|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ನಾಲ್ಕನೆಯ ಉಲ್ಲಾಸ

ಶ್ರೀವ್ಯಾಸರಾಜಯತಿಸಾರ್ವಭೌಮರು

೪೭. ಸಾಮ್ರಾಜ್ಯ ಗೌರವ ರಕ್ಷಣೆ

ಧೈರ್ಯ, ಶೌರ್ಯ, ಗಾಂಭೀರ್ಯ, ಸೌಜನ್ಯ, ದಯೆ, ವಿನಯ, ದಾನ ಶೂರತ್ವಾದಿ ಸದ್ಗುಣಮಂಡಿತನೂ, ಭಾಗವತಮೂರ್ಧನ್ಯನೂ ಆದ ಕೃಷ್ಣದೇವರಾಯನು ತನ್ನ ಎಲ್ಲಾ ಅಭ್ಯುದಯಗಳಿಗೂ ಶ್ರೀವ್ಯಾಸರಾಜಯತಿಸಾರ್ವಭೌಮರೇ ಕಾರಣರೆಂದು ನಂಬಿ ಅವರನ್ನು ತನ್ನ ಕುಲದೇವತೆಯಂತೆ ತ್ರಿಕಾಲದಲ್ಲಿಯೂ ಅತ್ಯಂತ ಭಕ್ತಿಪೂರ್ವಕವಾಗಿ ಸೇವಿಸುತ್ತಿದ್ದನು.

ಸಕಲ ಕುಮತವಾದಗಳನ್ನು ನಿರಾಕರಿಸಿ ದೈತಸಿದ್ಧಾಂತವನ್ನು ನಿಷ್ಕಂಟಕಗೊಳಿಸಿ ಷಡರ್ಶನ ರಾಜ್ಯ 

ಸಾರ್ವಭೌಮರಾಗಿ ಶ್ರೀವ್ಯಾಸಭಗವಾನರು ರಾಜಿಸುತ್ತಿದ್ದರೆ ಅವರ ಕಾರುಣ್ಯಾತಿಶಯಕ್ಕೆ ಪಾತ್ರನಾಗಿ, ಸಕಲ ದುಷ್ಟ ರಾಜರುಗಳನ್ನು ನಿರಾಕರಿಸಿ ಕನ್ನಡ ಸಾಮ್ರಾಜ್ಯ (ಧರ್ಮ ಸಾಮ್ರಾಜ್ಯ)ವನ್ನು ನಿಷ್ಕಂಟಗೊಳಿಸಿ, ಕರ್ನಾಟಕ ಸಾಮ್ರಾಜ್ಯ ಸಾರ್ವಭೌಮನಾಗಿ ಕೃಷ್ಣದೇವರಾಯನು ಕಂಗೊಳಿಸುತ್ತಿದ್ದನು. 

ವ್ಯಾಸತೀರ್ಥರು ಸಾಮ್ರಾಜ್ಯಸಭೆಯಲ್ಲಿ ಅನೇಕ ದಿಗ್ಧಂತಿಪಂಡಿತರನ್ನು ವಾದದಲ್ಲಿ ಜಯಿಸಿ ಕನ್ನಡ ಸಾಮ್ರಾಜ್ಯದ ಮತ್ತು ಕೃಷ್ಣದೇವರಾಯನ ಕೀರ್ತಿ ದಿಗಂತ ವಿಶ್ರಾಂತವಾಗುವಂತೆ ಮಾಡಿದ್ದರು. ಬಸವಾಭಟ್ಟ, ಲಿಂಗಣ್ಣಮಿಶ್ರ, ವಾಜಪೇಯಿ, ಕಾಶೀಮಿತ್ರ, ನರಸಿಂಹಾಶ್ರಮಮುನಿ, ಗದಾಧರ, ಪಕ್ಷಧರಮಿಶ್ರ ಮುಂತಾದವರು ವ್ಯಾಸತೀರ್ಥರಿಂದ ಪರಾಜಿತರಾದ ಪ್ರಕಾಂಡಪಂಡಿತರಲ್ಲಿ ಕೆಲವರು. ನಾನಾಶಾಸ್ತ್ರಕೋವಿದರಾದ ಇತರ ಪಂಡಿತರಂತೂ ಲೆಕ್ಕವಿಲ್ಲದಷ್ಟು ಜನರಿದ್ದರು! ಹೀಗೆ ವಾದದಲ್ಲಿ ವ್ಯಾಸಮುನಿಗಳಿಂದ ಪರಾಜಿತರಾದ ಕೆಲ ದುರ್ವಾದಿಗಳು ಮತ್ತೆ ಶ್ರೀವ್ಯಾಸರಾಜರೊಡನೆ ವಾದಿಸುವ ಧೈರ್ಯವಿಲ್ಲದೆ ತಲೆಮರೆಸಿಕೊಂಡು ವಿಜಯನಗರದ ಕೃಷ್ಣದೇವರಾಯನ ಮಹಾಶತ್ರುವಾಗಿದ್ದ ಕಳಿಂಗ ದೇಶಾಧಿಪತಿಯ ಆಸ್ಥಾನಕ್ಕೆ ಹೋಗಿ ಆಶ್ರಯ ಪಡೆದಿದ್ದರು. ಅವರು ವ್ಯಾಸರಾಯರ ಮೇಲೆ ಸೇಡು ತೀರಿಸಿಕೊಳ್ಳಲು ದೈತಸಿದ್ಧಾಂತದ ಮೇಲೆ ಕುತ್ತಿತ ದೋಷಾಭಾಸಗಳನ್ನು ಹೇರಿ ಒಂದು ಗ್ರಂಥವನ್ನು ರಚಿಸಿ ಅದನ್ನು ಕಳಿಂಗಾಧಿಪತಿಗಿತ್ತು, “ನಿಮ್ಮ ಶತ್ರು ಕೃಷ್ಣದೇವರಾಯ, ನಮ್ಮ ಶತ್ರು ವ್ಯಾಸತೀರ್ಥರು, ಈ ಗ್ರಂಥದಿಂದ ಅವರಿಬ್ಬರ ತೇಜೋವಧೆಯಾಗುವುದರಲ್ಲಿ ಸಂದೇಹವಿಲ್ಲ. ನೀವು ಈ ಗ್ರಂಥವನ್ನು ಕೃಷ್ಣದೇವರಾಯನಿಗೆ ಕಳಿಸಿಕೊಟ್ಟು ಒಂದು ತಿಂಗಳಲ್ಲಿ ಇದಕ್ಕೆ ಶ್ರೀವ್ಯಾಸರಾಜರಿಂದ ಉತ್ತರ ಗ್ರಂಥ ಬರೆಸಿ ಕಳಿಸಬೇಕು. ಇಲ್ಲದಿದ್ದರೆ ಜಯಪತ್ರಿಕೆ ಕಳಿಸಬೇಕು ಎಂದು ಹೇಳಿ ಕಳಿಸಿರಿ. ಈಗ್ರಂಥವನ್ನು ಖಂಡಿಸಲು ಯಾರಿಗೂ ಸಾಧ್ಯವಿಲ್ಲ. ಆಗ ನಿಮ್ಮ ನಮ್ಮ ಅಪಜಯದ ಸೇಡು ತೀರಿಸಿದಂತಾಗುವುದು” ಎಂದು ಮುಂತಾಗಿ ರಾಜನನ್ನು ಪ್ರಚೋದಿಸಿದರು. ಅದರಿಂದ ಉತ್ಸಾಹಿತನಾದ ಕಳಿಂಗ ದೇಶಾಧಿಪತಿ ವಿದ್ಯಾಧರಪಾತ್ರನು ತನ್ನ ಸೇನಾಪತಿಯೊಡನೆ ಆ ಗ್ರಂಥವನ್ನು ವಿಜಯನಗರಕ್ಕೆ ಕಳುಹಿಸಿ ಒಂದು ತಿಂಗಳಲ್ಲಿ ಈ ಗ್ರಂಥಕ್ಕೆ ಶ್ರೀವ್ಯಾಸರಾಜರಿಂದ ಖಂಡನಗ್ರಂಥವನ್ನಾದರೂ ಕಳಿಸಬೇಕು. ಇಲ್ಲದಿದ್ದರೆ ನೀವೇ ಖುದ್ದು ಜಯಪತ್ರಿಕೆಯನ್ನು ಕಳಿಸಬೇಕು ಎಂದು ಸಂದೇಶದೊಡನೆ ಕಳುಹಿಸಿಕೊಟ್ಟನು. 

ಕಳಿಂಗರಾಜ್ಯದ ಸೇನಾಧಿಪತಿಯು ಕೃಷ್ಣದೇವರಾಯನ ದರ್ಶನ ಪಡೆದು ತಮ್ಮ ರಾಜನು ಕಳಿಸಿದ ಗ್ರಂಥವನ್ನು ಸಮರ್ಪಿಸಿ ಒಂದು ತಿಂಗಳಲ್ಲಿ ಉತ್ತರ ಗ್ರಂಥವನ್ನು ದಯಪಾಲಿಸಬೇಕು ಅಥವಾ ಜಯಪತ್ರಿಕೆ ಬರೆದುಕೊಡಬೇಕು ಎಂಬ ಸಂದೇಶವನ್ನು ಅರುಹಿದನು. 

ಕಳಿಂಗ ದೇಶಾಧಿಪತಿಯ ಔದ್ಧತ್ವವನ್ನು ಕಂಡು ರಾಯನಿಗೆ ಅಸಾಧ್ಯ ಕೋಪವುಂಟಾಯಿತು. ಆದರೂ ಅದನ್ನು ತೋರ್ಪಡಿಸದೆ ಸೇನಾಧಿಪತಿಗೆ ಸೌಕರ್ಯಗಳನ್ನು ಏರ್ಪಡಿಸಿಕೊಡುವಂತೆ ಆಜ್ಞಾಪಿಸಿ ಮಹಾಮಂತ್ರಿ ತಿಮ್ಮರಸರೊಡನೆ ಶ್ರೀವ್ಯಾಸತೀರ್ಥರ ದರ್ಶನಕ್ಕಾಗಿ ಹೊರಟನು. 

ವ್ಯಾಸತೀರ್ಥರು ಪ್ರಾತರಾಕಾದಿ ಸ್ವಾಶ್ರಮೋಚಿತಕರ್ಮಗಳನ್ನೆಸಗಿ ಉಪನ್ಯಾಸಮಂದಿರಕ್ಕೆ ಚಿತ್ತೈಸಿ ಅಲ್ಲಿ ವಿದ್ಯಾಸಿಂಹಾಸನದಲ್ಲಿ ಕುಳಿತು ಪ್ರವಚನವನ್ನು ಪ್ರಾರಂಭಿಸಿದರು, ಅವರ ಮುಂದೆ ಒಂದು ಸುವರ್ಣವ್ಯಾಸಪೀಠವಿತ್ತು, ಅದರ ಮೇಲೆ ಒಂದು ತಾಲಾ ಓಲೆಯ ಗ್ರಂಥವಿತ್ತು. ಗುರುಗಳು ಅದನ್ನು ತೆರೆದು, ತಮ್ಮೆದುರು ಪಾಠಕ್ಕಾಗಿ ಕುಳಿತಿದ್ದ ಅನೇಕ ಯತಿಶಿಷ್ಯರು, ಸುಪ್ರಸಿದ್ಧಪಂಡಿತ ಸಮೂಹ, ಪ್ರೋತ್ರೀಯ ಬ್ರಾಹ್ಮಣರುಗಳು, ಹೀಗೆ ನೂರಾರು ಜನ ಶಿಷ್ಯರಿಗೆ ಉಪನಿಷತ್ತುಗಳ ತತ್ವರಹಸ್ಯಗಳನ್ನು ಉಪದೇಶಿಸಲಾರಂಭಿಸಿದರು. ಆಗ ಗುರುಗಳ ಕಂಠಧ್ವನಿ ಮಧ್ವಮತದ ವಿಜಯಶಂಖದಂತೆ ಧೀರಗಂಭೀರಧ್ವನಿಯಿಂದ ಆ ಪ್ರದೇಶವನ್ನೆಲ್ಲಾ ಶಬ್ದಾಯಮಾನಗೊಳಿಸಿ ವಿಜೃಂಭಿಸುತ್ತಿತ್ತು. ಅವರ ಮುಖಕಮಲದಿಂದ ಮುತ್ತಿನ ಅಕ್ಷರಮಾಲೆಯಂತೆ ಶುಭ್ರವಾದ ದಂತಪಕ್ತಿಗಳ ಮನೋಹರ ಕಾಂತಿಯು ಹೊರಹೊಮ್ಮುತ್ತಿತ್ತು. ಯೋಗಾಸನದಲ್ಲಿ ಕುಳಿತು ತದೇಕಚಿತ್ತರಾಗಿ ಪ್ರವಚನ ಮಾಡುತ್ತಿದ್ದರು ಗುರುವರರು. 

ಆಗ ರಭಸದಿಂದ ಒಳಬಂದ ದ್ವಾರಪಾಲಕನು ವ್ಯಾಸರಾಜರಿಗೆ ನಮಸ್ಕರಿಸಿ ಕರಜೋಡಿಸಿ ವಿನಯಪೂರ್ವಕವಾಗಿ ವಿಜ್ಞಾಪಿಸಿದನು - “ಮಹಾಸ್ವಾಮಿ, ಸುರಗುರು ಬೃಹಸ್ಪತ್ಯಾಚಾರ್ಯರು, ಪುರೋಹಿತರೇ ಮೊದಲಾದವರಿಂದೊಡಗೂಡಿ, ಸ್ವರ್ಗಾಧಿಪತಿಯಾದ ದೇವೇಂದ್ರನು ಜಗತಾಮಹರಾದ ಕಮಲಸಂಭವಾದ ಚತುರ್ಮುಖ ಬ್ರಹ್ಮದೇವರ ದರ್ಶನಾಕಾಂಕ್ಷಿಯಾಗಿ ಬಂದಂತೆ ಸಾಮ್ರಾಟ್ ಕೃಷ್ಣದೇವರಾಯನು ಅಮಾತ್ಯರು, ಪುರೋಹಿತರು, ಮುಂತಾದವರಿಂದ ಕೂಡಿಕೊಂಡು ತಮ್ಮ ದರ್ಶನಕ್ಕಾಗಿ ಸಮಯ ನಿರೀಕ್ಷಿಸುತ್ತಾ ಬಾಗಿಲಲ್ಲಿ ಕಾದುನಿಂತಿದ್ದಾರೆ. ಅಪ್ಪಣೆಯಾಗಬೇಕು” ಎಂದು ವಿಜ್ಞಾಪಿಸಿದನು. 

ತಪೋಧನರಾದ ವ್ಯಾಸರಾಜ ಗುರುವರರ ಅಣತಿಯಂತೆ ಮಠೀಯ ಪಂಡಿತ ವೈದಿಕವೃಂದದೊಡನೆ ಅಧಿಕಾರಿಗಳು ಕೃಷ್ಣನರಪತಿಯನ್ನು ವೇದಘೋಷದೊಡನೆ ಸ್ವಾಗತಿಸಿ ಕರೆತಂದರು. ಶ್ರೀಗಳವರಿಗೆ ಸಾಷ್ಟಾಂಗವೆರಗಿದ ಸಾಮ್ರಾಟರು - ತಿಮ್ಮರಸರು ಮಠದ ಅಧಿಕಾರಿಗಳು ತೋರಿದ ಚಿತ್ರಾಸನಗಳಲ್ಲಿ ಕುಳಿತರು. 

ಇಂಗಿತಜ್ಞರಾದ ವ್ಯಾಸಮುನಿಗಳು ನಗೆಮೊಗದಿಂದ ಭಕ್ತಿರಸಸಂಚಾರದಿಂದ ಪುಳಕಿತಗಾತ್ರನಾಗಿ ಕುಳಿತಿರುವ ನರೇಂದ್ರನ ಕುಶಲಪ್ರಶ್ನೆ ಮಾಡಿ “ಸಾರ್ವಭೌಮ, ಅನಿರೀಕ್ಷಿತವಾಗಿ ನೀನೀಗ ಬಂದ ಕಾರಣವೇನು ? ನಿನ್ನ ಮನದಾಶೆಯನ್ನರುಹು. ನಿನ್ನ ಅಭೀಷ್ಟವನ್ನು ನೆರವೇರಿಸುತ್ತೇವೆ” ಎಂದು ಆಜ್ಞಾಪಿಸಿದರು. 

ಗುರುವರ್ಯರು ತಾವಾಗಿಯೇ ತನ್ನಾಗಮನದ ಕಾರಣವನ್ನು ಪ್ರಶ್ನಿಸಿ ಅಭೀಷ್ಟವನ್ನು ಪೂರ್ಣಮಾಡುವುದಾಗಿ ಹೇಳಿದ್ದರಿಂದ ಸಂತೋಷದಿಂದ ವಿನಯಪೂರ್ವಕವಾಗಿ ಅಂಜಲೀಬದ್ದನಾಗಿ ಹೀಗೆ ವಿಜ್ಞಾಪಿಸಿದನು.

ಸ್ವಾಮಿನ್, ಗುರುವರ್ಯ! ಹಿಂದೆ ಅನೇಕ ದುಷ್ಟವಾದಿಗಳನ್ನು ತಾವು ನಿಗ್ರಹಿಸಿರುವುದು ಚಿತ್ತಕ್ಕೆ ವೇದ್ಯವೇ ಆಗಿದೆ. ಪ್ರತಿವಾದಿಗಳನ್ನು ಜಯಿಸುವುದರಲ್ಲಿ ಸಮರ್ಥವಾದ ತಮ್ಮ ವಾಗ್ಲೆ ಖರಿಯ ಮುಂದೆ ನಿಲ್ಲಲಾಗದೆ ಓಡಿಹೋಗಿ ತಮ್ಮ ದೇಶದಲ್ಲಿ ತಲೆಮರೆಸಿಕೊಂಡು ಸಂಚರಿಸುತ್ತಿದ್ದದುರ್ವಾದಿ ಪಂಡಿತರು ಇಂದ್ರಜಾಲ ವಿದ್ಯೆಗೆ ಸಚ್ಛಾಸ್ತ್ರದಂತೆಯೂ, ಮಾಯಾಮತಕ್ಕೆ ಪ್ರಾಣರೂಪವ, ಮೋಹಕ ಶಾಬ್ರಿಕ ಸಮೂಹಕ್ಕೆ ತತ್ವದಂತೆಯೂ, ಮಿಥೆಗೆ ಜನ್ಮಭೂಮಿಯಂತೆಯೂ ಇರುವ ದುಷ್ಟಪಕ್ಷವನ್ನು (ಮಾಯಾಮತ-ದುಷ್ಟಪಕ್ಷಿಯನ್ನು) ಪಂಜರದಲ್ಲಿ ಬಂಧಿಸುವಂತೆ ಗ್ರಂಥರೂಪ ಪಂಜರದಲ್ಲಿ ಬಂಧಿಸಿ ಕಳಿಂಗದೇಶಾಧಿಪತಿಯಾದ ವಿದ್ಯಾಧರಪಾತ್ರನಿಗೆ ಇತ್ತರೆಂದು ತೋರುತ್ತದೆ. ಆ ದುಷ್ಟವಾದಿಗಳಿಂದ ಪ್ರಚೋದಿತನಾದ ಕಳಿಂಗಾಧಿಪತಿಯು “ಇದನ್ನು ವ್ಯಾಸತೀರ್ಥಯೋಗೀಂದ್ರರಿಗೆ ತೋರಿಸಬೇಕು” ಎಂದು ದುಸ್ತಾಧ್ಯವಾದ ಯುಕ್ತಿಗಳಿಂದ ಲಂಬಿತವಾದ ಆ ಮಹದ್ಗಂಥವನ್ನು ತನ್ನ ಸೇನಾಪತಿಯೊಡನೆ ನನಗೆ ಕಳುಹಿಸಿದ್ದಾನೆ. ಕನ್ನಡ ಸಾಮ್ರಾಜ್ಯದ ಕೀರ್ತಿಪತಾಕೆಯಂತಿರುವ ಮಹಾನುಭಾವರಾದ ತಮಗೆ ಸವಾಲಿನಂತೆ ಕಳಿಸಿರುವ ಈ ಗ್ರಂಥವನ್ನು ಪರಿಶೀಲಿಸಿ, ನನ್ನಲ್ಲಿ ಪರಮಾನುಗ್ರಹಮಾಡಿ ಕೆಲವೇ ದಿನಗಳಲ್ಲಿ ತಮ್ಮ ಅಪ್ರತಿಹತ ಯುಕ್ತಿಪುಂಜಗಳಿಂದ ಜಡಿಮಳೆಯ ಬಿರುಗಾಳಿಯು ಶರತ್ಕಾಲದ ಮೇಘವೃಂದವನ್ನು ಭಿನ್ನ ಭಿನ್ನ ಮಾಡುವಂತೆ ಖಂಡಿಸಿ ಗ್ರಂಥ ಬರೆದುಕೊಟ್ಟು ಅನುಗ್ರಹಿಸಬೇಕು” ಹೀಗೆ ಪ್ರಾರ್ಥಿಸಿ ಕೃಷ್ಣಭೂಪಾಲನು ಗ್ರಂಥವನ್ನು ಶ್ರೀವ್ಯಾಸಯೋಗಿಗಳಿಗೆ ಸಮರ್ಪಿಸಿದನು. 

ಶ್ರೀವ್ಯಾಸಯೋಗೀಂದ್ರರು ನಸುನಗುತ್ತಾರಾಯನಿಗೆ ಅಭಯಪ್ರದಾನಮಾಡಿ ಅವನ ಪ್ರಾರ್ಥನೆಯಂತೆ ಆ ಗ್ರಂಥವನ್ನು ಕ್ಷಣಕಾಲ ಅವಲೋಕಿಸಿ ಮಂದಹಾಸ ಬೀರಿ ಸಾಮ್ರಾಟನಿಗೆ ಪರಮತದ ಅವೈಫಲ್ಯವನ್ನು ರಹಸ್ಯವಾಗಿ ಸೂಚಿಸಿ, ಭೂಪಾಲನ ಎದುರಿಗೇ ಸ್ಪಷ್ಟವಾಗಿ ಮುಹೂರ್ತ ಮಾತ್ರದಲ್ಲಿ ಆ ಗ್ರಂಥದ ಮೇಲೆ ದೂಷಣಾನವಪ್ರಕಾಶನರೂಪಗಳಾದ ವಜ್ರಾಯುಧವನ್ನೂ ಮೀರಿಸಿ ಅಗ್ನಿವರ್ಷ ಮಾಡುವಂತಿರುವ ಯುಕ್ತಿಪರಂಪರಾರೂಪ ವಾಗ್ವಜ್ರಾಘಾತಗಳನ್ನೆಸಗಿ ಆ ಗ್ರಂಥವನ್ನು ಶತಶಃ ಖಂಡಿಸಿ, ಗ್ರಂಥ ಬರೆದು ಅದನ್ನು ಖಂಡಗ್ರಂಥದೊಡನೆ ಕೂಡಲೇ ಕಳಿಂಗದೇಶಾಧಿಪತಿಗೆ ಕಳಿಸುವಂತೆ ಹೇಳಿ ಭೂಪತಿಗಿತ್ತು, ರಾಜೇಂದ್ರ, ನಿನಗೆ, ನಿನ್ನ ಸಾಮ್ರಾಜ್ಯಕ್ಕೆ ಮಾನಹಾನಿಯಾಗುವುದನ್ನು ನಾವೆಂದಿಗೂ ಸಹಿಸೆವು. ಅಂತೆಯೇ ಈ ಗ್ರಂಥವನ್ನು ರಚಿಸಿಕೊಟ್ಟಿದ್ದೇವೆ. ಇದರಿಂದ ನಿನ್ನ ಕೀರ್ತಿಯು ಅಪ್ರತಿಹತವಾಗಿ ಎಲ್ಲೆಡೆ ಬೆಳಗುವುದು! ನಿನಗೆ ಮಂಗಳವಾಗಲಿ” ಎಂದಾಶೀರ್ವದಿಸಿ ಫಲಮಂತ್ರಾಕ್ಷತೆಯನ್ನು ಕರುಣಿಸಿದರು. 

ಶ್ರೀಗಳವರು ಮಾಡಿದ ಅನುಗ್ರಹದಿಂದ ಪುಳಕಿತಗಾತ್ರನಾದ ಕೃಷ್ಣದೇವರಾಯನು “ಗುರುದೇವ! ಅನುಗ್ರಹೀತನಾದೆ” ಎಂದು ಶ್ರೀಯವರ ಚರಣಗಳಿಗೆ ಅಭಿನಮಿಸಿದನು. ಸಾಮ್ರಾಜ್ಯಕ್ಕೆ, ಭೂಪತಿಗೆ, ರಾಜಗುರುಗಳಿಗೆ ಬರಲಿದ್ದ ಅಪಕೀರ್ತಿಯನ್ನು ಕ್ಷಣಾರ್ಧದಲ್ಲಿ ಪರಿಹರಿಸಿದ ವ್ಯಾಸರಾಜರ ಶಿಷ್ಯವಾತ್ಸಲ್ಯವನ್ನು ಕಂಡು ಮಂತ್ರಿ ತಿಮ್ಮರಸು “ಗುರುದೇವ, ತಾವಿಲ್ಲದಿದ್ದಲ್ಲಿ ನಮ್ಮ ಗತಿಯೇನಾಗುತ್ತಿತ್ತೋ ಯೋಚಿಸಿದರೂ ಮೈ ಕಂಪಿಸುವುದು. ಸ್ವಾಮಿ, ಕನ್ನಡ ಸಾಮ್ರಾಜ್ಯ, ಮುಖ್ಯವಾಗಿ ನಮ್ಮ ಸಾರ್ವಭೌಮರ ಗೌರವವನ್ನು ಕಾಪಾಡಿದ ನಿಮಗೆ ಅನಂತ ನಮಸ್ಕಾರಗಳು” ಎಂದು ಗುರುಗಳಿಗೆ ನಮಸ್ಕರಿಸಿದನು. ತನ್ನೆದುರಿಗೆ ಗ್ರಂಥವನ್ನು ಖಂಡಿಸಿ, ಪ್ರತಿ ಗ್ರಂಥವನ್ನು ಮುಹೂರ್ತ ಮಾತ್ರದಲ್ಲಿ ರಚಿಸಿಕೊಟ್ಟ ಯತಿಪುಂಗವರ ವಾಗೈಭವ, ಗ್ರಂಥರಚನಾ ವಿಚಕ್ಷಣತೆಗಳನ್ನು ಕಂಡು ವಿಶೇಷ ವಿಸ್ಮಿತಾಂತಃಕರಣವಾಗಿ ಕೃಷ್ಣಭೂಪಾಲನು ಶ್ರೀವ್ಯಾಸಯೋಗೀಂದ್ರರಿಗೆ ನಮಿಸಿ ಅಪ್ಪಣೆ ಪಡೆದು ಮಹಾಮಾತ್ರರೊಡನೆ ಅರಮನೆಗೆ ತೆರಳಿದನು.

ಕೃಷ್ಣದೇವರಾಯನು ಕಳಿಂಗದೇಶದ ಸೇನಾಪತಿಯನ್ನು ಕರೆಸಿಕೊಂಡು ಅವನಿಗೆ ವ್ಯಾಸರಾಜರು ರಚಿಸಿಕೊಟ್ಟ ಗ್ರಂಥವನ್ನೂ ಕಳಿಂಗದೇಶಾಧಿಪತಿ ಕಳಿಸಿದ (ಖಂಡ) ಗ್ರಂಥವನ್ನೂ ಕೊಟ್ಟು ಸೇನಾನಿಗಳೇ, ನಿಮ್ಮ ಮಹಾರಾಜರು ನೀವು ತಂದಿತ್ತ ಗ್ರಂಥಕ್ಕೆ ತಿಂಗಳೊಪ್ಪತ್ತಿನಲ್ಲಿ ಖಂಡನಗ್ರಂಥ ಬರೆಸಿ ಕಳಿಸಬೇಕೆಂದು ಹೇಳಿಕಳಿಸಿದರಷ್ಟೆ. ಆದರೆ ನಿಮ್ಮ ಈ ಗ್ರಂಥವನ್ನು ಅವಲೋಕಿಸಿದ ಕೂಡಲೇ ಪೂಜ್ಯ ವ್ಯಾಸಭಗವಾನರು ನಿಮ್ಮ ಗ್ರಂಥವನ್ನು ಶತಶಃ ಖಂಡಿಸಿ ಇಕೋ, ಈ ಪ್ರೌಢಗ್ರಂಥವನ್ನು ರಚಿಸಿಕೊಟ್ಟಿರುತ್ತಾರೆ. ಹೂಂ, ತೆಗೆದುಕೊಳ್ಳಿ ಗ್ರಂಥಗಳನ್ನು, ಈ ಗ್ರಂಥಕ್ಕೆ ಯೋಗ್ಯತೆಯಿದ್ದರೆ ನಿಮ್ಮ ಪಂಡಿತರಿಂದ ಖಂಡನ ಬರೆಸಿ ಒಂದು ತಿಂಗಳಲ್ಲಿ ಕಳಿಸಬೇಕು ಅಥವಾ ನಿಮ್ಮ ರಾಜರೇ ಜಯಪತ್ರಿಕೆಯನ್ನು ಬರೆದು ನಮ್ಮ ಗುರುಗಳಿಗೆ ಕಳಿಸಬೇಕು. ಇಲ್ಲದಿದ್ದರೆ ಕನ್ನಡ ಸಾಮ್ರಾಜ್ಯಕ್ಕೆ ಅಗೌರವ-ಅಪಕೀರ್ತಿಗಳನ್ನು ತರಲು ಪ್ರಯತ್ನಿಸಿದ ನಿಮ್ಮ ಮೇಲೆ ಕಾರ್ಯಕ್ರಮ ಕೈಗೊಳ್ಳಬೇಕಾದೀತು! - ಈ ಸಂದೇಶವನ್ನು ನಿಮ್ಮ ರಾಜರಿಗೆ ತಿಳಿಸಿರಿ” ಎಂದು ಹೇಳಿಕಳಿಸಿದನು. 

ಒಂದೆರಡು ತಿಂಗಳುಗಳಲ್ಲಿ ವಿದ್ಯಾಧರಪಾತ್ರನು ಪಂಡಿತರ ಮಾತು ನಂಬಿ ಹಿಂದು-ಮುಂದು ಮುಂದಾಲೋಚನೆಯಿಲ್ಲದೆ ವ್ಯಾಸರಾಜರನ್ನು ಪರೀಕ್ಷಿಸಲೆತ್ನಿಸಿದ್ದು ಅವಿವೇಕವಾಯಿತೆಂದು ಪಶ್ಚಾತ್ತಪ್ತನಾಗಿ ಸ್ವತಃ ಜಯಪತ್ರಿಕೆ, ಅನರ್ಘ ಕಾಣಿಕೆಗಳೊಡನೆ ಶ್ರೀವ್ಯಾಸರಾಜರಿಗೆ ಸಮರ್ಪಿಸಬೇಕೆಂದು ಪ್ರಾರ್ಥನಾ ಪತ್ರದೊಡನೆ ಕಳುಹಿಸಿದನು. ಇದರಿಂದ ಕನ್ನಡ ಸಾಮ್ರಾಜ್ಯ, ಕೃಷ್ಣ ಭೂಪತಿ ಮತ್ತು ವ್ಯಾಸಯೋಗಿಗಳ ಕೀರ್ತಿ ದಿಗಂದವಿಶ್ರಾಂತವಾಯಿತು.