ಕಲಿಯುಗ ಕಲ್ಪತರು
ನಾಲ್ಕನೆಯ ಉಲ್ಲಾಸ
ಶ್ರೀವ್ಯಾಸರಾಜಯತಿಸಾರ್ವಭೌಮರು
೪೬. ಸ್ವರ್ಣಭಂಡಾರಿಗಳು ಭಕ್ತಿಭಂಡಾರಿಗಳಾದರು !!
ಪಾವನವಾದ ಷಾಷಿಕಾನ್ವಯದ ಸ್ವರ್ಣಭಂಡಾರಿ (ಚಿನ್ನಭಂಡಾರಿ) ಮನೆತನವು ಸಕಲವಿದ್ಯೆ, ಶಾಸ್ತ್ರ, ಸಂಗೀತ, ಸಾಹಿತ್ಯ, ಕಲೆ, ಶೌರ್ಯೌದಾರ್ಯ, ಸದಾಚಾರ, ಶೀಲಾದಿ ಸದ್ಗುಣಗಳಿಗೆ ಮಾತೃಸ್ಥಾನವಾಗಿತ್ತು. ಈ ಮನೆತನದವರಲ್ಲಿ ಭಾರದ್ವಾಜ ಗೋತ್ರದವರಾದ ಧುಂಡಿರಾಜರು ದೇವಗಿರಿ ಯಾದವರ ಆಶ್ರಯದಲ್ಲಿ ಜಮಖಂಡಿ ಪ್ರಾಂತ್ಯದ ಮಾಂಡಲಿಕರಾಗಿದ್ದರು. ಅವರಿಗೆ ನರಹರಿನಾಯಕ, ಕೃಷ್ಣಪ್ಪನಾಯಕ ಮತ್ತು ರಘುನಾಥನಾಯಕರೆಂಬ ಮೂವರು ಪುತ್ರರು, ಈರ್ವರು ಪುತ್ರಿಯರಿದ್ದರು. ರಘುನಾಥನಾಯಕರು ಸಂಸಾರದ ಅಸಾರತೆಯನ್ನರಿತು ವಿರಕ್ತರಾಗಿ ಶ್ರೀಅಕ್ಟೋಭ್ಯತೀರ್ಥರಿಂದ ಸನ್ಯಾಸ ಪಡೆದು ಶ್ರೀಜಯತೀರ್ಥರೆಂಬ ಹೆಸರಿನಿಂದ ಖ್ಯಾತರಾಗಿ ಶ್ರೀಮದಾಚಾರ್ಯರ ಸಮಗ್ರ ಗ್ರಂಥಗಳಿಗೆ ಟೀಕೆಗಳನ್ನು ರಚಿಸಿ ಜಗನ್ಮಾನ್ಯರಾದರು. ಇವರ ಸಹೋದರಿ ಭಾರತೀದೇವಿಯನ್ನು ಬನ್ನೂರಿನ ಪ್ರಾಂತ್ಯಾಧಿಪತಿ ವಲ್ಲಭದೇವನಿಗೆ (ಶ್ರೀವ್ಯಾಸರಾಜರ ಮುತ್ತಾತ) ಕೊಟ್ಟು ಲಗ್ನವಾಗಿತ್ತು. ರಘುನಾಥನಾಯಕರ ಸಹೋದರರಾದ ಕೃಷ್ಣಪ್ಪನಾಯಕರಿಗೆ ವರದಪ್ಪನಾಯಕರೆಂಬ ಪುತ್ರರಿದ್ದರು. ಅವರ ಮೊಮ್ಮಕ್ಕಳು ಕೃಷ್ಣಪ್ಪನಾಯಕರು. ಇವರ ಪುತ್ರರೇ ವರದಪ್ಪನಾಯಕರು. ಇವರಿಗೆ ವಿಠಲನಾಯಕರೆಂದೂ ಹೆಸರಿತ್ತು. ಇವರನ್ನು ಕೃಷ್ಣಪ್ಪನಾಯಕರು ತಮ್ಮ ಪತ್ನಿಯ ಬಂಧುಗಳೂ, ಷಾಷಿಕರೂ, ಮಹಾಶ್ರೀಮಂತರೂ ಆಗಿದ್ದವಸಿಷ್ಠ ಗೋತ್ರದ ಕೃಷ್ಣನಾಯಕರಿಗೆ ದತ್ತಕ ಕೊಟ್ಟಿದ್ದರು.
ಈ ವರದಪ್ಪ(ವಿಠಲ)ನಾಯಕರು ದತ್ತಕ ತಂದೆಯ ಮರಣಾನಂತರ ಕರ್ನಾಟಕ ಸಾಮ್ರಾಜ್ಯಕ್ಕೆ ಸೇರಿದ್ದ ಶಿವಮೊಗ್ಗೆಯ ತೀರ್ಥಹಳ್ಳಿ ತಾಲ್ಲೂಕಿಗೆ ಸೇರಿದ್ದ ಪುರಂದರಪುರದಲ್ಲಿ (ಪುರಂದರಾಲಯ) ವಾಸಿಸಲಾರಂಭಿಸಿದರು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪ್ರಾಂತ್ಯ ಆಗ ವಿಶೇಷವಾಗಿ ಷಾಷಿಕ ವಂಶೀಯರಿಂದ ಕಂಗೊಳಿಸಿತ್ತು. ರತ್ನಪಡಿವ್ಯಾಪಾರ ಅವರ ಉದ್ಯಮವಾಗಿತ್ತು. ಮಹಾಶ್ರೀಮಂತರಾದ ಇವರನ್ನು ಜನ ಗೌರವಿಸುತ್ತಿದ್ದರು.
ಕೆಲಕಾಲಾನಂತರ ವರದಪ್ಪನಾಯಕರು ಶ್ರೀಪಾದರಾಜರು ಮತ್ತು ಕುಲಗುರುಗಳಾದ ಶ್ರೀವ್ಯಾಸರಾಜರ ಅನುಗ್ರಹಕ್ಕೆ ಪಾತ್ರರಾಗಿದ್ದು ಅವರ ಮೂಲಕ ಕನ್ನಡ ಚಕ್ರವರ್ತಿಗಳ ಪರಿಚಯ, ವಿಶ್ವಾಸಗಳು ಬೆಳೆದು ವರದಪ್ಪನಾಯಕರ ವ್ಯಾಪಾರೋದ್ಯಮ ಕನ್ನಡ ರಾಜಧಾನಿ, ಮತ್ತಿತರ ಪ್ರಮುಖ ನಗರಗಳಿಗೂ ಹರಡಿತು. ವರದಪ್ಪನಾಯಕರು, ಸಾಳುವ ನರಸಿಂಹ, ಮತ್ತೆ ಮುಂದೆ ತಮ್ಮರಾಯ, ನರಸನಾಯಕಾದಿ ಚಕ್ರವರ್ತಿಗಳಿಗೆ ಆಪ್ತರೆನಿಸಿ ಸಾಮ್ರಾಜ್ಯದ ಯುದ್ಧ, ಅಭಿವೃದ್ಧಿ ಕಾರ್ಯಗಳಿಗೆ ವಿಶೇಷ ಧನಸಹಾಯ ಮಾಡುತ್ತಿದ್ದರು. ಸ್ವಲ್ಪಕಾಲದಲ್ಲೇ ಅವರು ಸಾಮ್ರಾಜ್ಯದ ಸ್ವರ್ಣಭಂಡಾರಿಗಳೆಂದೇ ವಿಖ್ಯಾತರಾದರು.
ವರದಪ್ಪನಾಯಕರು ಹೀಗೆ ಕೀರ್ತಿ-ಗೌರವ-ಸಿರಿ-ಸಂಪತ್ತುಗಳಿಂದ ರಾಜಿಸುತ್ತಿದ್ದರೂ ಅವರಿಗೆ ಬಹುವರ್ಷಗಳಾದರೂ ಪುತ್ರಸಂತಾನವಿಲ್ಲದ್ದರಿಂದ ಚಿಂತೆಗೊಳಗಾದರು. ಕೊನೆಗೆ ಕುಲದೇವನಾದ ತಿರುಪತಿಯ ಶ್ರೀನಿವಾಸನ ಸೇವೆ ಮಾಡಿ ಅವನ ವರಪ್ರಸಾದದಿಂದ ಶಾಲಿವಾಹನಶಕೆ ೧೪೦೬ ರಲ್ಲಿ (ಕ್ರಿ.ಶ. ೧೪೮೪) ಓರ್ವ ಸುಪುತ್ರನನ್ನು ಪಡೆದರು. ಶ್ರೀನಿವಾಸದೇವರ ವರದಿಂದ ಜನಿಸಿದ ಮಗನಿಗೆ ಶ್ರೀನಿವಾಸನಾಯಕನೆಂದೇ ನಾಮಕರಣ ಮಾಡಿದರು. ವೈದಿಕ ಸಂಸ್ಕಾರೋಕ್ತ ಕ್ರಮದಲ್ಲಿ ಅವನಿಗೆ ಜಾತಕರ್ಮ, ನಾಮಕರಣ, ಅನ್ನಪ್ರಾಶನ, ಚೌಲ, ಅಕ್ಷರಾಭ್ಯಾಸಾದಿಗಳನ್ನು ಕಾಲಕಾಲಕ್ಕೆ ವೈಭವದಿಂದ ನೆರವೇರಿಸಿದ ವರದಪ್ಪನಾಯಕರು ಮಗನಿಗೆ ಗರ್ಭಾಷ್ಟಮದಲ್ಲಿ ಉಪನಯನವನ್ನು ಜರುಗಿಸಿ ಸಕ್ರಮವಾಗಿ ವಿದ್ಯಾಭ್ಯಾಸ ಮಾಡಿಸಿದರು. ಬಾಲ್ಯದಿಂದಲೂ ತೀಕ್ಷ್ಮಮತಿಯೂ, ಪ್ರತಿಭಾಸಂಪನ್ನನೂ ಆದ ಶ್ರೀನಿವಾಸನಾಯಕನ ಒಲವು ವಿದ್ಯೆಯ ಕಡೆಗೆ ಹರಿದಿತ್ತು. ಸಂಸ ತ, ಕನ್ನಡ, ಪಾರಸೀ ಮುಂತಾದ ಭಾಷೆಗಳಲ್ಲಿ ಪಾರಂಗತನಾದುದಲ್ಲದೆ, ವೇದ, ಉಪನಿಷತ್ತು, ಕಾವ್ಯ, ನಾಟಕ, ಅಲಂಕಾರಾದಿ ಸಾಹಿತ್ಯ, ನ್ಯಾಯವೇದಾಂತಾದಿ ಶಾಸ್ತ್ರಗಳು, ಸಂಗೀತ ಮತ್ತಿತರ ಕಲೆಗಳಲ್ಲಿ ಅಸಾಧಾರಣ ಪರಿಣತಿಯನ್ನು ಪಡೆದನು. ಸಂಗೀತ ಅವನಿಗೆ ಹುಟ್ಟಿನಿಂದಲೇ ಒಲಿದು ಬಂದ ಸ್ವತ್ತಾಗಿತ್ತು.
ಶಾಂತ್ಯಾದಿಗುಣಮಂಡಿತನಾಗಿದ್ದ ಶ್ರೀನಿವಾಸನಾಯಕ ಐಹಿಕ ಕಾರ್ಯರಂಗದಿಂದ ದೂರನಾಗಿದ್ದ. ಭಗವಂತನಲ್ಲಿ ಅವನಿಗೆ ಸ್ವಾಭಾವಿಕ ಭಕ್ತಿ-ಶ್ರದ್ಧೆಗಳಿದ್ದವು. ಸರ್ವದಾ ಸುಮಧುರ ಕಂಠದಿಂದ ಭಗವಂತನ ಮಹಿಮಾದಿಗಳನ್ನು ಹಾಡುತ್ತಾ ಮೈಮರೆಯುತ್ತಿದ್ದ. ಶ್ರೀನಿವಾಸನಾಯಕನ ವಿದ್ಯಾಭ್ಯಾಸ ಮುಗಿದೊಡನೆ ವರದಪ್ಪನಾಯಕರು ಅವನಿಗೆ ಸತ್ಕುಲಪ್ರಸೂತಳೂ, ಸಂಗೀತ-ಸಾಹಿತ್ಯರಸಿಕಳೂ, ಸದ್ಗುಣಮಂಡಿತಳೂ ಆದ “ಸರಸ್ವತಿ” ಎಂಬ ಕನೈಯನ್ನು ತಂದುಕೊಂಡು ವಿವಾಹವನ್ನು ನೆರವೇರಿಸಿದರು. ಶ್ರೀನಿವಾಸನಾಯಕನ ಸಾಂಸಾರಿಕ ಜೀವನದಲ್ಲಿ ಪದಾರ್ಪಣ ಮಾಡಿದ.
ವರದಪ್ಪ(ವಿಠಲ)ನಾಯಕರು ಪಾರಮಾರ್ಥಿಕ ವಿದ್ಯಾಪಾರಂಗತನಾದ ಮಗನು ತಮ್ಮಂತೆಯೇ ಲೌಕಿಕಕಾರ್ಯ- ಧುರಂಧರನಾಗಿ ತಮ್ಮ ಕಸುಬಿನಲ್ಲಿ ಪರಿಣತನಾಗಬೇಕೆಂದು ಬಯಸಿ, ಹೇರಳವಾಗಿ ಹೊನ್ನಿತ್ತು ವ್ಯಾಪಾರ ಮಾಡಲು ಹೇಳಿದರು. ಲೌಕಿಕದಿಂದ ದೂರವಾಗಿ, ಜೀತೇಂದ್ರಿಯನಾಗಿ ಭಗವನ್ನಿಷ್ಟಬುದ್ಧಿಯುಳ್ಳ ಶ್ರೀನಿವಾಸನಾಯಕನಿಗೆ ತಂದೆಯ ಆದೇಶ ಅಷ್ಟಾಗಿ ಹಿಡಿಸಲಿಲ್ಲ. ತಂದೆಯು ಕೊಟ್ಟ ಹೊನ್ನನ್ನು ಸಾತ್ವಿಕ ವಿಪ್ರರಿಗೆ ದಾನಮಾಡಿಬಿಟ್ಟ! ಇದರಿಂದ ತಂದೆಗೆ ಬೇಸರವಾದರೂ ಮಗನಿಗೆ ಬುದ್ಧಿಹೇಳಿ ಮತ್ತೆ ವ್ಯಾಪಾರಮಾಡಲು ದ್ರವ್ಯವನ್ನು ನೀಡಿದರು. ಶ್ರೀನಿವಾಸನಾಯಕ ಅದನ್ನೂ ಬ್ರಾಹ್ಮಣರಿಗೆ ದಾನಮಾಡಿದ. ಹೀಗೆ ಕೆಲಬಾರಿ ನಡೆಯಿತು. ಮಗ ದಾರಿಗೆ ಬರಲಿಲ್ಲ. ಬುದ್ದಿವಾದ ವ್ಯರ್ಥವಾಯಿತು. ಕೊನೆಗೆ ವರದಪ್ಪನಾಯಕರು ಬೇಸತ್ತು ಕೋಪದಿಂದ ಮಗನನ್ನು ಆ ಊರಿನಲ್ಲಿದ್ದ ಶ್ರೀದೇವರ ಗುಡಿಯ ಕಂಬಕ್ಕೆ ಕಟ್ಟಿಹಾಕಿಸಿ ಗುಡಿಯ ಬಾಗಿಲು ಹಾಕಿಸಿಬಿಟ್ಟರು!
ಇಂದ್ರಿಯಗಳನ್ನು ಜಯಿಸಿ ದೇಹಾಭಿಮಾನವನ್ನೇ ತೊರೆದ ಮಹನೀಯರು ಹಸಿವು-ಬಾಯಾರಿಕೆಗಳನ್ನು ಲೆಕ್ಕಿಸುವರೇ ? ಬಾಹ್ಯವ್ಯಾಪಾರ ವರ್ಜಿತನಾಗಿ ಅಂತರ್ಮುಖಿಯಾದ ಶ್ರೀನಿವಾಸನಾಯಕ ಹೃದಯಪೀಠದಲ್ಲಿ ಶ್ರೀಹರಿಯನ್ನು ಪ್ರತಿಷ್ಠಾಪಿಸಿ ಜಗದೀಶನ ಪಾದಕಮಲದಲ್ಲಿ ಮನಸ್ಸು ನಿಲ್ಲಿಸಿ, ಧ್ಯಾನಾಸಕ್ತನಾದ. ಒಂದು ದಿನವಾಯಿತು, ದಿನಗಳುರುಳಿದವು. ತಂದೆ ಬಾಗಿಲು ತೆಗೆಸಿ ಮಗನನ್ನು ನೋಡು ಬರಲಿಲ್ಲ. ಅಶಾಶ್ವತವಾದ ದೇಹವನ್ನು ಕೊಟ್ಟ ತಂದೆಯು ಕರುಣೆದೋರದಿದ್ದರೆ, ಸಕಲಚರಾಚರ ಪ್ರಪಂಚಕ್ಕೂ ಒಡೆಯನಾದ, ಎಲ್ಲರಿಗೂ ತಂದೆಯಾದ ಭಗವಂತ ಸುಮ್ಮನಿರಲು ಸಾಧ್ಯವೇ? ಭಕ್ತರ ಕಷ್ಟಕಾರ್ಪಣ್ಯಗಳನ್ನು ಕಂಡು ಮನಕರಗುವ ಮಹಾಪ್ರಭು ಲಕ್ಷ್ಮೀಸಹಿತನಾಗಿ ಸುವರ್ಣ ತಾಂಬಾಣದಲ್ಲಿ ಪಕ್ವಾನ್ನಗಳನ್ನಿರಿಸಿಕೊಂಡು ಬಂದು ಶ್ರೀನಿವಾಸನಾಯಕನಿಗೆ ತನ್ನ ಅಲಭ್ಯ ದರ್ಶನವಿತ್ತು ತಾಂಬಾಣವನ್ನು ಅವನ ಮುಂದಿರಿಸಿ ತಾಯಿಯು ಮಕ್ಕಳನ್ನು ಸಂತೈಸಿ, ರಮಿಸುವಂತೆ ನಾಯಕನ ಮೈದಡವಿ, ಶಿರಸ್ಸನ್ನು ಆಘ್ರಾಣಿಸಿ, ಮೃದು-ಮಧುರ ಧ್ವನಿಯಿಂದ ಕುಮಾರ! ಇಕೋ ನೋಡು, ನಿನಗಾಗಿ ಭೋಜನ ತಂದಿರುವೆ ಊಟ ಮಾಡಪ್ಪ” ಎಂದನು. ಭಗವಂತನ ದೃಷ್ಟಿ ವಿಕ್ಷೇಪ ಮಾತ್ರದಿಂದ ಕಟ್ಟಿದ್ದ ಹಗ್ಗಗಳು ಬಿಚ್ಚಿಹೋದವು! ನಾಯಕ ಬಂಧಮುಕ್ತನಾದ. ಸಾಕ್ಷಾತ್ ರಮಾನಾರಾಯಣರ ದರ್ಶನದಿಂದ ಆನಂದತುಂದಿಲನಾದ ನಾಯಕನು ಆ ಪುರಾಣಪುರುಷನಿಗೆ ಸಾಷ್ಟಾಂಗವೆರಗಿ, ಭಕ್ತಿಪರವಶನಾಗಿ ಆನಂದಬಾಷ್ಪ ಸುರಿಸುತ್ತಾ ಭಗವಂತನನ್ನು ಬಗೆಬಗೆಯಿಂದ ಸ್ತುತಿಸಿ 'ದೇವ! ನೀನುಣ್ಣದೆ ನಾನೆಂತು ಊಟ ಮಾಡಲಿ?' ಎಂದು ವಿಜ್ಞಾಪಿಸಲು ಭಕ್ತಾಧೀನನೂ ಕಾರುಣ್ಯಮೂರ್ತಿಯೂ ಆದ ಶ್ರೀಹರಿಯು ಶ್ರೀ-ಭೂ-ದುರ್ಗಾಸಮೇತನಾಗಿ ಭೋಜನ ಮಾಡಲಾರಂಭಿಸಿದನು! ಗಂಗೆ ಮೊದಲಾದ ದೇವತಾಸ್ತ್ರೀಯರು ಬಂಗಾರದ ತಂಬಿಗೆಯಲ್ಲಿ ನೀರು ಬಡಿಸಿ ಚಾಮರದಿಂದ ಗಾಳಿ ಹಾಕುತ್ತಿದ್ದರು. ಪ್ರಭು ಭುಜಿಸಿದ ಮೇಲೆ ಶ್ರೀನಿವಾಸನಾಯಕನು ಶ್ರೀಹರಿಯ ಉಚ್ಚಿಷ್ಟವನ್ನು ಉಂಡು ತೃಪ್ತನಾದ. ಸುಪ್ರೀತನಾದ ನಾರಾಯಣನು “ಕುಮಾರ! ನೀನು ವೇದಾದಿಶಾಸ್ತ್ರಾರ್ಥ ಸಾರವನ್ನು ಜನಸಾಮಾನ್ಯರಿಗೆ ಕನ್ನಡ ನುಡಿಯಲ್ಲಿ ಬೋಧಿಸಿ ನನ್ನ ಪಾರಮ್ಯವನ್ನು ಎತ್ತಿಹಿಡಿದು, ಭಾಗವತಧರ್ಮ ಪ್ರಸಾರಕನಾಗಿ ಕೀರ್ತಿ ಪಡೆಯುವೆ! ನಿನ್ನ ಕೃತಿಗಳು ಶಾಸ್ತ್ರಸಮ್ಮತವಾಗಿದ್ದು ಸಜ್ಜನರ ಉದ್ಧಾರಕ್ಕೆ ಕಾರಣವಾಗುವುದು' ಎಂದು ವರವಿತ್ತು ಆಶೀರ್ವದಿಸಿ ಅದೃಶ್ಯನಾದನು.
ಭಗವಂತನ ಪ್ರೇರಣೆಯಾಯಿತೆಂದು ತೋರುತ್ತದೆ. ಇತ್ತ ವರದಪ್ಪನಾಯಕ ಮಗನು ಏನಾದನೋ ಎಂಬ ಕಾತರ, ಔತ್ಸುಕ್ಯಗಳಿಂದ ದೇವಾಲಯದ ಬಾಗಿಲು ತೆಗೆಯಿಸಿ ಒಳಬಂದು ನೋಡಿದನು. ಆಶ್ಚರ್ಯ! ಸುಪ್ರಸನ್ನವದನನಾಗಿ ಮಗ ಭಾವಸಮಾಧಿಯಲ್ಲಿದ್ದಾನೆ! ಅವನ ಮುಂದೆ ಬಂಗಾರದ ಹರಿವಾಣ, ತಂಬಿಗೆಗಳು ರಾಜಿಸಿವೆ. ವಿಠಲನಾಯಕನಿಗೆ ಆಗ ಅರಿವಾಯಿತು ತನ್ನ ಪುತ್ರನ ಯೋಗ್ಯತೆ! ಈ ಮಗನು ಸಾಮಾನ್ಯನಲ್ಲ, ಅವನೊಬ್ಬ ಜ್ಞಾನಿಯೆಂದರಿತು ಪರಮಾನಂದಭರಿತನಾಗಿ ಅವನನ್ನು ಎಬ್ಬಿಸಿ, ಉಪಚರಿಸಿ ಮನೆಗೆ ಕರೆತಂದನು. ಅಂದಿನಿಂದ ಮಗ ಹೇಗಾದರೂ ಇರಲಿ, ಎಂದು ಅವನ ಪಾಡಿಗೆ ಅವನನ್ನು ಬಿಟ್ಟುಬಿಟ್ಟನು. ಶ್ರೀನಿವಾಸನಾಯಕನು ದೇವರು ತನಗೆ ಕರುಣಿಸಿದ ಸುವರ್ಣ ಹರಿವಾಣ - ತಂಬಿಗೆಗಳನ್ನು ಬ್ರಾಹ್ಮಣರಿಗೆ ದಾನಮಾಡಿಬಿಟ್ಟ. ಧರ್ಮಪತ್ನಿ ಸರಸ್ವತಿಯೊಡನೆ ಗೃಹಸ್ಥ ಜೀವನದಲ್ಲಿ ನಿರತನಾಗಿ ಸುಖವಾಗಿ ಕಾಲಕಳೆಹತ್ತಿದನು. ನಾಯಕನಿಗೆ ತನ್ನ ಪತ್ನಿ ಸರಸ್ವತಿಯನ್ನು ಪರೀಕ್ಷಿಸುವ ಮನಸ್ಸಾಯಿತು. ಪತ್ನಿಗೆ ಹಿಡಿಹೊನ್ನು ನೀಡಿದ ಪತಿಗೆ ತಕ್ಕ ಪತ್ನಿಯಾಗಿದ್ದಳು. ಸರಸ್ವತಮ್ಮ ! ಸದ್ಗುಣಿಯೂ, ಸಾತ್ವಿಕ ಸ್ವಭಾವದವಳೂ, ಭಗವದ್ಭಕ್ತಳೂ ಆದ ಆ ಮಹಾತಾಯಿ ಪತಿಯು ತನಗಿತ್ತ ಹೊನ್ನನ್ನು ಯೋಗ್ಯ ಭೂಸುರರಿಗೆ ಕೃಷ್ಣಾರ್ಪಣಪೂರ್ವಕವಾಗಿ ದಾನಮಾಡಿದಳು. ಅದನ್ನು ಕಂಡು ಶ್ರೀನಿವಾಸನಾಯಕನು ಮೋದಗೊಂಡನು.
ವೃದ್ಧ ತಂದೆ ವರದಪ್ಪನಾಯಕನ ಮಗನು ಪ್ರಬುದ್ಧಮಾನಕ್ಕೆ ಬಂದುದನ್ನು ಕಂಡು ಸಮಾಧಾನದ ಉಸಿರೆಳೆದು ಸಕಲ ವ್ಯವಹಾರವನ್ನೂ ಮಗನಿಗೆ ಒಪ್ಪಿಸಿ ಸ್ವರ್ಗಸ್ಥನಾದ. ಕೆಲವರ್ಷಗಳಾದವು. ಶ್ರೀನಿವಾಸನಾಯಕರಂಥ ಭಗವದ್ಭಕ್ತರೂ ಭಗವಂತನ ಮಾಯೆಗೆ ಒಳಗಾಗಬೇಕಾಯಿತು! “ಮಮ ಮಾಯಾ ದುರತ್ಯಯಾ” ಎಂದಿಲ್ಲವೇ ಶ್ರೀಗೀತಾಚಾರ್ಯನಾದ ಶ್ರೀಕೃಷ್ಣ? ಈಶಕೋಟಿ ಪ್ರವಿಷ್ಟಳಾದ ಸಾಕ್ಷಾತ್ ರಮಾದೇವಿಯೇ ಶ್ರೀಹರಿಯ ಮಾಯೆಗೆ ಸಿಲುಕುವಾಗ ಶ್ರೀನಿವಾಸನಾಯಕರ ಪಾಡೇನು ? ಪಾರಮಾರ್ಥಿಕ ಜೀವನವೇ ಶ್ರೇಷ್ಠವೆಂದು ಬಗೆದಿದ್ದ ಶ್ರೀನಿವಾಸನಾಯಕರು ಶ್ರೀಹರಿಯ ಮಾಯೆಗೆ ಸಿಲುಕಿ ಸಂಸಾರದಲ್ಲಿ ಆಸಕ್ತರಾಗಿ ಲೌಕಿಕ ಹವ್ಯಾಸಗಳಲ್ಲಿ ತಲ್ಲೀನರಾದರು. ಭಗವನ್ನಿಷ್ಠವಾಗಿದ್ದ ಅವರ ಬುದ್ಧಿ ದ್ರವ್ಯನಿಷ್ಠವಾಯಿತು. ದ್ರವ್ಯ ಸಂಪಾದನೆಯೊಂದೇ ಅವರ ಜೀವಿತದ ಗುರಿಯಾಯಿತು. ಲಕುಮಿ ನಲಿದೊಲಿದ ಮೇಲೆ ಕೇಳುವುದೇನು ? ನಾಯಕರ ಆದಾಯ ಒಂದಕ್ಕೆ ನೂರಾಗಿ, ಸಾವಿರವಾಗಿ, ಲಕ್ಷ್ಮವಾಗಿ, ಕೋಟಿಗಳಿಗೇರಿತು! ಕೊನೆಗೆ ಲೆಕ್ಕವಿಲ್ಲದಷ್ಟು ಸಿರಿಸಂಪತ್ತಿನಲ್ಲಿ ಓಲಾಡತೊಡಗಿದರು.
ಸಿರಿಸಂಪತ್ತು ಹೆಚ್ಚಾದಂತೆಲ್ಲಾ ಅವರು ಲೋಭಿಯಾಗತೊಡಗಿದರು. ಒಂದು ಚಿಕ್ಕಾಸನ್ನೂ ವ್ಯಯಮಾಡದಷ್ಟು ಜಿಪುಣರಾದರು, ದಾನಧರ್ಮ, ಪರೋಪಕಾರ, ಅನ್ನದಾನಾದಿಗಳನ್ನು ನಿಲ್ಲಿಸಿಬಿಟ್ಟರು ನಾಯಕರು. ಇದಕ್ಕೆ ವಿರುದ್ಧವಾಗಿತ್ತು ಅವರ ಪತ್ನಿ ಸರಸ್ವತಮ್ಮನ ಪ್ರವೃತ್ತಿ, ಆಕೆಗೆ ದಾನ-ಧರ್ಮ-ಗುರುಗಳು-ಬ್ರಾಹ್ಮಣರೆಂದರೆ ಬಹಳ ಆದರ. ಬಡವರಿಗೆ ಪ್ರೋತ್ರೀಯ ಬ್ರಾಹ್ಮಣರಿಗೆ ದಾನಮಾಡುವುದರಲ್ಲಿ ಅವಳಿಗೆ ಬಹಳ ಆಸೆ. ಪತಿಯು ತನಗೆ ಕೊಟ್ಟಿದ್ದನ್ನು ಪತಿಗೆ ತಿಳಿಯದಂತೆ ಸಾಧ್ಯವಾದಷ್ಟು ದಾನ-ಧರ್ಮ ಮಾಡುತ್ತಿದ್ದಳು. ಒಮ್ಮೊಮ್ಮೆ ಅದು ನಾಯಕರಿಗೆ ತಿಳಿದು ಅಸಾಧ್ಯ ರಗಳೆಯಾಗುತ್ತಿತ್ತು. ಕೊನೆಗೆ ಕೃಪಣನಾದ ಪತಿಗೆ ಹೆದರಿ ಆಕೆ ಸುಮ್ಮನಾಗುತ್ತಿದ್ದಳು. ಶ್ರೀನಿವಾಸನಾಯಕನ ಶ್ರೀಮಂತಿಕೆಯೊಡನೆ ಅವನ ಕಡು ಲೋಭಿತನವೂ ಎಲ್ಲೆಡೆ ಹರಡಿತು.
ಶ್ರೀನಿವಾಸನಾಯಕರಿಗೆ ಲಕ್ಷ್ಮಣನಾಯಕ, ಹೇವಣನಾಯಕ, ಮಧ್ವಪತಿ ಮುಂತಾಗಿ ನಾಲ್ವರು ಪುತ್ರರು ಓರ್ವ ಪುತ್ರಿ ಜನಿಸಿ ಅಭಿವೃದ್ಧಿಸಿದರು - ವಸಿಷ್ಠಗೋತ್ರದ ಶ್ರೀನಿವಾಸನಾಯಕ (ಪುರಂದರದಾಸ)ರಿಗೆ ಲಕ್ಷ್ಮಣದಾಸ, ಹೇವಣದಾಸ, ಮಧ್ವಪತಿ ಮುಂತಾದ ಪುತ್ರರಿದ್ದರೆಂದು ಕೃಷ್ಣದೇವರಾಯನ ಕಾಮಲಾಪುರದ ಶಾಸನದಿಂದ ವ್ಯಕ್ತವಾಗುತ್ತದೆ. ಕಳಿಂಗ ರಾಜನಿಗೆ ಸೇರಿದ್ದ ಕಂದಕೂರು ಎಂಬ ಗ್ರಾಮವನ್ನು ವ್ಯಾಸರಾಜರಿಗೆ ದಾನ ಮಾಡಿದಾಗ ಅವರ ಆಶಯದಂತೆ ಪುರಂದರದಾಸರ ಮಕ್ಕಳಿಗೆ ಕೃಷ್ಣದೇವರಾಯ ಈ ಗ್ರಾಮದಲ್ಲಿ ಆರು ವೃತ್ತಿಗಳನ್ನು ದಾನ ಮಾಡಿದ್ದಾನೆ. ದಾನಶಾಸನದಲ್ಲಿ ಹೀಗಿದೆ -“ಧೀಮಾನ್ ಲಕ್ಷ್ಮಣದಾಸಾಖ್ಯಃ ಶ್ರೀಪುರಂದರದಾಸಜ: | ವಸಿಷ್ಠಗೋತ್ರಜೋ ವೃತಿದ್ವಯಮುತಿ ಯಾಜುಷಃ || ವಸಿಷ್ಠಾನ್ವಯ ಸಂಭೂತಃ ಶ್ರೀಪುರಂದರದಾಸಜಃ | ದ್ವಿಜೋ ಹೇವಣದಾಸಾಖ್ಯ ಯಾಜುಷೋತ್ರದ್ವಿವೃತ್ತಿಕಃ || ವಸಿಷ್ಠಗೋತ್ರಸಂಭೂತೋ ಶ್ರೀಪುರಂದರದಾಸಜಃ | ಧೀಮಾನ್ ಮಧ್ವಪ್ಪದಾಸಾದ್ರೂ ಯಾಜುಷೋತ್ರದ್ವಿವೃತ್ತಿಕಃ || - ಕುಹಯೋಗಪರಿಹಾರಾನಂತರ ಈ ದಾನಶಾಸನ ಮಾಡಿ ಕಂದಕೂರು ಗ್ರಾಮ ದಾನ ಮಾಡಿದ್ದಾನೆ.. ಮೂವರು ಪುತ್ರರಿಗೂ, ಮಗಳಿಗೂ ನಾಯಕರು ವೈಭವದಿಂದ ವಿವಾಹ ಮಾಡಿ ಪತ್ನಿಸುತ್ತಾದಿ- ಗಳೊಡನೆ ಸುಖಿಸಹತ್ತಿದರು. ನಾಯಕರ ವ್ಯಾಪಾರ-ವ್ಯವಹಾರಗಳು ಬಹುಮುಖವಾಗಿ ಅಭಿವೃದ್ಧಿಸಿ ಕೊನೆಗೆ ಅವರು ವಿಜಯನಗರ ಸಾಮ್ರಾಜ್ಯದ “ರತ್ನಭಂಡಾರಿಗಳೆನಿಸಿ ಕೃಷ್ಣದೇವರಾಯನಿಂದ “ನವಕೋಟಿ ನಾರಾಯಣ” ಎಂಬ ಬಿರುದು ಪಡೆದು ವಿಖ್ಯಾತರಾದರು. ವಿಜಯನಗರಕ್ಕೆ ರಾಜಕೀಯ-ವ್ಯಾಪಾರಾದಿ ಕಾರಣಗಳಿಂದ ಅನೇಕ ಬಾರಿ ಬಂದರೂ ಅವರು ತಮ್ಮ ಕುಲಗುರುಗಳೂ, ಮಹಾಜ್ಞಾನಿಗಳೂ ಆದ ಶ್ರೀವ್ಯಾಸರಾಜಗುರುಗಳು ದರ್ಶನಕ್ಕೆ ಬರುತ್ತಿರಲಿಲ್ಲ!
ಭಗವದ್ಭಕ್ತನೂ, ದಾನಧರ್ಮಗಳಲ್ಲಿ ಆಸಕ್ತನೂ ಆಗಿದ್ದ ಶ್ರೀನಿವಾಸನಾಯಕ ಹೀಗೆ ಬದಲಾಗಲು ಬಹುಶಃ ಅವನ ತಂದೆಯಿಂದ ವಿಠಲನ ಗುಡಿಯಲ್ಲಿ ಬಂಧಿತನಾಗಿದ್ದಾಗ ಶ್ರೀಹರಿದರ್ಶನವಾಗಿ ಹರಿಯ ಉಚ್ಛಿಷ್ಟವನ್ನುಂಡ ಬಳಿಕ ಮತ್ತೆ ಮಾನುಷಾನ್ನ ಉಂಡಿದ್ದೇ ಕಾರಣವಾಗಿರಬಹುದು. ಅದರ ಪ್ರಭಾವವೇ ಇಂದಿನ ಅವರ ಸ್ಥಿತಿಗೆ ಕಾರಣವೆಂದು ಹೇಳಲಡ್ಡಿಯಿಲ್ಲ.
ಶ್ರೀನಿವಾಸನಾಯಕರು ಸಾಮಾನ್ಯರಲ್ಲ, ಭಗವನ್ನಾಮಪ್ರಸಾರಕರಾದ ನಾರದ ಮಹರ್ಷಿಗಳೇ ಎಂದು ಜ್ಞಾನಿಗಳು ಹೇಳುತ್ತಾರೆ. ನಾರದ ಮಹರ್ಷಿಗಳು ಶ್ರೀನಿವಾಸನಾಯಕರಾಗಿ ಅವತರಿಸಿದ್ದರೂ ಪರಮಾತ್ಮನ ಮಾಯೆಗೆ ಸಿಕ್ಕಿ ಭಗವಂತನನ್ನೇ ಮರೆತು ಅವನಿಂದ ದೂರಾಗಹತ್ತಿದರು. ಹಿಂದೆ ದ್ವಾಪರದಲ್ಲಿ ಶ್ರೀಕೃಷ್ಣನು “ಕಲಿಯುಗದಲ್ಲಿ ಅವತರಿಸು” ಎಂದು ನಾರದರಿಗೆ ಅಪ್ಪಣೆ ಮಾಡಿದಾಗ ನಾರದರು ಕಲಿಯುಗದ ಧರ್ಮವನ್ನು ನೆನೆದು ಕಂಪಿಸಿ - “ಪ್ರಭು! ನಿನ್ನಾಜ್ಞೆಯಂತೆ ವರ್ತಿಸುವೆನು. ಆದರೆ ನಿನ್ನ ವಿಸ್ಮರಣೆಯಾದರೆ ನನ್ನ ಗತಿಯೇನು ?” ಎಂದು ಕೇಳಿದ್ದರು. ಆಗ ಶ್ರೀಕೃಷ್ಣನು “ಅಂತಹ ಸಮಯದಲ್ಲಿ ನಾನೇ ಬಂದು ನಿನ್ನನ್ನು ಎಚ್ಚರಿಸುತ್ತೇನೆ” ಎಂದು ಅಭಯ ನೀಡಿದ್ದನು.
ಅಂತಹ ಸಮಯ ಹತ್ತಿರವಾಯಿತು. ಅಂತೆಯೇ ಶ್ರೀಹರಿ ಅವರನ್ನು ವಿಜಯನಗರಕ್ಕೆ ಹೋಗಿ ತನ್ನ ಪರಮಭಕ್ತರಾದ ಶ್ರೀವ್ಯಾಸತೀರ್ಥರ ದರ್ಶನ ಪಡೆಯುವ ಒಂದು ಸಂದರ್ಭವನ್ನು ಕಲ್ಪಿಸಿದನು!
ಶ್ರೀನಿವಾಸನಾಯಕರು ಅನೇಕ ಸಲ ವಿಜಯನಗರಕ್ಕೆ ಹೋಗಿದ್ದರೂ ತಮ್ಮ ಕುಲಗುರುಗಳಾದ ಶ್ರೀವ್ಯಾಸತೀರ್ಥರ ಈ ದರ್ಶನ ಪಡೆದಿರಲಿಲ್ಲ. ಯಾವುದಕ್ಕೂ ಸಮಯ ಕೂಡಿಬರಬೇಕಲ್ಲವೇ ? ಶ್ರೀಹರಿಯ ಸಂಕಲ್ಪದಂತೆ ಈಗ ಅವರು ಗುರುಗಳ ದರ್ಶನ ಮಾಡುವ ಯೋಗ ಪ್ರಾಪ್ತವಾಯಿತು. ಶ್ರೀಕೃಷ್ಣದೇವರಾಯನು ಸಾರ್ವಭೌಮನಾಗಿ ದಿಗ್ವಿಜಯ ಯಾತ್ರೆ ಮಾಡಿ ಅಪಾರ ಕೀರ್ತಿ ಗಳಿಸಿ ಬಂದ ಮೇಲೆ ಕೃಷ್ಣಪ್ರತಿಷ್ಠಾಕಾಲದಲ್ಲಿ ಸಾಮ್ರಾಜ್ಯದ ಆತ್ಮೀಯರಾಗಿದ್ದಶ್ರೀನಿವಾಸನಾಯಕರು ಪತ್ನಿಪುತ್ರಾದಿಗಳೊಡನೆ ಕೃಷ್ಣದೇವರಾಯನ ಆಹ್ವಾನದಂತೆ ಬಂದಿದ್ದರು. ಶ್ರೀನಿವಾಸನಾಯಕರು ಪತ್ನಿಪುತ್ರಾದಿಗಳ ವಿಶೇಷ ಬಲವಂತದಿಂದಾಗಿ ಭಗವತ್ಸಂಕಲ್ಪದಂತೆ ಶ್ರೀವ್ಯಾಸರಾಜಸ್ವಾಮಿಗಳವರ ದರ್ಶನಕ್ಕಾಗಿ “ವಿಶ್ವಪಾವನ” ಮಠಕ್ಕೆ ಆಗಮಿಸಿದರು. ಅಂದು ದೇವರ ಪೂಜೆ, ತೀರ್ಥಪ್ರಸಾದ, ಭೋಜನಗಳಾದ ಮೇಲೆ ಊರಿಗೆ ಹೊರಡಲು ಗುರುಗಳಲ್ಲಿ ಫಲಮಂತ್ರಾಕ್ಷತೆ ಪಡೆಯಲು ಬಂದರು.
ಏಕಾಂತದಲ್ಲಿದ್ದ ಶ್ರೀವ್ಯಾಸತೀರ್ಥರು ಶ್ರೀನಿವಾಸನಾಯಕರನ್ನು ಕಂಡು ನಸುನಗುತ್ತಾ ಬರಬೇಕು, ಬರಬೇಕು, ನವಕೋಟಿ ನಾರಾಯಣರು!” ಎಂದು ನುಡಿದು ಕರೆದು ಹತ್ತಿರ ಕೂಡಿಸಿಕೊಂಡು ಕುಶಲಪ್ರಶ್ನೆ ಮಾಡಿದರು.
ಅನಂತರ ಶ್ರೀಗಳವರು - “ನಾಯಕರೇ, ನೀವು ನಮ್ಮ ಮಠದ ಮುಖ್ಯ ಶಿಷ್ಯರು. ಸದೈಷ್ಣವರು. ನಮ್ಮ ವಂಶಬಂಧುಗಳು. ನಿಮ್ಮ ತಂದೆ ವರದಪ್ಪನಾಯಕರು ನಮ್ಮಲ್ಲಿ ಅಗಾಧ ಭಕ್ತಿಶ್ರದ್ಧೆಗಳನ್ನಿಟ್ಟುಕೊಂಡು ಪದೇ ಪದೇ ಶ್ರೀಮಠಕ್ಕೆ ಬಂದು ಹೋಗುತ್ತಿದ್ದರು. ಅವರು ಸ್ವರ್ಗಸ್ಥರಾದ ಮೇಲೆ, ಅವರ ಪುತ್ರರಾದ ನೀವು ಒಮ್ಮೆಯೂ ಮಠಕ್ಕೆ ಬಂದಿಲ್ಲ. ಪರಸ್ಪರ ಗುರುಶಿಷ್ಯ ಸಂಬಂಧ ಸುಮಧುರವಾಗಬೇಕಾದರೆ ಆಗಾಗ್ಗೆ ಮಠಕ್ಕೆ ಬಂದುಹೋಗುತ್ತಿರಬೇಕಲ್ಲವೇ ? ಹಾಗಾದಲ್ಲಿ ಅದು ಶ್ರೇಯಸ್ಸಿಗೆ ಕಾರಣವಾಗುವುದು. ನಮ್ಮ ಆತ್ಮೀಯ ಶಿಷ್ಯರಾದ ನಿಮಗೆ ಶ್ರೀಮೂಲಗೋಪಾಲಕೃಷ್ಣನ ಪ್ರೇರಣೆಯಂತೆ ಕೆಲ ಹಿತೋಕ್ತಿಗಳನ್ನು ಹೇಳಬಯಸುತ್ತೇವೆ. ನಮ್ಮ ಸ್ಪಷ್ಟವಾದ ನುಡಿ ಕೇಳಿ ಅಸಮಾಧಾನಪಡಬಾರದು. ನಾವು ನಿಮ್ಮ ಹಿತೈಷಿಗಳು, ಶ್ರೀಹರಿಯು ಪ್ರೇರಣೆ ಮಾಡಿದ ನಾಲ್ಕು ಮಾತುಗಳನ್ನು ಹೇಳುತ್ತೇವೆ. ಪಾರತ್ರಿಕ ಸಾಧನೆಯೇ ಮನುಷ್ಯನ ಗುರಿ. ಅಂತೆಯೇ ಅದಕ್ಕೆ ಸಹಾಯಕವಾದ ಮಾರ್ಗವನ್ನು ತೋರಿಕೊಡುವುದು ಗುರುಗಳಾದ ನಮ್ಮ ಕರ್ತವ್ಯ.
ಶ್ರೀನಿವಾಸನಾಯಕರೇ, ನೀವೀಗ ಯಾವುದು ತಾರಕವೋ, ಉದ್ದಾರಕವೋ, ಶ್ರೇಯಃಪ್ರದವೋ, ಅಂಥ ಶ್ರೀಹರಿಭಕ್ತಿ ವಿರಹಿತರಾಗಿ, ಶ್ರೀಹರಿವಿಮುಖರಾಗಿದ್ದೀರಿ. ಭಗವತ್ತೂಜೆ, ಧ್ಯಾನ, ಚಿಂತನ, ಸಮಸ್ತ ವಸ್ತುಗಳೊಡನೆ ಆತ್ಮನಿವೇದನ, ಸಮರ್ಪಣ ಭಾವರಹಿತರಾಗಿದ್ದೀರಿ! ಶ್ರೀಹರಿಯನ್ನು ಬಿಟ್ಟು ಅವನ ಪತ್ನಿಯೊಬ್ಬಳನ್ನು ಮಾತ್ರ ಆರಾಧಿಸುತ್ತಿದ್ದೀರಿ. ಪತಿಸಹಿತಳಾದ ಅವಳನ್ನಾರಾಧಿಸಿದರೆ ಅವಳು ಶಾಶ್ವತವಾಗಿ ಒಲಿಯುವಳು. ಇಲ್ಲದೊಡೆ ಪತಿಯನ್ನು ದೂರಮಾಡಿದ ನಿಮ್ಮನ್ನೂ ಅವಳು ತೊರೆದುಹೋಗುವುದರಲ್ಲಿ ಸಂಶಯವಿಲ್ಲ! ದಾನಧರ್ಮಗಳೆಂದರೆ ನೀವು ಮೂಗು ಮುರಿಯುವಿರಿ, ಈ ಲೌಕಿಕ ಸಂಪತ್ತು ಶಾಶ್ವತವೆಂದು ಭ್ರಮಿಸಿ ಇವೆಲ್ಲವೂ ಅದಾವ ಮಹಾಮಹಿಮನ ಕಾರುಣ್ಯದಿಂದ ಲಬ್ದವಾಗುವುದೊ, ಸಮಸ್ತವೂ ಅದಾರಿಂದ ಸ್ಪಷ್ಟವಾಗಿ, ಪಾಲಿಸಲ್ಪಟ್ಟು ಕೊನೆಗೆ ನಾಶವಾಗುವುದೋ ಅಂತಹ ಅಲೌಕಿಕನೂ ಶಾಶ್ವತ ಸುಖಪ್ರದನೂ ಆದರ ಶ್ರೀಮನ್ನಾರಾಯಣನನ್ನು ಮರೆತಿರುವಿರಿ. "ಈಶಾವ್ಯಾಸಮಿದು ಸರ್ವಂ ಯಂಚಿಜ್ಜಗತ್ಯಾಂ ಜಗತ್ | ತೇನ ತತ್ತೇನ ಭುಂಜೀಥಾಃ ಮಾಗೃಧಃ ಕಸ್ಯಸಿದ್ಧನಮ್” ಎಂಬ ಈಶಾವಾಸ್ಕೋಪನಿಷತ್ತಿನ ಉಪದೇಶವನ್ನೇ ಕಡೆಗಾಣಿಸಿರುವುದನ್ನು ಕಂಡು ನಮಗೆ ಖೇದವಾಗಿದೆ. ಶಾಸ್ತ್ರಾಧ್ಯಯನ ಮಾಡಿ, ಸದಸದ್ದಿವೇಚನಾಶಕ್ತಿಯುಳ್ಳವರಾಗಿದ್ದರೂ ಅಶಾಶ್ವತವನ್ನೇ ನಂಬಿ ಕುಳಿತಿದ್ದೀರಿ. ಮಾನವನ, ಸುಜೀವಿಯ ಮುಖ್ಯಧೇಯನಾದ ಶಾಶ್ವತಸುಖ ಸಾಧನವಾದ ವೇದಾದಿಶಾಸೋಕ್ತ ಶ್ರೀಮನ್ಮದ್ಧತತ್ವಗಳನ್ನೂ ಅದರ ರಹಸ್ಕೋಪದೇಶಗಳನ್ನೂ ಕಡೆಗಣಿಸಿ ಪರಮಪುರುಷಾರ್ಥನಾದ ಶ್ರೀಪುರುಷೋತ್ತಮನಿಂದ ದೂರವಾಗುತ್ತಿದ್ದೀರಿ. ಇದು ನಿಮಗೆ ಶ್ರೇಯಸ್ಕರವಲ್ಲ! ಮಾನವ ಜನ್ಮ ದೊಡ್ಡದು. ಅದು ಸಾಧನ ಶರೀರ. ಅದು ದೊರಕಿರುವಾಗ ಜ್ಞಾನ ಸಂಪಾದಿಸಿ, ಭಗವಂತನನ್ನು ಭಕ್ತಾದಿಗಳಿಂದ ಆರಾಧಿಸಿ ಸಾಧನ ಮಾಡಿಕೊಂಡು ಆತ್ರೋದ್ಧಾರ ಮಾಡಿಕೊಳ್ಳದಿದ್ದರೆ ಮಾನವನಿಗೂ ಪಶುವಿಗೂ ಇರುವ ವ್ಯತ್ಯಾಸವೇನು? ನಶ್ವರವಾದ ಈ ಸಿರಿಸಂಪತ್ತಿನ ಮೋಹ, ಅದರ ಗಳಿಕೆಯಲ್ಲಿಯೇ ತಲ್ಲೀನರಾಗಿರುವ ನಿಮ್ಮಿ ಪ್ರವೃತ್ತಿ ಇನ್ನಾದರೂ ಬದಲಾಗಲಿ, ಅಂದರೆ ನಿಮಗೆ ಕಲ್ಯಾಣವಾಗುವುದು.
ನೀವು ಸಂಪಾದಿಸುತ್ತಿರುವ ಈ ಲೌಕಿಕ ಸಂಪತ್ತಿನ ಕೆಲವಂಶವಾದರೂ, ದಾನ ಧರ್ಮ, ಪರೋಪಕಾರ, ಜ್ಞಾನಪ್ರಸಾರ, ಭಗವತೇವೆಗಳಿಗೆ ಉಪಯೋಗಿಸಬೇಕು. ಅದು ಶಾಸ್ತ್ರಗಳ ಆದೇಶ, ದೇವರು, ದ್ವಿಜರು, ಬಡವರು, ನೊಂದವರಿಗಾಗಿ ನಿಮ್ಮ ಸಂಪತ್ತನ್ನು ವಿನಿಯೋಗಿಸಿರಿ. ಅಂದರೆ ನಿಮಗೆ ಕ್ಷೇಮವಾಗುವುದು. ಮಾತ್ರವಲ್ಲ, ಶ್ರೀಹರಿಯು ಪ್ರಸನ್ನನಾಗಿ ಪೊರೆಯುವನು. ಈಗಿನ ನಿಮ್ಮ ಭ್ರಮೆಯ ಸುಳಿಯಿಂದ ಹೊರಬಂದು ಹರಿಯ “ದಾಸತ್ವವನ್ನು ಸ್ವೀಕರಿಸಿ ಅವನ ಕರುಣೆಗೆ ಪಾತ್ರರಾಗಿ ಉದ್ಧತರಾಗಿರಿ” ಎಂದು ಕಳಕಳಿಯಿಂದ ಬೋಧಿಸಿದರು.
ವ್ಯಾಸತೀರ್ಥರ ಉಪದೇಶ ನಾಯಕರ ಮನಸ್ಸಿನ ಮೇಲೆ ಪರಿಣಾಮ ಬೀರಿದರೂ ಶ್ರೀಹರಿಯ ಮಾಯೆಗೆ ಸಿಲುಕಿದ ಅವರು ಗುರುಗಳ ಉಪದೇಶವನ್ನು ಅಷ್ಟಾಗಿ ಗಮನಿಸಲಿಲ್ಲ! ಸತ್ಯವಿಚಾರವನ್ನು ಸ್ಪಷ್ಟ ನುಡಿಗಳಿಂದ ಗುರುಗಳು ಹೇಳಿದ್ದರಿಂದ ತನಗೆ ಅದು ಅಹಿತವೆಂದು ಭ್ರಮಿಸಿದ ನಾಯಕರು ಮನದಲ್ಲೇ ಗುರುಗಳ ಮೇಲೆ ಅಸಮಾಧಾನಗೊಂಡರು. ಆದರೆ ಅದನ್ನು ತೋರುವಂತಿರಲಿಲ್ಲ. ಶ್ರೀಯವರು ಮಹಾತ್ಮರು, ಜ್ಞಾನಿಗಳು, ಶಾಪಾನುಗ್ರಹಶಕ್ತರು ಎಂದವರು ಅರಿತಿದ್ದರು. ಸಮಸ್ತ ಸಾಮ್ರಾಜ್ಯವೇ ಅವರಿಗೆ ಅಂಕಿತವಾಗಿತ್ತು. ಅವರಾಜ್ಞೆಯನ್ನು ನೆರವೇರಿಸಲು ಸಾಮ್ರಾಟನೇ ಟೊಂಕಕಟ್ಟಿ ನಿಲ್ಲುತ್ತಿದ್ದ! ಮೇಲಾಗಿ ಕುಲಗುರುಗಳು, ಅಂಥವರ ಮೇಲೆ ತನ್ನ ಕೋಪ-ತಾಪಗಳನ್ನು ತೋರಿದರೆ ಏನು ಅನಾಹುತವಾಗುವುದೋ ಎಂಬ ಭಯ ನಾಯಕರಿಗಿತ್ತು. ಅಂತೆಯೇ ತಮ್ಮ ಭಾವನೆಯನ್ನು ಹತ್ತಿಕ್ಕಿ ಮುಗುಳುನಗೆಯನ್ನು ಹೊರಚೆಲ್ಲುತ್ತಾ “ಗುರುವರ್ಯ ! ತಾವು ಎಲ್ಲವನ್ನೂ ತ್ಯಾಗಮಾಡಿದ ಸನ್ಯಾಸಿಗಳು, ಎಲ್ಲವನ್ನೂ ತ್ಯಜಿಸಿದ ವಿರಕ್ತರು ಹೇಳಬೇಕಾದುದನ್ನೇ ಅಪ್ಪಣೆ ಕೊಡಿಸಿದ್ದೀರಿ! ತಮ್ಮ ದೃಷ್ಟಿಯಲ್ಲಿ ಅದು ಸರಿಯಿರಬಹುದು. ಆದರೆ ನಾನು ಸನ್ಯಾಸಿಯಲ್ಲ, ಸಂಸಾರಿ ಮತ್ತು ವ್ಯಾಪಾರೋದ್ಯಮಿ, ನಾನೀಗ ಅನುಸರಿಸುವ ಮಾರ್ಗವೇ ಸರಿಯೆಂದು ಭಾವಿಸಿದ್ದೇನೆ. ಹಾಗೊಂದು ವೇಳೆ ಅದು ತಪ್ಪಾಗಿದ್ದರೆ, ತಾವೇ ಅಪ್ಪಣೆ ಕೊಡಿಸಿದಂತೆ ಸಮಸ್ತಕ್ಕೂ ಒಡೆಯನಾಗಿ, ಎಲ್ಲರಲ್ಲೂ ಅಂತರ್ಗತನಾಗಿ, ಪ್ರೇರಕನಾಗಿ, ನಿಯಾಮಕನಾಗಿ, ನನ್ನಲ್ಲಿಯೂ ಅಂತರ್ಗತನಾಗಿರುವ ಆ ಪರಮಾತ್ಮನು ನನ್ನನ್ನು ತಿದ್ದಿ ಸರಿಪಡಿಸಲಿ! ಆಗ ಖಂಡಿತವಾಗಿ ತಮ್ಮ ಉಪದೇಶದಂತೆ ನಡೆದು ಶ್ರೀಹರಿಯ ದಾಸನಾಗುತ್ತೇನೆ” ಎಂದರು. ಶ್ರೀಯವರು ಮಂದಹಾಸ ಬೀರಿ “ತಥಾಸ್ತು” ಎಂದರು. ಆನಂತರ “ಶ್ರೀನಿವಾಸನಾಯಕರೇ, ಈ ಮಾತನ್ನು ಆ ಭಗವಂತನೇ ನಿಮ್ಮಿಂದಲೂ ನಮ್ಮಿಂದಲೂ ನುಡಿಸಿರುವನು! ಶ್ರೀಹರಿಯ ಖಂಡಿತ ನಿಮ್ಮ ಈ ಬುದ್ಧಿಯನ್ನು ಬದಲಿಸಿ, ಸನ್ಮತಿಯಿತ್ತು ನಿಮ್ಮನ್ನು ತನ್ನ ದಾಸರನ್ನಾಗಿ ಮಾಡಿಕೊಳ್ಳುವನು! ಆಗಲಾದರೂ ನಮ್ಮ ಉಪದೇಶದಂತೆ ನಡೆಯುವಿರಾ ?” ಎಂದು ಪ್ರಶ್ನಿಸಿದರು.
ಶ್ರೀನಿವಾಸನಾಯಕರು ಗುರುಗಳ ವಚನವನ್ನಾಲಿಸಿ ಅಪ್ರತಿಭರಾದರು. ಆದರೂ ಮನದ ದುಗುಡವನ್ನು ತೋರ್ಪಡಿಸದೆ ಮಂದಹಾಸ ಬೀರಿ “ಮಹಾಸ್ವಾಮಿ, ತಮ್ಮಿ ಭವಿಷ್ಯ ನಿಜವಾದಲ್ಲಿ ತಮ್ಮ ಆಜ್ಞಾನುವರ್ತಿಯಾಗಿ ಮುನ್ನಡೆಯುವೆನು. ಇನ್ನು ನನಗೆ ಅಪ್ಪಣೆ ದಯಪಾಲಿಸಬೇಕು” ಎಂದು ವಿಜ್ಞಾಪಿಸಿದರು. ಶ್ರೀಪಾಂದಗಳವರು ನಾಯಕರಿಗೂ ಪರಿವಾರದವರಿಗೂ ಫಲಮಂತ್ರಾಕ್ಷತೆಯನ್ನಿತ್ತು ಆಶೀರ್ವದಿಸಿದರು. ನಾಯಕರು ಪತ್ನಿಪುತ್ರಾದಿಗಳೊಡನೆ ಊರಿಗೆ ಪ್ರಯಾಣ ಬೆಳೆಸಿದರು.
ಶ್ರೀನಿವಾಸನಾಯಕರು ಊರಿಗೆ ಬಂದು ಸೇರಿದರು. ಶ್ರೀವ್ಯಾಸರಾಜರ ಉಪದೇಶವಾದಲಾಗಾಯಿತು ಅವರ ಮನದಲ್ಲಿ ಹೊಯ್ದಾಟ ಪ್ರಾರಂಭವಾಗಿತ್ತು. ಗುರುಗಳ ಮಾತನ್ನೆಲ್ಲಾ ಮೆಲುಕುಹಾಕಹತ್ತಿದರು. ಶ್ರೀಹರಿಯ ಮಾಯೆಗೆ ಒಳಗಾಗಿದ್ದ ಅವರಿಗೆ ಗುರೂಪದೇಶ ರುಚಿಸಲಿಲ್ಲ. ತಾವು ಮಾಡುತ್ತಿರುವುದೇ ಸರಿಯೆಂದವರು ನಂಬಿದ್ದರು. “ವಿರಕ್ತರಾದ ಗುರುಗಳಿಗೆ ಸಿರಿಸಂಪತ್ತು ಹೇಯವಾಗಿ ಕಾಣುವುದು ಸಹಜ. ಇದು ಹೇಯವಾದಲ್ಲಿ ಭಗವಂತ ಎಲ್ಲರಿಗೂ ಇದರಲ್ಲೇಕೆ ಆಸಕ್ತಿ ಹುಟ್ಟಿಸುತ್ತಿದ್ದ? ಎಲ್ಲರೂ ಸಿರಿಸಂಪತ್ತಿಗಾಗಿ ಹಾತೊರೆಯುವಾಗ ನಾನೊಬ್ಬನೇಕೆ ಅದರಿಂದ ಹೊರತಾಗಬೇಕು ? ಭಗವಂತನು ಎಲ್ಲೆಡೆ ಇರವುದು ನಿಜವಾದರೆ ಅವನು ಸಿರಿಸಂಪತ್ತಿನಲ್ಲಿಯೂ ಇರುವವನಲ್ಲವೇ ? ಇದು ಗುರುಗಳು ಅರಿಯದ ವಿಷಯವೇನಲ್ಲ, ವಿರಕ್ತರಾದ ಅವರು ಪ್ರತಿಮೆಯಲ್ಲಿ ಜ್ಞಾನದಲ್ಲಿ ಮತ್ತು ಸರ್ವತ್ರ ಕಂಡು ಆರಾಧಿಸಿದರೆ, ನಾನು ಸಿರಿಸಂಪತ್ತಿನಲ್ಲಿ ಅವನನ್ನು ಕಂಡು ಆರಾಧಿಸುತ್ತೇನೆ. ಇದರಲ್ಲಿ ತಪ್ಪೇನು? ಒಂದು ವೇಳೆ ನನ್ನ ಆಚರಣೆ ತಪ್ಪಾಗಿದ್ದರೆ, ನಾನು ಗುರುಗಳಲ್ಲಿ ವಿಜ್ಞಾಪಿಸಿದಂತೆ ಆ ಭಗವಂತ ಬಂದು ನನ್ನನ್ನು ತಿದ್ದಲಿ ! ಆಗ ನೋಡೋಣ” ಮುಂತಾಗಿ ಯೋಚಿಸಿದರು. ಸರಿ ಮತ್ತೆ ಪ್ರಾರಂಭವಾಯಿತು. ಅವರ ಧನಾರ್ಜನೆಯ ಪ್ರವೃತ್ತಿ! ಶ್ರೀಹರಿಯ ಉಚ್ಚಿಷ್ಟವನ್ನುಂಡ ಬಳಿಕ ಮಾನುಷಾನ್ನವನ್ನು ಉಂಡ ಫಲ ಅವರ ಮೇಲೆ ತನ್ನ ಪ್ರಭಾವ ಬೀರಿತು!
ನಾಯಕರ ಪತ್ನಿ ಪುತ್ರಾದಿಗಳೂ ಗುರುಗಳ ಉಪದೇಶವನ್ನು ಶ್ರವಣ ಮಾಡಿದ್ದರು. ಅದು ಅವರ ಮೇಲೆ ಸತ್ಪಭಾವ ಬೀರಿತ್ತು. ನಾಯಕರ ವರ್ತನೆ ಸರಿಯಲ್ಲವೆಂದವರು ಮೊದಲಿನಿಂದಲೂ ಭಾವಿಸಿದ್ದರು. ಅವರು ಅನೇಕ ಬಾರಿ ಗುರುಗಳ ಉಪದೇಶವನ್ನು ನಾಯಕರಿಗೆ ಜ್ಞಾಪಿಸಿ ಗುರುಗಳ ಆಜ್ಞೆಯಂತೆ ನಡೆಯಬೇಕೆಂದು ಪ್ರಾರ್ಥಿಸಿದರು. ಅದರಿಂದ ಪ್ರಯೋಜನವೇನೂ ಆಗದಿರಲು ಹರಿಚಿತ್ತದಲ್ಲಿ ಇದ್ದಂತಾಗಲಿ ಎಂದವರು ಸುಮ್ಮನಾದರು.
ಹಿಂದೆ ನಾರದರಿಗೆ ಶ್ರೀಕೃಷ್ಣ ಅಭಯವಿತ್ತಿದ್ದಂತೆ ನಾರದಾವತಾರಿಗಳಾದ ನಾಯಕರನ್ನು ಎಚ್ಚರಿಸುವ ಕಾಲ ಪ್ರಾಪ್ತವಾಯಿತು. “ಅಪ್ಪಚ್ಯುತೋ ಗುರುದ್ವಾರಾ” ಎಂಬಂತೆ ಎಲ್ಲವನ್ನೂ ಗುರುಮುಖವಾಗಿ ನೆರವೇರಿಸಿ ಅನುಗ್ರಹಿಸುವ ಶ್ರೀಹರಿ ಮೊದಲು ಶ್ರೀವ್ಯಾಸತೀರ್ಥರಿಂದ ಉಪದೇಶ ಮಾಡಿಸಿದ್ದ. ಈಗ ತಾನೇ ನಾಯಕರನ್ನು ಎಚ್ಚರಿಸಲು ಮುಂದಾದ! ಅದಾದ ಒಂದು ಘಳಿಗೆಯಲ್ಲಿ ವ್ಯಾಸಮುನಿಗಳು “ನೀನು ದಾಸತ್ವ ವಹಿಸುವಂತೆ ಮಾಡಿ, ನಿನ್ನನ್ನು ತಿದ್ದಿ ಶ್ರೀಹರಿ ತನ್ನ ದಾಸನನ್ನಾಗಿ ಮಾಡಿಕೊಳ್ಳುವನು” ಎಂದು ಹೇಳಿದ್ದರೋ ಏನೋ, ಶ್ರೀಹರಿ ಅದನ್ನು ಸತ್ಯ ಮಾಡಲು ಉದ್ಯುಕ್ತನಾದ.
ಶ್ರೀಹರಿ, ಮುಂದೆ ಅವರಿಂದ ಲೋಕಕಲ್ಯಾಣಾದಿ ಮಹತ್ಕಾರ್ಯವನ್ನು ಮಾಡಿಸಬೇಕಾಗಿದೆ. ಅಂತೆಯೇ ಅವರ ಮೇಲೆ ತಾನು ಹಾಕಿದ್ದ ಮಾಯೆಯನ್ನು ಕಳಚಿ ಅನುಗ್ರಹೋನ್ಮುಖನಾದ. ಆ ಮಹಾಪ್ರಭುವು ಮಗನ ಉಪನಯನದ ನೆಪ ಹೂಡಿ ವೃದ್ಧ ಬ್ರಾಹ್ಮಣರೂಪದಿಂದ ಬಂದು ನಾಯಕರಲ್ಲಿ ಸಹಾಯ ಬೇಡಿದ. ಚಿಕ್ಕಾಸೂ ಬಿಚ್ಚದ ನಾಯಕರು ಇಂದು ನಾಳೆ ಎಂದು ಕಾಲ ತಳ್ಳಿದರು. ಆರು ತಿಂಗಳು ಅವರಲ್ಲಿಗೆ ಅಂಡಲೆದರೂ ಪ್ರಯೋಜನವಾಗದಿರಲು ಶ್ರೀಹರಿ ನಾಯಕರ ಪತ್ನಿ ಸರಸ್ವತೀಬಾಯಿಯ ಮೂಗುತಿಯ ಪ್ರಕರಣದಿಂದ ನಾಯಕರ ಕಣ್ಣು ತೆಗೆಸಿದ. ಸ್ವರೂಪತಃ ಜ್ಞಾನಿಗಳಾಗಿದ್ದ ನಾಯಕರಿಗೆ ಜ್ಞಾನೋದಯವಾಯಿತು. ತಮ್ಮ ಹಿಂದಿನ ಕೃತಿಗಾಗಿ ಅವರು ಪಶ್ಚಾತ್ತಪ್ತರಾದರು. ಅವರು ಶ್ರೀಹರಿಯ ಸೇವೆಯನ್ನು ತ್ಯಜಿಸಿ ಮೂರ್ಖನಂತೆ ದ್ರವ್ಯಾರ್ಜನೆಗಾಗಿಯೇ ಕಾಲವ್ಯಯ ಮಾಡಿದೆನಲ್ಲಾ ಎಂದು ದುಃಖಿಸಿದರು. ತಮ್ಮ ನಡವಳಿಕೆಗಾಗಿ ತಮ್ಮನ್ನು ತಾವೇ ನಿಂದಿಸಿಕೊಂಡರು. ಅಶಾಶ್ವತವಾದ ಐಹಿಕ ಸುಖ-ಧನಾರ್ಜನೆಯಲ್ಲಿ ಮಗ್ನನಾಗಿ ವ್ಯರ್ಥ ಕಾಲ ಕಳೆದೆನಲ್ಲಾ ಎಂದು ಪರಿತಪಿಸಿದರು. ಮನಸ್ಸು ಕಲಕಿಹೋಯಿತು. ಎಲ್ಲದರಲ್ಲೂ ಜಹಾಸೆಯುಂಟಾಯಿತು. ವೈರಾಗ್ಯ ಅವರನ್ನಾಶ್ರಯಿಸಿತು. ಐಶ್ವರ್ಯವನ್ನು ತುಚ್ಛವಾಗಿ ಕಂಡರು. ಪತ್ನಿಪುತ್ರಾದಿಗಳೊಡನೆ ಮನೆಯಿಂದ ಹೊರಬಿದ್ದು ಒಂದು ತುಳಸಿದಳವನ್ನು ಮನೆಯ ಮೇಲೆ ಹಾಕಿ “ಕೃಷ್ಣಾರ್ಪಣ” ಎಂದುಬಿಟ್ಟರು! ಯಾವುದನ್ನು ತಾವು ಹಗಲಿರುಳು ಶ್ರಮಿಸಿ, ಸಂಪಾದಿಸಿ, ಅದೇ ತಮ್ಮ ಸರ್ವಸ್ವವೆಂದು ಭಾವಿಸಿದ್ದರೋ ಸಹಸ್ರಾರು ಜನ ಬ್ರಾಹ್ಮಣರಿಗೆ ದಾನ ಮಾಡಿದರೆಂದು ಹರಿದಾಸ ಪರಂಪರೆಯವರು ಹೇಳುವರು.
ಅಂಥ ಸಿರಿ ಸಂಪತ್ತನ್ನು ನಶ್ವರವೆಂದು ಭಾವಿಸಿ ಅದರಲ್ಲಿ ಜಹಾಸೆಗೊಂಡು ಎಲ್ಲವನ್ನೂ ಬ್ರಾಹ್ಮಣರಿಗೆ ದಾನಮಾಡಿಬಿಟ್ಟರು! ಮುಂದಿನ ಮಾರ್ಗದರ್ಶನಕ್ಕಾಗಿ ಸದ್ಗುರು ವ್ಯಾಸರಾಜರನ್ನು ಅರಸುತ್ತಾಪಪುತ್ರಾದಿಗಳೊಡನೆ ವಿಜಯನಗರಕ್ಕೆ ತೆರಳಿದರು.
ಕ್ರಿಸ್ತಶಕ ೧೫೧೭ ರ ಸುಮಾರಿಗೆ ಶ್ರೀನಿವಾಸನಾಯಕರು ವಿಜಯನಗರಕ್ಕೆ ಬಂದರು. 'ವಿಶ್ವಪಾವನ' ಮಠದಲ್ಲಿ ಶ್ರೀವ್ಯಾಸಭಗವಾನರು ಪ್ರಾತರಾಷ್ಟ್ರೀಕದಲ್ಲಿ ಮಗ್ನರಾಗಿದ್ದಾರೆ. ಪತ್ನಿ ಪುತ್ರಾದಿಗಳೊಡನೆ ಬಂದ ಶ್ರೀನಿವಾಸನಾಯಕರು ಗುರುಗಳಿಗೆರಗಿದರು. ಅವರನ್ನು ಕಂಡ ಗುರುಗಳ ಮುಖವರಳಿತು. “ಬನ್ನಿ ನಾಯಕರೇ, ನಮ್ಮ ವಚನವನ್ನು ಶ್ರೀಹರಿ ಸತ್ಯಮಾಡಿದಂತಿದೆಯಲ್ಲ! ಶ್ರೀಹರಿಯ ಅನುಗ್ರಹವಾಯಿತೆ ?” ಎಂದರು.
ನಾಯಕರು ಕಣ್ಣೀರು ಸುರಿಸುತ್ತಾ ಸಾಷ್ಟಾಂಗವೆರಗಿ, “ಮಹಾತ್ಮರಾದ ತಮ್ಮ ಮಾತೆಂದಾದರೂ ಸುಳ್ಳಾದೀತೇ ಗುರುದೇವ? ಶ್ರೀಹರಿ ಅದನ್ನು ಸತ್ಯಮಾಡುವ ಮೂಲಕ ನನ್ನ ಕಣ್ಣು ತೆರೆಸಿ ಮುಂದಿನ ಮಾರ್ಗದರ್ಶನಕ್ಕಾಗಿ ತಮ್ಮಲ್ಲಿಗೆ ಬರಲು ಪ್ರೇರಿಸಿದ್ದಾನೆ! ಗುರುಚರಣಕ್ಕೆ ಶರಣಾಗಿ ಬಂದಿದ್ದೇನೆ” ಎಂದರುಹಿದರು. ಶ್ರೀವ್ಯಾಸಮುನಿಗಳಿಗೆ ಪರಮಾನಂದವಾಯಿತು.
ಶ್ರೀನಿವಾಸನಾಯಕರು ಕರಜೋಡಿಸಿ “ಸ್ವಾಮಿ, ಗುರ್ವನುಗ್ರಹವಿಲ್ಲದೆ ಜ್ಞಾನ ದೊರಕದಲ್ಲವೇ? ಈಗ ನಾನು ಜ್ಞಾನಮಾರ್ಗದಲ್ಲಿ ಮುಂದುವರೆದು ಪರಮಾತ್ಮನ ದಾಸನಾಗಿ ಆತ್ರೋದ್ದಾರ ಮಾಡಿಕೊಳ್ಳಲು ನನಗೆ ಜ್ಞಾನದಾನ ಮಾಡಿ, ಉಪದೇಶಿಸಿ ಉದ್ಧರಿಸಬೇಕು” ಎಂದು ಕೋರಿದರು.
ಶ್ರೀವ್ಯಾಸರಾಜರಿಗೆ ಸಂತೋಷವಾಯಿತು. ಶಿಷ್ಯರಾದ ಅವರಿಗೆ ಪತ್ನಿ ಪತ್ರಾದಿಗಳೊಡನೆ ಮಂತ್ರಮುದ್ರಾಧಾರಣ ಮಾಡಿ “ಪುರಂದರವಿಠಲ” ಎಂಬ ಅಂಕಿತದೊಡನೆ ಮಂತ್ರೋಪದೇಶ ಮಾಡಿ ದಾಸದೀಕ್ಷೆಯನ್ನು ಕರುಣಿಸಿ ಇನ್ನು ಮುಂದೆ ನೀವು 'ಪುರಂದರದಾಸರೆಂಬ ಅಭಿಧಾನದಿಂದ ಲೋಕವಿಖ್ಯಾತರಾಗಿರಿ” ಎಂದು ಆಶೀರ್ವದಿಸಿದರು. ಗುರುಗಳ ಕಾರುಣ್ಯ ದೊರಕಿತು. ಹರಿದಾಸದೀಕ್ಷೆ ವಹಿಸಿದ ಶ್ರೀನಿವಾಸನಾಯಕರು ಅಂದಿನಿಂದ ಪುರಂದರದಾಸರಾದರು.
ಗುರುಗಳು ಮಂತ್ರಮುದ್ರಾಧಾರಣ, ಮಂತ್ರೋಪದೇಶಪೂರ್ವಕ ಪುರಂದರವಿಠಲ” ಎಂಬ ಅಂಕಿತಪ್ರದಾನ ಮಾಡಿದ ಕೂಡಲೇ ಅವರ ಶರೀರದಲ್ಲಿ ವಿದ್ಯುತ್ತಂಚಾರವಾದಂತಾಯಿತು. ಅದಾವುದೋ ಮಹಾಶಕ್ತಿ ಅವರ ಧಮನಿಗಳಲ್ಲಿ ಸಂಚರಿಸಿದಂತಾಗಿ ಶರೀರ ಪುಳಕಿಸಿತು. ಆನಂದತುಂದಿಲರಾಗಿ ಗದ್ಗದ ಕಂಠದಿಂದ ತಮ್ಮ ಉದ್ಧಾರಕ ಗುರುಗಳನ್ನು ಸ್ತುತಿಸಹತ್ತಿದರು.
ವ್ಯಾಸರಾಜರ ದಿವ್ಯ ಚರಣ ಕಂಡೆ |
ಏಸು ಜನ್ಮದ ಸುಕೃತ ಫಲ ದೊರಕಿತೋ ಎನ್ನ ||
ಸಾಸಿರಕೋಟಿ ಕುಲ ಪಾವನವಾಯಿತು |
ಶ್ರೀಶನ ಭಜಿಸುವುದಕಧಿಕಾರಿ ನಾನಾದೆ ||
ದೋಷರಹಿತನಾದ ಪುರಂದರವಿಠಲನ |
ದಾಸರ ಕರುಣವೆ ನನ್ನ ಮೇಲೆ ಇರಲಾಗಿ ||
ಅಂಕಿತವಿತ್ತು ಮಂತ್ರೋಪದೇಶ, ಗುರೂಪದೇಶ ಮಾಡಿ ಕಾರುಣ್ಯ ಬೀರಿದ ಗುರುಗಳನ್ನು ಸ್ಮರಿಸುತ್ತಾ -
“ಗುರು ಉಪದೇಶವಿಲ್ಲದ ಜ್ಞಾನ | ಗುರು ಉಪದೇಶವಿಲ್ಲದ ಯೋಗ || ಗುರು ಉಪದೇಶವಿಲ್ಲದ ಕ್ರಿಯೆಗಳು | ಉರುಗನ ಉಪವಾಸದಂತೆ ಕಾಣಿರೋ || ಗುರುವ್ಯಾಸರಾಯರೇ ಕರುಣದಿಂದೆನಗೆ | ವರಮಹಾಮಂತ್ರಗಳ ಉಪದೇಶಿಸಿದರು || ಪುರಂದರವಿಠಲನೇ ಪರನೆಂದರುಹಿ ದುರಿತಭಯವನ್ನೆಲ್ಲ ಪರಿಹರಿಸಿದರಾಗಿ ”
ಅಂಕಿತವಿಲ್ಲದ ದೇಹನಿಷಿದ್ದ | ಅಂಕಿತವಿಲ್ಲದ ಕಾರ್ಯ ಶೋಭಿಸದು ||
ಅಂಕಿತವಿಲ್ಲದಿರಬಾರದು ಎಂದು | ಪಂಕಜನಾಭ ಪುರಂದರವಿಠಲನ ||
ಅಂಕಿತವೆನಗಿತ್ತ ಗುರುವ್ಯಾಸ ಮುನಿರಾಯ ।”
ಹೀಗೆ ಅನೇಕ ಬಗೆಯಿಂದ ವ್ಯಾಸರಾಯರನ್ನು ಕೊಂಡಾಡಿ ಅವರ ಕಾರುಣ್ಯವನ್ನು ಸ್ಮರಿಸಿ, ಗುರುವರರನ್ನು ಇನ್ನೊಂದು ಪದದಿಂದ ಸ್ತುತಿಸಲಾರಂಭಿಸಿದರು.
“ವರಮಧ್ವಮತವೆಂಬ ಸಾಗರದೊಳು ಉದ್ಭವಿಸಿದ ಚಂದ್ರನಂತೆ ನೀನು |
ಕರುಣಾಕರ ಬ್ರಹ್ಮಣ್ಯತೀರ್ಥರ ಕುವರನೆನಿಸಿಕೊಂಡೆ | ಗುರುವ್ಯಾಸರಾಯರೇ ಪರಮಗುರುಗಳೊಳು!
ಪುರಂದರವಿಠಲನೇ ಪರದೈವ ಕಾಣಿರೋ '
ಹೀಗೆ ಶ್ರೀವ್ಯಾಸರಾಜರನ್ನು ಸ್ತುತಿಸಿ -
“ಗುರು ವ್ಯಾಸರಾಯರ ಚರಣವೆನಗೆ ಗತಿ | ಪುರಂದರವಿಠಲನ ಅರಿತ ಇವರಿಂದ - ಅಂಕಿತ ಪಡೆದ ಮೇಲೆ ಪುರಂದರದಾಸರು ಮೊಟ್ಟಮೊದಲು ಮೇಲಿನ ಪದಗಳನ್ನು ರಚಿಸಿದರೆಂದು ಜ್ಞಾನಿಗಳು ಹೇಳುವರು
ಎಂದು ಗುರುಗಳ ಚರಣಕಮಲಗಳಿಗೆ ಕೃತಜ್ಞತೆಯಿಂದ ಅಭಿನಮಿಸಿದರು.
ವ್ಯಾಸರಾಯರು ಹರ್ಷಭರಿತರಾಗಿ ಶಿಷ್ಯರಾದ ಪುರಂದರದಾಸರನ್ನು ಶ್ಲಾಘಿಸಿ “ನಾವು ಬಿತ್ತಿದ ಬೀಜ ಆಗಲೇ ಫಲ ಕೊಡತೊಡಗಿದೆ! ಸಂತೋಷ, ದಾಸರೇ, ನಮ್ಮ ಸನ್ನಿಧಿಯಲ್ಲೇ ಇದ್ದು ನೀವು ಹರಿದಾಸಪಂಥದ ನಾಯಕತ್ವ ವಹಿಸಿ, ಹರಿದಾಸ ಸಾಹಿತ್ಯ ನಿರ್ಮಾಣದಿಂದ ಕನ್ನಡ ಜ್ಞಾನಸರಸ್ವತಿಯ ಭಂಡಾರವನ್ನು ತುಂಬಿ, ಪಂಡಿತ-ಪಾಮರರಿಗೆ ಮಹೋಪಕಾರ ಮಾಡಬೇಕು ಎಂದು ಆಜ್ಞಾಪಿಸಿ ಮುಂದುವರೆದು -
“ಪ್ರಿಯ ಶಿಷ್ಯರೇ, ಬರಬರುತ್ತಾ ಜನತೆಯಲ್ಲಿ ಜ್ಞಾನದ ಮಟ್ಟ ಇಳಿಯುತ್ತಿದೆ. ಅದನ್ನು ಮತ್ತೆ ಮೇಲೇರಿಸಲು ನಾವು ಹೆಣಗುತ್ತಿದ್ದೇವೆ. ಸಂಸ ತ ಭಾಷೆಯಲ್ಲಿರುವ ವೇದ-ಉಪನಿಷತ್ತು, ಪುರಾಣ-ಇತಿಹಾಸ, ಗೀತಾದಿಶಾಸ್ತ್ರಗಳ ಹಾಗೂ ದೈತಸಿದ್ಧಾಂತ ಗ್ರಂಥಗಳ ಅಧ್ಯಯನ ಮಾಡಿ ಸಾಧನೆ ಮಾಡಿಕೊಳ್ಳಲಾಗದ ಜನಸಾಮಾನ್ಯರು ಅಗಾಧವಾಗಿದ್ದಾರೆ. ಅವರೆಲ್ಲರ ಕಲ್ಯಾಣ- ವಾಗಬೇಕಾಗಿದೆ. ಈ ಒಂದು ಮಾರ್ಗವನ್ನು ಪೂಜ್ಯರಾದ ಶ್ರೀನರಹರಿತೀರ್ಥರು ಪ್ರಾರಂಭಿಸಿದರು. ಅದನ್ನು ನಮ್ಮ ಗುರುಗಳು ಮುಂದುವರೆಸಿದರು. ಇದನ್ನು ವ್ಯಾಪಕವಾಗಿ ಬೆಳೆಸಲು ಅವರು ನಮಗೆ ಆಜ್ಞಾಪಿಸಿದರು. ನಮ್ಮ ಶಕ್ತಾನುಸಾರ ನಾವು ಅದಕ್ಕಾಗಿ ಶ್ರಮಿಸುತ್ತಿದ್ದೇವೆ. ಈ ಮಹತ್ಕಾರ್ಯ ನಿಮ್ಮ ಮೂಲಕವಾಗಿ ಜರುಗಬೇಕೆಂಬುದು ಈಶ ಸಂಕಲ್ಪ. ಇಂದಿನ ಶುಭ ಘಳಿಗೆಗಾಗಿ ನಾವು ಬಹುದಿನಗಳಿಂದ ಕಾದಿದ್ದೆವು. ಇಂದು ಶ್ರೀಹರಿಯು ಆ ಕಾರ್ಯವನ್ನು ನಿರ್ವಹಿಸುವ ಶಕ್ತಿ ಸಂಪತ್ತುಗಳನ್ನು ನಿಮಗೆ ಅನುಗ್ರಹಿಸಿ ನಮ್ಮಿಂದ ಅಂಕಿತ ಉಪದೇಶವನ್ನು ಕೊಡಿಸಿದ್ದಾನೆ.
ನೀವು ಸಂಗೀತಶಾಸ್ತ್ರ ವಿಶಾರದರು. ವೇದಾದಿಶಾಸ್ತ್ರಗಳ ಉಪದೇಶವನ್ನು ನೀವು ಸುಲಲಿತ ಕನ್ನಡ ನುಡಿಯಲ್ಲಿ ಸಂಗೀತದೊಡನೆ ಬೆರೆಸಿ ಪದ್ಯ - ಸುಳಾದಿ, ಉಗಾಭೋಗಗಳ ರೂಪದಲ್ಲಿ ಜನತೆಗೆ ನೀಡಿ, ನಿಮ್ಮ ಉಪದೇಶದಿಂದ ಜ್ಞಾನಭಕ್ತಿ ಸಂಪನ್ನರಾಗಿ ಸಜ್ಜನರು ಸಾಧನ ಮಾಡಿಕೊಂಡು ಶಾಶ್ವತ ಸುಖಭಾಗಿಗಳಾಗುವಂತೆ ಮಾಡಬೇಕು. ಇದು ಶ್ರೀಹರಿವಾಯುಗಳಿಗೆ ಅತ್ಯಂತ ಪ್ರಿಯವಾದ ಕಾರ್ಯ. ಇದು ಶ್ರೀಹರಿವಾಯುಗಳಿಗೆ, ದೈತಸಿದ್ಧಾಂತಕ್ಕೆ ಮತ್ತು ನಮಗೆ ಹಾಗೂ ಕನ್ನಡನಾಡಿಗೆ ನೀಡುವ ಅಪೂರ್ವ ಕೊಡುಗೆಯಾಗಿ ನಿಮ್ಮ ಕೃತಿಗಳು ಜಗನ್ಮಾನ್ಯವಾಗಿ, ಜನತೆಯ ಕಲಿಕಲ್ಮಷಗಳನ್ನು ತೊಳೆದು ಜ್ಞಾನದಾನ ಮಾಡಿ ಅವರೆಲ್ಲರೂ ಉದ್ಧತರಾಗಲು ಕಾರಣವಾಗುವುದು. ನಿಮ್ಮ ಹೆಸರು ಭಾಗವತೋತ್ತಮರ ಗುಂಪಿನಲ್ಲಿ ಅಜರಾಮರವಾಗುವುದು ಎಂದು ತುಂಬಿದ ಹೃದಯದಿಂದ ಅಪ್ಪಣೆ ಮಾಡಿ ಆಶೀರ್ವದಿಸಿದರು.
ಪುರಂದರದಾಸರು ಭಕ್ತಿಪುಳಕಿತರಾಗಿ ಆನಂದಾಶ್ರು ಹರಿಸುತ್ತಾ “ಅನುಗ್ರಹೀತನಾದೆ ಗುರುದೇವ! ಆಜ್ಞೆಯನ್ನು ಶಿರಸಾ ಧರಿಸಿದ್ದೇನೆ” ಎಂದು ವಿಜ್ಞಾಪಿಸಿದರು.
ಇವೆಲ್ಲವನ್ನೂ ನೋಡುತ್ತಾ ಭಕ್ತಿಶ್ರದ್ಧಾನ್ವಿತರಾಗಿ ಕಣ್ಣೀರು ಸುರಿಸುತ್ತಾ ನಿಂತಿದ್ದ ಸರಸ್ವತಮ್ಮ ತಮ್ಮ ಪತಿಯ ಪರಿವರ್ತನೆ, ಗುರುಗಳು ಮಾಡಿದ ಅನುಗ್ರಹದ ವತಿಯಿಂದ ಮುಂದಾಗಲಿರುವ ಮಹತ್ಕಾರ್ಯಗಳನ್ನು ನೆನೆದು ಆನಂದಪರವಶಳಾಗಿ ಪತಿಯ ಪಾದಕ್ಕೆರಗಿದಳು.
ಆಗ ಪುರಂದರದಾಸರು ಸರಸ್ವತಮ್ಮನನ್ನು ಸ್ನೇಹ-ಕಾರುಣ್ಯಗಳಿಂದ ಅವಲೋಕಿಸಿ ಆಕೆಯನ್ನು ಮೇಲೆಬ್ಬಿಸಿದರು. ಆಗ ಅವರು “ಈ ಸಾಧೀಮಣಿಯ ಸಲಹೆ-ಪ್ರಾರ್ಥನೆಗಳಿಗೆ ಕಿವಿಗೊಟ್ಟಿದ್ದರೆ - ನನ್ನ ಜೀವನವೆಂದೋ ಪಾವನವಾಗುತ್ತಿತ್ತು! ಅವಿವೇಕದಿಂದ ಇವಳ ಹಿತವಚನಗಳನ್ನು ಕಡೆಗಾಣಿಸಿದೆ. ಕೊನೆಗೀಗ ಇವಳ ನಿಮಿತ್ತವಾಗಿ ಅಲ್ಲವೇ ಶ್ರೀಹರಿ ನನಗೊಲಿದು ಕಣ್ಣು ತೆರೆಸಿದ! ಗುರುಗಳ ಕಾರುಣ್ಯ ಉಪದೇಶ-ಅಂಕಿತಗಳೂ ದೊರೆಯುವಂತಾಯಿತು” ಎಂದು ಯೋಚಿಸಿದರು. ಅವರ ಹೃದಯ ತುಂಬಿ ಬಂದು ಹಾಡಿದರು.
ರಾಗ : ಪಂತುವರಾಳಿ
ಆದದ್ದೆಲ್ಲಾ ಒಳಿತೇ ಆಯಿತು | ಮಾಧವನಂಥ್‌ಯ ಸೇವಿಸುವುದಕ್ಕೆ ಸಾಧನ ಸಂಪತ್ತಾಯಿತು
ದಂಡಿಗೆಬೆತ್ತ ಹಿಡಿಯುವುದಕ್ಕೆ ( ಮಂಡೆ ಬಾಗಿ ನಾಚುತಲಿದ್ದೆ | ಹೆಂಡತಿ ಸಂತತಿ ಸಾವಿರವಾಗಲಿ | ದಂಡಿಗೆಬೆತ್ತ ಹಿಡಿಸಿದಳಯ್ಯ ಗೋಪಾಳಬುಟ್ಟಿ ಹಿಡಿಯುವುದಕ್ಕೆ 1 ಭೂಪತಿಯೆಂದು ನಾಚುತಲಿದ್ದೆ | ಆ ಪವ್ರತ ಅತಿಘನವಾಗಲಿ | ಗೋಪಾಳಬುಟ್ಟಿ ಹಿಡಿಸಿದಳಯ್ಯ
ತುಲಸೀಮಾಲೆ ಹಾಕುವುದಕ್ಕೆ 1 ಅಲಸನಾಗಿ ತಿರುಗುತಲಿದ್ದೆ |
ಜಲಜನಯ ಶ್ರೀಪುರಂದರವಿಠಲ | ತುಲಸೀಮಾಲೆ ಹಾಕಿಸಿದನು
ಆಗ ನೆರೆದ ಸಜ್ಜನರೆಲ್ಲರೂ ದಾಸರ ತತ್ವಾರ್ಥಗರ್ಭಿತಪದವನ್ನಾಲಿಸಿ ತಲೆದೂಗಿದರು. ಶ್ರೀನಿವಾಸನಾಯಕರ ಹಿಂದಿನ ವಿಚಿತ್ರ ಜೀವನ, ಭಗವದನುಗ್ರಹ, ಗುರೂಪದೇಶ, ಇಂದಿನ ಅವರ ಮನಃ ಪ್ರವೃತ್ತಿ, ಸಿರಿಸಂಪತ್ತಿನಲ್ಲಿನ ಜಹಾಸೆ, ಜ್ಞಾನಮಾರ್ಗದಲ್ಲಿ ಮುನ್ನುಡಿ ಇಟ್ಟ ಕೂಡಲೇ ಗುರುಸ್ತುತಿಯಿಂದಲೇ ಪ್ರಾರಂಭವಾದ ಹರಿದಾಸ ಸಾಹಿತ್ಯ ನಿರ್ಮಾಣ ಕಾರ್ಯ ಮುಂತಾದವನ್ನು ಕಂಡು ಆಶ್ಚರ್ಯಾನಂದ ಮಗ್ನರಾಗಿ ಈ ಗುರು-ಶಿಷ್ಯರನ್ನೂ, ಭಗವಂತನ ಲೀಲಾವಿಲಾಸವನ್ನೂ ಕೊಂಡಾಡಿದರು.
ವ್ಯಾಸರಾಜರು, ಪುರಂದರದಾಸರು ಪರಿವಾರ ಸಹಿತವಾಗಿ ವಾಸಮಾಡಲು ಮಠದ ಸಮೀಪದಲ್ಲಿ ತುಂಗೆಯ ದಡದಲ್ಲಿ ಒಂದು ಶಿಲಾಮಂದಿರವನ್ನು ಏರ್ಪಡಿಸಿಕೊಟ್ಟರು - ಹಂಪೆಯ ತುಂಗಾನದಿಗೆ ಹೊಂದಿಕೊಂಡಿರುವ “ಶ್ರೀಪುರಂದರದಾಸರ ಮಂಟಪ"ವನ್ನು ಇಂದಿಗೂ ಕಾಣಬಹುದಾಗಿದೆ. ದಾಸರು ಅಲ್ಲಿ ವಾಸಿಸಲಾರಂಭಿಸಿದರು. ಸಿರಿಸಂಪತ್ತಿನಲ್ಲಿ ಮೆರೆದ ದಾಸರು ಓರ್ವ ತಪಸ್ವಿಯಂತೆ, ಸಾಧಕನಂತೆ ಸರಳ ಜೀವನ ನಡೆಸಹತ್ತಿದರು. ಭಾಗವತ ಮೂರ್ಧನ್ಯರೆನಿಸಿ, ದಾಸವಾಹ್ಮಯದ ಅಧ್ವರ್ಯುಗಳಾಗಿ ಜ್ಞಾನ-ಭಕ್ತಿ-ವೈರಾಗ್ಯ ಸಂಪನ್ನರಾಗಿ ಅಸಾಧಾರಣ ಕೃತಿರಚನೆಯಲ್ಲಿ ತಲ್ಲೀನರಾದರು.
ಶ್ರೀನಾರದಾಂಶರಾದ ಪುರಂದರದಾಸರು ಶ್ರೀವ್ಯಾಸರಾಜರ ಶಿಷ್ಯರಾಗಲು ಮತ್ತೊಂದು ಕಾರಣವೂ ಇದೆ. ಕೃತಯುಗದಲ್ಲಿ ಪ್ರಹ್ಲಾದರಿಗೆ ಶ್ರೀನೃಸಿಂಹರೂಪದಿಂದೊಲಿದ ಶ್ರೀಹರಿ ಪ್ರಹ್ಲಾದರಿಗೆ “ಭವಂತಿ ಪೂರುಷಾ ಲೋಕೇ ಮದಕ್ಕಾಸ್ವಾಮನುವ್ರತಾಃ”, ಅಂದರೆ ಜಗತ್ತಿನಲ್ಲಿ ತಾರತಮ್ಯದಲ್ಲಿ ಶ್ರೇಷ್ಠರಾಗಿದ್ದರೂ ನನ್ನ ಭಕ್ತರು ನಿನ್ನನ್ನು ಅನುಸರಿಸುತ್ತಾರೆ. ಅಥವಾ ನಿನ್ನನ್ನು ಅನುಸರಿಸಿದವರೇ ನನ್ನ ಭಕ್ತರಾಗುತ್ತಾರೆ! ಎಂದು ಅಸಾಧಾರಣ ವರಗಳನ್ನು ಕೊಟ್ಟಿದ್ದಾನೆ. ಕಲಿಯುಗದಲ್ಲಿ ಪ್ರಹ್ಲಾದಾವತಾರಿ ಶ್ರೀವ್ಯಾಸರಾಜರಿಂದಲೇ ಸಜ್ಜನರ ಉದ್ಧಾರವಾಗಬೇಕೆಂಬುದು ಶ್ರೀಹರಿಸಂಕಲ್ಪ, ಅಂತೆಯೇ ಸಂಕಲ್ಪವನ್ನು ಅರಿತು, ನಾರದರು ಶ್ರೀಹರಿಚಿತ್ತವಂದು, ವ್ಯಾಸರಾಜರಿಂದ ಉಪದೇಶ ಪಡೆದು ಹರಿದಾಸರಾಗಿ ಜ್ಞಾನಪ್ರಸಾರಕಾರ್ಯದಲ್ಲಿ ತೊಡಗಿ ಲಕ್ಷಾಂತರ ಪದ-ಪದ್ಯ-ಸುಳಾದಿಗಳ ಮೂಲಕ ಆಪಂಡಿತಪಾಮರರಿಗೆ ಮಹೋಪಕಾರ ಮಾಡಿದರೆಂದು ತಿಳಿಯಬೇಕು. ಶ್ರೀಹರಿಭಕ್ತರಾದ ಜ್ಞಾನಿಗಳು ಶ್ರೀಹರಿಯ ಚಿತ್ತಕ್ಕನುಗುಣವಾಗಿ ವರ್ತಿಸುವರೆನ್ನಲು ಇದೊಂದು ಉತ್ತಮ ದೃಷ್ಟಾಂತ.