ಕಲಿಯುಗ ಕಲ್ಪತರು ನಾಲ್ಕನೆಯ ಉಲ್ಲಾಸ ಶ್ರೀವ್ಯಾಸರಾಜಯತಿಸಾರ್ವಭೌಮರ ೫೬. ಕೃಷ್ಣಭಕ್ತಿಯ ಪರಾಕಾಷ್ಠತೆ !
ಶ್ರೀವ್ಯಾಸರಾಜರು ಬರಬರುತ್ತಾ ರಾಜಕೀಯ ಹಾಗೂ ಇನ್ನಿತರ ಲೌಕಿಕ ಕಾರ್ಯಗಳಲ್ಲಿ ನಿರಾಸಕ್ತರಾದರು. ಅವರು ಬಹುಹೊತ್ತು ಸ್ವಾಶ್ರಮೋಚಿತ ನಿತ್ಯನೈಮಿತ್ತಿಕ ಕರ್ಮಾಚರಣ, ಪಾಠ-ಪ್ರವಚನ, ಪೂಜಾ, ಉಪದೇಶಾದಿಗಳಿಗಾಗಿ ವಿನಿಯೋಗಿಸಿ ಉಳಿದ ಸಮಯದಲ್ಲಿ ಮೌನವಾಗಿ, ಹೃದಯಕಮಲದಲ್ಲಿ ತಮ್ಮ ಬಿಂಬಮೂರ್ತಿಯನ್ನು ಧ್ಯಾನಿಸಿ ಸ್ತುತಿಸುತ್ತಾ ಅಸಂಪ್ರಜ್ಞಾತಸಮಾಧಿಯಲ್ಲಿ ಕುಳಿತುಬಿಡುವರು. ಆಗ ಅವರ ಮುಖದಲ್ಲಿ ತಾಂಡವಿಸುವ ಅಲೌಕಿಕ ತೇಜಸ್ಸು ಎಲ್ಲರನ್ನೂ ವಿಸ್ಮಯಗೊಳಿಸುತ್ತಿತ್ತು. ಅವರ ಅನುಗ್ರಹಪಾತ್ರರಾದ ಅನೇಕ ಪಂಡಿತ ಶಿಷ್ಯರು, ಧಾರ್ಮಿಕರಿಗೆ, ಶ್ರೀಯವರು ಭಾವಸಮಾಧಿಯಲ್ಲಿ ಭಗವಾನರತರಾಗಿರುವಾಗ, ಅವರ ಸುತ್ತಲೂ ಅದೊಂದು ಬಗೆಯ ಅದ್ಭುತರಮ್ಯಪ್ರಶಾಂತವಾದ, ಹಾಲುಬೆಳದಿಂಗಳಿನಂಥ ಕಾಂತಿಪುಂಜ, ಶಿರೋಭಾಗದಲ್ಲಿ ಬೆಳಗುವ ವಿವಿಧ ವರ್ಣರಂಜಿತ ಪ್ರಭಾವಲಯಗಳು ಒಮ್ಮೊಮ್ಮೆ ಕಂಡುಬರುತ್ತಿತ್ತು! ಅದನ್ನು ಕುಡು ಪಂಡಿತರು, ಧಾರ್ಮಿಕರು ದೇವಲೋಕದಿಂದ ಧರೆಗಿಳಿದು ಬಂದ ಮಹಾಭಗವದ್ಭಕ್ತರಾದ ಮಹಾತ್ಮರಿವರೆಂದು ಮನಗಂಡು ಭಕ್ತಾನಂದ ಪುಳಕಿತಗಾತ್ರರಾಗಿ, ಇಂಥ ಗುರುವನ್ನು ಸೇವಿಸುವ ಭಾಗ್ಯ ತಮಗೆ ದೊರಕಿರುವುದಲ್ಲಾ ಎಂದು ಪರವಶರಾಗಿ, ಧ್ಯಾನಸ್ಥ ಗುರುಪುಂಗವರಿಗೆ ಸಾಷ್ಟಾಂಗವೆರಗುವರು. ಇಂಥ ಅನೇಕ ಘಟನೆಗಳು ಅನೇಕರ ಅನುಭವಕ್ಕೆ ಬಂದು ಅವರು ಭಕ್ತಿಪ್ರಕರ್ಷದಿಂದ ತಮ್ಮ ಅನುಭವಗಳನ್ನು ಪರಸ್ಪರ ಹೇಳಿಕೊಂಡು ಹರ್ಷಿಸುತ್ತಿದ್ದರು.
ಪುರಂದರದಾಸರು, ಶ್ರೀಕನಕದಾಸರು, ತಿರುಪತಿ, ಕಾಗೆನೆಲ್ಲಿಗಳಿಗೆ ಯಾತ್ರೆಗಾಗಿ ಹೋದವರು ಎರಡು - ಮೂರು ತಿಂಗಳಾದರೂ ಇನ್ನೂ ಹಿಂದಿರುಗಿ ಬಂದಿರಲಿಲ್ಲ. ಗುರುಗಳಿಗೆ, ಆತ್ಮೀಯರೂ, ಅಪರೋಕ್ಷಜ್ಞಾನಿಗಳೂ, ಭಾಗವತೋತ್ತಮರೂ ಆದ ಅವರಿಲ್ಲದಿರುವುದರಿಂದ ಮನಸ್ಸಿಗೆ ಬಹಳ ಬೇಸರವಾಗಿತ್ತು. ಪ್ರಿಯವಸ್ತುವಿನ ವಿರಹಾನುಭವವುಳ್ಳವರಿಗೆ ಅದರ ಅನುಭವವಿರುತ್ತದೆ. ಇದೇ ಪರಿಸ್ಥಿತಿಯಲ್ಲೇ ಗುರುಗಳ ಆರೋಗ್ಯ ಅಷ್ಟು ಚೆನ್ನಾಗಿರದೆ ಅವರು ಬಹಳ ಕೃಶರಾಗಿದ್ದರು. ೯೩ ವರ್ಷಗಳ ವಾರ್ಧಕ್ಯ, ನಿಶ್ಯಕ್ತಿ, ಬಳಲಿಕೆಗಳಿದ್ದರೂ ಅವರ ಮುಖದಲ್ಲಿ ಪ್ರಖರ ವರ್ಚಸ್ಸು, ದಿವಕಾಂತಿ ಬೆಳಗುತ್ತಿತ್ತು. ತರುಣರಂತೆಯೇ ಅವರು ಪ್ರತಿದಿನ ಸ್ನಾನ, ಆಕ, ಜಪ-ತಪ-ದೇವಪೂಜಾ, ಪಾಠ-ಪ್ರವಚನ, ಶಿಷ್ಯಭಕ್ತಜನರಿಗೆ ಧಾರ್ಮಿಕೋಪದೇಶಾದಿಗಳನ್ನೆಲ್ಲಾ ಎಂದಿನಂತೆಯೇ ನೆರವೇರಿಸುತ್ತಿದ್ದರು.
ವಿಳಂಬಿ ಸಂವತ್ಸರದ ಫಾಲ್ಗುಣ ಶುಕ್ಲಪೂರ್ಣಿಮಾ ದಿವಸ ವ್ಯಾಸಭಗವಾನರು ಬೆಳಗಿನಿಂದ ಸಂಜೆವರೆಗಿನ ಕರ್ತವ್ಯ, ರಾತ್ರಿ ದೀಪಾರಾಧನೆಗಳನ್ನು ನೆರವೇರಿಸಿದರು. ಅಂದೇಕೋ ಅವರಿಗೆ ಮನಸ್ಸಿಗೆ ಬಹಳ ಆನಂದ, ಉಲ್ಲಾಸಗಳುಂಟಾಗಿತ್ತು. ಸುಪ್ರಸನ್ನಚಿತ್ತರಾಗಿದ್ದ ಅವರಿಗೆ ತುಂಗತರಂಗಿಣಿಯ ತೀರದಲ್ಲಿ ಕೆಲಕಾಲವಿದ್ದು ಶ್ರೀಹರಿಯನ್ನು ಧ್ಯಾನದಿಂದ ಸೇವಿಸುವ ಬಯಕೆಯಾಯಿತು. ಮಠದ ಅಧಿಕಾರಿಯನ್ನು ಕರೆದು ಮೇನೆಯನ್ನು ತರಿಸುವಂತೆ ಆಜ್ಞಾಪಿಸಿದರು. ರಾತ್ರಿ ಎಂಟು ಗಂಟೆಯ ಸಮಯದಲ್ಲಿ ಗುರುಗಳೇಕೆ ಮೇನೆಯನ್ನು ತರಿಸಹೇಳಿದರೆಂದು ಅರ್ಥವಾಗದೆ, ಗುರುಗಳ ಆರೋಗ್ಯವೂ ಚೆನ್ನಾಗಿರದಿದ್ದರಿಂದ ಶಂಕಿಸುತ್ತಲೇ ಆತ “ಮಹಾಸ್ವಾಮಿ, ಸನ್ನಿಧಾನದವರ ಆರೋಗ್ಯ ಸರಿಯಿಲ್ಲ. ಈಗ ಹೊರಗೆ ಹೊರಡುವುದು ಉಚಿತವೇ ? ಸೇವಕನನ್ನು ಕ್ಷಮಿಸಬೇಕು” ಎಂದು ವಿಜ್ಞಾಪಿಸಿದ. ಶ್ರೀಯವರು ಮಂದಹಾಸ ಬೀರಿ "ತುಂಗಭದ್ರೆಯ ತೀರದಲ್ಲಿ ಸ್ವಲ್ಪ ವೇಳೆ ಭಗವಾನರತರಾಗಿ ಬರುತ್ತೇವೆ. ನಮಗಾಗಿ ಚಿಂತಿಸುವ ಕಾರಣವಿಲ್ಲ. ಮೇನೆ ಬರಲಿ” ಎಂದರು. ಎದುರುತ್ತರ ಕೊಡಲು ಧೈರ್ಯವಿಲ್ಲದೆ ಅಧಿಕಾರಿ ಮೇನೆಯನ್ನು ಸಿದ್ಧಪಡಿಸಿ ವಿಜ್ಞಾಪಿಸಿದ. ಶ್ರೀಯವರು ಆಪ್ತ ದ್ವಾರಪಾಲಕರೊಡನೆ ಹೊರಟು ಮೇನೆಯಲ್ಲಿ ಕುಳಿತರು. ಗುರುಗಳ ಸೇವೆಗಾಗಿ ಕಾತರಿಸುತ್ತಿದ್ದ ಎಂಟು ಜನ ಬ್ರಾಹ್ಮಣರು ಗುರುಗಳ ಅಪ್ಪಣೆಯಂತೆ ಮೇನೆಯನ್ನು ಹೊತ್ತು ತುಂಗಭದ್ರಾನದಿಯ ಕಡೆ ಹೊರಟರು. ಒಂದು ಸ್ಥಳದಲ್ಲಿ ಮೇನೆಯಿಂದಿಳಿದು ಗುರುಗಳು ತಾವು ಬರುವವರೆಗೆ ಅಲ್ಲಿ ಕಾದಿರಲು ಬ್ರಾಹ್ಮಣರಿಗೆ ತಿಳಿಸಿ ದ್ವಾರಪಾಲಕನೊಡನೆ ತುಂಗೆಯ ದಡದತ್ತ ಸಾಗಿದರು.
ಶ್ರೀಗಳವರು ಸ್ವಲ್ಪದೂರ ನಡೆದು ಒಂದೆಡೆ ನಿಂತು ಸುತ್ತಲೂ ಪರಿಕಿಸಿದರು. ಅದೊಂದು ಪ್ರಶಾಂತವಾದ ಪ್ರದೇಶ. ವಿವಿಧ ಫಲಭರಿತ ವೃಕ್ಷಗಳು, ಪುಷ್ಪವಾಟಿಕೆಗಳು, ಲತಾಕುಂಜಗಳು, ಬಗೆ ಬಗೆ ಕುಸುಮಗಳಿಂದ ಕಂಗೊಳಿಸುವ ತರು-ಲತೆ-ಬಳ್ಳಿಗಳಿಂದ ಶೋಭಿಸುತ್ತಿದೆ. ತುಂಗಭದ್ರೆಯು ಕಲಕಲರವದಿಂದ ಸಳಸಳನೆ ಹರಿಯುತ್ತಿದ್ದಾಳೆ. ಅಂಬರದಲ್ಲಿ ಪೂರ್ಣಿಮೆಯ ಪೂರ್ಣಚಂದ್ರನು ಶೀತಲಕಿರಣಗಳನ್ನು ಹರಡಿ, ಸುಂದರ ಬೆಳದಿಂಗಳ ನಗೆಯಿಂದ ರಾಜಿಸುತ್ತಿದ್ದಾನೆ.
ಮಂದಮಾರುತನು ಮೆಲ್ಲಮೆಲ್ಲನೆ ಬೀಸುತ್ತಾ ವಿವಿಧ ಪುಷ್ಪ ಸುಗಂಧ ಸೌರಭಗಳನ್ನು ಪಾಸುತ್ತಾ ಆಹ್ಲಾದವೀಯುತ್ತಿದ್ದಾನೆ. ಅಲ್ಲಿನ ವಾತಾವರಣ ಮನಮೋಹಕವೂ ಪ್ರಶಾಂತವೂ ಆಗಿದ್ದು ಸಂತಸ ಸಂತತಿಯನ್ನೀಯುತ್ತಿದೆ. ಶ್ರೀವ್ಯಾಸಮುನೀಂದ್ರರು ತುಂಗೆಯಲ್ಲಿ ಮಿಂದು ಕೃಷ್ಣಾಜಿನದಲ್ಲಿದ್ದ ಕಾಷಾಯವಸ್ತ್ರಗಳನ್ನು ಧರಿಸಿ ಆಚಮನಮಾಡಿ ತುಂಗೆಯ ದಡದ ರಮ್ಯ ಉಪವನದಲ್ಲಿದ್ದ ಚಂದ್ರಶಿಲಾ ವೇದಿಕೆಯಿಂದಾವೃತವಾದ ಒಂದು ಮಾವಿನ ಮರದ ಬಳಿಗೆ ಬಂದರು. ದ್ವಾರಪಾಲಕನು ವೇದಿಕೆಯ ಮೇಲೆ ಕೃಷ್ಣಾಜಿನ ಮತ್ತು ಕರವಸ್ತ್ರವನ್ನು ಹಾಸಿ ಅಪ್ಪಣೆ ಪಡೆದು ಮೇನೆಯಿದ್ದಲ್ಲಿಗೆ ತೆರಳಿದನು. ಗುರುಗಳು ಅದರ ಮೇಲೆ ಕುಳಿತು ಮತ್ತೊಮ್ಮೆ ಸುತ್ತಲೂ ನಿರೀಕ್ಷಿಸಿದರು.
ಆಗ ಅವರ ಕಣ್ಣಿಗೆ ಕಂಡ ದೃಶ್ಯ ಶ್ರೀಕೃಷ್ಣನ ಲೀಲಾವಿಲಾಸ ಭೂಮಿಯಾದ ಬೃಂದಾವನವನ್ನು ನೆನಪಿಗೆ ತಂದಿತು! ಆ ರಮಣೀಯ ಪ್ರದೇಶವೇ ಬೃಂದಾವನ, ತುಂಗೆಯೇ ಯಮುನೆ, ತರುಲತೆಗಳೇ ಗೋಪಸ್ತ್ರೀಯರು, ಶುಕ-ಪಿಕಗಳ ಮಂಜುಳ ಧ್ವನಿಯೇ ಕೃಷ್ಣನ ಕೊಳಲಿನ ಧ್ವನಿ! ಚಂದ್ರಿಕೆಯ ಚಲ್ವಿನಲ್ಲಿ ಮಂದಾನಿಲನ ಮಧುರ ಸ್ಪರ್ಶದಿಂದ ತಲೆದೂಗುತ್ತಿರುವ ಕುಸುಮಿತ ತರುಲತೆಗಳ ಚಲನೆಯೇ ಗೋಪಸ್ತ್ರೀಯರಾಡುತ್ತಿರುವ ರಾಸಕ್ರೀಡೆಯಂತೆ ಅವರಿಗೆ ಭಾಸವಾಯಿತು! ಆಗ ಯತಿಪುಂಗವರ ಹೃದಯದಲ್ಲಿ ಶ್ರೀಕೃಷ್ಣಭಕ್ತಿತರಂಗಿಣಿಯು ಪುಟಿದೆದ್ದಿತು!
ಪರಮಾನಂದತುಂದಿಲರಾದ ಶ್ರೀವ್ಯಾಸಮುನಿಗಳು ಪದ್ಮಾಸನಾಸೀನರಾಗಿ ಹೃತ್ಪುಂಡರೀಕದಲ್ಲಿ ಪುಂಡರೀಕಾಕ್ಷನಾದ ಶ್ರೀಮುರುಳಿಲೋಲನನ್ನು ಪ್ರತಿಷ್ಠಾಪಿಸಿ ಧ್ಯಾನಮಗ್ನರಾದರು. ಸ್ವಲ್ಪವೇಳೆಯಲ್ಲಿಯೇ ಅವರ ಹೃಠದಲ್ಲಿ ಸುರಸುಂದರ ಲೋಕಮೋಹಕ ಲಾವಣ್ಯಶೋಭಿತನಾದ ಬಾಲಗೋಪಾಲನು ಅಭಿವ್ಯಕ್ತನಾಗಿ ನಗೆಮೊಗದಿಂದ ದರ್ಶನವಿತ್ತು ಅಭಯ ನೀಡುತ್ತಾ ನಿಂತನು! ಗುರುವರ್ಯರು ಆ ಪರಂಧಾಮನನ್ನು ಆನಂದದಿಂದೀಕ್ಷಿಸುತ್ತಾ ಮಾನಸಪೂಜಾಕ್ರಮದಿಂದಾರಾಧಿಸಿ ಮಂತ್ರಪುಷ್ಪಾಂಜಲಿಯನ್ನು ಸಮರ್ಪಿಸಿದ ಕೂಡಲೇ ಕೃಷ್ಣನು ಕಣ್ಮರೆಯಾದನು. ಬಾಲಗೋಪಾಲನು ಅದೃಶ್ಯನಾದ್ದರಿಂದ ಖಿನ್ನರಾದ ಶ್ರೀಗಳವರು “ಕೃಷ್ಣಾ ನಿನ್ನ ಭಕ್ತನಲ್ಲಿ ದಯವೇಕೆ ಬಾರದು ? ಬೃಂದಾವನದ ನೆನಪಾಗಿ ಅಲ್ಲಿಗೆ ಓಡಿಹೋಗಿಹೆಯಾ? ಗೋವಿಂದ, ನಿನ್ನ ಸಂತತ ಸನ್ನಿಧಾನದಿಂದ ಕಂಗೊಳಿಸಿದ್ದ ಆ ಬೃಂದಾವನದ ಸುಕೃತವದೆಷ್ಟು ಅಮೋಘ! ನಿನ್ನ ಬಾಲಲೀಲೆಗಳನ್ನು ಕಂಡಾನಂದಿಸಿದ ಆ ಗೋಪ-ಗೋಪಿಯರೆಷ್ಟು ಧನ್ಯರು! ಆ ಮಂಗಳಕರ ದೃಶ್ಯವನ್ನೊಮ್ಮೆ ನೋಡಲು ನಿನ್ನ ಈ ದಾಸನು ಅರ್ಹನಲ್ಲವೇ ? ಏಕೆ ಕಣ್ಮರೆಯಾದೆ ಪ್ರಭು! ಕರುಣೆದೋರು” ಎಂದು ಭಕ್ತಿಯಿಂದ ಪ್ರಾರ್ಥಿಸಹತ್ತಿದರು.
ಆಶ್ಚರ್ಯ! ಧ್ಯಾನಸ್ಥರಾಗಿದ್ದ ಗುರುಗಳ ಹೃತ್ಕಮಲದಲ್ಲಿ ಮಿಂಚೊಂದು ಮಿನುಗಿದಂತಾಯಿತು! ಆ ದಿವ್ಯಪ್ರಕಾಶದಲ್ಲಿ ಅವರಿಗೆ ಸಾಕ್ಷಾತ್ ಬೃಂದಾವನದ ದರ್ಶನವೇ ಆಯಿತು! ಭಕ್ತು ದ್ರೇಕದಿಂದ ಶ್ರೀಕೃಷ್ಣನ ಲೀಲಾವಿಲಾಸ ಭೂಮಿಯಾದ ಬೃಂದಾವನದ ಸೊಬಗನ್ನು ವಿಸ್ಮಿತಸ್ಮಿತಪಕ್ಷಪುಟಲೋಚನರಾಗಿ ನೋಡುತ್ತಿದ್ದಾರೆ ಶ್ರೀವ್ಯಾಸಭಗವಾನರು.
ಅವರು ತಮ್ಮ ಹೃದಯಭೂಮಿಯಲ್ಲಿ ಕಂಡ ನೋಟ ಅತಿಮನೋಹರ. ವಿವಿಧ ಫಲಗಳ ಭಾರದಿಂದ ತಲೆಬಾಗಿದಂತಿರುವ ವೃಕ್ಷಗಳು; ಶುಕ-ಪಿಕಗಳ ಕಲರವ, ದುಂಬಿಗಳ ಗಳರವಗಳು ಶ್ರೀಕೃಷ್ಣನನ್ನು ಸ್ತುತಿಸುತ್ತಾ ಗಾನಮಾಡುತ್ತಿರುವಾಗ ಅಪರರಂತೆ ಶ್ರೀಕೃಷ್ಣನ ಮೇಲೆ ಪೂಮಳೆಗರೆಯುತ್ತಿರುವುದನ್ನು ಕಂಡರು! ಗರಿಬಿಚ್ಚಿ ಮೈಮರೆತು ನರ್ತಿಸುತ್ತಿರುವ ನವಿಲುಗಳ ಹಿಂಡು ನಂದನಂದನನಿಗೆ ಪರಾಕು ಹೇಳಿ ಸ್ವಾಗತಿಸುತ್ತಿರುವುದನ್ನು ಅವಲೋಕಿಸಿದರು ! ಶ್ರೀಗೋಪಾಲನ ಕೊಳಲಧ್ವನಿ ಕೇಳಿ ಯಮುನಾ ನದಿಯಲ್ಲಿ ಸುಖದ ಸಂಭ್ರಮದಿಂದ ಮೈಮರೆತು ಅರೆಗಣ್ಣು ಮುಚ್ಚಿ ಕಮಲಗಳ ಮೇಲೆ ಮೌನವಾಗಿ ಪರಮಹಂಸಕುಲದಂತೆ ಶ್ರೀಕೃಷ್ಣಧ್ಯಾನರತವಾಗಿರುವ ಹಂಸ ಸಮುದಾಯವನ್ನು ಕಂಡಾನಂದಿಸಿದರು! ಶ್ರೀಕೃಷ್ಣನ ಪಾದನಖದ ಕಾಂತಿಯೆಂಬ ಪೂರ್ಣಚಂದ್ರನ, ಕಳಂಕರಹಿತವಾದ ಬೆಳದಿಂಗಳನ್ನು ಸವಿಯುತ್ತಿರುವ ಸುಖಾತಿರೇಕದಿಂದ ಸೊಕ್ಕಿ, ಯೋಗಿಗಳಂತೆ ಸಮಸ್ತವನ್ನೂ ಮರೆತಿರುವ ಚಕೋರ ಪಕ್ಷಿಗಳನ್ನು ನೋಡಿ ವಿಸ್ಮಿತರಾದರು! ಅಲ್ಲಿ ಅನೇಕ ಗೋಪಿಯರು, ಗೋವುಗಳು, ಕರುಗಳಿದ್ದವು. ಅವು ತಮ್ಮ ಮುಂದೆ ಸುಳಿದಾಡುತ್ತಿರುವ ಶ್ರೀಕೃಷ್ಣನ ಸುರಸೌಂದರ್ಯವನ್ನು ಕಣ್ಣರಳಿಸಿ ಮನದಣಿಯ ನೋಡುತ್ತಾ ಪರವಶರಾಗಿ ಮನ್ಮಥಜನಕನಾದ ಬಾಲಕೃಷ್ಣನ ಅದ್ಭುತ ಸೌಂದರ್ಯವನ್ನು ಅಗಲವಾದ ಕಣ್ಣುಗಳಿಂದ ಸವಿಯುವ ಗೋಪಿಯರು ತಮ್ಮ ಕರುಗಳನ್ನೂ ಮರೆತು ಆವಾಗಲೂ ಶ್ರೀಕೃಷ್ಣನಲ್ಲೇ ನೆಟ್ಟದೃಷ್ಟಿಯಿಟ್ಟು ನೋಡುತ್ತಾ ಮುದಿಸುತ್ತಿರುವ ಗೋವುಗಳನ್ನು ಕಂಡು ಗುರುಗಳ ಮೈಪುಳಕಿಸಿತು! ತೋಳುಗಳೆಂಬ ದಂಡಿಗೆಯಿಂದ ಹೀಲಿಚಾಮರವನ್ನು ತಾವರೆಯ ಕೊಡೆಯಂತೆ ಮೇಲೆತ್ತಿ ಹಿಡಿದು ನಂದಕುಮಾರನನ್ನು ಓಲೈಸಿ ಒಲಿಸಿಕೊಂಡು ಮುಕ್ತರಂತೆ ಶ್ರೀಹರಿಯ ಸಾಲೋಕ್ಯ ಸುಖಾನುಭವಮಗ್ನರಾದ ಗೋಪಬಾಲಕರನ್ನು ಕಂಡು ಗುರುಗಳು ಮೈಮರೆತರು!
ಅಲ್ಲೇ ಮತ್ತೊಂದು ದೃಶ್ಯ! ಬಾಲಗೋಪಾಲ ಕೊಳಲೂದುತ್ತಾ ಬರುತ್ತಿದ್ದಾನೆ. ಮನವನ್ನು ಸೂರೆಗೊಳ್ಳುವ ಆ ಮಂಜುಳ ಮುರಳೀನಾದವನ್ನು ಕೇಳಿ, ಮನೆ-ಮನೆಗಳಿಂದ ಹೊರಗೋಡಿ ಬಂದು, 'ಜಯಜಯ ಶ್ರೀಮನ್ನಾರಾಯಣ, ಪದ್ಮನಾಭ, ಶ್ರೀಕೃಷ್ಣ, ಪರಾಕ್' ಎಂದು ಶ್ರೀಕೃಷ್ಣನನ್ನು ಹೊಗಳುತ್ತಾ ಲಕ್ಷ್ಮೀದೇವೆಯಂತೆ ಕರಗಳಲ್ಲಿರುವ ತಳಿಗೆಗಳಿಂದ ಕದಲಾರತಿ ಎತ್ತಿ ಮಾಧವನ ಮೋಹಕ ಸೌಂದರ್ಯವನ್ನು ತಮ್ಮ ಕಣ್ಣುಗಳಿಂದ ಹೀರುತ್ತಿರುವ ಪ್ರಜಸುಂದರೀಸಮುದಾಯವನ್ನು ಕಂಡು ಗುರುಪಾದರು ಧನ್ಯರಾದರು! ವ್ರಜದ ಮನೆ-ಮನೆಗಳಲ್ಲಿ ಮೊಸರು ಕಡೆಯುತ್ತಾ 'ಇಂದಿರೇಶ, ಬ್ರಹ್ಮಂದ್ರಾದಿವಂದಿತ, ಶ್ರೀಕೃಷ್ಣ' ಎಂದು ಅಂದಿನ ಶ್ರುತಿಯೇ ಒಪ್ಪುವಂತೆ ಸ್ತುತಿಸಿ, ಶ್ರೀಬಾಲಗೋಪಾಲನಿಗೆ ಪಾಸರು ಬೆಣ್ಣೆಗಳನ್ನಿತ್ತು ಕೃಷ್ಣನೊಡನೆ ಸರಸವಾಡುತ್ತಿರುವ ಭಾಗ್ಯಶಾಲಿಗಳಾದ ಇಂದುಮುಖಿಯರಾದ ಸುಂದರ ಗೋಪಾಂಗನೆಯರನ್ನು ಕಂಡರು!
ಶ್ರೀವ್ಯಾಸರಾಜರು ತಾವು ಕಂಡ ಅದ್ಭುತದೃಶ್ಯದಿಂದ ಮೈಮರೆತರು. ಆಗ ಅವರಲ್ಲಿ ಕೃಷ್ಣಭಕ್ತಿಯುಕ್ಕೇರಿ ಹರಿಯಹತ್ತಿತ್ತು. ಆಗಲೇ ಆ ಎಲ್ಲ ದೃಶ್ಯಗಳೂ ಮಾಯವಾದವು. ಸಮಾಧೃವಸ್ಥೆಯಿಂದ ಎಚ್ಚೆತ್ತ ಗುರುಗಳು “ಆಹಾ, ಬೃಂದಾವನ, ಯಮುನೆ, ಗೋಪ-ಗೋಪಿಯರು, ಗೋವು-ಕರುಗಳು, ಪುಷ್ಪವಾಟಿಕೆ-ನಿಕುಂಜ-ಲತಾ-ಬಳ್ಳಿಗಳು ಎಂಥ ಪುಣ್ಯಮಾಡಿದ್ದವೋ ಕಾಣೆನಲ್ಲಾ! ಸಾಕ್ಷಾತ್, ಪರಮಾತ್ಮನ ಸತತ ಸನ್ನಿಧಾನ, ಸ್ಪರ್ಶಾಲಾಪಗಳಿಂದ ಅವೆಲ್ಲ ಧನ್ಯವಾದವಲ್ಲವೇ? ನನಗೆ ಆ ಭಾಗ್ಯ ದೊರಕಲಿಲ್ಲವಲ್ಲ! ಕೃಷ್ಣಾ, ಕೃಷ್ಣಾ, ಏಕಿಂತು ನಿರ್ದಯನಾದೆ ಈ ದಾಸನಲ್ಲಿ, ದಯಾಸಾಗರ? ದೇವ! ಮತ್ತೆ ನೀನೆನಗೆ ಜನ್ಮವಿತ್ತರೆ, ಬೃಂದಾವನದ, ಯಮುನೆಯ, ನವಿಲುಗಳ ಜನ್ಮವನ್ನಾದರೂ ಕೊಡಬಾರದೆ ? ಕರುಣಿಸು ಗೋಪಾಲ, ಅನುಗ್ರಹಿಸು” ಮುಂತಾಗಿ ವಿವಿಧ ರೀತಿಯಿಂದ ಸ್ತುತಿಸಿ ಮೈಮರೆತು ಭಕ್ತಿಯ ಪರಾಕಾಷ್ಠತೆಯ ತುಟ್ಟುತುದಿಯನ್ನು ಮುಟ್ಟಿದರು.
ಭಕ್ತುದ್ರೇಕದಿಂದ ರೋಮಾಂಚಿತರಾಗಿದ್ದ ಗುರುಗಳ ಕಣ್ಣಿನಿಂದ ಆನಂದಾಶ್ರು ಹರಿಯುತ್ತಿತ್ತು. ಆಗ ವ್ಯಾಸರಾಜರ ಮುಖದಿಂದ ಒಂದು ನೂತನ ಭಕ್ತಿಗೀತೆಯು ಹೊರಹೊಮ್ಮಿತು!
ರಾಗ : ಗೌಳಿಪಂತು ತಾಳ : ಆಟತಾಳ
“ಎಂದಿಗಾದರೂ ಒಮ್ಮೆ ಕೊಡು ಕಂಡ ಹರಿಯೇ
ಬೃಂದಾವನಪತಿ ದಯದಿಂದಲೆನಗೆ
ಫಲಭಾರಗಳಿಂದ ತಲೆವಾಗಿ ಶುಕಪಿಕ
ಕಲಕಲದೊಳು ನಿನ್ನ ತುತಿಸಿತುಂಬಿಗಳ |
ಗಳರವದಿ೦ಪಾಡಿ ಅಪ್ಪರರಂತೆ ಪೂ
ಮಳೆಗರೆರವ ತರುಲತೆಜನ್ಮವನು
ಕೊಳಲ ಶ್ರುತಿಯ ಕೇಳಿ ಸುಖದ ಸಂಭ್ರಮದಲ್ಲಿ ಹೊಲಬುತಿಪ್ಪ ತಾವು ಅರಗಣ್ಣು ಮುಚ್ಚಿ | ನಳಿನಾಸನದಿ ಮೌನಗೊಂಡು ಪರಮಹಂಸ
ಕುಲದಂತೆ ಧ್ಯಾನಿಪ ಹಂಸಜನ್ಮವನು
ನಖಗಳೆಂಬ ಸಂತತಪೂರ್ಣಚಂದ್ರನ್ನ ಅಕಳಂಕನವಚಂದ್ರಿಕೆಯನ್ನ ಸವಿದು | ಸುಖದ ಸುಗ್ಗಿಗಳಲ್ಲಿ ಸೊಕ್ತ ಯೋಗಿಗಳಂತೆ ಅಖಿಳವ ಮರೆವ ಚಕೋರ ಜನ್ಮವನು
ಭಾವಜನಯ್ಯನ ಕಡುಚಲುವಿಕೆಯನ್ನು ಭಾವಿಸಿ ನಿಡುಗ೦ಗಳಿ೦ದ ದಣಿದುಂಡು | ಗೋವಳೇರಂತೆ ಮನೆಮಕ್ಕಳ ಹಿಂಗಿ ನಿನ್ನ ಆವಾಗ ಈಕ್ಷಿಸುವ ಗೋವಳ ಜನ್ಮವನು
ತೋಳದಂಡಿಗೆ ಮಾಡಿ ಹೀಲಿಯ ಚಾಮರವ
ಮೇಲೆ ಎತ್ತಿದ ತಾವರೆಗೊಡೆಯಿಂದ | ಓಲೈಸಿ ನಿನ್ನನು ಒಲಸಿಮುಕುತರಂತೆ
ಸಾಲೋಕ್ಯ ಸುಖವುಂಬ ಗೋಪರ ಜನ್ಮವನು
ಕೊಳಲಧ್ವನಿಯ ಕೇಳಿ ಎದುರುಗೊಳ್ಳುತ ನಿನ್ನ
ನಳಿನನಾಭಾ ಅವಧಾರೆಂದು ಪೊಗಳೇ |
ತಳಿಗೆ ಆರತಿಯೆತ್ತಿ ಲಕ್ಷ್ಮೀಯಂತೆ ನಿನ್ನ ಚೆಲುವ ಸವಿದಂಥ ಗೋಪೇರ ಜನ್ಮವನು
ಇಂದಿರೆಯರಸ ಬ್ರಹ್ಮಂದ್ರಾದಿವಂದಿತ
ಎಂದು ಮೊಸರು ಕಡೆಯುತ್ತಲಿ ನಿನ್ನ |
ಅಂದಿನ ಶ್ರುತಿಯೇ ಉಪ್ಪವಡಿಪ ವ್ರಜ
ದಿಂದುಮುಖಿಯರ ಜನ್ಮವ ಸಿರಿಕೃಷ್ಣ
ಅಹಹ! ಎಂಥ ಸರಸಸುಂದರ ಭಾವನೆ ! ಅದೆಂತಹ ಪರಿಪಕ್ವ ಭಕ್ತಿ, ನಮ್ಮ ವ್ಯಾಸಮುನಿಗಳದು ? ಶ್ರೀಕೃಷ್ಣಗ್ರಹಗೃಹೀತಾತ್ಮರಾದ ಶ್ರೀಯತಿಕುಲತಿಲಕರು ಶ್ರೀನಂದಗೋಪಾಲನನ್ನು ಮತ್ತೆ ಪ್ರಾರ್ಥಿಸಹತ್ತಿದರು. “ಹೇ ಕೃಷ್ಣ, ಮುಕುಂದ, ಮುರಾರಿ! ಅಂದಿನ ದ್ವಾಪರದ ಬೃಂದಾವನ ಮತ್ತೆ ಬಂದೀತೇ ? ಅಲ್ಲಿಯವರೆಗೆ ನಾನೆಂತು ಕಾಯಲಿ, ಹೂಂ, ಹೋಗಲಿ ದೇವ! ಮತ್ತೆನಗೆ ನೀನು ಜನ್ಮವೀಯುವುದಾದರೆ ನಿನ್ನಲ್ಲಿಯೇ ರತನಾದ ಸದೈಷ್ಣವ ಜನ್ಮವನ್ನಾದರೂ ದಯಪಾಲಿಸು! ಇಷ್ಟಾದರೂ ನೀನು ಕರುಣಿಸಲೇಬೇಕು, ಕಂಡ್ಯಾ?” ಎಂದು ಶ್ರೀಕೃಷ್ಣನನ್ನು ಪ್ರಾರ್ಥಿಸಲಾರಂಭಿಸಿದರು.
ರಾಗ : ರೇಗುಪ್ತಿ ತಾಳ : ಆಟತಾಳ
ಜನುಮಜನುಮದಲಿ ಕೊಡು ಕಂಡ ಕೃಷ್ಣ
ಅನಿಮಿತ್ತ ಬಂಧು ಕೃಷ್ಣದಯದಿಂದಲೆನಗೆ
ಮೆರೆವ ಊರ್ಧ್ವಪುಂಡ್ರ ಎರಡಾರುನಾಮವು ಕೊರಳೊಳು ತುಳಸಿಯ ವನಮಾಲೆಯು | ಮೆರೆವ ಶಂಖಚಕ್ರ ಭುಜದೊಳೊಪ್ಪುತ ನಿಮ್ಮ ಸ್ಮರಿಸುತ್ತ ಹಿಗ್ಗುವ ವೈಷ್ಣವ ಜನುಮವ
|| ಅ.ಪ. ||
ಹರಿಯೇ ಸರ್ವೋತ್ತಮ, ರಾಣಿ ಲಕುಮಿ, ಬೊಮ್ಮ
ಹರ ಇಂದ್ರಾದ್ಯಖಿಳರು ತವ ಸೇವಕರು |
ವರ ತಾರತಮ್ಯ ಪಂಚಭೇದ ಸತ್ಯವೆಂದು
ನೆರೆ ಪೇಳುವ ವಾಯುಮತದ ಸುಜ್ಞಾನವ
ಸಕಲ ವಿಬುಧೋತ್ತಮರಲ್ಲಿ ನಮ್ರತೆಯು
ಸುಖತೀರ್ಥರಲಿ ಮುಖ್ಯ ಗುರುಭಾವನೆಯು |
ಮುಕುತಿ ಪ್ರದಾಯಕ ಸಿರಿಕೃಷ್ಣ ನಿನ್ನಲ್ಲಿ
ಅಕಳಂಕವಾದ ನವವಿಧ ಭಕುತಿಯನ್ನು”
ಇಂತು ಪ್ರಾರ್ಥಿಸುತ್ತಾ ಶ್ರೀವ್ಯಾಸಮುನೀಂದ್ರರು ಮತ್ತೆ ಧ್ಯಾನಸ್ಥರಾದರು. ಆಗವರ ಹೃದಯಮಂಟಪದಲ್ಲಿ ಶ್ರೀಬಾಲಕೃಷ್ಣ ಹಸನ್ಮುಖದಿಂದ ದರ್ಶನವಿತ್ತು ಭಕ್ತರಾಜ! ನಿನ್ನ ಭಕ್ತಿಪಾಶದಿಂದ ನನ್ನನ್ನು ಬಂಧಿಸಿರುವೆ. ನೀನು ಬೃಂದಾವನದ ತರು-ಲತೆ-ಶುಕ-ಪಿಕ-ಹಂಸ-ಗೋವತ್ಸಗಳು, ಗೋಪ-ಗೋಪಿಯರ ಜನ್ಮವನ್ನಾದರೂ ಕೊಡೆಂದು ಪ್ರಾರ್ಥಿಸಿದ್ದೀಯೆ! ಕುಮಾರ, ಜಗತ್ತಿನಲ್ಲಿ ಮತ್ತಾರಲ್ಲೂ ಮಾಡದ ಅನುಗ್ರಹವನ್ನು ಮಾಡಿ ಸದಾ ನಿನ್ನಲ್ಲೇ ನೆಲೆ ನಿಂತಿರುವೆ. ನಿನಗೆ ಸಮಾನರಾದ ಭಾಗ್ಯಶಾಲಿಗಳು ಮೂರುಲೋಕಗಳಲ್ಲೂ ಬೇರಾರೂ ಇಲ್ಲ! ಅಂದು 'ಮೂರು ಜನ್ಮಗಳಲ್ಲಿ ನಿನಗೆ ನಾನು ದಾಸನಾಗಿದ್ದು ಸೇವಿಸುವಂತೆ ವರಪ್ರದಾನ ಮಾಡು' ಎಂದು ಕೇಳಿದ್ದು ಮರೆತೆಯಾ ? ಅದರಂತೆ ಎರಡು ಜನ್ಮಗಳಲ್ಲಿ ನೀನು ಈಗಾಗಲೇ ನನ್ನನ್ನು ಅನಿತರ ಸಾಧಾರಣ ರೀತಿಯಿಂದ ಸೇವಿಸಿ ನನ್ನ ಶ್ರೇಷಭಕ್ತನೆನಿಸಿರುವೆ. ಇನ್ನು ಈಗ ನೀನು ಪ್ರಾರ್ಥಿಸಿದಂತೆ ಕೇವಲ ವೈಷ್ಣವ ಮಾತ್ರವಲ್ಲ, ಸದೈಷ್ಣವ ಕುಲಚಕ್ರವರ್ತಿಯಾಗಿ ಅಸಾಧಾರಣ ರೀತಿಯಿಂದ ನನ್ನ ಸತ್ತತ್ವ ಸ್ಥಾಪನೆ, ಗ್ರಂಥರಚನೆ, ಆಪಂಡಿತ-ಪಾಮರರ ಉದ್ಧಾರ, ದೀನ-ದಲಿತರು, ಅಖಂಡ ವಿಶ್ವದ ಜನತೆಯ ಕಲ್ಯಾಣಮಾಡಲು ಅವತರಿಸಬೇಕಾಗಿದೆ. ಆ ನಂತರ ನಿನ್ನ ಮೂಲರೂಪ ಸೇರಿ ನನ್ನ ಸನ್ನಿಧಿಯಲ್ಲಿ ಸದಾ ಸುಖಿಸುವೆ, ಅದಕ್ಕೆ ಅರ್ಧಶತಮಾನಕ್ಕೂ ಮಿಕ್ಕಿ ಕಾಲವಿದೆ, ಆ ನಿನ್ನ ಅವತಾರಕ್ಕೆ ಭೂಮಿಕೆ, ವಾತಾವರಣ, ಪರಿಸರಗಳ ರಚನೆಯಾಗಬೇಕಾಗಿದೆ. ಇಂದಿನ ಅವತಾರದ ಕಾರ್ಯ ಮುಗಿದಿದೆ. ಮುಂದಿನ ಲೋಕಕಲ್ಯಾಣದ ಮಹಾ ಅನುಪಮ ಅವತಾರವಾಗಬೇಕಾಗಿದೆ. ಅದಕ್ಕೆ ಈಗ ನಿನ್ನೀ ಅವತಾರ ಪರಿಸಮಾಪ್ತಿ ಅನಿವಾರ್ಯವಾಗಿದೆ. ನಿನಗೆ ಮಂಗಳವಾಗಲಿ” ಎಂದು ಆದೇಶ ನೀಡಿ ಶ್ರೀಕೃಷ್ಣನು ಮುಗುಳುನಗೆ ಬೀರುತ್ತಾ ತನ್ನ ಪುಟ್ಟ ಮಂಗಳಕರ ಕರಗಳಿಂದ ಬಾ ಬಾ ಎಂದು ಕರೆದು ಅದೃಶ್ಯನಾದಂತೆ ಗುರುಗಳಿಗೆ ಭಾಸವಾಯಿತು.
ಧ್ಯಾನಸ್ಥಿತಿಯಿಂದ ಎಚ್ಚರಗೊಂಡ ಶ್ರೀವ್ಯಾಸರಾಜರ ಮೈಪುಳಕಿಸಿತು. ದೇಹದಲ್ಲೆಲ್ಲಾ ಅದಾವುದೋ ಒಂದು ದಿವ್ಯಶಕ್ತಿ, ತೇಜಸ್ಸು ಪಸರಿಸಿದಂತಾಯಿತು. ಭಕ್ತು.ದ್ರೇಕದಿಂದ ಆನಂದಭಾಷ್ಪ ಮಿಡಿಯಿತು. ವಿನಯ-ಭಕ್ತಿ ಪುರಸ್ಪರವಾಗಿ “ದೇವ! ನಿನ್ನ ಅಪ್ಪಣೆಯಂತಾಗಲಿ” ಎಂದು ಮನದಲ್ಲೇ ಪ್ರಾರ್ಥಿಸಿದರು. ಆಗ ಅವರ ಮನಸ್ಸು ಆನಂದಪೂರ್ಣವಾಗಿತ್ತು, ಪ್ರಶಾಂತವಾಗಿತ್ತು. ಗುರುಗಳು ಆನಂದದಿಂದ ಮೇಲೆದ್ದು ಮೇನೆಯ ಬಳಿಗೆ ಬಂದು ಮೇನೆಯಲ್ಲಿ ಕುಳಿತರು. ಮೇನೆ 'ವಿಶ್ವಪಾವನ ಮಠ'ವನ್ನು ತಲುಪಿತು. ಶ್ರೀಗಳವರು ಪ್ರಸನ್ನವದನರಾಗಿ ವಿಶ್ರಾಂತಿ ಪಡೆದರು.