ಕಲಿಯುಗ ಕಲ್ಪತರು ನಾಲ್ಕನೆಯ ಉಲ್ಲಾಸ ಶ್ರೀವ್ಯಾಸರಾಜಯತಿಸಾರ್ವಭೌಮರ ೫೧. ಹರಿದಾಸಪಂಥ ಮತ್ತು ದಾಸಸಾಹಿತ್ಯ
ಯುಗಯುಗಗಳಿಂದಲೂ ಹರಿದಾಸರು ಅವರ ಸಾಹಿತ್ಯಗಳು ಅವ್ಯಾಹತವಾಗಿ ಸಾಗಿಬಂದಿದೆ. ಸೃಷ್ಟಿಯ ನಂತರ ಆರಂಭವಾದ ಹರಿದಾಸ ಪರಂಪರೆಯು ಅದ್ಯಾಪಿ ನಡೆದುಬಂದಿರುವುದೆಂದು ಹೇಳಬಹುದು. ಇದರ ಸ್ಪಷ್ಟಚಿತ್ರ ನಮ್ಮ ಚಿತ್ತಭಿತ್ತಿಯಲ್ಲಿ ಒಡಮೂಡಿ ಇದರ ವಿಶ್ವವ್ಯಾಪಕತೆಯು ನಮಗೆ ಅವಗತವಾಗಬೇಕಾದರೆ ಸ್ವಲ್ಪ ಈ ವಿಚಾರವನ್ನು ವಿವೇಚಿಸುವುದು ಅವಶ್ಯವೆನಿಸುವುದು.
ಹರಿದಾಸರೆಂದರೆ ಯಾರು ? ವೇದ-ಪುರಾಣ ಮತ್ತು ಈ ಕಲಿಯುಗಗಳಲ್ಲಿನ ಹರಿದಾಸರು, ಭಗವಂತನ ಸ್ತುತಿರೂಪವಾದ ಅವರ ಸಾಹಿತ್ಯ. ಅದು ನಡೆದುಬಂದ ದಾರಿ, ಭಾರತದ ಇತರ ವೈಷ್ಣವಸಂತರಿಗೂ ಕನ್ನಡದ ಹರಿದಾಸರಿಗೂ ಇವರ ವ್ಯತ್ಯಾಸ, ಮಹತ್ವಗಳೇನು ? ಹರಿದಾಸರ ಲಕ್ಷಣ, ಅವರ ನಡೆ-ನುಡಿ, ಭಗವದ್ಭಕ್ತಿ, ಉಪಾಸನೆ, ಅವರು ರಚಿಸಿದ ಸಾಹಿತ್ಯ, ಈ ಸಾಹಿತ್ಯದ ಪ್ರೇರಕಶಕ್ತಿ ಯಾವುದು ? ಕನ್ನಡದಲ್ಲಿ ಹರಿದಾಸ ವಾಹ್ಮಯವನ್ನು ಪ್ರಾರಂಭಿಸಿದ ಮಹನೀಯರು, ಆ ಪರಂಪರೆ, ಹರಿದಾಸ ಸಾಹಿತ್ಯದ ಸುವರ್ಣಯುಗಕ್ಕೆ ಕಾರಣಪುರುಷರು, ಅವರ ವೈಶಿಷ್ಟ್ಯ, ಕನ್ನಡ ಹರಿದಾಸ ಸಾಹಿತ್ಯದಿಂದ ನಾಡು-ನುಡಿ, ಜನತೆಗಾದ ಮಹೋಪಕಾರ - ಇವೇ ಮುಂತಾದ ವಿಚಾರಗಳನ್ನು ಸ್ಕೂಲವಾಗಿಯಾದರೂ ವಿವೇಚಿಸಿದಾಗ ಅದರ ಮಹತ್ವದ ಅರಿವಾಗುವುದು.
ನಾವು ಈ ಅಧ್ಯಾಯದಲ್ಲಿ ನಮ್ಮ ಯೋಗ್ಯತಾನುಸಾರ ಮೇಲ್ಕಂಡ ಎಲ್ಲ ವಿಷಯಗಳನ್ನು ವಿವೇಚನೆಯೊಡನೆ ಓದುಗರ ಮುಂದಿಡಬಯಸಿದ್ದೇವೆ.
ವೇದಾದಿ ಸಕಲಶಾಸ್ತ್ರಗಳೂ ಶ್ರೀಮನ್ನಾರಾಯಣನೇ ಸರ್ವೋತ್ತಮ ದೇವತೆ, ಸೃಷ್ಟಿ-ಸ್ಥಿತಿ-ಸಂಹಾರಾದಿಗಳಿಗೆ ಅವನೇ ಕಾರಣ, ರಮಾ-ಬ್ರಹ್ಮ ರುದ್ರೇಂದ್ರಾದಿ ಸಮಸ್ತದೇವತೆಗಳಿಗೂ ಶ್ರೀಹರಿಪರಮಾತ್ಮನೇ ನಿಯಾಮಕನು. ಆ ಮಹಾಪ್ರಭುವು ದೋಷದೂರನೂ, ಅನಂತಕಲ್ಯಾಣಗುಣಪೂರ್ಣನ, ಮೋಕ್ಷಪ್ರದಾತನ, ಅಚಿಂತ್ಯಾದ್ಭುತಶಕ್ತನೂ, ಅಪ್ರತಿಹತಮಹಾಮಹಿಮನೂ, ಸ್ವಗತಭೇದವಿವರ್ಜಿತನೂ, ಭಕ್ತಬಂಧುವಾ, ವೇದೈಕವೇದ್ಯನೂ ಆದ ಪರಬ್ರಹ್ಮನೆಂದು ಸಾರುವುವು. ಶ್ರುತಿ, ಉಪನಿಷತ್, ಸ್ಮೃತಿ, ಇತಿಹಾಸ, ಗೀತಾ, ಪಾಂಚರಾತ್ರ, ರಾಮಾಯಣ, ಪುರಾಣಗಳು ಹಾಗೂ ಸಕಲಸೂತ್ರಾದಿಗಳೂ ಪರಮಮುಖ್ಯವೃತ್ತಿಯಿಂದ ಶ್ರೀಮನ್ನಾರಾಯಣನೇ ಸರ್ವೋತ್ತಮನಾದ ಪರಬ್ರಹ್ಮನೆಂದು ಘೋಷಿಸುವವು. ಸಕಲ ಜೀವರ ದುಃಖಕ್ಕೆ ಕಾರಣವಾಗಿರುವ ಜನನ-ಮರಣರೂಪ ಸಂಸಾರಚಕ್ರದಿಂದ ಬಿಡುಗಡೆ ಮಾಡಿ, ಆತ್ಯಂತಿಕ ದುಃಖಪರಿಹಾರದ್ವಾರಾ ಸರ್ವಜೀವರ ಮುಖ್ಯಗುರಿಯಾದ ಸ್ವರೂಪಾನಂದಾವಿರ್ಭಾವರೂಪವಾದ ಶಾಶ್ವತಸುಖವನ್ನು ಕೊಡುವ ಮಹಾಕರುಣಾಳುವೇ ಆ ಭಗವಂತನು. ಅವನನ್ನು ಒಲಿಸಿಕೊಂಡು ಅವನ ಆತ್ಯರ್ಥ ಪ್ರಸಾದಕ್ಕೆ ಪಾತ್ರರಾಗಿ ಸುಜೀವಿಗಳು ಸುಖಿಸಬೇಕೆಂದೇ ವೇದಾದಿ ಸಕಲಶಾಸ್ತ್ರಗಳೂ ಪ್ರವೃತ್ತವಾಗಿವೆ. “ಅದುಃಖಮಿತರತ್ ಸರ್ವಂ | ಜೀವಾ ಏವತು ದುಃಖಿನಃ ।। ತೇಷಾಂ ದುಃಖ ಪ್ರಹಾಣಾಯ ಶ್ರುತಿರೇಷಾ ಪ್ರವರ್ತತೇ ”, “ನಾರಾಯಣೋ ಪರಮೋ ವಿಚಿಂತ್ಯಃ ಮುಮುಕ್ಷುಭಿಃ ಕರ್ಮಪಾಶಾದಮುಷ್ಮಾತ್ ||” ಮುಂತಾಗಿ ಗೇಗೀಯಮಾನನಾಗಿರುವ ಶ್ರೀಹರಿಯನ್ನು ಒಲಿಸಿಕೊಳ್ಳಲು ಮಾಡಬೇಕಾದ ಸಾಧನಮಾರ್ಗದಲ್ಲಿ ಮೊದಲು ಆ ಪ್ರಭುವಿನ ದಾಸರಾಗುವುದು ಅನಿವಾರ್ಯ. ಹೀಗೆ ತಮ್ಮ ಉದ್ದಾರವನ್ನು ಬಯಸಿ ತಮ್ಮ ಸರ್ವಸ್ವವನ್ನೂ ಶ್ರೀಹರಿಗೆ ಅಂಕಿತಗೊಳಿಸಿ ನಿರಂತರವೂ ಭಕ್ತಿಯಿಂದ ಸೇವಿಸುವವರೇ ಹರಿದಾಸರು. ಇಂತಹ ಹರಿದಾಸರು ಎಲ್ಲ ಕಾಲದಲ್ಲಿಯೂ ಆಗಿಹೋಗಿದ್ದಾರೆ.
ಹರಿದಾಸರನ್ನು ಎಣಿಸುವಾಗ ಅಕ್ಷರಪುರುಷಳೆನಿಸಿದ ಸಾಕ್ಷಾತ್ ರಮಾದೇವಿಯೇ ಶ್ರೀಹರಿದಾಸರಲ್ಲಿ ಮೊದಲಿಗಳೆನಿಸುವಳು. ಲಕ್ಷ್ಮೀದೇವಿಯ ತರುವಾಯ ಚತುರ್ಮುಖ ಬ್ರಹ್ಮದೇವರು ಮತ್ತು ವಾಯುದೇವರು ಪ್ರಮುಖ ಹರಿದಾಸರು. ಅವರ ನಂತರ ಭಾರತೀ, ಸರಸ್ವತಿ, ಗರುಡ, ಶೇಷ, ರುದ್ರ, ಸೌಪರ್ಣಿ, ವಾರುಣಿ, ಉಮಾದೇವಿಯರೂ, ಆ ನಂತರ ಇಂದ್ರಾದಿ ಸಮಸ್ತ ದೇವತೆಗಳೆಲ್ಲರೂ ಹರಿದಾಸರೇ, ಪುರಾಣಯುಗದಲ್ಲಿ ಪ್ರಸಿದ್ಧರಾದ ನಾರದ, ಪ್ರಹ್ಲಾದ, ವಿಭೀಷಣ, ಧ್ರುವ, ಅಂಬರೀಷ, ಶಿಬಿ, ಬಲಿ, ರುಕ್ರಾಂಗದ, ಗಜೇಂದ್ರ, ಅಜಾಮಿಳಾದಿಗಳು ಭಾಗವತಾಗ್ರಣಿಗಳೆನಿಸಿ ತಮ್ಮ ಹರಿಭಕ್ತಿಯಿಂದ ಹರಿದಾಸರೆಂದು ವಿಖ್ಯಾತರಾಗಿದ್ದಾರೆ. ಹೀಗೆ ಈ ಹರಿದಾಸ ಪರಂಪರೆಯು ಅನಾದಿಕಾಲದಿಂದಲೂ ನಡೆದುಬಂದಿದೆ.
“ಅಸಂಶಯಃ ಸಂಶಯಚಿತ್ ಗುರುರುಕೊ ಮನೀಷಿಭಿಃ | ತಸ್ಮಾದ್ದಷ್ಟಾಗುರುರ್ಮುಖ್ಯಃ ಸೇರ್ವೆಷಾಮಪಿ ಸರ್ವದಾ ||” ಎಂದು ಶ್ರೀಮನ್ಮಧ್ವಾಚಾರ್ಯರು ಹೇಳುವುದರಿಂದ ಚತುರ್ಮುಖ ಬ್ರಹ್ಮದೇವರೇ ಮುಖ್ಯಲೋಕಗುರುಗಳಾದ್ದರಿಂದ ಚೇತನವರ್ಗದಲ್ಲಿ ಅವರೇ ಮೊದಲ ಹರಿದಾಸರು. ಅವರು ಶ್ರೀಹರಿಯನ್ನು ವಿವಿಧ ರೀತಿಯಿಂದ ಕೊಂಡಾಡಿರುವರು. “ನಮೋನಂತಾಯ ದುರಂತಶಕ್ತಯೇ! ವಿಚಿತ್ರವೀರ್ಯಾಯ ಪವಿತ್ರಕರ್ಮಣೇ || ವಿಶ್ವಸಸರ್ಗಸ್ಥಿತಿತಿಸಂಯಮಾನ್ ಗುಣೈಃ | ಸ್ವಲೀಲಯಾ ಸಂದಂಧತೇಽವ್ಯಯಾತ್ಮನೇ ||” (- ಭಾಗವತ) ಅಂದರೆ ಶ್ರೀಹರಿಯೇ ಸಮಸ್ತ ಜಗತ್ತಿನ ಸೃಷ್ಟಾದಿಕರ್ತನಾದ ಸರ್ವೋತ್ತಮ ದೇವತೆಯೆಂದು ಅವರು ಸ್ತುತಿಸಿರುವುದಲ್ಲದೇ ಪಾಂಚರಾತ್ರಾಗಮದಲ್ಲಿನ ಅವರ ಸ್ತುತಿಯೂ ಇದೇ ರೀತಿ ಬಹು ಮಾರ್ಮಿಕವಾಗಿದೆ. ಬ್ರಹ್ಮದೇವರು 'ಶ್ರೀಹರಿಯು ನನ್ನನ್ನು, ಶಿವಾದಿಗಳನ್ನು ಬೊಂಬೆಯನ್ನಾಗಿ ಮಾಡಿಕೊಂಡು ಕ್ರೀಡಿಸುವನು ಎಂದೂ ಹೇಳಿದ್ದಾರೆ. ರುದ್ರದೇವರು ತಮ್ಮ ಪುತ್ರ ಷಣ್ಮುಖನಿಗೆ ಹೀಗೆ ಉಪದೇಶಿಸಿದ್ದಾರೆ ಶ್ರೀವಿಷ್ಣು ಒಬ್ಬನೇ ಸರ್ವೋತ್ತಮನಾದ ಪರಬ್ರಹ್ಮನು. ಅವನ ಜ್ಞಾನವೇ ಮೋಕ್ಷಸಾಧನವು. ಇದು ಸಕಲಶಾಸ್ತ್ರಗಳ ನಿರ್ಣಯ. ಇದಕ್ಕೆ ವಿರುದ್ಧವಾದುದೆಲ್ಲವೂ ಮೋಹಕವು. ಇಷ್ಟೇ ಅಲ್ಲ, ನನಗೂ ಶ್ರೀಹರಿಗೂ ಸಾಮ್ಯ ಹೇಳುವುದು, ವಿಷ್ಣುವಿಗಿಂತ ನಾನು ಶ್ರೇಷ್ಠನೆಂದು ಹೇಳುವುದು, ಮುಕ್ತರಾದ ನಮಗೂ ಶ್ರೀಹರಿಗೂ ಅಭೇದವನ್ನು ಹೇಳುವುದು - ಇವೆಲ್ಲ ಮೋಕ್ಷಕ್ಕೆ ಅನರ್ಹರಾದವರನ್ನು ಮೋಹಗೊಳಿಸಲು ಹೇಳಿದ ವಚನಗಳೇ ವಿನಃ ಅವು ಸತ್ಯವಲ್ಲ, ಮೋಕ್ಷದಲ್ಲಿಯೂ ನಮಗೂ ವಿಷ್ಣುವಿಗೂ ಭೇದವಿದ್ದೇ ಇದೆ. ಇದು ತಥ್ಯವಾದವಿಚಾರ. ಇದರಂತೆ ಉಪಾಸನೆ ಮಾಡು ಎಂದು ಉಪದೇಶಿಸಿದ್ದಾರೆ. ಇವೆಲ್ಲದರ ವಿವೇಚನೆಯಿಂದ ಶ್ರೀಹರಿಯೇ ಸರ್ವೋತ್ತಮ. ಉಳಿದ ಚೇತನಪ್ರಪಂಚವೆಲ್ಲವೂ ಅವನ ಅಧೀನ ಎಂಬುದು ಸ್ಪಷ್ಟವಾಗುವುದು. ಈ ಮೇಲಿನ ಪ್ರಮಾಣಗಳಲ್ಲಿ ಕಾಣಬರುವ ಶ್ರೀಹರಿಸ್ತುತಿ ಭಗವಂತನ ವರ್ಣನೆ, ಭಗವತ್ತತ್ವಗಳು ಉಪದೇಶರೂಪವಾದುದೆಲ್ಲವೂ ಹರಿದಾಸಸಾಹಿತ್ಯ ಎಂದು ಹೇಳಬಹುದು.
ಪುರಾಣಕಾಲದಲ್ಲಿ ಹರಿದಾಸರಲ್ಲಿ ಪ್ರಹ್ಲಾದರಾಜರು ಆಜನ್ಮ ವೈಷ್ಣವರೆಂದು ಪ್ರಖ್ಯಾತರಾದ ಭಾಗವತಾಗ್ರಣಿಗಳು. ಅವರ ಸ್ತುತಿಗಳೆಲ್ಲವೂ ಉತ್ತಮವಾದವು. ಅದರಲ್ಲಿ ಭಕ್ತನ ಕೊರಗು ಚೆನ್ನಾಗಿ ಚಿತ್ರಿತವಾಗಿದೆ. ಅವರ ಗುರುಗಳಾದ ದೇವರ್ಷಿ ನಾರದರಿಗೆ ಭಾಗವತಧರ್ಮ ಪ್ರಚಾರಕರೆಂಬ ಬಿರುದಿದೆ. ನಾರಾಯಣನೆಂಬುವ ನಾಮದ ಬೀಜವ ನಾರದ ಬಿತ್ತಿದ ಧರೆಯೊಳಗೆ” ಎಂಬ ಪ್ರಮಾಣದಂತೆ ಜಗತ್ತಿಗೆ ಹರಿದಾಸ್ಯವನ್ನು ಹೇಳಿಕೊಟ್ಟವರೇ ನಾರದರು. ನಾರದರ ಪ್ರಾರ್ಥನೆಯಂತೆ ಭಗವಾನ್ ವೇದವ್ಯಾಸರು 'ಭಾಗವತ'ವನ್ನು ರಚಿಸಿದರು. ನಾರದರು ತಮ್ಮ ಭಾಗವತವೃತ್ತಿಯನ್ನು ವೇದವ್ಯಾಸರಲ್ಲಿ ನಿವೇದಿಸಿಕೊಂಡಿರುವುದು ಹೃದಯಂಗಮವಾಗಿದೆ. ಗಜೇಂದ್ರನು ಮೊಸಳೆಗೆ ಸಿಲುಕಿದಾಗ “ಓಂ ನಮೋ ಭಗವತೇ ತಸ್ಮಯತ ಏತಚ್ಚಿದಾತ್ಮಕಂ | ಪುರುಷಾಯಾದಿಬೀಜಾಯ ಪರೇಶಾಯಾಭಿಧೀಮಹಿ ” ಇತ್ಯಾದಿಯಾಗಿ ನಾನಾಪರಿಪರಿಯಿಂದ ಭಗವಂತನನ್ನು ಪ್ರಾರ್ಥಿಸಿದ್ದಾರೆ. ಕಾಮಭಕ್ತಿಯಿಂದ ಗೋಪಿಕಾಸ್ತ್ರೀಯರು ಶ್ರೀಕೃಷ್ಣನನ್ನು ಒಲಿಸಿಕೊಂಡರು. ಕೃಷ್ಣನನ್ನು ಕಾಣದಾದಾಗ ವಿರಹದಿಂದ ಬಳಲಿದ ಅವರು ಮಾಡಿದ ಪ್ರಲಾಪ ಸುಪ್ರಸಿದ್ಧವಾಗಿದೆ. ಹೀಗೆ ಭಾಗವತರುಗಳ ಸಂಖ್ಯೆ ಅಪರಿಮಿತವಾಗಿದೆ. ಅವರು ಮಾಡಿದ ಸ್ತೋತ್ರರೂಪಕೃತಿಯೇ ಭಾಗವತಾದಿ ಪುರಾಣಗಳು. ಈ ಭಾಗವತೋತ್ತಮರೆಲ್ಲ ಭಗವಂತನನ್ನು ಗಾಯನ, ಕೀರ್ತನ, ನರ್ತನಾದಿಗಳಿಂದ ಭಜನಮಾಡುತ್ತಿದ್ದರು. “ಸಂತತಂ ಚಿಂತಯಂತೋ ಮಾಂ ಯತಂತಶ್ಚ ದೃಢವ್ರತಾ | ನಮಸಂತಶ್ಚ ಮಾಂ ಭಕ್ತಾನಿತ್ಯಯುಕ್ತಾ ಉಪಾಸತೇ ” ಅಂದರೆ ಹೀಗೆ ಭಜನೆ ಮಾಡುವವರೇ ಯೋಗಿಗಳೆಂದು ಕೃಷ್ಣಪರಮಾತ್ಮನು ಗೀತೆಯಲ್ಲಿ ವರ್ಣಿಸಿದ್ದಾನೆ.
ಪದ್ಮಪುರಾಣದಲ್ಲಿ ಭಾಗವತರೆಲ್ಲರೂ ಸೇರಿ ಶ್ರೀಹರಿಯ ಕೀರ್ತನ, ಗಾಯನ, ನರ್ತನಗಳನ್ನು ಮಾಡುತ್ತಿದ್ದ ಪರಿಯು ಬಹುಮನೋಜ್ಞವಾಗಿ ವರ್ಣಿತವಾಗಿದೆ -
ಪ್ರಹ್ಲಾದಸ್ತಾಳಧಾರೀ ತರಳಗತಿತಯಾ ಚೋದವ ಕಾಂಧಾರೀ |
ವೀಣಾಧಾರೀ ಸುರರ್ಷಿ ಸ್ವರಕುಶಲತಯಾ ರಾಗಕರ್ತಾರ್ಜುನೋ ಭೂತ್ || ಇಂದ್ರೋ ವಾದೀನ್ಮದಂಗಂ ಜಯಜಯಸುಕರಾ ಕೀರ್ತಯಂತೆ ಕುಮಾರಾ | ತತ್ರಾಗ್ರೇ ಭಾವಕರ್ತಾ ರಸರಚನತಯಾ ವ್ಯಾಸಪುತ್ರ ಶುಕೋSಭೂತ್ ||
ಅಂದರೆ ಪ್ರಹ್ಲಾದ - ಉದವ - ನಾರದ - ಅರ್ಜುನ - ಇಂದ್ರ - ದೇವಕುಮಾರರು ಮತ್ತು ಶ್ರೀಶುಕಾಚಾರ್ಯರೇ ಮೊದಲಾದ ಭಾಗವತೋತ್ತಮರೆಲ್ಲ ಒಟ್ಟಾಗಿ ಸೇರಿ ಶ್ರೀಹರಿಕೀರ್ತನೆ ಮಾಡುತ್ತಿದ್ದರಂತೆ!
ಕಲಿಯುಗದಲ್ಲಿ ಅವತರಿಸಿ ಶ್ರೀಹರಿತತ್ವರಹಸ್ಯವನ್ನು ಬೋಧಿಸಿ ಶ್ರೀಹರಿಯನ್ನು ವಿವಿಧ ರೀತಿಯಿಂದ ಸೇವಿಸಿ, ಸ್ತುತಿಸಿ ಅವನ ಪರಮಾನುಗ್ರಹಕ್ಕೆ ಪಾತ್ರರೆನಿಸಿದ ವಾಗ್ದಂಶಸಂಭೂತರಾದ ಶ್ರೀಮನ್ಮಧ್ವಾಚಾರ್ಯರು ಬ್ರಹ್ಮದೇವರ ತರುವಾಯ ಶ್ರೇಷ್ಠ ಹರಿದಾಸರಲ್ಲಿ ಅಗ್ರಗಣ್ಯರು. ಅವರು ಮಾಡಿರುವ ಸ್ತೋತ್ರದ ಭಾವ ಬಹುಗಂಭೀರವಾದುದು. ಶ್ರೀವಾಯುದೇವರ ಹನುಮ-ಭೀಮ-ಮದ್ದ ಎಂಬ ಮೂರು ಅವತಾರಗಳೂ ಶ್ರೀಹರಿಯ ಸೇವೆಗಾಗಿಯೇ ಮೀಸಲು! ಅವರ ಜೀವನದ ಪ್ರತಿಕ್ಷಣವೂ ದೇಹದ ಪ್ರತಿನರವೂ ಹರಿನಾಮದಿಂದ ತುಂಬಿರುವುವು. ಜೀವೋತ್ತಮರಾದ ಅವರು ಪ್ರತಿಜೀವರಲ್ಲಿಯೂ ಇದ್ದು ಪ್ರತಿದಿನವೂ ೨೧,೬೦೦ ಹಂಸಮಂತ್ರವನ್ನು ಜಪಮಾಡುವರು. ಅವರಿಗೆ ಏಳು ಕೋಟಿ ಮಹಾಮಂತ್ರಗಳ ಸಿದ್ಧಿಯಾಗಿರುವುವು. ಈ ಮಹನೀಯರ ನಡೆಯೆಲ್ಲಾ ಹರಿಸೇವೆ, ನುಡಿಯೆಲ್ಲಾ ಹರಿಸ್ತೋತ್ರವೇ. ಮಧುರ ಗಾಯನಕ್ಕೆ ಅನುಕೂಲವಾದ ಶ್ರೀಮಧ್ವಾಚಾರ್ಯರು ರಚಿಸಿದ “ದ್ವಾದಶಸ್ತೋತ್ರ”ವು “ಹರಿಗೀತೆ” ಎಂದು ವಿಖ್ಯಾತವಾಗಿದೆ. ಇದೇ ಇಂದಿನ ಕರ್ನಾಟಕ ಹರಿದಾಸಸಾಹಿತ್ಯಕ್ಕೆ ಪ್ರೇರಕಶಕ್ತಿ, ಕೇಂದ್ರಬಿಂದು ಎಂದು ಹೇಳಬಹುದು.
ಆಚಾರ್ಯ ಮಧ್ವರು ವೇದೋಪನಿಷತ್ ಪುರಾಣಾದಿಗಳು ಹಾಗೂ ಶ್ರೀಬಾದರಾಯಣರ ಬ್ರಹ್ಮಸೂತ್ರಗಳ ಹೃದಯವನ್ನು
ಸುಜನರಿಗೆ ನೀಡಿ ಉದ್ಧರಿಸಲು ರಚಿಸಿದ ವೇದಾಂತಶಾಸ್ತ್ರಗ್ರಂಥಗಳಲ್ಲಿ ತತ್ವನಿರ್ಣಯ, ಅನುವ್ಯಾಖ್ಯಾನ, ಋಗ್ವಾಷ್ ತಾತ್ಪರ್ಯ ನಿರ್ಣಯಾದಿಗ್ರಂಥಗಳಲ್ಲಿ ಅಷ್ಟೇ ಏಕೆ, ಕರ್ಮನಿರ್ಣಯಾದಿಗ್ರಂಥಗಳಲ್ಲಿ ಎಲ್ಲೆಲ್ಲಿಯೂ ಶ್ರೀಹರಿಯ ಸ್ತೋತ್ರ ಒಂದಿಲ್ಲೊಂದು ರೂಪದಿಂದ ಬಂದಿದೆ. ಕೆಲವೆಡೆ ಸುಲಿದ ಬಾಳೆಹಣ್ಣಿನಂತೆ ಸುಕರವಾಗಿ ಸಿಕ್ಕುವಂತಿದ್ದರೆ, ಕೆಲವು ಕಡೆ ಕಠಿಣವಾದ ಚಿಪ್ಪಿನೊಳಗಿರುವ ಕೊಬ್ಬರಿಯಂತೆ ಅಡಗಿದೆ ಹರಿಕೀರ್ತನೆ, ಹರ್ಯುತ್ಕರ್ಷಸ್ತವ! “ನಮಾಮಿ ನಿಖಿಲಾಧೀಶ ಕಿರೀಟಾಫ್‌ಷ್ಟಪೀಠವತ್” ಎಂಬ ಹರಿಯ ಆಪಾದಮಸ್ತಕವರ್ಣನೆಯೂ, “ಕೇಶವಕೇಶವ ಶಾಸಕ ವಂದೇ”, “ಮತ್ಸಕರೂಪ ಲಯೋಧಿ ವಿಹಾರಿನ್” ಮುಂತಾದ ಭಗವನ್ಮೂರ್ತಿ ವರ್ಣನೆಯೂ ಸಕಲಶಾಸ್ತ್ರಾರ್ಥಗರ್ಭಿತವಾಗಿಯೂ ಇದ್ದು ಅತ್ಯಂತ ಭಕ್ತಿಪರವೂ ಆಗಿದೆ. ಸಂಗೀತ ಶೈಲಿಯಲ್ಲಿ ರಚಿತವಾದ ಆಚಾರ್ಯರ "ದ್ವಾದಶಸ್ತೋತ್ರವೇ ಅವರ ಅನುಯಾಯಿಗಳೂ, ಶಿಷ್ಯರೂ ಆದ ಶ್ರೀನರಹರಿತೀರ್ಥರೇ ಮೊದಲಾದ ಎಲ್ಲ ಕನ್ನಡ ಹರಿದಾಸರುಗಳಿಗೆ ಸ್ಫೂರ್ತಿಯಿತ್ತು ಅಸಂಖ್ಯ ಪದ-ಪದ್ಯ-ಸುಳಾದಿ-ಉಗಾಭೋಗ ಮತ್ತು ಕನ್ನಡ ಕಾವ್ಯಗಳ ರಚನೆಗೆ ಕಾರಣವಾದುದರಿಂದ ಶ್ರೀಮದಾಚಾರ್ಯರೇ ಕನ್ನಡ ಹರಿದಾಸಪರಂಪರೆಯ ಅಧ್ವರ್ಯುಗಳೆಂದು ಧಾರಾಳವಾಗಿ ಹೇಳಬಹುದು.
ಶ್ರೀಮದಾಚಾರ್ಯರ ಸಮಸ್ತ ಗ್ರಂಥಗಳಿಗೆ ಟೀಕೆಗಳನ್ನು ರಚಿಸಿ “ಟೀಕಾಚಾರ್ಯ'ರೆಂದೇ ಪ್ರಸಿದ್ದರಾದ ಇಂದ್ರಾಂಶ ಸಂಭೂತರೂ ಷಾಷಿಕಕುಲಶೇಖರರೂ ಆದ ಶ್ರೀಮಜ್ಜಯತೀರ್ಥಗುರುಪಾದರು ಹರಿದಾಸರ ಶ್ರೇಣಿಯಲ್ಲಿ ಅಗ್ರಮಾನ್ಯರು. ಇದಕ್ಕೆ ಹರಿಮಹಿಮಾಪ್ರತಿಪಾದಕಗಳಾದ ಅವರ ಗ್ರಂಥಗಳೇ ಸಾಕ್ಷಿ! ಆದ್ದರಿಂದಲೇ ಅವರು “ಶ್ರೀಮದ್ದ ಕಲ್ಪವೃಕ್ಷಶ್ಚ ಜಯಾಚಾರ್ಯಸ್ತು ಧೇನವ | ಚಿಂತಾಮಣಿಸ್ತು ವ್ಯಾಸಾರ್ಯ ಮುನಿಯವುದಾಹೃತಮ್ ||” ಅಂದರೆ “ಶ್ರೀಮಧ್ವ-ಜಯಾರ್ಯ-ವ್ಯಾಸಾರ್ಯರೆಂಬ ಮುನಿತ್ರಯರಲ್ಲಿ ದ್ವಿತೀಯರಾಗಿ ಪುರಾಣಪ್ರಸಿದ್ಧರಾಗಿದ್ದಾರೆ.
ಹರಿದಾಸರೆಂದರೆ ಯಾರು? ಅವರ ಲಕ್ಷಣವೇನು ? ಎಂಬುದನ್ನು ಸಾಮಾನ್ಯವಾಗಿ ಹೀಗೆ ಹೇಳಬಹುದು. ಭಾಗವತಧರ್ಮಾವಲಂಬಿಗಳಾಗಿ ನಿರಂತರವಾ ಹರಿಜ್ಞಾನಾಸಕ್ತರಾಗಿ ಆ ಪರಮಾತ್ಮನ ಸತತ್ತ್ವಗಳನ್ನು ಬೋಧಿಸುತ್ತಾ ಸುಜೀವಿಗಳ (ಜನತೆಯ) ಉದ್ದಾರ - ಕಲ್ಯಾಣಗಳೇ ಗುರಿಯಾಗುಳ್ಳವರು ಮತ್ತು ಸರ್ವವೂ ಶ್ರೀಹರಿಯದೆಂದರಿತು ನಿಷ್ಕಾಮಭಕ್ತಿಯಿಂದ ಭಗವಂತನನ್ನು ಆರಾಧಿಸುವವರು ಹಾಗೂ ಭಗವಂತನ ಸಾಕ್ಷಾತ್ಕಾರ ಪಡೆದ ಮಹನೀಯರೇ ಹರಿದಾಸರು. ಇಂಥ ಹರಿಶರಣರು ಎಲ್ಲ ಕಾಲದಲ್ಲಿಯೂ ಭಾರತಾದ್ಯಂತ ಎಲ್ಲ ಭಾಗಗಳಲ್ಲಿಯೂ ಆಗಿಹೋಗಿದ್ದಾರೆ. ಭಾರತದ ಇತರ ವೈಷ್ಣವಸಂತರಕ್ಕಿಂತ ನಮ್ಮ ಕನ್ನಡ ಹರಿದಾಸರು ವೈಶಿಷ್ಟ್ಯ ಪೂರ್ಣರೆಂದು ಮುಂದಿನ ವಿವರಣೆಯಿಂದ ಸ್ಪಷ್ಟವಾಗುವುದು.
ಹರಿದಾಸ್ಯ, ಅವನ ಅನುಗ್ರಹಕ್ಕಾಗಿ ಸರ್ವಸ್ವವನ್ನೂ ತ್ಯಾಗಮಾಡುವುದು. ಹರಿಯ ಪ್ರಸಾದದಿಂದ ಸಂತೋಷ, ಅದು ಮಿತಿಮೀರಿದಲ್ಲಿ ಉದ್ರಿಕ್ತ ಸ್ಥಿತಿ, ಹರಿವಿರಹದಿಂದ ಬಳಲಿಕೆ, ಹರಿಭಕ್ತರಲ್ಲಿ ಭಕ್ತಿ, ಐಹಿಕ ಸುಖಗಳಲ್ಲಿ ಔದಾಸೀನ್ಯ, ಸದಾ ಹರಿವಿಚಾರಚಿಂತನ, ಹರಿಯನ್ನು ಒಲಿಸಿಕೊಳ್ಳಲು ಪ್ರೇಮ, ಸಖ್ಯ, ಪೈತೃಕವಾತ್ಸಲ್ಯ, ಸೇವಕನ ದೈನ್ಯ, ಸಲಿಗೆಯ ಹುಸಿಮುನಿಸು - ಇತ್ಯಾದಿ ಧರ್ಮಗಳು ಎಲ್ಲ ಹರಿದಾಸರಲ್ಲೂ ಕಾಣಬಹುದಾದ ಸಾಮಾನ್ಯಧರ್ಮಗಳು. ಈ ಕ್ರಮದಲ್ಲಿ ಭಕ್ತಿಯನ್ನು ಮಾಡಿದ ಅನೇಕ ಸಂತರು ಹರಿದರ್ಶನವೆಂಬ ಸಿದ್ದಿಯನ್ನು ಪಡೆದಿರುತ್ತಾರೆ. ತ್ಯಾಗರಾಜ, ತುಲಸೀದಾಸ, ತುಕಾರಾಮ್ - ಇವರಿಗೆ ದೇವರ ಸಾಕ್ಷಾತ್ಕಾರವಾಗಿರುವುದು ಅವರ ಚರಿತೆಯಿಂದ ಗೊತ್ತಾಗುವುದು. ಶಾಸ್ತ್ರವನ್ನು ವಿಚಾರಮಾಡಿದರೆ ಈ ಬಗೆಯ ಭಗವತ್ಪಾಕ್ಷಾತ್ಕಾರವೇ ಜೀವನದ ಮುಖ್ಯಧೇಯವಲ್ಲವೆಂಬುದು ವ್ಯಕ್ತವಾಗುವುದು. ಭಗವಂತನು ರಾಮಕೃಷ್ಣಾದವತಾರಗಳನ್ನು ತಾಳಿದಾಗ, ಕೆಲ ಸಾತ್ವಿಕ ಜೀವಿಗಳು ರಾಮಕೃಷ್ಣಾದಿರೂಪಗಳನ್ನು ನೋಡಿ ದೇವರೆಂಬ ಭಾವನೆ ಪಡೆದರೂ, ಆ ಭಾವನೆ ಬಹುಕಾಲ ನಿಲ್ಲದೆ ಮತ್ತೆ ಅವರಿಗೆ ಅಜ್ಞಾನಾವೃತವಾದುದು ಕಂಡುಬಂದಿದೆ. ಹಾಗೆ ಭಕ್ತನಿಗೆ ಬಾಹ್ಯರೂಪದರ್ಶನವಾದರೆ ಭಗವನ್ನಿಷ್ಟತೆ ಏಕಪ್ರಕಾರವಾಗಿರುವುದಿಲ್ಲ. ಆದ್ದರಿಂದಲೇ “ಯೋ ವೇದ ನಿಹಿತಂ ಗುಹಾಯಾಮ್ ಪರಮೇ ವೋಮನ್” ಅಂದರೆ ಹೃದಯಗುಹೆಯಲ್ಲಿ ತನ್ನ (ಜೀವನ ಸ್ವರೂಪದ ಬಿಂಬದರ್ಶನಮಾಡಿದವನೇ ನಿಜವಾದ ಯೋಗಿ, ಸಿದ್ದನೆಂದು ಶ್ರುತಿಗಳು ಸಾರುವುವು. ಹೃದಯಗುಹೆಯಲ್ಲಿನ ಪರಮಾತ್ಮವರ್ಣನೆಯು ವಿಸ್ತಾರವಾಗಿ “ನಾರಾಯಣೋಪನಿಷತ್ತಿನಲ್ಲಿಯೂ ಇನ್ನಿತರ ಉಪನಿಷತ್ತುಗಳಲ್ಲಿಯೂ ಬಂದಿದೆ. ಈ ಭಗವಂತನ ದರ್ಶನವೇ ಜೀವನ ಮುಕ್ತಿಯು. ಇಂತಹ ಭಗವತ್ಸಾಕ್ಷಾತ್ಕಾರ ಪಡೆದವನಿಗೆ ಅಪರೋಕ್ಷಜ್ಞಾನಿ ಎಂದು ಹೆಸರು. “ಓಂ ನ ಸಾಮಾನ್ಯಾದಪ್ರಪಲಬೇರ್ಮತ್ಯುವನ್ನ ಲೋಕಾಪತ್ತಿ ಓಂ” ಎಂದು ಬಾದರಾಯಣರು ಬ್ರಹ್ಮಸೂತ್ರದಲ್ಲಿಯೂ ಸಯೋಗ್ಯ ಬಿಂಬದರ್ಶನದಿಂದಲೇ ಮೋಕ್ಷ, ಅನ್ಯಥಾ ಇಲ್ಲವೆಂದು ಹೇಳಿದ್ದಾರೆ. ಶ್ರೀಮದಾಚಾರ್ಯರು ಇದಕ್ಕೆ ನಾರಾಯಣತಂತ್ರ, ಆಧ್ಯಾತ್ಮಪ್ರಕಾಶ' ಪ್ರಮಾಣಗಳನ್ನು ಕೊಟ್ಟು ಸಮರ್ಥಿಸಿದ್ದಾರೆ. ಆಚಾರ್ಯರ ಅನುಯಾಯಿಗಳೆಲ್ಲರೂ ಅವರ ಈ ಅಭಿಪ್ರಾಯವನ್ನೇ ಎತ್ತಿಹಿಡಿದಿದ್ದಾರೆ. ಇತರ ದರ್ಶನಕಾರರು ಈ ಬಗೆಯ ಶ್ರೀಹರಿಬಿಂಬಾಪರೋಕ್ಷವಿಚಾರ ಹೇಳಿದಂತೆ ಕಂಡುಬರುವುದಿಲ್ಲ, ಶ್ರೀಮದಾಚಾರ್ಯರೊಬ್ಬರೇ ಈ ವಿಚಾರವನ್ನು ಸ್ಪಷ್ಟಿಕರಿಸಿದ್ದಾರೆ. ಅದರಂತೆ ಭಾರತದ ಇತರ ವೈಷ್ಣವಸಂತರಲ್ಲಿ, ಇತರರ ಜೀವನದಲ್ಲಿ ಈ ರೀತಿಯ ಬಿಂಬಾಪರೋಕ್ಷವಾದುದರ ನಿದರ್ಶನವಿಲ್ಲ. ಇತರ ಸಂತರ ಉಕ್ತಿಯಲ್ಲಿಯೂ ಇದರ ಕುರುಹು ಕಂಡುಬರುವುದಿಲ್ಲ. ಕನ್ನಡ ಹರಿದಾಸರ ಚರಿತ್ರೆಯಲ್ಲಿ ಇಂತು ಬಿಂಬಾಪರೋಕ್ಷವಾದ ಸಂಗತಿಯು ಬಹಳ ಮುಖ್ಯವಾಗಿ ಕಂಡುಬರುತ್ತದೆ. ಅವರ ಕೃತಿಗಳಲ್ಲಿಯೂ ಇದನ್ನು ನಾವು ವಿಶೇಷವಾಗಿ ಕಾಣಬಹುದು.
“ಅಂತರಂಗದಲಿ ಹರಿಯ ಕಾಣದವ ಹುಟ್ಟುಕುರುಡನೋ”, “ಎನ್ನ ಬಿಂಬಮೂರುತಿಯ ಪೂಜಿಪೆ ನಾನು” ಎಂಬ ಶ್ರೀಚಂದ್ರಿಕಾರಾಯರ ಕೃತಿಗಳು; ಬಿಂಬೋಪಾಸನೆಯನ್ನು ಮಾಡುವ ವಿಧಾನವನ್ನು ತೋರಿಸುವ ಶ್ರೀಪುರಂದರದಾಸರ “ಕಣ್ಣಿನೊಳಗೆ ನೋಡೋ ಶ್ರೀಹರಿಯ | ಒಳಗಣ್ಣಿನೊಳಗೆ ನೋಡೋ ಮುಜ್ಜಗದೊಡೆಯನಾ” ಮತ್ತು ಹೃದಯಕಮಲವಿವರ ಮಾನಸಪೂಜೆಯನ್ನು ತಿಳಿಸುವ “ಎಲ್ಲಿವಿರಾಟಪೂಜೆ ಹೃದಯಕಮಲ ಅಷ್ಟದಳ ಹೃಷೀಕೇಶ ನಾರಾಯಣಾ ಹಂಸಗಮನ” ಮತ್ತು “ಪಿಂಡಾಂಡದೊಳಗಿನ ಗಂಡನ ಕಾಣದೆ ಮುಂಡೇರಾದರು ಪಂಡಿತರು” ಎಂಬ ಕೀರ್ತನೆಗಳು; ಅಪರೋಕ್ಷವಾದ ಪ್ರತಿಧ್ವನಿಯಾದ ವಿಜಯದಾಸರ “ಅಂತರಂಗದ ಕದವು ತೆರೆಯಿತಿಂದು” ಎಂಬ ಪದವೂ, ಸ್ವಯಂ ಅನುಭವ ಪಡೆದು ಬಿಂಬೋಪಾಸನ ಯೋಗವನ್ನು ಅತಿಸ್ಪಷ್ಟವಾಗಿ ಹೇಳುವ ಗೋಪಾಲದಾಸರ ಧ್ಯಾನವನೆ ಮಾಡು ಬಿಂಬಮೂರುತಿಯ” ಎಂಬ ಕೃತಿಯೂ; ಪರಮಜ್ಞಾನಿಗಳಾದ ಶ್ರೀಜಗನ್ನಾಥದಾಸರ “ಅಷ್ಟದಳ ಸಹೃದಯಕಮಲಾಧಿಷ್ಟಿತನು ತಾನಾಗಿ” (ಹರಿಕಥಾಮೃತಸಾರ) ಎಂಬ ಪದಗಳು ಕನ್ನಡ ಹರಿದಾಸರಿಗೆ ಬಿಂಬಾಪರೋಕ್ಷಾನುಭವ ಉಂಟೆಂದೂ, ಅವರೆಲ್ಲರೂ ಅಪರೋಕ್ಷಜ್ಞಾನಿಗಳೆಂಬುದನ್ನು ಸ್ಪಷ್ಟವಾಗಿ ತಿಳಿಸುವುವು.
ಮೇಲಿನ ವಿವೇಚನೆಯಿಂದ ಇಂಥ ಅನುಭವವು ಸಂಪೂರ್ಣವಾಗಿ ಸತ್ಯ ಹಾಗೂ ಜೀವನದಲ್ಲಿ ಪರಮಾತ್ಮನ ಅನುಗ್ರಹವಿಶೇಷದಿಂದ ಸಾಧಿಸಲು ಸಾಧ್ಯವೆಂಬುದು ಸ್ಪಷ್ಟವಾಗುವುದು. ಶಾಸ್ತಾನುಸಾರಿಯಾದ ಈ ಸಾಧನಕ್ರಮದಲ್ಲಿ ಮುಂದುವರೆದ ಜ್ಞಾನಿಗಳಲ್ಲದೆ ಇದೇ ಮಾರ್ಗದಲ್ಲಿ ಮುಂದುವರೆದ ಕನ್ನಡ ಹರಿದಾಸರು ಈ ಪರಂಪರೆಯನ್ನು ಅನುಸರಿಸುವುದು ಸತ್ಯಸಂಗತಿ. ಇಂಥ ಒಂದು ಅಪೂರ್ವವಾದ ಸಿದ್ಧಿಯನ್ನು ಪಡೆದವರೇ ಆತ್ಮಾರಾಮರು, ಅಂತರಾರಾಮರು ಮತ್ತು ಪರಮಸಿದ್ದರು. ಆನಂದಸ್ವರೂಪನಾದ ಆ ಪರಮಾತ್ಮನನ್ನು ಹೃದಯಗುಹೆಯಲ್ಲಿ ದರ್ಶನಮಾಡುವುದರಿಂದ ಅಜ್ಞಾನರೂಪವಾದ ರಾಗ, ದ್ವೇಷ, ದುಃಖಾದಿ ಸಮಸ್ತವೂ ದೂರವಾಗುವುವು. ಲಿಂಗದೇಹಾದಿ ಬಂಧುಗಳು ಸಡಲುವವು ಎಂದು “ಭಿದ್ಯತೇ ಹೃದಯಗ್ರಂಥಿ ಛಿದ್ಯಂತೇ ಸರ್ವಸಂಶಯಾ | ಕ್ಷೀಯಂತೇ ಚಾಸ್ಯಕರ್ಮಾಣಿ ತಸ್ಮಿನ್‌ದೃಷ್ಟೇ ಪರಾವರೇ ” ಎಂದು ಮುಂಡಕೋಪನಿಷತ್ತು ಸಾರುವುದು ಮತ್ತು ಸಂಚಿತಾಗಾಮಿಕರ್ಮಗಳ ನಾಶವಾಗುವುವು ಎಂದೂ ತಿಳಿಸುವುದು. ಇಂಥ ಭಗವದರ್ಶನ ಪಡೆದವನು ಅಪರೋಕ್ಷಜ್ಞಾನಿಯೆನಿಸುವನು. ನಮ್ಮ ಕನ್ನಡ ಹರಿದಾಸರು ಈ ಗುಂಪಿಗೆ ಸೇರಿದವರು.
ಹರಿಯೇ ಸ್ವತಂತ್ರಕರ್ತಾ, ತಾನು ಅವನ ಸೇವಕನೆಂಬ ದೃಢಜ್ಞಾನದಿಂದ ಅಪರೋಕ್ಷಜ್ಞಾನಿಯು ದುರಭಿಮಾನವನ್ನು ಬಿಡುವನು. ಆ ಭಗವಾನದಲ್ಲಿ ತಲ್ಲೀನನಾಗಿ ಅಸಂಪ್ರಜ್ಞಾತ ಸಮಾಧಿ ಸ್ಥಿತಿಯನ್ನು ಹೊಂದುವನು. ಲೋಕಜೀವನಕ್ಕೆ ಅವನ ಜೀವನ ವಿರುದ್ಧವೆನಿಸಿ ದೇವರಿಗಾಗಿ ಅವನ ಜೀವನ ಮೀಸಲಾಗುತ್ತಿದೆ. ಇದಕ್ಕೆ ಅಂಕಿತವೆಂದು ಹೆಸರು. ನಮ್ಮ ಕನ್ನಡ ಹರಿದಾಸರಲ್ಲಿ ಅಂಕಿತಕ್ಕೆ ಬಹಳ ಪ್ರಾಮುಖ್ಯವಿದೆ. ತನ್ನ ಮೊದಲಿನ ಜೀವನವನ್ನು ಮರೆತು ಹೊಸ ಜೀವನ ಪಡೆದು ಸಾಧನ ಮಾಡಿಕೊಳ್ಳಲು ಉದ್ದಾರಕ ಗುರುಗಳಿಂದ ಉಪದೇಶ ಪಡೆದು ತನಗಿಷ್ಟವಾದ ಒಂದು ಭಗವಂತನ ನಾಮವನ್ನು ಗುರುಗಳಿಂದ ಅಂಕಿತವಾಗಿ ಪಡೆಯುವುದು ಮುಖ್ಯ. ಮುಂದೆ ಆ ಭಗವನ್ನಾಮ(ಅಂಕಿತ)ದಿಂದಲೇ ಅವರು ಪ್ರಸಿದ್ಧರಾಗಿ ಸತತವಾಗಿ ಜ್ಞಾನಸಾಧನೆ, ಧ್ಯಾನ-ಉಪಾಸನಾದಿಗಳಿಂದ ಹೃದಯಗುಹೆಯಲ್ಲಿ ಬಿಂಬರೂಪಿ ಪರಮಾತ್ಮನ ದರ್ಶನ ಪಡೆದು ತಮ್ಮ ಸರ್ವಸ್ವವನ್ನೂ ಆ ಭಗವಂತನಿಗರ್ಪಿಸಿ ಭಾಗವತಧರ್ಮನಿಷ್ಠರಾಗಿ ಆ ಧರ್ಮಪ್ರಸಾರಕರಾಗಿ ಬಾಳುವುದು ಕನ್ನಡ ಹರಿದಾಸರ ಮತ್ತೊಂದು ವೈಶಿಷ್ಟ್ಯ. ಹೀಗೆ ಅಂಕಿಂತ ಪಡೆದು ಅಪರೋಕ್ಷಜ್ಞಾನಿಗಳಾಗಿ ಲೋಕೋಪಕಾರಮಾಡಿದವರೇ ಶ್ರೀಪುರಂದರ, ವಿಜಯ್, ಗೋಪಾಲ, ಜಗನ್ನಾಥಾದಿ ಕನ್ನಡ ಹರಿದಾಸರುಗಳು. ಅವರ ಚರಿತ್ರೆಗಳಲ್ಲಿ ಇಂಥ ಅನುಭವ ಪಡೆದಿರುವುದಕ್ಕೆ ಹೇರಳ ದೃಷ್ಟಾಂತಗಳಿವೆ. ಅವರು ತಾವು ಅಪರೋಕ್ಷಜ್ಞಾನಿಗಳೆಂಬುದನ್ನು ತಮ್ಮ ನಡೆ-ನುಡಿಗಳಲ್ಲಿ ಸ್ಪಷ್ಟವಾಗಿ ತೋರಿಸಿದ್ದಾರೆ. ಅಂಕಿತ, ಅಪರೋಕ್ಷಜ್ಞಾನ, ಇವೇ ಇತರ ವೈಷ್ಣವ ಸಂತರಿಗೂ ನಮ್ಮ ಕನ್ನಡ ಹರಿದಾಸರಿಗೂ ಇರುವ ವ್ಯತ್ಯಾಸ. ಆದ್ದರಿಂದಲೇ ಇವರು ಇತರ ವೈಷ್ಣವ ಸಂತರಿಗಿಂತ ಹಿರಿಯ ಶ್ರೇಣಿಯಲ್ಲಿದ್ದಾರೆ. ಈಗ ಭಾಗವತ ಧರ್ಮಪ್ರಸಾರ ಮತ್ತು ಹರಿದಾಸಸಾಹಿತ್ಯದ ಉಗಮಾದಿಗಳ ಬಗೆಗೆ ಸ್ವಲ್ಪ ವಿಚಾರಮಾಡುವುದು ಅವಶ್ಯವಾಗಿದೆ.
ಜಗತ್ತು ಸೃಷ್ಟಿಯಾದಂದಿನಿಂದ ಭಾಗವತಧರ್ಮಪ್ರಸಾರವು ಅವ್ಯಾಹತವಾಗಿ ನಡೆದುಬಂದಿದೆ. ಹಿಂದೆಯೇ ನಿರೂಪಿಸಿದಂತೆ ಚತುರಾನನ ಬ್ರಹ್ಮದೇವರೇ ಇದಕ್ಕೆ ಆದಿಪುರುಷರು. ಅವರ ಪುತ್ರರಾದ ನಾರದರು ಭಾಗವತಕ್ಕೆ ಕಾರಣಪುರುಷರಾದುದು ಮಾತ್ರವಲ್ಲದೆ ನಾರಾಯಣನ ನಾಮದ ಬೀಜವನ್ನು ಧರೆಯೊಳಗೆ ಬಿತ್ತಿದರು. ಈ ಭಾಗವತರ ಶ್ರೇಣಿಯಲ್ಲಿ ಪ್ರಹ್ಲಾದ, ಧ್ರುವ, ಕುಲೇಲ, ಅಂಬರೀಷ, ರುಕ್ರಾಂಗದಾದಿಗಳೆಲ್ಲರಿಗೂ ನಾರದರೇ ಗುರುಗಳೆಂದು ಹೇಳಬಹುದು. ಮುಖ್ಯವಾಗಿ ನಾರದರು ಮತ್ತು ಪ್ರಹ್ಲಾದರಾಜರು ಭಾಗವತಧರ್ಮಪ್ರಚಾರಕ್ಕೆ ಬದಕಂಕಣರಾಗಿ ನಿಂತರು. ಇವರಿಬ್ಬರೇ ಮತ್ತೆ ಭೂಲೋಕದಲ್ಲಿ ಅವತರಿಸಿ ಭಾಗವತಧರ್ಮವನ್ನು ವಿಶೇಷವಾಗಿ ಪ್ರಸಾರಮಾಡಿದರು. ಕರ್ನಾಟಕ ಹರಿದಾಸಸಾಹಿತ್ಯಕ್ಕೆ ಜೀವಕಳೆ ಬಂದುದು ಪ್ರಹ್ಲಾದಾವತಾರಿಗಳಾದ ಶ್ರೀವ್ಯಾಸರಾಜ-ಶ್ರೀರಾಘವೇಂದ್ರರು ಮತ್ತು ನಾರದಾಂಶ ಸಂಭೂತರಾದ ಶ್ರೀಪುರಂದರದಾಸರಿಂದ! ಇಂದಿಗೂ ಕನ್ನಡ ಹರಿದಾಸರೆಂದರೆ ಪುರಂದರದಾಸರೆಂಬ ಭಾವನೆ ಎಲ್ಲೆಡೆ ಮೂಡಿದೆ. ಪ್ರಹ್ಲಾದರು ನಾರದರ ಶಿಷ್ಯರಾದರೂ ಪುರಂದರದಾಸರಿಗೆ ವ್ಯಾಸರಾಜರು ಗುರುಗಳು,
ಶ್ರೀವ್ಯಾಸರಾಜರ ಕಾಲದಲ್ಲಿ ಉಚ್ಛಾಯಸ್ಥಿತಿಗೆ ಬಂದ ದಾಸಸಾಹಿತ್ಯ ಇವರಿಗಿಂತ ಎರಡು ಶತಮಾನ ಮೊದಲೇ ಆರಂಭವಾಯಿತು. ಕನ್ನಡ ಹರಿದಾಸಸಾಹಿತ್ಯಕ್ಕೆ ಮಧ್ವಮತವೇ ಜನಕಸ್ಥಾನೀಯವು. ಹಿಂದೆ ಹೇಳಿದಂತೆ ಶ್ರೀಮಧ್ವಾಚಾರ್ಯರಿಂದ ಸ್ಫೂರ್ತಿ ಪಡೆದ, ಅವರ ಸಾಕ್ಷಾತ್ ಶಿಷ್ಯರಾದ ಶ್ರೀನರಹರಿತೀರ್ಥರೇ ಕನ್ನಡ ಹರಿದಾಸಸಾಹಿತ್ಯ ಪ್ರವರ್ತಕರು ಮತ್ತು ಮೊಟ್ಟಮೊದಲು ಕನ್ನಡಪದಗಳನ್ನು ರಚಿಸಿದವರು.
ಶ್ರೀಬೇಲೂರು ಕೇಶವದಾಸರು “ಅಚಲಾನಂದದಾಸರೆಂಬ ಭಾಗವತ ಸಂಪ್ರದಾಯದ ಭಕ್ತರು ಕ್ರಿ.ಶ. ಒಂಭತ್ತನೇ ಶತಮಾನದಲ್ಲಿಯೇ. ಅಂದರೆ ಆಚಾರ್ಯರಂಕಿತ ಮೂರು ಶತಮಾನಗಳ ಮುಂಚೆಯೇ ಕನ್ನಡದಲ್ಲಿ ಪದಗಳನ್ನು ರಚಿಸಿದ್ದು, ಅವರಿಂದಲೇ ಕನ್ನಡ ಹರಿದಾಸಸಾಹಿತ್ಯ ಪ್ರಾರಂಭವಾಯಿತೇ ವಿನಃ ಶ್ರೀನರಹರಿತೀರ್ಥರಿಂದಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ. ಇದು ಸಮಂಜಸವಲ್ಲ. ಕೇಶವದಾಸರು ತಮ್ಮ ಅಭಿಪ್ರಾಯಕ್ಕೆ ಪ್ರಮಾಣವಾಗಿ ಅಚಲಾನಂದರ ಪದದ ಪುಸ್ತಕದಲ್ಲಿ "ಕಾಶೀತಿಸಂಖ್ಯಾ" ಎಂಬ ಉಲ್ಲೇಖ ಉದಾಹರಿಸಿದ್ದಾರೆ. ಆದರೆ ಕಾಶಿತಿಸಂಖ್ಯೆ ಎಂಬುದು ಅವರು ಭ್ರಮಿಸಿರುವಂತೆ ಶಾ.ಶಕೆ ೮೦೧ ಎಂಬುದನ್ನು ಸೂಚಿಸುವುದಿಲ್ಲ. ಪ್ರತ್ಯುತ ಶಾಲಿವಾಹನಶಕೆ ೧೨೮೧ ವಿಳಂಬಿ ಸಂವತ್ಸರವನ್ನು ಸೂಚಿಸುವುದು. ಕೇಶವದಾಸರ ಅಭಿಪ್ರಾಯಕ್ಕೆ ಅಚಲಾನಂದದಾಸರ ಪದಗಳೇ ವಿರುದ್ಧವಾಗಿದ್ದು, ಅವು ಅವರು ಶ್ರೀಮಧ್ವಾಚಾರ್ಯರ ತರುವಾಯ ಬಂದವರೆಂಬುದನ್ನು ಸ್ಪಷ್ಟಪಡಿಸುವುದು! ಆದ್ದರಿಂದ ಅಚಲಾನಂದದಾಸರು ಶ್ರೀಮದಾಚಾರ್ಯರ ತರುವಾಯ ಬಂದವರು ಮತ್ತು ಶ್ರೀನರಹರಿತೀರ್ಥ ಸಮಕಾಲಿಕರೆಂದು ಹೇಳಬಹುದು. ಕಿನ್ನರಿ ವಿದ್ವಾನ್ ಹುಲಗೂರು ಕೃಷ್ಣಾಚಾರ್ಯರ ಪ್ರಾಚೀನಕೀರ್ತನ ಸಂಗ್ರಹ ಪುಸ್ತಕದಲ್ಲಿ ಶ್ರೀಅಚಲಾನಂದದಾಸರು ರಚಿಸಿದ ಒಂದು ಪದವಿದೆ. ಅದು ಹೀಗಿದೆ –
“ಕೇಳೋ ಜೀವನವೇ ನೀ ಮಧ್ವಮತವನನುಸರಿಸಿ | ಶ್ರೀಲೋಲನಂಘ್ರಗಳ ನೆನೆದು ಸುಖಿಸೋ
ಅಚಲಾನಂದದಾಸರು ಆಚಾರ್ಯರಿಗಿಂತ ೩೦೦ ವರ್ಷ ಹಿಂದಿನವರಾಗಿದ್ದರೆ ಅವರು ತಮ್ಮ ಪದದಲ್ಲಿ “ಶ್ರೀಮಧ್ವಮತವನನುಸರಿಸಿ” ಎಂದು ಹೇಳಲು ಸಾಧ್ಯವಿಲ್ಲವಷ್ಟೇ ? ಆದ್ದರಿಂದ ಅಚಲಾನಂದದಾಸರು ಮಾದ್ದರೇ ಹೊರತು ಮಾಧ್ವಸಂಪ್ರದಾಯದವರಲ್ಲ ಮತ್ತು ಶ್ರೀನರಹರಿತೀರ್ಥರ ತರುವಾಯ ಬಂದವರು ಅಥವಾ ಸಮಕಾಲಿಕರೆಂದು ಸಿದ್ಧವಾಗುವುದು. ಶ್ರೀನರಹರಿತೀರ್ಥರಾದ ಮೇಲೆ ಆರಾಧ್ಯರೆಂಬ ಅರವತ್ತು ಶೈವಸಂತರು ಪಂಡರಪುರಕ್ಕೆ ಹೋಗಿ ಮಧ್ವಮತಾವಲಂಬಿಗಳಾದ ಐತಿಹ್ಯವಿದೆ. ಅವರಲ್ಲೊಬ್ಬರು “ಮಂಗನ ಕಿತ್ತಂತಾಯಿತು ಜನ್ಮವು | ಲಿಂಗವ ಕಳಕೊಂಡು ಗಂಗೆಯ ತೀರದಿ | ಅದೈತದ್ವಿಜಾಚಾರ್ಯನಾಗಿರೆ ಉದ್ಧರಿಸಿದೆ, ಮಧ್ವಮತದವನೆನಿಸಿ” ಎಂದು ಹಾಡಿದ್ದಾರೆ. ಇವರೇ ಮುಂದೆ ಆದ್ದರೆಂದು ಪ್ರಸಿದ್ಧರಾದರೆಂದೂ, ಅಚಲಾನಂದದಾಸರು ಇವರಲ್ಲೊಬ್ಬರೆಂದು ದಾಸಕೂಟದಲ್ಲಿ ಹೇಳುವ ಪರಿಪಾಟ ಇದೆ. ಇದರಿಂದ ಹರಿದಾಸಪಂಥದ ಆದ್ಯಪ್ರವರ್ತಕರು ಮತ್ತು ಪ್ರಥಮ ಕೃತಿಕಾರರು ಶ್ರೀನರಹರಿತೀರ್ಥರೆಂದು ಸಿದ್ಧವಾಗುವುದು.
ಶ್ರೀನರಹರಿತೀರ್ಥರ ಮೊದಲ ಹೆಸರು ಸ್ವಾಮಿಶಾಸ್ತಿಗಳು. ಇವರು ಕಳಿಂಗರಾಜ್ಯದ ಮಂತ್ರಿಗಳಾಗಿದ್ದವರು. ಅದೈತಮತದ ಪ್ರಕಾಂಡ ಪಂಡಿತರು ಅಚ್ಚ ಕನ್ನಡಿಗರು. ಇವರು ಶ್ರೀಮಧ್ವಾಚಾರ್ಯರೊಡನೆ ವಾದಮಾಡಿ ಪರಾಜಿತರಾದ ಮೇಲೆ ಅವರ ತೇಜಸ್ಸು, ವಿದ್ಯಾದಿಗಳಿಗೆ ಮನಸೋತು ಅವರಿಂದ ಮಾಧ್ವದೀಕ್ಷೆ ಸ್ವೀಕರಿಸಿದ್ದು ಮಾತ್ರವಲ್ಲದೆ, ಸನ್ಯಾಸಾಶ್ರಮವನ್ನು ಸ್ವೀಕರಿಸಿ “ನರಹರಿತೀರ್ಥ'ರೆಂಬ ಹೆಸರಿನಿಂದ ಆಚಾರ್ಯರಾಯರ ಶಿಷ್ಯರಾದರು. ಆಚಾರ್ಯರ ನಾಲ್ಕು ಜನ ಪ್ರಮುಖ ಶಿಷ್ಯರಲ್ಲಿ ಇವರು ಎರಡನೆಯವರು. ಶ್ರೀಮದಾಚಾರ್ಯರ ತರುವಾಯ ಅವರ ಆಜ್ಞೆಯಂತೆ ಶ್ರೀಪದ್ಮನಾಭತೀರ್ಥರ ತರುವಾಯ ಆಚಾರ್ಯರ ವೇದಾಂತಸಾಮ್ರಾಜ್ಯವನ್ನಾಳಿ ಪ್ರಖ್ಯಾತರಾದರು. ಶ್ರೀನರಹರಿತೀರ್ಥರು ಗುರುಗಳಾದ ಶ್ರೀಮಧ್ವಾಚಾರ್ಯರ ಅಪ್ಪಣೆಯಂತೆ ಚತುರ್ಯುಗಮೂರ್ತಿಯಾದ ಶ್ರೀಬ್ರಹ್ಮಕರಾರ್ಚಿತ ಶ್ರೀಮೂಲರಾಮದೇವರನ್ನು ತರಲು ಕಳಿಂಗರಾಜ್ಯಕ್ಕೆ ಹೋಗಿ ಅಲ್ಲಿ ರಾಜನು ಮೃತನಾಗಿ ರಾಣಿಯು ಗರ್ಭವತಿಯಾಗಿದ್ದುದರಿಂದ ಅವರೆಲ್ಲರ ಪ್ರಾರ್ಥನೆಯಂತೆ ಹನ್ನೆರಡು ವರ್ಷ ರಾಜ್ಯಭಾರ ನಿರ್ವಹಿಸಿ ಪ್ರಾಪ್ತವಯಸ್ಕನಾದ ರಾಜಪುತ್ರನಿಗೆ ಪಟ್ಟಕಟ್ಟಿ 'ಗಜಪತಿ ಭಂಡಾರದಲ್ಲಿದ್ದ ಶ್ರೀಮೂಲರಾಮದೇವರನ್ನು ತಂದು ಆಚಾರ್ಯರಿಗೆ ಸಮರ್ಪಿಸಿದರು. ಆಚಾರ್ಯರು ೮೧ ದಿನ ಅದನ್ನು ಪೂಜಿಸಿ ಈ ಪ್ರತಿಮೆಯನ್ನು ತಮ್ಮ ಮಹಾಸಂಸ್ಥಾನದ ಆರಾಧ್ಯದೇವನನ್ನಾಗಿ ಪೂಜಿಸುತ್ತಾ ಬರುವಂತೆ ಶ್ರೀಪದ್ಮನಾಭತೀರ್ಥಾದಿಗಳಿಗೆ ಆಜ್ಞಾಪಿಸಿದರು. ಶ್ರೀಪದ್ಮನಾಭ-ನರಹರಿ- ಮಾಧವಾಭ್ಯತೀರ್ಥರು ಶ್ರೀಮೂಲರಾಮನನ್ನರ್ಚಿಸಿ ಮುಂದೆ ಟೀಕಾರಾಯರು ಅರ್ಚಿಸಿದರು. ಅವರ ಮಹಾಸಂಸ್ಥಾನವಾದ ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಶ್ರೀಮೂಲರಾಮನು ಈಗ ಪೂಜೆಗೊಳ್ಳುತ್ತಿದ್ದಾನೆ. ತಾವು ಶ್ರೀಮೂಲರಾಮನನ್ನು ತಂದ ಸವಿನೆನಪಿಗಾಗಿ ಶ್ರೀನರಹರಿತೀರ್ಥರು 'ರಘುಪತಿ' ಎಂಬ ಅಂಕಿತದಿಂದ ಕನ್ನಡದಲ್ಲಿ ಪದಗಳನ್ನು ರಚಿಸಲಾರಂಭಿಸಿ ಕನ್ನಡ ಹರಿದಾಸಸಾಹಿತ್ಯದ ಆಚಾರ್ಯರೆನಿಸಿ ವಿಶ್ವಮಾನ್ಯರಾದರು. ಇವರು ನೂರಾರು ಕನ್ನಡ ಕೃತಿಗಳನ್ನು ರಚಿಸಿದ್ದು, ಈಗ ಕೆಲವು ಮಾತ್ರ ಉಪಲಬ್ಧವಾಗಿದೆ.
“ಎಂತು ಮರುಳಾದೆ ನಾನೆಂತು ಮರುಳಾ
ಸುಜನವಂದಿತನಾದ ನರಹರಿಯ |
ಭಜಿಸು ಶ್ರೀಶ ಶ್ರೀರಘುಪತಿಯ || ೩ ||”
ಎಂಬ ಅವರ ಈ ಕನ್ನಡ ಕೃತಿಯು ಬಹು ಹೃದಯಂಗಮವಾಗಿದೆ. ಈ ಪದದಲ್ಲಿ ಬಳಲುತ್ತಿರುವ ಅಜ್ಞಾನಿ ಜೀವರುಗಳ ಸ್ಥಿತಿ, ದುಷ್ಕರ್ಮದಿಂದ ಅವರಲ್ಲಿ ಹುಟ್ಟುವ ಬುದ್ದಿ, ಅದರಂತೆ ಪ್ರವೃತ್ತಿ, ಅದಕ್ಕೆ ವಿರೋಧವಾದ ನಿಜವಾದ ಧರ್ಮ ಇವೆರಡು ಒಂದರ ಮಗ್ಗುಲಲ್ಲೊಂದು ತೋರಿಸಲ್ಪಟ್ಟು ಅವುಗಳಿಗಿರುವ ಅಂತರ, ಮಹದ್ದಿರೋಧ ಬಹು ಹೃದಯಂಗಮವಾಗಿ ಚಿತ್ರಿಸಲ್ಪಟ್ಟಿದೆ. ಇದರಿಂದಲೇ ಶ್ರೀನರಹರಿತೀರ್ಥರು ಎಂತಹ ಪಕ್ವವಾದ ಹರಿದಾಸರೆಂಬುದು ವ್ಯಕ್ತವಾಗುವುದು. ಇದರಂತೆ ಇವರು ರಚಿಸಿರುವ “ಹರಿಯೇ ಇದು ಸರಿಯೇ”, “ತಿಳಿಕೋ ನಿನ್ನೊಳು ನೀನೇ” ಎಂಬ ಪದಗಳೂ ಭಾವಪೂರ್ಣವಾಗಿವೆ.
ಶ್ರೀನರಹರಿತೀರ್ಥರ ಆ ನಂತರ ಒಂದು ಶತಮಾನದ ಮೇಲೆ ಶ್ರೀಲಕ್ಷ್ಮೀನಾರಾಯಣಮುನಿಗಳಿಂದ (ಶ್ರೀಪಾದರಾಜರು) ಹರಿದಾಸಸಾಹಿತ್ಯವು ನವಚೈತನ್ಯವನ್ನು ಪಡೆಯಿತು. ಇಂದಿಗೂ ಹರಿದಾಸಪರಂಪರೆಯಲ್ಲಿ ನಮಃ ಶ್ರೀಪಾದರಾಜಾಯ ನಮಸ್ತೇ ವ್ಯಾಸಯೋಗಿನೇ | ನಮಃ ಪುರಂದರಾರ್ಯಾಯ ವಿಜಯಾರ್ಯಾಯ ತೇ ನಮಃ ||” ಎಂದು ಶ್ರೀಪಾದರಾಜರ ಹೆಸರೇ ಮೊದಲಿಗೆ ಗಣಿಸಲ್ಪಡುವುದು. ಹದಿನೈದನೆಯ ಶತಮಾನದಲ್ಲಿ ಅವತರಿಸಿದ ಶ್ರೀಪಾದರಾಜರು ಆಚಾರ್ಯರ ಪ್ರಥಮ ಶಿಷ್ಯರಾದ ಶ್ರೀಪದ್ಮನಾಭತೀರ್ಥರ ಸತ್ಪರಂಪರೆ ವಿದ್ಯಾಪೀಠದಲ್ಲಿ ಬಂದ ಶ್ರೀಸ್ವರ್ಣವರ್ಣತೀರ್ಥರ ಶಿಷ್ಯರಾಗಿ, ಪೀಠಾಧೀಶರಾಗಿ ಖ್ಯಾತರಾದರು. ಇವರು ಜನನ್ಮಾನ್ಯ ಪಂಡಿತಕುಲಶೇಖರರಾದ ಶ್ರೀಮದಾಚಾರ್ಯರ ಮಹಾಸಂಸ್ಥಾನವಾದ ಶ್ರೀಕವೀಂದ್ರತೀರ್ಥರ “ದಕ್ಷಿಣಾದಿಪೀಠದಲ್ಲಿ ವಿರಾಜಿಸಿದ ಮಹಾನುಭಾವರಾದ ಶ್ರೀವಿಬುಧೇಂದ್ರತೀರ್ಥ ಶ್ರೀಪಾದಂಗಳವರಲ್ಲಿ ಸಕಲಶಾಸ್ತ್ರಗಳನ್ನೂ ಮುಖ್ಯವಾಗಿ ಶ್ರೀಮದಾಚಾರ್ಯರ - ಟೀಕಾಕೃತ್ಪಾದಪರಂಪರಾಪ್ರಾಪ್ತ ಸಂಪ್ರದಾಯದಂತೆ ಸಮಗ್ರ ದೈತಸಿದ್ಧಾಂತವನ್ನು ವ್ಯಾಸಂಗಮಾಡಿ ಮಹಾಪಂಡಿತರೆನಿಸಿದರು. ವಿಜಯನಗರದ ಸಾಳವ ನರಸಿಂಹನಿಗೆ ಗುರುಗಳಾದ ಇವರು ಅವನ ಬ್ರಹ್ಮಹತ್ಯಾದೋಷವನ್ನು ಪರಿಹರಿಸಿ ಸಿಂಹಾಸನದಲ್ಲಿ ಮಂಡಿಸಿ ರಾಜಗುರುಗಳಾದರು. ಸುಮಾರು ೧೪೮೪ ರ ಸುಮಾರಿಗೆ ವಿಜಯನಗರದ ಸಾಮ್ರಾಟನಾದ ಸಾಳುವ ನರಸಿಂಹನು ಇವರಿಗೆ ರತ್ನಾಭಿಷೇಕ ಮಾಡಿ ಗೌರವಿಸಿದನು. ಇವರು ಸ್ವಪ್ನಸೂಚಿಯಂತೆ ಪಂಢರಪುರದಲ್ಲಿ ಶ್ರೀರಂಗವಿಠಲನನ್ನು ಪಡೆದು ಅದರ ಸ್ಮರಣೆಗಾಗಿ “ರಂಗವಿಠಲ” ಎಂಬ ಅಂಕಿತದಿಂದ ಅನೇಕ ಕನ್ನಡ ಕೃತಿಗಳನ್ನು ರಚಿಸಿ ಕನ್ನಡ ಹರಿದಾಸಪಂಥದ ಪಿತಾಮಹರೆನಿಸಿ ಮಾನ್ಯರಾದರು. ನಷ್ಟಪ್ರಾಯವಾಗಿದ್ದ ಕನ್ನಡ ಹರಿದಾಸಪಂಥ ಹಾಗೂ ಸಾಹಿತ್ಯಕ್ಕೆ ಪ್ರಚೋದನೆ ನೀಡಿ ಸರ್ವವಿಧದಿಂದ ಪೋಷಕರಾಗಿದ್ದು ಅದರ ಅತ್ಯಧಿಕ ಪ್ರಸಾರಕ್ಕೆ ಮುಖ್ಯ ಕಾರಣರಾದರು. ಶ್ರೀಪಾದರಾಜರು ನೂರಾರು ಪದಗಳನ್ನು ರಚಿಸಿದ್ದರೂ ಅವೆಲ್ಲವೂ ಈಗ ಉಪಲಬ್ಧವಾಗಿಲ್ಲದಿರುವುದು ಕನ್ನಡಿಗರ ದೌರ್ಭಾಗ್ಯ. ದೊರಕುವು ನೂರಾರು ಪದಗಳು ಶ್ರೇಷ್ಠಮಟ್ಟದ್ದಾಗಿ ರಸಪುಷ್ಟವಾಗಿವೆ. ಶೈಲಿಯು ಸರಳವಾಗಿದ್ದು, ಮನನಾಟುವಂತಿದೆ. ಕನ್ನಡ ಭಾಷೆಯು ಬಹಳ ಲಲಿತವಾಗಿದ್ದರೂ, ಬಿಕ್ಕಟ್ಟಾಗಿದೆ. ಅಲಂಕಾರ ಜೋಡಣೆ ಸಂದರ್ಭೋಚಿತವಾಗಿದೆ. ಅವರ ಪದಗಳಲ್ಲಿ ದೈನ್ಯ, ದೇವರೊಡನೆ ಸರಸ, ಭಗವನ್ಮಹಿಮಾ ವರ್ಣನೆಗಳು ಚೆನ್ನಾಗಿ ಚಿತ್ರವಾಗಿವೆ. ಇವರು ನೂರಾರು ಬಿಡಿಪದಗಳಲ್ಲದೆ “ಶ್ರೀನರಸಿಂಹ ಪ್ರಾದುರ್ಭಾವ ದಂಡಕ” ಎಂಬ ದಂಡಕಶೈಲಿಯ ಕೃತಿಯನ್ನು ರಚಿಸಿದ್ದಾರೆ. ಇದು ಕನ್ನಡ ಸಾಹಿತ್ಯಕ್ಕೆ ಅಪೂರ್ವ ಕೊಡುಗೆಯೆಂದು ಹೇಳಬಹುದು. ಇದರಂತೆ “ಗೋಪೀಗೀತ, ವೇಣುಗೀತ, ಭ್ರಮರಗೀತ, ರುಕ್ಷ್ಮಿಣೀ ಸತ್ಯಭಾಮ ವಿಲಾಸ ಮತ್ತು ಮಧ್ವನಾಮ” ಮುಂತಾದ ಕನ್ನಡ ಕಾವ್ಯಗಳನ್ನು ರಚಿಸಿರುತ್ತಾರೆ. ಇಷ್ಟು ವ್ಯಾಪಕವಾಗಿ ಸಾಹಿತ್ಯರಚನೆಮಾಡಿ ಕನ್ನಡ ಹರಿದಾಸ ಭಂಡಾರವನ್ನು ತುಂಬಿ ಅದಕ್ಕೆ ಕಳೆ ತಂದ ಮಹನೀಯರಲ್ಲಿ ಶ್ರೀಪಾದರಾಜರೇ ಮೊದಲಿಗರೆಂದು ಧಾರಾಳವಾಗಿ ಹೇಳಬಹುದು. ಇವರಿಂದ ಪೋಷಿತವಾದ ಕನ್ನಡ ಹರಿದಾಸಸಾಹಿತ್ಯ ಸುಮಾರು ನೂರಿಪ್ಪತ್ತು ವರ್ಷಗಳು ಅವ್ಯಾಹತವಾಗಿ ಸಾಗಿಬಂದು ಚೆನ್ನಾಗಿ ಪಸರಿಸಿ, ಅತ್ಯಂತ ತೇಜಸ್ವಿಗಳಾದ ಹರಿದಾಸರನ್ನು ಒಟ್ಟಿಗೇ ನೀಡಿತು. ಇವರು ತಮ್ಮ ಪ್ರಿಯಶಿಷ್ಯರಾದ ಶ್ರೀವ್ಯಾಸರಾಜಗುರುವರ್ಯರಿಗೆ ಶ್ರೀಹರಿದಾಸಸಾಹಿತ್ಯದ ಅಭಿವೃದ್ಧಿ, ಪೋಷಣೆ, ಪ್ರಸಾರಗಳ ಹೊಣೆಯನ್ನು ಒಪ್ಪಿಸಿಕೊಟ್ಟು ಹರಿಪದ ಸೇರಿದರು. ಈ ಮಹಾನುಭಾವರನ್ನು ಧ್ರುವಾಂಶ'ರೆಂದು ಜ್ಞಾನಿಗಳು ಕೊಂಡಾಡುತ್ತಾರೆ.
ಶ್ರೀವ್ಯಾಸರಾಜರು ವೈದಿಕ ಹಾಗೂ ಹರಿದಾಸಪರಂಪರೆಯಲ್ಲೂ ಶ್ರೀಪಾದರಾಜರ ಶಿಷ್ಯರು. ಹರಿಭಕ್ತ ಪ್ರಹ್ಲಾದನು ತ್ರೇತಾಯುಗದಲ್ಲಿ ಕಪಿರೂಪದಿಂದವತರಿಸಿ ವಾನರ ಸೈನ್ಯದಲ್ಲಿದ್ದು ಶ್ರೀರಾಮದೇವರ ಸೇವೆಮಾಡಿದನು. ದ್ವಾಪರಯುಗದಲ್ಲಿ ಬಾಹೀಕನಾಗಿ ಶ್ರೀಕೃಷ್ಣಪಾಸಕನಾಗಿದ್ದು, ಕುರುಕ್ಷೇತ್ರ ಯುದ್ಧದಲ್ಲಿ ಭೀಮಸೇನದೇವರನ್ನು ಪ್ರಾರ್ಥಿಸಿ ಅವರ ಗದಾಪ್ರಹಾರದಿಂದ ಮೃತನಾದನೆಂದು ಶ್ರೀಮದಾಚಾರ್ಯರು “ಮಹಾಭಾರತತಾತ್ಪರ್ಯನಿರ್ಣಯದಲ್ಲಿ ಅಪ್ಪಣೆ ಕೊಡಿಸಿದ್ದಾರೆ. ಬಾಕರಾಜನು ಮರಣಕಾಲದಲ್ಲಿ ಕಲಿಯುಗದಲ್ಲಿ ಮತ್ತೆ ಎರಡು ಬಾರಿ ಜನಿಸಿ ಶ್ರೀಹರಿ ಸೇವೆ ಮತ್ತು ನಿಮ್ಮ ಸೇವೆ ಮಾಡುವಂತೆ ಅನುಗ್ರಹಿಸಬೇಕೆಂದು ಭೀಮಸೇನದೇವರಿಂದ ವರ ಪಡೆದನೆಂದೂ, ಪ್ರಹ್ಲಾದರೂಪದಲ್ಲಿ ಹಿಂದೆ ಹರಿವರ್ಷಖಂಡದಲ್ಲಿ ಶ್ರೀನೃಸಿಂಹದೇವರನ್ನು ಸೇವಿಸುತ್ತಿದ್ದಾಗ, ನಾರದರನ್ನು ಕಂಡು ಕಲಿಯುಗದಲ್ಲಿ ಹುಟ್ಟಿ ಶ್ರೀಕೃಷ್ಣಾರಾಧನೆ ಮಾಡಬಯಸಿದನೆಂದೂ, ಅಂತೆಯೇ ಶ್ರೀವ್ಯಾಸರಾಜರಾಗಿಯೂ ನಂತರ ಶ್ರೀರಾಘವೇಂದ್ರಸ್ವಾಮಿಗಳಾಗಿಯೂ ಅವತರಿಸಿ, ಮದ್ದರಾಗಿ ಅವತರಿಸಿದ ಭೀಮಸೇನದೇವರ (ವಾಯುದೇವರ) ಮತ್ತು ಶ್ರೀಹರಿಯ ಸೇವೆಮಾಡಿದನೆಂದೂ, ಸತ್ಯಲೋಕದಲ್ಲಿ ಶ್ರೀಚತುರಾನನ ಬ್ರಹ್ಮದೇವರ ಶಿಷ್ಯನಾಗಿದ್ದ ಕರ್ಮಜದೇವತೆ ಶಂಕುಕರ್ಣನೇ ಇವರ ಮೂಲರೂಪ'ವೆಂದೂ ಜ್ಞಾನಿಗಳು ಕೊಂಡಾಡಿದ್ದಾರೆ.
ಶ್ರೀವ್ಯಾಸರಾಜರು ಆಚಾರ್ಯ ಮಧ್ವರ ಎರಡು ಮಹಾಸಂಸ್ಥಾನಗಳಲ್ಲೊಂದಾದ ಶ್ರೀರಾಜೇಂದ್ರತೀರ್ಥರ ಪೂರ್ವಾದಿಮಠದ ಶ್ರೀಬ್ರಹ್ಮಣ್ಯತೀರ್ಥರ ಶಿಷ್ಯರಾಗಿ ಆ ಮಹಾಸಂಸ್ಥಾನಾಧಿಪತಿಗಳಾದರು. ಇವರು ಸಕಲಶಾಸ್ತ್ರಪಾರಂಗತರಾದ ಪ್ರಕಾಂಡ ಪಂಡಿತರು. ನೂರಾರು ಜನ ಪ್ರಚಂಡ ಪರವಾದಿಗಳನ್ನು ವಾದದಲ್ಲಿ ಜಯಿಸಿ ದೈತಸಿದ್ಧಾಂತ ಪ್ರತಿಷ್ಠಾಪನೆ ಮಾಡಿ ಅದು ನಿಷ್ಕಂಟವಾಗಿ ರಾಜಿಸುವಂತೆ ಮಾಡಿದ್ದಲ್ಲದೆ ಜಗನ್ಮಾನಗಳಾದ “ಚಂದ್ರಿಕಾ, ನ್ಯಾಯಾಮೃತ, ತರ್ಕತಾಂಡವ'ಗಳೆಂಬ ಮಹಾಗ್ರಂಥಗಳನ್ನೂ, ಇನ್ನಿತರ ಗ್ರಂಥಗಳನ್ನೂ ರಚಿಸಿ ಮಹೋಪಕಾರ ಮಾಡಿದರು. ಇವರ ಚಂದ್ರಿಕಾದಿಗ್ರಂಥತ್ರಯವು “ವ್ಯಾಸತ್ರಯ'ವೆಂದೇ ವಿದ್ವತ್ಪಪಂಚದಲ್ಲಿ ಪ್ರಖ್ಯಾತವಾಗಿದೆ. ಇವರು ಎರಡು ಬಾರಿ ಭಾರತದಾದ್ಯಂತ ಸಂಚರಿಸಿ ಸಕಲ ದುರ್ಮತ ನಿರಾಕರಣ ಪೂರ್ವಕ ಸಿದ್ಧಾಂತಸ್ಥಾಪನೆ, ಶಿಷ್ಯಜನೋದ್ದಾರ, ಮಹಿಮಾಪ್ರದರ್ಶನಾದಿಗಳಿಂದ ಜಗನ್ಮಾನ್ಯರಾದರು. ಇವರಿಂದ ವೈಷ್ಣವಮತ, ಭಾಗವತ ಭಕ್ತಿಪಂಥವು ಜಗತ್ತಿನಲ್ಲೆಲ್ಲಾ ಪ್ರಸಾರವಾಯಿತು. ಬಂಗಾಲದಲ್ಲಿ ಹಿಂದೆ ವ್ಯಾಸರಾಜರ ಪೂರ್ವಿಕರಾದ ಶ್ರೀರಾಜೇಂದ್ರತೀರ್ಥರು ಮತ್ತು ಶ್ರೀಜಯಧ್ವಜತೀರ್ಥರಿಂದ ವೈಷ್ಣವಪಂಥ ಶ್ರೀಹರಿಭಕ್ತಿಯು ಬಂಗಾಲದಲ್ಲಿ ಪ್ರಸಾರವಾಗಿದ್ದು, ಇವರ ಶಿಷ್ಯರಾದ ವಿಷ್ಣುಪೂರಿ ಎಂಬುವರು ಶ್ರೀಜಯಧ್ವಜತೀರ್ಥರಿಂದ ಮಾರದೀಕ್ಷೆ ಸನ್ಯಾಸಗಳನ್ನು ಪಡೆದು ಅವರ ಪ್ರತಿನಿಧಿಯಾಗಿ ಅಲ್ಲಿ ಭಕ್ತಿಪಂಥವನ್ನು ಚೆನ್ನಾಗಿ ಪ್ರಸಾರಮಾಡಿದ್ದರು. ಶ್ರೀವ್ಯಾಸರಾಜರು ವಂಗದೇಶಕ್ಕೆ ಹೋದಾಗ ಇವರು ರಾಜೇಂದ್ರ ಪರಂಪರೆಯವರೆಂದು ಇವರಿಗೆ ಅಸಾಧಾರಣ ಗೌರವಾದರಗಳು ದೊರೆತವು. ವ್ಯಾಸರಾಜರು ಅಲ್ಲಿ ಮಧ್ವಮತವನ್ನೂ, ವಿಷ್ಣುಭಕ್ತಿಯನ್ನೂ ಚೆನ್ನಾಗಿ ಪ್ರಸಾರಮಾಡಿ ಶ್ರೀಲಕ್ಷ್ಮೀತೀರ್ಥರಿಗೆ ಆಶ್ರಮವಿತ್ತು ತಮ್ಮ ಪ್ರತಿನಿಧಿಯನ್ನಾಗಿ ತತ್ವಪ್ರಸಾರಮಾಡಲು ಆಜ್ಞಾಪಿಸಿ ಬಂದರು. ಈ ಲಕ್ಷ್ಮೀತೀರ್ಥರ ಶಿಷ್ಯರೇ ಬಂಗಾಲದ ಪ್ರಖ್ಯಾತ ಸಂತರಾದ ಶ್ರೀಕೃಷ್ಣಚೈತನ್ಯರು. ಇಂದು ಜಗತ್ತಿನಾದ್ಯಂತ ಶ್ರೀಕೃಷ್ಣನ ಪಂಥ, ಭಕ್ತಿಪಂಥಗಳು ವ್ಯಾಪಕವಾಗಿ ಬೆಳೆಯಲು ಶ್ರೀವ್ಯಾಸತೀರ್ಥರೇ ಕಾರಣರು. ಅಂದಮೇಲೆ ಈ ಮಹನೀಯರು ವಿಶ್ವದ ಭಕ್ತಿಪಂಥಕ್ಕೆ ನೀಡಿದ ಕಾಣಿಕೆಯ ಮಹತ್ವ, ವೈಶಿಷ್ಟ್ಯಗಳೆಂತಹುದೆಂಬುದು ಅರಿವಾಗದಿರದು.
ಶ್ರೀವ್ಯಾಸರಾಜರು ಶ್ರೀಪಾದರಾಜರಲ್ಲಿ ವ್ಯಾಸಂಗಮಾಡುತ್ತಿರುವಾಗಲೇ ಅವರಿಗೆ ಪಂಢರಪುರದಲ್ಲಿ ದೊರಕಿದ್ದ ಮತ್ತೊಂದು ಸಂಪುಟದಲ್ಲಿದ್ದ ಶ್ರೀಕೃಷ್ಣನು ವ್ಯಾಸಯತಿಗಳಿಗೆ ಒಲಿದು, ಪ್ರಸನ್ನನಾಗಿ, ತನ್ನ ಮನಮೋಹಕ ಜಗದ್ವಿಲಕ್ಷಣ ತಾಂಡವ ನೃತ್ಯವಿಲಾಸಗೈದು ಆನಂದಗೊಳಿಸಿದಾಗ ಭಕ್ತಿಪರವಶರಾದ ಶ್ರೀವ್ಯಾಸಮುನಿಗಳು ಮೈಮರೆತು ಆ ಮಂಗಳಕರ ಘಟನೆಯ ಸವಿನೆನಪಿಗಾಗಿ ಶ್ರೀಕೃಷ್ಣ ಎಂಬ ಅಂಕಿತದಿಂದ ಶ್ರೀಕೃಷ್ಣನ ತಾಂಡವವಿಲಾಸವನ್ನು ಸ್ತುತಿಸಿ ಕನ್ನಡದಲ್ಲಿ ಪದವನ್ನು ರಚಿಸಿದರು. ಇದು ಹರಿದಾಸಸಾಹಿತ್ಯ ಭಂಡಾರಕ್ಕೆ ಶ್ರೀವ್ಯಾಸರಾಜರು ಅರ್ಪಿಸಿದ ಮೊದಲ ಕಾಣಿಕೆ. ಅನಂತರ ಗುರುವರರು ನೂರಾರು ಕನ್ನಡ ಕೃತಿಗಳನ್ನು ರಚಿಸಿ ದಾಸಸಾಹಿತ್ಯ ಭಂಡಾರವನ್ನು ತುಂಬಿಸಿ ಕನ್ನಡಭಾಷೆಗೂ, ಹರಿದಾಸವಾಹ್ಮಯಕ್ಕೂ ಕಳೆ ತಂದು ವಿಶೇಷ ಮಹತ್ವವನ್ನು ತಂದುಕೊಟ್ಟರು.
ಶ್ರೀವ್ಯಾಸತೀರ್ಥರು ವಿಜಯನಗರದ ರಾಜಗುರುಗಳಾಗಿದ್ದಾಗ ಅಲ್ಲಿ ದಕ್ಷಿಣಭಾರತದಲ್ಲೇ ಅದ್ವಿತೀಯವೆನಿಸಿದ ಸಂಸ್ಕೃತ ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸಿ, ಅದರ ಕುಲಗುರುಗಳಾಗಿದ್ದು, ಹತ್ತಾರು ಸಾವಿರ ಜನ ವಿದ್ಯಾರ್ಥಿಗಳಿಗೆ ಅಶ-ವಸನ-ವಸತಿ-ವಿದ್ಯಾರ್ಥಿವೇತನ ಸೌಕರ್ಯಗಳನ್ನೇರ್ಪಡಿಸಿಕೊಟ್ಟು ಸಕಲಶಾಸ್ತ್ರಗಳು, ಸಂಗೀತ, ಕುಶಲಕಲೆಗಳಲ್ಲಿ ಪಾರಂಗತರಾಗುವಂತೆ ಮಾಡಿ ಜ್ಞಾನದಾನಮಾಡಿದರು. ಇವರಲ್ಲಿ ನೂರಾರು ಜನ ಸನ್ಯಾಸಿ ಶಿಷ್ಯರು ವ್ಯಾಸಂಗಮಾಡುತ್ತಿದ್ದರು. ಶ್ರೀವಿಜಯೀಂದ್ರ-ವಾದಿರಾಜ-ಶ್ರೀನಿವಾಸತೀರ್ಥ, ಗೋವಿಂದ ಒಡೆಯರು, ನಾರಾಯಣಯತಿಗಳೇ ಮೊದಲಾದ ಶ್ರೇಷ್ಠ ಜ್ಞಾನಿನಾಯಕರನ್ನು, ಇದರಂತೆ ಅಪರೋಕ್ಷಜ್ಞಾನಿಗಳಾದ ಶ್ರೀಪುರಂದರದಾಸರು - ಕನಕದಾಸರಂಥ ಮಹಾನುಭಾವರು, ಗದುಗಿನ ನಾರಾಯಣಪ್ಪ ಎಂಬ ಪ್ರಿಯಶಿಷ್ಯರುಗಳನ್ನೂ ಜಗತ್ತಿಗೆ ನೀಡಿದ ಮಹನೀಯರು ಶ್ರೀವ್ಯಾಸತೀರ್ಥರು. ಇವರ ಶಿಷ್ಯರೆಲ್ಲರೂ ಪ್ರಕಾಂಡಪಂಡಿತರೂ, ಗ್ರಂಥಕಾರರೂ, ಮಹಾತ್ಮರೂ ಆಗಿದ್ದು, ದೈತಸಿದ್ಧಾಂತ ಮತ್ತು ಕನ್ನಡ ಹರಿದಾಸಸಾಹಿತ್ಯದ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾದರು.
ಶ್ರೀವ್ಯಾಸರಾಜರು ಹರಿದಾಸಸಾಹಿತ್ಯದ ಮೂಲಕ ನಾಡು - ನುಡಿ - ಜನತೆಗೆ ಮಾಡಿರುವ ಮಹೋಪಕಾರ ಅನನ್ಯ ಸಾಧಾರಣವಾದುದು. ಅದನ್ನಿಲ್ಲಿ ಸ್ವಲ್ಪ ನಿರೂಪಿಸುವುದು ಅಪ್ರಕೃತವಾಗಲಾರದು. ವೇದ, ಉಪನಿಷತ್, ಗೀತಾ, ಪುರಾಣ, ಭಾರತಾದಿ ಶಾಸ್ತ್ರಗಳು, ಧರ್ಮಗಳು, ಅವುಗಳ ಉಪದೇಶಗಳು ಇವುಗಳೆಲ್ಲವೂ ಸಂಸ್ಕೃತಭಾಷೆಯಲ್ಲಿಯೇ ಇದ್ದು, ಅವು ಕೇವಲ ಪಂಡಿತರ ಸ್ವತ್ತಾಗಿದ್ದಾಗ ಅವುಗಳೆಲ್ಲದರ ಉಪದೇಶಗಳನ್ನು ಪ್ರಪ್ರಥಮವಾಗಿ ಕನ್ನಡಭಾಷೆಯಲ್ಲಿ ಸರಸಸುಂದರ ಕೃತಿಗಳಲ್ಲಿ ರಚಿಸಿ, ಸಂಗೀತ ಬೆರೆಸಿ ಜನಸಾಮಾನ್ಯರಿಗೆ ನೀಡಿದ್ದು ಒಂದು ದೊಡ್ಡ ಸಾಹಸ ಮತ್ತು ಕ್ರಾಂತಿಕಾರಕವೆಂದು ಹೇಳಬಹುದು. ಹೀಗೆ ಸಂಸ್ಕೃತ ಬಾರದ ಕನ್ನಡ ಜನಸಾಮಾನ್ಯರಿಗೆ ವೇದಾದಿಶಾಸ್ತ್ರಗಳ ಉಪದೇಶವನ್ನು ನೀಡಿ ಕನ್ನಡ ಭಾಷೆಗೆ ಕಳೆ ತಂದ ಅವರ ಉಪಕಾರವನ್ನು ಅದಾರು ತಾನೇ ಮರೆಯಲು ಸಾಧ್ಯ? ಕನ್ನಡದಲ್ಲಿ ಕೃತಿ ರಚಿಸಿ ಅದಕ್ಕೆ ತತ್ವಜ್ಞಾನಿಗಳೆಲ್ಲರ ಗೌರವ ದೊರಕುವಂತೆ ಮಾಡಿದ್ದು ಸಾಮಾನ್ಯ ಕಾರ್ಯವಲ್ಲ.
ಅಂದು ವೈದಿಕ ಸಂಪ್ರದಾಯದಲ್ಲಿ ಸಂಸ್ಕೃತ ಭಾಷೆಯನ್ನು ಬಿಟ್ಟು ಕನ್ನಡಾದಿ ಪ್ರಾಕೃತಭಾಷೆಗಳನ್ನು ಆಶ್ರಯಿಸಿ ತನ್ಮೂಲಕ ಸಾಧನಮಾಡಿಕೊಳ್ಳುವುದು ಅತ್ಯಂತ ನಿಷಿದ್ಧವೆಂಬ ವಾದವು ರೂಢಮೂಲವಾಗಿತ್ತು. “ದಿವ್ಯಭಾಷಾಂ ಪರಿತ್ಯಜ್ಯ ಹನ್ಯಭಾಷಾಕೃತಾನಿ ವೈ | ಶಾಸ್ತ್ರಾಣಿ ಯೇ ಪ್ರಶೃಂತಿ ತೇ ವೈ ನಿರಯಗಾಮಿನಃ || ಕರ್ನಾಟಕ ದ್ರಾವಿಡೈರ್ಯಾನಿ ರಚಿತಾನಾಂಧ್ರಭಾಷಯಾ ವಂಚಾಸಿ ಯೇ ಪ್ರಶ್ನಣ್ಣಂತಿ ತೇ ವೈ ನಿರಯಗಾಮಿನ ” (ಶೇಷಧರ್ಮ ೧೦-೫೯) ಅಂದರೆ ದೇವಭಾಷೆಯಾದ ಸಂಸ್ಕೃತವನ್ನು ಬಿಟ್ಟು ಇತರ ಭಾಷೆಗಳಲ್ಲಿ ರಚಿತವಾದ ಶಾಸ್ತ್ರಗಳನ್ನಾರು ಕೇಳುವರೋ, ಕನ್ನಡ, ತಮಿಳು, ಆಂಧ್ರಭಾಷೆಗಳಲ್ಲಿ ರಚಿತವಾದ ವಾಕ್ಯಗಳನ್ನು ಯಾರು ಕೇಳುವರೋ, ಅವರು ನರಕಭಾಗಿಗಳು ಎಂದು ಮುಂತಾಗಿ ಕೆಲಪುರಾಣಗಳಲ್ಲಿ ಉಕ್ತವಾಗಿದೆ. ಇಂತಹ ಪ್ರಮಾಣಗಳಿದ್ದರೂ ವ್ಯಾಸರಾಜರಂಥ ಜ್ಞಾನಿಗಳು ಅದೆಂತು ಕನ್ನಡದಲ್ಲಿ ಶಾಸ್ತ್ರಾರ್ಥಗಳ ಉಪದೇಶಗಳನ್ನು ರಚಿಸಿ ಪ್ರಚಾರಮಾಡಿದರು ? ಎಂಬ ಪ್ರಶ್ನೆಯೇಳುವುದು ಸ್ವಾಭಾವಿಕ. ಈ ಪ್ರಮಾಣಗಳ ರಹಸ್ಯ ಆಪಾತತಃ ತೋರುವ ಅರ್ಥವನ್ನು ಪ್ರತಿಪಾದಿಸುವುದಿಲ್ಲ. ಇಲ್ಲಿ ಸಲ್ಪ ವಿಚಾರಮಾಡಬೇಕು. ಕನ್ನಡದಲ್ಲಿ ದಾಸಸಾಹಿತ್ಯ ರಚನೆ ಮಾಡಿದವರು ಸಾಮಾನ್ಯರಲ್ಲ!
ಮಹಾಜ್ಞಾನಿಗಳು ಮತ್ತು ದೈವಾಂಶಸಂಭೂತರೆಂದು ಪ್ರಸಿದ್ಧರಾದವರು! ಸಂಸ್ಕೃತದಲ್ಲಿ ದಿಗಂತಿಪಂಡಿತರು. ವಾದವಿದ್ಯಾಕೋವಿದರು. ವೈದಿಕಸಿದ್ಧಾಂತಸ್ಥಾಪನಾಚಾರ್ಯರಾದ ಪೀಠಾಧಿಪತಿಗಳು! ಕನ್ನಡ ಹರಿದಾಸಪಂಥಕ್ಕೆ ಪ್ರೋತ್ಸಾಹಕವಾಗುವಂತೆ ಸಂಸ್ಕೃತದಲ್ಲಿ “ಹರಿಗೀತೆಯನ್ನು ರಚಿಸಿ ಅದು ಪ್ರೇರಕಶಕ್ತಿಯಾಗುವಂತೆ ಮಾಡಿದವರು ಸಾಕ್ಷಾತ್ ವಾಯುದೇವರ ಅವತಾರರಾದ, ಜೀವೋತ್ತಮರೂ ದೈತಶಾಸ್ತ್ರ ಪ್ರವರ್ತಕರೂ ಆದ ಶ್ರೀಮಧ್ವಾಚಾರ್ಯರು ! ಕನ್ನಡ ಹರಿದಾಸಸಾಹಿತ್ಯದ ಆದ್ಯಾಚಾರ್ಯರೆನಿಸಿ ಮೊದಲ ಬಾರಿಗೆ ಕನ್ನಡದಲ್ಲಿ ಕೃತಿ ರಚಿಸಿದವರು ಶ್ರೀಮಧ್ವಾಚಾರ್ಯರ ಪಟ್ಟದ ಶಿಷ್ಯರಲ್ಲೊಬ್ಬರು. ಅವರ ಮಹಾಪೀಠಾಧಿಪತಿಗಳೂ ಆದ ಶ್ರೀನರಹರಿತೀರ್ಥರು! ಶ್ರೀಮಧ್ವಾಚಾರ್ಯರ ಮಹಾಸಂಸ್ಥಾನಗಳಲ್ಲಿ ಬಂದ ಶ್ರೀಶ್ರೀಪಾದರಾಜರು - ಶ್ರೀವ್ಯಾಸರಾಜರು - ಶ್ರೀವಿಜಯೀಂದ್ರರು ಮತ್ತು ಉಡುಪಿಯ ಸೋದೆ ಮಠಾಧೀಶರಾದ ಶ್ರೀವಾದಿರಾಜರು - ಇವರೆಲ್ಲರೂ ಸಂಸ್ಕೃತದಲ್ಲಿ ಪ್ರಕಾಂಡಪಂಡಿತರು. ಉದ್ದಾಮ ಶಾಸ್ತ್ರಗ್ರಂಥಗಳನ್ನು ರಚಿಸಿದ ದೈತಸಿದ್ಧಾಂತಸ್ಥಾಪನಾಚಾರ್ಯರುಗಳು! ಇಂಥವರು ಅಶಾಸ್ತ್ರೀಯ ಕಾರ್ಯವನ್ನೆಂದಿಗಾದರೂ ಮಾಡುವರೇ ? ಆ ಮಹನೀಯರು ಅನುಸರಿಸಿದ ಮಾರ್ಗವೆಲ್ಲವೂ ಶಾಸ್ತ್ರವಿಹಿತವೇ! ವೇದಾದಿ ಮೂಲಶಾಸ್ತ್ರಗಳೂ, ನಿರ್ಣಾಯಕಶಾಸ್ತ್ರಗಳೂ - ಎಲ್ಲವೂ ಸಂಸ್ಕೃತದಲ್ಲಿಯೇ ಇರುವುವು. ನಿತ್ಯನೈಮಿತ್ತಿಕ ಕರ್ಮಾನುಷ್ಠಾನದಲ್ಲಿ ಸಂಧ್ಯಾಧಿಗಳನ್ನೂ, ಶ್ರಾದಾದಿಗಳನ್ನೂ, ಶಾಂತಿಪಾಠಗಳನ್ನೂ ಮತ್ತು ಮಂತ್ರಜಪಗಳನ್ನೂ ಯಾರೂ ಕನ್ನಡಾದಿ ಪ್ರಾಕೃತ ಭಾಷೆಗಳಲ್ಲಿ ಆಚರಿಸುವುದಿಲ್ಲ. ಆದರೆ ಭಗವನ್ಮಹಿಮೆಯನ್ನು ತಿಳಿಯಲು ಭಾಷೆ ಒಂದು ಸಾಧನಮಾತ್ರ. ಆ ಸಾಧನೆ ಕನ್ನಡವಾದರೂ ಒಂದೇ ಸಂಸ್ಕೃತವಾದರೂ ಒಂದೇ. ಭಾಷೆಯೇ ಮುಖ್ಯವಾದಂತಹ ಸಾಧನದಲ್ಲಿ ಅಂದರೆ ಸಂಧ್ಯಾದಿ ಅನುಷ್ಠಾನಗಳಲ್ಲಿ ಸಂಸ್ಕೃತವೇ ಮಾನ್ಯವಾದುದು. ಹರಿದಾಸಸಾಹಿತ್ಯವಾದರೋ ಭಗವನ್ಮಹಿಮೆಯನ್ನೂ, ಹರಿಯ ಲೀಲಾವಿಲಾಸಚರಿತಾದಿಗಳನ್ನೂ, ಶಾಸ್ತ್ರಗಳ ಉಪದೇಶಗಳನ್ನೂ ತಿಳಿಸಿ ಭಗವಂತನಲ್ಲಿರತಿಹುಟ್ಟಿಸುವುದಕ್ಕಾಗಿ ರಚಿತವಾದವು. ಅದು ಸಂಸ್ಕೃತದಲ್ಲಿರಬೇಕಾದ ಅಗತ್ಯವಿಲ್ಲ. ಆದ್ದರಿಂದಲೇ ಶ್ರೀಹರಿಕಥಾಮೃತಸಾರದಲ್ಲಿ 'ಮಾಧವನ ಗುಣಪೇಳ್ವ ಪ್ರಾಕೃತ | ವಾದರೆಯು ಸರಿ ಕೇಳಿ ಪರಮಾಹ್ಲಾದ ಬಡದಿಪ್ಪರೇ ನಿರಂತರ ಬಲ್ಲ ಕೋವಿದರು!” ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, “ಸಂಸ್ಕೃತವಿದಲ್ಲೆಂದು ಕುಹುಕಿ ತಿ ರಸ್ಕರಲೇನಹುದು ಭಕ್ತಿ ಪು | ರಸ್ಕರದಿ ಕೇಳರಿಗೆ ಒಲಿಯುವನು ಪುಷ್ಕರಾಕ್ಷಸದಾ ||” ಮತ್ತು ಕೃತಿಪತಿಕಥಾನ್ವಿತವೆನಿಪ ಪ್ರಾಕೃತವೇ ತಾ ಸಂಸ್ಕೃತವೆನಿಸಿ ಸ | ಕೃತಿಯನೀವುದು ಭಕ್ತಿಪೂರ್ವಕ ಕೇಳಿಪೇಳ್ವರಿಗೆ ” (ಹರಿಕಥಾಮೃತಸಾರ) ಎಂದು ಉದ್ಧರಿಸಿದ್ದಾರೆ! ಅಂದರೆ ಕನ್ನಡವಾದರೂ ಭಕ್ತಿಯಿಂದ ಕೇಳಿದರೆ ಶ್ರೀಹರಿ ಒಲಿಯುವನು ಎಂದು ಹೇಳಿದ ಶ್ರೀಜಗನ್ನಾಥದಾಸರು ಇನ್ನೂ ಒಂದು ಹೆಜ್ಜೆ ಮುಂದುವರೆದು - ಶ್ರೀಹರಿಯ ಕಥಾವಿಲಾಸವು ಪ್ರಾಕೃತದಲ್ಲಿ ರಚಿತವಾಗಿದ್ದರೂ ಅದನ್ನು ಭಕ್ತಿಪೂರ್ವಕ ಕೇಳುವವರಿಗೆ ಆ ಪ್ರಾಕೃತವೇ ಸಂಸ್ಕೃತವೆನಿಸಿ ಸದ್ಗತಿಯನ್ನು ಕೊಡಿಸುವುದೆಂದು ಹೇಳಿದ್ದಾರೆ.
ದಾಸರಾಯರ ಮಾತಿಗೆ ವೇದಾಂತಕೃತ್ ಎಂದು ಮಾನ್ಯರಾದ ಸಾಕ್ಷಾತ್ ನಾರಾಯಣಾವತಾರಿಗಳಾದ ಶ್ರೀವೇದವ್ಯಾಸದೇವರ ಸಮ್ಮತಿಯೂ ಇದೆ. ಅವರು ಭಾಗವತದಲ್ಲಿ ಸ್ತವೈರುಚ್ಚಾವಚೈಃ ಪ್ರೋತೈಃ ಪುರಾಣೈಃ ಪ್ರಾಕೃತೈರಪಿ!” ಅಂದರೆ ಭಗವನ್ನಹಿಮಾ-ಅವತಾರ-ಲೀಲಾವಿಲಾಸ ಕಥೆ ಮುಂತಾದವು, ಪುರಾಣಾದಿಗಳು ಪ್ರಾಕೃತಭಾಷೆಯಲ್ಲಿದ್ದರೂ ಅವನ್ನು ಅವಶ್ಯ ಶ್ರವಣಮಾಡಿ ಶ್ರೀಹರಿಯಲ್ಲಿ ಭಕ್ತಿಮಾಡಬೇಕು - ಮುಂತಾಗಿ ಹೇಳಿ ಕನ್ನಡಾದಿ ಪ್ರಾಕೃತಭಾಷೆಗಳಲ್ಲಿದ್ದರೂ ಶ್ರೀಹರಿಯ ಮಹಿಮಾಶ್ರವಣದಿಂದ ಶ್ರೇಯಸ್ಸಾಗುವುದು, ಸಾಧನವಾಗುವುದೆಂದು ಅಪ್ಪಣೆ ಕೊಡಿಸಿರುತ್ತಾರೆ. ಅಂತೆಯೇ ಜ್ಞಾನಿಗಳಾದ ಶ್ರೀಹರಿಯ ಚಿತ್ತವನ್ನೂ, ಸಂಕಲ್ಪವನ್ನೂ ಬಲ್ಲ ಶ್ರೀನರಹರಿತೀರ್ಥರು ಶ್ರೀಪಾದರಾಜರು, ಶ್ರೀವ್ಯಾಸತೀರ್ಥರುಗಳು ಪರಮಾತ್ಮನ ಪ್ರೇರಣೆಯಂತೆ ಆ ಪಂಡಿತ-ಪಾಮರರ ಉದ್ಧಾರಕ್ಕಾಗಿ, ಶ್ರೀಹರಿದಾಸಸಾಹಿತ್ಯ ಪೋಷಕರಾಗಿ, ಸ್ವತಃ ಕನ್ನಡದಲ್ಲಿ ಕೃತಿಗಳನ್ನು ರಚಿಸಿ, ವೇದಾದಿಶಾಸ್ತ್ರಗಳಲ್ಲಿ ಅಡಗಿರುವ ತತ್ವಸಾರ-ಭಗವನ್ಮಹಿಮೆ-ಲೀಲಾವಿಲಾಸ-ಉಪದೇಶಗಳ ಸಾರವನ್ನು ಜನತೆಗೆ ಅವರಿಗೆ ತಿಳಿಯುವ ಕನ್ನಡದಲ್ಲಿ ನೀಡಿ ಸರ್ವರ ಸಾಧನೆ - ಶ್ರೇಯಸ್ಸುಗಳಿಗೆ ಕಾರಣರಾಗಿ ಮಹೋಪಕಾರ ಮಾಡಿದ್ದಾರೆ.
ಇನ್ನೊಂದು ವಿಚಾರವನ್ನಿಲ್ಲಿ ಸ್ಪಷ್ಟಪಡಿಸುವುದು ಅವಶ್ಯವಾಗಿದೆ. ಶ್ರೀಪಾದರಾಜರು - ಶ್ರೀವ್ಯಾಸರಾಜರು ಮತ್ತು ಇತರ ಹರಿದಾಸರು ಕನ್ನಡಭಾಷೆಯಲ್ಲಿ ಹರಿದಾಸಸಾಹಿತ್ಯವನ್ನು ರಚಿಸಿದ್ದರಿಂದಲೇ ಅದು ಜನಸಾಮಾನ್ಯರಲ್ಲಿ ಭಗವದ್ದಿಷಯಕವಾದ ಸಂಸ್ಕಾರವನ್ನೂ, ಭಕ್ತಿ-ಶ್ರದೆಗಳನ್ನೂ, ಆಧ್ಯಾತ್ಮಿಕ ಪ್ರಜ್ಞೆಯನ್ನೂ ಮೂಡಿಸಲು ಸಹಾಯಕವಾಯಿತು. ಸಂಸ್ಕೃತ ಭಾಷೆಯಲ್ಲಿಯೇ ರಚಿತವಾಗಿದ್ದಲ್ಲಿ ಅದು ಕೇವಲ ಪಂಡಿತೈಕ ಗಮ್ಯವಾಗಿ ಅದರ ಉದ್ದೇಶವೇ ನೆರವೇರುತ್ತಿರಲಿಲ್ಲ! ಯಾವುದು ಜನತೆಯ ಭಾಷೆಯೋ, ಆ ಭಾಷೆಯಲ್ಲಿ ನೇರವಾಗಿ ಹೃದಯಕ್ಕೆ ಮುಟ್ಟುವ ಸರಳ ಶೈಲಿಯಲ್ಲಿ ಹರಿದಾಸವಾಳ್ಮೆಯವನ್ನು ಜನತೆಗೆ ನೀಡಿದ್ದರಿಂದ ಅದು ಇಂದಿಗೂ ಉಳಿದು ಬಂದು ಜನಪ್ರಿಯವಾಯಿತು. ಸಂಸ್ಕೃತವನ್ನು ತಿರಸ್ಕರಿಸಿ ಪ್ರಾಕೃತವನ್ನು ಅವಲಂಬಿಸಬಾರದು. ಅಂದರೆ ಮೂಲಶಾಸ್ತ್ರಗಳನ್ನು ನಿರಾಕರಿಸಿ ಅವುಗಳಿಗಿಂತ ಕನ್ನಡಾದಿ ಪ್ರಾಕೃತ ಸಾಹಿತ್ಯವೇ ಶ್ರೇಷ್ಠವೆಂಬುದು ಸರಿಯಲ್ಲ. ಆ ಮೂಲಶಾಸ್ತ್ರಗಳಿಗೆ ಅನುಸಾರವಾಗಿ ಅದರಲ್ಲಿನ ಪ್ರಮೇಯ-ತತ್ವಗಳ ಉಪದೇಶಗಳು ಸಂಸ್ಕೃತ ಬಾರದ ಅಧಿಕಾಂಶ ಜನಸಾಮಾನ್ಯರಿಗೆ ತಿಳಿದು ಅವರೆಲ್ಲರ ಕಲ್ಯಾಣವೂ ಆಗಲಿ ಎಂಬುದೇ ಹರಿದಾಸವಾಹ್ಮಯದ, ಅದನ್ನು ರಚಿಸಿದವರ ಉದ್ದೇಶ. ಇದು ಅತ್ಯಂತ ಸಮಂಜಸವೆಂದು ಧೈರ್ಯವಾಗಿ ಹೇಳಬಹುದು.
ಇಂದು ಎಲ್ಲೆಡೆಯೂ ಕನ್ನಡಾಭಿಮಾನವು ಮೇರೆ ಮೀರಿ ಬೆಳೆಯುತ್ತಿದೆ. ಪ್ರತಿಯೊಂದೂ ಕನ್ನಡದಲ್ಲೇ ಜರುಗಬೇಕೆಂಬ ಆಶೆ, ಅದಕ್ಕಾಗಿ ಹೋರಾಟವೂ ಜರುಗುತ್ತಿದೆ. ಇಂದಿನ ಪರಿಸ್ಥಿತಿಯನ್ನು ಅವಲೋಕಿಸಿದಾಗ ಐದುನೂರು ವರ್ಷಗಳಿಗೂ ಹಿಂದೆಯೇ ತತ್ವ, ಪ್ರಮೇಯ, ಧರ್ಮ, ಸಾಹಿತ್ಯ, ಕಲೆ ಮುಂತಾಗಿ ಎಲ್ಲವನ್ನೂ ಕನ್ನಡದಲ್ಲೇ ಜನತೆಗೆ ನೀಡಬೇಕೆಂದು, ಅವೆಲ್ಲವನ್ನೂ ಕೋಟ್ಯಂತರ ಕನ್ನಡಪದ-ಪದ್ಯ-ಸುಳಾದಿ-ಕಾವ್ಯಗಳ ರೂಪವಾಗಿ ರಚಿಸಿ, ಜನಸಾಮಾನ್ಯರಿಗೆ ನೀಡಿ, ಕನ್ನಡಭಾಷೆ - ಸಾಹಿತ್ಯಗಳನ್ನು ಜನಪ್ರಿಯವಾಗಿ ಮಾಡಿದ ಶ್ರೀಪಾದರಾಜರು - ಶ್ರೀವ್ಯಾಸರಾಜಯತಿವರ್ಯರುಗಳ ದೂರದೃಷ್ಟಿ, ಕನ್ನಡದ ಬಗೆಗಿನ ಅಭಿಮಾನ ಕ್ರಾಂತಿಕಾರಕವಾದ ಅಸಾಧಾರಣ ಸಾಧನೆಯೆಂದು ಘಂಟಾಘೋಷವಾಗಿ ಹೇಳಬಹುದು! ಇದರಿಂದ ಆ ಮಹನೀಯರಿಗೆ ಜನಸಾಮಾನ್ಯರಲ್ಲಿದೀನ-ದಲಿತರ ಉದ್ಧಾರದಲ್ಲಿ ಅದೆಷ್ಟು ಮಮತೆ ಇತ್ತೆಂಬುದು ವ್ಯಕ್ತವಾಗುವುದು. ಅ೦ದು ಆ ಮಹನೀಯರು ಮಾಡಿದ ಉಪಕಾರವೇ ಇಂದು ಜನತೆಗೆ ತಮ್ಮ ಭಾಷೆ-ಸಂಸ್ಕೃತಿ-ಸಾಹಿತ್ಯಗಳಲ್ಲಿ ಅತ್ಯಭಿಮಾನ ಮಾಡಲು ಕಾರಣವಾಗಿದೆಯೆಂದರೂ ತಪ್ಪಾಗದು. ಇಂತು ಕನ್ನಡ ಹರಿದಾಸರು ಮಾಡಿದ ಈ ಮಹೋಪಕಾರ, ಕನ್ನಡ ಜಾಗೃತಿಯನ್ನು ಕನ್ನಡ ಜನತೆ ಎಂದಿಗೂ ಮರೆಯುವಂತಿಲ್ಲ.
ಶ್ರೀವ್ಯಾಸರಾಜರ ಶಿಷ್ಯರಲ್ಲಿ ಶ್ರೀವಿಜಯೀಂದ್ರರು ಮತ್ತು ಶ್ರೀವಾದಿರಾಜರು ಪ್ರಮುಖರು. ಶ್ರೀವಿಜಯೀಂದ್ರರು ಶ್ರೀಮಧ್ವಾಚಾರ್ಯರ ಮಹಾಸಂಸ್ಥಾನಾಧೀಶ್ವರರಾದ ಶ್ರೀಕವೀಂದ್ರ-ಶ್ರೀವಿಬುಧೇಂದ್ರತೀರ್ಥರ ಮಹಾಪೀಠಾಧಿಪತಿಗಳು. ಸಕಲಶಾಸ್ತ್ರವಿಶಾರದರಾದ ಅವರು “ಸರ್ವತಂತ್ರಸ್ವತಂತ್ರರೆಂದು ಖ್ಯಾತರಾಗಿದ್ದರು. ಶ್ರೀವ್ಯಾಸರಾಜರ ತರುವಾಯ ದೈ ತಸಿದ್ಧಾಂತವನ್ನು ಎತ್ತಿಹಿಡಿದು ನೂರಾರು ಗ್ರಂಥರಚನೆ, ವಾದಿದಿಗ್ವಿಜಯ, ಪಾಠ-ಪ್ರವಚನ ದ್ವಾರಾ ಸಿದ್ಧಾಂತವನ್ನು ಪೋಷಿಸಿಕೊಂಡು ಬಂದ ಮಹನೀಯರಿವರು. ಶ್ರೀವ್ಯಾಸರಾಜರ ವಿದ್ಯಾಶಿಷ್ಯರಾದ ಇವರು ಗುರುಗಳ ಆದೇಶದಂತೆ ಕನ್ನಡ ಹರಿದಾಸಸಾಹಿತ್ಯಕ್ಕೆ ಮುಖ್ಯ ಪೋಷಕರಾಗಿದ್ದು ಅದನ್ನು ಸರ್ವತೋಮುಖವಾಗಿ ಬೆಳೆಸಿಕೊಂಡು ಬಂದುದಲ್ಲದೆ ಸ್ವತಃ ಅನೇಕ ಪದಗಳನ್ನು “ವಿಜಯೀಂದ್ರ” ಎಂಬ ಅಂಕಿತದಿಂದ ರಚಿಸಿ ಕನ್ನಡ ಹರಿದಾಸ ಭಂಡಾರವನ್ನು ತುಂಬಿದರು.
“ಯೋಗಿವರ್ಯ ವ್ಯಾಸರಾಯರೆಂಬ ವಿಚಿತ್ರ ಮೇಘ | ಬೇಗ ವಿಷ್ಣುಪದ ತೋರಿಸುತ್ತಾ ಬಂದಿತಿದಿಕೋ ”, “ಚಂದಿರ ರಾಮನ ರಾಣಿ ಸೀತೆಯ ಮುಖದಂದಕೆ ಸೋತು ಲಜ್ಜೆಯಿಂದ ರಾತ್ರಿಚರನಾದ ||” ಮುಂತಾದ ಪದಗಳನ್ನೂ, “ಪರಬೊಮ್ಮ ಹರಿಯು ತಾ ನರರ ರೂಪ ತಾಳಿದ, ನರನಾದ ದಶರಥನ ವರಗೇಹದಲ್ಲಿ ಅವತರಿಸಿ ” ಎಂದು ಪ್ರಾರಂಭವಾಗುವ ಒಂದು ಅಪೂರ್ವ ಸುಳಾದಿಯನ್ನೂ ರಚಿಸಿರುವುದಲ್ಲದೆ, ಇದರಂತೆ ಅನೇಕ ಪದ-ಪದ-ಸುಳಾದಿಗಳನ್ನು ರಚಿಸಿ ಕನ್ನಡ ಹರಿದಾಸಸಾಹಿತ್ಯಕ್ಕೆ ಕಳೆತಂದರು. ಶ್ರೀವಿಜಯೀಂದ್ರರು ವಾಯುಗಣಕ್ಕೆ ಸೇರಿದ (ಋಜುಗಣಸ್ಥರು) ದೇವಾಂಶರೆಂದು ಜ್ಞಾನಿಗಳು ಅವರನ್ನು
ಕೊಂಡಾಡುವರು.
ಸೋದೆ ಮಠಾಧೀಶರಾದ ಶ್ರೀವಾದಿರಾಜರು ಶ್ರೀವ್ಯಾಸರಾಯರ ಮತ್ತೊಬ್ಬ ಪ್ರಮುಖ ಶಿಷ್ಯರು. ಇವರು ಸರ್ವಶಾಸ್ತ್ರಗಳನ್ನೂ ಶ್ರೀವ್ಯಾಸತೀರ್ಥರಲ್ಲಿಯೇ ಅಧ್ಯಯನಮಾಡಿದ ಭಾಗ್ಯಶಾಲಿಗಳು. ಇವರು ಶ್ರೀಹಯಗ್ರೀವದೇವರ ಉಪಾಸಕರು. ಭಾರತಾದ್ಯಂತ ತೀರ್ಥಕ್ಷೇತ್ರಗಳನ್ನು ಸಂಚರಿಸಿ ಆಯಾ ಕ್ಷೇತ್ರತೀರ್ಥಸ್ಥಭಗವನ್ಮೂರ್ತಿಗಳು ಮತ್ತು ಮಹಿಮಾದಿಗಳನ್ನು ವರ್ಣಿಸಿ ಸಂಸ್ಕೃತದಲ್ಲಿ “ತೀರ್ಥಪ್ರಬಂಧ'ವೆಂಬ ಉತ್ಕೃಷ್ಟ ಕಾವ್ಯವನ್ನು ರಚಿಸಿದ್ದಾರೆ. ಇವರ “ರುಕ್ಷ್ಮಿಣೀಶವಿಜಯ್” ಮಹಾಕಾವ್ಯವು ಸಂಸ್ಕೃತ ಸಾಹಿತ್ಯಕ್ಕೆ ಅವರು ನೀಡಿದ ಮಹಾಕೊಡುಗೆಯಾಗಿದೆ. ಇದರಂತೆ ೫೦-೬೦ ಸಣ್ಣ-ಪುಟ್ಟ ಕಾವ್ಯ-ಸ್ತೋತ್ರಾದಿಗಳನ್ನು ಸಂಸ್ಕೃತದಲ್ಲಿ ರಚಿಸಿರುವರು. ಶ್ರೀಗಳವರು ಯುಕ್ತಿಮಲ್ಲಿಕಾ-ಲಕ್ಷಾಭರಣಾದಿ ವೇದಾಂತಗ್ರಂಥಗಳು ದೈತಶಾಸ್ತ್ರದ ಅಮೋಘ ಕೃತಿಗಳೆನಿಸಿವೆ. ಇದರಂತೆ ಶ್ರೀವ್ಯಾಸರಾಜರ ವಿದ್ಯಾಶಿಷ್ಯರಾದ ಇವರು, ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆದು ಹಯವದನ ಎಂಬ ಅಂಕಿತದಿಂದ ನೂರಾರು ಪದಗಳನ್ನು ರಚಿಸಿ ಹರಿದಾಸಸಾಹಿತ್ಯಕ್ಕೆ ಅಸಾಧಾರಣ ಕೊಡುಗೆ ನೀಡಿದ್ದಾರೆ. ಇದಲ್ಲದೆ “ಲಕ್ಷ್ಮೀಶೋಭಾನೆ, ತಾತ್ಪರ್ಯನಿರ್ಣಯ ಕನ್ನಡ ಅನುವಾದ ಕಾವ್ಯ, ವೈಕುಂಠವರ್ಣನೆ, ಗುಂಡಕ್ರಿಯಾ, ಸ್ವಪ್ನಗದ” ಮುಂತಾದ ಕನ್ನಡ ಕಾವ್ಯಗಳನ್ನು ರಚಿಸಿ, ಮಹೋಪಕಾರಮಾಡಿದ್ದಾರೆ. ಶ್ರೀವಿಜಯೀಂದ್ರರು-ಶ್ರೀವಾದಿರಾಜರಂಥ ಜ್ಞಾನಿನಾಯಕರು ಕನ್ನಡ ಹರಿದಾಸಸಾಹಿತ್ಯಕ್ಕೆ ನೀಡಿರುವ ಕೊಡುಗೆಗಳನ್ನು ಯಾರೂ ಮರೆಯುವಂತಿಲ್ಲ. ಶ್ರೀವಾದಿರಾಜರು ಭಾವೀ ಬ್ರಹ್ಮಪಟ್ಟಕ್ಕೆ ಬರುವ ಲಾತವ್ಯರೆಂಬ ಋಜುಗಣಸ್ಥರೆಂದು ಜ್ಞಾನಿಗಳು ಕೊಂಡಾಡುವರು.
ಪುರಂದರದಾಸರು ಕನ್ನಡ ದಾಸಸಾಹಿತ್ಯದ ಅತ್ಯುನ್ನತಿಯ ಕಾಲದ ಮಹೋನ್ನತ ವ್ಯಕ್ತಿ, ಪುರಂದರದಾಸರ ಹೆಸರು ದಾಸಸಾಹಿತ್ಯದ ಜೊತೆಗೆ ಒಂದಾಗಿ ಇಂದಿಗೂ ಅಮರವಾಗಿದೆ. ಇವರನ್ನು ಗುರುಗಳಾದ ಶ್ರೀವ್ಯಾಸರಾಜರೇ ಕೊಂಡಾಡಿದ್ದಾರೆ. ದಾಸರು ರಚಿಸಿದ ಪದ-ಪದ್ಯ-ಸುಳಾದಿ-ಉಗಾಭೋಗಗಳನ್ನೊಳಗೊಂಡ ಅಗಾಧ ಸಾಹಿತ್ಯವನ್ನು ಶ್ರೀವ್ಯಾಸರಾಜರು “ಪುರ೦ದರೋಪನಿಷತ್” ಎಂದು ವ್ಯಾಸಪೀಠದ ಮೇಲಿಟ್ಟು ಗೌರವಿಸಿದರೆಂದ ಮೇಲೆ ಆ ದಿವ್ಯಸಾಹಿತ್ಯದ ಹಿರಿಮೆ-ಗರಿಮೆಗಳೆಂತಹುದೆಂಬುದು ವೇದ್ಯವಾಗುವುದು. ಪುರಂದರದಾಸರ ಹೆಸರು ಕನ್ನಡ ದಾಸಸಾಹಿತ್ಯ ಪರಂಪರೆಯಲ್ಲಿ ಚಿರಸ್ಥಾಯಿಯಾಗಿ ನಿಲ್ಲಲು ಅವರು ನೀಡಿರುವ ಅಮೋಘ ಸಾಹಿತ್ಯವೇ ಕಾರಣ. ಅವರು ಒಟ್ಟು ನಾಲ್ಕು ಲಕ್ಷದ ಇಪ್ಪತ್ತೈದು ಸಾವಿರ ಪದಗಳನ್ನು ರಚಿಸಿರುವರು. “ವಾಸುದೇವನ ನಾಮಾವಳಿಯ ಕ್ಲಪ್ತಿಯನು ವ್ಯಾಸರಾಯರ ದಯದಿಂದ ಬಣ್ಣಿಪೆನು! ಕೇದಾರ-ರಾಮೇಶ್ವರ-ಕೇರಳ ಭೂತದಳದ ಪಾದರವಿಂದ ಕ್ಷೇತ್ರ ಪ್ರತಿಕ್ಷೇತ್ರವು ಆದರದಿಂದ ಲಕ್ಷದಿಪ್ಪತ್ತೈದುಸಾವಿರ ಕೃತಿಯು! ವೇದಶಾಸ್ತ್ರಪುರಾಣ ಸಮ್ಮತದಿಂದ ||೧ ||” ಎಂದು ಪ್ರಾರಂಭವಾಗುವ ಏಳು ನುಡಿಯ ಪದದಲ್ಲಿ ಶ್ರೀದಾಸರೇ ವಿವರವಾಗಿ 'ತಿಳಿಸಿದ್ದಾರೆ. ದಾಸರಾಯರ ಕೃತಿರಚನೆಯ ಕ್ರಮ ಈ ವಿಧವಾಗಿದೆ –
ಇಷ್ಟು ವಿಸ್ತಾರವಾದ ಸಾಹಿತ್ಯ ಒದಗಿಸಿಕೊಟ್ಟಿದ್ದರಿಂದಲೇ ಇವನ್ನು ಶ್ರೀವ್ಯಾಸರಾಯರು ಪುರಂದರೋಪನಿಷತ್” ಎಂದು ಕರೆದರು ಮತ್ತು ಶಿಷ್ಯರಾದರೂ ಇವರನ್ನು “ದಾಸರೆಂದರೆ ಪುರಂದರದಾಸರಯ್ಯ!” ಎಂದು ಹೊಗಳಿದರು. ದಾಸರ ಶೈಲಿ ಅತ್ಯಂತ ಸರಳ, ಭಾವ ಬಹಳ ಚೇತೋಹಾರಿ, ಅಂತೆಯೇ ಇಂದಿಗೂ ಅವರ ನೂರಾರು ಪದಗಳು ಕನ್ನಡಿಗರ ಬಾಯಿಯಲ್ಲಿ ತಾನೇತಾನಾಗಿ ನೆಲೆಸಿಹೋಗಿವೆ.
ಪುರಂದರದಾಸರು ಕರ್ನಾಟಕ ಸಂಗೀತ ಪಿತಾಹಮಹರೆನಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಸಂಗೀತಕ್ಕೆ ಮೊಟ್ಟಮೊದಲು ಸಾಹಿತ್ಯವನ್ನು ಪುರಂದರದಾಸರು ಮತ್ತು ಪರಂಪರೆಯವರು ಒದಗಿಸಿಕೊಟ್ಟು ಕರ್ನಾಟಕ ಸಂಗೀತಕ್ಕೆ ಒಂದು ಸ್ವರೂಪವನ್ನು ಕೊಟ್ಟು ಪ್ರಸಾರಮಾಡಿದ್ದರಿಂದ ಇವರನ್ನು ಅಂದಿನಿಂದ ಇಂದಿನವರೆಗೆ ಸಮಸ್ತ ವಾಗ್ಗೇಯಕಾರರು ಮತ್ತು ಸಂಗೀತಗಾರರು, ಲಕ್ಷಣಗ್ರಂಥ, ಸಂಗೀತಗ್ರಂಥಕಾರರುಗಳು ಬಹುಭಕ್ತಿಯಿಂದ 'ಕರ್ನಾಟಕ ಸಂಗೀತ ಪ್ರವರ್ತಕರು, ಪಿತಾಮಹರು' ಮುಂತಾಗಿ ಗೌರವಿಸುತ್ತಾ ಬಂದಿದ್ದಾರೆ. ಕನ್ನಡ ಹರಿದಾಸಸಾಹಿತ್ಯಕ್ಕೆ ಸಂಗೀತವನ್ನು ಬೆರೆಸಿ ಗಾಯನಕ್ರಮದಲ್ಲಿ ಪ್ರಸಾರಮಾಡಿದ ಕೀರ್ತಿ ಮೊಟ್ಟಮೊದಲು ಶ್ರೀಪಾದರಾಜರು-ಶ್ರೀವ್ಯಾಸರಾಜರು-ಶ್ರೀಪುರಂದರದಾಸರಿಗೆ ಸಲ್ಲುವುದು. ಇದೊಂದು ಅಪೂರ್ವ ಕೊಡುಗೆ ಎಂದು ಹೇಳಲು ಹೆಮ್ಮೆಯೆನಿಸುವುದು. ಕನ್ನಡಪದಗಳಿಗೆ ಸಂಗೀತ ಬೆರೆಸಿ ಗಾಯನಕ್ಕೆ ಅನುಕೂಲವಾಗುವಂತೆ ಮಾಡಿ ಜನತೆಗೆ ನೀಡಿದ್ದರಿಂದ ಅದು ಸರ್ವರನ್ನೂ ಆಕರ್ಷಿಸಿ, ಜನಪ್ರಿಯವಾಗಿ ತನ್ನ ಗುರಿ ಸಾಧಿಸಿತೆಂದು ಹೇಳಬಹುದು.
ಶ್ರೀಪುರಂದರದಾಸರ ನಾಲ್ವರು ಮಕ್ಕಳೂ ದಾಸದೀಕ್ಷೆ ವಹಿಸಿ ಹರಿದಾಸರಾದರು. ಅವರು “ವರದಪುರಂದರವಿಠಲ”, “ಗುರುಪುರಂದರವಿಠಲ”, “ಅಭಿನವಪುರಂದರವಿಠಲ ಮತ್ತು ಗುರುಮಧ್ವಪತಿ” ಎಂಬ ಅಂಕಿತದಿಂದ ಸಹಸ್ರಾರು ದೇವರನಾಮಗಳನ್ನು ರಚಿಸಿ ದಾಸವಾಹ್ಮಯದ ಬೆಳವಣಿಗೆಗೆ ಕಾರಣರಾದರು. ಈ ನಾಲ್ವರೂ ಕ್ರಮವಾಗಿ ಚಂದ್ರ, ಸೂರ್ಯ, ಬೃಹಸ್ಪತಿ ಮತ್ತು ಧೃಗುಋಷಿಗಳ ಅಂಶರೆಂದು ಶ್ರೀವಿಜಯದಾಸರು ಹೊಗಳಿದ್ದಾರೆ.
ಕನ್ನಡ ಹರಿದಾಸಸಾಹಿತ್ಯಕ್ಕೆ ಅಪೂರ್ವ ಕಾಣಿಕೆಗಳನ್ನಿತ್ತು ದಾಸವಾಣ್ಮಯವನ್ನು ಶ್ರೀಮಂತಗೊಳಿಸಿದ ಇನ್ನೊಬ್ಬ ಮಹನೀಯರು ಶ್ರೀಕನಕದಾಸರು. ಇವರು “ಆದಿಕೇಶವ” ಎಂಬ ಅಂಕಿತದಿಂದ ಕೃತಿಗಳನ್ನು ರಚಿಸಿದ್ದಾರೆ. ಕನಕದಾಸರು ಬಿಡಿಯಾಗಿ ಸಾವಿರಾರು ಪದಗಳನ್ನು ಮಾಡಿರುವುದಲ್ಲದೇ “ಮೋಹನತರಂಗಿಣಿ, ಹರಿಭಕ್ತಿಸಾರ, ನಳಚರಿತ್ರೆ, ನರಸಿಂಹಸ್ತವ, ರಾಮಧ್ಯಾನಚರಿತ್ರೆ” ಮುಂತಾದ ಕನ್ನಡ ಕಾವ್ಯ ಪ್ರಬಂಧಗಳನ್ನು ರಚಿಸಿರುವರು. ಕನಕದಾಸರ ಮುಂಡಿಗೆಗಳೆಂಬುವುವು ಪಂಡಿತರಿಂದಲೂ ಬಿಡಿಸಲಾಗದ ಸಮಸ್ಯೆಗಳು! ಇವರ ಕೃತಿಯಲ್ಲಿ ಪದಲಾಲಿತ್ಯ, ಶಬ್ದಕ್ಕಿಂತ ಹೆಚ್ಚಾಗಿ ಅರ್ಥದ ಬಿಕ್ಕಟ್ಟು, ಹೃದಯಕ್ಕೆ ನಾಟುವಂತಹ ಪದಗಳು, ನಿರ್ದಾಕ್ಷಿಣ್ಯ ಮಾತುಗಳು ಎದ್ದುತೋರುವುವು. ಮಾರಿ ಮಸಣಿ ಮೊದಲಾದ ಕ್ಷುದ್ರದೇವತೆಗಳನ್ನು ಪೂಜಿಸುವ ಅಸಂಸ್ಕೃತದ ಮೇಲೂ ಪರಿಣಾಮ ಮಾಡುವಂತಹ ಅನೇಕ ಪದಗಳನ್ನು ರಚಿಸಿರುವರು. ಈ ಪದಗಳಲ್ಲಿನ ಶಬ್ದಗಳು ಆ ಜನರಲ್ಲಿ ನಿತ್ಯ ಬಳಕೆಯಲ್ಲಿರುವಂತಹವೇ. ಕನಕದಾಸರು ಆ ಜನರಲ್ಲಿದ್ದ ಎಷ್ಟೋ ಅಂಧಾಚಾರಗಳನ್ನು ನಿಲ್ಲಿಸಿ ಅವರಲ್ಲಿ ಹರಿಭಕ್ತಿ ಮೂಡುವಂತೆ ಮಾಡಿದರು. ಇದೊಂದು ದೊಡ್ಡ ಸಮಾಜ ಸುಧಾರಣೆ ಎಂದೇ ಹೇಳಬೇಕು. ಮೊದಲು ಶ್ರೀವೈಷ್ಣವಪಂಥದ ಅನುಯಾಯಿಗಳಾಗಿದ್ದ ಕನಕನಾಯಕರು ಶ್ರೀಹರಿಯ ಅಪ್ಪಣೆಯಂತೆ ಶ್ರೀವ್ಯಾಸರಾಜರ ಶಿಷ್ಯರಾಗಿ ಅಂಕಿತ ಪಡೆದು ಮಾಧ್ಯಮತಾನುಯಾಯಿಗಳಾದರು. ಶ್ರೀವ್ಯಾಸರಾಜರಿಂದ ಉಪದೇಶ ಪಡೆದು ಅವರ ಶಿಷ್ಯರಾದ ಇವರು ಹರಿಶರಣರಗುಂಪಿನಲ್ಲಿ ಒಂದು ಶಿರೋಮಣಿಯಂತೆ ಶೋಭಿಸುವರು. ಇವರು ಯಮಾಂಶರೆಂದು ಹರಿದಾಸರು ಹೊಗಳುವರು.
ಶ್ರೀವ್ಯಾಸರಾಜರ ಪ್ರಭಾವಕ್ಕೊಳಗಾದ ಹರಿಶರಣರ ಗುಂಪಿನಲ್ಲಿ ಮತ್ತೊಬ್ಬ ಮಹನೀಯರೆಂದರೆ ಗದುಗಿನ ನಾರಾಯಣಪ್ಪ. ಈತ ಮಾಧ್ವ ಸಂಪ್ರದಾಯದವನು, ಶ್ರೀವ್ಯಾಸರಾಜರ ಶಿಷ್ಯ. ಪುರಂದರದಾಸರ ಗೆಳೆಯ. ಅವನು ಕನ್ನಡ ಮಹಾಭಾರತವನ್ನು ರಚಿಸಿಕೊಂಡು ಬಂದು ಪುರಂದರದಾಸರ ದ್ವಾರಾ ಗುರುಗಳಾದ ಶ್ರೀವ್ಯಾಸರಾಜರನ್ನು 'ವಿಶ್ವಪಾವನಮಠ'ದಲ್ಲಿ ಸಂದರ್ಶಿಸಿ ತಾನು ರಚಿಸಿರುವ ಮಹಾಕಾವ್ಯವನ್ನು ಪರಿಶೀಲಿಸಿ ಆಶೀರ್ವದಿಸಬೇಕೆಂದು ಪ್ರಾರ್ಥಿಸಿದ. ಶ್ರೀವ್ಯಾಸರಾಜರು ಆ ಗ್ರಂಥವನ್ನು ಆಮೂಲಾಗ್ರ ಪರಿಶೀಲಿಸಿ ಪರಮಾನಂದಭರಿತರಾಗಿ ಆ ಮಹಾಕಾವ್ಯದ ಮಹತ್ವವನ್ನು ನಿರೂಪಿಸುವ ಅರಸುಗಳಿಗಿದು ವೀರ ದ್ವಿಜರಿಗೆ | ಪರಮವೇದದ ಸಾರ ಯೋಗೀಶ್ವರರ ತತ್ವವಿಚಾರ ಮಂತ್ರೀಜನಕೆ ಬುದ್ಧಿಗುಣ | ವಿರಹಿಗಳ ಶೃಂಗಾರ ವಿದ್ಯಾಪರಿಣತರಲಂಕಾರ ಕಾವ್ಯಕೆ ಗುರುವೆನಲು ವಿರಚಿಸಿದ ಕುಮಾರವ್ಯಾಸ ಭಾರತವ ||” ಎಂಬ ಪದ್ಯವನ್ನು ರಚಿಸಿಕೊಟ್ಟು “ಕುಮಾರವ್ಯಾಸ” ಎಂದು ಗೌರವಿಸಿದರು. ಶ್ರೀವ್ಯಾಸಮುನಿಗಳ ಅಣತಿಯಂತೆ ವಿದ್ಯಾಪಕ್ಷಪಾತಿಯಾದ ಕೃಷ್ಣದೇವರಾಯನೂ ನಾರಾಯಣಪ್ಪನನ್ನು ವಿಶೇಷವಾಗಿ ಸನ್ಮಾನಿಸಿದರು. ಈತನ ಕಾವ್ಯದಲ್ಲೆಲ್ಲಾ ವಿಷ್ಣುಭಕ್ತಿ ಹಾಸುಹೊಕ್ಕಾಗಿ ಹರಿದುಬಂದಿದೆ. ಇಂತಹ ವಿಷ್ಣುಸರ್ವೋತ್ತಮತ್ವ, ವಾಯುದೇವರ ಮಹಿಮೆಯನ್ನು ಎತ್ತಿಹಿಡಿಯುವ ಕಾವ್ಯ ಮಾಧ್ವನಿಂದಲ್ಲದೆ ಬೇರೊಬ್ಬರಿಂದ ನಿರ್ಮಿಸಲು ಸಾಧ್ಯವಿಲ್ಲ! ನಾರಾಯಣಪ್ಪನ ಕಾವ್ಯವೇ ಇದಕ್ಕೆ ಸಾಕ್ಷಿಯಾಗಿದೆ. ನಾರಾಯಣಪ್ಪನು ತನ್ನ ಕಾವ್ಯರಚನೆಯ ಮಂಗಳಾಚರಣದಲ್ಲಿ ಹೇಳಿರುವ ಈ ಪದ್ಯವನ್ನು ನೋಡಿದರೆ ಇವನು ಮಾಧ್ವನೆಂದು ಸ್ಪಷ್ಟವಾಗುವುದು.
“ವಂದಿತಾಮರ ಸೇವನಾಯಕ ನಂದಮುನಿಯತಿಚಕ್ರವರ್ತಿಯ
ಕಂದ ನತಸಂಸಾರಕಾನನ ಘನದವಾನಳನು |
ನಂದನಂದನ ಸನ್ನಿಭನು
ಸಾನಂದದಿಂದಲೇ ನಮ್ಮವನು ಕೃಪೆ
ಯಿಂದ ಸಲಹುಗೆ ದೇವ ಜಗದಾರಾಧ್ಯ ಗುರುರಾಯ
ಈ ಪದ್ಯದಲ್ಲಿ ಶ್ರೀಮಧ್ವಾಚಾರ್ಯರನ್ನು ಸ್ತುತಿಸಿದ್ದಾನೆ. ಇದರಂತೆ ಕುಂತೀದೇವಿಯು ವಾಯುದೇವರಿಂದ ಭೀಮಸೇನದೇವರನ್ನು ಪಡೆದ ಸಂದರ್ಭವನ್ನು ವರ್ಣಿಸುವಾಗ –
“ಎಂದ ಬಳಿಕರವಿಂದಲೋಚನೆ
ಯಂದು ಸಾಕ್ಷಾದೇವಮಧ್ವರ
ತಂದೆಯನು ಋಜುಗಣದ ಮುಖ್ಯಪ್ರಾಣದೇವನನ್ನು '
ಎಂದಿರುವುದಂತೂ ನಾರಾಯಣಪ್ಪನು ಶುದ್ಧ ಮಾಧ್ವನೆಂದೇ ಸಾರುವುದು. ಇದರಂತೆ ಅನೇಕ ಪ್ರಕರಣಗಳಲ್ಲಿ ಈತನು ಶ್ರೀಹರಿ-ವಾಯುಗಳ ಮಹತ್ವವನ್ನು ಎತ್ತಿಹಿಡಿದಿದ್ದಾನೆ. ಇವೆಲ್ಲವನ್ನೂ ಪರಿಶೀಲಿಸಿದಾಗ ಇವನು ಮಾದ್ದ ಮಾತ್ರವಲ್ಲ, ಶ್ರೀವ್ಯಾಸರಾಜರ ಅನುಗ್ರಹಕ್ಕೆ ಪಾತ್ರನಾದ ಶಿಷ್ಯನೆಂದು ಸ್ಪಷ್ಟವಾಗುವುದು. ಶ್ರೀಪುರಂದರದಾಸರು ಒಂದು ಸುಳಾದಿಯಲ್ಲಿ
“ಹರಿಶರಣರೆನ್ನ ಮನೆ ಮೆಟ್ಟಲು ಮನೆ |
ಪಾವನ್ನವಾಯಿತು ಆಆಆಆ |
ಹರಿಶರಣರೆನ್ನ ಕೂಡಿ ಮಾತಾಡೆ ಮನವು |
ಕರಣಂಗಳು ಪಾವನ್ನ ಆಆಆಆ ||
ಹರಿ ಗದುಗಿನ ವೀರನಾರಾಯಣಸ್ವಾಮಿ |
ಹರಿ ಪುರಂದರವಿಠಲರೇಯ ಆಆ
ಎಂದು ಹಾಡಿ ಕುಮಾರವ್ಯಾಸನ ಕಾವ್ಯವನ್ನು ಅದರಲ್ಲಿ ಪರತತ್ವನಾದ ಶ್ರೀಕೃಷ್ಣನನ್ನು ಹೊಗಳಿರುವುದನ್ನು ವರ್ಣಿಸಿರುವುದಲ್ಲದೆ ನಾರಾಯಣಪ್ಪನು ತಮ್ಮ ಮನೆಗೆ ಬಂದು ಮಾತನಾಡಿ ಊಟಮಾಡಿದನೆಂದು ಹೇಳಿಕೊಂಡಿದ್ದಾರೆ. ಇದರಿಂದಲೂ ಕನ್ನಡ ಭಾರತದಲ್ಲಿ ಅಲ್ಲಲ್ಲಿ ಶ್ರೀಮದಾಚಾರ್ಯರ ತಾತ್ಪರ್ಯನಿರ್ಣಯದಲ್ಲಿ ಹೇಳಿರುವುದನ್ನೇ ನಿರೂಪಿಸಿರುವುದು - ಅವನು ಮಾದ್ದ ಹರಿಶರಣನೆಂದು ಸ್ಪಷ್ಟಪಡಿಸುವುದು. ಶ್ರೀವಿಜಯೀಂದ್ರ, ವಾದಿರಾಜ, ಪುರಂದರ, ಕನಕ, ನಾರಾಣಪ್ಪ, ತಿಮ್ಮಣ್ಣಕವಿ ಮುಂತಾದ ಮಹಾಜ್ಞಾನಿಗಳನ್ನು, ಹರಿಶರಣರನ್ನು, ಶ್ರೇಷ್ಠಕವಿಗಳನ್ನು ಕನ್ನಡ ನಾಡಿಗೆ ನೀಡಿದ ಮಹಾನುಭಾವರು ಶ್ರೀವ್ಯಾಸರಾಜಗುರುಗಳು.
ಹೀಗೆ ಹದಿನಾರು - ಹದಿನೇಳನೆಯ ಶತಮಾನದಲ್ಲಿ ವಿಜಯನಗರದ ಕನ್ನಡ ಸಾಮ್ರಾಜ್ಯದ ಸುವರ್ಣಯುಗವೆನಿಸಿದ ಕೃಷ್ಣದೇವರಾಯನ ಕಾಲದಲ್ಲಿ ಶ್ರೀಪಾದರಾಜರಿಂದ ವಿಶೇಷಾಕಾರವಾಗಿ ಪ್ರವರ್ತಿಸಲ್ಪಟ್ಟ ಹರಿದಾಸಸಾಹಿತ್ಯವು ಶ್ರೀವ್ಯಾಸರಾಜರಿಂದ ಸರ್ವತೋಮುಖವಾಗಿ ಅಭಿವೃದ್ಧಿಸಿತು. ರಾಜಗುರುಗಳಾದ ಶ್ರೀವ್ಯಾಸರಾಜರ ಸನ್ನಿಧಿಯಲ್ಲಿ ಮೇಲೆ ನಿರೂಪಿಸಿದ ಜ್ಞಾನಿಗಳೆಲ್ಲರೂ ಒಟ್ಟಾಗಿ ಸೇರಿ ಶ್ರೀವ್ಯಾಸರಾಜರ ನಿರ್ದೇಶನ, ಪುರಂದರದಾಸರ ನಾಯಕತ್ವದಲ್ಲಿ ಅಪೂರ್ವ ಕನ್ನಡ ಹರಿದಾಸಸಾಹಿತ್ಯ ನಿರ್ಮಾಣದಲ್ಲಿ ತೊಡಗಿ ಲಕ್ಷಾಂತರ ಕನ್ನಡ ಪದ-ಪದ್ಯ-ಸುಳಾದಿ-ಕಾವ್ಯಗಳ ರಚನೆಯ ದ್ವಾರಾ ಸಮುದ್ರದಂತೆ ಅಗಾಧವೂ ವಿಸ್ತಾರವೂ ಆದ ಹರಿದಾಸವಾಹ್ಮಯ ಭಂಡಾರವನ್ನು ನಾಡಿಗೆ ನೀಡಿ ಕನ್ನಡಭಾಷೆಗೆ ಮಹತ್ವ ಮತ್ತು ಕಳೆಯನ್ನು ತಂದಿತ್ತು. ಇಂದಿಗೂ ಆ ಅಮರಸಾಹಿತ್ಯವು ಕನ್ನಡ ಜನತೆಯಲ್ಲಿ ಕನ್ನಡಾಭಿಮಾನ ಮತ್ತು ಸ್ಫೂರ್ತಿಯನ್ನು ಪ್ರಚೋದಿಸುವಂತೆ ಮಹೋಪಕಾರ ಮಾಡಿ ಸರ್ವರ ಗೌರವಾದರ, ಕೃತಜ್ಞತೆಗಳಿಗೆ ಪಾತ್ರರಾಗಿದ್ದಾರ.
ಹೀಗೆ ಹದಿಮೂರನೆಯ ಶತಮಾನದಲ್ಲಿಯೇ ಶ್ರೀನರಹರಿತೀರ್ಥರಿಂದ ಆರಂಭವಾದ ಕನ್ನಡ ಹರಿದಾಸಸಾಹಿತ್ಯವು ಮುಂದೆ ಶ್ರೀಪಾದರಾಜರಿಂದ ಪುಷ್ಟಿತವಾಯಿತು. ಶ್ರೀವ್ಯಾಸರಾಜರಿಂದ ಫಲಭರಿತವಾಯಿತು. ಆ ಅಮೃತಫಲವನ್ನು ಶ್ರೀಪುರಂದರದಾಸರಿಂದ ಕನಕದಾಸರವರೆಗೆ ಜನತೆಯು ಸವಿದು ಕೃತಾರ್ಥವಾಯಿತು. ಈ ಒಂದು ಕಾಲ ಕನ್ನಡ ಹರಿದಾಸವಾಹ್ಮಯದ ಸುವರ್ಣಯುಗವೆನಿಸಿತು. ಈ ಸುವರ್ಣಯುಗದಲ್ಲಿ ಕಂಗೊಳಿಸಿದ ಬಹುಜನ ಹರಿದಾಸರು ಕೇವಲ ದೇವೋನ್ಮಾದಿಗಳಷ್ಟೇ ಅಲ್ಲದೆ, ಭಗವದಪರೋಕ್ಷಜ್ಞಾನಿಗಳೂ, ದೇವಾಂಶ ಸಂಭೂತರೂ ಆಗಿದ್ದು, ಅವರ ರಚನೆಗಳೆಲ್ಲವಾ ಹರಿದಾಸಸಾಹಿತ್ಯಕ್ಕೆ ಅಮೂಲ್ಯ ಕಾಣಿಕೆಯಾಗಿವೆ. ಇವರ ಒಂದೊಂದು ವಾಕ್ಯವೂ ಉಪನಿಷತ್ತಿನ ವಾಕ್ಯಗಳಂತೆ ಬಹು ಸರಳವೂ, ಬಹರ್ಥಗರ್ಭಿತವೂ ಆಗಿರುವುವು. ಈ ಮಹನೀಯರಲ್ಲಿ ಶ್ರೀಪಾದರಾಜರು, ಶ್ರೀವ್ಯಾಸರಾಜರು, ಶ್ರೀವಿಜಯೀಂದ್ರರು, ಶ್ರೀವಾದಿರಾಜರಂಥ ಮಹಾಪಂಡಿತ, ತತ್ತ ಜ್ಞಾನಿ ಪೀಠಾಧಿಪತಿಗಳೂ, ಪುರಂದರದಾಸರಂಥ ಜ್ಞಾನಿಗಳಾದ ದಾಸಶ್ರೇಷ್ಠರೂ, ಕನಕದಾಸರಂಥ ಶೂದ್ರಜನ್ಮದ ಅಪರೋಕ್ಷಜ್ಞಾನಿಗಳೂ, ನಾರಾಯಣಪ್ಪ, ತಿಮ್ಮಣ್ಣರಂಥ ಕವಿಶ್ರೇಷ್ಠರೂ ಇದ್ದು ಜೀವನದ ಎಲ್ಲ ಕ್ಷೇತ್ರಗಳಲ್ಲೂ ಪರಿಣತರಾಗಿದ್ದವರು ಹರಿದಾಸ ದೀಕ್ಷೆ ಪಡೆದು ಕನ್ನಡಸಾಹಿತ್ಯವನ್ನು ಪೋಷಿಸಿದ್ದು, ಕನ್ನಡನಾಡಿನ ಭಾಗ್ಯದಯವೆಂದು ಹೇಳಬೇಕು. ಇಂತಹ ಅಪೂರ್ವ ಜ್ಞಾನಿಗಳಿಗೆ ಗುರುಗಳೂ, ಪೋಷಕರೂ, ಸ್ಫೂರ್ತಿಯ ಚಿಲುಮೆಯೂ ಆಗಿದವರು ಶ್ರೀವ್ಯಾಸರಾಜಗುರುಸಾರ್ವಭೌಮರು! ಈ ಮಹನೀಯರಿಗೆಲ್ಲಾ ಆಶ್ರಯ ದೊರೆತುದು ಕರ್ನಾಟಕ ಸಾಮ್ರಾಟನಾದ ಕೃಷ್ಣದೇವರಾಯನಲ್ಲಿ! ಇದು ಮತ್ತೊಂದು ಕನ್ನಡ ಸಾಹಿತ್ಯದ ವೈಶಿಷ್ಟ್ಯ! ಇಂಥ ಜ್ಞಾನಗೋಷ್ಠಿ ಮಾಧ್ವಸಮಾಜಕ್ಕೂ ಅತ್ಯಂತ ಉಪಕಾರವಾಯಿತು.
ಹಿಂದೆ ಪುರಾಣಗಳಲ್ಲಿ ಉಕ್ತವಾದ ನಾರದ-ಪ್ರಹ್ಲಾದಾದಿ ಭಾಗವತಶ್ರೇಷ್ಠರುಗಳ ಸಮ್ಮಿಲನವು ಕಲಿಯುಗದಲ್ಲಿ ನರದೇಹದಲ್ಲಿ ಈಗ ಇನ್ನೊಮ್ಮೆ ಆದುದರಿಂದಲೇ ಇಂಥ ಶ್ರೇಷ್ಠ ಭಕ್ತಿ ಸಾಹಿತ್ಯವು ಹೊರಹೊಮ್ಮಿತು. ಇದರ ಪರಿಣಾಮವು ಕನ್ನಡಸಾಹಿತ್ಯ ಮತ್ತು ಜನತೆಯ ಮೇಲೆ ಶಾಶ್ವತವಾಗಿ ಆಯಿತು. ಮಾತ್ರವಲ್ಲ, ಮುಂದೆ ಶ್ರೀವ್ಯಾಸರಾಜಾವತಾರಿಗಳಾದ ಶ್ರೀರಾಘವೇಂದ್ರ ಸ್ವಾಮಿಗಳವರಿಂದ ಈ ಹರಿದಾಸಪಂಥವು ಪೋಷಿತವಾಗಿ ಮುಂದೆ ಶ್ರೀವಾದೀಂದ್ರ-ಶ್ರೀವಸುಧೇಂದ್ರ-ಶ್ರೀವರದೇಂದ್ರ- ಶ್ರೀಭುವನೇಂದ್ರತೀರ್ಥರು ಹಾಗೂ ಶ್ರೀವ್ಯಾಸತತ್ವಜ್ಞತೀರ್ಥರಂಥ ಜ್ಞಾನಿಗಳಿಂದ ಮತ್ತು ಶ್ರೀವಿಜಯದಾಸ, ಶ್ರೀಗೋಪಾಲದಾಸ, ಶ್ರೀಜಗನ್ನಾಥದಾಸರಂಥ ಮಹಾಮಹಿಮರಿಂದ ವಿಶೇಷಾಕಾರವಾಗಿ ಅಭಿವೃದಿಸಿ, ಅಸಾಧಾರಣ ಹರಿದಾಸಸಾಹಿತ್ಯ ಸೃಷ್ಟಿಗೂ ಕಾರಣವಾಯಿತೆಂದು ಧಾರಾಳವಾಗಿ ಹೇಳಬಹುದು. ಇಂಥ ಅಪೂರ್ವ ಕೊಡುಗೆಗಳನ್ನಿತ್ತು ಕನ್ನಡನಾಡು, ಜನತೆ, ಸಂಸ್ಕೃತಿ ಮತ್ತು ಭಾಷೆಗಳಿಗೆ ಮಹೋಪಕಾರ ಮಾಡಿದ ಎಲ್ಲ ಹರಿದಾಸರಿಗೆ ಪ್ರೇರಕಶಕ್ತಿ ಕೇಂದ್ರಬಿಂದುವೆನಿಸಿದ ಶ್ರೀವ್ಯಾಸರಾಜ ಗುರುಸಾರ್ವಭೌಮರ ಉಪಕಾರವನ್ನು ಅದಾವ ಅಭಿಮಾನಿ ಕನ್ನಡಿಗನು ತಾನೇ ಮರೆಯಲು ಸಾಧ್ಯ?