ಕಲಿಯುಗ ಕಲ್ಪತರು ನಾಲ್ಕನೆಯ ಉಲ್ಲಾಸ ಶ್ರೀವ್ಯಾಸರಾಜಯತಿಸಾರ್ವಭೌಮರ ೫೩. ದೈವೀವಿಚಿತ್ರಾಗತಿಃ
ಯಾವುದೇ ಒಂದು ರಾಷ್ಟ್ರ, ರಾಜ್ಯ, ವಂಶ, ಮನೆತನಗಳಲ್ಲಿ ಅನೇಕ ಊಹಿಸಲಾರದ ಘಟನೆಗಳು ಜರುಗುವುದು ಅಸ್ವಾಭಾವಿಕವೇನಲ್ಲ. ಅವೆಲ್ಲವೂ ಭಗವಂತನ ಇಚ್ಛೆ, ಸಂಕಲ್ಪಗಳಂತೆ ನಡೆದುಹೋಗುವುವು. ಅದನ್ನೇ ಪ್ರಾಜ್ಞರು ದೈವೀವಿಚಿತ್ರಾಗತಿಃ ಎಂದು ಉದ್ಧರಿಸುವರು. ಇದಕ್ಕೆ ಕನ್ನಡನಾಡೂ ಹೊರತಾಗಿರಲಿಲ್ಲ. ಸುಮಾರು ಕ್ರಿಸ್ತಶಕ ೧೫೨೫-೨೬ ರಿಂದ ೧೫೩೯ ರವರೆಗೆ ಕನ್ನಡಸಾಮ್ರಾಜ್ಯದಲ್ಲಿ, ಶ್ರೀಮದಾಚಾರ್ಯರ ಮಹಾಸಂಸ್ಥಾನಗಳಲ್ಲಿ ಇಂಥ ಘಟನೆಗಳು ಜರುಗಿಹೋದವು. ಅದನ್ನಿಲ್ಲಿ ಸ್ಕೂಲವಾಗಿ ನಿರೂಪಿಸಬಯಸುತ್ತೇವೆ.
ಕ್ರಿ.ಶ. ೧೫೨೫ ರಲ್ಲಿ ಕನ್ನಡ ರಮಾರಮಣನಾದ ಕೃಷ್ಣದೇವರಾಯನ ಕುಹಯೋಗವನ್ನು ಕಳೆದು ರಕ್ಷಿಸಿ, ಪುನಃ ಸಾಮ್ರಾಜ್ಯವನ್ನು ಹೃತ್ತೂರ್ವಕವಾಗಿ ಶ್ರೀವ್ಯಾಸರಾಜರು ದಾನಮಾಡಿ ಒಪ್ಪಿಸಿಕೊಟ್ಟು ಸಾಮ್ರಾಟನಾಗಿ, ಪ್ರಜಾರಂಜಕನಾಗಿ, ಕೀರ್ತಿಶಾಲಿಯಾಗಿ ಸುಖದಿಂದ ಬಾಳು ಎಂದು ಆಜ್ಞಾಪಿಸಿದರು. ಕೃಷ್ಣದೇವರಾಯ ಗುರುಗಳ ಆಜ್ಞೆಯಂತೆ ವರ್ತಿಸಿದ್ದರೆ ನಾಡಿನ ಇತಿಹಾಸವೇ ಉಜ್ವಲವಾಗಿ ಬೆಳಗುತ್ತಿತ್ತೋ ಏನೋ! ಆದರೆ ರಾಯನು ತಾನಿರುವಾಗಲೇ ತನ್ನ ಮಗ ಸಾಮ್ರಾಟನಾಗಿ ಮೆರೆಯುವುದನ್ನು ಕಾಣಬಯಸಿ ಮಹಾಮಂತ್ರಿ ಮತ್ತು ಆತ್ಮೀಯರ ಹಿತವಚನವನ್ನು ದುರ್ಲಕ್ಷಿಸಿ ಆರು ವರ್ಷದ ತನ್ನ ಮಗನನ್ನು ಕನ್ನಡ ರತ್ನಸಿಂಹಾಸನದಲ್ಲಿ ಕೂಡಿಸಿ ತಿರುಮಲ ಮಹಾರಾಜ ಎಂಬ ಹೆಸರಿನಿಂದ ಸಾಮ್ರಾಜ್ಯಾಭಿಷೇಕ ಮಾಡಿಬಿಟ್ಟ. ಅದು ಭಗವತ್ಥಂಕಲ್ಪದಲ್ಲಿ ಇರಲಿಲ್ಲ. ಅಂತೆಯೇ ಆ ಬಾಲಸಮ್ರಾಟನು ಸರ್ಪದಂಶನ ಅಥವಾ ವಿಷಪ್ರಯೋಗಕ್ಕೆ ಒಳಗಾಗಿ ಮೃತನಾದನು.
ಕೃಷ್ಣದೇವರಾಯನು ಶಾಲಿವಾಹನ ಶಕೆ ೧೪೪೯ ನೇ ಸರ್ವಜಿತ್ ಸಂ|| ಕಾರ್ತಿಕ ಶುಕ್ಲ ಉತ್ಥಾನ ದ್ವಾದಶೀ ಮಂಗಳವಾರ (೦೫-೧೧-೧೫೨೭ ರಂದು) ಗುರುವ್ಯಾಸರಾಜರಿಗೆ ಬಂಕಾಪುರ ಪ್ರಾಂತ್ಯದಲ್ಲಿ ಅನೇಕ ಗ್ರಾಮ-ಭೂಮಿಗಳನ್ನು ಶ್ರೀವಿಜಯವಿಠಲದೇವರ ಗುಡಿಯಲ್ಲಿ ದಾನಮಾಡಿ ಕೃತಾರ್ಥನಾದನು.
ಶ್ರೀವ್ಯಾಸರಾಜರಲ್ಲಿ ಕೇಶವಾದಿ ಇಪ್ಪತ್ನಾಲ್ಕು ಜನ ಸನ್ಯಾಸಿ ಶಿಷ್ಯರು. ಕೆಲ ಪೀಠಾಧಿಪತಿಗಳೂ ಶಿಷ್ಯವೃತ್ತಿ ವಹಿಸಿ ಸಕಲ ಶಾಸ್ತ್ರಗಳನ್ನೂ ಅಧ್ಯಯನಮಾಡುತ್ತಿದ್ದರು. ಆ ಮಹನೀಯರಲ್ಲಿ ಸಹಸ್ರಾರು ಜನ ವ್ಯಾಸಂಗಮಾಡಿ ಶ್ರೇಷ್ಠ ಪಂಡಿತರೆಂದು ಖ್ಯಾತರಾದರು.
ಇವರೆಲ್ಲರಲ್ಲೂ ಶ್ರೀವಿಷ್ಣುತೀರ್ಥರು, ಶ್ರೀವಾದಿರಾಜತೀರ್ಥರುಗಳು ಶ್ರೀವ್ಯಾಸತೀರ್ಥರಿಗೆ ಅತ್ಯಂತ ಪ್ರೀತ್ಯಾಸ್ಪದರಾದ ಶಿಷ್ಯರಾಗಿದ್ದರು. ಶ್ರೀವಿಷ್ಣುತೀರ್ಥರು ಷಾಷಿಕಕುಲಶಿರೋರತ್ನರಾದ ಶ್ರೀಮದಾಚಾರ್ಯರ ಮಹಾಸಂಸ್ಥಾನಾಧೀಶರೂ, ಆಚಾರ್ಯರ ಸಕಲ ಭಾಷ್ಯಗಳಿಗೆ ಟೀಕೆಗಳನ್ನು ರಚಿಸಿ ಶ್ರೀಟೀಕಾರಾಯರೆಂದೇ ವಿಖ್ಯಾತರಾಗಿದ್ದ ಪರಮಪೂಜ್ಯ ಶ್ರೀಜಯತೀರ್ಥಮುನಿಗಳ ಪೂರ್ವಾಶ್ರಮ ಅಣ್ಣಂದಿರಾದ ಶ್ರೀನರಹರಿನಾಯಕರ ಪ್ರಪೌತ್ರರ ಪುತ್ರರು. ಪೂರ್ವಾಶ್ರಮದ ಹೆಸರು ವಿಠಲಾಚಾರ್ಯರೆಂದು. ಶ್ರೀವ್ಯಾಸರಾಜರ ವಂಶಬಂಧುಗಳು. ಇವರಿಗೆ ಶ್ರೀವ್ಯಾಸರಾಜರು ಸನ್ಯಾಸವಿತ್ತು ಶ್ರೀವಿಷ್ಣುತೀರ್ಥರೆಂದು ಹೆಸರಿಟ್ಟು ಅವರಿಗೆ ಬಾಲ್ಯದಿಂದಲೂ ಸಾಹಿತ್ಯ, ವ್ಯಾಕರಣ, ವೇದಾಂತ, ನ್ಯಾಯ, ಮೀಮಾಂಸಾದಿ ಸಕಲಶಾಸ್ತ್ರಗಳನ್ನೂ ಪಾಠ ಹೇಳಿ ಅದ್ವಿತೀಯ ಪಂಡಿತರನ್ನಾಗಿ ಮಾಡಿದ್ದರು. ಶ್ರೀವಿಷ್ಣುತೀರ್ಥರೆಂದರೆ ಗುರುಗಳಿಗೆ ಪಂಚಪ್ರಾಣ. ಇನ್ಯಾರಲ್ಲೂ ಮಾಡದ ಅಸಾಧಾರಣ ಪ್ರೀತಿ-ವಾತ್ಸಲ್ಯಗಳನ್ನು ಅವರಲ್ಲಿ ಮಾಡುತ್ತಿದ್ದರು. ಶ್ರೀವಿಷ್ಣುತೀರ್ಥರು ಅಸಾಧಾರಣ ಮೇಧಾವಿಗಳೂ, ಕುಶಾಗ್ರಮತಿಗಳೂ, ಏಕಸಂಧಿಗ್ರಾಹಿಗಳೂ, ಪ್ರತಿಭಾಶಾಲಿಗಳೂ ಆಗಿ ಗುರುಗಳನ್ನೇ ವಿಸ್ಮಯಗೊಳಿಸುವ ಪ್ರಕಾಂಡಪಾಂಡಿತ್ಯದಿಂದ ಗುರುಗಳಲ್ಲಿ ಅನಿತರಸಾಧಾರಣ ಭಕ್ತಿ-ಶ್ರದ್ದೆ-ಗೌರವಗಳಿಂದ ಅವರನ್ನು ಎಡಬಿಡದೆ ಸೇವಿಸುತ್ತಾ ಧನ್ಯಜೀವಿಗಳಾಗಿ, ಸರ್ವಸಜ್ಜನರ ವಿಶೇಷ ಭಕ್ತಾದರಗಳಿಗೆ ಪಾತ್ರರಾಗಿದ್ದರು. ಶ್ರೀವ್ಯಾಸರಾಜರ ಮತ್ತೊಬ್ಬ ಪ್ರಕಾಂಡಪಂಡಿತರಾದ ಶಿಷ್ಯರು ಉಡುಪಿಯ ಶ್ರೀದೆ ಮಠಾಧೀಶರಾಗಿದ್ದ ಶ್ರೀವಾದಿರಾಜತೀರ್ಥರು. ಅವರು ಬಾಲ್ಯದಿಂದಲೂ ಮಹಾಮೇಧಾವಿಗಳಾಗಿದ್ದು ಉತ್ತಮ ಕವಿಗಳೂ, ವಿದ್ಯಾವಿಶಾರದರೂ ಆಗಿದ್ದರು. ಅಂದು ದೈತಸಿದ್ಧಾಂತದ, ಷಡರ್ಶನಗಳಿಗೆ ಏಕಮೇವಾದ್ವಿತೀಯರೆನಿಸಿ ಜ್ಞಾನಿಗಳಿಗೆಲ್ಲಾ ಚಕ್ರವರ್ತಿಗಳೆನಿಸಿ, ಭಾರತಾದ್ಯಂತ ವಿದ್ವನ್ಮಂಡಲಿ, ರಾಜಾಧಿರಾಜ ಚಕ್ರವರ್ತಿಗಳಿಂದ ಸಂಸೇವರಾಗಿದ್ದಶ್ರೀವ್ಯಾಸರಾಜರೇ ತಮಗೆ ಸರಿಯಾದ ವಿದ್ಯಾಗುರುಗಳೆಂದು ನಂಬಿದ್ದಶ್ರೀವಾದಿರಾಜತೀರ್ಥರು ವಿಜಯನಗರಕ್ಕೆ ಬಂದು ಶ್ರೀವ್ಯಾಸತೀರ್ಥರ ಚರಣಕಮಲಗಳ ಸನ್ನಿಧಿಯಲ್ಲಿ ಕುಳಿತು ಸಕಲಶಾಸ್ತ್ರಗಳು ಮುಖ್ಯವಾಗಿ ಸಮಗ್ರ ದೈತವೇದಾಂತಶಾಸ್ತ್ರಗ್ರಂಥಗಳನ್ನೂ ಚಂದ್ರಿಕಾ, ನ್ಯಾಯಾಮೃತ, ತರ್ಕತಾಂಡವಗಳೆಂಬ ಶ್ರೀನೃಸಿಂಹದೇವರ ಮೂರು ಕಣ್ಣುಗಳಂತಿದ್ದ 'ವ್ಯಾಸತ್ರಯ' ಗ್ರಂಥಗಳನ್ನೂ ಆಮೂಲಾಗ್ರವಾಗಿ ವ್ಯಾಸಂಗಮಾಡಿ ಗುರುಗಳ ವಿಶೇಷ ಪ್ರೀತಿ-ಕಾರುಣ್ಯ-ವಾತ್ಸಲ್ಯಗಳಿಗೆ ಪಾತ್ರರಾದರು. ಶ್ರೀವಿಷ್ಣುತೀರ್ಥ-ಶ್ರೀವಾದಿರಾಜತೀರ್ಥರು- ಶ್ರೀವ್ಯಾಸರಾಜರ ಎರಡು ಕಣ್ಣುಗಳಂತಿದ್ದ ಪರಮಶಿಷ್ಯರುಗಳೆಂದು ಸರ್ವರಿಂದ ಸ್ತುತ್ಯರಾದರು. ಶ್ರೀವಿಷ್ಣುತೀರ್ಥ- ಶ್ರೀವಾದಿರಾಜತೀರ್ಥರು ಪ್ರಥಮ ದರ್ಶನದಿಂದಲೇ ಪರಸ್ಪರ ಆಕರ್ಷಿತರಾಗಿ ಪರಮಮಿತ್ರರಾದರು. ಗುರುಗಳಲ್ಲಿ ವ್ಯಾಸಂಗಮಾಡಿದ್ದನ್ನು ಇಬ್ಬರೂ ಕುಳಿತು ಮನನಮಾಡಿ, ಗುರುಗಳ ವಿದ್ಯಾವೈಭವ, ಪಾಠ-ಪ್ರವಚನ ಕೌಶಲ್ಯ, ಶಿಷ್ಯಾಭಿಮಾನ-ಅನುಗ್ರಹಗಳನ್ನು ಚರ್ಚಿಸುತ್ತಾ ಆನಂದಪರವಶರಾಗಿ ಗುರುಗಳನ್ನು ಎಡೆಬಿಡದೆ ಸೇವಿಸುತ್ತಾ ಅವರ ಅಪಾರ ಪ್ರೀತಿಗೆ ಪಾತ್ರರಾಗಿದ್ದರು. ಶ್ರೀವ್ಯಾಸತೀರ್ಥರು ತಮ್ಮ ತರುವಾಯ ರೈತಸಿದ್ಧಾಂತ ಸಂರಕ್ಷಣೆ ಪರವಾದಿದಿಗ್ವಿಜಯಪೂರ್ವಕ ಸಿದ್ಧಾಂತಸ್ಥಾಪನೆ, ಅಸಾಧಾರಣ ಗ್ರಂಥರಚನೆ, ಪಾಠ-ಪ್ರವಚನಾದಿಗಳಿಂದ ತಮ್ಮ ಹೆಸರನ್ನು ಅಜರಾಮರಗೊಳಿಸುವ ಶಿಷ್ಯರೆಂದು ನಂಬಿದ್ದರು. ಅದರಂತೆ ಅನೇಕ ವೇಳೆ ಭವಿಷ್ಯ ನುಡಿದಿದ್ದರು. ಶ್ರೀವ್ಯಾಸರಾಜರ ಆ ನಂಬಿಕೆ, ಅವರ ಭವಿಷ್ಯ ಸತ್ಯವಾದ ವಿಚಾರ, ಮುಂದಿನ ದೈತಸಿದ್ಧಾಂತದ ಇತಿಹಾಸವು ಇಂದಿಗೂ ಸಾಕ್ಷೀಭೂತವಾಗಿ ಕಂಗೊಳಿಸುತ್ತಾ ಇರುವುದನ್ನು ಸಜ್ಜನರೆಲ್ಲರೂ ತಿಳಿದಿದ್ದಾರೆ.
ಸುಮಾರು ಕ್ರಿ.ಶ. ೧೫೩೦ರ ಸುಮಾರಿಗೆ ಎರಡನೆಯ ಬಾರಿ ದಿಗ್ವಿಜಯ ಕೈಗೊಂಡು ಶ್ರೀಮದಾಚಾರ್ಯರ ಮಹಾಸಂಸ್ಥಾನಾಧೀಶ್ವರರೂ, ಸರ್ವತಂತ್ರಸ್ವತಂತ್ರರೂ, ಮಾನಸಪೂಜಾಧುರಂಧರರೂ, ಮಹಾತಪಸ್ವಿಗಳೂ ಆದ ಶ್ರೀಸುರೇಂದ್ರತೀರ್ಥರು ದಯಮಾಡಿಸಿದಾಗ ಶ್ರೀವ್ಯಾಸರಾಜರು ಕೃಷ್ಣದೇವರಾಯನಿಗೆ ಆಜ್ಞಾಪಿಸಿ, ಸಮಸ್ತ ರಾಜಗೌರವ - ವೈಭವಗಳಿಂದ ಸ್ವಾಗತಿಸಿ ಕರೆತಂದು “ವಿಶ್ವಪಾವನ ಮಠದಲ್ಲಿ ಬಿಡಾರ ಮಾಡಿಸಿದರು. ಉಭಯಗುರುಗಳೂ, ಷಾಷ್ಠಿಕ ಕುಲಬಂಧುಗಳೂ, ಜ್ಞಾನಿಗಳೂ, ಭೂತಭವಿಷ್ಯದ್ ವರ್ತಮಾನ ವಿಚಾರಗಳನ್ನರಿತವರು. ಅಂಥ ಮಹನೀಯರ ಮಿಲನ ಅದೆಂತಹುದಾಗಿರಬಹುದು? ಸುರೇಂದ್ರರು ಬಂದ ಉದ್ದಿಶ್ಯವರಿತಿದ್ದ ವ್ಯಾಸಮುನಿಗಳು ತಮ್ಮ ಪ್ರಾಣಪದಕದಂತಿದ್ದ ಶ್ರೀವಿಷ್ಣುತೀರ್ಥರನ್ನು ಸುರೇಂದ್ರರಿಗಾಗಿಯೇ ಸಾಕಿ-ಸಲಹಿ-ಮಹಾಪಂಡಿತರನ್ನಾಗಿಮಾಡಿ, ಸಮರ್ಪಿಸಲು ಕಾತರಿಸುತ್ತಿದ್ದರು. ಆ ಸಮುಹೂರ್ತವೀಗ ಬಂದೊದಗಿತು. ಅಂತೆಯೇ ಸುರೇಂದ್ರರ ಅಪೇಕ್ಷೆಯಂತೆ, ಅವರಿಗಾಗಿಯೇ ಸಿದ್ಧಪಡಿಸಿ ಕಾಯುತ್ತಿದ್ದ ಶ್ರೀವ್ಯಾಸರಾಜರು ವಿಷ್ಣುತೀರ್ಥರನ್ನು ಸುರೇಂದ್ರರಿಗೆ ಸಮರ್ಪಿಸಿದರು. ಆನಂದತುಂದಿಲರಾದ ಸುರೇಂದ್ರರು ಮಹಾಸಂಸ್ಥಾನ ಸಂಪ್ರದಾಯಾನುಸಾರವಾಗಿ ಮುಂಡನ, ದಂಡಪಲ್ಲಟ, ಮಂತ್ರಮುದ್ರಾಧಾರಣ, ಸ್ವಕೀಯ ಮಹಾಸಂಸ್ಥಾನ ಕ್ರಮಾಗತ ಗುರೂಪದೇಶ, ಮಹಾಮಂತ್ರಗಳ, ಅರವತ್ನಾಲ್ಕು ಕಲೆಗಳ ಉಪದೇಶಾದಿಗಳನ್ನು ಮಾಡಿ ಶ್ರೀಮನ್ಮಧ್ವಾಚಾರ್ಯರ ಎರಡು ವೇದಾಂತಸಾಮ್ರಾಜ್ಯ ಮಹಾಸಂಸ್ಥಾನಗಳಲ್ಲೊಂದಾದ ಶ್ರೀಕವೀಂದ್ರತೀರ್ಥರ 'ದಕ್ಷಿಣಾದಿಮಠ'ದ ದಿಗ್ವಿಜಯ ವಿದ್ಯಾಸಿಂಹಾಸನದಲ್ಲಿ ನೂತನ ಯತಿಗಳನ್ನು (ಶ್ರೀವಿಷ್ಣುತೀರ್ಥರನ್ನು ಮಂಡಿಸಿ “ಶ್ರೀವಿಜಯೀಂದ್ರತೀರ್ಥ ಶ್ರೀಪಾದಂಗಳವರು” ಎಂಬ ಮಹಾಸಂಸ್ಥಾನನಾಮದಿಂದ ವೇದಾಂತಸಾಮ್ರಾಜ್ಯಾಭಿಷೇಕ ಮಾಡಿ ತಮ್ಮ ಉತ್ತರಾಧಿಕಾರಿ ಶಿಷ್ಯರನ್ನಾಗಿ ಮಾಡಿಕೊಂಡರು. ಅಂದಿನ ವೈಭವ-ಸಂಭ್ರಮ ವರ್ಣಿಸಲು ಅಸದಳ.228 ಕೆಲಕಾಲ ವಿಜಯನಗರದಲ್ಲಿದ್ದ ಸುರೇಂದ್ರತೀರ್ಥರು ಪ್ರಿಯಶಿಷ್ಯ ಶ್ರೀವಿಜಯೀಂದ್ರತೀರ್ಥರೊಡನೆ ಶ್ರೀವ್ಯಾಸರಾಜರು ಮತ್ತು ಕೃಷ್ಣದೇವರಾಯರಿಂದ ಬೀಳ್ಕೊಂಡು ಮಹಾಸಂಸ್ಥಾನದೊಡನೆ ದಕ್ಷಿಣಭಾರತದ ದಿಗ್ವಿಜಯಯಾತ್ರೆಗೆ ದಯಮಾಡಿದರು.
ಶ್ರೀಸುರೇಂದ್ರತೀರ್ಥರು ಶ್ರೀವಿಜಯೀಂದ್ರತೀರ್ಥರೊಡನೆ ದಿಗ್ವಿಜಯಯಾತ್ರೆ ಕೈಗೊಂಡು ವಿಜಯನಗರದಿಂದ ತೆರಳಿದ ಮೇಲೆ ಆತ್ಮೀಯ - ಪ್ರಾಣಪದಕದಂತಿದ್ದ ಶಿಷ್ಯರ ವಿಯೋಗದಿಂದ ಶ್ರೀವ್ಯಾಸಮುನಿಗಳಿಗೆ ಕೆಲದಿನ ಬಹಳ ಕಳಕಳಿ, ಬೇಸರವಾಗಿತ್ತು. ಇದರಂತೆ ಪರಮಮಿತ್ರರೂ, ಸತೀರ್ಥರೂ ಆಗಿದ್ದಶ್ರೀವಾದಿರಾಜರಿಗೂ ಬಹಳ ಬೇಸರವಾಗಿತ್ತು. ಆ ಹೊತ್ತಿಗೆ ಶ್ರೀವ್ಯಾಸರಾಯರಲ್ಲಿ ವ್ಯಾಸಂಗಮಾಡಬೇಕಾಗಿದ್ದುದೆಲ್ಲವೂ ಪೂರ್ಣವಾಗಿತ್ತು ಮತ್ತು ಉಡುಪಿಯಲ್ಲಿ ಅವರ ಪರ್ಯಾಯವೂ ಸಮೀಪವಾಗುತ್ತಿತ್ತು. ಅಂತೆಯೇ ಶ್ರೀವಾದಿರಾಜಗುರುವರ್ಯರು ಪೂಜ್ಯಗುರುಗಳಾದ ಶ್ರೀವ್ಯಾಸರಾಜರಲ್ಲಿ ಎಲ್ಲ ವಿಚಾರವನ್ನೂ ಅರಿಕೆಮಾಡಿ ಕ್ರಿ.ಶ. ೧೫೩೨ ರಲ್ಲಿ ತಾವು ಶ್ರೀವ್ಯಾಸರಾಜರ ಸಲಹೆಯಂತೆ ಎರಡು ವರ್ಷಗಳ ಕಾಲ ಪರ್ಯಾಯ ಪೀಠದಲ್ಲಿ ಕುಳಿತು ಶ್ರೀಕೃಷ್ಣನ ಸೇವೆ ಮಾಡುವುದಾಗಿ ವಿಜ್ಞಾಪಿಸಿ ಆ ಕಾಲಕ್ಕೆ ಉಡುಪಿಗೆ ದಯಮಾಡಿಸಿ ತಮ್ಮನ್ನು ಅನುಗ್ರಹಿಸಬೇಕೆಂದು ಪ್ರಾರ್ಥಿಸಿದರು. ಶ್ರೀವ್ಯಾಸರಾಜರು ಅವರ ಗುರುಭಕ್ತಿ-ಶ್ರದ್ಧೆಗಳಿಂದ ಸುಪ್ರೀತರಾಗಿ ಅವರಿಗೆ ಅನೇಕ ಕರ್ತವ್ಯಗಳನ್ನು ಉಪದೇಶಿಸಿ, ತಾವು ಪರ್ಯಾಯಕ್ಕೆ ಖಂಡಿತವಾಗಿ ಬರುವುದಾಗಿ ಅಭಯವಿತ್ತರು. ಆಗ ಶ್ರೀವಾದಿರಾಜರು ಗುರುಗಳನ್ನು ಬಿಟ್ಟುಹೋಗಬೇಕಲ್ಲಾ ಎಂಬ ದುಃಖದಿಂದ ಕಣ್ಣೀರು ಸುರಿಯುತ್ತಿರಲು ಗುರುಗಳ ಪಾದಗಳನ್ನು ಹಿಡಿದು ನಮಸ್ಕರಿಸಿ ಗದ್ಗದ ಕಂಠದಿಂದ “ಪೂಜ್ಯ ಗುರುದೇವ! ತಮ್ಮ ಶಿಷ್ಯನಲ್ಲಿ ಸಂಪೂರ್ಣ ಅನುಗ್ರಹಾಶೀರ್ವಾದಗಳಿರಬೇಕು” ಎಂದು ಪ್ರಾರ್ಥಿಸಿದರು. ಗುರುಗಳ ಕಣ್ಣಿನಲ್ಲಿಯೂ ಶಿಷ್ಯಪ್ರೇಮ, ಅವರ ಅಗಲಿಕೆಯಿಂದ ಕಣ್ಣೀರು ಹರಿಯಿತು. ಶ್ರೀವಾದಿರಾಜರ ಶಿರದ ಮೇಲೆ ತಮ್ಮ ಅಮೃತಹಸ್ತವಿರಿಸಿ ಆಶೀರ್ವದಿಸಿ ಪ್ರಿಯಶಿಷ್ಯರೇ, ಶ್ರೀಹರಿವಾಯುಗಳು ಸರ್ವದಾ ನಿಮ್ಮನ್ನು ಪೊರೆದು, ನಿಮ್ಮಿಂದ ಅಸಾಧಾರಣ ಸೇವೆ ಸ್ವೀಕರಿಸಿ, ಲೋಕಕಲ್ಯಾಣಾದಿ ಮಹತ್ಕಾರ್ಯಗಳನ್ನು ಮಾಡಿಸಿ, ನಿಮಗೆ ಅಖಂಡ ಕೀರ್ತಿ - ಪ್ರತಿಷ್ಠೆಗಳನ್ನು ಅನುಗ್ರಹಿಸುವರು” ಎಂದು ಹೇಳಿದರು. ಆ ನಂತರ ಶ್ರೀವಾದಿರಾಜರು ಗುರುಗಳ ಅಪ್ಪಣೆ ಪಡೆದು ಸಂಸ್ಥಾನದೊಡನೆ ಉಡುಪಿಗೆ ದಿಗ್ವಿಜಯಗೈದರು.
ಕನ್ನಡ ರಮಾರಮಣನಾದ ಕೃಷ್ಣದೇವರಾಯ ಕ್ರಿ.ಶ. ೧೫೩೦ ರ ಸುಮಾರಿಗೆ ಆರೋಗ್ಯ ಕೆಟ್ಟು ಹಾಸಿಗೆ ಹಿಡಿದು ಮಲಗಿದನು. ಔಷಧೋಪಚಾರಗಳಿಂದಾವ ಪ್ರಯೋಜನವೂ ಆಗಲಿಲ್ಲ. ಒಂದು ದಿನ ವೈದ್ಯರ ಸಲಹೆಯನ್ನೂ ಗಮನಿಸದ ಕೃಷ್ಣದೇವರಾಯನು ಮೇನೆಯಲ್ಲಿ ಕುಳಿತು ವಿಶ್ವಪಾವನ ಮಠ'ಕ್ಕೆ ಬಂದನು. ಅಶಕ್ತನಾದ ಸಾಮ್ರಾಟನನ್ನು ಗುರುಗಳ ಕಾರುಣ್ಯಪೂರ್ಣರಾಗಿ ಸ್ವಾಗತಿಸಿ ಏಕಾಂತಮಂದಿರಕ್ಕೆ ಕರೆದೊಯ್ದರು. ಅಲ್ಲಿರಾಯನು ತನ್ನ ಅವಸಾನಕಾಲ ಪ್ರಾಪ್ತವಾಗುತ್ತಿದೆಯೆಂದೂ, ತನ್ನ ತರುವಾಯ ಮುಂದೆ ಸಾಮ್ರಾಜ್ಯಕ್ಕೆ ತನ್ನ ಸಹೋದರನಾದ ಅಚ್ಯುತದೇವರಾಜನೇ ಸರ್ವವಿಧದಿಂದ ಅರ್ಹನಾಗಿರುವುದರಿಂದ ಅವನಿಗೆ ಪಟ್ಟಾಭಿಷೇಕಮಾಡಿ ತನ್ನ ಕರ್ತವ್ಯ ನಿರ್ವಹಿಸಿ ನಿಶ್ಚಿಂತನಾಗಿ ಅಸುನೀಗಲು ಬಯಸುವುದಾಗಿ ವಿಜ್ಞಾಪಿಸಿ “ಗುರುದೇವ! ಅತಿಶೀಘ್ರವಾಗಿ ಈ ಕಾರ್ಯ ನೆರವೇರಬೇಕು. ತಾವು ಖುದ್ದು ನಿಂತು ನನ್ನಿಂದ ಈ ಶುಭಕಾರ್ಯ ಮಾಡಿಸಿ ನನ್ನ ಮನಸ್ಸಿಗೆ ಶಾಂತಿ - ಸಮಾಧಾನಗಳನ್ನು ಕರುಣಿಸಬೇಕು. ನನ್ನ ಅನಂತರ ಪ್ರಿಯ ಅಚ್ಯುತದೇವರಾಯನಲ್ಲೂ ತಾವು ನನ್ನಲ್ಲಿ ಮಾಡಿದಂತೆಯೇ ಅನುಗ್ರಹಮಾಡುತ್ತಾ 'ರಾಜಗುರು'ಗಳಾಗಿದ್ದು ಅವನಿಗೆ ಸರ್ವವಿಧದಿಂದ ಮಾರ್ಗದರ್ಶನಮಾಡಿ ಅವನ ಮತ್ತು ಕನ್ನಡ ಸಾಮ್ರಾಜ್ಯದ ಕ್ಷೇಮಚಿಂತನ ಮಾಡಬೇಕು” ಎಂದು ಪ್ರಾರ್ಥಿಸಿದನು.
ಶ್ರೀವ್ಯಾಸರಾಜರಿಗೆ ಅವನ ಮಾತು ಕೇಳಿ ಒಂದು ರೀತಿಯಿಂದ ಮನಸ್ಸಿಗೆ ಅತ್ಯಂತ ಸಮಾಧಾನವೂ, ಒಂದು ರೀತಿಯಿಂದ ಇಂಥ ಅಸಾಮಾನ್ಯನಾದ, ಆದರ್ಶ ಸಾರ್ವಭೌಮನ ಅಂತ್ಯ ಸಮೀಪವಾಗುತ್ತಿದೆಯಲ್ಲಾ ಎಂಬುದಾಗಿ ದುಃಖವೂ ಉಂಟಾಗಿ ಸರ್ವಸಂಗ ಪರಿತ್ಯಾಗ ಮಾಡಿದ್ದರೂ ಶಿಷ್ಯಾಭಿಮಾನದಿಂದ ಆ ತಪಸ್ವಿಗಳ ಕಣ್ಣಿನಲ್ಲಿ ನೀರುದುರಿದವು. ಅವನನ್ನು ಸಾಂತ್ವನಗೊಳಿಸಿ “ಕೃಷ್ಣ! ನಿನ್ನಿಚ್ಛೆಯನ್ನು ಖಂಡಿತ ನೆರವೇರಿಸುತ್ತೇವೆ, ಚಿಂತಿಸಬೇಡ” ಎಂದು ಅಭಯವಿತ್ತು ಆಶೀರ್ವದಿಸಿದರು.
ಶ್ರೀವ್ಯಾಸರಾಜರ ಸಲಹೆಯಂತೆ ಕೃಷ್ಣದೇವರಾಯನು ಶಾಲಿವಾಹನಶಕೆ ೧೪೫೨ ನೇ ವಿರೋಧಿ ಸಂವತ್ಸರ ವೃಶ್ಚಿಕಮಾಸದ ಕೃಷ್ಣ ಪಂಚಮೀ (೧೫೩೦ A.D.) ಶುಭದಿನದಂದು ಅಚ್ಯುತದೇವರಾಯನಿಗೆ ಸಾಮ್ರಾಜ್ಯ ಪೀಠದಲ್ಲಿ ಪಟ್ಟಾಭಿಷೇಕ ಮಹೋತ್ಸವವನ್ನು ನೆರವೇರಿಸಿ, ರಾಜಗುರುಗಳಿಂದ ಆಶೀರ್ವಾದಮಾಡಿಸಿ ಸಾಮ್ರಾಜ್ಯಾಡಳಿತವನ್ನು ವಹಿಸಿಕೊಟ್ಟು, ಅಳಿಯನಾದ ರಾಮರಾಜ, ತಿರುಮಲರಾಯಾದಿಗಳನ್ನು ಮಹಾಮಂತ್ರಿಗಳಾಗಿದ್ದು ಅಚ್ಯುತದೇವರಾಯ ಸಾಮ್ರಾಟನಿಗೆ ಸಹಾಯಕರಾಗಿರಬೇಕೆಂದು ವ್ಯವಸ್ಥೆಮಾಡಿದನು. ಈ ಘಟನೆಯೂ ದೈವೀವಿಚಿತ್ರಾಗತಿಃ ಎನ್ನಲು ಒಂದು ಉತ್ತಮ ಉದಾಹರಣೆಯಾಗಿದೆ.
ಆನಂತರ ಕೃಷ್ಣದೇವರಾಯನು ನಿಶ್ಚಿಂತನಾಗಿ ಪ್ರತಿದಿನ ಶ್ರೀವ್ಯಾಸರಾಜರ ಸನ್ನಿಧಿಗೆ ಹೋಗಿ ತಾನು ಸ್ವರ್ಗಸ್ಥನಾಗಲು ಅವರ ಆಶೀರ್ವಾದರೂಪ ಶಕ್ತಿ ಪಡೆಯುತ್ತಿದ್ದನು. ಒಂದು ದಿನ ತಾನು ಇನ್ನು ಬದುಕುವುದಿಲ್ಲವೆಂದು ಮನಗಂಡು ಕೃಷ್ಣದೇವರಾಯನು ಗುರುವ್ಯಾಸರಾಜರ ಪಾದ ಹಿಡಿದು “ಗುರುದೇವ! ನನ್ನ ಕಾಲ ಮುಗಿಯಿತು. ನನಗೆ ಪರಲೋಕದಲ್ಲಿ ಸದ್ಧತಿಯಾಗುವಂತೆ ಆಶೀರ್ವದಿಸಿರಿ” ಎಂದು ಪ್ರಾರ್ಥಿಸಿದನು. ಶ್ರೀಯವರು ರಾಯನಿಗೆ ಹೃತ್ತೂರ್ವಕವಾಗಿ ಆಶೀರ್ವದಿಸಿ ಫಲಮಂತ್ರಾಕ್ಷತೆಯಿತ್ತು ಕಳುಹಿಸಿದರು.
ಇದಾದ ಒಂದೆಡರು ದಿನಗಳಲ್ಲಿಯೇ ಕೃಷ್ಣದೇವರಾಯನು ಸ್ವರ್ಗಸ್ಥನಾದನು.231 ಕರ್ನಾಟಕ ಸಾಮ್ರಾಜ್ಯದ ಭಾಗ್ಯರವಿ ಅಸ್ತಂಗತನಾದನು. ಜಗತ್ತಿನಲ್ಲೆಲ್ಲಾ ಆದರ್ಶವಾದ, ಭಾರತದ ಏಕೈಕ ಹಿಂದೂಸಾಮ್ರಾಜ್ಯವೆಂಬ ಕೀರ್ತಿ ವಿಶ್ವವಿಖ್ಯಾತವಾಗುವಂತೆ ಮಾಡಿ ಕನ್ನಡ ಸಾಮ್ರಾಜ್ಯದ ಕೀರ್ತಿ-ಪ್ರತಿಷ್ಠೆಗಳು ಸಾರ್ವಕಾಲೀನವಾಗಿ ವಿಶ್ವದ ಇತಿಹಾಸದಲ್ಲಿ ರತ್ನಾಕ್ಷರಗಳಿಂದ ಕೆತ್ತಿಸಿ ಮೆರದ ಮಹಾಪ್ರಭುವು ದಿವಂಗತನಾದನು. ಸಮಸ್ತ ಕನ್ನಡನಾಡು, ಪಂಡಿತ-ಗಾಯಕ-ಕವಿ-ಕಲೆಗಾರರು, ಪ್ರಜೆಗಳು ದುಃಖಸಮುದ್ರದಲ್ಲಿ
ಮುಳುಗಿದರು.
ಕೃಷ್ಣದೇವರಾಯನ ತರುವಾಯ ಕನ್ನಡ ಸಾಮ್ರಾಜ್ಯದ ಚಕ್ರವರ್ತಿಯಾದ ಅಚ್ಯುತದೇವರಾಯನು ಶ್ರೀವ್ಯಾಸರಾಜ ಗುರುಸಾರ್ವಭೌಮರಲ್ಲಿ ತನ್ನ ಅಣ್ಣನಂತೆಯೇ ಅತ್ಯಂತ ಭಕ್ತಿ-ಗೌರವಗಳಿಂದ ನಡೆದುಕೊಂಡು ಅವರ ಉಪದೇಶ, ಸಲಹೆ, ಮಾರ್ಗದರ್ಶನಗಳಂತೆ ರಾಜ್ಯಭಾರ ಮಾಡುತ್ತಾ, ಸಕಲ ಶತ್ರುಗಳನ್ನೂ ತನ್ನ ಬಾಹುಬಲದಿಂದ ಜಯಿಸಿದರೂ ಎಲ್ಲರೊಡನೆ ಮೈತ್ರಿಯಿಂದ ವರ್ತಿಸುತ್ತಾ, ಸಕಲ ಪ್ರಜೆಗಳ ಹಿತಚಿಂತನೆಯಲ್ಲಿ ಆಸಕ್ತನಾಗಿ ಸಾಮ್ರಾಜ್ಯವನ್ನು ಅಭಿವೃದ್ಧಿಸುತ್ತಾ, ದೇವ-ದ್ವಿಜ-ಗುರುಹಿರಿಯರಲ್ಲಿ ವಿಧೇಯನಾಗಿ ನಡೆದುಕೊಂಡು ಸಕಲರ ಪ್ರೇಮಾದರಗಳಿಗೂ, ಅಪಾರ ಕೀರ್ತಿಗೂ ಪಾತ್ರನಾದನು.
ಶ್ರೀವ್ಯಾಸರಾಜರು, ನೂತನ ಸಾಮ್ರಾಟನಾದ ಅಚ್ಯುತದೇವರಾಯನು ಮಹಾಪರಾಕ್ರಮಿಯೂ, ವಿನಯಾದಿಸಂಪನ್ನನೂ, ಗುರುವಿಧೇಯಚರಿತನೂ, ಪ್ರಜಾರಂಜಕನೂ ಆದ ರಾಜನೆಂದು ಎಲ್ಲರ ಪ್ರಶಂಸೆಗೆ ಪಾತ್ರನಾಗಿ ಕನ್ನಡನಾಡಿನ ಅಭಿವೃದ್ಧಿಯಲ್ಲಿ ಅಳಿಯ ರಾಮರಾಜ ಮುಂತಾದ ಆತ್ಮೀಯ ಬಂಧುಗಳು ಹಾಗೂ ಸ್ವಾಮಿನಿಷ್ಠ ಸೇವಕರ ಸಹಾಯ - ಸಹಕಾರಗಳನ್ನು ಪಡೆದು ಕೀರ್ತಿ ಗಳಿಸುತ್ತಿರುವುದನ್ನು ಕಂಡು ಬಹುವಾಗಿ ಹರ್ಷಿಸುತ್ತಿದ್ದರು. ಕೀರ್ತಿಶೇಷ ಕೃಷ್ಣದೇವರಾಯನ ಶ್ರೇಯಸ್ಸಿಗಾಗಿ ಮಳೂರು, ಕೋಲಾರ, ಅರಳುಮಲ್ಲಿಗೆ ಮುಂತಾದ ಕಡೆಗಳಲ್ಲಿ ಭಗವಂತನ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿದಂತೆ, ಅಚ್ಯುತರಾಯನ ಅಭ್ಯುದಯಕ್ಕಾಗಿ ಸಾಮ್ರಾಜ್ಯದ ಅನೇಕ ಕಡೆಗಳಲ್ಲಿ ಶ್ರೀಹರಿಯ ವಿವಿಧ ಅವತಾರ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿದರು.
ಹೀಗೆ ಪ್ರತಿಷ್ಠಿಸಿದ ದೇವರುಗಳಲ್ಲಿ ವಿಜಯನಗರದಲ್ಲಿ ಪ್ರತಿಷ್ಠಿಸಿದ ಶ್ರೀಯೋಗವರದನರಸಿಂಹದೇವರು ಅತಿಮುಖ್ಯವೆಂದು ಹೇಳಬಹುದು. ಶ್ರೀವ್ಯಾಸರಾಜರು ಅಚ್ಯುತದೇವರಾಯನ ಪ್ರಾರ್ಥನೆಯಂತೆ ಶಾಲಿವಾಹನ ಶಕೆ ೧೪೫೪ ನೇ ನಂದನನಾಮ ಸಂವತ್ಸರದ ಶ್ರಾವಣ ಬಹುಳ ಬಿದಿಗೆಯ ಶುಭದಿನದಂದು (೧೮-೦೭-೧೫೩೪) ಶ್ರೀವಿಜಯವಿಠಲದೇವರ ಗುಡಿಯ ಸಭಾಂಗಣದಲ್ಲಿ ಶ್ರೀಯೋಗವರದನರಸಿಂಹದೇವರನ್ನು ಪ್ರತಿಷ್ಠಾಪಿಸಿದರು. ಅಚ್ಯುತದೇವರಾಯ ಈ ಪ್ರತಿಷ್ಠಾ ಸಮಾರಂಭಕ್ಕಾಗಿ ಹೇರಳವಾಗಿ ದ್ರವ್ಯವನ್ನು ಖರ್ಚುಮಾಡಿ, ವಿಶೇಷ ದಾನ-ಧರ್ಮಗಳನ್ನು ನೆರವೇರಿಸಿ ಶ್ರೀವ್ಯಾಸರಾಜಗುರುಗಳಿಗೆ ಅಪಾರ ಕಾಣಿಕೆಗಳನ್ನು ಸಮರ್ಪಿಸಿ ಕೃತಾರ್ಥನಾದನು.