ಕಲಿಯುಗ ಕಲ್ಪತರು ನಾಲ್ಕನೆಯ ಉಲ್ಲಾಸ ಶ್ರೀವ್ಯಾಸರಾಜಯತಿಸಾರ್ವಭೌಮರ ೫೪. ಉಡುಪಿ ಯಾತ್ರೆ
ಸಾರ್ವಭೌಮ ಅಚ್ಯುತರಾಯನು ಒಂದು ದಿನ ಶ್ರೀವ್ಯಾಸರಾಜರ ದರ್ಶನಕ್ಕೆ ಬಂದು “ಗುರುದೇವ, ತಮ್ಮ ಪ್ರಿಯ ವಿದ್ಯಾಶಿಷ್ಯರಾದ ಪೂಜ್ಯ ಶ್ರೀವಾದಿರಾಜತೀರ್ಥರು ತಾವು ಕೃಷ್ಣಮಠದ ಪೀಠವೇರಿ ನೆರವೇರಿಸಲಿರುವ ಪರ್ಯಾಯಕ್ಕೆ ಬರಬೇಕೆಂದು ಶ್ರೀಮುಖ ಕಳುಹಿಸಿದ್ದಾರೆ. ಅದರಲ್ಲಿ ಅವರು “ನಮ್ಮ ಗುರುಪಾದರಾಜ ಪೂಜ್ಯ ಶ್ರೀವ್ಯಾಸಯೋಗೀಂದ್ರರಿಗೂ ವಿಜ್ಞಾಪನಾ ಪತ್ರ ಬರೆದುಕೊಂಡು ಪರ್ಯಾಯಕ್ಕೆ ದಯಮಾಡಿಸಬೇಕೆಂದು ಕೋರಿದ್ದೇವೆ. ನೀವು ಮತ್ತು ಶ್ರೀಗುರುಚರಣರು ಅವಶ್ಯವಾಗಿ ಶ್ರೀಕೃಷ್ಣಪರ್ಯಾಯಕ್ಕೆ ಬಂದು ಉತ್ಸವವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ಅಪೇಕ್ಷಿಸುತ್ತೇವೆ” ಎಂದು ನನಗೆ ಆದೇಶ ನೀಡಿದ್ದಾರೆ. ಎಲ್ಲ ವಿಚಾರವನ್ನೂ ಅರಿಕೆಮಾಡಿದ್ದೇನೆ. ಅಪ್ಪಣೆಯಾದಂತೆ ನಡೆಯಲು ಸಿದ್ಧನಿದ್ದೇನೆ” ಎಂದು ವಿಜ್ಞಾಪಿಸಿದನು.
ಶ್ರೀವ್ಯಾಸತೀರ್ಥರು “ರಾಜನ್, ನಮ್ಮ ಪ್ರೀತ್ಯಾಸ್ಪದ ಶಿಷ್ಯರಲ್ಲಿ ಶ್ರೀವಾದಿರಾಜರು ಜ್ಞಾನಿಗಳು. ಅವರು ಪರ್ಯಾಯಕ್ಕೆ ಆಹ್ವಾನಿಸಿ ನಮಗೂ ಬರೆದುಕೊಂಡಿದ್ದಾರೆ. ದೈತಸಿದ್ಧಾಂತಭಾಗೀರಥಿಯು ಹೊರಹೊಮ್ಮಿದ, ಶ್ರೀಮದಾಚಾರ್ಯರ ಜನ್ಮಭೂಮಿಯೂ ಕಾರ್ಯಕ್ಷೇತ್ರವಾ ಆಗಿದ್ದ ಆ ಪವಿತ್ರ ಕ್ಷೇತ್ರಕ್ಕೆ ಹೋಗಿ ನಮ್ಮ ಉದ್ಧಾರಕ ಸ್ವಾಮಿಯಾದ ಶ್ರೀಕೃಷ್ಣನ ದರ್ಶನ-ಪೂಜಾದಿಗಳಿಂದ ಪುನೀತರಾಗಲು ಆಶಿಸಿದ್ದೇವೆ. ಶೀಘ್ರವಾಗಿ ನಾವು ಯಾತ್ರೆಗೆ ಹೊರಡಲಿದ್ದೇವೆ. ಕನ್ನಡ ಸಾಮ್ರಾಟನೂ, ಶ್ರೀಹರಿಭಕ್ತನೂ ಆದ ನೀನೂ ನಮ್ಮ ಜೊತೆಗೆ ಬಂದರೆ ನಮಗೆ ಸಂತೋಷವಾಗುವುದು. ಇದರಿಂದ ನಿನ್ನ ಮತ್ತು ಸಾಮ್ರಾಜ್ಯದ ಅಭ್ಯುದಯವಾಗುವುದು” ಎಂದು ಆಜ್ಞಾಪಿಸಿದರು.
ಅಚ್ಯುತದೇವರಾಯನು ಮುದಗೊಂಡು “ಮಹಾಸ್ವಾಮಿ, ನಾನು ಮಿತಪರಿವಾರದೊಡನೆ ಹೊರಡಲಾಶಿಸಿದ್ದೇನೆ. ಗುರುಪಾದರು ಮಹಾಸಂಸ್ಥಾನದೊಡನೆ ತಮ್ಮ ಈ ಶಿಷ್ಯನ ಜೊತೆಯಲ್ಲೇ ದಯಮಾಡಿಸಲು ಸಕಲ ವ್ಯವಸ್ಥೆಯನ್ನೂ ಮಾಡುತ್ತೇನೆ. ಒಂದು ಸುಮುಹೂರ್ತವನ್ನು ತಾವು ನಿಷ್ಕರ್ಷಿಸಿ ಆಜ್ಞಾಪಿಸಿದಲ್ಲಿ ಅನುಕೂಲವಾಗುವುದು” ಎಂದು ಬಿನ್ನವಿಸಿದನು. ಶ್ರೀಯವರು “ಗೀತಾಜಯಂತಿಯ ತರುವಾಯ ಮಾರ್ಗಶಿರ ಶುಕ್ಲ ತ್ರಯೋದಶಿ ದಿನ ಪ್ರಯಾಣಕ್ಕೆ ಪ್ರಶಸ್ತವಾಗಿದೆ” ಎಂದು ಹೇಳಲು ಅಂದೇ ಯಾತ್ರೆಗೆ ಹೊರಡಲು ಎಲ್ಲ ವ್ಯವಸ್ಥೆ ಮಾಡುವುದಾಗಿ ವಿಜ್ಞಾಪಿಸಿ ಅಚ್ಯುತದೇವರಾಯನು ಫಲಮಂತ್ರಾಕ್ಷತೆ ಸ್ವೀಕರಿಸಿ ಅರಮನೆಗೆ ತೆರಳಿದನು.
ಉಡುಪಿಯಲ್ಲಿ ಮೊದಲು ಶ್ರೀ ಅಷ್ಟಮಠಾಧೀಶರು ಒಬ್ಬೊಬ್ಬರು ಎರಡೆರಡು ತಿಂಗಳು ಕಾಲ ಶ್ರೀಕೃಷ್ಣಪೂಜಾ, ಪಾಠ-ಪ್ರವಚನಾದಿಕಾರ್ಯಮಾಡುವ ಸಂಪ್ರದಾಯವಿದ್ದು, ಅದು ೧೫೩೨ ರವರೆಗೆ ನಡೆದುಬಂದಿತ್ತು. ಶ್ರೀವಾದಿರಾಜ ಗುರುಚರಣರು ಶ್ರೀವ್ಯಾಸರಾಜಗುರುಸಾರ್ವಭೌಮರಲ್ಲಿ ಸಕಲ-ಸಚ್ಛಾಸ್ತ್ರಗಳನ್ನು ವ್ಯಾಸಂಗಮಾಡಿ ಗುರುಗಳ ಸನ್ನಿಧಾನದಲ್ಲಿದ್ದಾಗ ಶ್ರೀವಾಸರಾಜರು “ಎರಡು ವರ್ಷಗಳ ಕಾಲ ಪೂಜಾರಾಧನೆಯ ಪರ್ಯಾಯವನ್ನು ಏರ್ಪಡಿಸಿದರೆ ವಿಶೇಷಾಕಾರವಾಗಿ ದೇವರ ಸೇವೆ ಮಾಡಬಹುದು ಮತ್ತು ಎರಡು ವರ್ಷಗಳ ಕಾಲ ಪಾಠ-ಪ್ರವಚನ ನೆರವೇರಿಸಲೂ ಅನುಕೂಲವಾಗುವುದು. ಅಲ್ಲಿನ ಅಭಿವೃದ್ಧಿಕಾರ್ಯಗಳನ್ನೂ ಮಾಡಬಹುದು. ಮತ್ತೆ ೧೪ ವರ್ಷಗಳ ಕಾಲ ದೇಶಸಂಚಾರ, ಸಿದ್ದಾಂತಪ್ರಸಾರ, ತೀರ್ಥಕ್ಷೇತ್ರಯಾತ್ರೆ ಮಾಡಲೂ ಅನುಕೂಲವಾಗುವುದು” ಎಂದು ಸಲಹೆ ನೀಡಿ “ನಿಮಗಿದು ಯುಕ್ತವೆನಿಸಿದರೆ ಅದರಂತೆ ಆಚರಿಸಬಹುದು? ಎಂದು ಅಪ್ಪಣೆ ಮಾಡಿದಾಗ ಶ್ರೀವಾದಿರಾಜರಿಗೆ ಗುರುಗಳ ಸಲಹೆ ಮನಸ್ಸಿಗೆ ಹಿಡಿಸಿತು. ಆಗ ಅವರು “ಗುರುವರ್ಯ, ನಮ್ಮ ಪರ್ಯಾಯ ಸಮೀಪಿಸುತ್ತಿರುವುದರಿಂದ ಈಗಲೇ ನಾವು ಉಡುಪಿಗೆ ಹೋಗಿ ಇತರ ಮಠಾಧೀಶರೊಡನೆ ಸಮಾಲೋಚನೆ ಮಾಡಿ ನಮ್ಮ ಪರ್ಯಾಯವನ್ನು ತಮ್ಮ ಸಲಹೆಯಂತೆಯೇ ನೆರವೇರಿಸಲು ಯತ್ನಿಸುತ್ತೇವೆ” ಎಂದು ಹೇಳಿ ಶ್ರೀಗುರುವರರ ಅಪ್ಪಣೆ ಪಡೆದು ಉಡುಪಿಗೆ ಪ್ರಯಾಣ ಬೆಳೆಸಿ ಎರಡು ವರ್ಷಗಳ ಪರ್ಯಾಯದ ಸಂಪ್ರದಾಯವನ್ನು ಸರ್ವಯತಿಗಳ ಸಮ್ಮತಿಯಂತೆ ತಮ್ಮ ಪರ್ಯಾಯದಿಂದಲೇ ಪ್ರಾರಂಭಿಲು ಪೂರ್ವಭಾವಿ ಸಿದ್ಧತೆ ಮಾಡಿಕೊಂಡು, ಶ್ರೀಕೃಷ್ಣಮಠ, ಶ್ರೀಸೋದೇಮಠ, ರಥಬೀದಿಗಳನ್ನು ತಳಿರು-ತೋರಣ, ಧ್ವಜಪತಾಕೆಗಳಿಂದ ಶೃಂಗರಿಸಿ ಪರ್ಯಾಯ ಪೀಠವೇರಲು ಎಲ್ಲ ಸನ್ನಾಹಗಳನ್ನೂ ಮಾಡಿಕೊಂಡೇ ಶ್ರೀವ್ಯಾಸರಾಜ-ಅಚ್ಯುತದೇವರಾಯರಿಗೆ ಪರ್ಯಾಯಕ್ಕೆ ಆಹ್ವಾನ ಕಳುಹಿಸಿದ್ದರು.
ಕನ್ನಡ ಸಾಮ್ರಾಜ್ಯದ ರಾಜಗುರುಗಳೂ, ಜ್ಞಾನಿನಾಯಕರೂ ಶ್ರೀಮದಾಚಾರ್ಯ ಮಹಾಸಂಸ್ಥಾನಾಧೀಶರೂ ಆದ ಶ್ರೀವ್ಯಾಸರಾಜಗುರುಸಾರ್ವಭೌಮರು ಮತ್ತು ಕನ್ನಡ ಚಕ್ರೇಶ್ವರರೂ ಪರ್ಯಾಯಕ್ಕೆ ಆಗಮಿಸುವ ವಿಚಾರ ತಿಳಿದು ಎಲ್ಲ ಕಡೆಗಳಿಂದ ಹತ್ತಿಪ್ಪತ್ತು ಸಹಸ್ರಜನ ಶ್ರೀಕೃಷ್ಣಭಕ್ತರಾದ ಆಸ್ತಿಕರು ಉಡುಪಿಗೆ ಬಂದು ಸೇರಿದರು. ಪರ್ಯಾಯ ಪೀಠವೇರುವ ಶ್ರೀವಾದಿರಾಜರು ತಮ್ಮ ವಿದ್ಯಾಗುರುಗಳೂ, ಮಹಾಸಂಸ್ಥಾನಾಧಿಪತಿಗಳೂ ಆದ ಶ್ರೀವ್ಯಾಸರಾಜರನ್ನು ಹಾಗೂ ಸಾಮ್ರಾಟನನ್ನು ಸ್ವಾಗತಿಸಲು ಸಮಸ್ತ ಬಿರುದಾವಲಿ, ಪೂರ್ಣಕುಂಭ ಮತ್ತು ಮಂಗಳವಾದ್ಯಗಳೊಡನೆ ಅಷ್ಟಮಠದ ಪಂಡಿತರು, ಧಾರ್ಮಿಕರುಗಳನ್ನು ತಮ್ಮ ಪೀಠದ ಅಧಿಕಾರಿಗಳನ್ನು ಉಡುಪಿಯ ಎಲ್ಲೆಯಲ್ಲಿ ನಿರ್ಮಿಸಿದ್ದ ಹಸಿರುವಾಣಿ ಚಪ್ಪರದ ಬಳಿಗೆ ಕಳುಹಿಸಿದ್ದರು.
ಸ್ವಲ್ಪವೇಳೆಯಲ್ಲಿಯೇ ಶ್ರೀವ್ಯಾಸರಾಜರು ಸಾಮ್ರಾಟನೊಡಗೂಡಿ ಚಿತ್ತೈಸಿದರು. ಕನ್ನಡ ಸಾಮ್ರಾಜ್ಯದ ಶ್ರೀಮದಾಚಾರ್ಯರ ಮಹಾಪೀಠದ ಸಮಸ್ತ ಬಿರುದು-ಬಾವಲಿಗಳೊಡನೆ, ಆನೆ, ಒಂಟೆ, ಕುದುರೆ, ಸಮವಸ್ತ್ರಧರಿಸಿದ ಸೈನಿಕರು ಸಾಲುಸಾಲುಗಟ್ಟಿ ಬಂದು ಸೇರಿದರು. ಪರ್ಯಾಯ ಪೀಠದ ಅಧಿಕಾರಿಗಳು, ಮಠಗಳ ಪ್ರತಿನಿಧಿಗಳು, ಪಂಡಿತರು, ಆಸ್ತಿಕರು, ಭಕ್ತರುಗಳು ಪೂರ್ಣಕುಂಭದೊಡನೆ ಸ್ವಾಗತಿಸಿ, ಶ್ರೀವಾದಿರಾಜ ಶ್ರೀಪಾದಂಗಳವರ ಆಶಯದಂತೆ ಪರ್ಯಾಯ ಮಠದ ಸುವರ್ಣ ಪಾಲಕಿಯಲ್ಲಿ ಶ್ರೀಮೂಲಗೋಪಾಲಕೃಷ್ಣ, ಪಟ್ಟಾಭಿರಾಮ, ವೇದವ್ಯಾಸದೇವರ ಪೆಟ್ಟಿಗೆಯನ್ನಿಟ್ಟು ಅಲಂಕರಿಸಿ ನಂತರ ಮಹಾಸಂಸ್ಥಾನದ ಬಂಗಾರದ ಪಾಲಕಿಯಲ್ಲಿ ಶ್ರೀಯವರನ್ನು ಮಂಡಿಸಿದರು. ಸಾಮ್ರಾಟ್ ಅಚ್ಯುತದೇವರಾಯರು ಅಲಂಕೃತ ಸುಂದರ ಶ್ವೇತಹಯವನ್ನೇರಿದರು. ಪರ್ಯಾಯ ಮಠದ ಅಧಿಕಾರಿಗಳು ಮತ್ತು ಪುರಪ್ರಮುಖರೊಬ್ಬರು ಚಾಮರ ಹಾಕುತ್ತಿರಲು ವಾದ್ಯವೈಭವ, ಹರಿದಾಸರ ಭಜನೆ, ಪಂಡಿತರ ವೇದಘೋಷ-ತಾಳ, ಸ್ತುತಿಪಾಠಕರ ಬಿರುದಾವಳೀ ಘೋಷಣೆಗಳೊಡನೆ ಮೆರವಣಿಗೆ ಹೊರಟಿತು. ಉಡುಪಿ ಸೀಮಾದಿಂದ ಶ್ರೀಕೃಷ್ಣ ಮಠದವರೆಗೆ ಹತ್ತಾರು ಸಹಸ್ರಜನರು ರಸ್ತೆಯ ಉಭಯ ಪಾರ್ಶ್ವಗಳಲ್ಲಿ ನಿಂತು ಕರತಾಡನ - ಜಯಜಯಕಾರ ಮಾಡುತ್ತಾ, ಲಾಜಾಪುಷ್ಪವೃಷ್ಟಿಮಾಡುತ್ತಿರಲು ಹೆಜ್ಜೆ ಹೆಜ್ಜೆಗೆ ಸುಮಂಗಲಿಯರು ಕದಲಾರತಿ ಎತ್ತುತ್ತಿರಲು ಪೌರರು, ಧಾರ್ಮಿಕರು ಪುಷ್ಪಾಹಾರಗಳನ್ನರ್ಪಿಸುತ್ತಿರಲು ಮೆರವಣಿಗೆಯು ರಥದ ಬೀದಿಗೆ ಬಂದಾಗ ಏಳು ಮಠದ ಶ್ರೀಯತಿವರ್ಯರು ಶ್ರೀವ್ಯಾಸರಾಜರನ್ನು, ಸಾಮ್ರಾಟರನ್ನು ಸ್ವಾಗತಿಸಿದರು. ಅಲ್ಲಿ ಸಾಮ್ರಾಟ ಕುದುರೆಯಿಂದಿಳಿದು ಸುವರ್ಣ ಹಿಡಿಕೆಯ ಚಾಮರ ಹಾಕುತ್ತಾಗುರುಗಳನ್ನು ಸೇವಿಸುತ್ತಿರಲು ಶ್ರೀಯವರು ಪಾಲಕಿಯಲ್ಲಿ ಮಂಡಿಸಿ ಶ್ರೀಕೃಷ್ಣಮಠದ ಮಹಾದ್ವಾರದ ಬಳಿ ಬಂದರು.
ಕೃಷ್ಣಮಠದ ಮುಂದೆ ಗುರುಗಳ ಆಗಮನವನ್ನು ನಿರೀಕ್ಷಿಸುತ್ತಾ ನಿಂತಿದ್ದ ಶ್ರೀವಾದಿರಾಜರು ಗುರುಗಳು ಬಂದ ಠೀವಿ, ವೈಭವವನ್ನು ಕಂಡು ಮೈಮರೆತು ಹಾಡಿದರು.
ರಾಗ : ಕೇದಾರ
“ಅನೆ ಬರುತ್ತಿದಿಕೊ ವ್ಯಾಸರಾಯರೆಂಬಾನೆ ಬರುತಿದಿಕೋ
ಮುರಿಯಲು ದುರುಳರ ಗರುವವನೆ ಮುನ್ನ
ಸಿರಿಹಯವದನನ ಅರಮನೆಯ ಪಟ್ಟದ
ತಾಳ : ಛಾಪು
ಆನಂತರ ಗುರುದರ್ಶನದಿಂದ ಪುಳಕಿತಗಾತ್ರರಾಗಿ ಗುರುಪಾದರತ್ತ ಧಾವಿಸಿ ಬಂದು ಸಾಷ್ಟಾಂಗವೆರಗಲಿರುವಾಗ ಶ್ರೀವ್ಯಾಸರಾಜರು ಅವರನ್ನು ಭರದಿಂದ ಆಲಿಂಗಿಸಿದರು. ಗುರು-ಶಿಷ್ಯರಿಬ್ಬರ ಕಣ್ಣಿನಲ್ಲಿಯೂ ಆನಂದಬಾಷ್ಪ ಹರಿಯುತ್ತಿದೆ. ಸಾಮ್ರಾಟ ಈ ಗುರು-ಶಿಷ್ಯ ವಾತ್ಸಲ್ಯ-ಭಕ್ತಿಗಳನ್ನು ಕಂಡು ಬೆರಗಾದ. ಆ ರಮಣೀಯ ದೃಶ್ಯವನ್ನು ಕಂಡು ಸಹಸ್ರಾರು ಜನ “ಆಹಾ ಎಂಥ ಗುರುಗಳು! ಎಂಥಾ ಶಿಷ್ಯರು! ಈ ಪಾವನ ನೋಟವನ್ನು ಕಂಡ ನಾವೇ ಧನ್ಯರು” ಎಂದು ಉದ್ದರಿಸಿದರು.
ಆನಂತರ ಶ್ರೀವಾದಿರಾಜರು ಅಚ್ಯುತದೇವರಾಯನು ನಮಸ್ಕರಿಸಿದಾಗ ಅವನನ್ನು ಆಶೀರ್ವದಿಸಿ ಗುರುಗಳಿಗೆ ಹಸ್ತಲಾಘವವಿತ್ತು, ಸಾಮ್ರಾಟರನ್ನು ಸ್ವಾಗತಿಸಿ ಕರೆತಂದು ಶ್ರೀಕೃಷ್ಣನ ದರ್ಶನ ಮಾಡಿಸಿದರು. ದೇವರ ದರ್ಶನದಿಂದ ಆನಂದತುಂದಿಲರಾದ ಶ್ರೀವ್ಯಾಸಮುನಿಗಳು “ಶಮಯನ್ ಭವಸಂತಾಪಮ್ | ರಮ್ಯನ್ ಸಾಧುಜಾತಕಾನ್ | ಕೃಷ್ಣಮೇಘಃ ಕೃಪಾದೃಷ್ಟಿವೃಷ್ಟಾ ಪುಷ್ಪಾತು ಮಾಮಪಿ |' ಎಂದು ಸ್ತುತಿಸಿ ನಮಸ್ಕರಿಸಿದರು.
ಅಂದು ಕೃಷ್ಣನಿಗೆ ಮೋಹಿನಿಯ ಅಲಂಕಾರವನ್ನು ಮಾಡಿದ್ದರು. ಆ ವೈಭವವನ್ನು ಕಂಡು ಭಕ್ತಿಪ್ರಕರ್ಷದಿಂದ ರೋಮಾಂಚಿತರಾಗಿ ತದೇಕದೃಷ್ಟಿಯಿಂದ ಜಗತ್ತನ್ನೇ ಮೋಹಗೊಳಿಸುವ ಮೋಹಿನೀರೂಪದಿಂದ ಕಂಗೊಳಿಸುತ್ತಿದ್ದ ಶ್ರೀಕೃಷ್ಣನನ್ನು ನೋಡುತ್ತಿರುವಾಗ ಅವರಿಗೆ ಸಾಕ್ಷಾತ್ ಶ್ರೀವಿಷ್ಣು ಅಮೃತಮಥನಕಾಲದಲ್ಲಿ ತಾನು ಸ್ವೀಕರಿಸಿದ್ದ ಮೋಹಿನೀರೂಪವನ್ನೇ ತೋರಿಸುತ್ತಾ ಮಂದಹಾಸ ಬೀರಲಾರಂಭಿಸಿದಂತಾಯಿತು. ಕೂಡಲೇ ಅವರ ಮುಖದಿಂದ ಶ್ರೀಕೃಷ್ಣನ ಅಂದಿನ ರೂಪದ ಸರ್ವಾಂಗವರ್ಣನಪರವಾದ ಒಂದು ಅದ್ಭುತ ದಂಡಕರೂಪ ಕೃತಿಯು ಹೊರಹೊಮ್ಮಿತು!
ರಾಗ : ರೇಗುಪ್ತಿ
ತಾಳ : ಆದಿ
“ಮರುಗ ಮೊಲ್ಲೆ ಮಲ್ಲಿಗೆ ಜಾಜಿ ಸಂಪಿಗೆ | ತುರುಬಿನೊಳೊಪ್ಪುವ ಚೂಡಾರತುನ ಮಾಣಿಕದ ಮೆರೆವ ಚಂದ್ರ ಸೂರಿಯ ಮುಡಿಯೊಳೊಪ್ಪೆ | ಕರುಳುಗೂದಲು ಬೈತಲೆ ಥಳವುಗಳ ಮೃಗನಾಭಿ ತಿಲಕನೊಸಿಲಲಿ ಹಜ್ಜೆ ಬಟ್ಟು | ಮದನ ಸಿಂಗಾಡಿ ಸೋಲಿಸುವ ಪುರ್ಬುಗಳ ಕಡುತೆ ಗಂಗಳ ಥಾಳ ಜಗವ ಮೋಹಿಸುತಲಿಪ್ಪ | ಕಡೆಗಣ್ಣುಗೆಂಪು ಹೆಜ್ಜೆಯ ರೇಖೆಗಳ ಬೆಡಗು ಮುತ್ತಿನ ಮೂಗುತಿ ನಾಸಿಕದಲ್ಲಿ ” ಆವರಿಗೆ ಶ್ರೀವಾದಿರಾಜರು, ಪುರಂದರದಾಸರು ಶ್ರೀವ್ಯಾಸತೀರ್ಥರು ಮೋಹಿನೀ ಅಲಂಕಾರವನ್ನು ವರ್ಣಿಸುತ್ತಿದ್ದಾರೆಂದು ಭಾವಿಸಿ ಭಕ್ತಿಯಿಂದ ಕೇಳುತ್ತಿದ್ದರು. ಆದರೆ ಮುಂದೆ ಅವರು “ಮೆರೆವ ಚಂದ್ರ ಸೂರಿಯ ಮುಡಿಯೊಳೊಪ್ಪೆ” ಮುಂತಾಗಿ ವರ್ಣಿಸಲು ಅಚ್ಚರಿಗೊಂಡು ವಾದಿರಾಜರು, ವ್ಯಾಸರಾಯರು ತಕ್ಷಣ ಕಣ್ಣುಮುಚ್ಚಿ ಧ್ಯಾನಾಸಕ್ತರಾದರು. ತಮ್ಮ ಹೃದಯಭೂಮಿಯಲ್ಲಿ ಅವರಿಗೆ ಉಡುಪಿಯ ಕೃಷ್ಣ, ಅವನನ್ನು ವರ್ಣಿಸುತ್ತಿದ್ದ ಶ್ರೀವ್ಯಾಸರಾಜರು ಮತ್ತು ತಾವೂ ಅಲ್ಲಿರುವುದನ್ನು ಕಂಡರು. ನಂತರ ಅವೆಲ್ಲವೂ ಮರೆಯಾಗಿ ವ್ಯಾಸರಾಜರು ವರ್ಣಿಸುತ್ತಿರುವ ಸಾಕ್ಷಾತ್ ಶ್ರೀಹರಿಯ ಅಮೃತಮಥನ ಕಾಲದ ಮೋಹಿನಿಯ ರೂಪವೇ ಮಂದಹಾಸದಿಂದ ನಲಿಯುತ್ತಿರುವುದನ್ನು ಅವರು ಕಂಡರು. ಮೈರೋಮಾಂಚನಗೊಂಡು ಭಕೃತಿಶಯದಿಂದ ಆನಂದಾಶ್ರುವಿನಿಂದ ಎವೆಯಿಕ್ಕದೆ ಆ ಅದ್ಭುತ ಸೌಂದರ್ಯದಿಂದ ಕಂಗೊಳಿಸುವ ರೂಪವನ್ನು ನೋಡುತ್ತಾ ತಮ್ಮ ಜನ್ಮ ಸಾರ್ಥಕವಾಯಿತೆಂದು ಆನಂದದಿಂದ ಮೈಮರೆತರು. ಶ್ರೀವ್ಯಾಸರಾಜರು ಹಾಡುತ್ತಲೇ ಇದ್ದಾರೆ.
ಕಡುಕೆಂಪು ಅಧರ ಚುಬುದಂತಗಳ ಥಳಥಳಿಸುವ ಕದಪಿನ ಮೇಲೊಪ್ಪುವ ಹೊಳೆವೋವಾಲೆ ಕೊಪ್ಪು ಮೇರೆಗಳ ನಳನಳಿಸುವ ಎಳೆ ನೀಲದ ಬಾವುಲಿ | ಹೊಳೆವ ಆಣೆ ಮುತ್ತಿನ ಮುತ್ತಿನ ಗೊಂಚಲುಗಳ ಶಂಖ ತ್ರಿರೇಖೆಯಿಂದೊಪ್ಪುವ ಗಳದಲ್ಲಿ | ಕುಂಕುಮಕಸ್ತೂರಿ ಅಗುರುಚಂದನದ ಮುತ್ತಿನ ಮಲಕು ಪೆಂಡೆಯ ಸರ ಕೊರಳಲ್ಲಿ ಹತ್ತೆಗಟ್ಟಿದ ವಾಗ್ಗೆರಳು ಮುತ್ತುಗಳ ಮುತ್ತು ಮಾಣಿಕ ನವರತ್ನ ಚಿಂತಾಕ | ವತ್ತಿ ಸೇರಿದ ಕಂಠಮಾಲೆ ಸರಗಳ ಪವಳದಸರ ಏಕಾವಳಿ ಸರಗಳು | ಪರಿ ಪರಿ ಒಪ್ಪುವ ಪದಕ ತಾಳಿಗಳ ಕರಿಯ ಸೊಂಡಲ ಸೋಲಿಸುವ ತೋಳಳ ಮೇಲೆ | ಮೆರೆವ ಭುಜಕೀರ್ತಿ ತೋಳುಗಳ ಬಂದಿಗಳ ಝಡಿವೋ ದುಂಡು ರಕ್ಷಣೆಯಮಣಿ ತಾಯಿತ್ತು | ಮೆರೆವ ಹಮ್ಮಿರ ತಾಯಿತಿ ಕಾಂತಿಗಳ ಕಡಗಕಂಕಣಸುರಿಗೆ ಬಿಚ್ಚು ಬಳೆಗಳು 1 ಹಿಡಿವುಡಿಯಲ್ಲಿ ವಜ್ರದ ಥಳುಪುಗಳ ಕಡುಮೋಹವಾದ ಮುರುಡಿಯ ಸರಪಣಿ ಝಡಿವ ಮುಂಗೈಯು ಮುರಾರಿ ಕವಡೆಯ ಜಾತಿಪವಳ ಕೈಕಟ್ಟು ಮುಂಗೈಯಲ್ಲಿ ಖ್ಯಾತಿ ಪಡೆದ ಮುತ್ತಿನ ಕಂಕಣಗಳ ಅರುಣನ ಉದಯ ಸೋಲಿಸುವ ಅಂಗೈಯಲ್ಲಿ | ಪಿಡಿದು ಕಡೆವ ಕಡಗೋಲು ನೇಣಗಳ ಬೆರಳ ಮುದ್ರಿಕೆ ರಂಗು ನೀಲಮಾಣಿಕ್ಯಗಳು | ಪ್ರತಿಫಲಿಸುವ ಚಂದ್ರಕಾಂತಿಯ ಚೆಳ್ಳುಗುರು |ಕನಕಕಲಶ ಕುಚಗಳ ಮೇಲೊಪ್ಪವ | ಮಿನುಗುವ ಚಂದ್ರಗಾವಿಯ ರವಿಕೆಗಳ | ಉರದಲೊಪ್ಪುವ ಶ್ರೀವತ್ಸಕೌಸ್ತುಭರತ್ನ | ಮೆರೆದ ವೈಜಯಂತಿಮಾಲೆ ಶೋಭಿಸುವ | ಉರದ ತ್ರಿವಳಿ ನಾಭಿ ಕಟಿಯ ಮೇಲೊಪ್ಪುವ | ಪದುಮಪಚ್ಚೆಯ ಚುಂಗು ನೆರೆಯ ಸೊಬಗಿನ ನಡುವಿನೊಳೊಪ್ಪುವ ಚಲತಮದೊಡ್ಯಾಣವು | ಕಡುಮುದ್ದು ಉಡಿಗಂಟೆ ಝಢಿತ ನೇವಳದ ಉರುಟು ಕದಳಿ ಕದಂಬದಂತೆ ಪೆರ್ದೊಡೆಗಳ | ಮೆರೆವ ಜಾನುಜಂಘ ಚರಣಕಮಲದ ಮೆರೆವ ಕಾಲಂದಿಗೆ ಕಿರುಗೆಜ್ಜೆ ಸರಪಳಿ | ವೀರಮುದ್ರಿಕೆ ಮೆಂಟಿಕೆಯ ಪಿಲ್ಲೆಗಳ ಅಂಕುಶಧ್ವಜ ವಜ್ರರೇಖೆಯಿಂದೊಪ್ಪುವ | ಕುಂಕುಮಾಂಕಿತವಾದ ನಖಚಂದ್ರಿಕೆಯ ಶಂಕೆಯಿಲ್ಲದೆ ಶಕಟನ ತುಳಿದ ಪಾದ | ಬಿಂಕದಿಂದಲಿ ಕಾಳಿಂಗನ ಶಿರದಿ, ನಿಶ್ಯಂಕನಾಗಿ ತುಳಿದ ಮುದ್ದು ಪಾದ | ದುರುಳ ಕೌರವನ ಧರೆಗೆ ಕೆಡಹಿದ ಪಾದ ಶರಣಜನರು ಸೇವಿಸುವ ಶ್ರೀಪಾದ | ಶಿರಿಯರಸಿಯು ಸೇವಿಸುವ ಶ್ರೀಪಾದ ನಿರುತ ಸೇವಿಪನಮ್ಮ ಗುರುಮಧ್ವಮುನಿಯ | ಹೃದಯಕಮಲ ವಾಸವಾಗಿಪ್ಪ ಶ್ರೀಕೃಷ್ಣನ ಪದುಮಚರಣಕ್ಕೆ ನಮೋ ನಮೋ ನಮೋ ಎಂಬೆನಾ ||”
ಹೀಗೆ ಹಾಡಿ ಶ್ರೀವ್ಯಾಸರಾಜರು ಮತ್ತೊಮ್ಮೆ ಸಾಷ್ಟಾಂಗವೆರಗಿ ಕೈಜೋಡಿಸಿ ನಿಂತರು. ವಾದಿರಾಜರು “ಗುರುದೇವ! ಇಂದು ತಮ್ಮ ಅನುಗ್ರಹದಿಂದ ಸಾಕ್ಷಾತ್ ಮೋಹಿನಿಯ ದರ್ಶನವೇ ನಮಗಾಯಿತು, ಧನ್ಯರಾದೆವು” ಎಂದುರು. ಪುರಂದರದಾಸರು ನಗುತ್ತಾ “ಈ ಪಾಮರನೂ ಧನ್ಯನಾದ ಮಹಾಸ್ವಾಮಿ” ಎಂದಾಗ ಶ್ರೀಯವರು ಅವರೀರ್ವರನ್ನೂ ಪ್ರೇಮದಿಂದೀಕ್ಷಿಸಿ “ಹೃದಯಕಮಲದಲ್ಲಿ ಪದುಮನಾಭನ ಕಾಂಬ ಮುದಮುನಿಪಾದ ಸೇವಿಪ ಕವಿಗಳಿಗೆ ಅದು ಸ್ವಾಭಾವಿಕ” ಎಂದು ನಕ್ಕರು.
ಅನಂತರ ವಾದಿರಾಜಸ್ವಾಮಿಗಳು ವ್ಯಾಸಮುನಿಗಳಿಗೆ, ಸಾಮ್ರಾಟರಿಗೆ, ಪರಿವಾರದವರಿಗೆ ಪ್ರಸಾದವನ್ನು ಕೊಟ್ಟು ಗುರುಗಳೊಡನೆ ಸಭಾಭವನಕ್ಕೆ ಬಂದರು.
ಶ್ರೀಉಡುಪಿಯ ಎಲ್ಲ ಪೀಠಾಧೀಶರು, ರಾಜಕೀಯ ಮುಖಂಡರು, ಪಂಡಿತರು, ಧರ್ಮಾಭಿಮಾನಿಗಳು, ಶಿಷ್ಯ-ಭಕ್ತ ಜನರಿಂದ ಕಿಕ್ಕಿರಿದು ತುಂಬಿದ್ದ ಸಭೆಯಲ್ಲಿ ವ್ಯಾಸರಾಜರು, ವಾದಿರಾಜರು ಇತರ ಉಡುಪಿಯ ಪೀಠಾಧಿಪತಿಗಳು ಹಾಗೂ ಕನ್ನಡ ಸಾಮ್ರಾಟರು ಆಸನಾಸೀನರಾದ ಮೇಲೆ ವೇದಘೋಷದೊಡನೆ ಸಭೆ ಪ್ರಾರಂಭವಾಗಿ ಉಡುಪಿಯ ಎಲ್ಲಮಠಾಧೀಶರೂ ಶ್ರೀವ್ಯಾಸರಾಜರನ್ನು ಅಚ್ಯುತದೇವರಾಯನನ್ನು ಆದರದಿಂದ ಸ್ವಾಗತಿಸಿ ಸೂಕ್ತರೀತಿಯಲ್ಲಿ ಭಾಷಣ ಮಾಡಿದ ಮೇಲೆ ಪರ್ಯಾಯ ಪೀಠಾಧೀಶರಾದ ಶ್ರೀವಾದಿರಾಜಯತೀಂದ್ರರು ತಮ್ಮ ವಿದ್ಯಾಗುರುಗಳ ಜ್ಞಾನ-ಭಕ್ತಿ-ವೈರಾಗ್ಯ-ತಪಸ್ಸು-ಶಿಷ್ಯಪ್ರೇಮ, ಸಾಮ್ರಾಜ್ಯರಕ್ಷಣೆ, ಮಹಾಮಹಿಮೆ, ಗ್ರಂಥರಚನೆ, ಪರವಾದಿ ದಿಗ್ವಿಜಯ, ದೈತಸಿದ್ಧಾಂತಸ್ಥಾಪನೆ, ವಿದ್ವಜ್ಜನ - ಆಶ್ರಿತಜನರಲ್ಲಿನ ವಾತ್ಸಲ್ಯ, ಲೋಕಕಲ್ಯಾಣ ದೀಕ್ಷೆ ಮುಂತಾದ ಗುರುಗಳ ಸದ್ಗುಣಗಳನ್ನು ವರ್ಣಿಸಿ ತಮ್ಮ ಕೋರಿಕೆಯಂತೆ ಸಾಮ್ರಾಟರನ್ನು ಕರೆದುಕೊಂಡು ತಮ್ಮ ಪರ್ಯಾಯಕ್ಕೆ ಬಂದುದಕ್ಕಾಗಿ ತಮ್ಮ ಕೃತಜ್ಞತಾಪೂರ್ವಕ ನಮನಗಳನ್ನರ್ಪಿಸಿ ಭಾಷಣಮಾಡಿದ ತರುವಾಯ ಶ್ರೀವ್ಯಾಸಯತಿಗಳು ಸೂಕ್ತರೀತಿಯಿಂದ ಉಪದೇಶಭಾಷಣ ಮಾಡಿದರು. ಸಾಮ್ರಾಟ್ ಅಚ್ಯುತದೇವರಾಯ ಗುರುಪಾದರಿಗೆ ಮತ್ತು ತಮಗೆ ನೀಡಿದ ಭವ್ಯಸ್ವಾಗತಕ್ಕಾಗಿ ಶ್ರೀಪರ್ಯಾಯ ಪೀಠಾಧೀಶರಿಗೆ ತನ್ನ ಕೃತಜ್ಞತಾಪೂರ್ವಕ ವಂದನೆಗಳನ್ನು ಸಲ್ಲಿಸಿದ ಮೇಲೆ ಕಾರ್ಯಕ್ರಮ ಮುಕ್ತಾಯವಾಯಿತು.
ಸ್ವಾಗತ ಸಮಾರಂಭವು ಮುಗಿದ ಮೇಲೆ ಶ್ರೀವಾದಿರಾಜತೀರ್ಥರು ಗುರುಗಳು ಹಾಗೂ ಸಾಮ್ರಾಟರೊಡನೆ ಕೆಲಕಾಲ ಏಕಾಂತವಾಗಿ ಮಾತನಾಡಿ ಆ ತರುವಾಯ ಅಚ್ಯುತದೇವರಾಯರಿಗೆ ಏರ್ಪಡಿಸಿದ್ದ ಭವ್ಯಮಂದಿರಕ್ಕೆ ಅವರನ್ನು ಗೌರವದಿಂದ ಕರೆದೊಯ್ದು ಬಿಡಾರಮಾಡಿಸುವಂತೆ ಅಧಿಕಾರಿಗಳಿಗೆ ಆಜ್ಞಾಪಿಸಿ, ತರುವಾಯ ಶ್ರೀವ್ಯಾಸರಾಜಗುರುಗಳನ್ನು ತಮ್ಮ ಮಠದ ಮುಖ್ಯಾಧಿಕಾರಿಗಳು ಹಾಗೂ ಪಂಡಿತರುಗಳ ಜೊತೆಗೆ ತಾವು ವಿಶೇಷ ಶ್ರದ್ಧೆಯಿಂದ ಅಲಂಕರಿಸಿದ್ದ ಶ್ರೀರಾಜೇಂದ್ರತೀರ್ಥ ಶ್ರೀಪಾದಂಗಳವರ ಮಠಕ್ಕೆ ಕಳುಹಿಸಿಕೊಡಲು ವ್ಯವಸ್ಥೆಮಾಡಿ ಗುರುಗಳನ್ನು ಕೃಷ್ಣ ದೇವಾಲಯದ ಮಹಾದ್ವಾರದವರೆಗೆ ಬಂದು ಬೀಳ್ಕೊಟ್ಟರು. ಶ್ರೀವ್ಯಾಸರಾಜರು ತಮ್ಮ ಮಠಕ್ಕೆ ಬಂದು ವಿಶ್ರಾಂತಿ ಪಡೆದರು.
ಮರುದಿನದಿಂದ ಶ್ರೀವ್ಯಾಸರಾಜರು ಮತ್ತು ಅವರ ಸಲಹೆಯಂತೆ ಅಚ್ಯುತದೇವರಾಯರು ಶ್ರೀಕೃಷ್ಣ ಪರ್ಯಾಯೋತ್ಸವಾಂಗವಾಗಿ ಶ್ರೀಕೃಷ್ಣನಿಗೆ ಸುಮಾರು ಒಂದು ತಿಂಗಳವರೆಗೆ ವಿವಿಧ ಉತ್ಸವ ಸಮಾರಂಭಗಳನ್ನೇರ್ಪಡಿಸಿದ್ದಲ್ಲದೆ ಶ್ರೀಕೃಷ್ಣದೇವರಿಗೆ ಅಮೂಲ್ಯ ರತ್ನಾಭರಣಗಳು, ಧನ-ಕನಕ-ವಸ್ತು-ವಾಹನಾದಿಗಳು, ಪೀತಾಂಬರಗಳನ್ನು ಕಾಣಿಕೆಯಾಗಿ ಸಲ್ಲಿಸಿದರು. ಪರ್ಯಾಯ ಪೀಠಾಧೀಶರು ಮತ್ತಿತರ ಉಡುಪಿಯ ಪೀಠಾಧಿಪತಿಗಳಿಗೆ ವಿಶೇಷ ಪಾದಪೂಜೆ, ಭಿಕ್ಷಾದಿಗಳನ್ನೇರ್ಪಡಿಸಿ, ಶ್ರೀವ್ಯಾಸರಾಜರು ಮಠದ ಅಧಿಕಾರಿಗಳಿಂದಲೂ, ಸಾಮ್ರಾಟನು ಸ್ವತಃ ಪಾದಪೂಜೆ ಮಾಡಿ ಅನರ್ಘ ಧನಕನಕವಸ್ತ್ರಾಭರಣಗಳನ್ನಿತ್ತು ಗೌರವಿಸಿದನು. ಅಷ್ಟಮಠದ ಯತಿಗಳು ಶ್ರೀಮದಾಚಾರ್ಯ ಮಹಾಸಂಸ್ಥಾನಾಧಿಪತಿಗಳಾದ ಶ್ರೀವ್ಯಾಸರಾಜಗುರುಗಳಿಗೆ ತಮ್ಮ ಮಠೀಯ ಅಧಿಕಾರಿಗಳಿಂದ ಪಾದಪೂಜೆ ಮಾಡಿಸಿ, ಧನಕನಕವಸ್ತ್ರಾಭರಣಗಳನ್ನು ಕಾಣಿಕೆಯಾಗಿ ಸಲ್ಲಿಸಿ ಗೌರವಿಸಿದರು ಮತ್ತು ಭಿಕ್ಷೆಗಳನ್ನೇರ್ಪಡಿಸಿದರು. ಅಚ್ಯುತದೇವರಾಯರಿಗೆ, ಪರಿವಾರದವರಿಗೆ ವಿಶೇಷ ಔತಣಗಳಾದವು.
ಪ್ರತಿದಿನ ವ್ಯಾಸರಾಜರು ಶ್ರೀಕೃಷ್ಣನ ಮುಂಭಾಗದ ಮಂಟಪದಲ್ಲಿ ಮಹಾಸಂಸ್ಥಾನ ಪೂಜೆ ಮಾಡುತ್ತಾ ಸ್ವತಃ ಪೂಜಿಸಿ, ನಿವೇದನ ಸಮರ್ಪಿಸಿ, ಮಹಾಮಂಗಳಾರತಿ ವಿವಿಧ ರೀತಿಯಿಂದ ಸ್ತುತಿಸುತ್ತಾ ಆನಂದನಿರ್ಭರರಾಗುತ್ತಿದ್ದರು. ಪ್ರತಿನಿತ್ಯ ಸಹಸ್ರಾರು ಜನ ಬ್ರಾಹ್ಮಣ ಸುವಾಸಿನಿಯರಿಗೆ ತೀರ್ಥ-ಪ್ರಸಾದ ವಿನಿಯೋಗ, ಭೂರಿಭೋಜನ, ಸಕಲಯತಿಗಳೂ ಚೌಕಿಯಲ್ಲಿ ಕುಳಿತು ಭಿಕ್ಷಾಸ್ವೀಕಾರಾದಿಗಳೂ ಜರುಗುತ್ತಿತ್ತು. ಆ ಉತ್ಸವಗಳು ಅಷ್ಟಮಠಗಳ ಯತಿಗಳೊಡನೆ ವ್ಯಾಸರಾಜರ ಆ ಸಮ್ಮಿಲನ, ವ್ಯಾಸರಾಜರ ಅಧ್ಯಕ್ಷತೆಯಲ್ಲಿ ಪ್ರತಿದಿನ ನೆರವೇರುತ್ತಿದ್ದ ವಿದ್ದತ್ಸಭೆ, ವಾಕ್ಯಾರ್ಥ, ವಿದ್ಯಾರ್ಥಿಗಳ ಪರೀಕ್ಷೆ, ಪುರಂದರದಾಸರ ನೇತೃತ್ವದಲ್ಲಿ ಜರುಗುತ್ತಿದ್ದ ಭಜನೆ, ನರ್ತನ, ಶ್ರೀವ್ಯಾಸ-ಹರಿದಾಸರ ವಾಹ್ಮಯಗಳ ವಿವೇಚನಾತ್ಮಕ ಉಪನ್ಯಾಸಗಳು, ಎಲ್ಲ ಶ್ರೀಗಳವರ ಉಪದೇಶ ಭಾಷಣಗಳು, ಶ್ರೀಕೃಷ್ಣನ ವಿವಿಧ ಉತ್ಸವಗಳು, ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವ, ಸಂಭ್ರಮಗಳು ಅವರ್ಣನೀಯ. ಆ ಮಂಗಳಕರ ದೃಶ್ಯವನ್ನು ಕಂಡಾನಂದಿಸಿದ ಅಂದಿನ ಜನರೇ ಪುಣ್ಯವಂತರು.
ವಿದ್ವತ್ತಭೆಯು ಕೊನೆಯ ದಿವಸ ವ್ಯಾಸರಾಜರು ಅಧ್ಯಕ್ಷಪೀಠದಲ್ಲಿದ್ದು ವಿದ್ದತ್ತೂರ್ಣವಾದ ಉಪದೇಶಭಾಷಣ ಮಾಡಿ ವಾದಿರಾಜಸ್ವಾಮಿಗಳವರ ಜ್ಞಾನ-ಭಕ್ತಿ, ವೈರಾಗ್ಯ, ಗುರುಭಕ್ತಿ ಮುಂತಾದ ಅಸಾಧಾರಣ ಗುಣಗಳನ್ನು ಹೊಗಳಿ, ಅವರಿಂದ ಮುಂದೆ ಪರವಾದಿನಿರಾಕರಣಪೂರ್ವಕ ದೈತಸಿದ್ಧಾಂತಸ್ಥಾಪನೆ, ಗ್ರಂಥರಚನಗಳಿಂದ ಆಪಂಡಿತಪಾಮರರ ಉದ್ಧಾರವಾಗುವುದು ಮುಂತಾಗಿ ಹೇಳಿ ಸರ್ವರನ್ನೂ ಆನಂದಗೊಳಿಸಿದರು. ಸಮಾರೋಪ ಭಾಷಣ ಮಾಡಿದ ವಾದಿರಾಜರ ಒಂದೊಂದು ಮಾತೂ ಅವರಿಗೆ ಹರಿವಾಯುಗಳಲ್ಲಿ ಮತ್ತು ವಿದ್ಯಾಗುರುಗಳಾದ ಪೂಜ್ಯ ವ್ಯಾಸರಾಜರಲ್ಲಿದ್ದ ಭಕ್ತಿ-ಗೌರವಗಳನ್ನು ಎತ್ತಿತೋರುತ್ತಿದ್ದವು. ವಾದಿರಾಜಸ್ವಾಮಿಗಳು ಶ್ರೀಮದಾಚಾರ್ಯರ ಮಹಾಸಂಸ್ಥಾನಕ್ಕೆ ಮಹಾಸಂಸ್ಥಾನಾಧಿಪತಿಗಳಾದ ಯತಿಗಳಿಗೆ ಪರಂಪರೆಯಿಂದ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ದೊರಕುತ್ತಿದ್ದ ವಿಶೇಷ ಗೌರವವನ್ನೆಲ್ಲಾ ಸಲ್ಲಿಸಿದ್ದಲ್ಲದೆ ತಮ್ಮ ಗುರುಗಳಿಗೆ ಭಕ್ತಿಯಿಂದ ಕೆಲ ವೈಶಿಷ್ಟ್ಯಪೂರ್ಣ ಗೌರವಗಳನ್ನು ಮಾಡಿ ಸರ್ವರನ್ನೂ ಸಂತೋಷಪಡಿಸಿದರು.
ಶ್ರೀವ್ಯಾಸರಾಜರು ಅಚ್ಯುತದೇವರಾಯನಿಗೆ ಹೇಳಿ ಶ್ರೀಕೃಷ್ಣನಿಗೂ ಪರ್ಯಾಯ ಪೀಠದ ಶ್ರೀಸೋದೆಮಠಕ್ಕೂ ಅನೇಕ ಗ್ರಾಮ, ಭೂಸ್ವಾಸ್ತಿ, ತಸ್ವೀಕು ಮುಂತಾಗಿ ದತ್ತಿ ಬಿಡಿಸಿದ್ದಲ್ಲದೆ ಶ್ರೀಕೃಷ್ಣ ಮಠದ ಅಭಿವೃದ್ಧಿಗಾಗಿ, ಅನ್ನದಾನಕ್ಕಾಗಿ, ವಿಶೇಷೋತ್ಸವಗಳಿಗಾಗಿ ಹೇರಳವಾಗಿ ಧನ-ಕನಕಾದಿಗಳನ್ನು ಕೊಡಿಸಿದರು. ಶ್ರೀಯವರ ಮತ್ತು ಸಾಮ್ರಾಟನ ಶ್ರೀಕೃಷ್ಣಭಕ್ತಿ, ಶ್ರೀಮದಾಚಾರ್ಯರ ಜನ್ಮಸ್ಥಳ, ಕಾರ್ಯರಂಗದಲ್ಲಿನ ಶ್ರದ್ಧೆ ಈ ಔದರ್ಯಾದಿಗಳಿಂದ ಶ್ರೀವಾದಿರಾಜಗುರುಚರಣರು, ಇತರ ಉಡುಪಿ ಮಠಾಧೀಶರು, ಧಾರ್ಮಿಕರು ಪರಮಾನಂದಭರಿತರಾಗಿ ಅವರನ್ನು ಕೊಂಡಾಡಿದರು.
ಸುಮಾರು ಒಂದು ತಿಂಗಳ ಕಾಲ ಉಡುಪಿಯಲ್ಲಿ ವಾಸಮಾಡಿದ್ದ ಶ್ರೀವ್ಯಾಸರಾಜರು ಶ್ರೀಕೃಷ್ಣದರ್ಶನ-ಸೇವಾದಿಗಳಿಂದ ಕೃತಾರ್ಥರಾಗಿ ಆನಂದದಿಂದ ಮಹಾಸಂಸ್ಥಾನದೊಡನೆ ಅಚ್ಯುತದೇವರಾಜ-ಪರಿವಾರದಿಂದೊಡಗೂಡಿ ವಿಜಯನಗರಕ್ಕೆ ಪ್ರಯಾಣ ಬೆಳೆಸಿದರು.