ಕಲಿಯುಗ ಕಲ್ಪತರು
ನಾಲ್ಕನೆಯ ಉಲ್ಲಾಸ
ಶ್ರೀವ್ಯಾಸರಾಜಯತಿಸಾರ್ವಭೌಮರು
೪೫. ವಿಜಯ ಪರಂಪರೆ
ಯಾವುದೇ ರಾಷ್ಟ್ರ ಸಂಪೂರ್ಣವಾಗಿ ಉನ್ನತಿಯ ಶಿಖರವನ್ನು ಏರಬೇಕಾದರೆ, ಆ ದೇಶ ಸುಖ-ಶಾಂತಿಗಳಿಂದ ಸಮೃದ್ಧವಾಗಬೇಕು. ಆಡಳಿತ ಧರ್ಮ-ನ್ಯಾಯಬದ್ಧವಾಗಿ, ಪ್ರಜೆಗಳಿಗೆ ಹಿತಕರವಾಗಿರಬೇಕು. ಅಲ್ಲಿನ ಸಮಾಜ ಸುಭದ್ರವಾಗಿದ್ದು ಜನರು ಸುಖ-ಸಂತೋಷ-ನೆಮ್ಮದಿಯಿಂದ ಬಾಳುವಂತಾಗಬೇಕು. ಆಗ ಮಾತ್ರ ಆ ರಾಷ್ಟ್ರ, ಸಿರಿ-ಸಂಪತ್ತು, ವಿದ್ಯೆ, ಕಲೆ, ನಾಗರಿಕತೆ, ಹೀಗೆ ಹಲವಾರು ಬಗೆಯಿಂದ ಮುಂದುವರೆದು ಲೋಕವಿಖ್ಯಾತಿಯನ್ನು ಗಳಿಸುವುದು.
ಕೃಷ್ಣದೇವರಾಯನು ಸಾಮ್ರಾಟನಾದ ಸಮಯ ಒಂದು ಸಂಕ್ರಾಂತಿಕಾಲವಾಗಿತ್ತೆಂದು ಹೇಳಬಹುದು. ದಕ್ಷಿಣಭಾರತದಲ್ಲಿ ಮೇಲಿಂದ ಮೇಲೆ ಶತ್ರುಗಳ ದಾಳಿ, ದಂಗೆಗಳಾಗುತ್ತಿದ್ದವು. ದಕ್ಷಿಣಭಾರತದಲ್ಲಿ ಶಾಂತಿಸ್ತಾಪನೆ ಮಾಡಿ, ಶತ್ರುಗಳನ್ನು ಎದುರಿಸಿ, ಕೈಬಿಟ್ಟುಹೋಗಿದ್ದ ನಾಡಿನ ಭಾಗಗಳನ್ನು ಪುನಃ ಪಡೆಯಬೇಕಾಗಿತ್ತು. ನೆರೆಹೊರೆಯ ಹಿಂದೂರಾಜರೊಡನೆ, ಉತ್ತರಭಾರತದ ರಾಜಮಹಾರಾಜರೊಡನೆ ಸ್ನೇಹವನ್ನು ಕಾಯ್ದುಕೊಂಡು, ನ್ಯಾಯಮಾರ್ಗದಲ್ಲಿ ಮುನ್ನಡೆಯಬೇಕಾಗಿದ್ದಿತು. ಸನಾತನಧರ್ಮದ ಪುನರುತ್ಥಾನವಾಗಲು ಧಾರ್ಮಿಕ ತಳಹದಿಯ ಮೇಲೆ ಸುಭದ್ರ ಸಮಾಜವನ್ನು ಪ್ರತಿಷ್ಠಾಪಿಸಿ, ಪ್ರಜೆಗಳಲ್ಲಿ ದೇವರು, ಧರ್ಮಗಳಲ್ಲಿ ನಂಬಿಕೆ ಬೇರೂರುವಂತೆ ಮಾಡಿ ಜನರು ಸತ್ಯ, ಧರ್ಮ, ಸದಾಚಾರಶೀಲಸಂಪನ್ನರಾಗಿ, ಸ್ನೇಹ-ಸೌಹಾರ್ದದಿಂದ ಜೀವಿಸುತ್ತಾ ಭಾರತೀಯ ಭವ್ಯ ಸಂಸ ತಿಯ ಉಪಾಸಕರಾಗಿ ಉನ್ನತಿಯ ಶಿಖರವನ್ನೇರುವಂತೆ ಮಾಡಬೇಕಾಗಿದ್ದಿತು.
ಈ ಎಲ್ಲ ಆದರ್ಶಗಳೂ, ಭಾವನೆಗಳೂ, ಕೃಷ್ಣದೇವರಾಯನ ಮನಸ್ಸಿನಲ್ಲಿ ಬೇರೂರುವಂತೆ ಮಾಡಿ, ಅವನ ಮೇಲೆ ಪ್ರಭಾವ ಬೀರಿದ ಮಹನೀಯರೆಂದರೆ ಶ್ರೀವ್ಯಾಸರಾಜಯತಿಪುಂಗವರೆಂದು ಬೇರೆ ಹೇಳಬೇಕಾಗಿಲ್ಲ, ಇದಕ್ಕೆ ಪುಷ್ಟಿ, ಬೆಂಬಲವಿತ್ತವರು ಮಹಾಮಂತ್ರಿ ತಿಮ್ಮರಸು ಮುಂತಾದ ರಾಜಕಾರಣ ಪಟುಗಳು.
ಸಾಮ್ರಾಜ್ಯಾಧೀಶನಾದ ಮೇಲೆ ಕೃಷ್ಣದೇವರಾಯನ ಮನಸ್ಸಿನಲ್ಲಿ ಈ ಮಹತ್ಕಾರ್ಯಸಾಧನೆಯನ್ನು ಮಾಡುವಬಯಕೆ ಅಧಿಕವಾಗಿತ್ತು. ಅಂತೆಯೇ ಒಂದು ದಿನ ಕೃಷ್ಣದೇವರಾಯ ತಿಮ್ಮರಸನೊಡನೆ ಬಂದು ಶ್ರೀವ್ಯಾಸರಾಜರಿಗೆ ನಮಸ್ಕರಿಸಿ “ಪೂಜ್ಯ ಗುರುದೇವ! ನಿಮ್ಮ ಉಪದೇಶವನ್ನು ಕಾರ್ಯರೂಪಕ್ಕೆ ತರಲು ಮನಸ್ಸು ಕಾತರಿಸುತ್ತಿದೆ. ಮೊದಲು ಶತ್ರುನಿಗ್ರಹ ಕಾರ್ಯ ಕೈಗೊಂಡು ಮುಂದುವರೆಯಬೇಕೆಂದಿದ್ದೇನೆ. ಈ ನಮಗೆ ಕಂಟಕಪ್ರಾಯನಾಗಿರುವ ಒರಿಸ್ಸಾ ದೇಶದ ಪ್ರತಾಪರುದ್ರ- ಗಜಪತಿಯ ದೌರ್ಜನ್ಯವನ್ನು ಕೊನೆಗಾಣಿಸಲು ಮೊದಲು ಅವನ ರಾಜ್ಯದ ಮೇಲೆ ದಂಡೆತ್ತಿ ಹೋಗಲು ಅಪ್ಪಣೆ ದಯಪಾಲಿಸಬೇಕು” ಎಂದು ವಿನಂತಿಸಿದನು.
ಸಾಮ್ರಾಟನ ವಚನವನ್ನಾಲಿಸಿ ಕ್ಷಣಕಾಲ ಧ್ಯಾನಮಗ್ನರಾಗಿ ಆನಂತರ ವ್ಯಾಸತೀರ್ಥರು “ಸಾರ್ವಭೌಮ! ನಿನ್ನಾಶೆಯು ಯುಕ್ತವಾಗಿದೆ. ಆದರೆ ದುಡುಕುವುದು ವಿಹಿತವಲ್ಲ, ಯುದ್ಧವು ಕ್ಷತ್ರಿಯರ ಧರ್ಮವಾಗಿದ್ದರೂ ಅದರಿಂದ ರಕ್ತಪಾತ, ಪ್ರಜಾನಾಶವಾಗುವುದು. ಮೊದಲು ನೀನು ಸ್ನೇಹ, ಸೌಹಾರ್ದದಿಂದ ಪ್ರಯತ್ನಿಸಬೇಕು. ಅದು ಸಫಲವಾಗದಿದ್ದರೆ, ಸಾಮ, ದಾನ, ಭೇದೋಪಾಯಗಳನ್ನು ಕೈಗೊಳ್ಳಬೇಕು. ಅದಾವುದೂ ಯಶಸ್ವಿಯಾಗದಿದ್ದಾಗ ಮಾತ್ರ ಅನಿವಾರ್ಯವಾಗಿ ದಂಡೋಪಾಯದಿಂದ ಶತ್ರುವನ್ನು ಜಯಿಸಬೇಕು. ಯುದ್ಧದಲ್ಲಿ ವಿಜಯವಾದಾಗ ಶರಣಾಗತರನ್ನು ರಕ್ಷಿಸಬೇಕು, ಸೋತವರೊಡನೆ ಸೌಜನ್ಯದಿಂದ, ಮಾನವೀಯತೆಯಿಂದ ವರ್ತಿಸಿ ಅವರನ್ನು ನಿನ್ನ ಅಧೀನರನ್ನಾಗಿ ಮಾಡಿಕೊಂಡು, ಆ ರಾಜ್ಯದ ಪ್ರಜೆಗಳಿಗೆ ಯಾವ ಆಪತ್ತೂ, ಆ ಗೌರವವೂ ಆಗದಂತೆ ನೋಡಿಕೊಳ್ಳಬೇಕು. ದೀನ-ದಲಿತರು, ಸ್ತ್ರೀಯರು, ಮಕ್ಕಳು, ವೃದ್ಧರು, ಅವರ ಆಸ್ತಿ-ಪಾಸ್ತಿ, ಪ್ರಾಣ, ಮಾನಗಳಿಗೆ ಧಕ್ಕೆ ಬಾರದಂತೆ ಕಾಪಾಡಬೇಕು. ಸೋತ ರಾಜರನ್ನು ಕೀಳಾಗಿ ಕಾಣದೆ ಅವರನ್ನು ಗೌರವ-ಸ್ನೇಹಭಾವದಿಂದ ಕಂಡು, ಅವರ ಮನಸ್ಸನ್ನು ಗೆದ್ದು ಅಧೀನರನ್ನಾಗಿ ಮಾಡಿಕೊಳ್ಳಬೇಕು. ಭಾರತದಲ್ಲಿರುವ ಎಲ್ಲ ದೇಶಗಳೂ, ಜನರೂ ಭಾರತೀಯರೇ ಆದ್ದರಿಂದ ಅವರ ಧರ್ಮ, ಮತ, ಸಂಪ್ರದಾಯಗಳಿಗೆ ಕಿಂಚಿತ್ತೂ ಅಪೋಹವಾಗದಂತೆ, ಅಖಂಡಭಾರತದ ತಿಯ ರಕ್ಷಕನಂತೆ ವರ್ತಿಸಿ ಕೀರ್ತಿಶಾಲಿಯಾಗಬೇಕು. ರಾಜೇಂದ್ರ! ನಮ್ಮಿ ಉಪದೇಶ ನಿನ್ನಲ್ಲಿ ಸದಾ ಜಾಗೃತವಾಗಿರಲಿ. ಶ್ರೀಹರಿವಾಯುಗಳು, ಶ್ರೀವಿರೂಪಾಕ್ಷ, ತಾಯಿ ಭುವನೇಶ್ವರಿ ನಿನಗೆ ಸದಾ ರಕ್ಷಕರಾಗಿ ಮಂಗಳವನ್ನೀಯಲಿ, ನಿನಗೆ ವಿಜಯವಾಗಲಿ”
ಸಂಸ ಎಂದುಪದೇಶಿಸಿ ಆಶೀರ್ವದಿಸಿದರು.
ಕೃಷ್ಣದೇವರಾಯ ಗುರುಗಳ ಹಿತೋಕ್ತಿಯಿಂದ ಪುಳಕಿತಗಾತ್ರನಾಗಿ, “ಗುರುದೇವರ ಆಜ್ಞೆಯಂತೆ ವರ್ತಿಸುತ್ತೇನೆ” ಎಂದು ಆನಂದದಿಂದ ವಿಜ್ಞಾಪಿಸಿದನು. ಅವನಿಗೆ ತನ್ನ ವಿಜಯಯಾತ್ರೆಯು ಗುರುಪೂಜೆಯಿಂದಲೇ ಪ್ರಾರಂಭಿಸುವ ಇಚ್ಛೆಯಾಯಿತು. ಈ ಮಂಗಳಕರ ಸಂದರ್ಭದಲ್ಲಿ ಗುರುಗಳಿಗೆ ಗ್ರಾಮದಾನ ಮಾಡಿ ಸೇವಿಸಬಯಸಿ ಅದನ್ನು ಗುರುಗಳಿಗೆ ನಿವೇದಿಸಿದನು. ಆಗ ವ್ಯಾಸಮುನಿಗಳು ಕಂಚಿಯಲ್ಲಿ ಶ್ರೀವರದರಾಜಸ್ವಾಮಿಗೆ ತಾವು ಒಂದು ಸುವರ್ಣಶೇಷವಾಹನವನ್ನು ನಿರ್ಮಿಸಿ ಅರ್ಪಿಸಬಯಸಿರುವುದಾಗಿಯೂ, ಪ್ರತಿವರ್ಷ ಶ್ರೀವರದರಾಜಸ್ವಾಮಿಯ ಪ್ರತಿಯೊಂದು ಉತ್ಸವಕಾಲದಲ್ಲಿ ಉತ್ಸವದ ನಾಲ್ಕನೆಯ ದಿನ 'ಆವನೀ ಉತ್ಸವ'ವನ್ನು ತಮ್ಮ ಹೆಸರಿನಲ್ಲಿ ನೆರವೇರುವಂತೆ ಮಾಡಬೇಕೆಂಬ ತಮ್ಮ ಆಶಯವನ್ನು ಸಾರ್ವಭೌಮನಿಗೆ ತಿಳಿಸಿದರು.
ಕೃಷ್ಣದೇವರಾಯನು ಗುರುಗಳ ಅಪ್ಪಣೆಯಿಂದ ಸಂತುಷ್ಟನಾಗಿ ಶ್ರೀಶಾಲಿವಾಹನಶಕೆ ೧೪೩೩ (ಕ್ರಿ.ಶ. ೧೫೧೧) ಆಗಸ್ಟ್ ಮಾಹೆಯಂದು ಪದೈವೀಡು ರಾಜ್ಯದಲ್ಲಿರುವ “ಪೊಲಂಬಾಕ್ಕಂ” ಎಂಬ ಗ್ರಾಮವನ್ನು ಶ್ರೀವರದರಾಜಸ್ವಾಮಿಯ ಆವನೀ ಉತ್ಸವ ನೆರವೇರಿಸಲಿಕ್ಕಾಗಿ ವ್ಯಾಸತೀರ್ಥರಿಗೆ ದಾನವಾಗಿ ಕೊಟ್ಟು, ಅಧಿಕ ಸುವರ್ಣ ನಾಣ್ಯಗಳನ್ನಿತ್ತು, ದೇವರಿಗೆ ಸುವರ್ಣಶೇಷವಾಹನವನ್ನು ಅರ್ಪಿಸಲು ಅನುಕೂಲ ಮಾಡಿಕೊಟ್ಟು ಅನುಗೃಹೀತನಾದನು.'
ಕೃಷ್ಣದೇವರಾಯನ ಗುರುಭಕ್ತಿಯನ್ನು ಕಂಡು ಮುದಿಸಿದ ವ್ಯಾಸತೀರ್ಥರು “ರಾಜೇಂದ್ರ! ದಿಗ್ವಿಜಯಯಾತ್ರೆಗೆ ಮೊದಲು ನೀನು ಮಾಡಿರುವ ಈ ಉತ್ತಮ ಭಗವತ್ತೇವೆಯಿಂದ ನಮಗೆ ಅತೀವ ಹರ್ಷವಾಗಿದೆ. ನಿನಗೆ ಎಲ್ಲೆಡೆ ದಿಗ್ವಿಜಯ್-ಕೀರ್ತಿ-ಪ್ರತಿಷೆಗಳು ದೊರಕುವವು' ಎಂದು ಆಶೀರ್ವದಿಸಿದರು. ರಾಯನು ಗುರುಗಳು ಜ್ಯೋತಿಷಿಗಳಿಂದ ವಿಚಾರಪೂರ್ವಕವಾಗಿ ನಿಶ್ಚಯಿಸಿದಂತೆ ೧೫೧೧ ನೇ ವಿಜಯದಶಮೀ ದಿವಸ ಸಮಸ್ತ ಸೈನ್ಯದೊಡನೆ ದಿಗ್ವಿಜಯಯಾತ್ರೆ ಕೈಗೊಂಡು
ಹೊರಟನು.
ಕೃಷ್ಣದೇವರಾಯನು ಕ್ರಿ.ಶ. ೧೫೧೦-೧೧ ರಿಂದ ೧೫೨೧-೨೨ ರವರೆಗೆ ಅನೇಕ ಯುದ್ಧಗಳನ್ನು ಮಾಡಿ ಎಲ್ಲ ಕದನಗಳಲ್ಲಿಯೂ ಅಸಮಭುಜಬಲ ಪರಾಕ್ರಮದಿಂದ ಹೋರಾಡಿ ವಿಜಯ ಗಳಿಸಿ ಕನ್ನಡ ಸಾಮ್ರಾಜ್ಯದ ವಿಜಯಧ್ವಜವನ್ನು ಎಲ್ಲೆಡೆ ಮೆರೆಸಿದನು. ರಾಯನು ಗಳಿಸಿದ ವಿಜಯಪರಂಪರೆಯಲ್ಲಿ ಕೆಲವನ್ನು ಇಲ್ಲಿ ನಿರೂಪಿಸುವುದು ಅಪ್ರಕೃತವಾಗಲಾರದು.
ಹಿಂದೆ ಕಳಿಂಗದ ಕಪಿಲೇಶ್ವರಗಜಪತಿಯು ಸಾಳುವ ನರಸಿಂಹನಿಂದ ಪರಾಜಿತನಾಗಿ ವಿಜಯನಗರದರಸರಿಗೆ ವಿಧೇಯನಾಗಿ ನಡೆದುಕೊಂಡು ಬಂದಿದ್ದರೂ, ಮುಂದೆ ಪ್ರತಾಪರುದ್ರಗಜಪತಿಯು ಸಿಂಹಾಸನವೇರಿದಮೇಲೆ ಪ್ರಬಲಿಸಿ ಕನ್ನಡ ಸಾಮ್ರಾಜ್ಯದ ಗಡಿಗಳಲ್ಲಿ ಧಾಳಿ ಮಾಡಿ ಲೂಟಿ-ಸುಲಿಗೆ-ರಕ್ತಪಾತ ಮಾಡುತ್ತಾ ಗೊಂದಲವೆಬ್ಬಿಸುತ್ತಿದ್ದನು. ಅವನು ಬಹಮನಿ ಸುಲ್ತಾನರ ಸ್ನೇಹ ಬೆಳೆಸಿ ಹಿಂದುವಾಗಿದ್ದರೂ ವಿಜಯನಗರಕ್ಕೆ ಕಿರುಕುಳ ಕೊಡಲಾರಂಭಿಸಿದನು. ಅದರಿಂದ ಮೊದಲೇ ಹಿಂದೂ ಸಾಮ್ರಾಜ್ಯ ಶತ್ರುಗಳಾದ ಬಹಮನಿ ಸುಲ್ತಾನರ ಉಪಟಳವು ಅಧಿಕವಾಗಿತ್ತು. ವಿಜಾಪುರದ ಆದಿಲ್ ಷಹನು ಸಾಮ್ರಾಜ್ಯದ ಉತ್ತರ ಗಡಿಯಲ್ಲಿ ಮುನ್ನುಗ್ಗಿ ಆ ಪ್ರದೇಶವನ್ನು ಕಬಳಿಸಲು ಹೊಂಚು ಹಾಕುತ್ತಿದ್ದನು. ತುಂಗಭದ್ರಾ-ಕೃಷ್ಣಾನದಿಗಳ ಮಧ್ಯಭಾಗ “ದೋ-ಅಬ್” ಎಂಬ ಹೆಸರಿನಿಂದ ಖ್ಯಾತವಾಗಿದ್ದ ಆಯಕಟ್ಟಿನ ಸ್ಥಳವಾದ ರಾಯಚೂರು ಪ್ರಾಂತ್ಯವನ್ನು ತನ್ನ ಸ್ವಾಧೀನಪಡಿಸಿಕೊಂಡಿದ್ದನು.
ಇದರ ಜತೆಗೆ ಗೋವೆಯ ಪೋರ್ಚುಗೀಸರು ವಿಜಯನಗರದವರಿಗೆ ಕುದುರೆಗಳನ್ನು ಸರಬರಾಜು ಮಾಡುವುದಾಗಿ ಒಪ್ಪಿಕೊಂಡು ಆನಂತರ ವಿಜಾಪುರದವರ ಚಿತಾವಣೆಯಿಂದ ಮಾತಿಗೆ ತಪ್ಪಿ ನಡೆದಿದ್ದರು. ಯುದಕ್ಕೆ ಕುದುರೆಗಳು ಅತ್ಯವಶ್ಯವಾದ್ದರಿಂದ ಪೋರ್ಚುಗೀಸರಿಗೆ ಬಿಸಿ ತಟ್ಟಿಸಿ ಮತ್ತೆ ಅವರು ವಿಜಯನಗರಕ್ಕೆ ಬೇಕಾದ ಕುದುರೆಗಳನ್ನು ಪೂರೈಸುವಂತೆ ಮಾಡಬೇಕಾಗಿತ್ತು.
ದಕ್ಷಿಣದಲ್ಲಿ ಉಮ್ಮತ್ತೂರು ಮುಂತಾದ ಪ್ರಾಂತ್ಯದ ದೊರೆಗಳು ಪ್ರಬಲರಾಗಿದ್ದು ಅವರನ್ನು ನಿಗ್ರಹಿಸಬೇಕಾಗಿತ್ತು. ವಿಜಾಪುರದ ಆದಿಲ್ ಷಹ, ಗುಲ್ಬರ್ಗಾದ ಕುತುಬ್ ಷಹ, ಅಹಮದ್ ನಗರ, ಬಿದರೆ, ಗೋಲ್ಗೊಂಡಗಳ ಸುಲ್ತಾನರು ವಿಜಯನಗರದ ಪ್ರಬಲ ಶತ್ರುಗಳಾಗಿದ್ದು ಉತ್ಕಲದ ಗಜಪತಿಯೊಡನೆ ಸಂಧಿಮಾಡಿಕೊಂಡು ಎಲ್ಲರೂ ವಿಜಯನಗರದ ನಾಶಕ್ಕಾಗಿ ಹಾತೊರೆಯುತ್ತಿದ್ದರು.
ಇಂಥ ಪರಿಸ್ಥಿತಿಯನ್ನು ಕೃಷ್ಣದೇವರಾಯ ಎದುರಿಸಬೇಕಾಗಿತ್ತು. ರಾಯನು ಅಸಾಮಾನ್ಯ ಶೌರ್ಯ-ಸಾಹಸಗಳಿಂದ ಪ್ರಚಂಡ ಪರಾಕ್ರಮದಿಂದ ಇವೆಲ್ಲ ಕಷ್ಟ ಪರಿಸ್ಥಿತಿಯಲ್ಲಿಯೂ ಅತ್ಯಂತ ಪ್ರಬಲವಾ, ಸುಭದ್ರವಾ ಆದ ಸೈನ್ಯವನ್ನು ಸಜ್ಜುಗೊಳಿಸಿ ಯುದ್ಧಸನ್ನದ್ಧನಾದನು. ಈ ವಿಚಾರ ತಿಳಿದು ಗೋವೆಯ ಪೋರ್ಚುಗೀಸರು ಎಚ್ಚರಗೊಂಡು ವಿಜಯನಗರದವರ ಸ್ನೇಹವನ್ನು ತಾವಾಗಿ ಬಯಸಿ ಅವರಿಗೆ ಬೇಕಾದಷ್ಟು ಅಶ್ವಗಳನ್ನು ಸರಬರಾಜು ಮಾಡಿ ಒಪ್ಪಂದ ಮಾಡಿಕೊಂಡರು. ಇದೊಂದು ರಕ್ತಪಾತವಿಲ್ಲದೇ ಪ್ರಪ್ರಥಮವಾಗಿ ಕೃಷ್ಣದೇವರಾಯನಿಗೆ ದೊರೆತ ಮಹಾವಿಜಯವೆಂದು ಹೇಳಬಹುದು.
ಕಳಿಂಗ ವಿಜಯಯಾತ್ರೆಯಲ್ಲಿ ಸಾಮ್ರಾಜ್ಯದ ಅನೇಕ ಸಾಮಂತರು, ಮಂಡಲಾಧಿಪತಿಗಳು ಭಾಗವಹಿಸಿದರು. ಕೃಷ್ಣದೇವರಾಯನ ಬಂಧುವಾದ ತಿಮೋಜನ ಪ್ರಯತ್ನದಿಂದಾಗಿ ಗೇರುಸೊಪ್ಪೆ, ಇಕ್ಕೇರಿ ಮುಂತಾದ ರಾಜರು ಸೈನ್ಯಸಮೇತರಾಗಿ ಬಂದು ರಾಯನನ್ನು ಕೂಡಿಕೊಂಡರು. ರಾಯನಿಗೆ ಬೆಂಬಲವಾಗಿ ಮಹಾಮಂತ್ರಿ ತಿಮ್ಮರಸು ಅವನ ತಮ್ಮ ಗುಂಡರಾಜ, ಕೊಂಡಮರಸಯ್ಯ ಚಿನ್ನೋಜ, ಅಚ್ಯುತದೇವರಾಯ, ಅರವೀಡು ಮನೆತನದ ರಾಮರಾಜ (ಅಳಿಯ ರಾಮರಾಜನ ತಾತ), ಶ್ರೀರಂಗರಾಜ, ಚವ್ವಪ್ಪನಾಯಕ - ಮುಂತಾದ ಮಹಾವೀರರು, ದಂಡನಾಯಕರು, ದಳಪತಿಗಳು, ಢಣಾಯಕರು, ಲಕ್ಷಾಂತರ ಶೂರ ಸೈನಿಕರು ವಿಜಯನಗರದ ಈ ಮಹಾದಿಗ್ವಿಜಯದಲ್ಲಿ ಪಾಲ್ಗೊಂಡರು.
ಈ ವಿಜಯಯಾತ್ರೆಯಲ್ಲಿ ಕೃಷ್ಣದೇವರಾಯನನ್ನು ಮೊದಲು ಎದುರಿಸಿದವನು ಅಮೀರ್‌ಬಾರೀಸ್, ವಿಜಾಪುರದ ಹೊರವಲಯದಲ್ಲಿ ರಾಯನು ಬಾರೀಸನನ್ನು ಎದುರಿಸಿ ಪರಾಕ್ರಮದಿಂದ ಹೋರಾಡಿ ಜಯಗಳಿಸಿದನು. ಇದೇ ಸಮಯದಲ್ಲಿ ಗುಲ್ಬರ್ಗದ ಸುಲ್ತಾನನು ರಾಯನನ್ನು ದಾಸೀಪುತ್ರನೆಂದು ಹೀಯಾಳಿಸಿದನೆಂಬ ವಾರ್ತೆ ಕೇಳಿ ಕ್ರುದ್ಧನಾದ ರಾಯನು ಗುಲ್ಬರ್ಗಕ್ಕೆ ಸೈನ್ಯಸಮೇತ ಹೋಗಿ ಸುಲ್ತಾನನನ್ನು ಜಯಿಸಿ, ಅಲ್ಲಿ ತನ್ನ ನಂಬಿಕೆಯ ಸೇನಾನಿ ಗುಜ್ಜಾಲಿ ಕಲ್ಯಾಣರಾಯನನ್ನು ಸೈನ್ಯಸಮೇತ ಇರಿಸಿ ಅಲ್ಲಿಂದ ಕಳಿಂಗದತ್ತ ಹೊರಟನು.
ಕಳಿಂಗದ ಮೇಲೆ ದಂಡಯಾತ್ರೆ ಕೈಗೊಂಡ ಕೃಷ್ಣದೇವರಾಯನು ಕನ್ನಡದ ಮಹಾಸೈನ್ಯವನ್ನು ಮಿಂಚಿನಂತೆ ನಡೆಯಿಸಿ ಉದಯಗಿರಿಯನ್ನು ಮುತ್ತಿ ಸುಲಭವಾಗಿ ಅದನ್ನು ವಶಪಡಿಸಿಕೊಂಡು ಕೋಟೆಯ ಮೇಲೆ ಕನ್ನಡ ಸಾಮ್ರಾಜ್ಯದ ವರಾಹಧ್ವಜವನ್ನು ಹಾರಿಸಿದನು. ಪ್ರತಾಪರುದ್ರನು ನಾಲೈದು ಲಕ್ಷ ಸೈನಿಕರು, ಗಜತುರಗಯುಕ್ತವಾದ ಸೈನ್ಯವನ್ನು ಸಜ್ಜುಗೊಳಿಸಿ ಬರುವುದರೊಳಗೆ ಉದಯಗಿರಿ ರಾಯನ ವಶವಾಗಿತ್ತು! ಆನಂತರ ರಾಯನು ಕುಂದಕೂರು, ಕೊಂಡವೀಡುಗಳನ್ನು ಜಯಿಸಿದನು. ತರುವಾಯ ಕೊಂಡಪಲ್ಲಿಯನ್ನು ಗೆದ್ದನು. ಅಲ್ಲಿ ಉತ್ಕಲದ ಮಹಾರಾಣಿ, ರಾಜಕುಮಾರ ರಾಮಚಂದ್ರರು ಸೆರೆಸಿಕ್ಕಿದರು. ಅವರನ್ನು ವಿಜಯನಗರಕ್ಕೆ ಕಳುಹಿಸಿ, ಅಲ್ಲಿಂದ ಮಹಾಸೈನ್ಯದೊಡನೆ ಮುಂದುವರೆದು ಗಜಪತಿಯ ರಾಜಧಾನಿಯಾದ ಶ್ರೀಜಗನ್ನಾಥಪುರಿಯನ್ನು ವಶಪಡಿಸಿಕೊಂಡನು. ಈ ಮಹಾಯುದ್ಧದಲ್ಲಿ ಗಜಪತಿಗೆ ಸಹಾಯ ಮಾಡಲು ಸಿದ್ಧರಾಗಿದ್ದ ಹದಿನಾರು ಜನ ಸಮರ್ಥರಾದ ಮಹಾಪಾತ್ರರ ಸಹಾಯವು, ತಿಮ್ಮರಸನ ರಾಜತಂತ್ರ ನೈಪುಣ್ಯದಿಂದ ಗಜಪತಿಗೆ ದೊರಕದಂತಾಗಿ ರಾಯನಿಗೆ ಅದ್ಭುತ ವಿಜಯವು ಪ್ರಾಪ್ತವಾಯಿತು. ಸಮುದ್ರದಂತೆ ಭೋರ್ಗರೆಯುವ ಕನ್ನಡ ಸಾಮ್ರಾಜ್ಯದ ಮಹಾಸೈನ್ಯದ ಹಾಗೂ ಕನ್ನಡವೀರರ ಪರಾಕ್ರಮದ ಮುಂದೆ ನಿಲ್ಲಲಾಗದೆ ಪ್ರತಾಪರುದ್ರಗಜಪತಿಯು ಸಂಪೂರ್ಣವಾಗಿ ಸೋತು ಶರಣಾಗತನಾದನು ಮತ್ತು ರಾಯನೊಡನೆ ಸಂಧಿಮಾಡಿಕೊಂಡು ತನ್ನ ಮಗಳಾದ ಜಗನೋಹಿನಿಯನ್ನು ಕೃಷ್ಣದೇವರಾಯನಿಗೆ ವಿವಾಹ ಮಾಡಿಕೊಟ್ಟು ಸ್ನೇಹಸಂಬಂಧವನ್ನು ಬೆಳೆಸಿದನು. ಈ ಅಪೂರ್ವ ದಿಗ್ವಿಜಯದಿಂದ ಕೃಷ್ಣದೇವರಾಯನ ಶೌರ್ಯ-ಪರಾಕ್ರಮ, ಅಸಮ ಸಾಹಸ, ಸ್ನೇಹ- ಸೌಜನ್ಯ-ಔದಾರ್ಯಾದಿ ಸದ್ಗುಣಗಳು ಬೆಳಕಿಗೆ ಬಂದುದಲ್ಲದೆ ಕನ್ನಡ ಸೈನ್ಯವು ಅಜೇಯವೆನಿಸಿ ರಾಯನಿಗೆ ಅಪಾರ ಕೀರ್ತಿ, ಪ್ರತಿಷ್ಠೆಗಳು ಲಭ್ಯವಾದವು. ಈ ಕಳಿಂಗ ವಿಜಯದ ಜ್ಞಾಪಕಾರ್ಥವಾಗಿ ರಾಯನು “ಗಜಪತಿ ಸಪ್ತಾಂಗಹರಣ” ಎಂದು ಬಿರುದು ಧರಿಸಿದನು.
ಪ್ರತಾಪರುದ್ರಗಜಪತಿಯನ್ನು ಗೆದ್ದು ಅವನ ಮಗಳು ಜಗನ್ನೊಹಿನಿಯನ್ನು ಮದುವೆಯಾಗಿ ವಿಜಯಲಕ್ಷ್ಮೀ ವಿಜಯವಧುಗಳೊಡನೆ ರಾಜಧಾನಿಗೆ ಹಿಂದಿರುಗಿದ ಕೃಷ್ಣದೇವರಾಯನನ್ನು ಸಮಸ್ತ ಪ್ರಜರು ಆನಂದೋತ್ಸಾಹಗಳಿಂದ ವೈಭವಪೂರ್ಣವಾಗಿ ಸ್ವಾಗತಿಸಿದರು. ಒಂದು ತಿಂಗಳ ಕಾಲ ಸಾಮ್ರಾಜ್ಯದಲ್ಲಿ ರಾಜಧಾನಿಯಲ್ಲಿ ವಿಜಯೋತ್ಸವವು ಆಚರಿಸಲ್ಪಟ್ಟಿತು.
ಇದೇ ಸಂದರ್ಭದಲ್ಲಿ ಕೃಷ್ಣದೇವರಾಯನು ವಿಜಯಸೂಚಕವಾಗಿ ಉದಯಗಿರಿಯಿಂದ ತಂದ ಮುದ್ದುಕೃಷ್ಣನನ್ನು ವಿದ್ಯಾನಗರದಲ್ಲಿ ಪ್ರತಿಷ್ಠಿಸಬಯಸಿ ಶ್ರೀವ್ಯಾಸತೀರ್ಥರಲ್ಲಿ ತನ್ನ ಮನದ ಹಂಬಲವನ್ನು ನಿವೇದಿಸಿದನು. ಶ್ರೀಗಳವರು ಸಂತೋಷದಿಂದ ಅವನನ್ನು ಪ್ರೋತ್ಸಾಹಿಸಿದರು. ರಾಯನು ಒಂದು ಸುಂದರ ದೇವಾಲಯ ಕಟ್ಟಿಸಿ, ಶ್ರೀವ್ಯಾಸರಾಯರ ಯಾಜಮಾನ್ಯದಲ್ಲಿ ಒಂದು ಶುಭದಿನ ವೈಭವದಿಂದ ಶ್ರೀಕೃಷ್ಣಸ್ವಾಮಿಯ ಪ್ರತಿಷ್ಠಾಪನೆ ಮಾಡಿಸಿ, ದೇವರ ಪೂಜಾರಾಧನೆಗಾಗಿ ಅನೇಕ ದತ್ತಿಗಳನ್ನು ಬಿಟ್ಟು ಹರ್ಷಿಸಿದನು.
ಶಾಲಿವಾಹನಶಕೆ ೧೪೩೫ ನೇ ಭಾವಸಂವತ್ಸರದ ಫಾಲ್ಗುಣ ಶುಕ್ಲ ತದಿಗೆಯಂದು (ಕ್ರಿ.ಶ. ೧೫೧೪) ವ್ಯಾಸರಾಜರುಗಳ ಅಪ್ಪಣೆಯಂತೆ ಶ್ರೀಕೃಷ್ಣಸ್ವಾಮಿಯ ಪಾಜೆಗೆ ಶ್ರೀವ್ಯಾಸತೀರ್ಥರ ಶಿಷ್ಯರೂ, ಪೂರ್ವಾಶ್ರಮ ಮಶಬಂಧುಗಳೂ ಆದ ರಾಮಣ್ಣಾಚಾರ್ಯ ಮತ್ತು ಮುಳಬಾಗಿಲು ತಿಮ್ಮಣ್ಣಾಚಾರ್ಯರನ್ನು ಅರ್ಚಕರನ್ನಾಗಿ ನೇಮಿಸಿ ದಾನಶಾಸನ ಮಾಡಿಸಿದನು.172 ಇದರಂತೆಯೇ ಅದೇ ದಿವಸ ಶ್ರೀದೇವರ ಪೂಜಾಕಾಲದಲ್ಲಿ ಪವಮಾನಾಭಿಷೇಕದ ಕೈಂಕರ್ಯಕ್ಕಾಗಿ ವಿದ್ಯಾವಂತರಾದ ಹನ್ನೆರಡು ಜನ ಮಾಧ್ವಬ್ರಾಹ್ಮಣರನ್ನು ವ್ಯವಸ್ಥೆ ಮಾಡಿ ದಾನಶಾಸನ ಮಾಡಿಸಿದನು.
ವ್ಯಾಸಮುನೀಂದ್ರರು ಕೃಷ್ಣಸ್ವಾಮಿಯ ಪ್ರತಿಷ್ಠೆಯಾದ ಮೇಲೆ ಕುಂಭಾಭಿಷೇಕ ಮಾಡಿ ತತ್ವನ್ಯಾಸ, ಮಾತೃಕಾನ್ಯಾಸಾದಿಗಳಿಂದ ದೇವರ ವಿಶೇಷ ಸನ್ನಿಧಾನವು ಉಂಟಾಗುವಂತೆ ಪ್ರಾರ್ಥಿಸಿ, ಸ್ತುತಿಸಿ, ಆನಂತರ ಮಹಾಮಂಗಳಾರತಿಯನ್ನು ಬೆಳಗಿ ವಿಜಯನಗರ ಸಾಮ್ರಾಜ್ಯಕ್ಕೆ, ಕೃಷ್ಣದೇವರಾಯನಿಗೆ ಮಂಗಳವಾಗುವಂತೆ ಪ್ರಾರ್ಥಿಸಿ ಆಶೀರ್ವದಿಸಿದರು.
ಶ್ರೀಕೃಷ್ಣಸ್ವಾಮಿಯ ಪ್ರತಿಷ್ಠೆಯಾಗುವ ಮೊದಲೇ ಹಿಂದೆ ಶಾಲಿವಾಹನ ಶಕೆ ೧೪೩೫ ನೇ ಶ್ರೀಮುಖ ಸಂವತ್ಸರದ ಚೈತ್ರಶುಕ್ಲ ಪಂಚಮೀ ದಿವಸ (ಕ್ರಿ.ಶ. ೧೫೧೩) ರಾಯನು ವ್ಯಾಸರಾಜರ ಆಣತಿಯಂತೆ ವಿಜಯವಿಠಲ ದೇವರಗುಡಿಯ ಜೀರ್ಣೋದ್ದಾರ ಮಾಡಿದ್ದಲ್ಲದೆ, ಮುಂದೆ ಒಂದು ಅದ್ಭುತ ಶಿಲ್ಪಕಲಾಚಾತುರ್ಯವನ್ನೂ ಸಂಗೀತದ ಸಪ್ತಸ್ವರಗಳನ್ನು ಹೊರಸೂಸುವ ಅನೇಕ ಸ್ತಂಭಗಳಿಂದ ಕಂಗೊಳಿಸುವ ಮುಖಮಂಟಪವೊಂದನ್ನು ಕರ್ನಾಟಕ ಸಂಗೀತ ಪಿತಾಮಹರೂ ದಾಸವರೇಣ್ಯರೂ ಆದ ಪುರಂದರದಾಸರಲ್ಲಿರುವ ಗೌರವದ್ಯೋತಕವಾಗಿ ನಿರ್ಮಿಸಿದನು. ನಿರ್ಮಾಣ ಮಾಡಿಸಿ ದೇವರ ವಿವಿಧ ಉತ್ಸವ, ನೈವೇದ್ಯ, ಪೂಜಾದಿಗಳಿಗಾಗಿ ಅನೇಕ ದತ್ತಿಗಳನ್ನು ಬಿಟ್ಟಿದ್ದಲ್ಲದೆ ತನ್ನ ಹೆಸರಿನಲ್ಲಿ ನಡೆಯುವ ಅನೇಕ ನೈವೇದ್ಯ ಸಮರ್ಪಣೆಗಳಲ್ಲಿ ತನ್ನ ಗುರುಗಳಾದ ವ್ಯಾಸರಾಜರಿಗೆ ಎರಡು ಪಾಲನ್ನು ಸಲ್ಲಿಸತಕ್ಕದೆಂದು ಶಿಲಾಶಾಸನ ಬರೆಸಿ ಗುರುಗಳಲ್ಲಿ ತನಗಿರುವ ಭಕ್ತಿಯನ್ನು ಪ್ರದರ್ಶಿಸಿದನು - ಈ ಶಿಲಾಶಾಸನವು ಶ್ರೀವಿಜಯವಿಠಲದೇವರ ಗುಡಿಯ ದಕ್ಷಿಣಭಾಗದಲ್ಲಿರುತ್ತದೆ. ಈ ಶಾಸನದಲ್ಲಿ “....ವಿನಿಯೋಗ ನಾನಾವರ್ಗದ ನೈವೇದ್ಯ ಸಹಗುರುವುಗಳು ವ್ಯಾಸರಾಯರಿಗೆ ಎರಡು ಪಾಲು” ಎಂದು ನಮೂದಿಸಿರುವುದು.
ಕೃಷ್ಣದೇವರಾಯನು ಪ್ರತಾಪರುದ್ರಗಜಪತಿಯನ್ನು ಜಯಿಸಿದ ಜ್ಞಾಪಕಾರ್ಥ ಕ್ರಿ.ಶ. ೧೫೧೬ ರಲ್ಲಿ ತನ್ನಿಬ್ಬರು ರಾಣಿಯರೊಡನೆ ತಿರುಪತಿಗೆ ಹೋಗಿ ತನ್ನ ಮತ್ತು ಇಬ್ಬರು ರಾಣಿಯರ ತಾಮ್ರಪ್ರತಿಮೆಗಳನ್ನು ಮಾಡಿಸಿ ಅದನ್ನು ಶ್ರೀನಿವಾಸದೇವರ ಗುಡಿಯಲ್ಲಿ ಇಡಿಸಿ, ದೇವರಿಗೆ ಅನೇಕ ಧನಕನಕಾಭರಣಗಳನ್ನು ಅರ್ಪಿಸಿ, ದತ್ತಿಗಳನ್ನು ಬಿಟ್ಟು, ವಿಜಯನಗರಕ್ಕೆ ಬಂದು ಶ್ರೀವಿರೂಪಾಕ್ಷಸ್ವಾಮಿಯ ಸನ್ನಿಧಿಯಲ್ಲಿ ಶಾಲಿವಾಹನ ಶಕೆ ೧೪೩೮ ನೇ ಧಾತು ಸಂವತ್ಸರದ ಮಾರ್ಗಶಿರ ಶುಕ್ಲ ದ್ವಾದಶಿಯ ದಿನದಂದು (ಕ್ರಿ.ಶ. ಡಿಸೆಂಬರ್ ೧೫೧೬) “ಕೊಂಡವೀಡು” ವಿಜಯದ ಸ್ಮರಣಾರ್ಥವಾಗಿ ವ್ಯಾಸರಾಜರಿಗೆ ಅನೇಕ ದಾನಗಳನ್ನು, ದತ್ತಿಗಳನ್ನು ಸಮರ್ಪಿಸಿ ಕೃತಾರ್ಥನಾದನು.
ಕೃಷ್ಣದೇವರಾಯನು ತನಗೆ ಪಟ್ಟಾಭಿಷೇಕವಾದ ಮೇಲೆ ವ್ಯಾಸರಾಜಸ್ವಾಮಿಗಳವರ ಸಲಹೆ - ಮಾರ್ಗದರ್ಶನಗಳಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸಿ ಕ್ರಿ.ಶ. ೧೫೨೦ ರ ಸುಮಾರಿಗೆ ರಾಜಧಾನಿಯು ಅನೇಕ ಕಲಾತ್ಮಕ ಸೌಧಗಳಿಂದಲೂ, ವಿವಿಧ ಶಿಲ್ಪಕಲಾಚಾತುರ್ಯ ಪ್ರದರ್ಶಕ ಗುಡಿ-ಗುಂಡಾರ-ಮಂದಿರ-ದೇವಪ್ರತಿವಾದಿಗಳಿಂದಲೂ ಶೋಧಿಸುವಂತೆ ಮಾಡಿದನು. ಅನೇಕ ಸುಂದರವೂ, ವಿಸ್ತಾರವೂ ಆದ ಉಪನಗರಗಳನ್ನೂ ಉದ್ಯಾನ, ಸರೋವರಾದಿಗಳನ್ನೂ ನಿರ್ಮಿಸಿದನು. ಇವುಗಳಲ್ಲಿ ವಿಜಯನಾರಸಿಂಹ, ಕಡಲೇಕಾಯಿ ಗಣಪತಿ, ಸಾಸುವೆಕಾಳು ಗಣಪತಿ, ವೀರಭದ್ರ, ಹಜಾರರಾಮಸ್ವಾಮಿ ದೇವಾಲಯ, ಮಾನವಮಿದಿಬ್ಬ, ವಿಜಯದಶಮೀ ದರ್ಬಾರುಮಂದಿರ, ಭುವನವಿಜಯ, ವಿದ್ಯಾಸಭಾಮಂದಿರ, ಕಮಲಮಹಲು, ಆನೆಯ ಸಾಲು, ಒಂಟೆಯ ಸಾಲು, ಕೃಷ್ಣಸ್ವಾಮಿ ಗುಡಿ, ವಿಜಯವಿಠಲನ ಗುಡಿ ಮುಂತಾದವು ಕಲ್ಲಿನ ರಥಗಳು ಖ್ಯಾತಿ ಗಳಿಸಿವೆ. ವಿವಿಧ ವಿದ್ಯೆಗಳು, ಶಾಸ್ತ್ರಗಳು, ಸಂಗೀತ, ಸಾಹಿತ್ಯ, ನೃತ್ಯ, ಚಿತ್ರ, ಶಿಲ್ಪಕಲೆಗಳು ಉನ್ನತಿಯ ತುಟ್ಟತುದಿಯನ್ನು ಮುಟ್ಟಿದವು. ಸಂಸ ತ, ಕನ್ನಡ, ತೆಲುಗು ಭಾಷೆಗಳಲ್ಲಿ ಅನೇಕ ಕಾವ್ಯಾದಿ ಸಾಹಿತ್ಯಗಳು ಅಪಾರವಾಗಿ ಬೆಳೆದವು. ಆವೊಂದು ಕಾಲವು ಕನ್ನಡ ಸಾಮ್ರಾಜ್ಯದ ಸುವರ್ಣಯುಗವೆನಿಸಿತು. ಕೃಷ್ಣದೇವರಾಯ ಸ್ವತಃ ಕವಿ-ಸಾಹಿತಿ-ಗ್ರಂಥಕಾರನಾಗಿದ್ದನು. ಅಂತೆಯೇ ಅವನ ಕಾಲದಲ್ಲಿ ಅನೇಕ ಪ್ರಖ್ಯಾತ ಪಂಡಿತರು, ಜ್ಞಾನಿಗಳು, ಕವಿಗಳು, ಸಾಹಿತಿಗಳು, ಕಲೆಗಾರರು ಸನ್ಮಾನಿತರಾದರು. ಇವೆಲ್ಲದರಲ್ಲೂ ಶ್ರೀವ್ಯಾಸರಾಜರ ಪ್ರಭಾವವಿತ್ತು. ಜಗದ್ದಿಖ್ಯಾತರಾದ ಶ್ರೀವಿಜಯೀಂದ್ರರು, ಶ್ರೀವಾದಿರಾಜರು, ಶ್ರೀನಾರಾಯಣಯತಿಗಳು, ಶ್ರೀಸುರೇಂದ್ರರು, ಕೃಷ್ಣಚೈತನ್ಯ, ವಲ್ಲಭಾಚಾರ್ಯರು, ಪಕ್ಷಧರಮಿಶ್ರ, ಗದುಗಿನ ನಾರಾಯಣಪ್ಪ, ಶ್ರೀಪುರಂದರದಾಸರು, ಶ್ರೀಕನಕದಾಸರು, ತಿಮ್ಮಣ್ಣಕವಿ, ಕನ್ನಡದ ಧೂರ್ಜಟಿ, ತೆಲುಗು ಕವಿಗಳೇ ಮುಂತಾದವರು ಮುಖ್ಯರು. ಹೀಗೆ ಕೃಷ್ಣದೇವರಾಯ ವ್ಯಾಸರಾಜರ ಮಾರ್ಗದರ್ಶನದಲ್ಲಿ, ಅವರ ಸಲಹೆಯಂತೆ ಮುನ್ನಡೆದು ಕನ್ನಡ ಸಾಮ್ರಾಜ್ಯದ ಸುವರ್ಣಯುಗಕ್ಕೆ ಕಾರಣನೆನಿಸಿ ಸಮಸ್ತ ಭಾರತದೇಶದ ಅಷ್ಟೇ ಏಕೆ ದೇಶ-ವಿದೇಶಗಳಲ್ಲಿಯೂ ಅಜರಾಮರ ಕೀರ್ತಿ ಗಳಿಸಿದನು.
ಕೃಷ್ಣದೇವರಾಯನು ಬಹಮನಿ ಸುಲ್ತಾನರನ್ನು ಅನೇಕಬಾರಿ ಪರಾಭವಗೊಳಿಸಿದ್ದರೂ ಕೈಬಿಟ್ಟು ಹೋಗಿದ್ದ ಕನ್ನಡನಾಡಿನ ಭಾಗಗಳಾಗಿದ್ದ ರಾಯಚೂರು-ಮುದ್ದಲ್ ಪ್ರಾಂತ್ಯಗಳನ್ನು ಮತ್ತೆ ಸ್ವಾಧೀನಪಡಿಸಿಕೊಳ್ಳುವ ಕಾರ್ಯವಾಗಿರಲಿಲ್ಲ. ಅದೊಂದು ಚಿಂತೆ ರಾಯನಿಗಿದ್ದುದರಿಂದ ಈಗ ಆ ಕಾರ್ಯವನ್ನು ನೆರವೇರಿಸಲು ಅವನು ಉತ್ಸುಕನಾದನು. ಆದರೆ ಆಗ ರಾಯನ ಜಾತಕದ ಪ್ರಕಾರ ಗ್ರಹಗಳು ಕ್ರೂರವಾಗಿದ್ದು ಅವನಿಗೆ ಕಂಟಕವಿದ್ದು, ಅದೇ ಸಮಯದಲ್ಲಿ ಆಕಾಶದಲ್ಲಿ ಧೂಮಕೇತುವು ಕಾಣಿಸಿಕೊಂಡಿದ್ದಿತು. ಅದು ರಾಯನಿಗೆ ಬರಲಿರುವ ಕುಹಯೋಗದ ಪೂರ್ವಭಾವಿ ಸೂಚಕವಾಗಿದ್ದುದರಿಂದ ತಿಮ್ಮರಸು ಮುಂತಾದ ಆತ್ಮೀಯರು ರಾಯಚೂರು ದಿಗ್ವಿಜಯವನ್ನು ಒಂದೆರಡು ವರ್ಷಗಳವರೆಗೆ ಮುಂದುವರೆಸುವುದು. ಯುಕ್ತವೆಂದು ಭಾವಿಸಿ, ವ್ಯಾಸರಾಯರಿಂದ ರಾಯನಿಗೆ ಹೇಳಿಸಲು ಗುರುಗಳಲ್ಲಿ ಸಾಮ್ರಾಟನೊಡನೆ ಬಂದರು.
ರಾಯನು ಗುರುಗಳಿಗೆ ನಮಿಸಿ “ಗುರುದೇವ! ಹಿಂದೆ ನಿಮ್ಮ ಆಶೀರ್ವಾದ ಪಡೆದು ದಿಗ್ವಿಜಯ ಹೊರಟು ತಮ್ಮ ಅನುಗ್ರಹದಿಂದ ವಿಜಯಶಾಲಿಯಾಗಿ ಬಂದೆನು. ಈಗಲೂ ನನ್ನ ರಕ್ಷಕರು ತಾವೇ ಆಗಿರುವುದರಿಂದ ತಮ್ಮ ಕಾರುಣಾಶೀರ್ವಾದ ಬಲದಿಂದ ವಿಜಯವನ್ನು ಸಾಧಿಸುತ್ತೇನೆಂಬ ನಂಬಿಕೆ ನನಗಿದೆ. ತಾವು ಮಾತ್ರ ಹೃತ್ತೂರ್ವಕವಾಗಿ ಈ ಶಿಷ್ಯನನ್ನು ಆಶೀರ್ವದಿಸಿ ಕೈಬಿಟ್ಟು ಹೋಗಿರುವ ರಾಯಚೂರು-ಮುದಲ್ ಪ್ರಾಂತ್ಯಗಳನ್ನು ಮತ್ತೆ ಸಂಪಾದಿಸಿಕೊಂಡು ಬರಲು ಆಶೀರ್ವದಿಸಿ ಕಳುಹಿಸಿಕೊಡಬೇಕು” ಎಂದು ಪ್ರಾರ್ಥಿಸಿದರು.
ಶ್ರೀವ್ಯಾಸರಾಜರು ಸಾಮ್ರಾಟನ ಬಿನ್ನಹವನ್ನಾಲಿಸಿ ಕ್ಷಣಕಾಲ ಧ್ಯಾನಮಗ್ನರಾಗಿದ್ದು ನಂತರ ನಸುನಗುತ್ತಾ, “ವತ್ಸ! ನಿನ್ನ ಜಾತಕದ ಪ್ರಕಾರ ನಿನಗೆ ಕುಹಯೋಗದಿಂದ ಕಂಟಕವಿರುವುದು ನಿಜ. ಆ ಕುಹಯೋಗಕ್ಕೆ ಈಗಿನಿಂದಲೇ ಗ್ರಹಗಳು ತಮ್ಮ ದೃಷ್ಟಿಬೀರಿ ಕ್ರೂರವಾಗಿರುವಂತೆ ಕಂಡುಬರುತ್ತಿದೆ. ಇವೆಲ್ಲ ಮುಂಬರುವ ಅನಿಷ್ಟ ಸೂಚಕಗಳು. ಆದರೆ ಗ್ರಹಗಳನ್ನು ಸಾತ್ವಿಕ ಪೂಜಾರಾಧನೆ, ಜಪ-ತಪ-ಹೋಮಾದಿಗಳಿಂದ ಸಂತೋಷಪಡಿಸುವುದರಿಂದ ತಾತ್ಕಾಲಿಕ ಅನಿಷ್ಟ ನಿವೃತ್ತಿಯಾಗುವುದರಲ್ಲಿ ಸಂಶಯವಿಲ್ಲ. ಸಂಪೂರ್ಣ ಕುಹಯೋಗ ಬಂದಾಗ ಆ ಕಾಲದಲ್ಲಿ ಅದರ ವಿಚಾರ ಯೋಚಿಸೋಣ. ಈಗ ತಾತ್ಕಾಲಿಕ ಅನಿಷ್ಟ ನಿವೃತ್ತಿ, ಧೂಮಕೇತುವಿನಿಂದ ನಿನಗಾವ ಬಾಧೆ ಆಗದಂತೆ ಮಾಡಲು ನಾವು ಅನೇಕ ಹವನ-ಹೋಮ, ಪೂಜಾ, ಜಪತಪಾದಿಗಳು ನೆರವೇರಲು ವ್ಯವಸ್ಥೆ ಮಾಡಿ ನಾವೂ ಸ್ವತಃ ನಿನ್ನ ಕ್ಷೇಮಕ್ಕಾಗಿ ತಪಸ್ಸನ್ನೆಸಗುತ್ತೇವೆ. ರಾಜೇಂದ್ರ! ಅಪಜಯವೆಂಬುದು ನಿನ್ನ ಹತ್ತಿರವಾ ಸುಳಿಯಲಾರದು. ನೀನು ಸರ್ವದಾ ವಿಜಯಶಾಲಿಯಾಗುವೆ, ನಿನ್ನೆಲ್ಲಾ ಆಪತ್ತುಗಳು ಪರಿಹಾರವಾಗಿ ಅಮೋಘ ವಿಜಯವನ್ನು ಸಾಧಿಸುತ್ತೀಯೇ” ಎಂದು ಫಲಮಂತ್ರಾಕ್ಷತೆಯಿತ್ತು ಆಶೀರ್ವದಿಸಿ ಕಳುಹಿಸಿದರು.
ಕೃಷ್ಣದೇವರಾಯ ಗುರುಗಳ ಅಭಯವಚನದಿಂದ ಹೃಷ್ಟಾಂತಕರಣನಾಗಿ, ಇಮ್ಮಡಿ ಉತ್ಸಾಹದಿಂದ ಮಹಾಸೈನ್ಯದೊಡನೆ ರಾಯಚೂರು ದಿಗ್ವಿಜಯ ಕೈಗೊಂಡು ವಿಜಯನಗರದಿಂದ ಹೊರಟನು.
ವ್ಯಾಸಮುನಿಗಳು, ವಿಜಯನಗರ, ತಿರುಪತಿ, ಕಂಚಿ, ಶ್ರೀರಂಗ, ರಾಮೇಶ್ವರ ಮುಂತಾದ ದೇವಸನ್ನಿಧಿಯಲ್ಲಿ ಕೃಷ್ಣದೇವರಾಯನ ಹೆಸರಿನಲ್ಲಿ ಅವನ ಕ್ಷೇಮಾಭ್ಯುದಯಗಳಿಗಾಗಿ ಅಭಿಷೇಕ, ಉತ್ಸವ, ಪೂಜಾರಾಧನೆ, ಜಪ, ಪಾರಾಯಣ, ಹವನ-ಹೋಮಾದಿಗಳು ಅವ್ಯಾಹತವಾಗಿ ಜರುಗುವಂತೆ ವ್ಯವಸ್ಥೆ ಮಾಡಿದುದಲ್ಲದೆ ಸ್ವತಃ ವಿಶೇಷ ಜಪ-ತಪ- ಪೂಜಾರಾಧನಾದಿಗಳನ್ನು ಮಾಡುತ್ತಾ ವಿಶೇಷ ಪ್ರಾರ್ಥನಾದಿಗಳನ್ನು ಮಾಡಹತ್ತಿದರು.
ಅಗಾಧ ಸೈನ್ಯದೊಡನೆ ಹೊರಟ ಕೃಷ್ಣದೇವರಾಯನು ರಾಯಚೂರು ಕೋಟೆಗೆ ಮುತ್ತಿಗೆ ಹಾಕಿ ವಿಜಾಪುರದ ಇಸ್ಮಾಯಿಲ್ ಆದಿಲ್ ಷಹನೊಡನೆ ಘೋರ ಕಾಳಗಕ್ಕಿಳಿದನು. ರಾಯಚೂರು ಕೋಟೆಗಾಗಿ ಬಹುಮುಖವಾಗಿ ಯುದ್ಧವು ನಡೆಯಿತು. ರಾಯನ ಜಾತಕದಂತೆ ಗ್ರಹಗಳು ಕ್ರೂರವಾಗಿದ್ದು ಕುಹಯೋಗದ ಪೂರ್ವಭಾವಿ ಅನಿಷ್ಟ ಘಟನೆಗಳು ಸಂಭವಿಸುವ ಭಯವಿದ್ದಿತು. ಆದರೆ ವ್ಯಾಸರಾಜರು ನೆರವೇರಿಸಿದ ಪೂಜಾ, ಹವನ-ಹೋಮ-ಜಪತಪಾದಿಗಳ ಪ್ರಭಾವದಿಂದ ಬಂದಿದ್ದ ವಿಪತ್ತು ಪರಿಹಾರವಾಗಿ ಧೂಮಕೇತುನಿನ ಅನಿಷ್ಟ ಫಲವು ವಿಜಾಪುರದ ಆದಿಲ್ ಷಹನಿಗೇ ಉಂಟಾಗುವಂತಾಯಿತು. ಅವ್ಯಾಹತವಾಗಿ ಜರುಗಿದ ಘೋರ ಕದನದಿಂದಾಗಿ ರಾಯಚೂರು ಕೋಟೆ ಮತ್ತು ಆ ಪ್ರಾಂತ್ಯವು ರಾಯನ ವಶವಾಯಿತು. ವಿಜಾಪುರದ ಸೈನ್ಯ ಕನ್ನಡ ಸಾಮ್ರಾಜ್ಯದ ಸೈನ್ಯವನ್ನೆದುರಿಸಲಾರದೆ ದಿಕ್ಕಾಪಾಲಾಗಿ ಓಡಿಹೋಯಿತು. ಇಸ್ಮಾಯಿಲ್ ಆದಿಲ್ ಷಹನು ಸಂಪೂರ್ಣವಾಗಿ ಸೋತು ರಾಯನೊಡನೆ ಸಂಧಿ ಮಾಡಿಕೊಂಡು ರಾಯಚೂರು ಪ್ರಾಂತ್ಯವನ್ನು ಒಪ್ಪಿಸಿದನು. ರಾಯನಿಗೆ ಬಂದಿದ್ದ ಆಪತ್ತು ಪರಿಹಾರವಾಗಿ ಅಸಾಧಾರಣ ವಿಜಯವು ಪ್ರಾಪ್ತವಾಯಿತು. ಆನಂತರ ರಾಯನು ಕಲಿತನದಿಂದ ಹೋರಾಡಿ ಮುದ್ದಲ್ ಪ್ರಾಂತ್ಯವನ್ನೂ ವಶಪಡಿಸಿಕೊಂಡನು. ಎಲ್ಲೆಡೆ ವಿಜಯಲಕ್ಷ್ಮಿಯು ರಾಯನಿಗೆ ವಿಜಯಮಾಲೆ ಹಾಕಿದಳು!
ಇದೇ ಸಮಯದಲ್ಲಿ ಗುಲ್ಬರ್ಗದ ಆಡಳಿತಗಾರನಾಗಿದ್ದ ಅಮೀರ್ ಬರೀದನು ಇಮ್ಮಡಿ ಸುಲ್ತಾನ್ ಅಹಮದ್ ಷಹನು ಮೃತನಾದ್ದರಿಂದ ಅವನ ಪುತ್ರರು ಸಣ್ಣ ವಯಸ್ಸಿನವರಾಗಿದ್ದುದರಿಂದ ಗುಲ್ಬರ್ಗಾಕ್ಕೆ ತಾನೇ ಸುಲ್ತಾನನಾಗಲು ಹೊಂಚು ಹಾಕುತ್ತಿದ್ದನು. ಈ ವಿಚಾರವನ್ನು ರಾಜಕುಮಾರ ಅಲ್ಲಾವುದ್ದೀನನು ಆತ್ಮೀಯರೊಡನೆ ಕೃಷ್ಣದೇವರಾಯನಿಗೆ ಹೇಳಿ ಕಳುಹಿಸಿ ತನಗೆ ಸಹಾಯ ಮಾಡಲು ಕೋರಿದನು. ರಾಯನು ಸಿಂಹಾಸನಕ್ಕೆ ನಿಜವಾದ ವಾರಸುದಾರನಾದ ರಾಜಕುಮಾರ ಅಲ್ಲಾವುದ್ದೀನನಿಗೆ ಪಟ್ಟ ಕಟ್ಟಬೇಕೆಂದೂ, ವಿರುದ್ಧವಾಗಿ ನಡೆದಲ್ಲಿ ತಾನು ಸೈನ್ಯದೊಡನೆ ಬಂದು ಆ ಕಾರ್ಯ ನಿರ್ವಹಿಸುವುದಾಗಿಯೂ ಬರೀದನಿಗೆ ಹೇಳಿ ಕಳುಹಿಸಿ ಅಗಾಧ ಸೈನ್ಯದೊಡನೆ ಗುಲ್ಬರ್ಗೆಯತ್ತ ತೆರಳಿದನು. ಇದರಿಂದ ಬರೀದನು ಬೆದರಿದನು. ಕೃಷ್ಣದೇವರಾಯನು ಸೈನ್ಯಸಮೇತನಾಗಿ ಗುಲ್ಬರ್ಗೆಗೆ ಬರುವ ವೇಳೆಗೆ ಬರೀದನು ಪಟ್ಟಾಭಿಷೇಕಕ್ಕೆ ವ್ಯವಸ್ಥೆ ಮಾಡಿದ್ದಲ್ಲದೆ ರಾಯನನ್ನು ವಿನಯಪೂರ್ವಕವಾಗಿ ಸ್ವಾಗತಿಸಿದನು. ಕೃಷ್ಣದೇವರಾಯನು ಇಮ್ಮಡಿ ಅಹಮದ್ ಷಹನ ಮಗನಾದ ಅಲ್ಲಾವುದ್ದೀನನಿಗೆ ಸುಲ್ತಾನನೆಂದು ಪಟ್ಟಾಭಿಷೇಕ ಮಾಡಿಸಿದನು. ಇದರಿಂದ ಸಂತುಷ್ಟನಾದ ಅಲ್ಲಾವುದ್ದೀನನು ರಾಯನ ಸ್ನೇಹವು ಶಾಶ್ವತವಾಗಿರಬೇಕೆಂದು ಕೋರಿ ಅವನೊಡನೆ ಸ್ನೇಹಸಂಬಂಧವನ್ನು ಬೆಳೆಸಿ ರಾಯನಿಗೆ “ಯವನರಾಜ್ಯ ಸ್ಥಾಪನಾಚಾರ್ಯ” ಎಂಬ ಬಿರುದು-ಬಾವಲಿಗಳನ್ನೂ, ಕಾಣಿಕೆಗಳನ್ನೂ ಅರ್ಪಿಸಿ ತನ್ನ ಕೃತಜ್ಞತೆಯನ್ನು ಪ್ರದರ್ಶಿಸಿದನು.
ಹೀಗೆ ರಾಯನು ಮಹಾವಿಜಯ-ಗೌರವ ಪ್ರಶಸ್ತಿಗಳನ್ನು ಗಳಿಸಿ, ವಿಜಯನಗರಕ್ಕೆ ಬಂದನು. ಬಹುವರ್ಷಗಳಿಂದ ಕೈತಪ್ಪಿಹೋಗಿದ್ದ ನಾಡಿನ ಭಾಗವಾದ ರಾಯಚೂರು ಮುದ್ದಲ್ ಪ್ರಾಂತ್ಯಗಳನ್ನು ಮತ್ತೆ ಸಂಪಾದಿಸಿಕೊಂಡು ಬಂದ ರಾಯನನ್ನು ಸಮಸ್ತ ರಾಜಧಾನಿಯ ಪ್ರಜಾವರ್ಗ ಪ್ರಚಂಡ ಜಯಕಾರದಿಂದ ಸ್ವಾಗತಿಸಿತು.
ಕೃಷ್ಣದೇವರಾಯನು ರಾಣಿಯರೊಡಗೂಡಿ ರಾಜಗುರು ಶ್ರೀವ್ಯಾಸರಾಜರ ಸನ್ನಿಧಿಗೆ ಬಂದು ಸಾಷ್ಟಾಂಗವೆರಗಿ - “ಗುರುವರ್ಯ, ತಮ್ಮ ತಪಸ್ಸು, ಆಶೀರ್ವಾದ ಫಲಿಸಿತು. ತಮ್ಮ ಭವಿಷ್ಯ ಸತ್ಯವಾಯಿತು. ನನ್ನ ಈ ಎಲ್ಲ ವಿಜಯ- ಅಭ್ಯುದಯಗಳಿಗೇ ತಾವೇ ಕಾರಣರು. ತಮ್ಮ ಕರುಣೆಯ ಕಂದನಾದ ನನ್ನನ್ನು ಯಾವಾಗಲೂ ಇದೇ ರೀತಿ ಅನುಗ್ರಹಿಸುತ್ತಿರಬೇಕು” ಎಂದು ಪ್ರಾರ್ಥಿಸಿದನು.
ಕೃಷ್ಣದೇವರಾಯನ ವಿಜಯದಿಂದ ಅತೀವ ಮುದಗೊಂಡ ವ್ಯಾಸರಾಜಗುರುವರ್ಯರು ರಾಯನ ಧೈರ್ಯ-ಸಾಹಸ, ಅಸಮ ವಿಕ್ರಮಗಳನ್ನು ಕೊಂಡಾಡಿದರು. ರಾಯನು ಹರ್ಷಪುಳಕಿತಗಾತ್ರನಾಗಿ ಗುರುಗಳ ಆಶೀರ್ವಾದ ಪಡೆದು ಅರಮನೆಗೆ ತೆರಳಿದನು.