|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ನಾಲ್ಕನೆಯ ಉಲ್ಲಾಸ

ಶ್ರೀವ್ಯಾಸರಾಜಯತಿಸಾರ್ವಭೌಮರು

೪೨. ಶ್ರೀವ್ಯಾಸರಾಜರ ವಾದ ದಿಗ್ವಿಜಯ ವೈಖರಿ

ಶ್ರೀವ್ಯಾಸರಾಜರು ಎರಡು ಬಾರಿ ಉತ್ತರಭಾರತ ಸಂಚಾರ ಮಾಡಿ ಆಗಿನ ಕಾಲದ ದಿಗ್ಧಂತಿ ಪಂಡಿತರುಗಳನ್ನು ವಾದದಲ್ಲಿ ಜಯಿಸಿ ಶಿಷ್ಯರನ್ನಾಗಿ ಮಾಡಿಕೊಂಡಿದ್ದರು. ಸಾಕ್ಷಾತ್ ಸರಸ್ವತಿಯ ಅಪರಾವತಾರರಂತಿದ್ದ ಗುರುವರರ ವಿದ್ಯಾವೈಭವ, ವಾದವೈಖರಿಗಳಿಂದ ಪರವಾದಿಗಳು ಒಳಗೊಳಗೇ ಕುದಿಯುತ್ತಿದ್ದರು. ಸಾಮ್ರಾಟ್ ನರಸಭೂಪಾಲನು ಶ್ರೀಯವರ ಶಿಷ್ಯನಾಗಿ ರಾಜಗುರುಗಳಾದ ಅವರಿಗೆ ಅಸದೃಶ ಮಾನ-ಮರ್ಯಾದೆಗಳನ್ನು ಸಲ್ಲಿಸುತ್ತಾ ಅವರ ಉಪದೇಶದಂತೆ ರಾಜ್ಯಭಾರ ಮಾಡುತ್ತಿದ್ದುದರಿಂದ ಗುರುಗಳ ಕೀರ್ತಿ ಎಲ್ಲೆಡೆಯಲ್ಲಿಯೂ ವ್ಯಾಪಿಸಿತ್ತು. ಗುರು ವ್ಯಾಸಮುನಿಗಳ ಅನ್ಯಾದೃಶ ವಿದ್ಯಾಪರಿಪಾಟಿ ಹಾಗೂ ವಿಜಯಪರಂಪರೆಗಳ ಕೀರ್ತಿಯ ವಾರ್ತೆ ಅಂಗ-ವಂಗ-ಕಳಿಂಗ-ಚೋಳ-ಕೇರಳ ಮುಂತಾದ ನಾನಾ ದೇಶಗಳಲ್ಲಿ ಪಸರಿಸಿದ್ದರಿಂದ ಆ ವಾರ್ತೆಯು ಆಯಾ ದೇಶಗಳಲ್ಲಿದ್ದ ಪಂಡಿತರ ಕಿವಿಗಳಿಗೆ ಶೂಲದಂತೆ ಅಸಹನೀಯ ದುಃಖವನ್ನು ತಂದೊಡ್ಡಿತು. ಗುರುಗಳ ವಿಜಯ ವೈಜಯಂತಿಯ ಹಿರಿಮೆ-ಗರಿಮೆಗಳನ್ನು ಕೇಳಿದ ವಿದ್ವಾಂಸರ ಮನಸ್ಸು ಕಲಕಿ, ಅವರ ಆನಂದೋತ್ಸಾಹಗಳು ಕುಂದಿ ಅವರು ಶ್ರೀವ್ಯಾಸತೀರ್ಥರ ಬಗ್ಗೆ ಅಸೂಯೆಪಡಹತ್ತಿದರು. ಹೇಗಾದರೂ ಮಾಡಿ ವ್ಯಾಸಮುನಿಗಳ ಕೀರ್ತಿಯನ್ನು ತಗ್ಗಿಸಲು ಅವರು ನಿರೀಕ್ಷಿಸುತ್ತಿದ್ದರು. ಅದಕ್ಕೆ ಒಂದು ಅವಕಾಶವೂ ಒದಗಿಬಂದಿತು. 

ಕಳಿಂಗ ದೇಶದಲ್ಲಿ ವಿಖ್ಯಾತನಾಗಿದ್ದ ಬಸವಾಭಟ್ಟನೆಂಬ ಪ್ರಕಾಂಡ ಪಂಡಿತನಿಗೆ ಶ್ರೀವ್ಯಾಸರಾಜರಲ್ಲಿ ಅತ್ಯಂತ ದ್ವೇಷವಿತ್ತು. ಕಳಿಂಗ ರಾಜ ಮೊದಲಿನಿಂದಲೂ ವಿಜಯನಗರದ ವೈಭವವನ್ನು ಕಂಡು ಕರಬುತ್ತಾ ಕನ್ನಡ ಸಾಮ್ರಾಜ್ಯದ ಕಡುವೈರಿಯಾಗಿದ್ದನು. ಅವನು ವಿಜಯನಗರದ ಈ ಅಭ್ಯುದಯಕ್ಕೆ ಪ್ರಕಾಂಡಪಂಡಿತರೂ, ಜ್ಞಾನಿನಾಯಕರೂ, ಮಹಾತಪಸ್ವಿಗಳೂ ಆಗಿದ್ದ ಶ್ರೀವ್ಯಾಸರಾಜರ ಪ್ರಭಾವವೇ ಕಾರಣವೆಂದು ನಂಬಿದ್ದನು. ಅಂತೆಯೇ ಕನ್ನಡ ಚಕ್ರವರ್ತಿಗಳ ಮೇಲಿದ್ದ ವ್ಯಾಸಮುನಿಗಳ ಪ್ರಭಾವವನ್ನು ಹೇಗಾದರೂ ಮಾಡಿ ಕಡಿಮೆ ಮಾಡಿಬಿಟ್ಟರೆ - ಶ್ರೀವ್ಯಾಸರಾಜರಲ್ಲಿದ್ದ ಗೌರವವು ಹೋಗಿ ಅವರ ಅನುಗ್ರಹ ಸಾಮ್ರಾಟರಿಗೆ ದೊರಕದಂತಾಗಿ ಸಾಮ್ರಾಜ್ಯದ ಕೀರ್ತಿ ಕುಂದುವುದೆಂದು ಭಾವಿಸಿದ ಕಳಿಂಗಾಧಿಪತಿ ಕಪಿಲೇಶ್ವರ ಗಜಪತಿಯು ತನ್ನ ಆಸ್ಥಾನದ ಮಹಾಪಂಡಿತನಾದ ಬಸವಾಭಟ್ಟನನ್ನೂ ಇನ್ನಿತರ ಪಂಡಿತರನ್ನೂ ಪ್ರಚೋದಿಸಿ ವ್ಯಾಸರಾಜರನ್ನು ವಾದದಲ್ಲಿ ಪರಾಭವಗೊಳಿಸಲು ಪ್ರೋತ್ಸಾಹಿಸಿದನು. ಮೊದಲೇ ಗುರುಗಳಲ್ಲಿ ದ್ವೇಷ ಕಾರುತ್ತಿದ್ದ ಬಸವಾಭಟ್ಟಾದಿಗಳಿಗೆ ತಮ್ಮ ರಾಜನ ಬೆಂಬಲ ದೊರಕಿದ್ದರಿಂದ ಮೈಯ್ಯುಬ್ಬಿ ವ್ಯಾಸಮುನಿಗಳನ್ನು ಜಯಿಸಲು ನೂರಾರು ಜನ ಪಂಡಿತರು ಶಿಷ್ಯರೊಡನೆ ವಿಜಯನಗರಕ್ಕೆ ಹೊರಟರು. 

ಶ್ರೀವ್ಯಾಸರಾಜರ ವಿಜಯದ ಕಥೆ ತನ್ನದೇ ಆದ ವೈಶಿಷ್ಟ್ಯದಿಂದ ಕೂಡಿದ್ದಿತು. ಅದು ಶಾರದಾದೇವಿಯ ಮನದ ಬಯಕೆಯಂತೆಯೂ, ಕರ್ಣನಿಗೆ ಮನೋವೇದನೆಯನ್ನುಂಟುಮಾಡುವ ಪಾರ್ಥನ ಖಡ್ಗದಂತೆಯೂ, ಐರಾವತದ ಜಲಕ್ರೀಡೆಯಂತೆ ಕೋಭಕರವಾಗಿಯೂ, ಸುವಾಸನೆಯನ್ನು ಬೀರುವ ಸುಳಿಗಾಳಿಯ ಗಮನದಂತೆಯೂ ಮೆರೆದಿತ್ತು.135 ಶ್ರೀವ್ಯಾಸಭಗವಾನರ ವಿದ್ಯಾವೈಭವದ ವಿಜಯವಾರ್ತೆಗಳನ್ನಾಲಿಸಿ ಕಡುನೊಂದ ದೇಶ-ವಿದೇಶಗಳ ಪರವಾದಿ ಪಂಡಿತರು ವ್ಯಾಸಮುನೀಂದ್ರರನ್ನು ಪರಾಜಯಗೊಳಿಸಲು ತಂಡೋಪತಂಡವಾಗಿ ವಿಜಯನಗರದತ್ತ ಧಾವಿಸಿದರು. 

ಹೀಗೆ ಬಂದ ವಿದ್ವಾಂಸರು ಮಹಾಪಂಡಿತರಾಗಿದ್ದರು. ಸರಸ್ವತೀದೇವಿಯೇ ಅವರಲ್ಲಿ ವಿಲಾಸದಿಂದ ಕ್ರೀಡಿಸುತ್ತಿರುವಳೋ ಎಂಬಷ್ಟು ಮಟ್ಟಿಗೆ ಅವರು ಪ್ರಕಾಂಡ ಪಾಂಡಿತ್ಯಪೂರ್ಣರಾಗಿದ್ದರು. ವೇದವೇದಾಂತ ಪರಿಣತರೂ, ಅನೇಕ ಶಾಸ್ತ್ರಗ್ರಂಥಗಳನ್ನು ರಚಿಸಿದವರೂ, ವಾದವಿದ್ಯಾಕೋವಿದರೂ ಆಗಿದ್ದರು.136 ಇಂತಹ ಪಂಡಿತರು ವ್ಯಾಸಯತಿಗಳೊಡನೆ ವಾದಮಾಡಬಯಸಿ ಉತ್ಸಾಹದಿಂದ ವಿದ್ಯಾನಗರಿಯತ್ತ ಧಾವಿಸಿ ಒಂದು ದಿನ ವಿಜಯನಗರವನ್ನು ತಲುಪಿದರು. ಅವರು ವಿಷಜಲದಿಂದ ಹುಟ್ಟಿದ ಮಹಾವೃಕ್ಷಗಳಂತೆ ಅಸೂಯಾಪರರಾಗಿದ್ದರು. ಅವರಲ್ಲಿ ಕಳಿಂಗದೇಶದವರು ಕೆಲವರು, ಕೆಲವರು ಮಾಳವರು, ಕೆಲವರು ಚೋಳರು, ಕೇರಳದವರು ಮತ್ತೆ ಕೆಲವರು ಹೀಗೆ ಅವರೆಲ್ಲರೂ ಒಂದೆಡೆ ಸೇರಿ ಅಹಮಹಮಿಕಯಾ (ನಾ ಮುಂದೆ ತಾ ಮುಂದೆ ಎಂದು) ಶ್ರೀವ್ಯಾಸರಾಜರನ್ನು ವಾದದಲ್ಲಿ ಜಯಿಸಬಯಸಿ, ಅರಮನೆಯ ಮಹಾದ್ವಾರದ ತೋರಣಸ್ತಂಭಕ್ಕೆ ತಮ್ಮ ಬಿರುದುಬಾವಲಿಗಳ ಪತ್ರಗಳನ್ನು ಕಟ್ಟಿ ಅಟ್ಟಹಾಸಗೈದರು.

ಆನಂತರ, ಅವರು ಬಹು ಆಡಂಬರವನ್ನು ಪ್ರದರ್ಶಿಸುತ್ತಾ ಇದಕ್ಕಿದಂತೆ ಅರಸನ ಒಡೋಲಗಕ್ಕೆ ಬಂದು ಸೇರಿದರು. ರಾಜಾಸ್ಥಾನದಲ್ಲಿ ಸಚಿವ-ಸಾಮಂತ-ಕವಿ-ಪುರೋಹಿತ-ರಾಜಮನ್ನಯರೇ ಮುಂತಾದವರು ಸಮುಚಿತಾಸನಗಳಲ್ಲಿ ಮಂಡಿಸಿದ್ದರು. ನರಸಭೂಪಾಲ ರತ್ನಸಿಂಹಾಸನದಲ್ಲಿ ವಿರಾಜಿಸಿದ್ದ, ಅವರು ಸುಂಟರಗಾಳಿಯಂತೆ ಒಳನುಗ್ಗಿದರು.138 ಪ್ರತಿವಾದಿ ಪಂಡಿತರ ಆರ್ಭಟವನ್ನು ನೋಡಿ, ಶ್ರೀವ್ಯಾಸರಾಜಗುರುವರ್ಯರ ವಿದ್ಯಾಪ್ರೌಢಿಮೆ-ವಾದಕುಶಲತೆಗಳನ್ನು ಮನಗಂಡಿದ್ದರೂ ನರಸಮಹೀಪಾಲ ರೋಷಾವೇಶಪೂರ್ಣವಾದ ಪ್ರತಿಪಕ್ಷ ಪಂಡಿತರ ಅಬ್ಬರದಿಂದ ಕ್ಷಣಕಾಲ ನಿಬ್ಬೆರಗಾದನು. ಶ್ರೀವ್ಯಾಸಯೋಗೀಂದ್ರರೊಡನೆ ವಾದಿಸಲು ಬಂದಿರುವುದಾಗಿ ಪರವಾದಿಗಳು ನುಡಿಯಲು ನರಸಭೂಪಾಲನು ಅವರೆಲ್ಲರನ್ನೂ ಉಚಿತಾಸನಗಳಲ್ಲಿ ಕುಳ್ಳಿರಿಸಿ ರಾಜಗುರುಗಳಲ್ಲಿ ವಿಷಯವನ್ನರುಹಲು ರಾಜಪುರೋಹಿತರನ್ನು ಗುರುಗಳೆಡೆಗೆ ಕಳುಹಿಸಿದನು. 

ಶಿಷ್ಯರಿಗೆ ಪಾಠ ಹೇಳುತ್ತಾ ಕುಳಿತಿದ್ದ ಶ್ರೀವ್ಯಾಸಯೋಗೀಂದ್ರರಲ್ಲಿಗೆ ಕೆಲಪಂಡಿತರೊಡನೆ ಬಂದು ನಮಸ್ಕರಿಸಿದ ರಾಜಪುರೋಹಿತರು ಎಲ್ಲ ವಿಚಾರಗಳನ್ನೂ ಅರುಹಿ ಆಸ್ಥಾನಕ್ಕೆ ದಯಮಾಡಿಸಬೇಕೆಂದು ಪ್ರಾರ್ಥಿಸಿದರು. ಶ್ರೀವ್ಯಾಸರಾಜರು ನಗುಮುಖದಿಂದ “ತಥಾಸ್ತು” ಎಂದು ಮೇಲೆದ್ದು ಸುವರ್ಣಪಾಲಕಿಯಲ್ಲಿ ಕುಳಿತು ಪಂಡಿತಮಂಡಲಿ ಶಿಷ್ಯಜನರೊಡನೆ ಅರಮನೆಗೆ ದಿಗ್ವಿಜಯ ಬೆಳೆಸಿದರು. ಅರಮನೆಯ ಮಂಭಾಗದ ತೋರಣಸ್ತಂಭಗಳಿಗೆ ಕಟ್ಟಿರುವ ಪರವಾದಿಗಳ ಬಿರುದಾವಳೀ ಪತ್ರಗಳನ್ನು ಕಂಡು ನಸುನಕ್ಕು ಓರ್ವ ಸಮರ್ಥ ಶಿಷ್ಯನಿಂದ ಅವನ್ನು ಕೆಡವಿಸಿ, ವಾದ್ಯವೈಭವ-ಬಿರುದಾವಳಿ-ಜಯಘೋಷಗಳೊಡನೆ ಪಾಲಕಿಯಲ್ಲಿ ಕುಳಿತಂತೆಯೇ ನರಪತಿಯ ಸಭೆಯನ್ನು ಪ್ರವೇಶಿಸಿದರು. ರಾಜಗುರುಗಳ ಆಗಮನವನ್ನು ಸೂಚಿಸುವ ತಾಳಧ್ವನಿ, ಜಯಘೋಷಗಳು ಸಂಭ್ರಮದಿಂದ ಗಗನತಲದಲ್ಲಿ ವ್ಯಾಪಿಸಿದವು. 

ಪರಮಮಂಗಳಕರವಾದ ಆ ಧ್ವನಿಯನ್ನಾಲಿಸಿ, ಸಜ್ಜನರು ಮುದಗೊಂಡರು. ಪ್ರತಿಪಕ್ಷದವರು ಬೆದರಿದರು. ಪರತಂತ್ರವನ್ನು ಭೇದಿಸುವರೆಂದು ಸೂಚಿಸುವ ಆ ಧ್ವನಿಯು ಪರವಾದಿಗಳಿಗೆ ಖೇದವನ್ನುಂಟುಮಾಡಿತು.141 ನರಸಭೂಪಾಲನು ಸಂತೋಷದಿಂದ ಶ್ರೀವ್ಯಾಸಮುನಿಗಳಿಗೆ ವಂದಿಸಿ ಎದುರುಗೊಂಡು ಕರೆತಂದು ಸಿಂಹಾಸನದಲ್ಲಿ ಕೂಡಿಸಿದನು. ಶ್ರೀಪಾದಂಗಳವರು ನಗೆಮೊಗದಿಂದ ಭದ್ರಾಸನದಲ್ಲಿ ಮಂಡಿಸಿದರು. ಗುರುಗಳ ವದನದಲ್ಲಿ ಒಡಮೂಡಿದ ಮಂದಹಾಸ, ಪರವಾದಿ ಗುಂಪನ್ನು ತೃಣಪ್ರಾಯವಾಗಿ ಕಂಡಂತೆ ಶೋಭಿಸುತ್ತಿತ್ತು.142 ಸಾಮ್ರಾಟ್ ನರಸಭೂಪಾಲನು ವ್ಯಾಸಭಿಕ್ಷುಗಳಿಗೆ ಸಲ್ಲಿಸಿದ ಅಗ್ರಪಾಜೆಯನ್ನು ಕಂಡು ವಿರೋಧಿಗಳು ಬಹುಸಂಕಟಪಟ್ಟರು. ಹಿಂದೆ ರಾಜಸೂಯಯಾಗದಲ್ಲಿ ಧರ್ಮರಾಜನು ಶ್ರೀಕೃಷ್ಣಪರಮಾತ್ಮನಿಗೆ ಮಾಡಿದ ಅಗ್ರಪೂಜೆಯನ್ನು ನೋಡಿ ಅಸೂಯೆಯಿಂದ ತಳಮಳಿಸಿದ ಶಿಶುಪಾಲ-ದಂತವಕ್ರರನ್ನು ನೆನಪಿಗೆ ತರುತ್ತಿತ್ತು ಆ ದೃಶ್ಯ! 

ಮೊದಲೇ ದರ್ಪದಿಂದ ಉನ್ಮತ್ತರಾದ ಪ್ರತಿವಾದಿಗಳು ತಮ್ಮ ಬಿರುದಪತ್ರಾದಿಗಳನ್ನು ಕಿತ್ತುಹಾಕಿಸಿದ್ದರಿಂದ ಇಮ್ಮಡಿ ರೋಷಾವೇಶಯುಕ್ತರಾಗಿ ಸರ್ಪಗಳಂತೆ ಬುಸುಗುಟ್ಟುತ್ತಿದ್ದರು. ಬಂದಿದ್ದಆ ಪರವಾದಿಗಳು ತಮ್ಮಲ್ಲಿ ಅತ್ಯಂತ ಪ್ರಬಲ ಪಂಡಿತನಾಗಿದ್ದ ಕಳಿಂಗದೇಶದ ಬಸವಾಭಟ್ಟನೆಂಬ ವಿದ್ವಾಂಸನನ್ನು ಆನೆಗಳ ಹಿಂಡು ಮದಿಸಿದ ಸಲಗವನ್ನು ವನರಾಜನ ಮೇಲೆ ಕಾಳಗ ಮಾಡಲು ಪ್ರೇರಿಸುವಂತೆ ಒತ್ತಾಯ ಮಾಡಿದರು. ವಾದಸಮಯದ ನಿಬಂಧನೆಗಳು ನಿಯಮಿತವಾಗಿ ಉಭಯಪಕ್ಷದವರೂ ಅದಕ್ಕೆ ಸಮ್ಮತಿಸಿದ ಮೇಲೆ ಇತಿಹಾಸಪ್ರಸಿದ್ಧವಾದ ವಾದವು ಪ್ರಾರಂಭವಾಯಿತು. 

ಶ್ರೀವ್ಯಾಸರಾಜರು ಪರವಾದಿಗಳ ಪೂರ್ವಪಕ್ಷಗಳನ್ನು ಅನೇಕ ಪ್ರಮಾಣಗಳಿಂದಲೂ, ಯುಕ್ತಿಪುಂಜ ಪರಂಪರೆ ಗಳಿಂದಲೂ ಲೀಲಾಮಾತ್ರದಿಂದ ಖಂಡನ ಮಾಡಿ ದೈತಸಿದ್ಧಾಂತವನ್ನು ಸ್ಥಾಪನೆ ಮಾಡಲಾರಂಭಿಸಿದರು. ಆಗ ಅವರು ಕೋಪತಾಪಗಳಿಲ್ಲದೆ ಪ್ರಶಾಂತಮನಸ್ಕರಾಗಿ ಮುಖದಲ್ಲಿ ನಗೆಮಲ್ಲಿಗೆಯನ್ನು ಅರಳಿಸುತ್ತಾ ಪಂಡಿತರು, ಕವಿಗಳು, ರಾಜ್ಯಕಾರ್ಯಧುರಂಧರಾದಿ ಸಭಾಸದರನ್ನು ಅವಲೋಕಿಸುತ್ತಾ ವಾದಮಾಡುತ್ತಿದ್ದರು. ಆಗವರ ಮುಖವು ಅರಳಿದ ತಾವರೆಯಂತೆ ಒಪ್ಪುತ್ತಿತ್ತು. ದಂತಪಂಕ್ತಿಯು ಬಕುಳ ಪುಷ್ಪಗಳ ಸಾಲನ್ನು ಅನುಸರಿಸಿತು. ಅವರ ವಾಣಿಯು ಭೋರ್ಗರೆದು ಅವ್ಯಾಹತವಾಗಿ ಹರಿದು ಬರುವ ಉತ್ತುಂಗ ಆಕಾಶ ಗಂಗೆಯ ಗಂಭೀರ ಮಂಗಳತರ೦ಗೋಪೇತ ಪ್ರವಾಹವನ್ನು ಹೋಲುತ್ತಿತ್ತು. ಅದು ಪ್ರತಿವಾದಿಗಳೆಂಬ ಪದ್ಮಗಳಿಗೆ ಕಳೆಗುಂದಿಸುವ ಚಂದ್ರಿಕೆಯಂತೆ ಕಂಗೊಳಿಸಿತು. 

ಸುಧಾಪರಿಮಳದ ಅಲೆಗಳಿಂದ ಶೋಭಿಸುವ ದೇವನದಿಯ ಪ್ರವಾಹದಂತೆ ಆರ್ಭಟಿಸಿತು. ಶ್ರೀವ್ಯಾಸರಾಜರ ವಾಣಿ! ಅದು ವೇದತ್ರಯಗಳೆಂಬ ಯುವತಿಯು ಧರಿಸಿದ ದುಕೂಲದಂತೆ ಸುವಾಸನೆ ಭರಿತವಾಗಿತ್ತು! ಹೀಗೆ ಯತಿಪುಂಗವ ಶ್ರೀವ್ಯಾಸಮುನೀಂದ್ರರೆಂಬ ದೇವಗುರುಗಳ (ಬೃಹಸ್ಪತ್ಯಾಚಾರ್ಯರ) ವಾದಸರಣಿಯು ರಾಜಸಭೆಯನ್ನು ಧ್ವನಿಮಯವನ್ನಾಗಿ ಮಾಡಿ ಆ ನಾದಲಹರಿಯಿಂದ ಎಲ್ಲೆಡೆ ವ್ಯಾಪಿಸಿತು. ಶ್ರೀವ್ಯಾಸರಾಜರು ವಾದಮಾಡುತ್ತಿರಲು ದೇವೇಂದ್ರನ ವಜ್ರಾಯುಧವೇನಾದರೂ ಪರ್ವತಗಳನ್ನು ಪುಡಿ ಪುಡಿ ಮಾಡಲು ಹೊರಟಿದೆಯೋ! ಅಥವಾ ಇದು ಪ್ರಳಯಕಾಲೀನ ಝಂಝಾವಾತದ ಪೆಟ್ಟಿನಿಂದ ಅಲ್ಲೋಲಕಲ್ಲವಾದ ಸಮುದ್ರದ ಕೋಲಾಹಲವೋ! ಇಲ್ಲವೇ, ವಜ್ರಾಯುಧದ ಹೊಡೆತವನ್ನು ತಾಳಲಾರದೆ ಪರ್ವತ ನಿಕರಗಳು ಭಯಂಕರ ನಾದ ಮಾಡುತ್ತಾ ಬೀಳುತ್ತಿರುವುದರಿಂಟಾದ ಭಯಂಕರ ಧ್ವನಿಯೋ? ಅಥವಾ ವರಾಹದೇವರ ದಷ್ಟಗಳಿಂದ ಹೊಡೆಯಲ್ಪಟ್ಟ ಪಾತಾಳ ಲೋಕದ ಅತ್ಯುತ್ಕಟ ನಿನಾದವಾಗಿರಬಹುದೇ ? ಎಂಬಂತೆ ಶ್ರೀಯವರ ಗಂಭೀರವಾದ ಧ್ವನಿಯು ಪ್ರತಿಪಕ್ಷ ಪಂಡಿತರನ್ನು ತಲ್ಲಣಗೊಳಿಸಿ ಕಂಗೊಳಿಸಿತು.

ಹೀಗೆ ಶ್ರೀವ್ಯಾಸರಾಜರು ಮತ್ತು ಬಸವಾಭಟ್ಟರುಗಳು ಅತ್ಯಂತ ಪಾಂಡಿತ್ಯಪೂರ್ಣವಾಗಿ ಪ್ರತಿಭಾಪುಂಜರಂಜಿತ ಯುಕ್ತಿ-ಪ್ರತಿಯುಕ್ತಿಗಳಿಂದ ವಾದಮಾಡುತ್ತಾ ಕೋಲಾಹಲ ಮಾಡುತ್ತಿರಲು ಒಂದು ತಿಂಗಳು ಒಂದೇ ಒಂದು ಕ್ಷಣದಂತೆ 

ಕಳೆದುಹೋಯಿತು!

ಮಾರನೆಯ ದಿವಸ ಶ್ರೀವ್ಯಾಸರಾಜಯತಿಗಳು ತಮ್ಮ ವಾಗ್ವಿಲಾಸ, ಅನುವಾದ ಶೈಲಿ, ಪ್ರಮಾಣೋದಾಹರಣ ಚಾತುರ್ಯ, ಸ್ವಮತ ಸ್ಥಾಪನ ಕೌಶಲ್ಯಗಳಿಂದ ನಸುನಗುತ್ತ ವಾದಮಾಡಿ ಬಸವಾಭಟ್ಟ ಮತ್ತು ಇತರ ಅನೇಕ ಪರವಾದಿಗಳನ್ನು ಲೀಲೆಯಿಂದಲೋ ಎಂಬಂತೆ ನಿರುತ್ತರಗೊಳಿಸಿ ವಿಜಯಶಾಲಿಗಳಾದರು. ಸಭಾಸದರೆಲ್ಲರೂ ಬಹು ವಿಸ್ಮಯಾನ್ವಿತರಾಗಿ ರಾಜಗುರುಗಳ ವಾಗೈಖರಿ- ಯನ್ನು ಕೊಂಡಾಡುತ್ತಿರಲು ಶ್ರೀವ್ಯಾಸಮುನೀಂದ್ರರು ರುದ್ರದೇವರು ತ್ರಿಶಿರರನ್ನು ತ್ರಿಶೂಲದಿಂದ ಸಂಹರಿಸಿದಂತೆ ಮೂವರು ಪಂಡಿತರನ್ನು ಜಯಿಸಿದರು. ಚತುರ್ಭುಜಗಳಿಂದ ಜನಾರ್ದನನು ಒಮ್ಮೆಲೇ ನಾಲ್ವರು ಅಸುರರನ್ನು ನಾಶಪಡಿಸಿದಂತೆ ನಾಲ್ವರು ಪಂಡಿತರನ್ನು ನಿರಸನಗೊಳಿಸಿದರು. ತ್ರಿಲೋಕವಿಜಯಿ ಧನಂಜಯನು ತನ್ನ ಶರದೃಷ್ಟಿಯಿಂದ ಅನೇಕರನ್ನು ಪರಾಜಯಗೊಳಿಸಿದಂತೆ ತಮ್ಮ ಅಪೂರ್ವ ವಾಕ್‌ ಶರ ವೃಷ್ಟಿಯಿಂದ ಅನೇಕ ಪಂಡಿತರನ್ನು ಗೆದ್ದರು. ಹೀಗೆ ನಿರಾಯಾಸವಾಗಿ ವ್ಯಾಸತೀರ್ಥರು ಪ್ರತಿಪಕ್ಷೀಯ ಪಂಡಿತರೆಲ್ಲರನ್ನೂ ಸೋಲಿಸಿ ತಮ್ಮ ಕೀರ್ತಿಚಂದ್ರಿಕೆಯು ಸಕಲದಿಗಂತರಾಳಗಳಲ್ಲಿಯೂ ಶೋಭಿಸುವಂತೆ ಮಾಡಿ ವಿಜಯಲಕ್ಷ್ಮಿಯನ್ನಾಲಂಗಿಸಿ ಸರ್ವರನ್ನೂ ಪರಮಾನಂದಗೊಳಿಸಿದರು.

ಶ್ರೀವ್ಯಾಸಯತಿಸಾರ್ವಭೌಮರ ಈ ಅಪೂರ್ವ ಪರವಾದಿ ದಿಗ್ವಿಜಯವನ್ನು ಕಂಡು ಮೇರೆ ಮೀರಿದ ಆನಂದದಿಂದ ಸಮಸ್ತ ಸಭಾಸದರು ಪ್ರಚಂಡ ಕರತಾಡನ, ಜಯಘೋಷ ಮಾಡಿದರು. ಆ ಹರ್ಷಧ್ವನಿ-ಕರತಾಡನ ಧ್ವನಿಗಳು ಗಗನವನ್ನೇ ಭೇದಿಸುವಂತಿತ್ತು : 

ವಿವಿಧ ದೇಶಗಳಿಂದ ಬಂದಿದ್ದ ಪ್ರತಿಪಕ್ಷ ಪಂಡಿತರು ತಮಗೊದಗಿದ ಅಪಕೀರ್ತಿಯನ್ನು ಸಹಿಸಲಾರದೆ ನಿಟ್ಟುಸಿರು ಬಿಡಹತ್ತಿದರು. ಕಳಿಂಗದೇಶದ ಮಹಾಪಂಡಿತ ಬಸವಾಭಟ್ಟನು ಪರಾಜಿತನಾಗಿ ರಾಜಸಭೆಯಲ್ಲಿ ಬಿಳುಪೇರಿದ ಮುಖದಿಂದ ಕಾಂತಿಹೀನನಾಗಿ ಕುಳಿತನು. ಸಹಿಸಲಾಗದ ಅಪಜಯದಿಂದ ಪರವಾದಿ ಪಂಡಿತರಲ್ಲಿ ಕೆಲವರಿಗೆ ಮೂಗುಗಳೊಡನೆ ಅಹಂಕಾರರಸವು ಒಣಗಿತು. ಮತ್ತೆಕೆವರಿಗೆ ಬೆವರಿನೊಡನೆ ಸಂತೋಷವು ತೊಲಗಿತು. ಇನ್ನೂ ಕೆಲವರು ಲಜ್ಜೆಯಿಂದ ತಲೆತಗ್ಗಿಸಿ ಕುಳಿತರು. ಮತ್ತೆ ಕೆಲವರು ಆಶ್ಚರ್ಯದೊಡನೆ ಭಯಗೊಂಡರು. ಹೀಗೆ ಪರವಾದಿಗಳಿಗೆ ಆತ್ಮನಿಂದನೆಯಿಂದಲೂ ಭಯದಿಂದಲೂ ತಮ್ಮ ತಮ್ಮ ಮತಸಿದ್ಧಾಂತಗಳಲ್ಲಿ ಸಂದೇಹವುಂಟಾಯಿತು. ಇನ್ನುಳಿದವರಿಗೆ ಆ ದಿನವು ಕನಸಿನಂತೆ ಕಾಣಹತ್ತಿತು.

ಶ್ರೀವ್ಯಾಸರಾಜರನ್ನು ಕಂಡು ಸಾಮ್ರಾಟ್ ನರಸಭೂಪಾಲನು ಮನದಲ್ಲಿ ಆಶ್ಚರ್ಯಪಡುತ್ತಾ ಶ್ಲಾಘನೆಯಿಂದ ಶಿರಃಕಂಪನ ಮಾಡುತ್ತಾ, ಕಣ್ಣುಗಳಲ್ಲಿ ಆನಂದಬಾಷ್ಪವನ್ನು ಹರಿಸುತ್ತಾ ಜಯಸ್ತುತಿಗೈದು ರೋಮಾಂಚನ ಕವಚಿತನಾಗಿ ಭಕ್ತಿಯ ಅಂಜಲಿಬದ್ಧನಾಗಿ ಆನಂತರ ನರಸಭೂಪಾಲನು ಕನ್ನಡನಾಡಿಗೆ ಕೀರ್ತಿಯನ್ನು ತಂದಿತ್ತ ಶ್ರೀವ್ಯಾಸರಾಜರನ್ನು ಅತ್ಯಂತ ಭಕ್ತಿಭಾವದಿಂದ ಸನ್ಮಾನಿಸಿದನು. ಅವನು ಅತ್ಯಂತ ವಿನಯ-ಭಕ್ತಿಯುತನಾಗಿ ಮುಂದೆ ಬಂದು ಸಮಸ್ತ ಪರವಾದಿಗಳು ನೋಡುತ್ತಿರುವಂತೆಯೇ ಅತಿಶುಭ್ರವಾದ ಬೆಲೆಬಾಳುವ ದುಕೂಲಪೀತಾಂಬರಗಳು, ದೊಡ್ಡದೊಡ್ಡ ಸುವರ್ಣ ಕೊಪ್ಪರಿಗೆಗಳು, ಪದ್ಮರಾಗಮಣಿಖಚಿತವಾದ ಸುವರ್ಣ ಹಿಡಿಕೆಗಳುಳ್ಳ ಮೃದುವಾದ ನವಿಲುಗರಿಯ ಬೀಸಣಿಕೆಗಳು ಮತ್ತು ರತ್ನಖಚಿತವಾದ ಕನಕಮಯ ಪಾದುಕೆಗಳು ಅನೇಕ ನದಿ-ತಟಾಕ-ಆರಾಮಗಳಿಂದ ಕೂಡಿದ ಫಲಭರಿತವಾದ ಶ್ರೇಷ್ಠ ಗ್ರಾಮ-ಭೂಮಿಗಳು, ಸುವರ್ಣ ಶಿಬಿಕೆಗಳು, ಚಾಮರ-ಛತ್ರ-ಚೌರಿಗಳು, ಸುವರ್ಣಮಣಿಮಯ ಪೀಠಗಳು ಹೀಗೆ ಅನರ್ಘ ಕಾಣಿಕೆಗಳನ್ನು ಯತಿಕುಲಾವತಂಸರಾದ ಶ್ರೀವ್ಯಾಸರಾಜರಿಗೆ ಸಮರ್ಪಿಸಿ ನಮಸ್ಕರಿಸಿದನು.

ಆಗ ಶ್ರೀವ್ಯಾಸರಾಜರು ಸಮಸ್ತ ರಾಜಸಭೆಯು ಎದ್ದುನಿಂತು ಬೀಳ್ಕೊಡುತ್ತಿರಲು, ಅನುಸರಿಸಿ ನೂರಾರು ಜನರು ಬರುತ್ತಿರಲು, ವಿಜಯಸೂಚಕ ಭೇರಿ-ಕಹಳೆಗಳು ಮೊಳಗುತ್ತಿರಲು, ಸುವರ್ಣ ಪಾಲಕಿಯಲ್ಲಿ ಕುಳಿತು ಶಿಷ್ಯರು ಜಯಜಯಕಾರ ಮಾಡುತ್ತಿರಲು “ಲೋಕಪಾವನ” ಮಠಕ್ಕೆ ದಯಮಾಡಿಸಿದರು. 

ಶ್ರೀವ್ಯಾಸರಾಜರು ತಮ್ಮಿಂದ ಪರಾಜಿತರಾದ ಬಸವಾಭಟ್ಟ ಮುಂತಾದ ನೂರಾರು ಜನ ಪ್ರತಿಪಕ್ಷದ ಪಂಡಿತರುಗಳನ್ನು ತಮ್ಮ ಮಠಕ್ಕೆ ಕರೆಯಿಸಿಕೊಂಡು ಅವರನ್ನು ಅನೇಕ ರಜತ-ಸುವರ್ಣಪಾತ್ರ-ಹಾರ-ಕಂಕಣ, ಶಹಲು-ಪೀತಾಂಬರ ವಿಶೇಷ ಸುವರ್ಣನಾಣ್ಯಾದಿ ಸಂಭಾವನೆಗಳಿಂದ ಸನ್ಮಾನಿಸಿ ಫಲಮಂತ್ರಾಕ್ಷತೆಯನ್ನು ಕರುಣಿಸಿದರು. ಅಂದಿನ ಸಭೆಯಲ್ಲಿ ಹಾಜರಿದ್ದ ಜನರು, ಪರಾಜಿತ ಪಂಡಿತರನ್ನೂ ಗೌರವಿಸುವ ವ್ಯಾಸರಾಜರ ವಿದ್ಯಾಪಕ್ಷಪಾತ - ಪಂಡಿತರಲ್ಲಿನ ಅಭಿಮಾನ-ಔದಯ್ಯಾದಿ ಸದ್ಗುಣಗಳನ್ನು ಕಂಡು ಆಶ್ಚರ್ಯಚಕಿತರಾಗಿ ಶ್ಲಾಘಿಸಿದರು. 

ಪರಾಜಿತರಾದ ಪರವಾದಿ ಪಂಡಿತರು ಗುರುಗಳ ವಿಶಾಲ ಹೃದಯ, ಸೌಜನ್ಯ, ಔದಾರ್ಯಗಳನ್ನು ಕಂಡು ಮೂಕವಿಸ್ಮಿತರಾಗಿ ಆನಂದಬಾಷ್ಪ ಹರಿಸುತ್ತಾ ಗುರುಗಳಿಗೆ ಭಕ್ತಿಯಿಂದ ಪ್ರಣಾಮಗೈದು ಸ್ತುತಿಸಿದರು. ಕಳಿಂಗದೇಶದ ಬಸವಾಭಟ್ಟನು ಶ್ರೀಯವರ ಈ ಅಸಾಧಾರಣ ಸದ್ಗುಣಗಳಿಗೆ ಮಾರುಹೋಗಿ ಅನೇಕ ಬಗೆಯಾಗಿ ಅವರನ್ನು ಕೊಂಡಾಡಿ ತಾನು ಪ್ರತಿನಿತ್ಯ ಪೂಜಿಸುತ್ತಿದ್ದ ತನ್ನ ಆರಾಧ್ಯದೈವವಾದ ಶ್ರೀರುದ್ರದೇವರ ಪಚ್ಚೆಯ ಲಿಂಗವನ್ನು ಶ್ರೀವ್ಯಾಸರಾಜರಿಗೆ ಭಕ್ತಿಕಾಣಿಕೆಯಾಗಿ ಸಮರ್ಪಿಸಿ ಸಾಷ್ಟಾಂಗವೆರಗಿದನು. ಶ್ರೀವ್ಯಾಸಮುನಿಗಳು ಅದನ್ನು ಆದರಪೂರ್ವಕ ಸ್ವೀಕರಿಸಿ, ಶಿರಸಾಧರಿಸಿ ವಿಜಯಸೂಚಕವಾದ ಅದನ್ನು ತಾವು ಅರ್ಚಿಸುವುದಾಗಿ ಹೇಳಿ ಬಸವಾಭಟ್ಟನಿಗೆ ವಿಶೇಷ ಗೌರವ ಮಾಡಿ ಕಳುಹಿಸಿದರು.

ಶ್ರೀವ್ಯಾಸಮುನೀಂದ್ರರು ವದಾನ್ಯಶಿರೋಮಣಿಗಳಲ್ಲಿ ಅಗ್ರಣಿಯೆನಿಸಿದ ಸಾಮ್ರಾಟ್ ನರಸಭೂಪಾಲನಿಂದ ಪದೇ ಪದೇ ಸಂಭಾವಿತರಾಗುತ್ತಿದ್ದರು. ಚಕ್ರವರ್ತಿಯು ತಮಗೆ ಸಮರ್ಪಿಸಿದ ಗ್ರಾಮ-ಭೂಮಿ-ಧನಕನಕಾಭರಣಾದಿಗಳನ್ನು ಸದುಪಯೋಗಪಡಿಸಲಾಶಿಸಿದರು. ಅಂತೆಯೇ ಆ ಮಹಾನುಭಾವರು ಅನೇಕ ಗೃಹಗಳಿಂದ ಯುಕ್ತವಾದ ಅಗ್ರಹಾರಗಳನ್ನು ನಿರ್ಮಾಣ ಮಾಡಿಸಿ ಶಾಸ್ತ್ರಕೋವಿದರಾದ ನೂರಾರು ಜನ ಪಂಡಿತರಿಗೆ ದಾನವಾಗಿ ಕೊಟ್ಟು ಆ ಮಹಾಪಂಡಿತರ ಜೀವನವು ಸುಗಮವಾಗಿ, ಅವರು ನಿರಾಲೋಚನೆಯಿಂದ ಪಾಠಪ್ರವಚನಾದಿಗಳಿಂದ ಜ್ಞಾನಪ್ರಸಾರ ಮಾಡುತ್ತಾ ಸುಖದಿಂದ ಬಾಳುವಂತೆ ಮಾಡಿ ಅನುಗ್ರಹಿಸಿದರು. ಶ್ರೀಯವರ ವಿದ್ವಜ್ಜನಪಕ್ಷಪಾತ, ಔದಾರ್ಯಾದಿಗಳನ್ನು ಕಂಡು ರಾಜಧಾನಿಯ ಸುಜನರು ಗುರುಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು.157 ಶ್ರೀಗಳವರಿಂದ ಹೀಗೆ ದಾನ ಪಡೆದು ಧನಿಕರಾದ ವಿಪ್ರವೃಂದವನ್ನು ನೋಡಿ, ಸರ್ವಜ್ಞನಾಗಿದ್ದರೂ ಕೈಲಾಸಾಧಿಪತಿಯಾದ ಶ್ರೀಶಂಕರನು ತನ್ನ ಮಿತ್ರನಾದ ಕುಬೇರನು ಯಾರೆಂಬುದನ್ನು ಅರಿಯಲಾಗದೇ ಹೋದನಂತೆ!158ಹೀಗೆ ಶ್ರೀವ್ಯಾಸಮುನಿಗಳು ಪ್ರತಿವಾದಿ ದಿಗ್ವಿಜಯವದ್ವಾರಾ ದೈತಸಿದ್ಧಾಂತದ ವಿಜಯದುಂದುಭಿಯನ್ನು ಮೊಳಗಿಸುತ್ತಾ, ವೈದಿಕಾಚಾರಪ್ರಸಾರದಿಂದ ಧರ್ಮವನ್ನು ಬೆಳಗಿಸುತ್ತಾ, ತತ್ರೋಪದೇಶಗಳಿಂದ ಮೋಕ್ಷಸಂಪಾದನೆಗೆ ಸಾಧನವಾದ ಹರಿವಾಯು ಭಕ್ತಿಯನ್ನು ಜನತೆಯಲ್ಲಿ ನೆಲೆಗೊಳಿಸುತ್ತಾ ತಮ್ಮ ಕೀರ್ತಿಚಂದ್ರಿಕೆಯಿಂದ ವಿರಾಜಿಸಿ ಆ ರಾಜಸಭೆಯಲ್ಲಿ ಚೂಡಾಮಣಿಗಳಂತೆ 

ಬಹುಕಾಲ ವಾಸಮಾಡಿದರು.