ಕಲಿಯುಗ ಕಲ್ಪತರು ನಾಲ್ಕನೆಯ ಉಲ್ಲಾಸ ಶ್ರೀವ್ಯಾಸರಾಜಯತಿಸಾರ್ವಭೌಮರ ೫೫. ಮಹಾಕವಿ ಸೋಮನಾಥನಲ್ಲಿ ಅನುಗ್ರಹ
ಸೋಮನಾಥನು ಹದಿನಾರನೆಯ ಶತಮಾನದ ಪೂರ್ವಾರ್ಧದಲ್ಲಿದ್ದ ಮಹಾಕವಿ. ಅವನು ಸ್ಮಾರ್ತ ಬ್ರಾಹ್ಮಣನಾಗಿದ್ದರೂ, ಅದೈತಮತಾನುಯಾಯಿಯಾಗಿದ್ದರೂ, ಶ್ರೀಹರಿಯಲ್ಲಿ ಅಪಾರ ಭಕ್ತಿಯುಳ್ಳವನಾಗಿ, ಮತೀಯ ದುರಭಿಮಾನವಿಲ್ಲದೆ, ಭಾರತದ ಮತತ್ರಯಾಚಾರ್ಯರು, ಆ ಪೀಠಪರಂಪರೆಯನ್ನೂ, ಅನುಯಾಯಿಗಳನ್ನೂ ಗೌರವದಿಂದ ಕಾಣುತ್ತಿದ್ದನು. ಅವನು ಗುಣಗ್ರಾಹಿಯೂ, ಉದಾರಚರಿತನೂ, ಸರ್ವಪಂಡಿತರಲ್ಲೂ ಪ್ರೀತಿಯುಳ್ಳವನೂ, ಜ್ಞಾನಿಗಳಲ್ಲಿ ಅಪಾರ ಭಕ್ತಿಯುಳ್ಳವನೂ ಆಗಿದ್ದನು. ಸೋಮನಾಥನ ಮುತ್ತಾತನ ತಂದೆ ಯಜ್ವರ ಭಟ್ಟಭಾಸ್ಕರ. ಅವನ ಮಗ (ಮುತ್ತಾತ) ದೇವರಾಜ ಸೋಮವೀಥಿ (ಸೋಮನಾಥ). ಅವನ ಮಗ ಭಟ್ಟಗಯಾ ಮುಕ್ತಿಭಾಸ್ಕರ. ಇವನ ಪೌತ್ರನೇ ಮಹಾಕವಿ ಸೋಮನಾಥ, ಸೋಮನಾಥನ ಮುತ್ತಾತನ ತಂದೆಯಾದ ಯಜ್ವರ ಭಟ್ಟಭಾಸ್ಕರನು ಮಹಾಪಂಡಿತ. ಅನೇಕ ಶಿಷ್ಯರನ್ನು ತಯಾರುಮಾಡಿದ ಧೀಮಂತ. ಅವನ ಪೌತ್ರನಾದ ದೇವರಾಜ ಸೋಮವೀಥಿ ಅಥವಾ (ಮೊದಲನೆಯ) ಸೋಮನಾಥನೂ ಶ್ರೇಷ್ಠಪಂಡಿತ, ಕವಿ. ಅವನ ಮಗ ಭಟ್ಟಗಯಾ ಮುಕ್ತಿಭಾಸ್ಕರನು ಅನೇಕ ಶಾಸ್ತ್ರಗಳಲ್ಲಿ ಪಾರಂಗತ, ಅನೇಕ ಗ್ರಂಥಗಳನ್ನು ರಚಿಸಿ ಖ್ಯಾತನಾಗಿದ್ದನು. ಅವನು ತುಂಡೀರಮಂಡಲದ ಕಂಚಿಗೆ ಸಮೀಪದ ಗೋವಿಂದರಾಜಪುರಾಗ್ರಹವೆಂಬಲ್ಲಿ ವಾಸಮಾಡುತ್ತಿದ್ದನು.
ಅವನು ಉತ್ತರಭಾರತದಲ್ಲಿ ಎಲ್ಲ ಕ್ಷೇತ್ರತೀರ್ಥಗಳ ಯಾತ್ರೆಯಾಗಿ ಹೊರಟು ಅನೇಕ ಕಡೆ ರಾಜರುಗಳಿಂದ ಮಾನಿತನಾಗಿದ್ದುದಲ್ಲದೆ, ಗಯಾಕ್ಷೇತ್ರದಲ್ಲಿ ಬಹುಕಾಲ ವಾಸಮಾಡಿ ಗೌಡರಾಜನಿಂದ ವಿಶೇಷವಾಗಿ ಗೌರವಿತನಾಗಿದ್ದನು. ಅವನ ಹೆಸರು ಮತ್ತು ತಾತನ ಹೆಸರು ಒಂದೇ ಆಗಿದ್ದುದರಿಂದಲೂ ಜನರು ಅವನನ್ನು ಭಟ್ಟಗಯಾ ಮುಕ್ತಿಭಾಸ್ಕರನೆಂದು ಕರೆಯುತ್ತಿದ್ದರು. ಅವನು ಕರ್ನಾಟಕಕ್ಕೆ ಬಂದಾಗ ಕನ್ನಡ ಸಾಮ್ರಾಟನಾಗಿದ್ದ ಬುಕ್ಕಮಹಾರಾಯನು ವಿಜಯನಗರದಲ್ಲಿ ಅವನನ್ನು ಗೌರವಿಸಿ ಗ್ರಾಮ-ಭೂಮಿ, ಧನ-ಕನಕಾದಿಗಳಿಂದ ಸನ್ಮಾನಿಸಿದ್ದನು. ಮುಂದೆ ಮುಮ್ಮುಡಿ ಹರಿಹರನ ಕಾಲದಲ್ಲಿ ಮತ್ತೆ ವಿಜಯನಗರಕ್ಕೆ ಬಂದಾಗ ಮುಮ್ಮುಡಿ ಹರಿಹರನು ಭಟ್ಟಗಯಾ ಮುಕ್ತಿಭಾಸ್ಕರನ ಪಾಂಡಿತ್ಯಾತಿಶಯದಿಂದ ಪ್ರಭಾವಿತನಾಗಿ ಆತನಿಗೆ ಪಲ್ಲಕ್ಕಿ, ಭ ಛತ್ರಿ-ಚಾಮರ ಮುಂತಾದ ಗೌರವಗಳನರ್ಪಿಸಿ ಸನ್ಮಾನಿಸಿದನು.
ಇಂತು ಪ್ರಖ್ಯಾತನಾದ ಭಟ್ಟಗಯಾ ಮುಕ್ತಿಭಾಸ್ಕರನ ಪೌತ್ರನೇ “ಶ್ರೀವ್ಯಾಸಯೋಗಿಚರಿತಮ್” ಎಂಬ ಅತ್ಯಂತ ಶ್ರೇಷ್ಠ ಚಂಪೂಕಾವ್ಯವನ್ನು ರಚಿಸಿದ ಭಾಗ್ಯಶಾಲಿಯಾದ ಮಹಾಕವಿ ಸೋಮನಾಥನು. ಈ ಸೋಮನಾಥನ ಸೋದರಮಾವನೇ ತುಂಡೀರಮಂಡಲದಲ್ಲಿದ್ದ ಚಂಪಾಭಾರತ ಕಾವ್ಯವನ್ನು ರಚಿಸಿದ ಅನಂತಭಟ್ಟ.
ಮಾಘಕವಿಯ ಶಿಶುಪಾಲವಧಕಾವ್ಯಕ್ಕೆ ವ್ಯಾಖ್ಯಾನವನ್ನು ಬರೆದ ವಲ್ಲಭದೇವನು ಮಹಾಕವಿ ಸೋಮನಾಥನ ನಂತರ ಬಂದವನು. ಅಂದರೆ ೧೫೪೦ ರ ತರುವಾಯದಲ್ಲಿ ಬಂದವನು. ಆದ್ದರಿಂದಲೇ ಅವನು ಸೋಮನಾಥನಂಕಿತ ಅರ್ವಾಚೀನನು. ಅಂತೆಯೇ ವಲ್ಲಭದೇವನನ್ನು ತನ್ನ ವ್ಯಾಖ್ಯಾನದಲ್ಲಿ ಕವಿಗಳನ್ನು ಗೌರವಿಸುವಾಗ “ಸುಕವಿನಾಂ ಶ್ರೇಷ್ಠವಿದುಷಾಂ ವರರುಚಿ-ಸುಬಂಧು-ಸೋಮನಾಥ-ಭವಭೂತಿ-ಕ್ರೀಡಾನಂದ-ಕಾಲಿದಾಸ-ಬಿಲ್ದಣ-ಭಾರವಿ-ಬಾಣ-ಮಯೂರಾದೀನಾಂ ಕೀರ್ತಿ ಖ್ಯಾತಿಯಶಸ್ತ್ರತಯಾ ದುರಾಶಾದುರಭಿಲಾಷಸ್ತೀಯಾ” ಎಂದು ಖ್ಯಾತಕವಿಗಳ ಜೊತೆಗೆ ಮಹಾಕವಿ ಸೋಮನಾಥನನ್ನು ಹೊಗಳಿ ಇವರಂತೆ ಕೀರ್ತಿ ಗಳಿಸಲು ಮಾಘ ಕವಿಯು “ಶಿಶುಪಾಲವಧಕಾವ್ಯ'ವನ್ನು ರಚಿಸಿದನೆಂದು ಹೇಳಿದ್ದಾನೆ. ಇದೂ ಸಹ ಮಾಘ ಕವಿಯೂ, ಅದರ ವ್ಯಾಖ್ಯಾನಕಾರನಾದ ವಲ್ಲಭದೇವನೂ ಸೋಮನಾಥನಂಕಿತ ಅರ್ವಾಚೀನರೆಂದು ಹೇಳಲು ಒಂದು ಮಹತ್ವಪೂರ್ಣ ಪ್ರಮಾಣವಾಗಿದೆ.23
ಶ್ರೀವ್ಯಾಸರಾಜರು ಉಡುಪಿಯಿಂದ ಹಿಂದಿರುಗಿದ ಕೆಲಕಾಲವಾದ ಮೇಲೆ ಶ್ರೀವ್ಯಾಸರಾಜರ ವಿದ್ಯಾಶಿಷ್ಯರಲ್ಲೊಬ್ಬರಾದ ಮತ್ತು ಶ್ರೀಅಕ್ಟೋಭ್ಯತೀರ್ಥರು ಸ್ಥಾಪಿಸಿದ ಸಂಸ್ಥಾನದ ಪೀಠಾಧೀಶರೂ ಆದ ಶ್ರೀನಾರಾಯಣಯತಿಗಳು ತಮ್ಮ ಶಿಷ್ಯನಾದ ತುಂಡೀರಮಂಡಲದ ಗೋವಿಂದತೀರ್ಥಪುರನಿವಾಸಿಯಾದ ಮಹಾಕವಿ ಸೋಮನಾಥನಿಗೆ ಶ್ರೀಮುಖ ಬರೆದು ವಿಜಯನಗರಕ್ಕೆ ಬಂದು “ರಾಜಗುರು”, ಶ್ರೀವ್ಯಾಸತೀರ್ಥ ಗುರುಪಾದರ ದರ್ಶನಮಾಡಿ ಅನುಗೃಹೀತನಾಗಬೇಕೆಂಬ ಆದೇಶವನ್ನು ಓರ್ವ ಶಿಷ್ಯನೊಡನೆ ಮಹಾಕವಿಗೆ ಕಳುಹಿಸಿದ್ದರು.
ಸೋಮನಾಥನು ಆಗ ತಾನೆ ತೀರ್ಥಯಾತ್ರೆ ಮುಗಿಸಿಕೊಂಡು ಗೋವಿಂದತೀರ್ಥಪುರಾಗ್ರಹಾರಕ್ಕೆ ಬಂದಿದ್ದನು. ಅವನಿಗೆ ಅನೇಕ ಜನ ಪಂಡಿತರಾದ ಶಿಷ್ಯರು, ಮಿತ್ರರೂ ಇದ್ದರು. ಅವರೊಡನೆ ಯಾತ್ರಾವಿಚಾರವನ್ನು ವಿವರಿಸುತ್ತಿರುವಾಗ ಅವನಿಗೆ ಶ್ರೀನಾರಾಯಣಯತಿಗಳ ನಿರೂಪ ಬಂದಿತು. ಅದನ್ನು ಓದಿ ಆನಂದಭರಿತನಾಗಿ ತಾನು ಗುರುಗಳಂತೆ ಭಾವಿಸಿದ್ದ ಶ್ರೀನಾರಾಯಣಯತಿಗಳ ಪತ್ರವನ್ನು ಪಂಡಿತರ ಮುಂದೆ ಓದಿ “ಅಹೋ ವಾಚಮಗೋಚರ ಶಿಷ್ಯಪರಮೌಣ್ ಮಯಿ ನಾರಾಯಣತಪೋನಿಧೇರ್ಮಹಾನಯಂ ವಾತ್ಸಲ್ಯಭಾರ” (ಶ್ರೀವ್ಯಾಸಯೋಗಿಚರಿತಮ್, ಪುಟ-೭೯). “ಆಹಾ, ಅನೇಕ ಶಿಷ್ಯರಲ್ಲಿ ಸಾಮಾನ್ಯ ಸಣ್ಣ ಶಿಷ್ಯನಾದ ನನ್ನಲ್ಲಿ ತಪೋನಿಧಿಗಳಾದ ಶ್ರೀನಾರಾಯಣಯತಿಗಳಿಗಿರುವ ಶಿಷ್ಯವಾತ್ಸಲ್ಯವನ್ನು ವರ್ಣಿಸಲು ಪದಗಳೇ ಕಾಣುತ್ತಿಲ್ಲವಲ್ಲಾ!” ಎಂದುದ್ಧರಿಸಿ ತನ್ನ ಶಿಷ್ಯಮಂಡಲಿ, ಕವಿಜನರೊಡನೆ ಹೊರಟು ವಿಜಯನಗರಕ್ಕೆ ಕ್ರಿ.ಶ. ೧೫೩೫ ರ ಸುಮಾರಿಗೆ ಬಂದನು.235 ಸೋಮನಾಥನು ಮೊದಲು ಶ್ರೀನಾರಾಯಣಯತಿಗಳ ದರ್ಶನ ಪಡೆದು ಕವಿಮಿತ್ರರು, ಶಿಷ್ಯರುಗಳೊಡನೆ ನಾರಾಯಣಯತಿಗಳಿಗೆ ಭಕ್ತಿಪೂರ್ವಕವಾಗಿ ನಮಸ್ಕರಿಸಿ ಅವರನ್ನು ಮುಂದುಮಾಡಿಕೊಂಡು ಶ್ರೀವ್ಯಾಸಯೋಗೀಂದ್ರರ “ವಿಶ್ವಪಾವನ ಮಠ'ದ ಮಹಾದ್ವಾರದ ಬಳಿಗೆ ಬಂದನು. ಮೊದಲು ನಾರಾಯಣಯತಿಗಳು ಶ್ರೀವ್ಯಾಸತೀರ್ಥರಲ್ಲಿಗೆ ಬಂದು ಸೋಮನಾಥ ಕವಿಯು ಗುರುಗಳ ದರ್ಶನಾನುಗ್ರಹಾಕಾಂಕ್ಷಿಯಾಗಿ ಬಂದಿರುವುದನ್ನು ವಿಜ್ಞಾಪಿಸಿ ಗುರುಗಳ ಅಪ್ಪಣೆಯಂತೆ ಸೋಮನಾಥನನ್ನು
ಆದರದಿಂದ ಕರೆದುತಂದರು.
ಆಗ ವ್ಯಾಸರಾಜರು ಭದ್ರಾಸನದಲ್ಲಿ ಮಂಡಿಸಿದ್ದರು. ಸಕಲಶಾಸ್ತ್ರಪಾರಂಗತರಾದ ಪಂಡಿತಮಂಡಲಿ, ಕವಿ-ಗಾಯಕ-ಕಲೆಗಾರರು, ಧರ್ಮಾಭಿಮಾನಿ ರಾಜಪುರುಷರು, ಪರದೇಶ, ದೀಪಾಂತರವಾಸಿ ರಾಜರ ಪ್ರತಿನಿಧಿಗಳು, ಅನೇಕ ಸನ್ಯಾಸಿ ಶಿಷ್ಯರುಗಳು, ವಿದ್ಯಾರ್ಥಿಗಳೇ ಮೊದಲಾಗಿ ಸಹಸ್ರಾರು ಜನರಿಂದ ತುಂಬಿತುಳುಕುತ್ತಿದ್ದ ಆ ಸರಸ್ವತೀ ಪೀಠದಲ್ಲಿ ಸಕಲರಿಂದ ಓಲೈಸಿಕೊಳ್ಳುತ್ತಾ ಅನಿತರಸಾಧಾರಣ ತೇಜಸ್ಸು, ಗಾಂಭೀರ್ಯಗಳಿಂದ ಕಾಷಾಯಾಂಬರಧಾರಿಗಳಾಗಿ ಸುವರ್ಣ ಸುಲೋಚನಧಾರಿಗಳಾಗಿ ಮಂದಸ್ಮಿತರಾಗಿ ತಮ್ಮ ಕೃಪಾದೃಷ್ಟಿಪೀಯೂಷವರ್ಷಣದಿಂದ ಸರ್ವರನ್ನು ಅನುಗ್ರಹಿಸುತ್ತಾ ಉಪದೇಶಮಗ್ನರಾಗಿರುವ ಯತಿಸಾರ್ವಭೌಮರ ಪಾದದರ್ಶನಮಾತ್ರದಿಂದ ಸೋಮನಾಥನು ತನ್ನ ಜನ್ಮ ಸಫಲವಾಯಿತೆಂದು
ಭಾವಿಸಿದನು.
ಶ್ರೀವ್ಯಾಸರಾಜರನ್ನು ಪ್ರಥಮತಃ ತಾನು ಕಂಡ ದೃಶ್ಯವನ್ನು ಸೋಮನಾಥನು ತನ್ನ ಕಾವ್ಯದಲ್ಲಿ ಹೀಗೆ ವರ್ಣಿಸಿದ್ದಾನೆ - “ಅಗಣೀಯಾನುಭವೈರ್ಯೊಗಿಭಿಃ ಅಂತೇವಸದ್ಧಿಃ ಸನಕಾದಿಭಿಸ್ಸರಸಿಜಾಸನವಸಂಸೇವ್ಯಮಾನಸ” ಎಣಿಸಲಸದಳವಲ್ಲದ ಪರಮಹಂಸರಾದ ಶಿಷ್ಯರು, ಭೂದೇವತೆಗಳಾದ ವಿದ್ವಜ್ಜನರಿಂದ ಸಂಸೇವಿತರಾಗಿರುವ ವ್ಯಾಸಯೋಗೀಂದ್ರರು ಸನಕಾದಿಗಳು, ದೇವತೆಗಳಿಂದ ಸೇವಮಾನರಾದ, ಕಮಲಾಸನರಾದ ಬ್ರಹ್ಮದೇವರಂತೆ ಕಂಗೊಳಿಸುತ್ತಿದ್ದರು!
ಅತಿ ಭಕ್ತಿ-ಶ್ರದ್ಧೆಗಳಿಂದ ನಮಿಸಿ ನಿಂತ ಸೋಮನಾಥನನ್ನು ಕಂಡು ಆನಂದಿಸಿ ಶ್ರೀವ್ಯಾಸಯೋಗಿಗಳು “ವತ್ಸ! ಸೋಮನಾಥಕವೇ! ಕಾರುಣ್ಯನ ಕಮಲಾ ಸಹಾಯಸ್ಯ ವರ್ಧಸೇ ಕಿಮವ್ಯಾಹತೇನ ಮಂಗಲೇನ?” - “ವತ್ಥ, ಸೋಮನಾಥ! ಕಮಲಾಸಹಾಯನಾದ ಶ್ರೀಮನ್ನಾರಾಯಣನ ಕಾರುಣ್ಯದಿಂದ ನೀನು ಸಂತತ ಮಂಗಳದಿಂದ ವರ್ಧಿಸುತ್ತಿರುವೆಯಾ?” ಎಂದು ಪ್ರಶ್ನಿಸಿದರು. ಆಗ ಸೋಮನಾಥನು “ಗುರುವರ್ಯ ! ತಮ್ಮ ಕೃಪಾಕಟಾಕ್ಷವು ಈ ಪಾಮರ ಶಿಷ್ಯನ ಮೇಲಿರಲು ನನಗೆ ಸದಾ ಮಂಗಳವಲ್ಲದೆ ಬೇರೇನಿದೆ! ತಮ್ಮ ಆಶೀರ್ವಾದದಿಂದ ಕುಶಲದಿಂದಿದ್ದೇನೆ. ಮಹಾನುಭಾವರೇ, ಬಹುವರ್ಷಗಳ ನನ್ನ ಆಶಾವೃಕ್ಷವಿಂದು ಫಲಿಸಿತು. ಪೂರ್ವಾಜಿತ ಪುಣ್ಯವಿಶೇಷದಿಂದ ತಮ್ಮ ಪಾವನಚರಣಕಮಲ ದರ್ಶನದಿಂದ ಕೃತಾರ್ಥನಾದೆ” ಎಂದು ವಿಜ್ಞಾಪಿಸಿದನು.
ಆಗ ವ್ಯಾಸರಾಜರು “ಮಹಾಕವಿ! ನಿನಗೆ ಸ್ವಾಗತ. ಪ್ರಿಯಶಿಷ್ಯರಾದ ನಾರಾಯಣಯತಿಗಳಿಂದ ನಿನ್ನ ವಿದ್ಯಾವೈಭವಗಳನ್ನು ಕೇಳಿ ಹರ್ಷಿಸಿದೆವು. ನಿನ್ನ ಆಗಮನದಿಂದ ನಮಗೆ ಪ್ರಮೋದವಾಗಿದೆ. ನೀನು ಕೆಲಕಾಲ ನಮ್ಮಿ ಮಠದಲ್ಲಿದ್ದು ನಿನ್ನ ವಿದ್ಯೆ, ಕಾವ್ಯರಚನಾ ಚಾತುರ್ಯಾದಿಗಳಿಂದ ನಮ್ಮನ್ನು ಸಂತೋಷಗೊಳಿಸು” ಎಂದಾಜ್ಞಾಪಿಸಿ ಸೋನಾಥ ಹಾಗೂ ಅವನ ಶಿಷ್ಯರು, ಮಿತ್ರರುಗಳಿಗೆ ಸಕಲವಿಧ ಸೌಕರ್ಯಗಳನ್ನೇರ್ಪಡಿಸಿಕೊಡಲು ಶ್ರೀಮಠದ ಅಧಿಕಾರಿಗಳಿಗೆ ಆದೇಶ ನೀಡಿ ಮಹಾಸಂಸ್ಥಾನ ಪೂಜೆಗಾಗಿ ಭದ್ರಾಸನದಿಂದೆದ್ದು ಹೊರಟರು.
ಸೋಮನಾಥ ಕವಿಯು ಪ್ರತಿದಿನ ವಿಜಯನಗರದ ಸಂಸ್ಕೃತ ವಿಶ್ವವಿದ್ಯಾನಿಲಯದಲ್ಲಿ ಸಹಸ್ರಾರು ಜನ ವಿದ್ವಜ್ಜನ-ಕವಿ-ಸಾಹಿತಿಗಳಿಂದ ಕೂಡಿದ್ದ ಮಹಾಸಭೆಯಲ್ಲಿ ತನ್ನ ಸಕಲಶಾಸ್ತ್ರ ಪ್ರಾವೀಣ್ಯವನ್ನೂ, ತಾನು ರಚಿಸಿದ ವಿವಿಧ ಕಾವ್ಯ, ನಾಟಕಾಲಂಕರಾದಿ ಗ್ರಂಥಗಳನ್ನು ಓದಿ, ಆಶುಕವಿತೆಗಳಿಂದಲೂ ವ್ಯಾಸರಾಜರನ್ನು ಪರಮಾನಂದಗೊಳಿಸಿ ಅವರಿಂದ ವಿವಿಧ ಬಹುಮಾನಗಳನ್ನು ಪಡೆಯುತ್ತಾ ಸಕಲ ಪಂಡಿತರ ಗೌರವಕ್ಕೆ ಪಾತ್ರನಾಗುತ್ತಿದ್ದನು.
ಆಗ ಸೋಮನಾಥನಿಗೆ ವ್ಯಾಸಯೋಗೀಂದ್ರರ ಬಗ್ಗೆ ಒಂದು ಶ್ರೇಷ್ಠ ಕೃತಿಯನ್ನು ರಚಿಸುವ ಹಂಬಲವುಂಟಾಯಿತು. ಅವನು ಆವರೆಗೆ ತಾನು ಅನೇಕ ವಿದ್ವಜ್ಜನ ಧಾರ್ಮಿಕರಿಂದ ಮತ್ತು ನಾರಾಯಣಯತಿಗಳಿಂದ ಕೇಳಿ ತಿಳಿದಿದ್ದ ವಿಚಾರಗಳನ್ನು ಸಂಗ್ರಹಿಸಿ, ತಾನು ವಿಜಯನಗರದಲ್ಲಿದ್ದಾಗ ಪ್ರತ್ಯಕ್ಷವಾಗಿ ಕಂಡು ಅಚ್ಚರಿಗೊಂಡಿದ್ದ ಅನೇಕ ವಿಚಾರಗಳನ್ನೆಲ್ಲಾ ಸೇರಿಸಿ, ಶ್ರೀವ್ಯಾಸರಾಜಗುರುವರ್ಯರ ರಮ್ಯಚರಿತ್ರೆ, ಮಹಿಮೆ, ಜ್ಞಾನ-ಭಕ್ತಿ-ವೈರಾಗ್ಯ, ತಪಸ್ಸು, ಪರವಾದಿ ದಿಗ್ವಿಜಯ, ವೈಭವ, ದೈತಸಿದ್ಧಾಂತ ಪ್ರತಿಷ್ಠಾಪನೆ, ಅಸಾಧಾರಣ ಗ್ರಂಥರಚನೆ, ತೀರ್ಥಕ್ಷೇತ್ರ ಸಂಚಾರ, ಪಾಠ-ಪ್ರವಚನ ಚಾತುರ್ಯ, ರಾಜಾಧಿರಾಜ ಮಾನ್ಯತೆ, ವಿಜಯನಗರದ ಆರು ಜನ ಸಾಮ್ರಾಟರಿಗೆ ರಾಜಗುರುಗಳಾಗಿದ್ದು ಕನ್ನಡ ಸಾಮ್ರಾಜ್ಯ, ಧರ್ಮ, ಸಂಸ್ಕೃತಿ, ಸಕಲ ಕಲೆಗಳು, ವಿದ್ವಜ್ಜನರ ಸಂರಕ್ಷಣೆ, ಅಭಿವೃದ್ಧಿಗಳಿಗಾಗಿ ಸಂಸ್ಕೃತ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿ ಹತ್ತಾರು ಸಹಸ್ರ ಜನ ವಿದ್ಯಾರ್ಥಿಗಳಿಗೆ ಸಮಸ್ತ ಅನುಕೂಲಗಳನ್ನೇರ್ಪಡಿಸಿಕೊಟ್ಟು ವಿವಿಧ ಶಾಸ್ತ್ರಾಧ್ಯಯನದ್ವಾರಾ ಜ್ಞಾನಪ್ರಸಾರವನ್ನು ಅಖಂಡವಾಗಿ ಮಾಡುತ್ತಿದ್ದ ಅವರ ಉದಾತ್ತ ಭಾವನೆ, ಅನುಗ್ರಹ, ವಿವಿಧ ಕಾರ್ಯಚಟುವಟಿಕೆಗಳು, ಶ್ರೀಗಳವರ ವಂಶ, ಬಾಲ್ಯ, ವಿದ್ಯಾಭ್ಯಾಸಾದಿ ಸಮಸ್ತ ವಿಷಯ ಪರಿಪುತವಾದ ಶ್ರೀಯವರ ರಮ್ಯ ಉದಂತವನ್ನು ಚಂಪೂಕಾವ್ಯ ರೂಪವಾಗಿ ರಚಿಸಲಾಶಿಸಿ ಹಗಲಿರುಳು ಕುಳಿತು ಮೂರು - ನಾಲ್ಕು ತಿಂಗಳುಗಳಲ್ಲೇ ರಚಿಸಿ, ತನ್ನ ಮೇರುಕೃತಿಯಾದ "ಶ್ರೀವ್ಯಾಸಯೋಗಿಚರಿತಮ್” ಮಹಾಕಾವ್ಯವನ್ನು ತನಗೆ ಪೂಜ್ಯರಾದ ಶ್ರೀನಾರಾಯಣಯೋಗಿಗಳಿಗೆ ತೋರಿಸಿದನು. ಅದನ್ನು ಕಂಡು ಪರಮಾನಂದತುಂದಿಲರಾದ ಅವರು ಅದನ್ನು ವಿದ್ವತ್ಸಭೆಯಲ್ಲಿ ಓದಿ ಶ್ರೀಗುರುಪಾದರಿಗೆ ಸಮರ್ಪಿಸಬೇಕೆಂದು ಸಲಹೆ ನೀಡಿದರು. ಅದರಿಂದ ಮಹಾಕವಿಗೆ ಆನಂದವಾಯಿತು. ಈ ವಿಚಾರವು ನಾರಾಯಣಯತಿಗಳ ದ್ವಾರಾ ಅಚ್ಯುತದೇವರಾಯನಿಗೆ ತಿಳಿದು ಹರುಷದಿಂದ ಅವನು ರಾಜಗುರುಗಳ ಸಮಕ್ಷ ವಿದ್ವನ್ಮಂಡಿತವಾದ ರಾಜಸಭೆಯಲ್ಲಿ ಆ ಮಹಾಕಾವ್ಯವನ್ನು ಓದಬೇಕೆಂದು ಹೇಳಿ ಅದಕ್ಕೆ ಸಕಲ ವ್ಯವಸ್ಥೆ ಮಾಡಿಸಿದನು.
ಸಾಮ್ರಾಟರ ಆದೇಶದಿಂದ ಸೋಮನಾಥನಿಗೆ ಮಹದಾನಂದವಾಯಿತು. ಅದೊಂದು ತನಗೆ ದೊರೆತ ಮಹಾಗೌರವವೆಂದು ಭಾವಿಸಿ ವಿದ್ವಜ್ಜನರಿಂದ ತುಂಬಿದ ರಾಜಸಭೆಯಲ್ಲಿ ಶಿಷ್ಯರಾದ ಗಾನವಿಶಾರದರೂ ಅವಳಿ ಸಹೋದರರೂ ಆದ ಕಂಬುಕಂಠ - ಕಲಕಂಠರೆಂಬ ತರುಣರಿಂದ ಶ್ರೀವ್ಯಾಸರಾಜಗುರುಪಾದರ ಮುಂದೆ ಅವರ ಕಟಾಕ್ಷವೀಕ್ಷಣರೂಪ ಪ್ರಸಾದಸೂಚಕ ಅನುಮತಿಯಂತೆ ಸಮಸ್ತ ವಿದ್ವಜ್ಜನರ ಸಮೂಹದ ಶ್ರವಣಗಳಿಗೆ ಆಭರಣದಂತಿರುವ ಉಪಮಾನವೀಯವಳವಲ್ಲದ “ಶ್ರೀವ್ಯಾಸಯೋಗಿಚರಿತಮ್” ಕಾವ್ಯವನ್ನು ವಾಚನಮಾಡಿಸಿದನು.
ಕಂಬುಕಂಠ-ಕಲಕಂಠರು ಒಂದೊಂದು ಘಟ್ಟಗಳನ್ನು ಒಂದೊಂದು ದಿನದಂತೆ ಆರು ಉಲ್ಲಾಸಯುಕ್ತವಾದ ಆ ಮಹಾಕಾವ್ಯವನ್ನು ಸುಸ್ವರ ಕಂಠದಿಂದ ವಾಚನಮಾಡಿದರು. ಆಗ ವಿದ್ವಜ್ಜನರು, ಕವಿಗಳು, ಸಾಹಿತಿಗಳು “ಸಾಧು-ಸಾಧು” ಎಂದು ಹರ್ಷಧ್ವನಿಗೈದರು. ಶ್ರೀವ್ಯಾಸರಾಜರು ಕರುಣಾರಸಪೂರ್ಣ ನೇತ್ರರಾಗಿ, ಸೋಮನಾಥನನ್ನು ನೋಡಿ ಶಿರಃಕಂಪನ ಮಾಡುತ್ತಿದ್ದರು. ಸಮಸ್ತ ವಿದ್ವಾಂಸರೂ ಏಕಕಂಠದಿಂದ ಶ್ರೀವ್ಯಾಸರಾಜರ ಜಯಜಯಕಾರ ಮಾಡಿದರು ಮತ್ತು ಸೋಮನಾಥ ಕವಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಆ ನಂತರ ಸೋಮನಾಥನು ಆ ಮಹಾಚಂಪೂಕಾವ್ಯವನ್ನು ಭಕ್ತಿ-ಶ್ರದ್ಧೆಗಳಿಂದ ವ್ಯಾಸರಾಜರ ಪಾದಕಮಲಗಳಲ್ಲಿ ಸಮರ್ಪಿಸಿ ಸಾಷ್ಟಾಂಗ ನಮಸ್ಕಾರ ಮಾಡಿದನು. ಆ ಕಾವ್ಯವನ್ನಾಲಿಸಿ ಅಚ್ಯುತದೇವರಾಯನಿಗಾದ
ಸಂತೋಷ ವರ್ಣಿಸಲು ಅಸದಳ!
ವ್ಯಾಸಭಗವಾನರು ಅಂದಿನ ವಿದ್ವತ್ಸಭೆಯಲ್ಲಿ ಅತ್ಯಂತ ಶ್ರೇಷ್ಠ ಕೃತಿಯನ್ನು ರಚಿಸಿ ಸುರಸರಸ್ವತಿಯ ವಾಹ್ಮಯ ಭಂಡಾರಕ್ಕೆ ಅಸದೃಶ ಕೊಡುಗೆ ನೀಡಿದ ಸೋಮನಾಥನನ್ನು ಸಮಕಾಲಿಕ ಕವಿಗಣದಲ್ಲಿ ಅಗ್ರೇಸರನಾದ ಮಹಾಕವಿಯೆಂದು ಶ್ಲಾಘಿಸಿ ವಿಜಯನಗರದ ಸಂಸ್ಕೃತ ವಿಶ್ವವಿದ್ಯಾನಿಲಯದ ಪರವಾಗಿ ಕುಲಪತಿಗಳಾಗಿ ತಾವು ಸೋಮನಾಥ ಮಹಾಕವಿಯನ್ನು ವಿದ್ವದ್ಯೋಗ್ಯರೀತಿಯಲ್ಲಿ ಸನ್ಮಾನಿಸುತ್ತಿರುವುದಾಗಿ ಹೇಳಿ ಸುವರ್ಣಹಾರ, ಕಂಕಣ, ಶಾಲುಜೋಡಿ, ಪೀತಾಂಬರ, ಕನಕನಾಣ್ಯಗಳನ್ನು ಫಲಮಂತ್ರಾಕ್ಷತೆಯೊಡನಿತ್ತು ಆಶೀರ್ವದಿಸಿದರು. ಸುಮಾರು ಎಂಬತ್ತು ವರ್ಷ ವಯಸ್ಸಿನ ಸೋಮನಾಥನು ಆಗ ಸಭೆಯಲ್ಲಿ ಮೈಮರೆತು ಮಾತನಾಡಿ “ಈ ಮಹಾಕೃತಿಯನ್ನು ಹಣಕ್ಕಾಗಿ, ಗೌರವಕ್ಕಾಗಿ, ಕೀರ್ತಿಗಾಗಿ ರಚಿಸಿದವನಲ್ಲ! ಕೆಲ ಅಸೂಯಾಪರರಾದ ಕುಮತಿಗಳು ನನ್ನ ಈ ಕಾವ್ಯರಚನೆಗೆ ಕಾರಣವನ್ನು ಅನ್ಯಥಾ ಭಾವಿಸಿ ನಿಂದಿಸುತ್ತಿರುವುದಾಗಿ ಕೇಳಿದ್ದೇನೆ. ನನ್ನೀ ಕೃತಿಗೆ ಬಹುಮಾನವೆಂದರೆ ವ್ಯಾಸಭಗವಾನರ ಒಂದೇ ಒಂದು ಶಿರಃಕಂಪನ! ಅದೇ ನನಗೆ ನೂರು ಸುವರ್ಣ ಮೇರುವಿಗೆ ಸದೃಶವಾಗಿದೆ.237 ಇಂತಹ ವಿಭೂತಿಪುರುಷರ, ಮಹಾಮಹಿಮರ ಚರಿತೆಯನ್ನು ರಚಿಸುವ ಭಾಗ್ಯ ನನಗೆ ದೊರೆತುದು ನಮ್ಮ ಪೂರ್ವಿಕರ ಪುಣ್ಯವೆಂದೇ ನಾನು ನಂಬಿದ್ದೇನೆ. ಗುರುಪಾದರ ಪೂರ್ಣಾನುಗ್ರಹ ಈ ಪಾಮರನಲ್ಲಿ ಶಾಶ್ವತವಾಗಿರಬೇಕೆಂದು ಪ್ರಾರ್ಥಿಸುತ್ತೇನೆ” ಎಂದನು. ಆಗ ಸರ್ವರೂ ಹರ್ಷಧ್ವನಿ - ಕರತಾಡನಗಳಿಂದ ಸೋಮನಾಥನನ್ನು ಕೊಂಡಾಡಿದರು.
ಸ್ವಾಭಾವಿಕವಾಗಿ ವಿದ್ವಜ್ಜನ ಪಕ್ಷಪಾತಿಯೂ, ಉದಾರಿಯೂ, ವಿದ್ಯಾವಂತರನ್ನು ಸದಾ ಗೌರವಿಸುವವನೂ ಆದ ಕನ್ನಡ ಸಾಮ್ರಾಜ್ಯಾಧೀಶನಾದ ಅಚ್ಯುತದೇವರಾಯನು ಮರುದಿನ ಸೋಮನಾಥನನ್ನು ಪಾಲಕಿಯಲ್ಲಿ ವಿಜೃಂಭಣೆಯಿಂದ ಮೆರೆಸಿ ಕರೆತಂದು ರಾಜಸಭೆಯಲ್ಲಿ ಶ್ರೀವ್ಯಾಸಭಿಕ್ಷುಗಳ ಸಮಕ್ಷ ಸಾಮ್ರಾಜ್ಯಕ್ಕೆ ಯೋಗ್ಯವಾದ ರೀತಿಯಲ್ಲಿ ಮುತ್ತಿನ ಹಾರ, ರತ್ನಪದಕ, ಕರ್ಣಕುಂಡಲ, ರತ್ನಖಚಿತ ಸಿಂಹಲಲಾಟ ಕಡಗಗಳು, ಶಾಲುಜೋಡಿ, ಜರಿಯ ಉಷ್ಣಷ, ಬೆಲೆ ಬಾಳುವ ಪೀತಾಂಬರಗಳು, ಸುವರ್ಣರಜತ ನಾಣ್ಯಗಳನ್ನು ಸ್ವತಃ ನೀಡಿ ಶ್ರೀವ್ಯಾಸಯೋಗಿಚರಿತೆಯನ್ನು ಶಿರದಲ್ಲಿಟ್ಟು ಕುಳಿತ ಮಹಾಕವಿಯನ್ನು ಭೂಸ್ವಾಸ್ಥಿದಾನಪೂರ್ವಕ ಸನ್ಮಾನಿಸಿದನು.
ಅನೇಕ ಪಂಡಿತರು “ವ್ಯಾಸಯೋಗಿಚರಿತಮ್” ಚಂಪೂಕಾವ್ಯದ ಐತಿಹಾಸಿಕ ಮಹತ್ವ, ಶ್ರೀವ್ಯಾಸರಾಜರ ಅಗಮ್ಯ ಮಹಿಗಮ - ವಿದ್ವಾವೈಭವ - ಲೋಕಕಾರುಣ್ಯ, ವಿದ್ವಜ್ಜನ ಪಕ್ಷಪಾತ, ಪಂಡಿತಾದಿಗಳಿಗೆ ಅವರು ನೀಡುತ್ತಿರುವ ಆಶ್ರಯ, ಪ್ರೋತ್ಸಾಹ ವಿಜಯನಗರದ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿ ಹತ್ತಾರು ಸಹಸ್ರ ಜನ ವಿದ್ಯಾರ್ಥಿಗಳಿಗೆ ಜ್ಞಾನದಾನ ಮಾಡುತ್ತಾ, ಇಂದು ಭಾರತದಲ್ಲೇ ಏಕೈಕ ಸಂಸ್ಕೃತ ವಿಶ್ವವಿದ್ಯಾನಿಲಯವೆಂದು ಖ್ಯಾತಿ ಗಳಿಸುವಂತೆ ಮಾಡಿರುವುದು ಮುಂತಾದ ಶ್ರೀಗುರುಗಳ ವೈಶಿಷ್ಟಾದಿಗಳನ್ನೂ, ಮಹಾಕವಿ ಸೋಮನಾಥನ ಪಾಂಡಿತ್ಯ, ಪ್ರತಿಭೆ, ಕಾವ್ಯರಚನಾ ಚಾತುರ್ಯಾದಿಗಳನ್ನೂ, ಅಚ್ಯುತದೇವರಾಯನ ಔದಾರ್ಯವನ್ನೂ ಬಣ್ಣಿಸಿ ಭಾಷಣಮಾಡಿ “ಈ “ಶ್ರೀವ್ಯಾಸಯೋಗಿಚರಿತಮ್” ಚಂಪೂಕಾವ್ಯವು ವಿದತಪಂಚದಲ್ಲಿ ವಿಖ್ಯಾತವಾಗಿ ಸೋಮನಾಥ ಕವಿಗಳ ಕೀರ್ತಿ ದಿಗಂತ ವಿಶ್ರಾಂತವಾಗುವುದರಲ್ಲಿ ಸಂದೇಹವಿಲ್ಲ” ಎಂದು ಏಕಕಂಠರಾಗಿ ಘೋಷಿಸಿದರು. ಪ್ರಚಂಡ ಕರತಾಡನ - ಹರ್ಷಧ್ವನಿಗಳಿಂದ ಸಮಸ್ತ ರಾಜಸಭೆಯು ತನ್ನ ಆನಂದವನ್ನು ವ್ಯಕ್ತಪಡಿಸಿತು.
ಸೋಮನಾಥ ಕವಿಯು ಶ್ರೀವ್ಯಾಸತೀರ್ಥರ ಅನುಗ್ರಹದಿಂದ ತನಗೆ ಭಾರತದೇಶದಲ್ಲೇ ಏಕೈಕ ಹಿಂದೂ ಸಾಮ್ರಾಜ್ಯವೆನಿಸಿದ ವಿಜಯನಗರದ ಕನ್ನಡ ಸಾಮ್ರಾಜ್ಯಾಧೀಶನಿಂದ ಇಂಥ ಗೌರವ - ಸನ್ಮಾನಗಳು ದೊರಕಿತೆಂದು ಶ್ರೀಗಳವರಿಗೆ ಸಾಷ್ಟಾಂಗವೆರಗಿ ತನ್ನ ಭಕ್ತಿ-ಶ್ರದ್ಧೆಗಳನ್ನು ವಿನಮ್ರಭಾವದಿಂದ ವಿಜ್ಞಾಪಿಸಿದನು.
ಸೋಮನಾಥ ಕವಿಯು ಮುಂದೆ ನಾಲ್ಕಾರು ದಿನ ವಿಜಯನಗರದಲ್ಲಿದ್ದು ತನ್ನ ಮಿತ್ರರು, ಶಿಷ್ಯರುಗಳೊಡನೆ ಶ್ರೀವಾಸತೀರ್ಥರ ಆಶೀರ್ವಾದ - ಫಲಮಂತ್ರಾಕ್ಷತೆ ಪಡೆದು ಗೋವಿಂದತೀರ್ಥ ಪುರಾಗ್ರಹಾರಕ್ಕೆ ಪ್ರಯಾಣ ಬೆಳೆಸಿದನು.