ತೋದಕವನ್ನು ಸಮರ್ಪಿಸಿ ಮಹಾಮಂಗಳಾರತಿಯನ್ನು ಮಾಡಿದರು. 

ಆ ತರುವಾಯ ಗದ್ಗದ ಕಂಠದಿಂದ ಕಣ್ಣೀರು ಸುರಿಸುತ್ತಾ ಶ್ರೀಶ್ರೀನಿವಾಸತೀರ್ಥರು ಗುರುಗಳ ಮೇಲೆ ಚರಮಶ್ಲೋಕವನ್ನು 

ರಚಿಸಿ ಪರಿಸಿ ಸಮರ್ಪಿಸಿದರು. 

ಅರ್ಥಿಕಲ್ಪಿತಕಲ್ಲೋಯಂ ಪ್ರತ್ಯರ್ಥಿಗಜಕೇಸರೀ | ವ್ಯಾಸತೀರ್ಥಗುರುರ್ಭಯಾದಸ್ಮದಿಷ್ಟಾರ್ಥಸಿದ್ಧಯೇ ||

ಆನಂತರ ಅಲಂಕಾರ ಬ್ರಾಹ್ಮಣರ ಪೂಜಾ, ತೀರ್ಥಪ್ರಸಾದ ವಿನಿಯೋಗ ಸಹಸ್ರಾರು ಜನರಿಗೆ ಮೃಷ್ಟಾನ್ನ ಭೋಜನ - ದಕ್ಷಿಣಾಪ್ರದಾನಗಳಾದವು. ಮೂರು ದಿನ ವಿದ್ವತ್ಸಭೆಯನ್ನು ಜರುಗಿಸಿ ವಿದ್ವಾಂಸರು, ವಿದ್ಯಾರ್ಥಿಗಳು, ಕವಿ, ಗಾಯಕರು, ಹರಿದಾಸರುಗಳಿಗೆ ಸಂಭಾವನಾ ಪ್ರದಾನ ಮಾಡಲಾಯಿತು. 

ಉತ್ತರಾರಾಧನೆಯ ದಿವಸ ಶ್ರೀವಿಜಯೀಂದ್ರರು ಶ್ರೀವ್ಯಾಸತೀರ್ಥರ ಬೃಂದಾವನದ ಮುಂದೆ ನಿಂತು ಪರಿಪರಿಯಿಂದ ಸ್ತುತಿಸಿ ಗುರುಗಳ ಮಹಿಮಾವರ್ಣನಪರವಾದ ಸ್ತೋತ್ರವನ್ನು ರಚಿಸಿ ಸಮರ್ಪಿಸಿ ನಮಸ್ಕರಿಸಿದರು.

ಸ್ತೋತ್ರಗಳು 

ಶ್ರೀಮದ್ವಿಜಯೀಂದ್ರತೀರ್ಥಶ್ರೀಪಾದವಿರಚಿತಮ್ ಶ್ರೀವ್ಯಾಸರಾಜಗುರುಸಾರ್ವಭೌಮಸ್ತೋತ್ರಮ್ 

ವಂದೇ ಮುಕುಂದಮರವಿಂದಛವಾದಿವಂದ್ಯಂ ಇಂದಿಂದಿರಾ ವ್ರತತೀಮೇಚಕಮಾಕಟಾಕ್ಷ್ಯ | ಬಂದೀಕೃತಾನನಮಮಂದಮತಿಂ ವಿದಧ್ಯಾತ್‌ ಆನಂದತೀರ್ಥಹೃದಯಾಂಬುಜಮತಭ್ರಂಗಃ 

ಶ್ರೀವ್ಯಾಸಯೋಗೀ ಹರಿಪಾದರಾಗೀ ಭಕ್ತಾತಿಪೂಗೀ ಹಿತದಕ್ಷಸದ್ದೀಃ | ತ್ಯಾಗೀ ವಿರಾಗೀ ವಿಷಯೇಷು ಭೋಗೀ ಮುಕ್ತ ಸದಾಗೀತಸುರೇಂದ್ರಸಂಗೀ ಲಕ್ಷ್ಮೀಶಪಾದಾಂಬುಜಮತ್ತಶೃಂಗ ಸದಾ ದಶಪ್ರಜ್ಞನಯಪ್ರಸಂಗಃ | ಅದೈತವಾದೇ ಕೃತಮೂಲಭಂಗ ಮಹಾ(ಸದಾವ್ರತೀಶೋ ವಿಷಯೇಷಸಂಗಃ ಸದಾಸದಾಯತ್ತಮಹಾನುಭಾವ ಭಕ್ತಾಘತೀವೋಚ್ಚಯತೀವ್ರದಾವಃ | ದೌರ್ಜನ್ಯವಿಧ್ವಂಸನದಕ್ಷರಾವ ಶಿಷ್ಟೇಷು ಯೋ ಯಚ್ಛತಿ ದಿವ್ಯಗಾವಃ 

ಅದೈತದಾವಾನಲಕಾಲಮೇಘೋ 

ರಮಾರಮಸ್ನೇಹವಿದಾರಿತಾಫ್ | 

ವಾಗೈಖರೀನಿರ್ಜಿತಸಂಶಯೌಘೋ

ಮಾಯಾಮತವಾತಹಿಮೇ ನಿದಾಫಃ

ಮಧ್ವಸಿದ್ಧಾಂತದುಗಾಭಿವೃದ್ಧಿಪೂರ್ಣಕಲಾಧರಃ | ವ್ಯಾಸರಾಜಯತೀಂದ್ರೋ ಮೇ ಭೂಯಾದೀಪ್ತಿತಸಿದ್ಧಯೇ ಯನ್ನಾಮಗ್ರಹಣಾದೇವ ಪಾಪರಾಶಿಃ ಪಲಾಯತೇ (ಪ್ರಣಶ್ಯತಿ) | ಸೋಯಂ ಶ್ರೀವ್ಯಾಸಯೋಗೀಂದ್ರೋ ನಿಹಂತು ದುರಿತಾನಿ ನ 

ಯತಿಕಾದರ್ಶಮಾತ್ರಭೀತಃ ಕ್ವಚಿತ್ ಪಿಶಾಚಸದನುವ್ರತೇಭ್ಯಃ | ದತ್ತಾ ಧನಂ ವಾಂಛಿತಮಾಪ ತಸ್ಯತೈರ್ವಿಜಿತಾಯಾಮಚಿರೇಣ ಮುಕ್ತಿಮ್ ಯತ್ಕಶಿಕಾನಾಸಿಕಾಮುಕ್ತಜಲಾತ್ ಕಾಂಶಕಿತಾನ್ ನರಾನ್ | ವ್ಯಾಫೆ ಮಹಾನಪಿ ಸೃಷ್ಟುಂ ನಾಶಕತ್ ತಮಿಹಾಶ್ರಯೇ 

ದ್ವಾತ್ರಿಂಶತ್ನಪಶತಕರ್ಮೂತಿ್ರ್ರಹನೂಮತಃ ಪ್ರಭೋಃ । ಪ್ರತಿಷ್ಠಾತಾ ಸ್ಮೃತಿಖ್ಯಾತಸ್ತಂ ಭಜೇ ವ್ಯಾಸಯೋಗಿನಮ್ ಸೀಮಾನಂ ತತ್ರ ತತ್ಯ ಕ್ಷೇತ್ರೇಷು ಚ ಮಹಾಮತಿಃ | ವ್ಯವಸ್ಥಾಪಾತ್ರ ಮರ್ಯಾದಾಂ ಲಬ್ಧವಾಂಸ್ತಮಹಾಶ್ರಯೇ ಮಧ್ವದೇಶಿಕಸಿದ್ದಾಂತಪ್ರವರ್ತಕಶಿರೋಮಣಿಃ | ಸೋಯಂ ಶ್ರೀವ್ಯಾಸಯೋಗೀಂದ್ರೋ ಭೂಯಾದೀಪಿತಸಿದ್ಧಯೇ 

ಭೂತಪ್ರೇತಪಿಶಾಚಾದ್ಯಾ ಯಸ್ಯ ಸ್ಮರಣಮಾತ್ರತಃ | ಪಲಾಯಂತೇ ಶ್ರೀನರಸಿಂಹಸ್ಥಾನ ತಮಹಮಾಶ್ರಯೇ ವಾತಗ್ರಹಾ(ಜ್ವರಾ)ದಿರೋಗಾಶ್ಚ ಭಕ್ತಾ ಯಮುಪಸೇವತಃ । ದೃಢವ್ರತಸ್ಯ ನಶ್ಯಂತಿ ಪಿಶಾಚಾಶ್ಚತಮಾಶ್ರಯೇ 

ತಾರಪೂರ್ವ೦ ಬಿಂದುಯುಕ್ತಂ ಪ್ರಥಮಾಕ್ಷರಪೂರ್ವಕಮ್ | ಚತುರ್ಥಂತಂ ಚ ತನ್ನಾಮ ನಮಃ ಶಬ್ದಾದ್ವಿಭೂಷಿತಮ್ 

ಪಾಠಯಂತಂ ಮಾಧ್ವನಯಂ ಮೇಘಗಂಭೀರಯಾ ಗಿರಾ | ಧ್ಯಾಯನ್ನಾವರ್ತಯೇದ್ಯಸ್ತು ಭಾಮೇಧಾಂ ಸ ವಿಂದತಿ(ತೇ) ರತ್ನಸಿಂಹಾಸನಾರೂಢಂ ಚಾಮರೈರಭಿವೀಜಿತಮ್ | ಧ್ಯಾಯನ್ನಾವರ್ತಯೇದ್ಯಸ್ತು ಮಹತೀಂ ಶ್ರೀಯಮಾಪ್ನುಯಾತ್

ಪ್ರಹ್ಲಾದಸ್ಯಾವತಾರೋ ಸಾವಹೀಶಾನುಪ್ರವೇಶಾನ್ | ತೇನ ತತ್ತೇವಿನಾಂ ನೃಣಾಂ ಸರ್ವಮೇತದ್ಭವೇದ್ದು ವಮ್ 

ನಮೋ ವ್ಯಾಸಮುನೀಂದ್ರಾಯ ಭಕ್ತಾಭೀಷ್ಟಪ್ರದಾಯಿನೇ | 

ನಮತಾಂ ಕಲ್ಪತರವೇ ಭಜತಾಂ ಕಾಮಧೇನವೇ

ವ್ಯಾಸರಾಜಗುರೋ ಮಹ್ಯಂ ತತ್ಪದಾಂಬುಜಸೇವನಾತ್ | 

ದುರಿತಾನಿ ವಿನಶ್ಯಂತು ಯಚ್ಛ ಶೀಘ್ರಂ ಮನೋರಥಾನ್ 

ಯೋ ವ್ಯಾಸತ್ರಯಸಂಜ್ಞಕಾನ್‌ ದೃಢತರಾನ್‌ ಮಧ್ವಾರ್ಯಶಾಸ್ತ್ರಾರ್ಥ ಕಾನ್ ರಕ್ಷದ್ದಜಶಿಲಾಕೃತೀನ್ ಬಹುಮತಾನ್ ಕೃತ್ವಾ ಪರೈರ್ದುಸ್ತರಾನ್ | ಪ್ರಾಯಚ್ಛನ್ನಿಜಪಾದಯು ಸರಸಿಜಾಸಕ್ತನೃಣಾಂ ಮುದಾ ಸೋಯಂ ವ್ಯಾಸಮುನೀಶ್ವರೋ ಮಮ ಭವೇತ್ ತಾಪತ್ರಯಕ್ಷಾಂತಯೇ 

ಮದ್ದಭಕ್ಕೂ ವ್ಯಾಸಶಿಷ್ಯಪೂರ್ಣಪ್ರಜ್ಞಮತಾನುಗಃ | ವ್ಯಾಸರಾಜಮುನಿಶ್ರೇಷ್ಠಃ ಪಾತು ನಃ ಕೃಪಯಾ ಗುರುಃ 

ವ್ಯಾಸರಾಜೋ ವ್ಯಾಸರಾಜ ಇತಿ ಭಾಸದಾ ಜಪನ್ | ಮುಚ್ಯತೇ ಸರ್ವದುಃಖೇಭ್ಯಸ್ತದಂತರ್ಯಾಮಿಣೋ ಬಲಾತ್ ಸ್ತುವನ್ನನೇನ ಮಂತ್ರೇಣ ವ್ಯಾಸರಾಜಾಯ ಧೀಮತೇ | ಅಭಿಷೇಕಾರ್ಚನಾದೀನ್ ಯಃ ಕುರುತೇ ಸಹಿ ಮುಕ್ತಿಭಾಕ್ ಗುರುಭಕ್ತಾ ಭವೇದ್ವಿಷ್ಣುಭಕ್ತಿರವ್ಯಭಿಚಾರಿಣೀ | 

ತಯಾ ಸರ್ವ೦ ಲಬೇದೀಮಾಂಸ್ತಸ್ಮಾದೇತತ್ ಸದಾ ಪಠೇತ್ ನ್ಯಾಯಚಂದ್ರಿಕಯಾ ಯುಕ್ತಂ ನ್ಯಾಯಾಮೃತಕಲಾನಿಧಿಮ್ | ತರ್ಕೋಡುತಾಂಡವಕೃತಿಂ ವ್ಯಾಸತೀರ್ಥವಿಧುಂ ಭಜೇ 

ಸರ್ವಶಾಸ್ತ್ರ ಪ್ರವೀಣೇನ ವಿಜಯೀಂದ್ರಾಭಿಕ್ಷುಣಾ | 

ಕೃತಂ ಸ್ತೋತ್ರಮಿದಂ ಭಕ್ತಾಸರ್ವೆಷ್ಟಫಲದಂ ಶುಭಮ್ 

|| ಇತಿ ಶ್ರೀಮಚ್ಚಡರ್ಶನಾಚಾರ್ಯ ನಿಖಿಲವಿದ್ಯಾಚಕ್ರವರ್ತಿ ಶ್ರೀಸರ್ವಜ್ಞವಿದ್ಯಾಸಿಂಹಾಸನಾಧೀಶ್ವರ ಶ್ರೀಮದ್ವಿಜಯೀಂದ್ರತೀರ್ಥ ಶ್ರೀಪಾದವಿರಚಿತಂ ಶ್ರೀಮದ್ವಾಸರಾಜಗುರುಸಾರ್ವಭೌಮಸ್ತೋತ್ರಂ ಸಂಪೂರ್ಣಮ್ ||

ಶ್ರೀವಿದ್ಯಾರತ್ನಾಕರತೀರ್ಥ ಶ್ರೀಪಾದವಿರಚಿತಮ್ 

ಶ್ರೀವ್ಯಾಸರಾಜಗುರುಸಾರ್ವಭೌಮಚರಿತಮ್ 

ಲಕ್ಷ್ಮೀಂ ವಕ್ಷಸಿ ಬಿಭ್ರತಂ ನರಹರಿಂ ದೇವಂ ಪ್ರಣಮ್ಯಾಮಿತ ಪ್ರಜ್ಞಾದೀನ್ ಗುರುಪುಂಗವಾನಪಿ ತಥಾ ಶ್ರೀವ್ಯಾಸಯೋಗೀಶಿತುಃ | ಆಸಂಭೂತಿಕೃತಾನಿ ಸಂಸ್ಕೃತವತೋಭೀಷ್ಟಪ್ರದಾನೀಶಿತುಃ ವಿಷ್ಟೋಃ ಪ್ರೀತಿಕೃತೇ ವದಾಮಿ ಸುಜನಾಸ್ತುಷಂತು ಬಾಲೋಕ್ತಿಭಿಃ

ರಾಮಾಚಾರ್ಯಸುಧೀಮಣೇರ್ದಯಿತಯೋ ಗರ್ಭದೃತಃ ಶ್ರೀಮತೋ ಬ್ರಹ್ಮಣಸ್ಯ ಯತೀಶಿತುಃ ಕರುಣಯಾ ಸಂವತ್ಸರೇಷ್ಟಾದಿಮೇ | ವೈಶಾಖಾದಿಮಪಕ್ಷಕೇ ದಿನಮಣೇರ್ವಾರೇ ದಿನೇ ಸಪ್ತಮೇ ಪ್ರಹ್ಲಾದೋಽವತತಾರ ಭೂಮಿವಲಯೇ ನಾಗಾಧಿಪಸ್ಯಾಂಶವೃತ್‌ 

ಅದೇ ಪಂಚಮತಾಯುತೇ ವಟುರಭೂತ್ತುರ್ಯಾಶ್ರಮಂ ಶ್ರೀಮುಖೇ ಜಗ್ರಾಹಾಥ ಯತೀಶಿತುರ್ವಚನತೋ ಬ್ರಹ್ಮಣ್ಯನಾ ಗುರೋಃ | ವಿದ್ಯಾಪ್ರಾಪ್ತಿಕೃತೇ ಯತೀಶಮಗಮಪಾದರಾಜಾಭಿಧಮ್ ಅಬ್ಬಾನ್ ದ್ವಾದಶ ತತ್ರ ವಾಸಮಕರೋತ್ ಶೃಣ್ಣನ್ ಮಹೇಕ್ಷಾಗಮಮ್ 

ಅದ್ದೇ ಸರ್ವಜಿದಾನ್ವಯೇ ಯತಿವರೋ ವೈಶಾಖಮಾಸಾಸಿತ ದ್ವಾದಶ್ಯಾಮಗಮದದೂದ್ದಹಪದಾಬ್ದಾರ್ಚಾಧಿಕಾರಂ ಮುನೇಃ | ಬ್ರಹ್ಮಣ್ಯಾಭಿಧಯೋಯುತಾದಥ ತತಾನಾಯಂ ಪರೈರ್ದುಷ್ಠರಾನ್ ಗ್ರಂಥಾನ್ ಸಾಮೃತತರ್ಕತಾಂಡವಮುಖಾನಷ್ಟೇ ಹರೇಃ ಪ್ರೀತಯೇ 

ಮೂರ್ತಿಸ್ಸಪ್ತಶತಂ ಪ್ಲವಂಗಮಪತೇರ್ದ್ವಾತ್ರಿಂಶದಪಂಜನಾ- ಸೂನೋರ್ನಿಮ್ರಮ ಈಶತೋಷಣಕೃತೇ ರೌದ್ರಾಹ್ಮಯಾದ್ದೇ ಶಕೇ | ಶಾಲೀವಾಹನನಾಮಿ ಯುಗಯುಗಳಂ ಚತ್ವಾರಿಚೈಕಂ ಲಿಖನ್ 

ಯಾಂ ಸಂಖ್ಯಾ ಮನಸಾ ದಧಾತಿ ತದಿಯಂ ಸಂಖ್ಯಾಯುತಃ ಪೂರ್ಯತೇ 

ಅಷ್ಟೇ ತಾದೃಶಿ ಯಾವನಾಧಿಪತಿತೋ ಲೇಛೇ ಮಹಾವೈಭವಂ ಭೇರುಷ್ಟಾದ್ರನನೃಲಭ್ಯಮುರುಣಾ ತುಷ್ಟಾನ ಹಿಮ್ಮಾತ್ಮನಃ | ಅಬೇ ವಿಕ್ರಮ ನಾಮಕೇಂತಿಮದಿನೇ ಮಾಘಸ್ಯ ಕೃಷ್ಣಾಭಿದಂ ಶ್ರೀಮಂತಂ ಗಜಗಹ್ವರಾವನಿತಂ ಸೋಪಾತ್ಕುಹೂತ್ತಾಪದಃ 

ತಂಹಾಸನ ಮಾರುಹನ್‌ ಪ್ರಚುರಭೂದಾನಾದಿ ಸಂಸಾಧಯನ್ ತದ್ರಾಜ್ಯಂ ಪುನರಾರ್ಪಯತ್ ಕ್ಷಿತಿಧೃತೇ ಕೃಷ್ಣಾಭಿಧಾನಾಯ ಸಃ | ತತ್ಸಂವತ್ಸರಗತಾಂತ್ಯ ಮಾಸಿಧವಳೇ ಪಕ್ಷೇ ಹರೇರ್ವಾಸರೇ 

ಪ್ಯಂತೇ ವ್ಯಾಸಸಮುದ್ರನಾಮಕಮದಾದ್ಯಾಮಂ ಸಚಾ ನೃಪಃ ನಿರ್ಮಾಯಾತ್ರ ತಟಾಕಮೇಷ ಯತಿರಾಟ್ ಪ್ರತೂಹಮಂಭಃ ಸ್ಮೃತಃ ಶೂದ್ರಂ ಕಂಚನ ಕಾಲವಾಹನ ಬೃಹಚ್ಚೆಂಗಾಗ್ರತೋSಭೀಭೀದತ್ | ಏವಂ ಸ್ವಂ ಮಹಿಮಾನಮದ್ಭುತ ಮಿಳಾದೇವೇಷು ಸಂವರ್ಧಯನ್ ಅಧ್ಯಾಸ್ತಾವನಿಮಾವಿಳಂಬಿ ಶರದಂ ತಷ್ಟಾದಶಾಹಂ ಸುಧೀಃ

ಶ್ರೀಮದ್ವಾ ಸಯತೀಶಚಿತ್ರಚರಿತಂ ವಿದ್ಯಾದಿರತ್ನಾಕರ- ಪ್ರೋಕ್ತಂ ತತ್ಪದಪದ್ಮ ಸದ್ಮ ಹೃದಯೋ ಯಃ ಸಂಪಠೇಚ್ಚುದ್ಧಧೀಃ | ತಸ್ಮಿನಾಮಗಿರೀಶ್ವರೋ ನರಹರಿಃ ಪ್ರೀಯೇತ ತದ್ಭಕ್ತತಾಂ ಆಪ್ಪೋತ್ಯೇಷ ಯತೀಶ್ವರೋಪಿ ಸುಧಿಯಂ ದಾದಯಾವಾರಿಧಿ 

|| ಇತಿ ಶ್ರೀಮದ್ವಿದ್ಯಾರತ್ನಾಕರತೀರ್ಥವಿರಚಿತಂ ಶ್ರೀಮದ್ವಾಸರಾಜಗುರುಸಾರ್ವಭೌಮಚರಿತಂ ಸಂಪೂರ್ಣಮ್ ||

ಇಂತು ಪರಮಪವಿತ್ರ ಷಾಷ್ಠಿಕ ವಂಶದಲ್ಲಿ ಅವತರಿಸಿದ ಶ್ರೀಭಗವತಾಗ್ರಣಿಗಳಾದ ಶ್ರೀಪ್ರಹ್ಲಾದ ಬಾಕರಾಜಾವತಾರಿಗಳಾದ ಶ್ರೀವ್ಯಾಸರಾಜಗುರುಸಾರ್ವಭೌಮರೂ, ಶ್ರೀಮದಾಚಾರ್ಯರ ಮಹಾಸಂಸ್ಥಾನವಾದ ಶ್ರೀರಾಜೇಂದ್ರತೀರ್ಥರ ಪೂರ್ವಾದಿಮಠದ ವಿದ್ಯಾಸಿಂಹಾಸನದಲ್ಲಿ ಮಂಡಿಸಿ, ಸುಮಾರು ೮೫ ವರ್ಷಗಳ ಕಾಲ ಅಖಂಡ ಭರತಖಂಡವನ್ನು ಎರಡು ಬಾರಿ ಸಂಚರಿಸಿ, ಪ್ರಕಾಂಡ ಪಂಡಿತರುಗಳಾದ ನೂರಾರು ಜನ ಪರವಾದಿಗಳನ್ನು ಜಯಿಸಿ, ದೈತ ಸಿದ್ಧಾಂತ ಪ್ರತಿಷ್ಠಾಪನಾಪೂರ್ವಕ ಶ್ರೀಹರಿಸರ್ವೋತ್ತಮತ್ವದ ವಿಜಯದುಂದುಭಿಯನ್ನು ಮೊಳಗಿಸಿ, ಚಂದ್ರಿಕಾ - ನ್ಯಾಯಾಮೃತ - ತರ್ಕತಾಂಡವಾದಿ ಅಸಾಧಾರಣ ಗ್ರಂಥರಚನೆಗಳಿಂದ ಮಾಧ್ವಮತವನ್ನು ರಕ್ಷಿಸಿ, ಸಹಸ್ರಾರು ಜನ ವಿದ್ವಜ್ಜನರಿಗೆ, ಭೂಸುರರಿಗೆ ಗ್ರಾಮ-ಭೂಮಿ-ಅಗ್ರಹಾರಗಳನ್ನು ದಾನಮಾಡಿ, ಪಂಡಿತ ಪೋಷಣೆ ಮಾಡಿ, ಲಕ್ಷಾಂತರ ಜನರಿಗೆ ಅನ್ನದಾನ ಮಾಡಿ, ಕರ್ನಾಟಕ ಸಾಮ್ರಾಜ್ಯದ ಆರು ಜನ ಚಕ್ರವರ್ತಿಗಳಿಗೆ ಗುರುಗಳಾಗಿದ್ದು, ಸಾಮ್ರಾಜ್ಯದ ಸರ್ವತೋಮುಖ ಅಭಿವೃದ್ಧಿಮಾಡಿ, ಸಂಸ್ಕೃತ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿ, ಹತ್ತಾರು ಸಹಸ್ರಜನರು ಲೌಕಿಕ ವಿದ್ಯೆಗಳನ್ನು ಅಧ್ಯಯನಮಾಡಿ ಪಂಡಿತರಾಗಲು ಮುಖ್ಯಕಾರಣರಾಗಿ, ಏಳುನೂರ ಮೂವತ್ತೆರಡು ಶ್ರೀಪ್ರಾಣದೇವರನ್ನು ನಾಡಿನಾದ್ಯಂತ ಸ್ಥಾಪಿಸಿ, ಶ್ರೀಮುರಳಿಲೋಲನಾದ ಶ್ರೀಕೃಷ್ಣನನ್ನು ಸಾಕ್ಷಾತ್ಕರಿಸಿಕೊಂಡು ಸರ್ವಮಾನ್ಯರಾಗಿ ಜನಸಾಮಾನ್ಯರಿಗೆ, ರೈತಾಪಿ ಜನರಿಗೆ ಅನುಕೂಲವಾಗಲು ನೂರಾರು ಕೆರೆ-ಕುಂಟೆಗಳನ್ನು ನಿರ್ಮಿಸಿ, ಸಕಲಸಜ್ಜನರ ಹಿತಚಿಂತನೆಯನ್ನು ಮಾಡುತ್ತಾ, ಶ್ರೀವಿಜಯೀಂದ್ರ - ಶ್ರೀವಾದಿರಾಜ - ಶ್ರೀಗೋವಿಂದ ಒಡೆಯರು - ಶ್ರೀಶ್ರೀನಿವಾಸತೀರ್ಥ - ಶ್ರೀನಾರಾಯಣಯತಿಗಳು ಮುಂತಾದ ಜ್ಞಾನಿನಾಯಕರು, ಶ್ರೀಪುರಂದರದಾಸರು, ಶ್ರೀಕನಕದಾಸರುಗಳಂತಹ ಅಪರೋಕ್ಷಜ್ಞಾನಿಗಳನ್ನು ನಾಡಿಗೆ ನೀಡಿ ಹರಿದಾಸವಾಹ್ಮಯ - ಕನ್ನಡ ಭಾಷೆಗಳ ಪ್ರಸಾರಮಾಡಿ ವಿಜಯನಗರದ ಕನ್ನಡ ಸಾಮ್ರಾಜ್ಯದ ಸುವರ್ಣಯುಗವನ್ನು ನಿರ್ಮಿಸಿ, ದೇಶ-ವಿದೇಶಗಳಲ್ಲಿ ಅದು ಖ್ಯಾತವಾಗುವಂತೆ ಮಾಡಿ, ಸಮಸ್ತ ರಾಜಾಧಿರಾಜರಿಂದ ಸಂಸೇವಿತರಾಗಿ, ನೂರಾರು ಮಹಿಮೆಗಳನ್ನು ತೋರಿ, ಅಖಂಡ ಕೀರ್ತಿ ಗಳಿಸಿ, ಭಗವಂತನ ಆದೇಶದಂತೆ ತಮ್ಮ ಅವತಾರಕಾರ್ಯವನ್ನು ಪರಿಸಮಾಪ್ತಿಗೊಳಿಸಿದ ಶ್ರೀವ್ಯಾಸರಾಜಗುರುಸಾರ್ವಭೌಮರ ಮಹಿಮೆ ಅಗಮ್ಯ, ಅದಮ್ಮ, ಅಗಾಧ, ಅಪಾರ, ಅವರ್ಣನೀಯ. ಇಂತಹ ಮಹಾನುಭಾವರನ್ನು ಗುರುಗಳಾಗಿ ಪಡೆದ ಮಾಧ್ವಸಮಾಜದ ಅಖಂಡ ಭಾರತದ ಜನತೆಯ ಪುಣ್ಯಕ್ಕೆ ಎಣೆಯಿಲ್ಲ. ಶ್ರೀವ್ಯಾಸರಾಜಗುರುಚರಣರು ಸಕಲ ಸಜ್ಜನರಿಗೂ ಜ್ಞಾನ-ಭಕ್ತಿ-ಸನ್ಮಂಗಳಗಳನ್ನು ಕರುಣಿಸಿ, ಕಾಪಾಡಲೆಂದು ಪ್ರಾರ್ಥಿಸುತ್ತಾವಿರಮಿಸುತ್ತೇವೆ. 

|| ಶ್ರೀಮದ್ವಾಸಯತೀಂದ್ರಸದ್ಗುರುವರಃ ಕುರ್ಯಾದ್ರುವಂ ಮಂಗಳಮ್ || 

|| ಶ್ರೀಕೃಷ್ಣಾರ್ಪಣಮಸ್ತು || 

|| ಇಂತು ಕಲಿಯುಗ ಕಲ್ಪತರುವಿನಲ್ಲಿ ನಾಲ್ಕನೆಯ ಉಲ್ಲಾಸವಾದ ಶ್ರೀವ್ಯಾಸರಾಜಗುರುಸಾರ್ವಭೌಮಚರಿತೆಯು ಮುಗಿದುದು ||