|| ಶ್ರೀಗುರುರಾಜೋ ವಿಜಯತೇ ||

ಕಲಿಯುಗ ಕಲ್ಪತರು

ನಾಲ್ಕನೆಯ ಉಲ್ಲಾಸ

ಶ್ರೀವ್ಯಾಸರಾಜಯತಿಸಾರ್ವಭೌಮರು

೪೧. ಯಂತ್ರೋದ್ಧಾರಕ ಶ್ರೀಪ್ರಾಣದೇವರು

ಶ್ರೀವ್ಯಾಸರಾಜರು ವಿಜಯನಗರಕ್ಕೆ ಬಂದು ಹಲವಾರು ದಿವಸಗಳಾಗಿತ್ತು. ಶ್ರೀವ್ಯಾಸತೀರ್ಥರು ವಿದ್ಯಾನಗರಿಗೆ ಬಂದಲಾಗಾಯಿತು ಪ್ರತಿದಿನ ಚಕ್ರತೀರ್ಥಕ್ಕೆ ಬಂದು ಅಲ್ಲಿ ತುಂಗಾನದಿಯಲ್ಲಿ ಅವಗಾಹನಸ್ನಾನ ಮಾಡಿ, ಎತ್ತರದ ಬಂಡೆಯೊಂದರಲ್ಲಿ ಕುಳಿತು, ಸ್ನಾನಾಕಾದಿಗಳನ್ನು ನೆರವೇರಿಸಿ ಬರುತ್ತಿದ್ದರು. ಒಂದು ರಾತ್ರಿ ಅವರೊಂದು ವಿಚಿತ್ರ ಕನಸು ಕಂಡರು. ಕನಸಿನಲ್ಲಿ ಶ್ರೀಮುಖ್ಯಪ್ರಾಣದೇವರು (ವಾಯುದೇವರು) ದರ್ಶನವಿತ್ತು ಆ ತರುವಾಯ ತಮ್ಮ ಹನುಮ-ಭೀಮ-ಮಧ್ವಾವತಾರ ರೂಪಗಳಿಂದ ಆಶೀರ್ವದಿಸಿ “ವತ್ಸ! ನಾವು ನಿಮಗೆ ಒಲಿದಿದ್ದೇವೆ. ನಾವು ಈ ಪವಿತ್ರ ನೆಲದಲ್ಲಿ ಹಿಂದೆ ನಮ್ಮ ಮೊದಲ ಅವತಾರ ತಾಳಿ ಜನಿಸಿದ್ದೆವು. ಇದು ನಮ್ಮ ಜನ್ಮಭೂಮಿ. ನಿನಗೆ ನಾವು ಹನುಮರೂಪದಿಂದ ಒಲಿದು ಬರುತ್ತೇವೆ. ಚಕ್ರತೀರ್ಥದ ಪವಿತ್ರ ತಟದಲ್ಲಿ ನಮ್ಮನ್ನು ಪ್ರತಿಷ್ಠಾಪಿಸು. ನಾವು ನಿನ್ನ ಕಾರ್ಯವೆಲ್ಲಕ್ಕೂ ಬೆಂಬಲಿಗರಾಗಿದ್ದು ಜಯ ನೀಡುತ್ತೇವೆ ಮತ್ತು ಕನ್ನಡ ಸಾಮ್ರಾಜ್ಯದ ಸರ್ವತೋಮುಖ ಅಭಿವೃದ್ಧಿಯಾಗುವಂತೆ ಮಾಡಿ ಅನುಗ್ರಹಿಸುತ್ತೇವೆ” ಎಂದು ಅಭಯವಿತ್ತು ಅದೃಶ್ಯರಾದರು. 

ಎಚ್ಚರಗೊಂಡ ಶ್ರೀಗಳವರು ಸ್ವಷ್ಟಾರ್ಥವನ್ನು ನೆನೆದು ಹಿಗ್ಗಿದರು. ಶ್ರೀಮುಖ್ಯಪ್ರಾಣನ ಅನುಗ್ರಹವಾಯಿತೆಂದು ಸಂತೋಷಿಸಿದರು. ಯಾವಾಗ, ಎಲ್ಲಿ ಹೇಗೆ ಒಲಿದುಬರುವರೋ ಎಂದು ಯೋಚಿಸುತ್ತಾ ಪ್ರತಿನಿತ್ಯದ ಪದ್ಧತಿಯಂತೆ ಮಿತಪರಿವಾರದೊಡನೆ ಚಕ್ರತೀರ್ಥಕ್ಕೆ ಸ್ನಾನ ಮಾಡಲು ಮೇನೆಯಲ್ಲಿ ಕುಳಿತು ಬಂದರು. 

ಚಕ್ರತೀರ್ಥವು ಪರಮ ಪಾವನತೀರ್ಥವು. ಅಲ್ಲಿವಾಹನಂದಿನಿಯಾದ ತುಂಗಭದ್ರೆಯು ಮಂಗಲಕರ ಮಂಜುಳರವದಿಂದ ನಲಿಯುತ್ತಾಭರದಿಂದ ಹರಿಯುತ್ತಿರುವಳು. ಭಗವಾನ್ ದಿನಮಣಿಯು ಪೂರ್ವದಿಗಂತದಿಂದ ಮೇಲೆದ್ದು ಬಂದು ಅಮೃತಮಯ ಅರುಣ ಕಿರಣಗಳಿಂದ ಸರ್ವಸುಜನರನ್ನು ಆನಂದಗೊಳಿಸುತ್ತಿದ್ದಾನೆ. ಗುರುವರರು ಸಂಕಲ್ಪಪಾರ್ವಕ ಚಕ್ರತೀರ್ಥದಲ್ಲಿ ಅವಗಾಹನಸ್ನಾನ ಮಾಡಿ, ದಂಡೋದಕದಿಂದ ಸಜ್ಜನರನ್ನು ಪವಿತ್ರಗೊಳಿಸಿ, ಮೇಲೆದ್ದು ಬಂದು ಒಂದು ವಿಶಾಲವಾದ ಬಂಡೆಯ ಮೇಲೆ ಕಾಷಾಯಾಂಬರ ಧರಿಸಿ ಕುಳಿತು ನಾಮಧಾರಣ ಮಾಡಿಕೊಂಡು ಪ್ರಾತರಾಷ್ಟ್ರೀಕ ಜಪತಪಾದಿಗಳನ್ನು ಪೂರೈಸಿ ಶ್ರೀಹರಿವಾಯುಗಳ ಧ್ಯಾನದಲ್ಲಿ ಮಗ್ನರಾದರು.

ಆಗ ಶ್ರೀಗಳವರ ಹೃದಯಮಂದಿರದಲ್ಲಿ ದಿವ್ಯಪ್ರಕಾಶವು ಬೆಳೆಗಿದಂತಾಗಿ ಆ ಬೆಳಕಿನ ಕಾಂತಿವಲಯದಲ್ಲಿ ಕರದಲ್ಲಿ ಗದೆ, ಕಮಂಡಲುಗಳನ್ನು ಹಿಡಿದು, ಪಾದಗಳಲ್ಲಿ ಮಣಿಪಾದುಕೆಗಳನ್ನು ಮೆಟ್ಟಿರುವ ಮುಖ್ಯಪ್ರಾಣದೇವರು ಮಂದಹಾಸ ಬೀರುತ್ತಾ ನಿಂತಂತೆ ಭಾಸವಾಯಿತು! ಆ ಮಂಗಳಕರ ಸ್ವರೂಪವನ್ನು ದರ್ಶಿಸುತ್ತಿದ್ದಂತೆಯೇ ಪ್ರಾಣದೇವರು ಕಣ್ಮರೆಯಾದರು. ಶ್ರೀಯವರು ಕರೆದರು. ಅವರ ಮುಂಭಾಗದಲ್ಲಿದ್ದ ಕರಿಯ ಬಂಡೆಯ ಮೇಲೆ ಅವರ ದೃಷ್ಟಿ ಹರಿಯಿತು. ಕೂಡಲೇ ಅದು ಮಾಯವಾಗಿ ಅಲ್ಲೊಂದು ಕಪಿಯು ಕುಳಿತಿರುವುದನ್ನು ನೋಡಿದರು. ತಮ್ಮ ಹೃದಯ ಗುಹೆಯಲ್ಲಿದರ್ಶನವಿತ್ತು ಅನುಗ್ರಹಿಸಿದ ಪ್ರಾಣದೇವರ ಆಕಾರ ತಾಳಿ ನಿಂತಂತಾಗಿ ಮತ್ತೆ ಬರೆ ಬಂಡೆಗಲ್ಲಾಗಿ ಗೋಚರಿಸಿತು! ವ್ಯಾಸತೀರ್ಥರ ಮುಖದಲ್ಲಿ ಮಂದಹಾಸ ಮಿನುಗಿತು. ಹೃದಯ ಭಕ್ತಿಭರದಿಂದ ಉಬ್ಬಿತು. ಕಣ್ಣಾಲಿಗಳು ತೇವಗೊಂಡವು. “ದೇವ! ಅನುಗೃಹೀತನಾದೆ” ಎಂದು ಗದ್ದದಕಂಠದಿಂದುಸುರಿದರು. ಹತ್ತಿರ ಆತ್ಮೀಕ ಪಾತ್ರೆಯಲ್ಲಿದ್ದ ಅಂಗಾರದಿಂದ ತಮಗೆ ದರ್ಶನವಿತ್ತ ಶ್ರೀಪ್ರಾಣದೇವರನ್ನು ಆ ಬಂಡೆಯ ಮೇಲೆ ಚಿತ್ರಿಸಿದರು. ಚಿತ್ರ ಸುಂದರವಾಗಿ ಮೂಡಿಬಂದಿತ್ತು. ಆದರೇನಾಶ್ಚರ್ಯ! ಅವರು ಬರೆದ ಮಾರುತಿಯ ಚಿತ್ರ ಕಣ್ಮರೆಯಾಗಿ ಮತ್ತೆ ಆ ಬಂಡೆ ಬರಿಗಲ್ಲಾಗಿ ನಿಂತಿತು. ಶ್ರೀವ್ಯಾಸರಾಜರು ಮತ್ತೆ ಅದೇ ಚಿತ್ರವನ್ನು ಬರೆದರು. ಪುನಃ ಅದು ಅದೃಶ್ಯವಾಯಿತು! 

ಶ್ರೀಯವರು “ಜೀವೋತ್ತಮ! ವಾಯುನಂದನ, ದಾಸನೊಡನೆ ವಿನೋದ ಮಾಡುತ್ತಿರುವೆಯಾ ? ಪ್ರಸನ್ನನಾಗು ಸ್ವಾಮಿ” ಎಂದು ಪ್ರಾರ್ಥಿಸಿ ಮತ್ತೆ ಚಿತ್ರವನ್ನು ಬರೆದರು. ಹೀಗೆ ಹನ್ನೆರಡು ಸಲ ಪುನಃ ಪುನಃ ಪ್ರಾಣದೇವರ ಚಿತ್ರ ಬರೆಯುವುದು, ಬರೆದೊಡನೆ ಅದು ಅದೃಶ್ಯವಾಗುವುದು! ಹೀಗೆ ಜರುಗಿತು. ವ್ಯಾಸರಾಜರು ಇದೇಕೆ ಹೀಗಾಗುತ್ತಿದೆ ಎಂದು ಚಿಂತಿಸುತ್ತಿರಲು ಮನದಲ್ಲಿ ಏನೋ ಸ್ಪುರಿಸಿದಂತಾಗಿ ನಸುನಗುತ್ತಾ ಆ ಬಂಡೆಯ ಮೇಲೆ ಮೊದಲ ಒಂದು ಪ್ರಾಣದೇವರ ಯಂತ್ರವನ್ನು ಬರೆದು ಅದರ ಸುತ್ತಲೂ ಹಿಂದೆ ತಾವು ಬರೆದ ಹನ್ನೆರಡು ಕಪಿವೀರ ಹನುಮಂತನ ಚಿತ್ರಗಳನ್ನು ಬರೆದರು. ಒಂದರ ಬಾಲ ಮತ್ತೊಂದಕ್ಕೆ ಗಂಟು ಹಾಕಿದಂತೆ ಹನ್ನೆರಡು ಪ್ರಾಣದೇವರ ಚಿತ್ರಗಳನ್ನು ಯಂತ್ರದ ಕಾವಲಾಗಿ ಬರೆದರು. ಆನಂತರ ಬೀಜಾಕ್ಷರಗಳನ್ನು ಬರೆದು ಯಂತ್ರದ ಮಧ್ಯಭಾಗದಲ್ಲಿ ಶ್ರೀಪ್ರಾಣದೇವರ ದಿವ್ಯಸ್ವರೂಪವನ್ನು ಚಿತ್ರಿಸಿ, ದಿಗ್ಧಂಧನ ಮಾಡಿ “ಪ್ರಭು, ವಾಯುನಂದನ, ಹನುಮ-ಭೀಮ-ಮಧ್ವಾಭಿಧ ಶ್ರೀಭಾರತೀರಮಣ ಮುಖ್ಯಪ್ರಾಣದೇವ! ಕನಸಿನಲ್ಲಿ ಒಲಿದು ಬರುವುದಾಗಿ ಅಭಯವಿತ್ತು ದಾಸನೊಡನೆ ಏಕಿಂತು ಸರಸವಾಡುತ್ತಿರುವೆ? ಭಕ್ತವತ್ಸಲನಾದ ನಿನಗಿದು ಶೋಧಿಸುವುದೆ? ದೇವ, ಈಗ ನಿನ್ನನ್ನು ಈ ಯಂತ್ರದಲ್ಲಿ ದಿಗ್ಧಂಧನ ಮಾಡಿ ಚಿತ್ರಿಸಿದ್ದೇನೆ. ಪ್ರಸನ್ನನಾಗಿ ಸ್ಥಿರವಾಗಿ ನಿಂತು ಕನ್ನಡನಾಡಿನ ಉನ್ನತಿ, ಭಕ್ತಜನರ ಮನೋಭೀಷ್ಟಗಳನ್ನು ಪೂರ್ಣಮಾಡುತ್ತಾ ಅನುಗ್ರಹಿಸು” ಎಂದು ಪ್ರಾರ್ಥಿಸಿ, ತುಳಸೀಪುಷ್ಪಗಳನ್ನು ಅರ್ಪಿಸಿದರು. ಆಗ ಯಂತ್ರಬದ್ಧನಾದ ಪ್ರಾಣದೇವನು ತನ್ನ ಅಂತರಂಗಭಕ್ತರಾದ ವ್ಯಾಸಮುನಿಗಳಲ್ಲಿ ಪ್ರಸನ್ನನಾಗಿ ನಗುನಗುತ್ತಾದರ್ಶನವಿತ್ತು ಅಭಯ ಪ್ರದಾನ ಮಾಡಿ ಅಂತರ್ಧಾನನಾದನು! ಗುರುಗಳು ಅಂಗಾರದಲ್ಲಿ ಬರೆದ ಚಿತ್ರ ಬಂಡೆಗಲ್ಲಿನಲ್ಲಿ ಉಬ್ಬಿ ಸಾಕಾರಮೂರ್ತಿಯಾಗಿ ಕಂಗೊಳಿಸಿತು! ಯಂತ್ರೋದ್ಧಾರಕ ಪ್ರಾಣದೇವ ಸ್ಥಿರವಾಗಿ ನಿಂತುಬಿಟ್ಟ!! ಆಗ ಗುರುಗಳಿಗಾದ ಆನಂದ ಅವರ್ಣನೀಯ. ತಮ್ಮಲ್ಲಿ ಅನುಗ್ರಹ ಮಾಡಿದ ಪ್ರಾಣದೇವರನ್ನು ಭಕ್ತಿಯಿಂದ ಸ್ತುತಿಸಿ ನಮಸ್ಕರಿಸಿದರು. ಈ ಅದ್ಭುತವನ್ನು ಕಣ್ಣಾರೆ ಕಂಡ ಮಠದ ಪರಿವಾರ - ಚಕ್ರತೀರ್ಥಕ್ಕೆ ಸ್ನಾನಕ್ಕಾಗಿ ಆಗಮಿಸಿದ್ದ ಧಾರ್ಮಿಕರು ವ್ಯಾಸರಾಜರ ಅಗಾಧ ಮಹಿಮೆಯನ್ನು ಭಕ್ತಿಭರದಿಂದ ಕೊಂಡಾಡಹತ್ತಿದರು. 

ಅಂದು ಸಂಜೆ ಶ್ರೀಯವರು ನರಸನಾಯಕರನ್ನು ಕರೆಯಿಸಿಕೊಂಡು ಚಕ್ರತೀರ್ಥಕ್ಕೆ ಬಂದು “ಕ್ಷಮಾಧಿಪತಿಗಳೇ, ನಾವು ತಿರುಪತಿ, ಶ್ರೀರಂಗಗಳಲ್ಲಿ ಕೆಲ ಪ್ರಾಣದೇವರನ್ನು ಪ್ರತಿಷ್ಠಿಸಿರುವುದನ್ನು ನೀವು ಬಲ್ಲಿರಿ. ಕನ್ನಡ ಸಾಮ್ರಾಜ್ಯದ ಸರ್ವತೋಮುಖ ಅಭಿವೃದ್ಧಿ, ಶತ್ರುಪರಾಜಯ, ಪ್ರಜೆಗಳ ಕ್ಷೇಮಗಳಿಗಾಗಿ ನಾಡಿನ ಎಲ್ಲಾ ಭಾಗಗಳಲ್ಲಿ ನಾಡಿನ ಎಲ್ಲೆಯ ಗುರುತಾಗಿ ನಾವು ೭೩೨ ಪ್ರಾಣದೇವರುಗಳನ್ನು ಪ್ರತಿಷ್ಠಿಸಲು ಮನಸಾ ಸಂಕಲ್ಪಿಸಿದೆವು. ಸಂಕಲ್ಪವನ್ನು ಯಶಸ್ವಿಗೊಳಿಸಲೋ ಎಂಬಂತೆ ಶ್ರೀಪ್ರಾಣದೇವರು ನಮಗೊಲಿದು ಇಲ್ಲಿ ಮೈದೋರಿದ್ದಾರೆ. ಈ ದೇವರನ್ನು “ಯಂತ್ರೋದ್ಧಾರಕ ಪ್ರಾಣದೇವರು” ಎಂಬ ಹೆಸರಿನಿಂದ ಇದೇ ಸ್ಥಳದಲ್ಲಿ ಶನಿವಾರದಂದು ಪ್ರತಿಷ್ಠಾಪಿಸಲು ಇಚ್ಛಿಸಿದ್ದೇವೆ. ಇದರಂತೆ ಸಾಮ್ರಾಜ್ಯದಲ್ಲೆಲ್ಲಾ ಪ್ರಾಣದೇವರನ್ನು ಪ್ರತಿಷ್ಠಾಪಿಸಲು ಆಶಿಸಿದ್ದೇವೆ. ನೀವು ಇದಕ್ಕೆ ಅನುಕೂಲ ಮಾಡಿಕೊಡಬೇಕು. ನೀವು ಕ್ಷಮಾಧಿಪತಿಗಳಾದ ತರುಣದಲ್ಲೇ ಪ್ರಾಣದೇವರು ಇಲ್ಲಿ ಅಭಿವ್ಯಕ್ತರಾಗಿರುವುದು ಸಾಮ್ರಾಜ್ಯದ ಮತ್ತು ನಿಮ್ಮ ಅಭ್ಯುದಯಕ್ಕೆ ಶುಭಸೂಚನೆಯಾಗಿದೆ. ಈ ದೇವರ ಪ್ರತಿಷ್ಠೆಗೆ ಸಕಲ ಅನುಕೂಲಗಳನ್ನೇರ್ಪಡಿಸಿಕೊಟ್ಟು ಶ್ರೀಪ್ರಾಣದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕು” ಎಂದು ಹೇಳಲು ಆನಂದತುಂದಿಲರಾದ ನರಸನಾಯಕರು “ಗುರುದೇವರ ಅಪ್ಪಣೆಯಂತಾಗಲಿ” ಎಂದು ವಿಜ್ಞಾಪಿಸಿ ಭಕ್ತಿಪರವಶನಾಗಿ ಗುರುಗಳಿಗೆ ನಮಿಸಿ ಅರಮನೆಗೆ ತೆರಳಿದರು. ಶ್ರೀಯವರು ಮಠಕ್ಕೆ ಚಿತ್ತೈಸಿದರು. 

ಚಕ್ರತೀರ್ಥದ ದಡದಲ್ಲಿ ಅಸಾಧ್ಯ ಜನಸಂದಣಿ, ಸಹಸ್ರಾರು ಜನರು ಶ್ರೀವ್ಯಾಸರಾಜರು ಭಕ್ತಿಪೂರ್ವಕವಾಗಿ ನೆರವೇರಿಸಿದ ಶ್ರೀಯಂತ್ರೋದ್ಧಾರಕ ಪ್ರಾಣದೇವರ ಪ್ರತಿಷ್ಠಾಪನಾ ಮಹೋತ್ಸವವನ್ನು ವೀಕ್ಷಿಸಿ ಆನಂದಪರವಶರಾಗಿದ್ದಾರೆ. ವೈದಿಕವಿಧಿಪಾರ್ವಕವಾಗಿ ಪ್ರತಿಷ್ಠೆಯನ್ನು ನೆರವೇರಿಸಿದ ಶ್ರೀವ್ಯಾಸರಾಜರು ಪಂಚಾಮೃತಾದಿಗಳನ್ನು ನೆರವೇರಿಸಿ ದೇವರಿಗೆ ಫಲಸಮರ್ಪಣೆ ಮಾಡಿ ಮಹಾಮಂಗಳಾರತಿಯನ್ನು ನೆರವೇರಿಸಿ ಪ್ರಾರ್ಥಿಸುತ್ತಿರುವಾಗ ಜನಸ್ತೋಮ “ಜಯಜಯ ಶ್ರೀಯಂತ್ರೋದ್ಧಾರಕ ಪ್ರಾಣದೇವ” ಎ೦ದು ಘೋಷಿಸಿದರು. 

ಶ್ರೀವ್ಯಾಸಮುನಿಗಳು ಭಕ್ತಿಪರವಶರಾಗಿ ಶ್ರೀದೇವರ ಮಹಿಮಾವರ್ಣನಪರ ಸ್ತೋತ್ರವನ್ನು ರಚಿಸಿ ಹೇಳಹತ್ತಿದರು. 

ಶ್ರೀವ್ಯಾಸರಾಜ ವಿರಚಿತ 

ಶ್ರೀಯಂತ್ರೋದ್ಧಾರಕ ಪ್ರಾಣದೇವರ ಸ್ತುತಿ

ನಮಾಮಿ ದೂತಂ ರಾಮಸ್ಯ ಸುಖದಂ ಚ ಸುರದ್ರುಮಮ್ |

ಪೀನವೃತ್ತಂ ಮಹಾಬಾಹುಂ ಸರ್ವಶತ್ರು ನಿವಾರಕಮ್

ನಾನಾರತ್ನ ಸಮಾಯುಕ್ತ ಕುಂಡಲಾದಿ ವಿರಾಜಿತಮ್ |

ಸರ್ವದಾಭೀಷ್ಟದಾತರಂ ಸತಾಂ ವೈ ದೃಢಮಾಹವೇ

ವಾಸಿನಂ ಚಕ್ರತೀರ್ಥಸ್ಯ ದಕ್ಷಿಣಸ್ತೇ ಗಿರೌ ಸದಾ |

ತುಂಗಾಬೋಧಿತರಂಗಸ್ಯ ವಾತೇನ ಪರಿಶೋಭಿತೇ

ನಾನಾದೇಶಾಗತೈಸದ್ಧಿಃ ಸೇವಮಾನಂ ನೃಪೋತಃ |

ಧೂಪದೀಪಾದಿನೈವೇದ್ಯಃ ಪಂಚಖಾಶ್ಚ ಭಕ್ತಿತಃ

ಭಜಾಮಿ ಶ್ರೀಹನೂಮಂತಂ ಹೇಮಕಾಂತಿ ಸಮಪ್ರಭಮ್ |

ವ್ಯಾಸತೀರ್ಥಯತೀಂದ್ರೇಣ ಪೂಜಿತಂ ಸುವಿಧಾನತಃ

ತ್ರಿವಾರಂ ಯಃಪಠೇನ್ನಿತ್ಯಂ ಸ್ತೋತ್ರಂ ಭಕ್ತಾ ದ್ವಿಜೋತ್ತಮಃ |

ವಾಂಛಿತಂ ಲಭತೇಭೀಷ್ಟಂ ಷಣ್ಮಾಸಾಭ್ಯಂತರೆ ಖಲು

ಪುತ್ರಾರ್ಥಿ ಲಭತೇ ಪುತ್ರಂ ಯಶೋರ್ಥಿ ಲಭತೇಯಶಃ |

ವಿದ್ಯಾರ್ಥಿ ಲಭತೇ ವಿದ್ಯಾಂ ಧರ್ನಾರ್ಥಿ ಲಭತೇ ಧನಮ್

ಸರ್ವಥಾ ಮಾಸ್ತು ಸಂದೇಹೋ ಹರಿಸ್ತಾಕ್ಷೀ ಜಗತ್ಪತಿಃ |

ಯಃಕರೋತ್ಪತ್ರ ಸಂದೇಹಂ ಸ ಯಾತಿ ನರಕಂ ಧ್ರುವಮ್

ಪಂಡಿತರು ಸ್ತೋತ್ರವನ್ನು ಕೇಳಿ ಮುದಗೊಂಡರು. ಶ್ರೀಗಳವರು ದೇವರಿಗೆ ನಮಸ್ಕರಿಸಿ, ಪ್ರಾರ್ಥಿಸಿ, ಪ್ರಾಣದೇವರಿಗೆ ಏರಿಸಿದ ಮಲ್ಲಿಕಾಮಾಲೆಯನ್ನು ಸ್ವೀಕರಿಸಿ, ಕಣ್ಣಿಗೊತ್ತಿಕೊಂಡು ಫಲಮಂತ್ರಾಕ್ಷತೆಯೊಡನೆ ನರಸನಾಯಕನಿಗೆ ಅನುಗ್ರಹಿಸಿ “ಕ್ಷಮಾಧಿಪತಿಗಳೇ ! ಶ್ರೀಪ್ರಾಣದೇವನು ಸಾಮಾಜ್ಯಧುರಂಧರನಾದ ನಿಮ್ಮಲ್ಲಿ ಪ್ರಸನ್ನನಾಗಿದ್ದಾನೆ! ನಿಮ್ಮ ಆಡಳಿತದಲ್ಲಿ ಸಾಮ್ರಾಜ್ಯವು ಅಭಿವೃದ್ಧಿಸಿ ಪ್ರಜಾಜನರು ಶಾಂತಿ-ಸಮಾಧಾನ, ಸುಖ-ಸಂತೋಷಗಳಿಂದ ಬಾಳುವಂತಾಗಿ ನಿಮಗೆ ಅಖಂಡ ಕೀರ್ತಿ ಬರುವಂತೆ ಕರುಣಿಸುತ್ತಾನೆ. ಇದರಲ್ಲಿ ಸಂದೇಹವಿಲ್ಲ” ಎಂದು ಆಶೀರ್ವದಿಸಿದರು. ನರಸಭೂಪಾಲನು ಆನಂದಭರಿತನಾಗಿ “ಗುರುದೇವ, ಶ್ರೀವಾಯುದೇವರ ಮತ್ತು ತಮ್ಮ ಕರುಣೆಗೆ ಪಾತ್ರನಾದ ನನ್ನ ಜೀವನವಿಂದು ಸಾರ್ಥಕವಾಯಿತು” ಎಂದು ವಿಜ್ಞಾಪಿಸಿದರು. 

ಶ್ರೀಗಳವರ ಅಪ್ಪಣೆಯಂತೆ ನರಸನಾಯಕ ಅತಿಶೀಘ್ರವಾಗಿ ದೇವರಿಗೆ ಒಂದು ಸಣ್ಣ ಗುಡಿಯನ್ನು ಕಟ್ಟಿಸಿ ಪೂಜಾರಾಧನೆ, ನಿವೇದನ, ವಿಶೇಷೋತ್ಸವಗಳು ಯಶಸ್ವಿಯಾಗಿ ಜರುಗಲು ಭೂಸ್ವಾಸ್ತಿ, ಧನಕನಕಾಭರಣ, ಪಾತ್ರೆ-ಪದಾರ್ಥಗಳು, ವಾರ್ಷಿಕ-ಮಾಸಿಕ ತಸ್ವೀಕುಗಳನ್ನು ಏರ್ಪಡಿಸಿಕೊಟ್ಟು ಸರ್ವರ ಮನ್ನಣೆಗೆ ಪಾತ್ರನಾದನು. ಶ್ರೀಗಳವರು ಯೋಗ್ಯರಾದ ತಮ್ಮ ಶಿಷ್ಯರೊಬ್ಬರನ್ನು ಪೂಜೆಗೆ ವ್ಯವಸ್ಥೆ ಮಾಡಿದರು. ಅಂದಿನಿಂದ ಶ್ರೀಪ್ರಾಣದೇವರನ್ನು ಆರಾಧಿಸಿ ಸಹಸ್ರಾರು ಜನರು ತಮ್ಮ ಮನೋಭೀಷ್ಟಗಳನ್ನು ಪಡೆದು ಕೃತಾರ್ಥರಾಗಹತ್ತಿದರು. ಶ್ರೀಯಂತ್ರೋದ್ಧಾರಕ ಪ್ರಾಣದೇವರ ಸನ್ನಿಧಾನ ಇಂದಿಗೂ ಜಾಗೃತಸ್ಥಳವೆಂದು ಖ್ಯಾತಿ ಪಡೆದು ಜನತೆಯಿಂದ ಸಂಸೇವಿತರಾಗಿ ಅದ್ಯಾಪಿ ಪೂಜೆ ಕೈಗೊಂಡು ಪ್ರಾಣದೇವರು ಭಕ್ತಜನರ ಇಷ್ಟಾರ್ಥಗಳನ್ನು ಕರುಣಿಸುತ್ತಿದ್ದಾರೆ. 

ಶಾಲಿವಾಹನ ಶಕೆ ೧೪೨೨ನೇ ರೌದ್ರಿ ಸಂವತ್ಸರದಲ್ಲಿ (ಕ್ರಿ.ಶ. ೧೫೦೦) ಶ್ರೀವ್ಯಾಸರಾಜಸ್ವಾಮಿಗಳವರು ಮನಸಾ ಸಂಕಲ್ಪಿಸಿದಂತೆ ಕನ್ನಡ ಸಾಮ್ರಾಜ್ಯದ ಎಲ್ಲ ಭಾಗಗಳಲ್ಲಿ ಸಾಮ್ರಾಜ್ಯದ ಎಲ್ಲೆಯ ಗುರುತಾಗಿ ೭೩೨ ಪ್ರಾಣದೇವರ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿ 132 ಪೂಜಾರಾಧನೆಗಳು ಜರುಗುವಂತೆ ವ್ಯವಸ್ಥೆ ಮಾಡಿದರು. ಶ್ರೀವ್ಯಾಸರಾಜ ಪ್ರತಿಷ್ಠಿತ ಪ್ರಾಣದೇವರನ್ನು ಇಂದಿಗೂ ನಾವು ಕನ್ನಡನಾಡಿನಲ್ಲೆಲ್ಲಾ ನೋಡಬಹುದಾಗಿದೆ. ಶಂಖ-ಚಕ್ರ ಹಾಗೂ ಬಾಲಕ್ಕೆ ಗಂಟೆ ಕಟ್ಟಿರುವ ಪ್ರಾಣದೇವರು ಎಲ್ಲಿಲ್ಲಿ ರಾಜಿಸಿದ್ದಾರೋ ಅವೆಲ್ಲಾ ಶ್ರೀವ್ಯಾಸರಾಜ ಪ್ರತಿಷ್ಠಿತವೆಂದು ತಿಳಿಯಬೇಕು. ಶ್ರೀವ್ಯಾಸರಾಜರ ಈ ಒಂದು ಮಹತ್ಕಾರ್ಯದಿಂದ ಕನ್ನಡನಾಡು ಹೇಗೆ ಉನ್ನತಿ ಪಡೆದು ವಿಶ್ವವಿಖ್ಯಾತವಾಯಿತೆಂಬುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ. 

ಶ್ರೀವ್ಯಾಸರಾಜರು ಅದಾವ ಒಂದು ಶುಭಘಳಿಗೆಯಲ್ಲಿ ವಿಜಯನಗರದಲ್ಲಿ ಪದಾರ್ಪಣ ಮಾಡಿದರೋ, ಅಂದಿನಿಂದ ಸಾಮ್ರಾಜ್ಯದ ಅಭ್ಯುದಯವಾಗಹತ್ತಿತು. ಶ್ರೀಯವರ ಉಪದೇಶ, ಸಲಹೆ, ಆಶೀರ್ವಾದಗಳನ್ನು ಪಡೆದು ನರಸನಾಯಕನು ರಾಜ್ಯದ ಒಳ-ಹೊರ ಶತ್ರುಗಳನ್ನು ದಮನ ಮಾಡಿ ತನ್ನ ಧರ್ಮಶ್ರದ್ಧೆ, ಪವಿತ್ರಾಚರಣೆ, ಪ್ರಜಾವಾತ್ಸಲ್ಯಗಳಿಂದ ದಕ್ಷಿಣಭಾರತದಲ್ಲೇ ಅತ್ಯಂತ ಸಮರ್ಥನಾದ ಸಾಮ್ರಾಜ್ಯಧುರಂಧರನೆಂದು ಕೀರ್ತಿ ಗಳಿಸಿ ಪ್ರಖ್ಯಾತನಾದನು. ಹೀಗೆ ಅನೇಕ ವರ್ಷಗಳುರುಳಿದವು. 

ಇದೇ ಸಮಯದಲ್ಲಿ ಕನ್ನಡ ಸಾಮ್ರಾಟನಾದ ಇಮ್ಮಡಿ ನರಸಿಂಹನು (ತಮ್ಮರಾಯ) ಅನಾರೋಗ್ಯದಿಂದ ಹಾಸಿಗೆ ಹಿಡಿದು ಮಲಗಿದನು. ಔಷಧೋಪಚಾರಾದಿಗಳಿಂದ ಪ್ರಯೋಜನವಾಗದೆ ಕೊನೆಗೊಂದು ದಿನ ಇಮ್ಮಡಿ ನರಸಿಂಹನು ಭಗವಂತನನ್ನು ಸ್ಮರಿಸುತ್ತ ಇಹಲೋಕ ವ್ಯಾಪಾರವನ್ನು ಮುಗಿಸಿ ಸ್ವರ್ಗಸ್ಥನಾದನು. ಇದರಿಂದ ಸಮಸ್ತ ಪ್ರಜರೂ ದುಃಖಿತರಾದರು. ಶ್ರೀಯವರಿಗೆ ತಮ್ಮ ಪ್ರಿಯಶಿಷ್ಯ ದಿವಂಗತನಾದ್ದರಿಂದ ಅತೀವ ಪರಿತಾಪವಾಯಿತು. ಆದರೂ ಆ ಮಹನೀಯರು ಸಾಮ್ರಾಟನ ಅಂತ್ಯಕ್ರಿಯಾದಿಗಳನ್ನು ಸಕ್ರಮವಾಗಿ ನೆರವೇರಿಸಲು ಆದೇಶವಿತ್ತರು.

ಸ್ವಾಮಿನಿಷ್ಠ ರಾಜ್ಯ ಹಿತೈಷಿಗಳ ಸಭೆಯಲ್ಲಿ ತೀರ್ಮಾನವಾದಂತೆ ಒಂದು ಶುಭಮುಹೂರ್ತದಲ್ಲಿ ತುಳುವ ನರಸನಾಯಕರು ಕನ್ನಡ ಸಾಮ್ರಾಟರಾದರು. ಶ್ರೀವ್ಯಾಸರಾಜರು ಧರ್ಮಮಾರ್ಗದಿಂದ ಜನಪ್ರಿಯನಾಗಿ ಸರ್ವರ ಹಿತವನ್ನು ಸಾಧಿಸುತ್ತಾ ಸಾಮ್ರಾಜ್ಯವನ್ನಾ ಶ್ರೇಯೋವಂತನಾಗುವಂತೆ ನರಸನಾಯಕನಿಗೆ ಉಪದೇಶಿಸಿ ಆಶೀರ್ವದಿಸಿದರು. 

ನರಸನಾಯಕ ಕನ್ನಡ ಸಾಮ್ರಾಜ್ಯಾಧೀಶನಾಗುವುದರ ಜೊತೆಗೆ ಸಂಗಮ ವಂಶದ ತರುವಾಯ ಸಾಳುವ ಮನೆತನದವರ ಆಡಳಿತ ಪ್ರಾರಂಭವಾಗಿದ್ದು, ಈಗ ಇಮ್ಮಡಿ ನರಸಿಂಹನ ಮರಣದಿಂದಾಗಿ ಸಾಳುವ ವಂಶದ ಆಳ್ವಿಕೆ ಕೊನೆಗೊಂಡು ತುಳುವ ವಂಶದವರ ಆಳ್ವಿಕೆಯು ಪ್ರಾರಂಭವಾಯಿತು. 

ತುಳುವ ನರಸನಾಯಕರಿಗೆ ತಿಪ್ಪಾಂಬಿಕೆ, ನಾಗಲಾಂಬಿಕೆ, ಓಬಲಾಂಬಿಕೆಯರೆಂಬ ಮೂವರು ಪತ್ನಿಯರಿದ್ದರು. ನರಸನಾಯಕರಿಗೆ ತಿಪ್ಪಲಾಂಬಿಕೆಯಲ್ಲಿ ವೀರನರಸಿಂಹ, ನಾಗಲಾಂಬಿಕೆಯಲ್ಲಿ ಕೃಷ್ಣದೇವ, ಓಬಲಾಂಬಿಕೆಯಲ್ಲಿ ಅಚ್ಯುತದೇವ, ರಂಗರಾಯನೆಂಬ ನಾಲ್ವರು ಪುತ್ರರು ಜನಿಸಿದ್ದರು. ಇವರೆಲ್ಲರೂ ಶೌರ್ಯ-ಧೈರ್ಯಾದಿ ಸಂಪನ್ನರಾಗಿದ್ದು ತಂದೆಗೆ ಸಾಮ್ರಾಜ್ಯಸೇವೆಯಲ್ಲಿ ಬೆಂಬಲರಾಗಿದ್ದು ಕೀರ್ತಿ ಗಳಿಸಿದ್ದರು. ನರಸನಾಯಕನು ತನ್ನ ಪುತ್ರರೊಡನೆ ಆಗಾಗ್ಗೆ ಗುರುಗಳ ಸನ್ನಿಧಿಗೆ ಬಂದು ತತ್ವ, ಧರ್ಮ, ಸದಾಚಾರ, ಪ್ರಜಾಭ್ಯುದಯಾದಿ ವಿಷಯಗಳಲ್ಲಿ ಉಪದೇಶ ಪಡೆದು ಹೋಗುತ್ತಿದ್ದನು. ಅವನ ಪುತ್ರರೆಲ್ಲರೂ ತಂದೆಯಂತೆ ಶ್ರೀವ್ಯಾಸರಾಜರ ಭಕ್ತಾರಾಗಿದ್ದರು. ಇದರಲ್ಲಿ ಕೃಷ್ಣದೇವ ಗುರುವ್ಯಾಸರಾಜರನ್ನು ತನ್ನ ಆರಾಧ್ಯದೈವವನ್ನಾಗಿ ತಿಳಿದು ಸೇವಿಸುತ್ತಿದ್ದನು. 

ನರಸಭೂಪಾಲನು ರಾಜ್ಯದ ಸಕಲ ವ್ಯವಹಾರಗಳನ್ನೂ ಗುರುಗಳಿಗೆ ತಿಳಿಸಿ ಅವರ ಸಲಹೆ-ಆದೇಶಗಳಂತೆ ವರ್ತಿಸುತ್ತಿದ್ದನು. ಶ್ರೀಗಳವರು ಅತ್ಯಂತ ಜಟಿಲವಾದ ಸಾಮ್ರಾಜ್ಯದ ಅದೆಷ್ಟೋ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸಿ ಪರಿಹಾರೋಪಾಯವನ್ನು ಸೂಚಿಸುತ್ತಿದ್ದರು. ಇದರಿಂದ ದೊರೆ ಮತ್ತು ಗುರುಗಳಲ್ಲಿ ಬಹಳ ಗಾಢವಾದ ವಿಶ್ವಾಸ ಬೆಳೆಯಿತು. ಶ್ರೀವ್ಯಾಸಮುನಿಗಳು ವಿನಯಶೀಲನಾಗಿ ತಮ್ಮಲ್ಲಿಗೆ ಬರುತ್ತಿದ್ದ ಸಾಮ್ರಾಟನಿಗೆ ನಿದರ್ಶನವಾಗಿ ಅನೇಕ ಪ್ರಾಚೀನ ರಾಜರ್ಷಿಗಳ ಜೀವನ, ಅವರ ಧೈರ್ಯ-ಸಾಹಸ, ಸತ್ಯ-ಧರ್ಮ-ನಿಷ್ಠೆ, ಪ್ರಜಾಪ್ರೇಮ, ಆಡಳಿತ ವೈಖರಿ ಮುಂತಾದ ಪಾವನ ಕಥೆಗಳನ್ನು ನಿರೂಪಿಸಿ ಆ ರಾಜರ್ಷಿಗಳು ಹಾಕಿಕೊಟ್ಟಿರುವ ಮಾರ್ಗದಲ್ಲಿ ಮುನ್ನಡೆಯುವಂತೆ ಉಪದೇಶಿಸುತ್ತಿದ್ದರು. 

ಇದರಂತೆ ಅಮಿತ ಭಕ್ತಿ-ಶ್ರದ್ಧೆಗಳಿಂದ ತಮ್ಮನ್ನು ಸೇವಿಸುತ್ತಿದ್ದ ಆ ನರಸಭೂಪಾಲನಿಗೆ ಶ್ರೀವ್ಯಾಸತೀರ್ಥರು ಪ್ರತಿದಿನವೂ ರಹಸ್ಯವಾಗಿ ಉಪದೇಶಿಸುತ್ತಾ ಸಾಮ್ರಾಜ್ಯದ ಉದ್ಧಾರಕ ಗುರುಗಳೆಂದು ಸರ್ವಮಾನ್ಯರಾಗಿ ವಿಜಯನಗರದಲ್ಲಿ ಬಹುಕಾಲ ವಾಸಮಾಡಿದರು.