ಕಲಿಯುಗ ಕಲ್ಪತರು
ನಾಲ್ಕನೆಯ ಉಲ್ಲಾಸ
ಶ್ರೀವ್ಯಾಸರಾಜಯತಿಸಾರ್ವಭೌಮರು
೪೪. ಕೃಷ್ಣದೇವರಾಯ ಕನ್ನಡ ಸಾಮ್ರಾಟನಾದ !
ಸಂಧ್ಯಾಸಮಯ “ವಿಶ್ವಪಾವನ” ಮಠದಲ್ಲಿ ಶ್ರೀವ್ಯಾಸರಾಜರು, ದರ್ಶನಾಕಾಂಕ್ಷಿಗಳಾಗಿ ಬಂದಿದ್ದ ಲೌಕಿಕ, ವೈದಿಕ ಭಕ್ತಜನರಿಗೆ ಉಪದೇಶ ಮಾಡಿ, ಆಶೀರ್ವದಿಸಿ ಕಳುಹಿಸಿ ಸಾಯಂದೀಪಾರಾಧನೆಗೆ ಸಜ್ಜಾಗುತ್ತಿರುವಾಗ ಮಠದ ಸರ್ವಾಧಿಕಾರಿಗಳು ಬಂದು “ಸ್ವಾಮಿ, ಮಹಾಮಾತೃರಾದ ತಿಮ್ಮರಸರು ದರ್ಶನಾಕಾಂಕ್ಷಿಗಳಾಗಿ ಬಂದಿದ್ದಾರೆ” ಎಂದು ವಿಜ್ಞಾಪಿಸಿದರು. ಗುರುಗಳು “ಅವರನ್ನು ಗೌರವದಿಂದ ನಮ್ಮ ಏಕಾಂತಮಂದಿರಕ್ಕೆ ಕರೆತನ್ನಿ” ಎಂದಾಜ್ಞಾಪಿಸಿ ಅತ್ತತೆರಳಿದರು. ಸರ್ವಾಧಿಕಾರಿಗಳು ತಿಮ್ಮರಸನನ್ನು ಏಕಾಂತಮಂದಿರಕ್ಕೆ ಕರೆತಂದು ಶ್ರೀಯವರ ಭೇಟಿ ಮಾಡಿಸಿ ತೆರಳಿದರು.
ಚಿಂತಾಕ್ರಾಂತ ಮುಖದಿಂದ ಒಳಬಂದ ಸಾಳುವ ತಿಮ್ಮರಸು ಗುರುಗಳಿಗೆ ನಮಸ್ಕರಿಸಿ ಅವರು ತೋರಿದ ಚಿತ್ರಾಸನದಲ್ಲಿ ಕುಳಿತ. ಶ್ರೀಗಳವರು “ಮಹಾಮಾತ್ಯರು ಕೃಷ್ಣಗ್ರಹಗೃಹೀತಾತ್ಮರಾಗಿರುವಂತಿದೆಯಲ್ಲ” ಎಂದು ನಕ್ಕರು. ಅವರ ಮಾತು ಕೇಳಿ ಚಕಿತನಾದ ತಿಮ್ಮರಸರು “ಸರ್ವಜ್ಞರಿಗೆ ಅರಿವಾಗದಿರುವುದೇನಿದೆ ? ನಾನಿಂದು ಒಂದು ಸಮಸ್ಯೆಯ ಸುಳುವಿಗೆ ಸಿಕ್ಕಿ ಬಳಲುತ್ತಿದ್ದೇನೆ. ಮುಂದಿನ ದಾರಿ ಕಾಣದೆ ತಮ್ಮ ಮಾರ್ಗದರ್ಶನಕ್ಕಾಗಿ ಬಂದಿದ್ದೇನೆ” ಎಂದರುಹಿದನು.
ನಸುನಕ್ಕ ಗುರುಗಳು “ಕೃಷ್ಣ ರಕ್ಷಣೆಯ ವಿಚಾರವಲ್ಲವೇ ನಿಮ್ಮನ್ನು ಕಾಡುತ್ತಿರುವುದು ? ನಾವೆಲ್ಲರೂ ಕೃಷ್ಣಗ್ರಹಗೃಹೀತಾತ್ಮ - ರಾಗಿರುವುದರಿಂದ ಅದು ಸ್ವಾಭಾವಿಕವೇ ಅಲ್ಲವೇ ತಿಮ್ಮರಸರೇ ?” ಎಂದೆನಲು ತಿಮ್ಮರಸು “ಭೂತಭವಿಷ್ಯದ್ವರ್ತಮಾನ ವಿಚಾರಗಳನ್ನು ಕರತಲಾಮಲಕವಾಗಿ ಕಾಣುವ ಮಹಾನುಭಾವರಿಗೆ ವೇದ್ಯವಿಲ್ಲದ್ದೇನಿದೆ? ಸನ್ನಿಧಾನದವರು ಅಲೌಕಿಕನಾದ ಶ್ರೀಕೃಷ್ಣಗ್ರಹಗೃಹೀತಾತ್ಮರು! ನಾನಾದರೋ ಪಾಮರ. ನನಗೆ ಲೌಕಿಕ ಕೃಷ್ಣನೆಂಬ ಗ್ರಹ ಬಾಧಿಸುತ್ತಿದೆ! ನನ್ನ ಚಿಂತೆಗೆ ಅದೇ ಕಾರಣ” ಎಂದನು. ಶ್ರೀವ್ಯಾಸತೀರ್ಥರು “ಅಮಾತರೇ, ನಮ್ಮ ಅಲೌಕಿಕ ಕೃಷ್ಣನ ಅನುಗ್ರಹಕ್ಕೆ ಪಾತ್ರನಾದ. ಲೌಕಿಕ ಕೃಷ್ಣನ ಕ್ಷೇಮಾಭ್ಯುದಯದ ಚಿಂತೆ ನಮಗೂ ಇದೆ. ವಿಷಯವೇನೆಂದು ಸಂಕೋಚವಿಲ್ಲದೆ ತಿಳಿಸಿರಿ” ಎಂದಾಜ್ಞಾಪಿಸಿದರು.
ತಿಮ್ಮರಸು ನಿಟ್ಟುಸಿರು ಬಿಟ್ಟು “ಕೃಷ್ಣನ ಮೇಲೆ ತಮಗಿರುವ ಅನುಗ್ರಹವನ್ನು ಬಲ್ಲೆನಾದ್ದರಿಂದಲೇ ಸನ್ನಿಧಿಗೆ ಬಂದಿರುವೆನು ಗುರುದೇವ! ನಮ್ಮ ಸಾಮ್ರಾಟರು ಖಾಯಿಲೆಯಿಂದ ಹಾಸಿಗೆ ಹಿಡಿದು ಮಲಗಿರುವುದು ತಮಗೆ ವೇದ್ಯವೇ ಆಗಿದೆ. ಈಗ ನಾಲ್ಕಾರು ದಿನಗಳಿಂದ ಮಹಾಪ್ರಭುಗಳು ನನ್ನಲ್ಲಿ ಏಕಾಂತವಾಗಿ ಮುಂದೆ ಈ ಮಹಾಸಾಮ್ರಾಜ್ಯವನ್ನು ತಮ್ಮ ಕುಮಾರನೇ ಆಳುವಂತೆ ಮಾಡಬೇಕೆಂದು ಹೇಳುತ್ತಿದ್ದಾರೆ. ಇಂದು ನನ್ನನ್ನು ಕರೆಸಿಕೊಂಡು ತಿಮ್ಮರಸರೇ, ನೀವು ನನ್ನ ಆಪ್ತರು, ಹಿತೈಷಿಗಳು ನನ್ನ ನಂತರ ನನ್ನ ಪುತ್ರನೇ ಪಟ್ಟಕ್ಕೆ ಬರುವಂತೆ ಮಾಡುವುದಾಗಿ ನೀವು ಪ್ರಮಾಣಪೂರ್ವಕವಾಗಿ ವಚನ ಕೊಡಿರಿ. ಇದಕ್ಕೆ ನನ್ನ ಸಹೋದರರಾದ ಕೃಷ್ಣದೇವ-ಅಚ್ಯುತದೇವರು ಮಹಾಪರಾಕ್ರಮಿಗಳಾಗಿ ಪ್ರಬಲಿಸಿರುವುದರಿಂದ ಅಡ್ಡಿಯಾಗಿದೆ, ಅಚ್ಯುತನಗಿಂತ ನನಗೆ ಕೃಷ್ಣದೇವನದೇ ಭಯವಾಗಿದೆ. ಅವನಿರುವವರೆಗೆ ನನ್ನಾಸೆ ಫಲಿಸಲಾರದು! ಆದ್ದರಿಂದ ನನ್ನ ಮಗನ ಅಭ್ಯುದಯಕ್ಕಾಗಿ ಕೃಷ್ಣನ ಬಲಿದಾನವಾಗಲೇಬೇಕಾಗಿದೆ. ನೀವು ಈ ಕಂಟಕವನ್ನು ಪರಿಹರಿಸಿ ಅಥವಾ ಕೃಷ್ಣನ ಕಣ್ಣು ಕಿತ್ತಿಸಿಬಿಟ್ಟು ನನ್ನ ಮಗನ ಹಾದಿ ಸುಗಮ ಮಾಡಿರಿ, ನನಗಾಗಿ ನೀವೀಕಾರ್ಯ ಮಾಡಲೇಬೇಕು. ಹಾಗೆಂದು ನೀವೀಗ ನನಗೆ ವಚನ ಕೊಡಬೇಕು" ಎಂದು ದುಂಬಾಲು ಬಿದ್ದರು. ಅವರ ಮಾತು ಕೇಳಿ ವಜ್ರಾಘಾತವಾದಂತಾಯಿತು. ಏನು ಹೇಳಲೂ ತೋಚದೆ, “ಪ್ರಭು! ಈ ವಿಚಾರವನ್ನು ಯೋಚಿಸಿ ಕಾರ್ಯಪ್ರವೃತ್ತನಾಗಲು ಒಂದೆರಡು ದಿನ ಅವಕಾಶ ದಯಪಾಲಿಸಿದಲ್ಲಿ ವಿಚಾರ ಮಾಡಿ ಪ್ರಭುಗಳ ಆಕಾಂಕ್ಷೆ ಈಡೇರಿಸುವ ಮಾರ್ಗ ಹುಡುಕಿ, ನಂತರ ಸನ್ನಿಧಿಯಲ್ಲಿ ವಿಜ್ಞಾಪಿಸುತ್ತೇನೆ” ಎಂದು ಹೇಳಿಬಂದೆ. ನನ್ನ ಮನಸ್ಸು ತುಂಬಾ ಉದ್ವಿಗ್ನವಾಯಿತು. ಚಿಂತೆಯಿಂದ ಮುಂದಿನ ದಾರಿ ಕಾಣದಂತಾಗಿ ಸಾಮ್ರಾಜ್ಯ ಹಿತೈಷಿಗಳಾದ ತಮ್ಮ ಸನ್ನಿಧಿಗೆ ಬಂದಿದ್ದೇನೆ. ಈ ವಿಷವರ್ತುಲದಿಂದ ಪಾರಾಗಿ ಕನ್ನಡನಾಡಿನ ಹಿತ ಸಾಧಿಸಲು ತಾವೇ ನನಗೆ ಮಾರ್ಗ ತೋರಿ ನೆರವಾಗಬೇಕು? ಎಂದು ಕಣ್ಣೀರು ಸುರಿಸುತ್ತಾ ವಿಜ್ಞಾಪಿಸಿದನು.
ಅಮಾತ್ಯರನ್ನು ಸಮಾಧಾನಪಡಿಸುತ್ತಾ ಶ್ರೀಗಳವರು “ನಮ್ಮ ವೀರನರಸಿಂಹನಿಗೆ ಈ ಬುದ್ದಿಯೇಕೆ ಬಂದಿತು ? ಹೂಂ, ವಿಧಿಯ ಆಟದ ಮುಂದೆ ದೇವತೆಗಳೇ ಪಾರಾಗಲಾರರೆಂದ ಮೇಲೆ ಪಾಪ, ಹುಲುಮಾನವರ ಪಾಡೇನು? ಮಹತ್ವಾಕಾಂಕ್ಷೆ - ಸ್ವಾರ್ಥಗಳು ಹೃದಯದಲ್ಲಿ ತಾಂಡವಿಸಹತ್ತಿದಾಗ ಮಾನವ - ದಾನವನಾಗುತ್ತಾನೆ! ಸತ್ಯ-ಧರ್ಮಗಳನ್ನು ಗಾಳಿಗೆ ತೂರಿಬಿಡುತ್ತಾನೆ. ಇದಕ್ಕೆ ವೀರನರಸಿಂಹನೇ ಈಗ ದೃಷ್ಟಾಂತ! ಇರಲಿ, ನೀವು ಚಿಂತಿಸಬೇಡಿ, ಎಲ್ಲವೂ ಶುಭವಾಗಿ ಪರಿಣಮಿಸುವುದೆಂದು ಶ್ರೀಹರಿ ನಮಗೆ ಪ್ರೇರಿಸುತ್ತಿದ್ದಾನೆ” ಎಂದು ಹೇಳಿದರು.
ಆಗ ತಿಮ್ಮರಸು “ಮಹಾಸ್ವಾಮಿ, ನನ್ನ ಮುಂದಿನ ಕರ್ತವ್ಯವೇನು ? ಮಹಾಪ್ರಭುಗಳ ಸ್ವಾರ್ಥಕ್ಕಾಗಿ ಸದ್ಗುಣ ಪಂಡಿತನೂ, ಅಸಹಾಯಶೂರನೂ, ಗುರುವಿಧೇಯಚರಿತನೂ, ಸಾಮ್ರಾಜ್ಯದ ಆಶಾಕಿರಣನೂ, ಪ್ರಜಾವತ್ಸಲನೂ ಆದ ಕೃಷ್ಣದೇವನನ್ನು ಬಲಿಕೊಡುವುದೇ ? ಅಥವಾ ಪ್ರಭುಗಳನ್ನು ಎದುರಿಸಿ ಸಾಮ್ರಾಜ್ಯದ ಹಿತವನ್ನು ಸಾಧಿಸುವುದೇ ? ಗುರುವರ್ಯ! ನನಗೆ ದಿಕ್ಕೇ ತೋಚದಂತಾಗಿದೆ. ನಿಮಗೆ ಶರಣು ಬಂದಿದ್ದೇನೆ. ಅನುಗ್ರಹಿಸಬೇಕು” ಎಂದು ಪ್ರಾರ್ಥಿಸಿದನು.
ಶ್ರೀವ್ಯಾಸತೀರ್ಥರು ಮಂದಹಾಸ ಬೀರಿ “ಭಯಪಡಬೇಡಿ, ಮಹಾಮಂತ್ರಿಗಳೇ, ನೀವು ಒಂದೆರಡು ದಿನ ಅವಧಿ ಬೇಡಿರುವುದು ಒಳಿತಾಯಿತು. ಈಗ ಮುಖ್ಯವಾಗಿ ಕೆಲದಿನ ಕೃಷ್ಣದೇವನು ಯಾರ ಕಣ್ಣಿಗೂ ಬೀಳದೆ ರಹಸ್ಯಸ್ಥಾನದಲ್ಲಿರಬೇಕು” ಎಂದೆನಲು ತಿಮ್ಮರಸು - “ಗುರುವರ್ಯ! ದಿನಕ್ಕೆ ನಾಲ್ಕಾರು ಬಾರಿ ಸಚಿವಾಲಯಕ್ಕೆ ಬರುತ್ತಿದ್ದ ಕೃಷ್ಣದೇವರಾಯರು ಇಂದು ಬರದಿರುವುದು ಭಯಕ್ಕೆ ಕಾರಣವಾಗಿದೆ. ಅವರಿಗೆ ಅಪಾಯ ಸಂಭವಿಸಿರಬಹುದೇ ಎಂದು ನನ್ನ ಮನಸ್ಸು ಕಾತರಿಸುತ್ತಿದೆ” ಎ೦ದನು.
ವ್ಯಾಸಮುನಿಗಳು ಹಸನ್ಮುಖಿಗಳಾಗಿ “ಕೃಷ್ಣದೇವ ಸುರಕ್ಷಿತವಾಗಿದ್ದಾನೆ. ಅವನು ಪ್ರಾತಃಕಾಲ ವ್ಯಾಯಾಮ ಶಾಲೆಯಿಂದ ಇಲ್ಲಿಗೆ ಬಂದಿದ್ದನು. ಅವನಿಗೆ ಕೆಲದಿನ ಏಕಾಂತವಾಗಿರಬೇಕೆಂದು ಹೇಳಿ ನಮ್ಮ ಮಠದ ಪಂಡಿತನೊಡನೆ ನಿಮ್ಮ ಮನೆಗೆ ಕಳಿಸಿದ್ದೇವೆ” ಎಂದರು.
ಆಶ್ಚರ್ಯಾನಂದತುಂದಿಲನಾದ ತಿಮ್ಮರಸು “ನೀವು ಮಹಾಮಹಿಮರು ಗುರುದೇವ. ಕೃಷ್ಣದೇವರಾಯರಲ್ಲಿ ತಮಗೆಂಥ ವಾತ್ಸಲ್ಯ! ಸಾಮ್ರಾಜ್ಯ ಹಿತಚಿಂತನೆಯಲ್ಲಿ ತಮಗೆಷ್ಟು ಕಾತುರ! ಧನ್ಯನಾದೆ ಸ್ವಾಮಿ, ನನ್ನ ಮುಂದಿನ ಕರ್ತವ್ಯವನ್ನು ಬೋಧಿಸಿ ಅನುಗ್ರಹಿಸಿರಿ” ಎಂದು ವಿನಂತಿಸಿದನು.
ವ್ಯಾಸರಾಜರು “ಅಮಾತರೇ, “ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನ ಬ್ರೂಯಾತ್ ಸತ್ಯಮಪ್ರಿಯಂ | ಪ್ರಿಯಂ ಚ ನಾನೃತಂ ಬ್ರೂಯಾತ್ ಏಷಧರ್ಮಸ್ಸನಾತನಃ” ಎಂದು ಪ್ರಮಾಣವಿದೆ. ಅಂದರೆ ಸತ್ಯವನ್ನೂ, ಪ್ರಿಯವಾದುದನ್ನೂ ಹೇಳಬೇಕು. ಅಪ್ರಿಯವಾದ ಸತ್ಯವನ್ನು ಹೇಳಬಾರದು. ಪ್ರಿಯವಾಗಲೆಂದು ಸುಳ್ಳನ್ನೂ ಹೇಳಬಾರದು. ಇದೇ ಸನಾತನವಾದ ಧರ್ಮ. ಆದ್ದರಿಂದ ಪ್ರಭುವಿಗೆ ಸಮಾಧಾನವಾಗುವಂತೆಯೂ ಇರಬೇಕು. ಕನ್ನಡ ಸಾಮ್ರಾಜ್ಯದ ಹಿತರಕ್ಷಣೆಯೂ ಆಗಬೇಕು. ನೀವು ರಾಜತಂತ್ರ ಧುರೀಣರು ! ನಿಮಗೆ ನಾವು ಹೆಚ್ಚೇನು ಹೇಳುವುದಿದೆ? ನಿಮಗೆ ಭಗವಂತನೇ ಪ್ರೇರಣೆ ಮಾಡಿ ಎಲ್ಲವನ್ನೂ ಶುಭಾಂತ್ಯವಾಗುವಂತೆ ಮಾಡಿಸುವನು. ನೀವು ಕೆಲಕಾಲ ಕೃಷ್ಣದೇವ ರಹಸ್ಯವಾಗಿರುವಂತೆ ನೋಡಿಕೊಳ್ಳಿರಿ ಮತ್ತು ಪ್ರಭುಗಳನ್ನು ಕಂಡು ಅವರಿಚ್ಛೆ ನೆರವೇರಿಸುವುದಾಗಿ ಭರವಸೆ ಕೊಡಿರಿ. ಉಳಿದ ವಿಚಾರ ಮುಂದೆ ಆಲೋಚಿಸೋಣ” ಎಂದು ಹೇಳಿದರು. ತಿಮ್ಮರಸು ಶ್ರೀಯವರ ಉಪದೇಶಾರ್ಥವಾದವನಂತೆ ನಸುನಕ್ಕು ಗುರುಗಳಿಗೆ ವಂದಿಸಿ ಮನೆಗೆ ತೆರಳಿದನು.
ಮಹಾಮಂತ್ರಿ ತಿಮ್ಮರಸು ಮರುದಿನ ವೀರನರಸಿಂಹ ಪ್ರಭುವನ್ನು ಸಂದರ್ಶಿಸಿ ಅವರ ಆಕಾಂಕ್ಷೆ ಪೂರ್ಣ ಮಾಡುವುದಾಗಿ ಭರವಸೆ ನೀಡಿದನು. ಮಹಾಪ್ರಭು ಸಂತಸಗೊಂಡ, ನಿಶ್ಚಿಂತನಾದ. ಒಂದೆರಡು ದಿನಗಳಾದ ಮೇಲೆ ತಿಮ್ಮರಸು ಏಕಾಂತವಾಗಿ ಪ್ರಭುಗಳಿಗೆ ಕೃಷ್ಣದೇವನನ್ನು ಸಂಹರಿಸಿರುವುದಾಗಿ ಹೇಳಿ ಸತ್ತ ಮೇಕೆಯ ಕಣ್ಣುಗಳನ್ನು ಕೃಷ್ಣದೇವನ ಕಣ್ಣುಗಳೆಂದು ದೊರೆಗೆ ತೋರಿಸಿದನು. ವೀರನರಸಿಂಹ ಹರ್ಷಿತನಾಗಿ ತನ್ನ ಮಗನ ಭವಿಷ್ಯ - ಅಭ್ಯುದಯದ ಹೊಣೆಯನ್ನು ಮಹಾಮಂತ್ರಿಗೆ ವಹಿಸಿ ರಾಜಮುದ್ರಿಕೆಯನ್ನು ಅವನಿಗೆ ಕೊಟ್ಟು ತನ್ನ ನಿಧನಾನಂತರ ಮಗನಿಗೆ ಪಟ್ಟ ಕಟ್ಟಬೇಕೆಂದು ಆಜ್ಞಾಪಿಸಿ, ಗೌರವಿಸಿ ಕಳುಹಿಸಿದನು.
ವೀರನರಸಿಂಹನು ಮರಣಾಸನ್ನನಾಗಿರುವುದೂ, ಅದೇ ಸಮಯದಲ್ಲಿ ಹತ್ತಾರು ದಿನಗಳಿಂದ ಕೃಷ್ಣದೇವರಾಯನು ಕಾಣೆಯಾಗಿರುವುದು, ಅರಮನೆಯಲ್ಲಿ ಗುಸುಗುಸು ಮಾತಾಡುತ್ತಾ ಎಲ್ಲರೂ ಚಿಂತಾಕ್ರಾಂತರಾಗಿರುವುದನ್ನು ಗಮನಿಸಿ ರಾಜಧಾನಿಯ ಪ್ರಜಾಜನರು ಅದರ ಮರ್ಮವರಿಯಲಾಗದೆ ಮನಬಂದಂತೆ ಮಾತಾಡಹತ್ತಿದರು. ಜನರು ಊಹಾಪೋಹ ಮಾಡಲಾರಂಭಿಸಿದರು. ಕೃಷ್ಣದೇವರಾಯನು ಇದ್ದಕ್ಕಿದ್ದಂತೆ ಕಣ್ಮರೆಯಾಗಿರುವುದರಲ್ಲಿ ಯಾವುದೋ ರಾಜಕೀಯ ತಂತ್ರವಿರಬೇಕೆಂದು ಜನ ಊಹಿಸಿದರು. ವೀರನರಸಿಂಹನು ಮಹಾಪರಾಕ್ರಮಿಯೂ, ಪ್ರಜಾವತ್ಸಲನೂ, ಗುಣಶೀಲನೂ, ಜನಪ್ರಿಯನೂ ಆದ ಕೃಷ್ಣದೇವರಾಯರನನ್ನು ಕೊಲ್ಲಿಸಿರುವನೆಂಬ ವಾರ್ತೆ ಎಲ್ಲೆಡೆ ಹರಡಿ ಜನರು ದುಃಖಿತರಾದರು. ಸಾಮ್ರಾಟನೇ ತನ್ನ ಪುತ್ರನು ರಾಜ್ಯವಾಳಬೇಕೆಂಬ ದುರಾಶೆಯಿಂದ ಈ ಕ್ರೂರಕರ್ಮವನ್ನು ಮಾಡಿಸಿದ್ದಾನೆಂದು ಜನರು ವೀರನರಸಿಂಹನನ್ನು ದೂಷಿಸಹತ್ತಿದರು. ಕೃಷ್ಣದೇವನ ಶೌರ್ಯ, ಪರಾಕ್ರಮ, ವಿದ್ಯಾವಿನಯ, ಸದಾಚಾರ, ಜನಪ್ರೇಮಾದಿಗಳನ್ನು ನೆನೆನೆನೆದು ಪ್ರಜರು ರಾಜಕೀಯ ಅಧಿಕಾರಿಗಳು ಸಚಿವ-ಸಾಮಂತರೇ ಮೊದಲಾಗಿ ಸಕಲರೂ ವ್ಯಸನಾಕ್ರಾಂತರಾದರು.
ಕೆಲದಿನಗಳಾದ ಮೇಲೆ ವೀರನರಸಿಂಹಪ್ರಭುವು ಒಂದು ದಿನ ಇಹಲೋಕ ವ್ಯಾಪಾರವನ್ನು ಮುಗಿಸಿ ಕೊನೆಯುಸಿರೆಳೆದನು. ಸಾಮ್ರಾಟನ ನಿಧನದಿಂದ ಸರ್ವರೂ ದುಃಖಭರಿತರಾದರು. ವೀರನರಸಿಂಹನ ಅಂತ್ಯಕ್ರಿಯೆ ಮತ್ತು ಕರ್ಮಾದಿಗಳೆಲ್ಲವೂ ಪೂರ್ಣವಾಯಿತು.
ವೀರನರಸಿಂಹನ ಅಂತ್ಯಕ್ರಿಯೆಗಳೆಲ್ಲವೂ ಸಾಂಗವಾದ ಮೇಲೆ ಅಮಾತ್ಯ ತಿಮ್ಮರಸು ರಾಜ್ಯ ಹಿತೈಷಿಗಳ ಸಭೆಯಲ್ಲಿ ಮುಂದಿನ ಸಾಮ್ರಾಟರನ್ನಾರಿಸುವ ವಿಚಾರವನ್ನು ಪ್ರಸ್ತಾಪಿಸಿದಾಗ ಸರ್ವರೂ, “ಈಗ ಕೃಷ್ಣದೇವರಾಯರಿದ್ದಲ್ಲಿ ಈ ವಿಚಾರ ವಿನಿಮಯಕ್ಕೆ ಅವಕಾಶವೇ ಇರುತ್ತಿರಲಿಲ್ಲ. ಈ ಮಹಾಸಾಮ್ರಾಜ್ಯಕ್ಕೆ ಅವರೇ ಅರ್ಹರಾಗಿದ್ದರು. ಅವರು ಕಣ್ಮರೆಯಾಗಿರುವುದರಿಂದ ಅವರು ಬದುಕಿರುವ ಬಗೆಗೆ ಸಂದೇಹವಾಗಿದೆ. ಅವರು ಇನ್ನಿಲ್ಲವೆಂದೇ ಎಲ್ಲರೂ ಆಡಿಕೊಳ್ಳುತ್ತಿದ್ದಾರೆ. ಮಹಾಮಾತ್ಯರೂ ಈ ಬಗ್ಗೆ ಏನೂ ಹೇಳದೇ ಮೌನವಹಿಸಿದ್ದರಿಂದ ಸಂದೇಹಕ್ಕೆ ಹೆಚ್ಚು ಕಾರಣವಾಗಿದೆ” ಮುಂತಾಗಿ ಮಾತನಾಡಿದರು.
ಆಗ ತಿಮ್ಮರಸು “ನೀವೆಲ್ಲರೂ ಕೃಷ್ಣದೇವರಾಯರೇ ಸಾರ್ವಭೌಮರಾಗಬೇಕೆಂದು ಆಶಿಸುತ್ತಿರುವಿರಿ, ಅವರು ಕಣ್ಣರೆಯಾಗಿರುವುದರಿಂದ ವಿವಿಧ ಊಹಾಪೋಹವೆದಿದೆ. ನಿಜ, ಒಂದು ವೇಳೆ ಕಣ್ಮರೆಯಾಗಿರುವ ಕೃಷ್ಣದೇವರಾಯರು ಬಂದರೇನು ಮಾಡುವಿರಿ?” ಎಂದು ಪ್ರಶ್ನಿಸಲು ಎಲ್ಲರೂ “ನಮಗಷ್ಟು ಭಾಗ್ಯವಿದೆಯೇ ? ಅವರು ಜೀವಂತವಾಗಿರುವರೇ? ಅಮಾತ್ಯರೇ, ನಿಮ್ಮ ಮಾತು ಸತ್ಯವಾಗಲಿ! ಕೃಷ್ಣದೇವರಾಯರು ಬದುಕಿದ್ದರೆ......ಅವರು ನಮ್ಮ ದೃಷ್ಟಿಗೆ ಗೋಚರಿಸಿದರೆ ಅವರನ್ನೇ ಈ ಮಹಾಸಾಮ್ರಾಜ್ಯದ ಸಾಮ್ರಾಟರನ್ನಾಗಿ ಮಾಡುತ್ತೇವೆ” ಮುಂತಾಗಿ ಸಂತೋಷದಿಂದ ಹೇಳಿದರು.
ಆಗ ತಿಮ್ಮರಸು “ಸಂತೋಷ, ನಾನು ಕೃಷ್ಣದೇವರಾಯರನ್ನು ಹುಡುಕಿಸಿ ಕರೆತರಲು ಎಲ್ಲಾ ಪ್ರಯತ್ನ ಮಾಡುತ್ತೇನೆ. ಮತ್ತೆ ಇನ್ನು ಮೂರುದಿನದ ಮೇಲೆ ಸಭೆ ಸೇರೋಣ” ಎಂದು ಹೇಳಲು ಅಂದಿನ ಸಭೆಯು ಮುಕ್ತಾಯವಾಯಿತು.
ರಾಜಮಂದಿರದ ಮಂತ್ರಾಗಾರದಲ್ಲಿ ಆಪ್ತಾಲೋಚನೆ ನಡೆದಿದೆ. ದಿವಂಗತ ವೀರನರಸಿಂಹಪ್ರಭುಗಳ ನಿಧನದಿಂದ ಬರಿದಾಗಿರುವ ಸಿಂಹಾಸನದಲ್ಲಿ ಮಂಡಿಸಿ ಸಾಮ್ರಾಜ್ಯವನ್ನಾಳುವ ಮಹನೀಯನನ್ನು ನಿರ್ಧರಿಸಲು ರಾಜಗುರುಗಳಾದ ಶ್ರೀವ್ಯಾಸತೀರ್ಥರ ಅಧ್ಯಕ್ಷತೆಯಲ್ಲಿ ಸಾಮ್ರಾಜ್ಯದ ಮಹಾಮಂತ್ರಿಗಳು, ಸಚಿವಮಂಡಲಿ, ಸೇನಾನಾಯಕರು, ಮಹಾದಂಡನಾಯಕರು, ಢಣಾಯಕರು, ರಾಜಸಭೆಯ ಪ್ರಮುಖ ವ್ಯಕ್ತಿಗಳು, ಸ್ವಾಮಿನಿಷ್ಠ ಸೇವಕರು, ನಗರದ ಪ್ರಮುಖ ಪೌರರು-ರಾಜಬಂಧುಗಳು, ಹೀಗೆ ಎಲ್ಲರೂ ಸೇರಿದ್ದಾರೆ. ದಿವಂಗತ ವೀರನರಸಿಂಹರಾಯರ ಸಹೋದರರಾದ ಅಚ್ಯುತದೇರಾಯ, ರಂಗರಾಯ ಮತ್ತು ಅವರ ಹಿತೈಷಿ ತಿಮ್ಮರಸರ ತಮ್ಮ ಗುಂಡುರಾಜರೂ ಉಪಸ್ಥಿತರಾಗಿದ್ದಾರೆ.
ಆಗ ಎಲ್ಲರ ಪರವಾಗಿ ಮೇಲೆದ್ದು ನಿಂತು ಗುರುಗಳಿಗೊಂದಿಸಿ, ಮಹಾಮಾತ್ಯ ತಿಮ್ಮರಸರು ಹೇಳಲಾರಂಭಿಸಿದರು - “ಕನ್ನಡ ಸಾಮ್ರಾಜ್ಯದ ಪೂಜ್ಯ ರಾಜಗುರುಗಳೇ, ಸಾಮ್ರಾಜ್ಯ ಹಿತಚಿಂತಕರೇ, ಇಂದು ನಾಡಿನ ಭವಿಷ್ಯವನ್ನು ನಿರ್ಧರಿಸಲು ನಾವಿಲ್ಲಿ ಸೇರಿದ್ದೇವೆ, ಆಳಿದ ಮಹಾಪ್ರಭುಗಳ ನಿಧನದಿಂದಾಗಿ ಸಾಮ್ರಾಜ್ಯ ಸಿಂಹಾಸನ ಬರಿದಾಗಿದೆ. ನಾಡಿನ ಒಳ-ಹೊರ ಶತ್ರುಗಳು, ಆಜೀವಶತ್ರುಗಳಾದ ಬಹುಮನಿ ಸುಲ್ತಾನರಿಗೆ ತಮ್ಮ ದ್ವೇಷ ಸಾಧಿಸಿ ಸಾಮ್ರಾಜ್ಯಕ್ಕೆ ಹಾನಿಯನ್ನುಂಟುಮಾಡಲು ಸಂದರ್ಭ ದೊರಕಿದಂತಾಗಿದೆ, ಹಾಗಾಗಲು ಅವಕಾಶವಾಗದಂತೆ ನಾವು ಈ ಮಹಾಸಾಮ್ರಾಜ್ಯವನ್ನಾಳಲು ಸಮರ್ಥರಾದವರನ್ನು ನಿರ್ಧರಿಸಿ, ಅವರಿಗೆ ಪಟ್ಟಕಟ್ಟಿ, ಸಾಮ್ರಾಜ್ಯದ ಹಿತರಕ್ಷಣೆ ಮಾಡುವ ದೊಡ್ಡ ಹೊಣೆ ನಮ್ಮೆಲ್ಲರ ಮೇಲೆ ಬಿದ್ದಿದೆ. ಈ ಮಹತ್ಕಾರ್ಯದಲ್ಲಿ ಪೂಜ್ಯರಾದ ಶ್ರೀವ್ಯಾಸತೀರ್ಥರು ನಮಗೆ ಮಾರ್ಗದರ್ಶನ ಮಾಡಬೇಕೆಂದು ಎಲ್ಲರ ಪರವಾಗಿ ಪ್ರಾರ್ಥಿಸುತ್ತೇನೆ” ಎಂದು ವಿಜ್ಞಾಪಿಸಿ ಕುಳಿತರು. ಸಭೆಯು ನಿಶಬ್ದವಾಯಿತು.
ಆಗ ಧೀರ ಗಂಭೀರ ಧ್ವನಿಯಿಂದ ಶ್ರೀವ್ಯಾಸರಾಜ ಗುರುಗಳು “ಕನ್ನಡ ಸಾಮ್ರಾಜ್ಯದ ಆಧಾರಸ್ತಂಭರಾದ ವೀರಪುರುಷರೇ, ವೀರನರಸಿಂಹ ಪ್ರಭುಗಳನ್ನು ಕಳೆದುಕೊಂಡು ನಾವು ಅನಾಥರಾಗಿದ್ದೇವೆ, ಅನಾಥರಾಗಿರುವ ಸಾಮ್ರಾಜ್ಯಕ್ಕೆ ಈಗ ಸಮರ್ಥನಾದ ನಾಥ ಬೇಕಾಗಿದ್ದಾನೆ, ಇದು ಯಾರ ವೈಯಕ್ತಿಕ ಪ್ರಶ್ನೆಯಲ್ಲ. ಸಮಗ್ರ ಸಾಮ್ರಾಜ್ಯದ ಭವಿಷ್ಯದ ಪ್ರಶ್ನೆಯಾಗಿದೆ! ನಾವಿಂದು ಸಾಮ್ರಾಜ್ಯದ ಹಿತಕ್ಕಾಗಿ ಪ್ರಾರ್ಥಿಸುತ್ತಾಧ್ಯಾನಮಗ್ನರಾಗಿರುವಾಗ ನಮ್ಮ ಹೃದಯಪಟಲದಲ್ಲಿ ಭಗವಂತ ತೋರಿಸಿದ ಕನ್ನಡನಾಡಿನ ಭವ್ಯ ಭವಿಷ್ಯದ ಸುಂದರ ದೃಶ್ಯಗಳನ್ನು ಕಂಡು ಪುಳಕಿತರಾದೆವು. ಬಹಿರ್ಮುಖರಾಗಿ ಅದನ್ನೇ ನೆನೆನೆದು ಹಿಗ್ಗುತ್ತಿರುವಾಗ ಗುಂಡುರಾಜರು ಈ ಸಭೆಗೆ ಬರಬೇಕೆಂದು ಆಹ್ವಾನಿಸಿ ಕರೆತಂದರು. ನಾವು ಸನ್ಯಾಸಿಗಳು, ನಾವು ಯಾರೊಬ್ಬರ ಪಕ್ಷಪಾತಿಗಳೂ ಅಲ್ಲ, ನಾವು ಸರ್ವವನ್ನು ತ್ಯಜಿಸಿದರೂ ಪರಮಾತ್ಮನ ಆಜ್ಞೆಯಂತೆ ಸರ್ವಭೂತರಹಿತೇರತರಾಗಿ ಸಮಸ್ತಲೋಕಕಲ್ಯಾಣ, ಕನ್ನಡ ಸಾಮ್ರಾಜ್ಯದ ಹಿತಸಾಧನೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಅಂತೆಯೇ ನಾವಿಲ್ಲಿಗೆ ಬಂದಿದ್ದೇವೆ. ಶ್ರೀಹರಿಯ ಸಂಕಲ್ಪದಂತೆ ನಾವಿಂದು ಧ್ಯಾನದಶೆಯಲ್ಲಿ ಕಂಡ ಸಾಮ್ರಾಜ್ಯದ ಭವಿಷ್ಯದ ಭವ್ಯಚಿತ್ರವನ್ನು ನಿಮಗೆ ಪ್ರಾಮಾಣಿಕವಾಗಿ ನಿರೂಪಿಸುತ್ತೇವೆ. ಅದು ಇಂದು ನಿಮ್ಮ ಮುಂದಿರುವ ಪ್ರಶ್ನೆಗೆ ದಾರಿದೀಪ- ವಾಗಬಹುದೆಂದು ನಾವು ಭಾವಿಸುತ್ತೇವೆ” ಎಂದರು.
ಸಭೆಯಲ್ಲಿ ವಿದ್ಯುತ್ತಂಚಾರವಾದಂತಾಯಿತು. ಎಲ್ಲರೂ ವಿಸ್ಮಯ - ಆಶ್ಚರ್ಯ - ಆನಂದಮಗ್ನರಾಗಿ ಗುರುಗಳು ಹೇಳುವುದನ್ನು ಕೇಳಲು ಕುತೂಹಲಾವಿಷ್ಟರಾಗಿ ನಿಶ್ಯಬ್ದರಾಗಿ ಕುಳಿತರು. ಶ್ರೀವ್ಯಾಸರಾಜರು ತಮ್ಮ ಮಾತನ್ನು ಮುಂದುವರೆಸಿ ಹೀಗೆ ಹೇಳತೊಡಗಿದರು - “ನಾವು ಹೇಳುವುದನ್ನು ಸಾವಧಾನವಾಗಿ ಆಲಿಸಿರಿ, ಧ್ಯಾನಾಸಕ್ತರಾಗಿದ್ದ ನಾವು ಇಂದು ಅತ್ಯುನ್ನತ ಶಿಖರವನ್ನೇರಿದ್ದ ಕನ್ನಡ ಸಾಮ್ರಾಜ್ಯದ ಸುವರ್ಣಯುಗವನ್ನೇ ಕಂಡೆವು! ಅನೇಕ ದೇವಾಲಯಗಳು, ಸಿರಿಸಂಪತ್ತಿನಿಂದ ಮೆರೆಯುತ್ತಿದ್ದ ಪ್ರಜಾಜನರು, ಐಶ್ವರ್ಯಪೂರ್ಣವಾದ ರಾಜಭಂಡಾರ, ವಿವಿಧ ಶಿಲ್ಪಕಲೆಗಳನ್ನು ಹೊರಸೂಸುವ ಸುಂದರ ಭವ್ಯಮಂದಿರಗಳು, ಜಗತ್ತನ್ನೇ ಜಯಿಸಲು ಶಕ್ತವಾದ ಗಜ-ತುರಗ-ರಥ-ಸೈನಿಕರಿಂದ ಕೂಡಿ ಮಹಾಸಮುದ್ರದಂತಿರುವ ಸೈನ್ಯಗಳನ್ನು ಕಂಡೆವು. ಕೈಬಿಟ್ಟು ಹೋಗಿದ್ದ ಕನ್ನಡನಾಡಿನ ಅನೇಕ ಭಾಗಗಳು ಮತ್ತೆ ಸಾಮ್ರಾಜ್ಯಕ್ಕೆ ಸೇರಿ, ಅತ್ಯಂತ ವಿಸ್ತಾರವಾದ ಸುಖೀಸಾಮ್ರಾಜ್ಯವನ್ನು ಕಂಡೆವು. ಅನೇಕ ವಿದ್ಯಾಕೇಂದ್ರಗಳು ಸಹಸ್ರ ಸಂಖ್ಯಾತ ವಿದ್ಯಾರ್ಥಿಗಳಿಂದ ಕೂಡಿ ಸಾಕ್ಷಾತ್ ಸರಸ್ವತಿಯ ಆಸ್ಥಾನದಂತೆ ಮೆರೆಯುತ್ತಿದ್ದ ವಿಶ್ವವಿದ್ಯಾನಿಲಯವನ್ನು ಕಂಡೆವು, ಗುಡಿ-ಗುಂಡಾರ-ಮಠಗಳಲ್ಲಿ ಭಗವಂತನ ಸೇವೆ, ವೇದಘೋಷ, ಭಜನೆಗಳಿಂದ ಕಂಗೊಳಿಸುತ್ತಿದ್ದ ರಾಜಧಾನಿಯನ್ನು ಕಂಡೆವು. ಸಕಲವಿದ್ಯೆಗಳು, ಕಲೆಗಳು, ಸಾಹಿತ್ಯ, ಕನ್ನಡಭಾಷೆ-ಅಪೂರ್ವ ವಾಲ್ಮೀಯವು ಅತ್ಯುನ್ನತ ಮಟ್ಟಕ್ಕೇರಿದ್ದನ್ನು ಕಂಡೆವು. ಪಂಡಿತರು, ಸಾಹಿತಿಗಳು, ಕವಿಗಳು, ಸಂಗೀತ, ಶಿಲ್ಪ, ವಿವಿಧ ಕಲೆಗಳಲ್ಲಿ ಪರಿಣಿತರಾದವರು ರಾಜಮನ್ನಣೆಗೆ ಪಾತ್ರರಾದದ್ದನ್ನು ಕಂಡೆವು. ಅಖಂಡ ಸಾಮ್ರಾಜ್ಯದ ಪ್ರಜಾಜನರು ಧರ್ಮಿಷ್ಠರಾಗಿ ಸುಖ-ಸಂತೋಷದಿಂದ ನಲಿಯುತ್ತಾ, ಶಾಂತಿ-ಸಮಾಧಾನದಿಂದ ಬಾಳುವುದನ್ನು ಕಂಡೆವು. ದೇಶವಿದೇಶ-ದೀಪಾಂತರದ ರಾಜಮಹಾರಾಜರು, ಭಾರತದೇಶದ ಇನ್ನಿತರ ರಾಜಾಧಿರಾಜರು ಕನ್ನಡ ಸಾಮ್ರಾಜ್ಯಕ್ಕೆ ವಿಧೇಯರಾಗಿ, ಮಿತ್ರರಾಗಿ ವರ್ತಿಸುವ ಅಪೂರ್ವ ದೃಶ್ಯವನ್ನು ನೋಡಿದೆವು. ಒಟ್ಟಿನಲ್ಲಿ ಕನ್ನಡ ಸಾಮ್ರಾಜ್ಯದ ಸುವರ್ಣಯುಗವನ್ನೇ ಕಂಡು ರೋಮಾಂಚಿತರಾದೆವು!
ಇಂತು ಸಾಮ್ರಾಜ್ಯದ ಅವರ್ಣನೀಯ, ಅಪೂರ್ವ ಅಭ್ಯುದಯಕ್ಕೆ ಕಾರಣಪುರುಷನಾರೆಂದು ನಾವು ಯೋಚಿಸುತ್ತಿರುವಾಗ “ಕೃಷ್ಣ, ಕೃಷ್ಣ” ಎಂಬ ಮಧುರಧ್ವನಿ ಕೇಳಿಸಿತು! ಅದೇ ಕ್ಷಣ ಸರ್ವಾಭರಣ ಭೂಷಿತನಾಗಿ ವಿಲಕ್ಷಣ ತೇಜಸ್ಸಿನಿಂದ ರತ್ನಸಿಂಹಾಸನದಲ್ಲಿ ಮಂಡಿಸಿ, ಸಚಿವ-ಸಾಮಂತ-ಸೇನಾನಿ ಮಿತ್ರರಾಜರು-ಪೌರಜಾನಪದರು-ಪಂಡಿತ-ಕವಿ-ಸಾಹಿತಿ- ಕಲೆಗಾರರಿಂದ ಓಲೈಸಿಕೊಳ್ಳುತ್ತಾ ಕುಳಿತಿರುವ ಕೃಷ್ಣದೇವರಾಯನನ್ನು ಕಂಡು ಪುಳಕಿತಗಾತ್ರರಾಗಿ ಪರಮಾನಂದತುಂದಿಲರಾದೆವು! ಆನಂತರ ಎಲ್ಲವೂ ಮರೆಯಾಗಿ ಬಹಿರ್ಮುಖರಾದೆವು. ಕನ್ನಡನಾಡಿನ ವೀರಪುತ್ರರೇ! ಇದು ಭಗವಂತನೇ ನಮಗೆ ದರ್ಶನ ಮಾಡಿಸಿದ ಕನ್ನಡ ಸಾಮ್ರಾಜ್ಯದ ಭವ್ಯ ಭವಿಷ್ಯ ಚಿತ್ರವೆಂದು ಆಗಲೇ ನಾವು ನಿಶ್ಚಯಿಸಿದೆವು. ನಮ್ಮ ಅನುಭವವನ್ನು ನಿಮಗೆ ತಿಳಿಸಿದ್ದೇವೆ. ಉಳಿದಿರುವುದು ಏಕಮತಿಕರಾಗಿ ನೀವೆಲ್ಲರೂ ನಿಮ್ಮ ಭಾವೀ ಸಾಮ್ರಾಟನಾರೆಂದು ನಿರ್ಣಯಿಸುವುದು ಮಾತ್ರ!” ಎಂದು ಅಪ್ಪಣೆ ಕೊಡಿಸಿದರು.
ಅದುವರೆಗೆ ಚಿತ್ರಸ್ಥ ಪ್ರತಿಮೆಗಳಂತೆ ಕುಳಿತಿದ್ದ ಹರ್ಷಪುಲಕಿತಗಾತ್ರರಾದ ಸಭಾಸದರ ಬಾಯಿಂದ “ಪೂಜ್ಯ ಶ್ರೀವ್ಯಾಸತೀರ್ಥರಿಗೆ ಜಯವಾಗಲಿ” ಎಂಬ ಉದ್ಗಾರ ಹೊರಹೊಮ್ಮಿತು! ನಂತರ ಕೆಲವರು ಮೇಲೆದ್ದು “ಕೃಷ್ಣದೇವರಾಯರು ಕಣ್ಮರೆಯಾಗಿದ್ದರಿಂದ ಅವರು ಜೀವಿಸಿರುವರೇ ಎಂದು ನಾವು ಕಳವಳಪಟ್ಟಾಗ ಮಹಾಮಾತ್ಯರು ಕೃಷ್ಣದೇವರಾಯರನ್ನು ಹುಡುಕಿಸಿ ಕರೆತರುವುದಾಗಿ ಹೇಳಿದರು” ಎನ್ನುತ್ತಿರುವಂತೆ ಕೃಷ್ಣದೇವ ಸಭೆಯನ್ನು ಪ್ರವೇಶಿಸಿದ! ಅವನನ್ನು ಕಂಡಕೂಡಲೇ ಆಶ್ಚರ್ಯ ಆನಂದಭರಿತರಾದ ಸಮಸ್ತ ಸಭಾಸದರು “ಕೃಷ್ಣದೇವರಾಯರೇ ಜಯವಾಗಲಿ. ಶ್ರೀಗುರುಪಾದರು ಅಪ್ಪಣೆ ಕೊಡಿಸಿದಂತೆ ಕೃಷ್ಣದೇವರಾಯರೇ ನಮ್ಮ ಸಾಮ್ರಾಟರಾಗಬೇಕು - ಇದೇ ನಮ್ಮೆಲ್ಲರ ಏಕಾಭಿಪ್ರಾಯ” ಎಂದು ಹೇಳಿದರು. ಆನಂತರ ಒಬ್ಬೊಬ್ಬರಾಗಿ ಮೇಲೆದ್ದು “ನಮ್ಮ ಮನಸ್ಸಿನಲ್ಲಿರುವುದನ್ನೇ ಭಗವಂತನು ಗುರುಗಳ ದ್ವಾರಾ ನಮಗೆ ದೃಢಪಡಿಸಲು ಈ ಕಾರ್ಯ ಮಾಡಿದ್ದಾನೆ! ಶ್ರೀಕೃಷ್ಣದೇವರಾಯರೇ ನಮಗೆ ಸಾಮ್ರಾಟರಾಗಬೇಕು” ಎಂದು ಹರ್ಷಧ್ವನಿಗೈಸಿದರು.
ಶ್ರೀವ್ಯಾಸರಾಜರು ನಗೆಮೊಗದಿಂದ “ನೀವೆಲ್ಲರೂ ಚತುರಮತಿಗಳು, ಸಾಮ್ರಾಜ್ಯದ ಹಿತೈಷಿಗಳು, ಸಾವಧಾನವಾಗಿ ಯೋಚಿಸಿ ಒಂದು ನಿರ್ಣಯಕ್ಕೆ ಬರಬೇಕು. ಕೇವಲ ನಾವು ಹೇಳಿದೆವೆಂದು ಒಪ್ಪಿದಂತಾಗಬಾರದಷ್ಟೆ?” ಎನಲು ಸಭಿಕರು ಏಕಕಂಠದಿಂದ “ಕೃಷ್ಣದೇವರಾಯರೇ ನಮ್ಮ ಸಾಮ್ರಾಟರು ಸಾಮ್ರಾಟ ಕೃಷ್ಣದೇವರಾಯರಿಗೆ ಜಯವಾಗಲಿ” ಎಂದು ಜಯಘೋಷ
ಮಾಡಿದರು.
ಕೃಷ್ಣದೇವರಾಯ-ತಿಮ್ಮರಸರ ಕಣ್ಣಿನಲ್ಲಿ ಧಾರಾಕಾರವಾಗಿ ಆನಂದಬಾಷ್ಪ ಹರಿಯಿತು. ತಿಮ್ಮರಸು ಮೇಲೆದ್ದು ಗದ್ದದ ಕಂಠದಿಂದ “ಮುಂದಿನ ದಾರಿಗಾಣದೆ ಪರಿತಪಿಸುತ್ತಿದ್ದ ನಮಗೆ ಕರ್ತವ್ಯವನ್ನು ಬೋಧಿಸಿ ಅನುಗ್ರಹಿಸಿದ ಗುರುವರ್ಯರಿಗೆ ನಾವು ಚಿರಋಣಿಯಾಗಿದ್ದೇವೆ. ಇದೇ ಭಗವತ್ಸಂಕಲ್ಪ, ಸಾಮ್ರಾಜ್ಯಕ್ಕೆ ಹಿತಕರರಾರೆಂಬುದು ಗುರುಗಳ ನಿರೂಪಣೆಯಿಂದ ಸ್ಪಷ್ಟವಾಗಿದೆ. ನಾನು ಸಮಸ್ತ ಸಭಿಕರ ಪರವಾಗಿ ಶ್ರೀಯವರಿಗೆ ನಮ್ಮ ಕೃತಜ್ಞತಾಪೂರ್ವಕ ಪ್ರಣಾಮಗಳನ್ನು ಅರ್ಪಿಸುತ್ತೇನೆ” ಎಂದು ಹೇಳಿ ನಮಿಸಿದ.
ಆನಂದಪರವಶನಾಗಿ ಕಣ್ಣೀರು ಸುರಿಸುತ್ತಾ ಕುಳಿತಿದ್ದ ಕೃಷ್ಣದೇವರಾಯ ದಿಗ್ಗನೆ ಮೇಲೆದ್ದು ವ್ಯಾಸರಾಜರ ಪಾದಗಳ ಮೇಲೆ ಶಿರವಿರಿಸಿ “ಪಾಮರನಾದ ನನ್ನ ಮೇಲೆ ತಮ್ಮ ಅನುಗ್ರಹ ಅಪಾರವಾಯಿತು. ಗುರುದೇವ! ನಾನು ಈ ಮಹಾಸಾಮ್ರಾಜ್ಯವನ್ನಾಳಲು ಅರ್ಹನೇ? ತಾವು ಕಂಡ ಸುವರ್ಣಯುಗವನ್ನು ನಿರ್ಮಿಸುವ ಪುಣ್ಯ ನನಗಿದೆಯೆ ?” ಎಂದು ಬಿನ್ನವಿಸಲು ಗುರುರಾಜರು ವಾತ್ಸಲ್ಯದಿಂದ ಅವನ ಶಿರದ ಮೇಲೆ ತಮ್ಮ ಅಮೃತಹಸ್ತವಿರಿಸಿ “ಕೃಷ್ಣ! ನಿನ್ನ ಯೋಗ್ಯತೆಯನ್ನು ನೀನರಿಯೆ! ಈ ಕನ್ನಡ ಸಾಮ್ರಾಜ್ಯದ ಭಾಗ್ಯರವಿ ನೀನು! ಈ ಮಹಾಸಾಮ್ರಾಜ್ಯವನ್ನಾಳಲು ಬೇರಾರು ಸಮರ್ಥರಾದರು ? ಇದು ಭಗವಂತನ ಸಂಕಲ್ಪ, ಆಜ್ಞೆಯೆಂದು ಭಾವಿಸಿ ಕನ್ನಡರಮಾರಮಣನಾಗಿ ಕನ್ನಡನಾಡಿನ ಸುವರ್ಣಯುಗದ ಕಾರಣಪುರುಷನೆನಿಸಿ ಕೀರ್ತಿಶಾಲಿಯಾಗಿ ಬಾಳು!” ಎಂದು ಆಶೀರ್ವದಿಸಿದರು.
ಕೃಷ್ಣದೇವರಾಯ ಕರಮುಗಿದು “ಮಹಾಸ್ವಾಮಿ, ತಾವು ಸರ್ವದಾ ನನಗೆ ಮಾರ್ಗದರ್ಶಕರಾಗಿ, ಉಪದೇಶಿಸುತ್ತಾ ಕಾಪಾಡುವುದಾಗಿ ಅಭಯವಿತ್ತಲ್ಲಿ ಈ ಎಲ್ಲ ಸಾಮ್ರಾಜ್ಯ ನಿಷ್ಠರೂ ಇದೇ ರೀತಿ ಸಹಕರಿಸಿ ಬೆಂಬಲ ನೀಡುವ ಭರವಸೆ ಕೊಟ್ಟಲ್ಲಿ ತಮ್ಮ ಆಜ್ಞೆಯಂತೆ ವರ್ತಿಸುತ್ತೇನೆ” ಎಂದೆನಲು ಶ್ರೀವ್ಯಾಸಭಗವಾನರು ಮಂದಹಸಿತವದನರಾಗಿ “ಕೃಷ್ಣ ಅಲ್ಲ, ಭಾವಿ ಸಾಮ್ರಾಟರೇ! ನಮ್ಮ ಆಶೀರ್ವಾದ ಉಪದೇಶಗಳು ಸರ್ವದಾ ನಿನಗಿದೆ” ಎಂದರು. ಕೃಷ್ಣದೇವರಾಯ “ಗುರುದೇವ! ನಾನು ಈಗಲೂ ಮುಂದೂ ನಿಮ್ಮ ಪ್ರೀತಿಯ ಕೃಷ್ಣನೇ! ತಾವು ಹಾಗೆ ಕರೆಯುವುದೇ ನನಗೆ ಶ್ರೇಯಸ್ಕರ ಮತ್ತು ತೃಪ್ತಿ” ಎಂದರುಹಿದನು.
ಅನಂತರ ಎಲ್ಲ ಸಭಾಸದಸ್ಯರು ಎದ್ದು ನಿಂತು ಖಡ್ಗಗಳನ್ನು ಹಿರಿದು ತಲೆಬಾಗಿ “ಮಹಾಪ್ರಭು ! ಪೂಜ್ಯ ರಾಜಗುರುಗಳ ಸಮಕ್ಷ ವಿಜ್ಞಾಪಿಸುತ್ತಿದ್ದೇವೆ. ನಮ್ಮ ಜೀವನವನ್ನು ಸಾಮ್ರಾಜ್ಯದ ಮತ್ತು ತಮ್ಮ ಸೇವೆಗಾಗಿ ಮುಡುಪಾಗಿಡುತ್ತೇವೆ! ಸದಾ ನಾವು ತಮಗೆ ಬೆಂಬಲಿಗರಾಗಿ ತಮ್ಮ ಆಜ್ಞೆಗೆ ಬದ್ಧರಾಗಿ ನಡೆಯುತ್ತೇವೆ” ಎಂದು ಪ್ರತಿಜ್ಞಾಬದ್ಧರಾದರು.
ಶ್ರೀಗಳವರು “ಮಹಾಮಂತ್ರಿಗಳೇ, ಒಂದು ವಿಧದಿಂದ ಎಲ್ಲವೂ ತೀರ್ಮಾನವಾದಂತಾಯಿತಲ್ಲವೇ ? ಈಗ ಕೃಷ್ಣದೇವರಾಯರಿಗೆ ಮೊದಲು ವಿವಾಹವಾಗಬೇಕು. ಅನಂತರವೇ ಪಟ್ಟಾಭಿಷೇಕ. ಇದಕ್ಕೆ ಮೊದಲು ವ್ಯವಸ್ಥೆ ಮಾಡಿರಿ” ಎಂದು ಆಜ್ಞಾಪಿಸಲು, ತಿಮ್ಮರಸು “ಮಹಾಸ್ವಾಮಿ, ನಾನೀಗಾಗಲೇ ಕನೈಯನ್ನು ನಿಶ್ಚಯಿಸಿದ್ದೇನೆ, ಶ್ರೀರಂಗಪಟ್ಟಣದ ಅರಸರಾದ ವೀರರಾಜಯ್ಯನವರ ಪತ್ರಿ ರಾಜಕುಮಾರಿ ಸೌ ||ತಿರುಮಲಾಂಬಾದೇವಿಯವರು ಸುವರ್ಣಲಕ್ಷಣಸಂಪನ್ನರಾಗಿದ್ದು ಸಾಮ್ರಾಜಿಪದಕ್ಕೆ ಅರ್ಹರಾಗಿದ್ದಾರೆ. ಪ್ರಭುಗಳು ಒಪ್ಪಿದಲ್ಲಿ ಕೆಲಸ ಸುಲಭ” ಎಂದರು.
ವ್ಯಾಸಮುನಿಗಳು ನಸುನಕ್ಕು “ಏನಪ್ಪಾ ಕೃಷ್ಣ! ನಿನ್ನ ಅಭಿಪ್ರಾಯವೇನು ?” ಎಂದು ಪ್ರಶ್ನಿಸಲು ಕೃಷ್ಣದೇವರಾಯ ನಾಚಿ ನಂತರ ವಿನೀತನಾಗಿ “ಗುರುವರ್ಯ, ನಾನೂ ಒಮ್ಮೆ ಆ ಕನ್ನೆಯನ್ನು ಕಂಡಿದ್ದೇನೆ! ಗುರುಗಳು ಆಜ್ಞಾಪಿಸಿದರೆ ನನ್ನ ಅಭ್ಯಂತರವಿಲ್ಲ” ಎಂದು ವಿಜ್ಞಾಪಿಸಿದನು.
ವ್ಯಾಸರಾಜರು “ಇನ್ನೇನು ತಿಮ್ಮರಸರೇ ! ಮುಂದಿನ ಕಾರ್ಯದಲ್ಲಿ ತೊಡಗಿರಿ. ಶುಭಸ್ಯ ಶೀಘ್ರಂ! ಮಂಗಳ ಮಹೋತ್ಸವವನ್ನು ಜರುಗಿಸಿಬಿಡಿ” ಎಂದೆನಲು ತಿಮ್ಮರಸು “ತಮ್ಮ ಅಪ್ಪಣೆಯಂತಾಗಲಿ. ವಿವಾಹಕ್ಕೂ, ಪಟ್ಟಾಭಿಷೇಕಕ್ಕೂ ಮುಹೂರ್ತವನ್ನು ನಿಶ್ಚಯಮಾಡಿಸಿ ಸಕಲ ವ್ಯವಸ್ಥೆಯನ್ನು ಮಾಡುತ್ತೇನೆ” ಎಂದು ವಿಜ್ಞಾಪಿಸಿದ ಮೇಲೆ ಅಂದಿನ ಸಭೆಯು ಹರ್ಷಧ್ವನಿಯೊಡನೆ ಮುಕ್ತಾಯವಾಯಿತು.
ಕನ್ನಡನಾಡಿಗೆ ಕೃಷ್ಣದೇವರಾಯ ಸಾರ್ವಭೌಮನಾಗಲಿರುವುದನ್ನು ಕೇಳಿ ಆ ಮಹೋತ್ಸವವನ್ನು ಕಂಡು ಆನಂದಿಸಲು ಸಾಮ್ರಾಜ್ಯದ ಎಲ್ಲಾ ಭಾಗಗಳಿಂದ ಸಹಸ್ರಾರು ಜನ ವಿಜಯನಗರಕ್ಕೆ ಆಗಮಿಸುತ್ತಿದ್ದಾರೆ. ಕನ್ನಡನಾಡಿನ ಮಿತ್ರರಾದ ರಾಜಮಹಾರಾಜರು, ಮಂಡಲಾಧಿಪತಿಗಳು, ಸಾಮಂತನರಪತಿಗಳು, ದೆಹಲಿ ಬಹಮನಿ ಸುಲ್ತಾನರ ಪ್ರತಿನಿಧಿಗಳು ಹೀಗೆ ಲಕ್ಷಾಂತರ ಜನರಿಂದ ರಾಜಧಾನಿ ಕಿಕ್ಕಿರಿದು ತುಂಬಿಹೋಗಿದೆ. ರಾಜಧಾನಿಯನ್ನು ಸುಂದರವಾಗಿ ಅಲಂಕರಿಸಲಾಗಿದೆ. ಅರಮನೆಯ ವೈಭವವಂತೂ ವರ್ಣಿಸಲಸದಳ. ಎಲ್ಲೆಲ್ಲಿಯೂ ಸಂಭ್ರಮದ ವಾತಾವರಣ. ಪ್ರಜೆಗಳ ಸಡಗರ ಮೇರೆ ಮೀರಿದೆ.
ಶುಭಮುಹೂರ್ತದಲ್ಲಿ ಶ್ರೀರಂಗಪಟ್ಟಣದ ರಾಜಕುಮಾರಿ ಸೌ ||ತಿರುಮಲಾಂಬಿಕೆಯೊಡನೆ ಕೃಷ್ಣದೇವರಾಯನ ವಿವಾಹವು ಅದ್ದೂರಿಯಿಂದ ನೆರವೇರಿತು.
ವಿವಾಹ ಮಹೋತ್ಸವವಾದ ಮೂರನೆಯ ದಿನ ಅಲಂಕೃತ ರಾಜದರ್ಬಾರಿನಲ್ಲಿ ವಾದ್ಯವೈಭವ, ಗಾಯನ, ನರ್ತನ, ವೇದಘೋಷಗಳಾಗುತ್ತಿರಲು, ಮೂವತ್ತೊಂದು ಕುಶಾಲತೋಪುಗಳು ಭೋರ್ಗರೆಯುತ್ತಿರಲು, ವಂದಿಮಾಗಧರು ಬಿರುದುಗಳನ್ನು ಘೋಷಿಸುತ್ತಿರಲು, ಪಂಡಿತರು ಮಂತ್ರಗಳನ್ನು ಪಠಿಸುತ್ತಿರಲು, ಸಮಸ್ತ ಸಭಾಸದರು ಜಯಜಯಕಾರ ಮಾಡುತ್ತಿರಲು, ಮಹಾಮಂತ್ರಿ ತಿಮ್ಮರಸು ಪೀತಾಂಬರ - ನವರತ್ನಾಭರಣಗಳಿಂದಲಕೃತನಾಗಿ ಧೀರಗಂಭೀರ ನಡಿಗೆಯಿಂದ ಎಲ್ಲರ ಕಣ್ಮನಗಳನ್ನು ಸೆಳೆಯುತ್ತಾ ಬರುತ್ತಿರುವ ಕೃಷ್ಣದೇವರಾಯನಿಗೆ ಹಸ್ತಲಾಘವ ಕೊಟ್ಟು, ರತ್ನಸಿಂಹಾಸನಕ್ಕೆ ಕರೆತಂದು ಕೂಡಿಸಿದನು.
ಆಗ ಶ್ರೀವ್ಯಾಸತೀರ್ಥರು ಕೃಷ್ಣದೇವರಾಯನ ಶಿರದ ಮೇಲೆ ಮಣಿಮಯ ಕಿರೀಟವನ್ನಿಟ್ಟು, ರತ್ನಖಚಿತ ಒರೆಯಿಂದೊಪ್ಪವ ಪಟ್ಟದ ಕತ್ತಿಯನ್ನು ಕೊಟ್ಟು ಸಕಲ ತೀರ್ಥಗಳನ್ನು ಪ್ರೋಕ್ಷಿಸಿ, ನವರತ್ನ, ಪುಷ್ಪಗಳಿಂದ ಸಾಮ್ರಾಜ್ಯ ಪಟ್ಟಾಭಿಷೇಕವನ್ನು ನೆರವೇರಿಸಿ ಆಶೀರ್ವದಿಸಿದರು. ಆನಂದತುಂದಿಲರಾದ ಸಭಾಸದರು “ಶ್ರೀಕೃಷ್ಣದೇವರಾಯ ಸಾರ್ವಭೌಮರಿಗೆ ಜಯವಾಗಲಿ” ಎಂದು ಜಯಧ್ವನಿಗೈದರು.
ಆನಂತರ ಮಿತ್ರರಾಜರು, ದೆಹಲಿ, ಬಹಮನಿ ಸುಲ್ತಾನರ ಪ್ರತಿನಿಧಿಗಳು, ಮಂಡಲಾಧೀಶ, ಸಾಮಂತರಾಜರು, ದಳಪತಿಗಳು, ಢಣಾಯಕರು, ಮಹಾದಂಡನಾಯಕರು, ಸಚಿವರು, ಮಹಾಮಾತ್ಯರು, ರಾಜಕೀಯ ಹಿರಿಯಾಳುಗಳು, ಪ್ರಮುಖ ಪೌರಜಾನಪದರು, ಧಾರ್ಮಿಕರು, ಪಂಡಿತರು, ಕಲೆಗಾರರು ಹೀಗೆ ಸಹಸ್ರಾರು ಜನರು ಸಾರ್ವಭೌಮನಿಗೆ ಉಡುಗೊರೆ- ಕಾಣಿಕೆಗಳನ್ನು ಸಮರ್ಪಿಸಿದರು. ಅಂದಿನ ವೈಭವ, ಆನಂದ-ಸಂಭ್ರಮಗಳು ಅವರ್ಣನೀಯ. ರಾಜಧಾನಿಯಲ್ಲಿ ಸಾಮ್ರಾಜ್ಯದಲ್ಲೆಲ್ಲಾ ಒಂದು ತಿಂಗಳ ಕಾಲ ಉತ್ಸವವನ್ನು ಆಚರಿಸಲಾಯಿತು. ದೇವಾಲಯ, ಮಠ, ಮಂದಿರಗಳಲ್ಲಿ ಪೂಜೆಗಳಾದವು. ಲಕ್ಷಾಂತರ ಜನರಿಗೆ ಸಂತರ್ಪಣೆಯಾಯಿತು. ವಿವಿಧ ಉತ್ಸವ, ಗಾಯನ, ನರ್ತನ ಮುಂತಾದ ಸಾಂಸ ತಿಕ ಕಾರ್ಯಕ್ರಮಗಳಾದವು. ಮಹಾಪರಾಕ್ರಮಿಯೂ, ಜನಪ್ರಿಯನೂ, ಶತ್ರುಭಯಂಕರನೂ, ಸದ್ಗುಣಮಂಡಿತನೂ, ದೇವಗುರುಪೂಜಕನೂ ಆದ ಕೃಷ್ಣದೇವರಾಯ ಸಾಮ್ರಾಟನಾದುದರಿಂದ ಸರ್ವರೂ ಆನಂದತುಂದಿಲರಾದರು.
ಕೃಷ್ಣದೇವರಾಯನು ಸಾಮ್ರಾಟನಾದ ಮೇಲೆ ಶ್ರೀವ್ಯಾಸಭಗವಾನರ ಮಾರ್ಗದರ್ಶನದಂತೆ ರಾಜಧಾನಿ ಮತ್ತು ಸಾಮ್ರಾಜ್ಯದ ಸರ್ವತೋಮುಖ ಅಭಿವೃದ್ಧಿ ಮಾಡುವ ಕಾರ್ಯದಲ್ಲಿ ಆಸಕ್ತನಾದನು. ಅಂದೇ ವಿಜಯನಗರ ಸಾಮ್ರಾಜ್ಯದ ಸುವರ್ಣಯುಗದ ಬೀಜಾಂಕುರವಾಯಿತು. ರಾಯನು ಹಗಲಿರುಳು ಗುರುಗಳು, ಅಪ್ಪಾಜಿ, ಸಹೋದರರು, ಸಚಿವರು, ಹಿತೈಷಿಗಳಿಗೆ ಸಂತೋಷವಾಗುವಂತೆ, ಪ್ರಜರಿಗೆ ಹಿತವಾಗುವಂತೆ ಕಾರ್ಯಪ್ರವೃತ್ತನಾದನು.
ಕೃಷ್ಣದೇವರಾಯನಲ್ಲಿ ಸರ್ವಲೋಕಕಲ್ಯಾಣಚಾತುರ್ಯ, ಇತರ ರಾಜರ ಯಶಶ್ಚಂದ್ರಿಕೆಯನ್ನು ಸಂಪೂರ್ಣವಾಗಿ ಕಬಳಿಸುವ ಚಕೋರಪ್ರಾಯಸಚ್ಚಾರಿತ್ರ್ಯ, ವೈರಿನಾಶಕ ಶಸ್ತ್ರಸಾಮರ್ಥ್ಯ, ಸಕಲಲೋಕಸಮ್ಮತ ಶಾಸ್ತ್ರಮರ್ಯಾದೆ, ಉದಾತ್ತಚಿತ್ತ ವೃತ್ತಿ, ದೇವದ್ವಿಜರಲ್ಲಿ ನಿಷ್ಕಪಟ ವಿಶ್ವಾಸ, ಸದಾ ಧರ್ಮಮಾರ್ಗಪ್ರವೃತ್ತಿ, ಶತ್ರುನಿಗ್ರಹ ವಿಷಯದಲ್ಲಿ ಅಚಲ ಸಂಕಲ್ಪ, ಪಂಡಿತಪೋಷಣ ಮತ್ತು ಪ್ರಶಂಸಾಪಾತ್ರತೆ, ಗುಣಪಕ್ಷಪಾತ, ವಿದ್ವತ್ಕವಿ-ಕಲಾಜನರಿಗೆ ಆಶ್ರಯಪ್ರದಾನ, ಇಂದ್ರಿಯನಿಗ್ರಹ, ಅನ್ನದಾನಾಸಕ್ತಿ, ಸಚೀಲ-ಹರಿಗುರುಭಕ್ತಿ, ಪರನಾರೀಸೋದರತ್ವ, ಜನಮನರಂಜನಾಥ್‌ರೇಯತೆ, ವಿನಯ್-ಸೌಜನ್ಯ-ದೀನಾನುಕಂಪ, ಭುಜಬಲಪರಾಕ್ರಮ, ಸಂಗೀತಸಾಹಿತ್ಯಾದಿ ಸಕಲ ಕಲೆಗಳಲ್ಲಿ ಅತಿಪ್ರೌಢಿಮೆ ಮುಂತಾದ ಅಸಾಧಾರಣ ಸದ್ಗುಣಗಳು ಅವನಲ್ಲಿ ಮನೆಮಾಡಿದ್ದವು. ಇವೆಲ್ಲ ಗುಣಗಳೂ ಅವನ ವ್ಯಕ್ತಿತ್ವಕ್ಕೆ ಮೆರುಗು ಕೊಟ್ಟವು.
ಇಂತು ಭೂಪತಿಗಳಿಗೆಲ್ಲಾ ಶಿರೋಮಣಿಯಾಗಿ, ರಿಪುಕುಲಾಂಧಕಾರನಭಮಣಿಯಾಗಿ, ಧಾನುಷ್ಠಶೇಖರನಾಗಿ, ವೈಜ್ಞಾನಿಕಾಗ್ರೇಸರನಾಗಿ, ಸಕಲವಿದ್ಯಾಪಾರಂಗತನಾಗಿ, ಸರ್ವರ ಪ್ರೀತಿ-ಗೌರವಗಳಿಗೆ ಪಾತ್ರನಾದ ಆ ಕೃಷ್ಣದೇವರಾಯ ಸಾರ್ವಭೌಮನು ಸಾಗರಪರ್ಯಂತವಾಗಿ ವಿಸ್ತಾರವಾದ ಭೂಮಿಯಿಂದ ರಾರಾಜಿಸುವ ಕನ್ನಡ ಸಾಮ್ರಾಜ್ಯವನ್ನು ಲೀಲೆಯಿಂದಲೇ ನಿರ್ವಹಿಸುತ್ತಿದ್ದನು.
ಧೈರ್ಯ-ಶೌರ್ಯ-ಪರಾಕ್ರಮ-ಗಾಂಭೀರ್ಯ-ಸೌಜನ್ಯ-ಕಾರುಣ್ಯ-ವಿನಯ್ ವಿತರಣ ಮೊದಲಾದ ಸದ್ಗುಣ ಸಂಪನ್ನನೂ, ಭಾಗವತಮೂರ್ಧನ್ಯನು ಆದ ಕೃಷ್ಣದೇವರಾಯನು ಅತಿಭಕ್ತಿಪೂರ್ವಕವಾಗಿ ತನ್ನ ಕುಲದೇವತೆಯನ್ನು ತ್ರಿಕಾಲಗಳಲ್ಲಿಯೂ, ವ್ಯಾಸರಾಜರನ್ನು ಅತ್ಯಾದರಪೂರ್ವಕವಾಗಿ ಪೂಜಿಸುತ್ತಿದ್ದನು.
ಹೀಗೆ ವ್ಯಾಸರಾಜರು ಸಾರ್ವಭೌಮರಿಂದ ಸೇವಿತರಾಗಿ ಪ್ರಚಂಡ ಪಾಷಂಡ ಕುಮತಗಳೆಂದ ಪರ್ವತಗಳ ಪಕ್ಷಗಳನ್ನು ಕ್ಷಣಮಾತ್ರದಲ್ಲಿ ವಿಚ್ಛೇದಿಸಲು ಶಕ್ತವಾದ ತಮ್ಮ ವಾಗ್ವಜ್ರಾಘಾತದಿಂದ ವಿರಾಜಿಸುತ್ತಾ, ತಮ್ಮ ಅಸಾಧಾರಣ ಜ್ಞಾನಪ್ರಭಾವದಿಂದ ಭಗವಾನ್ ಸೂರ್ಯದೇವನಂತೆ ಅಜ್ಞಾನಾಂಧಕಾರವನ್ನು ಪರಿಹರಿಸುತ್ತಾರಾಜಿಸಿದರು.168 ಇದರಿಂದ ಪ್ರಪಂಚವು ನೂತನರೂಪ ತಾಳಿದಂತೆ ಕಂಗೊಳಿಸಿತು. ಬಹುಕಾಲದಿಂದ ಮಿಥ್ಯಾಮಿಥ್ಯಾ ಎಂದು ಆರೋಪಿತವಾಗಿದ್ದ ಪ್ರಪಂಚವು ಮಿಥ್ಯಾತ್ವರೂಪದಿಂದ ಮುಕ್ತವಾಯಿತು.....ಜೀವಾತ್ಮ ಪರಮಾತ್ಮರ ಪಾರಮಾರ್ಥಿಕ ಭೇದವು ನಿರ್ನಿರೋಧವಾಗಿ ಸ್ಥಾಪಿಸಲ್ಪಟ್ಟಿತು. ಜನರಲ್ಲಿ ವಿಚಾರಶಕ್ತಿ ಉಲ್ಬಣಿಸಿ ದೇವತಾತಾರತಮ್ಯಪೂರ್ವಕವಾಗಿ ಶ್ರೀಹರಿಸರ್ವೋತ್ತಮತ್ವದಲ್ಲಿ ಅವರ ಬುದ್ದಿ ಆಸಕ್ತವಾಯಿತು.
ಶ್ರೀವ್ಯಾಸರಾಜರ ಪ್ರಭಾವ, ಮಹಿಮಾತಿಶಯಗಳಿಂದ ಸಕಲ ಸಜ್ಜನರಾದ ಭೂಸುರರು, ನಿತ್ಯಮುಕ್ತಳಾದ ರಮಾದೇವಿಯ ರಮಣನಾದ ಶ್ರೀಮನ್ನಾರಾಯಣನ ಚರಣಾರವಿಂದದಲ್ಲಿ ಭಕ್ತಿಭರಿತವಾದ ಮನಸ್ಸುಳ್ಳವರಾದರು. ಈ ಪ್ರಪಂಚದಲ್ಲಿಯೇ ಶ್ರೀಹರಿಯ ಸಾರೂಪ್ಯವನ್ನು ಪಡೆದರೋ ಎಂಬಂತೆ ಶಂಖ-ಚಕ್ರಾದಿ ಸವೈಷ್ಣವ ಲಾಂಛನಗಳನ್ನು ಧರಿಸಿ ಶ್ರೇಯೋವಂತರಾದರು.
ಹೀಗೆ ವಿಜಯನಗರದ ಕನ್ನಡ ಸಾಮ್ರಾಜ್ಯವು ಶ್ರೀವ್ಯಾಸರಾಜರಿಂದಾಗಿ ವಿವಿಧ ರೀತಿಯಿಂದ ಅಭ್ಯುದಯದ ಮಾರ್ಗದಲ್ಲಿ ಮುನ್ನಡೆಯಿತು.