ಕಲಿಯುಗ ಕಲ್ಪತರು
ನಾಲ್ಕನೆಯ ಉಲ್ಲಾಸ
ಶ್ರೀವ್ಯಾಸರಾಜಯತಿಸಾರ್ವಭೌಮರು
೪೩. ಸಂಸ ತ ವಿಶ್ವವಿದ್ಯಾನಿಲಯ
ಶ್ರೀವ್ಯಾಸರಾಜರು ಹಿಂದೆ ಎರಡು ಬಾರಿ ಭಾರತ ಸಂಚಾರ ಕೈಗೊಂಡಾಗ ಕಂಚಿ, ಕಾಶಿ, ಪ್ರಯಾಗ, ಮಿಥಿಲಾ, ನವದ್ವೀಪ ಮುಂತಾದ ಕಡೆಗಳಲ್ಲಿದ್ದ ವಿದ್ಯಾಪೀಠಗಳಿಗೆ ಭೇಟಿ ಕೊಟ್ಟಾಗ ಅವರಿಗೆ ಅವೆಲ್ಲಕ್ಕಿಂತ ಅತ್ಯಂತ ವ್ಯಾಪಕವಾದ ಸಂಸ ತ ವಿಶ್ವವಿದ್ಯಾನಿಲಯವೊಂದನ್ನು ಪ್ರಾರಂಭಿಸುವ ಹಂಬಲವುಂಟಾಗಿತ್ತು. ಹಿಂದೆ ಭಾರತದ ಆದರ್ಶ ಚಕ್ರವರ್ತಿಗಳ ಆಶ್ರಯದಲ್ಲಿ ಪ್ರಾರಂಭವಾಗಿ ವಿಶ್ವದಲ್ಲೆಲ್ಲಾ ವಿಖ್ಯಾತಿ ಗಳಿಸಿ ಮೆರೆದಿದ್ದ ನಳಂದಾ, ತಕ್ಷಶಿಲೆಗಳ ಮಾದರಿಯಲ್ಲಿ ಕರ್ನಾಟಕದಲ್ಲಿ ಶ್ರೇಷ್ಠ ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸಬೇಕೆಂಬ ಅವರ ಕನಸು ನನಸಾಗುವ ಪರಿಸ್ಥಿತಿ ಕರ್ನಾಟಕದಲ್ಲಿ ಉಂಟಾಗಿದ್ದಿತು. ಕನ್ನಡ ಸಾಮ್ರಾಜ್ಯದ ರಾಜಗುರುಗಳಾದ ಮೇಲೆ ಕನ್ನಡದ ಸಾರ್ವಭೌಮರು ಅವರ ಅವಿಚ್ಛಿನ್ನ ಭಕ್ತರಾಗಿ ಅವರ ಸಲಹೆ, ಉಪದೇಶಗಳಂತೆ ವರ್ತಿಸುತ್ತಾ ಅವರ ಆದೇಶಗಳನ್ನು ಕಾರ್ಯರೂಪಕ್ಕೆ ತರಲು ನತಮಸ್ತಕರಾಗಿ ಕಾದಿರುತ್ತಿದ್ದುದರಿಂದ ಸರಿಯಾದ ವಾತಾವರಣವು ಕಲ್ಪಿತವಾಗಿದ್ದಿತು. ಅಂತೆಯೇ ಶ್ರೀವ್ಯಾಸರಾಜರು ತಮ್ಮ ಆಶಯವನ್ನು ಸಾಮ್ರಾಟ್ ನರಸಭೂಪಾಲನಲ್ಲಿ ಪ್ರಸ್ತಾಪಿಸಿ ವಿಶ್ವವಿದ್ಯಾನಿಲಯದ ರೂಪರೇಶೆಗಳನ್ನು ಅವನಿಗೆ ಮನದಟ್ಟು ಮಾಡಿಕೊಟ್ಟರು.
ಶ್ರೀವ್ಯಾಸಯತಿಗಳನ್ನು ಆರಾಧ್ಯದೈವವಾಗಿ ತಿಳಿದಿದ್ದ ನರಸಭೂಪಾಲ ಗುರುಗಳ ಆಜ್ಞೆಯನ್ನು ಕಾರ್ಯರೂಪಕ್ಕೆ ತರಲು ಸಿದ್ಧನಾದ, ವ್ಯಾಸಮುನಿಗಳು ವಿಶ್ವವಿದ್ಯಾನಿಲಯದ ಮಹತ್ವ, ಅದರ ರೂಪರೇಷೆಗಳನ್ನು ವಿವರಿಸಿ ಹೀಗೆ ಹೇಳಿದರು. “ರಾಜೇಂದ್ರ! ಈ ವಿಶ್ವವಿದ್ಯಾನಿಲಯವು ಜಗನ್ಮಾನ್ಯವಾಗಬೇಕು. ಕನ್ನಡನಾಡಿನ ಕೀರ್ತಿ ಎಲ್ಲೆಡೆ ಬೆಳಗಬೇಕು. ಈ ವಿಶ್ವವಿದ್ಯಾನಿಲಯದಲ್ಲಿ ವೇದ-ವೇದಾಂಗಗಳು ಉಪನಿಷತ್ತು, ಪುರಾಣ, ಇತಿಹಾಸಗಳು, ಸಾಂಖ್ಯಯೋಗ-ಪ್ರಾಚೀನ ಮತ್ತು ನವೀನ ನ್ಯಾಯ, ವೈಶೇಷಿಕ, ವ್ಯಾಕರಣ, ಛಂದಸ್ಸು, ಭಾಟ್ಟ ಹಾಗೂ ಗೌರವ ಮೀಮಾಂಸಾ, ದೈತ-ಅದೈತ-ವಿಶಿಷ್ಟಾದ್ವತ ವೇದಾಂತಗಳು, ಕಾವ್ಯ-ನಾಟಕ, ಅಲಂಕಾರಾದಿ ಸಾಹಿತ್ಯ ಶಾಸ್ತ್ರ, ಧರ್ಮಶಾಸ್ತ್ರ, ಆಗಮ, ಜ್ಯೋತಿಷ, ಗಣಿತ ಹೀಗೆ ಭಾರತದ ಸಕಲಶಾಸ್ತ್ರಗಳ ಜೊತೆಗೆ ಸಂಗೀತ, ಶಿಲ್ಪ, ಚಿತ್ರಕಲೆ, ನೃತ್ಯ ಮುಂತಾದ ಕಲೆಗಳ ಅಭ್ಯಾಸಕ್ಕೆ ವ್ಯವಸ್ಥೆ ಮಾಡಬೇಕು. ಹೀಗೆ ವ್ಯಾಪಕ ರೀತಿಯಿಂದ ಅಧ್ಯಯನಕ್ಕೆ ಅವಕಾಶವೇರ್ಪಟ್ಟರೆ, ದೇಶವಿದೇಶಗಳಿಂದಲೂ ಸಹಸ್ರಾರು ಜನ ವಿದ್ಯಾರ್ಥಿಗಳು ಬಂದು ಇಲ್ಲಿ ಅಧ್ಯಯನ ಮಾಡುವರು. ಅಖಂಡ ಭಾರತದಲ್ಲೇ ಇದೊಂದು ಮಹಾವಿಶ್ವವಿದ್ಯಾನಿಲಯವಾಗಿ ಮೆರೆದಾಗ ಕನ್ನಡ ಸಾಮ್ರಾಜ್ಯ ಮತ್ತು ನಿನ್ನ ಕೀರ್ತಿ ವಿಶೇಷವಾಗಿ ಬೆಳಗುವುದು. ಇದರ ಗೌರವ ನಿನಗೆ ದೊರಕಬೇಕೆಂದು ನಾವು ಆಶಿಸುತ್ತೇವೆ” ಎಂದು ಹೇಳಿದರು.
ಗುರುಗಳ ಮಾತು ಕೇಳಿ ನರಸಭೂಪಾಲ ರೋಮಾಂಚಿತನಾದ, ಅಪ್ಪಣೆಯಂತೆ ಸಂಸ ತ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿ ಸಾಮ್ರಾಜ್ಯ ಭಂಡಾರದಿಂದಲೇ ಅದು ಯಶಸ್ವಿಯಾಗಿ ಮುನ್ನಡೆಯುವಂತೆ ಮಾಡುವುದಾಗಿ ಶ್ರೀಯವರಿಗೆ ಆಶ್ವಾಸನೆ ನೀಡಿದನು.
ಶ್ರೀಯವರು ರೂಪಿಸಿದ ವಿಶ್ವವಿದ್ಯಾನಿಲಯಕ್ಕೆ ಅವಶ್ಯವಾದ ವಿವಿಧ ಕಟ್ಟಡಗಳ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. ಒಂದು ಶುಭಮುಹೂರ್ತದಲ್ಲಿ ಸಾಮ್ರಾಟನ ನೇತೃತ್ವದಲ್ಲಿ ವಿಶ್ವವಿದ್ಯಾಲಯದ ಪ್ರಾರಂಭೋತ್ಸವವನ್ನು ಶ್ರೀವ್ಯಾಸರಾಜರು ನೆರವೇರಿಸಿದರು. ನರಸಭೂಪಾಲ ಹಾಗೂ ವಿದ್ದನ್ನಂಡಲಿಯ ಪ್ರಾರ್ಥನೆಯಂತೆ ಶ್ರೀವ್ಯಾಸಮುನಿಗಳು 'ಕುಲಪತಿ'ಗಳಾಗಿದ್ದು ಆ ಮಹಾಸಂಸ್ಥೆಯನ್ನು ನಿರ್ವಹಿಸುವ ಹೊಣೆ ಹೊತ್ತರು.
ವಿಜಯನಗರದಲ್ಲಿ ಶ್ರೀವ್ಯಾಸತೀರ್ಥರ ಕುಲಪತಿತ್ವದಲ್ಲಿ ವಿಶ್ವವಿದ್ಯಾನಿಲಯವು ಪ್ರಾರಂಭವಾಗುವ ಈ ವಿಚಾರ ಭಾರತದಲ್ಲೆಲ್ಲಾ ವ್ಯಾಪಿಸಿ ಸಹಸ್ರಾರು ಜನ ವಿದ್ಯಾರ್ಥಿಗಳು ವಿವಿಧ ಶಾಸ್ತ್ರಗಳನ್ನು ಕಲಿಯಲು ವಿಜಯನಗರಕ್ಕೆ ಬರಹತ್ತಿದರು. ಶ್ರೀವ್ಯಾಸರಾಜರು ರಾಷ್ಟ್ರದ ನಾನಾಭಾಗಗಳಲ್ಲಿ ಪ್ರಖ್ಯಾತರಾಗಿದ್ದ ಶ್ರೇಷ್ಠಪಂಡಿತರನ್ನು ಕರೆಸಿಕೊಂಡು ಅವರಿಗೆ ಸಕಲ ಸೌಕರ್ಯಗಳನ್ನೇರ್ಪಡಿಸಿಕೊಟ್ಟು ವಿವಿಧ ಶಾಸ್ತ್ರಗಳಲ್ಲಿಪಾಠಪ್ರವಚನವು ಯಶಸ್ವಿಯಾಗಿ ಜರುಗುವಂತೆ ಮಾಡಿ ತಾವೇ ಸ್ವತಃ ಪಂಡಿತರು, ವಿದ್ಯಾರ್ಥಿಗಳ ಯೋಗಕ್ಷೇಮ ನೋಡಿಕೊಂಡು, ಅಧ್ಯಯನದ ಮೇಲ್ವಿಚಾರಣೆಯನ್ನೂ ನಿರ್ವಹಿಸುತ್ತಿದ್ದುದರಿಂದ ವಿಶ್ವವಿದ್ಯಾನಿಲಯದ ಕೀರ್ತಿ ಎಲ್ಲೆಡೆ ಹರಡಹತ್ತಿತು. ಕೆಲವರ್ಷಗಳಲ್ಲೇ ಸುಮಾರು ಹತ್ತು ಸಹಸ್ರ ಜನ ವಿದ್ಯಾರ್ಥಿಗಳು ಅಲ್ಲಿ ವ್ಯಾಸಂಗ ಮಾಡಲಾರಂಭಿಸಿದರು. ವಿಜಯನಗರದ ವಿಶ್ವವಿದ್ಯಾಲಯದಲ್ಲಿ ಓದುವ ಅರ್ಹತೆ ಪಡೆಯಲು ವಿದ್ಯಾರ್ಥಿಗಳು ಕಟುಪರೀಕ್ಷೆಗೊಳಗಾಗಬೇಕಿತ್ತು. ಶ್ರೀವ್ಯಾಸರಾಜರು ವಿದ್ಯಾರ್ಥಿಯನ್ನು ದಾಖಲು ಮಾಡುವ ಮೊದಲು ಅವನ ಸದಾಚಾರ, ಶೀಲಗಳಿಗೆ ಬಹು ಮಹತ್ವ ಕೊಡುತ್ತಿದ್ದರು. ವಿದ್ಯೆಗೆ ಮೊದಲು ಪ್ರತಿಯೊಬ್ಬನೂ ಸ್ನಾನ-ಸಂಧ್ಯಾ-ಸದಾಚಾರ ಶೀಲ-ಧರ್ಮಸಂಪನ್ನನಾಗಿರುವುದನ್ನು ಗಮನಿಸುತ್ತಿದ್ದರು. ಆದ್ದರಿಂದ ಅಲ್ಲಿ ವ್ಯಾಸಂಗ ಮಾಡುವವರು ಉತ್ತಮ ಶೀಲಸಂಪನ್ನರಾಗಿ ಸನಾತನಧರ್ಮದ ತಳಹದಿಯ ಮೇಲೆ ತಯಾರಾಗುತ್ತಿದ್ದರು. ಆದುದರಿಂದಲೇ ಭಾರತದಲ್ಲೇ ಅತ್ಯುತ್ತಮ ವಿದ್ಯಾಕೇಂದ್ರವೆನಿಸಿ ವಿಜಯನಗರವು 'ವಿದ್ಯಾನಗರ'ವೆಂಬ ತನ್ನ ಹೆಸರನ್ನು ಸಾರ್ಥಕಪಡಿಸಿಕೊಂಡಿತು.
ವಿಜಯನಗರದ ವಿಶ್ವವಿದ್ಯಾಲಯದಲ್ಲಿ ಒಂದೊಂದು ಶಾಸ್ತ್ರವಿಭಾಗಕ್ಕೂ ಅನೇಕ ಉಪನ್ಯಾಸಕರು, ಅಧ್ಯಾಪಕರುಗಳಿದ್ದು ಅವರ ಮೇಲೆ ಪ್ರಧಾನಾಧ್ಯಾಪಕರೂ ಇರುತ್ತಿದ್ದರು. ಒಂದೊಂದು ಶಾಸ್ತ್ರವಿಭಾಗಗಳಿಗೂ ಪ್ರತ್ಯೇಕ ಕಟ್ಟಡಗಳಿದ್ದವು. ಒಂದೊಂದು ಶಾಸ್ತ್ರಗಳಲ್ಲಿಯೂ ೭೦೦-೮೦೦ ಜನ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದರು. ಇಂಥ ಹತ್ತಾರು ವಿಭಾಗಗಳ ಮೇಲ್ವಿಚಾರಣೆಯನ್ನು ಕುಲಪತಿಗಳೇ ನಿರ್ವಹಿಸುತ್ತಿದ್ದರು. ಭಾರತದ ಅನೇಕ ಭಾಗಗಳು, ಕನ್ನಡ ಸಾಮ್ರಾಜ್ಯದ ವಿವಿಧ ಭಾಗಗಳಲ್ಲಿದ್ದ ನೂರಾರು ಸಂಸ ತ ವಿದ್ಯಾಪೀಠಗಳು, ಈ ವಿಶ್ವವಿದ್ಯಾನಿಲಯದ ಅಂಕಿತಕ್ಕೊಳಪಟ್ಟು ಇಲ್ಲಿನ ಕ್ರಮದಲ್ಲಿಯೇ ಅಲ್ಲಿಯೂ ಪಾಠ-ಪ್ರವಚನಗಳು ಜರುಗುತ್ತಿತ್ತು.
ವಿಜಯನಗರದ ವಿಶ್ವವಿದ್ಯಾನಿಲಯವು ಚಕ್ರತೀರ್ಥದ ಸಮೀಪದ ಅಚ್ಯುತದೇವರಾಜ ದೇವಾಲಯಕ್ಕೆ ಹೊಂದಿಕೊಂಡಿದ್ದಿತು. ಮುಂದೆ ಈ ಭಾಗಕ್ಕೆ ಅಚ್ಯುತದೇವರಾಜಪುರವೆಂಬ ಹೆಸರಾಯ್ತು. ಈ ಭಾಗದಲ್ಲಿ ಸುಮಾರು ನೂರಾರು ಎಕರೆಗೂ ಮೀರಿದಷ್ಟು ವಿಸ್ತಾರವಾದ ಪ್ರದೇಶದಲ್ಲಿ ವಿಶ್ವವಿದ್ಯಾಲಯವು ಹರಡಿಕೊಂಡಿದ್ದಿತು. ಅಲ್ಲಿ ಪ್ರತಿಯೊಂದು ಶಾಸ್ತ್ರವಿಭಾಗಕ್ಕೂ ಅನೇಕ ಕಟ್ಟಡಗಳಿದ್ದವು. ವಿದ್ಯಾರ್ಥಿಗಳಿಗೆ ವಸತಿಗೃಹಗಳು, ಅಧ್ಯಾಪಕರು ವಾಸಿಸುವ ಮಂದಿರಗಳು, ಸಭಾಭವನಗಳು, ಲಕ್ಷಾಂತರ ತಾಳೆ ಓಲೆ, ಲಕ್ಷಾಂತರ ಹಸ್ತಲಿಖಿತ ವಿವಿಧ ಶಾಸ್ತ್ರಗಳಿಂದ ಕಂಗೊಳಿಸುವ ವಿಸ್ತಾರವಾದ ಗ್ರಂಥಭಂಡಾರ, ವ್ಯಾಯಾಮಶಾಲೆಗಳು, ಕ್ರೀಡಾಗಾರಗಳು, ಆಟದ ಮೈದಾನಗಳು, ವಿಶ್ವವಿದ್ಯಾಲಯದ ಕಾರ್ಯಾಗಾರಗಳು, ಕುಲಪತಿಭವನ, ಫಲಪುಷ್ಪಭರಿತ ಗಿಡ-ಮರ-ಬಳ್ಳಿಗಳಿಂದ ಶೋಭಿಸುವ ಉದ್ಯಾನಗಳು, ಸರೋವರಗಳು - ಹೀಗೆ ಬಹು ವಿಸ್ತಾರವಾಗಿ ಸಕಲ ಸೌಲಭ್ಯಗಳಿಂದ ಕಂಗೊಳಿಸುತ್ತಿದ್ದ ವಿಜಯನಗರದ ಆ ವಿಶ್ವವಿದ್ಯಾನಿಲಯವು ಜಗತ್ತಿನ ವಿವಿಧ ದೇಶ, ದ್ವೀಪಗಳ ಜನರನ್ನೂ, ಭಾರತದ ಎಲ್ಲ ಭಾಗದ ಜನರನ್ನೂ ತನ್ನತ್ತ ಆಕರ್ಷಿಸುತ್ತಿತ್ತು ಅಂತೆಯೇ ಅದು ಭಾರತದಲ್ಲೇ ಅತ್ಯಂತ ಶ್ರೇಷ್ಠ ವಿದ್ಯಾಕೇಂದ್ರವೆಂದು ಹೆಸರು ಗಳಿಸಿತು.
ಈ ವಿಶ್ವವಿದ್ಯಾನಿಲಯದಲ್ಲಿ ಭಾರತದ ಸವರ್ಣ ಹಿಂದೂ ಜನರಲ್ಲದೆ, ಜಿನ, ಬೌದ್ಧ, ಪಾರಸೀಕ, ಯಹೂದ್ಯ, ಕ್ರೈಸ್ತರೂ, ಬ್ರಹ್ಮದೇಶ, ಮಲಯಾ, ಸುಮಾತ್ರಾ, ಸಿಂಗಪುರ, ಸಿಂಹಳ, ನೇಪಾಳ, ಭೂತಾನ ಮುಂತಾದ ರಾಜ್ಯಗಳ ಜನರೂ ತಮತಮಗೆ ಪ್ರಿಯವಾದ ವಿದ್ಯೆಗಳನ್ನೂ, ಸಂಗೀತ, ಸಾಹಿತ್ಯ ಕಲೆಗಳನ್ನೂ ಅಧ್ಯಯನ ಮಾಡುತ್ತಿದ್ದರು. ಇಷ್ಟೊಂದು ವ್ಯಾಪಕವಾದ ವಿಶ್ವವಿದ್ಯಾನಿಲಯದ ಕೇಂದ್ರಬಿಂದು ಶ್ರೀವ್ಯಾಸರಾಜರೇ ಆಗಿದ್ದರೆಂದಮೇಲೆ ಆ ಮಹನೀಯರು ಭಾರತೀಯ ಸನಾತಧರ್ಮ-ವಿದ್ಯೆ-ಸಂಸ ತಿ-ಕಲೆಗಳಿಗೆ ಮಾಡಿದ ಮಹೋಪಕಾರವೆಂತಹುದೆಂಬುದರ ಅರಿವಾಗದಿರದು.
ಈ ವಿಶ್ವವಿದ್ಯಾನಿಲಯಕ್ಕೆ ಭಾರತದ ಅನೇಕ ರಾಜರು, ಕನ್ನಡ ಸಾಮ್ರಾಜ್ಯದ ಮಾಂಡಲೀಕರು, ಶ್ರೀಮಂತ ವರ್ತಕರು, ಜಹಗೀರದಾರರುಗಳು ಉದಾರವಾಗಿ ಧನಕನಕ ಹಾಗೂ ವಿಶೇಷ ದತ್ತಿಗಳನ್ನು ಬಿಟ್ಟಿದ್ದರು. ಕನ್ನಡ ಸಾಮ್ರಾಜ್ಯಾಧೀಶರೇ ಇದರ ಸಮಸ್ತ ಖರ್ಚುವೆಚ್ಚಗಳಿಗೆ ಭಂಡಾರದಿಂದ ಹಣವನ್ನು ಒದಗಿಸುತ್ತಿದ್ದರು.
ತುಳುವ ನರಸಭೂಪಾಲನ ಕಾಲದಲ್ಲಿ ಪ್ರಾರಂಭವಾದ ಈ ವಿಶ್ವವಿದ್ಯಾನಿಲಯವು, ವೀರನರಸಿಂಹನ ಕಾಲದಲ್ಲಿ ಹೆಚ್ಚು ಅಭಿವೃದ್ಧಿಸಿ, ಕೃಷ್ಣದೇವರಾಯನ ಆಳ್ವಿಕೆಯಲ್ಲಿ ಅತ್ಯುನ್ನತ ಮಟ್ಟವನ್ನು ಮುಟ್ಟಿ ಸರ್ವಾಂಗೀಣವಾಗಿ ಅಭಿವೃದಿಸಿ, ಜಗದ್ವಿಖ್ಯಾತವಾಯಿತು. ಅನೇಕ ವಿದೇಶಿಯರ ಬರಹಗಳಿಂದ ಈ ವಿಶ್ವವಿದ್ಯಾನಿಲಯ ಮತ್ತು ಕುಲಪತಿಗಳಾದ ಶ್ರೀವ್ಯಾಸರಾಜರ ಮಹತ್ವದ ಅರಿವಾಗುವುದು. ನನ್ನೀಜನೆಂಬ ಪೋರ್ಚುಗೀಸಿನ ವ್ಯಾಪಾರಿಯು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಶ್ರೀವ್ಯಾಸರಾಜರನ್ನು ಹೀಗೆ ಉಲ್ಲೇಖಿಸಿದ್ದಾನೆ - Everyday he (The King of Bisnaga) hears the preaching of a learned Brahmin who never married nor touched women; ಈ ವ್ಯಾಪಾರಿಯು ಒಂದು ಸಲ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಕಾಲದಲ್ಲಿ ಒಂದು ಮೈಲು ಉದ್ದದ ದೊಡ್ಡ ಮೆರವಣಿಗೆಯಲ್ಲಿ ಮಣಿಖಚಿತ ಸುವರ್ಣ ಪಾಲಕಿಯಲ್ಲಿ ರಾಜವೈಭವದೊಡನೆ ಸಹಸ್ರಾರು ಜನ ವಿದ್ಯಾರ್ಥಿಗಳು, ವಿದ್ವಾಂಸರು, ವಿವಿಧ ವರ್ಣದ ಬೆಲೆಬಾಳುವ ವಸ್ತ್ರಧಾರಿಗಳಾದ ಸಿಬ್ಬಂದಿಗಳು, ಸೈನಿಕರು, ರಾಜಪುರುಷರುಗಳೊಡನೆ ಹೋಗುತ್ತಿದ್ದ ಶ್ರೀವ್ಯಾಸರಾಜರನ್ನು ಕಂಡು ಅಚ್ಚರಿಗೊಂಡನಂತೆ! ಆ ಮಹನೀಯರ ತೇಜಸ್ಸು, ಸಾಮ್ರಾಟನಿಂದ ಪಡೆಯುತ್ತಿದ್ದ ಮಾನ್ಯತೆಗಳನ್ನು ಕಂಡು ಪ್ರಭಾವಿತನಾಗಿ ಅವರ ದರ್ಶನ ಪಡೆದು ಅಮೂಲ್ಯ ಕಾಣಿಕೆಗಳನ್ನು ಸಮರ್ಪಿಸಿ, ಅವರ ಆಶೀರ್ವಾದ ಪಡೆದನಂತೆ!
ಶ್ರೀವ್ಯಾಸರಾಜಗುರುವರ್ಯರು ಕುಲಪತಿಗಳು ಮಾತ್ರವಾಗಿರದೆ ವಿಶ್ವವಿದ್ಯಾಲಯದ ಪಾಠಪ್ರವಚನಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಅವರು ನ್ಯಾಯ, ವ್ಯಾಕರಣ, ಮೀಮಾಂಸಾ, ವೇದಾಂತಾದಿ ಶಾಸ್ತ್ರಗಳಲ್ಲಿ ಉದ್ಭಂಥಗಳನ್ನು ಸ್ವತಃ ಶಿಷ್ಯರಿಗೆ ಪಾಠ ಹೇಳುತ್ತಿದ್ದರು. ಅವರು ಬೇರೆ ಬೇರೆ ಶಾಸ್ತ್ರಗಳಲ್ಲಿ ಹೇಳುತ್ತಿದ್ದ ಪಾಠಕ್ರಮವೂ ನೂತನ ಬಗೆಯದಾಗಿತ್ತು. ಶ್ರೀವ್ಯಾಸಮುನಿಗಳು ಒಂದೊಂದು ಶಾಸ್ತ್ರಗಳಲ್ಲಿಯೂ, ಪ್ರತಿಭಾವಂತರಾದ ಹತ್ತು ಹತ್ತು ಜನ ಪ್ರೌಢ ವಿದ್ಯಾರ್ಥಿಗಳನ್ನಾರಿಸಿ ಅವರಿಗೆ ಆಯಾ ಶಾಸ್ತ್ರಗಳ ಉದ್ಧಂಥಗಳನ್ನು ಪಾಠ ಹೇಳುತ್ತಿದ್ದರು. ಆ ಹತ್ತು ಹತ್ತು ಜನ ವಿದ್ಯಾರ್ಥಿಗಳೂ ಒಬ್ಬೊಬ್ಬರು ಹತ್ತು ಹತ್ತು ಜನ ಕಿರಿಯ ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿದ್ದರು. ಅವರೊಬ್ಬೊಬ್ಬರಲ್ಲೂ ಅನೇಕ ವಿದ್ಯಾರ್ಥಿಗಳು ಆಯಾ ಶಾಸ್ತ್ರಗಳ ಪ್ರಾರಂಭಿಕ ಗ್ರಂಥಗಳನ್ನು ಅಧ್ಯಯನ ಮಾಡುತ್ತಿದ್ದರು! ಹೀಗೆ ಒಂದು ವಿಶಿಷ್ಟ ರೀತಿಯಿಂದ ಪಾಠ-ಪ್ರವಚನವು ಜರುಗುತ್ತಿದ್ದುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ಪ್ರಾರಂಭದಿಂದಲೂ ಒಳ್ಳೆಯ ತಳಹದಿಯ ಮೇಲೆ ನಿಷ್ಠೆಯಿಂದ ವ್ಯಾಸಂಗ ಮಾಡಿ ಆಯಾ ಶಾಸ್ತ್ರಗಳಲ್ಲಿ ಉತ್ತಮ ಪಾಂಡಿತ್ಯ ಸಂಪಾದಿಸಲು ಅನುಕೂಲವಾಗಿತ್ತು.
ಈ ವಿಶ್ವವಿದ್ಯಾನಿಲಯದಲ್ಲಿ ಹತ್ತು ಸಹಸ್ರಕ್ಕೂ ಮೀರಿ ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡುತ್ತಿದ್ದರು. ಈ ಎಲ್ಲ ವಿದ್ಯಾರ್ಥಿಗಳ ವಸತಿ-ವಸನ-ಭೋಜನ ಸೌಕರ್ಯಗಳನ್ನು ಖುದ್ದಾಗಿ ಶ್ರೀವ್ಯಾಸರಾಜರೇ ಪರಿಶೀಲಿಸುತ್ತಾ, ಪ್ರೀತ್ಯಾದರಗಳಿಂದ ಪ್ರತಿಯೊಬ್ಬ ವಿದ್ಯಾರ್ಥಿಯ ಯೋಗಕ್ಷೇಮವನ್ನು ಗಮನಿಸುತ್ತಿದ್ದರು.159 ಇದರಿಂದ ವಿಜಯನಗರದ ವಿಶ್ವವಿದ್ಯಾನಿಲಯ ವಿಶ್ವವಿಖ್ಯಾತವಾಗುವುದರ ಜೊತೆಗೆ ಶ್ರೀವ್ಯಾಸರಾಜಗುರುಸಾರ್ವಭೌಮರ ಖ್ಯಾತಿ ದೇಶವಿದೇಶಗಳಲ್ಲಿಯೂ ವ್ಯಾಪಿಸಿ ಅವರ ಕೀರ್ತಿಯು ದಿಗಂತ ವಿಶ್ರಾಂತವಾಯಿತು.
ತುಳುವ ನರಸಭೂಪಾಲನು ಸ್ವರ್ಗಸ್ಥನಾದ ಮೇಲೆ ಅವನ ಜೇಷ್ಠಪುತ್ರನಾದ ವೀರನರಸಿಂಹನು ಕನ್ನಡನಾಡಿನ ಸಾರ್ವಭೌಮನಾದನು. ವೀರನರಸಿಂಹನೂ ತಂದೆಯಂತೆಯೇ ಶ್ರೀವ್ಯಾಸರಾಜರಲ್ಲಿ ಅಧಿಕ ಭಕ್ತಿ ವಿನಯಗಳಿಂದ ನಡೆದುಕೊಳ್ಳುತ್ತಿದ್ದನು. ಶ್ರೀವ್ಯಾಸರಾಜರ ಉಪದೇಶದಂತೆ ವರ್ತಿಸುತ್ತಿದ್ದ ವೀರನರಸಿಂಹನು ತಂದೆಯು ಪ್ರಾರಂಭಿಸಿದ್ದ ವಿಶ್ವವಿದ್ಯಾನಿಲಯದ ಅಭಿವೃದ್ಧಿ ಕಾರ್ಯಾಸಕ್ತನಾಗಿ ಗುರುಗಳ ವಿಶ್ವಾಸಕ್ಕೆ ಪಾತ್ರನಾದನು. ಅವನು ಸದ್ಗುಣಿಯೂ, ದೇವ ಗುರುಪೂಜಕನೂ, ಪ್ರಜಾನುರಾಗಿಯೂ ಆಗಿ ಆಶ್ರಿತ ಜನರ ರಕ್ಷಕನಾಗಿ ಧರ್ಮದಿಂದ ರಾಜ್ಯಪಾಲನೆ ಮಾಡುತ್ತಿದ್ದನು. ಅವನು ತಂದೆಗೆ ಆಪ್ತನೂ ಅಸಹಾಯಶೂರರೂ ಆಗಿದ್ದ ಸಾಳುವ ತಿಮ್ಮರಸನನ್ನೇ ಮಹಾಮಾತ್ಯನನ್ನಾಗಿ ಮಾಡಿಕೊಂಡಿದ್ದುದಲ್ಲದೆ ಅವನ ಸಹೋದರನಾದ ಗುಂಡುರಾಜನಿಗೆ ಮಹಾದಂಡನಾಯಕ ಪದವಿಯನ್ನಿತ್ತು ಗೌರವಿಸಿದ್ದನು.
ವೀರನರಸಿಂಹನು ಹಂಸವು ಕಮಲಾಕರವನ್ನು ಸೇವಿಸುವಂತೆ ಶ್ರೀವ್ಯಾಸಯೋಗಿಗಳನ್ನು ಪ್ರತಿದಿನವೂ ಸೇವಿಸುತ್ತ ಅವರನ್ನು ಸನ್ಮಾನಿಸುತ್ತಾ ಅವರ ಹಿತೋಪದೇಶದಂತೆ ನಡೆದು ಆದರ್ಶರಾಜನೆಂದು ಹೆಸರು ಪಡೆದನು.
ಶ್ರೀವ್ಯಾಸರಾಜರು ಹೀಗೆ ಸಾಮ್ರಾಟರಿಂದ ಸೇವಿತರಾಗಿ ತಮ್ಮ ಪರಿಶುದ್ಧಾಚರಣೆ, ಸನ್ಮಾರ್ಗೋಪದೇಶಗಳಿಂದ ಜಗತ್ತಿನಲ್ಲಿ ಧರ್ಮಾಚರಣೆಯು ನೆಲೆಗೊಳ್ಳುವಂತೆ ಮಾಡುತ್ತಾ, ನೂರಾರು ಗೃಹ, ತಟಾಕಾರಾಮಗಳಿಂದ ಶೋಭಿಸುವ ಅನೇಕ ಅಗ್ರಹಾರಗಳನ್ನು ನಿರ್ಮಾಣ ಮಾಡಿಸಿ ವಿದ್ಯಾವಂತರೂ, ಸದಾಚಾರಸಂಪನ್ನರೂ, ಆದ ನೂರಾರು ಜನ ಭೂಸುರರಿಗೆ ದಾನ ಮಾಡಿ, ಅವರಿಂದ ಸೇವಿತರಾಗಿ ರಾಜ್ಯದಲ್ಲೆಲ್ಲಾ ಸತ್ಕರ್ಮಾನುಷ್ಠಾನಗಳಿಂದ ಪ್ರಜರು ಬಾಳುವಂತೆ ಮಾಡಿದರು.
ಪರವಾದಿಗಳಿಗೆ ಎದೆನೋವಿನಂತೆ, ಕಲಿಗುಣಗಳಿಗೆ ವಿಷಗ್ರಂಥ ಮುಕುಲದಂತೆ, ಶ್ರೀಕಮಲಾಕ್ಷ ಭಕ್ತಿಗೆ ಬಿರುದಿನ ಡಿಂಡಿಮದಂತೆ, ಧೈರ್ಯಪಂಚಾನನಕ್ಕೆ ಪರ್ವತ ಕಂದರದಂತೆ, ಮಧ್ವಮತಗೋಪುರಕ್ಕೆ ಮಣಿಮಯ ಕುಂಭದಂತೆ, ನಿಯಮಭಂಡಾರದ ಕಾವಲುಗಾರನಂತೆ ವಿರಾಜಿಸುತ್ತಿದ್ದ ತಪೋನಿಧಿಗಳಾದ ಶ್ರೀವ್ಯಾಸರಾಜರು ಸಕಲ ದುರ್ವಾದಿಕುಲದ ಅಹಂಕಾರವನ್ನು ನಿರ್ಮೂಲಗೊಳಿಸಿ, ಪ್ರಶಾಂತಮನಸ್ಕರಾಗಿ ಸಕಲ ಧರ್ಮಗಳಿಗೂ ಸಂಜೀವಿನಿಯಂತಿರುವ ಶ್ರೀಮಧ್ವಾಚಾರ್ಯರ ವೈದಿಕತತ್ತ್ವವಾದ ಮತವನ್ನು ಜಗತ್ತಿನಲ್ಲಿ ಸ್ಥಿರಗೊಳಿಸಲು "ತಾತ್ಪರ್ಯಚಂದ್ರಿಕಾ, ತರ್ಕತಾಂಡವ ಹಾಗೂ ನ್ಯಾಯಾಮೃತ' ಮುಂತಾದ ಶ್ರೇಷ್ಠಗ್ರಂಥಗಳನ್ನು ರಚಿಸಿ, ಶ್ರೀಹರಿವಾಯುಗಳಿಗೆ ಸಮರ್ಪಿಸಿದರು.
ಶ್ರೀಗಳವರ “ವ್ಯಾಸತ್ರಯ'ವು ಮಹತ್ವಾರ್ಥಗರ್ಭಿತವೂ, ಸುರಚಿರಪದ ಬಂಧುರಿತವೂ, ಅಬಾಧಿತ ಯೋಗವುತ್ಪತ್ತಿ ಯುಕ್ತವೂ, ಜೀವೇಶ್ವರಭೇದಸಾಧಕವೂ, ಜ್ಞಾನಿಜನಸಂಸೇವ್ಯವೂ, ಪ್ರೇರಕವೂ, ಶ್ರೀಹರಿಮಹಿಮಾಪ್ರಶಂಸಾಪರವೂ, ಪರಪಕ್ಷ ಪಂಡಿತರಿಗೆ ಮರ್ಮಭೇದಕವೂ ಆಗಿತ್ತು. ಶ್ರೀಯವರ ಈ ಅಸಾಧಾರಣ ಗ್ರಂಥಗಳ ಮಹಿಮೆಯನ್ನು ಕೇಳಿ ಸಕಲ ದಿಕ್ಕು-ವಿದಿಕ್ಕುಗಳಿಂದ ಅನೇಕ ಪಂಡಿತರು ಜಲಧಾರೆಯು ಸಮುದ್ರಕ್ಕೆ ಬಂದು ಸೇರುವಂತೆ ವಿದ್ಯಾನಗರಿಗೆ ಆಗಮಿಸಿ ಅನ್ವರ್ಥಕವಾದ “ವಿಶ್ವಪಾವನ” ಮಠದಲ್ಲಿ ಶ್ರೀಯವರಲ್ಲಿ ಅಮೂಲಾಗ್ರವಾಗಿ ಆ ಗ್ರಂಥಗಳನ್ನು ಅಧ್ಯಯನ ಮಾಡಿ ಕೃತಾರ್ಥರಾಗುತ್ತಿದ್ದರು.
ಶ್ರೀವ್ಯಾಸರಾಜಯತಿಸಾರ್ವಭೌಮರ ವದನಸುಧಾಂಶುವಿನಿಂದ ಹೊರಹೊಮ್ಮಿದ 'ತಾತ್ಪರ್ಯಚಂದ್ರಿಕೆ' ಎಂಬ ಬೆಳದಿಂಗಳು ಅವರಿಗೆ ಜಗತ್ತಿನಲ್ಲೆಲ್ಲಾ ಹರಡಿ ಕವಿದಿದ್ದ ಮಿಥ್ಯಾಜ್ಞಾನವೆಂಬ ಅಜ್ಞಾನಾಂಧಕಾರವನ್ನು ಪರಿಹರಿಸಿತು. ಆನಂದಪ್ರದವಾದ ಆನಂದತೀರ್ಥರ ಸನ್ಮತವೆಂಬ ಕ್ಷೀರಸಮುದ್ರವು ಹರುಷಭರದಿಂದ ಉಕ್ಕಿಹರಿಯಿತು.163 ವ್ಯಾಸಯೋಗೀಂದ್ರ ವಿಲಸಿತ ವಾಕ್ ನರ್ತಕಿಯು ಮಾಡಿದ 'ತರ್ಕತಾಂಡ'ವೆಂಬ ನೃತ್ಯವಿಲಾಸವನ್ನು ಕಂಡು ವಿದ್ವಜ್ಜನರ ಮನದಲ್ಲಿ ಉಲ್ಲಾಸದ ಉದ್ರೇಕವಾಯಿತು.164 ಅನುಗ್ರಹಪೂರ್ವಕವಾಗಿ ವ್ಯಾಸತೀರ್ಥರೆಂಬ ಶ್ರೀಹರಿಯು (ಮೋಹಿನೀ) 'ನ್ಯಾಯಾಮೃತ'ವೆಂಬ ಸುಧೆ (ಅಮೃತ)ವನ್ನು ಉಣಬಡಿಸುತ್ತಿರಲು ಭೂದೇವತೆಗಳೆಂಬ ವಿದ್ವಾಂಸರು ಪ್ರತ್ಯರ್ಥಿಗಳನ್ನು ತೃಣವಾಗಿ ಕಂಡರು.
ಮಹಾಮಹಿಮೋಪೇತರಾದ ಶ್ರೀವ್ಯಾಸತೀರ್ಥರ ಪ್ರಚುರಶಾಸ್ತ್ರ ಪ್ರಬಂಧ ಪ್ರಣಯನ ಪ್ರಾವೀಣ್ಯತೆಯನ್ನೂ ಲೋಕಾಲೋಕ ಪರ್ವತಗಳವರೆಗೆ ಹರಡಿರುವ ಕೀರ್ತಿಯನ್ನೂ, ಅನೇಕ ದ್ವೀಪಾಂತರದ ರಾಜ-ಮಹಾರಾಜರು ಆಗಾಗ್ಗೆ ಗುರುಗಳಿಗೆ ಮಾಡುತ್ತಿದ್ದ ಪೂಜಾದಿಗಳನ್ನೂ, ಅವರ ಅಪೂರ್ವ ಅಖಂಡ ತೇಜಃಪ್ರಭಾವವನ್ನೂ ದರ್ಶನಮಾತ್ರದಿಂದಾಗುವ ನಿಗ್ರಹಾನುಗ್ರಹ ಸಾಮರ್ಥ್ಯವನ್ನೂ, ದಾತೃತ್ವದಲ್ಲಿ ವಿಖ್ಯಾತವಾದ ಕಲ್ಪವೃಕ್ಷವನ್ನೂ ಮೀರಿಸುವ ವೈಶಿಷ್ಟ್ಯವನ್ನೂ ಕಂಡು ಆಶ್ಚರ್ಯಾನಂದಭರಿತನಾಗುತ್ತಿದ್ದ ಸಾಮ್ರಾಟ್ ವೀರನರಸಿಂಹಪ್ರಭುವು ವಿನಯಾತಿಶಯದಿಂದ ಗುರುಗಳ ಗುಣಮಹಿಮಾದಿಗಳನ್ನು ಹೊಗಳುತ್ತಾ, ತನ್ನ ತಂದೆಯಾದ ನರಸಭೂಪಾಲನಿಗಿಂತ ಅತಿ ಹೆಚ್ಚಾಗಿ ದಶರಥಚಕ್ರವರ್ತಿಯು ವಸಿಷ್ಠ ಮುನಿಗಳನ್ನು ಅರ್ಚಿಸುತ್ತಿದ್ದಂತೆ ಭಕ್ತಿಶ್ರದ್ಧಾದಿಗಳಿಂದ ಶ್ರೀವ್ಯಾಸಯೋಗಿಗಳನ್ನು ಪೂಜಿಸಿದನು.
ಹೀಗೆ ಆ ವೀರನರಸಿಂಹನು ಶ್ರೀವ್ಯಾಸರಾಜರನ್ನು ತನ್ನ ಇಷ್ಟದೇವತೆಯಂತೆ ಭಾವಿಸಿ ವಿವಿಧ ರೀತಿಯಿಂದ ಪೂಜಿಸುತ್ತಾ, ಅವರಿಂದ ತತ್ವ, ಧರ್ಮೋಪದೇಶಗಳನ್ನು ಪಡೆದು, ಅವರ ಮಾರ್ಗದರ್ಶನದಲ್ಲಿ ಸಕಲ ಪ್ರಜೆಗಳನ್ನೂ ತನ್ನ ಸ್ವಂತ ಮಕ್ಕಳಂತೆ ಕಾಣುತ್ತಾ ಧರ್ಮರತನಾಗಿ ಕನ್ನಡ ಸಾಮ್ರಾಜ್ಯವನ್ನು ಪರಿಪಾಲಿಸುತ್ತಾ ಕೀರ್ತಿ ಗಳಿಸಿದನು.