ಕಲಿಯುಗ ಕಲ್ಪತರು
ನಾಲ್ಕನೆಯ ಉಲ್ಲಾಸ
ಶ್ರೀವ್ಯಾಸರಾಜಯತಿಸಾರ್ವಭೌಮರು
೪೯. ಕುಹಯೋಗ ಪರಿಹಾರ
ಕನ್ನಡ ರಮಾರಮಣನಾದ ಕೃಷ್ಣದೇವರಾಯನಿಗೂ, ಸಾಮ್ರಾಜ್ಯಕ್ಕೂ ಕುಹುಯೋಗರೂಪವಾಗಿ ಒದಗಿ ಬಂದಿದ್ದ ಮಹಾಕಂಟಕ ಮತ್ತು ವಿಪತ್ತನ್ನು ಪರಿಹರಿಸಲು ಅದನ್ನು ಸ್ವತಃ ತಮ್ಮ ಮೇಲೆ ತಂದುಕೊಂಡು ತಮ್ಮ ತಪಃಶಕ್ತಿ ಹಾಗೂ ಶ್ರೀಹರಿಯ ಅನುಗ್ರಹಬಲದಿಂದ ಆ ದುರಂತದಿಂದ ಕೃಷ್ಣದೇವರಾಯ ಮತ್ತು ಕನ್ನಡನಾಡನ್ನು ಸಂರಕ್ಷಿಸಿ ತಾವೂ ಪಾರಾಗಿ ನಾಡಿಗೆ ಎಂದಿಗೂ ಮರೆಯಲಾಗದ ಮಹೋಪಕಾರವನ್ನು ಮಾಡಿದ ಶ್ರೀವ್ಯಾಸರಾಜರನ್ನೂ, ಅವರ ಮಹಾತ್ಯಾಗವನ್ನೂ ಎಷ್ಟು ಹೊಗಳಿದರೂ ಸಾಲದು. ಈವೊಂದು ಘಟನೆಯು ಕನ್ನಡ ಸಾಮ್ರಾಜ್ಯದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಂತಹುದಾಗಿದೆ ಎಂದು ಧೈರ್ಯವಾಗಿ ಹೇಳಬಹುದು.
ಈ ಕಥಾನಕವನ್ನು ನಿರೂಪಿಸುವ ಮೊದಲು ಕುಹುಯೋಗವೆಂದರೇನು ? ಅದರ ಪರಿಣಾಮಗಳೇನು ? ಎಂಬ ವಿಚಾರವನ್ನು ಅರಿಯುವುದು ಅವಶ್ಯವಾದ್ದರಿಂದ ಆ ಬಗ್ಗೆ ಇಲ್ಲಿ ವಿವೇಚಿಸುವುದು ಅಪ್ರಕೃತವಾಗಲಾರದು - ಈ ವಿಚಾರ ವಿವೇಚನೆಯಲ್ಲಿ ಶ್ರೀವ್ಯಾಸಯೋಗಿಚರಿತೆಯ ಆಂಗ್ಲ ಉಪೋದ್ಘಾತವು ನಮಗೆ ಬಹು ಸಹಾಯಕವಾಗಿದೆ.
ಅಮರಸಿಂಹನು “ನಷ್ಟೇಂದು ಕಲಾ ಕುಹೂಃ” ಎಂದು ಕುಹಯೋಗದ ಲಕ್ಷಣವನ್ನು ನಾಮಲಿಂಗಾನುಶಾಸನದಲ್ಲಿ ಹೇಳಿದ್ದಾನೆ. ಅಮಾವಾಸ್ಯೆಯು ಕಳೆದು ಶುಕ್ಲ ಪ್ರತಿಪತ್ ತಿಥಿಯು ಪ್ರಾರಂಭವಾಗುವ ಸಂಧಿಕಾಲದಲ್ಲಿ ಕುಹೂಯೋಗವು ಬರುವುದು. ಕಲೆಗಳನ್ನು ಕಳೆದುಕೊಂಡ ಚಂದ್ರನು ಆ ಕಾಲದಲ್ಲಿ ಕಾಣಿಸುವುದಿಲ್ಲವಾದುದರಿಂದ ಆ ಸಮಯವು ತ್ಯಾಜ್ಯವೆನಿಸುವುದು.
ಮೈಸೂರು ಸಂಸ್ಥಾನದ ಆಸ್ಥಾನಪಂಡಿತರಾಗಿ ಖ್ಯಾತರಾಗಿದ್ದ ಮಹಾವಿದ್ವಾನ್ ಮಂಡಿಕಲ್ ಶ್ರೀರಾಮಾಶಾಸ್ತ್ರಿಗಳು ತಾವು ರಚಿಸಿರುವ “ಮೇಘಪ್ರತಿಸಂದೇಶ” ಎಂಬ ಗ್ರಂಥದಲ್ಲಿ ಹೀಗೆ 'ಜ್ಯೋತಿಸ್ಸಾರಸಂಗ್ರಹವನ್ನು ಉದ್ಧರಿಸಿದ್ದಾರೆ.
(ಪುಟ ೮೪)
“ಕೂಹೂಯೋಗೋ ನಾಮ ಪರ್ವಪ್ರತಿಪತ್ಸಂಧ ವಿಷಘಟಿಕಾಯುಕ್ತ ನಷ್ಟೇಂದುಕಲೇ ಯತ್ರ ಕಾಲೇ ಚತ್ವಾರೋ ಗ್ರಹಾಃ ಚಂಡಾಲಯೋಗಂ ಪ್ರಾಪ್ಯ ದ್ವಾದಶ ಸ್ಥಾಸ್ಥ್ಯ ಇತಿ ಪಾರಿಭಾಷಿತಃ | ತದುಕ್ತಂ ಜ್ಯೋತಿಸ್ಸಾರಸಂಗ್ರಹ- ರಾಹುಣಾರ್ಕಾರ್ಕಿ ಭೂಪುತ್ರಾಃ ಯದಾ ಚಂಡಾಲತಾಂ ಗತಾಃ | ತತ್ರ ದ್ವಾದಶಗಾಸ್ಸದ್ಯಃ ಸ ರಾಜಾ ನಶ್ಯತಿ ಧ್ರುವಮ್ || ಇತಿ |”
ತಾತ್ಪರ್ಯ : ಅಮಾವಾಸ್ಯೆಯು ಕಳೆದು ಶುಕ್ಲಪಕ್ಷದ ಪಾಡ್ಯ ಪ್ರಾರಂಭವಾಗುವ ಸಂಧಿಕಾಲದಲ್ಲಿ ಚಂದ್ರನ ಕಲೆಗಳು ನಷ್ಟವಾಗಿ ವಿಷಘಳಿಗೆಯಿಂದ ಯುಕ್ತವಾದಾಗ ಲಗ್ನದಿಂದ ಹನ್ನೆರಡನೆಯ ಸ್ಥಾನದಲ್ಲಿ ನಾಲ್ಕು ಗ್ರಹಗಳು ಒಟ್ಟಿಗೆ ಸೇರಿ ಚಂಡಾಲತ್ವವನ್ನು ಪಡೆದು ಕ್ರೂರವಾಗಿ ದುಷ್ಪಲವನ್ನು ಕೊಡುವುದಕ್ಕೆ ಕುಹೂಯೋಗವೆಂದು ಹೆಸರು. ಆ ಸಮಯವು ತ್ಯಾಜ್ಯವು. ಆಗ ಚಂದ್ರನು ಕಾಣಿಸುವುದಿಲ್ಲ. ಈ ವಿಚಾರವಾಗಿ ಜ್ಯೋತಿಶಾಸ್ತ್ರ ಸಂಗ್ರಹದಲ್ಲಿ ಹೀಗೆ ಉಕ್ತವಾಗಿದೆ - ಕುಹೂಯೋಗಕಾಲದಲ್ಲಿಶನಿ, ಸೂರ್ಯ, ಅಂಗಾರಕ ಮತ್ತು ರಾಹುಗಳು ಒಂದೇ ಮನೆಯಲ್ಲಿ, ಅಂದರೆ ಲಗ್ನದಿಂದ ದ್ವಾದಶ ಸ್ಥಾನದಲ್ಲಿ ಸೇರಿ ಚಂಡಾಲತ್ವವನ್ನು ಪಡೆದಿರುತ್ತಾರೆ. ಹೀಗೆ ನಾಲ್ಕು ಗ್ರಹಗಳು ಲಗ್ನದಿಂದ ಹನ್ನೆರಡನೆಯ ಸ್ಥಾನದಲ್ಲಿದ್ದು ಕುಹೂಯೋಗ ಬಂದಾಗ ದೇಶದ ಅಧಿಪತಿಯಾದ ರಾಜನು ತತ್ ಕ್ಷಣವೇ ಮೃತನಾಗುತ್ತಾನೆ.
ಪ್ರಕೃತ ಕೃಷ್ಣದೇವರಾಯನ ಜಾತಕದ ಪ್ರಕಾರವಾಗಿ ಸ್ವಭಾನು ಸಂವತ್ಸರದ ಮಾಘ ಕೃಷ್ಣ ಅಮಾವಾಸ್ಯಾ ಗುರುವಾರ ತಾ||೪-೨-೧೫೨೪ ರಂದು ಜನ್ಮದಿಂದ ಹನ್ನೆರಡನೆಯ ಸ್ಥಾನದಲ್ಲಿ ಶನಿ, ಸೂರ್ಯ, ಅಂಗಾರಕ, ರಾಹುಗಳು ಒಂದೆಡೆ ಸೇರಿ ಅಂದು ಕುಹೂಯೋಗ ಬಂದಿದ್ದು ದೇಶಕ್ಕೂ ರಾಜನಿಗೂ ಪ್ರಾಣಾಪತ್ತು ಇದ್ದುದರಿಂದ ಅಂದು ಶ್ರೀವ್ಯಾಸತೀರ್ಥರು ಕನ್ನಡ ರಾಜ್ಯ ಸಿಂಹಾಸನವನ್ನೇರಿ ಕುಳಿತು ಕುಹೂಯೋಗದ ವಿಪತ್ತನ್ನು ಪರಿಹರಿಸಿ ಕೃಷ್ಣದೇವರಾಯನನ್ನು ಸಂರಕ್ಷಿಸಿದರೆಂದು ತಿಳಿದುಬರುತ್ತದೆ.
ಶ್ರೀವ್ಯಾಸರಾಜಮಠದ ಪೀಠಾಧಿಪತಿಗಳಾಗಿದ್ದ ಕೀರ್ತಿಶೇಷ ಪೂಜ್ಯ ಶ್ರೀವಿದ್ಯಾರತ್ನಾಕರತೀರ್ಥ ಶ್ರೀಪಾದಂಗಳವರು ರಚಿಸಿರುವ ಶ್ರೀವ್ಯಾಸರಾಜಚರಿತಮ್ ಎಂಬ ಪುಟ್ಟ ಕಾವ್ಯದಲ್ಲಿ-
ಅಬ್ಬೇ ವಿಕ್ರಮನಾಮಕೇಽಂತಿಮದಿನೇ ಮಾಘಸ್ಯ ಕೃಷ್ಣಾಭಿದಮ್ | ಶ್ರೀಮಂತಂ ಗಜಗಹ್ವರಾವನಿಭ್ರತಂ ಸೋSಪಾತ್ಕುಹೂತ್ತಾಪದಃ ||
298
ಅಂದರೆ ವಿಕ್ರಮ ಸಂವತ್ಸರದ ಮಾಘ ಕೃಷ್ಣ ಅಮಾವಾಸ್ಯೆ ದಿವಸ206 ಗಜಗಾರ (ವಿಜಯನಗರ)ದ ಅರಸನಾದ ಕೃಷ್ಣದೇವರಾಯನನ್ನು ಕುಹೂಯೋಗವಿಪತ್ತಿನಿಂದ ಕಾಪಾಡಿದರು ಎಂದು ತಿಳಿದುಬರುತ್ತದೆ. ಈ ಕಾವ್ಯದ ಪ್ರಕಾರ ಕೃಷ್ಣದೇವರಾಯನ ನಕ್ಷತ್ರ ಶತಭಿಷಾ ಆಗಿದ್ದರೆ ಶ್ರೀವ್ಯಾಸರಾಜರು ತಾ|| ೧೮-೨-೧೫೨೧ ರಂದು ಕೃಷ್ಣನರಪತಿಯನ್ನು ಕುಹೂಯೋಗದ ಆಪತ್ತಿನಿಂದ ಸಂರಕ್ಷಿಸಿದರೆಂದು ತಿಳಿಯಬೇಕಾಗುತ್ತದೆ.
ಹೀಗೆ ಕುಹೂಯೋಗವು ಬಂದದ್ದು - ಪರಿಹಾರವಾದದ್ದು ಈ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ವ್ಯಕ್ತವಾಗುವುದರಿಂದ ಕೃಷ್ಣದೇವರಾಯನಿಗೆ ಕುಹೂಯೋಗ ಬಂದು ಪರಿಹಾರವಾದದ್ದು ಯಾವಾಗ? ೧೮-೨-೧೫೨೧ ರಂದೇ ? ಅಥವಾ ೪-೨-೧೫೨೪ ರಂದೇ ಎಂಬ ಜಿಜ್ಞಾಸೆಯುಂಟಾಗುವುದು ಸ್ವಾಭಾವಿಕ.
ಇನ್ನು ೧೯೧೫-೧೬ನೇ ಮದ್ರಾಸ್ ಎಪಿಗ್ರಾಫಿಕ್ಸ್ ವರದಿ ಪ್ರಕಾರವಾಗಿ ಕೃಷ್ಣದೇವರಾಯನ ಜನ್ಮನಕ್ಷತ್ರ ಜೇಷ್ಠಾ ಎಂದು ತಿಳಿದುಬರುತ್ತದೆ. ಜೇಷ್ಠಾನಕ್ಷತ್ರವೆಂದಿಟ್ಟುಕೊಂಡರೆ, ೧೫೧೯ ರಿಂದ ೧೫೨೬ ರವರೆಗೆ ಆರು ಬಾರಿ ಅಂದರೆ ೨೨-೧೧-೧೫೧೯, ೧೦-೧೧-೧೫೨೦, ೨೯-೧೧-೧೫೨೧, ೧೮-೧೧-೧೫೨೨, ೫-೧೧-೧೮೨೩, ೨೫-೧೧-೧೫೨೪ - ಹೀಗೆ ಕುಹೂಯೋಗಗಳು ಬಂದಿರುವುದು ವ್ಯಕ್ತವಾಗುತ್ತದೆ. ಇದರಿಂದಲೂ ಕುಹೂಯೋಗ ಪರಿಹಾರವಾದ ವಿಚಾರವಾಗಿ ವಿಧ ವಿಧ ಅಭಿಪ್ರಾಯಗಳು ಕಂಡುಬರುವುದರಿಂದ ನಾವು ಒಂದು ನಿಶ್ಚಿತ ಅಭಿಪ್ರಾಯಕ್ಕೆ ಬರಲು ಕಷ್ಟವಾಗುವುದರಿಂದ ಇವೆಲ್ಲಕ್ಕೂ ಒಂದು ಗತಿ ಕಲ್ಪಿಸುವುದು ಅವಶ್ಯವೆನಿಸುವುದು. ಇದಕ್ಕೆ ಮೈಸೂರು ಆಸ್ಥಾನ ವಿದ್ವಾಂಸರಾಗಿದ್ದ ಶ್ರೀಕಾನಕಾನಹಳ್ಳಿ ನರಸಿಂಹಶಾಸ್ತ್ರಿಗಳ ಅಭಿಪ್ರಾಯವು ಸಹಾಯಕವಾಗಿದೆ.
ಶ್ರೀನರಸಿಂಹಶಾಸ್ತ್ರಿಗಳು ಕುಹೂಯೋಗಕ್ಕೆ ಮತ್ತೊಂದು ರೀತಿ ಲಕ್ಷಣವನ್ನು ಹೇಳಿದ್ದಾರೆ. ಲಗ್ನ ಜನ್ಮ)ದಲ್ಲಿ ದ್ವಾದಶ ಅಥವಾ ಅಷ್ಟಮ ಸ್ಥಾನದಲ್ಲಿ ಶನಿ, ಸೂರ್ಯ, ಅಂಗಾರಕ ಮತ್ತು ಗುರು ಗ್ರಹಗಳು ಒಂದೇ ಮನೆಗೆ ಬಂದು ಸೇರಿದಾಗ ಅದು ಕುಹೂಯೋಗವೆನಿಸಿ ದೇಶಾಧಿಪತಿಯಾದ ರಾಜನಿಗೆ ಪ್ರಾಣಭಯ, ದೇಶತ್ಯಾಗ, ಧನಕ್ಷಯ ಮುಂತಾದ ವಿಪತ್ತುಗಳುಂಟಾಗವುದೆಂದು ಪ್ರಮಾಣ ಒಂದನ್ನು ಉದಾಹರಿಸಿದ್ದಾರೆ. ಅದು ಹೀಗೆ ಇದೆ-
ದ್ವಾದಶಾಷ್ಟಮಜನ್ಮಸ್ಥಾಃ ಶನ್ಯಂಗಾರಕಾ ಗುರುಃ |
ಕುರ್ವಂತಿ ಪ್ರಾಣಸಂದೇಹಂ ದೇಶತ್ಯಾಗಂ ಧನಕ್ಷಯಂ ||
ಈ ಮೇಲಿನ ಪ್ರಮಾಣದೊಡನೆ ಅಮರಸಿಂಹನ “ನಷ್ಟೇಂದು ಕಲಾ ಕುಹೂಃ” ಎಂಬ ಪ್ರಮಾಣವನ್ನಿಟ್ಟುಕೊಂಡು ವಿಚಾರಮಾಡಿದಾಗ, ಶ್ರೀವಿದ್ಯಾರತ್ನಾಕರತೀರ್ಥ ಶ್ರೀಪಾದಂಗಳವರು ಹೇಳಿರುವಂತೆ ವಿಕ್ರಮ ಸಂವತ್ಸರ, ಮಾಘ ಕೃಷ್ಣ ಅಮಾವಾಸ್ಯಾ (೮-೨-೧೫೨೧) ದಿನದಂದು ಕುಹೂಯೋಗವಾಗುತ್ತದೆ.
ಇನ್ನು ಕೃಷ್ಣದೇವರಾಯನ ಪ್ರಸಿದ್ಧ ಜಾತಕದಂತೆ ಕುಂಭಲಗ್ನವಾಗಿರುವುದರಿಂದ ಸ್ವಭಾನು ಸಂವತ್ಸರದ ಮಾಘ ಕೃಷ್ಣ ಅಮಾವಾಸ್ಯಾ ಗುರುವಾರ ತಾ|| ೪-೨-೧೫೨೪ ಅತ್ಯಂತ ಕ್ರೂರವಾದ ಸಂಪೂರ್ಣ ಕುಹೂಯೋಗ ಲಕ್ಷಣಯುಕ್ತವಾಗಿದೆ.
ಹೀಗೆ ಕೃಷ್ಣದೇವರಾಯನ ನಕ್ಷತ್ರಗಳು ಬೇರೆ ಬೇರೆ ಎಂಬ ವಾದಗಳಿಗನುಸಾರವಾಗಿ ೧೫೧೯ ರಿಂದ ೧೫೨೪ ರವರೆಗೆ ಅನೇಕ ಬಾರಿ ಕುಹೂಯೋಗ ಬಂದಿರುವುದು ಸ್ಪಷ್ಟವಾಗಿರುವುದರಿಂದ ಶ್ರೀವ್ಯಾಸರಾಜರು ಇವುಗಳಲ್ಲಿ ಒಂದು ಕುಹೂಯೋಗ ಕಾಲದಲ್ಲಿ ಕೃಷ್ಣದೇವರಾಯನನ್ನು ಆಪತ್ತಿನಿಂದ ಪಾರುಮಾಡಿದರೆಂಬುದು ಸ್ಪಷ್ಟವಾಗುವುದು. ಇನ್ನೂ ವಿಚಾರಮಾಡಿದರೆ ೧೫೧೯ ರಲ್ಲಿ ಕೃಷ್ಣದೇವರಾಯನ ಜಾತಕ ಪ್ರಕಾರ ಕುಹೂಯೋಗವು ಪ್ರಾರಂಭವಾಗಿ ಬೇರೆ ಬೇರೆ ರೀತಿಯ ಕುಹೂಯೋಗಗಳುಂಟಾಗಿ ೧೫೨೪ ರಲ್ಲಿ ಸಂಪೂರ್ಣ ಕುಹೂಯೋಗವಾಗಿ ಅದು ಅತ್ಯಂತ ಮಾರಕವಾಗಿದ್ದರಿಂದ ಅಂದೇ ಶ್ರೀವ್ಯಾಸರಾಜರು ಕೃಷ್ಣನರಪತಿಯನ್ನು ಕಾಪಾಡಿದರೆಂದು ಹೇಳುವುದು ಸಮಂಜಸವೆನಿಸುವುದು. ಅದಾದ ನಂತರ ಕೃಷ್ಣದೇವರಾಯನು ತನ್ನ ಮಗ ತಿರುಮಲ ಮಹಾರಾಯನಿಗೆ ಪಟ್ಟಾಭಿಷೇಕ ಮಾಡಿರುವುದು; ಶ್ರೀವ್ಯಾಸರಾಯರಿಗೆ ವ್ಯಾಸಸಮುದ್ರ (ಕಂದಕೂರು) ದಾನಮಾಡಿರುವುದು; ಅದರ ನಿರ್ಮಾಣಕ್ಕೆ ಶ್ರೀವ್ಯಾಸರಾಜರು ವಿಜಯನಗರವನ್ನು ಬಿಟ್ಟು ವ್ಯಾಸಸಮುದ್ರದಲ್ಲಿ ವಾಸಮಾಡಿದ್ದು ಇವೆಲ್ಲವೂ ಪುಷ್ಟಿ ಕೊಡುತ್ತದೆ.
ಆದರೂ ಪೂಜ್ಯರಾದ ಶ್ರೀವಿದ್ಯಾರತ್ನಾಕರತೀರ್ಥ ಶ್ರೀಪಾದಂಗಳವರ ಕಾವ್ಯದ ಪ್ರಮಾಣವನ್ನು ಉದಾಸೀನ ಮಾಡುವಂತಿಲ್ಲವಾದ್ದರಿಂದ ರಾಯಚೂರು ಯುದ್ಧವು ೧೫೨೧ ರ ಸುಮಾರಿಗೆ ಪ್ರಾರಂಭವಾಗಿ ಆಗ ಕೃಷ್ಣದೇವರಾಯನ ಜಾತಕ ಪ್ರಕಾರ ಗ್ರಹಗಳು ಕ್ರೂರವಾಗಿದ್ದು, ಆಕಾಶದಲ್ಲಿ ಧೂಮಕೇತುವೂ ಕಾಣಿಸಿಕೊಂಡು ಕುಹೂಯೋಗ ಪ್ರಾಪ್ತವಾಗಿ ಅದು ೧೫೨೪ ರಲ್ಲಿ ಸಂಪೂರ್ಣವಾಗಿತ್ತೆಂದು ಭಾವಿಸಬಹುದಾಗಿದೆ. ೧೫೨೧ ರಲ್ಲಿ ಕುಹೂಯೋಗ ಪ್ರಾರಂಭವಾಗಿ ಕೃಷ್ಣದೇವರಾಯನಿಗೆ ರಾಯಚೂರು ಯುದ್ಧಕಾಲದಲ್ಲಿ ವಿಪತ್ತಿದ್ದುದರಿಂದ ಶ್ರೀವ್ಯಾಸರಾಜರು ಈ ಕಂಟಕವನ್ನು ತಮ್ಮ ತಪಃಶಕ್ತಿಯಿಂದ ಪರಿಹರಿಸಿದ್ದರೆಂದೂ ೧೫೨೪ ರಲ್ಲಿ ಬಂದಿದ್ದ ಸಂಪೂರ್ಣ ಕುಹೂಯೋಗ ಕಾಲದಲ್ಲಿ ಸಾಮ್ರಾಜ್ಯ ಸಿಂಹಾಸನದಲ್ಲಿ ಸ್ವತಃ ಕುಳಿತು ಕೃಷ್ಣದೇವರಾಯನನ್ನು ಶ್ರೀವ್ಯಾಸತೀರ್ಥರು ಸಂರಕ್ಷಿಸಿದರೆಂದು ಭಾವಿಸುವುದರಿಂದ ಎಲ್ಲಾಭಿನ್ನಾಭಿಪ್ರಾಯಗಳೂ ಪರಿಹಾರವಾಗುವುದು.
ಒಟ್ಟಿನಲ್ಲಿ ೧೫೨೧ ಅಥವಾ ೧೫೨೪ ರಲ್ಲಿ ಕುಹೂಯೋಗವಿದ್ದುದು ಸತ್ಯವಾದ್ದರಿಂದ ಶ್ರೀವ್ಯಾಸರಾಜರು ಆ ಕುಹೂಯೋಗವನ್ನು ಪರಿಹರಿಸಿ ಕನ್ನಡ ಸಾಮ್ರಾಜ್ಯ ಮತ್ತು ಕೃಷ್ಣದೇವರಾಯನನ್ನು ಸಂರಕ್ಷಿಸಿ ಮಹೋಪಕಾರ ಮಾಡಿದರೆಂದು ತಿಳಿಯಬೇಕು. ಹೀಗೆ ಹೇಳುವುದರಿಂದ ಶ್ರೀವಿದ್ಯಾರತ್ನಾಕರತೀರ್ಥ ಶ್ರೀಪಾದಂಗಳವರ ವಾಕ್ಯವನ್ನೂ ಎತ್ತಿಹಿಡಿದಂತಾಗುವುದು.
ಈಗ ಕುಹೂಯೋಗ ಪರಿಹಾರ ವಿಚಾರವನ್ನು ಅರಿಯೋಣ.
ಶ್ರೀಕೃಷ್ಣದೇವರಾಯ ಮಹಾಮಂತ್ರಿ ತಿಮ್ಮರಸನೊಡನೆ ಏಕಾಂತಮಂದಿರದಲ್ಲಿ ಆಪ್ತಾಲೋಚನೆಯಲ್ಲಿ ಮಗ್ನನಾಗಿದ್ದಾನೆ. ಅಂದು ಬೆಳಿಗ್ಗೆ ಆಸ್ಥಾನ ರಾಜಪುರೋಹಿತರು, ಜ್ಯೋತಿಷಿಗಳಾದ ಲೋಲಕ್ಷ್ಮೀಧರಭಟ್ಟರು, ಶ್ರೀರಂಗದ ವರದರಾಜೈಂಗಾರ್ಯರು ಮತ್ತು ಗೋವಿಂದನಾರಾಯಣಾಚಾರ್ಯರುಗಳು ಬಹುವಿಧವಾಗಿ ವಿಮರ್ಶಿಸಿ ಬರಲಿರುವ ಅಮಾವಾಸ್ಯಾದಿನ ಕೃಷ್ಣದೇವರಾಯನಿಗೆ ಕುಹೂಯೋಗ ಕಂಟಕವಿದ್ದು ಗ್ರಹಗಳು ಅತಿಕ್ರೂರವಾಗಿರುವುದರಿಂದ ಕೃಷ್ಣದೇವ ಸಾಮ್ರಾಟರು ಆ ವಿಪತ್ತಿನಿಂದ ಪಾರಾಗುವುದು ಬಹು ದುಸ್ಸಾಧ್ಯವೆಂದು ತಿಳಿಸಿಹೋದ ವಿಚಾರವನ್ನು ತಿಮ್ಮರಸು ಸಾಮ್ರಾಟನಲ್ಲಿ ನಿವೇದಿಸಿದ್ದರಿಂದ ರಾಯನು ತುಂಬಾ ಚಿಂತಾಕ್ರಾಂತನಾಗಿದ್ದಾನೆ. ಮಹಾಮಂತ್ರಿಯೂ ವ್ಯಾಕುಲಯುಕ್ತನಾಗಿದ್ದಾನೆ - ಶತಪಥ ತಿರುಗುತ್ತಿದ್ದ ಕೃಷ್ಣದೇವರಾಯನು “ಈಗೇನು ಮಾಡುವುದು ಅಪ್ಪಾಜಿ ?” ಎಂದು ಚಿಂತಾತುರವಾಗಿ ಕೇಳಿದನು.
ತಿಮ್ಮರಸು “ಮಹಾಪ್ರಭು, ನಾಲ್ಕಾರು ದಿನಗಳಿಂದ ಈ ವಿಚಾರವಾಗಿ ಯೋಚಿಸಿದ್ದೇನೆ. ಈ ಪರಿಸ್ಥಿತಿಯಿಂದ ಪಾರಾಗಲು ನನಗೊಂದು ಉಪಾಯ ಹೊಳೆದಿದೆ” ಎನಲು, ಕೃಷ್ಣದೇವರಾಯನು “ಅದೇನು ಹೇಳಿ ಅಪ್ಪಾಜಿ” ಎಂದು ಅವಸರಿಸಿದನು. “ಮಹಾಸ್ವಾಮಿ, ಜಾತಕದ ವ್ಯಕ್ತಿ ರಾಜ ಅಥವಾ ಸಾಮ್ರಾಟರಾಗಿದ್ದರೆ ಅಂಥವರಿಗೆ ಕುಹೂಯೋಗವು ದುಷ್ಪರಿಣಾಮವನ್ನು ಬೀರಿ ಮಾರಕವಾಗಬಹುದು. ಆ ವ್ಯಕ್ತಿರಾಜನೇ ಆಗಿರದಿದ್ದರೆ ಅಂಥ ವ್ಯಕ್ತಿಗೆ ಪ್ರಾಣಾಪಾಯದಂತಹ ಆಪತ್ತುಗಳುಂಟಾಗಲಾರದೇನೋ ಎನಿಸುತ್ತದೆ! ಆದರೆ....” ಎಂದು ಅರ್ಧಕ್ತಿಯಲ್ಲಿಯೇ ತಿಮ್ಮರಸು ಮೌನ ವಹಿಸಲು ಸಾಮ್ರಾಟನು ಆದರೆ........ ಹೂಂ ಅರ್ಥವಾಯಿತು. ನಾನು ಸಾಮ್ರಾಟನಾಗಿದ್ದರೆ, ಜಾತಕ ಪ್ರಕಾರ ನನಗೆ ವಿಪತ್ತುಂಟಾಗುವುದು. ನಾನು ಸಾರ್ವಭೌಮ ಪದವಿಯನ್ನು ಮೊದಲೇ ತ್ಯಜಿಸಿ ಸಾಮಾನ್ಯ ಪ್ರಜೆಯಾದರೆ ಈ ಕಂಟಕದಿಂದ ಉಳಿಯಬಹುದೆಂದಲ್ಲವೇ ನಿಮ್ಮ ಅಭಿಪ್ರಾಯ” ಎಂದನು.
ತಿಮ್ಮರಸು ನಿಟ್ಟುಸಿರು ಬಿಟ್ಟು “ಅಹುದು ಪ್ರಭು” ಎಂದನು. ಆಗ ರಾಯನು “ಅಪ್ಪಾಜಿ, ನಾನು ಸಾಮಾನ್ಯ ಪ್ರಜೆಯಾಗಬೇಕಾದರೆ ಸಿಂಹಾಸನ ತ್ಯಾಗಮಾಡಬೇಕು! ಆದರೆ ಆಗ ಸಿಂಹಾಸನದಲ್ಲಿ ಕುಳಿತಿರುವವರಿಗೆ ವಿಪತ್ತೊದಗುವುದಿಲ್ಲವೆಂಬ ಭರವಸೆಯೇನು ? ಪ್ರಾಣದ ಮೇಲಿನ ಆಶೆಯಿಂದ ಸ್ವಾರ್ಥಿಯಾಗಿ ನನಗೆ ಬರಲಿರುವ ಅಪಾಯವನ್ನು ಬೇರೊಬ್ಬರಿಗೆ ಪ್ರಾಪ್ತವಾಗುವಂತೆ ಮಾಡಬೇಕೇ ಅಪ್ಪಾಜಿ. ಹೇಳಿ, ಹೇಳಿ, ನಾನು ಅಷ್ಟು ಹೀನನಾಗಬೇಕೆ?” ಎಂದೆನಲು ತಿಮ್ಮರಸು “ಕ್ಷಮಿಸಬೇಕು, ಪ್ರಭು! ನನ್ನ ಅಭಿಪ್ರಾಯ ಅದಲ್ಲ, ತಾತ್ಕಾಲಿಕವಾಗಿ ಸಾಮ್ರಾಜ್ಯವನ್ನು ಬೇರೊಬ್ಬರಿಗೆ ದಾನಕೊಡಬೇಕು, ಕುಹೂಯೋಗದ ಕಂಟಕ ಪರಿಹಾರವಾದ ಮೇಲೆ ಮತ್ತೆ ಪಡೆಯಬೇಕು. ಇದರಿಂದ ತಾವೂ ಪಾರಾಗಿ ಸಾಮ್ರಾಜ್ಯವೂ ತಮ್ಮದಾಗಿ ಉಳಿಯುವಂತಾಗುವುದು” ಎಂದನು.
ಶುಷ್ಕನಗೆ ಬೀರಿ ರಾಯನು ದಾನ ಸ್ವೀಕರಿಸಿ ಮತ್ತೆ ಹಿಂದಿರುಗಿಸುವಂಥ ಉದಾರಿ - ತ್ಯಾಗಶೀಲರಾರಿದ್ದಾರೆ ? ಮೇಲಾಗಿ ಅವರಿಗೆ ಅಪಾಯವಾಗುವುದಿಲ್ಲವೆಂಬ ನಂಬಿಕೆಯೇನು ?” ಎಂದನು.
ತಿಮ್ಮರಸು : ಸಾಮಾನ್ಯರಿಗೆ ಸಾಮ್ರಾಜ್ಯ ದಾನ ಮಾಡಿದರೆ ತಮ್ಮ ಮಾತು ಅನ್ವಯಿಸುವುದು. ಅಂಥವರಿಗೆ ದಾನಮಾಡಿಯೂ ಪ್ರಯೋಜನವಿಲ್ಲ. ಈ ಕೂಹೂಯೋಗವನ್ನು ಎದುರಿಸಲು ಸಮರ್ಥರಾಗಿ, ತ್ಯಾಗಶೀಲರೂ ಆಗಿ ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ಸಮರ್ಥರಾದವರಿಂದ ಮಾತ್ರ ಈ ಕಾರ್ಯ ಸಾಧ್ಯವಾದೀತು!
ಕೃಷ್ಣ: ಅಂತಹ ಮಹನೀಯರಾರಿದ್ದಾರೆ, ಅಪ್ಪಾಜಿ ?
ತಿಮ್ಮರಸು : ಇದ್ದಾರೆ ಮಹಾಸ್ವಾಮಿ, ಸಾಮ್ರಾಜ್ಯ ಹಿತೈಷಿಗಳೂ, ಭಗವದನುಗ್ರಹಪಾತ್ರರೂ ಆದ ಮಹಾತಪಸ್ವಿಗಳೂ ತಮ್ಮ ಉದ್ಧಾರಕಗುರುಗಳೂ ಆದ ಪೂಜ್ಯ ಭಗವಾನ್ ವ್ಯಾಸತೀರ್ಥರಿಲ್ಲವೇ ? ಅವರೊಬ್ಬರಿಂದ ಮಾತ್ರ ಈ ಮಹತ್ಕಾರ್ಯ ಸಾಧ್ಯವೆಂದು ನನ್ನ ಭಾವನೆ!
ಕೃಷ್ಣ: ಏನಂದಿರಿ ಅಪ್ಪಾಜಿ ? ನನ್ನ ಪರಮಪೂಜ್ಯ ಗುರುದೇವರನ್ನು ನನ್ನ ಸ್ವಾರ್ಥಕ್ಕಾಗಿ ಈ ಮಹಾವಿಪತ್ತಿಗೆ ಗುರಿಪಡಿಸಬೇಕೆ? ಛೇ ಛೇ, 'ಶಾಂತಂ ಪಾಪಂ' ಈ ವಿಚಾರವಾದರೂ ನಿಮ್ಮ ತಲೆಯಲ್ಲಿ ಅದು ಹೇಗೆ ಬಂದಿತು ? ಈ ಮಹನೀಯರು ಸರ್ವವಿಧದಿಂದ ಈ ವಿಪತ್ತಿನಿಂದ ನನ್ನನ್ನು ರಕ್ಷಿಸಲು ಸಮರ್ಥರು. ನಿಜ, ಆದರೆ ಅವರನ್ನು ಇಂಥ ಕಾರ್ಯಕ್ಕಾಗಿ ನಿಯೋಜಿಸಿ ಇಕ್ಕಟ್ಟಿನಲ್ಲಿ ಸಿಲುಕಿಸಲು ನನಗಿಷ್ಟವಿಲ್ಲ. ನನ್ನ ಹಣೆಯಲ್ಲಿ ಬರೆದಿದ್ದಂತಾಗಲಿ ಬಿಡಿ.
ತಿಮ್ಮರಸು : ಪ್ರಭು! ನಾನು ಬಹುವಿಧವಾಗಿ ಯೋಚಿಸಿಯೇ ಈ ಮಾತು ಹೇಳಿದ್ದೇನೆ.
ಶ್ರೀವ್ಯಾಸಭಗವಾನರು ಭಗವಂತನನ್ನು ಒಲಿಸಿಕೊಂಡು ಕುಣಿಸಿದ ಮಹಾಮಹಿಮರು, ತಪಸ್ವಿಗಳು. ಅಂತಹವರಿಗೆ ಈ ಕೂಹೂಯೋಗದಿಂದ ಯಾವ ಅಪಾಯವೂ ಆಗಲಾರದು ಪ್ರಭು....
ಕೃಷ್ಣ : (ತಳಮಳಗೊಂಡು)......ಆದರೂ......
ತಿಮ್ಮರಸು : ಯೋಚಿಸಬೇಡಿ ಮಹಾಸ್ವಾಮಿ, ಇದ್ದ ವಿಚಾರವನ್ನು ಅವರಲ್ಲಿ ಅರಿಕೆ ಮಾಡೋಣ. ಅವರು ಹೇಳಿದಂತೆ ಮಾಡೋಣ, ಈಗ ಆ ಮಹನೀಯರೇ ನಮಗೆ ದಿಕ್ಕು.
ತಿಮ್ಮರಸರ ಮಾತಿಗೆ ಏನು ಹೇಳಲೂ ತೋರದಿರಲು ಕೃಷ್ಣದೇವರಾಯನು “ಅಪ್ಪಾಜಿ, ನನಗೇನೋ ಇದು ಯುಕ್ತವೆನಿಸುವುದಿಲ್ಲ. ನನ್ನ ಬಾಯಾರೆ ಈ ಮಾತನ್ನು ಗುರುವರರಿಗೆ ಹೇಳಲಾರೆ. ಏನು ಹೇಳುವಿರೋ ನೀವೇ ವಿಜ್ಞಾಪಿಸಿರಿ” ಎಂದು ಹೇಳಿ ಅಮಾತ್ರರೊಡನೆ ಗುರುಗಳ ದರ್ಶನ ಪಡೆಯಲು “ವಿಶ್ವಪಾವನಮಠ'ಕ್ಕೆ ತೆರಳಿದನು.
ಶ್ರೀವ್ಯಾಸತೀರ್ಥರು ಏಕಾಂತಮಂದಿರದಲ್ಲಿ ಗ್ರಂಥಾವಲೋಕನತತ್ಪರರಾಗಿರುವಾಗ ಮಹಾಮಂತ್ರಿಯೊಡನೆ ಬಂದ ಕೃಷ್ಣದೇವರಾಯನನ್ನು ಕಂಡು “ಸಾಮ್ರಾಟರಿಗೆ ಮಹಾಮಂತ್ರಿಗಳಿಗೆ ಸ್ವಾಗತ ಬನ್ನಿ, ಕಳೆದೆರಡು ದಿನಗಳಿಂದಲೂ ನಿಮ್ಮ ಆಗಮನವನ್ನು ಪ್ರತೀಕ್ಷಿಸುತ್ತಿದ್ದೇವೆ. ನೀವು ಬಂದುದು ಸಂತೋಷ” ಎಂದರು.
ಗುರುಗಳ ಮಾತು ಕೇಳಿ ಅವರಿಗೆ ಅಚ್ಚರಿಯಾಯಿತು. ತಿಮ್ಮರಸು “ಮಹಾತ್ಮರಿಗೆ ತಿಳಿಯದ ವಿಷಯವೇನಿದೆ? ಸಾಮ್ರಾಜ್ಯ-ಸಾಮ್ರಾಟರ ಹಿತಾಕಾಂಕ್ಷೆಯಿಂದ ಗುರುದೇವರಲ್ಲಿ ಒಂದು ಮಹತ್ವಪೂರ್ಣ ವಿಚಾರದಲ್ಲಿ ಸಲಹೆ, ಮಾರ್ಗದರ್ಶನ ಪಡೆಯಲು ಬಂದಿದ್ದೇವೆ” ಎಂದು ವಿಜ್ಞಾಪಿಸಿದನು.
ಶ್ರೀಗಳವರು : (ನಗುತ್ತಾ) ಭಾವಿ ಕುಹುಯೋಗ ವಿಚಾರ ತಾನೆ ? ನಾವೂ ಐದಾರು ದಿನಗಳಿಂದ ಅದನ್ನೇ ಚಿಂತಿಸುತ್ತಿದ್ದೇವೆ. ಶ್ರೀಮೂಲಗೋಪಾಲಕೃಷ್ಣ ಏನೋ ಒಂದು ರೀತಿ ಪ್ರೇರಣೆ ಮಾಡುತ್ತಿದ್ದಾನೆ!
ಕೃಷ್ಣ: ಈ ವಿಚಾರವಾಗಿಯೇ ತಮ್ಮ ಮಾರ್ಗದರ್ಶನಕ್ಕಾಗಿ ಬಂದಿದ್ದೇವೆ ಗುರುದೇವ, ತಿಮ್ಮರಸು ಅದನ್ನು ವಿಜ್ಞಾಪಿಸುತ್ತಾರೆ.
ತಿಮ್ಮರಸು ಅಂದು ಆಸ್ಥಾನ ಜ್ಯೋತಿಷಿಗಳು ಸ್ಪಷ್ಟಪಡಿಸಿದ ಕುಹೂಯೋಗ ಸಂಬಂಧದ ವಿಚಾರವನ್ನೆಲ್ಲಾ ಸಾದ್ಯಂತವಾಗಿ ವಿಜ್ಞಾಪಿಸಿ ಅನಂತರ “ಮಹಾಸ್ವಾಮಿ, ರಾಯಚೂರು ಯುದ್ಧಕಾಲದಲ್ಲಿ ಸಾಮ್ರಾಟರ ಜಾತಕ ಪ್ರಕಾರ ಪ್ರಾರಂಭವಾದ ಕೂಹೂಯೋಗವಿಪತ್ತು, ಧೂಮಕೇತುವಿನ ಕಂಟಕಗಳಿಂದ ಭಯಗೊಂಡಿದ್ದ ಮಹಾಪ್ರಭುಗಳನ್ನು ಜಪಪೂಜಾ- ಪುರಸ್ಕಾರಗಳಿಂದಲೂ, ತಮ್ಮ ತಪಃಪ್ರಭಾವದಿಂದಲೂ ಸಂರಕ್ಷಿಸೋಣವಾಯಿತು ಮತ್ತು ಮುಂದೂ ಕ್ರೂರ ಆಪತ್ತು ಬಂದಾಗಲೂ ಕಾಪಾಡುವುದಾಗಿ ಅಭಯವಿತ್ತಿದ್ದಿರಿ. ಬರುವ ಅಮಾವಾಸ್ಯ ದಿವಸ ಪ್ರಭುಗಳ ಜಾತಕ ಪ್ರಕಾರ ಸಂಪೂರ್ಣ ಕುಹೂಯೋಗವಿದ್ದು ಆ ವಿಪತ್ತಿನಿಂದ ಪಾರಾಗಲು ಸಾಧ್ಯವಿಲ್ಲವೆಂದು ಜ್ಯೋತಿಷಿಗಳು ಹೇಳುತ್ತಿದ್ದಾರೆ. ಈಗೇನು ಮಾಡುವುದೆಂದು ತಿಳಿಯದೇ ಸರ್ವವಿಧದಿಂದ ಸಾಮ್ರಾಜ್ಯ ಮತ್ತು ಪ್ರಭುಗಳನ್ನು ರಕ್ಷಿಸಿಕೊಳ್ಳಲು ತಮ್ಮ ಮಾರ್ಗದರ್ಶಕನಾಗಿ ಬಂದಿದ್ದೇವೆ. ಈ ಒಂದು ಕಷ್ಟಪರಿಸ್ಥಿತಿಯಿಂದ ಪ್ರಭುಗಳನ್ನು ರಕ್ಷಿಸಲು ತಾವೊಬ್ಬರೇ ಸಮರ್ಥರು” ಎಂದು ವಿಜ್ಞಾಪಿಸಿದನು.
ಶ್ರೀಗಳವರು : ರಾಜನ್, ನಾಲ್ಕಾರು ದಿನಗಳಿಂದ ಜ್ಯೋತಿಷ ಗ್ರಂಥಗಳನ್ನು ಪರಿಶೀಲಿಸಿ ಈ ಕುಹೂಯೋಗದಿಂದ ನಿನ್ನನ್ನು ಸಂರಕ್ಷಿಸುವ ಬಗೆಯನ್ನು ಆಲೋಚಿಸುತ್ತಿದ್ದೇವೆ. ಶ್ರೀಹರಿವಾಯುಗಳೂ ನಮಗೆ “ಸಾಮ್ರಾಟನನ್ನು ರಕ್ಷಿಸು” ಎಂದು ಪ್ರೇರಿಸಿದ್ದಾರೆ! ಈ ವಿಪತ್ತಿನಿಂದ ಪಾರಾಗಲು ಒಂದು ದಾರಿಯಿದೆ. ಅದನ್ನು ಈಗಾಗಲೇ ತಿಮ್ಮರಸರು ನಿನಗೆ ತಿಳಿಸಿ ನಿನ್ನಲ್ಲಿಗೆ ಕರೆತಂದಿದ್ದಾರೆ! ಆದರೆ ಅದನ್ನು ಹೇಳಲು ಸಂಕೋಚಪಡುತ್ತಿದ್ದಾರೆ! ಅಲ್ಲವೇ ಮಹಾಮಂತ್ರಿಗಳೇ ?
ಗುರುಗಳ ವಚನವನ್ನಾಲಿಸಿ ಅಚ್ಚರಿಗೊಂಡು ಒಬ್ಬರ ಮುಖವನ್ನೊಬ್ಬರು ನೋಡಿ, ಶ್ರೀವ್ಯಾಸತೀರ್ಥರಿಗೆ ನಮಸ್ಕರಿಸುತ್ತಾ “ಅಹುದು ಗುರುವರ್ಯ, ಭೂತಭವಿಷ್ಯದ್ವರ್ತಮಾನಗಳನ್ನು ಕರತಲಾಮಲಕವಾಗಿ ಕಾಣುವ ಮಹಾತ್ಮರಿಗೆ ಆವುದು ತಾನೇ ತಿಳಿಯದು” ಎಂದರು.
“ಸ್ವಾಮಿ, ದೈವಸಂಕಲ್ಪ ಹೇಗಿದೆಯೋ ನಾವರಿಯೆವು. ಆದರೆ ತಾವೀಗ ಜ್ಞಾನದೃಷ್ಟಿಯಿಂದರಿತು ಅಪ್ಪಣೆ ಕೊಡಿಸಿದಂತೆ ಸಾಮ್ರಾಜ್ಯದಾನ ಮಾಡಿ ಪ್ರಭುಗಳು ಸಾಮಾನ್ಯ ಪ್ರಜೆಯಾದರೆ ಈ ಸಂಕಟದಿಂದ ಪಾರಾಗಬಹುದೇನೋ ಎಂದು ನಾನು ಯೋಚಿಸುತ್ತಿದ್ದೇನೆ” ಎಂದು ತಿಮ್ಮರಸರು ಎಲ್ಲ ವಿಚಾರವನ್ನೂ ವಿಜ್ಞಾಪಿಸಿದರು.
ಕೃಷ್ಣ: ಗುರುದೇವ! ಇದು ಅಪ್ಪಾಜಿಯವರ ಅಭಿಪ್ರಾಯ. ನನ್ನ ಸ್ವಾರ್ಥಕ್ಕಾಗಿ ಸನ್ನಿಧಾನದವರನ್ನು ವಿಪತ್ತಿಗೆ ಗುರಿಪಡಿಸಲು ನನಗೆ ಸುತರಾಂ ಇಷ್ಟವಿಲ್ಲ. ನನ್ನ ಹಣೆಯಲ್ಲಿ ಬರೆದಂತಾಗಲಿ, ಗುರುಪಾದರು ಈ ಅಲ್ಪನಿಗಾಗಿ ವಿಪತ್ತನ್ನು ಮೈಮೇಲೆ ತಂದುಕೊಳ್ಳುವುದು ಬೇಡ!
ಶ್ರೀಗಳವರು : (ಮಂದಹಾಸ ಬೀರಿ) ಸಾರ್ವಭೌಮ, ನಿನ್ನ ಗುರುಭಕ್ತಿಯನ್ನು ಕಂಡು ಪ್ರೀತರಾಗಿದ್ದೇವೆ. ಕೇಳು ರಾಜನ್ ಪೂಜ್ಯಗುರುಗಳಾದ ಶ್ರೀಲಕ್ಷ್ಮೀನಾರಾಯಣಮುನಿಗಳು ಈಗ ೪೮ ವರ್ಷಗಳ ಹಿಂದೆ ಈ ಕನ್ನಡ ಸಾಮ್ರಾಜ್ಯ ಮತ್ತು ಸಾಮ್ರಾಟರ ರಕ್ಷಣೆ, ಅಭ್ಯುದಯ, ಧರ್ಮಸಂಸ್ಥಾಪನೆಗಳಿಗಾಗಿ ನಮ್ಮನ್ನು ರಾಜಾಸ್ಥಾನಕ್ಕೆ ಆಶೀರ್ವದಿಸಿ ಕಳಿಸಿದರು. ಸಾಳುವ ನರಸಿಂಹಪ್ರಭುವು ನಮ್ಮನ್ನು ರಾಜಗುರುಗಳೆಂದು ಸ್ವೀಕರಿಸಿ ಸಾಮ್ರಾಜ್ಯದ ಹಿತಚಿಂತನೆ ಮಾಡುತ್ತಾ ಬರಬೇಕೆಂದು ಪ್ರಾರ್ಥಿಸಿದ. ಆಗ ನಾವು ಶ್ರೀಹರಿವಾಯುಗಳ ಪ್ರೇರಣೆ, ನಮ್ಮ ಗುರುಗಳ ಆದೇಶದಂತೆ ಈ ಮಹಾಸಾಮ್ರಾಜ್ಯವನ್ನು ಧರ್ಮಸಾಮ್ರಾಜ್ಯವನ್ನಾಗಿಸಿ, ಸರ್ವವಿಧದಿಂದ ಇದರ ಕಲ್ಯಾಣ, ಅಭ್ಯುದಯ ಮಾಡಲು ಪ್ರತಿಜ್ಞಾಬದ್ಧರಾಗಿ ರಾಜಗುರುಗಳಾಗಿರಲು ಒಪ್ಪಿದೆವು! ಅಂದಿನಿಂದ ಎಲ್ಲ ಸಾಮ್ರಾಟರ ಶ್ರೇಯಸ್ಸಿಗಾಗಿ, ನಾಡಿನ ಅಭ್ಯುದಯಕ್ಕಾಗಿ ನಮ್ಮ ಯೋಗ್ಯತಾನುಸಾರ ನಮ್ಮ ತಪಸ್ಸನ್ನು ಧಾರೆಯೆರೆದು ಹಿತಚಿಂತನೆ ಮಾಡುತ್ತಾ ಬಂದಿದ್ದೇವೆ. ನಾವು ಸನ್ಯಾಸಿಗಳು, ನಮ್ಮದೆಂಬುದು ಯಾವುದೂ ಇಲ್ಲ. ಎಲ್ಲವೂ ಭಗವಂತನದು! ಪರಮಾತ್ಮನ ಸಂಕಲ್ಪ - ಇಚ್ಛೆಗನುಸಾರವಾಗಿ ಕರ್ತವ್ಯನಿರತರಾಗುವುದಷ್ಟೇ ನಮ್ಮ ಕೆಲಸ. ನಾವು ಸನ್ಯಾಸಿಗಳಾಗುವಾಗ “ಅಭಯಂ ಸರ್ವಭೂತೇಭ್ಯಃ” ಎಂದು ಪ್ರತಿಜ್ಞಾಬದ್ಧರಾಗುವುದು ಪದ್ಧತಿ. ಎಲ್ಲ ಭೂತಗಳಿಗೂ ಅಭಯವೀಯಬೇಕಾದ ನಾವು ಆಧ್ಯಾತ್ಮಿಕ, ಸಾಂಸ ತಿಕ, ಧಾರ್ಮಿಕ ಉನ್ನತಿಗಾಗಿ ಶ್ರಮಿಸುತ್ತಾ ಕನ್ನಡ ಸಾಮ್ರಾಜ್ಯವನ್ನು ಧರ್ಮಸಾಮ್ರಾಜ್ಯವನ್ನಾಗಿ ಮಾಡಿ ಹರಿಗುರುಭಕ್ತನಾಗಿ ಭಾಗವತ ಶಿರೋಮಣಿ ಎನಿಸಿರುವ ನಿನಗೆ ಬಂದಿರುವ ಈ ಕುಹೂಯೋಗದ ವಿಪತ್ತನ್ನು ಪರಿಹರಿಸಲು ಅಭಯ ನೀಡುವುದು ನಮ್ಮ ಪ್ರಮುಖ ಕರ್ತವ್ಯವೇ ಆಗಿದೇ ಭಗವಂತನು ನಮ್ಮನ್ನು ಪರೀಕ್ಷಿಸಲು ಈ ಅಗ್ನಿದಿವ್ಯ'ವನ್ನು ತಂದೊಡ್ಡಿದ್ದಾನೆಂದು ನಾವು ಭಾವಿಸುತ್ತೇವೆ. ಈ ಪರೀಕ್ಷೆಯಲ್ಲಿ ನಾವು ಉತ್ತೀರ್ಣರಾದರೆ ಮಾತ್ರ ನಾವು ಆ ಮಹನೀಯನ ಆಜ್ಞಾಧಾರಕ ಸೇವಕರೆನಿಸಲು ಅರ್ಹರಾಗುವೆವು. ನಮ್ಮ ಈವರೆಗಿನ ಜ್ಞಾನ-ಭಕ್ತಿ-ವೈರಾಗ್ಯ-ತಪಸ್ತುಗಳು ಪೂರ್ಣವಾಗುವುದು! ಇಲ್ಲದಿದ್ದರೆ ಎಲ್ಲವೂ ವ್ಯರ್ಥ! “ಹತೋ ವಾ ಪ್ರಾಪ್ತ ಸೇ ಸ್ವರ್ಗಂ ಜಿತ್ವಾ ವಾ ಭೋಕ್ಷ ಸೇ ಮಹೀಂ” “ಧರ್ಮಯುದ್ಧ ಮಾಡಿ ಮೃತನಾದರೆ ಸ್ವರ್ಗ ಪಡೆಯುವೆ, ಗೆದ್ದರೆ ಭೂಮಂಡಲವನ್ನಾಳುವೆ!” ಎಂದು ಶ್ರೀಕೃಷ್ಣಪರಮಾತ್ಮನು ಅರ್ಜುನನಿಗೆ ಉಪದೇಶಿಸಿದ್ದಾನೆ. ರಾಜರಿಗೆ ಯುದ್ಧವಿದ್ದಂತೆ ನಮಗೆ ಈ ಅಗ್ನಿದಿವ್ಯ! ಇದರಲ್ಲಿ ಗೆದ್ದರೆ ಜಗತ್ತಿನಲ್ಲಿ ಕೀರ್ತಿ, ಭಗವಂತನ ಅನುಗ್ರಹ, ಕರ್ತವ್ಯ ಪರಿಪಾಲನೆಯ ಸಮಾಧಾನ ಲಭಿಸುವುದು. ಈ ಕರ್ತವ್ಯಪಾಲನೆಯಲ್ಲಿ ವಿಫಲರಾದರೆ ಬ್ರಹ್ಮಲೋಕಪ್ರಾಪ್ತಿ, ಆಗಲೂ ಧರ್ಮ ಸಾಮ್ರಾಜ್ಯ ರಕ್ಷಣೆಯಲ್ಲೇ ಅಸುನೀಗಿದ ಕೀರ್ತಿ ದೊರಕುವುದು ! ಶ್ರೀಹರಿಯು ನಿನ್ನನ್ನು ರಕ್ಷಿಸಲು ಪ್ರೇರಿಸಿರುವುದರಿಂದ ಅದು ಅವನ ಇಚ್ಛೆಯೇ ಆಗಿದೆ. ಅದಕ್ಕೆ ವಿರುದ್ಧವಾಗಿ ನಡೆಯಲು ನಾವೆಷ್ಟರವರು? ಆದ್ದರಿಂದ ರಾಜನ್! ಇದಕ್ಕಾಗಿ ನೀನು ಚಿಂತಿಸಬೇಡ.
ಗುರುವರ್ಯರಿಗೆ ಸಾಮ್ರಾಜ್ಯ ಮತ್ತು ಚಕ್ರವರ್ತಿಯು ಮೇಲಿರುವ ಅಪಾರ ಕಾರುಣ್ಯ, ಅವರ ನಿಶ್ಚಲ ಮನಸ್ಸು, ಔದಾರ್ಯ, ಉದಾತ್ತ ಭಾವನೆ, ತ್ಯಾಗಗಳನ್ನು ಕಂಡು ಅವರ ಉಪದೇಶವನ್ನು ಕೇಳಿ ಕೃಷ್ಣದೇವರಾಯ-ತಿಮ್ಮರಸರ ಮೈ ಪುಳಕಿಸಿತು. ಹೃದಯ ತುಂಬಿ ಬಂದಿತು. ಭಕ್ಷ್ಯತಿಶಯದಿಂದ ಕಣ್ಣೀರುದುರಿತು. ಕೃತಾಂಜಲಿಪುಟರಾಗಿ ಮುನೀಂದ್ರರಿಗೆ ಸಾಷ್ಟಾಂಗವೆರಗಿ “ಉಸ್ಕೃತರಾದೆವು ಮಹಾಸ್ವಾಮಿ, ತಮ್ಮಂಥ ತಪಸ್ವಿಗಳನ್ನು ಗುರುಗಳಾಗಿ ಪಡೆದ ನಾವೇ ಧನ್ಯರು! ಇದು ನಿಜವಾಗಿ ಕನ್ನಡನಾಡಿನ - ಜನತೆಯ ಸೌಭಾಗ್ಯ” ಎಂದು ವಿಜ್ಞಾಪಿಸಿದರು.
ವ್ಯಾಸಮುನಿಗಳು ಮಂದಹಾಸ ಬೀರಿ ತಿಮ್ಮರಸರೇ, ಈಗಲಾದರೂ ಸಂಕೋಚವಿಲ್ಲದೆ ನಿಮ್ಮ ಅಭಿಪ್ರಾಯವನ್ನು ತಿಳಿಸಿರಿ” ಎಂದರು.
ತಿಮ್ಮರಸು : ಗುರುವರ್ಯ, ಪ್ರಭುಗಳ ವಿಪತ್ತೂ ಪರಿಹಾರವಾಗಬೇಕು. ಸಾಮ್ರಾಜ್ಯವೂ ಅವರಿಗುಳಿಯಬೇಕು. ಈ ದೃಷ್ಟಿಯಿಂದ ಈ ಮಹಾಸಾಮ್ರಾಜ್ಯವನ್ನು ತಮಗೆ ದಾನಮಾಡಬೇಕೆಂದು ನಿರ್ಧರಿಸಿದ್ದೇವೆ. ಇದಕ್ಕೆ ಒಪ್ಪಿ ಅನುಗ್ರಹಿಸಬೇಕು.
ಶ್ರೀಗಳವರು : ಶ್ರೀಹರಿಚಿತ್ತ, ಆಗಲಿ, ಆದರೆ ಎರಡು ಕರಾರುಗಳಿಗೆ ನೀವು ಒಪ್ಪುವುದಾದರೆ ದಾನ ಸ್ವೀಕರಿಸಲು ನಾವು ಸಿದ್ಧರಾಗಿದ್ದೇವೆ.
ಕೃಷ್ಣ: ಅಪ್ಪಣೆಯಾಗಲಿ, ತಮ್ಮೆಲ್ಲ ಷರತ್ತಿಗೂ ನಮ್ಮ ಸಮ್ಮತಿಯಿದೆ.
ಶ್ರೀಗಳವರು : ಇಂದು ಮಾಘ ಕೃಷ್ಣ ಪಾಡ್ಯ. ಇಂದಿನಿಂದ ಹದಿನಾಲ್ಕನೇ ದಿನ ಕುಹೂಯೋಗವಿದೆ. ಅದಕ್ಕೆ ಐದಾರು ದಿನ ಮೊದಲಿನಿಂದ ಎಂಟು ದಿನ ಕಾಲ ಎಲ್ಲ ದೇವಾಲಯಾದಿಗಳಲ್ಲಿ ವಿಶೇಷ ಅಭಿಷೇಕ, ಪೂಜಾರಾಧನೆ, ಅನ್ನದಾನಗಳು ನಮ್ಮ ಮತ್ತು ಪ್ರಭುಗಳ ಹೆಸರಿನಲ್ಲಿ ಜರುಗಬೇಕು ಮತ್ತು ಚತುರ್ದಶೀ ದಿವಸ ನಮಗೆ ಸಾಮ್ರಾಜ್ಯ ದಾನ ಮಾಡತಕ್ಕದ್ದು. ಅಮಾವಾಸ್ಯಾದಿನ ಕುಹೂಯೋಗಕಾಲದಲ್ಲಿ ನಾವು ಸಿಂಹಾಸನಾರೋಹಣ ಮಾಡುತ್ತೇವೆ. ಆ ಕಾಲದಲ್ಲಿ ಕೃಷ್ಣದೇವರಾಯರಿಗ ಶ್ರೇಯಸ್ಸು - ಪುಣ್ಯಪ್ರಾಪ್ತಿಗಾಗಿ ದೇವಾಲಯ-ಪಂಡಿತರು-ಪ್ರೋತ್ರೀಯ ಬ್ರಾಹ್ಮಣರುಗಳಿಗೆ - ಅಗ್ರಹಾರ, ಗ್ರಾಮ, ಭೂಮಿ, ಗೃಹ, ಧನಕನಕ-ವಸ್ತ್ರಾಭರಣಗಳನ್ನು ನಮ್ಮಿಂದ ದಾನ ಕೊಡಿಸಬೇಕು. ಇದು ಸಾಮ್ರಾಟರ ಶ್ರೇಯಸ್ಸಿಗಾಗಿ ಮಾಡಬೇಕಾದ ಮುಖ್ಯ ಕಾರ್ಯ, ದಾನಗ್ರಾಹಿಗಳ ಯಾದಿಯನ್ನು ವಿವರದೊಡನೆ ನೀಡುತ್ತೇವೆ. ಅದರಂತೆ ತಾಮ್ರಶಾಸನ, ದಾನಪತ್ರಗಳನ್ನು ಸಿದ್ಧಪಡಿಸಬೇಕು - ಇದು ನಮ್ಮ ಮೊದಲನೆಯ ಕರಾರು.
ಕೃಷ್ಣ : ನನ್ನ ಹಿತಕ್ಕಾಗಿ ಮಾಡಬೇಕಾದ ಧರ್ಮವನ್ನು ನನಗಾಗಿ ತಾವು ಮಾಡಬಯಸಿರುವುದು ತುಂಬಾ ಸಂತೋಷ, ನಮ್ಮ ಸಮ್ಮತಿ ಇದೆ.
ತಿಮ್ಮರಸು : ಶ್ರೀಯವರ ಎರಡನೆಯ ಷರತ್ತೇನು? ಅಪ್ಪಣೆಯಾಗಲಿ,
ಶ್ರೀಯವರು (ನಸುನಕ್ಕು) ಶ್ರೀಹರಿಯ ಕರುಣೆಯಿಂದ ಕುಹೂಯೋಗದ ವಿಪತ್ತಿನಿಂದ ನಾವು ಪಾರಾಗಿ, ಕೃಷ್ಣದೇವರಾಯರೂ ಸಂರಕ್ಷಿತರಾದರೆ, ನಮ್ಮ ಎರಡನೆಯ ಕರಾರನ್ನು ಆ ಮರುದಿನ ತಿಳಿಸುತ್ತೇವೆ. ಕೃಷ್ಣದೇವರಾಯರು ಮತ್ತು ನೀವು ಆ ಕರಾರಿನಂತೆ ನಡೆಯುವುದಾಗಿ ಈಗಲೇ ಪ್ರಮಾಣಪೂರ್ವಕವಾಗಿ ಭರವಸೆ ನೀಡಬೇಕು.
ಸಾರ್ವಭೌಮ - ಮಹಾಮಂತ್ರಿಗಳು ಹರ್ಷ ಪುಲಕಿತಗಾತ್ರರಾಗಿ ಗುರುಗಳ ಎರಡನೆಯ ಕರಾರೇನೆಂದು ತಿಳಿಯದಿದ್ದರೂ ಸಂತೋಷದಿಂದಲೇ “ಗುರುವರ್ಯರ ಎರಡನೆಯ ಕರಾರು ಏನೇ ಆಗಿರಲಿ ಅದನ್ನು ನೆರವೇರಿಸುತ್ತೇವೆ” ಎಂದು ಪ್ರಮಾಣಪೂರ್ವಕವಾಗಿ ವಚನವಿತ್ತರು.
ಅನಂತರ ಮುಂದೆ ಮಾಡಬೇಕಾದ ವ್ಯವಸ್ಥೆಗಳ, ಕಾರ್ಯಕ್ರಮಗಳ ವಿಚಾರವಾಗಿ ಸಮಾಲೋಚನೆ ಮಾಡಿ ಸಾಮ್ರಾಟರು, ತಿಮ್ಮರಸರು ನಿಶ್ಚಿಂತರಾಗಿ ಆನಂದದಿಂದ ಗುರುಗಳ ಅಪ್ಪಣೆ ಪಡೆದು ಅರಮನೆಗೆ ತೆರಳಿದರು.
ಮಾಘ ಕೃಷ್ಣ ಚತುರ್ದಶೀ, ರಾಜಧಾನಿಯಲ್ಲಿ ವಿಶೇಷ ಕೋಲಾಹಲ, ಸಾರ್ವಭೌಮನಿಗೆ ಬರಲಿದ್ದ ಕುಹೂಯೋಗವಿತ್ತು, ಪೂಜ್ಯ ವ್ಯಾಸರಾಜರಿಗೆ ಸಾಮ್ರಾಜ್ಯ ದಾನ ಮಾಡುವ ವಿಚಾರ, ಕುಹೂಯೋಗಕಾಲದಲ್ಲಿ ಗುರುಗಳು ಸಿಂಹಾಸನವೇರಿ ಕುಹೂಯೋಗವನ್ನು ಎದುರಿಸಿ ಕೃಷ್ಣದೇವರಾಯನನ್ನು ಕಾಪಾಡಲು ಸಿದ್ಧರಾಗಿರುವ ವಿಚಾರಗಳು ಕರ್ಣಾಕರ್ಣಿಕೆಯಾಗಿ ಎಲ್ಲೆಡೆ ಹರಡಿ ಸಮಸ್ತ ಪ್ರಜರೂ ತಮತಮಗೆ ತೋರಿದಂತೆ ಮಾತನಾಡುತ್ತಿದ್ದಾರೆ. ಎಲ್ಲೆಲ್ಲಿಯೂ ಗುಜುಗುಜು, ಏನೋ ಭಯ, ಸಂಭ್ರಮ, ದುಃಖ, ಸಂತೋಷ - ಹೀಗೆ ವಿವಿಧ ಭಾವನೆ, ಅವಸ್ಥೆಗಳಲ್ಲಿ ಮುಳುಗಿದ್ದಾರೆ ಪ್ರಜಾಜನರು.
ಅರಮನೆಯಲ್ಲಿ ವಿಶೇಷ ಸಂಭ್ರಮ. ತಿಮ್ಮರಸರು ರಾಜಗೌರವದಿಂದ ಶ್ರೀವ್ಯಾಸತೀರ್ಥರನ್ನು ಕರೆತಂದಿದ್ದಾರೆ. ಮಂಗಳವಾದ್ಯ-ವೇದಘೋಷಗಳಾಗುತ್ತಿವೆ. ರಾಜದರ್ಬಾರಿನಲ್ಲಿ ಜನರು ಕಿಕ್ಕಿರಿದು ತುಂಬಿದ್ದಾರೆ. ಕೃಷ್ಣದೇವರಾಯ ಸಾಧಾರಣ ಪ್ರಜೆಯಂತೆ ವೇಷಭೂಷಣಗಳಿಂದಲಂಕೃತನಾಗಿ ಗುರುವರರನ್ನು ಸ್ವಾಗತಿಸಿ ಅವರಿಗಾಗಿಯೇ ಸಿದ್ಧಪಡಿಸಿದ ಸುವರ್ಣಭದ್ರಾಸನದಲ್ಲಿ ಕೂಡಿಸಿದನು. ಅನಂತರ ಪತ್ನಿಪುತ್ರರು-ಅಮಾತೃಸೇನಾನಿಗಳೊಡನೆ ಕೂಡಿಕೊಂಡು ಸಾಮ್ರಾಜ್ಯ ದಾನ ಮಾಡಲು ಸಿದ್ಧನಾದನು.
ರಾಜಪುರೋಹಿತರು ಮಂತ್ರವನ್ನು ಹೇಳುತ್ತಿರಲು ಸಂಕಲ್ಪಪೂರ್ವಕವಾಗಿ ಕೃಷ್ಣದೇವರಾಯರು ಮಂತ್ರೋದಕ ಧಾರಾಪುರಸ್ಸರವಾಗಿ ಕನ್ನಡ ಸಾಮ್ರಾಜ್ಯವನ್ನು ಶ್ರೀವ್ಯಾಸತೀರ್ಥರಿಗೆ ಆನಂದದಿಂದ ದಾನಮಾಡಿದರು. ರಾಜರ ಉಡುಗೆ, ಕಿರೀಟ-ಕರ್ಣಕುಂಡಲ-ಕುಕಣ-ಹಾರಾದಿ ಆಭರಣಗಳು, ಪಟ್ಟದ ಕತ್ತಿ, ಫಲಪುಷ್ಪಗಳನ್ನಿಡಲಾದ ಅನೇಕ ಸುವರ್ಣ ತಾಂಬಾಣಗಳನ್ನು ವ್ಯಾಸತೀರ್ಥರಿಗೆ ಅರ್ಪಿಸುತ್ತಿರಲು ಅವರದನ್ನು ಸ್ಪರ್ಶಿಸಿ ಮಹಾಮಂತ್ರಿಗಳಿಗೆ ನೀಡುತ್ತಿದ್ದಾರೆ. ಕೊನೆಗೆ ಕೃಷ್ಣದೇವರಾಯ ರತ್ನಖಚಿತ ರಾಜಮುದ್ರಿಕೆಯನ್ನು ಗುರುಗಳ ಬೆರಳಿಗೆ ತೊಡಿಸಿ ಸಾಷ್ಟಾಂಗ ನಮಸ್ಕಾರ ಮಾಡಿ “ಗುರುದೇವ! ಇಂದಿನಿಂದ ಈ ಸಾಮ್ರಾಜ್ಯ ತಮ್ಮದು. ನೂತನ ಸಾಮ್ರಾಜ್ಯಾಧಿಪತಿಗಳಾದ ತಾವು ನಿಮ್ಮ ಸೇವಕರೂ ಪ್ರಜೆಗಳೂ ಆದ ನಮ್ಮನ್ನು ರಕ್ಷಿಸಿಕೊಂಡು ಬರಬೇಕು” ಎಂದು ಆನಂದಬಾಷ್ಪಸಿಕ್ತನಯನನಾಗಿ ವಿಜ್ಞಾಪಿಸಿದನು.
ಶ್ರೀವ್ಯಾಸಯತಿಗಳು ನಗುತ್ತಾ “ಕೃಷ್ಣ! ಎಲ್ಲರನ್ನೂ ಸಲಹುವವನು ಶ್ರೀಮೂಲಗೋಪಾಲಕೃಷ್ಣ! ಯೋಚಿಸದಿರು, ಆ ಪರಮಾತ್ಮನು ಎಲ್ಲರಿಗೂ ಮಂಗಳವನ್ನು ಕರುಣಿಸುವನು” ಎಂದರು.
ಆಗ ಕೃಷ್ಣದೇವರಾಯ, ಅಚ್ಯುತರಾಯ, ಮಹಾಮಂತ್ರಿ, ಅಳಿಯ ರಾಮರಾಜ, ಸೈನ್ಯಾಧಿಪತಿಗಳು ಇನ್ನಿತರ ಸಚಿವ - ಸಾಮಂತ - ಪೌರಜಾನಪದರು ಒಬ್ಬೊಬ್ಬರಾಗಿ ಶ್ರೀಯವರ ಮುಂದೆ ಬಂದು ರಾಜಗೌರವವನ್ನು ಸಲ್ಲಿಸಿ ಶಿರಬಾಗಿದರು.
ಮಹಾಮಂತ್ರಿಗಳು ಇಂದು ಕೃಷ್ಣದೇವರಾಯರು ಸರ್ವರ ಸಮಕ್ಷಮ ಶ್ರೀವ್ಯಾಸತೀರ್ಥರಿಗೆ ಸಾಮ್ರಾಜ್ಯವನ್ನು ದಾನಮಾಡಿದ್ದಾರೆ. ನಾಳೆ ಪೂಜ್ಯ ಗುರುವರರು ಮಧ್ಯಾಹ್ನ ನಾಲ್ಕು ಘಂಟೆಗೆ ಕರ್ನಾಟಕ ರಾಜ್ಯ ರತ್ನಸಿಂಹಾಸನವನ್ನೇರಿ ಕುಹೂಯೋಗ ಮುಗಿಯುವವರೆಗೆ ಮೂರೂ ಮುಕ್ಕಾಲು ಘಳಿಗೆಯವರೆಗೆ ದರ್ಬಾರು ನಡೆಸುತ್ತಾರೆ. ಅದೇ ಕಾಲದಲ್ಲಿ ಅನೇಕ ದಾನಗಳನ್ನೂ ನೀಡುತ್ತಾರೆ. ಇದೊಂದು ಅಭೂತಪೂರ್ವ ಸಂದರ್ಭ, ಸರ್ವರೂ ಶುದ್ಧಮನಸ್ಸಿನಿಂದ ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಸಾಮ್ರಾಜ್ಯ ರಕ್ಷಣೆಗಾಗಿ, ಸಿಂಹಾಸನವೇರುವ ಗುರುಪಾದರಿಗೆ ಗೌರವ ಸಲ್ಲಿಸಿ ಸುಕೃತ ಎಂದು ಭಾಗಿಗಳಾಗಬೇಕು” ಎಂದು ಘೋಷಿಸಿದರು. ಆನಂತರ ಸಾಮ್ರಾಜ್ಯದಾನ ಸಮಾರಂಭ ಕಾರ್ಯಕ್ರಮ ಮುಕ್ತಾಯವಾಯಿತು.
ಶ್ರೀಶಾಲಿವಾಹನ ಶಕೆ ೧೪೪೬ನೆಯ ಸ್ವಭಾನು ಸಂವತ್ಸರದ ಮಾಘ ಕೃಷ್ಣ ಅಮಾವಾಸ್ಯಾ ಗುರುವಾರ (ತಾ|| ೪-೨-೧೫೨೪).207 ಶ್ರೀವ್ಯಾಸತೀರ್ಥರು ಭಕ್ತಿಯಿಂದ ದೇವರ ಪೂಜೆ ಮಾಡಿ ದೇವರನ್ನು ಭುಜಂಗಿಸಲು ಸಿದ್ಧರಾಗಿ ಮೂಲಗೋಪಾಲಕೃಷ್ಣನಲ್ಲಿ ಆವಾಹನೆ ಮಾಡಿದ್ದ ಬಿಂಬಮೂರ್ತಿಯನ್ನು ತಮ್ಮ ಹೃತ್ಕಮಲದಲ್ಲಿ ಮತ್ತೆ ಪ್ರತಿಷ್ಠಾಪಿಸಿ ಧ್ಯಾನಿಸಹತ್ತಿದರು. ಗುರುವರರಿಗೆ ಆಗೊಂದು ವಿಚಿತ್ರ ಅನುಭವವಾಯಿತು! ದೇಹದಲ್ಲಿ ಆವುದೋ ವಿಚಿತ್ರ ಶಕ್ತಿ ಪ್ರವೇಶಿಸಿ ಮನಸ್ಸು ಪರಮಾನಂದಭರಿತವಾದಂತಾಯಿತು. ಅದನೆಂದು ಧ್ಯಾನಾಸಕ್ತರಾಗಿಯೇ ನಿರೀಕ್ಷಿಸಲು ಶ್ರೀಮೂಲಗೋಪಾಲಕೃಷ್ಣನ ಪ್ರತಿಮೆಯಿಂದ ದಿವ್ಯತೇಜಕ್ಕೊಂದು ಹೊರಟು ತಮ್ಮ ಹೃದಯವನ್ನು ಪ್ರವೇಶಿಸಿ ಬಿಂಬಮೂರ್ತಿಯನ್ನು ಸೇರಿದಂತಾಯಿತು. ಆಗ ವಿಚಿತ್ರ ಕಾಂತಿಯಿಂದ ಮಂದಹಾಸ ಬೀರುತ್ತಾ ಬಾಲಗೋಪಾಲ ಅಭಯಪ್ರದಾನ ಮಾಡಿ ಅದೃಶ್ಯನಾದಂತೆ ಭಾಸವಾಯಿತು! ಶ್ರೀಮೂಲಗೋಪಾಲಕೃಷ್ಣನು ತಮ್ಮನ್ನೂ, ಸಾಮ್ರಾಜ್ಯವನ್ನೂ, ಕೃಷ್ಣದೇವರಾಯನನ್ನೂ ಕುಹೂಯೋಗ ವಿಪತ್ತಿನಿಂದ ರಕ್ಷಿಸಲು ಕಂಕಣಬದ್ದನಾಗಿ ತಮ್ಮ ಹೃದಯಕಮಲದಲ್ಲಿ ನೆಲೆಸಿದನೆಂದು ಅವರಿಗೆ ಅರಿವಾಯಿತು. ಆನಂದತುಂದಿಲರಾದ ಗುರುಗಳು ಗದ್ದದಕಂಠದಿಂದ "ಶ್ರೀಹರಿ, ಮುರಳೀಧರ, ಜಗಜ್ಜನ್ಮಾದಿಕಾರಣ! ನಿನಗೆ ಈ ಪಾಮರ ಭಕ್ತನಲ್ಲಿ ಅದೆಷ್ಟು ವಾತ್ಸಲ್ಯ! ಧನ್ಯನಾದೆ ದೇವ! ಎಂದು ಉದ್ಗಾರ ತೆಗೆದರು.
ಅಲ್ಲಿಯೇ ಕುಳಿತು ಧ್ಯಾನಾಸಕ್ತರಾಗಿದ್ದ ಶ್ರೀಪುರಂದರದಾಸರು ಆನಂದಪುಳಕಿತರಾಗಿ ನಸುನಕ್ಕರು. ಇದನ್ನು ಕಂಡು ಸಮೀಪದಲ್ಲಿದ್ದ ಪಂಡಿತರು “ದಾಸಾರ್ಯರೇ ಗುರುಗಳು ಅದೇಕೆ ಹಾಗೆ ಉದ್ಗಾರ ತೆಗೆದರು ? ನೀವೇಕೆ ನಗುತ್ತಿರುವಿರಿ?” ಎಂದು ಪ್ರಶ್ನಿಸಲು ಪುರಂದರದಾಸರಾಯರು ಮಂದಹಾಸ ಬೀರಿ “ಇಂದು ಕುಹೂಯೋಗವಿದೆಯಲ್ಲವೇ? ಗುರುಗಳು ಆ ವಿಪತ್ತಿನಿಂದ ರಕ್ಷಿಸಬೇಕೆಂದು ಪೂಜಾಕಾಲದಲ್ಲಿ ಭಗವಂತನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದೇವರನ್ನು ಭುಜಂಗಿಸುವಾಗ ಶ್ರೀಮೂಲಗೋಪಾಲಕೃಷ್ಣ ಸಾಕಾರ ತಾಳಿ ಗುರುಗಳ ಹೃದಯವನ್ನು ಪ್ರವೇಶಿಸಿ ಬಿಂಬಮೂರ್ತಿಯಲ್ಲಿ ನಿಂತು ಅಭಯಪ್ರದಾನ ಮಾಡಿ ಅದೃಶ್ಯನಾದ! ಅದರಿಂದ ಭಕ್ತಿಪರವಶರಾಗಿ ಗುರುದೇವರು ಹಾಗೆ ಉದ್ಧರಿಸಿದರು. ಆ ಮಂಗಳಕರ ದೃಶ್ಯವನ್ನು ಈ ಪಾಮರದಾಸನೂ ಕಂಡನು. ಗುರುಗಳನ್ನು ರಕ್ಷಿಸಲು ಆ ದೇವನು ಓಡಿ ಬಂದು ಹೃದಯ ಸೇರಿ ತನ್ನ ಭಕ್ತರಲ್ಲಿರುವ ವಾತ್ಸಲ್ಯವನ್ನು ಪ್ರಕಟಿಸಿದ್ದನ್ನು ಕಂಡು ನನಗೆ ನಗು ಬಂದಿತು ಅಷ್ಟೇ!” ಎಂದು ಹೇಳಲು ಸರ್ವರೂ ಅಚ್ಚರಿಗೊಂಡರು.
ಶ್ರೀಗಳವರು ತೀರ್ಥಪ್ರಸಾದವನ್ನು ಕರುಣಿಸಿ, ಗಂಧಾಕ್ಷತೆಗಳಿಂದ ಅಲಂಕೃತರಾಗಿ ಎಲ್ಲರಿಗೂ ಭೋಜನ ಮಾಡಿಸಿ ತಾವು ಮಾತ್ರ ಉಪವಾಸದಿಂದ ಶ್ರೀಹರಿಯ ಧ್ಯಾನದಲ್ಲಿ ಆಸಕ್ತರಾದರು.
ಮಧ್ಯಾಹ್ನ ನಾಲ್ಕು ಘಂಟೆಯ ಸಮಯ. ಶ್ರೀವ್ಯಾಸರಾಜಗುರುಗಳು ಸಿಂಹಾಸನಾರೋಹಣ ಮಾಡಬೇಕಾದ ಸಮಾರಂಭ ಸಮೀಪವಾಗುತ್ತಿದೆ. ಸಮಸ್ತ ವ್ಯವಸ್ಥೆಗಳೂ ಪೂರ್ಣವಾಗಿವೆ. ರಾಜಸಭೆಯಲ್ಲಿರಾಜಬಂಧುಗಳು, ಸಚಿವ-ಸಾಮಂತ-ಸೇನಾನಿ ದಂಡನಾಯಕ-ಪೌರಜಾನಪದರು-ಪಂಡಿತರು-ಗಾಯಕರು-ಕಲೆಗಾರರು-ಹರಿದಾಸರು, ಅಂದು ದಾನ ಸ್ವೀಕರಿಸಲಿರುವ ದೇವಾಲಯಗಳ ಅಧಿಕಾರಿಗಳು, ವಿದ್ವಾಂಸರು - ಶೋತ್ರೀಯ ಬ್ರಾಹ್ಮಣರು ತಮತಮಗೆ ವಿಹಿತ ಸ್ಥಾನಗಳಲ್ಲಿ ಮಂಡಿಸಿದ್ದಾರೆ. ಸಮವಸ್ತ್ರ ಧರಿಸಿದ ಸೈನಿಕರು, ತಾಳಸ್ತುತಿಪಾಠಕರು-ವಂದಿ-ಮಾಘದರು ಸಿದ್ದರಾಗಿ ನಿಂತಿದ್ದಾರೆ. ಸಭೆ ಕಿಕ್ಕಿರಿದು ತುಂಬಿದೆ.
ರಾಜಪುರೋಹಿತಾದಿಗಳ ಸೂಚನೆಯಂತೆ ಸಮಸ್ತ ಬಾಂಧವರು, ಮಹಾಮಂತ್ರಿಗಳು ಪತ್ನಿಪುತ್ರಾದಿಗಳೊಡನೆ ಕೃಷ್ಣದೇವರಾಯನು ಧ್ಯಾನಾಸಕ್ತರಾಗಿರುವ ವ್ಯಾಸರಾಜರ ಸನ್ನಿಧಿಗೆ ಬಂದು ಸಿಂಹಾಸನಾರೋಹಣ ಮಹೂರ್ತವು ಸಮೀಪಿಸಿತೆಂದು ವಿಜ್ಞಾಪಿಸಿದನು. ಶ್ರೀಗಳವರು ಮೇಲೆದ್ದು ದೇವರಿಗೆ ನಮಸ್ಕಾರ ಮಾಡಿ ದೇವರ ಪೆಟ್ಟಿಗೆಯನ್ನು ಮುಂದೆ ಮಾಡಿಕೊಂಡು ದಂಡಕಮಂಡಲುಧಾರಿಗಳಾಗಿ ರಾಜಸಭೆಗೆ ಹೊರಡಲು ಸಿದ್ದರಾದರು. ಕೃಷ್ಣದೇವರಾಯ- ಅಚ್ಯುತದೇವರಾಯರು ಚಾಮರ ಹಾಕುತ್ತಿರಲು ಗುಂಡರಾಜರು ಶ್ವೇತಛತ್ರಿ ಹಿಡಿದಿರಲು, ಮಹಾಮಂತ್ರಿಗಳು ಹಸ್ತಲಾಘವ ನೀಡುತ್ತಿರಲು, ಪಂಡಿತರು ವೇದಘೋಷ ಮಾಡುತ್ತಿರಲು, ಹರಿದಾಸರು ಭಗವನ್ಮಹಿಮೆಗಳನ್ನು ಪಾಡುತ್ತಿರಲು, ಧೀರಗಂಭೀರ ನಡೆಯಲ್ಲಿ ತೇಜಃಪುಂಜಮೂರ್ತಿಗಳಾದ ಶ್ರೀವ್ಯಾಸರಾಜರು ರಾಜಸಭೆಯನ್ನು ಪ್ರವೇಶಿಸಿದರು. ಅಲ್ಲಿ ಮಂಗಳಗಾನ ಮಾಡುತ್ತಾ ಸುಮಂಗಲೆಯರು ದೇವರ ಪೆಟ್ಟಿಗೆಗೆ ಆರತಿಯೆತ್ತಿ ಗುರುಗಳಿಗೆ ಆರತಿ ಮಾಡಿದರು. ಸಭಾಸದರು ಜಯಕಾರ ಮಾಡುತ್ತಾ ಗುರುಗಳಿಗೆ ಲಾಜಾಪುಷ್ಪವೃಷ್ಟಿ ಮಾಡಿದರು.
ಶ್ರೀವ್ಯಾಸಭಗವಾನರು ರತ್ನಸಿಂಹಾಸನದ ಸಮೀಪಕ್ಕೆ ಬಂದರು. ಸಿಂಹಾಸನದ ಬಲಪಾರ್ಶ್ವದ ಸ್ವರ್ಣಪೀಠದಲ್ಲಿ ದೇವರ ಪೆಟ್ಟಿಗೆಯನ್ನು ಮಂಡಿಸಲಾಯಿತು. ಕೃಷ್ಣದೇವರಾಯ ರಾಜಪೋಷಾಕು, ಕಿರೀಟ-ಕರ್ಣಕುಂಡಲ ಕಂಕಣವಾರಾದಿ ಭೂಷಣಗಳು, ಪಟ್ಟದ ಕತ್ತಿಗಳನ್ನು ಮತ್ತೊಮ್ಮೆ ಸಮರ್ಪಿಸಲು ಅವನ್ನು ಗುರುಗಳು ಸಿಂಹಾಸನದ ಎಡಭಾಗದ ಸ್ವರ್ಣಪೀಠದಲ್ಲಿಟ್ಟು ರಾಜಮುದ್ರಿಕೆಯನ್ನು ಧರಿಸಿದರು.
ತರುವಾಯ ಮೊದಲೇ ಸೂಚಿಸಿದ್ದಂತೆ ಕೃಷ್ಣದೇವರಾಯ ಅವನ ಪತ್ನಿಯರು, ರಾಜಕುಮಾರ, ಅಚ್ಯುತದೇವರಾಯರು ಸಿಂಹಾಸನದ ಹಿಂಭಾಗಕ್ಕೆ ಹೊಂದಿಕೊಂಡು ಮಂಡಿಸಿದರು. ಆಗ ವ್ಯಾಸಮುನೀಂದ್ರರು ಕರದಲ್ಲಿ ದಂಡವನ್ನು ಹಿಡಿದು ಧ್ಯಾನಿಸಿ, ಮಂತ್ರೋಚ್ಚಾರಣ ಮಾಡುತ್ತಾ ಕೃಷ್ಣದೇವರಾಯನ ಪರಿವಾರವೂ ಸೇರಿದಂತೆ ಸಿಂಹಾಸನವೂ ಸೇರಿದಂತೆ ಒಂದೆರಡು ಮಾರು ಅಂತರವಿರುವಂತೆ ಸಿಂಹಾಸನದ ಸುತ್ತಲೂ ಒಂದು ದೊಡ್ಡ ವರ್ತುಲವನ್ನು ಹಾಕಿ ದಿಗ್ಧಂಧನ ಮಾಡಿ ಸಿಂಹಾಸನದ ಎದುರು
ಬಂದು ನಿಂತರು.
ರಾಜಪುರೋಹಿತರ ಸೂಚನೆಯಂತೆ ಸಾಮ್ರಾಜ್ಯದ ಮಹಾಮಂತ್ರಿ ತಿಮ್ಮರಸರು ಶ್ರೀಗುರುಸಾರ್ವಭೌಮರಿಗೆ ಹಸ್ತಲಾಗವ ಕೊಟ್ಟು ಅವರನ್ನು ಕರ್ನಾಟಕ ಸಾಮ್ರಾಜ್ಯ ರತ್ನಸಿಂಹಾಸನದ ಮೇಲೆ ಕೂಡಿಸಿದರು. ಆಗ ೩೧ ಕುಶಾಲ ತೋಪುಗಳು ಗರ್ಜಿಸಿದವು. ಮಂಗಳವಾದ್ಯ ಮೊಳಗಿತು, ಭೇರಿ-ಕಹಳೆಗಳು ಧ್ವನಿಸಿದವು, ಪಂಡಿತರು ವೇದಘೋಷ ಮಾಡಲಾರಂಭಿಸಿದರು. ಹರಿದಾಸರು ಭಕ್ತಿಪರವಶರಾಗಿ ನರ್ತಿಸುತ್ತಾ ಭಗವಂತನ ಮಹಿಮೆಗಳನ್ನು ಪಾಡುತ್ತಿರಲು, ದರ್ಬಾರಿನ ರಾಜನರ್ತಕಿಯರು ನರ್ತಿಸಹತ್ತಿದರು.
ವಂದಿಮಾಗಧರು “ಜಯ ಜಯ ರಾಜಾಧಿರಾಜ ರಾಜಪರಮೇಶ್ವರ ಪ್ರೌಢಪ್ರತಾಪ ಅಪ್ರತಿಮವೀರ ಸರ್ವರಾಯರ ಗಂಡ ಚತುಃಸಮುದ್ರಫಲಕಾಪರ್ಯಂತ ಮಹೀಮಂಡಲಾಧೀಶ್ವರ, ಶಂಖಚಕ್ರಾಂಕುಶಕುಠಾರ ಶರಭಗಂಡಭೇರುಂಡ ಧರಣೀ ವರಾಹಬಿರುದಾಂಕಿತ ದಕ್ಷಿಣಾಪಥ ಪೃಥ್ವಿವಲ್ಲಭ, ವಿಜಯನಗರ ಕರ್ನಾಟಕರತ್ನಸಿಂಹಾಸನಾಧೀಶ್ವರ ಜಯ ಜಯ” ಎಂದು ಸಾಮ್ರಾಜ್ಯ ಬಿರುದಾವಳಿಗಳನ್ನು ಘೋಷಿಸಿ ಅನಂತರ “ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯತ್ವಾದ್ಯಾಮಂದಬಿರುದು- ಬೃಂದಭೂಷಿತ, ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯ ಸಂಸ್ಥಾಪಿತ ದೈತಸಾಮ್ರಾಜ್ಯ ವಿದ್ಯಾಸಿಂಹಾಸನಾಧೀಶ್ವರ, ಶ್ರೀಮೂಲಗೋಪಾಲಕೃಷ್ಣ ಪಟ್ಟಾಭಿರಾಮ ವೇದವ್ಯಾಸಪಾದಪದ್ಮಾರಾಧಕ ಶ್ರೀರಾಜೇಂದ್ರತೀರ್ಥ ಶ್ರೀಪಾದಪೂರ್ವಾದಿ- ಮಠಾಧೀಶ್ವರ, ಸರ್ವತಂತ್ರಸ್ವತಂತ್ರ, ಆಸ್ತಿಕಮತ ಸಂಸ್ಥಾಪನಾಚಾರ್ಯ ಶ್ರೀಶ್ರೀಮದ್ವಾಸರಾಜಗುರುಸಾರ್ವಭೌಮ ಜಯ ಜಯ” ಎಂದು ಗುರುವರರ ಬಿರುದಾವಳಿಗಳನ್ನು ಘೋಷಿಸಿದರು.
ಕಾಷಾಯಾಂಬರ ದ್ವಾದಶನಾಮ ಗಂಧಾಕ್ಷತೆ-ತುಳಸೀಮಾಲಾ ಕಮಲಾಕ್ಷಮಾಲೆಗಳಿಂದಲಂಕೃತರಾಗಿ ದಂಡಕಮಂಡಲುಗಳಿಂದ ಕಂಗೊಳಿಸುತ್ತಾಧರೆಗಿಳಿದು ಬಂದ ಭಗವಾನ್ ದೀನಮಣಿಯಂತೆ ತೇಜಸ್ವಿಗಳಾದ ಶ್ರೀವ್ಯಾಸರಾಜ ಗುರುಸಾರ್ವಭೌಮರು ಮಂದಹಾಸ ವದನಾರವಿಂದರಾಗಿ, ಅಮೃತಸದೃಶ ಕೃಪಾದೃಷ್ಟಿವೀಕ್ಷಣಗಳಿಂದ ಒಮ್ಮೆ ಎಲ್ಲರನ್ನೂ ಅವಲೋಕಿಸಿ ಅಭಯಮುದ್ರೆಯಿಂದ ಆಶೀರ್ವದಿಸಿದರು. ಅಂದಿನ ಆ ವೈಭವ, ಸಂಭ್ರಮ, ಮಂಗಳಕರವಾದ ದೃಶ್ಯವನ್ನು ವರ್ಣಿಸಲಸದಳ! ಅದನ್ನು ಕಂಡ ಅಂದಿನ ಜನರೇ ಪುಣ್ಯವಂತರು, ಭಾಗ್ಯಶಾಲಿಗಳು!
ಅನಂತನ ಕನ್ನಡಸಾಮ್ರಾಜ್ಯದ ನೂತನ ಸಾಮ್ರಾಟರಾಗಿ ಸಿಂಹಾಸನದಲ್ಲಿ ವಿರಾಜಿಸಿದ್ದ ಆ ಯತಿಸಾರ್ವಭೌಮರಿಗೆ ಪದ್ಧತಿಯಂತೆ ಗೌರವಾರ್ಪಣ ಸಮಾರಂಭ ಆರಂಭವಾಯಿತು. ಅಚ್ಯುತದೇವರಾಯ, ಮಹಾಮಂತ್ರಿ, ಅಳಿಯ ರಾಮರಾಜ, ಮಹಾದಂಡನಾಯಕರು ತಮ್ಮ ಖಡ್ಗಗಳನ್ನು ಹಿರಿದು ಶಿರಬಾಗಿ ನಮಸ್ಕರಿಸಿ ರಾಜಭಕ್ತಿಯನ್ನು ಸಮರ್ಪಿಸಿದರು. ತರುವಾಯ ಕ್ರಮವಾಗಿ ಸಚಿವ-ಸಾಮಂತ-ಪೌರಜಾನಪದ ವಿದ್ವಜ್ಜನರು ಗೌರವಸಮರ್ಪಣೆ ಮಾಡಿದ ಮೇಲೆ ದರ್ಬಾರಿನ ಕಾರ್ಯಕ್ರಮ ಪ್ರಾರಂಭವಾಯಿತು.
ಮೊದಲು ಆಸ್ಥಾನ ಮಹಾಪಂಡಿತರೂ, ಸಂಗೀತಭಕ್ಷಿಗಳೂ ಆದ ವೀಣಾಕೃಷ್ಣಭಟ್ಟರು ಸಿಂಹಾಸನದ ಬಲಪಾರ್ಶ್ವದಲ್ಲಿ ಹಾಕಿದ್ದವೇದಿಕೆಯ ಮೇಲೆ ಕುಳಿತು ಪಾಂಡಿತ್ಯಪೂರ್ಣವಾಗಿ ವೀಣಾವಾದನವನ್ನು ಮಾಡಿದರು. ಅನಂತರ ಆಸ್ಥಾನದ ಪ್ರಧಾನ ಗಾಯಕರ ಗಾಯನವಾದ ಮೇಲೆ ರಾಜನರ್ತಕಿಯ ನೃತ್ಯವಾಯಿತು ಅದಾದ ಮೇಲೆ ಅನೇಕ ಕವಿಗಳು ಆಶುಕವಿತೆಗಳಿಂದ ಗುರುವರ್ಯರ ಮಹಿಮೆಗಳನ್ನು ಕೊಂಡಾಡಿದರು.
ಶ್ರೀವ್ಯಾಸರಾಜರ ಕಣ್ಣೂಚನೆಯಂತೆ ಮಹಾಮಂತ್ರಿಗಳು, ರಾಜಭಂಡಾರದ ಅಧಿಕಾರಿಗಳು ದಾನಕ್ಕಾಗಿ ಸಿದ್ಧಪಡಿಸಲಾಗಿದ್ದ ನೂರಾರು ತಾಮ್ರಶಾಸನ, ದಾನಪತ್ರ, ವಸ್ತ್ರಾಭರಣ, ಫಲಪುಷ್ಪಗಳನ್ನಿಡಲಾದ ತಟ್ಟೆಗಳನ್ನು ತೆಗೆದುಕೊಂಡು ಬಂದರು. ಗುಂಡರಾಜರು ದಾನ ಸ್ವೀಕರಿಸುವವರ ಹೆಸರು ಹಿಡಿದು ಕೂಗಿದ ಕೂಡಲೇ ದೇವಾಲಯದ ಅಧಿಕಾರಿಗಳು, ಪಂಡಿತರು, ಶೋತ್ರೀಯ ಬ್ರಾಹ್ಮಣರು, ಕವಿ, ಗಾಯಕ ಮುಂತಾದವರು ಒಬ್ಬೊಬ್ಬರಾಗಿ ಬಂದು ಶ್ರೀಗಳವರಿಂದ ಗ್ರಾಮ, ಅಗ್ರಹಾರ, ಭೂಸ್ವಾಸ್ತ್ರಿ, ಧನಕನಕಾಭರಣವಸ್ತಾದಿಗಳನ್ನು ದಾನಪಡೆದು ಗುರುಗಳಿಗೆ ನಮಿಸಿ ನೂತನ ಚಕ್ರವರ್ತಿಗಳ ಗುಣಗಾನ ಮಾಡಿದರು. ಸಭಾಸದರು ಗುರುಗಳ ಔದಾರ್ಯವನ್ನು ಕೊಂಡಾಡಿ ಕರತಾಡನ ಮಾಡಿ ತಮ್ಮ ಹರ್ಷವನ್ನು ಪ್ರದರ್ಶಿಸಿದರು.
ಆಗ ಆಸ್ಥಾನ ಜ್ಯೋತಿಷಿಗಳು ಮುಂದೆ ಬಂದು ಕುಹುಯೋಗದ ಮುಹೂರ್ತ ಸಮೀಪಿಸಿತೆಂದು ವಿಜ್ಞಾಪಿಸಿದರು. ಶ್ರೀವ್ಯಾಸರಾಜರ ಆಣತಿಯಂತೆ ತಿಮ್ಮರಸರು ಅರಮನೆಯ ರಾಜದ್ವಾರದಿಂದ ಸಿಂಹಾಸನದವರೆಗೆ ಯಾರೂ ಅಡ್ಡ ಇರದಂತೆ ಜನರನ್ನು ಎರಡೂ ಪಾರ್ಶ್ವಗಳಿಗೆ ದೂರಸರಿಸಿ ನಿಲ್ಲಿಸಿದರು ಮತ್ತು ಎಲ್ಲರೂ ಪರಮಾತ್ಮನನ್ನು ಮನದಲ್ಲೇ ಧ್ಯಾನಿಸುತ್ತಾ ಶಾಂತರಾಗಿ ಕುಳಿತಿರಬೇಕೆಂದೂ ಸಭಿಕರಿಗೆ ನಿವೇದಿಸಿದರು. ಕೂಡಲೇ ಸಭೆಯು ನಿಶ್ಯಬ್ದವಾಯಿತು! ಎಲ್ಲರ ಮನಸ್ಸಿನಲ್ಲಿಯೂ ಏನೋ ಕಳವಳ, ಭೀತಿ, ಮುಂದೇನಾಗುವುದೋ ಎಂದು ಚಿಂತೆ, ಆವರೆಗಿನ ಸಂಭ್ರಮದ ವಾತಾವರಣ ಮಾಯವಾಗಿ ಒಂದು ವಿಧ ಅವ್ಯಕ್ತಭಯದಿಂದ ಸಭೆಯು ನಿಶ್ಯಬ್ದವಾಗಿ ಕುಳಿತಿದೆ. ಒಬ್ಬರ ಮುಖದಲ್ಲೂ ಕಳೆಯಿಲ್ಲ, ಆದರೂ ಶ್ರೀವ್ಯಾಸತೀರ್ಥರ ಮಹಿಮೆ ಬಲ್ಲವರಾದ್ದರಿಂದ ಜನರು ಒಂದು ರೀತಿ ಧೈರ್ಯ ತಾಳುತ್ತಿದ್ದಾರೆ. ಹೀಗೆ ವಿಧ ವಿಧ ಮಾನಸಿಕ ತುಮುಲದಿಂದ ಸಭಾಸದರು ಕಂಗಾಲಾಗಿ ಕುಳಿತಿದ್ದಾರೆ.
ಶ್ರೀವ್ಯಾಸತೀರ್ಥರು ತಮ್ಮ ಹಿಂಭಾಗದಲ್ಲಿ ಭಯಾಕ್ರಾಂತರಾಗಿ ನಿಂತಿರುವ ಕೃಷ್ಣದೇವರಾಯ ಮತ್ತು ಪರಿವಾರದವರಿಗೆ ಏನೇ ಆದರೂ ತಮ್ಮ ಹಿಂಭಾಗದಿಂದ ಕದಲದೆ ನಿಂತಿರಬೇಕಂದಾಜ್ಞಾಪಿಸಿ ಎಡಕರವನ್ನು ರಾಜಕಿರೀಟ-ಪಟ್ಟದ ಕತ್ತಿಗಳ ಮೇಲಿಟ್ಟು ಬಲಕರದಲ್ಲಿ ತುಳಸೀಮಾಲೆಯನ್ನು ಹಿಡಿದು ಹೃದಯಕಮಲದಲ್ಲಿ ಭಗವಂತನನ್ನು ಪ್ರತಿಷ್ಠಾಪಿಸಿ ಧ್ಯಾನಿಸುತ್ತಾ ನಿಮೀಲಿತಾರ್ಧನಯನರಾಗಿ ಜಪಮಾಡಲಾರಂಭಿಸಿದರು. ಕುಹುಯೋಗದ ವೇಳೆ ಬಂದೇಬಿಟ್ಟಿತು! ಸಭಾಸದರು ರೆಪ್ಪೆಯನ್ನೂ ಬಡಿಯದೆ ಭಯ-ಕಾತರಗಳಿಂದ ಮೌನವಾಗಿ ಕುಳಿತಿದ್ದಾರೆ!
ಆಗ ಇದ್ದಕ್ಕಿದ್ದಂತೆ ಸಿಡಿಲೆರಗಿದ ಮಹಾಶಬ್ದವಾಗಿ ರಾಜದ್ವಾರದ ಮುಂಭಾಗದಲ್ಲಿ ಕಣ್ಣು ಕೋರೈಸುವಂತಹ ವಿಚಿತ್ರ ಬೆಳಕುಂಟಾಯಿತು! ಆ ಕಠೋರ ಶಬ್ದವನ್ನಾಲಿಸಿ ಜನರು ನಡುಗಹತ್ತಿದರು. ಆ ಬೆಳಕಿನ ಕಾಂತಿಪುಂಜ ಒಂದು ಆಕಾರ ತಾಳಿತು! ಅದೇನೆಂದು ಸರ್ವರೂ ನೋಡುತ್ತಿರುವಂತೆಯೇ ಆ ತೇಜೋರೂಪವು ಮೂರು-ನಾಲ್ಕು ಮಾರು ಉದ್ದವಾದ ದೊಡ್ಡ ಕೃಷ್ಣಸರ್ಪವಾಗಿ ರಾಜದ್ವಾರವನ್ನು ದಾಟಿ ಸಭೆಯನ್ನು ಪ್ರವೇಶಿಸಿ ಸಿಂಹಾಸನದತ್ತ ರಭಸದಿಂದ ಮುನ್ನುಗ್ಗಿತು! ಕುಹುಯೋಗ ವಿಪತ್ತು ಸರ್ಪರೂಪವಾಗಿ ಕರ್ತವ್ಯ ನಿರ್ವಹಿಸಲು ಧಾವಿಸಿತು!
ಶ್ರೀವ್ಯಾಸಭಗವಾನರು ಈ ಆಪತ್ತಿನಿಂದ ಪಾರಾಗುವರೇ ? ಕೃಷ್ಣದೇವರಾಯನನ್ನು ಕಾಪಾಡುವರೇ ? ಕನ್ನಡ ಸಾಮ್ರಾಜ್ಯದ ವಿಪತ್ತು ಪರಿಹಾರವಾಗಿ ಜನತೆಗೆ ಮಂಗಳವಾಗುವುದೇ ? ಮುಂತಾಗಿ ಜನರು ಚಿಂತಾಕ್ರಾಂತರಾಗಿ ಕುಹುಯೋಗರೂಪದ ಆ ಭಯಂಕರ ಸರ್ಪವನ್ನೇ ನೆಟ್ಟದೃಷ್ಟಿಯಿಂದ ನಿರೀಕ್ಷಿಸುತ್ತಿದ್ದಾರೆ!
ರಭಸದಿಂದ ಮುಂದುವರೆದ ಆ ಕೃಷ್ಣಸರ್ಪವು ಸಿಂಹಾಸನದ ಸಮೀಪಕ್ಕೆ ಬಂದ ಕೂಡಲೇ ಶ್ರೀವ್ಯಾಸಭಗವಾನರ ಮುಖದಿಂದ “ಸರ್ಪರಾಜ! ತತ್ತ್ವ ತಿಷ್ಯ!” ಎಂಬ ಗಂಭೀರಧ್ವನಿಯು ಹೊರಹೊಮ್ಮಿತು! ಆಶ್ಚರ್ಯ, ಆ ಸರ್ಪವು ತಟ್ಟನೆ ಅಲ್ಲಿಯೇ ನಿಂತುಬಿಟ್ಟಿತು! ಸ್ವಲ್ಪ ಸಮಯವಾದ ಮೇಲೆ ಸರ್ಪವು ಕೋಪದಿಂದ ಪೂತ್ಕರಿಸುತ್ತಾ ಮುಂದೆ ಬರಲು ಯತ್ನಿಸಿತು. ಇದೇನು ವಿಚಿತ್ರ? ಸರ್ಪವು ಎಷ್ಟು ಪ್ರಯತ್ನಿಸಿದರೂ ಸಿಂಹಾಸನದ ಮುಂದೆ ಶ್ರೀವ್ಯಾಸರಾಜರು ಹಾಕಿದ್ದ ಗೆರೆಯನ್ನು ದಾಟಿಹೋಗಲು ಅಸಮರ್ಥವಾಯಿತು. ಸರ್ಪ ಸುತ್ತಲೂ ತಿರುಗುತ್ತಿದೆ. ಪೂತ್ಕರಿಸಿ ಹೆಡೆ ಅಪ್ಪಳಿಸುತ್ತಿದೆ! ಆದರೆ ಸಿಂಹಾಸನದ ಬಳಿ ಸುಳಿಯಲೂ ಅಶಕ್ತವಾಗಿದೆ! ಈ ಪರಮಾದ್ಭುತವನ್ನು ಕಂಡು ವಿಸ್ಮಿತರಾಗಿ ಸರ್ವರೂ ಮನದಲ್ಲೇ ಗುರುಗಳ ತಪಶಕ್ತಿ-ಮಹಿಮೆಗಳನ್ನು ಕೊಂಡಾಡಹತ್ತಿದರು. ಸರ್ಪವು ದೊಡ್ಡದಾಗಿಹೆಡೆಬಿಚ್ಚಿ ಕೋಪದಿಂದ ನೆಲಕ್ಕೆ ಹೆಡೆಯಪ್ಪಳಿಸುತ್ತಿದೆ! ಆಗ ಶ್ರೀವ್ಯಾಸತೀರ್ಥರಿಗೆ ಏನೋ ಪ್ರೇರಣೆಯಾದಂತಾಯಿತು. ಕೂಡಲೇ ಮಂದಾಸ ಬೀರುತ್ತಾ ಶ್ರೀಹರಿ-ವಾಯುಗಳನ್ನು ಧ್ಯಾನಿಸಿ ತಾವು ಹೊಂದಿದ್ದ ಕಾವೀಶಾಟಿಯನ್ನು ಸರ್ಪರಾಜನ ಮುಂಭಾಗಕ್ಕೆ ಎಸೆದು “ಕರ್ತವ್ಯಂ ನಿರ್ವಾಹ ಗಚ್ಛ” ಎಂದು ಉದ್ಧರಿಸಿದರು. ಆ ತಕ್ಷಣವೇ ಆ ಸರ್ಪವು ಸಿಟ್ಟಿನಿಂದ ಪೂತ್ಕರಿಸಿ ತನ್ನ ಹೆಡೆಯನ್ನು ಕಾವಿಯ ಶಾಟಿಯ ಮೇಲೆ ಅಪ್ಪಳಿಸಿ ದಂಶನ ಮಾಡಿತು!
ಅದ್ಭುತ! ಅಪೂರ್ವ!! ಪರಮಾಶ್ಚರ್ಯ!!! ಸರ್ಪ ದಂಶಿತವಾದ ಆ ಕಾವೀಶಾಟಿಯು ಇದ್ದಕ್ಕಿದ್ದಂತೆ ಅಗ್ನಿಜ್ವಾಲೆಯಿಂದ ಧಗಧಗನೆ ಉರಿದು ಭಸ್ಮವಾಗಿ ಹೋಯಿತು!! ಆ ಕೂಡಲೇ ಮಹಾಸರ್ಪವು ಅಲ್ಲಿಂದ ಬಂದ ದಾರಿಯಲ್ಲಿಯೇ ಹಿಂದಿರುಗಿ ರಾಜದ್ವಾರದ ಹತ್ತಿರ ವಿಚಿತ್ರ ಕಾಂತಿ ಬೀರಿ ಅದೃಶ್ಯವಾಯಿತು!
ಶ್ರೀವ್ಯಾಸರಾಜರು ನಗೆಮೊಗದಿಂದ “ಸಭಾಸದರೇ, ಶ್ರೀಹರಿವಾಯುಗಳು ಬಂದಿದ್ದ ವಿಪತ್ತನ್ನು ಪರಿಹರಿಸಿದರು. ಕುಹುಯೋಗದಿಂದಾಗಬೇಕಿದ್ದ ಮಹಾಸಂಕಟ-ಆಪತ್ತುಗಳ ಅವಧಿ ಮುಗಿಯಿತು. ನಮ್ಮನ್ನು, ಕೃಷ್ಣದೇವರಾಯನನ್ನು ಶ್ರೀಮೂಲಗೋಪಾಲಕೃಷ್ಣ ಸಂರಕ್ಷಿಸಿದ. ಇನ್ನು ಭಯವಿಲ್ಲ” ಎಂದು ಅಪ್ಪಣೆ ಕೊಡಿಸಿದರು.
ಅದುವರೆಗೆ ಭಯ, ಆತಂಕ, ಆಶ್ಚರ್ಯಗಳಿಂದ ಮೂಕವಿಸ್ಮಿತರಾಗಿ ಕುಳಿತಿದ್ದ ಸಭಿಕರೆಲ್ಲರೂ ಆನಂದತುಂದಿಲರಾಗಿ “ಅದ್ಭುತ, ಅಸದೃಶ, ಮಹಾಪವಾಡ, ಮಹಾತ್ಮರು, ತಪೋನಿಧಿಗಳು” ಮುಂತಾಗಿ ಉದ್ಧರಿಸಿದರು. ಅಲ್ಲಿ ನೆರೆದಿದ್ದ ಸುಜನರೆಲ್ಲರೂ “ಶ್ರೀವ್ಯಾಸಮುನೀಂದ್ರರಿಗೆ ಜಯವಾಗಲಿ, ಕೃಷ್ಣದೇವರಾಯರಿಗೆ ಜಯವಾಗಲಿ” ಎಂದು ಜಯಧ್ವನಿಗೈದರು, ಆ ಮಂಗಳ ನಿನಾದ ದಿಕ್ಕಟಗಳಲ್ಲಿ ಪ್ರತಿಧ್ವನಿಸಿತು.
ಸಿಂಹಾಸನದ ಹಿಂದೆ ನಿಂತು ಎಲ್ಲವನ್ನೂ ಗಮನಿಸುತ್ತಿದ್ದ ಕೃಷ್ಣದೇವರಾಯ ಧಾವಿಸಿ ಬಂದು ಗುರುಗಳ ಪಾದಗಳ ಮೇಲೆ ಶಿರವಿರಿಸಿ “ತಮ್ಮ ವಾತ್ಸಲ್ಯ ಅಸಾಧಾರಣ ಗುರುದೇವ. ಈ ಬಡ ಶಿಷ್ಯನನ್ನು ಸಂರಕ್ಷಿಸಿದ ತಮಗೆ ನಾನು ಚಿರಋಣಿ- ಯಾಗಿದ್ದೇನೆ. ತಮ್ಮ ಈ ಉಪಕಾರವು ಅಖಂಡ ಸಾಮ್ರಾಜ್ಯದ ಪ್ರಜಾನೀಕವು ಎಂದೆಂದಿಗೂ ತೀರಿಸಲಾಗದಂತಹುದು. ಮಹಾಸ್ವಾಮಿ, ನಿಮಗೆ ಅನಂತ ವಂದನೆಗಳು” ಎಂದು ಕಣ್ಣೀರು ಸುರಿಸುತ್ತಾ ಗದ್ಗದ ಕಂಠದಿಂದ ವಿಜ್ಞಾಪಿಸಿದ. ಮಹಾಮಂತ್ರಿ ತಿಮ್ಮರಸು ಪರಿವಾರದವರಿಗಾದ ಆನಂದ ಅವರ್ಣನೀಯ! ಮಹಾವಿಪತ್ತು ಪರಿಹಾರವಾಗಿ ಎಲ್ಲವೂ ಮಂಗಳಕರವಾಗಿ ಮುಗಿದಿದ್ದರಿಂದ ಸಂತೋಷ-ಸಂಭ್ರಮ, ಭಕ್ತಿ-ಶ್ರದ್ಧಾದಿಗಳಿಂದ ಗುರುಗಳಿಗೆ ನಮಸ್ಕರಿಸಿ ತಿಮ್ಮರಸು “ನಮ್ಮ ಸಾಮ್ರಾಜ್ಯದ ಮೇಲೆ, ಕೃಷ್ಣದೇವರಾಯರಲ್ಲಿ ಅನುಗ್ರಹ ಮಾಡಲು ಸ್ವತಃ ವಿಪತ್ತಿಗೆ ಸಿಲುಕಿದ್ದ ತಮ್ಮ ಅಗಾಧ ತಪಶಕ್ತಿ, ಮಹಿಮೆಗಳನ್ನು ಪ್ರದರ್ಶಿಸಿ ತಾವು ದೊಡ್ಡ ಪವಾಡವನ್ನೇ ಪ್ರದರ್ಶಿಸಿದ್ದೀರಿ. ಗುರುದೇವ, ನಿಮ್ಮಿ ಕಾರುಣ್ಯಕ್ಕೆ ಎಣೆಯಿಲ್ಲ. ಇಕೋ ಕನ್ನಡ ಜನತೆಯ ಪರವಾಗಿ ನನ್ನ ಅನಂತ ನಮಸ್ಕಾರಗಳನ್ನು ಸ್ವೀಕರಿಸಿರಿ” ಎಂದರು.
ಆಗ ಶ್ರೀಗಳವರು ಕೃಷ್ಣದೇವರಾಯ ತಿಮ್ಮರಸರ ತಲೆಯನ್ನು ಪ್ರೀತಿ-ವಾತ್ಸಲ್ಯಗಳಿಂದ ಸ್ವೀಕರಿಸಿ “ಪ್ರಿಯ ಕೃಷ್ಣ, ತಿಮ್ಮರಸರೇ, ಇದೆಲ್ಲವೂ ಭಗವಂತನ ಅನುಗ್ರಹವೆಂದು ತಿಳಿಯಿರಿ. ಇದರಲ್ಲಿ ನಮ್ಮದೆಂಬುದೇನೂ ಇಲ್ಲ. ಎಲ್ಲವೂ ಆ ಮಹಾನುಭಾವನ ಸಂಕಲ್ಪದಂತೆಯೇ ನೆರವೇರುವುದು. “ಸಕಲ ಗ್ರಹಬಲ ನೀನೇ ಸರಸಿಜಾಕ್ಷ” ಎಂದು ನಮ್ಮ ಪುರಂದರದಾಸರು ಹಾಡುವುದನ್ನು ನೀವು ಕೇಳಿಲ್ಲವೇ ? ಅದೂ ಅಲ್ಲದೆ
ಏಕಾದಶಸೇ ಗೋವಿಂದೇ ಸರ್ವೆಕಾದಶೇ ಸ್ಥಿತಾಃ |
ಕಿಂ ಕುರ್ವತಿ ಗ್ರಹಾಸರ್ವೆ ಶನ್ಯರ್ಕಾಂಗಾರಕಾದಯಃ ||
ಸಕಲ ಗ್ರಹಗಳಿಗೂ ಬಲಪ್ರದನಾದ ಮಹಾಪ್ರಭು ಶ್ರೀಹರಿಯ ಹನ್ನೊಂದನೆಯ ಸ್ಥಾನವಾದ ಮನಸ್ಸಿನಲ್ಲಿ ವಿರಾಜಿಸುತ್ತಿರಲು ಶನಿ, ಸೂರ್ಯ, ಅಂಗಾರಕಾದಿಗ್ರಹಗಳು ಏನು ತಾನೇ ಮಾಡಬಲ್ಲವು ? ಶ್ರೀಗೋವಿಂದನನ್ನು ಸದಾ ಹೃದಯಕಮಲದಲ್ಲಿ ಪ್ರತಿಷ್ಠಾಪಿಸಿ ಧ್ಯಾನಮಗ್ನರಾದ ಅವರ ದಾಸರಿಗೆ ಬಂದವ ವಿಪತ್ತುಗಳೆಲ್ಲವೂ ಅವನ ಅನುಗ್ರಹದಿಂದ ಪರಿಹಾರವಾಗಿ ಮಂಗಳವಾಗುವುದೆಂಬುದನ್ನು ಶ್ರೀಹರಿಯು ಈ ಒಂದು ಘಟನೆಯಿಂದ ತೋರಿಸಿಕೊಟ್ಟಿದ್ದಾನೆ” ಎಂದು ಅಪ್ಪಣೆ ಕೊಡಿಸಿದರು.
ಆನಂತರ ಸಭಾಸದರೆಲ್ಲರೂ ಹರ್ಷನಿರ್ಭರರಾಗಿ ಶ್ರೀವ್ಯಾಸರಾಜರ ತಪಸ್ಸು, ಮಹಿಮೆ, ಔದಾರ್ಯ, ಕಾರುಣ್ಯ-ತ್ಯಾಗ, ಭಗವದನುಗ್ರಹಕ್ಕೆ ಪಾತ್ರರಾಗುವಿಕೆ ಮುಂತಾದ ಸದ್ಗುಣಗಳನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಾ ತಮ್ಮ ತಮ್ಮ ಗೃಹಗಳಿಗೆ ತೆರಳಿದರು.
ಮರುದಿನವೂ ಶ್ರೀವ್ಯಾಸತೀರ್ಥರು ಸಿಂಹಾಸನವನ್ನೇರಿ ದರ್ಬಾರು ನೆರವೇರಿಸಿ ಸಿಂಹಾಸನದಿಂದಿಳಿದು ಕೃಷ್ಣದೇವರಾಯನನ್ನು ಹತ್ತಿರ ಕರೆದು “ಕೃಷ್ಣ! ನಾವು ಅಂದು ಎರಡು ನಿಬಂಧನೆಗಳಿಂದ ಸಾಮ್ರಾಜ್ಯದಾನ ಸ್ವೀಕರಿಸುವುದಾಗಿ ಹೇಳಿದ್ದು ಜ್ಞಾಪಕವಿದೆಯಷ್ಟೆ?” ಎಂದೆನಲು ಕೃಷ್ಣದೇವರಾಯ ಕರಜೋಡಿಸಿ “ಅಹುದು ಗುರುದೇವ, ನೆನಪಿದೆ” ಎಂದನು. ಆಗ ಶ್ರೀಗಳವರು “ಕೃಷ್ಣ, ನಮ್ಮ ಮೊದಲ ನಿಬಂಧನೆಯನ್ನು ನೀನು ಪೂರೈಸಿದ್ದೀಯೆ, ಈಗ ನಮ್ಮ ಎರಡನೆಯ ಕರಾರನ್ನೂ ಪೂರೈಸಬೇಕು” ಎಂದರು.
ಕೃಷ್ಣ: ಮಹಾಸ್ವಾಮಿ, ಅಪ್ಪಣೆಯಾಗಲಿ, ತಮ್ಮ ಕರಾರನ್ನು ಸಂತೋಷದಿಂದ ಪೂರ್ಣಗೊಳಿಸಿ ಕೃತಾರ್ಥನಾಗುತ್ತೇನೆ. ಶ್ರೀವ್ಯಾಸರಾಜರು “ಸಾರ್ವಭೌಮ! ಈ ಮಹಾಸಾಮ್ರಾಜ್ಯವನ್ನು ನೀನು ಈಗ ಮತ್ತೆ ನಮ್ಮಿಂದ ದಾನ ಪಡೆದು ಪರಿಪಾಲಿಸಬೇಕು! ಇದೇ ನಮ್ಮ ಎರಡನೆಯ ನಿಬಂಧನೆ!” ಎಂದರು. ಅದನ್ನು ಕೇಳಿ ಎಲ್ಲರೂ ಅಚ್ಚರಿಯಿಂದ ಗುರುಗಳ ತ್ಯಾಗಬುದ್ಧಿ, ಸಾಮ್ರಾಜ್ಯ ಹಿತಾಕಾಂಕ್ಷೆ, ರಾಯನಲ್ಲಿರುವ ಅಪಾರ ವಾತ್ಸಲ್ಯಗಳನ್ನು ಸ್ತುತಿಸಿದರು. ತಿಮ್ಮರಸಂತೂ ಆನಂದಾಬಿಯಲ್ಲಿ ವಿವರಿಸಹತ್ತಿದನು.
ಆಗ ಕೃಷ್ಣದೇವರಾಯನು ವಿಸ್ಮಿತನಾಗಿ “ಗುರುದೇವ, ಇದೇನು ಹೇಳುತ್ತಿರುವಿರಿ? ದತ್ತಾಪಹಾರ ದೋಷಕ್ಕೆ ನಾನು ಗುರಿಯಾಗಬೇಕೆ ? ಬೇಡ, ಮಹಾಸ್ವಾಮಿ ಆ ಪಾಪಕ್ಕೆ ನನ್ನನ್ನು ಗುರಿಪಡಿಸಬೇಡಿ. ನಾನು ಮನಃಪೂರ್ವಕವಾಗಿ ದಾನಮಾಡಿದ ಈ ಸಾಮ್ರಾಜ್ಯ ತಮ್ಮದು!” ಎಂದನು.
ವ್ಯಾಸಮುನಿಗಳು ನಸುನಕ್ಕು “ರಾಜೇಂದ್ರ, ನಾವು ಸನ್ಯಾಸಿಗಳು ನಮಗೇಕೆ ಸಾಮ್ರಾಜ್ಯ? ಶ್ರೀಹರಿಯ ಪ್ರೇರಣೆಯಂತೆ ಈ ನಾಡನ್ನೂ, ನಿನ್ನನ್ನೂ ಸಲಹಲೆಂದೇ ಈ ದಾನವನ್ನು ಸ್ವೀಕರಿಸಿದೆವು. ಶ್ರೀಹರಿಯು ನಮ್ಮ ಕರ್ತವ್ಯವನ್ನು ಸಫಲಗೊಳಿಸಿ, ಕೀರ್ತಿ ನೀಡಿದ್ದಾನೆ. ಅದರಿಂದಲೇ ನಾವು ತೃಪ್ತರಾಗಿದ್ದೇವೆ. ನೀನು ನಮ್ಮ ಕರಾರನ್ನು ನೆರವೇರಿಸುವುದಾಗಿ ಪ್ರಮಾಣ- ಬದ್ಧನಾಗಿದ್ದೀಯೆ. ನೀನು ಸಾಮ್ರಾಜ್ಯವನ್ನು ಸ್ವೀಕರಿಸಲೇಬೇಕು” ಎಂದೆನಲು. ರಾಯನು “ಗುರುದೇವ! ದಯಮಾಡಿ ನನ್ನನ್ನು ಬಲಾತ್ಕರಿಸಬಾರದು. ತಾವೇ ಸಾಮ್ರಾಜ್ಯವನ್ನಾಳಬೇಕು” ಎಂದನು.
ಶ್ರೀವ್ಯಾಸರಾಯರು “ನಮ್ಮದು ಜ್ಞಾನಸಾಮ್ರಾಜ್ಯ! ಅದನ್ನು ಶ್ರೀಹರಿಯ ಸಂಕಲ್ಪವಿದ್ದಷ್ಟು ದಿನ ಪಾಲಿಸುತ್ತೇವೆ, ಇದು ಲೌಕಿಕ ಸಾಮ್ರಾಜ್ಯ, ಸನ್ಯಾಸಿಗಳಿಗೆ ಇದು ತಕ್ಕುದಲ್ಲ, ನೀನೇ ಹೇಳಿದಂತೆ ದಾನಪಡೆದ ಈ ಸಾಮ್ರಾಜ್ಯ ನಮ್ಮದೇ ನಿಜ, ನಮ್ಮದಾದ ಇದನ್ನು ನಿನಗೆ ಸಂತೋಷದಿಂದ ಶ್ರೀಹರಿವಾಯುಗಳ ಪ್ರೇರಣೆಯಂತೆ ಮತ್ತೆ ನೀಡುತ್ತಿದ್ದೇವೆ. ಇಲ್ಲಿ ದತ್ತಾಪಹಾರ ದೋಷದ ಪ್ರಶ್ನೆಯೇ ಇಲ್ಲ. ನಾವು ಅನುಗ್ರಹಿಸಿ ಕೊಡುವ ಸಾಮ್ರಾಜ್ಯವನ್ನಾಳಿ ಅಪಾರ ಕೀರ್ತಿ ಗಳಿಸು, ಇದು ನಮ್ಮದಲ್ಲ: ಶ್ರೀಹರಿವಾಯುಗಳ ಆಜ್ಞೆಯೆಂದು ತಿಳಿ” ಎಂದಾಜ್ಞಾಪಿಸಿ ತಾವೇ ಸ್ವತಃ ಸಂಕಲ್ಪವನ್ನು ಹೇಳಿ ಮಂತ್ರೋದಕ ಧಾರಾಪುರಸ್ಕರವಾಗಿ ಸಾಮ್ರಾಜ್ಯ ದಾನ ಮಾಡಿ ರತ್ನಕಿರೀಟವನ್ನು ಅವನ ಶಿರದಲ್ಲಿಟ್ಟು ರಾಜಖಡ್ಗವನ್ನೂ ಕೊಟ್ಟು, ರಾಜಮುದ್ರಿಕೆ- ಯನ್ನು ಬೆರಳಿಗೆ ತೊಡಿಸಿ ಕರಪಿಡಿದು ಸಿಂಹಾಸನದಲ್ಲಿ ಕೂಡಿಸಿ ಆಶೀರ್ವದಿಸಿ “ಕೃಷ್ಣದೇವರಾಯ ಸಾರ್ವಭೌಮನಿಗೆ ಜಯವಾಗಲಿ!” ಎಂದು ಸಂತಸದಿಂದ ಘೋಷಿಸಿದರು.
ಆಗ ರಾಜಸಭೆಯಲ್ಲಿದ್ದವರೆಲ್ಲರೂ ಉಚ್ಚಕಂಠದಿಂದ “ಕೃಷ್ಣದೇವರಾಯ ಚಕ್ರವರ್ತಿಗಳಿಗೆ ಜಯವಾಗಲಿ” ಎಂದು ಹರ್ಷಧ್ವನಿಗೈದರು. ಮಹಾಮಂತ್ರಿ, ಸೈನ್ಯಾಧಿಪತಿ, ಸಚಿವಮಂಡಲಿ, ರಾಜಬಂಧುಗಳು ಹಾಗೂ ಸಮಸ್ತ ಪ್ರಜರು ಜನಸಾಮಾನ್ಯ ಕೃಷ್ಣದೇವರಾಯನಿಗೆ ಬಂದ ವಿಪತ್ತನ್ನು ಪರಿಹರಿಸಿ, ಮತ್ತೆ ರಾಜನಿಗೆ ಸಾಮ್ರಾಜ್ಯವನ್ನು ಒಪ್ಪಿಸಿಕೊಟ್ಟ ಅಪೂರ್ವ ತ್ಯಾಗಶೀಲರಾದ ಶ್ರೀವ್ಯಾಸರಾಯರ ಜಗದ್ವಂದ್ಯಮಹಿಮಾತಿಶಯವನ್ನು ಪರಿಪರಿಯಿಂದ ಶ್ಲಾಘಿಸಿದರು.
ಕೆಲದಿನಗಳುರುಳಿದವು. ಶ್ರೀವ್ಯಾಸಯತಿಪುಂಗವರೇನೋ ಸಾಮಾಜ್ಯವನ್ನು ಕೃಷ್ಣದೇವರಾಯನಿಗೊಪ್ಪಿಸಿಕೊಟ್ಟು ನಿಶ್ಚಿಂತರಾದರು. ಆದರೆ ಅದರಿಂದ ರಾಯನ ಮನಸ್ಸು ಕದಡಿತು. ಮನಸ್ಸಿಗೆ ಸಮಾಧಾನವಿಲ್ಲವಾಯಿತು. ಏನೋ ಅಪರಾಧ ಮಾಡಿದವನಂತೆ ಚಡಪಡಿಸಹತ್ತಿದನು. ಪರಮಪೂಜ್ಯ ಗುರುಗಳು ಮಂಡಿಸಿದ ಸಿಂಹಾಸನದ ಮೇಲೆ ಕುಳಿತು ರಾಜ್ಯವಾಳಲು ಅವನ ಮನಸ್ಸು ಒಪ್ಪದಾಯಿತು. ಬಹುವಿಧಾವಾಗಿ ಆಲೋಚಿಸಿ ಕೊನೆಗೊಂದು ದಿನ ತನ್ನ ಮಗನಿಗೆ ಸಾಮ್ರಾಜ್ಯಾಭಿಷೇಕ ಮಾಡಿಬಿಟ್ಟರೆ ಈ ಎಲ್ಲ ಚಿಂತೆ ದೂರವಾಗುವುದೆಂದು ಭಾವಿಸಿ ತನ್ನ ಮನದಳಲನ್ನು ಮಹಾಮಂತ್ರಿ ತಿಮ್ಮರಸರಲ್ಲಿ ಪ್ರಸ್ತಾಪಿಸಿದನು. ಆಗ ತಿಮ್ಮರಸು “ಗುರುಗಳು ನಿಮಗೆ ಸಾಮ್ರಾಜ್ಯವನ್ನು ಒಪ್ಪಿಸಿಕೊಟ್ಟಿದ್ದಾರೆ. ಅದನ್ನು ನಿರಾಕರಿಸಿ ಬೇರೆ ಯೋಚನೆ ಮಾಡುವುದು ಶುಭಾವಹವಲ್ಲ” ಎಂದು ಸ್ಪಷ್ಟವಾಗಿ ತಿಳಿಸಿದರು. ಮಹಾಮಂತ್ರಿಗಳ ಮಾತು ರಾಯನಿಗೆ ರುಚಿಸಲಿಲ್ಲ. ಸಹೋದರ ಅಚ್ಯುತದೇವರಾಯ, ಅಳಿಯ ರಾಮರಾಯ ಮುಂತಾದ ಆತ್ಮೀಯರಲ್ಲಿ ತನ್ನ ಅಭಿಪ್ರಾಯವನ್ನು ಮಂಡಿಸಿ ರಾಜಕುಮಾರ ತಿರುಮಲರಾಯನಿಗೆ ಪಟ್ಟಾಭಿಷೇಕ ಮಾಡಿ ರಾಜ್ಯಾಡಳಿತದ ಹೊಣೆಯನ್ನು ಅಚ್ಯುತರಾಯ-ರಾಮರಾಯರಿಗೆ ವಹಿಸಿಕೊಟ್ಟು ತಾನು ಮೇಲ್ವಿಚಾರಕನಾಗಿದ್ದು ಸಾಮ್ರಾಜ್ಯರಥವು ಸುಸೂತ್ರವಾಗಿ ಸಾಗುವಂತೆ ಮಾಡಬೇಕೆಂಬ ತನ್ನ ಮನದಾಸೆಯನ್ನು ತಿಳಿಸಲು, ಅವರು ರಾಯನ ಅಭಿಪ್ರಾಯಕ್ಕೆ ಸಮ್ಮತಿಸಿದರು.
ಕೃಷ್ಣದೇವರಾಯ ಒಂದು ಶುಭಮುಹೂರ್ತದಲ್ಲಿ೪-೫ ವರ್ಷದ ತನ್ನ ಕುಮಾರನನ್ನು ತಿರುಮಲದೇವಮಹಾರಾಯ ಎಂಬ ಅಭಿದಾನದಿಂದ ಸಿಂಹಾಸನದಲ್ಲಿ ಕೂಡಿಸಿ ಪಟ್ಟಾಭಿಷೇಕ ಮಾಡಿದನು.
ಆ ಸಾಮ್ರಾಜ್ಯಾಭಿಷೇಕ ಶುಭಪ್ರಸಂಗದಲ್ಲಿ ಕೃಷ್ಣದೇವರಾಯನು ತಿರುಪತಿ ಮುಂತಾದ ದೇವಸ್ಥಾನಗಳಿಗೆ ಅನೇಕ ಗ್ರಾಮಭೂಮಿಗಳನ್ನು ದತ್ತಿಬಿಟ್ಟನು. ಇದರಂತೆ ತಾನು ಪ್ರತಾಪರುದ್ರಗಜಪತಿಯನ್ನು ಜಯಿಸಿದಾಗ ತಾನು ಸಂಪಾದಿಸಿದ್ದ ಕಂದಕೂರು ಮುಂತಾದ ಗ್ರಾಮಗಳನ್ನೂ, ಅನೇಕ ಭೂಸ್ವಾಸ್ತಿಗಳನ್ನೂ ಶ್ರೀವ್ಯಾಸರಾಜಸ್ವಾಮಿಗಳವರಿಗೆ ದಾನಮಾಡಿ ಕೃತಾರ್ಥನಾದನು.