ಕಲಿಯುಗ ಕಲ್ಪತರು
ನಾಲ್ಕನೆಯ ಉಲ್ಲಾಸ
ಶ್ರೀವ್ಯಾಸರಾಜಯತಿಸಾರ್ವಭೌಮರು
೫೦. ವ್ಯಾಸಸಮುದ್ರ ನಿರ್ಮಾಣ
ಕರ್ನಾಟಕ ಸಾಮ್ರಾಜ್ಯಾಧೀಶನಾದ ಕೃಷ್ಣದೇವರಾಯನು ಕಳಿಂಗದ ಪ್ರತಾಪರುದ್ರ ಗಜಪತಿಯನ್ನು ಜಯಿಸಿದಾಗ ರಾಯನಿಗೆ ಕಾಣಿಕೆಯ ರೂಪವಾಗಿ ದೊರಕಿದ ಅನೇಕ ಗ್ರಾಮಗಳಲ್ಲಿ ಒಂದು ಕಂದಕೂರು ಎಂಬ ವಿಶಾಲವೂ, ಸಂಪದ್ಭರಿತವೂ ಆದ ಗ್ರಾಮ. ಕೃಷ್ಣನರಪತಿಯು ತನಗೆ ಬಂದಿದ್ದ ಕುಹುಯೋಗವನ್ನು ಪರಿಹರಿಸಿದ ಉದ್ಧಾರಕ ಗುರು ಶ್ರೀವ್ಯಾಸತೀರ್ಥರಿಗೆ ರಾಜಕುಮಾರ ತಿರುಮಲ ಮಹಾರಾಯನ ಪಟ್ಟಾಭಿಷೇಕ ಸ್ಮರಣೆಗಾಗಿ ದಾನಮಾಡಿದ ಅನೇಕ ಗ್ರಾಮಗಳಲ್ಲಿ ಈ ಶ್ರೇಷ್ಠವಾದ ಕಂದಕೂರು ಗ್ರಾಮವು ಶ್ರೀವ್ಯಾಸರಾಜರಿಗೆ ಬಹಳ ಪ್ರೀತ್ಯಾಸ್ಪದವಾದ ಗ್ರಾಮವಾಗಿತ್ತು.
ವಿಜಯನಗರ ಸಾಮ್ರಾಜ್ಯದ ಸಾಳುವ ನರಸಿಂಹನಿಂದಾರಂಭಿಸಿ ಅನೇಕ ಚಕ್ರವರ್ತಿಗಳಿಗೆ ಗುರುಗಳಾಗಿ, ಸಲಹೆಗಾರರಾಗಿ, ಮಾರ್ಗದರ್ಶಕರಾಗಿ, ಉಪದೇಶಕರಾಗಿ ಕನ್ನಡ ಸಾಮ್ರಾಜ್ಯ ಮತ್ತು ಚಕ್ರವರ್ತಿಗಳ ಹಿತಚಿಂತನ ಮಾಡುತ್ತಾರಾಜಗುರುಗಳಾಗಿ ಸುಮಾರು ಐವತ್ತು ವರ್ಷಗಳ ಕಾಲ ತಮ್ಮ ತಪಸ್ಸನ್ನೆಲ್ಲಾ ಧಾರೆಯೆರೆದ ಲೋಕಮಾನ್ಯರಾದ ವ್ಯಾಸತೀರ್ಥರು ಈ ಒಂದು ಅವಧಿಯಲ್ಲಿ ಅನೇಕ ಅಗ್ರಹಾರಗಳನ್ನು ನಿರ್ಮಿಸಿ, ಸಹಸ್ರಾರು ಗೃಹಗಳನ್ನೂ, ವೃತ್ತಿ, ಭೂಸ್ವಾಸಿಗಳನ್ನೂ ಯೋಗ್ಯರಾದ ವಿದ್ವಾಂಸರು, ಪ್ರೋತ್ರಿಯರಾದ ಬ್ರಾಹ್ಮಣರು, ಕವಿ-ಕಲೆಗಾರರು, ಸದಾಚಾರ ಸಂಪನ್ನ ವೇದವಿದ್ಯಾವಿಶಾರದರುಗಳಿಗೆ ದಾನಮಾಡಿ ಲಕ್ಷ ಬ್ರಾಹ್ಮಣರ ಜೀವನೋಪಾಯವನ್ನು ಕಲ್ಪಿಸಿಕೊಟ್ಟು ಜಗತ್ತಿನಲ್ಲಿ ಅಪಾರ ಕೀರ್ತಿ ಗಳಿಸಿದ್ದರು. ಇದರ ಜೊತೆಗೆ ಕನ್ನಡನಾಡಿನ ಅನೇಕ ಕಡೆ ನೂರಾರು ಕೆರೆಗಳನ್ನೂ ನಿರ್ಮಾಣ ಮಾಡಿಸಿ ಜನಸಾಮಾನ್ಯರಿಗೆ ಅದರಿಂದ ಮಹೋಪಕಾರವಾಗುವಂತೆ ಮಾಡಿದ್ದರು. ಗುರುಗಳು ವಿದ್ವಜ್ಜನರಲ್ಲಿ ದೀನದಲಿತ ಜನರಲ್ಲಿಎಲ್ಲಾ ವರ್ಗದ ಜನರಲ್ಲಿ ಪ್ರೀತಿ, ವಿಶ್ವಾಸ, ಸರ್ವರ ಉದ್ಧಾರವಾಗಬೇಕೆಂಬ ಹಂಬಲ, ಸಕಲರ ಅಭ್ಯುದಯ ಕಲ್ಯಾಣಗಳಿಗಾಗಿ ಅವರ ಯತ್ನ - ಇವೆಲ್ಲ ಸಾಮ್ರಾಜ್ಯದಲ್ಲಿ ಮನೆಮಾತಾಗಿತ್ತು.
ಹೀಗೆ ಹಗಲಿರುಳು ಸಕಲಪ್ರಜರ ಏಳಿಗೆಗೆ ಕಲ್ಯಾಣಗಳಿಗಾಗಿಯೇ ಶ್ರಮಿಸುತ್ತಿದ್ದವ್ಯಾಸತೀರ್ಥರು ಒಮ್ಮೆ ಕೃಷ್ಣದೇವರಾಯನು ತಮಗೆ ದಾನ ಕೊಟ್ಟಿದ್ದ ಕಂದಕೂರನ್ನು ಪರಿಶೀಲಿಸಲು ಮಿತಪರಿವಾರದೊಡನೆ ಬಂದಾಗ ಅಲ್ಲಿನ ಪ್ರಶಾಂತ ವಾತಾವರಣವನ್ನು ಕಂಡು ಆನಂದಿಸಿದರು. ಕೆಲಕಾಲ ಅಲ್ಲಿ ಪಾಠಪ್ರಚವನಾಸಕ್ತರಾಗಿ ಕಾಲಕಳೆಯಲು ಅವರು ಆಶಿಸಿದರು.
ರಾಯರ ಸೀಮೆಯೆಂದು ವಿಖ್ಯಾತವಾಗಿದ್ದ ಕಂದಕೂರು ಪ್ರದೇಶವು ಇತರ ವಿಚಾರಗಳಲ್ಲಿ ಉತ್ತಮವಾಗಿದ್ದರೂ ಈ ಪ್ರದೇಶದಲ್ಲಿ ಮಳೆ ಬಹಳ ಕಡಿಮೆಯಾಗುತ್ತಿತ್ತು. ಭೂಮಿ ಉತ್ತಮವಾಗಿದ್ದರೂ ನೀರಿಲ್ಲದೆ ಬೆಳೆ ಒಣಗಿ ಕ್ಷಾಮಡಾಮರಗಳಿಗೆ ತುತ್ತಾಗುತ್ತಿತ್ತು. ಹೀಗೆ ಕಂದಕೂರಿನಲ್ಲಿ ಎಲ್ಲ ಸೌಕರ್ಯಗಳಿದ್ದರೂ ನೀರಿನ ಅಭಾವದಿಂದ ಅಲ್ಲಿನ ಜನರು ಕಷ್ಟಪಡುತ್ತಿದ್ದರು. ಅದನ್ನು ಕಂಡ ಕರುಣಾಳುಗಳಾದ ವ್ಯಾಸರಾಜರ ಹೃದಯ ಮಿಡಿಯಿತು. ಅಲ್ಲಿ ಒಂದು ವಿಸ್ತಾರವಾದ ಕೆರೆಯನ್ನು ನಿರ್ಮಾಣ ಮಾಡಿದರೆ ಜನಜೀವನಕ್ಕೂ, ಬೇಸಾಯಕ್ಕೂ ಉಪಕಾರವಾಗಿ ಪ್ರಜರಿಗೆ ಅದರಿಂದ ಪ್ರಯೋಜನವಾಗುವುದೆಂದು ಆಲೋಚಿಸಿ ಕೆರೆ ನಿರ್ಮಿಸಲು ತಾಣವನ್ನು ಪರಿಶೀಲಿಸಿ ಗ್ರಾಮಕ್ಕೆ ಸನಿಹದ ಒಂದು ಪ್ರದೇಶವನ್ನು ಆರಿಸಿ ಅಲ್ಲಿ ದೊಡ್ಡ ಕೆರೆಯ ನಿರ್ಮಾಣ ಮಾಡಲು ನಿಶ್ಚಯಿಸಿದರು. ಸಾಮ್ರಾಜ್ಯದ ಚಕ್ರವರ್ತಿಯೇ ಅವರ ಆಜ್ಞೆಯನ್ನು ನೆರವೇರಿಸಲು ಟೊಂಕಕಟ್ಟಿ ನಿಂತಿರುವಾಗ, ರತ್ನಾಭಿಷೇಕ ಕಾಲದಲ್ಲಿ ಇಂತಹ ಲೋಕೋಪಯೋಗಿ ಕಾರ್ಯಗಳಿಗಾಗಿಯೇ ಮೀಸಲಿರಿಸಿದ್ದ ಅಗಾಧ ಸಂಪತ್ತಿರುವಾಗ, ಆ ಮಹನೀಯರ ಸಂಕಲ್ಪವು ಕಾರ್ಯರೂಪಕ್ಕೆ ಬರುವದೊಂದು ಅಗಾಧ ಕಾರ್ಯವೇ ? ಈ ವಿಚಾರವರಿತ ಗ್ರಾಮಸ್ಥರು ತಮಗಾಗಿ ಗುರುಗಳು ಇಂಥ ಶ್ರೇಷ್ಠ ಕಾರ್ಯದಲ್ಲಿ ತೊಡಗಿದ್ದಾರೆಂದು ಸಹಸ್ರಾರು ಜನರು ಆ ನಿರ್ಮಾಣಕಾರ್ಯದಲ್ಲಿ ಬೆಂಬಲಿಗರಾಗಿ ನಿಂತರು. ಗುರುಗಳು ಸರ್ವಕಾಲದಲ್ಲಿಯೂ ನೀರಿನಿಂದ ಶೋಭಿಸುವ ದೊಡ್ಡ ಕೆರೆಯ ನಿರ್ಮಾಣಕಾರ್ಯ ಪ್ರಾರಂಭಿಸಿದರು.
ಕೆಲಕಾಲಗಳಲ್ಲೇ ಅತ್ಯದ್ಭುತ ಕೆರೆಯ ನಿರ್ಮಾಣವಾಯಿತು. ಶ್ರೀಗಳವರು ಅದಕ್ಕೆ “ವ್ಯಾಸಸಮುದ್ರ” ಎಂದು ಜನರ ಪ್ರಾರ್ಥನೆಯಂತೆ ನಾಮಕರಣ ಮಾಡಿದರು. ಮಳೆಗಾಲಕ್ಕೆ ಮೊದಲೇ ಕೆರೆಯು ತಯಾರಾಗಿದ್ದರಿಂದ ಮೊದಲೇ ಹೆಚ್ಚು ನೀರಿಂದ ಕೂಡಿದ್ದಂಥ ಆ ಕೆರೆಯು ಮಳೆಯಿಂದಾಗಿ ಅಗಾಧ ಜಲರಾಶಿಯಿಂದ ಕಂಗೊಳಿಸಿ ಸಮುದ್ರವೆಂಬ ತನ್ನ ಹೆಸರನ್ನು ಸಾರ್ಥಕಗೊಳಿಸಿಕೊಂಡಿತು. ಅಲ್ಲಿನ ಸಕಲ ಜನರಿಗೆ ನೀರಿನ ಸೌಕರ್ಯವಾಗಿ ಜನಸಾಮಾನ್ಯರು ಗುರುಗಳ ಈ ಉದಾರ ಜನಹಿತಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ವ್ಯಾಸಸಮುದ್ರ' ಸಿದ್ಧವಾಗಿದ್ದರೂ ಕೆರೆಯ ತೂಬಿಗೆ ಅಡ್ಡಲಾಗಿ ಒಂದು ದೊಡ್ಡ ಬಂಡೆಯಿದ್ದು ಅದನ್ನು ತೆಗೆಸದ ವಿನಃ ಆ ಕೆರೆಯ ಪ್ರಯೋಜನ ಬೇಸಾಯಗಾರರಿಗೆ ಆಗುವಂತಿರಲಿಲ್ಲ. ನೂರಾರು ಜನರು ನಾಲ್ಕಾರು ದಿನಗಳಿಂದ ಬಹು ಪ್ರಕಾರವಾಗಿ ಪ್ರಯತ್ನಿಸಿದರೂ ಆ ಬಂಡೆಯನ್ನು ಕದಲಿಸಲು ಶಕ್ತರಾಗಲಿಲ್ಲ. ಅದೇ ವಿಚಾರ ಚಿಂತಿಸುತ್ತಾ ಶ್ರೀವ್ಯಾಸತೀರ್ಥರು ಕೆರೆಯ ಸಮೀಪದ ಒಂದು ವೃಕ್ಷದ ಬುಡದಲ್ಲಿ ಕಟ್ಟೆಯ ಮೇಲೆ ಕುಳಿತರು.
ಅದೇ ಸಮೀಪದಲ್ಲಿ ಕರಿಯ ಕಂಬಳಿಯನ್ನು ಹೊದ್ದು ಏಕನಾದ (ತಂಬೂರಿ) ಹಿಡಿದ ವ್ಯಕ್ತಿಯೊಂದು ಬಂದು ಶ್ರೀವ್ಯಾಸರಾಜರಿಗೆ ನಮಸ್ಕರಿಸಿತು. ಆ ವ್ಯಕ್ತಿಯನ್ನು ಕಂಡು ಗುರುಗಳ ಮುಖವರಳಿತು. ತುಟಿಯಂಚಿನಲ್ಲಿ ನಗೆಮಲ್ಲಿಗೆಯನ್ನರಳಿಸಿ “ಇದೇನು ಕನಕನಾಯಕರು ಜೋಗಿಯ ವೇಷದಲ್ಲಿ?” ಎಂದು ಪ್ರಶ್ನಿಸಲು ಆ ವ್ಯಕ್ತಿ (ಕನಕನಾಯಕ) - “ಎಲ್ಲಾ ನಮ್ಮ ಕೇಶವನ ಮಹಿಮೆ” ಎಂದಿತು.
ವ್ಯಾಸ : ಅಹುದು ಮತ್ತೆ! ದಾಸನಾಗುವುದಿಲ್ಲವೆಂದು ಹಟ ಹಿಡಿದರೆ ಬಿಡುವನೇ ನಮ್ಮ ಶ್ರೀಹರಿ ? ಹಾಗಾದರೆ ನೀನೀಗ ಕವೀಂದ್ರನನ್ನು!
ಕನಕ : ಅದೇನೋ ನಾನರಿಯೆ ಕಣಪ್ಪ. ನಿಮ್ಮ ಈ ಮಾತನ್ನಾಲಿಸಿದರೆ ಪಂಡಿತರು ನಕ್ಕಾರು!
ವ್ಯಾಸ : ನಕ್ಕರೆ ಅವರ ಹಲ್ಲೇ ಕಾಣುವುದು! ಅದು ಸರಿ ಕನಕ, ಅಂದಹಾಗೆ ನಿನ್ನ ಕೋಣವೆಲ್ಲಿ?
ಕನಕ : ಕೋಣ, ಕೋಣ! ಹೂಂ, ಅಹುದು, ಅದನ್ನು ಎಲ್ಲಿಯೋ ನೋಡಿದ ನೆನಪು. ಯಾವಾಗ, ಎಲ್ಲಿ ಎಂಬುದು ಸ್ಪಷ್ಟವಾಗುತ್ತಿಲ್ಲ ವ್ಯಾಸಪ್ಪ! ನೀವು ಅನುಗ್ರಹಿಸಿದರೆ ಬಹುಶಃ ಅರಿವಾಗಬಹುದೇನೋ!
ವ್ಯಾಸ : ಹಾಗಾದರೆ ನೀನು ನಮ್ಮ ದಾಸನಾಗುವೆಯಾ ?
ಕನಕ : (ಬೆದರಿದವನಂತೆ) ಇದೇನು ಮಾತು ನನ್ನೊಡೆಯಾ ? ಅಂದು ಆ ಜಗನ್ನಾಟಕ ಸೂತ್ರಧಾರಿ ಶ್ರೀಹರಿ ದಾಸನಾಗೆಂದು ನನ್ನನ್ನು ಪೀಡಿಸಿದ! ಈಗ, ವ್ಯಾಸಪ್ಪ, ನೀವೂ ದಾಸನಾಗೆಂದು ಪೀಡಿಸುವಿರಲ್ಲ! ನಾನು ದಾಸನಾಗುವುದೊಂದು ದೊಡ್ಡ ಕಾರ್ಯವೇ ? ಅಂದು ನಿಮ್ಮ ಮೊಮ್ಮಗನಿಗೆ ಒಲಿದು ಬ್ರಹ್ಮಾಂಡವಿಕ್ರಮನಾದ ತ್ರಿವಿಕ್ರಮನೇ ಅವನ ಮನೆಯ ಬಾಗಿಲು ಕಾಯುತ್ತಾದಾಸನಂತೆ ನಟಿಸಲು ಪ್ರಾರಂಭಿಸಿದನೆಂದ ಮೇಲೆ ನನ್ನ ಪಾಡೇನು ಬಿಡಪ್ಪ, ಹೂಂ ಆಗಲಿ.
ವ್ಯಾಸ : ಸಂತೋಷ, ಕನಕ, ನೀನು ಬಹಳ ಮಾತುಗಾರ! ಇರಲಿ, ನೀನೀಗ ಇಲ್ಲಿಗೆ ಬಂದ ಉದ್ದೇಶವೇನು ? ಕನಕ : (ನಗುತ್ತಾ) ಈಗ ನೀವೇ ಹೇಳಲಿಲ್ಲವೇ ದಾಸನಾಗೆಂದು ? ಅದಕ್ಕಾಗಿಯೇ ಬಂದಿರುವೆ ವ್ಯಾಸಪ್ಪ!
ವ್ಯಾಸ : ಹಾಗಾದರೆ ನಿನಗೆ ದಾಸದೀಕ್ಷೆ ಬೇಕೇನು ?
ಕನಕ : (ವಿನಮ್ರನಾಗಿ) ಅಹುದು, ಗುರುಸ್ವಾಮಿ! ಅಂಕಿತ-ಉಪದೇಶಗಳಿಲ್ಲದೆ ಆತ್ರೋದ್ಧಾರ ಸಾಧ್ಯವಾದೀತೆ ? ಒಡೆಯಾ ಅಂಕಿತವನ್ನು ಅನುಗ್ರಹಿಸಿರಿ.
ವ್ಯಾಸ : (ಮಂದಹಾಸ ಬೀರಿ) ಅಲ್ಲವೋ ಕನಕ! ಈಗಾಗಲೇ ಆದಿಕೇಶವನ ನಾಮದಿಂದ ಅನೇಕ ಪದಗಳನ್ನು ರಚಿಸಿರುವೆಯಲ್ಲ! ಭಗವಂತನೇ ಪ್ರೇರಣೆ ಮಾಡಿ ತನ್ನ ಅಂಕಿತದಿಂದ ಕೃತಿರಚನೆ ಮಾಡಿಸುತ್ತಿರುವಾಗ ಬೇರೆ ಅಂಕಿತವೇಕೆ ? ಆ ಅಂಕಿತವೇ ಶ್ರೀಹರಿಗೆ ಅತ್ಯಂತ ಪ್ರಿಯವಾಗಿದೆ. ಬೇರೆ ಅಂಕಿತ ಬೇಡ. ಅದನ್ನೇ ಮುಂದುವರೆಸು.
ಕನಕ : ಶಂಖದಿಂದ ಬಿದರಲ್ಲವೇ ನೀರು ತೀರ್ಥವಾಗುವುದು ? ಹರಿ ಒಪ್ಪಿದರೂ ಗುರು ಒಪ್ಪುವ ತನಕ ಅದಕ್ಕೆ ಮಹತ್ವ ಬರಬಲ್ಲುದೇ ?
ಕನಕನಾಯಕರೇ ಜ್ಞಾನಿಗಳಾದ ಕನಕದಾಸರು, ಇವರು ಯಮಧರ್ಮರಾಯನ ಅವತಾರವೆಂದು ಜ್ಞಾನಿಗಳು ಕೊಂಡಾಡುತ್ತಾರೆ.
ವ್ಯಾಸ : ಕನಕ, ನೀನು ಬಹಳ ಚತುರ! ಸರಿ, ಶ್ರೀಹರಿಯಿಚ್ಛೆಯೂ ಅದೇ ಆದರೆ ನಾವೇನು ಮಾಡಲು ಸಾಧ್ಯ? 'ಆದಿಕೇಶವನ ಅಂಕಿತದಿಂದ ಪದಗಳನ್ನು ರಚಿಸು, ಅವು ಜಗದ್ವಿಖ್ಯಾತವಾಗಲಿ, ನಿನಗೆ ಭಗವದನುಗ್ರಹ ಲಭಿಸಲಿ! ಈಗ
ಸಂತೋಷವಾಯಿತೆ?
ಕನಕ : (ಸಂತಸದಿಂದ ಗುರುಗಳಿಗೆ ನಮಿಸಿ) ಅನುಗೃಹೀತನಾದೆ ಗುರುದೇವ. ನನ್ನ ಅಂಕಿತವನ್ನೊಪ್ಪಿ ಅದನ್ನೇ ಮುಂದುವರೆಸಿ ಸಾಹಿತ್ಯ ರಚನೆಮಾಡಲು ಆಜ್ಞಾಪಿಸಿದಿರಿ. ಇನ್ನು ಮಂತ್ರೋಪದೇಶವನ್ನು ಮಾಡಿ ಈ ಪಾಮರನನ್ನು ಉದ್ಧರಿಸಬೇಕಪ್ಪಾ.
ವ್ಯಾಸ : ನಿನಗೆ ಮಂತ್ರೋಪದೇಶವೇ ? ಸದ್ಯ ನಾವೀಗ ನಿನಗೆ ಕೋಣಮಂತ್ರವನ್ನುಪದೇಶಿಸುತ್ತೇವೆ. ನಮ್ಮಿ ಪರೀಕ್ಷೆಯಲ್ಲಿ ಉತ್ತೀರ್ಣನಾದರೆ ಮುಂದೆ ಸಕ್ರಮವಾಗಿ ಗುರೂಪದೇಶಮಾಡುತ್ತೇವೆ. ಆಗಬಹುದೆ ?
ಕನಕ : (ನಕ್ಕು) ವ್ಯಾಸಪ್ಪಾ! ನೀವೂ ಬಹುಜಾಣರು! ಈಗ ನಿಮ್ಮ ಕಾರ್ಯವಾಗಬೇಕಾಗಿದೆಯಲ್ಲವೇ? ಅದಕ್ಕೇ ಈ ಉಪಾಯ ಹೂಡಿದ್ದೀರಿ, ಸರಿ. ಕೋಣಮಂತ್ರವನ್ನೇ ಉಪದೇಶಿಸಿರಿ - ಎಂದು ಹೇಳಿ ಕನಕನಾಯಕರು ಕೆರೆಯಲ್ಲಿ ಸ್ನಾನಮಾಡಿ ಶುಚಿರ್ಭೂತರಾಗಿ ಬಂದು ಗುರುಗಳಿಗೆ ನಮಸ್ಕರಿಸಿ ಕರಜೋಡಿಸಿ 'ಹೂಂ ಉಪದೇಶಿಸಿ ಕೋಣಮಂತ್ರವನ್ನು' ಎಂದು ವಿಜ್ಞಾಪಿಸಿದರು.
ಶ್ರೀವ್ಯಾಸತೀರ್ಥರು ನಸುನಗುತ್ತಾ ಕನಕನಾಯಕರ ಕಿವಿಯಲ್ಲಿ ಕೋಣಮಂತ್ರವನ್ನುಪದೇಶಿಸಿ “ಕನಕ! ಇದನ್ನು ಶ್ರದ್ಧೆಯಿಂದ ಜಪಿಸು” ಎಂದು ಆಜ್ಞಾಪಿಸಿದರು.
ಕನಕ ಸಮೀಪದಲ್ಲಿ ಬೇರೊಂದು ವೃಕ್ಷದಡಿಯಲ್ಲಿ ಕುಳಿತು ಮಂತ್ರವನ್ನು ಜಪಿಸಲಾರಂಭಿಸಿದ. ಕೆಲಸಮಯದಲ್ಲಿ ಅಲ್ಲೊಂದು ಅದ್ಭುತಾಕಾರವಾದ ದೇವಲೋಕದ ಕೋಣವೊಂದು ಪ್ರತ್ಯಕ್ಷವಾಯಿತು! ಕನಕ ನಸುನಕ್ಕು, ವ್ಯಾಸರಾಜರ ಬಳಿಗೆ ಬಂದ. ಕೋಣವು
ಅವನನ್ನು ಅನುಸರಿಸಿ ಬಂದಿತು. ಕನಕ ಗುರುಗಳಿಗೆ ನಮಿಸಿ “ಗುರುದೇವ, ತಾವು ಉಪದೇಶಿಸಿದ ಮಂತ್ರ ಫಲಿಸಿತು! ಇಕೋ ನೋಡಿ ಕೋಣ ಬಂದಿದೆ. ಇದರಿಂದ ಸೇವೆಯನ್ನು ಸ್ವೀಕರಿಸೋಣವಾಗಲಿ!” ಎಂದ.
ವ್ಯಾಸಯತಿಗಳು ಹರ್ಷದಿಂದ ಧನ್ಯ, ಕನಕ! ನೀನು ಅಸಾಧ್ಯ ಪುರುಷ! ನೋಡು ಈ ಕೆರೆಯ ತೂಬಿಗೆ ಒಂದು ದೊಡ್ಡ ಬಂಡೆಯು ಅಡ್ಡವಾಗಿದೆ, ಅದನ್ನು ಕದಲಿಸಲಾಗುತ್ತಿಲ್ಲ. ನಿನ್ನೀ ಕೋಣದ ಸಹಾಯದಿಂದ ಆ ಬಂಡೆಗಲ್ಲನ್ನು ತೆಗೆಸಿಬಿಡು. ಅದರಿಂದ ಸಹಸ್ರಾರು ಜನರಿಗೆ ಉಪಕಾರವಾಗುವುದು” ಎಂದರು.
“ನೀವು ಮಾಡುವುದೆಲ್ಲವೂ ಜನೋಪಕಾರಕಾರ್ಯವೇ ಅಲ್ಲವೇ ವ್ಯಾಸಪ್ಪಾ! ತಮ್ಮ ಅಪ್ಪಣೆಯಂತೆಯೇ ಆಗಲಿ” ಎಂದು ಆ ಕೋಣದ ಜೊತೆಗೆ ಕೆರೆಯ ತೂಬಿನ ಬಳಿಗೆ ಸಾರಿ, ಕೋಣದ ಕಿವಿಯಲ್ಲಿ ಏನೋ ಉಸುರಿದನು. ಅದೇನಾಶ್ಚರ್ಯ! ಆ ಅದ್ಭುತ ಕೋಣವು ಕ್ಷಣಮಾತ್ರದಲ್ಲಿ ತನ್ನ ಸುದೃಢ, ಕಠೋರ ಕೊಂಬುಗಳಿಂದ ತೂಬಿಗೆ ಅಡ್ಡಲಾಗಿದ್ದ ಬಂಡೆಗಲ್ಲನ್ನು ಸೀಳಿ ಎತ್ತೆಸೆಯಿತು. ಅನಂತರ ಆ ಮಾರ್ಗವನ್ನು ಸುಗಮಗೊಳಿಸಿ ಕನಕನಿಗೆ ಪ್ರದಕ್ಷಿಣೆ ಹಾಕಿ ತಲೆಬಾಗಿ ಅದೃಶ್ಯವಾಯಿತು - ಶ್ರೀವಿದ್ಯಾರತ್ನಾಕರತೀರ್ಥರು ತಮ್ಮ ಶ್ರೀವ್ಯಾಸರಾಜಗುರುಸಾರ್ವಭೌಮಚರಿತಮ್ ಎಂಬ ಗ್ರಂಥದಲ್ಲಿ ಶೂದ್ರರಾಗಿದ್ದ ಕನಕದಾಸರ ಮೂಲಕ ಕೆರೆಯ ತೂಬಿಗೆ ಅಡ್ಡವಾಗಿದ್ದ ದೊಡ್ಡ ಬಂಡೆಯನ್ನು ಕೋಣದ ಶೃಂಗಾಗ್ರದಿಂದ ತೆಗೆಸಿ ಹಾಕಿದ ವಿಚಾರವನ್ನು ಹೀಗೆ ನಿರೂಪಿಸಿದ್ದಾರೆ. “ಶೂದ್ರಂ ಕಂಚನ ಕಾಲವಾಹನಬೃಹ ಶೃಂಗಾಗ್ರತೋSಭೀಛಿದತ್.
ಶ್ರೀವ್ಯಾಸಭಿಕ್ಷುಗಳು ಅದನ್ನು ಕಂಡು ಸುಪ್ರೀತರಾಗಿ ಕನಕನನ್ನು ಶ್ಲಾಘಿಸಿ “ಕನಕ! ಒಂದು ಕಾರ್ಯವಂತೂ ಆದಂತಾಯಿತು, ಸಂತೋಷ. ಇನ್ನೊಂದು ಮಹತ್ಕಾರ್ಯದಲ್ಲಿ ನೀನು ಹಿರಿದಾದ ಪಾತ್ರ ವಹಿಸಬೇಕಾಗಿದೆ. ನಮ್ಮೊಡನೆ ವಿಜಯನಗರಕ್ಕೆ ಬರುವೆಯಾ?” ಎಂದು ಕೇಳಿದರು. ಆಗ ಕನಕನು ದರಹಾಸಬೀರಿ "ವ್ಯಾಸಪ್ಪ, ಒಂದು ಕರಾರಿನ ಮೇಲೆ ಬರುತ್ತೇನೆ” ಎನಲು ಗುರುಗಳು “ಅದೇನು ನಿನ್ನ ಕರಾರು?” ಎಂದು ಪ್ರಶ್ನಿಸಿದರು.
ಕನಕ : ಸ್ವಾಮಿ, ನಿಮ್ಮ ಗುರುಗಳ ದರ್ಶನ ಮಾಡಿಸುವಂತಿದ್ದರೆ..... ಬರುತ್ತೇನೆ!
ವಿಸ್ಮಿತರಾದವರಂತೆ ನಟಿಸುತ್ತಾ ಶ್ರೀವ್ಯಾಸತೀರ್ಥರು “ಇದೇನು ಹೀಗೆ ಹೇಳುತ್ತಿರುವೆ. ಕನಕ, ನಮ್ಮ ಗುರುಗಳಾದ ಶ್ರೀಬ್ರಹ್ಮಣ್ಯತೀರ್ಥರು ಮತ್ತೊಬ್ಬ ವಿದ್ಯಾಗುರುಗಳಾದ ಶ್ರೀಲಕ್ಷ್ಮೀನಾರಾಯಣ ಯತಿಗಳು ಹರಿಪದ ಸೇರಿ ಬಹುವರ್ಷಗಳಾದವು! ಅವರನ್ನೆಂತು ನಿನಗೆ ಭೇಟಿಮಾಡಿಸುವುದು” ಎಂದು ಪ್ರಶ್ನಿಸಿದರು.
ಆಗ ಕನಕ ನಗುತ್ತಾ “ಅವರಲ್ಲ - ವ್ಯಾಸಪ್ಪ! ಹಿಂದಿನ.....ನಿಮ್ಮ ಅಂದಿನ-ಗುರುಗಳ ದರ್ಶನ ಮಾಡಿಸಿರಿ ಎಂದು ನಾನು ಕೇಳಿದ್ದು!” ಎಂದನು. ಶ್ರೀವ್ಯಾಸರಾಜಮುನಿಗಳೂ ಮಂದಹಾಸ ಬೀರಿ “ಓಹೋ ಪುರಂದರದಾಸರ ದರ್ಶನಮಾಡಬಯಸಿರುವೆಯಾ? ಆಗಬಹುದು, ಅವರಿಗೆ ನಿನ್ನನ್ನು ಒಪ್ಪಿಸಲೆಂದೇ ವಿಜಯನಗರಕ್ಕೆ ಬಾರೆಂದು ಕರೆದಿದ್ದು! ತಿಳಿಯಿತೇ! ಕನಕ ಶ್ರೀಹರಿದಾಸಪಂಥದ ಅಭ್ಯುದಯ - ಸಾಹಿತ್ಯ ನಿರ್ಮಾಣಗಳಾಗಿ ಲೋಕೋಪಕಾರವಾಗಬೇಕಾಗಿದೆ. ಹರಿದಾಸಪಂಥದ ನಾಯಕತ್ವವನ್ನು ಪುರಂದರದಾಸರಿಗೆ ಒಪ್ಪಿಸಿದ್ದೇವೆ. ನೀನು ಅವರಿಗೆ ಸಹಾಯಕನಾಗಿದ್ದು ದಾಸವಾಹ್ಮಯವನ್ನು ಅಗಾಧವಾಗಿ ಬೆಳೆಸಬೇಕು. ಅದೇ ನಮ್ಮ ಆಶಯ. ಇನ್ನು ಮುಂದೆ ನೀನು ಕನಕನಾಯಕನಲ್ಲ. ಕನಕದಾಸನೆಂದು ಜಗನ್ಮಾನ್ಯನಾಗು! ವಿಜಯನಗರದಲ್ಲಿ ಗುರೂಪದೇಶಮಾಡುತ್ತೇವೆ” ಎಂದು ಹೇಳಿ ಆಶೀರ್ವದಿಸಿದರು.
ಕನಕದಾಸರು ಸ್ವರೂಪೋದ್ಧಾರಕ ಗುರುಗಳಿಗೆ ಸಾಷ್ಟಾಂಗವೆರಗಿ ಆನಂದಬಾಷ್ಪಸಿಕ್ತನಯನರಾಗಿ ವಿನಯದಿಂದ “ಅನುಗೃಹೀತನಾದೆ ಗುರುದೇವ. ತಮ್ಮ ಆಜ್ಞೆ ಶಿರಸಾಧರಿಸಿದ್ದೇನೆ.” ಎಂದು ವಿಜ್ಞಾಪಿಸಿದ.
ಶ್ರೀವ್ಯಾಸರಾಜರು ಕೆಲಕಾಲ ವ್ಯಾಸಸಮುದ್ರದಲ್ಲಿ ವಾಸಮಾಡಿ ವ್ಯಾಸಸಮುದ್ರದ ಜಲದಿಂದ ಸಹಸ್ರಾರು ಜನರಿಗೆ ಉಪಕಾರವಾಗುವಂತೆ ಮಾಡಿ ಎಲ್ಲರನ್ನೂ ಮುದಗೊಳಿಸಿ, ತಾವು ಆ ಗ್ರಾಮಕ್ಕೆ ಆಗಾಗ್ಗೆ ಬಂದು ವಾಸಿಸುತ್ತಾ ಪಾಠ-ಪ್ರವಚನಾದಿಗಳಿಂದ ಜ್ಞಾನಪ್ರಸಾರ ಮಾಡಲಾಶಿಸಿ, ಅಲ್ಲೊಂದು ವಿಸ್ತಾರವಾದ ಮಠವನ್ನು ಕಟ್ಟಿಸಲು ವ್ಯವಸ್ಥೆ ಮಾಡಿ ಕನಕದಾಸರೊಡನೆ ವಿಜಯನಗರಕ್ಕೆ ದಯಮಾಡಿಸಿದರು.
ವಿಜಯನಗರಕ್ಕೆ ಒಂದು ಕೆಲದಿನಗಳಾದ ಮೇಲೆ ಶ್ರೀವ್ಯಾಸರಾಜರು ಒಂದು ಶುಭಮುಹೂರ್ತದಲ್ಲಿ ಕನಕದಾಸರಿಗೆ ಶ್ರೀಮಾದ್ದದೀಕ್ಷೆಯಿತ್ತು ಗುರೂಪದೇಶಮಾಡಿ ಅನುಗ್ರಹಿಸಿ ಅವರು ಶ್ರೀಪುರಂದರದಾಸರಿಗೆ ಸಹಾಯಕರಾಗಿದ್ದು ಹರಿದಾಸಸಾಹಿತ್ಯ ರಚನೆ, ಪ್ರಸಾರಕಾರ್ಯಗಳಿಂದ ಲೋಕಕಲ್ಯಾಣವೆಸಗಬೇಕೆಂದು ಆಜ್ಞಾಪಿಸಿದರು. ಶ್ರೀವ್ಯಾಸರಾಜರ ಶಿಷ್ಯತ್ವ-ಗುರೂಪದೇಶಗಳನ್ನು ಹೊಂದಿದ ಶ್ರೀಕನಕದಾಸರು ಪರಮಾನಂದಭರಿತರಾಗಿ ಆನಂದಾಶ್ರು ಹರಿಯುತ್ತಿರಲು ಗದ್ಗದ ಕಂಠದಿಂದ ತಮ್ಮ ಜೀವನ ಸಾರ್ಥಕವಾಯಿತೆಂದು ಭಾವಿಸಿದರು. ಆಗ ಅವರ ಮುಖದಿಂದ ಒಂದು ದೇವರನಾಮ ಹೊರಹೊಮ್ಮಿತು –
ರಾಗ : ಮುಖಾರಿ
ತಾಳ : ಝಂಪೆ
ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು
ಪದುಮನಾಭನ ಪಾದದೊಲುಮೆ ಎನಗಾಯಿತು
|| ಅ.ಪ. ||
ಹರಿತೀರ್ಥ ಪ್ರಸಾದ ಎನ್ನ ಜಿಹೊಗೊದಗಿತು |
ಹರಿಯ ನಾಮಾಮೃತ ಕಿವಿಗೊದಗಿತು ||
ಹರಿಯ ದಾಸರು ಎನ್ನ ಬಂಧು ಬಳಗಾದರು |
ಹರಿಯ ಶ್ರೀಮುದ್ರೆ ಆಭರಣವಾಯಿತು
ಮುಕುತರಾದರು ಎನ್ನ ನೂರೊಂದು ಕುಲದವರು |
ಮುಕುತಿ ಮಾರ್ಗಕೆ ಯೋಗ್ಯ ನಾನಾದೆನೋ ||
ಅಕಳಂಕ ಶ್ರೀಹರಿ ಭಕುತಿಗೆ ಮನ ಬೆಳೆದು |
ರುಕುಮಿಣಿಯರಸ ಕೈವಶವಾದ ಎನಗೆ
ಇಂದೆನ್ನ ಜೀವಕ್ಕು ಸಕಲ ಸಂಪದವಾಯ್ತು |
ಮುಂದೆನ್ನ ಜನ್ಮ ಸಫಲವಾಯಿತು ||
ತಂದೆ ಕಾಗಿನೆಲೆಯಾದಿ ಕೇಶವರಾಯ |
ಬಂದೆನ್ನ ಹೃದಯದಲ್ಲಿ ನೆಲೆಯಾಗಿ ನಿಂತ