ಕಲಿಯುಗ ಕಲ್ಪತರು ನಾಲ್ಕನೆಯ ಉಲ್ಲಾಸ ಶ್ರೀವ್ಯಾಸರಾಜಯತಿಸಾರ್ವಭೌಮರ ೫೨. ಜ್ಞಾನಿಗಳ ಸರಸಗೋಷ್ಠಿ
ಶ್ರೀವ್ಯಾಸರಾಜರು ಶ್ರೀಪುರಂದರದಾಸರಿಗೆ ಹರಿದಾಸಪಂಥದ ನಾಯಕತ್ವವನ್ನು ವಹಿಸಿಕೊಟ್ಟು, ಶ್ರೀಕನಕದಾಸರನ್ನು ಅವರಿಗೆ ಬೆಂಬಲಿಗರಾಗಿಟ್ಟು ಸಹಾಯಮಾಡುತ್ತಾ, ಹರಿದಾಸಸಾಹಿತ್ಯ ರಚನೆಯಿಂದ ಜನಸಾಮಾನ್ಯರ ಉದ್ಧಾರಮಾಡಬೇಕೆಂದು ಆಜ್ಞಾಪಿಸಿದ್ದಂತೆ ಆ ಮಹನೀಯರಿಬ್ಬರೂ ಅಗಾಧ ಸಾಹಿತ್ಯ ನಿರ್ಮಾಣದಿಂದ ಹರಿದಾಸವಾಹ್ಮಯ ಭಂಡಾರವನ್ನು ತುಂಬಿ ಆಪಂಡಿತಪಾಮರರು, ಸಕಲ ಸಜ್ಜನರಿಗೂ ಮಹೋಪಕಾರ ಮಾಡಹತ್ತಿದರು. ಶ್ರೀವ್ಯಾಸರಾಜರು ಪುರಂದರದಾಸ-ಕನಕದಾಸರಲ್ಲಿ ವಿಶೇಷ ಪ್ರೇಮ ತೋರುತ್ತಾ, ಮಠದಲ್ಲಿ ಅವರನ್ನು ಹೆಚ್ಚಾಗಿ ಗೌರವ-ಆದರಗಳಿಂದ ಅವರಿಗೆ ಪ್ರಾಶಸ್ತ್ರ ನೀಡಿ ಅನುಗ್ರಹಿಸುತ್ತಿದ್ದರು.
ಪುರಂದರದಾಸರು, ಅವರ ಪುತ್ರರು, ಕನಕದಾಸರುಗಳು ವೇದಾದಿಶಾಸ್ತ್ರಸಾರಗಳನ್ನೂ, ಮಧ್ವಮತದ ಸತ್ತತ್ವಗಳನ್ನೂ, ಧರ್ಮ, ಭಗವದ್ಭಕ್ತಿ-ಸದಾಚಾರ-ನೀತಿ-ಶೀಲ-ವ್ಯವಹಾರಾದಿ ಮಹತ್ವ, ಆದರ ಆಚರಣೆಯಿಂದ ದೊರಕುವ ಭಗವದನುಗ್ರಹಾದಿ ವಿಚಾರಗಳನ್ನು ಮನೆಮನೆಗಳಿಗೂ ತಲುಪಿಸಿ-ಉಪದೇಶಿಸಿ, ತತ್ವ-ಧರ್ಮ-ಸಂಸ್ಕೃತಿಗಳಲ್ಲಿಜನತೆಗೆ ಒಲವುಂಟಾಂಗುವಂತೆ ಮಾಡುತ್ತಾ, ಅದರಿಂದ ಸಕಲರೂ ಸದಸದ್ದಿವೇಕಶೀಲರಾಗಿ ಆನ್ನೋದ್ದಾರ ಮಾರ್ಗದಲ್ಲಿ ಮುನ್ನಡೆವಂತೆ ಮಾರ್ಗದರ್ಶನ ಮಾಡುತ್ತಿದ್ದರು. ಅವರು ಸಮಾಜದ ಡಂಭಾಚಾರ, ಓರೆ-ಕೋರೆಗಳನ್ನು, ಕುಂದು-ಕೊರತೆಗಳನ್ನು ಎತ್ತಿತೋರಿ, ತಮ್ಮ ಉಪದೇಶದಿಂದ ಸಮಾಜವನ್ನು ಸನ್ಮಾರ್ಗದಲ್ಲಿ ಕೊಂಡೈದು ಎಲ್ಲೆಲ್ಲಿಯೂ ಶ್ರೀಹರಿಭಕ್ತಿ, ಧರ್ಮಶ್ರದ್ಧೆ, ಸದಾಚಾರಶೀಲ ಸತ್ಯಗಳು ಕಂಗೊಳಿಸುವಂತೆ ಮಾಡುತ್ತಾ ಗುರುಗಳ ಪ್ರಶಂಸೆಗೆ ಪಾತ್ರರಾದರು. ಶ್ರೀವ್ಯಾಸರಾಜರು ತಾವು ಪೀಠಾಧಿಪತಿಗಳಾಗಿದ್ದುದರಿಂದ ಈ ಕಾರ್ಯವನ್ನು ಸ್ವತಃ ಮಾಡಲು ಸಾಧ್ಯವಾಗಿರಲಿಲ್ಲವಾದ್ದರಿಂದ ಇಂಥ ಮಹತ್ಕಾರ್ಯವನ್ನು ಪುರಂದರ-ಕನಕದಾಸಾದಿಗಳ ದ್ವಾರ ನೆರವೇರಿಸಿದರು. ಇದು ವ್ಯಾಸಮುನಿಗಳು ಮಾಡಿದ ಒಂದು ಕ್ರಾಂತಿಕಾರಿ ಸಮಾಜ ಸುಧಾರಣಾಕಾರ್ಯವೆಂದು ಹೇಳಲಡ್ಡಿಯಿಲ್ಲ.
ಈ ಮಹತ್ಕಾರ್ಯವು ಸರ್ವರ ಮೆಚ್ಚುಗೆಗೂ ಪಾತ್ರವಾಗಿತ್ತು. ಕನಕದಾಸರಿಗೆ ಶ್ರೀಗಳವರು ಹೆಚ್ಚು ಪ್ರಾಶಸ್ತ್ರ ಕೊಡುತ್ತಿದ್ದುದು ಮಠದ ಕೆಲಜನರಿಗೆ, ಪಂಡಿತರಿಗೆ ನುಂಗಲಾರದ ತುತ್ತಾಗಿತ್ತು. ಕನ್ನಡ ಸಾಮ್ರಾಜ್ಯದ ಜನತೆ, ಶ್ರೀಮಠದ ಸಮಸ್ತ ಪಂಡಿತರೂ ಶ್ರೀವ್ಯಾಸರಾಜರು ಮಾಡುವ ಪ್ರತಿಯೊಂದು ಕಾರ್ಯವೂ ಭಗವತಿಕರವ, ನಾಡು-ನುಡಿಗಳ ಏಳಿಗೆಗೆ ಕಾರಣವೂ, ಸರ್ವಜನ ಕಲ್ಯಾಣಕರವೂ ಎಂದು ನಂಬಿದ್ದರೂ, ಪಂಡಿತರಗಾಗಿದ್ದು, ಗುರುಗಳ ಮಹಿಮೆಯನ್ನು ಅವರ ಉದಾರಭಾವಗಳನ್ನು ಪ್ರತಿದಿನ ಕಾಣುತ್ತಿದ್ದರೂ ಹಿಂದೆ ಹೇಳಿದಂತೆ ಕೆಲ ಅಜ್ಜ-ಅಸೂಯಾಪರ ಕುಹಕಿಗಳು ಕನಕದಾಸರಿಗೆ ದೊರಕುತ್ತಿದ್ದ ಪ್ರಾಶಸ್ತ್ರ, ಗೌರವಗಳನ್ನು ಸಹಿಸಲಾಗದೇ ಒಳಗೇ ಅಸಮಾಧಾನದಿಂದ ಕುದಿಯುತ್ತಿದ್ದರು. ಕನಕದಾಸರ ನಿಜಯೋಗ್ಯತೆಯನ್ನರಿಯದ ಆ ಕುಹಕಿಗಳು ಅಲ್ಲಲ್ಲಿ, ಹಿಂದೆ - ಮುಂದೆ ವ್ಯಾಸಮುನಿಗಳನ್ನೂ, ಕನಕದಾಸರನ್ನೂ ಆಡಿಕೊಳ್ಳುತ್ತಿದ್ದರು.
ಇವೆಲ್ಲವನ್ನೂ ಕಂಡ ಪುರಂದರದಾಸರು - ಕುಹಕಿಗಳು, ಅಜ್ಜಜನರು, ಮಠದ ಕೆಲ ದಿಂಡೇರು ಕನಕದಾಸರನ್ನು ಆಡಿಕೊಳ್ಳುವುದನ್ನು ಶ್ರೀವ್ಯಾಸರಾಜರಲ್ಲಿ “ಕನಕದಾಸನ ಮೇಲೆ ದಯಮಾಡೆ ವ್ಯಾಸಮುನಿ! ಮಠದ ಜನರೆಲ್ಲರೂ ಆಡಿಕೊಂಬುವರು” ಎಂದು ಪದ ರಚಿಸಿ - ವಿಜ್ಞಾಪಿಸಿದರು. ಶ್ರೀವ್ಯಾಸರಾಜರು ಕುಹಕಿಗಳಿಗೆ ಅನೇಕ ಬಗೆಯಾಗಿ ಅವರ ಯೋಗ್ಯತೆಯನ್ನು ನಿರೂಪಿಸಿ ಕನಕದಾಸರ ಮಹತ್ವವನ್ನು ತೋರಿಸಿಕೊಟ್ಟರು.
ಕುಹಕಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡು ಕನಕದಾಸರಲ್ಲಿ ಕ್ಷಮೆ ಬೇಡಿ, ಅಂದಿನಿಂದ ಅವರಲ್ಲಿ ಗೌರವದಿಂದ ವರ್ತಿಸತೊಡಗಿದರು. ಈ ಒಂದು ಉದಾಹರಣೆಯು ಶ್ರೀವ್ಯಾಸರಾಜರು ಉಚ್ಚ-ನೀಚ ಎಂಬುದನ್ನು ಪರಿಗಣಿಸದೆ, ಅವರವರ ಸ್ವರೂಪ - ಯೋಗ್ಯತೆಯನ್ನರಿತು ಜ್ಞಾನಿಗಳನ್ನು ಗೌರವಿಸುತ್ತಾ, ಅನುಗ್ರಹಿಸುತ್ತಾ, ತಮ್ಮ ಆಚರಣೆಯಿಂದ ಜಗತ್ತಿಗೆ ಆದರ್ಶರಾಗಿದ್ದರೆಂಬುದನ್ನು ಸ್ಪಷ್ಟಪಡಿಸುವುದು.
ಶ್ರೀವ್ಯಾಸರಾಜರು, ಪುರಂದರದಾಸರು, ಕನಕದಾಸರು ಅನೇಕ ವೇಳೆ ಜನಸಂಪರ್ಕವಿಲ್ಲದ ಏಕಾಂದ ಉಪವನ-ನದೀತೀರದಲ್ಲಿ ಕಲೆಯುತ್ತಿದ್ದರು. ಅದೊಂದು ಜ್ಞಾನಿಗಳ ಸರಸಗೋಷ್ಠಿಯಾಗುತ್ತಿತ್ತು. ಪ್ರತಿನಿಮಿಷವೂ ರಸನಿಮಿಷಗಳಾಗಿರುತ್ತಿದ್ದವು. ಒಮ್ಮೆ ವ್ಯಾಸರಾಜರು-ಪುರಂದರದಾಸರು ತುಂಗಭದ್ರೆಯ ನದಿಯಾಚೆ ಒಂದು ವನದಲ್ಲಿ ಕುಳಿತು ಮಾತನಾಡುತ್ತಿದ್ದರು. ಜ್ಞಾನಿಗಳು ಸೇರಿದಾಗ ಅವರಾಡುವ ಮಾತುಗಳೆಲ್ಲವೂ ಪರಮಾತ್ಮ ವಿಷಯಕವಾಗಿದ್ದು, ಆಧ್ಯಾತ್ಮ ಅನುಭವಗಳ ವಿವೇಚನಾತ್ಮಕ ರಸಘಟ್ಟಗಳೇ ಅಲ್ಲವೇ! ಅವರು ತಮ್ಮ ತಮ್ಮ ಅನುಭವಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾ ಶ್ರೀಹರಿ, ಅವನ ಭಕ್ತರು, ಅವರ ಹಿರಿಮೆ-ಗರಿಮೆ, ದೇವರ ಭಕ್ತವಾತ್ಸಲ್ಯ, ಕಾರುಣ್ಯ, ಆ ಮಹಾಪ್ರಭುವಿನಲ್ಲಿ ಭಕ್ತರು ನಡೆದುಕೊಳ್ಳಬೇಕಾದ ರೀತಿಗಳನ್ನು ಚರ್ಚಿಸುತ್ತಿದ್ದರು. ಆಗವರು ಒಮ್ಮೆ ನಗುವರು, ಮತ್ತೊಮ್ಮೆ ಅಳುವರು, ರೋಮಾಂಚಿತರಾಗಿ ನರ್ತಿಸುವರು. ಮತ್ತೆ ಕಣ್ಣು ಮುಚ್ಚಿ ಮೌನವಾಗಿ ಧ್ಯಾನರತರಾಗುವರು! ಹೀಗೆ ನಡೆದಿತ್ತು ಅವರ ವರ್ತನೆ. ಆ ವನದಲ್ಲಿ ಹತ್ತಿರದಲ್ಲೇ ಕುರಿಗಳನ್ನು ಮೇಯಿಸುತ್ತಾ ಓರ್ವ ವೃದ್ಧ ಕುರುಬನು ಇವರ ಎಲ್ಲ ವರ್ತನೆಗಳನ್ನು ಗಮನಿಸುತ್ತ ಅವರ ನಡವಳಿಕೆಯನ್ನು ಕಂಡು ವಿಸ್ಮಿತನಾಗಿ ಅವರನ್ನೇ ನೋಡುತ್ತಾ ಕುಳಿತಿದ್ದನು.
ಆಗ ಪುರಂದರದಾಸರು “ಸ್ವಾಮಿ, ಈಗ ನಮ್ಮ ಕನಕದಾಸರಿರಬೇಕಾಗಿತ್ತು!” ಎಂದರು. ಗುರುಗಳು “ನಿಜ, ಅವನಿದ್ದರೆ ಸ್ವಾರಸ್ಯವಾಗಿರುತ್ತದೆ. ಇಂದೇಕೆ ಕನಕ ಬರಲಿಲ್ಲ? ಅವನಿದ್ದರೆ ಚೆನ್ನ, ಅಲ್ಲವೇ ? ಅವನನ್ನು ಕರೆಸೋಣವೇ ? ಕರೆತರಲು ಇಲ್ಲಿ ಯಾರೂ ಇಲ್ಲವಲ್ಲ” ಎಂದರು. ಆಗ ದಾಸರು ದೂರದಲ್ಲಿ ಕುಳಿತಿದ್ದ ಕುರುಬನನ್ನು ಕರೆದು "ಸ್ವಾಮಿ, ಇವನು ಕರೆತರುತ್ತಾನೆ” ಎಂದರು. ವ್ಯಾಸರಾಜರೂ ಆ ಮುದುಕನನ್ನು ಕೈಬೀಸಿ ಬಾ ಎಂದು ಕರೆದರು. ಆತನಿಗೆ ಶ್ರೀಗಳವರು ರಾಜಗುರುಗಳೆಂದು ತಿಳಿದಿತ್ತು. ಅವರಲ್ಲಿಗೆ ಬರಲು ಭಯವಾಯಿತು. ಮತ್ತೆ ಗುರುಗಳು ಕರೆದಿದ್ದರಿಂದ ಹೆದರುತ್ತಲೇ ಬಂದು “ನನ್ನದೇನು ತಪ್ಪಾಯ್ತು ಗುರುಸ್ವಾಮಿ ? ಇಲ್ಲಿ ಕುರಿ ಮೇಯಿಸಿದ್ದು ತಪ್ಪಾ? ಈಸಲ ಕ್ಷಯ್ದಿಬಿಡಿ, ಇನ್ನುಮ್ಯಾಕೆ ಇಲ್ಲಿ ಮೈಸೋಕಿಲ್ಲ!” ಎಂದ.
ಗುರುಗಳು ನಗುತ್ತಾ “ನೀನು ಕುರಿ ಮೇಯಿಸಲು ನಮ್ಮ ಅಭ್ಯಂತರವಿಲ್ಲಪ್ಪಾ. ನಾವು ಹೇಳುವ ಕೆಲಸ ಮಾಡುವೆಯಾ?” ಎನಲು, ಮುದುಕನು “ಆಗೋದು ಒಡೆಯಾ, ಆದ್ರೆ ನನ್ನೀ ಕುರಿಯನ್ನು ಕಾಯೋರಾರು ?” ಎಂದ.
ದಾಸರು ನಗುತ್ತಾ, “ನಾವು ನೋಡ್ಕೊತೇವಪ್ಪಾ, ಗುರುಗಳು ಹೇಳಿದಂತೆ ಮಾಡು” ಎನಲು ಆತ ಮುದನ್ನ ತಮಾಷೆ ಮಾಡ್ತೀರಾ ಬುದ್ದಿ?” ಎಂದ.
ಶ್ರೀಗಳವರು “ವಿನೋದ ಅಲ್ಲಪ್ಪಾ, ನೋಡಿಲ್ಲಿ ನಮ್ಮ ಕನಕ ಎಲ್ಲಿದ್ದಾನೆ ನಿನಗೆ ಗೊತ್ತ? ನೀನು ಅವನನ್ನು ಕರೆದುಕೊಂಡು ಬಂದರೆ ನೀನು ಕೇಳಿದ್ದು ಕೊಡುತ್ತೇವೆ” ಎಂದಾಗ ಆ ಕುರುಬನು “ಕೇಳಿದ್ದು ಕೊಡ್ತೀರಾ ಬುದ್ಯೋರಾ? ಅಂಗಿದ್ರೆ ಕನಕಪ್ಪನ್ನು ಕರೆತರಿವಿ” ಎಂದನು. ಶ್ರೀಗಳವರು “ಆಗಲಿ, ನೀನು ಹೋಗಿ ಕನಕನನ್ನು ಇಲ್ಲಿಗೆ ಕರೆದುಕೊಂಡು ಬಾ” ಎಂದರು. ಕುರುಬ “ಆಗ್ಲಿ ನನ್ನೊಡೆಯಾ ನಿಂಪಾದ್ವೇಗತಿ” ಎಂದು ಹೇಳಿ ನದಿಯನ್ನು ದಾಟಿ ಕನಕದಾಸರಿದ್ದಲ್ಲಿಗೆ ಬಂದ. “ಓಯ್ ಕನಕಪ್ಪಾ, ನಿಮ್ಮ ಗುರುಸ್ವಾಮಿಗೊಳು ನಿನ್ನ ಕರೀತಾ ಔದ್ರೆ, ಬಾ ಓಗೋವಾ” ಎಂದ.
ಕನಕದಾಸರು “ಅಲ್ಲಿಯಾರಾರಿದ್ದಾರೆ ? ಅವರೇನು ಮಾಡುತ್ತಿದ್ದಾರೆ?” ಎಂದು ಪ್ರಶ್ನಿಸಿದರು. ಮುದುಕ “ಗುರುಸ್ವಾಮಿ, ದಾಸಪ್ಪ ಇಬ್ರೂ ಆದ್ರೆ, ಅದೇನೇನೋ ಮಾತಾಡ್ಕಂತಿದ್ರು, ಅದೇನಪ್ಪಾ ಕನಕಪ್ಪಾ, ಅವ್ರು ಒಮ್ಮೆ ನಗ್ತಿದ್ರು, ಇನ್ನೊಮ್ಮೆ ಅಳಿದ್ರು, ಮತ್ತೆ ಕಣ್ಣು ಮುಕ್ಕೊ೦ಡ್ ಕೂಡ್ತಿದ್ರು, ನನ್ನ ಕರವೋ ಲೋ, ಕನಕಪ್ಪನ್ನ ಕಂಡ್ಯಾ, ನೀ ಕೇಳಿದ್ ಕೊಡ್ತವೆ ಅಂದ್ರಪ್ಪ, ಬಾ ಬೇಗ ಹೋಗೋವಾ” ಎಂದು ಬಡಬಡಿಸಿದನು.
ಕನಕದಾಸರು ನಗುತ್ತಾ “ಲೋ ನಿನ್ನ ಅದೃಷ್ಟ ಚೆನ್ನಾಗಿದೆ. ಅವರು ನಿನಗೇನು ಬೇಕು ಎಂದು ಕೇಳಿದರೆ ನೀನು ಸ್ವಾಮಿ, ನೀವು ಅತ್ತೆರಲ್ಲಾ, ಅದರಲ್ಲಿ ಸ್ವಲ್ಪ ನನಗೆ ಕೊಡಿ, ನೀನು ನಕ್ಕಿದ್ದರಲ್ಲಿ ಸ್ವಲ್ಪ ಕೊಡಿ, ಕಣ್ಣುಮುಚ್ಚಿ ದೇವನ್ನ ಧ್ಯಾನಿಸಿದಿರಲ್ಲ, ಅದರಲ್ಲೂ ಸ್ವಲ್ಪ ನನಗೆ ಕೊಟ್ಟುಬಿಡಿ, ನನಗೆ ಇನ್ನೇನು ಬೇಡ! ಎಂದು ಕೇಳಿಬಿಡು, ಅದರಿಂದ ನಿನಗೆ ಮುಂದಿನ ಜನ್ಮದಲ್ಲಿ ಒಳ್ಳೆಯದಾಗುತ್ತದೆ. ದೇವ ನಿನಗೆ ಒಲಿಯುತ್ತಾನೆ” ಎಂದು ಹೇಳಿಕೊಟ್ಟರು. ಅವರ ಮಾತು ಕೇಳಿ ಆ ವೃದ್ಧಕುರುಬ ಬೆರಗಾಗಿ “ಕನಕಪ್ಪ! ಮುಂದಿನ್ ಜನ್ಮದಾಗೆ ನಂಗೊಳೆದಾಗೋದಿದ್ರೆ, ನಂಗೊಂದಾಸೆ ಇದೆ ಕನಕಪ್ಪಾ” ಎಂದಾಗ ಕನಕದಾಸರು “ಅದೇನಪ್ಪಾ ನಿನ್ನಾಸೆ ?” ಎಂದರು. ಆಗ ಆ ಮುದುಕ “ಕನಕಪ್ಪಾ, ನೀನು ನಮ್ಮವ. ಆದ್ರೂ ಸ್ವಾಮ್ಮೋರು ನಿಂಗೆ ಬಲೇ ಮದ್ದಾದೆ ಮಾಡ್ತವೆ. ಮುಂದಿನ್ ಜನ್ಮದಾಗೆ ನಾನೂ ನಿನ್ನಂಗೇ ದಾಸ ಆಗೋಕು, ದೇವಮಗ ಆಗೋಕು. ಅಂಗೆ ಆಗೋಂಗೆ ಸ್ವಾಮೋಳ್ ಕೇಳಿ!” ಎಂದು ಹೇಳಿ ಕನಕದಾಸರೊಡನೆ ಗುರುಗಳೆಡೆಗೆ ಬಂದನು. ಅವರನ್ನು ಕಂಡೊಡನೆ ಗುರುಗಳು, ದಾಸರು ನಕ್ಕರು. ಶ್ರೀವ್ಯಾಸರಾಜರು “ಪಾಪ, ಕನಕನನ್ನು ಕರೆತಂದಿದ್ದಾನೆ ಈ ಮುದುಕ. ಇವನಿಗೇನಾದರೂ ಕೊಡಬೇಡವೇ ದಾಸರೇ ?” ಎಂದಾಗ ಪುರಂದರದಾಸರು “ನಿಜ ಸ್ವಾಮಿ, ಇವನಿಗೆ ಚೆನ್ನಾಗಿಯೇ ಕೊಡಬೇಕು” ಎಂದರು. ಗುರುಗಳು ಹಸನ್ಮುಖಿಗಳಾಗಿ “ನಿನಗೇನು ಬೇಕಪ್ಪಾ?” ಎಂದು ಕೇಳಲು ಮುದುಕ “ಸ್ವಾರಾ! ನೀವು, ಈ ದಾಸಪ್ಪಾ ನಗ್ತಿದ್ರಲ್ಲಾ, ಅದ್ರಲ್ಲಾ, ಕಣ್ಣುಮುಚ್ಚಿ ದೇವರ ನೆನಸ್ತಿದ್ರಲ್ಲಾ, ಅದೆಲ್ಲದರಾಗೂ ನಂಗೆ ಈಟೀಟು ಕೊಟ್ಟುಡಿ ಸಾಕು” ಎಂದು ಅಡ್ಡಬಿದ್ದು ಕೋರಿದನು.
ದಾಸರು ನಗುತ್ತಾ “ಇದು ಈ ಮುದುಕನ ಮಾತಲ್ಲಾ ಮಹಾಸ್ವಾಮಿ, ತಾವು ಹೇಳಿದಂತೆ ಕನಕ ಬರುತ್ತಲೂ ಪ್ರಾರಂಭವಾಯ್ತಲ್ಲ ಚಮತ್ಕಾರ!” ಎಂದರು. ಶ್ರೀವ್ಯಾಸಮುನಿಗಳು “ಎಲವೋ, ನಿಜ ಹೇಳು. ನಿನಗೀ ಮಾತನ್ನು ಯಾರು ಹೇಳಿಕೊಟ್ಟರು ?” ಎಂದು ಪ್ರಶ್ನಿಸಿದರು. ವೃದ್ದ ಕೈಜೋಡಿಸಿ ನನ್ನಂಥ ಹಳ್ಳಿಮುಕ್ಕದ್ದೆ ಇನ್ಯಾರ್ ಹೇಳಿಕೊಡ್ತವೆ? ನಮ್ಮ ಈ ಕನಕಪ್ಪನೇ ಹೇಳ್ಕೊಟ್ಟ. ಮುಂದಿನ್ ಜನ್ಮದಾಗೆ ನಂಗೆ ಒಳ್ಳೇದಾಗೈತಂತೆ! ಕನಕಪ್ಪನ ಮಾತಂದ್ರೆ ನಂಗೆಲ್ಲ ದೇವ್ರಮಾತಿದ್ದಾಂಗೆ! ಬುದ್ಯೋರಾ! ಮುಂದಿನ್ ಜನ್ಮದಾಗೆ ನಾನೂ ನಂಕನಕಪ್ಪಂಗೆ ದೇವ ದಾಸನಾಗಬೇಕು. ಅಂಗೆ ಹರಸಿ ನಾ ಕೇಳಿದ್ದ ಕೊಟ್ಟುಡಿ” ಎಂದು ಕೋರಿದನು.
ಶ್ರೀವ್ಯಾಸರಾಜರು “ಸರಿಯಪ್ಪ, ನಮ್ಮ ಕನಕ ಮಾಡೋದೆಲ್ಲಾ ಇಂಥಾ ಒಳ್ಳೇ ಕಾರ್ಯಾನೇ. ಆಗಲಿ, ನೀನು ಕೇಳಿದ್ದನ್ನು ಕೊಟ್ಟಿದ್ದೇವೆ. ನಿನಗೆ ಒಳ್ಳೆಯದಾಗುವುದು ಹೋಗು” ಎಂದು ಆಶೀರ್ವದಿಸಿದರು. ತಪ್ಪಿದ್ದಲ್ಲ. ಹಿಂದೂ, ಇಂದು, ಮುಂದೂ ಅದೇ ನಿಮ್ಮ ವೈಶಿಷ್ಟ್ಯ” ಎಂದು ಗಹಗಹಿಸಿ ನಕ್ಕರು. ವ್ಯಾಸಮುನೀಂದ್ರರು ಗಂಭೀರರಾಗಿ “ಶ್ರೀಶೇಚ್ಛಾ, ನಮ್ಮ ವಿಚಾರವೇನು ?” ಎಂದು ದರಹಾಸ ಬೀರಿದರು.
ಕನಕದಾಸರು ನಗುತ್ತಾ ಎಲ್ಲಾ ತಿಳಿದಿದ್ದರೂ ಈ ದಾಸನನ್ನೇಕೆ ಪರೀಕ್ಷಿಸುವಿರಿ? ಮಹಾಸ್ವಾಮಿ, ತಾವೂ ತಮ್ಮ ಕೊನೆಯ ಅವತಾರ ಕೈಗೊಂಡು ಅವತರಿಸಬೇಕಲ್ಲವೇ? ಆದರೆ, ಗುರುದೇವ! ನಿಮ್ಮ ಅದೃಷ್ಟ ಜಗತ್ತಿನಲ್ಲಿ ಇನ್ಯಾರಿಗೂ ಇಲ್ಲ, ನೋಡಿ! ಹಿಂದೂ, ಇಂದೂ, ಮುಂದೂ ನೀವು ಆನೆಯ ಮೇಲೆ, ರಥದಲ್ಲಿ, ಪಾಲಕಿಯಲ್ಲಿ ಮೆರೆಯಬೇಕೆಂಬುದೇ ಶ್ರೀಹರಿಸಂಕಲ್ಪ! ಅವನಿಗೆ ನಿಮ್ಮಲ್ಲಿ ಮತ್ಯಾರಲ್ಲೂ ಇಲ್ಲದ ವಿಶೇಷ ಮಮತೆ! ವಾತ್ಸಲ್ಯ! ಸ್ವಾಮಿ. ಆಹಾ, ನಿಮ್ಮ ಮುಂದಿನ ಜನ್ಮದಲ್ಲಿ ಅಖಂಡ ವಿಶ್ವವನ್ನೇ ಪಾವನಗೊಳಿಸಿ, ಶ್ರೀಹರಿಯ ಪ್ರತಿನಿಧಿಗಳಾಗಿ ಜಗತ್ತಿನಲ್ಲಿ ಮೆರೆಯುತ್ತೀರಿ! ಆಗಲೂ ನಿಮಗೆ ಈ ಕಾವಿಶಾಟ ಬಿಟ್ಟಿದ್ದಲ್ಲ!” ಎಂದು ನಸುನಕ್ಕರು.
ಶ್ರೀವ್ಯಾಸರಾಜರು : ಸರಿ, ಕನಕ, ನಿನ್ನ ವಿಚಾರ ಹೇಳು.
ಕನಕ : ಊಹೂಂ, ನಾನಿನ್ನು ಮತ್ತೆ ಜನಿಸಿ ಕಷ್ಟಪಡಲಾರೆ. ಈಗ ಅನುಭವಿಸಿದ್ದೇ ಸಾಕು. ನಿಮ್ಮ ದಯೆಯಿಂದ ಈ ಕುರುಬನಿಗೆ ಇನ್ನೇಕೆ ಆ ಕಷ್ಟ.
ವ್ಯಾಸ : (ನಗುತ್ತಾ) ಏಕೆ ಕನಕ ? ಕೋಣನ ಮೇಲೆ ಮೆರೆಯಬೇಕೆಂದು ಆಶೆಯೇ? ಸಾಧ್ಯವಿಲ್ಲ. ನಾವೆಲ್ಲ ಮತ್ತೆ ಜನಿಸುವಾಗ ನೀನು ಬರಲೇಬೇಕು. ಈಗ ಕುರುಬನಾಗಿ ಬಂದೆ ಮುಂದೆ ಹೊಲೆಯನಾಗಿ ಬಾ. ಆಗಲೂ ನಿನಗೆ ಈ ಕಂಬಳಿಯೇ ಗತಿ! ಅಲ್ಲವೇ ದಾಸರೇ ? ಆನಂತರ ಬೇಕಾದರೆ ಶಾಶ್ವತವಾಗಿ ನಿನ್ನ ಕೋಣದ ಮೇಲೆ ಮೆರೆಯುವಂತೆ!
ದಾಸರು : ಅಹುದಹುದು. ನೀನೂ ಮತ್ತೆ ಕಂಬಳಿ ಹೊದ್ದು ಬರಲೇಬೇಕು.
ಕನಕ : (ಮಂದಹಾಸ ಬೀರಿ) ಸರಿ, ಸ್ವಾಮಿ ನಿಮ್ಮಪ್ಪಣೆ! ಹೊಲೆಯನಾಗಿಯೇ ಬರುತ್ತೇನೆ. ಆಗಲೂ ನೀವೇ ನನ್ನನ್ನು ಉದ್ಧರಿಸುವುದಾಗಿ ಮಾತು ಕೊಡಿ. ಅಂದರೆ ಬರುತ್ತೇನೆ!
ವ್ಯಾಸರಾಜರು ನಸುನಕ್ಕು “ಆಗಲಿ ಕನಕ! ನಿನ್ನಿಚ್ಛೆಯನ್ನು ಪೂರೈಸುತ್ತೇವೆ. ಈಗ ನಿನಗೆ ತೃಪ್ತಿಯಾಯಿತೆ?” ಎಂದಾಗ ಕನಕದಾಸರೂ ನಗುತ್ತಾ “ಉದ್ಧತನಾದೆ ಗುರುದೇವ ಎಂದು ನಮಸ್ಕರಿಸಿದರು. ಹೀಗೆ ಆ ಜ್ಞಾನಿಗಳು ಸೇರಿದಾಗಲೆಲ್ಲ ಅನೇಕ ಸ್ವಾರಸ್ಯಕರ ಘಟನೆಗಳು ಜರುಗುತ್ತಿದ್ದವು. ಆ ಜ್ಞಾನಿಗಳ ಸರಸಗೋಷ್ಠಿ ಆಧ್ಯಾತ್ಮರಂಗದ ಇತಿಹಾಸದಲ್ಲಿ ಸ್ವರ್ಣಾಕ್ಷರದಲ್ಲಿ ಬರೆದಿಡುವಂತಹುದೆಂದರೆ ತಪ್ಪಾಗದು.