|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ನಾಲ್ಕನೆಯ ಉಲ್ಲಾಸ

ಶ್ರೀವ್ಯಾಸರಾಜಯತಿಸಾರ್ವಭೌಮರು

೪೮, ರತ್ನಾಭಿಷೇಕ

ಮಹಾಕವಿ ಸೋಮನಾಥನು ರಚಿಸಿರುವ “ಶ್ರೀವ್ಯಾಸಯೋಗಿಚರಿತೆ'ಯಲ್ಲಿ ಕೃಷ್ಣದೇವರಾಯನು ಶ್ರೀವ್ಯಾಸರಾಜ- ಗುರುಸಾರ್ವಭೌಮರಿಗೆ ನೆರವೇರಿಸಿದ ರತ್ನಾಭಿಷೇಕ” ಪ್ರಕರಣವು ಒಂದು ಮಹೋನ್ನತ ರಸಘಟ್ಟ, ಸಮಗ್ರ ಕಾವ್ಯದ ಹೃದಯದಂತಿರುವ ಈ ಸರಸಬಂಧುರ ಸಂದರ್ಭವು ಕಾವ್ಯಪರಿಶೀಲನ ಪಟುಗಳ ಮನಸ್ಸನ್ನಾಕರ್ಷಿಸಿ ಅವರ ಚಿತ್ತಭಿತ್ತಿಯಲ್ಲಿ ಅಚ್ಚಳಿಯದ ಮುದ್ರೆಯನ್ನೊತ್ತುವುದು. ಅನೇಕ ಶಬ್ದಾರ್ಥಾಲಂಕಾರಗಳಿಂದ ಪರಿಪೂರ್ಣವಾದ ರಸವಂತಿಕೆಗಳಂತಿರುವ ಸುಮನೋಹರ ಲಲಿತಪದಪುಂಜಗಳಿಂದ ರಂಜಿಸುವ ಈ ಚಂಪೂಕಾವ್ಯದ ಸೊಬಗನ್ನು ಓದಿ ಆನಂದಿಸಬೇಕೇ ವಿನಃ ಅದನ್ನು ವರ್ಣಿಸಿ ತಿಳಿಸಲು ಶಬ್ದಸಂಪತ್ತೇ ಸಾಲದೇನೋ ಎನಿಸುವುದು. 

ರತ್ನಾಭಿಷೇಕ ಪ್ರಕರಣದ ಹಿನ್ನೆಲೆ ಮತ್ತು ವಿಷಯನಿರೂಪಣಾಕ್ರಮವು ಅತಿರಮಣೀಯವಾಗಿದ್ದು ಸಹೃದಯ- ಹೃದಯಾಹ್ಲಾದಕಾರಿಯಾಗಿರುವುದಲ್ಲದೆ, ಮಹಾಕವಿಯ ಕಾವ್ಯರಚನಾಕೌಶಲವು ಸುವ್ಯಕ್ತವಾಗುವುದು. ಸಮಗ್ರ ಕಾವ್ಯವನ್ನು ಚೆನ್ನಾಗಿ ಪರಿಶೀಲಿಸಿದಾಗ ಅತ್ಯಂತ ಕುಶಲ ಕಲೆಗಾರನೊಬ್ಬನು ವಿವಿಧ ವರ್ಣರಂಜಿತ ಹಾಗೂ ಸುವರ್ಣ ನೂಲುಗಳನ್ನಳವಡಿಸಿಕೊಂಡು ತನ್ನೆಲ್ಲಾ ಚಾತುರ್ಯವನ್ನೂ ವಿನಿಯೋಗಿಸಿ ಸುರಸರಸ್ವತಿಗೆ ಉಡುಗೊರೆಯಾಗಿ ಹೆಣೆದ ಅಪೂರ್ವ ಪಟ್ಟೆಪೀತಾಂಬರದಂತೆ ಈ ವ್ಯಾಸಯೋಗಿಚರಿತೆಯು ಕಾವ್ಯದೇವಿಯ ಉಪಾಸಕರ - ನಿರೀಕ್ಷಕರ ಕಣ್ಮನಗಳನ್ನು ಸೆಳೆದು ಹೃದಯವನ್ನು ತಣಿಸಿ, ಮಹದಾನಂದವನ್ನು ತಂದೀಯುವುದರಲ್ಲಿ ಸಂದೇಹವಿಲ್ಲ. 

ಸೋಮನಾಥನ ಈ ಚಂಪೂಕಾವ್ಯವು ಸಾಹಿತ್ಯಾಕಾಶದ ಧ್ರುವತಾರೆಯಂತೆ ಸದಾತನವಾಗಿ ಬೆಳಗಿ ಉಳಿಯುವ ಉತ್ತಮ ಕೃತಿ ಎಂಬುದನ್ನು ದೃಢಪಡಿಸುವುದಲ್ಲದೆ ಮತ್ತೆ ಮತ್ತೆ ಪರಿಶೀಲಿಸಿದಂತೆಲ್ಲಾ ನಿತ್ಯನೂತನವಾಗಿ, ಹೊಸ ಹೊಸ ಭಾವಬಂಧುರವಾಗಿ, ಅರ್ಥವೈಶಿಷ್ಟ್ಯಗಳಿಂದ ವಿಶಿಷ್ಟವಾಗಿ ಗರಿಷ್ಟವಾಗಿ ಕಾವ್ಯದ ವೈಶಿಷ್ಟ್ಯವನ್ನು ಸ್ಪಷ್ಟಗೊಳಿಸುವುದು. 

ಕಾವ್ಯದ ಲಕ್ಷಣವನ್ನು ಹೇಳುವಾಗ “ಕಾವ್ಯಂ ಯಶಸೇ ಅರ್ಥಕೃತೇ ವ್ಯವಹಾರ ವಿದೇ ಶಿವೇತರ ಕೃತಯೇ | ಸದ್ಯಃಪರನಿರ್ವೃತಯೇ ಕಾಂತಾಸಮ್ಮಿತತಯೋಪದೇಶಯುಜೇ ” ಎಂದಿರುವಂತೆ ಈ ಕಾವ್ಯದಲ್ಲಿ ಅವೆಲ್ಲವೂ ಯಥಾವತ್ತಾಗಿದೆ ಎಂದು ಧೈರ್ಯವಾಗಿ ಹೇಳಬಹುದು. ಕಾವ್ಯದ ವಸ್ತುವು ಉತ್ತಮವಾಗಿದ್ದು, ಚಿತ್ರಿಸುವ ಪಾತ್ರದ ಗುಣಗಳೆಲ್ಲ ನಿತ್ಯಸತ್ಯಭೂತವಾಗಿ ಪಾತ್ರವು ಜೀವಂತವಾಗಿದ್ದಲ್ಲಿ ಕವಿಯ ಸ್ಫೂರ್ತಿಯು ಚಿಗುರೊಡೆದು ಕುಸುಮಿತವಾಗಿ ಸುಗಂಧಸೌರಭವನ್ನು ಬೀರುತ್ತಾ ಕವಿಯ ರಚನಾಕೌಶಲಕ್ಕೆ ಕಳೆತಂದು, ಆ ಕಾವ್ಯಕ್ಕೆ ಜಗನ್ಮಾನ್ಯತೆಯನ್ನು ತಂದುಕೊಡಲು ಸಮರ್ಥವಾಗುವುದು. ಅದಿಲ್ಲದೆ - ಕಥಾವಸ್ತುವು ಮತ್ತು ಪಾತ್ರಗಳು ನಿಸ್ತಾರವಾಗಿದ್ದು ಸತ್ಯಕ್ಕೆ ಹೊರತಾಗಿ ಕೇವಲ ಕಲ್ಪನೆಯ ಬೆಡಗಿನಿಂದ ಕೂಡಿದ್ದಲ್ಲಿ ಅಂತಹ ಕಾವ್ಯವು ಸತ್ವರಹಿತವಾಗಿ, ನೈಜತೆಯನ್ನು ಕಳೆದುಕೊಂಡು ಕಳಾವಿಹೀನವಾಗುವುದು. ಕಲೆಗಾರನೆಷ್ಟೇ ಕುಶಲನಾಗಿರಲಿ, ಬಣ್ಣ ಕಟ್ಟಿದ ನೂಲುಗಳಿಂದ ಹೆಣೆದ ಪೀತಾಂಬರವು ಕೊನೆಗೊಮ್ಮೆ ತನ್ನ ನೈಜಬಣ್ಣವನ್ನು ತಳೆದು ಕಳೆಗುಂದುವಂತೆ ಕಾವ್ಯವೂ ಸಹ ಕಳಾಹೀನವಾಗುವುದು. ಆದರೆ ಸೋಮನಾಥ ಕವಿಯು ಆರಿಸಿಕೊಂಡಿರುವ ವಸ್ತುವು ಉತ್ತಮವಾಗಿರುವುದಲ್ಲದೆ, ಸತ್ವಪೂರ್ಣವೂ ಆಗಿರುವುದರಿಂದ, ವರ್ಣಿಸಿರುವ ಪಾತ್ರದ ಗುಣಗಳೆಲ್ಲವೂ ಸತ್ಯಪೂರ್ಣವೂ, ಸ್ವಾಭಾವಿಕವೂ ಆಗಿರುವುದರಿಂದ ಅವನ ಈ ಕಾವ್ಯವೂ ಸ್ವಾಭಾವಿಕ ಗುಣವಿಶಿಷ್ಟ ವರ್ಣರಂಜಿತ ಸದಾತನ ನೂಲುಗಳಿಂದ ಹೆಣೆಯಲ್ಪಟ್ಟ ಸ್ವರ್ಣಪೀತಾಂಬರದಂತೆ ಚೇತೋಹಾರಿಯೂ, ಸಾರ್ವಕಾಲೀನವೂ ಆಗಿದೆಯೆಂದು ಧಾರಾಳವಾಗಿ ಹೇಳಬಹುದು. 

ಸೋಮನಾಥನು ೧೬ನೆಯ ಶತಮಾನದಲ್ಲಿ ಶ್ರೇಷ್ಠ ದರ್ಜೆಯ ಮಹಾಕವಿ ಮಾತ್ರವಲ್ಲದೆ, ಚತುಶಾಸ್ತ್ರಗಳಲ್ಲಿ ಪಾರಂಗತನೂ ಆಗಿದ್ದನು. ನ್ಯಾಯ-ವೇದಾಂತ-ಮೀಮಾಂಸಾ-ವ್ಯಾಕರಣ-ಸಾಹಿತ್ಯಶಾಸ್ತ್ರಗಳಲ್ಲಿ ಉತ್ತಮ ಕೃತಿಗಳನ್ನು ರಚಿಸಿ ವಿದ್ವತ್ಪಪಂಚದಲ್ಲಿ ಖ್ಯಾತನಾಗಿ ಅನೇಕ ರಾಜರಿಂದ ಸನ್ಮಾನಿತನಾಗಿದ್ದನು. ಸೋಮನಾಥನು ಅದೈತಮತಾನುಯಾಯಿಯಾಗಿದ್ದು ಶ್ರೀವ್ಯಾಸರಾಜರ ಅದ್ಭುತ ವ್ಯಕ್ತಿತ್ವ, ಸಕಲ ದರ್ಶನಗಳಲ್ಲಿ ಅವರಿಗಿದ್ದ ಪ್ರಕಾಂಡಪಾಂಡಿತ್ಯ, ವಾದವಿದ್ಯಾವೈಖರಿ, ಸಿದ್ಧಾಂತ ಸ್ಥಾಪನಾದೌರೇಯತೇ, ವಿದ್ವಜ್ಜನಪಕ್ಷಪಾತ, ಸರ್ವಜನಾನುಗ್ರಹಾಕಾಂಕ್ಷೆ, ಅಪಾರ ತಪಸ್ಸು, ಸಾತ್ವಿಕ ತೇಜಸ್ಸು, ಮತ್ತಿತರ ಅನಿತರಸಾಧಾರಣ ಔದಾರ್ಯಾದಿ ಸದ್ಗುಣಗಳಿಂದ ಪ್ರಭಾವಿತನಾಗಿ ಸ್ವಯಂಸ್ಪೂರ್ತಿಯಿಂದ ಈ ಮಹಾಕಾವ್ಯವನ್ನು ರಚಿಸಿದ್ದಾನೆ. ಯಾವುದೊಂದು ಆಶೋತ್ತರಗಳ ಪ್ರಲೋಭವಿಲ್ಲದೆ ವ್ಯಾಸಯೋಗೀಂದ್ರರ ನೈಜವಕ್ತಿತ್ವದ ಸತ್ಯಕಥೆಯನ್ನು ಸ್ವಾಭಾವಿಕವಾಗಿ ಚಿತ್ರಿಸಿರುವುದರಿಂದ ಇದು ವಿಬುಧಾನೀಕದ ಮಾನ್ಯತೆ ಗಳಿಸಿ ಅಂದಿನ ಕಾಲದ ಮಹತ್ವಪೂರ್ಣಕಾವ್ಯವೆನಿಸಿ ಹೆಸರುಗೊಂಡಿದೆ. 

ಈ ಕಾವ್ಯರಚನೆಯಿಂದ ನಿನಗೇನು ಪ್ರಯೋಜನ? ಎಂದು ಮತ್ಸರಗ್ರಸ್ಥ ಪಂಡಿತರಿಗೆ ಉತ್ತರ ಕೊಡಲೋ ಎಂಬಂತೆ ಕಾವ್ಯರಚನೆಯ ಉದ್ದೇಶವನ್ನು ಶ್ಲಾಘಾಕಂಪನಮೇಕಮೇವ ಶಿರಸಃ ಶ್ರೀವ್ಯಾಸಯೋಗಿಶಿತುಃ | ಮೇರೂಣಾಂ ಶತಮರ್ಹತಿ ಕ್ಷಿತಿತಲೇ ವಿದ್ಯಾಸು ವಿದ್ಯಾವತಾಮ್ ।” “ವಿವಿಧ ವಿದ್ಯೆಗಳಲ್ಲಿ ಪಾರಂಗತರಾದ ಪಂಡಿತರಿಗೆ, ತಮ್ಮ ಗುಣವನ್ನು ಗುರುತಿಸಿ ಒಮ್ಮೆ ಶ್ರೀವ್ಯಾಸತೀರ್ಥರು ಶ್ಲಾಘನೆಯಿಂದ ಶಿರಃಕಂಪನ ಮಾಡಿದರೆ ಸಾಲದೆ ? ಅದು ನೂರು ಮೇರುವಿನ ಸಮಾನವಾಗುವುದು. ಅಂದರೆ ನನ್ನ ವಿದ್ಯೆ, ಅನುವಾದಕ್ರಮವನ್ನು ಆಲಿಸಿ ಅಥವಾ ಈ ಕಾವ್ಯವನ್ನು ಆಲಿಸಿ ಶ್ರೀವ್ಯಾಸರಾಜಗುರುವರರು ಒಂದೇ ಒಂದು ಸಲ ಆನಂದದಿಂದ ಶ್ಲಾಘನೆಗಾಗಿ ತಲೆದೂಗಿದರೆ ಸಾಕು! ಅದೇ ನನಗೆ ನೂರು ಸುವರ್ಣಗಿರಿಗಳನ್ನು ನೀಡಿದಷ್ಟು ಪ್ರಯೋಜನವಾಗುವುದು! ಅದಕ್ಕಿಂತ ಬೆಲೆ ಬಾಳುವ ಮಹತ್ವಯೋಜನ ಬೇರಾವುದಿದೆ?” ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ.

ಸುರಭಾರತಿಯ ಸುಂದರ ವೀಣೆಯ ನಿರುಪಮ ಸುಮಧುರದಿಂಚರಗಳಂತಿರುವ ಅಮೃತಸ್ಯಂದಿ ಗದ್ಯ-ಪದಾತ್ಮಕ ಕಾವ್ಯವಾಹಿನಿಯನ್ನು ಹರಿಸಿರುವ ಸೋಮನಾಥನಂಥ ಪರಮತೀಯ ಪಂಡಿತನೊಬ್ಬನು ದೈತಸಿದ್ಧಾಂತ ತತ್ವಗಳು ಮತ್ತು ಅದನ್ನು ಎತ್ತಿಹಿಡಿದು ಉಪದೇಶಿಸಿದ ಆಚಾರ್ಯ ಶ್ರೀವ್ಯಾಸಭಗವಾನರಲ್ಲಿ ಅವನಿಗಿರುವ ಅತಿಶಯ ಗೌರವ-ಭಕ್ತಿಗಳನ್ನು ತನ್ನ ಅಮರಕೃತಿಯ ಮೂಲಕ ಪ್ರಕಟಿಸಿರುವ ಸಂದರ್ಭವು ಬಹುಶಃ ಕಾವ್ಯಪ್ರಪಂಚದಲ್ಲಿ ಇದೊಂದೇ ಆಗಿರಬಹುದೇನೋ ಎನಿಸುವುದು. 

ಅನ್ಯಮತೀಯನಾದ ಅದ್ವಿತೀಯ ಪಂಡಿತಶ್ರೇಷ್ಠನೊಬ್ಬನಿಂದ ಕಾವ್ಯನಾಯಕರಾಗಿ ಮೆರೆದ ಶ್ರೀವ್ಯಾಸರಾಜರ ವ್ಯಕ್ತಿತ್ವದ ಹಿರಿಮೆ ಎಂತಹುದು ? ಇಡೀ ದಕ್ಷಿಣಾಪಥಸಾಮ್ರಾಟನಾಗಿದ್ದ ಕೃಷ್ಣದೇವರಾಯನಿಂದ ಕುಲದೇವತೆಯೋಪಾದಿಯಲ್ಲಿ ಅಸದೃಶ ರತ್ನಾಭಿಷೇಕಾದಿ ಉನ್ನತೋಪಚಾರಗಳಿಂದ ಉಪಚರಿತರಾದ ಶ್ರೀವ್ಯಾಸಯೋಗೀಂದ್ರರ ಘನಗಂಭೀರ ವ್ಯಕ್ತಿತ್ವಕ್ಕೆ ಸೋಮನಾಥ ತನ್ನ ಪಾಂಡಿತ್ಯಪೂರ್ಣ ಕಾವ್ಯ ಕಿರೀಟವನ್ನಿಟ್ಟು ಮೆರೆಸಿದ್ದಾನೆ. ತನ್ನ ಅನುಪಮ ವರ್ಣನಾ ವೈಖರಿಯ ಕುಸುರು ಕೆಲಸದ ಶಾಲು-ಶಕಲಾತಿಗಳನ್ನು ತೊಡಿಸಿದ್ದಾನೆ, ಸುಂದರ - ನಿರ್ಮಲ ಭಕುತಿಭಾವಗಳ ಮೌಕ್ತಿಕಮಾಲೆಯಿಂದ ಅಲಂಕರಿಸಿದ್ದಾನೆ. 

ಸೋಮನಾಥನ ಕಾವ್ಯ ರಸಾಭಿಜ್ಜರಿಗೆ ರಸದೂಟ! ಭಾವುಕರಿಗೆ ಭಕ್ತಿಯ ಹೊನಲು! ತನ್ನ ಕಾವ್ಯಕ್ಕೆ ಅಪೇಕ್ಷಿಸಿದ ಸಂಭಾವನೆಯೇನು ? ಶ್ರೀವ್ಯಾಸರಾಜರ ಮೆಚ್ಚಿಕೆಯ ತಲೆದೂಗುವಿಕೆ! ಅದರ ಮುಂದೆ ಆತನಿಗೆ ಇನ್ನಾವುದೂ ಸಮನಲ್ಲ! ಇಂಥ ಪಂಡಿತಾಗ್ರಣಿಯನ್ನು ಈ ಭಾವನೆಗೆ ಒಳಪಡಿಸಿದ ಗುರುಗಳ ಜ್ಞಾನ, ತಪಸ್ಸು, ವೈರಾಗ್ಯ, ಭಕ್ತಿ, ವಿವೇಕ, ವಿಚಕ್ಷತೆಗಳ ವೈಶಾಲ್ಯವೆಷ್ಟಿರಬೇಕು? ಇಂಥ ಜ್ಞಾನಿನಾಯಕರನ್ನು, ಪಂಡಿತಪ್ರಕಾಂಡರನ್ನು ಗೌರವಿಸಿ ಏಕತ್ರಮಿಲಿತರಾಗುವ ಮಂಗಳ ಮುಹೂರ್ತಗಳನ್ನು ಒದಗಿಸಿ, ತನಗೂ ತನ್ನ ಸಾಮ್ರಾಜ್ಯಕ್ಕೂ, ಜನತೆಗೂ ಮಹದುಪಕಾರ ಮಾಡಿದ್ದಾನೆ ಕನ್ನಡ ರಮಾರಮಣನೆನಿಸಿದ ಕೃಷ್ಣದೇವರಾಯ. 

'ರಾಜಗುರು' ಶ್ರೀವ್ಯಾಸರಾಜರ ರತ್ನಾಭಿಷೇಕವನ್ನು ಕೃಷ್ಣದೇವರಾಯ ಅದೆಷ್ಟು ವಿಶ್ವಾಸ-ಭಕ್ತಾದರಗಳಿಂದ ನೆರವೇರಿಸಿದನೋ ನಾವರಿಯೆವು. ಆದರೆ ಸೋಮನಾಥ ಮಾಡಿರುವ ಕಾವರತ್ನಾಭಿಷೇಕವು ಅನ್ಯಾದೃಶವಾಗಿದ್ದು, ಅದನ್ನೋದುವ ಸೌಭಾಗ್ಯ ದೊರಕುವಂತೆ ಮಾಡಿದ ಕವಿಗೆ ಸರ್ವರೂ ಚಿರಋಣಿಯಾಗಿರಬೇಕು. ಶ್ರೀವ್ಯಾಸರಾಜರ ಘನವೆತ್ತ ವ್ಯಕ್ತಿತ್ವವನ್ನು ತನ್ನ ಭಕ್ತಾರಾಧನೆಗಳಿಂದ ಅತ್ಯುನ್ನತ ಶಿಖರಕ್ಕೇರಿಸಿದ ಕೀರ್ತಿ ಕೃಷ್ಣದೇವರಾಯನವಾದರೂ ಅದನ್ನು ಸಾರ್ವಕಾಲೀನವಾಗಿ ಉಳಿಯುವಂತೆ ಕಾವ್ಯಾರಾಮದಲ್ಲಿ ಮೆರೆಸಿದವನು ಸೋಮನಾಥ! ಅನೇಕ ಶತಕಗಳ ಹಿಂದೆ ನಡೆದುಹೋದ ಆ ಸುಂದರ ಚಿತ್ರವನ್ನು ಕಣ್ಣೆದುರು ತಂದು ನಿಲ್ಲಿಸಿ, ಆ ಮಂಗಳ ಸಮಾರಂಭದಲ್ಲಿ ನಾವೂ ಒಬ್ಬರಾದಂಥ ಅನುಭವವನ್ನು ತಂದುಕೊಟ್ಟ ಸೋಮನಾಥ ನಿರೂಪಿಸಿರುವ ಶ್ರೀವ್ಯಾಸರಾಜರ ರತ್ನಾಭಿಷೇಕ ವೈಭವವನ್ನು ಈಗ ಓದಿ ಆನಂದಿಸಿರಿ! 

ಕಳಿಂಗ ದೇಶಾಧಿಪತಿಯು ಕಳಿಸಿದ ಗ್ರಂಥವನ್ನು ಖಂಡಿಸಿ, ಪ್ರತಿ ಗ್ರಂಥವನ್ನು ರಚಿಸಿಕೊಟ್ಟು ಸಾಮ್ರಾಜ್ಯದ ಗೌರವವನ್ನು ರಕ್ಷಿಸಿದ ಪೂಜ್ಯ ವ್ಯಾಸರಾಜರಲ್ಲಿ ಕೃಷ್ಣದೇವರಾಯನಿಗೆ ಅಪಾರ ಗೌರವಾದರಗಳು ಹೆಚ್ಚಿವೆ. ಶ್ರೀವ್ಯಾಸತೀರ್ಥರ ಈ ದಿಗ್ವಿಜಯವು ಕರ್ನಾಟಕ ಸಾಮ್ರಾಜ್ಯದ ಮಹಾದಿಗ್ವಿಜಯವೆಂದು ಭಾವಿಸಿದ ರಾಯನಿಗೆ ಅಪಾರ ಆನಂದವಾಗಿದೆ. ತನಗೂ ಸಾಮ್ರಾಜ್ಯಕ್ಕೂ ಅನೇಕ ಬಾರಿ ಉಪಕಾರ ಮಾಡಿ ನಾಡಿನ ಕೀರ್ತಿ ಎಲ್ಲೆಡೆ ಮೆರೆಯುವಂತೆ ಮಾಡಿರುವ ಗುರುವರ್ಯರನ್ನು ವಿಶೇಷ ರೀತಿಯಿಂದ ಸತ್ಕರಿಸಬೇಕೆಂದು ಹಂಬಲಿಸಿದ್ದಾನೆ ಕೃಷ್ಣದೇವರಾಯ. ಕೃಷ್ಣದೇವರಾಯ ತನ್ನ ಭುಜಬಲ ಪರಾಕ್ರಮದಿಂದ ಇತರ ರಾಜರನ್ನು ಜಯಿಸಿ ಸಂಪಾದಿಸಿದ ಸಂಪತ್ತು ತನ್ನ ಔದಾರ್ಯದ ಪರಮಾವಧಿ, ಕರಕಮಲಗಳ ಕೊಡುಗೆ, ತನ್ನ ಧನಸಂಪತ್ತು, ಕೀರ್ತಿ ಹಾಗೂ ಗುಣರಾಶಿಗಳಿಗನುಗುಣವಾಗಿ ವ್ಯಾಸಭಿಕ್ಷುಗಳನ್ನು ಪೂಜಿಸಲು ಅಪೇಕ್ಷಿಸಿದನು.18 ಅಂತೆಯೇ ಮಂತ್ರಿ ಸಾಮಂತ-ವಿದ್ವಜ್ಜನರ ಸಭೆ ಸೇರಿಸಿ ವಿಚಾರವಿನಿಮಯ ಮಾಡಿ ಶ್ರೀವ್ಯಾಸಭಗವಾನರನ್ನು ಜಗತ್ತಿನಲ್ಲಿ ಸರ್ವಶ್ರೇಷ್ಠ ಗೌರವವೆನಿಸಿದ ರತ್ನಾಭಿಷೇಕದಿಂದ ಸೇವಿಸಲು ನಿರ್ಧರಿಸಿ ತದಂಗವಾದ ಸಕಲ ವ್ಯವಸ್ಥೆಗಳನ್ನೂ ಮಾಡಿಕೊಂಡು ಪ್ರಮುಖ ಪೌರಜಾನಪದ-ಪುರೋಹಿತಾಮಾತರುಗಳನ್ನು ಶ್ರೀವ್ಯಾಸತೀರ್ಥರಲ್ಲಿ ವಿಷಯವನ್ನರುಹಿ ಸಮಸ್ತ ಬಿರುದು-ಬಾವಲಿ ರಾಜವೈಭವದಿಂದ ಗುರುವರ್ಯರನ್ನು ಕರೆತರಲು ಕಳಿಸಿದ್ದಾನೆ. 

ವ್ಯಾಸತೀರ್ಥರು ಶಿಷ್ಯಮಂಡಲಿಗೆ ಮಂಗಳಕರವಾದ ಶ್ರೀಮದಾಚಾರ್ಯರ ಸೂತ್ರಭಾಷ್ಯವನ್ನು “ಲೋಕಪಾವನ” ಮಠದಲ್ಲಿ ಪಾಠ ಹೇಳುತ್ತಿದ್ದಾರೆ. ಅದೇ ಸಮಯಕ್ಕೆ ಸರಿಯಾಗಿ ಸಾಮ್ರಾಟ್ ಕೃಷ್ಣದೇವರಾಯನ ಅಪ್ಪಣೆಯಂತೆ ಅಮಾತ್ಯ-ಪಂಡಿತ- ಪ್ರಧಾನಪುರೋಹಿತಾದಿಗಳು ಸಕಲ ಬಿರುದು-ಬಾವಲಿಗಳೊಡನೆ ಬಂದು ತಪಸ್ಸಿಗೆ ಮಾತೃಸ್ಥಾನದಂತಿರುವ ಶ್ರೀವ್ಯಾಸಭಗವಾನರಿಗೆ ವಿನಯಾನತ ಕಂಧರರಾಗಿ ನಮಸ್ಕರಿಸಿ ವಿಜ್ಞಾಪಿಸಿದರು : 

'ಪರಮಪೂಜ್ಯ ಗುರುವರ್ಯರೇ, ಕನ್ನಡ ರಮಾರಮಣರು ಮಹೋತ್ಸವವನ್ನು ಏರ್ಪಡಿಸಿದ್ದಾರೆ, ತಮ್ಮನ್ನು ಸಂಭಾವಿಸಲು ನರಪತಿಗಳು ಮಂತ್ರಿಮಂಡಲದೊಡನೆ ಸಭಾಸ್ಥಾನಕ್ಕೆ ಆಗಮಿಸಿದ್ದಾರೆ. ನಗರವನ್ನೂ, ರಾಜಬೀದಿಗಳನ್ನೂ ಶೃಂಗಾರವಾಗಿ ಅಲಂಕರಿಸಿರುವುದಲ್ಲದೆ, ಅರಮನೆಯ ಚೆಜ್ಜೆ (ಕಪೋತ)ಗಳ ಮೇಲ್ಬಾಗವನ್ನು ಬಾಣಾಕಾರವಾಗಿ ವೈಜಂತಿ ಮಣಿಗಳಿಂದ ಅಲಂಕರಿಸಲಾಗಿದೆ. ನಗರವು ತಳಿರು ತೋರಣ, ಹಸಿರುವಾಣಿ, ಚಪ್ಪರ, ಧ್ವಜಪತಾಕೆಗಳಿಂದ ಶೃಂಗರಿಸಲ್ಪಟ್ಟಿದೆ. ಹಗುರವಾದ ನವನವ ಪುಷ್ಪಗಳಿಂದ ರಾಜಮಾರ್ಗ ಆಚ್ಛಾದಿಸಲ್ಪಟ್ಟಿದೆ. ಮಂಗಳವಾದ್ಯಘೋಷಗಳಿಂದ ಗಗನಮಾರ್ಗವೆಲ್ಲ ಪೂರ್ಣವಾಗಿದೆ.

ಭಗವನ್ ! ಇದಾನೀಂ ಖಲು 

ಸ್ವಾಮಿನ್ ಭವಂತಂ ಸ್ವಯಮದ ರತ್ನ 

ಆಕಾಂಕ್ಷತೇ ಭೂರಮಣೋSಭಿಷೇಕ್ಕುಮ್ | 

ಕೂಟಾಗ್ರಭಾಗಂ ಕುಲಭೂಧರಸ್ಯ | 

ಪ್ರಸೂನಜಾತ್ರೆರಿವ ಪಾರಿಜಾತಃ || - ವ್ಯಾಸಯೋಗಿಚರಿತಮ್ 

“ಭಗವನ್, ಕುಲಾಚಲದ ಕೋಡುಗಲ್ಲನ್ನು ಪಾರಿಜಾತ ವೃಕ್ಷವು ತನ್ನ ಪುಷ್ಪಸಮೂಹಗಳಿಂದ ವರ್ಷಿಸುವಂತೆ ಈಗ ಭೂರಮಣನಾದ ಕೃಷ್ಣನರಪತಿಯು ತಾನೇ ಸ್ವತಃ ರತ್ನಗಳಿಂದ ತಮ್ಮನ್ನು ಅಭಿಷೇಕ ಮಾಡಿ ಗೌರವಿಸಲು ಬಲವತ್ತರವಾದ ಆಕಾಂಕ್ಷೆಯಿಂದ ಕೂಡಿದ್ದಾನೆ". 

“ಮಹಾಸ್ವಾಮಿ, ಹೀಗೆ ತಮ್ಮಲ್ಲಿರುವ ವಿಶೇಷ ಭಕ್ತಿಯಿಂದ ಪುಲಕಿತಗಾತ್ರನಾಗಿರುವ ಆ ಕೃಷ್ಣದೇವರಾಯನನ್ನು ತಮ್ಮ ಆಗಮನದಿಂದ ಬಹುಮಾನಿಸಲು ಪ್ರಸನ್ನರಾಗಬೇಕು, ಓರ್ವ ಭಕ್ತನ ಹೃದಯದ ಒಂದು ಮೂಲೆಯಲ್ಲಿ ಅಭಿವ್ಯಕ್ತವಾದ ಪುಷ್ಪಾಂಜಲಿಯೂ ಕೂಡ ಹೇಗೆ ಕುಲದೈವದ ಪ್ರಸಾದವನ್ನು ಸಂಪಾದಿಸಿಕೊಡುವುದೋ, ಹಾಗೆಯೇ ತಮ್ಮ ಭಕ್ತನಾದ ಕೃಷ್ಣಭೂಪಾಲನ ಹೃದಯದಲ್ಲೆಲ್ಲಾ ತಮ್ಮ ಅನುಗ್ರಹಕ್ಕಾಗಿ ಭಕ್ತಿರಸಪ್ರವಾಹವೇ ಹರಿಯುತ್ತಿರುವುದರಿಂದ ಅವನ ಪ್ರಾರ್ಥನೆಯನ್ನು ಮನ್ನಿಸಿ ತಾವೀಗ ರಾಜಸಭೆಗೆ ದಯಮಾಡಿಸಿ ಸಾರ್ವಭೌಮನನ್ನು ಬಹುಮಾನಿಸುವ ಕೃಪೆಮಾಡಬೇಕು”.

ಪ್ರಧಾನ ಪುರೋಹಿತರ ಮನವಿಯನ್ನಾಲಿಸಿ, ಕ್ಷಣಕಾಲ ತಮ್ಮಲ್ಲೇ ಯೋಚಿಸಿ ಅನಂತರ ಶ್ರೀವ್ಯಾಸತಪೋನಿಧಿಗಳು ಭಕ್ತವಾತ್ಸಲ್ಯದಿಂದ ಕರುಣಾಮೃತರಸಾದ್ರ್ರಹೃದಯರಾಗಿ “ತಥಾಸ್ತು ಎಂದು ಹೇಳಿ, ರಾಜಸಭೆಗೆ ಬಿಜಯಮಾಡಿಸಲು ರತ್ನಪೀಠದಿಂದ ಮೇಲೆದ್ದರು.187 ಗೋವಿಂದ ಒಡೆಯರೇ ಮೊದಲಾದ ಕುಶಲಮತಿಗಳಾದ ವಿದ್ವತ್ನಕಾಂಡ ಶಿಷ್ಯಮಂಡಲಿಯು ತಮ್ಮನ್ನು ಅನುಸರಿಸಿ ಬರುತ್ತಿರಲು, ಚತುರ್ಮುಖ ಬ್ರಹ್ಮದೇವರ ವದನಾರವಿಂದ ಹೊರಹೊಮ್ಮಿದ ಸಕಲ ವೇದವಾಕ್ಕುಗಳಿಂದ ಪುರಸ ತವಾದ ಪ್ರಣವದಂತೆ ಶ್ರೀವ್ಯಾಸತೀರ್ಥರು ಮಠದಿಂದ ಮೆಲ್ಲಮೆಲ್ಲನೇ ಹೊರ ಹೊರಟರು. ಕನ್ನಡ ಸಾಮ್ರಾಜ್ಯದ ಸಮಸ್ತ ಬಿರುದಾವಳಿ - ವೈಭವಗಳೊಡನೆ ಸುವರ್ಣ ಪಾಲಕಿಯಲ್ಲಿ ಕುಳಿತು ಮೆರವಣಿಗೆಯಿಂದ ಬಿಜಯಂಗೈಯುತ್ತಿರುವಾಗ, ಪಾಲಕಿಯ ಮುಂಭಾಗದಲ್ಲಿ ಮಧ್ವಮತವೆಂಬ ಮದ್ದಾನೆಯ ಘಂಟಾರವದಂತೆ ಘಂಟಾನಿನಾದವಾ ಅದಕ್ಕನುಗುಣವಾಗಿ ಹರಿದಾಸ ಪಂಥದವರ ನರ್ತನ, ತಾಳವಾದ ಸ್ತುತಿಪಾಠಕರ ಬಿರುದಾವಳಿ ಘೋಷಣೆಗಳು ಶಬ್ದಾಯಮಾನವಾಗುತ್ತಿರಲು189ಆ ತಪೋನಿಧಿಗಳ ಮಂಗಳಕರ ಮೆರವಣಿಗೆಯು ಎಲ್ಲ ರಾಜಬೀದಿಗಳನ್ನು ದಾಟಿ ಸರ್ವಜನರ ಪುಷ್ಪವೃಷ್ಟಿ ಹರ್ಷಧ್ವನಿ ಜಯಕಾರಗಳೊಂದಿಗೆ ಅರಮನೆಯ ಸನಿಹಕ್ಕೆ ಬಂದಿತು. 

ಮೆರವಣಿಗೆಯು ರಾಜಸಭಾಂಗಣಕ್ಕೆ ಬಂದಿತು. ಆಗ ಯೋಗೀಂದ್ರರ ತೇಜಃಪ್ರಭಾವದಿಂದ ರಾಜಸಭೆಯು ಶರತ್ಕಾಲೀನ ಮೇಘ ಸಮೂಹದಿಂದ ಯುಕ್ತವಾದ ಆಕಾಶವು ಕಮಲಬಾಂಧವನಿಂದ ಪ್ರಕಾಶಿಸುವಂತೆ ಕಂಗೊಳಿಸಿತು. ಶ್ರೀವ್ಯಾಸರಾಜರ ಸವಾರಿಯು ಎತ್ತೆತ್ತ ಹೋಯಿತೋ ಅಲ್ಲಲ್ಲಿನ ಜನಗಳು ಕರಗಳನ್ನು ಮೇಲೆತ್ತಿ ಬದ್ಧಾಂಜಲೀಪಟರಾಗಿ ಗೌರವವನ್ನು ಸಲ್ಲಿಸುತ್ತಿದ್ದರು. ಹೀಗೆ ಜನರೆಲ್ಲರೂ ಮೇಲೆತ್ತಿದ ಬದ್ದಾಂಜಲೀ ಪುಟಗಳು ಶರತ್ಕಾಲೀನ ನದಿಗಳಲ್ಲಿ ಎದ್ದು ಕಾಣುವ ಕಮಲಪುಷ್ಪಗಳ ಮೊಗ್ಗುಗಳಂತೆ ಕಾಣುತ್ತಿತ್ತು. ಶ್ರೀವ್ಯಾಸಮುನೀಂದ್ರರು ಸಭಾಂಗಣಕ್ಕೆ ಚಿತ್ತೈಸಿದ ವಾರ್ತೆಯನ್ನರಿತು, ಸಕಲ ಮಂತ್ರಿಗಳಿಂದೊಡಗೂಡಿ ಕೃಷ್ಣದೇವರಾಯನು ಸೂರ್ಯನು ಉದಯಾದ್ರಿಯನ್ನು ಸಮೀಪಿಸುತ್ತಿರಲು ಅರಳಿದ ಪದ್ಮಗಳಿಂದ ಘಮಘಮಿತಗಳಾದ ಚಂಚಲ ಮಧುಕರಗಳು ತರೆಯಿಂದ ಬರುವ ತೆರನಾಗಿ, ವ್ಯಾಸಪ್ರಭುಗಳ ಸನ್ನಿಧಿಗೆ ರಭಸದಿಂದ ಧಾವಿಸಿ ಬಂದನು. 

ಕೃಷ್ಣದೇವರಾಯನು ಶ್ರೀವ್ಯಾಸಯೋಗಿಗಳನ್ನು ಸ್ವಾಗತಿಸಲು ದಿಗ್ಗನೆ ಮೇಲೆದ್ದು ಧಾವಿಸಿದನು. ಆಗ ಅಲ್ಲಿ ನೆರೆದಿದ್ದ ಸಾಮಂತ-ಮಾಂಡಲೀಕಾದಿ ರಾಜವೃಂದವು ಚಕ್ರವರ್ತಿಯು ಬರಲು ಇಬ್ಬಾಗವಾಗಿ ದಾರಿಕೊಟ್ಟಿತು, ಅದು ಬೈತಲೆಯಂತೆ ಕಾಣುತ್ತಿತ್ತು. ಕಾರುಣ್ಯದಿಂದ ತನ್ನನ್ನು ಅನುಗ್ರಹಿಸಲು ಬರುತ್ತಿರುವ ಯತೀಂದ್ರರನ್ನು ನರಪತಿಯು ನಿರೀಕ್ಷಿಸಿದನು, ಶ್ರೀವ್ಯಾಸತೀರ್ಥರು ಬಂಗಾರದ ಪಾಲಕಿಯ ಮಧ್ಯಭಾಗದಲ್ಲಿ ಮಂಡಿಸಿದ್ದರು. ಅವರ ಕರಕಮಲದಲ್ಲಿ ತಾಲಾಪತ್ರದಲ್ಲಿ ಬರೆದ ಶಾಸ್ತ್ರಗ್ರಂಥವು ರಾಜಿಸುತ್ತಿತ್ತು. ಅಕ್ಷರಗಳು ಸ್ಪಷ್ಟವಾಗಿ ಕಾಣಲು ತಾಲಾಪತ್ರಗಳಿಗೆ ಕಪ್ಪಾದ ಕಾಡಿಗೆಯ ಮಸಿಯನ್ನು ಸವರಲಾಗಿತ್ತು. ಶ್ರೀಪಾದರ ಕರಾಂಗುಲಿಗಳು ಪುಟಗಳನ್ನು ತಿರುಗಿಸುತ್ತಿದ್ದವು. ಅದನ್ನು ನೋಡಿದರೆ ಬಂಗಾರದ ಪಾಲಕಿಯೆಂಬ ಕಮಲ ಮಧ್ಯದಲ್ಲಿ ಕುಳಿತಿರುವ ವ್ಯಾಸತೀರ್ಥರು ಕಮಲಪುಷ್ಪದ ಮಧ್ಯಕನ್ನಿಕೆಯಂತೆಯೂ, ತಾಲಾಪತ್ರಗಳಿಗೆ ಹಚ್ಚಿರುವ ಕಾಡಿಗೆಯ ಮಸಿಯಿಂದ ಕಪ್ಪಾದ ಅವರ ಕರಾಂಗುಲಿಗಳು ಮಧುಕರ (ದುಂಬಿ)ಗಳಂತೆಯೂ ಕಾಣುತ್ತಿತ್ತು! 

ಹೀಗೆ ಗ್ರಂಥಾವಲೋಕನತತ್ಪರರಾದ ವ್ಯಾಸತೀರ್ಥರು ನಾಸಿಕದ ಮೇಲ್ಬಾಗದಲ್ಲಿ ಪ್ರತಿಬಿಂಬಿತವಾದ ನೇತ್ರದ್ವಯದಿಂದ ಅತಿ ಸ್ವಚ್ಛವಾಗಿರುವ ದುಂಡಾದ ಸುಲೋಚನವನ್ನು ಧರಿಸಿದ್ದರು. ಅದು ಗುರುಗಳ ವೃದ್ಧಾಪ್ಯವನ್ನು ಸೂಚಿಸುತ್ತಿತ್ತು. ಧರ್ಮಶಾಸ್ತ್ರಭೂಷಿತರಾದ ಶ್ರೇಷ್ಠ ಯುವಕರು ಉಭಯ ಪಾರ್ಶ್ವಗಳಲ್ಲಿ ಎರಡು ಚಾಮರಗಳನ್ನು ಹಿಡಿದು ಗುರುಗಳನ್ನು ಸೇವಿಸುತ್ತಿದ್ದರು. ಮುಂಭಾಗದಲ್ಲಿ ವೈದಿಕರ ಗುಂಪು ಮಾಡುತ್ತಿದ್ದ ಜಯಕಾರ, ಹರಿದಾಸರು ಪಾದಗಳಲ್ಲಿ ಗೆಜ್ಜೆಕಟ್ಟಿ ನರ್ತಿಸುತ್ತಿದ್ದಾಗ ಮಣಿಮಯ ಗೆಜ್ಜೆಗಳ ನಾದದಂತಿರುವ ತಾಳಧ್ವನಿಗಳು ಆಕಾಶ ಮಾರ್ಗವೆಂಬ ಬಂಗಾರದ ಕೊಪ್ಪರಿಗೆಯನ್ನು ತುಂಬುತ್ತಿದ್ದವು ಶ್ರೀಗಳವರ ಅತ್ತಿತ್ತ ಅನೇಕ ಪಂಡಿತರು ಬರುತ್ತಿದ್ದರು. ಅವರು ಮೂರ್ತಿಭವಿಸಿದ ಶ್ರೀಮಧ್ವಾಚಾರ್ಯರ ಪ್ರಕರಣಗ್ರಂಥ- ಗಳಂತಿದ್ದರು. ಇಂಥ ಬ್ರಹ್ಮಜ್ಞಾನಿಗಳಿಂದ ಸಂಸೇವಿತರಾಗಿ ಶೋಭಿಸುತ್ತಿರುವ ಆ ಪರಮಪೂಜ್ಯ ಶ್ರೀವ್ಯಾಸಯತೀಂದ್ರರನ್ನು ಕೃಷ್ಣನರಪತಿಯು ಅತಿತ್ತರೆಯಿಂದ ಸಮೀಪಿಸಿ, ಅವರ ಪಾದಾಂಗುಲಿಗಳ ಮಣಿಸದೃಶ ನಖ (ಉಗುರು)ಗಳ ಕಿರಣಗಳನ್ನು ಆಘ್ರಾಣಿಸಲು ಹಾತೊರೆಯುತ್ತಿರುವ ಕಿರೀಟಕಾಂತಿಯಿಂದ ರಂಜಿತನಾಗಿ ಇನ್ನೊಬ್ಬರಿಗೆ ದೊರಕದ ಮಹಾಧನ್ಯತೆಯಿಂದ ಮುದಗೊಂಡನು (ಗುರುಗಳ ಪಾದಗಳಿಗೆ ನಮಸ್ಕರಿಸಿದನು). 

ಅನಂತರ ಮಂಗಳವಾದ್ಯಗಳು ಭೋರ್ಗರೆಯುತ್ತಿರಲು, ವೇದವಿದ್ಯಾವಿಶಾರದರು ವೇದಮಂತ್ರಗಳನ್ನು ಮಂದ್ರಸ್ವರದಲ್ಲಿ ಪಠಿಸುತ್ತಿರಲು, ಕವಿಸಂದೋಹವು ಆಶುಕವಿತೆಗಳಿಂದ ಗುರುಗಳ ಗುಣಗಳನ್ನು ಬಣ್ಣಿಸುತ್ತಿರಲು ವಾದಕೋವಿದರು, ಗಾನವಿಶಾರದರು ಸುಶ್ರಾವ್ಯವಾಗಿ ಗಂಧರ್ವಗಾಯನ ಮಾಡುತ್ತಿರಲು ವೀಣಾ-ವೇಣು-ಮೃದಂಗಾದಿವಾದ್ಯಗಳು ಮೊಳಗುತ್ತಿರಲು, ಭಾಗವತರು, ಹರಿದಾಸರು ನರ್ತನ ಮಾಡುತ್ತಿರಲು ವಂದಿಮಾಗಧಬೃಂದವು ಬಿರುದಾವಳಿಗಳನ್ನು ಘೋಷಿಸುತ್ತಿರಲು, ವಿದ್ವಜ್ಜನರು, ಪೌರಜಾನಪದರು ಪುಷ್ಪವೃಷ್ಟಿಗೈಯುತ್ತಾ ಜಯಜಯಕಾರಮಾಡುತ್ತಿರಲು ಕೃಷ್ಣದೇವರಾಯನು ಮಹಾಮಹಿಮರಾದ ಶ್ರೀವ್ಯಾಸರಾಜಗುರುಸಾರ್ವಭೌಮರನ್ನು ಸ್ವಾಗತಿಸಿ ಉನ್ನತವಾದ ವೇದಿಕೆಗೆ ಕರೆದುತಂದನು. 

ಆ ಭವ್ಯವೇದಿಕೆಯ ಮೇಲೆ ಈ ಮಹೋತ್ಸವಕ್ಕಾಗಿಯೇ ಸಾರ್ವಭೌಮನು ತಯಾರುಮಾಡಿಸಿದ್ದ ಅತ್ಯಂತ ಸುಂದರವಾದ ಸುವರ್ಣಸಿಂಹಾಸನವು ಶೋಭಿಸುತ್ತಿತ್ತು. ಸಿಂಹಾಸನದ ಮೇಲೆ ದೆಹಲಿಯ ಸುಲ್ತಾನನಾದ ಬಾಬರನು ಅತ್ಯಂತ ಭಕ್ತಿಪುರಸ್ಸರವಾಗಿ ಶ್ರೀವ್ಯಾಸರಾಜರಿಗೆ ಕಾಣಿಕೆಯಾಗಿ ಕಳಿಸಿಕೊಟ್ಟಿದ್ದ ವಿಶಿಷ್ಟ ಮೊಗಲ ಸಾಮ್ರಾಜ್ಯದ ಗೌರವವೆನಿಸಿದ ಸುವರ್ಣಕಲಶದಿಂದ ರಾಜಿಸುವ ಹಸಿರುಛತ್ರಿಯು ಕಂಗೊಳಿಸುತ್ತಿತ್ತು - ಕೃಷ್ಣದೇವರಾಯನು ಕನ್ನಡ ಸಾಮ್ರಾಟನಾದಾಗ ದೆಹಲಿಯ ಬಾಬರ್ ಬಾದಷಹನು ಶ್ರೀಕೃಷ್ಣದೇವರಾಯನಿಗೆ ಉಡುಗೊರೆ ಕಳಿಸಿದ್ದಲ್ಲದೆ, ರಾಜಗುರುಗಳಾದ ಶ್ರೀವ್ಯಾಸತೀರ್ಥರಿಗೆ ಒಂಟೆಯ ಮೇಲೆ ಹಸಿರು ಛತ್ರಿ ಹಿಡಿಸಿಕೊಂಡು ಭೇರಿತಾಡನ ಮಾಡಿಸಿಕೊಂಡು ಹೋಗುವ ಅಪೂರ್ವ ಗೌರವವನ್ನು ತನ್ನ ಪ್ರತಿನಿಧಿಗಳ ಜತೆಗೆ ಕಳಿಸಿ ಗೌರವಿಸಿದನು. ಅದರ ಮೇಲೆ ವಿಸ್ತಾರವಾದ ಕನ್ನಡ ಸಾಮ್ರಾಟನಾದ ಸಾಳುವ ನರಸಿಂಹಭೂಪತಿಯು ಸಮರ್ಪಿಸಿದ್ದ ಶ್ವೇತಛತ್ರವು, ಇವರು ದೈತಸಾಮ್ರಾಜ್ಯದ ಸಾರ್ವಭೌಮರೆಂದು ಸಾರುತ್ತಾ ವಿರಾಜಿಸುತ್ತಿತ್ತು. ಸಿಂಹಾಸನದ ಎರಡೂ ಪಾರ್ಶ್ವಗಳಲ್ಲಿ ಸ್ವರ್ಣದಂಡಧಾರಿಗಳು, ಚಾಮರ, ಚೌರಿಗಳನ್ನು ಹಿಡಿದವರು ನಿಂತಿದ್ದರು ಸಾಮ್ರಾಟ್ ಕೃಷ್ಣದೇವರಾಯನು ಶ್ರೀವ್ಯಾಸರಾಜಗುರುವರ್ಯರನ್ನು ಭಕ್ತಿಯಿಂದ ಕರೆತಂದು, ಶರತ್ಕಾಲದಲ್ಲಿ ಕಮಲಪುಷ್ಪದಲ್ಲಿ ರಾಜಹಂಸವನ್ನು ಕೂಡಿಸುವಂತೆ ಈ ಮಹೋತ್ಸವದ ಕಾಣಿಕೆಯಾಗಿ ಸಮರ್ಪಿಸಲಿದ್ದ ಸುವರ್ಣಸಿಂಹಾಸನದಲ್ಲಿ ಪರಮಹಂಸಕುಲತಿಲಕರಾದ ಶ್ರೀವ್ಯಾಸಭಗವಾನರನ್ನು ಕೂಡಿಸಿ ನಮಸ್ಕರಿಸಿದನು.195 

ಆಗಿನ ದೃಶ್ಯವು ಅತಿಮನೋಹರವಾಗಿದ್ದಿತು. ಶ್ರೀವ್ಯಾಸಯೋಗೀಂದ್ರರಿಗೆ 'ನಾನು ಮೊದಲು, ನಾನು ಮೊದಲು ಎಂದು ನಮಸ್ಕರಿಸುತ್ತಿರುವ ಪಂಡಿತಪ್ರಕಾಂಡರ ಕೋಲಾಹಲ ಸಂಪತ್ತು ಒಂದು ಕಡೆಯಾದರೆ, ಮತ್ತೊಂದು ಕಡೆ ನಿಪುಣರಾದ ವಾದ್ಯಗಾರರು ನುಡಿಸುತ್ತಿರುವ ಮಂಗಳವಾದ್ಯಗಳ ಸಂಭ್ರಮ, ಈ ಮಧ್ಯೆ ಗಡಿಬಿಡಿಯಿಂದ ಅತ್ತಿಂದಿತ್ತ ಉತ್ಸಾಹದಿಂದ ಸಂಚರಿಸುತ್ತಿರುವ ಪುರೋಹಿತರ ಸಡಗರ, ಇನ್ನೊಂದು ಕಡೆ, ಇದೆಲ್ಲವನ್ನೂ ಸಮಷ್ಟಿದೃಷ್ಟಿಯಿಂದ ಪರಿಕಿಸುವಾಗ ಆ ಸಭೆಯು ತಕ್ಷಣವೇ ಕೌತುಕದಿಂದ ಬ್ರಹ್ಮದೇವರಿಂದ ನಿರ್ಮಿತವಾದ ಸಭೆಯಂತೆ ಕಂಡುಬರುತ್ತಿತ್ತು.

ಆ ಮಹಾಸಭೆಯು ಬ್ರಹ್ಮಸಭೆಯಂತೆ ಕಂಗೊಳಿಸುತ್ತಿತ್ತು. ಶ್ರೀವ್ಯಾಸರಾಜರು ಸುವರ್ಣಸಿಂಹಾಸನದಲ್ಲಿ ಬ್ರಹ್ಮದೇವರಂತೆ ವಿರಾಜಿಸಿದ್ದಾರೆ. ಸಾಮಂತರೇ ಮೊದಲಾದ ರಾಜಸಮುದಾಯವು ಅವರನ್ನು ಸುತ್ತಲೂ ಆವರಿಸಿ ನಿಂತು ತಮ್ಮ ಹಸ್ತಾಂಜಲಿಯನ್ನು ಮೇಲೆತ್ತಿ ವಂದಿಸುತ್ತಿದ್ದಾರೆ. ಆ ರಾಜರು ಥಳಥಳಿಸುವ ಕಿರೀಟಗಳನ್ನು ಧರಿಸಿ ದೇವತೆಗಳಂತೆ ರಾಜಿಸುತ್ತಿದ್ದಾರೆ. ಅವರ ಕಿರೀಟಾಗ್ರಭಾಗದ ದೊಡ್ಡ ದೊಡ್ಡ ರತ್ನಗಳಲ್ಲಿ ಪ್ರತಿಬಿಂಬಿತರಾಗಿರುವ ವ್ಯಾಸರಾಜರನ್ನು ಇವರೇ ಬ್ರಹ್ಮದೇವರೆಂಬ ಬುದ್ದಿಯಿಂದ ಮೇಲೆತ್ತಿದ ಹಸ್ತಾಂಜಲೀಪುಟರಾದ ರಾಜರುಗಳ ಆ ಪಾಣಿಪದ್ಮಗಳು ಕಮಲದ ಆಸನಭಾವವನ್ನು ಪ್ರಕಟಿಸುತ್ತಿದೆ. ಕಿರೀಟ ಧರಿಸಿ ಕರವೆತ್ತಿ ವ್ಯಾಸರಾಜರ ಸುತ್ತ ರಾಜರು ನಿಂತಿರುವುದರಿಂದ ಅವರ ಕರಪದ್ಮಗಳೇ ಕಮಲದಂತೆಯೂ ಅವರ ಮಧ್ಯೆ ಕುಳಿತಿರುವ ಶ್ರೀವ್ಯಾಸರಾಜರು ಕಮಲಾಸನರಾದ ಬ್ರಹ್ಮದೇವರಂತೆಯೂ ಕಂಗೊಳಿಸುತ್ತಿದ್ದರು. 

ಆಗ ಕೃಷ್ಣದೇವರಾಯನು ಶ್ರೀವ್ಯಾಸರಾಜರಿಗೆ ರತ್ನಾಭಿಷೇಕ ಮಾಡಲು ಸಿದ್ದನಾಗಿ ಮೊದಲು ಶ್ರೀಗುರುಗಳಿಗೆ ತಾನು ಶ್ರೀಮೂಲಗೋಪಾಲಕೃಷ್ಣ ಪಟ್ಟಾಭಿರಾಮದೇವರಿಗಾಗಿ ತಯಾರು ಮಾಡಿಸಿದ ಸುಮಾರು ಎರಡೂವರೆ ಅಡಿ ಉದ್ದ, ೩ ಅಂಗುಲ ಅಗಲವಿರುವ ನೂರಾರು ದೊಡ್ಡ ದೊಡ್ಡ ಅನರ್ಘ ಪಚ್ಚೆಗಳಿಂದಲೂ, ಅಂಗೈ ಅಗಲದ ನವರತ್ನ ಖಚಿತ ಪದಕಗಳಿಂದಲೂ ಕೂಡಿದ ಪಚ್ಚೆಯ ವೈಜಯಂತೀಮಾಲೆಯನ್ನು ಸಮರ್ಪಿಸಿದನು. ಗುರುಗಳು ಅದನ್ನು ಮಗ್ಗುಲು ಸ್ವರ್ಣಪೀಠದಲ್ಲಿರುವ ದೇವರ ಪೆಟ್ಟಿಗೆಗೆ ಸಮರ್ಪಿಸಿದರು “ತದನು ಸಕಲದಿಷ್ಟುಖಮುಖರೀಕರಣ ನಿಪುಣತಾಧುರ್ಯೇಷು ಮಂಗಳ ಸೂರ್ಯೇಷು, ಭಕ್ತಿವಿನಿಮಯ ಪರಮಾನಂದಕಂದಲಿತ ಸಹೃದಯಯೇಷುರಾಜನಿಚಯೇಷು, ಸಮಾಪಿತ ಸಕಲಸಂವಿಧಾನಸಂಪಾದಕೃತ್ಯೇಷು ಅಮಾತ್ಯಭತ್ಯೇಷು, ನಿರಂತರೋದ್ದು ಸ್ವಸ್ಮಯನ ಸೂಕ್ತಿಪದವೀಸಮಾಪಿತೇಷು ಪುರೋಹಿತೇಷು, ನಿರವದ್ಯ ವಿದ್ಯಾವೈಭವ ಶ್ಲಾಘಾಕಂಪಮಾನಶಿರಸ್ಸು ಸುಮನಸ್ಸು, ಪರಿಸರಪಾಪಠ್ಯಮಾನ ನಾನಾವಾದ ವಿಜಯ ಬಿರುದಾವಲೀ ಪಲಿತ ಚಾಟುಪ್ರಪಂಚೇಮ ಕವಿಸಂಚಯೇಷು, ಅಕೌಮಾರ ಚರಿತಾರಂಭ ಗಂಭೀರ ಯಶಸ್ತುತಿ ಕೇಲಿಕೇಷು, ವಿಸ್ಮಯಸ್ಮಿತ ಪಕ್ಷ ಪುಟಲೋಚನೇಷು ಪೌರಜನಪದೇಷು, ಸ ಕಿಲ ಕೃಷ್ಣಮಹೀಪಾಲಃ ಸ್ವಯಮೇವ ಕರಕಮಲೇನಾದಾಯ ಕನಕಕುಂಭಂ, ಇಮಂ ಭಗವಂತಂ ವ್ಯಾಸತಾಪಸಂ ಆದರಾನ್ಮಣಿಭಿರಭಿಷೇಕುಮಾರಭತ ' 

ಆನಂತರ ಮಂಗಳವಾದ್ಯಗಳು ಮೊಳಗಿ ಆ ಘೋಷಗಳು ಸಮಸ್ತ ದಿಗಂತಗಳನ್ನೂ ಶಬ್ದಾಯಮಾನವಾಗಿ ಮಾಡುತ್ತಿರಲು, ಸಹೃದಯರಾದ ಸಮಸ್ತ ರಾಜಸಮೂಹವು ಭಕ್ತಿಯಿಂದ ವಿನೀತಮನಸ್ಕರಾಗಿ ಪರಮಾನಂದಪೂರ್ಣವಾಗುತ್ತಿರಲು, ರತ್ನಾಭಿಷೇಕನಿಮಿತ್ತಕವಾದ ಸಕಲವಿಧವಿಧಿನಿಯವಾದಿ ವ್ಯವಸ್ಥೆಗಳನ್ನು ಸೇವಕರಾದ ಮಂತ್ರಿಗಳು ಪೂರೈಸುತ್ತಿರಲು, ಅವಿಚ್ಛಿನ್ನವಾಗಿ ಘೋಷಿಸುತ್ತಿರುವ ಸ್ವಸ್ತಿವಾಚನ ಮಂತ್ರಗಳನ್ನು ಪುರೋಹಿತವರ್ಗವು ಪೂರೈಸುತ್ತಿರಲು, ಶ್ರೀವ್ಯಾಸರಾಜಯತೀಂದ್ರರ ಅನಿಂದ್ಯ(ಉತ ಪ್ರ)ವಾದ ವಿದ್ಯಾವೈಭವಶ್ಲಾಘನೆಯಿಂದ ಪಂಡಿತಮಂಡಲಿಯು ತಲೆದೂಗುತ್ತಿರಲು, ಸಮೀಪದಲ್ಲಿಯೇ ಕವಿಸಮೂಹವು ಶ್ರೀವ್ಯಾಸರಾಜತೀರ್ಥರು ನೆರವೇರಿಸಿದ ನಾನಾ ದುರ್ವಾದಿ ದಿಗ್ವಿಜಯ ಬಿರುದಾವಳೀ ರೂಪವಾದ ಮನೋಹರವಾದ ಕಾವ್ಯರಚನೆ ಮಾಡಿ ಹೇಳುತ್ತಿರಲು, ಶ್ರೀವ್ಯಾಸರಾಜಯತೀಶ್ವರರ ಬಾಲಾರಭ್ಯ ಪ್ರಕಟಿತವಾದ ಅತಿಗಂಭೀರ ನಿರುಪಮ ಚರಿತ್ರೆಗಳೆಂಬ ಕೀರ್ತಿಸ್ತವನವನ್ನು ಶ್ರವಣಮಾಡಿದ ಪೌರಜಾನಪದರು ಅತ್ಯಾಶ್ಚರ್ಯದಿಂದ ಮಂದಹಾಸಯುಕ್ತರಾಗಿ ಬಿಚ್ಚುಗಣ್ಣುಗಳಿಂದ ಆ ಯತಿವರ್ಯರ ತೇಜಃಪುಂಜಮೂರ್ತಿಯನ್ನು ನಿರೀಕ್ಷಿಸುತ್ತಿರಲು, ಕರ್ನಾಟಕ ಸಾಮ್ರಾಜ್ಯಾಧೀಶ್ವರನಾದ ಆ ಕೃಷ್ಣಭೂಪತಿಯು ತಾನೇ ತನ್ನ ಕರಕಮಲಗಳಿಂದ ಅನರ್ಥ್ಯರತ್ನಗಳಿಂದ ತುಂಬಿದ ಸುವರ್ಣಕುಂಭವನ್ನು ತೆಗೆದುಕೊಂಡು ಪೂಜ್ಯರಾದ ಭಗವಾನ್ ಶ್ರೀವ್ಯಾಸರಾಜ ತಪಸ್ವಿಗಳನ್ನು ವಿವಿಧ ರತ್ನಸಮೂಹಗಳಿಂದ ಅಭಿಷೇಕ ಮಾಡಲಾರಂಭಿಸಿದನು. 

ತಂ ವ್ಯಾಸಭಿಕ್ಷುಂ ಸಕಸ್ಸರ ಭೂಪೋಭಿಷಿಂಚನ್‌ ಪುರತೋ ಬುಧಾನಾಂ | ವಾರಾಶಿಪುಮಕುಟಾಗ್ರಭಾಗಮಾಶಾವಶಾನಾಥ ಇವಾಬಭಾಸೇ || 

ಸಮಸ್ತ ದೇವತೆಗಳ ಎದುರಿನಲ್ಲಿ ಸಾಗರಕುಮಾರಿಯಾದ ಶ್ರೀಲಕ್ಷ್ಮೀದೇವಿಯ ಕಿರೀಟದ ಅಗ್ರಭಾಗವನ್ನು ಚಂದ್ರನು ತನ್ನ ಶೀತಲಕಿರಣಗಳಿಂದ ಅಭಿಷೇಕ ಮಾಡುತ್ತಶೋಭಿಸಿದಂತೆ ಆ ಕೃಷ್ಣದೇವರಾಯ ಮಹಿಪತಿಯು ಸಮಸ್ತ ಭೂದೇವ(ಪಂಡಿತ)ರ ಸಮಕ್ಷಮದಲ್ಲಿ ಕಿರಣದಂತೆ ಹೊಳೆಯುವ ಸಕಲ ರತ್ನಗಳಿಂದ ಅಭಿಷೇಕಮಾಡಿ ಚಂದ್ರನಂತೆ ಕಂಗೊಳಿಸಿದನು, ಆ ಮಂಗಳಕರ ದೃಶ್ಯ ಅಪೂರ್ವವಾಗಿದ್ದಿತು. 

ಶಾಸ್ತ್ರಾರ್ಣವಾಃ ಪಡಪಿ, ತೇನ ಸುಖೇನ ಪೀತಾಃ ಶ್ರೀವ್ಯಾಸಯೋಗಿಪತಿನೇತಿ ಚಿರಾಯ ಭೀತಾ | ಆದರ್ಮಣಿಃಗಣ್ಯರವನೀಂದ್ರಮೂರ್ತಿ ತಸ್ಯಾಭಿಷೇಕಮತನೋಚತುರರ್ಣವೀವ || 

ಚತುಸ್ಸಮುದ್ರಪರ್ಯಂತ ಧರಾಧೀಶನಾದ ಕೃಷ್ಣದೇವರಾಯನು ಚತುಸ್ಸಮುದ್ರಫಲಕಾಪರ್ಯಂತ ಭೂತಳದಿಂದಲೂ ರತ್ನಗಳನ್ನು ಸಂಗ್ರಹಿಸಿ ಷಟ್‌ ಶಾಸ್ತ್ರಗಳೆಂಬ ಸಮುದ್ರಪಾನಮಾಡಿದ ಬ್ರಹ್ಮಜ್ಞಾನಿಗಳಾದ ಶ್ರೀವ್ಯಾಸಭಿಕ್ಷುಗಳಿಗೆ ಅಭಿಷೇಕ ಮಾಡಿದನು - ಆರು ಶಾಸ್ತ್ರಗಳೆಂಬ ಸಮುದ್ರಗಳನ್ನೂ ವ್ಯಾಸರಾಜಯೋಗಿಗಳು ಸುಲಭವಾಗಿ ಕುಡಿದುಬಿಟ್ಟಿರುವುದರಿಂದ ಇನ್ನು ತಮ್ಮ ಗತಿಯೇನೆಂಬ ಭಯದಿಂದ ನಾಲ್ಕು ಸಮುದ್ರಗಳೂ ಒಂದಾಗಿ ಸೇರಿ ಕೃಷ್ಣಭೂಪನ ರೂಪ ತಾಳಿ, ತಮ್ಮಲ್ಲಿ ಹುಟ್ಟಿದ ಎಲ್ಲಾ ರತ್ನಗಳನ್ನೂ ತೆಗೆದುಕೊಂಡು ಬಂದು ವ್ಯಾಸಭಿಕ್ಷುಗಳನ್ನು ಪ್ರಸನ್ನೀಕರಿಸಿಕೊಳ್ಳಲು ವ್ಯಾಸಮುನೀಂದ್ರರಿಗೆ ಅಭಿಷೇಕಮಾಡುತ್ತಿರುವವೋ ಎಂಬಂತೆ ಕಾಣುತ್ತಿತ್ತು. ಅಂದರೆ ರಾಯನು ಮಾಡಿದ ಅಭಿಷೇಕಕ್ಕೆ ಉಪಯೋಗಿಸಿದ ರತ್ನಗಳು ಅಸಂಖ್ಯಾತವಾಗಿದ್ದವು ಎಂದು ಭಾವ. ಅದು ಹೇಗೆ ಕಾಣಿಸುತ್ತಿತ್ತೆಂದರೆ - 'ಸಮುದ್ರವಸನಾ' ಎನಿಸಿದ ಸಾಕ್ಷಾತ್ ಭೂದೇವಿಯು ಷಟ್‌ ಶಾಸ್ತ್ರ ಸಮುದ್ರಗಳನ್ನೂ ಪಾನಮಾಡಿದ್ದ ವ್ಯಾಸತೀರ್ಥರನ್ನು ಸಂತೋಷಪಡಿಸದಿದ್ದರೆ ಅವರು (ಅಗಸ್ವರಂತೆ) ಚತುಸ್ಸಮುದ್ರಗಳನ್ನೇನಾದರೂ ಪಾನಮಾಡಿಬಿಟ್ಟರೆ, ತಾನು ನಿರ್ವಸನಳಾಗಬೇಕಾದಿತೆಂಬ ಭೀತಿಯಿಂದ ತನ್ನಲ್ಲಿ ಉತ್ಪನ್ನವಾದ (ಬಹುರತ್ನಾ ವಸುಂಧರಾ) ರತ್ನಗಳಿಂದ ಕೃಷ್ಣನರಪತಿಯ ರೂಪತಾಳಿ ಶ್ರೀವ್ಯಾಸರಾಜರಿಗೆ ಅಭಿಷೇಕ ಮಾಡಿದಳೇನೋ ಎಂಬಂತೆ ಕಾಣುತ್ತಿತ್ತು! 

ಕನ್ನಡ ಸಾಮ್ರಾಟನು ರತ್ನಾಭಿಷೇಕ ಮಾಡುತ್ತಿರುವಾಗ ಶ್ರೀವ್ಯಾಸರಾಜರ ಶಿರೋಭಾಗದಿಂದ “ಖಲ ಖಲ” ಶಬ್ದಮಾಡುತ್ತಾ ರತ್ನಗಳು ಕೆಳಗುರುಳುತ್ತಿದ್ದವು. ಆ ಶಬ್ದವನ್ನು ಆಲಿಸಿದರೆ, ಜಗತ್ತಿನಲ್ಲಿ ಯಾವ ರಾಜ ಅಥವಾ ವಿದ್ವಾಂಸನಾಗಲೀ ನವರತ್ನಗಳಿಂದ ಅಥವಾ ನವರತ್ನಮಾಲಿಕೆಗಳಿಂದ ಈ ಕೃಷ್ಣದೇವರಾಯನಂತೆ ವ್ಯಾಸಮುನೀಂದ್ರರನ್ನು ಪೂಜಿಸುವುದಿಲ್ಲವೋ ಅಂತಹ ರಾಜ ಅಥವಾ ವಿದ್ವಾಂಸರು “ನೀಚರು ನೀಚರು” ಎಂದು ಆ ರತ್ನಗಳು “ಖಲ ಖಲ” ಶಬ್ದದಿಂದ ನಿಂದಿಸುತ್ತಿರುವಂತೆ ಭಾಸವಾಗುತಿತ್ತು ಕೃಷ್ಣದೇವರಾಯನಿಂದ ಅಭಿಷಿಕ್ತವಾದ ರತ್ನಗಳ ಸಮೂಹವು ಶ್ರೀವ್ಯಾಸರಾಜರ ತೇಜಸ್ಸಿನಿಂದ ಪ್ರಕಾಶಮಾನವಾದ ಸಕಲ ದಿಕ್ತಟಗಳ ಭಿತ್ತಿಭಾಗಗಳಿಂದ ಧಿಕ್ಕರಿಸಲ್ಪಟ್ಟು ಅವಮಾನದಿಂದ ಭೂಮಿಗೆ ಬಿದ್ದವೋ ಎಂಬಂತೆ ಭೂಮಿಯಲ್ಲಿ ಅಲ್ಲಲ್ಲಿ ಜಾರಿದವು.200 

ಪ್ರಕಾಶಮಾನವಾದ ವಿವಿಧ ಕಾಂತಿರಂಜಿತ ರತ್ನ ಸಮುದಾಯದಿಂದ ಶ್ರೀವ್ಯಾಸಭಗವಾನರು ಪರಿವೃತರಾಗಿ; ಅವುಗಳನ್ನು ಸಜ್ಜನರಿಗೆ ಶೀಘ್ರವಾಗಿ ದಾನಮಾಡಬೇಕೆಂಬ ಔತ್ಸುಕ್ಯದಿಂದ ಶೋಭಿಸುತ್ತಿರಲು ಲೋಕಾನಂದಕರ ಕಾಂತಿವೃಷ್ಟಿಯನ್ನು ಕರೆಯುವುದನ್ನು ಸೂಚಿಸುವ ಪ್ರಭೆಯ (ಕಾಂತಿಯ) ಪರಿಧಿಯಿಂದ ಶೋಭಿಸುವ ಸೂರ್ಯದೇವನಂತೆ ರಾಜಿಸುತ್ತಿದ್ದರು. 

ಆಗ ಈ ಮಹೋತ್ಸವಕ್ಕಾಗಿ ವಿಶೇಷಾಹ್ವಾನದಿಂದ ಆಗಮಿಸಿದ್ದ ಅನೇಕ ನೆರೆಹೊರೆಯ ರಾಜರು, ಸುಲ್ತಾನರು, ಮಹಾಮಾಂಡಲೀಕರು, ಸಾಮಂತರು, ಪ್ರಮುಖ ಪೌರಜಾನಪದರು, ಲೌಕಿಕ ವೈದಿಕ ಧರ್ಮಾಭಿಮಾನಿಗಳು, ಇವರೆಲ್ಲರನ್ನೂ ಕನಕಹರಿಪೀಠದಲ್ಲಿ ಕಂಗೊಳಿಸಿ, ತಮ್ಮ ಕರುಣಾದ್ರ್ರ ದೃಷ್ಟಿಯಿಂದ ಅವಲೋಕಿಸುತ್ತಾ ಆಶೀರ್ವದಿಸುತ್ತಿದ್ದ ಶ್ರೀವ್ಯಾಸರಾಜ- ಯತಿಸಾರ್ವಭೌಮರಿಗೆ ಭಕ್ತಿಶ್ರದಾನ್ವಿತರಾಗಿ ಅನರ್ಘ ಕಾಣಿಕೆಗಳನ್ನು ಸಮರ್ಪಿಸಿ ಕೃತಾರ್ಥರಾದರು. ಅವರಲ್ಲಿ ವಿಧರ್ಮಿಯರಾದ ಬಿಜಾಪುರ, ಗುಲ್ಬರ್ಗಾ, ಬಿದಿರೆ ಮುಂತಾದ ಬಹುಮನಿ ಸುಲ್ತಾನರು, ಒಂಟೆಯ ಮೇಲೆ ನಗಾರಿಯ ಬಿರುದು, ಒಂಟೆಯ ಮೇಲೆ ಹಸಿರು ನಿಶಾನಿಯ ಬಿರುದು, ಒಂಟೆಯ ಮೇಲೆ ಸ್ವರ್ಣಗೌಡದಲ್ಲಿ ಹಸಿರು ಛತ್ರಿಯ ಬಿರುದು ಮುಂತಾದ ಮುಸ್ಲಿಂ ರಾಜರುಗಳ ವಿಶಿಷ್ಟ ಬಿರುದಾವಳಿಗಳು ಮತ್ತು ಅಸಾಧಾರಣವೆನಿಸಿದ ಹಸಿರು ಛತ್ರಿಯನ್ನು ಹಿಡಿಸಿಕೊಂಡು ಹೋಗುವ ಗೌರವಗಳನ್ನೂ ಧನ-ಕನಕ-ವಸ್ತ್ರಾದಿಗಳನ್ನೂ ಶ್ರೀವ್ಯಾಸತೀರ್ಥರಿಗೆ ಸಮರ್ಪಿಸಿದ್ದು ಒಂದು ಅತಿಶಯವಾಗಿತ್ತು. 

ಆನಂತರ ಶ್ರೀವ್ಯಾಸರಾಜರು ತಮ್ಮ ಅಸಾಧಾರಣವಾದ ತೇಜಃಪ್ರಭಾವವನ್ನು ತಮ್ಮಲ್ಲಿ ಯಾಚಿಸಿ, ಪಡೆಯಲಾಶಿಸಿ ಧರೆಗಿಳಿದು ಬಂದು ಜಗತ್ತಿನಲ್ಲಿ ತೇಜಸ್ಥಯರೆಂದು ಪ್ರಖ್ಯಾತರಾದ ಸೂರ್ಯಚಂದ್ರಾಗ್ನಿಗಳೋ ಎಂಬಂತಿರುವ, ನಕ್ಷತ್ರಗಣ- ಪರಿವೃತವಾದ ನವಗ್ರಹಸಮೂಹವೋ ಎಂಬಂತಿರುವ, ಕೃಷ್ಣದೇವರಾಯನ ಪರಿಶುದ್ಧ ಭಕ್ತಿಲತೆಯ ಕುಸುಮಗಳಂತಿರುವ ವ್ಯಾಸಮುನಿಗಳ ಪ್ರಖರ ತಪಸ್ಸೆಂಬ ದೇದೀಪ್ಯಮಾನವಾದ ಅಗ್ನಿ ಸ್ಪುಲಿಂಗ (ಕಿಡಿ)ಗಳಂತಿರುವ ಪ್ರಕಾಶಮಾನ ಕಿರಣ ಸಮೂಹದಿಂದ ವಂಚಿಸಲ್ಪಟ್ಟ, ಆ ಸಭಾತಳದಲ್ಲಿರುವ ಮಂಗಳಕರ ಮಣಿದೀಪಗಳ ಕಾಂತಿಯುಳ್ಳ, ಆ ಅಪರಿಮಿತ ರತ್ನಸಮೂಹವನ್ನು ಭೂಸುರರು ರಾಶಿ ರಾಶಿ ಮಾಡಿದರು. ಆ ರತ್ನರಾಶಿಗಳಲ್ಲಿ ಅರ್ಧಭಾಗವನ್ನು ಅನೇಕ ಪಂಡಿತರು, ಪ್ರೋತ್ರೀಯ ಬ್ರಾಹ್ಮಣರುಗಳಿಗೆ ಅಗ್ರಹಾರಗಳನ್ನು ನಿರ್ಮಿಸಿ ದಾನಮಾಡಲೋಸುಗ ಕಾದಿರಿಸಿ, ಉಳಿದ ರತ್ನರಾಶಿಗಳನ್ನು ಉತ್ಸವಕ್ಕಾಗಿ ಬಂದಿದ್ದವರಿಗೆ ಶ್ರೀಗಳವರು ಉದಾರವಾಗಿ ದಾನಮಾಡಿದರು. ಶ್ರೀವ್ಯಾಸರಾಜರ ದಾನಕ್ರಮ ಅಪೂರ್ವವಾಗಿದ್ದಿತು. 

“ತತ್ರ ಭಗವಾನರ್ಥ ಸರಣಿಲಂಘನ ಜಂಘಾಲಾನುಪಾದಾನಾನೀವ ತೇಜಸಾಂ ತ್ರಯಾಣಾಂ, ಅಸದೃಶಸ್ವತೇಜೋ ಬಿಭಿಕ್ಷಿಷಯ ಕ್ಷಾತಲಮಾಪತಿತಾನಿ ರತ್ನಾನಿ......ಕೋಣೀಸುರಯತ್ನವಿಶ್ರಾಣಿತಾವಶೇಷಾಣಿ ತಾನಿ ರಾಶಿಂ ಕಾರಯಿತ್ವಾ, ನಾನಾ ದಿಶಾಂಚಲೇಭ್ಯಸಮಾಗತಾನಾಂ ಕುಂಡಲಾಯ ತುಂಡೀರಾಧಿಪಾನಾಂ, ಕೇಯೂರಾಯ ಕೇರಲಾನಾಂ, ಹಾರಾಯ ಪಾರಕಾನಾಂ, ಮಕುಟಾಯಲಾಟಾನಾಂ, ಅಂಗುಲೀಯಕಾಯಾ ಕಲಿಂಗಾನಾಂ, ಕಂಕಣಾಯ ಕೊಂಕಣಾನಾಂ, ನಿಷ್ಕಾಯ ತುರುಷ್ಕಾಣಾಂ, ಚೂಡಾಯ ಗೌಡಾನಾಂ, ತರಲಾಯ ಚೋಲಾನಾಂ, ಕಾಂಚೀಗುಣಾಯ ಪಾಂಚಾಲಾನಾಂ, ಅನೇಷಾಮಪಿ ಭೂಭುಜಾಂ ವದಾನ್ಯಾಗ್ರಣೀಃ ಸ ಭಿಕ್ಷುಃ ಪ್ರಾದಿಕ್ಷತ್ ” – ವ್ಯಾಸಯೋಗಿಚರಿತಮ್.

ಆ ರತ್ನರಾಶಿಗಳನ್ನು ತುಂಡೀರದೇಶಾಧಿಪತಿಗೆ ಕರ್ಣಕುಂಡಲಕ್ಕಾಗಿಯೂ, ಕೇರಳ ದೇಶಾಧಿಪತಿಗೆ ಕೇಯೂರ(ಭುಜಕೀರ್ತಿ)- ಗಳಿಗಾಗಿಯೂ, ಪಾರಶೀದೇಶಾಧಿಪತಿಗಳಿಗೆ ಹಾರಕ್ಕಾಗಿಯೂ, ಲಾಟಾಧಿಪತಿಗೆ ಕಿರೀಟಕ್ಕಾಗಿಯೂ, ಕಳಿಂಗಾಧಿಪತಿಗೆ ಅಂಗುಳೀಯಕ್ಕಾಗಿಯೂ, ಕೊಂಕಣ ದೇಶಾಧಿಪತಿಗೆ ಕಂಕಣಗಳಿಗಾಗಿಯೂ, ತುರಷ್ಟ ದೇಶಾಧಿಪತಿಗಳಿಗೆ ನಿಷ್ಠ(ನಾಣ್ಯ)- ಗಳಿಗಾಗಿಯೂ, ಗೌಡ ದೇಶಾಧಿಪತಿಗಳಿಗೆ ಚೂಡಾಮಣಿಗಳಾಗಿಯೂ, ಚೋಳ ದೇಶಾಧಿಪತಿಗಳಿಗೆ ತರಳ(ಚಪಲಹಾರ)-ಗಳಿಗಾಗಿಯೂ, ಪಾಂಚಾಲ ದೇಶಾಧಿಪತಿಗೆ ಕಾಂಚೀಗುಣ(ನಡುಪಟ್ಟಿ)ಕ್ಕಾಗಿಯೂ ಉಳಿದ ಸಾಮಂತಾದಿರಾಜರಿಗೂ ಆ ರತ್ನಗಳನ್ನು ದಾನಸೌಂಡರಾದ ಶ್ರೀವ್ಯಾಸರಾಜಮುನೀಂದ್ರರು ಅನುಗ್ರಹಿಸಿದರು. 

ಹೀಗೆ ಕೃಷ್ಣದೇವರಾಯನ ಮಹಾ ಔದಾರ್ಯ, ಗುರುಭಕ್ತಿ, ಕೀರ್ತಿ ಮುಂತಾದವು ನಾನಾ ದೇಶದ ರಾಜ-ಮಹಾರಾಜರಿಗೆ ಯಾವಾಗಲೂ ಸ್ಮರಣೆಗೆ ಬರುತ್ತಿರುವಂತೆ ಮಾಡಿ, ತರುವಾಯ ಶ್ರೀವ್ಯಾಸತೀರ್ಥರು ಶ್ರೀಮದಾಚಾರ್ಯರ ವಿದ್ಯಾಸಾಮ್ರಾಜ್ಯದ ಮುಖ್ಯಗುರಿಯಾದ ವಿದ್ವಜ್ಜನ ಪೋಷಣ-ಸನ್ಮಾನಗಳ ಕಡೆ ಗಮನವಿತ್ತು ಅಲ್ಲಿ ಸೇರಿದ್ದ ಅಸಂಖ್ಯ ವಿದ್ವಜ್ಜನರು, ಕವಿ-ಸಾಹಿತಿಗಳು, ಕಲೆಗಾರರಿಗೆ ಉದಾರವಾಗಿ ಬೆಲೆಬಾಳುವ ರತ್ನಗಳನ್ನು ಕೊಡುಗೈ ದೊರೆಗಳಾದ ಆ ಮಹನೀಯರು ದಾನಮಾಡಿದ ಬಗೆ ನೋಡಿ ಎಷ್ಟು ಹೃದಯಂಗಮವಾಗಿದೆ - 

ಹಸ್ತಾಂಭೋರುಹಮಾನತಾಂಗುಲಿದಲಂ ವಿಸ್ತಾರಯಾತೃತಾಂ | ವಿದ್ವದ್ರಾಜಿಷ್ಟು ತತ್ರ ತತ್ರ ಸದಸಿ ವ್ಯಾಸಸ್ಯ ಯೋಗೀಶಿತುಃ || ಯುಷ್ಮಾಭಿರ್ಭುವಿಪಂಚಜನ್ಮಭಿರಿಯಂ ಭೋಕ್ಕುಂ ಧ್ರುವಂ ಶಕ್ಯತೇ | ರತ್ನಾನಾಂ ಪಟಲೀತಿ ಸೂಚನಮಿವ ವ್ಯಾತವ್ವದಾಲಕ್ಷತ || 

ಶ್ರೀವ್ಯಾಸರಾಜರು ರತ್ನರಾಶಿಗೆ ಕೈಹಾಕಿ ಮುಷ್ಟಿಯಲ್ಲಿರತ್ನಗಳನ್ನು ಹಿಡಿದು ವಿದ್ವಾಂಸರಿಗೆ ದಾನಮಾಡುವಾಗ ಅವರ ಕರಮುಷ್ಟಿಯು ಸಡಿಲಾಗಿ ಹಸ್ತದ ಐದು ಬೆರಳುಗಳು ವಿಸ್ತಾರವಾಗಿ ಕಂಗೊಳಿಸುತ್ತಿತ್ತು. ಅದು “ನಾವೀಗ ನಿಮಗೆ ನೀಡುತ್ತಿರುವ ಈ ಸಂಪತ್ತು ಈ ಲೋಕದಲ್ಲಿ ನೀವು ಐದು ಜನ್ಮಗಳವರೆಗೂ ಭೋಗಿಸಲು ಸಾಧ್ಯವಾಗುವುದು” ಎಂದು ಸೂಚಿಸುವಂತಿತ್ತು! 

ಆ ತರುವಾಯ ಯೋಗೀಂದ್ರರು ಕವಿ ಸಮೂಹವನ್ನು ವಿಶೇಷಾಕಾರವಾಗಿ ರತ್ನದಾನಗಳಿಂದ ಸಂಭಾವಿಸಿದರು. ಸಂಭಾವನೆ ಪಡೆದು ಆನಂದೋದ್ರೇಕದಿಂದ ಪ್ರಮತ್ತರಾದ ಕವಿಸಮೂಹವು ಸ್ತುತಿರೂಪಗಳಾದ ಮನೋಜ್ಞ ಆಶುಕವಿತೆಗಳನ್ನು ರಚಿಸಿ ಹೇಳಹತ್ತಿದರು. ಆ ಕಾವ್ಯಕೋಲಾಹಲಗಳಿಂದ ಆ ಸಭೆಯು ವಾತಾಯನ ಮಾರ್ಗದಿಂದ ಹೊರಹೊಮ್ಮಿದ ಧ್ವನಿ ವಿಶೇಷಗಳಿಂದ ಅಲ್ಲೋಲಕಲ್ಲೋಲವಾಯಿತು.202 

ಶ್ರೀವ್ಯಾಸರಾಜರು ತಮಗೆ ಜರುಗಿದ ರತ್ನಾಭಿಷೇಕದಿಂದ ಲಬ್ಧವಾದ ಸಮಸ್ತ ರತ್ನರಾಶಿಯನ್ನೂ ವಿದ್ವಾಂಸರು ರಾಜಾಧಿರಾಜರಿಗೆ ದಾನಮಾಡಿಬಿಟ್ಟಿದ್ದರಿಂದ ಎಲ್ಲರೂ ಅಚ್ಚರಿಯಿಂದ ಅವರ ತ್ಯಾಗವನ್ನು ಕೊಂಡಾಡಿದರು. ಅನಂತರ ಸಭಾಸದರೆಲ್ಲರೂ ಕೃಷ್ಣದೇವರಾಯನನ್ನು ತುಂಬಿಬಂದ ಹೃದಯದಿಂದ ಹೊಗಳಹತ್ತಿದರು. 

ಸಂಪತ್ಸಕಲದಿಗಂತರಾರ್ಜಿತಾ ಯಾ ತಾದೃಶ್ಯಾ ನರಸಮಹೀಪಸೂನ್ಯತಾಯಾಃ | ವ್ಯಾತಾನೀತ್ಸಮುಚಿತಮೇಷ ಇತ್ಯಶೇಷ್ಯಶ್ಲಾಘ ಸದಸಿ ಜನ್ಮಸ್ತ ಕೃಷ್ಣರಾಯಃ || 

ಪೂರ್ವದಲ್ಲಿ ಅತ್ಯಂತ ಪ್ರಸಿದ್ಧನಾಗಿದ್ದ ತುಳುವ ನರಮಹೀಪಾಲನ ಪುತ್ರನಾಗಿ ಹುಟ್ಟಿ, ಸಮಸ್ತ ದಿಗ್ಧಶಗಳನ್ನೂ ಜಯಿಸಿ ಸಂಪಾದಿಸಿದ ಕೃಷ್ಣದೇವರಾಯಸಾರ್ವಭೌಮನ ಸಂಪತ್ತು ಬಹುಯೋಗ್ಯವಾದದ್ದು, ಖ್ಯಾತ ತಂದೆಗೆ ಮಗನಾಗಿ ಜನಿಸಿ ಬಾಹುಬಲದಿಂದ ಅಪಾರ ಸಂಪತ್ತನ್ನು ಗಳಿಸಿ ಅದನ್ನು ಶ್ರೀವ್ಯಾಸಯೋಗೀಂದ್ರರ ರತ್ನಾಭಿಷೇಕಕ್ಕಾಗಿ ಉಪಯೋಗಿಸಿದ್ದರಿಂದ ಆ ಸಂಪತ್ತು ಸಾರ್ಥಕತೆಯನ್ನು ಪಡೆಯಿತು! ಎಂದು ಆ ಮಹಾಸಭೆಯಲ್ಲಿ ಸರ್ವರೂ ಏಕಕಂಠದಿಂದ ಕೃಷ್ಣದೇವರಾಯನನ್ನು 

ಕೊಂಡಾಡಿದರು. 

ಇಂತು ವಿಶೇಷ ವೈಭವದಿಂದ ಮಹೋತ್ಸವವು ಪೂರ್ಣವಾದ ಮೇಲೆ ಶ್ರೀವ್ಯಾಸತೀರ್ಥರು ಸುವರ್ಣ ಸಿಂಹಾಸನದಿಂದ ಮೇಲೆದ್ದು ಅತಿ ವಿಚಕ್ಷಣ ಕರುಣಾರಸ ಸಂದಿ ಪುಷ್ಪರಸದ ಹೊರಹೊಮ್ಮಿಕೆಯಿಂದ ಪರಿಪೂರ್ಣವಾದ ಕಮಲಮಾಲಿಕೆ- ಯಂತಿರುವ ತಮ್ಮ ಕೃಪಾದೃಷ್ಟಿಯನ್ನು ಕೃಷ್ಣದೇವರಾಯನ ಮೇಲೆ ಬೀರಿ, ಅವನ ಗುರುಭಕ್ತಾತಿಶಯಾದಿಗಳನ್ನು ಅತಿಮೃದುಮಧುರ ವಾಕ್ಯಗಳಿಂದ ಶ್ಲಾಘಿಸಿ, ನರಪತಿಯನ್ನು ಕೃತಾರ್ಥನನ್ನಾಗಿಸಿ, ಸಾಮ್ರಾಟನೊಡನೆ ಹೊರಟು ಮೊಳಗುತ್ತಿರುವ ಮಂಗಳಕರ ವಾದ್ಯಧ್ವನಿಗಳಿಂದ ಬ್ರಹ್ಮಾಂಡಭಾಂಡವು ತುಂಬುತ್ತಿರಲು, ಮುಂಭಾಗದಲ್ಲಿ ಸಾಮಂತ ರಾಜಕುಮಾರರು ಉಚ್ಚಶ್ರವಸ್ಸಿನಂತಿರುವ ದಿವ್ಯಾಶ್ವಗಳನ್ನೇರಿ ತೆರೆಯಿಂದಗಮಿಸುತ್ತಿರುವಾಗ ಆ ಅಶ್ವಗಳ ಗೊರಸುಗಳಿಂದ ಮೇಲೆದ್ದು ಭೂತಲವನ್ನೆಲ್ಲಾ ವ್ಯಾಪಿಸಿರುವ ಧೂಳಿಯಿಂದ ದಿಕ್ತಟಗಳಲ್ಲೆಲ್ಲಾ ವ್ಯಾಪಿಸುತ್ತಿರಲು, ಮುಂದೆ ರಾಜಗಾಂಭೀರ್ಯದಿಂದ ಸಾಗಿರುವ ಆನೆಗಳ ಹಣೆಗಳಲ್ಲಿ ಕಟ್ಟಿರುವ ಕನಕ-ಮಕರಪದಕಗಳು ಕಟಕಟ ಶಬ್ದ ಮಾಡುತ್ತಾ ಆನೆಗಳು ಬರುತ್ತಿರಲು, ಸುವರ್ಣ-ರಜತವೇತ್ರಧಾರಿ ಜನರು ಜಯಧ್ವನಿ ಮಾಡುತ್ತಾಆನೆ-ಕುದುರೆ ಹಾಗೂ ಶ್ರೀಯವರ ಸವಾರಿಗೆ ದಾರಿಮಾಡಿಕೊಡುತ್ತಿರುವುದರಿಂದ ಉಂಟಾದ ಕೋಲಾಹಲವನ್ನಾಲಿಸಿ ಸೈನಿಕ ಜನರು ಉತ್ತೇಜಿತರಾಗಿ ಗುಂಪು ಗುಂಪಾಗಿ ನಡೆದುಬರುತ್ತಿರಲು, ನ್ಯಾಯವನ್ನು ಅನುಸರಿಸಿದ ಧರ್ಮದಂತೆ ಪ್ರತ್ಯಕ್ಷವಾಗಿ ಹಿಂಬಾಲಿಸಿರುವ ಜನಸಮೂಹಯುಕ್ತರಾಗಿ, ಸುವರ್ಣಪಾಲಕಿಯಲ್ಲಿ ಮಂಡಿಸಿ ಶ್ರೀವ್ಯಾಸರಾಜಗುರುಚರಣರು ಮೆರವಣಿಗೆಯಿಂದ 

ದಯಮಾಡಿಸಿದರು. 

ಆ ಪರಮಾದ್ಭುತ ಸಾತ್ವಿಕ ಮಹೋತ್ಸವವನ್ನು ನೋಡಲು ರಾಜಬೀದಿಯ ಎರಡೂ ಪಾರ್ಶ್ವಗಳಲ್ಲಿ ಸಾಲುಗಟ್ಟಿ ನಿಂತಿರುವ ಜನರು ಶ್ರೀವ್ಯಾಸರಾಜರನ್ನು ಸತ್ಕರಿಸಲು ಪುಷ್ಪಮಾಲಿಕೆ-ಖಿಲ್ಲತ್ತುಗಳನ್ನು ಕರಾಂಜಲಿಯಲ್ಲಿ ಹಿಡಿದು ಅರ್ಪಿಸುತ್ತಾ ಸಹರ್ಷ ವಿಭ್ರಮೋತ್ಸಾಹಗಳಿಂದ ಜಯಜಯಕಾರ ಮಾಡುತ್ತಿದ್ದರು. ಹೀಗೆ ನಿಬಿಡವಾದ ರಾಜಬೀದಿಗಳನ್ನು ದಾಟಿ, ದಂಡಕಮಂಡಲುಧಾರಿಗಳಾದ, ಬ್ರಹ್ಮಜ್ಞಾನಿಗಳಾದ ಅನೇಕ ಪರಮಹಂಸ ಶಿಷ್ಯಮಂಡಲಿಯಿಂದ ಉಪಾಸಿತರಾಗುತ್ತಾ ಭಗವಾನ್ ಶ್ರೀವ್ಯಾಸತೀರ್ಥರು ಹತ್ತಿರದಲ್ಲಿಯೇ ಕಂಗೊಳಿಸುತ್ತಿದ್ದ ತಮ್ಮ 'ವಿಶ್ವಪಾವನಮಠ' (ಆಶ್ರಮ)ಕ್ಕೆ ದಯಮಾಡಿಸಿದರು.

ಶ್ರೀಮಠಕ್ಕೆ ದಯಮಾಡಿಸಿದ ಶ್ರೀವ್ಯಾಸಯತಿಪುಂಗವರಿಗೆ ಕೃಷ್ಣದೇವರಾಯನು ಭಕ್ತಿಯಿಂದ ನಮಸ್ಕರಿಸಿ ವಿನಯಪೂರ್ವಕವಾಗಿ ನಿಂತನು. ಆಗ ಶ್ರೀವ್ಯಾಸತೀರ್ಥರು ಮಂದಹಾಸ ಬೀರುತ್ತಾ ಅವನಿಗೆ ಫಲಮಂತ್ರಾಕ್ಷತೆಯನ್ನು ಅನುಗ್ರಹಿಸಿ, ಆಶೀರ್ವದಿಸಿ ಅರಮನೆಗೆ ಕಳುಹಿಸಿದರು.